ಅಮೃತಾ ಶೆರ್ಗಿಲ್ ಮಾರ್ಗ… ರಾಜಧಾನಿ ನವದೆಹಲಿಯಲ್ಲಿನ ಒಂದು ಸುಪ್ರಸಿದ್ಧ ರಸ್ತೆ. ಅತ್ಯಂತ ವೆಚ್ಚದಾಯಕ ಪ್ರದೇಶ ಕೂಡ ಹೌದು. ದೆಹಲಿಯ ಬಹಳಷ್ಟು ಮಂದಿಗೆ ಒಂದು ರಸ್ತೆಯಾಗಿ, ಐಷಾರಾಮಿ ಕಟ್ಟಡಗಳ ಪ್ರದೇಶವಾಗಿ ಇದು ಚಿರಪರಿಚಿತ. ಆದರೆ, ಈ ರಸ್ತೆಗೆ ಇಟ್ಟ ಆ ಹೆಸರಿನ ವ್ಯಕ್ತಿ ಯಾರು ಎಂದು ಒಮ್ಮೆ ಯೋಚಿಸಿದರೆ?
ಅಮೃತಾ ಶೆರ್ಗಿಲ್… ಇಂಡಿಯಾದ ಮಣ್ಣಿನ ಅತ್ಯಂತ ಪ್ರತಿಭಾವಂತ ಚಿತ್ರಕಲಾವಿದರ ಸಾಲಿನಲ್ಲಿ ಸೇರಿರುವ ಹೆಸರು ಅದು. ಆಕೆ ಬದುಕಿದ್ದು ಬರೀ 28 ವರ್ಷ. ಆದರೆ ಬಿಟ್ಟುಹೋದ ಗುರುತು ಮಾತ್ರ ಭಾರತೀಯ ಕಲಾ ಲೋಕದಲ್ಲಿ ದೊಡ್ಡದು. ಭಾರತದ ಫ್ರಿಡಾ ಕಹ್ಲೋ ಎಂದೂ ಕರೆಯಲಾಗುತ್ತದೆ ಆಕೆಯನ್ನು. ಹಾಗೆ ಹೋಲಿಸುವುದು ಅಮೃತಾ ಪ್ರತಿಭೆಗೆ ನ್ಯಾಯ ಒದಗಿಸಿದಂತೇನೂ ಅಲ್ಲವೆಂಬುದೂ ಅಷ್ಟೇ ಸತ್ಯ. ಆಕೆಯ ಗರಿಮೆಗೆ ಆಕೆಯೇ ಸಾಟಿ.
ಪಾಶ್ಚಾತ್ಯ ಮತ್ತು ಭಾರತೀಯ ರಚನಾ ತಂತ್ರಗಳ ಸಮನ್ವಯತೆಯಲ್ಲಿ ಮೂಡಿರುವ ಅಮೃತಾ ಚಿತ್ರಗಳು ಈ ನೆಲದ ಗುಣದೊಂದಿಗೆ ಇನ್ನಷ್ಟು ಗಾಢತೆ ಪಡೆದವಾಗಿವೆ. ಅಮೃತಾ 1932ರಲ್ಲಿ ರಚಿಸಿದ ಮೊದಲ ಅತ್ಯಂತ ಮಹತ್ವದ ಕಲಾ ಕೃತಿ ‘ಯಂಗ್ ಗರ್ಲ್ಸ್’. ಪ್ಯಾರಿಸ್ನ ಗ್ರ್ಯಾಂಡ್ ಸಲೋನ್ಗೆ ಅಸೋಸಿಯೇಟ್ ಆಗಿ ಆಕೆ ಆಯ್ಕೆಯಾಗಲು ಅದು ಕಾರಣವಾಯಿತು. ಆ ಗೌರವಕ್ಕೆ ಪಾತ್ರವಾದ ಏಷಿಯಾದ ಏಕೈಕ ಕಲಾವಿದೆ ಅಮೃತಾ.
ಯೂರೋಪಿನಲ್ಲಿದ್ದ ಅಮೃತಾರನ್ನು 1934ರಲ್ಲಿ ಭಾರತಕ್ಕೆ ಮರಳಬೇಕೆಂಬ ಹಂಬಲ ಬಲವಾಗಿ ಕಾಡಿತು. ಬಂದೇಬಿಟ್ಟರು. ಇಲ್ಲಿನ ಸಾಂಪ್ರದಾಯಿಕ ಕಲಾ ಪ್ರಕಾರದಲ್ಲಿ ತಮ್ಮ ಅಭಿವ್ಯಕ್ತಿಗೆ ಮುಂದಾದರು. ಮೊಘಲ್ ಮತ್ತು ಪಹರಿ ಶೈಲಿಯ ಚಿತ್ರಕಲೆಯಿಂದಂತೂ ಸಾಕಷ್ಟು ಪ್ರಭಾವಿತರಾದರು.
1937ರಲ್ಲಿ ದಕ್ಷಿಣ ಭಾರತದಲ್ಲಿ ಸುತ್ತಾಡಿದ ಅಮೃತಾ, ಹಲವು ಕಲಾ ಕೃತಿಗಳನ್ನು ರಚಿಸಿದರು. ಅವು ಸಾಕಷ್ಟು ಪ್ರಸಿದ್ಧಿ ಪಡೆದವು. ಮದುಮಗಳೊಬ್ಬಳು ಮದುವೆಗೆ ಸಿದ್ಧಳಾಗುವುದನ್ನು ಬಿಂಬಿಸುವ ‘ಬ್ರೈಡ್ಸ್ ಟಾಯ್ಲೆಟ್’ ಅವುಗಳಲ್ಲಿ ಒಂದು. ‘ಬ್ರಹ್ಮಚಾರಿಗಳು’ ಮತ್ತು ‘ಮಾರುಕಟ್ಟೆಗೆ ಹೋಗುತ್ತಿರುವ ದಕ್ಷಿಣ ಭಾರತದ ಹಳ್ಳಿಗರು’ ಕೂಡ ಇದೇ ವೇಳೆಯಲ್ಲಿ ರಚನೆಯಾದವು. ಭಾರತದ ಶಾಸ್ತ್ರೀಯ ಶೈಲಿಯಲ್ಲಿನ ಪ್ರಯತ್ನಗಳಾಗಿ ಅವರ ಈ ಕಲಾ ಕೃತಿಗಳು ಗಮನ ಸೆಳೆಯುತ್ತವೆ.
ಅಮೃತಾ ಶೆರ್ಗಿಲ್ ತಂದೆ ಪಂಜಾಬಿ ಮೂಲದವರು. ತಾಯಿ ಹಂಗೇರಿ ದೇಶದವರು. ಬುಡಾಪೆಸ್ಟ್ನಲ್ಲಿ ಜನಿಸಿದ ಅಮೃತಾ, ಚಿತ್ರ ಬರೆಯಲು ಶುರು ಮಾಡಿದ್ದು ಐದನೇ ವರ್ಷದವಳಿರುವಾಗಲೇ. ಅವಳ ಈ ಪ್ರತಿಭೆ ಗಮನಿಸಿದ ತಂದೆ ತಾಯಿ ಬಳಿಕ ಅದರ ಕಲಿಕೆಗೆ ಅನುವು ಮಾಡಿಕೊಟ್ಟರು. ಹದಿನಾರು ತುಂಬುವ ವೇಳೆಗೆ ಅಮೃತಾಳಿಗೆ ಚಿತ್ರಕಲೆಯ ಅಗಾಧತೆಯನ್ನು ಪರಿಚಯಿಸುವ ಉದ್ದೇಶದಿಂದ ಆಕೆಯ ತಾಯಿ ಯೂರೋಪಿಗೆ ಕರೆದೊಯ್ದರು. ಆದರೂ ಅಮೃತಾ ತಮ್ಮ ಕಲಾ ಸಾಮರ್ಥ್ಯವನ್ನು ಇಡಿಯಾಗಿ ಕಂಡುಕೊಂಡದ್ದು ಭಾರತಕ್ಕೆ ಮರಳಿದ ಬಳಿಕವೇ.
1938ರಲ್ಲಿ ಡಾ. ವಿಕ್ಟರ್ ಎಗನ್ ಎಂಬಾತನೊಡನೆ ಮದುವೆಯಾದ ಅಮೃತಾ, ಆತನ ಪೋಷಕರ ಊರಾದ ಉತ್ತರ ಪ್ರದೇಶದಲ್ಲಿನ ಮನೆಯಲ್ಲಿ ಆತನೊಂದಿಗೆ ನೆಲೆಸಿದರು. 1941ರಲ್ಲಿ, ಆಗ ಕಲಾವಿದರ ಪಾಲಿಗೆ ಅತ್ಯಂತ ಮಹತ್ವದ ನೆಲೆಯಾಗಿದ್ದ ಲಾಹೋರ್ಗೆ ಗಂಡನೊಂದಿಗೆ ತೆರಳಿದರು. ಅಲ್ಲಿಯೇ ಅಮೃತಾ ತಮ್ಮ ಮೊದಲ ಸೋಲೋ ಪ್ರದರ್ಶನ ಏರ್ಪಡಿಸಬೇಕೆಂದುಕೊಂಡಿದ್ದಾಗಲೇ ದಿಢೀರನೆ ಸಾವಿಗೀಡಾದರು. ಆಕೆಯ ಈ ಅಕಾಲಿಕ ಮರಣ ಕಲಾ ಲೋಕವನ್ನು ತಲ್ಲಣಗೊಳಿಸಿಬಿಟ್ಟಿತು.
ಅಮೃತಾ ಕಲಾ ಕೃತಿಗಳು ಸಯದ್ ಹೈದರ್ರಿಂದ ಅರ್ಪಿತಾ ಸಿಂಗ್ವರೆಗೆ ವಿವಿಧ ತಲೆಮಾರಿನ ಭಾರತೀಯ ಕಲಾವಿದರನ್ನು ಪ್ರಭಾವಿಸಿವೆ. ಅಮೃತಾ ಪೇಂಟಿಂಗ್ಗಳಲ್ಲಿನ ಮಹಿಳಾ ಸಂವೇದನೆ ಅವರನ್ನು ದೇಶದ ಒಳಗೂ ಆಚೆಗೂ ಖ್ಯಾತಿಯನ್ನು ತಂದುಕೊಟ್ಟಿತ್ತು. ಭಾರತ ಸರ್ಕಾರವಂತೂ ಅಮೃತಾ ಕಲಾ ಕೃತಿಗಳನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಿತು. ಬಹಳಷ್ಟು ರಚನೆಗಳು ನವದೆಹಲಿಯ ಮಾಡರ್ನ್ ಆರ್ಟ್ನ ರಾಷ್ಟ್ರೀಯ ಗ್ಯಾಲರಿಯಲ್ಲಿ ಸಂರಕ್ಷಿತವಾದವು. ಅಮೃತಾ ಅವರ ಒಂದು ಕಲಾ ಕೃತಿ ‘ಹಿಲ್ ವುಮನ್’ ಬಳಸಿಕೊಂಡು 1978ರಲ್ಲಿ ಅಂಚೆಚೀಟಿಯನ್ನು ಹೊರತಂದಿತು ಭಾರತ ಸರ್ಕಾರ. ಅಲ್ಲದೆ ದೆಹಲಿಯಲ್ಲಿನ ಮುಖ್ಯ ರಸ್ತೆಯೊಂದಕ್ಕೆ ಅಮೃತಾ ಹೆಸರಿಡಲಾಯಿತು. ಆಕೆ ಬರೆದ ‘ವಿಲೇಜ್ ಸೀನ್’ ಕಲಾ ಕೃತಿ 2006ರಲ್ಲಿ ದೆಹಲಿಯಲ್ಲಿ ನಡೆದ ಹರಾಜಿನಲ್ಲಿ 6 ಕೋಟಿ 90 ಲಕ್ಷ ರೂಪಾಯಿ ಬೆಲೆಬಾಳಿತು. ಭಾರತದಲ್ಲಿ ಕಲಾ ಕೃತಿಯೊಂದಕ್ಕೆ ದೊರೆತ ಆವರೆಗಿನ ಅತಿ ದೊಡ್ಡ ಮೊತ್ತವಾಗಿತ್ತು ಅದು.
ಸಮಕಾಲೀನ ಭಾರತೀಯ ಕಲಾವಿದರಿಗೆ ಸ್ಫೂರ್ತಿಯಾಗಿದ್ದಂತೆಯೇ ಅಮೃತಾ ಇತರ ಮಾಧ್ಯಮಗಳ ಪಾಲಿಗೂ ಸ್ಫೂರ್ತಿಯಾದವರು. 1993ರಲ್ಲಿ ಜಾವೇದ್ ಸಿದ್ದಿಕಿ ಬರೆದ ‘ತುಮ್ಹಾರಿ ಅಮೃತಾ’ ಉರ್ದು ನಾಟಕಕ್ಕೆ ಅಮೃತಾ ಬದುಕೇ ಪ್ರೇರಣೆ. ಶಬಾನ ಆಜ್ಮಿ ಮತ್ತು ಫಾರೂಕ್ ಶೇಖ್ ಆ ನಾಟಕದ ಪಾತ್ರಗಳನ್ನು ನಿರ್ವಹಿಸಿದ್ದರು. ಆಕೆಯ ಕಲಾ ಕೃತಿಯೇ ಮುಖ್ಯ ಸ್ಫೂರ್ತಿಯಾಗಿ, ‘ಫೇಕಿಂಗ್ ಇಟ್’ ಎಂಬ ಕಾದಂಬರಿಯನ್ನು ಅಮೃತಾ ಚೌಧರಿ ಬರೆದರು. ಸಲ್ಮಾನ್ ರಶ್ದಿ ಬರೆದ ‘ದಿ ಮೂರ್ಸ್ ಲಾಸ್ಟ್ ನೈಟ್’ ಕಾದಂಬರಿಯಲ್ಲಿನ ಪಾತ್ರವೊಂದಕ್ಕೆ ಪ್ರೇರಣೆಯಾದದ್ದು ಇದೇ ಅಮೃತಾ ಶೆರ್ಗಿಲ್.
“ನಾನು ಭಾರತದಲ್ಲಿ ಮಾತ್ರ ಚಿತ್ರ ಬರೆಯಬಲ್ಲೆ. ಯೂರೋಪ್ ಪಿಕಾಸೋಗೆ ಸೇರಿದ್ದು. ಭಾರತ ನನಗೆ ಮಾತ್ರ ಸೇರಿದ್ದು.” ಹೀಗೆಂದು ಅಮೃತಾ ಹೇಳಿಕೊಂಡಿದ್ದುಂಟು. ಯಾವುದೇ ಕಲಾ ಪ್ರೇಮಿಯೂ ಮರೆಯಲಾರದ ಮಾತು ಅದು.
Leave a comment