Share

ಕನ್ನಡಿ ಮಾಯೆ
ದೀಪಾ ಫಡ್ಕೆ

IMG-20160516-WA0001

ಪ್ರಸ್ತಾಪ | prastapa

 

 

 

ಬ್ಬಳು ಜಗದೇಕ ಸುಂದರಿ ರಾಣಿ. ಪ್ರತೀದಿನದಂತೆ, ಅಂದೂ ತನ್ನ ಸುಂದರ ನಿಲುವನ್ನು ತದೇಕ ಚಿತ್ತದಿಂದ ನೋಡಿ ಹೆಮ್ಮೆ ಪಟ್ಟುಕೊಳ್ಳುತ್ತಾ ಇದ್ದರೆ, ಅವಳ ಆಜ್ಞೆಯಂತೇ ಅವಳ ಮುಂದಿದ್ದ ಮಾಯಾದರ್ಪಣ ತನ್ನ ಎಂದಿನ ಕೆಲಸವನ್ನು ಮಾಡಿತು. ಈ ರಾಣಿ ಸುಂದರಿಯು ಆ ದರ್ಪಣಕ್ಕೆ ಒಂದು ಕೆಲಸವನ್ನು ಒಪ್ಪಿಸಿದ್ದಳು. ಪ್ರತೀ ಬಾರಿ ದರ್ಪಣದ ಮುಂದೆ ಬಂದು ನಿಂತಾಗ ಪ್ರಪಂಚದ ಅತ್ಯಂತ ಸುಂದರಿ ಯಾರೆಂದು ಹೇಳಬೇಕೆಂದು. ಅದೇ ಕೆಲಸವನ್ನು ದರ್ಪಣ ಮಾಡಿತ್ತು. ಜಗತ್ತಿನ ಅತೀ ಸುಂದರ ಸ್ತ್ರೀಯ ಬಿಂಬವನ್ನು ತನ್ನೊಡಲಲ್ಲಿ ಮೂಡಿಸಿ, ‘ನೋಡು ನಾನು ಎಂಥ ಸುಂದರಿಯನ್ನು ಒಡಲಲ್ಲಿ ಮೂಡಿಸಿದ್ದೇನೆ’ ಎಂಬ ಧನ್ಯತೆಯ ಭಾವದಲ್ಲಿತ್ತು. ಅದುವರೆಗೂ ತಾನೇ ಸುಂದರಿಯೆಂದು ಹೆಮ್ಮೆಯಿಂದ ಬೀಗುತ್ತಿದ್ದ ರಾಣಿಯ ಅತ್ಯಂತ ಚೆಲುವಿನ ಮುಖದಲ್ಲಿ ಒಮ್ಮಿಂದೊಮ್ಮೆ ವಿಕಾರದ ಸಿಟ್ಟು ಕಾಣಿಸಿಕೊಂಡಿತು. ಏಕೆಂದರೆ, ದರ್ಪಣ ತೋರಿದ ಅತೀ ಸುಂದರಿಯೆಂದರೆ ಅವಳದೇ ಮಲಮಗಳು. ಅವಳು ನಿರ್ಲಕ್ಷಿಸುತ್ತಿದ್ದ, ತೊತ್ತಿನಂತೆ ನೋಡುತ್ತಿದ್ದ ಮಲಮಗಳು. ಹೀಗೆ ಮತ್ಸರದಿಂದ ತನ್ನ ಸುಂದರ, ಮುದ್ದಾದ ಮಲಮಗಳನ್ನು ಕೊಲ್ಲಿಸಿ ಜಗದೇಕಸುಂದರಿ ಪಟ್ಟವನ್ನು ಹೊರುವ ದುಷ್ಟ ಆಕಾಂಕ್ಷೆಯ ರಾಣಿಯ ವೃತ್ತಾಂತವೇ ಮಾಯಾಕನ್ನಡಿಯ ‘ಸ್ನೋವೈಟ್’ ಎಂಬ ಮಕ್ಕಳ ಕಥೆ.

ನೀವೆಲ್ಲರೂ ಕೇಳಿರುವ ಕತೆಯೇ ಇದು. ಕಥೆಯ ಹಿನ್ನೆಲೆ ಇಂಗ್ಲೀಷ್ ಮೂಲವಾದರೂ, ಕಥೆಯಲ್ಲಿ ಬರುವ ರಾಣಿ, ಕಥೆ, ಮತ್ಸರ, ಕೊಲ್ಲುವ ಮನಸ್ಸು, ಎಲ್ಲವೂ ಮನುಷ್ಯನ ಸಹಜ, ಮೂಲ ಪ್ರಕೃತಿಯೇ. ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೂ ಇದೇ ಕನ್ನಡಿ ಕಥೆ. ಇಲ್ಲಿ, ಕಥೆಗೊಬ್ಬ ಸೂತ್ರಧಾರ ಇರುವಂತೆ, ಈ ಕಥೆಯ ಸೂತ್ರಧಾರನ ಪಾತ್ರ ಮಾಯಾಕನ್ನಡಿಯದು. ಹೇಗೆ ಈ ಮಾಯಾಕನ್ನಡಿ, ಮನುಷ್ಯನ ಮೂಲಗುಣ, ಆಕ್ರಮಣಶೀಲ ಮನಸ್ಸನ್ನು ಅನಾವರಣ ಮಾಡಿತು ಎನ್ನುವುದು ಜಗಜ್ಜಾಹೀರು ಆಗುವ ಮೂಲಕ ನಮ್ಮೊಳಗಿನ ಕನ್ನಡಿಯ ಬಿಂಬಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.

m2ಈ ಭೂಮಿ ಮೇಲಿನ ಪ್ರಪಂಚದಲ್ಲಿ ನೂರಾರು ಇತಿಹಾಸಗಳು, ನೂರೆಂಟು ಪುರಾಣಗಳು. ಜಗತ್ತಿನ ಬೇರೆ ಬೇರೆ ದಿಕ್ಕಿನಲ್ಲೂ ಬೇರೆ ಬೇರೆ ಪುರಾಣಗಳು. ಭಾರತೀಯ, ಗ್ರೀಕ್, ಈಜಿಪ್ಟ್ ನಂತರದ ಯುರೋಪ್ ಪುರಾಣಗಳ ತುಂಬ ಕೆಲವು ಸಮಾನ ಶಬ್ದಗಳು ಬಳಕೆಯಲ್ಲಿ ಹಾಸು ಹೊಕ್ಕಾಗಿವೆ. ಯುದ್ಧ, ಹೆಣ್ಣು, ಪ್ರೇಮ, ಸೇಡು ಹೀಗೆ. ಅಂತಹ ಕೆಲವು ಸಮಾನ ಶಬ್ದಗಳಲ್ಲಿ ಕನ್ನಡಿಯೂ ಒಂದು. ಕನ್ನಡಿಯ ಶೋಧ ಹೇಗಾಯಿತೋ? ಶತಶತಮಾನಗಳ ಹಿಂದಿನ ಎಲ್ಲ ನಾಗರಿಕತೆಯಲ್ಲೂ ಕನ್ನಡಿಯ ಪ್ರಸ್ತಾಪವಿದೆ. ಅಂದರೆ ಕನ್ನಡಿಯ ಶೋಧದ ನಂತರ ಪುರುಸೊತ್ತಿಲ್ಲದೆ ದುಡಿಯುತ್ತಿರುವ ವಸ್ತುವಿದು ಎಂದು ಖಂಡಿತಾ ತಿಳಿದುಕೊಳ್ಳಬಹುದು. ಚಿತ್ತೂರಿನ ಅಪ್ರತಿಮ ಸುಂದರಿ ರಾಣಿ ಪದ್ಮಿನಿಯನ್ನು ಅಲ್ಲಾವುದ್ದೀನ್ ಖಿಲ್ಜಿ ನೋಡಿದ್ದೂ ಕನ್ನಡಿಯ ಪ್ರತಿಬಿಂಬದಿಂದಲೇ ಅನ್ನುವುದು ಇತಿಹಾಸದ ದಾಖಲೆ. ಇದನ್ನೆಲ್ಲ ಅರಿತಾಗ ಮನುಷ್ಯನ ಹುಟ್ಟಿನಷ್ಟೇ ಕನ್ನಡಿಗೂ ದೊಡ್ಡ ಇತಿಹಾಸವಿದೆ ಎಂದಾಯಿತು.

ಇಂಥ ಕನ್ನಡಿಯೊಂದಿಗೇ ಅವಳಿಯಂತೇ ಅಂಟಿಕೊಂಡಿರುವವರು ಹೆಣ್ಣುಮಕ್ಕಳು ಎಂಬ ಹಳೇ ಸುಳ್ಳು ಮಾತೊಂದಿದೆ. ಯಾಕೆ ಗಂಡಿಗೇ ಪ್ರಿಯವಲ್ಲವೇ ಈ ಕನ್ನಡಿ? ಗಂಡೆಂಬ ಒಂದೇ ಒಂದು ಅರ್ಹತೆಯನ್ನು ಪಡೆದ ಗಂಡಸರಿಗೆ ಕೂಡ ಈ ಕನ್ನಡಿಯೆಂದರೆ ಖಂಡಿತಾ ಹೆಣ್ಣುಮಕ್ಕಳಿಗೆ ಪ್ರಿಯವಾದಷ್ಟೇ ಪ್ರಿಯವಾದುದು. ತನ್ನ ಪೌರುಷದ ಬಗ್ಗೆ ತಾನೇ ಬೆನ್ನು ತಟ್ಟಿಕೊಳ್ಳಲು ಇರುವ ಒಂದೇ ಒಂದು ಅವಕಾಶ ಈ ಕನ್ನಡಿ. ಗಂಡಿನಲ್ಲಿ ಯಾವುದೇ ಊನವಿದ್ದರೂ ಈ ಕನ್ನಡಿಯ ಮುಂದೆ ಬರೀ ಗಂಡಾಗಿ ನಿಂತು ಮೀಸೆ ತಿರುವುತ್ತಾನೆ. ಈ ಅವಕಾಶ ಖಂಡಿತಾ ಹೆಣ್ಣು ಮಕ್ಕಳಿಗಿಲ್ಲ. ಕನ್ನಡಿ ಈ ಪ್ರಪಂಚದ ದೃಷ್ಟಿಯ ಪ್ರಕಾರ ಚಿತ್ರನಟಿಯರಿಗೆ, ಹದಿಹರೆಯದವರಿಗೆ ಹೆಚ್ಚು ಆಪ್ರವಿರಬಹುದೇನೋ? ಆದರೆ ವಯಸ್ಸು ಜಾರಿದಂತೇ ಈ ಕನ್ನಡಿ ದೂರವಾದರೆ ನೆಮ್ಮದಿಯಂತೆ ಸ್ತ್ರೀಯರಿಗೆ ಕಂಡರೂ ಅಚ್ಚರಿಯಿಲ್ಲ. ಏಕೆಂದರೆ ವಯಸ್ಸು ಜಾರಿದಂತೆ ಕನ್ನಡಿಯ ಬಿಂಬ ಮೊದಲಿನಷ್ಟು ಮುದಗೊಳಿಸುವುದಿಲ್ಲ, ಕನ್ನಡಿ ಅಷ್ಟು ಸ್ನೇಹಿಯಲ್ಲವೆಂದು ಹಿರಿಯ ನಟಿಯೊಭ್ಬರು ಹೇಳಿದ್ದುಂಟು. ಆಗ ಅಬ್ಬಾ ಕನ್ನಡಿಯೇ, ಕೊನೆಗೆ ನೀನೂ ಅಷ್ಟೇ ಈ ಜಗತ್ತಿನ ತಾರತಮ್ಯವನ್ನು ಮೀರಲಾರದೇ ಹೋದೆಯಲ್ಲ ಎಂದೆನಿಸುತ್ತದೆ. ಇಷ್ಟಿದ್ದೂ ಶಿಲ್ಪದಲ್ಲಿ ಮೂಡಿಸಿದ್ದು ಮಾತ್ರ ದರ್ಪಣಸುಂದರಿಯನ್ನೇ! ಬೇಲೂರಿನ ದರ್ಪಣಸುಂದರಿ ಇಂದಿಗೂ ಅಚ್ಚರಿ ಮೂಡಿಸುತ್ತಾಳೆ. ಕಲ್ಲಿನ ಸುಂದರಿಗಷ್ಟೇ ನಿರಂತರವಾಗಿ ಈ ದರ್ಪಣ ನೋಡುವ ಧೈರ್ಯವೇನೋ! ಎಂಬಂತೆ.

m1ಚಲನಚಿತ್ರಗಳಲ್ಲಿ ಕನ್ನಡಿಯ ಉಪಯೋಗ ಅದ್ಭುತವಾಗಿ ನಡೆದಿದೆ. ಬೆಳಕಿನ ಆಟ ತೋರುವ ಚಿತ್ರಗಳಲ್ಲಿ ಕನ್ನಡಿಗಳೂ ಅಷ್ಟೇ ಅಗತ್ಯದ ಪರಿಕರ ಎನಿಸಿದೆ. ಇತ್ತೀಚೆಗಿನ ಬಾಜೀರಾವ್ ಮಸ್ತಾನಿ ಹಿಂದಿ ಚಿತ್ರದಲ್ಲಿ ನಿರ್ದೇಶಕನ ಜಾಣ್ಮೆಗೆ ಸಾಕ್ಷಿಯಾಗಿ ಶೀಶ್ ಮಹಲ್ ಅನ್ನುವ ಅದ್ಭುತ ಕನ್ನಡಿಗಳ ಸೌಧವನ್ನು ನಿರ್ಮಿಸಿ ಅದರಲ್ಲೊಂದು ಸುಂದರ ಹಾಡನ್ನೂ ಚಿತ್ರಿಸಿದ ಹೆಮ್ಮೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯದು. ಅದಕ್ಕೂ ತುಂಬಾ ಮೊದಲು, ದಶಕಗಳ ಹಿಂದೆಯೇ ದಿಲೀಪ್ ಕುಮಾರ್ ಹಾಗೂ ಮತ್ತೇರಿಸುವ ನಗೆಯ ಮಧುಬಾಲಾ ನಟಿಸಿದ ಮೊಘಲ್-ಎ-ಆಝಮ್ ಚಿತ್ರದ ಪ್ಯಾರ್ ಕಿಯಾ ತೋ ಡರನಾ ಕ್ಯಾ ಹಾಡಿನಲ್ಲಿ ನೂರಾರು, ಸಾವಿರಾರು ಕನ್ನಡಿಗಳಲ್ಲಿ ಮಧುಬಾಲಾಳ ಪ್ರತಿಬಿಂಬ ಕಾಣುವಂತೆ ಛಾಯಾಚಿತ್ರಣ ನಡೆಸಿದ ಹೆಮ್ಮೆಯನ್ನು ನೋಡಿದಾಗ ಕನ್ನಡಿಯನ್ನೊದು ಜಾಣ್ಮೆ, ಕ್ರಿಯಾಶೀಲತೆ, ವಿಸ್ಮಯ ಮೂಡಿಸುವ ವೈಭವದ ಕುರುಹೇ ಎಂದು ಅನಿಸುತ್ತದೆ. ಆದರೆ ಚಿತ್ರಗಳ ಎರಡು, ಮೂರು ಗಂಟೆಗಳ ಕಲೆಯ ಸೊಬಗು ಮುಗಿದ ಮೇಲೆ, ನಂತರದ ಉಳಿದ ಬದುಕಿನಲ್ಲಿ ಒಡೆದ ಕನ್ನಡಿಗಳೊಂದಿಗೆ ಬದುಕುವ ಸಂಕಷ್ಟವೂ ಇದೆ ಎಂದರಿತಾಗ ಅಷ್ಟೂ ಹೊತ್ತು ಮೂಡಿದ್ದ ವಿಸ್ಮಯ ಮಂಜಿನಂತೆ ಕರಗುತ್ತದೆ.

ಇಷ್ಟೆಲ್ಲಾ ಇತಿಹಾಸವಿರುವ ಈ ಕನ್ನಡಿ ಬರೀಯ ಮುಖತೋರುವ ವಸ್ತುವೇ? ಅಥವಾ ಅದರೊಳಗೊಂದು ಪ್ರಪಂಚವಿದೆಯೇ? ಕನ್ನಡಿ ಕಟ್ಟಿದ ಕಥೆಗಳೆಷ್ಟೋ ಹೇಳದೇ ಹಾಗೇ ನಿಡುಸುಯ್ಯತ್ತಿವೆಯೇ, ಕನ್ನಡಿಯೂ ತನ್ನ ಬಸಿರಲ್ಲಿ ಹುದುಗಿಸಿಟ್ಟ ಕಥೆಗಳಿವೆಯೇ? ಸಂತೆಕಟ್ಟೆಯ ಪುಟ್ಟ ಪ್ಲಾಸ್ಟಿಕ್ ಫ್ರೇಮಿನ ಕನ್ನಡಿಯಿಂದ ಹಿಡಿದು ಬೆಲ್ಜಿಯಂ ಕನ್ನಡಿಯವರೆಗೂ ತರಹೇವಾರಿ ಕನ್ನಡಿಗಳ ತಲೆಮಾರನ್ನು ನೋಡಿದ ನಮಗೆ ಕನ್ನಡಿಯ ಬಗ್ಗೆ ಯಾವತ್ತಾದರೂ ಯೋಚಿಸಿದ್ದೇವೆಯೇ? ಕನ್ನಡಿಯಲ್ಲಿ ಕಾಣುವುದೇನು? ನಮ್ಮದೇ ಪ್ರತಿಬಿಂಬವನು ತೋರಿಸುವ ಕನ್ನಡಿ ನಮ್ಮ ಮನಸ್ಸಿನ ಪ್ರತಿಫಲನವೇ? ಬರೀ ನಮ್ಮ ದೇಹದ ಪ್ರತಿಫಲನವೇ? ಕನ್ನಡಿಯಲ್ಲಿ ಕಾಣುವ ದೇಹ ನಾವೇ? ಅಥವಾ ಆ ದೇಹದೊಳಿರುವ ಮನಸ್ಸು ನಾವೇ? ಇನ್ನು ನಮ್ಮ ಫಳಫಳ ಹೊಳೆಯುವ ಕಣ್ಣು, ಕನ್ನಡಿಯೇ? ಹಾಗೆಂದು ಚಿತ್ರಗೀತೆಯೊಂದು ಹಾಡಿದ್ದು ಸುಳ್ಳಲ್ಲ, ‘ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ’ವೆಂದು. ಹಾಗಿದ್ದಲ್ಲಿ ಕಣ್ಣೂ ಕನ್ನಡಿಯಾದರೆ ನಮ್ಮೊಳಗಿರುವ ಮನಸ್ಸೂ ಕನ್ನಡಿಯೇ ಅಲ್ಲವೇ. ಚಲನಚಿತ್ರಗಳಲ್ಲಿ ಸಂಬಂಧಗಳು ಮುರಿದುಹೋಗುವ ಹೊತ್ತಿನಲ್ಲಿ ಹೃದಯದ ಆಕಾರದ ಕನ್ನಡಿ ಒಡೆದಂತೆ, ಸಾಂಕೇತಿಕವಾಗಿ ತೋರಿಸುವ ಹಿನ್ನೆಲೆಯನ್ನು ನೋಡಿದಾಗ ನಮ್ಮ ಹೃದಯ ಅಥವಾ ಮನಸ್ಸು ಕನ್ನಡಿಯಂತೇ ಎಂದು ನಾವು ಭಾವಿಸುತ್ತಿದ್ದೇವೆ ಎಂದರ್ಥ ಮಾಡಿಕೊಳ್ಳಬಹುದು. ಇದೆಲ್ಲ, ಹೌದಾದರೆ, ಎಷ್ಟೊಂದು ಕನ್ನಡಿಗಳು ನಮ್ಮೊಳಗೇ! ಈ ಕನ್ನಡಿಗಳಲ್ಲಿ ನಾವು ನಮ್ಮನ್ನು ಎಷ್ಟು ನೋಡಿಕೊಂಡಿದ್ದೇವೆ? ಎಷ್ಟು ಸಾರಿ ಈ ನಮ್ಮೊಳಗಿನ ಕನ್ನಡಿಗಳನ್ನು ಒರೆಸಿ ಶುಭ್ರ ಮಾಡಿದ್ದೇವೆ? ಬರೀ ಪ್ರಶ್ನೆಗಳು. ಉತ್ತರ ಹುಡುಕುವ ಪ್ರಯತ್ನವಾಗಲೇ ಇಲ್ಲ. ಕಾಲದೊಂದಿಗೆ ಓಡುತ್ತಿರುವ ನಮಗೆ ಕನ್ನಡಿಗಳ ಬಗ್ಗೆಯೂ ಯೋಚಿಸಲು ಸಾಧ್ಯವಾಗುತ್ತಿಲ್ಲ. ಹಾಗೇ ಯೋಚಿಸುವವರು ಕೆಲಸವಿಲ್ಲದವರು ಎನ್ನುವ ಭಾವನೆ ಬೇರೆ! ಆದರೂ ಯೋಚಿಸಿದಾಗ ಅಚ್ಚರಿ ಹುಟ್ಟುತ್ತದೆ. ನಾವು ಎಷ್ಟು ಕನ್ನಡಿಯೊಳಗೇ ಬದುಕುತ್ತಿದ್ದೇವೆ ಎಂದು.

ಕನ್ನಡಿಯೊಳಗಿನ ಬದುಕು! ಹೌದು. ಪುರಂದರದಾಸರ ಕೀರ್ತನೆಯೊಂದಿದೆ. ‘ನಾ ನಿನ್ನ ಧ್ಯಾನದೊಳಿರಲು ಮಿಕ್ಕ ಹೀನ ಮಾನವರೆಲ್ಲಾ ಏನಮಾಡಬಲ್ಲರೋ ರಂಗ’. ಈ ಕೀರ್ತನೆಯ ಕೊನೆಯಲ್ಲಿ ದಾಸರು ‘ಕನ್ನಡಿಯೊಳಗಿನ ಗಂಟು ಕಂಡು ಕಳ್ಳ, ಕನ್ನವಿಕ್ಕಲು ಅವನ ವಶವಹುದೇ’ ಎಂದು ಪ್ರಶ್ನಿಸುತ್ತಾರೆ. ಲೌಕಿಕವನ್ನೇ ಹಾಸಿ ಹೊದ್ದುಕೊಂಡು ಮಲಗುವವನಿಗೆ ದಾಸರು ಎಚ್ಚರಿಸಿದ್ದು ಹೀಗೆ. ಸುಖ ಎಂಬ ಮರೀಚಿಕೆಯ ಹಿಂದೆ ಓಡಿದರೆ, ಸುಖವೆಂಬುದು ಕನ್ನಡಿಯೊಳಗಿನ ಗಂಟಾಗಿ ಬಿಡುತ್ತದೆ ಎಂದು. ಈ ಗಂಟಿಗೂ ಮನುಷ್ಯನಿಗೂ ತೀರದ ಸಂಬಂಧ. ಕನ್ನಡಿಯೊಳಗಿನ ನಂಟು ಎಂದಾಗ, ಇಲ್ಲಿ ನಮ್ಮ ವಾಹನಗಳ ರೇರ್‍ವ್ಯೂ ಮಿರರ್, ಅಥವಾ ನಿಮ್ನ ಕನ್ನಡಿಯ ನೆನಪಾಗುತ್ತದೆ. ರೇರ್‍ವ್ಯೂ ಮಿರರನ್ನು ನೋಡಿದರೆ ಹತ್ತಿರವಿದ್ದಂತೆ ಕಾಣುವ ವಸ್ತು ನಿಜಕ್ಕೂ ದೂರದಲ್ಲಿರುತ್ತದೆ. ದೂರದಲ್ಲಿರುವ ವಸ್ತು ಅದ್ಯಾವ ಮಾಯೆಯಲ್ಲೋ ಹತ್ತಿರ ಬಂದಿರುತ್ತದೆ, ಅಪ್ಪಟ ಮನುಷ್ಯ ಸಂಬಂಧಗಳಂತೆ. ಒಟ್ಟಿನಲ್ಲಿ, ನಮ್ಮ ಸುತ್ತಲೂ ಮಾಯಾಕನ್ನಡಿಗಳದ್ದೇ ಕಾರುಬಾರು. ಅರ್ಥವಾಗದಿರುವ ಕನ್ನಡಿಗಳು. ನಮ್ಮ ಮುಂದಿನ ಮನೆಯವರು, ಮೇಲಿನ ಮಹಡಿಯ ಮುಂದೆ ರಸ್ತೆಗೆ ಕಾಣುವಂತೆ ದೊಡ್ಡ ಕನ್ನಡಿ ತೂಗು ಹಾಕಿದ್ದಾರೆ. ದೃಷ್ಟಿ ಆಗದಂತೆ, ಬೆಳಕು ಪ್ರತಿಫಲನವಾಗುವಂತೆ. ಪಾಪ ಕನ್ನಡಿ, ಏನೆಲ್ಲ, ಎಷ್ಟೆಲ್ಲ ಕೆಲಸಗಳನ್ನು ಮಾಡಬೇಕು. ಅದೂ ಸುಂದರವಾಗಿ ಮಾಡಬೇಕು. ಸ್ವಲ್ಪ ಕೆಟ್ಟದಾಗಿ ಕಂಡರೂ ಅಲ್ಲಿ ಹೊಸ ಕನ್ನಡಿ ತಂದಿಡುತ್ತಾರೆ. ಮನೆಯೊಳಗೆ, ಹೊರಗೆ ಎಲ್ಲ ಕಡೆಯೂ ಕನ್ನಡಿಗಳನ್ನು ಹಿಡಿಯುವ ನಾವು ಉಡುಪುಗಳನ್ನು ಮರೆಯುವುದುಂಟೆ. ರಾಜಸ್ಥಾನದ ಉಡುಪುಗಳಲ್ಲಿ ಪೋಣಿಸುವ ಕನ್ನಡಿಗಳ ವೈಭವ ಜಗತ್ಪಸಿದ್ಧ. ಹೀಗಾಗಿ ತೇಯುತ್ತಿದೆ ಕನ್ನಡಿ ಮನುಷ್ಯನನ್ನು ಹೊಸದಾಗಿ, ಸುಂದರವಾಗಿ ತೋರಿಸುತ್ತಾ ತೋರಿಸುತ್ತಾ.

m4ಮೊದಲೆಲ್ಲಾ ಮನೆಗೊಂದು ಕನ್ನಡಿಯಿದ್ದರೇ ಭಾಗ್ಯವೆಂದು ಪರಿಗಣಿಸಲಾಗುತ್ತಿದ್ದರೆ ಈಗ ಪ್ರತೀ ಕೋಠಡಿಯಲ್ಲೂ, ಬರೀ ಕೊಠಡಿ ಮಾತ್ರವಲ್ಲ, ಬಾತ್ ರೂಮುಗಳಲ್ಲೂ ಕನ್ನಡಿ ಅಗತ್ಯದ ವಸ್ತುವಾಗಿದೆ. ಇದರಿಂದಲೇ ತಿಳಿಯುತ್ತದೆ, ನಾವೆಷ್ಟು ಕನ್ನಡಿಯನ್ನು ಪ್ರೀತಿಸುತ್ತಿದ್ದೇವೆ ಎಂದು. ಹೆಣ್ಣು ಮಕ್ಕಳ ಬ್ಯಾಗಿನಲ್ಲೂ ಗಂಡಸರ ಜೋಬಿನಲ್ಲೂ ಸರಿ ಹೊಂದುವ ಪುಟ್ಟ ಪುಟ್ಟ ಕನ್ನಡಿಗಳೂ ತಯಾರಾಗಿವೆ. ಹೋಟೆಲಿಗೆ ತಿಂಡಿ ತಿನ್ನಲು ಹೋದರೆ ಕೈ ತೊಳೆಯುವಲ್ಲಿಯೂ ದೊಡ್ಡ ಕನ್ನಡಿ. ಕೈ ಸರಿ ತೊಳೆಯದಿದ್ದರೂ ಕನ್ನಡಿಯೆಂದರೆ ಬಲು ಪ್ರೀತಿಯೆಂಬಂತೆ ಒಮ್ಮೆ ಕನ್ನಡಿಯನ್ನು ನೋಡದೇ ಇರಲಾರೆವು ನಾವು. ನಿಜ ಹೇಳಬೇಕೆಂದರೆ ನಮಗೆ ಪ್ರೀತಿ ಇರೋದು ನಮ್ಮ ಮೇಲೆ. ನಮ್ಮ ಮುಖದ ಮೇಲೆ. ಮುಖದ ಹಿಂದಿರುವ ‘ನಾನು’ ಅನ್ನುವ ಅಸ್ತಿತ್ವದ ಮೇಲೆ. ಹಾಗೆ ಕನ್ನಡಿ ನೋಡುತ್ತಾ ನೋಡುತ್ತಾ ಖುಷಿ ಪಡುತ್ತಿರುತ್ತೇವೆ. ಒಳಗಿನ ಕೋರೆ ಹಲ್ಲಿರುವ, ಕೆಂಗಣ್ಣಿರುವ ನೀಚ ಮನಸ್ಸಿನ, ಅಹಂಕಾರಿ ಮನುಷ್ಯನನ್ನು ಮುಚ್ಚಿಟ್ಟು ನಗುತ್ತಿರುತ್ತೇವೆ. ಅದಕ್ಕೇ ನೋಡಿ, ಮನುಷ್ಯನನ್ನು ಬುದ್ಧಿವಂತ ಪ್ರಾಣಿ ಎನ್ನುವುದು. ಉಳಿದೆಲ್ಲ ಪ್ರಾಣಿಗಳು ತಮ್ಮ ಕೋರೆಹಲ್ಲಿರುವ, ಉದ್ದ ನಖಗಳಿರುವ ಪ್ರಾಣಿ ಎಂಬ ಶರೀರವನ್ನು ಹೊದಿಕೆಯಿಂದ ಮುಚ್ಚದೇ ಇದ್ದುಕೊಂಡು, ನಿಜಕ್ಕೂ ಮನುಷ್ಯ ಇರಬೇಕಾದ ರೀತಿಯಲ್ಲಿ ಇವೆ. ಏಕೆಂದರೆ ಪ್ರಾಣಿ ಪ್ರಪಂಚದಲ್ಲಿ ಕನ್ನಡಿಗಳಿಲ್ಲವಲ್ಲ. ಕನ್ನಡಿಗಳಿಲ್ಲ ಹಾಗೆ ಪ್ರಸಾದನಗಳಿಲ್ಲ, ವಿಶೇಷವಿನ್ಯಾಸದ ಉಡುಪುಗಳಿಲ್ಲ. ಕಣ್ಣು ಕೋರೈಸುವ ಆಭರಣಗಳು ಇಲ್ಲವೇ ಇಲ್ಲ. ನಿರಾಳತೆಯೆಂದರೆ ಇದೇ ಇರಬೇಕು. ಪ್ರಾಣಿಗಳು ಪ್ರಾಣಿಗಳಾಗಿಯೇ ಇರಲಿ, ಕನ್ನಡಿ ಪ್ರಪಂಚದೊಳಕ್ಕೆ ಬರದೇ ಇರಲಿ.

ಮತ್ತೆ ಕನ್ನಡಿ ಪ್ರಪಂಚಕ್ಕೆ ಬಂದರೆ, ಕನ್ನಡಿ, ನಡೆದಾಡುವ ದಾರಿಯಂತೇ ಅಸ್ತಿತ್ವಹೀನವಾಗಿದೆ. ದಾರಿಗೆಲ್ಲಿದೆ ಅಸ್ತಿತ್ವ. ಮನುಷ್ಯ ತನಗೆ ಬೇಕಾದೆಡೆಗೆ ಹೋಗುತ್ತಾನೆ, ದಾರಿ ಅಲ್ಲೇ ಬಿದ್ದುಕೊಂಡಿರುತ್ತದೆ, ಮೈಮೇಲೆ ನೂರು ಗಾಯಗಳೊಂದಿಗೆ, ಸ್ಪರ್ಶಜ್ಞಾನವನ್ನೇ ಮರೆತಂತೆ. ಹಾಗೆ ಕನ್ನಡಿಗೂ ತನ್ನದೇ ಆದ ಸ್ವತಂತ್ರ ಬಿಂಬವಿಲ್ಲ. ಪ್ರತಿಬಿಂಬಿಸುವುದಷ್ಟೇ ಕೆಲಸ. ಎಲ್ಲ ಮುಖಗಳನ್ನು, ಎಲ್ಲ ಭಾವಗಳನ್ನು, ಎಲ್ಲ ನಾಟಕಗಳನ್ನು. ಎದುರಿನ ವ್ಯಕ್ತಿ ನಕ್ಕರೇ ನಗಬೇಕು, ಅತ್ತರೆ ಅಳಬೇಕು. ಬಣ್ಣ ಹಚ್ಚಿಕೊಂಡರೇ ಇಷ್ಟವಿಲ್ಲದಿದ್ದರೂ ಪ್ರತಿಫಲಿಸಬೇಕು. ತನ್ನಿಷ್ಟದ ಯಾವುದೇ ಬಣ್ಣ ಹಚ್ಚಿಕೊಳ್ಳುವಂತಿಲ್ಲ. ಹಚ್ಚಿದ್ದನ್ನು ನಿರ್ವಿಕಾರವಾಗಿ ಪ್ರತಿಫಲಿಸಬೇಕು ಅಷ್ಟೇ. ಕನ್ನಡಿ ತನ್ನ ಪ್ರತಿಬಿಂಬಿಸುವ ಶಕ್ತಿ ಕಳಕೊಂಡರೆ ಏನಾಗಬಹುದು. ಈ ರೀತಿ ಯೋಚನೆ ಬಂದಾಗ ಗಾಬರಿಯಾಗುತ್ತದೆ. ಕನ್ನಡಿಗಳೇ ಇಲ್ಲದೇ ಹೋದರೆ? ಆಗ ಕಣ್ಣಕನ್ನಡಿಯನ್ನು ನಾವು ಉಪಯೋಗ ಮಾಡುತ್ತೆವೆನೋ? ಅದೂ ಕೈ ಕೊಟ್ಟರೆ ಆಗಲಾದರೂ ಮನುಷ್ಯ ಮನಸ್ಸಿನ ಕನ್ನಡಿಯ ಉಪಯೋಗ ಮಾಡುತ್ತಾನೇಯೇ? ಕೊನೆಪಕ್ಷ ಆಗ, ಮನಸ್ಸಿನ ಕನ್ನಡಿಯನ್ನು ಶುಭ್ರವಾಗಿ ಇಟ್ಟುಕೊಳ್ಳಲೇಬೇಕಲ್ಲವೇ! ಇಲ್ಲದಿದ್ದರೆ ಕೊಳೆತುಂಬಿದ ಕನ್ನಡಿಯನ್ನು ನಾವು ಪ್ರದರ್ಶನ ಮಾಡುವ ಸಾಹಸ ಮಾಡಬೇಕಾಗುತ್ತದೆ. ಆಗ, ನಮ್ಮ ಕೋರೆಹಲ್ಲುಗಳು ಕಾಣುತ್ತವೆ, ವ್ಯಕ್ತಿತ್ವವನ್ನೇ ಸಿಗಿದು ಹಾಕುವ ನಖಗಳೂ ಕಾಣುತ್ತವೆ. ಎಲ್ಲವೂ ಖುಲ್ಲಂಖುಲ್ಲ. ಆಗಲೇ ಸಿಕ್ಕಿಬೀಳುತ್ತೇವೆ ನಾವು. ಆದರೆ ಮನುಷ್ಯ ಬುದ್ಧಿವಂತಪ್ರಾಣಿ. ಹಾಗಾಗಬಾರದೆಂದೇ ಸುತ್ತಲೂ ಗಾಜಿನ ಅರಮನೆ ಕಟ್ಟಿಕೊಂಡು ಬದುಕುತ್ತಿದ್ದಾನೆ. ಈ ಕನ್ನಡಿಯಲ್ಲದಿದ್ದರೆ ಆ ಕನ್ನಡಿ. ಒಬ್ಬರಿಗೊಬ್ಬರು ಕಲ್ಲೂ ಎಸೆಯುತ್ತಿದ್ದೇವೆ, ಮೂರ್ಖರ ಹಾಗೆ. ಗಾಜಿನ ಮನೆಯಲ್ಲಿರುವವರು ಬೇರೆಯವರಿಗೆ ಕಲ್ಲು ಹೊಡೆಯಬಾರದೆಂಬ ಮಾತು ಗೊತ್ತಿದ್ದೂ. ಕನ್ನಡಿ ತನ್ನೊಳಗೇ ನಗುತ್ತಿರಬೇಕು. ‘ನಗೆಯು ಬರುತಿದೆ ಎನಗೆ ನಗೆಯು ಬರುತಿದೆ’ ಎಂದು.

m5ಹೀಗೆಲ್ಲಾ ಇರುವ ಕನ್ನಡಿ ಕಥೆಯಲ್ಲಿ ಒಂದೆರಡು ಒಳ್ಳೆ ಅಂಶಗಳನ್ನೂ ಹೇಳಲೇಬೇಕು ನೋಡಿ. ಕನ್ನಡಿಗೂ ಕಣ್ಣುಕೊಟ್ಟು ವೈದ್ಯಲೋಕದ ವಿಸ್ಮಯವಾಗಿ ಮನುಷ್ಯನ ಕಣ್ಣಿಗೆ ಕಣ್ಣಾಗಿ ದೃಷ್ಟಿಭಾಗ್ಯ ನೀಡಿದೆ. ಆದರೆ ಕನ್ನಡಿಯನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವ ಮಾನವ ಒಂದೇ ಮುಖವಿದ್ದ ಅತ್ಯಂತ ಮುಗ್ಧ, ಪ್ರತಿಬಿಂಬಿಸುವುದಷ್ಟೇ ಕೆಲಸವೆಂದುಕೊಂಡಿದ್ದ ಕನ್ನಡಿಗೂ ತನ್ನ ಸ್ವಾರ್ಥಕ್ಕೋಸ್ಕರ ಎರಡು ಮುಖಗಳನ್ನು ನೀಡಿದ್ದಾನೆ. ಹೌದು, ವ್ಯಕ್ತಿಯ ಬಿಂಬವನ್ನು ಒಳಗಿನ ಮುಖದಿಂದ ಸೆರೆ ಹಿಡಿಯುವ ಕ್ಯಾಮರಾದ ಕಳ್ಳ ಕಣ್ಣಾಗಿಯೂ ಶಕ್ತಿಕೊಟ್ಟು ಅದನ್ನೂ ನಂಬದೇ ಇರುವಂತೆ ಮನುಷ್ಯ ಮಾಡಿದ್ದಾನೆ. ಈಗ ಕನ್ನಡಿ ಮುಂದೆ ನಿಶ್ಚಿಂತೆಯಿಂದ ಇರುವಂತಿಲ್ಲ. ಸಂತಸದಿಂದ ನಕ್ಕು ನೋಡುವಂತಿಲ್ಲ. ತನ್ನ ನಿಲುವನ್ನು ಸೌಂದರ್ಯವನ್ನು ಕನ್ನಡಿ ಮುಂದೆ ನಿಂತು ಹೆಮ್ಮೆ ಪಟ್ಟುಕೊಳ್ಳುವಂತಿಲ್ಲ. ಮೆಚ್ಚುಗೆಯಾಗಿದ್ದ ಕನ್ನಡಿಯನ್ನು ಸಂದೇಹದಿಂದ ನೋಡುವಂತೆ ನಾವು ಮಾಡಿಬಿಟ್ಟಿದ್ದೇವೆ. ಎಷ್ಟೆಂದರೂ ಬುದ್ಧಿವಂತರಲ್ಲವೇ ನಾವು!

ಸರೀ. ಇಷ್ಟೆಲ್ಲ ಕನ್ನಡಿ ಪುರಾಣಶ್ರವಣ ಆದ ಮೇಲೆ ಕನ್ನಡಿ ಪುರಾಣದ ಫಲಶ್ರುತಿಯೂ ಅಗತ್ಯವಲ್ಲವೇ. ಹಾಂ, ನಮ್ಮ ಸಂಸ್ಕೃತಿಯಲ್ಲಿ ಕನ್ನಡಿ ಒಡೆಯುವುದೆಂದರೆ ಅಪಶಕುನ. ಏನೋ ವಿಪತ್ತು ಕಾದಿದೆ ಎಂದರ್ಥ. ಚಿಕ್ಕವಳಿದ್ದಾಗ ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ಕೋಪಿಸಿಕೊಳ್ಳುತ್ತಿದ್ದಳು ಅಮ್ಮ, ದೊಡ್ಡ ಅಧಿಕಪ್ರಸಂಗಿಯೆಂದು. ನನಗೋ ಹತ್ತತ್ತು ಮೂಗು, ಅದರ ಎರಡರಷ್ಟು ಕಣ್ಣುಗಳಿರುವ ನನ್ನದೇ ಹತ್ತಾರು ಬಿಂಬಗಳನ್ನು ನೋಡಲು ಖುಷಿಯೋ ಖುಷಿ. ಏಕೆಂದರೆ ನಾನೂ, ಲೌಕಿಕವನ್ನೆ ಹಾಸಿಹೊದ್ದುಕೊಂಡಿರುವ ಅಪ್ಪಟ ಮನುಷ್ಯಪ್ರಾಣಿಯಲ್ಲವೇ? ಹಾಗಾಗಿ ಕನ್ನಡಿಯನ್ನು ಒಡೆಯದಂತೆ ನೋಡಿಕೊಂಡು ನಡುನಡುವೇ ತೊಳೆಯುತ್ತಾ ಒಳ ಮತ್ತು ಹೊರಗಿನ ಬಿಂಬಗಳನ್ನು ಶುಭ್ರವಾಗಿಟ್ಟುಕೊಂಡು, ಆ ಸಂತಸ ಕಣ್ಣಕನ್ನಡಿಯಲ್ಲೂ ಪ್ರತಿಫಲನವಾಗುವಂತೆ ಇದ್ದರೆ ಲೌಕಿಕವೂ ಅಲೌಕಿಕವಾಗಬಹುದು. ಬಸವಣ್ಣ ವಚನವೊಂದರಲ್ಲಿ ‘ಕನ್ನಡಿಯ ನೋಡುವ ಅಣ್ಣಗಳಾ, ಜಂಗಮವ ನೋಡಿರೇ|’ ಎನ್ನುತ್ತಾ ಸ್ಥಾವರದೊಳಗಿನ ಬದುಕನ್ನು ಆಸ್ವಾದಿಸಿಕೊಂಡು ಬದುಕುವಂತೆ ಜಂಗಮವಾಗುವ ಮೂಲಕ ಸಮಾಜಕ್ಕೆ ಪೂರಕವಾಗುವ ಸಂತಸದಲ್ಲಿ ಭಾಗಿಯಾಗಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ನಮ್ಮ ಪ್ರಪಂಚದಷ್ಟೇ ಕನ್ನಡಿ ಪ್ರಪಂಚವೂ ವಿಸ್ತಾರವಾದುದು ಅಪೂರ್ವವಾದುದು ಅಲ್ಲವೇ?
—————————

IMG-20160103-WA0009

 

ದೀಪಾ ಫಡ್ಕೆ, ಲೇಖಕಿ ಮತ್ತು ಗಾಯಕಿ. ಬೆಂಗಳೂರು ದೂರದರ್ಶನ ಮತ್ತು ಉದಯ ವಾಹಿನಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು. “ಋತ” ಮತ್ತು “ಹರಪನಹಳ್ಳಿ ಭೀಮವ್ವ” ಅವರ ಪ್ರಕಟಿತ ಕೃತಿಗಳು.

Share

2 Comments For "ಕನ್ನಡಿ ಮಾಯೆ
ದೀಪಾ ಫಡ್ಕೆ
"

 1. Renuka Ramanand
  4th July 2016

  ಅರಿವು ಹೆಚ್ಚಿಸಿದ ಮಾಹಿತಿ

  Reply
 2. ವಿಮಲಾ ನಾವಡ
  5th July 2016

  ಬಹಳ ಚೆನ್ನಾಗಿದೆ.

  Reply

Leave a comment

Your email address will not be published. Required fields are marked *

Recent Posts More

 • 2 days ago No comment

  ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!

          ಕಥನ         ಅಜ್ಜ ಪೆನ್ಷನ್ ತರೋದಕ್ಕೆ ಅಂತ ಪೇಟೆಗೆ ಹೋಗಿದ್ದ. ಅಷ್ಟರಲ್ಲಿ ಮನೆ ಬಾಗಿಲಲ್ಲಿ ಕಾರು ಬಂದು ನಿಂತಿತು. ಕಾರಲ್ಲಿ ಅಜ್ಜಿಯ ಮಗ, ಸೊಸೆ ಮತ್ತೆ ಆರು ವರ್ಷದ ಮೊಮ್ಮಗ ಬಂದಿದ್ರು. ಅಜ್ಜಿಗೆ ಖುಷಿ ತಡೆಯಕ್ಕಾಗದೇ ಅಡಿಗೆ ಮನೆ ಸಂದಿ ಮೂಲೇನೆಲ್ಲಾ ಹುಡುಕಿದ್ಲು. ದಡಾ ಬಡಾ ಸದ್ದು ಮಾಡಿದ್ಲು, ಸರಾಪರಾ ಸದ್ದು ಮಾಡಿದ್ಲು. ಅಡುಗೆ ಮನೆಯಿಂದ ಕೊತಾಕೊತಾ ಸದ್ದು ...

 • 3 days ago No comment

  ವಸಂತದ ನೆನಪು; ಮಾಗುವ ಹುರುಪು!

    ಜಗತ್ತಿನ ಬಗ್ಗೆ ತಿಳಿಯುತ್ತ ಸಾಗಿ, ನಮಗೆ ಈ ಜಗತ್ತು ಹೀಗೆ ನಡೆಯುತ್ತಿದೆ ಅಂತ ಅರಿತುಕೊಳ್ಳುವವರೆಗಿನದು ಮಧ್ಯವಯಸ್ಸಿನ ಕಾಲ. ನಾವು ಅಲ್ಲಿಯವರೆಗೆ, ಕಲಿತದ್ದು, ಕೇಳಿದ್ದು, ನಮಗೆ ತಿಳಿದಿದ್ದು ಎಲ್ಲವೂ ಬದಲಾಗುವ ವೇಳೆಗೆ ನಮಗೆ ವಯಸ್ಸಾಗಿಬಿಟ್ಟಿರುತ್ತದೆ. ಕಾಲದಲ್ಲಿ ಹೊಸ ಚಿಗುರು ಟಿಸಿಲೊಡೆದಿರುತ್ತದೆ.     ಕುಣಿದಾಡುವಷ್ಟು ಚೈತನ್ಯವಿರುವ ಯೌವನಕ್ಕೂ, ಕುಂದಿದ ಶಕ್ತಿಯ ಇಳಿಗಾಲದ ವೃದ್ಧಾಪ್ಯಕ್ಕೂ ನಡುವೆ ಬರುವುದು ಮಧ್ಯವಯಸ್ಸು! ಹುಟ್ಟು, ಬದುಕು ,ಸಾವು ಎಲ್ಲರಿಗೂ ಬರುತ್ತದೆ. ಬದುಕನ್ನು ಹಲವರು ಸಾಧನೆಗಳ ...

 • 3 days ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ಬಂಗಾರದ ಹೊಳಪು, ಬೇಗುದಿಯ ನೆನಪು…

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

 • 1 week ago No comment

  ಪ್ರಸಾದ್ ನಾಯ್ಕ್ ಪಟ್ಟಾಂಗ | ನನಗೂ ಒಬ್ಬ ಗೆಳೆಯ ಬೇಕು…

  ಆ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನಗು ಉಕ್ಕುಕ್ಕಿ ಬರುತ್ತದೆ. ಅಂದು ವಿಚಿತ್ರ ಘಟನೆಯೊಂದು ನಡೆದಿತ್ತು. ಅವು ನನ್ನ ಕಾಲೇಜಿನ ದಿನಗಳು. ಮಂಗಳೂರಿನ ಶಾಪಿಂಗ್ ಮಾಲ್ ಒಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದ ನಾನು ಫುಡ್ ಕೋರ್ಟಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆ. ಎತ್ತ ಹೋಗಬೇಕೆಂದು ತಿಳಿಯದೆ ಸುಮ್ಮನೆ ಒಂದು ಕೌಂಟರಿನತ್ತ ನಡೆದು ಬೇಕಿದ್ದದ್ದನ್ನು ಆರ್ಡರ್ ಮಾಡಿದೆ. ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಆ ಹೆಂಗಸಿಗೆ ನನ್ನ ಆಗಮನವು ಅಂಥಾ ಉತ್ಸಾಹವೇನೂ ತರಲಿಲ್ಲವಾದರೂ ನಾನು ಹೇಳಿದ್ದನ್ನೆಲ್ಲಾ ...

 • 1 week ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ಭಕ್ತಿಯ ಉಬ್ಬರ… ವ್ಯಾಪಾರದ ಸಡಗರ…

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  1 month ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  1 month ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  2 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  2 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...