Share

ನಾಗರೇಖಾ ಪದಗಳು
ಬುಕ್ ಮಾರ್ಕ್

 • Page Views 469
 • ನಾಗರೇಖಾ ಗಾಂವಕರ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲೆಯ ಅಗಸೂರಿನವರು. ಈಗಾಗಲೇ ‘ಏಣಿ’ ಎಂಬ ಕವನ ಸಂಕಲನ ಪ್ರಕಟಿಸಿರುವ ಅವರ ಮತ್ತೊಂದು ಸಂಕಲನ ‘ಪದಗಳೊಂದಿಗೆ ನಾನು’ ಈ ತಿಂಗಳ 18ಕ್ಕೆ ಅಂಕೋಲೆಯಲ್ಲಿ ಬಿಡುಗಡೆಯಾಗುತ್ತಿದೆ.

  n1 ನಾಗರೇಖಾ ಅವರು ನಾನೂ ಬರೆಯುತ್ತೇನೆ ಎಂದು ತೀರಾ ಕಾಣಿಸಿಕೊಳ್ಳಲು ಕಾತರಿಸಿದವರಲ್ಲ. ತಮ್ಮೊಳಗಿನ ಕವಿತೆಗಳನ್ನು ಅದೆಷ್ಟೋ ಸಮಯದವರೆಗೆ ತಮ್ಮೊಳಗೇ ಕಾಪಿಟ್ಟು ಕಾದವರು. ಹಾಗಾಗಿ ಅವರನ್ನು ಹತ್ತಿರದಿಂದ ಬಲ್ಲವರ ಪಾಲಿಗೂ ಅವರ ಬರವಣಿಗೆ ಕುತೂಹಲದ ಕಣ್ಣು ತೆರೆಯಲು ಕಾರಣವಾದ ಸಂಗತಿ.

  ಅತ್ಯಂತ ಸಹನೆಯಲ್ಲಿ ಕವಿತೆಗಳನ್ನು ಎದುರುಗೊಳ್ಳುವ ಗುಣದ ನಾಗರೇಖಾ, ಪದಗಳಲ್ಲಿ ಹೊಸತನ್ನಿಟ್ಟು ಕೊಡುತ್ತಾರೆ. ಅವರ ಕವಿತೆಗಳಲ್ಲಿ ನೋವನ್ನೂ ಕನಸಿಗೆ ಹಚ್ಚುವ ಅಪರೂಪದ ತೀವ್ರತೆಯಿದೆ. ಆ ಕಾರಣದಿಂದಲೇ ಅವರ ಕವಿತೆಗಳು ಇಷ್ಟವಾಗಿಬಿಡುತ್ತವೆ.

  ಇಲ್ಲಿ ನಾಗರೇಖಾ ಅವರ ಹೊಸ ಸಂಕಲನದಲ್ಲಿರುವ ಕೆಲವು ಕವಿತೆಗಳನ್ನು ಕೊಡುತ್ತಿದ್ದೇವೆ, ಓದುವ ಖುಷಿಗೆ.

  ~ ~ ~

  ಗೋಡೆ

  ಗೋಡೆ ಗಟ್ಟಿಯಿದ್ದರೆ ಎಷ್ಟು ಬೇಕಾದರೂ
  ಯಾವಾಗ ಬೇಕಾದರೂ ಬಣ್ಣ ಬಳಿಯಬಹುದು
  ಅಮ್ಮನ ಬುದ್ದಿವಾದ.
  ಅದೇಕೋ ಅಕ್ಕ ಅಸಹಾಯಕಳಾಗಿ ಕುಸಿದು ಕೂತಿದ್ದಾಳೆ.
  ಚೊಚ್ಚಿಲ ಹೆರಿಗೆ ಶಿವನ ಪಾದ ಸೇರಿದೆ ಕಂದ.

  ಹಸಿಗೋಡೆಗೆ ಬಣ್ಣ ನಿಲ್ಲದು
  ಅಪ್ಪ ಆಗಾಗ ಉಚ್ಚರಿಸುತ್ತಿದ್ದ.
  ಇದನ್ನು ಕೇಳಿದ ದಿನವೆಲ್ಲ
  ಏರು ಯೌವನದ ಅಣ್ಣ ಕೊತಕೊತ ಕುದಿಯುವ ಎಣ್ಣೆಯಾಗುತ್ತಿದ್ದ.

  ಗೋಡೆಯಾಗಬೇಡ ನನ್ನ ಮತ್ತವಳ ಮದ್ಯೆ
  ಸ್ನೇಹಿತನ ಮಾತು ಕಿವಿಯಲ್ಲಿ ಪದೇ ಪದೇ
  ಮಾರ್ದನಿಸುತ್ತದೆ.
  ಯಾವ ಪ್ರಮಾದಕ್ಕೆ ಈ ಎಚ್ಚರಿಕೆ
  ಇಂದಿಗೂ ಅರ್ಥವಾಗಿಲ್ಲ.

  ಗೋಡೆಗೆ ಹಸಿಯಿರುವಾಗಲೇ
  ನೀರುಕ್ಕಿಸಿದರೆ ತಾಳಿಕೆ ಬಾಳಿಕೆ.
  ಹರೆಯದಲ್ಲಿ ಕಷ್ಟಗಳು ಬಲಹೆಚ್ಚಿಸುತ್ತವೆ
  ಗಟ್ಟಿಮಾಡುತ್ತ ಮೀನಖಂಡಗಳ.
  ಇಳಿವಯಸ್ಸಿನ ಹಿರಿಯ ಹಳಹಳಿಸಿ ನುಡಿಯುತ್ತಿದ್ದಾನೆ.

  ಅಲ್ಲೆಲ್ಲ ವಿಕೃತ ಮನಸ್ಸಿನ ಕನ್ನಡಿಗಳೇ
  ರಾರಾಜಿಸುತ್ತಿವೆ ಗೋಡೆ ತುಂಬಾ.
  ಮೇಲಕ್ಕೆ ದೊಡ್ಡದಾಗಿ ಬರೆದಿದೆ.
  ಹೆಣ್ಣುಮಕ್ಕಳ ಶೌಚಾಲಯ.

  ಮೊನ್ನೆ ಮೊನ್ನೆ ಆಕೆಯ ಗಂಡ ಸತ್ತ
  ಚಾವಣಿ ಹಾರಿದ ಮಣ್ಣಿನ ಗೋಡೆ
  ಬಿರುಗಾಳಿ ಮಳೆಗೆ ನಾಲ್ಕೆ ದಿನದಲ್ಲಿ
  ನೆಲಕಚ್ಚಿತು.

  ಭದ್ರಗೋಡೆಗಳ ನಡುವೆ
  ಕಿರುಬಾಗಿಲ ಸಂದಿಯಿಂದ ಇಣುಕುತ್ತಾ
  ಆಕೆ ದಾರಿ ಕಾಯುತ್ತಾಳೆ.
  ಆತ ಊರೂರು ಸುತ್ತುತ್ತಾ
  ಹಕ್ಕಿಯಂತೆ ಸ್ವಚ್ಛಂದ.
  ಗೋಡೆ ಮಾತ್ರ ಆಕೆಯ ಅಹವಾಲು ಆಲಿಸಿಕೊಳ್ಳುತ್ತದೆ.

  ~

  ನಕ್ಕರೆ ನೋವಾಗುವುದು

  ಎದೆಯೊಳಗೆ ಬೆಂಕಿ ಬಿದ್ದರೂ
  ಜಪ್ಪಯ್ಯ ಎನ್ನದೇ ನಗುವ ಮುಖಗಳ ಕಂಡಾಗಲೆಲ್ಲಾ
  ನನ್ನಲ್ಲಿ ಕನಿಕರದೊಂದಿಗೆ ಉಕ್ಕುವ ತಳಮಳ
  ನಾನೊಬ್ಬಳೆ ಅಲ್ಲ ನನ್ನ ಸುತ್ತಲೂ
  ಹತ್ತಾರು ಪಾತ್ರಗಳು
  ನವಿಲುಗರಿ ಪೋಣಿಸಿಕೊಂಡು
  ಡಂಭ ಬಡಿಯುವ ಕೆಂಬೂತಗಳು
  ಹಾದು ಹೋಗುತ್ತಿವೆ.
  ಒಂದರ ನಂತರ ಮತ್ತೊಂದು.

  ಕೇಳಬೇಕೆಂದುಕೊಳ್ಳುತ್ತೇನೆ-
  ರಕ್ತ ಉಕ್ಕುವ ಕಣ್ಣಿನ ಆಳದಲ್ಲಿ
  ಮಡುಗಟ್ಟಿದ ನೋವಿಗೆ ಎಲ್ಲಿ
  ಸಿಗಬಹುದು ಮದ್ದು ಮತ್ತು ಮುದ್ದು ಎಂದು.
  ತಟ್ಟನೆ ಉತ್ತರಿಸುತ್ತದೆ ನೀಲಿಗಟ್ಟಿದ ದಪ್ಪ ತುಟಿಯೊಂದು
  “ಒಡೆದ ತುಟಿಗಳಿಗೆ ಲೇಪಿಸಿಕೊಳ್ಳುವ
  ವ್ಯಾಸಲೀನ ಕೂಡಾ ವಶೀಲಿ ಕೇಳುತ್ತದೆ.”

  ಚರ್ಮದ ವಾಸನೆಯನ್ನು ಮೂಗಿಗೆ ಹತ್ತಿಸಿಕೊಂಡ
  ಶ್ವಾನ ನಾಸಿಕಗಳಂತೆ ಕೆಂಪಿರುವೆ ಸಾಲು
  ದಂಡುದಂಡಾಗಿ ಸುತ್ತಮುತ್ತಲಿನ ಮೂಲೆಗಳಿಂದ
  ತಟ್ಟನೆ ಎದ್ದು ಬಿಡುತ್ತವೆ.ಹಸಕು ವಾಸನೆ ಹುಚ್ಚು ಹಿಡಿಸಿದಂತೆ.
  ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಬೇಕೆಂದರೆ
  ತೀರಿದ ಎಣ್ಣೆ ಡಬ್ಬ ಅಣಕಿಸಿ ನಗುತ್ತದೆ.

  ಕೋಮಲ ಕನಸುಗಳ ಹೊತ್ತ ಹೊಲಕ್ಕೆ
  ಚಿತ್ತಾರದ ಬೀಜಗಳ ಬಿತ್ತಿ,ಕೊನೆಯಲ್ಲಿ
  ಕೊಳಚೆ ನೀರನ್ನು ಹಾಯಿಸಿ, ಕಳೆಗಿಡಗಳ ಬೆಳೆಸಿ
  ಗೋರಿವಾಕ್ಯ ಹಾಡುವ
  ಭಂಡರ ಗೊಂಡೆ ಬೆಳೆಯುತ್ತಲೇ ಇದೆ.
  ಬಳ್ಳಿಯಾಗಿ ಸುತ್ತಿ ಉಸಿರುಗಟ್ಟಿಸಬೇಕೆನಿಸುತ್ತದೆ.
  ನೀರು ಜಿನುಗಿದಡೆಯಲ್ಲೆಲ್ಲಾ ಆದ್ರ್ರವಾದ
  ಮಣ್ಣಿನ ಗರ್ಭದಲ್ಲಿ ಬಿತ್ತದೆಯೇ
  ಚಿಗುರೊಡೆದ ಹಸಿರು ಬೆರಗುಗೊಳಿಸುತ್ತದೆ.ನೋಡುತ್ತ
  ಒಡಲಲ್ಲಿರುವ ಹಸಿರಿಗೆ ಹೆರಿಗೆ ನೋವು ಬಂದಂತಾಯ್ತು.
  ಮುಖದಲ್ಲಿ ಮಲ್ಲಿಗೆಯ ನಗು ಮೂಡಿದರೂ
  ಬಿರುಕಾದ ತುಟಿಗಳಿಗೆ ನಗಲಾಗಲಿಲ್ಲ.

  ~

  ತಟ್ಟಿಯೊಳಗಿನ ಹಾಡು

  ನನ್ನ ಕೊಟ್ಟಿದ್ದು ಉಪ್ಪುಗಂಜಿಗೂ
  ತತ್ವಾರ ತಟ್ಟಿ ತಬ್ಬಲಿಯ ಗೂಡು
  ಎಂದು ನಿಟ್ಟುಸಿರೇ ಉಸಿರಾಗಿತ್ತು.

  ಬೆಟ್ಟಕ್ಕೆ ಹೋಗಿ ಸೊಪ್ಪು ತರುವಾಗಿನ
  ಸಮಯವೆಲ್ಲಾ ಹನಿಹನಿಯ ಉದುರಿಸಿ
  ನಯನಗಳು ಕೊಳಗಳಾಗಿತ್ತು.

  ಸೆಗಣಿ ಸಾರಿಸಿ ತೆಗೆದು ಗಂಜಳ ಬಗೆದು
  ಬೆರಣಿ ತಟ್ಟಿಟ್ಟು,ಅಕ್ಕಚ್ಚು ಬಾನಿಗೆ ಹೊಯ್ದು
  ಎಮ್ಮೆ ಮೇಯಿಸ ಹೊರಟರೆ
  ದಾಂಬು ಬಿಚ್ಚುವ ತ್ವರೆಗೆ
  ಕೈಬಳೆಯ ಗಾಜುನಟ್ಟಿತ್ತು
  ಮುಂಗೈಯ ಸೆರೆಯುಬ್ಬಿ ರಕ್ತ ಒಸರಿತ್ತು

  ಏರುಗುಡ್ಡವ ಹತ್ತಿ
  ತರಕ ರಾಶಿಯ ಗುಡಿಸಿ ಕಲ್ಲಿತುಂಬಿಸಿಕೊಂಡು
  ಇಳಿಜಾರಿಗೆ ಊರುಗೋಲನು ಹಿಡಿದು
  ಹೊತ್ತು ಬರುವಾಗ ಎಡಗಾಲು ಎಡವಿ
  ಬಾತುಕೊಂಡಿತ್ತು

  ಮನೆಯ ಹೊಲೆಯನು ತೊಳೆದು
  ಒಲೆಗೆ ಉರಿಯನು ಹಚ್ಚಿ ಗಂಜಿ ಬೇಯಿಸಿ
  ದುಡಿದು [ಕುಡಿದು] ಬರುವ ಗಂಡನಿಗಾಗಿ
  ನಾ ಹೈರಾಣು ಹೆಣವಾಗಿ
  ಕಾದು ಕೂತಿದ್ದೆ.

  ಆಗಸದ ಅಂಚಿನ ಮಂಜಿನ ಪೊರೆ
  ಎಂದಿಗೆ ಕಳಚಿ ಬೀಳುವುದು
  ಸುಟ್ಟ ಚರ್ಮದ ಕಲೆಯು ಎಂತು
  ಮಾಯುವುದು ಕಾಯುತ್ತಿದ್ದೆ,
  ಕಾಯುತ್ತಲೇ ಇದ್ದೇನೆ

  ~

  ಗುಪ್ತಗಾಮಿನಿ

  ಅಲ್ಪ ನುಡಿಯಲ್ಲಿ ತತ್ವ ವಿಚಾರ
  ಪುರಾಣಗಳ ಪಠಣ,ನಿತ್ಯ ವಾಚನ
  ವಾಚಾಳಿತನವಿಲ್ಲ-ವಚನ ಬಲು ಭಾರ
  ಮಿತ ಭಾಷಿ ನಾನೆಂಬ
  ಕೀಟಕೊರೆತ-ಮೆದುಳು ಊತ

  ಎಲ್ಲ ದುರ್ಗಮ ದಾರಿ ಕ್ರಮಿಸಿ ಬಂದಿಹೆ
  ಏರುವ ಮೊದಲು ಗದ್ದುಗೆ
  ನನಗಾರು ಸಮನಿಲ್ಲ
  ನನ್ನಿಂದಲೆ ಎಲ್ಲ ಸರ್ವಥಾ ಸಲ್ಲ
  ಅಲ್ಲೂ ವಾಸನೆ

  ನಾ ಸರಳ,ಸಜ್ಜನ ನೀತಿ ನೇಮಗಳ
  ಪರಿಪಾಲಕ, ಸತ್ಯ ಶಾಂತಿಗಳ
  ಪೂಜಕ,ಎನಗಿಂತ ಹಿರಿಯರಿಲ್ಲ
  ನನ್ನಂತೆ ಯಾರಿಲ್ಲ,ಕನವರಿಕೆ
  ಬೇರೆನಿಲ್ಲ, ಒಳಬೆರಗು –ಅದೇ

  ಯಾವ ಧನ್ವಂತರಿಯ ಬಳಿಯಿಲ್ಲ ಮದ್ದು
  ಬಿಳಿಯ ಜುಬ್ಬದ ಒಳಗೆ
  ಕರಿಯ ಕೋಟಿನ ಗುಂಡಿಯಲ್ಲಿ
  ರೇಷ್ಮೇ ಮಕಮಲ್ಲಿನ ನುಣುಪಲ್ಲಿ
  ಸದ್ದಿಲ್ಲದೇ ಠೀಕಾಣಿ
  ಜರಡಿ ಹಿಡಿದರೂ ಜಾರದಂತೆ
  ಅಂಟಿ ಕೂತಿದೆ

  ನಾನು ಹೋದರೆ ಹೋದೇನು
  ಕನಕನಿಗಾದ ಉದಯಜ್ಞಾನ ನಮಗೇಕಿಲ್ಲ
  ಬಿಡು ಆ ಹಂತ ಏರಿಲ್ಲ
  ಆ ಮರ್ಮ ಸರಳಿಲ್ಲ.

  ~

  ಅಪ್ಪ ಕೊಡಿಸಿದ ಅಂಗಿ

  ಅದು ನನ್ನದಲ್ಲದ ಅಂಗಿ
  ಅದರೆ ಇಂಚಿಂಚೂ ಮೆಚ್ಚುಗೆ ಆದದ್ದು ಸುಳ್ಳಲ್ಲ.
  ಬಯಸಿದ್ದು ಕನವರಿಸಿದ್ದು ಅದಕ್ಕಾಗೇ
  ಇಲ್ಲ,ಬಿಟ್ಟುಬಿಡು, ನಿನ್ನ ಮೈಬಣ್ಣಕ್ಕೆ ಒಪ್ಪಿಗೆಯಾಗದು
  ಅಮ್ಮನ ತಕರಾರು.
  ಮುನಿಸಿಕೊಂಡೆ, ಮಾತು ಬಿಟ್ಟೆ,ಮತ್ತೆ ಮತ್ತೆ ನೋಡಿಬಂದೆ.
  ಕಿವಿಗಿಳಿದರೂ ಕಾದ ಸೀಸ.

  ಬಣ್ಣದ ಅಂಗಿಯ ಮೋಹ ಬೇಡ
  ಎನ್ನುತ್ತ ಲಗುಬಗೆಯಿಂದ ಅಪ್ಪ ನನಗೆಂದೇ
  ಒಂದಂಗಿ ಕೊಡಿಸಿಬಿಟ್ಟರು.
  ಬಾಳಿಕೆಗೆ ಬರವಿಲ್ಲ
  ಕಾಲಕ್ಕೂ ಕಷ್ಟಕ್ಕೂ ಜೊತೆಯಾಗಿ
  ನನ್ನ ಮೈಗಂಟಿಕೊಂಡೆ ಕಾಯುತ್ತದೆ ಎಂದೆನ್ನುತ.

  ಬರಬರುತ್ತ ಅಂಗಿ ಮೇಲೆ ಆಸೆ ತಾನೆ ತಾನೆ ನನಗೂ
  ಒಮ್ಮೆ ತೊಟ್ಟರೂ ಮತ್ತೆ ಮತ್ತೆ ತೊಡುವಾಸೆ
  ಆ ಅಂಗಿ ಬಿಟ್ಟರೆ ಬೇರೆ ಗತಿಯಿಲ್ಲ
  ನನ್ನ ತೊಗಲಿಗೆ ಅಂಟಿಕೊಂಡಂತೆ ಅಂಗಿ.

  ಅಂಗಿಗೂ ನಾನೆಂದರೆ ಅಷ್ಟಕಷ್ಟೆ ಮೊದಮೊದಲು
  ದಿಕ್ಕೆಟ್ಟ ದರ್ಪದ ಧಿಮಾಕು
  ಕಳಚಿ ಇಟ್ಟಾಗಲೆಲ್ಲ ಸ್ವಚ್ಛಂದ ಹಾರಾಟ.

  ಈಗೀಗ ಅದಕ್ಕೂ ಏನೋ ಅನುಬಂಧ
  ನನ್ನ ಮೈಗಂಟಿಕೊಂಡೆ ಇರುತ್ತದೆ
  ಒಳಗೊಳಗೆ ಕಚಗುಳಿ ಇಡುತ್ತ, ನನ್ನನ್ನೆ ಮೆಚ್ಚುತ್ತ
  ಅಂಗಿಗೆ ನನ್ನೆಲ್ಲವನ್ನೂ ಒಳಗೊಳ್ಳುವ ತಾಕತ್ತಿದೆ.
  ಒಳಹರವು ಚೆನ್ನಾಗಿದೆ.ಸಣ್ಣಪುಟ್ಟ ಮಳೆಗೆ ಧೃತಿಗೆಡದು.
  ಬಿಸಿಲಿಗೆ ಬಣ್ಣಗೆಡದು.

  ಕಾಯ್ದುಕೋ ಕಾಳಜಿಯಿಂದ
  ಅಸಡ್ಡೆ ಮಾಡಿದರೆ, ಬೇಕೆಂದರಲ್ಲಿ ಕಳಚಿ ಇಟ್ಟರೆ
  ಹಾರಿಹೋದೀತು ಎಚ್ಚರಿಸಿದ್ದಳು ಅಮ್ಮ
  ಈಗ ನಾನೂ ಅಷ್ಟೇ
  ಬೆಲೆಬಾಳುವ ಬಣ್ಣದ ಅಂಗಿಗಳಿಗಿಂತ
  ದೀರ್ಘಬಾಳಿಕೆಯ ಇಂತಹ ಅಂಗಿಯ
  ಹುಡುಕಾಟದಲ್ಲಿದ್ದೇನೆ ನನ್ನ ಮಗಳಿಗೂ.

  Share

  Related Post

  Related Blogpost

  One Comment For "ನಾಗರೇಖಾ ಪದಗಳು
  ಬುಕ್ ಮಾರ್ಕ್
  "

  1. nagraj Harapanahalli
   4th December 2016

   ಗೋಡೆ ಮತ್ತು ತಟ್ಟಿಯೊಳಗಿನ ಹಾಡು ಕವಿತೆಗಳನ್ನು ಮೊದಲು ಓದಿದ ನೆನಪು‌. ಅವೆರಡು ಸಶಕ್ತ ಕವಿತೆಗಳು. ಗುಪ್ತ ಗಾಮಿನಿ, ನೋವಿನಲ್ಲೂ ನಗು ಕವಿತೆಗಳು ವ್ಯವಸ್ಥೆ ಯನ್ನು ವಿಡಂಬಿಸುತ್ತಾ ಹೊಸದನ್ನು ಹೇಳುತ್ತವೆ. ಅಪ್ಪಕೊಡಿಸಿದ ಅಂಗಿ ವಾಚಾಳಿತನದಿಂದ ಕೂಡಿದೆ. ಓದುತ್ತಾ ಓದುತ್ತಾ ಹೊಸದನ್ನು , ಅರ್ಥವನ್ನು ಹೊಳೆಸುವ ಗಾದೆ , ಒಗಟಿನಂತಿದೆ.

   Reply

  Leave a comment

  Your email address will not be published. Required fields are marked *

  Recent Posts More

  • 4 hours ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 17 hours ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 day ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

  • 1 day ago No comment

   ಬದುಕು ಬರಿ ಗಿಲೀಟು

   (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

  • 2 days ago One Comment

   ನಾನು ಮತ್ತು ನೀನು

   ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help