Share

ಹೆಣ್ಣು ಮತ್ತೊಂದಿಷ್ಟು ನೋಟಗಳು
ದೀಪಾ ಫಡ್ಕೆ

ಮಾತುಗಳು ಹೆಣ್ಣಿನ ಮೌನದ ಪಿಸುಮಾತುಗಳು, ಅನಿವಾರ್ಯವಾದರೂ ಅರ್ಥಮಾಡಿಕೊಳ್ಳುವುದು ತೀರಾ ಅವಶ್ಯಕ. ಪುರಾಣದ ಪಾತ್ರವೊಂದರ ಮೂಲಕ ಹೀಗೊಂದು ಎಲ್ಲ ಕಾಲದ ಮನಸ್ಥಿತಿಗೆ ವರ್ತಮಾನದ ಕಾದಂಬರಿಯೊಂದು ಪ್ರತಿಸ್ಪಂದಿಸಬಹುದು ಎಂದು ಉತ್ತರಕಾಂಡ ಸೂಚಿಸುತ್ತದೆ. ‘ದೇಹಶುದ್ಧಿಯು ನಷ್ಟವಾದರೆ ಯಾಕೆ ಹೆಂಗಸಿಗೆ ಸರ್ವನಾಶವಾದ ಭಾವ ಬರುತ್ತೆ? ದೇಹವು ಆತ್ಮ ಜೀವ ಬುದ್ಧಿ ಮನಸ್ಸುಗಳಿಗಿಂತ ಜಡವಾದದ್ದಲ್ಲವೇ? ಜಡವು ಅಶುದ್ಧವಾಗಿಯೂ ಆತ್ಮ ಜೀವ ಮನಸ್ಸುಗಳು ಶುದ್ಧವಾಗಿರಲು ಸಾಧ್ಯವಿಲ್ಲವೇ? ಅತ್ಯಾಚಾರದ ಪಾಪವು ಅತ್ಯಾಚಾರಿಗೆ ಮಾತ್ರ ಮೆತ್ತಿಕೊಳ್ಳಬೇಕೇ ಹೊರತು ಬಲಿಯಾದವಳಿಗೆ ಯಾಕೆ ತಗುಲಬೇಕು? ಅವಳೇಕೆ ಆ ದೇಹವನ್ನು ತ್ಯಜಿಸಬೇಕು? ’ಕಾಮುಕನೊಬ್ಬ ದಿನವೂ ಬಂದೂ ಬಂದು, ‘ತಾನಾಗಿಯೇ ಒಲಿದು ಒಪ್ಪಿಸಿಕೋ’ ಎಂದು ಹಿಂಸೆ ಮಾಡುತ್ತಿದ್ದ ಹೊತ್ತಿನಲ್ಲಿ ಹೆಣ್ಣುಮನಸ್ಸಿಗೆ ಬಂದ ಯೋಚನೆಗಳು ಇವು ಎಂದು ರಾಮಾಯಣ ಆಧಾರಿತ ‘ಉತ್ತರಕಾಂಡ’ ಹೇಳುತ್ತದೆ. ಪುರಾಣ ಪ್ರಪಂಚದ ಪಂಚಕನ್ಯೆಯರಲ್ಲಿ ಒಬ್ಬಳಾದ ಸೀತೆಯ ಮನಸ್ಸಿಗೆ ಬರುವ ಯೋಚನೆಗಳು ಇವು. ಇಡೀ ಜಗತ್ತು ಒಮ್ಮೆಯಾದರೂ ಯೋಚಿಸಬೇಕಾದ, ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ಎರಡೇ ಎರಡು ಆಯ್ಕೆಗಳು. ಒಂದೋ ಅನಿವಾರ್ಯವಾದ ಒಪ್ಪಿಸಿಕೊಳ್ಳುವಿಕೆ, ಎರಡನೆಯದು ಆತ್ಮನಾಶದ ಆತ್ಮಹತ್ಯೆಯ ಯೋಚನೆ. ಇದಕ್ಕೆ ಹೊರತಾದ ಯೋಚನೆಯೇ ಇಲ್ಲವೇ! ಸೀತೆ ತನ್ನ ಸೀರೆಯ ಗಂಟಿನಲ್ಲಿ ತನ್ನ ಆತ್ಮಗೌರವ ಕಾಪಾಡುವ ಸಲುವಾಗಿ ಸಣ್ಣ ಕತ್ತಿಯೊಂದನ್ನು ಇಟ್ಟುಕೊಳ್ಳುವ ಮೂಲಕ ಪ್ರತಿತಂತ್ರವನ್ನು ಯೋಚಿಸುತ್ತಾಳೆ ಎನ್ನುವುದು ಹಿರಿಯ ಕಾದಂಬರಿಕಾರ ಭೈರಪ್ಪನವರು ಉತ್ತರಕಾಂಡದಲ್ಲಿ ಹೀಗೊಂದು ಚಿತ್ರಣ ನೀಡುತ್ತಾರೆ. ತ್ರೇತಾಯುಗದ ಸೀತೆಯಿಂದ ಆರಂಭವಾಗಿ ಇಂದು ಏಕಾಂಗಿಯಾಗಿ ದೇಶವಿದೇಶಗಳಿಗೂ ವೃತ್ತಿನಿಮಿತ್ತ ಸುತ್ತಿಬರುವ ಕೋಟ್ಯಂತರ ಜಾನಕಿಯರ ಆತಂಕವಿದು. ಶೀಲ ದೇಹಕ್ಕಷ್ಟೇ ಸಂಬಂಧಿಸಿದ್ದೇ?ನಿತ್ಯವೂ ರಾವಣ ಬಂದು ಸೀತೆಯ ಮೇಲೆ ಕಣ್ಣಿಂದಲೇ ನಡೆಸಿದ ಹಿಂಸೆಯೂ ಅತ್ಯಾಚಾರವೇ ಅಲ್ಲವೇ?ಕಾದಂಬರಿಯ ಮೂಲ, ವಸ್ತುನಿಷ್ಠತೆ, ನಿರೂಪಣೆ ಇವೆಲ್ಲಕ್ಕಿಂತಲೂ ಉತ್ತರಕಾಂಡದ ಸಾಧನೆಯೆಂದರೆ ಬದುಕಿನ ಕಡೆಗೆ ಮುಖ ಮಾಡಿಸುವ ವಿಚಾರಪ್ರಚೋದಕ ಮಾತುಗಳು ಎನ್ನಬೇಕು.

ಕನ್ನಡ ಕಾದಂಬರಿ ಜಗತ್ತಿಗೆ ಈ ಹೊತ್ತಿನ ಆಚಾರ್ಯರಂತಿರುವ ಎಸ್.ಎಲ್.ಭೈರಪ್ಪ ಅವರ ಹೊಸ ಕಾದಂಬರಿ ‘ಉತ್ತರಕಾಂಡ’ ಹೆಣ್ಣಿನ ಮನಸ್ಸಿನ ಆತಂಕಗಳನ್ನು ಬಹಳಷ್ಟು ಮಟ್ಟಿಗೆ ಅನಾವರಣ ಮಾಡಿದೆ. ಇದು, ಮಹಾಭಾರತದ ರೂಪಾಂತರವಾದ ಪರ್ವದಂತೇ ಹುಚ್ಚೆಬ್ಬಿಸದು. ಆದರೆ ಶಾಪ ವರಗಳನ್ನು, ಮನುಷ್ಯನ ಹುಟ್ಟಿನ ಕುರಿತಾದ ಪವಾಡಗಳನ್ನೂ ದೂರವಿಟ್ಟು ನೆಲದ ಮೇಲೆ ನಡೆದ ಮಾನವ ಸಂಘರ್ಷವನ್ನು, ಸಂಭವನೀಯವೆಂದು ಹೆಣೆದ ಪರ್ವದಂತೇ ಇದೂ ಮನೋನಿಷ್ಠವಾದುದು. ಸೀತೆ, ಉತ್ತರಕಾಂಡದುದ್ದಕ್ಕೂ ಆವರಿಸಿಕೊಂಡವಳು, ಇಷ್ಟೇ ಅಂದರೆ ಅಪೂರ್ಣವಾದೀತು. ಸೀತೆಯ ಮೂಲಕ ರಾಮ ಮತ್ತವನ ಮನುಷ್ಯಸಹಜ ಅಸುರಕ್ಷಿತ ಭಾವ ಉತ್ತರಕಾಂಡದಲ್ಲಿ ಅನಾವರಣಗೊಂಡಿದೆ. ಉನ್ನತಸ್ಥಾನದ ಭಾರದಿಂದ ನಲುಗುವ ವ್ಯಕ್ತಿತ್ವ ಕಾಣುತ್ತದೆ. ಏರಿದ ಎತ್ತರದ ಕಷ್ಟ ಹಾಗೂ ಸಹಜವಾಗಿರಲು ಸಾಧ್ಯವಾಗದ ಅಸಹಾಯಕತೆಯ ಅನಾವರಣವಾಗಿದೆ. ಬಹುಮುಖ್ಯವಾಗಿ ಪ್ರೇಮವಿರಹಿಯಾಗಿ ರಾಮ ಬದುಕುವ, ಸೀತೆಯನ್ನೂ ಬಳಲಿಸುವ ಕತೆಯ ಅನಾವರಣವಾಗಿದೆ.

ರಾಮಾಯಣ, ಮಹಾಭಾರತ ಬೇಡವೆಂದರೂ ಸದಾ ತೆರೆದುಕೊಳ್ಳುವ ಜೀವನಕಾವ್ಯಗಳು. ಪ್ರಾಚೀನತೆಯ ಭಾರದೊಂದಿಗೆ ಅವುಗಳು ಇನ್ನೂ ಬೆಳೆಯುತ್ತಿರುವ ಕಾವ್ಯಗಳು. ವರ್ಷಾನುಗಟ್ಟಲೆ ವಿಚ್ಛೇದನವಿಲ್ಲದೇ ಗಂಡನಿಂದ ದೂರವಾಗಿ ಬದುಕುವ ಹೆಣ್ಣು, ದಾಂಪತ್ಯದ ಕುರುಹಾದ ಮಕ್ಕಳೊಂದಿಗೆ ಬದುಕುತ್ತಾಳೆ. ಅಣ್ಣನ ಒಪ್ಪಿಗೆಯಾಗದ ನಿರ್ಧಾರ, ವಿರೋಧಿಸುತ್ತಲೇ ಪೂರೈಸುವ ತಮ್ಮಂದಿರೂ ಇನ್ನೂ ಇದ್ದಾರೆ. ಹಾಗೇ ಹೊರಲಾರದ ಭಾರವನ್ನು ಅಕಾರಣವಾಗಿ, ಲೋಕಕ್ಕಾಗಿ ಎಂದು ಹೊತ್ತುಕೊಂಡು ತಾನೂ ಬಳಲಿ, ತನ್ನವರನ್ನೂ ಬಳಲಿಸುವವರೂ ಇದ್ದಾರೆ. ಹೀಗೆ ಕಾಲಾತೀತವಾದ ಮಾನವ ಮನಸ್ಸಿನ ಸಂಕೀರ್ಣತೆಯ ಚದುರಿದ ಚಿತ್ರಗಳು ಎಲ್ಲ ಕವಿಗಳ ಅಭಿವ್ಯಕ್ತಿಯಾಗಿ ಕಾಲಕಾಲಕ್ಕೆ ಮೂಡಿದ್ದರೂ ಹೀಗೊಂದು ಹೆಣ್ಣಿನ ನಿರೂಪಣೆಯಲ್ಲಿ ಮೂಡಿದ್ದು ಇದೇ ಮೊದಲಿರಬೇಕು. ಕವಲು, ಮಂದ್ರದಂತಹ ಕಾದಂಬರಿಗಳಿಂದ ಸ್ತ್ರೀವಿರೋಧಿಯಾಗಿ ಬಿಂಬಿತರಾಗಿದ್ದ ಎಸ್.ಎಲ್. ಭೈರಪ್ಪ ಅವರು ಇಲ್ಲಿ ಸೀತೆಗೆ ನಿರೂಪಕಿಯ ಬಾಯಿ ಕೊಟ್ಟಿದ್ದಾರೆ. ಹಾಗೆ ನೋಡಿದರೆ ಭೈರಪ್ಪನವರು ಕಾಲಕಾಲಕ್ಕೆ ತಕ್ಕಂತೇ ನಂಜಮ್ಮಳಿಂದ ಹಿಡಿದು ಕವಲು ಕಾದಂಬರಿಯ ಮಂಗಳೆಯವರೆಗೂ, ಮಂದ್ರದ ಮನೋಹರಿಯಿಂದ ರಾಮಕುಮಾರಿಯ ನಿಷ್ಠೆಯವರೆಗೂ ಅವರು ಹೆಣ್ಣಿನ ಮನಸ್ಥಿತಿಯ ಸಂಚರಣಗಳನ್ನು ಕಾದಂಬರಿಗಳಲ್ಲಿ ಮೂಡಿಸಿದ್ದಾರೆ. ಆದರೆ ಅಲ್ಲೆಲ್ಲ ಗಂಡಿನ ಬದುಕಿಗೆ ಪೂರಕವಾಗಿರುವ ಬದುಕುಗಳೇ ಕಂಡಿತ್ತೆಂದು ಮೂಗು ಮುರಿದವರಿದ್ದರು. ಉತ್ತರಕಾಂಡದ ತುಂಬ ಸೀತೆಯದ್ದೇ ಮಾತು. ರಾಮನ ವ್ಯಕ್ತಿತ್ವವನ್ನೂ ಸೀತೆಯ ಕಣ್ಣಿಂದಲೇ ನೋಡಿದ ಪ್ರಜ್ಞಾವಂತ ನಿರೂಪಣೆ. ‘ಉತ್ತರಕಾಂಡ’ ಎಂಬ ಶೀರ್ಷಿಕೆ ಇಲ್ಲಿ ಸೀತಾಪರಿತ್ಯಾಗದ ಕತೆಯಾಗಿರುವುದರಿಂದ ಎಂದಿದ್ದರೂ, ಇದು ಈ ಹೊತ್ತಿನಲ್ಲಿ ಹೆಣ್ಣಿನ ಘನತೆಯಮೇಲಾಗುತ್ತಿರುವ ಆತಂಕಕಾರಿ ಆಕ್ರಮಣಗಳ ನಿರೂಪಣೆಯಾಗಿಯೂ ನೋಡಿದರೆ ಸಮಂಜಸವಾಗಿಯೇ ಇದೆ.

ಕಾದಂಬರಿ ಆರಂಭವಾಗುವುದೇ ಸೀತೆ ಅವಳಿ ಮಕ್ಕಳನ್ನು ಬೆಳೆಸುವಾಗಿನ ಕಷ್ಟದ ಚಿತ್ರಣದಿಂದ. ‘ಅವರ ಸ್ವಭಾವ ನಿನಗೆ ಗೊತ್ತಿಲ್ಲ’ ಗಂಡನನ್ನು ಹೆಂಡತಿ ಅರ್ಥೈಸಿಕೊಂಡಂತೆ ಇನ್ಯಾರಿಗೂ ಸಾಧ್ಯವಿಲ್ಲವೆನ್ನುವಂತಿದೆ ಈ ಮಾತು. ಅಲ್ಲಿ ಗಂಡನನ್ನು ಅರ್ಥೈಸಿಕೊಂಡುದಕ್ಕಿಂತಲೂ ‘ಖಚಿತವಾಗಿ ಹೀಗೆ’ ಎಂದು ಅರ್ಥವಾದ ನೋವೇ ಹೆಚ್ಚು ತೂಕದ್ದು. ‘ರಾಮ ಮತ್ತೆ ಬರಲಾರ’ ಎನ್ನುವ ಸ್ಪಷ್ಟ ಅರಿವು ಸೀತೆಯ ನೋವಿಗೆ, ಶೋಕಕ್ಕೆ ಮೂಲ. ‘ಉಫ್’ ಎಂದು ನಿರೀಕ್ಷೆಯ ಆಶಾದೀಪವನ್ನು ನಂದಿಸಿಕೊಂಡು ಬದುಕಿದವಳು ಸೀತೆ. ವಯಸ್ಸಿನ ಜೊತೆಗೆ ಬದಲಾಗುವ, ಮೆತ್ತಗಾಗುವ ಈ ಪ್ರಪಂಚದಲ್ಲಿ ಇವನೊಬ್ಬ ಹೀಗೆ ಎನ್ನುವ ಸಂಕಟ, ಅರಮನೆಯಲ್ಲಿದ್ದ ಹೊತ್ತಿನಲ್ಲಿ ಹೆರಳು ಹಾಕಿ ಅಲಂಕರಿಸುತ್ತಿದ್ದ ರಾಮನನ್ನೂ ಮರೆಯುವಂತೆ ಮಾಡುತ್ತಿತ್ತು. ಮನುಷ್ಯನನ್ನು ವೈಯಕ್ತಿಕವಾಗಿ ಆಳುವುದು ಕೊನೆಗೆ ಅವನ ದುಃಖಗಳೇ ಎನ್ನುವುದಕ್ಕೆ ಸೀತೆಯ ಪಾತ್ರವೇ ಒಂದೊಳ್ಳೆಯ ಉದಾಹರಣೆ. “ಸ್ತ್ರೀ ಪುರುಷ ಪ್ರೇಮದ ಮೂಲದ್ರವ್ಯ ಯಾವುದು? ಮಾರ್ದವತೆಯೇ ಪ್ರೇಮದ ಮೂಲ–ತಾನು ತುಸು ಮಂಕಾದರೆ ಅವನು ತಕ್ಷಣ ಸಂತೈಸುತ್ತಾನೆ. ಕಾರ್ಯಬಾಹುಳ್ಯದಿಂದ ನಾನು ನಿನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಮುದ್ದಿಸುತ್ತಾನೆ”- ಹೀಗೆ ಪ್ರೇಮದ ಸುರಿಮಳೆಗೆ ಸೀತೆಯನ್ನು ಒಡ್ಡಿದ್ದ ರಾಮ, ಸೀತಾ ಪರಿತ್ಯಾಗದ ನಂತರ, ‘ಅವನ ವಿಷಯ ಮಾತನಾಡುಕ್ಕೇ ಅಸಹ್ಯವಾಗುತ್ತೆ, ರಾಮ, ನೀನು ಹುಚ್ಚ, ಧರ್ಮದ ಮದ್ಯಪಾನ ಮಾಡಿದ ಕುಡುಕ’ (ಪುಟ 116)ಎನ್ನುವಷ್ಟು ಮನಸ್ಸು ಕಠಿಣವಾಗುತ್ತದೆ ಎಂದರೆ ಸುಖದ ಉನ್ಮಾದಕ್ಕಿಂತಲೂ ದು:ಖದ ಬಿಕ್ಕಳಿಕೆಗೇ ಹೆಚ್ಚು ಶಕ್ತಿಯೆಂದು ಕಾಣುವಂತೆ ಕಾದಂಬರಿಕಾರ ಚಿತ್ರಿಸುತ್ತಾರೆ. ಉತ್ತರಕಾಂಡದ ಸ್ಥಾಯಿಭಾವವೇ ಶೋಕ.ನಿರಾಕರಣೆಯ ಶೋಕ. ಹಾಗೇ ಕಾದಂಬರಿಯ ಚಾಲಕಶಕ್ತಿಯೂ ಶೋಕವೇ.

ಬೇಡವೆಂದರೂ ಉತ್ತರಕಾಂಡ, ಪರ್ವದೊಂದಿಗೆ ತುಲನೆಗೆ ಸಿಕ್ಕಿಬೀಳುತ್ತದೆ. ಧರ್ಮ, ಹುಟ್ಟು, ಅನಿವಾರ್ಯ ಪರಿಸ್ಥಿತಿಗಳು ಎರಡೂ ಮಹಾ ಕಾದಂಬರಿಗಳ ಮಜಲುಗಳಾದರೂ ಮಹಾಭಾರತ, ‘ಪಡೆದುಕೊಳ್ಳುವ’ ಜಿದ್ದಿನದು.ಶಂತನು, ಸತ್ಯವತಿಯಿಂದ ಆರಂಭವಾಗಿ ದುರ್ಯೋಧನನವರೆಗೂ ಪಡೆದೇ ತೀರಬೇಕೆನ್ನುವ ಹುಚ್ಚಿನದು.ರಾಮಾಯಣ, ನಿರಾಕರಣೆಯ ಆಯಾಮದ್ದು. ಕೈಕೇಯಿಯ ಮಗನಿಗೆ ರಾಜ್ಯಾಧಿಕಾರದ ನಿರಾಕರಣೆಯಿಂದ ಆರಂಭವಾಗಿ, ಲಕ್ಷ್ಮಣ ರಾಮನ ನಿರ್ಧಾರವನ್ನು ಮೌನವಾಗಿ ನಿರಾಕರಿಸಿ ತನ್ನದೇ ಹೊಸ ಜೀವನ ಕಟ್ಟಿಕೊಳ್ಳುವುದು, ಕೊನೆಗೆ ಸೀತೆ, ಅಳುಕದೇ ಧರ್ಮಸಭೆಯಲ್ಲಿ ರಾಮನ ಕರೆಯನ್ನು ನಿರಾಕರಿಸಿ ಹೊರಡುವ ಗಳಿಗೆಯವರೆಗೂ.ನಿರಾಕರಣೆ, ಮನುಷ್ಯನ ಪಾಲಿಗೆ ಅತ್ಯಂತ ಅವಮಾನದ ಏಟು.ಅದೂ ಹೆಣ್ಣೊಂದು ನಿರಾಕರಿಸಿದರೆ ಗಂಡಿನ ಅಹಂಕಾರ ಭುಗಿಲೇಳುತ್ತದೆ.ಅಧರ್ಮಿಯ ಮನಸ್ಸು ಕ್ರೋಧಕ್ಕೆ ಬಲಿಯಾದರೆ ಧರ್ಮಿ ರಾಮನಂತಹ ಮನಸ್ಸಿಗೆ ಆಘಾತವಾಗುತ್ತದೆ.ಅವನು ಮಾಡುವ ಆ ಹೊತ್ತಿನ ಆಲಾಪ  ‘ಸೀತೇ, ಸೀತೆ, ಎಲ್ಲಿಗೆ ಹೊರಟೆ?ಪ್ರಜಾಕೋಟಿಯ ಸಮ್ಮತಿಯಾಗಿದೆ’ ಎನ್ನುವ ಮಾತಿನ ಹತಾಶೆ ಗಮನಿಸಿದಾಗ ರಾಜ್ಯ, ಅಧಿಕಾರದ ಸುಖ, ಕರ್ತವ್ಯಪ್ರಜ್ಞೆಯೂ ಒಂದು ಭೀಕರವಾದ ಅಮಲೆಂದು ಸಾಬೀತಾಗುತ್ತದೆ.ಗಂಡಹೆಂಡಿರ ಅತ್ಯಂತ ವೈಯಕ್ತಿಕ ಬದುಕು ಹೇಗೆ ಆದರ್ಶಸಾಧಿಸುವ ಹುಚ್ಚಿನಲ್ಲಿ ನರಳುತ್ತದೆ ಎನ್ನುವುದಕ್ಕೆ ರಾಮಸೀತೆಯ ದಾಂಪತ್ಯ ಉದಾಹರಣೆಯಾಗಿಸುತ್ತಾರೆ.ಜೊತೆಯಲ್ಲಿ ಬದುಕಬೇಕೋ ಬೇಡವೋ ಎನ್ನುವುದನ್ನು `ಪ್ರಜಾಕೋಟಿ ಸಮ್ಮತಿಸಿದೆ’ ಎಂದು ಬೆಪ್ಪುಬೆಪ್ಪಾಗಿ ರಾಮ ಆಡುವ ಮಾತು ಆದರ್ಶವನ್ನೂ ತಪ್ಪಾಗಿ ಅರ್ಥೈಸಿದನೋ ಎನ್ನುವ ಮರುಕ ಮೂಡುವಂತಿದೆ ನಿರೂಪಣೆ. `ಗಂಡನಿಂದ ತ್ಯಾಜ್ಯಳಾದ ಹೆಂಡತಿ ಈಸಬಹುದು.ಹೆಂಡತಿಯಿಂದ ತ್ಯಾಜ್ಯನಾದ ಗಂಡನ ಬದುಕು ದುರ್ಭರ’ ಹೀಗೆ ರಾಮನೆಂದ ಎನ್ನುವ ಮಾತು ಪರಿತ್ಯಾಗವನ್ನು ಗಂಡು ಹಾಗೂ ಹೆಣ್ಣು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಹೇಳಿದೆ.ಸೀತೆ ವರ್ಷಾನುಗಟ್ಟಲೆ ರಾಮನಿಂದ ಪರಿತ್ಯಕ್ತಳಾಗಿ ಮನಸ್ಸು ಮುರಿದುಕೊಂಡಾದರೂ ಬದುಕುತ್ತಾಳೆ.ಆದರೆ ರಾಮನಿಗೆ ಸೀತೆ ನಿರಾಕರಿಸಿ ಎದ್ದು ಹೋದ ಅವಮಾನದಿಂದ ಪಾತಾಳಕ್ಕೆಸೆದಂತಾಗಿತ್ತು.ಆಹಾರ ಕಡಿಮೆ ಮಾಡಿಕೊಂಡು ಏಕಾಂತದಲ್ಲಿ ತನ್ನನ್ನು ಕೂಡಿ ಹಾಕಿಕೊಂಡು ತನ್ನ ಅಸ್ತಿತ್ವದಿಂದಲೇ ದೂರ ಓಡಿದಂತೆ ಇರುವ ತೊಂದರೆ ಆವಾಹಿಸಿಕೊಳ್ಳುತ್ತಾನೆ ಎಂದು ಓದುವಾಗ ಪರಿತ್ಯಾಗವನ್ನು ಸ್ವೀಕರಿಸುವುದರಲ್ಲಿ ಇರುವ ವ್ಯತ್ಯಾಸ ಢಾಳಾಗಿ ಕಣ್ಣಿಗೆ ರಾಚುತ್ತದೆ.ಈ ಪ್ರಪಂಚ ಗಂಡಿಗೆ  ಸ್ವೀಕಾರ’ವನ್ನು ಮಾತ್ರ ಹೇಗೆ ಅಭ್ಯಾಸ ಮಾಡಿಸಿದೆ, ನಿರಾಕರಣೆಯನ್ನು ಜೀರ್ಣಿಸಿಕೊಳ್ಳಲು ಹೇಳಿಕೊಟ್ಟಿಲ್ಲವೆಂದು ಅರಿಯಬಹುದು.

ರಾಮಸೀತೆಯರ ಕತೆ ಎನ್ನುವ ಒಂದು ಸಲಿಗೆಯೋ ಅಥವಾ ರಾಮಾಯಣದ ಪಾರಾಯಣ ಹುಟ್ಟಿದಾಗಿನಿಂದಲೂ ನಮ್ಮ ಸಂಸ್ಕೃತಿಯ ಭಾಗವಾಗಿರುವುದರಿಂದಲೋ, ಇತರ ಕಾದಂಬರಿಗಳಂತೆ ಪಡೆದುಕೊಳ್ಳುವ ಟ್ವಿಸ್ಟ್‍ಗಳ ಕುರಿತು ಅಂತಹ ಕುತೂಹಲ ಉತ್ತರಕಾಂಡಕ್ಕಿಲ್ಲವಾದರೂ ಭೈರಪ್ಪನವರ ನಿರೂಪಣೆಗೆ ಮನಸ್ಸು ಕಾತರದಿಂದ ಇದ್ದುದು ಸತ್ಯ. ರಾವಣ ವನದಲ್ಲಿ ಸೀತೆಯನ್ನು ತಂದಿರಿಸಿ ಆಗಾಗ ಬಂದು ‘ಒಪ್ಪಿಸಿಕೋ’ ಎಂದು ಕಾಡುವಾಗ ಸೀತೆಯ ಮನದಲ್ಲಿ ಮೂಡುವ ತರ್ಕ, ಭೈರಪ್ಪನವರನ್ನು ಮೂಲಭೂತವಾದಿ ಎಂದವರಿಗೆಉತ್ತರದಂತಿದೆ.ಹೆಣ್ಣುಮಕ್ಕಳ ಮೇಲೆ ಸುತ್ತಲೂ ನಡೆಯುತ್ತಿರುವ ದೌರ್ಜನ್ಯದ ಪರಿತಾಪಕ್ಕೆ ಸಾಹಿತ್ಯದ ಮೂಲಕ ಹೀಗೆ ಉತ್ತರಿಸಿದ್ದಾರೆ ಎನ್ನಬಹುದೇನೋ! ಮತ್ತೆ ಹೆಣ್ಣಿಗಾಗುತ್ತಿರುವ ಶೋಕದ ಪ್ರವಾಹದಲ್ಲಿ ಕೊಚ್ಚಿ ಹೋಗದೆ ‘ಹೆಂಗಸಿನಂತೆ ಗಂಡಸೂ ಅತ್ಯಾಚಾರಕ್ಕೆ ಒಳಗಾಗುತ್ತಾನೆಯೇ?’ಎನ್ನುತ್ತಾ ಅಲ್ಲೇ ಕತೆಯಲ್ಲಿ ಬರುವ ಲಕ್ಷ್ಮಣನಿಗೆ ಶೂರ್ಪನಖಿಯಿಂದಾದ ಆಕ್ರಮಣದ ಉದಾಹರಣೆಯನ್ನು ನೀಡುತ್ತಾ ‘ಗಂಡು ಸ್ಪಂದಿಸದಿದ್ದರೆ ಹೆಣ್ಣೇ ಮೇಲೆ ಎರಗೋದನ್ನು’ ಹೇಳಿ ಆಕ್ರಮಣ, ಮುಂದುವರೆಯುವವಳೂ ಹೆಣ್ಣೂ ಆಗಬಹುದೆನ್ನುವ ಮಾತನ್ನು ಮತ್ತೆ ಸ್ಪಷ್ಟವಾಗಿಸುತ್ತಾರೆ.ಭೈರಪ್ಪನವರ ಕಾದಂಬರಿಗಳಲ್ಲಿ ಒಂದಂತೂ ತುಂಬ ಸ್ಪಷ್ಟವಾಗಿ ಅರ್ಥವಾಗುತ್ತದೆ ಎಂದರೆ ಮೋಹ, ಕಾಮ, ಮೋಸದಾಟಗಳನ್ನು ಅವರು ಹೆಣ್ಣು ಗಂಡೆಂಬ ನೆಲೆಗಳಲ್ಲಿ ನೋಡಿ ಪಾತ್ರಗಳನ್ನು ಚಿತ್ರಿಸದೇ, ಅವಕಾಶ, ಸಂದರ್ಭ ಹಾಗೂ ಸಾಂಸ್ಕøತಿಕ ನೆಲೆಗಳಲ್ಲಿ ವಿವೇಚಿಸುತ್ತಾರೆ ಎನ್ನುವುದು. ಹಾಗೇ ನಂಜಮ್ಮ, ರಾಮಕುಮಾರಿ, ಸೀತೆಯರನ್ನೂ ಚಿತ್ರಿಸುವಾಗಿನ ಮಾರ್ದವತೆಯ ಅನುಭೂತಿಯಿಂದ ಮಂದ್ರದ ಚಂಪಾ, ಕವಲಿನ ಮಂಗಳೆ ಹಾಗೇ ಉತ್ತರಕಾಂಡದ ಕೈಕೇಯಿ, ಶೂರ್ಪನಖೆಯರನ್ನು ಚಿತ್ರಿಸುವಾಗ ಅವರ ಮನಸ್ಸಿನ ಉಯ್ಯಾಲೆತೆಗೆದುಕೊಳ್ಳುವ ಜೀಕು ಮಾತ್ರ ಉತ್ತರದಕ್ಷಿಣದಷ್ಟೇ ಅಂತರವಿರುವಂಥದ್ದು. ನಡುವೆ ಒಂದು ದೊಡ್ಡ ಶೂನ್ಯವಿರುವಂತಿದೆ.ರಾಮಕುಮಾರಿ, ಸೀತೆಯಂತಹ ಹೆಣ್ಣುಮಕ್ಕಳೆಡೆಗೆ ಅಂತಸ್ಥವಾದ ತೀರದ ಮಮತೆಯಿದೆ. ಗಂಡಿನ ಗುಣ, ಅವಗುಣಗಳನ್ನೂ ಅಷ್ಟೇ ದೊಡ್ಡ ಅಂತರದಲ್ಲೇ ನೋಡಿದರೂ ಅವನಿರುವುದೇ ಹಾಗೆ ಎನ್ನುವ ಉದಾಸೀನವಿದೆ. ಉತ್ತರಕಾಂಡದಲ್ಲಿ ಹಾಗೆ ನೋಡಿದರೆ ರಾಮನಕ್ಕಿಂತಲೂ ಲಕ್ಷ್ಮಣನನ್ನು ಭೈರಪ್ಪನವರು ಆದರ್ಶವಾಗಿ ಮನುಷ್ಯಸಹಜ ನ್ಯಾಯಅನ್ಯಾಯಗಳನ್ನು ಸಮರ್ಥವಾಗಿ ಅರ್ಥೈಸುವ ಪಕ್ವಮನುಷ್ಯನಾಗಿ ಆಪ್ತವಾಗಿಸಿದ್ದು.ಧರ್ಮದ ಕರ್ತವ್ಯ,ಕರ್ತವ್ಯದ ಧರ್ಮಗಳಲ್ಲಿ ರಾಮ ತೇದಷ್ಟು ಲಕ್ಷ್ಮಣ ತೇಯುವುದಿಲ್ಲ. ಹಾಗೆ ರಾಮನ ಈ ‘ತೇಯುವುದೂ’ ಅನಗತ್ಯವೇನೋ ಎನ್ನುವಷ್ಟು ಸೀತೆಯ ಮಾತುಗಳಲ್ಲಿ ವಿವೇಚಿಸುತ್ತಾರೆ.

‘ಸ್ತ್ರೀವಾದ, ಪ್ರಗತಿಶೀಲ, ಬಂಡಾಯ’ ಎನ್ನುವಂಥ ಯಾವುದೇ ಇಸಮ್ಮುಗಳನ್ನು ಯಾವತ್ತೂ ಒಪ್ಪದೇ ಹೋದ ಭೈರಪ್ಪ ಅವರಿಲ್ಲಿ ಗೃಹಭಂಗದ ನಂಜಮ್ಮಳನ್ನು ಚಿತ್ರಿಸಿದಂತೇ ಸೀತೆಯನ್ನು ಚಿತ್ರಿಸಿದ್ದಾರೆ.ತಾಯೊಬ್ಬಳು ಏಕಾಂಗಿಯಾಗಿ ಮಕ್ಕಳನ್ನು, ಅದೂ ಅವಳಿಮಕ್ಕಳನ್ನು ಬೆಳೆಸುವ ಕಷ್ಟ, ವಾಪಾಸು ಕರೆದುಕೊಂಡು ಹೋಗಲು ಗಂಡ ಬಂದಾನೂ ಎನ್ನುವ ಕಿಂಚಿತ್ ಆಸೆಯೂ ಇಲ್ಲದೇ ಬದುಕುವ ಸೀತೆಯ ಕತೆ,ಸಮಕಾಲೀನ ಜಗತ್ತಿನ ‘ಸಿಂಗಲ್ ಮದರ್’ ಒಂಟಿತಾಯಂದಿರ ಕತೆಯೂ ಹೌದು. ಎಳೆಯ ಬೊಮ್ಮಟೆಗಳಿಗೆ ಹಾಲೂಡಿಸುವುದರಿಂದ ಹಿಡಿದು, ಕಾಲಕಾಲಕ್ಕೆ ಊರ್ಮಿಳೆಯೋ ಸುಕೇಶಿಯೋ ತಂದು ಹಾಕುವ ಧಾನ್ಯರಾಶಿ ಸೀತೆಯಲ್ಲಿ ಮೂಡಿಸುವ ಸ್ವಾಭಿಮಾನದ ಸಂಕಟ, ಲವಕುಶರ ಜಗಳ, ಶಾಲೆಯಲ್ಲಿ ಅಪ್ಪನ ಹೆಸರು ಕೇಳುವಾಗಿನ ಸಂದಿಗ್ಧ, ಉಳುಮೆ ಮಾಡಲು ಹೊರಡುವ ಸೀತೆಯ ಸ್ವಾವಲಂಬಿ ಮನಸ್ಸು, ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಂತಿಕೆ ರೂಢಿಸಿಕೊಳ್ಳುವ ಸೀತೆಯ ಚಿತ್ರಣ ನೋಡುವಾಗ ಭೈರಪ್ಪನವರ ವಿಚಾರಸ್ವೋಪಜ್ಞತೆಯ ಅರಿವಾಗುತ್ತದೆ.

ಇಷ್ಟೆಲ್ಲ ಸೀತೆಯ ಪರವಾಗಿ ಎನ್ನುವಂತೆ ಓದಿಸಿಕೊಂಡು ಹೋದರೂ ಕಾದಂಬರಿಕಾರನಿಗೆ ರಾಮನ ಕಡೆಗೂ ಸಹಾನುಭೂತಿ ಇರುವುದನ್ನು ಗಮನಿಸಬೇಕು.ರಾಮನನ್ನು ದೂಷಿಸಬೇಕು ಎನ್ನುವುದು ಇದರರ್ಥವಲ್ಲ. ಲೋಕಹಿತಕ್ಕಾಗಿ ತನ್ನ ಸುಖವನ್ನು ದುರಂತವಾಗಿಸಿಕೊಂಡ ರಾಮನಿಗೂ ಸ್ಪಷ್ಟೀಕರಣ ಕೊಡುವ ಅವಕಾಶವನ್ನು ಸೀತೆಯ ಮೂಲಕವೇ ಕೊಡಿಸುತ್ತಾರೆ. ಉತ್ತರಕಾಂಡದಲ್ಲಿ ಮತ್ತೊಂದು ಅಗ್ನಿಪರೀಕ್ಷೆಯನ್ನು ಸೀತೆಯ ಬಾಯಿಯ ಮೂಲಕ ಮಾಡಿಸುತ್ತಾರೆ.ಈ ಬಾರಿ ಅಗ್ನಿಪರೀಕ್ಷೆಯಲ್ಲಿ ಭೈರಪ್ಪನವರು ಪರಿಶುದ್ಧಿಸಲು ನೋಡಿದ್ದು ಪ್ರಪಂಚದ ಕಣ್ಣುಗಳಲ್ಲಿ ಅಪರಾಧಿಯಾಗಿದ್ದ ‘ರಾಮನನ್ನು’ ಎಂದೂ ತಿಳಿಯಬಹುದು. ಹೇಗೆ ನಾಯಕನಾದವನನ್ನು ಮಾನಸಿಕವಾಗಿ ಜರ್ಜರಿತನನ್ನಾಗಿಸಲು ಆತನ ಕುಟುಂಬದ ಅದರಲ್ಲೂ ಮರ್ಯಾದೆಯ ಮುಖವಾದ ಹೆಣ್ಣನ್ನೇ ಗುರಿಯಾಗಿಸುವ ತಂತ್ರಗಳಿಗೆ ರಾಮ ಬಲಿಯಾದ, ಆ ಮೂಲಕ ಜಗತ್ತಿನ ಕಣ್ಣಿನಲ್ಲಿ ಕಟುಕನಾದ ಎಂಬುದನ್ನು ಹೇಳಲು ಹೊರಟರೇ ಎಂದೂ ಗುಮಾನಿ ಕಾಡುತ್ತದೆ. ಧರ್ಮಸಭೆಯಲ್ಲಿ ರಾಮನ ಮಾತುಗಳು ಇದಕ್ಕೆ ಪುಷ್ಟಿ ನೀಡುತ್ತವೆ. `ಆಡಲಿತ ನಡೆಸಲು ಹಣ ಬೇಕು, ಕರ ವಸೂಲಿಗೆ ಕ್ರಮ ಕೈಗೊಂಡೆ, ಅದುವರೆಗೆ ನುಂಗುತ್ತಿದ್ದ ಪುಂಡರಿಗೆ ಅಡಚಣೆಯಾಯಿತು. ಅವರಿಗೆ ಬಹಿರಂಗವಾಗಿ ವಿರೋಧಿಸುವ ಧೈರ್ಯವಿರಲಿಲ್ಲ. ಆಗ ಗುಸು ಗುಸು ಗುಸು ಶುರು ಮಾಡಿಸಿದರು’ ಅಲ್ಲದೇ ‘ಉನ್ನತಸ್ಥಾನದಲ್ಲಿರುವವರು ಅಷ್ಟೇ ಉನ್ನತವಾದ ತ್ಯಾಗಕ್ಕೆ ಸಿದ್ಧರಾಗಿರಬೇಕು’ ಎನ್ನುವ ಮೂಲಕ ರಾಮನಿಗೂ ಪ್ರತ್ಯುತ್ತರ ನೀಡಲೊಂದು ಅವಕಾಶವಿತ್ತಿದ್ದಾರೆ.ಸಾವಿರಾರು ವರ್ಷಗಳ ಕಾಲ ಉತ್ತರಿಸದೇ ಹೋದ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಇದು `ಉತ್ತರ’ಕಾಂಡ ಹೌದೆಂದೂ ಅನಿಸುತ್ತಿದೆ. ಆದರೆ ಪ್ರಶ್ನೆಗಳ ಪರ್ವ ಎಷ್ಟು ಗಂಭೀರವೆಂದರೆ `ಪರಿಶುದ್ಧಳಾದ ಹೆಂಡತಿಯನ್ನು ಜನಾಪವಾದಕ್ಕೆ ಹೆದರಿ ತ್ಯಜಿಸಿದೆ.ಇದೇ ಏನು ನಿನ್ನ ಧೈರ್ಯ?’ ಎಂದ ಸೀತೆಯ ಪ್ರಶ್ನೆಗೆ ರಾಮನನ್ನು ನಿರುತ್ತರನಾಗಿಸುತ್ತಾರೆ ಭೈರಪ್ಪನವರು. ಹತ್ತಾರು ಹೊರಸಂಬಂಧಗಳಿರುವ ಗಂಡನ್ನು ಹೆಣ್ಣು ಸ್ವೀಕರಿಸಿದಂತೆ, ಗಂಡು ಹೆಣ್ಣನ್ನು ಸ್ವೀಕರಿಸಲಾರ. ಸಂದರ್ಭದ ಬಲಿಪಶುವಾಗಿ, ಬರೀ ಸುಳ್ಳು ಅಪವಾದದಿಂದ ನರಳುವ ಹೆಣ್ಣಿನೆಡೆಗೂ ಗಂಡಿಗೆ ಸಣ್ಣ ಅಸಮಾಧಾನವಿರುತ್ತದೆ. ಎಲ್ಲೋ ಒಂದು ಸಣ್ಣ ಬೇಜವಾಬ್ದಾರಿತನ ಹೆಣ್ಣಿನಿಂದಾಗಿದೆ ಎನ್ನುವ ಭಾವ ಹುತ್ತಗಟ್ಟಿರುತ್ತದೆ. ರಾಮನಿಗಾಗಿದ್ದೂ ಅದೇ ತಾನೇ! `ಜಿಂಕೆಮರಿಯನ್ನು ಬಯಸಿದ್ದೇ’ ತಪ್ಪೆನ್ನುವಂತೆ ಸೀತೆಗೆ ಮನದಟ್ಟು ಮಾಡಲು ನೋಡುತ್ತಾನೆ. ಸೀತೆಯ ಪರ ಮಾತಾಡಲು ಹೊರಟ ಲೇಖಕನಿಗೆ ರಾಮನ ಮೇಲೂ ಹಿಡಿಪ್ರೀತಿಯಿದೆ.ತೂಕದ ಬಟ್ಟುಗಳು ಆಚೆಗೊಮ್ಮೆ, ಈಚೆಗೊಮ್ಮೆ ಬದಲಾಗುತ್ತಿರುತ್ತವೆ.

‘ಉತ್ತರಕಾಂಡ’ಮಹತ್ತನ್ನು ಸಾಧಿಸುವ ವ್ಯಕ್ತಿಗಳು ಹೇಗೆ ಅಸಹಜವಾಗಿ ಬದುಕಬೇಕಾಗುತ್ತದೆ ಎನ್ನುವುದಕ್ಕೆ ನಿದರ್ಶನವಾಗಿಲ್ಲವೇ! ಭೈರಪ್ಪನವರು ಸೂಕ್ಷ್ಮವಾಗಿ ರಾಮನ ವ್ಯಕ್ತಿತ್ವವನ್ನು ಸೀತೆಯ ಕಣ್ಣಿನಿಂದಲೇ ಹೆಣೆದ ರೀತಿ ಪ್ರಜ್ಞಾವಂತಿಕೆಯ ನಡೆಯನ್ನು ತೋರುತ್ತದೆ. ಸೀತೆಗಾದ ಅನ್ಯಾಯವನ್ನು ಪ್ರಾಮಾಣಿಕವಾಗಿ ನಿರೂಪಿಸಿದರೂ ರಾಮನೇ ಅದಕ್ಕೆ ನೇರವಾಗಿ ಹೊಣೆಯೆಂದು ಹೇಳದೇ, ಸಂದರ್ಭಕ್ಕೆ ಬಲಿಯಾದ ಎನ್ನುವಾಗ ರಾಮನೆಡೆಗಿನ ಸಹಾನುಭೂತಿ ಅರಿಯಬಹುದು.ಮದುವೆಯಾದ ಹೊಸದರಲ್ಲಿ ಮುಗ್ಧೆ ಸೀತೆ, ತನ್ನ ಸೌಂದರ್ಯವನ್ನು ಮೆಚ್ಚಿ ರಾಮ ಮದುವೆಯಾಗಿದ್ದಾನೆ ಎನ್ನುವ ಹುಸಿ ಸಂತಸದಲ್ಲಿ ‘ಧನುಸ್ಸಿಗೆ ಹೆದೆ ಏರಿಸಿ ಗೆಲ್ಲುವ ಮೊದಲು ನೀನು ಗೆದ್ದು ಮದುವೆಯಾಗಬೇಕಾದ ಹುಡುಗಿಯನ್ನು ನೋಡುವ ಮನಸ್ಸಾಗಲಿಲ್ಲವೇ?’ಎಂದು ಕೇಳಿದಾಗ ‘ಏನು ಕೇಳ್ತಿದೀಯ?ಮಹರ್ಷಿಗಳು ಹೆದೆ ಏರಿಸಿ ಗುರಿಯನ್ನು ಹೊಡೆ ಅಂದರು.ನಾನು ಹೊಡೆದೆ.ನೀನು ಸುರೂಪಿಯೋ ಕುರುಪಿಯೋ ಅನ್ನುವ ಯಾವ ಯೋಚನೆಯೂ ಮನಸ್ಸಿಗೆ ಬರಲಿಲ್ಲ’ ಅಂದ ರೀತಿಗೆ ಸ್ತಬ್ಧಳಾಗುತ್ತಾಳೆ ಸೀತೆ. ‘ನಾನು ನಿನ್ನನ್ನು ಧರ್ಮಕ್ಕೆ ಕಟ್ಟುಬಿದ್ದು ಮದುವೆಯಾದೆ, ನಿನ್ನ ಚೆಲುವು ನನಗೆ ಮುಖ್ಯವಲ್ಲ’ ಎನ್ನುವ ಅರ್ಥ ಮನದಲ್ಲಿ ಬಂದು ಹೋದರೂ ಕ್ಷಣದಲ್ಲಿ ಅನಿವಾರ್ಯವಾದ ಸಮಾಧಾನ ತಂದುಕೊಳ್ಳುತ್ತಾಳೆ.ಆದರೂ ಸೀತೆಗೆ ‘ರಾಮನ ಪ್ರತಿಯೊಂದು ನಡೆಗೂ ಧರ್ಮವೇ ಚಾಲಕಶಕ್ತಿ’ ಎನ್ನುವ ಪ್ರಜ್ಞೆ ಮೂಡುತ್ತದೆ ಎಂದಿದ್ದು ನೋಡಿದಾಗ ರಾಮನ ವ್ಯಕ್ತಿತ್ವವನ್ನು ಭೈರಪ್ಪನವರು ಸೀತೆಯ ಸಮುದ್ರದಂತಹ ಶೋಕದಕತೆಯ ನಡುವೆ ಹಾದುಹೋಗುವ ಬಿಳಿನೊರೆಯ ಅಲೆಯಾಗಿ ಮೂಡಿಸುತ್ತಾರೆ.ರಾಮನ ವ್ಯಕ್ತಿತ್ವದೆಡೆಗೊಂಡು ಗೌರವದ ನಡೆಯಿದು.ಸೀತೆಯ ಬಾಯಲ್ಲೇ ರಾಮ ಯಾವತ್ತಿಗೂ ಧರ್ಮದ ಪರಿಗಣನೆಯಲ್ಲೇ ಬದುಕಿದವನು, ಹಾಗಾಗಿ ಅವನಿಂದ ಅದನ್ನು ತ್ಯಜಿಸಿ ಪ್ರೇಮದ ಬದುಕನ್ನು ಅಪ್ಪಿಕೊಳ್ಳುವ ಮನಸ್ಥಿತಿಯಿರದು ಎಂದು ಸೂಚ್ಯವಾಗಿ ಹೇಳುತ್ತಾರೆ.

ಆದರ್ಶಕ್ಕೆ ಇನ್ನೂ ಹೆಸರಾಗಿರುವ ಸೀತಾರಾಮರ ಬದುಕು, ನಿಜಕ್ಕೂ ಆದರ್ಶವೇ?ಅಥವಾ ರಾಮ ಮಾತ್ರ ವೈಯಕ್ತಿಕ ಆದರ್ಶದ ಮಾದರಿಯೇ?ಸುಖದ, ಸ್ವೇಚ್ಛೆಯ ಬೆನ್ಹತ್ತಿಯೇ ಹೊರಡುವ ಮನುಷ್ಯನಿಗೆ ಹೀಗೂ ಒಬ್ಬ ಇದ್ದ, ಹೀಗೂ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಂಡು ಬದುಕಿ ಆದರ್ಶದ ಪರಿಭಾಷೆಯನ್ನೇ ಬದಲಾಯಿಸಿದ ಎನ್ನುವುದಕ್ಕೆ ರಾಮನನ್ನು, ಜಗತ್ತು ಆದರ್ಶಕ್ಕೆ ಮೂರ್ತವಾಗಿಸಿತೇ?ಲೋಕಕ್ಕೆ ಆದರ್ಶವಾಗುವ ಭರದಲ್ಲಿ ಬದುಕಿನ ಜೀವಜಲ ಪ್ರೇಮ ಮಣ್ಣಾಯಿತೇ? ಇದು ರಾಮನೊಬ್ಬನ ಸಮಸ್ಯೆಯೇ? ಎಷ್ಟೊಂದು ಪ್ರಶ್ನೆಗಳು! ಕಾದಂಬರಿ ಓದುತ್ತಿದ್ದಂತೆ ಪ್ರಶ್ನೆಗಳು ಮೂಡಿದರೂ ಉತ್ತರ ಪಡೆಯಬೇಕೆನ್ನುವ ಮನಸ್ಥಿತಿ ಹುಟ್ಟಲಾರದಷ್ಟು ವಿಷಾದವೇ ಚಿಗುರಿ ವೃಕ್ಷವಾಗಿರುತ್ತದೆ.ರಾಮ ಮತ್ತು ಸೀತೆಯ ಸ್ಪಷ್ಟೀಕರಣದ ನಿರೂಪಣೆ ನೋಡಿವಾಗ ಸಾವಿರಾರು ವರ್ಷಗಳಿಂದ ಇಲ್ಲೊಂದು ಪರಂಪರಾಗತ ಅಭ್ಯಾಸವಾಗಿರುವ ಗುಣವೊಂದಿದೆ; ಗಂಡಿಗೆ ಹೆಣ್ಣನ್ನು ಸಂಗಾತಿಯಾಗಿ ಭಾವಿಸುವಾಗ ಮಾತ್ರ ಸಮಸ್ಯೆ ಆರಂಭವಾಗುತ್ತದೆ ಎಂದು ಕಾಣುತ್ತದೆ. ರಾಮ, ಇನ್ನೂ ಹದಿಹರೆಯದಲ್ಲಿದ್ದವನು ಅಹಲ್ಯೆಯ ಕತೆಗೊಂದು ತಾರ್ಕಿಕ ಅಂತ್ಯ ಹೇಳುವಷ್ಟು ಪ್ರಬುದ್ಧನಿರುತ್ತಾನೆ. ಕಟುಕಿಯಂತೇ ಅಧಿಕಾರಕ್ಕಾಗಿ ಗಂಡನ ಸಾವನ್ನೂ ಲೆಕ್ಕಿಸದೇ ಆಟವಾಡಿದ ಕೈಕೇಯಿಯೆಡೆಗೂ ಆಕೆ ಮಾತೆ ಎನ್ನುವ ಗೌರವ ತೋರುತ್ತಾನೆ. ಶೂರ್ಪನಖಿ ಏಕಾಏಕಿ ಮೈಮೇಲೇರಿ ಬಂದಾಗಲೂ ಸುಂದರಿ ನೀನು ಯಾರು ಎಂದು ಕೇಳುವ ವ್ಯವಧಾನವಿರುತ್ತದೆ. ಆದರೆ ದಿನವೂ ಬಂದು ಕೊಳಕು ನೋಟ ಬೀರಿ, ‘ಒಪ್ಪಿಸಿಕೋ’ ಎಂದು ಕಾಡಿದ ರಾವಣನನ್ನು ಹೀನವಾಗಿ ನೋಡಿಕೊಂಡು ನಾಳೆ ಏನೂ ಆಗಬಹುದು ಎನ್ನುವ ಆತಂಕವಿದ್ದರೂ ತನ್ನ ಮನಸ್ಸನ್ನು ಚಂಚಲವಾಗಲು ಬಿಡದೇ ಅಂಥ ಸಮಯ ಬಂದರೆ ಆತ್ಯತ್ಯಾಗ ಮಾಡುತ್ತೇನೆ ಹೊರತು ರಾವಣನ ಕೈಸೆರೆಯಾಗಲಾರೆ ಎಂದು ಬದುಕಿದ, ಸೀತೆಯ ಮನದ ನೋವನ್ನು, ಹೆದರಿಕೆಯನ್ನು ತಿಲಮಾತ್ರದಷ್ಟು ಅರ್ಥೈಸಿಕೊಳ್ಳದೇ, ಸೀತೆಯನ್ನು ಕಳೆದುಕೊಂಡು ತಾನೇ ಹೆಚ್ಚು ಉದ್ವಿಗ್ನನಾಗಿದ್ದೆ ಎನ್ನುವ ಚಿತ್ರಣ ಓದುವಾಗ ಈ ಗಂಡು ಕುಲಕ್ಕೆ ಹೆಣ್ಣನ್ನು ಸಂಗಾತಿಯಾಗಿ ಸ್ವೀಕರಿಸುವ ಕಲೆ ತಿಳಿದೇ ಇಲ್ಲವೆಂದು ಸ್ಪಷ್ಟವಾಗುತ್ತದೆ. ಈ ವಿಷಯವನ್ನು ಭೈರಪ್ಪನವರು ಸರಿಯಾಗಿ ಊಹಿಸಿದ್ದಾರೆ, ಅರ್ಥಮಾಡಿಕೊಂಡಿದ್ದಾರೆ.ರಾಜ್ಯ, ಅಪ್ಪ, ಅಮ್ಮ, ಅಧಿಕಾರ, ಜವಾಬ್ದಾರಿ, ತಮ್ಮಂದಿರ ಮುಂದೆ ಮಾದರಿಯಾಗಬೇಕಾದ ಹೊಣೆ ಈ ಎಲ್ಲ ಭಾರದಿಂದ ರಾಮನೂ ಬಳಲಿದನೇ?ಈಗಲೂ ಈ ಹೊತ್ತಿನಲ್ಲೂ ಗಂಡು ಆತಂಕ ಎದುರಾದಂತೆ ವರ್ತಿಸುತ್ತಿರುವುದು ಹೆಣ್ಣನ್ನು ಅವರ ಜೊತೆಗಾತಿಯಾಗಿ ನೋಡುವಾಗ ಅಷ್ಟೇ!ಅಮ್ಮ,ಚಿಕ್ಕಮ್ಮ, ಅಕ್ಕ ತಂಗಿ, ಮಗಳು ಹೀಗೆ ಬೇರೆಲ್ಲ ಸಂಬಂಧಗಳೆಡೆಗೆ ಭಾರೀ ಪ್ರಾಮಾಣಿಕ ನಡೆ ತೋರುವ ಗಂಡುಕುಲ ಹೆಂಡತಿ, ಸಂಗಾತಿ ಎಂದೊಡನೆ ನಿತ್ರಾಣಗೊಂಡವನಂತೆ ಆಗುತ್ತಾನೆಯೇ ಹಾಗಾಗಿ ಅಸಹಜ ನಿರ್ಲಕ್ಷ್ಯ ತೋರಲಾರಂಭಿಸುತ್ತಾನೆಯೇ? ಹೆಣ್ಣನ್ನು ಒಲಿಸಿಕೊಳ್ಳುವವರೆಗೂ ತಾನೊಬ್ಬ ಅತ್ಯಂತ ಹೆಂಗುರುಳಿನ ವ್ಯಕ್ತಿಯಾಗಿ ತೋರ್ಪಡಿಸಿಕೊಳ್ಳುವ ಗಂಡು ಹೆಣ್ಣು ಸಂಗಾತಿಯಾದಳು ಎಂದೊಡನೆ ತನ್ನ ಸಹಜ ಗುಣ ತೋರಲಾರಂಭಿಸುತ್ತಾನೆ.ರಾಮನೂ ಅಷ್ಟೇ, ಲಕ್ಷ್ಮಣನೂ ಅಷ್ಟೇ.ತತ್ವಶಾಸ್ತ್ರದ ಅಭ್ಯಾಸಿಯಾಗಿ ಎಷ್ಟೇ ಸ್ಥಿತಪ್ರಜ್ಞತೆಯಿಂದ ಇದ್ದರೂ ವಯೋಸಹಜ, ಮನುಷ್ಯಸಹಜ ಮಾಗುವಿಕೆಯಿಂದ, ಹೆಣ್ಣಿನೆಡೆಗೆ ಒಂದು ವಾತ್ಸಲ್ಯದ ಸಣ್ಣ ಎಳೆ ಲೇಖಕನಿಗೂ ಹರಿಯಿತೋ ಎನ್ನುವಂತೆ ಊರ್ಮಿಳೆಯ ಈ ಮಾತು ಗಮನಿಸಬಹುದು, ‘ಚಿಕ್ಕವಯಸ್ಸಿನಿಂದ ಅಕ್ಕತಂಗಿ ಜ್ಞಾತಿಸೋದರಿಯರ ಜೊತೆ ಬೆಳೆಯದ ಗಂಡಸರೆಲ್ಲ ಹೀಗೆಯೇ. ಹೆಂಗಸರ ಮನಸ್ಸಿನ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳದ ಒರಟರು’ ಎನ್ನುತ್ತಾ ಹೆಣ್ಣುಮನಸ್ಸಿನ ಸೂಕ್ಷ್ಮಗಳನ್ನೂ ಅರಿಯದೇ ಹೋಗುವ ಪಶ್ಚಾತ್ತಾಪದ ಮಾತನ್ನು ಆಡುತ್ತಾರೆ.

ಭೈರಪ್ಪನವರು ‘ಪರ್ವ’ದಲ್ಲಿ ಮಾನವ ಬದುಕಿನ ಗುಣಸ್ವಭಾವಗಳನ್ನು ವಿವೇಚಿಸಿದ್ದಾಗಿ ಹೇಳಿದ್ದುಂಟು. ಉತ್ತರಕಾಂಡದಲ್ಲಿಯೂ ರಾಮ, ಸೀತೆ, ಲಕ್ಷ್ಮಣ, ಊರ್ಮಿಳೆ, ಮಂಡೋದರಿ, ಕೌಸಲ್ಯೆ ಕೈಕೇಯಿ ಎಲ್ಲರೂ ತಂತಮ್ಮ ವೈಯಕ್ತಿಕನೆಲೆಗಳಲ್ಲೇ ರೂಪು ಪಡೆದು ಮನುಷ್ಯಸಹಜ ವರ್ತನೆಗಳಿಂದ ಬದುಕಿದ್ದನ್ನು ಚಿತ್ರಿಸಿದ್ದಾರೆ. ದೈವತ್ವದ ನಂಟಿನಿಂದ ದೂರವಿಟ್ಟು ನೋಡಿದ್ದರಿಂದ ರಾಮ ಉದ್ವಿಗ್ನನಾದುದ್ದನ್ನು ಲಕ್ಷ್ಮಣನೆಡೆಗೆ ಕೋಪಿಸಿಕೊಂಡಿದ್ದನ್ನು ಕಾದಂಬರಿಯಲ್ಲಿ ನೋಡುವಾಗ ಎಲ್ಲರ ವೈಯಕ್ತಿಕ ನಿಷ್ಠ ಬದುಕನ್ನು ಗುರುತಿಸಬಹುದು. ಕಾದಂಬರಿಕಾರ ಅದೇ ಭಾವವನ್ನು ಹೇಳುತ್ತಾ ಉತ್ತರಕಾಂಡವನ್ನು ಮುಗಿಸುತ್ತಾರೆ. ‘ಗಂಡ, ಹೆಂಡತಿ, ಮಕ್ಕಳು ಎಲ್ಲರೂ ಎಲ್ಲರನ್ನು ತಂತಮ್ಮ ಪ್ರಯೋಜನಕ್ಕಾಗಿ ಪ್ರೀತಿಸುತ್ತಾರೆ. ಎಲ್ಲ ಪ್ರೀತಿಯೂ ಸ್ವಕೇಂದ್ರಿತವಾದುದು, ರಾಮ ಸೀತೆಯನ್ನು ಪರಿತ್ಯಜಿಸಿದ್ದು ತನ್ನ ವೈಯಕ್ತಿಯ ಘನತೆಯನ್ನು ಉಳಿಸುವುದಕ್ಕಾಗಿ, ಲಕ್ಷ್ಮಣ ರಾಮನಿಂದ ದೂರವಿದ್ದು ಬದುಕಿದ್ದು ತನ್ನ ಘನತೆ ಕಾಯ್ದುಕೊಳ್ಳುವ ಸಲುವಾಗಿ, ಹಾಗೇ ಧರ್ಮಸಭೆಯಿಂದ ಸೀತೆ ಹೊರನಡೆದಿದ್ದೂ ತನ್ನ ಘನತೆಗಾಗಿಯೇ’ ಎನ್ನುತ್ತಾರೆ. ಕೊನೆಯಲ್ಲಿ ಕಾದಂಬರಿಕಾರರಿಗೆ, ಕವಿಗೆ ಎಷ್ಟೇ ಅವಕಾಶವಿದ್ದರೂ `ಕಾವ್ಯದಲ್ಲಿ ಕೂಡಾ ಸುಖವನ್ನುಸೃಷ್ಟಿಸುವುದು ಸಾಧ್ಯವಿಲ್ಲದಂತಾಯಿತಲ್ಲ’ ಎನ್ನುತ್ತಾ ಸುಖದು:ಖಗಳಲ್ಲಿ ಮನುಷ್ಯನ ಕೈವಾಡವಿರಲು ಸಾಧ್ಯವಿಲ್ಲ ಎನ್ನುವ ಪರಂಪರಾಗತ ಮಾತನ್ನು ಆಡುತ್ತಾರೆ.

ಉತ್ತರಕಾಂಡ ಸೀತೆಯ ಅನಾಥಪ್ರಜ್ಞೆಯನ್ನು ಬಹಳಷ್ಟು ಮಟ್ಟಿಗೆ ಅಕ್ಷರವಾಗಿಸಿದೆ.ಮಹಾರಾಣಿಯಿರಲಿ, ರಾಣಿಯ ಸೇವಕಿಯಿರಲಿ ಹೆಣ್ಣು ಎಷ್ಟೇ ವೈಯಕ್ತಿಕಸಾಧನೆ ಮಾಡಿದ್ದರೂ, ಆಕೆಗೊಂದು ಉಪದೇಶ ಸದಾ ಈ ಸಮಾಜ ನೀಡುತ್ತದೆ. ಸೀತೆ ಸಂಸಾರದ ಜವಾಬ್ದಾರಿಗಳನ್ನು, ಮಕ್ಕಳನ್ನು ಪರಿತ್ಯಜಿಸದೇ, ಆತ್ಮಹತ್ಯೆಯಂತಹ ಘೋರ ಯೋಚನೆಗಳು ಮನದಲ್ಲಿ ಹಾದು ಹೋದರೂ ಗರ್ಭದಲ್ಲಿರುವ ಸಂತಾನದ ಬಗ್ಗೆ ಮರುಕ ಹುಟ್ಟಿ, ತನ್ನ ನಿರ್ಧಾರದಿಂದ ಇನ್ನೂ ಜಗತ್ತನ್ನೇ ಕಾಣದಿರುವ ಕಂದಮ್ಮಗಳ ಬದುಕನ್ನು ಮುಗಿಸುವ ಹಕ್ಕು ತನಗಿಲ್ಲವೆಂದು ಯೋಚಿಸುವ ಉದಾರತೆ ತೋರಿ, ಹಾಗೇ ಧೀಮಂತಿಕೆಯಿಂದ ಬದುಕಿಯೂ, ಕೊನೆಗೆ ರಾಮನೊಂದಿಗೆ ಬದುಕು ಅನ್ನುವ ರೂಢಿಗತ ಮಾತು ಕೇಳಬೇಕಾಗುತ್ತದೆ. ಉತ್ತರಕಾಂಡ, ಸೀತೆಯನ್ನು ಅಥವಾ ರಾಮನನ್ನು ಕೇಂದ್ರವಾಗಿಸಿಕೊಂಡು ಬರೆದಿರುವುದು ಎನ್ನುವುದಕ್ಕಿಂತಲೂ ಮನುಷ್ಯ ಹೇಗೆ ಸಂದರ್ಭಗಳಲ್ಲಿ ವರ್ತಿಸುತ್ತಾನೆ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ. ಈ ನೆಲದ ಎಲ್ಲ ಹೆಣ್ಣುಮಕ್ಕಳೂ ಒಂದಲ್ಲೊಂದು ಆಯಾಮದಲ್ಲಿ ಸೀತೆಯ ಶೋಕದ ನಿರೂಪಣೆಯ ಭಾಗವಾಗುತ್ತಾರೆ. ಓದುತ್ತಾ ಹೋದಂತೆ ನಮ್ಮದೇನೋ ಅನ್ನಿಸುವ ಆಪ್ತ ನಿರೂಪಣೆ ನೀಡಿ ಚಿತ್ರಿಸಿದ ಕಾದಂಬರಿಕಾರರಿಗೆ ನಮನಗಳು ಸಲ್ಲಲಿ. ಸೀತೆಯ ಆತ್ಮಗೌರವವನ್ನು, ಸ್ವಾವಲಂಬಿ ಬದುಕು ಕಟ್ಟಿಕೊಂಡು ಬದುಕುವೆ ಎನ್ನುವ ಆತ್ಮಸ್ಥೈರ್ಯವನ್ನುಕಾದಂಬರಿ ನಿರೂಪಿಸಿದರೂಕೊನೆಯಲ್ಲಿ ರಾಮನ ಅವಸಾನದ ಭಾಗ ತುಂಬಾ ವಿಷಾದ ಮೂಡಿಸುತ್ತದೆ. ಅಧಿಕಾರದಲ್ಲಿರುವ ಮನುಷ್ಯ ಯಾವತ್ತಿಗೂ ಒಂಟಿ ಎಂದು ರಾಮನ ಬದುಕಿನಿಂದ ಗ್ರಹಿಸಬಹುದು. ಸೀತೆಗಾದರೂ ತನ್ನನ್ನು ತೊರೆದ ಪತಿಯ ಮೇಲಿನ ಕಿಚ್ಚು, ಮಕ್ಕಳ ಪ್ರೀತಿ ಬದುಕಲು ಶಕ್ತವಾಗಿಸಿತೇನೋ! ಆದರೆ ಪ್ರೇಮರಹಿತ ರಾಮನ ಬದುಕು ಮರುಕ ಮೂಡಿಸುತ್ತದೆ.ಪ್ರೇಮವನ್ನು ಅರ್ಥೈಸಲು ಇಷ್ಟು ವರ್ಷಗಳು ಬೇಕಾದವು ಎಂದು ಭೈರಪ್ಪನವರು ಹೇಳಿದ ಮಾತು ಆತ್ಮಸಾಂಗತ್ಯ, ಆತ್ಮತತ್ತ್ವದ ಮಾತುಗಳಿಂದಲೂ ಹೆಚ್ಚು ಅಪ್ಯಾಯಮಾನವೆನಿಸಿತು. ಅಧ್ಯಾತ್ಮ, ತತ್ತ್ವದ ಭಾರದಲ್ಲಿ ಲೌಕಿಕದ ಅನಿವಾರ್ಯ ಬದುಕು ಬೆಂಗಾಡಾಗದಂತೆಮನುಷ್ಯನಿಗೆ ಪ್ರೇಮವಷ್ಟೇ ಅಮೃತವಾಗಿ ಪರಿಣಮಿಸಬಲ್ಲದು. ಭೈರಪ್ಪನವರ ಉತ್ತರಕಾಂಡ,ಗೃಹಭಂಗ, ಪರ್ವಗಳಂತೆ ಅತ್ಯಂತ ಮಹತ್ವದ ಕಾದಂಬರಿ ಎನಿಸದಿದ್ದರೂ ಹೆಣ್ಣಿನ ಮನಸ್ಥಿತಿಯ ನೆಲೆಗಟ್ಟಿನಲ್ಲಿ ನೋಡಿದ ಅತೀ ಅಗತ್ಯದ ಕಾದಂಬರಿಯಾಗಿದೆ. ‘ಪ್ರೇಮ ಮುದಿತ ಮನ ಸೇ ಕಹೋ ರಾಮ ರಾಮ ರಾಮ’ ಪ್ರೇಮ, ಆರಾಧನೆಯ ಮೂಲವೆಂಬಂತೆ ಪೂಜಿಸಲ್ಪಡುವ ರಾಮ, ಪ್ರೇಮರಹಿತನಾಗಿ ಬದುಕಿದ ಎನ್ನುವ ಅರಗಿಸಿಕೊಳ್ಳಲಾಗದ ಸತ್ಯವನ್ನು ಕಾದಂಬರಿ ಸಾವಕಾಶವಾಗಿ ನಿರೂಪಿಸಿದೆ.

—————————

IMG-20160103-WA0009

 

ದೀಪಾ ಫಡ್ಕೆ, ಲೇಖಕಿ ಮತ್ತು ಗಾಯಕಿ. ಬೆಂಗಳೂರು ದೂರದರ್ಶನ ಮತ್ತು ಉದಯ ವಾಹಿನಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು. ‘ಋತ’ ಮತ್ತು ‘ಹರಪನಹಳ್ಳಿ ಭೀಮವ್ವ’, ‘ಲೋಕಸಂವಾದಿ’ ಅವರ ಪ್ರಕಟಿತ ಕೃತಿಗಳು.

Share

Leave a comment

Your email address will not be published. Required fields are marked *

Recent Posts More

 • 13 hours ago No comment

  ಯಾವುದೋ ಅಜ್ಞಾತ ಕಣ್ಣೀರಿನ ಕಥೆ

      ಕವಿಸಾಲು     ಚೌಕದೊಳಗೊಂದು ವೃತ್ತ ವೃತ್ತದೊಳಗೆ ಸರಸರನೆ ಓಡಾಡುವ ಅಂಕುಡೊಂಕಿನ ನಾಜೂಕು ಗೆರೆಗಳು ಬಾಗಿ ಬಳುಕಿನಲ್ಲೇ ಮೋಹ ಉಮ್ಮಳಿಸಿ ನೆಟ್ಟಕಣ್ಣು ಅತ್ತಿತ್ತ ಆಡದಂತೆ ಮನವ ಸಮ್ಮೋಹನಗೊಳಿಸುವ ಗೆರೆಯ ಬೆಡಗುಗಳು ಎಳೆ ಎಳೆಯೊಳಗೂ ಮೋಹಕ ಬಣ್ಣ ಮನದ ಮೂಲೆ ಮೂಲೆಗೂ ಆವರಿಸುವ ಕೆಂಪು, ಹಳದಿ, ನೀಲಿ, ಹಸಿರು ಹಾಗೂ ನೇರಳೆ ಬಿಳಿಯ ರಂಗೋಲಿ ಹುಡಿಗೆ ಹೊಂದಿಕೊಂಡಂತೆ ಅಂದ ಹೆಚ್ಚಿಸುವ ಕಡುಗಪ್ಪಿನ ನೆರಳ ಛಾಯೆ ಸೆಳೆವ ಭಾವದೊಳಗೆ ...

 • 18 hours ago No comment

  ಕಲಿಸಲಾದೀತೇ ಬಿಟ್ಟು ಹೊರಡುವುದನ್ನು?

      ಕವಿಸಾಲು     ಆಗೆಲ್ಲ ಅಂದರೆ ಬಹಳ ಹಿಂದೇನಲ್ಲ ಅದೇ, ಕಾಲಿಗೆ ಬರೀ ಬೆನ್ನತ್ತುವ ಹುಚ್ಚಿದ್ದಾಗ ಹೂ-ಚಿಟ್ಟೆ, ಆಕಾಶ, ನವಿಲು-ಮಳೆಬಿಲ್ಲು ಬರೀ ಬಣ್ಣ ಕಣ್ಣಲಿ ಅರಳುತಿದ್ದಾಗ ಚಿಟ್ಟೆ ಹಿಂದೆ ಓಡುತ್ತಿದ್ದ ಒಂದು ನಡುಹಗಲು ಅವ ಬಂದ; ಧೀರ ಗಂಭೀರ ಅಶ್ವಸ್ಥ ನಿಲುವು ಹೆಚ್ಚು ಮಾತಿಲ್ಲ ಹುಚ್ಚು ನಗೆಯಿಲ್ಲ ಕಣ್ಣಲಿ ಕಣ್ಣು ನೆಟ್ಟು, “ಶ್… ಹೊಂಚು ಹಾಕುವಾಗ ಸುಮ್ಮನಿರಬೇಕು ಆರಕೇರದೆ ಮೂರಕಿಳಿಯದೆ ಉಸಿರೂ ನಿಂತ ಹಾಗೆ ಸ್ತಬ್ಧ ...

 • 2 days ago No comment

  ಯಾಕಿಷ್ಟು ನೋವಿಟ್ಟಿರುವೆ ದೇವರೆ… ಅದೂ ಹೆಣ್ಣಿಗೇ!

      ‘ಹುಚ್ಚು ಹುಡುಗಿ, ಆಸ್ಪತ್ರೆಗೆ ಸ್ಮಶಾನಕ್ಕೆ ಬಂದು, ಹೋಗ್ತೀನಿ ಅನ್ನಬೇಕೇ ಹೊರತು ಹೋಗಿ ಬರ್ತೀನಿ ಅಂತಾರೇನೇ ತಾಯಿ? ಬಿಡ್ತು ಅನ್ನು’ ಅಂತ್ಹೇಳಿ ಹತ್ತು ಬೆರಳುಗಳಿಂದ ನೆಟಿಕೆ ತೆಗೆದು ನನ್ನ ದೃಷ್ಟಿ ದೋಷ ನಿವಾರಿಸಿದ ಆ ಬಂಧಕ್ಕೆ ಏನ್ ಹೇಳಲಿ?       ಹೃದಯವೇ ಚಿಕ್ಕದು.. ಆಸೆಯೂ ಚಿಕ್ಕದು… ಮಸ್ತಿ ಭರೇ ಮನ್ ಕಿ… ಮುಗ್ಧ ಕನಸೂ ಚಿಕ್ಕದು…ಂ A moment is… My wish comes ...

 • 2 days ago No comment

  ಗಟ್ಟಿಗಿತ್ತಿ

      ಕವಿಸಾಲು     ತನ್ನೊಂದು ಕೂದಲೆಳೆಯಿಂದಲೇ ಬೀಳುತ್ತಿದ್ದ ಮರವ ತಡೆದು ನಿಲ್ಲಿಸಿದವಳು ನನ್ನಜ್ಜ ಹೇಳುತ್ತಿದ್ದ ಕತೆಯಲ್ಲಿ ಬಂದವಳು ಈ ಗಟ್ಟಿಗಿತ್ತಿಯ ಕತೆ ಕೇಳಿಸಿಕೊಂಡಾಗ ನಾವಿನ್ನೂ ಹುಡುಗರು ಪೊದೆಮೀಸೆಯ ಅಜ್ಜ ಹೂಂಕರಿಸಿದರೆ ಗೋಡೆಗೆ ಅಂಟಿಕೊಂಡು ಚಿತ್ರದಂತೆ ಕೂತುಬಿಡುತ್ತಿದ್ದೆವು ಕಣ್ಣ ಮೊನಚಿನಿಂದಲೇ ಗದರಿಸಬಲ್ಲ ಗತ್ತಿನ ಅಜ್ಜನೂ ಕಳ್ಳ ಬೆಕ್ಕಿನಂತೆ ಮೂಲೆ ಸೇರುತ್ತಿದ್ದ ತರಗೆಲೆಯಂತೆ ತೂರಿಹೋಗುತ್ತಿದ್ದ ಅಜ್ಜಿಯ ನೆರಳು ಸೋಕಿದರೂ ಸಾಕಿತ್ತು ಅಜ್ಜಿಯ ಮುಂದೆ ಅಜ್ಜ ಹೀಗೇಕೆ ಮಗುವಿನ ಥರ? ...

 • 3 days ago No comment

  ಇರುವುದು ಮತ್ತು ಇಲ್ಲದಿರುವುದು

        ಕವಿಸಾಲು       ಇರುವುದು ಇದ್ದೇ ಇರುತ್ತದೆ ಸದಾ ಅದರಷ್ಟಕ್ಕೆ ಅದು. ಹಾಗೇ ಇಲ್ಲದಿರುವುದೂ… ಇರುವುದೆಲ್ಲವನು ಇರುತ್ತದೆಂಬ ಮಾತ್ರಕ್ಕೆ ಕಟ್ಟಿಕೊಳ್ಳಲಾಗದು ಬಿಟ್ಟು ಬಿಡಲೂ ಆಗದು. ಹಾಗೇ ಇಲ್ಲದಿರುವುದೆಲ್ಲವನ್ನೂ. ಇರುವುದು ಇದ್ದಲ್ಲೇ ಇರುತ್ತದೆಂಬ ಭ್ರಮೆ ಇಲ್ಲದಿರುವುದೂ ಇದ್ದಲ್ಲೇ ಇರುತ್ತದೆನ್ನುವುದೂ… ಇರುವುದು ಇದ್ದೂ ಇಲ್ಲದಂತೆ ಇಲ್ಲದಿರುವುದು ಇಲ್ಲದೆಯೂ ಇದ್ದಂತೆ ಇರುತ್ತದೆ: ಮಗುವಿನೊಳಗಿನ ನಗುವಿನಂತೆ. ನನ್ನಂತೆ ನಿನ್ನಂತೆ ಅದರಂತೆ ಇದರಂತೆ ಎದರಂತೆ ಎಲ್ಲದರೊಳಗಿನ ಆತ್ಮದಂತೆ… ಇರುತ್ತದೆ ಇದ್ದೂ ...


Editor's Wall

 • 07 December 2017
  4 days ago No comment

  ಈಗಲೂ ಭಯತ್ರಸ್ತಳಾಗಿ ಬೆಂಗೊಟ್ಟು ಓಡುತ್ತೇನೆ..!

                        ಆ ಮುಗ್ಧ ಮಕ್ಕಳ ಎಳೆಯ ಮನಸ್ಸುಗಳ ಮೇಲೆ ಮಾಯದಂತೆ ಆಳವಾಗಿ ಉಳಿದುಬಿಡುವ ಈ ನಂಜು ನಖಗಳ ಗೀರುಗಾಯಗಳ ನೋವನ್ನು ನೇವರಿಸುವವರು ಯಾರು?     ಮೊನ್ನೆ ನಡು ಮಧ್ಯಾಹ್ನ ಒಕ್ಹಿ ಚಂಡಮಾರುತದ ಪರಿಣಾಮ ಮೋಡ ಕವುಚಿದ ಮುಗಿಲಿನಡಿ ಇಕ್ಕೆಲಗಳಲ್ಲೂ ಹಿನ್ನೀರು ಆವರಿಸಿದ ಆ ಉದ್ದಾನುದ್ದದ ಆ ನಿರ್ಜನ ರಸ್ತೆಯಲ್ಲಿ ರುಮ್ಮನೆ ಬೀಸುವ ಶೀತಲ ...

 • 05 December 2017
  6 days ago No comment

  ನಿಸ್ವಾರ್ಥ ಸೇವಕರೆಲ್ಲ ಲೋಕನಿಂದಿತರೇ…!

          ಲಾಭ ಬಡುಕರ, ತೋರಿಕೆಗೆ ಮಾಡುವವರ ಹೆಸರುಗಳೆಲ್ಲ ಚಿನ್ನದ ಚೌಕಟ್ಟಿನಲ್ಲಿ ಬರೆಯಲ್ಪಡುವುದು ನಮ್ಮ ದೇಶದ ದೌರ್ಭಾಗ್ಯ!         ತಾಯಿ ತೆರೇಸಾ ಬಗ್ಗೆ ಹೀನಾಯವಾಗಿ ಮಾತಾಡುವಾಗ ನನಗೆ ಒಂದು ಘಟನೆ ನೆನಪಾಗುತ್ತೆ. ನನ್ನ ಊರಿನಿಂದ ಒಂದಿಪ್ಪತ್ತು ಕಿಲೋಮೀಟರು ದೂರದ ಹಳ್ಳಿಯಿಂದ ಒಬ್ಬ ಮಹಿಳೆ ನನ್ನ ಮನೆಯ ಹತ್ತಿರದ ಚರ್ಚ್ ಗೆ ಬರುತ್ತಿದ್ದರು. ಮಕ್ಕಳೂ ಇಲ್ಲದ ವಿಧವೆಯಾಗಿದ್ದ ಆಕೆಯ ಗಂಡ ಫಾರೆಸ್ಟ್ ಇಲಾಖೆಯಲ್ಲಿ ...

 • 04 December 2017
  1 week ago No comment

  ಎಲ್ಲರಿಗೂ ಗೊತ್ತು; ಯಾರಿಗೂ ಗೊತ್ತಿಲ್ಲ

  ಒಂದು ಸಂಗತಿ ಹೇಳುವೆ. ಕಳೆದ ಐದು ವರ್ಷಗಳಿಂದ ಒಂದು ಸಂಬಂಧದಲ್ಲಿರುವ ಯುವತಿಯೊಬ್ಬಳು ಮೂರು ವರ್ಷದ ಹಿಂದೆ ತನ್ನ ಬದುಕಿನಲ್ಲಿ ಬಂದ ಮತ್ತೊಬ್ಬನ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ಆ ಶನಿವಾರ ರಾತ್ರಿ ಪಾರ್ಟಿಯಲ್ಲಿದ್ದ ಅವಳಿಗೆ ಅದ್ಯಾರೋ ತನ್ನತ್ತಲೇ ಆಸೆ ತುಂಬಿಕೊಂಡು ನೋಡುತ್ತಿರುವಂತೆ ಅನ್ನಿಸುತ್ತದೆ. ಹೌದೊ ಅಲ್ಲವೊ ಎಂಬಂತಿದ್ದ ಅದನ್ನು ಖಾತ್ರಿಪಡಿಸಿಕೊಳ್ಳುವಷ್ಟರಲ್ಲಿ ಆತನೇ ಹತ್ತಿರ ಬಂದು ಪರಿಚಯಿಸಿಕೊಳ್ಳುತ್ತಾನೆ. ಸಿಕ್ಕಾಪಟ್ಟೆ ದುಡ್ಡಿರುವವನು. ತರುಣ. ಕಟ್ಟುಮಸ್ತಾಗಿರುವವನು. ಅಷ್ಟೇ ಸುಂದರ. ಅವನೊಡನೆ ಬೆರೆತು ಕುಣಿಯಲು ಹೆಚ್ಚು ಹೊತ್ತು ...

 • 03 December 2017
  1 week ago One Comment

  ನನ್ನನ್ನೇ ನಾನು ನಿರ್ಲಕ್ಷಿಸುವಷ್ಟು…

            | ಕಮಲಾದಾಸ್ ಕಡಲು     ಕಮಲಾದಾಸ್ ಬದುಕೆನ್ನುವ roller coaster ಸವಾರಿಯಲ್ಲಿ ಹಲವಾರು ಏಳುಬೀಳುಗಳು. ಈ ಕವಿತೆ ಅವರು ಇಸ್ಲಾಂಗೆ ಮತಾಂತರ ಹೊಂದಿದ ನಂತರದ ದಿನಗಳದ್ದು. ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಷ್ಟು ಉತ್ಸುಕತೆಯಿಂದ ಇದು ತನ್ನ ಬದುಕಿನ ಬೆಸ್ಟ್ ನಿರ್ಧಾರ ಎಂದುಕೊಳ್ಳುವ ಕಮಲಾದಾಸ್, ಅದು ತುಸು ಅತ್ತಿತ್ತಲಾದಾಗಲೂ ಅಷ್ಟೇ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡುತ್ತಾರೆ, ಯಾರೇನು ತಿಳಿದುಕೊಳ್ಳಬಹುದು ಅನ್ನುವ ಆತಂಕವೇ ಇಲ್ಲದೆ! ...

 • 30 November 2017
  2 weeks ago No comment

  ಪೀಹೂ ಎಂದರೆ ಹಾಡುವ ಹೂ…

                        ನನ್ನ ಬದುಕಿನ ಅಪೂರ್ವ ದಿನವದು. ಸ್ವರ್ಗದ ಹಕ್ಕಿಯೊಂದು ನನ್ನ ಮಡಿಲು ಸೇರಿತ್ತು. ಆಗಷ್ಟೇ ಪುಕ್ಕ ಮೂಡುತ್ತಿದ್ದ ಈ ಹಾಡುವ ಹೂವನ್ನು ಕಂಡೊಡನೆ ನಾನಿದನ್ನು ಪೀಹೂ ಎಂದು ಕರೆದೆ. ಒಂದು ಹಳೆಯ ಹಕ್ಕಿಗೂಡಲ್ಲಿ ಪೀಹೂವನ್ನಿಟ್ಟು ಅದಕ್ಕೆ ತುತ್ತುಣಿಸಿದೆ. ಅದು ನನ್ನನ್ನು ಅಮ್ಮನೆಂದು ಭಾವಿಸಿತು.     ಆ ದಿನ ಕತ್ತಲು ಹರಿಯುವುದಕ್ಕೂ ಮೊದಲೇ ಪೀಹೂ ...