Share

ಅಜ್ಜಿ ಮನೆಯ ನಂಟು-ಬಾಲ್ಯದ ನೆನಪಿನ ಗಂಟು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

 • Page Views 1475
 • n1

   

   

   

   

   

   

   

   

   

  ಬಾಲ್ಯ ಬಂಗಾರ

  ಆ ಕಾಲದ ಬಾಲ್ಯದ ಸೊಗಸು ಬಿಂದಾಸ್ ನಡುವಳಿಕೆ ಈಗಿನ ನಮ್ಮ ಮಕ್ಕಳಿಗಿಲ್ಲ. ಕಾಡುಮೇಡುಗಳ ಯಾವ ಅಂಜಿಕೆಯಿಲ್ಲದೇ ಸಂಚರಿಸುತ್ತಿದ್ದ ಹತ್ತು ಹನ್ನೆರಡರ ಪ್ರಾಯದ ನಮಗೆ ಕಾಡು ತಾಯಿಯ ಮಡಿಲಿನಂತೆ ನೆಮ್ಮದಿಯ ತಾಣವಾಗಿತ್ತು. ಅಲ್ಲಿಯ ಝರಿ, ಹಳ್ಳ, ಕೊರಕಲುಗಳು ಆಪ್ತತೆಯ ನೆಲೆಗಳು. ಭಯ ಬಿಸಾಕಿ ಬರಿಗಾಲಲ್ಲೇ ಓಡಾಡುತ್ತಿದ್ದ ನಾವು ಇಂದು ಬೆಳೆದು ದೊಡ್ಡವರಾದ ಮೇಲೆ ಅದೇ ಕಾಡಿನ ದಾರಿ ಅಪರಿಚಿತವೆನಿಸುತ್ತದೆ. ಏಕಾಂಗಿಯಾಗಿ ಸಂಚರಿಸಲು ಭಯವೆನಿಸುತ್ತದೆ. ಮನುಷ್ಯ ಎಂತಹ ವಿಚಿತ್ರ ಜೀವಿ. ತಾನು ಹುಟ್ಟಿ ಬೆಳೆದ ಸ್ಥಳಗಳೇ ಹಲವು ವರ್ಷಗಳ ನಂತರ ಕಾಲಕ್ರಮೇಣ ಅಪರಿಚಿತವೆನಿಸಿಕೊಳ್ಳುತ್ತವೆ. ಬಾಲ್ಯದಲ್ಲಿಲ್ಲದ ಭಯ ಬೆಳೆದಂತೆ ಹೆಚ್ಚಾಗುತ್ತದೆ ಎಂದೇ ನನ್ನ ಅನುಭವ. ಇಂದು ಆಸುಪಾಸು ಯಾರೂ ಇಲ್ಲ ಎಂದರೂ ಸಾಕು ಭಯದಿಂದ ಮೈರೋಮಗಳು ಮುಳ್ಳೇಳುತ್ತವೆ.

  ನನ್ನ ಅಜ್ಜಿಯ ಮನೆಯೂ ನಮ್ಮೂರೇ ಹಾಗಾಗಿ ನಮಗೆ ರವಿವಾರ ಬಂದರೆ ಅಜ್ಜಿಮನೆಗೆ ಓಡುವ ಹಂಬಲ. ಮನೆಯಲ್ಲಿದ್ದರೆ ಕೆಲಸ. ಅದರಿಂದ ತಪ್ಪಿಸಿಕೊಳ್ಳಲು ಅಜ್ಜಿ ಮನೆಗೆ ನಡೆದುಬಿಟ್ಟರೆ ಆರಾಮವೆಂದು ತಿಳಿದು ಅಲ್ಲಿಗೆ ಹೋಗಲು ಆಶೆಪಡುತ್ತಿದ್ದೆವು. ಅಲ್ಲಿ ವಿದ್ಯುತ್ ಶಕ್ತಿ ಸೌಲಭ್ಯ ಬಂದಿರಲಿಲ್ಲ, ರೇಡಿಯೋ ಇರಲಿಲ್ಲ. ಆ ಕಾಲಕ್ಕೆ ಟಿವಿ ನಮ್ಮೂರಿಗೆ ಇನ್ನೂ ಕಾಲೇ ಇಟ್ಟಿರಲಿಲ್ಲ. ಹೀಗಾಗಿ ರಾತ್ರಿ ಸ್ವಲ್ಪ ಬೇಗನೆ ಎಲ್ಲರ ಮನೆಯ ಚಿಮಣಿಬುಡ್ಡಿಗಳು ದೊಡ್ಡದಾಗುತ್ತಿದ್ದವು.ಆ ಕತ್ತಲ ರಾತ್ರಿಯಲ್ಲಿ ದೆವ್ವದ ಕಥೆಗಳು ಒಂದಾದ ಮೇಲೊಂದು ಹೊರಬರುತ್ತಿದ್ದವು.

  ಅಂದಿಗೆ ಭಯ ಒಂದೇ ವಿಚಾರ ದೆವ್ವಭೂತಗಳ ವಿಚಾರ. ಆ ಕಾಲಕ್ಕೋ ಹಳ್ಳಿಗಳಲ್ಲಿ ಈ ವಿಚಾರದ ಕಥೆಗಳು ಮಬ್ಬುಗತ್ತಲೆ ಮೂಸ್ಸಂಜೆಯ ಹೊತ್ತಿನಲ್ಲಿ ಪಟ್ಟಾಂಗದ ಪದಾರ್ಥಗಳಾಗಿರುತ್ತಿದ್ದವು. ಉಳಿದಂತೆ ಪ್ರಾಣಿಗಳ ಬಗ್ಗೆಯಾಗಲೀ, ಮರವೇರುವ ಖಯಾಲಿಯಲ್ಲಾಗಲಿ ಏಕಾಂಗಿಗಳಾಗಿ ಅಲ್ಲಲ್ಲಿ ಬೆಟ್ಟಗುಡ್ಡಗಳ ದಾಟಿ ಬರುವಾಗಲೂ ಇಲ್ಲದ ಭಯ ದೆವ್ವಭೂತಗಳ ಸಂಗತಿ ಬಂದೊಡನೆ ನೂರ್ಮಡಿಯಾಗುತ್ತಿತ್ತು. ನಮ್ಮ ಚಿಕ್ಕ ಮಾವನೋ ಭೂತಗಳ ಕೂಡ ಸಂಭಾಷಿಸಿದ ಶೂರ. ಅವನಿಗೆ ಮಾತ್ರ ಈಗಲೂ ಆಗಾಗ ಭೂತದರ್ಶನವಾಗುವುದುಂಟು. ಮಲಗಿದಲ್ಲೆ ಮುದುಡಿ ಹಿಡಿಯಷ್ಟಾಗಿ ನಾವು ಅಕ್ಕ ತಂಗಿಯರು ಒಬ್ಬರಿಗೊಬ್ಬರು ಅಂಟಿಕೊಂಡೇ ಹೂಂಗುಡುತ್ತ ಒಳಗೊಳಗೆ ನಡಗುತ್ತಾ ಆದರೂ ಕಿವಿಯನ್ನು ಮಾತ್ರ ನಿಮಿರಿಸಿಕೊಂಡು ಕಥೆ ಕೇಳುತ್ತಿದ್ದವು. ಆ ಸಮಯದಲ್ಲೆಲ್ಲಾದರೂ ಯಾರಿಗಾದರೂ ನಿತ್ಯಕರ್ಮಗಳ ಅನಿವಾರ್ಯತೆ ಬಂತೋ ಅವನ ವ್ಯಥೆ ಗೋಳೇ ಗೋಳಾಗುತ್ತಿತ್ತು. ಯಾರು ಕರೆದರೂ ತಾನೊಲ್ಲೆ ತಾನೊಲ್ಲೆ ಎಂದು ಮುಚ್ಚಿ ಮಲಗುವವರೇ ಎಲ್ಲ. ಕೊನೆಗೆ ಅಜ್ಜಿಯೇ ಎಲ್ಲರಿಗೂ ಬೈದು ತಾನೇ ಕರೆದುಕೊಂಡು ಹೋಗುತ್ತಿದ್ದಳು. ಆಗೆಲ್ಲಾ ಮನೆಯೊಳಗೆ ಆ ಸೌಲಭ್ಯಗಳು ಇರಲೇಇಲ್ಲ. ಕುಂಭರಿ ಎಂಬಲ್ಲಿಯೇ ಹೋಗಬೇಕಿತ್ತು. ಅದು ಕಾಡೇ.

  ಬತ್ತದ ಕೊಯ್ಲು ಮುಗಿಯುತ್ತ ಅವರವರ ಮನೆಯ ತೆನೆಯ ರಾಶಿಗಳನ್ನೆಲ್ಲಾ ಒಂದೇ ಕಡೆ ಗದ್ದೆಯಲ್ಲಿಯೇ ಗೋಪುರದಂತೆ ಜೋಡಿಸಿ ಅದಕ್ಕೆ ನಮ್ಮ ಕಡೆ ಕನ್ನಡದಲ್ಲಿ ಕುತ್ತರಿ [ಬಣವೆ]ಎಂದು ಕರೆಯುತ್ತಾರೆ. ಗಂಡಾಳುಗಳು ಖಡಕಿ ಇಟ್ಟು ಬತ್ತದ ತೆನೆಯ ಕಟ್ಟುಗಳನ್ನು ಮಾಡಿ ಅದರ ಮೇಲೆ ಬಡಿದರೆ ಒಣಗಿದ ಭತ್ತಗಳೆಲ್ಲಾ ಉದುರಿ ಕೆಳಬೀಳುತ್ತಿದ್ದವು. ಕೆಲವು ಅಂಟಿಕೊಂಡೇ ಇರುವ ಭತ್ತಗಳನ್ನು ಕೊನೆಯಲ್ಲಿ ಹೆಣ್ಣಾಳುಗಳು ಈ ಭತ್ತದ ತೆನೆಯ ಸಣ್ಣಸಣ್ಣ ಕಟ್ಟು ಕಟ್ಟಿ ಕೋಲಿನಿಂದ ಬಡಿದು ಒತ್ತಟ್ಟಿಗೆ ಮಾಡಿ ಇಡುತ್ತಿದ್ದರು. ಅದಕ್ಕೆ ಹಳ್ಳಿಯಲ್ಲಿ ಸಾಕರಿ ಕಟ್ಟು ಎಂದು ಕರೆಯುತ್ತಾರೆ. ಹೀಗೆ ಕಣವನ್ನೆಲ್ಲಾ ಬಿಚ್ಚಿದ ಮೇಲೆ ಎಲ್ಲವನ್ನೂ ವ್ಯವಸ್ಥಿತವಾಗಿ ಸಾಗಿಸಿದ ನಂತರವೇ ಕಣ ಪುನಃ ಗದ್ದೆಯಾಗುತ್ತಿತ್ತು. ಅಲ್ಲಿಯವರೆಗೆ ಅದನ್ನು ಹಗಲು ರಾತ್ರಿ ಎನ್ನದೆ, ಸಂರಕ್ಷಿತ ಪ್ರದೇಶದಂತೆ ಕಾಯಬೇಕಾಗಿತ್ತು. ನಮ್ಮ ಮಾವ ರಾತ್ರಿ ಊಟ ಮಾಡಿ ದಿನವೂ ಅಲ್ಲಿಗೆ ಮಲಗಲು ಬರುತ್ತಿದ್ದ. ಮಾಳದ ಮೇಲೆ ಮಲಗಿ ರಾತ್ರಿ ಬರುವ ಹಂದಿಗಳ ಹೆದರಿಸಲು ಜೋರಾಗಿ ಕೂ ಹಾಕುತ್ತ, ಇರುತ್ತಿದ್ದರು. ಫರ್ಲಾಂಗಿಗೆ ಒಬ್ಬರದಂತೆ ಮಾಳಗಳು ಇರುತ್ತಿದ್ದವು. ಆ ಸಂದರ್ಭದಲ್ಲಿ ಮಾವನಿಗೆ ಅನೇಕ ಬಾರಿ ಮೋಹಿನಿಯರು ಕಾಣಿಸಿಕೊಂಡಿದ್ದಿತ್ತಂತೆ. ಅದೊಂದು ಬಾರಿ ಈತ ಮಾಳದ ಮೇಲೆ ಮಲಗಿದರೆ ಈತ ಮಲಗಿದ ಗದ್ದೆಯ ಕೆಳಗಿನ ಗದ್ದೆಯಲ್ಲಿ ಕೈತುಂಬಾ ಬಳೆ ತೊಟ್ಟ ಹೆಣ್ಣೊಬ್ಬಳು ಅಳುತ್ತ ಕುಳಿತಿದ್ದಳಂತೆ. ಯಾರು ಯಾರು ಎಂದು ಈತ ಕೇಳುತ್ತಲೇ ಜೋರಾದ ಸದ್ದು ಮಾಡುತ್ತ ಇಡಿಯ ಮರಕ್ಕೆ ಮರವೇ ಕಿತ್ತುಬಿದ್ದಂತ ಸದ್ದಿನೊಂದಿಗೆ ಆಕೆ ಕೆಳಗಿನ ಹುಣಸೆ ಮರದತ್ತ ಹೋದದ್ದನ್ನು ತಾನು ಕಣ್ಣಾರೆ ಕಂಡಿದ್ದಾಗಿ ಹೇಳುತ್ತಿದ್ದ.

  ಇನ್ನೊಮ್ಮೆ ಮಟಮಟ ಮಧ್ಯಾಹ್ನ ಆತ ಸೌದೆ ಮಾಡಲು ಕಾಡಿಗೆ ಹೋದಾಗ ಜೀವಂತ ಇರುವಂತೆ ಮೋಹಿನಿಯನ್ನು ಕಂಡಿದ್ದನಂತೆ. ಝರಿಯ ನೀರಿನೊಂದಿಗೆ ಆಡುತ್ತ ಹಾಡುತ್ತ ತನ್ನಷ್ಟಕ್ಕೆ ಕೂತ ಹೆಣ್ಣನ್ನು ನೋಡಿ ಓಡಿ ಬಂದ್ದದ್ದನಂತೆ. ಮನೆಗೆ ಬರುತ್ತಲೂ ಜ್ವರ ಬಂದು ಮೂರು ದಿನ ಹಾಸಿಗೆ ಬಿಟ್ಟೇ ಎದ್ದಿರಲಿಲ್ಲ ಎಂದು ಅಜ್ಜಿಯೂ ಹೇಳುತ್ತಿದ್ದರು. ಬಹುಶಃ ಕಾಡಿಗೆ ಹೋದ ಹಾಲಕ್ಕಿ ಹೆಣ್ಣೊಬ್ಬಳು ಸತ್ತು ಅಲ್ಲೇ ಆಗಾಗ ತಿರುಗಾಡುತ್ತಿದ್ದಳು ಎಂತಲೂ ಜನ ಆಡಿಕೊಳ್ಳುತ್ತಿದ್ದರು. ಆದರಾಕೆ ಯಾರಿಗೂ ಕೇಡು ಮಾಡಿರಲಿಲ್ಲವಂತೆ.

  ನಮಗೆ ಅಜ್ಜಿಮನೆಯೆಂದರೆ ಏನೋ ಪ್ರೀತಿ. ಓದುವ ಉಸಾಬರಿಗಳಿಲ್ಲ. ಓದು ಎಂದು ಬೈಯುವವರಿಲ್ಲ. ಅದು ಮಾಡು ಇದು ಮಾಡು ಎನ್ನುವುದಿಲ್ಲ. ರಜೆಯ ದಿನಗಳಂತೂ ಅನನ್ಯವಾದ ಆನಂದವನ್ನೇ ನೀಡುವ ದಿನಗಳು. ಬೆಳಿಗ್ಗೆ ಎದ್ದು ದಪ್ಪ ಉಬ್ಬಿದೋಸೆ ತಿಂದು ಚಹಾ ಕುಡಿದು ಆಡಲು ಹೊರಟರೆ ಎಲ್ಲ ಚಳ್ಳೆಮಿಳ್ಳೆಗಳ ಟೋಳಿ ಗದ್ದೆಯಲ್ಲಿ ಜಮಾಯಿಸುತ್ತಿತ್ತು. ಅಲ್ಲಿ ಆಡುವ ಆಟಗಳದ್ದು ಕುಂಟಾಪಿಲ್ಲೆ, ಮರಕೋತಿ, ಕಲ್ಲಾಟ, ಕೆರೆದಂಡೆ, ಲಗೋರಿ ಹೀಗೆ ಪಟ್ಟಿ ಇರುತ್ತಿತ್ತು. ಮಧ್ಯಾಹ್ನ ಹನ್ನೆರಡು ಹೊಡೆಯುತ್ತಲೇ ಮನೆಗಳಿಗೆ ಮತ್ತೆ ವಾಪಸ್. ಆಗಷ್ಟೇ ಒಲೆಯಿಂದ ಇಳಿಸಿದ ಗಂಜಿಮಡಿಕೆಯಿಂದ ಮೇಲಿನ ತಿಳಿಯಾದ ಗಂಜಿಯೊಂದಿಗೆ ಒಂದೆರಡು ಅಗುಳು ಸೇರಿಸಿ ಅಜ್ಜಿ ಬಡಿಸಿ ನಂಜಿಕೊಳ್ಳಲು ಉಪ್ಪಿಗೆ ಹಾಕಿ ಇಟ್ಟ ಕಡೇಗಾಯಿ ಉಪ್ಪಿನಕಾಯಿಯೋ ಇಲ್ಲವೇ ನಿನ್ನೆ ಮಾಡಿದ ಮೀನು ಸಾರನ್ನೋ ಕೊಡುತ್ತಿದ್ದರು. ಆ ಹೊತ್ತಿಗೆ ಅದೇ ಮೃಷ್ಟಾನ್ನ ಭೋಜನ. ಈಗ ನೆನಪಾದರೂ ಬಾಯಲ್ಲಿ ನೀರೂರುತ್ತದೆ. ಆ ರುಚಿ ಇಂದಿನ ಯಾವ ಫೈವ್ ಸ್ಟಾರ್ ಹೋಟೆಲ್ಲುಗಳೂ ಕೊಡಲಾರವು ಬಿಡಿ. ಇನ್ನು ಆ ಅಕ್ಕಿಗೆ ಇರುವ ರುಚಿ ಇಂದಿನ ಪಾಲೀಸು ಮಾಡಿದ ಅಕ್ಕಿಗಳಿಗಿಲ್ಲ. ಅದು ಮನೆಯಲ್ಲಿಯೇ ಭತ್ತ ಮಿರಿದು ಮಾಡಿದ ಅಕ್ಕಿ. ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎಂಬಂತೆ ಅದರ ಸ್ವಾದ ಉಂಡವನಿಗಷ್ಟೇ ಗೊತ್ತು.

  ಸುಗ್ಗಿ ಮುಗಿದ ನಂತರ ಹಳ್ಳಿಗಳ ಸಡಗರ ಶುರು. ನಿಜಕ್ಕೂ ಆ ಕಾಲದ ವಿಶಿಷ್ಟ ಸಂಪ್ರದಾಯಗಳೆಲ್ಲ ಇಂದು ಮರೆಯಾಗುತ್ತಿರುವುದು ವಿಷಾದನೀಯ. ಸುಗ್ಗಿ ಮುಗಿಯುತ್ತಿದ್ದಂತೆ ಊರಲ್ಲಿ ದೇವರ ಜಾತ್ರೆ ಹಗರಣ ಭಜನಾ ನಾಟಕ ಆಟಗಳು ಹೀಗೆ ಒಂದೇ ಎರಡೇ ಎಲ್ಲ ಮನೋರಂಜನೆಯ ಕಾಲ ಅದು. ಊರಲ್ಲಿಯ ದೇವರ ಪೂಜೆಗಳು ನಡೆದು ರಾತ್ರಿ ಹಗರಣದ ಸಮಯ. ಊರಿನ ಯಾವುದಾದರೂ ವ್ಯಕ್ತಿಯ ವಿಚಿತ್ರ ಹಾವಭಾವ, ಎಂದಾದರೂ ನಡೆದ ಹಾಸ್ಯಮಯ ಪ್ರಸಂಗಗಳು ಸನ್ನಿವೇಶಗಳು ಈ ಹಗರಣದ ವಸ್ತುವಾಗಿರುತ್ತಿದ್ದವು. ಹೆಣ್ಣಿನಂತೆ ಸೀರೆ ಉಟ್ಟು ಗಂಡುಗಳು ನಟಿಸುತ್ತಿದ್ದರೆ ಬಿದ್ದು ಬಿದ್ದು ನಗುತ್ತಿದ್ದವು. ಹೆಚ್ಚಿನ ಸಂದರ್ಭಗಳಲ್ಲಿ ಅಕ್ಕ ಪಕ್ಕದ ಮನೆಯ ಹೆಂಗಸರ ಮನಸೂರೆಗೊಳ್ಳುವ ಜಗಳದ ದೃಶ್ಯಗಳೇ ಹಗರಣಗಳ ಸಾರವಾಗಿದ್ದವು, ಪ್ರೇಕ್ಷರರ ನೆಚ್ಚಿನ ಸಂಗತಿಗಳಾಗಿದ್ದವು. ಸೀರೆಯನ್ನು ಮೊಣಕಾಲಿನವರೆಗೂ ಏರಿಸಿ ಪಾತ್ರಧಾರಿ ಅಲ್ಲಿಯ ಬಜಾರಿ ಹೆಣ್ಣಿನ ಆಂಗಿಕ ಹಾವಭಾವ ಪ್ರದರ್ಶಿಸುತ್ತ ನುಲಿಯುತ್ತ ನುಡಿಯುತ್ತಿದ್ದರೆ ಆ ಹೆಣ್ಣು ಮಾತ್ರ ಬಗ್ಗಿಸಿದ ತಲೆ ಮೇಲೆತ್ತುತ್ತಿರಲಿಲ್ಲ. ಇದೊಂದು ರೀತಿಯಲ್ಲಿ ಮಾನಹಾನಿಯ ಪ್ರಸಂಗದಂತೆಯೂ ಇರುತ್ತಿತ್ತು. ಹಾಗಾಗೇ ಮಾರನೇ ದಿನ ಮತ್ತೆ ಇದೇ ವಿಷಯಕ್ಕೆ ಜಗಳ ನಡೆದು ಹೊಡೆದಾಟಗಳು ಆಗಿಹೋದದ್ದೂ ಉಂಟು. ಕಾಲಕ್ರಮೇಣ ಇವುಗಳೆಲ್ಲ ನಿಂತುಹೋದವು.

  ಬಾಲ್ಯದ ಈ ಕಣಜದ ಬತ್ತದ ಕಾಳುಗಳ ಮೆಲಕು ಹಾಕುತ್ತ ನಿಂತರೆ ಮುದಗೊಳ್ಳುವ ಮನಸ್ಸು ತುಟಿಯಂಚಿನ ಮುಗುಳನಗೆಗೆ ಕನ್ನಡಿಯಾಗುತ್ತದೆ.

  —————

  ನಾಗರೇಖಾ ಗಾಂವಕರ

  ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲಭಾಷಾ ಉಪನ್ಯಾಸಕಿ. ಕಥೆ, ಕವನಗಳು, ಲೇಖನಗಳು, ವಿಮರ್ಶಾ ಬರಹಗಳ ಮೂಲಕ ಪರಿಚಿತರು. ‘ಏಣಿ’, ‘ಪದಗಳೊಂದಿಗೆ ನಾನು’ ನಾಗರೇಖಾ ಅವರ ಪ್ರಕಟಿತ ಕವನ ಸಂಕಲನಗಳು.

  Share

  Related Post

  Related Blogpost

  2 Comments For "ಅಜ್ಜಿ ಮನೆಯ ನಂಟು-ಬಾಲ್ಯದ ನೆನಪಿನ ಗಂಟು
  ಬಾಲ್ಯ ಬಂಗಾರ | ನಾಗರೇಖಾ ಗಾಂವಕರ
  "

  1. Praveen nayak
   6th February 2017

   ಚೆಂದದ ಲೇಖನ

   Reply
  2. Sanjay
   6th February 2017

   I adore your articles. It is simple and nicely written. Made me to remember some pages of Kuvempu’s ‘Malegalalli Madumagalu’

   Reply

  Leave a comment

  Your email address will not be published. Required fields are marked *

  Recent Posts More

  • 4 hours ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 17 hours ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 day ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

  • 1 day ago No comment

   ಬದುಕು ಬರಿ ಗಿಲೀಟು

   (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

  • 2 days ago One Comment

   ನಾನು ಮತ್ತು ನೀನು

   ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help