Share

ಮಾಯಿಲಕೋಟೆ
ಈಶ್ವರ ದೈತೋಟ ಕಾಲಂ

ನಾನು ಹುಟ್ಟಿ ಬೆಳೆದ ದೈತೋಟದ ಮನೆ ನಮ್ಮೂರಿನ ಪ್ರಸಿದ್ಧ ಮಾಯಿಲಕೋಟೆ ಮಡಿಲಲ್ಲಿದೆ. ಹುಟ್ಟುವಾಗ ಮದ್ರಾಸ್ ಪ್ರಾಂತದಲ್ಲಿದ್ದ ಪಾಣಾಜೆ ಗ್ರಾಮದ ಈ ಪ್ರದೇಶ ನಾನು ಶಾಲೆಗೆ ತೆರಳುವಾಗ ಮೈಸೂರು ಪ್ರಾಂತಕ್ಕೆ ಸೇರಿತ್ತು. ನನ್ನ ಆಕ್ಕ, ಅಣ್ಣಂದಿರೆಲ್ಲ ಕಲಿತ ಪಕ್ಕದ ಪಡ್ರೆ ತೋಟದ ಬಯಲಿನ ಶಾಲೆ ನಾನು ಸರಸ್ವತಿ ವಂದನ ಮುಗಿಸಿ ಸೇರುವಾಗ ಕೇರಳದ ಪಾಲಾಗಿತ್ತು. ಇವೆಲ್ಲದರ ನಡುವೆ ಊರಿನ ಹೆಮ್ಮೆ- ಪ್ರಕೃತಿ ಮತ್ತು ಸಂಸ್ಕತಿಯೇ ಮೈವೆತ್ತಂತೆ ಮಾಯಿಲಕೋಟೆ ಬೆಟ್ಟ ಮೂರು ಗ್ರಾಮಗಳ ಮಧ್ಯೆ ಮೆರೆಯುತ್ತ ಎರಡು ರಾಜ್ಯಗಳನ್ನು ಹಾಗೂ ಆರೇಳು ಭಾಷೆಗಳನ್ನು ಹಿಡಿದಿಟ್ಟಿತ್ತೆಂದರೇ ಸರಿ!

ನಮಗೆ ಸವಿಯಲು ಸಿಗುತ್ತಿದ್ದ ನೆಲ್ಲಿಕಾಯಿ, ಕುಂಟಾಂಗಿಲ, ಚಪ್ಪಳಿಕ, ಮಾವು, ಹಲಸು ಮರಗಳೆಲ್ಲ ಈ ಕಾಡಲ್ಲಿತ್ತು. ಕುಡಿಯುವ ನೀರಂತೂ ಅದರ ಉದರದಿಂದಲೇ ಬರುತ್ತಲಿತ್ತು. ಅಜ್ಜ, ನಮ್ಮಪ್ಪ, ಅಣ್ಣ ಎಂದು ಕುಟುಂಬದವರು ಊರಿನವರ ಆರೋಗ್ಯರಕ್ಷಣೆ, ಸುಧಾರಣೆಗೆಂದು ನಿರ್ವಹಿಸುತ್ತಿದ್ದ ಆಯುರ್ವೇದ ಮತ್ತು ಗಿಡಮೂಲಿಕೆ ಆಧಾರದ ಅಜ್ಜಿಮದ್ದಿನ ಹಣ್ಣು, ಕಾಯಿ, ಸೊಪ್ಪು, ಕೆತ್ತೆ, ಬೇರು, ನಾರು, ಬೀಜಗಳೆಲ್ಲವನ್ನೂ ಬೆಳೆಸಿ ಸಲಹುವ ಪ್ರಕೃತಿಯ ಮಡಿಲು ಈ ಹಸಿರು ಗುಡ್ಡವಾಗಿತ್ತು.

ಯಾರಾದರೂ ನಮ್ಮೂರಿಗೆ ಬಂದರೆ ಸಾಕು. “ನಮ್ಮೂರಿನಲ್ಲಿ ಮಾಯಿಲಕೋಟೆ ಇದೆ. ಅದನ್ನು ಹತ್ತಿದರೆ ಪೂರ್ವದ ಜಂಗ್ಲಿಕಾಡಿ ನೆಡೆಯಿಂದ ಸೂರ್ಯ ಉದಯಿಸಿ ಮೇಲೇರುವುದನ್ನು ನೋಡಬಹುದು. ಪಶ್ಚಿಮದ ಅರಬ್ಬೀ ಸಮುದ್ರದಲ್ಲಿ ಹಡಗು ಸಾಗುವುದು ಕಾಣುತ್ತದೆ. ಗುಡ್ಡದ ಕೊಡಿಯಲ್ಲಿ ಹುಲಿ ಬಾಂಡೆಲು ಇದೆ, ಪತ್ರಡೆ ಮಾಡಲು ರುಚಿರುಚಿ ಮರಕೆಸುವು ಬೇಕಾಷ್ಟು ಸಿಗುತ್ತದೆ. ಬಲಿಯೇಂದ್ರ ಪೂಜೆ ಅಲಂಕಾರಕ್ಕೆ ಪಾದೆ ಹೂವು ಉಂಟು” ಎಂದೆಲ್ಲಾ ಜಂಭದಿಂದ ಹೇಳುತ್ತಿದ್ದುದು ನೆನಪಿದೆ.

ತೋಟದಬೈಲಿನ ಶಾಲೆಗೆ ಐದಾರು ಮಕ್ಕಳು ಹೋಗುತ್ತಿದ್ದೆವು. ಜೊತೆಗೆ ನಮಗಿಂತ ಹಿರಿಯಳಾದ ಧೂಮಾಲು ಎಂಬ ಬಾಲಕಿಯೊಬ್ಬಳಿದ್ದಳು. ತನ್ನ ತಲೆಗೆ ಶಾಲೆ ಬರವು ಹತ್ತುವುದಿಲ್ಲವೆಂದು ಅವಳು ಬರಲೊಪ್ಪುತ್ತಿರಲಿಲ್ಲ. ಒತ್ತಾಯಕ್ಕೆ ಹಿಂಬಾಲಿಸುತ್ತಿದ್ದಳು. ದಾರಿಯಲ್ಲಿ ಕುಡುಕನೊಬ್ಬ ರಸ್ತೆಬದಿಯ ಸರಕಾರೀ ಜಾಗದಿಂದ ಮರ ಕಡಿದು ಗಡಂಗಿಗೆ ಮಾರಿ ಕಳ್ಳು ಕುಡಿದುಯಾರನ್ನಾದರೂ ಬೈಯುತ್ತಲೇ ದಿನವೂ ಬರುತ್ತಿದ್ದ. ನಮಗೆ ಅವನನ್ನು ಕಂಡರೆ ಕೈಕಾಲು ನಡುಕ. ದೊಡ್ಡವರೂ ಆತನಿಗೆ ಏನೂ ಹೇಳುತ್ತಿರಲಿಲ್ಲ.

ಶಾಲೆ ಪುಸ್ತಕದಲ್ಲಿ ಮರ ಎಂಬ ಪಾಠವೊಂದಿತ್ತು. ಯಾರೂ ಮರಕಡಿಯಬಾರದು. ಅದರಿಂದ ಉಸಿರಾಟಕ್ಕೆ ಬೇಕಾದ ಆಮ್ಲಜನಕ ಬರುತ್ತದೆ ಎಂದೆಲ್ಲ ಮೇಷ್ಟ್ರು ಮನದಟ್ಟು ಮಾಡಿದ್ದರು. ಧೂಮಾಳು ನಿಂತು “ಸಾರೆ, ದಾರಿಯಲ್ಲಿ ಯಾರೋಒಬ್ಬ ದಿನಾಲೂ ಮರ ಕಡಿಯುತ್ತಾನೆ, ತಪ್ಪಲ್ವಾ ಸಾರೆ” ಎಂದು ಕೇಳಿಯೇ ಬಿಟ್ಟಳು. ಹೌದು, ಮರಗಿಡಗಳು ನಮಗೆ ಉಸಿರಾಡಲು ಬೇಕಾದ ಆಮ್ಲಜನಕವೆಂಬ ಗಾಳಿಯನ್ನು ಉತ್ಪಾದಿಸುತ್ತದೆ. ಆ ಗಾಳಿಯಿಲ್ಲದಿದ್ದರೆ ನಾವೆಲ್ಲರೂ ಸತ್ತು ಹೋಗಬಹುದು ಎಂದು ವಿವರಿಸಿದ್ದರು.

ಶಾಲೆಯಿಂದ ವಾಪಾಸಾಗುತ್ತಿರುವಾಗ ಕುಡುಕನ ಮರ ಕಡಿಯುವಿಕೆ ನಡೆದಿತ್ತು. ಆಕೆ ಸೊಂಟದ ಮೇಲೆ ಕೈಗಳನ್ನು ಇಟ್ಟುಕೊಂಡು- “ಯಾಕೋ ನೀನು ಮರಕಡಿಯುತ್ತೀಯಾ, ಮರಕಡೀಬೇಡ” ಎಂದು ಅಬ್ಬರಿಸಿ ಬಿಟ್ಟಳು. ಕುಡುಕ ಕತ್ತಿ ಹಿಡಿದು ನಮ್ಮೆಲ್ಲರ ತಲೆ ಕಡಿಯುತ್ತಾನೆ ಎಂಬ ಭಯದಲ್ಲಿ ನಾವೆಲ್ಲ ತತ್ತರಿಸಿದೆವು. ನಾನು ಮರಾ ಕಡೀತೀನಿ ನಿನಗೇನು ಸಂಕಟ ಅದ್ರಿಂದ ಎಂದು ಕುಡುಕ ಧಮ್ಕಿ ಹಾಕಿದ. “ಮರ ಕಡಿದ್ರೆ ನಮಗೆಲ್ಲಾ ಗಾಳಿ ಬರಲ್ಲಾ, ನಾವೆಲ್ಲ ಸತ್ತೋಗಿ ಬಿಡುತ್ತೀವಿ. ಕಡೀಬೇಡ” ಎಂದು ದಬಾಯಿಸಿ ಬಿಟ್ಟಳು. ನಾನು ಕಡೀತೀನಿ ನೀನೇನು ಮಾಡ್ತೀಯಾ? ಎಂದು ಆತ ಮರು ಅಬ್ಬರಿಸಿದ. ನಾನು ಹೋಗಿ ಮೇಷ್ಟ್ರಿಗೆ ಹೇಳ್ತೀನಿ ಎಂದು ಈ ಹುಡುಗಿ ಪತ್ಯುತ್ತರಿಸಿದಳು. ಕುಡುಕನಿಗೆ ಅದೇನಾಯಿತೋ ಕತ್ತಿ ಬಿಸಾಕಿ ಓಡಿಹೋದವನು ಮತ್ತೆಂದೂ ಅಲ್ಲಿ ಮರಕಡಿಯುವುದು ಕಾಣಿಸಲಿಲ್ಲ. (ಬಹುಶಃ ತನ್ನನ್ನೆಲ್ಲಾದರೂ ಶಾಲೆಗೆ ಸೇರಿಸಿಯಾರೆಂಬ ಭಯ ಹುಟ್ಟಿರಬೇಕು!).

ಈಗ ನಮ್ಮೂರಿನಲ್ಲಿ ರಾತೋರಾತ್ರಿ ಮರ ಕಡಿದು ಕಳ್ಳಸಾಗಾಣಿಕೆ ಆಗುತ್ತದೆ. ಅವರನ್ನು ನಿಲ್ಲಿಸಲು ಯಾರೂ ಧೈರ್ಯ ಮಾಡುವುದಿಲ್ಲ. ಒಬ್ಬ ಅನಕ್ಷರಸ್ಥ ಪುಟ್ಟ ಬಾಲಕಿಗಿದ್ದ ಪ್ರಾಮಾಣಿಕ ಧೈರ್ಯವಿಂದು ಯಾರಿಗೂ ಇಲ್ಲ.

ಇನ್ನೊಬ್ಬ ಹುಡುಗನಿದ್ದ. ನನಗಿಂತ 3 ವರ್ಷ ಚಿಕ್ಕವ. ರಾಮನೂ ಶಾಲೆಯೆಂದರೆ, ಕಾಡಿನತ್ತ ಓಡಿ ಮರೆಯಾಗುವ ಹುಡುಗ. ಹೊರಗಡೆ ಮಾಡುವ ಕೆಲಸ ಬೇಕಾದಷ್ಟಿರುವಾಗ ಶಾಲೆಯಲ್ಲಿ ಗೊಡ್ಡು ಮೇಸ್ಟರುಗಳ ಪುರಾಣ ಕೇಳುವುದೇಕೆಂದು ಅವನ ನಿಲುವಾಗಿತ್ತು. ಹರಕಲು ಚಡ್ಡಿ, ಹಲ್ಲುಜ್ಜದ ಮೂತಿಯಿಂದಾಗಿ ಅವನೆಂದರೆ ನನಗೆ ಅಷ್ಟಕಷ್ಟೆ. ಸಣ್ಣಪುಟ್ಟ ಕೆಲಸ ಹೇಳಿದರೆ ಅವನ್ನೆಲ್ಲ ಚಕಚಕನೆ ಆತಮಾಡಿ ಮುಗಿಸುತ್ತಿದ್ದ ರೀತಿಯಿಂದ ನನಗೆ ಹೊಟ್ಟೆಯುರಿ ಆಗುತ್ತಲಿತ್ತು. ದೋಸೆಯಾಸೆಯಿಂದ ಆತ ನಮ್ಮ ಮನೆಗೆ ರಜಾ ದಿನಗಳಲ್ಲಿ ಬರುತ್ತಲಿದ್ದ. ನಮ್ಮ ಕೈಗೆ ಸಿಗಹಾಕ್ಕೊತ್ತಿದ್ದ. ಗುಡ್ಡಕಾಡು ಸುತ್ತುವುದು, ದೊಡ್ಡಕೆರೆಯಲ್ಲಿ ಸೊಕ್ಕುವುದು ನಮ್ಮ ಅಭ್ಯಾಸವಾಗಿ ಬಿಟ್ಟಿತ್ತು.

ಶಾಲೆಯೆಂದರೆ ನರಕವೆಂದು ಪರಿಗಣಿಸಿದ್ದ ರಾಮ ಬಯಲಾಟ ಪ್ರಿಯ. ಶಾಲೆಯಲ್ಲಿ ಹೇಳಿಕೊಡದ ಪುರಾಣ ಕಥೆಗಳು, ಹಾಸ್ಯಕಾರನ ಕುಣಿತದ ತಮಾಶೆಯ ಹೆಜ್ಜೆಗಳು ಮತ್ತು ಸಮಕಾಲೀನ ತುಳು ಜೋಕುಗಳನ್ನೆಲ್ಲ ನನಗೆ ಕಂಠಪಾಠ ಮಾಡಿಸಿದವನೂ ಈ ಮಹಾರಾಯನೇ. ಮಧ್ಯಾಹ್ನ ಮೇಲೆ ತರಗತಿಯಲ್ಲಿ ಕೂತರೆ ತಾನೆ? ಆತ ಕಾಡುಮೇಡು ಸುತ್ತಬೇಕಲ್ಲ! ಕರಂಡೆಕಾಯಿ, ಕುಂಟಲ, ಚಪ್ಪಳಿಕ ಜಂಬುನೇರಳೆ, ತುಳುವ ಪೆಲಕ್ಕಾಯಿ ಕದ್ದು ಸವಿಯಬೇಕಲ್ಲ! ಜೇನು ಒಕ್ಕಲುಗಳನ್ನು ಶೋಧಿಸಿ, ನಮ್ಮದೊಡ್ಡಣ್ಣನಿಗೆ ಹೇಳಬೇಕಲ್ಲ. ಮರದಗೆಲ್ಲು, ಕಾಂಡ ಮತ್ತು ಮಣ್ಣ ಗೋಳೆಯೊಳಗಣ ಜೇನುಗೂಡುಗಳನ್ನು, ಸೊಸೈಟಿಯಿಂದ ತಂದ ಮರದ ಪೆಟ್ಟಿಗೆಯೊಳಗೆ ಹಿಡಿದು ಹಾಕುವುದಕ್ಕಿಂತಲೂ, ಆತನ ಸಂಭ್ರಮವಿದ್ದುದು ಜೇನುಗೂಡಿನೊಳಗಿರುವ ಮೊಟ್ಟೆಯೆರಿಯನ್ನು ಮುಕ್ಕುವುದರಲ್ಲಿ ಮತ್ತು ವ್ಯರ್ಥವಾಗಿ ಹೋಗುವ ಜೇನುತುಪ್ಪ ನೆಕ್ಕುವುದರಲ್ಲಿ. ಕೊನೆಗೆ ಆತನ ಕೈಗೊಂದಷ್ಟು ಚಿಲ್ಲರೆ ಕಾಸೂ ಸಿಗುತ್ತಲಿತ್ತು. ಅವನಾಗ ತಿನ್ನುತ್ತಲಿದ್ದ ಹುಳಹುಪ್ಪಟೆಗಳನ್ನೆಲ್ಲ ಮಾನವರ ಭವಿಷ್ಯದ ಫೂಡ್‍ಎಂದು, 4 ವರ್ಷಗಳಿಂದ ವಿಶ್ಷಸಂಸ್ಥೆ ಪ್ರಚಾರ ಮಾಡತೊಡಗಿದೆ.

ನನಗಂತೂ ಜೇನುಹುಳಗಳ ಜಾಡು, ವಾಸನೆ ಹಿಡಿಯುತ್ತಾ ಅವು ಎಲ್ಲಿ ಗೂಡುಕಟ್ಟಿವೆಯೆಂದು ಹುಡುಕುವುದನ್ನು ಹೇಳಿಕೊಟ್ಟವ-ಕಾಡು ಕಾಯಿ, ಹಣ್ಣುಗಳ ರುಚಿಯನ್ನು ನನ್ನ ನಾಲಗೆಗೆ ಅಂಟಿಸಿದವನು ಅವನೇ. ಮೊದಲ ಬಾರಿಗೆ ಬೀಡಿ ಹೊಗೆ ಹಿಡಿದು, ಕೆಮ್ಮಿಸಿದವನೂ ಅವನೇಯೇ, ಮಮ್ಮದೆ ಬ್ಯಾರಿಯ ಮಗ ವಾರಕ್ಕೊಮ್ಮೆ ಪೇಟೆಯಿಂದ ಊರಿಗರಿಗೆ ಮಾರಾಟಕ್ಕೆಂದು ತರುತ್ತಲಿದ್ದ ಮೀನು ಬುಟ್ಟಿಯಲ್ಲಿರುತ್ತಿದ್ದ ಮೀನುಗಳ ಆಕಾರ, ಹೆಸರುಗಳನ್ನು ತಾಳೆ ಹಾಕಿ, ತೋರಿಸಿದವನೂ ಇನ್ನಾರೂ ಅಲ್ಲ. ಮುಂದಿನ ಶಿಕ್ಷಣಕ್ಕೆಂದು ಪೇಟೆ ಸೇರಿ, ಅವನನ್ನು ಮರೆತೇ ಬಿಟ್ಟೆ. ಆದರೆ, ಆತ ಕಲಿಸಿದ ಪ್ರಕೃತಿ ಪಾಠಗಳೆಲ್ಲವನ್ನು ವಿಜ್ಞಾನ ಒಪ್ಪಿಕೊಂಡಿರುವ ಬಗ್ಗೆ ತಿಳಿಯುತ್ತಾ ಚಕಿತನಾಗತೊಡಗಿದೆ.

ನಮ್ಮಪ್ಪ ಹಳ್ಳಿಯ ತೋಟದ ಮನೆಯಲ್ಲಿ ಗಿಡಮೂಲಿಕೆ ವೈದ್ಯರಾಗಿದ್ದರು. ದಿನವೂ ಹತ್ತಾರು ಕುಟುಂಬಗಳು ಅವರಿಂದ ನಾಲಿಗೆ, ನಾಡಿಪರೀಕ್ಷೆ, ಮಾಹಿತಿಪತ್ರ ಬರೆದುಕೊಡುವಿಕೆ ಇತ್ಯಾದಿ ಶಾಸ್ತ್ರೀಯ ಕ್ರಮಗಳಿಂದ ರೋಗ ಪರೀಕ್ಷೆ ಮಾಡಿಸಿ ಕೊಳ್ಳುತ್ತಿದ್ದರು. ಎಲ್ಲರೂ ಕ್ಯೂನಲ್ಲಿ ಕೂತಿದ್ದು, ಬರಬೇಕಿತ್ತು. ಆ ವೇಳೆಗೆ, ನಮ್ಮಜ್ಜಿ ಕ್ಯೂ ಕೊನೆಯಲ್ಲಿದ್ದವರೊಂದಿಗೆ ಹರಟೆ ಹೊಡೆಯುವುದಕ್ಕಿಂತಲೂ- ಕೆದಕಿ, ಕೆದಕಿ ಕೇಳಿ ಉತ್ತರ ಪಡೆಯುವುದರಲ್ಲಿ ಹುಶಾರು.

‘ನಿಮ್ಮ ಹೆಸರೇನು, ಮದುವೆಯಾಗಿದೆಯಾ, ಮಕ್ಕಳೆಷ್ಟು-ಹೆಣ್ಣೆಷ್ಟುಗಂಡೆಷ್ಟು, ಅವರನ್ನು ಎಲ್ಲಿಗೆಲ್ಲಿಗೆ ಕೊಟ್ಟಿದೆ. ಎಲ್ಲಿಂದೆಲ್ಲಾ ಸೊಸೆಯರನ್ನು ತಂದಿದೆ. ಅಳಿಯನ ಸಂಬಳ ಎಷ್ಟು? ಗಿಂಬಳ ಎಷ್ಟು’ ಎಂದೆಲ್ಲಾ ಪ್ರಶ್ನೆಗಳಿಂದ ಕಾಡುತ್ತಿದ್ದರು. ಎಳೆಯ ನಾನು “ಅಜ್ಜಿ ನಿಮಗೆ ಬುದ್ಧಿಯಿಲ್ಲ, ಅಪರಿಚಿತರ ಬಳಿ ಈ ರೀತಿಯೆಲ್ಲಾ ಕೇಳುತ್ತಾ ಹೋದರೆ ಅವರಿಗೆಷ್ಟು ಬೇಜಾರಾದೀತೆಂದು” ಜೋರಾಗಿ ಕೇಳಿ ಬಿಟ್ಟಿದ್ದೆ.

‘ಬಾಯ್ಮುಚ್ಚಿ ಕೂತ್ಕೋ, ನಿನ್ನಪ್ಪನ ಅಮ್ಮ ನಾನು, ನೀನು ಶಾಲೆಗೆ ಹೋಗುತ್ತೀಯಾ, ಊರೆಲ್ಲಾರೊಂದು ಸವಾರಿ ಮಾಡುತ್ತೀಯಾ, ನಾನು ಮುದುಕಿ ಕೂತಲ್ಲೇ ಊರಿನ ಸುದ್ದಿ ತಿಳಿಯಬೇಡವೇ, ಬಂದವರನ್ನು ಕೇಳದೆಯೇ ಗೊತ್ತಾಗುವುದು ಹೇಗೆ?’ ಎಂದು ದಬಾಯಿಸಿಯೇ ಬಿಟ್ಟಿದ್ದರು. ಅಜ್ಜಿಯದು ನ್ಯೂಸ್‍ ಆನ್‍ಡಿಮಾಂಡ್. ಈಗ ಡಿಜಿಟಲ್‍ ಟೆಕ್ನಾಲಜಿ ನಮಗೆ ಬೇಕೋ, ಬೇಡವೋ, ಒಳ್ಳೆಯದು, ಕೆಟ್ಟದ್ದು ಎಲ್ಲವನ್ನೂ ನಮ್ಮ ಮುಂದೆ ಹೊತ್ತುಗೊತ್ತಿಲ್ಲದೆ ರಾಶಿ ಹಾಕುತ್ತಿದೆ.

ಅಪೂರ್ವ ಪ್ರಕೃತಿ ಮಡಿಲಲ್ಲಿ ಹುಟ್ಟಿ, ಬೆಳೆದ ನನಗೆ ದೇಶದ ಮೂಲೆಮೂಲೆಗಳಲ್ಲಿಯೂ ಸ್ಥಳೀಯವಾಗಿ ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸಿದ ಮಾಯಿಲಕೋಟೆಯಂತಹ ಸಮುದಾಯಗಳ ಬಗ್ಗೆ ಪ್ರೀತಿ, ಗೌರವಗಳು ಇದೆ, ಇರುತ್ತದೆ. ಅಸ್ಸಾಂ, ಹಿಮಾಚಲದಂಚಿನ ಹಲವು ಬೆಟ್ಟದೂರುಗಳಲ್ಲಿ ಕಾಲ ಕಳೆದುದೂ ನನ್ನ ಅನುಭವವನ್ನು ಶ್ರೀಮಂತಗೊಳಿಸಿದೆ. ಬದುಕಿನಲ್ಲಿ ತಂತ್ರಜ್ಞಾನ ಪ್ರಭಾವ, ಜಗದಗಲೀಕರಣದ ಒತ್ತಡಗಳ ಹಿನ್ನೆಲೆಯಲ್ಲಿ ಪರಿಸರದೊಂದಿಗೆ ಹೊಂದಾಣಿಕೆಯಿಂದ ಬದುಕಬೇಕಾದ ಅನಿವಾರ್ಯತೆ ಈಗ ಎದ್ದೆದ್ದುಕಾಣಿಸುತ್ತದೆ.

———————-

ಈಶ್ವರ ದೈತೋಟ

1ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆ. 1991ರಿಂದ 2011ರವರೆಗಿನ ಎರಡು ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯ ಕರ್ನಾಟಕದ ಫೌಂಡರ್ ಚೀಫ್ ಎಡಿಟರ್. ಮಣಿಪಾಲದ ಉದಯವಾಣಿ ರೆಸಿಡೆಂಟ್ ಎಡಿಟರ್, ಟೈಮ್ಸ್ ಆಫ್ ಇಂಡಿಯಾ (ಕ) ಎಡಿಟರ್, ಕನ್ನಡದ ಸೀನಿಯರ್ ಮೋಸ್ಟ್ ದೈನಿಕ ಸಂಯುಕ್ತ ಕರ್ನಾಟಕದ ಚೀಫ್ ಎಡಿಟರ್ ಹಾಗೂ ನೂತನ ವಾರಪತ್ರಿಕೆ ಚೀಫ್ ಎಡಿಟರ್ ಆಗಿ ಹೊಣೆಹೊತ್ತವರು.

ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಷನ್ನಿನಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಅನುಭವ. ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೇಜ್‌ಮೆಂಟ್‌ನಲ್ಲಿಯೂ ಅಪಾರ ಸಾಧನೆ. ಯುಜಿಸಿ ಮತ್ತು ಯೂನಿಸೆಫ್ ತರಬೇತಿ ಯೋಜನೆಗೆ ಡೆವಲಪ್‌ಮೆಂಟ್‌ ಕನ್ಸಲ್ಟೆಂಟ್ ಎಂದು ಮನ್ನಣೆ.

2015ರಲ್ಲಿ ಪ್ರತಿಷ್ಠಿತ ಟಿಎಸ್ಆರ್ ಪತ್ರಿಕೋದ್ಯಮ ಪ್ರಶಸ್ತಿ, ಮೂಡಬಿದ್ರೆಯ ನುಡಿಸಿರಿ ಪ್ರಶಸ್ತಿ, 2008ರಲ್ಲಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ, ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (2006). 2008ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್‌ನಿಂದ ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮೀಡಿಯಂ ಮತ್ತು ಪತ್ರಿಕೋದ್ಯಮಕ್ಕೆ ಅತಿ ದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತು ಅತ್ಯಂತ ಜನಪ್ರಿಯ ಮೀಡಿಯಾ ಪರ್ಸನ್ (ವೀಕ್ಷಕರ ಆಯ್ಕೆ) ಎಂಬೆರಡು ಪ್ರಶಸ್ತಿಗಳು. ವಾಯ್ಸ್ ಆಫ್ ಅಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಇಂಟರ್‌ನ್ಯಾಷನಲ್ ಜರ್ನಲ್‌ಗಳಿಗೂ ಲೇಖನ ಬರೆದಿದ್ದಾರೆ.

ಅಭ್ಯುದಯ ಪತ್ರಿಕೋದ್ಯಮ ಅವರ ನಿತ್ಯ ಜಪ. ಅಭ್ಯುದಯ ಸಂಬಂಧಿತ ಅನೇಕ ಡಾಕ್ಯುಮೆಂಟರಿಗಳನ್ನು, ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ. ಪತ್ರಿಕೋದ್ಯಮ ಮತ್ತಿತರ ವಿಷಯಗಳ ಬಗ್ಗೆ ಅವರು ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ 75ಕ್ಕೂ ಹೆಚ್ಚು.

Share

One Comment For "ಮಾಯಿಲಕೋಟೆ
ಈಶ್ವರ ದೈತೋಟ ಕಾಲಂ
"

 1. Shaila
  6th April 2017

  ನಿಮ್ಮ ಲೇಖನ ನನ್ನ ಬಾಲ್ಯವನ್ನು ನೆನಪಿಸಿತು. ಧನ್ಯವಾದಗಳು. ನನ್ನ ಕರಾವಳಿಯ ಆ ಕಾಡು, ಕಾಡು ದಾರಿಯಲ್ಲಿ ಶಾಲೆಗೆ ಹೋಗುತ್ತಿದ್ದ ಕ್ಷಣಗಳನ್ನು ಮತ್ತೆ ಜೀವಿಸಿದoತಾಯಿತು. ಚೇಪುಳ ಹಣ್ಣು, ಪೆಜಕಾಯಿ, ಪುನರ್ಪುಳಿ, ಕರoಡೆ ಕಾಯಿ ಮುoತಾದ ಬಾಲ್ಯದಲ್ಲಿ ಸವಿದ ಕಾಡು ಹಣ್ಣುಗಳ ಸ್ವಾದವನ್ನು ನಾಲಗೆ ಮರೆಯಲೊಲ್ಲದು. ಪ್ರಕೃತಿಯ ಮಡಿಲಲ್ಲಿ ಬಾಲ್ಯದ ಸುಖವುoಡ ನನಗೆ, ಟೀವಿಯಲ್ಲಷ್ಟೇ ದಟ್ಟ ಕಾಡನ್ನು ನೋಡಿರುವ,ಚೆರ್ರಿ, ಸ್ಟ್ರಾಬೆರಿ, ಪ್ಲಮ್ ಮುoತಾದ ವಿದೇಶಿ ಹಣ್ಣುಗಳ ರುಚಿಗೆ ಮನ ಸೋತಿರುವ ನನ್ನ ಮಗಳು, ಅವಳoತಹ ಇನ್ನಿತರ ಮಕ್ಕಳು ದುರಾದ್ರಷ್ಟವoತರು ಎoದೆನಿಸುತ್ತದೆ.

  Reply

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 4 days ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

 • 6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 1 week ago No comment

  ಕೈಯ ಕನ್ನಡಿ ಹಿಡಿದು…

        ಕವಿಸಾಲು       ಕಾಲವೊಂದಿತ್ತು… ಕೈಯ ಕನ್ನಡಿ ಹಿಡಿದು ಕುರುಳ ತಿದ್ದುವ ನೀರೆ ನಾನಾಗ.. ದಶಕಗಳ ಕಾಲ ಸಂದಿದೆ… ಈಗ, ಆ ಕನ್ನಡಿಯೂ ಇಲ್ಲ… ಆ ಚೆಲುವಿನ ಮೋಡಿಯೂ ಇಲ್ಲ.. ನೆರಿಗೆ ತುಂಬಿದ ಕೈ.. ನರೆಗೂದಲು ತುಂಬಿದ ಬೆಳ್ಳಿಬುಟ್ಟಿ ತಲೆ.. ಆಸರೆ ಬಯಸುವ ದೇಹ… ಪ್ರೀತಿಗಾಗಿ ಕಾತರಿಸುವ ಕಂಗಳು… ನಗುವ ಹುಡುಕಿ ಬಿರಿಯಲೆಳಸುವ ಬೊಚ್ಚು ಬಾಯಿ‌.. ‌ಹೃದಯದಾಳದಿಂದ ಬಂದರೂ ನಾಲಿಗೆಯಡಿಯಲ್ಲಿ ಹೇಳಬಯಸುವ ನುಡಿಗಳು ...

 • 1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...


Editor's Wall

 • 15 February 2018
  6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  1 week ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  1 week ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...

 • 08 February 2018
  2 weeks ago No comment

  ಇದು ಕ್ರಾಂತಿ ಪರ್ವ

                    ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ.   ಮೊನ್ನೆ ಮನ್ಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ) ನಿರ್ದೇಶನದ ‘ಹರಿವು’ ಚಿತ್ರ ನೋಡುವಾಗ ಅದೆಷ್ಟು ಸಲ ಕನ್ನಡಕ ತೆಗೆದು ಕಣ್ಣೊರೆಸಿಕೊಂಡೆನೋ! ಆಶಾ ಬೆನಕಪ್ಪ ಅವರು ಪ್ರಜಾವಾಣಿಯಲ್ಲಿ ಬರೆದ ...