Share

ಬಿದ್ದಾಗಲೆಲ್ಲಾ ಎತ್ತಿ ಎಚ್ಚರಿಸಿದ ಅಪ್ಪನೆಂಬ ಧೀಮಂತ
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

 • Page Views 174
 •  

   

   

   

   

   

   

   

   

  ಬಾಲ್ಯ ಬಂಗಾರ

   

   

  ಬಾಲ್ಯದ ಬಿಂಬಗಳು ಜೀವರಸವೂಡುವ ಪ್ರತಿಮೆಗಳು. ತಂದೆ ತಾಯಿಯೆಂದರೆ ಭಯಮಿಶ್ರಿತ ಪ್ರೀತಿ. ಅಪ್ಪನೆದುರು ಎದೆ ಸೆಟೆಸಿ ಮಗುವಾಗಿದ್ದಾಗ ಹಠ ಮಾಡಿ ಕಾಡುತ್ತಿದ್ದ ಅದೇ ನಾನು ಕಿಶೋರಾವಸ್ಥೆಗೆ ಬಂದಂತೆ ಬಾಲ್ಯದ ಹುಡುಗಾಟ ಅಲ್ಪಸ್ವಲ್ಪವೇ ಕಣ್ಮರೆಯಾಗಿತ್ತು. ತಂದೆಯೆದುರು ತಲೆಎತ್ತಿ ಮಾತನಾಡಲು ಆಗದ ಸಂಕೋಚ ತಾನೇತಾನಾಗಿ ಹುಡುಗಿಯರಲ್ಲಿ ಮೂಡುತ್ತದೆ. ಅದಕ್ಕೂ ಮುಖ್ಯ ಕಾರಣವೆಂದರೆ ಆ ಕಾಲದ ಸಂಸ್ಕೃತಿ. ತಂದೆ ಎಂಬ ಮನೆಯ ಯಜಮಾನ ಆತನ ಗೌರವ ಅದನ್ನು ಸಂಭಾಳಿಸುವ ತಾಯಿ ಮಕ್ಕಳಿಗೆ ತಂದೆಯ ಬಗ್ಗೆ ಭಯ ಪ್ರೀತಿ, ಗೌರವ ಮೂಡುವಂತೆ ರೀತಿ ನೀತಿಗಳ ಮಕ್ಕಳಿಗೆ ಗೊತ್ತಿಲ್ಲದೇ ಬೆಳೆಸುತ್ತಿದ್ದರು. ನನ್ನಮ್ಮ ಆ ಶಿಸ್ತಿನ ಗೌರವ ತಂದೆಯ ಮೇಲಿರಲಿ ಎಂಬಂತೆ ಅಪ್ಪನೆಂದರೆ ಹೆದರಿಕೆ ಇರುವಂತೆ ಯಾವಾಗಲೂ ಅವರ ಪರ ವಹಿಸಿ ತಂದೆಯೆಂದರೆ ಹಾಗೆ ಇರಬೇಕು ಎಂಬ ತಮ್ಮದೇ ಕಾನೂನು ಮಾಡಿದಂತಿತ್ತು. ಕೆಲವೊಮ್ಮೆ ತಂದೆಯೊಂದಿಗೆ ಚರ್ಚೆ ವಿಚಾರಗಳ ನೇರ ಸಂವಹನವಾಗುತ್ತಿದ್ದರೆ ಮತ್ತೆ ಕೆಲವೊಮ್ಮೆ ಅದು ಬಿಸಿ ತುಪ್ಪದ ಸಮಸ್ಯೆಯಾಗಿದ್ದರೆ ತಾಯಿಯ ಮೂಲಕವೇ ರವಾನೆಯಾಗಬೇಕಿತ್ತು. ಅದೇನೋ ಅಂಜಿಕೆ. ಅಮ್ಮನಲ್ಲಿ ಮಾತಾಡಿದಂತೆ ಅವರಲ್ಲಿ ನಾವುಗಳು ಗಂಡಾಗಲಿ ಹೆಣ್ಣುಮಕ್ಕಳಾಗಲಿ ತೀರಾ ಸಲಿಗೆಯಿಂದ ಮಾತಾಡುತ್ತಿರಲಿಲ್ಲ. ಅದಕ್ಕೇ ಅಪ್ಪ ಎಂದರೆ ಆಕಾಶ ಎಂಬಂತೆ ಅವರಿದ್ದರು.

  ಆ ಸಂಗತಿ ನನಗೆ ನೆನಪಿಲ್ಲ. ನಾನಾಗ ತೀರಾ ಎಳಸು ಬಾಲೆಯಂತೆ. ಆದರೆ ಆ ಘಟನೆಯ ಚಿತ್ರಣ ಮನೆಯ ಮಾತಿನ ಜಗುಲಿಯಲ್ಲಿ ಆಗಾಗ ನಡೆಯುತ್ತಲೇ ಇರುತ್ತಿತ್ತು. ಶಾಲೆ ಕಾಲೇಜುಗಳಿಗೆ ರಜೆ ಬಿದ್ದಾಗಲೆಲ್ಲಾ ಹಳೆಯ ನೆನಪುಗಳ ತೆಗೆದು ಅವುಗಳು ವಿಮರ್ಶೆ ಮಾಡಿ, ಹಾಸ್ಯ ಚಟಾಕಿಗಳ ಹಾರಿಸುವ ಸಂಪ್ರದಾಯ ನಮ್ಮ ಮನೆಯಲ್ಲಿತ್ತು. ಆಗಾಗ ನೆನಪಿನ ದೋಣಿಯಲ್ಲಿ ಈಗಲೂ ಪಯಣಿಗರಾಗುವುದು ಹಳ್ಳಿಯಲ್ಲಿ ಅಪರೂಪವಲ್ಲ.

  ನನ್ನ ದೊಡ್ಡಣ್ಣನ ಆಟಾಟೋಪ. ಆತ ಸಣ್ಣವನಿದ್ದಾಗ ತಂದೆಯ ಮಾತು ಮೀರಿ ಬೇಡವೆಂದು ಹೇಳಿದರೂ ಕಿವಿಯ ಮೇಲೆ ಹಾಕಿಕೊಳ್ಳದೇ ಗೆಳೆಯರೊಂದಿಗೆ ಆಡಲು ಹೋಗಿದ್ದನಂತೆ. ಅವನ ದಾರಿಯ ಕಾಯುತ್ತ ಕುಳಿತ ತಂದೆ ಅವನಿಗಾಗೇ ಒಂದು ಚಿಗಳಿ ಗೂಡು ತಂದು ಲೋಟ ಬೆಲ್ಲ ಎಲ್ಲ ಸಿದ್ದ ಮಾಡಿ ಇಟ್ಟಿದ್ದರಂತೆ. ಕೋಪ ಕರಗದ ತಂದೆ ಆ ದಿನ ಜಮದಗ್ನಿಯ ಅಪರಾವತಾರವೇ ಆಗಿದ್ದರು ಎಂದು ತಾಯಿ ಹೇಳುತ್ತಿದ್ದರೆ, ನಾವು ಹೆಣ್ಣುಮಕ್ಕಳು ಕುಳಿತಲ್ಲೇ ಬೆವರುತ್ತಿದ್ದೆವು. ಮನೆಗೆ ಬಂದ ಮಗನ ಕರೆದು ಹಿಡಿದು ಮೈಗೆಲ್ಲ ಆಲಿಮನೆ ಬೆಲ್ಲ ಸವರಿ ಮೇಲೆ ಗೂಡಿನಿಂದ ತಂದ ಚಿಗಳಿಗಳ ಸುರಿದಿದ್ದರಂತೆ. ಆತ ಛೀಳ್ ಗುಡುವ ಪರಿ ನೋಡಿಯೂ ಆತನ ಬಿಡಿಸಿರಲಿಲ್ಲವಂತೆ. ತಾಯಿಗೂ ಹೆದರಿಸಿ ಸುಮ್ಮನಿರಿಸಿದ್ದರಂತೆ. ಮುಂದೆಂದೂ ಆತ ಈ ವರ್ತನೆ ತೋರಬಾರದೆನ್ನುವ ಕಾರಣದಿಂದ. ಆತ ಅದನ್ನು ಮುಂದೆ ನಿಲ್ಲಿಸಿದನಾದರೂ ಬದುಕಿನುದ್ದಕ್ಕೂ ಆತ ತಾಯಿಯ ಪ್ರೀತಿಸಿದಂತೆ ಅಪ್ಪನನ್ನು ಪ್ರೀತಿಸಲಿಲ್ಲ. ಅವರೆದುರು ಆತ ಹೆಚ್ಚು ಮಾತಾಡುತ್ತಿರಲಿಲ್ಲ.

  ಎರಡನೇ ಅಣ್ಣನಿಗೆ ವಿಪರೀತ ಸೈಕಲ್ಲ ಹುಚ್ಚು. ತನಗೆ ಬೇಕೆ ಬೇಕೆಂದು ಹಟ ಮಾಡಿ ಇಲ್ಲದಿದ್ದರೆ ಶಾಲೆಗೆ ಹೋಗುವುದಿಲ್ಲವೆಂದೂ ರಚ್ಚು ಹಿಡಿದು ರಂಪ ಮಾಡಿದ್ದ. ಆಗ ತಂದೆ ಅವನಿಗೆ ಬಾಸುಂಡೆ ಬರುವಂತೆ ಬಾರಿಸಿದ್ದರು. ಮತ್ತೆ ತಮ್ಮ ಕೈಯಾರೆ ಮೈಮೇಲೆ ಎದ್ದ ಕೋಲಿನ ಹೊಡೆತದ ಉಬ್ಬಿದ ಭಾಗಗಳಿಗೆಲ್ಲ ಎಣ್ಣೆ ಹಚ್ಚಿ ಉಜ್ಜಿದ್ದರು.

  ಆದರೆ ಇದ್ದುದ್ದರಲ್ಲಿ ಸ್ವಲ್ಪ ನಾಜೂಕಿನ ಕಿರಿಯಣ್ಣ ಮಾತ್ರ ತಂದೆಯ ಮಾತುಗಳ ಚಾಚೂ ತಪ್ಪದೇ ಪಾಲಿಸುತ್ತಿದ್ದ. ಅವರೆಂದರೆ ಅತಿಯಾದ ಗೌರವ ಹೊಂದಿದ ಮುದ್ದಿನ ಮಗನಾಗಿದ್ದ. ಆದರೆ ತಂದೆ ಆತನಿಗೆ ಎಂದೂ ಗದರುತ್ತಿರಲಿಲ್ಲ. ಆತ ತುಂಬಾ ಶಾಂತ ಸ್ವಭಾವದವನಾಗಿದ್ದ. ಅದೊಂದು ದೋಷವೆಂದರೆ ಆತನಿಗೆ ಗಣಿತ ಇಂಗ್ಲೀಷುಗಳು ಕಬ್ಬಿಣದ ಕಡಲೆಗಳಾಗಿದ್ದವು. ಸ್ವಾತಂತ್ರ್ಯ ಬಂದ ಆದೇ ಕಾಲಕ್ಕೆ ಎಸ್‍ಎಸ್ ಸಿ ಬರೆದು ಉತ್ತೀರ್ಣರಾಗಿದ್ದ ತಂದೆ ಬಹಳ ಬುದ್ಧಿವಂತರಾಗಿದ್ದರು. ಅಪರೂಪಕ್ಕೆ ಮಕ್ಕಳಿಗೆ ಪ್ರಶ್ನೆಗಳ ಕೇಳಿ ಅವರ ಸಾಮರ್ಥ್ಯ ಪರೀಕ್ಷಿಸುತ್ತಿದ್ದರು. ಅದೊಮ್ಮೆ ಕಿರಿಯಣ್ಣನಿಗೆ ತಂದೆ ಗಣಿತ ಹೇಳಿಕೊಡಲು ಹೋಗಿ ಮೃದು ಸ್ವಭಾವದ ಆತ ಹಿಗ್ಗಾಮುಗ್ಗಾ ಬಸವಳಿದು ಸುಸ್ತಾಗಿ ನೊಂದಿದ್ದ. ಮತ್ತೆ ಅದೇ ತಂದೆ ಅವನ ರಮಿಸಿ ಮುದ್ದಿಸಿದ್ದರು.

  ಇದು ಅವರು ಗಂಡುಮಕ್ಕಳ ಹದ್ದುಬಸ್ತಿನಲ್ಲಿ ಬೆಳೆಸಿದ ಬಗೆಯಾದರೆ, ಅವರ ಏಳ್ಗೆ ಸಾಮರ್ಥ್ಯ ಕಂಡು ಖುಷಿಪಟ್ಟ ಸಂಗತಿಗಳೂ ಇವೆ. ಗದ್ದೆಕೊಯ್ಲು ಮುಗಿದ ನಂತರ ಕೆಯ್‍ನ್ನು[ತೆನೆಭರಿತ ಹುಲ್ಲು] ಸಂಪೂರ್ಣ ಮಳೆಗಾಲ ನಿಲ್ಲುವ ತನಕ ಕುತ್ತರಿಗಳಲ್ಲಿ ಪೇರಿಸಿಟ್ಟು ಅದೆಲ್ಲಾ ಮುಗಿದ ತರುವಾಯ ಭತ್ತ ಬಡಿಯುವ ಕೆಲಸ. ಸುಗ್ಗಿಯ ಕಾಲದ ಸಮಯ. ಹೊಸ ಭತ್ತ ಅಕ್ಕಿ ಮಾಡುವ ಕಾಲ. ಸಾಕರಿ ಕಟ್ಟು ಕಟ್ಟುವ, ಕುತ್ತರಿ ಬಡಿಯುವ, ಎತ್ತು ಕೋಣಗಳ ಗಾಣಕ್ಕೆಕಟ್ಟಿ ಒಣ ಹುಲ್ಲು ತುಳಿಸಿ ಉಕ್ಕಲಿ ಮಾಡುವ ಎಲ್ಲ ಕೆಲಸವೂ ಒಂದಾದ ಮೇಲೊಂದು ಸಾಗುತ್ತಿತ್ತು. ಕುತ್ತರಿಯ ಕಣ ನಮಗೆ ಅಡಗುವ ಆಟದ ಸ್ಥಳವೂ ಆಗಿರುತ್ತಿತ್ತು. ಆ ವರ್ಷ ನನ್ನ ದೊಡ್ಡಣ್ಣ ಒಬ್ಬನೇ ಒಂದು ಕುತ್ತರಿಯ ಬೆಳಿಗ್ಗೆಯಿಂದ ಸಂಜೆಯವರೆಗೆ ಒಬ್ಬನೇ ಬಡಿದು ಮುಗಿಸಿ ಆಳುಗಳಿಗೆ ಕೊಡುವ ಕಾಸನ್ನು ತಾನೇ ಪಡೆದಿದ್ದ. ಸಿಕ್ಕಾಪಟ್ಟೆ ಸುಸ್ತಾಗಿ ಮಲಗಿದ್ದ ಅವನಿಗೆ ಅಮ್ಮ ಆರೈಕೆ ಮಾಡಿದ್ದರು. ಅಂತಹ ಹುಂಬ ಕೆಲಸಗಳ ಮಾಡುವುದು ಆ ಕಾಲಕ್ಕೆ ಮೋಜು ಆಗಿತ್ತು. ಆದರೆ ತಂದೆ ಖುಷಿಗೊಂಡಿದ್ದರು. ಮಗರಾಯ ಇಡೀ ಭತ್ತದ ಕುತ್ತರಿ ಬಡಿದು ಬಾಹುಬಲಿಯಾದ ಸಂಗತಿ ಅವರಿಗೆ ನಾಲ್ಕಾರು ಜನರಲ್ಲಿ ಹೇಳಿಕೊಂಡು ಹೆಮ್ಮೆ ಪಡುವ ಸಂಗತಿಯಾಗಿತ್ತಲ್ಲ ಅದಕ್ಕೆ.

  ಅದು ನನ್ನ ಎರಡನೇ ಅಣ್ಣ ಎತ್ತರದಲ್ಲಿ ಸ್ವಲ್ಪ ಕುಳ್ಳಗಿದ್ದ. ವಿದ್ಯೆಯಲ್ಲಿ ಅಷ್ಟೊಂದು ಬುದ್ಧಿವಂತನಾಗಿರಲಿಲ್ಲ. ಆದರೆ ಬಲಿಷ್ಠ ದೇಹದ ಆತ ಕ್ವಿಂಟಾಲು ಭಾರದ ಭತ್ತದ ಚೀಲಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ. ಇದು ಕೂಡಾ ಅವರಿಗೆ ಬಹಳ ಗರ್ವದ ಸಂಗತಿಯಾಗಿತ್ತು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರ ಏಳ್ಗೆಗಾಗಿ ಸತತ ಚಿಂತಿಸುತ್ತಾ, ಕಾರ್ಯಪ್ರವೃತ್ತರಾಗುತ್ತಿದ್ದ ತಂದೆ ಮಕ್ಕಳ ಸಣ್ಣ ಪುಟ್ಟ ಸಾಧನೆಯನ್ನೂ ಸಿಕ್ಕ ಗೆಳೆಯರಲ್ಲಿ ಇಲ್ಲವೇ ಸಂಬಂಧಿಗಳಲ್ಲಿ ಹೇಳಿಕೊಂಡು ಮೆರೆಯುವ ಸ್ವಭಾವ ಅವರದಾಗಿತ್ತು. ಸಣ್ಣ ಅಣ್ಣ ಕಾಲೇಜಿನ ಕೊನೆಯ ವರ್ಷದಲ್ಲಿದ್ದಾಗ ತನ್ನ ಮೇಜರ್ ವಿಷಯದಲ್ಲಿ ಕಾಲೇಜಿಗೇ ಅತಿ ಹೆಚ್ಚು ಅಂಕ ಗಳಿಸಿದ್ದ. ಅದು ಅವರಿಗೆ ತಮ್ಮದೇ ವಿಜಯವೆಂಬ ಭಾವ ತಂದುಕೊಟ್ಟಿತ್ತು. ಅದನ್ನೆಷ್ಟು ಜನರಲ್ಲಿ ಕೊಚ್ಚಿಕೊಂಡಿದ್ದರೋ ಗೊತ್ತಿಲ್ಲ. ನನ್ನಮ್ಮ ಆಗಾಗ ಅವರಿಗೆ ಈ ವಿಷಯದಲ್ಲಿ ತಾಕೀತು ಮಾಡುತ್ತಿದ್ದರು. ಅಷ್ಟೆಲ್ಲಾ ಗರ್ವ ಪಡದಿರುವಂತೆ ಹೇಳುತ್ತಿದ್ದರೂ ನಿಷ್ಕಪಟ ಮನುಷ್ಯ ತನಗನ್ನಿಸಿದ್ದನ್ನು ಎಂದೂ ಯಾವ ಕಾರಣಕ್ಕೂ ಮಾಡದೆ ಬಿಡುತ್ತಿರಲಿಲ್ಲ.

  ತಂದೆ ದಿನವೂ ನಾಲ್ಕು ಸಲ ಚಹಾ ಕುಡಿಯುತ್ತಿದ್ದರು. ಮುಂಜಾನೆ ನಂತರ ಹನ್ನೊಂದು ಗಂಟೆಗೆ ಮತ್ತೊಮ್ಮೆ ಚಹಾ ಬೇಕಿತ್ತು. ಶಾಲೆಗಳಿಲ್ಲದ ದಿನ ಹೆಣ್ಣುಮಕ್ಕಳು ಮಾಡಿಕೊಟ್ಟರೆ ಉಳಿದ ದಿನ ಅಮ್ಮ ಇಲ್ಲದಿದ್ದರೆ ಅವರೇನಾದರೂ ತೋಟಕ್ಕೆ ಹೊರಟರೆ ತಾವೇ ಮಾಡಿಕೊಂಡು ಕುಡಿಯುತ್ತಿದ್ದರು. ಇನ್ನು ಸಾಯಂಕಾಲ ಎರಡು ಬಾರಿ ಚಹಾ ಕುಡಿಯುತಿದ್ದ ಅವರು ಕೊಟ್ಟ ತಿಂಡಿಯ ಸರಿ ಅರ್ಧ ಯಾವಾಗಲೂ ನನಗಾಗೇ ಇಡುತ್ತಿದ್ದರು. ಇನ್ನು ಹೆಂಡತಿಯೆಂದರೆ ಅತಿಯಾಗಿ ಪ್ರೀತಿಸುವ ತಂದೆ ಅಮ್ಮನ ಇಷ್ಟದ ತಿಂಡಿ ತಿನಿಸುಗಳ ಪಟ್ಟಿಯೇ ಅವರಲ್ಲಿತ್ತು. ಆಗಾಗ ನಮಗೆಲ್ಲ ಒಂದೇ ರೀತಿಯ ತಿಂಡಿಗಳ ತಂದರೆ ನನ್ನಮ್ಮನಿಗಾಗಿಯೇ ಅವರ ಆಯ್ಕೆಯ ಆಹಾರ ತಂದುಕೊಡುತ್ತಿದ್ದರು. ಆಗೆಲ್ಲ ನಾವು ತಂದೆಯೊಂದಿಗೆ ಹುಸಿಮುನಿಸು ತೋರುತ್ತಿದ್ದೆವು. ಒಳಗೊಳಗೆ ಸಂತಸವೂ ಆಗುತ್ತಿತ್ತು.

  ಹೀಗೆ ಬದುಕಿಗೆ ಬೇಕಾದ ಹಲವು ಮುಖಗಳಾದ ಪ್ರೀತಿ, ವಿಶ್ವಾಸ ಧೈರ್ಯ ಸ್ಥೈರ್ಯಗಳ ಆಶಾವಾದವನ್ನು ಬಳುವಳಿಯಾಗಿ ನೀಡಿದ ತಂದೆ ಇಂದಿಲ್ಲ, ಅವರ ನೆನಪು ಇದೆ. ಅವರ ಮರಣದ ನಂತರ ಮನೆ ಗುರುವಿಲ್ಲದ ಮಠದಂತೆ ಹಲವು ವರ್ಷ ಅನ್ನಿಸಿದ್ದು, ಕ್ರಮೇಣ ಪ್ರಕೃತಿಯ ನಿಯಮದಂತೆ ಬದುಕಿನ ದಾರಿಗೆ ನಾವೆಲ್ಲ ತೆರೆದುಕೊಳ್ಳುತ್ತ ನಡೆದರೂ ನಮ್ಮ ಕೊನೆಯ ಕ್ಷಣದವರೆಗೂ ನೆನೆಪು ಅಜರಾಮರ. “ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ” ಎಂದು ಸಂಸ್ಕೃತ ಸುಭಾಷಿತ ಹೇಳುವಂತೆ ನನ್ನ ತಂದೆಯೂ ಇದ್ದರೆಂಬುದೇ ನನ್ನ ಹೆಮ್ಮೆ.

  —————

  ನಾಗರೇಖಾ ಗಾಂವಕರ

  ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲಭಾಷಾ ಉಪನ್ಯಾಸಕಿ. ಕಥೆ, ಕವನಗಳು, ಲೇಖನಗಳು, ವಿಮರ್ಶಾ ಬರಹಗಳ ಮೂಲಕ ಪರಿಚಿತರು. ‘ಏಣಿ’, ‘ಪದಗಳೊಂದಿಗೆ ನಾನು’ ನಾಗರೇಖಾ ಅವರ ಪ್ರಕಟಿತ ಕವನ ಸಂಕಲನಗಳು.

  Share

  Related Post

  Related Blogpost

  2 Comments For "ಬಿದ್ದಾಗಲೆಲ್ಲಾ ಎತ್ತಿ ಎಚ್ಚರಿಸಿದ ಅಪ್ಪನೆಂಬ ಧೀಮಂತ
  ಬಾಲ್ಯ ಬಂಗಾರ | ನಾಗರೇಖಾ ಗಾಂವಕರ
  "

  1. nagraj Harapanahalli
   20th June 2017

   ಬಾಲ್ಯವನ್ನು ಸಮರ್ಥವಾಗಿ ಕಟ್ಟಿಕೊಡುವ ನಾಗರೇಖಾ ಅಪ್ಪನ ನೆನಪುಗಳನ್ನು ಹೆಕ್ಕಿದ್ದಾರೆ. ಹೆಣ್ಣು ಮಕ್ಕಳಿಗೆ ಬಾಲ್ಯ ಪ್ರಬಲವಾಗಿ ನೆನಪು ದಟ್ಟವಾಗಿರುವಂತೆ ಕಾಣುತ್ತದೆ. ಈ ಬರಹ ಮೇಲಿನ ಮಾತನ್ನು ಪುಷ್ಠಿಕರಿಸುತ್ತದೆ.

   Reply
  2. sanjay p
   21st June 2017

   touching….

   Reply

  Leave a comment

  Your email address will not be published. Required fields are marked *

  Recent Posts More

  • 4 days ago No comment

   ಚರಿತ್ರೆಯ ಚಹರೆಯಲಿ ಚಿಗುರೆಲೆಗಳ ನಡಿಗೆ

   1 ನಿನ್ನುಸಿರಲಿ ಅದೆಂತ ರಕ್ತ ಕಂಡಿದ್ದರು ತಮ್ಮ ಮೈಯೊಳಗೆ ಸ್ವಲ್ಪ ಇಣುಕಿದರೂ ಸಾಕಿತ್ತು ಶುಭ್ರತೆಗೆ ನೆಲೆಯಾದ ನಿನ್ನುಡಿಯ ಮಮತೆ ಅರಿಯದ ಗಾವಿಲರು ಬೆನ್ನಿಗೆ ತೂಪಾಕಿ ಹಿಡಿದು ಮನುಷ್ಯತ್ವ ಕಳಚಿಕೊಂಡರು ನಿನ್ನ ತೆಕ್ಕೆಯೊಳಗೆ ಸ್ವಲ್ಪ ಅಣಿಯಾದರೂ ಬೋಧಿವೃಕ್ಷದ ಜೋಗುಳದ ಸೂಪ್ತ ತಾಣ ಗೋಚರಿಸುತ್ತಿತ್ತು ಇರುಳ ಮೋಡಿತನ ಬಯಲುಗೊಳಿಸುವ ಅಸಂಖ್ಯ ನಕ್ಷತ್ರದ ನಾಡಿಗಳಿರುವಾಗ ಮಿಥ್ಯದ ಬೆನ್ನೇರಿ ಸಾಲುದೀಪದ ನಡಿಗೆ ಅಳಿಸಲು ಹೇಗೆ ಸಾಧ್ಯ! 2 ನಿನ್ನ ಎದೆಯೊಳಗೆ ಅದೆಂಥ ಎದೆಗಾರಿಕೆ ಜಗದ ...

  • 5 days ago No comment

   ಗೌರಿ : ದ್ವಿಪದಿಗಳು

   1 ನಾನು ಸಿಗರೇಟು ಸೇದುತ್ತೇನೆ ಕುಡಿಯುತ್ತೇನೆ ಏನೀವಾಗ? ನಿನ್ನವರ ಹಾಗೆ ಮನುಷ್ಯರ ರಕ್ತ ನಾನೆಂದಿಗೂ ಕುಡಿಯಲಾರೆ 2 ಯಾಕೋ ಆ ಶವದ ತುಟಿಗಳ ಮೇಲೆ ನಗು ಕಾಣುತ್ತಿಲ್ಲ? ಇರಿದ ಹತಾರದ ಮೇಲೂ ಶತ್ರುವಿನ ಬೆರಳಗುರುತು ಕಾಣುತ್ತಿಲ್ಲ..! 3 ಅವಳು ಹನಿಯಾಗಿದ್ದಳು ಗುಂಡಿಕ್ಕಿದರು ಸಾಗರವಾದಳು 4 ಕಿಡಿಯನ್ನು ನಂದಿಸಲು ನೋಡಿದರು ಗೆಳತಿ ಬೆಳಕಿನ ಹೊನಲಾಗಿ ಬಿಟ್ಟಳು 5 ಬಂದೂಕು ಗುಬ್ಬಿಗಳ ಗೂಡು ಹುಡುಕಿಕೊಂಡು ಹೋಗಿ ಗುಂಡಿಕ್ಕತೊಡಗಿತು ನಾವು ಬಂದೂಕಿನ ನಳಿಕೆಯಲ್ಲಿ ...

  • 6 days ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 7 days ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 week ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help