Share

ಪ್ರಶ್ನೋತ್ತರ ಮಾಲಿಕೆ
ಪ್ರಸಾದ್ ನಾಯ್ಕ್ ಕಾಲಂ

 • Page Views 190
 • ದೊಂದು ಅಕ್ಬರ್-ಬೀರಬಲ್ ಕಥೆ.

  ಆಸ್ಥಾನದಲ್ಲಿ ಬೀರಬಲ್ಲನ ಖ್ಯಾತಿಯಿಂದ ಅಸಮಾಧಾನಗೊಂಡು ಒಳಗೊಳಗೇ ಕುದಿಯುತ್ತಿದ್ದ ಕೆಲ ಮಂತ್ರಿಗಳು ಅದ್ಯಾಕೆ ಅವನೆಂದರೆ ನಿಮಗಷ್ಟು ಪ್ರೀತಿ ಎಂದು ಒಮ್ಮೆ ಅಕ್ಬರನಲ್ಲಿ ಕೇಳಿದರಂತೆ. ಈ ಪ್ರಶ್ನೆಯನ್ನು ಕೇಳಿದ ಅಕ್ಬರ ಬಾದಶಹ ನಗುತ್ತಾ, “ಯಾಕೆಂದು ನಿಮಗೆ ಹೇಳುತ್ತೇನೆ, ಆದರೆ ಅದಕ್ಕೆ ಮೊದಲು ಈ ಪ್ರಶ್ನೆಗೆ ಉತ್ತರವನ್ನು ಪಡೆದುಕೊಂಡು ಬನ್ನಿ” ಎಂದನಂತೆ. ರಾಜ್ಯದ ಇಂತಿಪ್ಪ ಬೀದಿಯಲ್ಲಿ ಇಂತಿಪ್ಪ ರೈತನೊಬ್ಬ ಏನೋ ನಷ್ಟ ಅನುಭವಿಸಿದ್ದಾನಂತೆ. ಆ ನಷ್ಟ ಎಷ್ಟು ಎಂದು ಕೇಳಿಕೊಂಡು ಬಂದು ನನಗೆ ತಿಳಿಸಿ ಎಂದಿದ್ದ ಅಕ್ಬರ್. ಆ ಮಂತ್ರಿಗೆ ಈ ಕೆಲಸಕ್ಕಾಗಿ ನಾಲ್ಕೈದು ದಿನಗಳ ಕಾಲಾವಕಾಶವನ್ನೂ ಕೊಡಲಾಯಿತಂತೆ. ಕಾಲಾವಕಾಶವು ಮುಗಿದ ನಂತರ ಆ ಮಂತ್ರಿಮಹೋದಯನು ಅಕ್ಬರನ ಬಳಿ ಬಂದು ಇಷ್ಟಿಷ್ಟು ನಷ್ಟವಂತೆ ಮಹಾಪ್ರಭು ಎಂದು ಲೆಕ್ಕ ಒಪ್ಪಿಸಿದನಂತೆ.

  ಆಗ ಅಕ್ಬರ್ ಹೀಗೆಂದು ಹೇಳುತ್ತಾನೆ: “ಈ ಪ್ರಶ್ನೆಯನ್ನು ನಾನು ಬೀರಬಲ್ಲನಿಗೂ ಕೇಳಿದ್ದೆ. ಅವನೂ ನಾಲ್ಕೈದು ದಿನಗಳ ನಂತರ ಇದೇ ಉತ್ತರದೊಂದಿಗೆ ಬಂದಿದ್ದ. ಆದರೆ ವಿಷಯವು ಅಷ್ಟೇ ಆಗಿರಲಿಲ್ಲ. ನಷ್ಟ ಯಾಕಾಯಿತು, ಇದೇನು ನಿತ್ಯದ ಮಾತೇ ಅಥವಾ ಅಪರೂಪದ್ದೇ, ಜುಜುಬಿ ನಷ್ಟವೇ ಅಥವಾ ಮಹಾನಷ್ಟವೇ, ಇಂಥಾ ನಷ್ಟವು ಮುಂದೆಯೂ ನಡೆಯದಂತೆ ಎಚ್ಚರ ವಹಿಸಬಹುದೇ… ಇತ್ಯಾದಿ ಹತ್ತಾರು ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಂಡು ಬಂದಿದ್ದ. ನಿಮ್ಮಬ್ಬರ ಉತ್ತರವೂ ಒಂದೇ ಆದರೂ ಅವುಗಳನ್ನು ಪ್ರಸ್ತುತಪಡಿಸುವ ವಿಧಾನದಲ್ಲಿ ಅಜಗಜಾಂತರವಿದೆ. ನಿಮಗೂ ಬೀರಬಲ್ಲನಿಗೂ ಇದೇ ವ್ಯತ್ಯಾಸ”.

  ಅಕ್ಬರನ ಮಾತನ್ನು ಕೇಳಿದ ಆ ಮಂತ್ರಿ ತಲೆದೂಗಿದನಂತೆ.

  *********

  ನಾನು ಈ ಕಥೆಯನ್ನು ಓದಿದ್ದು ಸಂದರ್ಶನಗಳು, ಪ್ರಶ್ನೋತ್ತರಗಳು, ಪ್ರೆಸೆಂಟೇಷನ್… ಇತ್ಯಾದಿಗಳ ಗಂಧಗಾಳಿಯೂ ಇರದಿದ್ದ ನನ್ನ ಬಾಲ್ಯದ ಕಾಲದಲ್ಲಿ. ಸದ್ಯಕ್ಕಂತೂ ಏನು ಮಾತನಾಡಬೇಕು ಎಂಬುದರ ಜೊತೆಗೇ ಎಷ್ಟು ಮತ್ತು ಹೇಗೆ ಮಾತನಾಡಬೇಕು ಎಂದು ನಿರ್ದಿಷ್ಟವಾಗಿ ಪಟ್ಟಿಮಾಡುವ ಕಾಲದಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ನೋಡಿದರೆ ಪ್ರಶ್ನೆಯನ್ನು ಕೇಳುವ ಅಕ್ಬರ್ ಶುದ್ಧ ಕಾರ್ಪೊರೇಟ್ ಬಾಸ್ ನಂತೆ ಕಂಡರೆ ಉತ್ತರಿಸುವ ಚಾತುರ್ಯವನ್ನು ಹೊಂದಿರುವ ಬೀರಬಲ್ ಬೆನ್ನುಬೆನ್ನಿಗೆ ಪ್ರಮೋಷನ್ನುಗಳನ್ನು ಪಡೆಯಲು ಯೋಗ್ಯನಾಗಿರುವ ಚಾಣಾಕ್ಷ ಉದ್ಯೋಗಿಯಂತೆ ಕಾಣುತ್ತಾನೆ. ವ್ಯವಸ್ಥೆ ಎಂದ ಮೇಲೆ ಇವರಿಬ್ಬರೂ ಇರಲೇಬೇಕು ಅನ್ನಿ. ಆದರೆ ಘಟನೆಗಳು ರಸವತ್ತಾಗುವುದು ಇಬ್ಬರೂ ಕೂಡ ಮಹಾಚಾಣಾಕ್ಷರಾಗಿದ್ದಾಗಲೇ! ತುಳುವಿನಲ್ಲಿ ‘ಒರಿಯರ್ದೊರಿ ಅಸಲ್’ (ಒಬ್ಬರಿಗಿಂತ ಒಬ್ಬರು ಚಾಣಾಕ್ಷರು) ಎಂದು ಹೇಳುವಂತೆ.

  ಪ್ರಶ್ನೋತ್ತರಗಳ ಗುಂಗು ನನ್ನನ್ನು ಹಲವು ವರ್ಷಗಳಿಂದ ಕಾಡಿರುವಂಥದ್ದು. ಇವತ್ತಿಗೂ ಸಂದರ್ಶನಗಳನ್ನು ವೀಕ್ಷಿಸುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ಅದರಲ್ಲೂ ಅಕ್ಬರ್-ಬೀರಬಲ್ಲರಂತಹ ಜೋಡಿಗಳಿದ್ದರಂತೂ ಮುಗಿದೇಹೋಯಿತು. ಇಂಥದ್ದೇ ಸಂದರ್ಶನವೊಂದನ್ನು ಇತ್ತೀಚೆಗೆ ನೋಡುತ್ತಿದ್ದೆ. ಮುಂಬೈಯ ಸಮಾರಂಭವೊಂದರಲ್ಲಿ ನಿರ್ದೇಶಕ ಕರಣ್ ಜೋಹರ್ ತನ್ನ ಎಂದಿನ ತುಂಟ ಶೈಲಿಯಲ್ಲೇ ಯೋಗಿ ಜಗ್ಗಿ ವಾಸುದೇವರತ್ತ ಒಂದು ಪ್ರಶ್ನೆಯನ್ನೆಸೆದಿದ್ದರು. “ಯಾವತ್ತಾದರೊಂದು ದಿನ ಆ ದಿನದ ಮಟ್ಟಿಗೆ ಅದೃಶ್ಯರಾಗುವ ಒಂದು ಶಕ್ತಿಯನ್ನು ಗಳಿಸಿಬಿಟ್ಟರೆ ನೀವು ಏನು ಮಾಡಬಯಸುತ್ತೀರಿ?” ಎಂಬ ಪ್ರಶ್ನೆ ಅದಾಗಿತ್ತು. “ನಾನೇನು ಮಾಡಿದರೂ ನಿಮಗೇನೂ ಗೊತ್ತಾಗುವುದಿಲ್ಲ ಬಿಡಿ” ಎಂದು ಉತ್ತರಿಸಿದ್ದರು ಆತ. ಸುತ್ತಲೂ ನಗೆಯೋ ನಗೆ! ಹೀಗೆ ಪ್ರಶ್ನಿಸುವವರು ಮತ್ತು ಉತ್ತರಿಸುವವರಿಬ್ಬರೂ ಉತ್ತಮ ಹಾಸ್ಯಪ್ರವೃತ್ತಿ ಮತ್ತು ಸಮಯಪ್ರಜ್ಞೆಯುಳ್ಳವರಾಗಿದ್ದರೆ ನೀರಸ ಪ್ರಶ್ನೋತ್ತರಗಳೂ ಕೂಡ ವಿನೋದವನ್ನು ತರಬಲ್ಲದು.

  ಬಾಲಿವುಡ್ ನಟ ಶಾರೂಖ್ ಖಾನ್ ಇಂಥಾ ಚು(ರು)ಟುಕಾದ ಉತ್ತರಗಳನ್ನು ನೀಡಿ ಸಂದರ್ಶಕರನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸುವಲ್ಲಿ ನಿಸ್ಸೀಮರು. ಒಮ್ಮೆ ವರದಿಗಾರನೊಬ್ಬ ಕೇಳಿದ ಪ್ರಶ್ನೆಯು ಹೀಗಿತ್ತು: “ಮಿಸ್ಟರ್ ಖಾನ್, ನೀವು ವಿಭಿನ್ನ ಅನ್ನಿಸುವಂತಹ, ಕೊಂಚ ವಾಸಿ ಎನ್ನಬಹುದಾದ ಚಿತ್ರಗಳನ್ನು ಯಾವಾಗ ಮಾಡುತ್ತೀರಿ?” “ನೀವು ವಿಭಿನ್ನ ಅನ್ನಿಸುವಂತಹ, ಕೊಂಚ ವಾಸಿ ಎನ್ನಬಹುದಾದ ಪ್ರಶ್ನೆಗಳನ್ನು ನನಗೆ ಯಾವಾಗ ಕೇಳುತ್ತೀರಿ?” ಎಂದು ಉತ್ತರಿಸಿದ್ದರು ಖಾನ್. ಹೀಗಾಗಿಯೇ ಏನೋ, ಲೈವ್ ಷೋಗಳಲ್ಲಿ ನಿರೂಪಕರಾಗಿಯೂ ಕೂಡ ಅವರು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತಾರೆ. ಇನ್ನು ಇತಿಹಾಸದಲ್ಲಿ ಇಂಥಾ ಚುರುಕುತನದ ಮಾತುಗಳಿಗೆ ಹೆಸರಾದವರು ಖ್ಯಾತ ಲೇಖಕ ಜಾರ್ಜ್ ಬರ್ನಾರ್ಡ್ ಷಾ ಮತ್ತು ಖ್ಯಾತ ಮುತ್ಸದ್ದಿ ವಿನ್ಸ್ಟನ್ ಚರ್ಚಿಲ್. ಇವರಿಬ್ಬರ ನಡುವಿನ ಕಾಲೆಳೆಯುವಿಕೆಯ ಕೆಲ ಜನಪ್ರಿಯ ಸಂಭಾಷಣೆಗಳು ಸತ್ಯವೇ ಎಂದು ದೃಢವಾಗಿ ಹೇಳುವುದು ಕಷ್ಟವಾದರೂ ಕೂಡ ಚರ್ಚಿಲ್ ರವರ ವ್ಯಕ್ತಿತ್ವವೇ ಹಾಗಿತ್ತು ಎಂದು ಹೇಳುವವರಿದ್ದಾರೆ. ಚರ್ಚಿಲ್ ರ ಮ್ಯಾನರಿಸಂ ಹೇಗಿತ್ತೆಂದರೆ ತಾವು ಯಾವತ್ತೂ ಹೇಳದೇ ಇದ್ದ ಮಾತುಗಳೂ ಕೂಡ ಅವರ ಹೆಸರಿನಲ್ಲಿ ಹರಿದಾಡಿ ವ್ಯಂಗ್ಯೋಕ್ತಿಗಳಾಗಿ ಜನಪ್ರಿಯವಾಗಿದ್ದವು.

  ವಿನೋದವನ್ನು ಬದಿಗಿಟ್ಟು ನೋಡುವುದಾದರೆ ಅಮೆರಿಕನ್ ಟೆಲಿವಿಷನ್ ಲೋಕದ ದೊಡ್ಡ ಹೆಸರಾದ ಓಪ್ರಾ ವಿನ್ಫ್ರೇಯವರು ನಡೆಸಿಕೊಡುತ್ತಿದ್ದ ಸಂದರ್ಶನಗಳು ಇಂದಿಗೂ ಅಧ್ಯಯನಯೋಗ್ಯವಾದವುಗಳು. ಪ್ರಶ್ನೆಗಳನ್ನು ಕೇಳುವುದೂ ಕೂಡ ಒಂದು ಕಲೆ ಎಂಬ ಅಂಶವನ್ನು ತಿಳಿದುಕೊಳ್ಳಬೇಕಾದರೆ ಓಪ್ರಾರ ಪ್ರಶ್ನೆಗಳಿಗೆ ಕಿವಿಯಾಗಬೇಕು. ಪಾಪ್ ತಾರೆ ಮೈಕಲ್ ಜಾಕ್ಸನ್ ಮಾತನಾಡುತ್ತಾ ಗದ್ಗದಿತರಾಗಿದ್ದು ಓಪ್ರಾರ ಷೋನಲ್ಲೇ. ಭಾರತೀಯ ಟೆಲಿವಿಷನ್ ಲೋಕದಲ್ಲಿ ಇಂಥದ್ದೊಂದು ಸಂಚಲನವನ್ನು ತಕ್ಕ ಮಟ್ಟಿಗೆ ತಂದು ಯಶಸ್ವಿಯಾದವರು ಖ್ಯಾತ ನಟಿ ಸಿಮಿ ಗರೆವಾಲ್. ಪ್ರಶ್ನೆಗಳಿಂದ ಪ್ರಶ್ನೆಗಳಿಗೆ ನಿಧಾನವಾಗಿ ಸಾಗುವ ಆ ಪ್ರಕ್ರಿಯೆಯಲ್ಲಿ ತಮ್ಮ ಹಿಂದಿನ ಮತ್ತು ಮುಂದಿನ ಪ್ರಶ್ನೆಗಳನ್ನು ಬೆಸೆಯುವ ಅಗೋಚರ ಕೊಂಡಿಯೊಂದು ಇಲ್ಲವೇ ಇಲ್ಲವೆನ್ನುವಷ್ಟು ಸಲೀಸಾಗಿ ಪ್ರಸ್ತುತಪಡಿಸುವಲ್ಲಿ ಇವರಿಬ್ಬರೂ ಯಶಸ್ವಿಯಾದವರು. ಮಾಧ್ಯಮ, ಸಂದರ್ಶನಗಳೆಂದರೆ ಉರಿದುಬೀಳುತ್ತಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರವರು ಸಿಮಿ ಗರೆವಾಲರ ಷೋನಲ್ಲಿ ಅದೆಷ್ಟು ಚೆನ್ನಾಗಿ ಮನಬಿಚ್ಚಿ ಮಾತನಾಡಿದ್ದರೆಂದರೆ ನಿರೂಪಕಿಯು ಕೇಳುವ ಪ್ರಶ್ನೆಗಳ ಬಗ್ಗೆಯೇ ಗೌರವವು ಉಕ್ಕಿ ಬರುತ್ತದೆ.

  ಇನ್ನು ಶುದ್ಧ ‘ಏಕಪಕ್ಷೀಯ’ ಅನ್ನುವಂತಹ ಸಂದರ್ಶನಗಳನ್ನು ನೆನಪಿಸಿಕೊಂಡರೆ ನೆನಪಾಗುವುದು ನಮ್ಮ ‘ವನ್ ಆಂಡ್ ಓನ್ಲೀ’ ಅರ್ನಾಬ್ ಗೋಸ್ವಾಮಿಯವರು. ಅರ್ನಾಬ್ ನಡೆಸಿಕೊಟ್ಟ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿಯವರ ಸಂದರ್ಶನಗಳನ್ನು ನೋಡದೇ ಇದ್ದವರು ಒಮ್ಮೆ ಕುತೂಹಲಕ್ಕಾದರೂ ನೋಡುವುದು ಒಳಿತು. ರಾಹುಲ್ ಗಾಂಧಿಯವರ ಸಂದರ್ಶನದಲ್ಲಿ ಸಂದರ್ಶಕನದ್ದೇ ಕಾರುಬಾರಾದರೆ ಮೋದಿಯವರ ಸಂದರ್ಶನದಲ್ಲಿ ಅರ್ನಾಬ್ ಸಂದರ್ಶಕನಂತೆ ಕಾಣದೆ ಮೇಷ್ಟ್ರ ಎದುರು ಕೈಕಟ್ಟಿ ನಿಂತ ವಿಧೇಯ ವಿದ್ಯಾರ್ಥಿಯಂತೆ ಕಾಣಿಸಿಕೊಂಡಿದ್ದರು. ಹೊಸತಲೆಮಾರಿನ ಪತ್ರಕರ್ತರು ಪತ್ರಿಕಾಗೋಷ್ಠಿಗಳಿಗೆ ಹೋಗುವಾಗ ಪೂರ್ವಸಿದ್ಧತೆಯನ್ನು ಮಾಡಿಕೊಂಡಿರುವುದೇ ಇಲ್ಲ ಎಂದು ಇಂದಿರಾ ಗಾಂಧಿ ಸೇರಿದಂತೆ ದೇಶದ ಮೂವರು ಪ್ರಧಾನಮಂತ್ರಿಗಳಿಗೆ ಮಾಧ್ಯಮ ಸಲಹೆಗಾರರಾಗಿದ್ದ ಎಚ್.ವೈ.ಶಾರದಾಪ್ರಸಾದ್ ಅಭಿಪ್ರಾಯಪಟ್ಟಿದ್ದರು. ಇನ್ನು ಸದಾ ಪ್ರಶ್ನೆಗಳನ್ನು ಕೇಳುವ ರಣೋತ್ಸಾಹದಲ್ಲಿರುವ ಕೆಲ ಮಾಧ್ಯಮ ಬಂಧುಗಳೂ ಕೂಡ ಕೇಳಬಾರದ್ದನ್ನು ಕೇಳಿ ಮುಖಭಂಗಕ್ಕೊಳಗಾಗುವುದೂ ಇದೆ. ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಸುದ್ದಿವಾಹಿನಿಯೊಂದು ಚರ್ಚೆಯೊಂದನ್ನು ನಡೆಸುತ್ತಿದ್ದಾಗ ಮಹಾನುಭಾವನೊಬ್ಬ ಕರಣ್ ಜೋಹರ್ ರವರ ಲೈಂಗಿಕ ಜೀವನದ ಬಗ್ಗೆ ನೇರವಾಗಿಯೇ ಕೊಂಕುಮಾತಿನ ಧಾಟಿಯಲ್ಲಿ ಕೇಳಿದ್ದನಂತೆ. “ತಮಗೆ ನನ್ನ ಬಗ್ಗೆ ಭಾರೀ ಆಸಕ್ತಿಯೇ ಇರುವ ಹಾಗಿದೆ?” ಎಂದು ಜೋಹರ್ ಮಾತಿನಲ್ಲೇ ತಿರುಗೇಟು ಕೊಟ್ಟಿದ್ದರು. ಅಂದಹಾಗೆ ಈ ಘಟನೆಯನ್ನು ಸಿಮಿ ಗರೆವಾಲರ ‘ಇಂಡಿಯಾಸ್ ಮೋಸ್ಟ್ ಡಿಸೈರೇಬಲ್’ ಟಾಕ್ ಷೋನಲ್ಲಿ ಸ್ವತಃ ಕರಣ್ ಜೋಹರ್ ನೆನಪಿಸಿಕೊಂಡಿದ್ದರು.

  ಹೀಗೆ ಪ್ರಶ್ನೋತ್ತರಗಳ ಕೌತುಕಮಯ ಜಗತ್ತು ನಮ್ಮೆಲ್ಲರನ್ನೂ ಹಲವು ದಶಕಗಳಿಂದ ರಂಜಿಸಿದೆ, ಚಿಂತನೆಗೆ ಹಚ್ಚಿದೆ, ತಲೆ ಕೆರೆದುಕೊಳ್ಳುವಂತೆಯೂ ಮಾಡಿದೆ. ಜೇಬುಗಳಿರುವಷ್ಟು ದಿನ ಜೇಬುಗಳ್ಳರೂ ಇರಲಿದ್ದಾರೆ ಎಂಬ ಮಾತಿನಂತೆ ನಿಸ್ಸಂದೇಹವಾಗಿ ಇದು ಮುಂದೆಯೂ ಸಾಗಲಿದೆ. ಇನ್ನು ಪ್ರಶ್ನೆಯಿಂದ ಉತ್ತರವೋ ಅಥವಾ ಉತ್ತರದಿಂದ ಪ್ರಶ್ನೆಯೋ ಎಂದು ಕೇಳದಿದ್ದರೇನೇ ವಾಸಿ. ಇದು ಕೋಳಿ ಮೊದಲೋ ಅಥವಾ ಮೊಟ್ಟೆ ಮೊದಲೋ ಎಂದು ಕೇಳಿದಂತಾಗುತ್ತದೆ.

  ನಮ್ಮ ದೇಶದ ಕೆಲ ಸೂಪರ್ ಹಿಟ್ ಪ್ರಶ್ನೆಗಳನ್ನು (ಸುಮ್ನೆ ತಮಾಷೆಗೆ) ನಿಮ್ಮ ಮುಂದಿಟ್ಟು ಈ ಬಾರಿಯ ಅಂಕಣಕ್ಕೆ ತೆರೆಯೆಳೆಯುತ್ತಿದ್ದೇನೆ.
  – ಮೆಲಡಿ ಇಷ್ಟು ಚಾಕ್ಲೆಟೀ ಯಾಕಿದೆ?
  – ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ?
  – ನಿಮ್ಮ ಟೂತ್ ಪೇಸ್ಟಿನಲ್ಲಿ ಉಪ್ಪು ಇದೆಯೇ?

  ———

  ಪ್ರಸಾದ್ ನಾಯ್ಕ್

  ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾದ ಪ್ರಸಾದ್ ನಾಯ್ಕ್ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಪಡೆದವರು. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

  ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಕ್ಕಮಟ್ಟಿಗೆ ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

  Share

  Leave a comment

  Your email address will not be published. Required fields are marked *

  Recent Posts More

  • 4 days ago No comment

   ಮತ್ತೆ ಮರಳಲಿಲ್ಲ

   ಸೊಂಟದಿ ತಂಪಾಗಿ ಪವಡಿಸಿದ ಕೊಳಲು ಕೆಂದುಟಿಗೆ ತಾಕಿದೊಡೆ ಚಿಗುರೆಲೆಯಂತಹ ಎಳಸು ಬೆರಳ ಜೋಡಿಯು ತಿಲ್ಲಾನ ಹಾಡಿದವು.. ಅಲೆಅಲೆಯಾಗಿ ತೇಲಿ ಬಂದ ಮೋಹನರಾಗದ ಮೋಡಿಗೆ ದುಂಡು ಮಲ್ಲಿಗೆ ದಂಡೆಯ ಹೆಣೆಯುವ ಕೈಗಳು ತಲ್ಲಣಿಸಿದವು.. ಮನ ಕೇಳಲಿಲ್ಲ ತನು ನಿಲ್ಲಲಿಲ್ಲ ನಲಿದೋಡಿದೆ ರಾಗದ ಜಾಡಿಡಿದು ಶ್ಯಾಮ‌ಸುಂದರನ ಸೇರಲು.. ನವಿಲಿನ ಜೋಡಿಗಳೆರಡು ನಲಿವಿನಿಂದ ಕುಣಿತಿವೆ ಜಿಂಕೆ ಹಿಂಡುಗಳೆಲ್ಲಾ ತನ್ಮಯವಾಗಿ ನಿಂತಿವೆ.. ಅಗೋ ಅಲ್ಲಿ ಗೋಪಿಕೆಯರೆಲ್ಲಾ ನರ್ತಿಸ ತೊಡಗಿದ್ದಾರೆ ಒಬ್ಬಳ ಸೆರಗು ಜಾರಿ ಮೊಲೆಹಾಲು ...

  • 4 days ago No comment

   ಕೆನ್ನೆಯ ಮೇಲಿನ ಚಿತ್ರದ ಆವಿಯಲ್ಲೂ…

   ತುಟಿಗೆ ತಲುಪದ ನಿನ್ನ ಮುತ್ತು ಮುಡಿಯದ ಕೆಂಡಸಂಪಿಗೆಯ ಘಮ, ಕಂಪನದ ಒಗಟನು ಬಿಡಿಸದ ಕೆನ್ನೆಯ ಮೇಲಿನ ಚಿತ್ರದ ಆವಿಯಲ್ಲೂ ನಿನದೆ ನಾದನರ್ತನ ಕೈ ಬೆಸೆದರೆ ತಲ್ಲಣಕೆ ಮುಕ್ತಿ ಭಾವ ಮತ್ತೆ ಮತ್ತೆ ಬಂಧಿ, ಕಾದ ಕಾವಲಿಗೆ ನೀರಿಗಿಂತ ಉರಿಯೆ ತಂಪು, ಕಣ್ಣು ತೆರೆದ ಮೌನದ ಮೇಲೆ ಮಾತ ಬಿಂಬದ ಅಚ್ಚು, ಸುಗಂಧ ಮೆತ್ತಿದ ನೆನಪು ತೊಳೆದಷ್ಟೂ ಝಳಪಿಸುವ ಕತ್ತಿಯಲಗಿನಂತೆ, ಗಂಟಿಲ್ಲದ ಮನಸ ಪೋಣಿಸಿದಷ್ಟೂ ನುಣುಚಿಕೊಂಡರೆ ಹೆಣಿಗೆ ಶೂನ್ಯ ಬರೀ ...

  • 7 days ago No comment

   ಎದೆಯೊಳಗೆ ಕುದಿವ ಅಗ್ನಿಕುಂಡ; ಕಣ್ಣಲ್ಲಿ ಬೆಳಕು ತುಂಬಿಕೊಂಡ ಕವಿತೆಗಳು

   ಪುಸ್ತಕ ಅವಲೋಕನ ————- ಬೆಂಕಿಗೆ ತೊಡಿಸಿದ ಬಟ್ಟೆ ಲೇ: ಆರೀಫ್ ರಾಜಾ ಪ್ರ: ಪಲ್ಲವ ಪ್ರಕಾಶನ,ಚೆನ್ನಪಟ್ಟಣ. ಬೆಲೆ: ರೂ.100 ಕನ್ನಡದಲ್ಲಿ ಕಾವ್ಯದ ಹೊಳಹು ಮತ್ತು ವೈವಿಧ್ಯಮಯ ಅಭಿವ್ಯಕ್ತಿಯನ್ನು ನೋಡಬೇಕೇ? ಕಾವ್ಯ ವರ್ತಮಾನಕ್ಕೆ ಮುಖಾಮುಖಿಯಾಗಬೇಕೆ? ಆರೀಫ್ ರಾಜಾ ಎಂಬ ಕವಿಯ ಕವಿತೆಗಳನ್ನು ಓದಬೇಕು. ಕಾವ್ಯ ಹರಿವ ನದಿಯಂತೆ. ಕವಿತೆ ಅಂದರೆ ಬೆಂಕಿ ಮತ್ತು ಬೆಳಕು. ಕಾವ್ಯ ಕ್ಷಣ ಭಂಗುರವನ್ನು ಗೆಲ್ಲುವ ಪ್ರಕ್ರಿಯೆ, ಸಾವನ್ನು ಮುಂದೂಡುವ ಶಕ್ತಿ ಉಳ್ಳದ್ದು….ಹೀಗೆ ಏನೆಲ್ಲಾ ಕವಿತೆಯನ್ನು ...

  • 7 days ago No comment

   ಕಿಡಿ

   ಯಾವುದು-ಯಾರದ್ದು ? ಹೇಗೋ? ಯಾರು ಎಲ್ಲಿಂದ ಏನ ತಂದರೋ? ಬೆತ್ತಲೆಯಾಗಿ ಬಂದವರು ಗಡಿ-ಗಡಿಗೆ ಸಮರ ನಟ್ಟನಡುರಾತ್ರಿಯಲ್ಲಿ ಬಡಿದೆಬ್ಬಿಸುವ ಯುದ್ಧ ಬೇಲಿ-ಬೇಲಿಯ ಮಧ್ಯ ತನ್ನದ್ದಲ್ಲದ್ದಕ್ಕೆ ನನ್ನದು ಭಾವನೆಯ ಜೂಜಾಟ ನಿತ್ಯ ಸ್ಮಶಾನದಲ್ಲಿ ಜೀವಂತ ನೆರಳುಗಳು ಬೊಬ್ಬಿಟ್ಟು ಸಾರಿವೆ ಗತವ ಆಲಿಸದ ಕಿವಿಗಳಲ್ಲಿ ದುಡ್ಡಿನ ದೊಂಬರಾಟ ಸತ್ತ ದೇಹ ಮಣ್ಣಾಗುವಾಗ ಮತ್ತೆ ಬೆತ್ತಲೆ.

  • 1 week ago No comment

   ಸ್ವಾತಂತ್ರ್ಯದ ಸೊಬಗು

   ಅಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನಾನು ಗಮನಿಸುತ್ತಲೇ ಇದ್ದೆ. ವಾಗ್ವಾದಕ್ಕೆ ಮೆಲ್ಲಗೆ ಬಿಸಿಯೇರತೊಡಗಿತ್ತು. ಆತ ಚೀನಾ ಮೂಲದ ಧಣಿ. ಈತ ಅಂಗೋಲಾದ ಸ್ಥಳೀಯ ಕಾರ್ಮಿಕ. ಚೀನೀಯ ಈ ಆಫ್ರಿಕನ್ ಕಾರ್ಮಿಕನಿಗೆ ಕೆಲಸವೊಂದನ್ನು ಕೊಟ್ಟಿದ್ದಾನೆ. ಆದರೆ ಈತ ಅದನ್ನು ಸರಿಯಾಗಿ ಮಾಡದೆ ಧಣಿಯ ಕಣ್ಣಿಗೆ ಮಣ್ಣೆರಚುತ್ತಿದ್ದಾನೆ. ಒಂದೆರಡು ಬಾರಿ ನನ್ನ ಸಮ್ಮುಖದಲ್ಲೇ ಆತ ಈ ಬಗ್ಗೆ ಕಾರ್ಮಿಕನನ್ನು ಎಚ್ಚರಿಸಿದ್ದಾನೆ. ನಂತರವೂ ಆ ಕಾರ್ಮಿಕ ತನ್ನ ಕಣ್ಣೆದುರಿಗೇ ಮೈಗಳ್ಳತನವನ್ನು ಮುಂದುವರಿಸಿದಾಗ ಆತನಿಗೆ ಪಿತ್ತ ...


  POPULAR IN CONNECTKANNADA