Share

ಕಾಸರಗೋಡಿನಲ್ಲಿ ಕಂಡ ಕನ್ನಡ ಮುಖಗಳು
ನಾಗರಾಜ್ ಹರಪನಹಳ್ಳಿ, ಕಾರವಾರ

 • Page Views 264
 • “ಥೇಟ್ ನಮ್ಮ ಕರಾವಳಿಯ ಹಾಗೆ ಇರುವ ಕಾಸರಗೋಡು ಪರಕೀಯ ಎನ್ನಿಸಲಿಲ್ಲ. ಕಾಸರಗೋಡು, ಮಂಜೇಶ್ವರದಲ್ಲಿ, ಬದಿಯಡ್ಕದಲ್ಲಿ, ಬೇಕಲ್ ಕೋಟೆ, ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಸಿಕ್ಕವರೆಲ್ಲಾ ಕನ್ನಡದಲ್ಲೇ ಮಾತಾಡಿದ್ರು. ಅದು ವಿಶೇಷ. ಕನ್ನಡ ಬದುಕಿರುವುದು ಹಾಗೆ. ಕಾಸರಗೋಡು ಕನ್ನಡ ತಾಯಿಯ ಒಡಲ ಸೆರಗು ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿರಲಿಲ್ಲ.”

  * ಕಾಳಿ ನದಿ ದಂಡೆಯಿಂದ ಚಂದ್ರಗಿರಿ ನದಿ ತೀರದವರೆಗೆ ಮನಸುಗಳನ್ನು ಬೆಸೆದದ್ದು ಸಾಹಿತ್ಯ. ಕವಿತೆ ಮತ್ತು ಕವಿಗಳು ಹಾಗೂ ಗಾಯಕರು, ಕಲಾವಿದರು. ಬದುಕಿನಲ್ಲಿ ಪ್ರೀತಿ ಮತ್ತು ಕ್ರಿಯಾಶೀಲತೆ ಹಾಗೂ ಕನ್ನಡಕ್ಕಾಗಿ ಹಿಂದೆ ದುಡಿದವರ ನೆನೆಯುವುದು, ಅವರ ಬದುಕಿದ್ದ ಊರು ಮನೆಗಳಲ್ಲಿ ಹೆಜ್ಜೆ ಹಾಕುವುದು ಎಂದರೆ ಅದು ಸಂಭ್ರಮ. ಜೀವನಕ್ಕೆ ಚೆಲುವು ನೀಡಿದ ಘಳಿಗೆ ಅವಾಗಿದ್ದವು, ಮಂಜೇಶ್ವರದ ಗಿಳಿವಿಂಡು ಮನೆಯಲ್ಲಿ, ಕಯ್ಯಾರ ಕಿಞಣ್ಣ ಅವರ ಮನೆಯಲ್ಲಿ ಪಟ್ಟ ಖುಷಿ, ಕವಿ ಬದುಕಿದ್ದ ಮನೆಯ ಉಸಿರನ್ನು ನಮ್ಮ ಎದೆಗೆ ತುಂಬಿಕೊಂಡದ್ದು ರೋಮಾಂಚಕ ಅನುಭವ.

  *

  ವತ್ತು ಶುಕ್ರವಾರ, ಜುಲೈ 28. ಸಂಜೆ 7ರವರೆಗೆ ಪತ್ರಿಕೆಗೆ ಸುದ್ದಿ ರವಾನಿಸಿ, ಕಾರವಾರದಿಂದ ಕುಮಟಾ ತಲುಪಬೇಕಿತ್ತು. ಮೊದಲೇ ನಿಗದಿಯಾಗಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಬಳಗದ ಸದಸ್ಯರು ಕೇರಳದ ಕಾಸರಗೋಡಿಗೆ ತಲುಪಬೇಕಿತ್ತು. ರಾತ್ರಿ 9.30ಕ್ಕೆ ಕುಮಟಾ ರೈಲು ನಿಲ್ದಾಣಕ್ಕೆ ಬರುವಂತೆ ಗೆಳೆಯ, ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಸೂಚಿಸಿದ್ದರು. ಉದ್ದೇಶ ಜು.29 ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಮನೆಯಲ್ಲಿ ಶ್ರಾವಣದ ಕುಶಲೋಪರಿ ಕಾರ್ಯಕ್ರಮ. ರಂಗ ಚಿನ್ನಾರಿಯ ಬೇರು ಮತ್ತು ಚಿಗುರು ಆಗಿರುವ ಕಾಸರಗೋಡು ಚಿನ್ನ ಅವರು ಎರಡು ಜಿಲ್ಲೆಗಳ ಕನ್ನಡ ಮನಸುಗಳನ್ನು ಒಟ್ಟುಗೂಡಿಸಿ, ಕನ್ನಡ ಕವಿಗಳ ಕವಿತೆಗಳನ್ನು ಹಾಡಿಸಲು ಯೋಜಿಸಿದ್ದರು. ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಗೋವಿಂದ ಪೈ ಟ್ರಸ್ಟ್ ಸಹಕಾರ ನೀಡಿದ್ದವು. ನನಗೆ ಗೋವಿಂದ ಪೈ ಬದುಕಿದ್ದ ಮನೆಯಲ್ಲಿ ಪೈಗಳ ಉಸಿರು ಮತ್ತು ಹೆಜ್ಜೆಗಳನ್ನು ಹುಡುಕುವ ತವಕ. ನನ್ನ ಜೊತೆಗಿದ್ದ ಗೆಳೆಯರಿಗೂ ಸಹ ಇದೇ ರೋಮಾಂಚನವಿತ್ತು. ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು,ಪತ್ರಕರ್ತರು ಇದ್ದ ನಮ್ಮ ಟೀಂನಲ್ಲಿ ಗೋವಿಂದ ಪೈ ಮನೆಯನ್ನು ಕಾಣುವ ಕುತೂಹಲ ತುಂಬಿ ತುಳುಕುತ್ತಿತ್ತು. ಕನ್ನಡದ ನೆಲದಲ್ಲಿ ಕನ್ನಡದ ಸಾಂಸ್ಕøತಿಕ ಲೋಕದಲ್ಲಿ ಬೆರೆವುದರ ಜೊತೆಗೆ ಕನ್ನಡಿಗರಾಗಿಯೂ ಕನ್ನಡದ ಗಡಿಯಾಚೆ ಕನ್ನಡತನವನ್ನು ಉಳಿಸಿಕೊಂಡಿರುವ ಮನಸುಗಳನ್ನು ಮುಟ್ಟಿ ಮಾತಾಡಿಸುವ ಬಯಕೆ ಹೆಮ್ಮರವಾಗಿತ್ತು. ಕೇರಳ ಪ್ರವಾಸವನ್ನೊಮ್ಮೆ ಮಾಡಿದ್ದರೂ ಕಾಸರಗೋಡನಲ್ಲಿ ಇಳಿದು ಕನ್ನಡದ ಕವಿಗಳ ಮನೆ ನೋಡಿರಲಿಲ್ಲ. ಕಯ್ಯಾರ ಕಿಞಣ್ಣ ಅವರ ಮನೆ ನೋಡುವ ತವಕ ಬೇರೆ. ಅಂತೂ ಕಾರವಾರದಿಂದ 7.30ಕ್ಕೆ ಕುಮಟಾ ಕಡೆ ಸಾಗುವ ಬಸ್ ಹಿಡಿದಾಯ್ತು. ಅಂಕೋಲಾದಿಂದ ಗೆಳೆಯ ಪ್ರಕಾಶ್ ನಾಯಕ ಜೊತೆಯಾದರು. ಕುಮಟಾ ತಲುಪಿದಾಗ 9 ಗಂಟೆ. ಕುಮ್ಟಿ ಬಸ್ ನಿಲ್ದಾಣದ ಹೋಟೆಲ್‍ಗೆ ನುಸುಳಿ ರಾತ್ರಿ ಊಟ ಮುಗಿಸಿ ರೈಲ್ವೆ ನಿಲ್ದಾಣದತ್ತ ಹೆಜ್ಜೆಹಾಕಿದೆವು. ಅಲ್ಲಿಗೆ ಆಗಲೇ ಭಟ್ಕಳದಿಂದ ಉಮೇಶ್ ಮುಂಡಳ್ಳಿ ಕುಟುಂಬ, ಹೊನ್ನಾವರದ ಕಲ್ಪನಾ ಹೆಗಡೆ, ಕೃತಿ, ಕಾಂತಿ, ಭಟ್ಕಳದ ತಿಲೋತ್ತಮೆ, ಕುಮಟಾದ ಶ್ರೀಧರ ಉಪ್ಪಿನ ಗಣಪತಿ, ಎಂ.ಜಿ.ನಾಯ್ಕ ತಲುಪಿದ್ದರು. ಹಳದೀಪುರದಿಂದ ಅರವಿಂದ ಕರ್ಕಿಕೋಡಿ, ಹೊನ್ನಾವರದ ಪ್ರಶಾಂತ ಮೂಡಲಮನೆ, ಜನಾರ್ಧನ ಹರಿನೀರು ಜೊತೆಯಾದರು. ಅಂತೂ ಕಾಸರಗೋಡಿಗೆ ಟಿಕೆಟ್ ತೆಗೆದಾಯಿತು. ರಾತ್ರಿ 11.30ಕ್ಕೆ ಬಂದ ನಿಜಾಮುದ್ದೀನ-ತಿರುವಂತನಪುರ ಎಕ್ಸಪ್ರೆಸ್ ರೈಲು ಹಿಡಿದು ಬೆಳಗಿನ ಜಾವ 3.30ಕ್ಕೆ ಕಾಸರಗೋಡು ತಲುಪಿದ್ದಾಯಿತು. ನಿದ್ದೆಯನ್ನು ಗೆದ್ದಿದ್ದ ಆಟೋ ಚಾಲಕರು ಕನ್ನಡದಲ್ಲೇ ಎಲ್ಲಿಗೆ ಬಿಡಬೇಕು ಎಂದಾಗ ಅಚ್ಚರಿ. ಸಣ್ಣಗೆ ಸುರಿವ ಮಳೆ. ವಿಶಾಲ ರಸ್ತೆಗಳಲ್ಲಿ ಹೆಜ್ಜೆ ಹಾಕಿದೆವು. ಮಾಲಿ ಎಂಬ ವಸತಿ ಗೃಹದಲ್ಲಿ ಕಾಸರಗೋಡು ಚಿನ್ನ ವಸತಿ ವ್ಯವಸ್ಥೆ ಮಾಡಿದ್ದರು. ಬೆಳಿಗ್ಗೆ 7.30ರ ತನಕ ಗಡದ್ ನಿದ್ದೆ ಮಾಡಿದ್ದಾಗಲೇ ಬಂದ ನಟ, ನಿರ್ದೇಶಕ ಕಾಸರಗೋಡು ಚಿನ್ನನ ಸ್ನೇಹಿತರು, ಬೇಗ ಬೇಗ ಸ್ನಾನ ಮಾಡಿ ಸಿದ್ಧರಾಗಿ. ಮಂಜೇಶ್ವರಕ್ಕೆ 40 ನಿಮಿಷದ ಪ್ರಯಾಣ ಎಂದರಲ್ಲದೇ, ಬೆಳಗಿನ ಉಪಹಾರ ಇಡ್ಲಿ ದೋಸೆ ಸಂಬಾರು ತಂದಿಟ್ಟದ್ದರು.

  ಆಪ್ತ ಎನಿಸಿದ್ದು…

  ಗೋವಿಂದ ಪೈ ಮನೆ ತಲುಪಿದಾಗ ಬೆಳಿಗ್ಗೆ 10.30. ಪೈ ಟ್ರಸ್ಟ್‍ನ ಪ್ರಮುಖರು, ರಂಗ ಚಿನ್ನಾರಿ ಬಳಗದ ಸ್ನೇಹಿತರು, ಸುಗಮ ಸಂಗೀತದ ಖ್ಯಾತಿಯ ಮುದ್ದುಕೃಷ್ಣ, ಸಾಹಿತಿ, ವಿಮರ್ಶಕ ನಾದ (ನಾ.ದಾಮೋದರ ಶೆಟ್ಟಿ), ಗಾಯಕಿ ಸೀಮಾ ರಾಯ್ಕರ್, ಗಾಯಕ ದಯಾನಂದ ಪ್ರಭು, ಕಿಶೋರ್ ಪೆರ್ಲ ಉತ್ತರ ಕನ್ನಡದ ಸಾಹಿತ್ಯ ಬಳಗವನ್ನು ಆತ್ಮೀಯತೆಯಿಂದ ಬರಮಾಡಿಕೊಂಡರು. ಗೋವಿಂದ ಪೈಗಳ ಬಗ್ಗೆ, ಅಲ್ಲಿನ ಯಕ್ಷಗಾನ ಮ್ಯೂಜಿಯಂ ಬಗ್ಗೆ, ಮನೆಯ ರಕ್ಷಣೆಗೆ ಆದ ಕೆಲಸಗಳನ್ನು ತಿಳಿದಾಯ್ತು. ಗೋವಿಂದ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿನಿಯರಿಂದ ತಾಯಿ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೇ….ಸುತರ ಕಾಯೆ…ಹರಸು ತಾಯೆ…ಹಾಡನ್ನು ಸುಶ್ರಾವ್ಯವಾಗಿ ಹಾಡಿದಾಗ ಕವಿ ಜನ್ಮ ಸಾರ್ಥಕ ಎನಿಸಿತು. ಕರ್ನಾಟಕ ಸರ್ಕಾರ, ಕೇರಳ ಸರ್ಕಾರ ಗೋವಿಂದ ಪೈ ಸಂಶೋಧನಾ ಕೇಂದ್ರ ಸ್ಥಾಪನೆಗೆ ಆಸಕ್ತಿ ತೋರಿರುವ ಹಾಗೂ ಪೈ ನೆನಪಿನ ಸಭಾ ಭವನ ನಿರ್ಮಾಣ ಕಾರ್ಯದ ಮಾಹಿತಿ ಪಡೆದಾಯಿತು. ಅಲ್ಲಿಂದ ಕನ್ನಡದ ಬಗ್ಗೆ ಇರುವ ಸವಾಲುಗಳ ಚರ್ಚೆಯ ನಂತರ ಕನ್ನಡದ ಕವಿಗಳ ಗಾಯನ ಮನಸು ತುಂಬಿತು. ಕುವೆಂಪು ಅವರ ಜೈ ಭಾರತ ಜನನಿಯ ತುನುಜಾತೆ ಯಿಂದ ಹಿಡಿದು, ಬೇಂದ್ರೆ ಅವರ ಘಮಘಮಾಡಸ್ತಾವ ಮಲ್ಲಿಗೆ, ನೀ ಹೋರಟಿದ್ದೆ ಈಗ ಎಲ್ಲಿಗೆ ಹಾಡು, ಕೆಎಸ್ ನರಸಿಂಹ ಸ್ವಾಮಿ ಅವರ ಮೈಸೂರು ಮಲ್ಲಿಗೆ, ಬಿಆರ್ ಲಕ್ಷ್ಮಣರಾವ್ ಅವರ ಕರ್ನಾಟಕ ಎಂಬುದು ಬರೀ ನಾಡಲ್ಲ…..ಹಾಗೂ ಕುರುಬರೋ ನಾವ್ ಕುರುಬರೋ…. ಹಾಡುಗಳನ್ನು ತಮ್ಮ ಮಧುರ ಕಂಠದಿಂದ ಹಿರಿಯರೂ ಹಾಗೂ ಗಾಯಕರಾದ ಮುದ್ದು ಕೃಷ್ಣ, ಸೀಮಾ ರಾಯ್ಕರ್,ದಯಾನಂದ ಪ್ರಭು, ಕಿಶೋರ್ ಪೆರ್ಲ ಹಾಡಿದರು.

  ಕಯ್ಯಾರ ಮನೆಯಲ್ಲಿ…

  ಮಧ್ಯಾಹ್ನ ಊಟದ ನಂತರ ಕವಿ ಕಯ್ಯಾರ ಕಿಞಣ್ಣ ಅವರ ಮನೆ ತಲುಪಿದೆವು. ಕಯ್ಯಾರ ಅವರ ಮಗ ರವಿ ಮತ್ತು ಅವರ ಸೊಸೆ ಹಾಗೂ ಮತ್ತೊಬ್ಬ ಮಗ ಪ್ರಸನ್ನ ಅವರು ಸ್ವಾಗತಿಸಿದರು. ಆತ್ಮೀಯತೆಯಿಂದ ತಂದೆ ಕಯ್ಯಾರರ ವಿವರಗಳನ್ನು ನೀಡಿದರು. ಕರಾವಳಿಯಲ್ಲಿನ ಮನೆಗಳ ಶೈಲಿಯ ಕಯ್ಯಾರ ಹಳೆಯ ಮನೆ, ಅವರ ಪುಸ್ತಕ ಸಂಗ್ರಹ, ಅವರು ಕೃಷಿ ಮಾಡಿದ ಭೂಮಿ ತೋಟ, ಕುಳಿತುಕೊಳ್ಳುತ್ತಿದ್ದ ಕುರ್ಚಿ ಎಲ್ಲವನ್ನು ನೋಡಿಯಾಯಿತು. ಅಲ್ಲಿಂದ ಬೇಕಲ್ ಕೋಟೆ ನೋಡುವ ಆಸೆಯಿಂದ ತೆರಳಿದಾಗ ಸಂಜೆಯಾಗಿತ್ತು. ಕೋಟೆ ಪ್ರವೇಶದ ಸಮಯ ಮುಗಿದಿದ್ದ ಕಾರಣ ಮರಳಿ ಕಾಸರಗೋಡಿನತ್ತ ಹೊರಟಾಯಿತು, ದಾರಿಯಲ್ಲಿ ಸಿಕ್ಕ ಚಂದ್ರಗಿರಿ ನದಿಯನ್ನು ಸೇತುವೆಯ ಮೇಲಿಂದ ವೀಕ್ಷಿಸಿದ್ದಾಯಿತು. ನಂತರ ರಂಗಭೂಮಿಯ ಚೆಲುವುಬಲ್ಲ ನಟ, ನಿರ್ದೇಶಕ ಕಾಸರಗೋಡು ಚಿನ್ನ ಅವರ ಮನೆಯಲ್ಲಿ ಹರಟೆಯಾಯಿತು. ಅವರ ಮನೆಯ ಪದ್ಮ ಕುಟೀರದಲ್ಲಿ ಕಿಶೋರ್ ಪೆರ್ಲ, ಸೀಮಾ, ಮುದ್ದುಕೃಷ್ಣ, ಉಮೇಶ್ ಹಾಡಿ ಕನ್ನಡ ಸುಗಮ ಸಂಗೀತ ಲೋಕಕ್ಕೆ ಕರೆದೊಯ್ದರು.
  ರಾತ್ರಿ ಚಿನ್ನಾ ಅವರ ಮನೆಯಲ್ಲಿ ಭಕ್ಷಭೋಜನ ಸಮಾರಾಧನೆ ಆಯಿತು. ಉತ್ತರ ಕನ್ನಡದ ಸಾಂಸ್ಕೃತಿಕ ಸಾಹಿತ್ಯ ಲೋಕ ಹಾಗೂ ಕಾಸರಗೋಡನ್ನು ಬೆಸೆಯುವ ಬಗ್ಗೆ ಮಾತುಕತೆ ಸಹ ಆಯಿತು. ಸ್ನೇಹ ಪ್ರೀತಿಯ ಎಳೆಯಿಂದ ಇಂಥದ್ದನ್ನು ಕಟ್ಟಲು ಸಾಧ್ಯ ಎಂದು ಹಿರಿಯರಾದ ಮುದ್ದುಕೃಷ್ಣ ಮತ್ತು ನಾದ ಸಲಹೆ ಸೂಚನೆ ನೀಡಿದರು.

  ಮರುದಿನ ಸಾಂಸ್ಕೃತಿಕ ಸಾಹಿತ್ಯದ ವಿನಿಮಯ:

  ಜು.30 ಸಂಸ್ಕೃತಿ ಕುಶಲೋಪರಿ. ಅರವಿಂದ ಕಾರ್ಯಕ್ರಮ ಉದ್ಘಾಟಿಸಿದ್ರು. ಕೇರಳದಲ್ಲಿನ ಕನ್ನಡತನವನ್ನು ಉಳಿಸಿಕೊಂಡು, ಕೇರಳ ಸರ್ಕಾರದ ಜೊತೆ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಸಹ ಚಿಂತನೆ ಅಗತ್ಯ ಎಂದರು. ಮಲೆಯಾಳಂ ಮಾದ್ಯಮವನ್ನು ಕನ್ನಡದ ಮಕ್ಕಳ ಮೇಲೆ ಹೇರಿ, ಕನ್ನಡ ಶಾಲೆಗಳು ಮುಚ್ಚುವಂತೆ ಮಡಬಾರದು ಎಂದು ಮುದ್ದು ಕೃಷ್ಣ ಅವರು ಕೇರಳ ಸರ್ಕಾರಕ್ಕೆ ಎಚ್ಚರಿಕೆ ಸಹ ನೀಡಿದರು. ಕರ್ನಾಟಕ ಸರ್ಕಾರದ ಜವಾಬ್ದಾರಿಯನ್ನು ಸಹ ನೆನಪಿಸಿದ್ರು. ಉಮಾಶ್ರೀ ಅವರ ಜೊತೆ ರಂಗಭೂಮಿಯ ನಂಟನ್ನು ಕಾಸರಗೋಡು ಚಿನ್ನ ನೆನಪಿಸಿಕೊಂಡರು. ಸಚಿವೆ ಆದ ಮೇಲೆ ಸಹ ಕಾಸರಗೋಡಿಗೆ ಬಂದು ಸರಳತೆ ಮೆರೆದದ್ದನ್ನು ಚಿನ್ನ ಮೆಲುಕುಹಾಕಿದ್ರು. ಸಭಾ ಕಾರ್ಯಕ್ರಮ ಸಹ ಅಚ್ಚುಕಟ್ಟು. ಇದನ್ನು ಕಾಸರಗೋಡಿನ ಕನ್ನಡಿಗರಿಂದ ಕಲಿತದ್ದು, ಎಲ್ಲವೂ ಸಮಯಕ್ಕೆ ಸರಿಯಾಗಿ, ಕೊಟ್ಟ ಜವಾಬ್ದಾರಿ ಮತ್ತು ಸಮಯ ಮೀರಿ ಮಾತಾಡುವಂತಿಲ್ಲ. ಕಾಸರಗೋಡಿನ ಸಾಹಿತ್ಯ ಸಂಸ್ಕೃತಿ ಕುರಿತು ಗೆಳೆಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮಾತಾಡಿದ್ರು. ಉತ್ತರ ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆ ಕುರಿತು ನಾನು ಮಾತಾಡಿದೆ. ನಂತರ ಕನ್ನಡ ಕವಿಗಳ ಗಾಯನ. ಗೋವಿಂದ ಪೈ, ಕಯ್ಯಾರ ಕಿಞಣ್ಣ, ಕುವೆಂಪು, ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ, ಶಿಶುನಾಳ ಷರೀಫ್ ಎದುರಿಗೆ ಬಂದಂತೆ ಗಾಯಕರು ಹಾಡಿದರು. ಎರಡು ತಾಸು ಕವಿತೆಗಳ ಜೊತೆ ಪಯಣ. ಅದ್ಭುತ ಭಾವಯಾನ ಅದಾಗಿತ್ತು. ಕೊನೆಯಲ್ಲಿ ಚಿನ್ನ ಅವರು ರಂಗ ಚಿನ್ನಾರಿ ಬಳದ ಎಲ್ಲಾ ಗೆಳೆಯರನ್ನು ಉತ್ತರ ಕನ್ನಡದ ಗೆಳೆಯರಿಗೆ ಪರಿಚಯಿಸಿದ್ರು. ಉತ್ತರ ಕನ್ನಡದ ಗೆಳೆಯರನ್ನು ಚಿದಾನಂದ ಭಂಡಾರಿ ಕಾಸರಗೋಡಿನವರಿಗೆ ಪರಿಚಯಿಸಿದ್ರು. ಸ್ನೇಹವನ್ನು ಬೆಸೆದುಕೊಂಡು ಭಾರ ಮನಸ್ಸಿನಿಂದ ಹೊರಟಿದ್ದಾಯಿತು. ಜು.30 ತಿರುವನಂತಪುರದಲ್ಲಿ ನಡೆದ ಕೊಲೆಯೊಂದರ ಕಾರಣ ಕೇರಳ ಬಂದ್ ಇತ್ತು. ಆದರೆ ಸಂಸ್ಕೃತಿ ಕುಶಲೋಪರಿ ಕಾರ್ಯಕ್ರಮ ನಿಗದಿಯಂತೆ ನಡೆಯಿತು. ಸಂಜೆ 4ರಿಂದ ನಮ್ಮೂರ ಕಡೆಗೆ ಬರುವ ರೈಲಿಗಾಗಿ ಕಾದೆವು. 6-50ಕ್ಕೆ ಕಾಸರಗೋಡು ರೈಲು ನಿಲ್ದಾಣದಿಂದ ರೈಲು ದಕ್ಷಿಣ ಕನ್ನಡ, ಉಡುಪಿಯನ್ನು ಹಾಯ್ದು ಉತ್ತರ ಕನ್ನಡ ಪ್ರವೇಶಿಸಿತು. ಆ ತನಕ ನಿಲ್ದಾಣದಲ್ಲಿ, ರೈಲಿನಲ್ಲಿ ಮಾತು ಕತೆ ಹಾಡು,ಜೋಕ್ಸ್, ಸಾಹಿತ್ಯ, ರಾಜಕಾರಣದ ಚರ್ಚೆಗಳಾದವು. ಎಲ್ಲವೂ ಮರೆಯದ ನೆನಪುಗಳಾಗಿ ಎದೆಯಲ್ಲಿ ಉಳಿದವು. ಪ್ರವಾಸ, ಕವಿ, ಸಾಹಿತ್ಯ, ಸ್ನೇಹ ಸಂಬಂಧಗಳು, ಪೈ ಮತ್ತು ಕಯ್ಯಾರರ ಮನೆ, ಅವರ ಬದುಕು, ಚಂದ್ರಗಿರಿ ನದಿ ಸ್ಮೃತಿಪಟಲ ಸೇರಿಯಾಗಿದೆ. ಮತ್ತೊಂದು ಸಾಹಿತ್ಯದ ಪಯಣಕ್ಕೆ ಮನಸು ಹಂಬಲಿಸುತ್ತಿದೆ…

  ————-

  ನಾಗರಾಜ್ ಹರಪನಹಳ್ಳಿ

  nhಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ  ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, ಸದ್ಯ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ, ಲೋಕದರ್ಶನ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ  ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.

  Share

  One Comment For "ಕಾಸರಗೋಡಿನಲ್ಲಿ ಕಂಡ ಕನ್ನಡ ಮುಖಗಳು
  ನಾಗರಾಜ್ ಹರಪನಹಳ್ಳಿ, ಕಾರವಾರ
  "

  1. ಬಸವರಾಜ. ಬೂದಿಹಾಳ. ಗೋವಾ.
   5th August 2017

   ಕಾಸರಗೋಡಿನಲ್ಲಿರುವ ಕನ್ನಡದ ಘಮಘಮ ಗೋವಾದಲ್ಲೂ ಪಸರಿಸಲಿ. ಕಾಸರಗೋಡಿನ ಕನ್ನಡ ಪರಿಮಳದ ಊದಬತ್ತಿಯು ನಿರಂತರ ಉರಿಯುತ್ತಿರಲಿ.

   Reply

  Leave a comment

  Your email address will not be published. Required fields are marked *

  Recent Posts More

  • 4 days ago No comment

   ಚರಿತ್ರೆಯ ಚಹರೆಯಲಿ ಚಿಗುರೆಲೆಗಳ ನಡಿಗೆ

   1 ನಿನ್ನುಸಿರಲಿ ಅದೆಂತ ರಕ್ತ ಕಂಡಿದ್ದರು ತಮ್ಮ ಮೈಯೊಳಗೆ ಸ್ವಲ್ಪ ಇಣುಕಿದರೂ ಸಾಕಿತ್ತು ಶುಭ್ರತೆಗೆ ನೆಲೆಯಾದ ನಿನ್ನುಡಿಯ ಮಮತೆ ಅರಿಯದ ಗಾವಿಲರು ಬೆನ್ನಿಗೆ ತೂಪಾಕಿ ಹಿಡಿದು ಮನುಷ್ಯತ್ವ ಕಳಚಿಕೊಂಡರು ನಿನ್ನ ತೆಕ್ಕೆಯೊಳಗೆ ಸ್ವಲ್ಪ ಅಣಿಯಾದರೂ ಬೋಧಿವೃಕ್ಷದ ಜೋಗುಳದ ಸೂಪ್ತ ತಾಣ ಗೋಚರಿಸುತ್ತಿತ್ತು ಇರುಳ ಮೋಡಿತನ ಬಯಲುಗೊಳಿಸುವ ಅಸಂಖ್ಯ ನಕ್ಷತ್ರದ ನಾಡಿಗಳಿರುವಾಗ ಮಿಥ್ಯದ ಬೆನ್ನೇರಿ ಸಾಲುದೀಪದ ನಡಿಗೆ ಅಳಿಸಲು ಹೇಗೆ ಸಾಧ್ಯ! 2 ನಿನ್ನ ಎದೆಯೊಳಗೆ ಅದೆಂಥ ಎದೆಗಾರಿಕೆ ಜಗದ ...

  • 5 days ago No comment

   ಗೌರಿ : ದ್ವಿಪದಿಗಳು

   1 ನಾನು ಸಿಗರೇಟು ಸೇದುತ್ತೇನೆ ಕುಡಿಯುತ್ತೇನೆ ಏನೀವಾಗ? ನಿನ್ನವರ ಹಾಗೆ ಮನುಷ್ಯರ ರಕ್ತ ನಾನೆಂದಿಗೂ ಕುಡಿಯಲಾರೆ 2 ಯಾಕೋ ಆ ಶವದ ತುಟಿಗಳ ಮೇಲೆ ನಗು ಕಾಣುತ್ತಿಲ್ಲ? ಇರಿದ ಹತಾರದ ಮೇಲೂ ಶತ್ರುವಿನ ಬೆರಳಗುರುತು ಕಾಣುತ್ತಿಲ್ಲ..! 3 ಅವಳು ಹನಿಯಾಗಿದ್ದಳು ಗುಂಡಿಕ್ಕಿದರು ಸಾಗರವಾದಳು 4 ಕಿಡಿಯನ್ನು ನಂದಿಸಲು ನೋಡಿದರು ಗೆಳತಿ ಬೆಳಕಿನ ಹೊನಲಾಗಿ ಬಿಟ್ಟಳು 5 ಬಂದೂಕು ಗುಬ್ಬಿಗಳ ಗೂಡು ಹುಡುಕಿಕೊಂಡು ಹೋಗಿ ಗುಂಡಿಕ್ಕತೊಡಗಿತು ನಾವು ಬಂದೂಕಿನ ನಳಿಕೆಯಲ್ಲಿ ...

  • 6 days ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 7 days ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 week ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help