Share

ಒಂದು ಹೊಟ್ಟೆಯ ಕಥೆ
ಪ್ರಸಾದ್ ನಾಯ್ಕ್ ಕಾಲಂ

“ಬಂದೇ ಬಿಟ್ಯೇನೋ” ಅಂತ ಕೇಳಿದ್ದೆ ನಾನು. ಅವನು ಹೂಂ ಅಂದಿದ್ದ.
ಆತ ನನ್ನ ದೆಹಲಿಯ ದಿನಗಳ ಸಹೋದ್ಯೋಗಿ ಮಿತ್ರ. ಆಫ್ರಿಕಾದ ‘ಮಲಾವಿ’ ಎಂಬ ಹೆಸರಿನ ದೇಶವೊಂದಕ್ಕೆ ನಿಯುಕ್ತಿಗೊಂಡು ದೆಹಲಿಯಿಂದ ಮಲಾವಿಗೆ ಹಾರಿದ್ದ ಆತ ತಿಂಗಳೊಳಗೇ ಶಸ್ತ್ರತ್ಯಾಗ ಮಾಡಿ ಮರಳಿಬಂದಿದ್ದ.
“ಏನಾಯ್ತೋ?” ಅಚ್ಚರಿಯಿಂದ ಕೇಳಿದೆ ನಾನು.
“ಸಸ್ಯಾಹಾರವೇ ಸಿಗಲಿಲ್ಲ ಮಾರಾಯ” ಎಂದ ಅವನು.
“ಅದಕ್ಕೆ? ವಾಪಸ್ಸು ಬಂದೇಬಿಡೋದಾ?” ಕಣ್ಣರಳಿಸಿದೆ ನಾನು.
“ಮತ್ತೆ? ಉಪವಾಸ ಇರೋಕಾಗುತ್ತಾ? ಎರಡು ದಿನ ಏನೂ ತಿನ್ನುವ ಮನಸ್ಸಾಗಲಿಲ್ಲ. ಮೂರನೇ ದಿನ ಖಾಯಿಲೆ ಬಿದ್ದೆ. ಮಾತ್ರೆಗಳು ಅಂದರೆ ಮೊದಲಿನಿಂದಲೂ ನನಗೆ ಅಲರ್ಜಿ. ಮಾತ್ರೆಗಳನ್ನು ತಿಂದಾಕ್ಷಣ ವಾಂತಿಯಾಗುತ್ತದೆ. ಎಷ್ಟು ದಿನ ಅಂತ ಹೀಗಿರೋದು? ಇದರ ಸಹವಾಸವೇ ಬೇಡ ಎಂದು ಸುಮ್ಮನೆ ಬಂದುಬಿಟ್ಟೆ” ಎಂದ.
ಆಫ್ರಿಕಾದ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲದ ನಾನು ಸುಮ್ಮನೆ ತಲೆಯಾಡಿಸಿದ್ದೆ. ಆದರೂ ಇದೇನಪ್ಪಾ ವಿಚಿತ್ರ ರಾಮಾಯಣ ಎಂದು ಒಳಗೊಳಗೇ ಅನ್ನಿಸಿತ್ತು.

*************

ಪೋರ್ಚುಗೀಸ್ ಅಧಿಕಾರಿಯೊಬ್ಬರ ಬೀಳ್ಕೊಡುಗೆ ಸಮಾರಂಭಕ್ಕೆಂದು ಇತ್ತೀಚೆಗೆ ಚಿಕ್ಕ ಔತಣಕೂಟವೊಂದನ್ನು ನಾವು ಏರ್ಪಡಿಸಿದ್ದೆವು. ಊಟದ ಮೆನುವಿನಲ್ಲಿ ಅಂಗೋಲನ್ ಆಹಾರದೊಂದಿಗೆ ಭಾರತೀಯ ಭಕ್ಷ್ಯಗಳನ್ನೂ ಇರಿಸಲಾಗಿತ್ತು. ಭಾರತೀಯ ಅಡುಗೆಯನ್ನು ಉತ್ಸಾಹದಿಂದಲೇ ಸವಿದ ಅಂಗೋಲನ್ನರಿಗೆ ಕೊನೆಗೆ ಕೊಟ್ಟ ರಸಗುಲ್ಲ ಮಾತ್ರ ಹಿಡಿಸಿದಂತೆ ಕಾಣಲಿಲ್ಲ. “ಅಬ್ಬಬ್ಬಾ… ಏನಿದು ಇಷ್ಟೊಂದು ಸಿಹಿ?” ಎಂದು ಅಂಗೋಲನ್ ಹಿರಿಯ ಮಹಿಳಾ ಅಧಿಕಾರಿಯೊಬ್ಬರು ತಲೆಕೆಡಿಸಿಕೊಂಡಿದ್ದರು. ನಂತರ ಅವರಿಗಾಗಿ ರಸಗುಲ್ಲವನ್ನು ನೀರಿನಲ್ಲಿ ಮುಳುಗಿಸಿ ಸಿಹಿಯನ್ನು ಕೊಂಚ ಕರಗಿಸಿಕೊಡಬೇಕಾಯಿತು.

ಈ ಹಿಂದೆ ನನ್ನ ಸಹೋದ್ಯೋಗಿ ಮಿತ್ರರೊಬ್ಬರು ಹಲ್ವಾ ಸಿದ್ಧಪಡಿಸಿ ಇಲ್ಲಿಯ ಸ್ಥಳೀಯ ಬಾಣಸಿಗನಿಗೆ ಕೊಟ್ಟಾಗಲೂ ಇಂಥದ್ದೇ ಪ್ರತಿಕ್ರಿಯೆ ದೊರಕಿತ್ತು. ಹಕ್ಕಿಯು ತನ್ನ ಪುಟಾಣಿ ಕೊಕ್ಕಿನಿಂದ ಚಿಕ್ಕ ತುತ್ತನ್ನು ತೆಗೆಯುವಂತೆ ಚಿಕ್ಕ ತುಣುಕಷ್ಟನ್ನೇ ಚಮಚದಿಂದ ತೆಗೆದು ರುಚಿನೋಡಿದ ಆಕೆ “ಏನೋ ವಿಚಿತ್ರವಾಗಿದೆ” ಎಂದಿದ್ದಳು. ಒಳ್ಳೇ ಹಾಗಲಕಾಯಿಯ ಕಷಾಯ ಕುಡಿಸಿದೆವೋ ಎಂಬಂತಿತ್ತು ಅವಳ ಮುಖ.

“ಬಹುಶಃ ಚಾಕ್ಲೇಟನ್ನು ಬಿಟ್ಟು ಇನ್ಯಾವ ಸಿಹಿಯ ಬಗ್ಗೆಯೂ ಇವರಿಗೆ ಅರಿವಿಲ್ಲ ಅನ್ಸುತ್ತೆ” ಎಂದು ಹಲ್ವಾ ಸಿದ್ಧಪಡಿಸಿದ ಮಿತ್ರರಿಗೆ ನಗುತ್ತಾ ಅಂದಿದ್ದೆ ನಾನು.

*************

ಆಹಾರ ಸಂಸ್ಕೃತಿಯ ವೈವಿಧ್ಯಗಳು ಕೆಲವೊಮ್ಮೆ ಹೇಗೆ ತಮಾಷೆಯ ಪ್ರಸಂಗಗಳಾಗಿ ಕಾಣುತ್ತವೆ ಎಂಬುದನ್ನು ಹೇಳಲು ಈ ದೃಷ್ಟಾಂತಗಳನ್ನು ಇಲ್ಲಿ ಉಲ್ಲೇಖಿಸಬೇಕಾಯಿತು.

ನನ್ನ ಸಹೋದ್ಯೋಗಿ ಮಿತ್ರನಿಗೆ ಮಲಾವಿ ದೇಶದಲ್ಲಾದ ಅನುಭವವು ನನಗೆ ಅಂಗೋಲಾದಲ್ಲೂ ಆಯಿತು ಅನ್ನುವುದನ್ನು ಹೇಳಲೇಬೇಕು. ಆದರೆ ನಾನು ಹಾರ್ಡ್ ಕೋರ್ ಮಾಂಸಾಹಾರಿಯಾಗಿದ್ದ ಪರಿಣಾಮವಾಗಿ ಬಚಾವಾಗಿದ್ದೆ. ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯರು ಹೇಳಿದ್ದೂ ಹಾಲು-ಅನ್ನ ಎಂಬಂತೆ ನನಗಂತೂ ಈ ಬಗ್ಗೆ ಖುಷಿಯಾಗಿತ್ತು. ಕರಾವಳಿಯವರೆಂದರೆ ಮೀನಿಗೆ ಬಾಯಿಬಾಯಿ ಬಿಡುವುದು ಸಹಜ. ಅಂಗೋಲಾ ಅಟ್ಲಾಂಟಿಕ್ ಸಾಗರದ ಕರಾವಳಿಯನ್ನು ಹೊಂದಿರುವ ದೇಶ. ಹೀಗಾಗಿ ಮೀನುಗಳಿಗೆ ಬರವಿರಲಿಲ್ಲ. ಇನ್ನು ಮಾಂಸಾಹಾರದ ಉಳಿದ ವೈವಿಧ್ಯಗಳು ಅಗತ್ಯಕ್ಕಿಂತ ಹೆಚ್ಚೇ ಇದ್ದವು. ಅಂತೂ ‘ವ್ಹಾವ್’ ಎಂದು ಉದ್ಗಾರ ತೆಗೆಯದಿರಲು ನನಗೆ ಕಾರಣಗಳೇ ಇರಲಿಲ್ಲ ಅನ್ನಿ.

ಆದರೆ ನನ್ನೊಂದಿಗಿರುವ ಉತ್ತರ ಭಾರತ ಮೂಲದ ಸಹೋದ್ಯೋಗಿಯೊಬ್ಬರು ಅಪ್ಪಟ ಸಸ್ಯಾಹಾರಿಯಾಗಿದ್ದ ಪರಿಣಾಮವಾಗಿ ಅವರಿಗೆ ಮಾತ್ರ ತೊಂದರೆಯಾಗಿತ್ತು. ಆದರೆ ಅವರೋ ಪಾಕಪ್ರವೀಣರು. ಸಸ್ಯಾಹಾರದ ವೈವಿಧ್ಯಗಳನ್ನು ಸ್ವತಃ ತಯಾರಿಸಿ, ನನಗೆ ತಿನ್ನಿಸಿದರಲ್ಲದೆ ಇಲ್ಲಿಯ ಅಡುಗೆಯಾಕೆಗೂ ಇಂಡಿಯನ್ ಅಡುಗೆ ಮಾಡುವುದು ಹೇಗೆ ಎಂಬುದನ್ನು ಚೆನ್ನಾಗಿ ಹೇಳಿಕೊಟ್ಟರು. ಇಂದು ಆಕೆ ಯಾವುದೇ ಭಾರತೀಯ ಅಡುಗೆಯವರಿಗೂ ಕಮ್ಮಿಯಿಲ್ಲವೆಂಬಷ್ಟು ಮಟ್ಟಸವಾಗಿ ಉತ್ತರ ಭಾರತದ ಅಡುಗೆಯನ್ನು ನಿತ್ಯವೂ ತಯಾರಿಸಿ ಉಣಬಡಿಸುತ್ತಾಳೆ. ಆಕೆಯ ಕಲಿಕೆಯ ವೇಗಕ್ಕೆ ನಾನು ಅವಾಕ್ಕಾಗಿದ್ದಂತೂ ಸತ್ಯ.

ಮೊದಲ ಬಾರಿ ವಿದೇಶಕ್ಕೆ ಹೋಗುವವರಲ್ಲಿ, ಅದರಲ್ಲೂ ದೀರ್ಘಾವಧಿಯ ಯೋಜನೆಗಳನ್ನಿಟ್ಟುಕೊಂಡು ಹೋಗುವವರಲ್ಲಿ ಇಂಥಾ ತಳಮಳಗಳಾಗುವುದು ಸಹಜ. ನನಗಿಂತ ಎರಡು ತಿಂಗಳು ಹಿಂದೆ ಅಂಗೋಲಾಕ್ಕೆ ಬಂದಿಳಿದ ನನ್ನ ಸಹೋದ್ಯೋಗಿಯವರ ಮಾತಿನ ಪ್ರಕಾರ ಅವರಿಗೂ ಕೆಲ ದಿನಗಳು ಸವಾಲಾಗಿಯೇ ಪರಿಣಮಿಸಿದ್ದವಂತೆ. ಸ್ವತಃ ಅಡುಗೆ ಮಾಡೋದೇನೋ ಸರಿಯೇ, ಆದರೆ ಮಸಾಲೆಗಳೂ ಬೇಕಲ್ವೇ! ಒಂದು ಪಲ್ಯ ಎಂದರೆ ನಾವು ಭಾರತೀಯರು ಎಷ್ಟೆಲ್ಲಾ ಮಸಾಲೆಗಳನ್ನು ಬೆರೆಸುತ್ತೇವೆ. ಅವುಗಳೆಲ್ಲಾ ಒಮ್ಮೆಲೇ ಕಾಣದಂತಾದರೆ ಅಡುಗೆಮನೆಯಲ್ಲಿ ‘ಎಮರ್ಜೆನ್ಸಿ’ ಹೇರಿದಂತಾಗುವುದು ಸಹಜ. ಗೂಗಲ್ ಜಾಲಾಡಿ ಇಲ್ಲಿ ಭಾರತೀಯ ಹೋಟೇಲುಗಳೋ, ಅಂಗಡಿಗಳೇನಾದರೂ ಇವೆಯೇ ಎಂದು ಹುಡುಕಹೊರಟರೆ ಅಂಗೋಲಾದ ರಾಜಧಾನಿಯಾದ ಲುವಾಂಡಾ ಮಹಾನಗರಿಯಲ್ಲಿ ಬೆರಳೆಣಿಕೆಯ ಆಶಾಕಿರಣಗಳು ಸಿಕ್ಕಿದ್ದವು. ಅಟ್ಲಾಂಟಿಕ್ ಸಾಗರವನ್ನು ಬಗಲಿನಲ್ಲೇ ಇಟ್ಟುಕೊಂಡು ಗತ್ತಿನಿಂದ ಬೀಗುತ್ತಿರುವ, ನೋಡಲು ನಮ್ಮ ಮುಂಬೈಯಂತೆಯೇ ಇರುವ ಸುಂದರ ನಗರಿ ಲುವಾಂಡಾ. ಆದರೆ ನಮ್ಮ ವೀಜ್ ಪ್ರದೇಶದಿಂದ ಬರೋಬ್ಬರಿ ಮುನ್ನೂರೆಪ್ಪತ್ತು ಕಿಲೋಮೀಟರುಗಳ ದೂರ. ವೀಜ್ ನಿಂದ ಲುವಾಂಡಾಗಿರುವ ಈ ದೂರದಲ್ಲಿ ಕಮ್ಮಿಯೆಂದರೂ ನೂರರಿಂದ ನೂರೈವತ್ತು ಕಿಲೋಮೀಟರುಗಳವರೆಗೆ ದಟ್ಟಕಾಡಿನದ್ದೇ ಪ್ರಾಬಲ್ಯ. ಹೀಗಾಗಿ ತಿಂಗಳಿಗೊಮ್ಮೆ ಮಾತ್ರ ಲುವಾಂಡಾಕ್ಕೆ ತೆರಳಿ ಬೇಕಾದ ಸಾಮಾನುಗಳನ್ನು ತರುವ ಪರಿಪಾಠವನ್ನಿಟ್ಟುಕೊಳ್ಳಬೇಕಾಯಿತು.

ಹಾಗೆ ನೋಡಿದರೆ ಮಂಗಳೂರಿನ ಹವಾಮಾನಕ್ಕೂ ಅಂಗೋಲಾದ ಹವಾಮಾನಕ್ಕೂ ಹೆಚ್ಚಿನ ವ್ಯತ್ಯಾಸಗಳೇನಿಲ್ಲ. ಆದರೆ ಆಹಾರ ಸಂಸ್ಕೃತಿಯ ಬದಲಾವಣೆಗಳು ನನ್ನನ್ನೂ ತಟ್ಟಿದ್ದವು. ಹಣ್ಣು, ತರಕಾರಿಗಳು ಯಥೇಚ್ಛವಾಗಿದ್ದರೂ ಹರಿವೆ ಸೊಪ್ಪು, ಮೆಂತ್ಯ, ಪಾಲಕ್, ಬಸಳೆ ಇತ್ಯಾದಿ ಸೊಪ್ಪುಗಳ ಅಭಿಮಾನಿಯಾಗಿದ್ದ ನನಗೆ ಇವೆಲ್ಲವೂ ತಪ್ಪಿಹೋಗಿದ್ದವು. ಜೊತೆಗೇ ಮಾಂಸಾಹಾರದ ಬಗೆಬಗೆಯ ವೈವಿಧ್ಯಗಳನ್ನು ಕಂಡು ‘ಹೀಗೂ ಉಂಟೇ?’ ಎಂದು ಮೂಗಿನ ಮೇಲೆ ಬೆರಳಿಡುವಂತಾಗಿತ್ತು. ದಿನದ ಮೂರು ಹೊತ್ತೂ ಮಾಂಸಾಹಾರವನ್ನು ಸೇವಿಸುವವರು ಇಲ್ಲಿ ಸಾಮಾನ್ಯ. ಒಮ್ಮೆ ಹೆದ್ದಾರಿಯ ಬದಿಯಲ್ಲಿ ಆಹಾರದ ರೂಪದಲ್ಲಿ ಕೋತಿಯನ್ನು ಮತ್ತು ನೋಡಲು ಜಿಂಕೆಯಂತಿದ್ದ ಬುಷ್ ಬಕ್ ಅನ್ನು ಮಾರಾಟಕ್ಕಿಟ್ಟಿದ್ದನ್ನು ನೋಡಿದ್ದೆ. ವ್ಯಕ್ತಿಯೊಬ್ಬ ಸತ್ತ ಕೋತಿಯನ್ನು ಬಾಲದಿಂದ ಹಿಡಿದು ನೇತಾಡಿಸುತ್ತಾ ರಸ್ತೆಯ ಬದಿಯಲ್ಲಿ ನಿಂತಿದ್ದರೆ, ಇನ್ನು ಕೆಲವೆಡೆಗಳಲ್ಲಿ ಬುಷ್ ಬಕ್ ಅನ್ನು, ಸುಟ್ಟ ಬಾವಲಿಗಳನ್ನು ಕಟ್ಟಿ ತಲೆಕೆಳಗಾಗಿಸಿ ಮಾರಾಟಕ್ಕಿಟ್ಟಿದ್ದರು. ಭಾರತೀಯರಿಗೆ ತೀರಾ ಅಪರೂಪವಾದ ಚಿಪ್ಪಿನ ಪ್ರಾಣಿ ಪಾಂಗೋಲಿನ್ ಇಲ್ಲಿಯ ಕಸಾಯಿಖಾನೆಯಲ್ಲಿ ಉಸಿರಿಲ್ಲದೆ ಮಲಗಿತ್ತು. ಇನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಕೆಟ್ಟೊಂದರಲ್ಲಿ ಮಣ್ಣು ತುಂಬಿಸಿ ಸುಮಾರು ನೂರಿನ್ನೂರು ಹುಳಗಳನ್ನು ಅದರಲ್ಲಿ ಬಿಟ್ಟಿದ್ದರು. ನೋಡಲು ದಪ್ಪಗೆ ರೇಷ್ಮೆಹುಳುವಿನ ಎರಡರಷ್ಟಿದ್ದ, ಮೂರರಿಂದ-ನಾಲ್ಕು ಇಂಚುಗಳ ಉದ್ದವಿದ್ದ ಮಿಜಿಮಿಜಿಗುಟ್ಟುತ್ತಿದ್ದ ಜೀವಂತ ಹುಳುಗಳು. ಈ ‘ಸೋಂಬೆ’ ಹುಳುಗಳಿಂದ ಸಾರು ಮಾಡುತ್ತಾರಂತೆ. ನೋಡಿಯೇ ಕಂಗಾಲಾದ ನಾನು ಮಾರುಕಟ್ಟೆಯ ಆ ಭಾಗಕ್ಕೆ ಮತ್ತೆ ಕಾಲಿಡಲಿಲ್ಲ. ಈ ಬಗ್ಗೆ ಇಲ್ಲಿಯ ಸ್ಥಳೀಯರು ಇಂದಿಗೂ ನನ್ನನ್ನು ಮಾತಿನಲ್ಲೇ ಕಾಲೆಳೆಯುತ್ತಾರೆ.

ಭಾರತೀಯ ಮಸಾಲೆಗಳು ಹೇಗೆ ಇಲ್ಲಿ ಗಗನಕುಸುಮವಾಗಿಬಿಟ್ಟವೋ ಅಂತೆಯೇ ಉಳಿದ ಕೆಲವು ಉತ್ಪನ್ನಗಳೂ ನಮ್ಮ ಮೆನುವಿನಿಂದ ಶಾಶ್ವತವಾಗಿ ಮರೆಯಾಗಿಬಿಟ್ಟಿದ್ದವು. ಉದಾಹರಣೆಗೆ ಅಂಗೋಲಾಕ್ಕೆ ಬಂದು ಒಂದೂವರೆ ವರ್ಷವಾದರೂ ‘ಉಪ್ಪಿನಕಾಯಿ’ ಅಂದ್ರೇನು ಎಂಬುದನ್ನು ಸ್ಥಳೀಯರಿಗೆ ತಿಳಿಹೇಳಲು ನನಗಿನ್ನೂ ಸಾಧ್ಯವಾಗಿಲ್ಲ. ಕಬ್ಬು ಸಾಕಷ್ಟಿದ್ದರೂ ಬೆಲ್ಲ ನನಗಿನ್ನೂ ಸಿಕ್ಕಿಲ್ಲ. ಸಿಹಿತಿಂಡಿ ಮತ್ತು ಒಳ್ಳೆಯ ಐಸ್ ಕ್ರೀಂಗಳೂ ಇಲ್ಲಿ ಸಿಗುವುದು ಕಡಿಮೆ. ಪಾರದರ್ಶಕ ಡಬ್ಬಗಳಲ್ಲಿ ಕಣ್ಸೆಳೆಯುವ ಬಣ್ಣಗಳಿಂದ ನನ್ನನ್ನು ಆಕರ್ಷಿಸಿದ್ದ ಇಲ್ಲಿಯ ಕೆಲ ಐಸ್ ಕ್ರೀಂಗಳನ್ನು ಖರೀದಿಸಿ ರುಚಿನೋಡಿದರೆ ಅವುಗಳಲ್ಲಿ ಬಣ್ಣವಿತ್ತೇ ಹೊರತು ರುಚಿಯಿರಲಿಲ್ಲ. ಇದಕ್ಕಿಂತ ಮೊಸರೇ ವಾಸಿ ಎಂದು ನಾನು ಗೊಣಗಿದ್ದೂ ಇದೆ. ಅಂಗೋಲಾದ ಪ್ರಮುಖ ಉತ್ಪನ್ನಗಳಲ್ಲೊಂದಾದ ಕಾಫಿಯೂ ಕೂಡ ಕೆಲವರಿಗಷ್ಟೇ ಹಿಡಿಸುವುದನ್ನು ನಾನು ನೋಡಿರುವೆ. ಯಜ್ಞಗಳಲ್ಲಿ ಅಗ್ನಿಗೆ ಹವಿಸ್ಸನ್ನು ಹೇಗೆ ನಿರಂತರವಾಗಿ ಹಾಕುತ್ತಾರೋ, ಅಂತೆಯೇ ಇಲ್ಲಿಯ ಕಾಫಿಗೆ ಸಕ್ಕರೆಯನ್ನು ಹಾಕುತ್ತಲೇ ಇರಬೇಕು. ಸಹಜವಾಗಿಯೇ ಕಾಫಿಗೂ ಗುಡ್ ಬೈ ಹೇಳಬೇಕಾಯಿತು.

ಹಾಗೆಂದು ಭಾರತೀಯ ಖಾದ್ಯಗಳ ನೆನಪಾಗಿ ಬಾಯಲ್ಲಿ ನೀರೂರಿದರೆ ಭಾರತೀಯ ರೆಸ್ಟೊರೆಂಟುಗಳು ಇಲ್ಲಿ ಇಲ್ಲವೆಂದಲ್ಲ. ರಾಜಧಾನಿಯಾದ ಲುವಾಂಡಾದಲ್ಲಿ ಒಂದೆರಡು ಭಾರತೀಯ ರೆಸ್ಟೊರೆಂಟುಗಳಿವೆ. ಮೊಟ್ಟ ಮೊದಲ ಬಾರಿಗೆ ಲುವಾಂಡಾದಲ್ಲಿ ಇಂಡಿಯನ್ ರೆಸ್ಟೊರೆಂಟ್ ಒಂದರ ಒಳಹೊಕ್ಕಿದ್ದ ನನಗೆ ಆತ್ಮೀಯ ಸ್ವಾಗತವೇ ಸಿಕ್ಕಿತ್ತು. ಇಟ್ಟಿದ್ದ ದೊಡ್ಡದೊಂದು ಟೆಲಿವಿಷನ್ನಿನಲ್ಲಿ ‘ಮೊಹಬ್ಬತೇ’ ಚಿತ್ರದ ಹಾಡಿಗೆ ಗುಳಿಕೆನ್ನೆಯ ಶಾರೂಖ್ ಖಾನ್ ಕುಣಿಯುತ್ತಿದ್ದ. ಮುಂದೆ ಅತಿಥಿಯೊಬ್ಬರನ್ನು ಕರೆದುಕೊಂಡು ಅದೇ ಜಾಗಕ್ಕೆ ಹೋದರೆ ರೆಸ್ಟೊರೆಂಟ್ ಮುಚ್ಚಿಹೋಗಿದೆ ಎಂಬ ವರ್ತಮಾನವನ್ನು ತಿಳಿದು ನಿರಾಶರಾಗಬೇಕಾಯಿತು. ಅಂದಹಾಗೆ ಲುವಾಂಡಾ ಭಾರೀ ದುಬಾರಿ ನಗರ. ಲುವಾಂಡಾದ ಒಳ್ಳೆಯ ರೆಸ್ಟೊರೆಂಟಿನಲ್ಲಿ ಮಧ್ಯಾಹ್ನದ ಒಂದು ಊಟಕ್ಕೆ ನಾವು ಬರೋಬ್ಬರಿ ಮೂವತ್ತು ಸಾವಿರ ಕ್ವಾಂಝಾ (ಸುಮಾರು ನೂರಾ ಎಂಭತ್ತು ಡಾಲರ್) ಮೊತ್ತವನ್ನು ವ್ಯಯಿಸಿದರೆ ಅದೇ ಮೂವತ್ತು ಸಾವಿರ ಕ್ವಾಂಝಾಗಳಲ್ಲಿ ವೀಜ್ ಪ್ರದೇಶದಲ್ಲಿ ಒಂದಿಡೀ ತಿಂಗಳ ಖರ್ಚನ್ನು ನಾನು ಸವೆಸಬಲ್ಲೆ. ಜಗತ್ತಿನ ಅತ್ಯಂತ ದುಬಾರಿ ಮಹಾನಗರಗಳಲ್ಲಿ ಅಂಗೋಲಾದ ಲುವಾಂಡಾ ಕೂಡ ಒಂದು. ಈ ನಿಟ್ಟಿನಲ್ಲಿ ಜ್ಯೂರಿಚ್, ಹಾಂಗ್-ಕಾಂಗ್ ನಗರಗಳನ್ನೂ ಕೂಡ ಲುವಾಂಡಾ ಮೀರಿಸಿದೆ. ದೇಶದ ಸಂಪತ್ತೆಂಬುದು ಸರಿಸಮವಾಗಿ ಹಂಚಿಹೋಗದೆ ಮಹಾನಗರವೊಂದಕ್ಕೇ ಸೀಮಿತವಾಗಿಬಿಟ್ಟರೆ ಏನಾಗುತ್ತದೆ ಎಂಬುದಕ್ಕೆ ಅಂಗೋಲಾ-ಲುವಾಂಡಾ ಒಂದೊಳ್ಳೆಯ ನಿದರ್ಶನ.

ಅಂಗೋಲನ್ ಆಹಾರಪದ್ಧತಿಯ ಬಗ್ಗೆ ಬರೆಯುವುದಾದರೆ ಇನ್ನೂ ಸಾಕಷ್ಟಿದೆ. ಆದರೆ ಸದ್ಯಕ್ಕಿಷ್ಟೇ. ಈ ಬಾರಿ ಚೌತಿ, ಕೃಷ್ಣಾಷ್ಟಮಿ ಹೀಗೆ ಹಬ್ಬಗಳದ್ದೇ ತಿಂಗಳಾಗಿದ್ದರಿಂದ ಭಾರತೀಯ ಮನೆಗಳಲ್ಲಿ ಬಗೆಬಗೆಯ ಭಕ್ಷ್ಯಗಳು ತಯಾರಾಗುವುದಂತೂ ಸತ್ಯ. ಆಹಾರವನ್ನು ಸವಿಯುವುದರ ಜೊತೆಗೆ ಪೋಲಾಗದಂತೆಯೂ ಗಮನಹರಿಸೋಣ. ಎಲ್ಲರ ಹೊಟ್ಟೆಯೂ ತಣ್ಣಗಿರಲಿ!

———

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾದ ಪ್ರಸಾದ್ ನಾಯ್ಕ್ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಪಡೆದವರು. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಕ್ಕಮಟ್ಟಿಗೆ ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 4 days ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

 • 6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 1 week ago No comment

  ಕೈಯ ಕನ್ನಡಿ ಹಿಡಿದು…

        ಕವಿಸಾಲು       ಕಾಲವೊಂದಿತ್ತು… ಕೈಯ ಕನ್ನಡಿ ಹಿಡಿದು ಕುರುಳ ತಿದ್ದುವ ನೀರೆ ನಾನಾಗ.. ದಶಕಗಳ ಕಾಲ ಸಂದಿದೆ… ಈಗ, ಆ ಕನ್ನಡಿಯೂ ಇಲ್ಲ… ಆ ಚೆಲುವಿನ ಮೋಡಿಯೂ ಇಲ್ಲ.. ನೆರಿಗೆ ತುಂಬಿದ ಕೈ.. ನರೆಗೂದಲು ತುಂಬಿದ ಬೆಳ್ಳಿಬುಟ್ಟಿ ತಲೆ.. ಆಸರೆ ಬಯಸುವ ದೇಹ… ಪ್ರೀತಿಗಾಗಿ ಕಾತರಿಸುವ ಕಂಗಳು… ನಗುವ ಹುಡುಕಿ ಬಿರಿಯಲೆಳಸುವ ಬೊಚ್ಚು ಬಾಯಿ‌.. ‌ಹೃದಯದಾಳದಿಂದ ಬಂದರೂ ನಾಲಿಗೆಯಡಿಯಲ್ಲಿ ಹೇಳಬಯಸುವ ನುಡಿಗಳು ...

 • 1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...


Editor's Wall

 • 15 February 2018
  6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  1 week ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  1 week ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...

 • 08 February 2018
  2 weeks ago No comment

  ಇದು ಕ್ರಾಂತಿ ಪರ್ವ

                    ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ.   ಮೊನ್ನೆ ಮನ್ಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ) ನಿರ್ದೇಶನದ ‘ಹರಿವು’ ಚಿತ್ರ ನೋಡುವಾಗ ಅದೆಷ್ಟು ಸಲ ಕನ್ನಡಕ ತೆಗೆದು ಕಣ್ಣೊರೆಸಿಕೊಂಡೆನೋ! ಆಶಾ ಬೆನಕಪ್ಪ ಅವರು ಪ್ರಜಾವಾಣಿಯಲ್ಲಿ ಬರೆದ ...