Share

ಶಬ್ದ ಮತ್ತು ನಿಶ್ಶಬ್ದಗಳ ಜೊತೆ ಸರಸ
ನಾಗರಾಜ್ ಹರಪನಹಳ್ಳಿ

 • Page Views 230
 • ಪುಸ್ತ ಕ ಅವಲೋಕನ

  ಹರಿದು ಕೂಡುವ ಕಡಲು (ಗಜಲ್‍ಗಳು)
  ಲೇ: ಗಣೇಶ್ ಹೊಸ್ಮನೆ
  ಪ್ರ: ಲಡಾಯಿ ಪ್ರಕಾಶನ, ಗದಗ
  ಬೆಲೆ: ರೂ.60

   

  ಣೇಶ್ ಹೊಸ್ಮನೆ ಕೃಷಿಕ. ಶಿರಸಿಯ ಜಾನ್ಮನೆಯ ಕೃಷಿಕ ಕವಿ. ಗಣೇಶ ಹೊಸ್ಮನೆ ಸಹೃದಯಿ ಮನುಷ್ಯ. ಪ್ರಚಾರ ಬಯಸದ, ತನ್ನಷ್ಟಕ್ಕೆ ತಾನು ಬರೆಯುತ್ತಾ, ಲೋಕದ ವಿದ್ಯಮಾನಗಳಿಗೆ ಕಿವಿಯಾಗುತ್ತಾ, ಅದಕ್ಕೆ ಅಕ್ಷರಗಳ ಮೂಲಕ ಪ್ರತಿಕ್ರಿಯಿಸುತ್ತಾ ಬದುಕುತ್ತಿರುವವರು. ಕೃಷಿಯ ಬಿಡುವಿನ ನಡುವೆ ಸಮಯ ಸಿಕ್ಕಾಗ ಮಾತ್ರ ಕವಿಗೋಷ್ಠಿಗಳಿಗೆ, ಕರೆದರೆ ಮಾತ್ರ ಬರುವ ಅವರು ಸಾಹಿತ್ಯ ಜಗತ್ತನ್ನು ಸಹ ಮೌನವಾಗಿ ಗ್ರಹಿಸುತ್ತಾ ಬಂದವರು.

  ಅವರ ಗಜಲ್‍ಗಳನ್ನು ಓದುತ್ತಿದ್ದರೆ ಮೌನವಾಗಿಯೇ ಅವರು ಕನ್ನಡವನ್ನು ಸತ್ವಯುತವಾಗಿ ಬಳಸಿರುವುದು ಮನದಟ್ಟಾಗುತ್ತದೆ. ಗಜಲ್‍ಗಳಲ್ಲಿ ಕನ್ನಡತನವನ್ನು ತುಂಬಿದ ಅವರು, ನೆಲದ ಸತ್ವಯುವ ಗಜಲ್ ಬರಹಗಾರರ ಸಾಲಿಗೆ ಸೇರುತ್ತಾರೆ. ತುಂಬಾ ತದ್ವಿರುದ್ಧವಾಗಿ ಚಲಿಸುವ ಗುಣ ಕವಿಗೆ ದಕ್ಕಿರುತ್ತದೆ ಎಂಬ ಮಾತು ಗಣೇಶ್ ಅವರ ಗಜಲ್ ಓದಿದಾಗ ಅನ್ನಿಸಿತು. ಅಂಗೈನಲ್ಲಿ ಆಕಾಶ ಹಿಡಿದು ತೋರಿಸುವ ಅವರ ಗಜಲ್‍ಗಳು, ನಿಸರ್ಗವನ್ನು ಹಿಡಿದು ಬಿಡುವ ಅವರ ವಿಶಿಷ್ಟ ಗುಣ ಎದ್ದು ಕಾಣುವಂತಹದ್ದು. ಮನಸ್ಸಿನ ವ್ಯಾಪಾರ, ಪ್ರಕೃತಿಯ ಬೆಡಗು, ಹೆಣ್ಣಿನ ಸಾನಿಧ್ಯದ ಬೆಳಕು ಎಲ್ಲವೂ ಹರಿದು ಕೂಡುವ ಕಡಲಿನಲ್ಲಿದೆ. ಕೃಷಿ ಮತ್ತು ಬದುಕಿನ ಚಲನೆಯನ್ನು ಗಜಲ್ ಪ್ರಕಾರದಲ್ಲೆ ಬೆಸೆಯುವ ಅವರು ವರ್ತಮಾನಕ್ಕೆ ಮುಖಾಮುಖಿಯಾಗುವ ಬಗೆ ಸಹ ಇಲ್ಲಿದೆ. ಜೀವನದ ತಾತ್ವಿಕತೆಯನ್ನು ಸರಳವಾಗಿ ಹೇಳ ಹೊರಡುವ ಕೃಷಿಕ ಕವಿಯನ್ನು ಈ ಸಂಕಲನದಲ್ಲಿ ಕಾಣಬಹುದು.

  ಎಲ್ಲಿ ನನ್ನ ಕಂಬನಿಗಳು ಚೆಲ್ಲಿವೆಯೆಂದು ತಿಳಿದೆ
  ಅಲ್ಲಿಯೇ ನನ್ನ ಖುಷಿಯಿದೆಯೆಂದು ತಿಳಿದೆ

  ಎಲ್ಲಿ ನನ್ನನ್ನು ಕೊಲ್ಲಲಾಗಿದೆಯೋ ಗೆಳೆಯಾ
  ಅಲ್ಲಿಯೇ ನನ್ನ ಜೀವವಿದೆಯೆಂದು ತಿಳಿದೆ

  ಎಲ್ಲಿ ನನ್ನನ್ನು ದ್ವೇಷಿಸಲಾಗುತ್ತಿದೆಯೆಂದು ತಿಳಿದೆ
  ಅಲ್ಲಿಯೇ ನನ್ನ ಪ್ರೀತಿಯಿದೆಯೆಂದು ತಿಳಿದೆ

  ಎಲ್ಲಿ ನನ್ನ ಕತ್ತಲಿದೆಯೋ ಗೆಳೆಯಾ
  ಅಲ್ಲಿಯೇ ನನ್ನ ಕನಸುಗಳಿವೆಯೆಂದು ತಿಳಿದೆ!

  ಈ ಗಜಲ್ ಓದುವಾಗ ಪ್ರೀತಿಯಿಲ್ಲದೇ ಜಗಳ ಕೂಡ ಮಾಡಲಾರೆ ಎಂಬ ಕವಿ ಚಂಪಾ ಅವರ ಮಾತು ನೆನಪಾಯಿತು. ಹಾಗೆ ಕತ್ತಲಿರುವ ದಾರಿಯಲ್ಲಿ ನಡೆಯಬಹುದು, ಕನಸುಗಳಿಲ್ಲದ ದಾರಿಯಲ್ಲಿ ನಡೆಯಲಾರೆ ಎಂಬ ಮಾತು ಸಹ ಮಿಂಚಿಹೋಯಿತು. ಕೊಲ್ಲುವಲ್ಲಿ ಜೀವ ಹುಡುಕಬೇಕು. ದ್ವೇಷಿಸುವಲ್ಲಿ ಪ್ರೀತಿಯನ್ನು ಹುಡುಕಬೇಕು. ಇದು ಬದುಕಿನ ತತ್ವ. ಹಾಗೆ ಮಾಡದಿದ್ದರೆ ಪಲಾಯನವಾದವಾಗುತ್ತದೆ. ಸಾಹಿತ್ಯದ ಮೂಲ ತತ್ವವನ್ನು ಈ ಗಜಲ್ ನಿವೇದಿಸುತ್ತದೆ.

  ರಾತ್ರಿ ಮತ್ತು ಬೆಳದಿಂಗಳನ್ನು ಗಣೇಶ್ ಬೆಸೆಯುವ ಪರಿ ನೋಡಿ; ನಿನ್ನ ಕಣ್ಣಿನ ಕಾಂತಿಯಾದರೂ ಇರಲಿ ನನ್ನ ರಾತ್ರಿಗಳಲ್ಲಿ/ನಿನ್ನ ಒಲವಿನ ಬೆಳದಿಂಗಳಾದರೂ ಇರಲಿ ನನ್ನ ರಾತ್ರಿಗಳಲ್ಲಿ/ ಬದುಕಲೇನಿದೆ ನನ್ನೊಳಗೆ? ಬರಿದೆ ನಶ್ವರವೆಲ್ಲ / ನಿನ್ನ ಜೀವದ ಸ್ಪರ್ಶವಾದರೂ ಇರಲಿ ನನ್ನ ರಾತ್ರಿಗಳಲ್ಲಿ ಎನ್ನುವಲ್ಲಿ ಹೆಣ್ಣಿನ, ಪ್ರಕೃತಿಯ ಸಾನಿಧ್ಯ ಮತ್ತು ಅನಿವಾರ್ಯತೆಯನ್ನು ಹೇಳುತ್ತಾರೆ.

  ಸಾವನ್ನು ಕುರಿತು ಬರೆಯುವಾಗ `ಬೆಳಕು-ನೆರಳಿನಾಟದಲೇ ಬೆಳೆದು ಉಳಿದುಕೊಂಡಿದೆ ಜಗವು/ಆಟ ಮುಗಿಯುವ ಮೊದಲೇ ಜೀವಗಳ ಕರೆಯದಿರು ಕತ್ತಲೆಯೇ!’ ಎನ್ನುತ್ತಾರೆ. ಇನ್ನೊಂದು ಗಜಲ್‍ನಲ್ಲಿ ಬದುಕಿರುವ ಪಾಪವನೆಂದಿಗೂ ಸಾವು ಕ್ಷಮಿಸದು ಹೊಸ್ಮನೆ/ಸಾವನೂ ಮರೆಸಿದ ಪ್ರೀತಿಯ ನೋವುಗಳೇ ಹೂವಾಗಿ ಅರಳಿವೆ! ಎನ್ನುತ್ತಾರೆ. ಅನೇಕ ವೈರುದ್ಧ್ಯಗಳನ್ನು ಮುಖಾಮುಖಿಯಾಗಿಸುವ ಬಗೆ ಇದು.

  ಕೃಷಿ ಮತ್ತು ಕಾವ್ಯ ಕೃಷಿಯನ್ನು ಜೊತೆಜೊತೆಯಾಗಿ ಮಾಡುವ ಇವರ ಮತ್ತೊಂದು ಗಜಲ್ ಹೀಗಿದೆ…

  “ಮುಗಿಲು ಹನಿ ಚೆಲ್ಲುತಿದೆ,ಹಸಿರಾಗಿ ನೆಲದೊಳಗೆ ಚಿಗುರೋಣ ಜತೆಯಾಗಿ
  ಪ್ರೀತಿಯ ಬೀಜಗಳ ಹೊತ್ತು ಹೂವಾಗಿ ಅರಳೋಣ ಜತೆಯಾಗಿ
  ಮುನಿಸು, ಆಕ್ರೋಶ ದ್ವೇಷಗಳು ಬಂದು ಹೋಗುವವು ಬರಸಿಡಿಲಿನಂತೆ
  ಚೆಲ್ಲಿದ ಮುಗಿಲ ಹನಿಗಳಷ್ಟೇ ಬೊಗಸೆಯಲಿ ಹಿಡಿಯೋಣ ಜತೆಯಾಗಿ…” ಎನ್ನುತ್ತಾ ಮೌನವಾಗಿಯೇ ಇದ್ದು ಸೋಲುತಲಿ ಜೀವನವ ಜಯಿಸೋಣ ಜತೆಯಾಗಿ/ ಬೆರೆತು ಇನ್ನೊಬ್ಬರ ಆತ್ಮದೊಳಗಾದರೂ ಬದುಕಿ ಉಳಿಯೋಣ ಜತೆಯಾಗಿ! ಎಂಬುದು ಕೃಷಿಕನ ತತ್ವ, ಕವಿಯ ತತ್ವವೂ ಕೂಡಾ ಆಗಿದೆ.

  “ಕಾಗದದ ಚೂರಿನಲಿ ಅಳೆಯಲಾಗುವುದಿಲ್ಲ ಜನರ ಕಿಮ್ಮತ್ತನು
  ಕೈತುಂಬ ಉಳ್ಳವರ ನಡತೆಯಲಿ ಅನ್ಯಾಯ ಇರಬಾರದೆಂದೇನೂ ಇಲ್ಲ” ಎಂಬಲ್ಲಿ ಮನುಷ್ಯನ ಒಳಗಿನ ದಬ್ಬಾಳಿಕೆ, ಆದರ್ಶ ಹೇಳುತ್ತಾ ಟೊಳ್ಳುತನದಲ್ಲಿ ಬದುಕುವುದನ್ನು ವಿಡಂಬಿಸುತ್ತಲೇ ಪರಿಮಳದ ಹೂವುಗಳು ಕೆಸರಿನಲಿ ಅರಳಬಾರದೆಂದೇನೂ ಇಲ್ಲ! ಎಂಬ ಆಶಾವಾದವನ್ನು ತುಂಬುತ್ತಾನೆ ಕವಿ.

  ನಾ ಹುಟ್ಟುವ ಮೊದಲೇ ಹುಟ್ಟಿದೆ ಬದುಕು ಎನ್ನುವ ಧರ್ಮ, ಯಾರನೂ ಕೊಲ್ಲಬೇಕಿಲ್ಲ ಅದಕಾಗಿ ನಾನು ಎಂಬ ಮನುಷ್ಯತ್ವವನ್ನು ಓದುಗನ ಮುಂದಿಡುತ್ತಾ, ಪ್ರೀತಿ ಬೇಕಿದೆ ಎಂದು ಜಗವ ದ್ವೇಷಿಸುವುದು ಹೇಗೆ? ಎಂಬ ಪ್ರಶ್ನೆಯನ್ನು ಸಹೃದಯನಿಗೆ ಎಸೆಯುವ ಗಣೇಶ್, ಹರಿವ ಹೊಳೆಗಳ ಸುಳಿಯ ಸೆಳವನು ದಾಟಿ ಬಂದೆ/ ಹರಿಯಲಾಗದೇ ಅಲೆವ ಕಡಲ ಅಲೆಗಳನು ದಾಟಿ ಬಂದೆ/ ಸ್ವರ್ಗದ ಬಾಗಿಲಲ್ಲಿ ನಾನೆಂದಿಗೂ ನಿಲ್ಲದಿರಲಿ/ ನನ್ನನ್ನು ಬರಿ ಮನುಷ್ಯನನ್ನಾಗಿಸಿ ಸದಾ ಈ ಭೂಮಿಯಲ್ಲಿ!! ಎಂಬ ಆಶಯದ ಗಜಲ್ ಎಲ್ಲಾ ಮನುಷ್ಯರ ಬಯಕೆಯೂ ಆಗಿದೆ.

  ————-

  ನಾಗರಾಜ್ ಹರಪನಹಳ್ಳಿ

  nhಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ  ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, ಸದ್ಯ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ, ಲೋಕದರ್ಶನ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ  ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.

  Share

  Related Post

  Related Blogpost

  Leave a comment

  Your email address will not be published. Required fields are marked *

  Recent Posts More

  • 4 hours ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 18 hours ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 day ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

  • 1 day ago No comment

   ಬದುಕು ಬರಿ ಗಿಲೀಟು

   (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

  • 2 days ago One Comment

   ನಾನು ಮತ್ತು ನೀನು

   ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help