Share

ಗಾಂವಟಿ ಕಥೆಗಳ ಸೊಗಸು
ಶ್ರೀದೇವಿ ಕೆರೆಮನೆ

ಪುಸ್ತಕ ಅವಲೋಕನ

 

ಮಂಡಕ್ಕಿ ತಿಂದ ಗಂಗೆ (ಕಥಾ ಸಂಕಲನ)

ಲೇ: ಶಾಂತಾರಾಮ ನಾಯಕ ಹಿಚಕಡ

~

ವಿವಿಧ ಮಜಲುಗಳ ಕಥಾ ಹಂದರವನ್ನ ಚಂದದ ಮಲ್ಲಿಗೆಯ ಮಾಲೆಯಂತೆ ಹಣೆದುಕೊಟ್ಟಿರುವ ಶಾಂತಾರಾಮ ನಾಯಕರ ಪ್ರಥಮ ಕಥಾ ಸಂಕಲನ ನಮ್ಮೊಳಗಿನ ತಲ್ಲಣಗಳನ್ನು ಎದುರಿಗೆ ತೆರೆದಿಟ್ಟು ಆತ್ಮೀಯವಾಗಿ ನಮ್ಮೊಳಗೆ ನಾವೇ ಮಾತನಾಡಿಕೊಳ್ಳುವಂತೆ ಮಾಡುತ್ತದೆ. ಇಂದಿನ ಮೆಟ್ರೋಪಾಲಿಟನ್ ಕಥೆಗಳ ಅತೀತ ಲೋಕದಲ್ಲಿ ಮೈ ಮರೆತವರಿಗೆ ಅಪ್ಪಟ ಗ್ರಾಮೀಣ ಸೊಗಡಿನ ‘ಮಂಡಕ್ಕಿ ತಿಂದ ಗಂಗೆ’ ಸಂಕಲನದ ಕಥೆಗಳು ವಾಸ್ತವಕ್ಕೆ ಮರಳುವಂತೆ ಮಾಡುತ್ತವೆ.

ಕಥಾ ಹಂದರಗಳು ಬೇರೆ ಬೇರೆ ಆಗಿದ್ದರೂ ಕಥೆಯ ಒಳಾಂತರಂಗ ಮಾತ್ರ ಮನುಷ್ಯನ ಒಳತೋಟಿಯನ್ನು ಯಶಸ್ವಿಯಾಗಿ ಚಿತ್ರಿಸುತ್ತದೆ. ಬದುಕೆಂಬುದು ಕೇವಲ ಸುಖದ ಆಗರವೂ ಅಲ್ಲ, ಹಾಗಂತಾ ದುಃಖವೇ ಘನಿರ್ಭವಿಸಿರುವುದಿಲ್ಲ. ಸುಖ ಮತ್ತು ದುಃಖ ಸಮಸಮವಾಗಿ ಬೆರೆತಿರುತ್ತದೆ ಎಂಬುದನ್ನು ಈ ಕಥೆಗಳು ಅರ್ಥ ಮಾಡಿಸುತ್ತವೆ. ಒಟ್ಟೂ ಹತ್ತು ಕಥೆಗಳಿರುವ ಈ ಸಂಕಲನದಲ್ಲಿ ಒಟ್ಟಾರೆ ಭಾಷಾ ಬಳಕೆಯು ಇನ್ನಿಲ್ಲದಂತೆ ಸೆಳೆಯುತ್ತದೆ. ಕೇವಲ ರಾಜಧಾನಿಯ ಶಿಷ್ಟ ಭಾಷೆ ಮಾತ್ರ ನಮ್ಮನ್ನು ಸೆಳೆಯುವ ಸಾಧನವಾಗಿರುವ ಈ ವಿಚಿತ್ರ ಕಾಲಘಟ್ಟದಲ್ಲಿ ಅಂಕೋಲೆಯ ತೀರಾ ಗ್ರಾಮ್ಯ ಭಾಷೆಯನ್ನು ಯಶಸ್ವಿಯಾಗಿ ದುಡಿಸಿಕೊಂಡ ಶಾಂತಾರಾಮ ನಾಯಕರ ಶಕ್ತಿ ಅಕ್ಷರಗಳಲ್ಲಿ ಎದ್ದು ಕಾಡುತ್ತದೆ. ಸರಳ ಭಾಷೆಯ, ಗ್ರಾಮೀಣ ಸೊಗಡಿನ ಈ ಕಥೆಗಳು ಮೇಲ್ನೋಟಕ್ಕೆ ಹೇಳುವುದಕ್ಕಿಂತ ಹೆಚ್ಚಾಗಿ ಬೇರೆ ಏನನ್ನೋ ಧ್ವನಿಸುತ್ತಿರುವುದು ಸೂಕ್ಷ್ಮವಾಗಿ ಓದಿದಾಗ ಅರಿವಿಗೆ ಬರುತ್ತದೆ.

‘ತಿಪ್ಪಜ್ಜಿಯ ಕೋಳಿ ಮರಿಗಳು’ ಎಂಬ ಮೊದಲ ಕಥೆಯನ್ನೇ ತೆಗೆದುಕೊಳ್ಳಿ. ಎಲ್ಲಿಂದಲೋ ಹದ್ದು ಕಚ್ಚಿಕೊಂಡು ಬಂದು ಬೀಳಿಸಿದ ಮರಿಯೊಂದನ್ನು ಜತನದಿಂದ ಕಾಪಾಡಿಕೊಂಡ ತಿಪ್ಪಜ್ಜಿಯಲ್ಲಿ ಒಂದೇ ಕನಸು. ಅವಳ ಮದುವೆಯಲ್ಲಿ ಗಂಡ ಒಡೆಯನ ಹತ್ತಿರ ಪಡೆದ ಮುವತ್ತು ರೂಪಾಯಿಯ ಸಾಲವನ್ನು ಹೇಗಾದರೂ ತೀರಿಸುವ ಹೊಣೆಯನ್ನು ಗಂಡ ಸಾಯುವಾಗ ಅವಳ ಮೇಲೆ ಹೊರೆಸಿ ಹೋಗಿದ್ದ. ಹೀಗಾಗಿ ಆತನ ಕೊನೆಯ ಆಸೆಯನ್ನು ಈಡೇರಿಸಲೇಬೇಕಾದ ಒತ್ತಡದಲ್ಲಿ ಆ ಹಣ್ಣು ಹಣ್ಣು ಮುದುಕಿಯಿದ್ದಳು. ಒಂದೇ ಒಂದು ಕೋಳಿ ಮರಿ ಬೆಳೆದು ಮೊಟ್ಟೆ ಇಟ್ಟು ಮರಿ ಮಾಡಿ, ಆ ಮರಿಗಳೆಲ್ಲವೂ ಒಂದೊಂದೇ ನಾನಾ ಕಾರಣದಿಂದ ಇಲ್ಲವಾಗಿ, ಕೊನೆಯಲ್ಲಿ ಉಳಿದ ಎರಡು ಕೋಳಿಗಳಲ್ಲಿ ಒಂದನ್ನು ಸ್ವಂತ ಮಗನೇ ಕದ್ದೊಯ್ದ ನಂತರವೂ ಇರುವ ಒಂದು ಹುಂಜವನ್ನು ಮಾರಿ ಮೂವತ್ತೈದು ರೂಪಾಯಿಯಲ್ಲ ಸಾಲ ತೀರುವ ಕನಸು ಕಾಣುತ್ತಿದ್ದವಳಿಗೆ ಅಲ್ಲಿಯೂ ವಿಧಿ ಕಬ್ಬೆಕ್ಕಿನ ರೂಪದಲ್ಲಿ ಮೋಸ ಮಾಡುತ್ತದೆ.

ಎರಡನೇ ಕಥೆ ‘ಬಾಳೆಗೊನೆ ಮತ್ತು ಚಿಗರೆಕೋಡು’ ಕೂಡ ಬಾಳೆಗೊನೆಯನ್ನು ಹಾಗೂ ಹಿಂದೆಂದೋ ಮನೆಯಲ್ಲಿದ್ದ ಚಿಗರೆ ಕೋಡನ್ನು ಮಾರಿ ಮನೆ ಮಕ್ಕಳಿಗೆ ಹಬ್ಬಕ್ಕೆ ಏನನ್ನಾದರೂ ತೆಗೆದುಕೊಂಡು ಹೋಗಬೇಕೆಂದುಕೊಂಡಿದ್ದ ಸುಕ್ರು ಗೌಡ ಅಂಕೋಲೆ ಪೇಟೆಯಲ್ಲಿನ ಕೇಳಿ ಶಂಕರನ ದೌಲತ್ತಿನಲ್ಲಿ ನಲುಗಿ ಹಬ್ಬವೂ ಬೇಡ, ಹೊಸ ಬಟ್ಟೆಯೂ ಬೇಡ, ಜೈಲು ಶಿಕ್ಷೆ ಆಗದೇ ಮನೆ ಸೇರಿದರೆ ಸಾಕು ಎಂದು ಕೊಂಡವ ಸ್ಟೇಷನ್ನಿನಲ್ಲಿನ ಪೋಲಿಸರ ಆರ್ಭಟಕ್ಕೆ ನಡುಗಿ ಹಾಗೂ ಹೀಗೂ ಮನೆಗೆ ಬಂದವನೇ ಅವ್ಯಕ್ತ ರೋಷ ಹೊಂದಿದ ಮುಖಭಾವದಲ್ಲಿ ಅಸಹಾಯಕತೆಯ ನೋವನ್ನು ಬಾಳೆಗಿಡವನ್ನು ಕಡಿದೆಸೆಯುವುದರ ಮೂಲಕ ವ್ಯಕ್ತಪಡಿಸಿದ್ದು ಇಲ್ಲಿ ರೂಪಕವೆಂಬಂತೆ ಬಂದಿದೆ.

ಇವೆರಡೂ ಕಥೆಗಳಲ್ಲಿ ಕಂಡುಬರುವ ಅಸಹಾಯಕತೆ, ಸಾಮಾಜಿಕ ಶ್ರೇಣಿಗಳಲ್ಲಿ ಕಂಡುಬರುವ ಶೋಷಣೆ ನಮ್ಮನ್ನು ಆಳವಾಗಿ ತಟ್ಟುತ್ತದೆ. ತಿಪ್ಪಜ್ಜಿಯ ಗಂಡ ಸಾಯುವ ಮುನ್ನ ತನ್ನ ಮದುವೆಗೆ ಮಾಡಿದ ಸಾಲಕ್ಕಾಗಿ ಒಡೆಯನ ಮನೆಯಲ್ಲಿ ಜೀತ ಮಾಡಿದಾಗ್ಯೂ ಒಡೆಯನ ಬಾಯಿಂದಲೇ ಸಾಲ ತೀರಿದೆ ಎಂಬ ಒಂದು ಸಾಲಿಗಾಗಿ ಕಾತರಿಸಿ ಕಾದವನು ಕೊನೆಗೂ ಅದನ್ನು ಕೇಳದೇ ಮರಣಶಯ್ಯೆಯಲ್ಲಿರುವಾಗಲೂ ತೀರಿದೆ ಎಂದು ಆತನ ಒಡೆಯ ಒಮ್ಮೆಯಾದರೂ ಹೇಳಲಿಲ್ಲವೆಂದು ತನ್ನ ಹೆಂಡತಿಗೆ ಸಾಲ ತೀರಿಸಲು ಹೇಳಿದವನು. ಗಂಡನಿಗೆ ಕೊಟ್ಟ ಮಾತಿನಂತೆ ಜೀವಮಾನವಿಡೀ ಜೀತ ಮಾಡಿದರೂ ಸಾಲ ತೀರಿಸಲಾಗದ ತಿಪ್ಪಜ್ಜಿ ಕೊನೆಗೂ ಕೋಳಿ ಮಾರಿ ಸಾಲ ತೀರಿಸಬೇಕೆಂಬ ಆಸೆ ಈಡೇರದೆ ಹತಾಶಳಾಗುವುದಕ್ಕಿಂತ ಮನೆಯಲ್ಲೇ ಆಗಿದ್ದ ಬಾಳೆಗೊನೆಯನ್ನು ಮಕ್ಕಳಿಗೆ ತಿನ್ನಲೆಂದು ಬಿಡದೇ ಪೇಟೆಯಲ್ಲಿ ಮಾರುವುದರ ಜೊತೆಗೆ ಹಿಂದೆಂದೋ ಮನೆಯಲ್ಲಿದ್ದ ಚಿಗರೆ ಕೋಡನ್ನು ಮಾರಿ ಹಬ್ಬ ಆಚರಿಸುವ ಇರಾದೆಯಿಂದ ಪೇಟೆಗೆ ಬಂದ ಗೌಡ ಕೇಳಿ ಶಂಕರನ ಉಚಾಪತಿಯಿಂದ ನರಳಿ ಮನೆಯ ಬಾಳೆಗಿಡವನ್ನೆಲ್ಲ ಕಡಿದು ಹಾಕುವುದು ಇಂತಹುದ್ದೊಂದು ಶೋಷಣೆಯನ್ನು ವಿರೋಧಿಸುವ ಪ್ರತೀಕವಾಗಿ ಕಾಣುತ್ತದೆ.

ಉಳಿದ ಕಥೆಗಳಲ್ಲಿ ಮಾನವೀಯ ಸಂಬಂಧಗಳು ಪದರ ಪದರವಾಗಿ ನಮ್ಮೆದುರು ಬಿಚ್ಚಿಕೊಳ್ಳುವ ಪರಿಯೇ ಅನನ್ಯ. ಅಪ್ಪ ಯಾರು ಎಂದೇ ಗೊತ್ತಿಲ್ಲದ ರಮೇಶ ಊರವರ ಮಾತಿಗೆ ಬೇಸತ್ತು ತನ್ನ ಮಗಳ ಮದುವೆಯ ಹೊತ್ತಲ್ಲಿ ಎಂದೋ ತನ್ನ ತಾಯಿ ಮದುವೆ ಆಗಿದ್ದವನನ್ನು ಹುಡುಕಿ ಆತನೇ ತನ್ನಪ್ಪ ಎಂದು ಬಿಂಬಿಸುತ್ತ, ಅವನ ಅಲ್ಪ ಆಸ್ತಿಯಲ್ಲಿ ಪಾಲು ಪಡೆದು ಅದನ್ನು ಅಧೀಕೃತಗೊಳಿಸಿಕೊಳ್ಳಲು ಅಡ್ಡದಾರಿ ಹಿಡಿದನೋ ಎಂಬ ಅನುಮಾನದ ಜೊತೆ ಜೊತೆಗೇ ತನ್ನ ಕೆಲಸ ಸಾಧಿಸಿಕೊಳ್ಳಲು ಏನನ್ನಾದರೂ ಮಾಡುವ ಮನುಷ್ಯನ ಮೃಗೀಯತೆಯ ಅನಾವರಣಗೊಂಡರೆ, ಮನೆಯ ಬೆಕ್ಕಿನ ಮರಿಯನ್ನು ಹೊರಗೆ ದೂರ ಬಿಟ್ಟು ಬಂದ ನಂತರ ಆ ಬೆಕ್ಕು ತನ್ನ ಮರಿಗಳಿಗಾಗಿ ಪರಿತಪಿಸುವ ಪರಿನೋಡಿ ವಿಹ್ವಲನಾಗುವ ನಿರೂಪಕ ಬೆಕ್ಕಿನ ಅಸಹಾಯಕತೆಗೆ ಮರಗುವುದು ಒಂದೆಡೆಯಾದರೆ ಕನಸಿನಲ್ಲೂ ಬೆಕ್ಕು ತನಗೆ ತೊಂದರೆ ಕೊಟ್ಟೀತು ಎಂದೇ ಯೋಚಿಸಿ ಬೆಚ್ಚಿ ಬೀಳುವುದು ಬೆಕ್ಕಿನ ಬಿಡಾರದಲ್ಲಿ ಕಣ್ಣಿಗೆ ಕಟ್ಟಿದಂತೆ ಚಿತ್ರಿತವಾಗಿದ್ದರೆ, ಕಲ್ಪನೆಯಲ್ಲಿ ಬಿಡಿಸಿದ ಚಿತ್ರದ ಕನ್ಯೆ ಸಾಕಾರಗೊಂಡು ಆತ್ಮೀಯ ಗೆಳೆಯನ ಹೆಂಡತಿಯಾಗುತ್ತಿರುವ ಹೊತ್ತಿನಲ್ಲಿ ಮೂಡಿದ ಈರ್ಶ್ಯೆಗೆ ಉತ್ತರವೋ ಎಂಬಂತೆ ಅದೇ ದಿನ ಮರ ಮುರಿದು ಮರಣದ ಹೊಸ್ತಿಲಿನಲ್ಲಿರುವ ಗೆಳೆಯ ಏನೂ ಅರಿಯದ ಹೆಂಡತಿಗೆ ಬಾಳುಕೊಡುವಂತೆ ಬೇಡಿಕೊಂಡು ಬಯಸಿದ್ದು ಕಾಲಿಗೆಡರುವಂತೆ ಮಾಡುವುದು ಕಣ್ಣಲ್ಲಿ ನೀರು ತರಿಸುತ್ತದೆ.

ತನ್ನ ಮಗನಿಗೆ ಯಾರೂ ನಿರೀಕ್ಷಿಸಿರದ ಗೆಳೆಯನ ಹೆಸರನ್ನೇ ಇಡುವ ಆತನ ನಿರ್ಧಾರದ ಕಥೆ ಇರುವ ‘ನಾಮಕರಣ’ ಕಥೆಯಲ್ಲಿಯೂ ಆಸೆ, ಬಯಕೆ, ಹೊಟ್ಟೆಕಿಚ್ಚಿನ ಜೊತೆ ಜೊತೆಗೇ ಸ್ನೇಹದ ವ್ಯಾಪ್ತಿಯನ್ನೂ ಪರಿಚಯಿಸುತ್ತದೆ. ಸುಳ್ಳು ಸುಳ್ಳಿನ ಮಾತು ಹೇಳಿ ತಮ್ಮನ್ನು ತಾವು ಹೊಗಳಿಕೊಳ್ಳುವವರ ಬದುಕಿನ ಮೂರಾಬಟ್ಟೆಯ ಚಿತ್ರಣವಾಗಿ ಸುರೇಶನಿಗೆ ಎಂತಾ ಆಯ್ತು ಇದ್ದರೆ ಪ್ರಾಯಶ್ಚಿತ್ತ ಹತ್ತಾರು ಜನರ ಬಾಯಲ್ಲಿ ಹತ್ತಾರು ಕಥೆಗಳು ಹುಟ್ಟುವ ವಿಸ್ಮಯವನ್ನು ತೆರೆದಿಡುತ್ತದೆ. ಜೋಡೆತ್ತು ಮತ್ತು ರಾಮ ಹಾಗೂ ಭಗ್ನ ಮೂರ್ತಿ ಕಥೆಗಳು ಮಾಮೂಲಿ ಹೆಣ್ಣಿನ ಹಾದರವನ್ನೇ ಬಿಚ್ಚಿಡುವ, ಆ ಮೂಲಕ ಗಂಡೆಂಬ ಗಂಡಿನ ಮರ್ಯಾದೆ ಮುಕ್ಕಾಗುವ ವಿಷಯ ಒಳಗೊಂಡಿದೆ ಎನ್ನಿಸುತ್ತದೆಯಾದರೂ ಒಂದಿಡಿ ಸಂಸಾರದ ನೊಗವನ್ನು ತಾನೊಬ್ಬಳೇ ಹೊತ್ತುಕೊಂಡು ನಿಭಾಯಿಸಲು ಹೆಣ್ಣು ಪಡುವ ನೋವಿನ ಚಿತ್ರಣವನ್ನೂ ಅದು ತೆರೆದಿಡುವಲ್ಲಿ ಯಶಸ್ವಿಯಾಗುತ್ತದೆ.

ಕೊನೆಯ ಕಥೆ ‘ಮಂಡಕ್ಕಿ ತಿಂದ ಗಂಗೆ’ ಮಾತ್ರ ಸಾಂಗ್ಯಾ ಬಾಳ್ಯಾದ ಕಥೆಯನ್ನೊಳಗೊಂಡು ಮತ್ತದೇ ಹೆಣ್ಣಿನ ಹಾದರದ ಕಥೆಯೇನೋ ಎನ್ನುವ ಹೊತ್ತಿಗೆ ಅಲ್ಲ ಎಂಬುದು ಅರಿವಿಗೆ ಬರುತ್ತದೆ. ಆದರೆ ಹೆಣ್ಣು ಬಸಿರಾದರೆ ಅದಕ್ಕೆ ಆಕೆಯನ್ನು ದೂಷಿಸುವ ಸಮಾಜ ಅದಕ್ಕೆ ಕಾರಣವಾದವರನ್ನು ಮಾತ್ರ ಎದುರು ತಂದು ನಿಲ್ಲಿಸುವ ಧೈರ್ಯ ಮಾಡದಿರುವುದನ್ನು ಗಂಗೆ ತುಂಬಾ ಸೂಕ್ಷ್ಮವಾಗಿ ತನ್ನ ಮಾತುಗಳಲ್ಲಿ ಹೇಳುತ್ತಾಳೆ.

ಕಥಾ ಸಂಕಲನದ ಮತ್ತೊಂದು ಆಕರ್ಷಣೆ ಎಂದರೆ ಎಲ್ಲೂ ಶಬ್ದಭಾರಗಳಿಂದ ಕಥೆ ನಲುಗುವುದಿಲ್ಲ. ಅದು ಕಥೆಯ ಶೀರ್ಷಿಕೆಯೇ ಇರಬಹುದು ಅಥವಾ ಕಥಾ ವಿವರಣೆಯಲ್ಲಿಯೇ ಇರಬಹುದು. ಅಕ್ಷರಗಳು ಮೂಗಿಗಿಂತ ಮೂಗುತಿ ಭಾರ ಎಂದೆನಿಸುವಂತೆ ಮಾಡುವುದಿಲ್ಲ. ಸರಳವಾದ ಸುಲಲಿತವಾದ ಭಾವಗಳು ತನ್ನಿಂದ ತಾನೇ ಹರಿಯಬಿಟ್ಟಂತೆ ಗೋಚರವಾಗುತ್ತದೆ. ಅದಕ್ಕೆ ಕಾರಣ ಶಾಂತಾರಾಮ ನಾಯಕರ ಭಾಷಾ ಶೈಲಿ. ಎಲ್ಲಾ ಕಥೆಗಳು ಅಂಕೋಲೆಯ ಸುತ್ತಮುತ್ತಲೇ ನಡೆಯುವ ಘಟನೆಗಳಾಗಿರುವುದರಿಂದ 1963ರಿಂದ ಇಲ್ಲಿಯವರೆಗೆ ಬರೆದ ಎಲ್ಲಾ ಕಥೆಗಳಲ್ಲೂ ಭಾಷೆಯು ಒಡಕನ್ನು ಉಂಟು ಮಾಡುವುದಿಲ್ಲ ಎಂಬುದನ್ನು ಗಮನಿಸಬೇಕು.

ಒಂದು ಕಥಾ ಸಂಕಲನಕ್ಕಾಗಿ ಸುಮಾರು ನಾಲ್ಕು ದಶಕಗಳ ಕಾಲ ಕಾದ ಸಂಯಮಿ ಶಾಂತಾರಾಮ ನಾಯಕರು ಕಥೆಗಳನ್ನೂ ಕಾವ್ಯದಂತೆಯೇ ಕುಸುರಿ ಕೆತ್ತುವುದರಲ್ಲಿ ಎತ್ತಿದ ಕೈ ಎಂಬುದನ್ನು ಈ ಕಥೆಗಳು ತೋರಿಸಿಕೊಡುತ್ತಿವೆ. ಬತ್ತದ ಉತ್ಸಾಹ ಮತ್ತಿಷ್ಟು ಕಥೆಗಳನ್ನು ಬರೆಯಿಸಲಿ ಎಂಬುದು ನನ್ನ ಹಾರೈಕೆ.

———–————-

ಶ್ರೀದೇವಿ ಕೆರೆಮನೆ

shrಉತ್ತರ ಕನ್ನಡದ ಅಂಕೋಲದವರು. ವೃತ್ತಿಯಲ್ಲಿ ಶಿಕ್ಷಕಿ. ಕವಿತೆ, ಅಂಕಣ ಬರಹಗಳಿಂದ ಪರಿಚಿತರು.

Share

Leave a comment

Your email address will not be published. Required fields are marked *

Recent Posts More

 • 2 days ago No comment

  ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!

          ಕಥನ         ಅಜ್ಜ ಪೆನ್ಷನ್ ತರೋದಕ್ಕೆ ಅಂತ ಪೇಟೆಗೆ ಹೋಗಿದ್ದ. ಅಷ್ಟರಲ್ಲಿ ಮನೆ ಬಾಗಿಲಲ್ಲಿ ಕಾರು ಬಂದು ನಿಂತಿತು. ಕಾರಲ್ಲಿ ಅಜ್ಜಿಯ ಮಗ, ಸೊಸೆ ಮತ್ತೆ ಆರು ವರ್ಷದ ಮೊಮ್ಮಗ ಬಂದಿದ್ರು. ಅಜ್ಜಿಗೆ ಖುಷಿ ತಡೆಯಕ್ಕಾಗದೇ ಅಡಿಗೆ ಮನೆ ಸಂದಿ ಮೂಲೇನೆಲ್ಲಾ ಹುಡುಕಿದ್ಲು. ದಡಾ ಬಡಾ ಸದ್ದು ಮಾಡಿದ್ಲು, ಸರಾಪರಾ ಸದ್ದು ಮಾಡಿದ್ಲು. ಅಡುಗೆ ಮನೆಯಿಂದ ಕೊತಾಕೊತಾ ಸದ್ದು ...

 • 3 days ago No comment

  ವಸಂತದ ನೆನಪು; ಮಾಗುವ ಹುರುಪು!

    ಜಗತ್ತಿನ ಬಗ್ಗೆ ತಿಳಿಯುತ್ತ ಸಾಗಿ, ನಮಗೆ ಈ ಜಗತ್ತು ಹೀಗೆ ನಡೆಯುತ್ತಿದೆ ಅಂತ ಅರಿತುಕೊಳ್ಳುವವರೆಗಿನದು ಮಧ್ಯವಯಸ್ಸಿನ ಕಾಲ. ನಾವು ಅಲ್ಲಿಯವರೆಗೆ, ಕಲಿತದ್ದು, ಕೇಳಿದ್ದು, ನಮಗೆ ತಿಳಿದಿದ್ದು ಎಲ್ಲವೂ ಬದಲಾಗುವ ವೇಳೆಗೆ ನಮಗೆ ವಯಸ್ಸಾಗಿಬಿಟ್ಟಿರುತ್ತದೆ. ಕಾಲದಲ್ಲಿ ಹೊಸ ಚಿಗುರು ಟಿಸಿಲೊಡೆದಿರುತ್ತದೆ.     ಕುಣಿದಾಡುವಷ್ಟು ಚೈತನ್ಯವಿರುವ ಯೌವನಕ್ಕೂ, ಕುಂದಿದ ಶಕ್ತಿಯ ಇಳಿಗಾಲದ ವೃದ್ಧಾಪ್ಯಕ್ಕೂ ನಡುವೆ ಬರುವುದು ಮಧ್ಯವಯಸ್ಸು! ಹುಟ್ಟು, ಬದುಕು ,ಸಾವು ಎಲ್ಲರಿಗೂ ಬರುತ್ತದೆ. ಬದುಕನ್ನು ಹಲವರು ಸಾಧನೆಗಳ ...

 • 3 days ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ಬಂಗಾರದ ಹೊಳಪು, ಬೇಗುದಿಯ ನೆನಪು…

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

 • 1 week ago No comment

  ಪ್ರಸಾದ್ ನಾಯ್ಕ್ ಪಟ್ಟಾಂಗ | ನನಗೂ ಒಬ್ಬ ಗೆಳೆಯ ಬೇಕು…

  ಆ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನಗು ಉಕ್ಕುಕ್ಕಿ ಬರುತ್ತದೆ. ಅಂದು ವಿಚಿತ್ರ ಘಟನೆಯೊಂದು ನಡೆದಿತ್ತು. ಅವು ನನ್ನ ಕಾಲೇಜಿನ ದಿನಗಳು. ಮಂಗಳೂರಿನ ಶಾಪಿಂಗ್ ಮಾಲ್ ಒಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದ ನಾನು ಫುಡ್ ಕೋರ್ಟಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆ. ಎತ್ತ ಹೋಗಬೇಕೆಂದು ತಿಳಿಯದೆ ಸುಮ್ಮನೆ ಒಂದು ಕೌಂಟರಿನತ್ತ ನಡೆದು ಬೇಕಿದ್ದದ್ದನ್ನು ಆರ್ಡರ್ ಮಾಡಿದೆ. ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಆ ಹೆಂಗಸಿಗೆ ನನ್ನ ಆಗಮನವು ಅಂಥಾ ಉತ್ಸಾಹವೇನೂ ತರಲಿಲ್ಲವಾದರೂ ನಾನು ಹೇಳಿದ್ದನ್ನೆಲ್ಲಾ ...

 • 1 week ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ಭಕ್ತಿಯ ಉಬ್ಬರ… ವ್ಯಾಪಾರದ ಸಡಗರ…

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  1 month ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  1 month ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  2 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  2 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...