Share

ಎಲ್ಲರಂಥವನಲ್ಲ ನನ್ನಪ್ಪ!
ಡಾ. ಬಿ.ಬಿ. ರಾಜಪುರೋಹಿತ

 • Page Views 306
 • ಪ್ಪನನ್ನು ಕುರಿತ ಅನಿಸಿಕೆಗಳಾದ ‘ಎಲ್ಲರಂಥವನಲ್ಲ ನನ್ನಪ್ಪ’ ಎಂಬ ಗ್ರಂಥ ಹೊಸ ನಮೂನೆಯದಾಗಿದೆ. ಅಮ್ಮನನ್ನು ಕುರಿತು ಬರೆಯುವದು ಸಾಮಾನ್ಯವಾಗಿರುವಾಗ ಅಪ್ಪನನ್ನು ಕುರಿತು ಬರೆಯುವದು ಅಪರೂಪವೆಂದೇ ಹೇಳಬೇಕು. ವ್ಯಕ್ತಿ ಬೆಳೆದು ಬರುವ ಹಿನ್ನೆಲೆ ಇದಕ್ಕೆ ಕಾರಣವೆಂದೇ ಹೇಳಬೇಕು. ಹುಟ್ಟಿದ ಕ್ಷಣದಿಂದ ಅಮ್ಮನ ಮಡಿಲು, ಆಕೆಯ ಆರೈಕೆ, ಆಕೆ ತೋರುವ ಅಕ್ಕರೆ ಇವು ಸಾಮಾನ್ಯವಾಗಿ ಎಲ್ಲರೂ ಜೀವನದಲ್ಲಿ ಪಡೆಯುವ ಮೊದಲ ಅನುಭವ. 5-6ನೆಯ ವಯಸ್ಸಿನಲ್ಲಿ ಶಾಲೆಗೆ ಹೋಗತೊಡಗಿದಾಗಿನಿಂದ ಅಪ್ಪನ ದೇಖರೇಖಿಯ ಅನುಭವ ಪ್ರಾರಂಭವಾಗುತ್ತದೆ. ಇದು ಬಹುಜನರ ಅನುಭವ. ಕೆಲವು ಅಪ್ಪಂದಿರು ಮಗುವಿಗೆ ತಿಳುವಳಿಕೆ ಬರುವ 3-4ನೆಯ ವಯಸ್ಸಿನಲ್ಲಿ ಅಕ್ಕರೆಯಿಂದ ಅದನ್ನು ಎತ್ತಿಕೊಂಡು ಹೊರಗೆ ಹೋಗಿ ಗಿಡ, ಮರ, ಪಶು, ಪಕ್ಷಿಗಳನ್ನು ತೋರಿಸುತ್ತ ಮಗು ಕೇಳಿದ ಮುಗ್ಧ ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಅವನ ಜ್ಞಾನವಲಯವನ್ನು ಹಿಗ್ಗಿಸುವದೂ ಉಂಟು. ಮಗು ಗಂಡು ಆಗಿದ್ದರೆ ಇದು ಹೆಚ್ಚು ಸಂಭವನೀಯ. ಅದು ಹೆಣ್ಣಾಗಿದ್ದರೆ ಇದು ಅಷ್ಟು ಸಂಭವನೀಯವಲ್ಲ. ಹೆಣ್ಣು ಮಗು ತಾಯಿಗೆ ಅಂಟಿಕೊಂಡು ಇರುವದು ಹೆಚ್ಚು ಸಂಭವನೀಯ, ಈ ಸಾಮಾಜಿಕ ಹಿನ್ನೆಲೆಯಲ್ಲಿ ಪ್ರಕೃತ ಗ್ರಂಥ ಹೆಚ್ಚು ಅರ್ಥಪೂರ್ಣವಾಗಿದೆ.

  ಗುರುಪ್ರಸಾದ ಕುರ್ತಕೋಟಿ ಅವರ ಸಂಪಾದಕತ್ವದಲ್ಲಿ ಬೆಂಗಳೂರಿನ ಮೈತ್ರಿ ಪ್ರಕಾಶನವು ಪ್ರಕಟಿಸಿದೆ. 121 ಪುಟಗಳ ಈ ಗ್ರಂಥಕ್ಕೆ ಉಮೇಶ ದೇಸಾಯಿ ಅವರ ‘ಪ್ರಕಾಶಕರ ಮಾತು’ ಮತ್ತು ಗುರುಪ್ರಸಾದ ಕುರ್ತಕೋಟಿ ಅವರ ‘ಅಪ್ಪ ಯೋಜನೆಯ ಸುತ್ತಮುತ್ತ….’ ಎಂಬ ಸಂಪಾದಕರ ಮಾತುಗಳಿವೆ. ವಿಶೇಷವೆಂದರೆ ಸಂಪಾದಕರು ಕೊನೆಗೆ ತಮ್ಮ ಹೆಸರು ಹಾಕುವ ಬದಲು ‘ಕುರ್ತಕೋಟಿ ಸರ್ ಮಗ’ ಎಂದು ತಮ್ಮ ಅಪ್ಪನನ್ನು ನೆನೆಸಿದ್ದಾರೆ.

  ಗುರುಪ್ರಸಾದ ಅವರು ಈ ಪುಸ್ತಕವನ್ನು ನನಗೆ ಕೊಟ್ಟುದರ ಹಿಂದೆ ಅವರ ಮನೆತನದೊಡನೆ ಬಂದ ನನ್ನ ಆತ್ಮೀಯ ಸಂಬಂಧವನ್ನು ಹೇಳಬೇಕು. ಕುರ್ತಕೋಟಿಯ ರಾಯನಗೌಡರ ಮನೆಗೆ ಬರುತ್ತಿದ್ದ ಪ್ರಸಿದ್ಧ ಲೇಖಕ, ವಿಮರ್ಶಕ ಕೀರ್ತಿನಾಥ ಕುರ್ತಕೋಟಿ, ಅವರ ತಮ್ಮ ಶಶಿಕಾಂತ ಹಾಗೂ ಆ ಮನೆತನದ ಇನ್ನೂ ಹಲವರನ್ನು ಸುಮಾರು 1944ರಿಂದ ನಾನು ಬಲ್ಲವನಾಗಿದ್ದೇನೆ. ಶಶಿ ಪತ್ನಿ ಪರಿಮಳಾ ಕುರ್ತಕೋಟಿ (1945-1994) ಸುಪ್ರಸಿದ್ಧ ಕತೆಗಾರ್ತಿಯಾಗಿದ್ದರು. ಅವರ ‘ತುಳಸಿ’ ಕಥಾ ಸಂಕಲನ 2009ರಲ್ಲಿ ಪ್ರಕಟವಾಗಿದೆ. ಇಂತಹ ಸುಸಂಸ್ಕೃತ ಮನೆತನದಲ್ಲಿ ಹುಟ್ಟಿದ ಗುರುಪ್ರಸಾದ ಸಂಪಾದಿಸಿದ ಈ ಕೃತಿ ಹೊಸ ಸಂವೇದನೆ ನೀಡುವಂಥದಾಗಿದೆ.

  ಪ್ರಕೃತ ಗ್ರಂಥದ ಸಂಪಾದಕೀಯವಾದ ‘ಅಪ್ಪ ಯೋಜನೆಯ ಸುತ್ತಮುತ್ತ….’ ಎಂಬ ಮಾತುಗಳಲ್ಲಿ ‘ಒಳ್ಳೆಯ ಉದ್ದೇಶವೊಂದಿದ್ದರೆ ಹೇಗೋ ಸಹಾಯ ಹರಿದು ಬರುತ್ತದೆ’ ಎಂಬ ಮಾತು ಸದಾಕಾಲ ಸತ್ಯ. ಇಂಥ ಅನೇಕ ಮಾರ್ಮಿಕ ಮಾತುಗಳೊಂದಿಗೆ ಪುಸ್ತಕವನ್ನು ವಿಶ್ವದ ಎಲ್ಲ ಅಪ್ಪಂದಿರಿಗೆ ಆರ್ಪಿಸಿದ್ದಾರೆ. ಗ್ರಂಥದಲ್ಲಿ ವಿವಿಧ ಲೇಖಕ ಮತ್ತು ಲೇಖಕಿಯರು ತಮ್ಮ ತಮ್ಮ ಅಪ್ಪಂದಿರ ಬಗ್ಗೆ ಬರೆದ 37 ಬರಹಗಳಿವೆ. ಅವುಗಳಲ್ಲಿ 26 ಗದ್ಯದಲ್ಲಿಯೂ 11 ಪದ್ಯದಲ್ಲಿಯೂ ಇವೆ. ಈ ಕೃತಿಯ ವೈಶಿಷ್ಟ್ಯವೆಂದರೆ ಧಾರವಾಡ, ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಮೊದಲಾದ ಜಿಲ್ಲೆಗಳಲ್ಲಿ ವಾಸಿಸುವ ಕನ್ನಡಿಗರ ಲೇಖನಗಳಲ್ಲದೇ ಓಮಾಹಾ, ಟೆಮೆಕ್ಯುಲಾ, ಕುವೇಟ್, ಅಂಗೋಲಾ (ಆಫ್ರಿಕಾ), ಚೀನಾ ಮೊದಲಾದ ವಿದೇಶಗಳಲ್ಲಿ ವಾಸಿಸುವ ಕನ್ನಡಿಗರ ಲೇಖನಗಳೂ ಇವೆ. ಇವರೆಲ್ಲರನ್ನು ಸಂಪರ್ಕಿಸಿ, ಗ್ರಂಥದ ಉದ್ದೇಶವನ್ನು ವಿವರಿಸಿ, ಅವರಿಂದ ಲೇಖನಗಳನ್ನು ಅಥವಾ ಕವನಗಳನ್ನು ಬರೆಸಿ ತರಿಸಿ ಸುಂದರವಾದ ಹೊತ್ತಗೆಯನ್ನು ರೂಪಿಸಿದ ಗುರುಪ್ರಸಾದರ ಸಾಹಸವನ್ನು ಮೆಚ್ಚಲೇಬೇಕು. ಇನ್ನು ಗ್ರಂಥದ ಒಳತಿರುಳನ್ನು ಅವಲೋಕಿಸೋಣ.

  ಅಪ್ಪನ ಬಗ್ಗೆ ತಮ್ಮ ತಮ್ಮ ಅನಿಸಿಕೆಗಳನ್ನು (ವಿಚಾರಗಳನ್ನಲ್ಲ!) ಬರೆಯುವ ಅವಕಾಶ ಸಿಕ್ಕಿದ್ದಕ್ಕೆ ಅನೇಕರು ಉತ್ಸಾಹಿತರಾಗಿದ್ದಾರೆ. ಕೆಲವರು ಭಾವಾವಿಷ್ಟರಾಗಿದ್ದಾರೆ. ಕೆಲವರು ‘ನನ್ನ ಅಪ್ಪ ಎಲ್ಲರಂಥವನಲ್ಲ’ ಎಂದು ವಿಶೇಷ ಭಾವ ತಳೆದಿದ್ದಾರೆ. ಇನ್ನು ಕೆಲವರು ‘ನನ್ನ ಅಪ್ಪ ಅಂದರೆ ನನ್ನ ವಿಶ್ವವೇ’ ಎಂದು ಬೇರೆ ಎಲ್ಲವನ್ನೂ ಮರೆತಿದ್ದಾರೆ. ಇನ್ನೂ ಒಬ್ಬರು ಅಪ್ಪ ಅರ್ಧ ಮರೆವು ಅರ್ಧ ಅರಿವು ಇರುವ ಅಲ್ಜೈಮರ್ ಎಂದು ಹಾಡಿದ್ದಾರೆ. ಇನ್ನೂ ಒಬ್ಬರು ಅಪ್ಪನ ಕುಡಿತದ ವ್ಯಸನದಿಂದ ವ್ಯಥೆಗೊಂಡರೂ ಅವನನ್ನು ಆ ಬಲೆಯಿಂದ ಹೊರತರಲು ಶತಪ್ರಯತ್ನ ಮಾಡಿದ್ದಾರೆ. ಹೀಗೆ ಅಪ್ಪನ ಬಗ್ಗೆ ವೈವಿಧ್ಯಪೂರ್ಣ ಬರಹಗಳಿವೆ. ಅನೇಕರು ಸ್ವೀಕೃತ ಗ್ರಂಥಸ್ಥ ಕನ್ನಡ ಭಾಷೆಯಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ‘ನನ್ನ ದಾದಾ ಸಾಮಾನ್ಯ ಮನುಷ್ಯನಾಗಿದ್ದ. ನಮ್ಮದು ಸಾಧಾರಣ ಜೀವನ. ಆದರೆ ನನ್ನ ತಂದೆಯೇ ಶ್ರೇಷ್ಠ ಎಂಬ ನಂಬಿಕೆ ನನ್ನದು’ ಎಂಬ ಶೈಲಿಯಲ್ಲಿ ಅನೇಕರ ಬರವಣಿಗೆ ಇದ್ದರೆ, ಇನ್ನು ಕೆಲವರು ತಮ್ಮ ಮನೆಯಲ್ಲಿ ಆಡುವ ಭಾಷೆಯಲ್ಲಿಯೇ ಬರೆದಿದ್ದಾರೆ. ನೋಡಿ: ಜನ್ಮದತ್ತವಾಗಿ ಸಿಟ್ಟನ್ನ ಮೂಗಿನ ತುದಿಯಲ್ಲೇ ಧರಿಸಿಕೊಂಡಿದ್ದ ಜಮದಗ್ನಿ ನನ್ನ ಮುತ್ತ್ಯಾ ನನ್ನ ಅಪ್ಪ ಇನ್ನೂ ತಲಬಾಗಿಲಲ್ಲಿರುವಾಗಲೇ ‘ನಿಂದ್ರ ಅಲ್ಲೆ’ ಅಂದೋರೇ ಹತಾರವನ್ನು ಬೀಸಿ ಅಪ್ಪನತ್ತ ಒಗೆದರಂತೆ! ಅಪ್ಪನ ಅದೃಷ್ಟ. ಅದು ಸ್ವಲ್ಪದರಲ್ಲಿ ತಪ್ಪಿ ಅಪ್ಪನ ಹಿಂದಿದ್ದ ತಲಬಾಗಿಲ ಅಂಚಿಗೆ ಚುಚ್ಚಿಕೊಂಡಿತಂತೆ! ‘ಮನಿ ಒಳಗ ಬಂದಿ ಹುಶ್ಶಾರ್! ಇಲ್ಲಿ ನಾವು ಹೊಟ್ಟಿಬಟ್ಟಿ ಕಟ್ಟಿ ನಿನಗ ಓದಾಕ ಕಳಸಿದ್ರ, ಅಲ್ಲಿ ಹೋಗಿ ಚೈನಿಗ್ ಬಿದ್ದೀಯಾ ಮಗನ! ನೋಡಿಲ್ಲಿ ಮನಿತನಾ ನೀ ನಪಾಸಾಗಿದ್ದ ಪತ್ರಾ ಕಳಸ್ಯಾರ ನಿಮ್ಮ ಕಾಲೇಜಿನೋರು?’ ಎನ್ನುತ್ತ ಅಪ್ಪನ ಮುಖಕ್ಕೆ ಪತ್ರವನ್ನು ರಾಚಿ ಎಸೆದರಂತೆ. ಎಂದು ನಡೆದ ಘಟನೆಯ ಸ್ವಾಭಾವಿಕ ಚಿತ್ರಣ ಮೂಡಿಸಿದ್ದಾರೆ. ಇಂಥ ಇನ್ನೊಂದು ಚಿತ್ರಣ ನೋಡಿ: ‘ಮಗಳ ಅರೆ ಇರ್ಲಿ ಇಲ್ಲಾ ಮಗಾನ ಇರ್ಲಿ ನಮ್ಮ ಜೀವನದ ಮೊದಲ ಹೀರೋ ಅಂದ್ರ ಅದು ಅಪ್ಪಾ ಅಂತ ನನಗನಸ್ತೈತಿ. ಅದ್ರ ನಮ್ಮ ಕೊನೀ ಉಸರು ಇರೋತನಾ ಅಂವ ನಮಗ ಹೀರೋ ಅಗಿರತಾನಾ ಅನ್ನೋದ ಮಿಲಿಯನ್ ಡಾಲರ್ ಪ್ರಶ್ನೆ. ಖರೇವಂದ್ರ ಭಾಳ ಮಂದಿ ಹೌದು ಅಂತನ ಅಂತಾರ.’ ಇಂಥ ಚಿತ್ರಣಗಳು ಓದುಗರನ್ನು ಅಯಾ ಸಮಾಜದ ಪರಿಸರಕ್ಕೆ ಕರೆದುಕೊಂಡು ಹೋಗುತ್ತವೆ. ಇನ್ನು ಕೆಲವರು ಪದ್ಯರೂಪದಲ್ಲಿ ಆತ್ಮೀಯವಾಗಿ ಅಪ್ಪನನ್ನು ಸ್ಮರಿಸಿದ್ದಾರೆ. ನೋಡಿ:

  ನನ್ನ ಕಣ್ಣಲ್ಲಿ ಕಣ್ಣೀರ ನೋಡಲು
  ಬಯಸದವ ನೀನು.
  ನಿನ್ನ ಪ್ರೀತಿಯ ತೋರಿಸಲು
  ಹೆಣಗಾಡಿದವ ನೀನು. ||
  ಅಷ್ಟು ದಡ್ಡಿ ನಾನಲ್ಲಪ್ಪ
  ನನ್ನ ಉಸಿರಿನಲಿ ನಿನ್ನ ಪಾಲಿದೆ
  ನಿನ್ನ ರಕುತವೇ ನನ್ನಲ್ಲೂ ಹರಿಯುತಿದೆ.

  ಇನ್ನು ಕೆಲವರು,

  ಎಲ್ಲಾ ಹೇಳುವರು
  ನಾ ಹುಟ್ಟಿ ನಿನಗ ಕಷ್ಟ ಬಂತಂತೆ
  ಕೋಪದಲಿ ಕೆಲವೊಮ್ಮೆ
  ಅನಿಷ್ಟ ಶನಿ ಎಂದು ನೀನೂ ಬೈದಿದ್ದುಂಟು
  ನಿನ್ನ ತ್ಯಾಗವ ಅರಿತವಳು ನಾನಲ್ಲವೇ?

  ಎಂದು ನೆನಪಿನ ಬುತ್ತಿ ಚಿಚ್ಚಿಟ್ಟಿದ್ದಾರೆ.

  ಹೀಗೆ ‘ಎಲ್ಲರಂಥವನಲ್ಲ ನನ್ನಪ್ಪ’ ಎಂಬ ಗ್ರಂಥ ಹೊಸ ಸಂವೇದನೆ ನೀಡುವ ಅಪೂರ್ವ ಗ್ರಂಥವಾಗಿದೆ ಎಂದೇ ಹೇಳಬೇಕು.

  Share

  Related Post

  Related Blogpost

  Leave a comment

  Your email address will not be published. Required fields are marked *

  Recent Posts More

  • 4 hours ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 18 hours ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 day ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

  • 1 day ago No comment

   ಬದುಕು ಬರಿ ಗಿಲೀಟು

   (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

  • 2 days ago One Comment

   ನಾನು ಮತ್ತು ನೀನು

   ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help