Share

ಕೈ ಹಿಡಿದು ನಡೆಸೆನ್ನನು…
ಪ್ರಸಾದ್ ನಾಯ್ಕ್ ಕಾಲಂ

ಳೆದೆರಡು ವರ್ಷಗಳ ಹಿಂದೆ ಅಚಾನಕ್ಕಾಗಿ ಪುಸ್ತಕವೊಂದು ಕೈಸೇರಿತ್ತು.

ನನಗೆ ನೆನಪಿರುವಂತೆ ಆ ದಿನಗಳಲ್ಲಿ ಯಾವ ಮಿತ್ರರ ಪುಸ್ತಕ ಬಿಡುಗಡೆಯೂ ಇರಲಿಲ್ಲ. ಹುಟ್ಟುಹಬ್ಬ, ಆನಿವರ್ಸರಿಯಂಥಾ ವಿಶೇಷ ದಿನಗಳೂ ಇರಲಿಲ್ಲ. ಹೀಗಿರುವಾಗ ಹಿಂದಿ ಪುಸ್ತಕವನ್ನು ನನಗ್ಯಾರಪ್ಪಾ ಕಳಿಸಿದರು ಎಂದು ದಿನವಿಡೀ ತಲೆಕೆಡಿಸಿಕೊಂಡಿದ್ದೆ. ಕೊನೆಗೂ ಆ ದಿನ ಸಂಜೆ ಪುಸ್ತಕದುಡುಗೊರೆ ಕಳಿಸಿದ್ದು ಯಾರೆಂದು ಗೊತ್ತಾಯಿತು. ನನ್ನ ಮೂವರು ವಿದ್ಯಾರ್ಥಿಗಳು ಶಿಕ್ಷಕರ ದಿನಕ್ಕೆ ನನಗೆ ಏನು ಕೊಡಬೇಕೆಂದು ದಿನಗಟ್ಟಲೆ ತಲೆಕೆಡಿಸಿಕೊಂಡು ಕೊನೆಗೆ ಈ ಪುಸ್ತಕವನ್ನು ತಂದಿದ್ದರಂತೆ. ಅದು 2015ರ ಸೆಪ್ಟೆಂಬರ್ ಐದು.

ಸುಮ್ಮನೆ ಸಮಯ ಕಳೆಯಲೆಂದು ಮನೆಪಾಠ ಕೊಡಲಾರಂಭಿಸಿದ್ದ ನಾನು ಅದೆಷ್ಟು ದೂರ ಬಂದುಬಿಟ್ಟಿದ್ದೆ ಎಂದು ನನಗೆ ತಿಳಿದದ್ದೇ ಆವಾಗ. ಅಷ್ಟರಲ್ಲಾಗಲೇ ಕಲಿಸುವ ಈ ಪ್ರಕ್ರಿಯೆಯೊಂದಿಗೆ ನನಗೆ ಪ್ರೀತಿಯುಂಟಾಗಿತ್ತು. ಕಲಿಸುವುದು ಎಂದರೆ ಕಲಿಯುವ ಪ್ರಕ್ರಿಯೆಯೂ ಹೌದಾಗಿದ್ದರಿಂದ ಮಕ್ಕಳ ಜೊತೆಯಲ್ಲಿ ನಾನೂ ಮಗುವಾಗುತ್ತಿದ್ದೆ. ಅವರಂತೆಯೇ ಚಕ್ಕಳಮಕ್ಕಳ ಹಾಕಿ ಕುಳಿತುಕೊಂಡು ಏನೇನೋ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತಿದ್ದೆ. ನನ್ನ ಮೂವರು ವಿದ್ಯಾರ್ಥಿಗಳಿಗೆ ಪಠ್ಯದಾಚೆಗಿನ ವಿಷಯಗಳ ಹೊಸ ಹೊಸ ಪುಸ್ತಕಗಳನ್ನು ತಂದುಕೊಡುತ್ತಿದ್ದೆ. ಹಲವು ಬಾರಿ ಒಂದು ತಾಸುಗಳ ತರಗತಿ ಒಂದೂವರೆ-ಒಂದೂ ಮುಕ್ಕಾಲು ತಾಸುಗಳವರೆಗೆ ಮುಂದುವರೆಯುತ್ತಿತ್ತು. ಸಿಕ್ಕ ಒಂದು ಭಾನುವಾರವನ್ನು ವಿಶ್ರಾಂತಿಯಲ್ಲಿ ಕಳೆಯದೆ ತರಗತಿ ಮಿಸ್ ಮಾಡಿಕೊಳ್ಳಬಾರದೆಂಬ ಕಾಳಜಿಯಿಂದ ಮೆಟ್ರೋ ಹಿಡಿದು ಲೆಕ್ಕವಿಲ್ಲದಷ್ಟು ಬಾರಿ ದಿನಕ್ಕೈವತ್ತು ಕಿಲೋಮೀಟರ್ ಪ್ರಯಾಣಿಸಿದ್ದೂ ಇದೆ.

ಯಾವಾಗಲೂ ತಮ್ಮದಲ್ಲದ ವಯಸ್ಸಿನ ಮತ್ತು ಸಂಸ್ಕೃತಿಯ ಜನರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ ಎಂಬ ನಾಣ್ಣುಡಿಯಿದೆಯಂತೆ. ಅದೃಷ್ಟವಶಾತ್ ಅಂಥಾ ಸಂದರ್ಭಗಳು ನನಗೊದಗಿ ಬಂದವು. ಇಲ್ಲದಾಗ ಅವುಗಳನ್ನು ಬೆನ್ನತ್ತಿಯೂ ಹೋಗಿದ್ದುಂಟು. ದಿನವಿಡೀ ನಿವೃತ್ತ ಅಧಿಕಾರಿಗಳ ಗುಂಪಿನೊಂದಿಗೆ ಕೆಲಸ ಮಾಡುತ್ತಿದ್ದ ನಾನು ಸಂಜೆಯಾಗುತ್ತಿದ್ದಂತೆ ಮಕ್ಕಳ ಗುಂಪಿನಲ್ಲಿ ಸೇರಿಹೋಗುತ್ತಿದ್ದೆ. ಭಿನ್ನ ವಯಸ್ಸಿನ ಮತ್ತು ಭಿನ್ನ ಸಂಸ್ಕೃತಿಗಳ ಜನರೊಂದಿಗೆ ವ್ಯವಹರಿಸುವ ಲಾಭವೆಂದರೆ ನಾವು ನಮ್ಮ ಕಂಫರ್ಟ್ ಝೋನ್ ನಿಂದ ಹೊರಬಂದು ಜಗತ್ತನ್ನು ನೋಡಬೇಕಾಗುತ್ತದೆ. ನನ್ನ ಮೂವರು ವಿದ್ಯಾರ್ಥಿಗಳಲ್ಲಿ ಕಿರಿಯ ವಿದ್ಯಾರ್ಥಿ ಮೂರನೇ ತರಗತಿಯವನಾಗಿದ್ದರೆ ಹಿರಿಯವಳು ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು. ಒಂದು ಬಾಲ್ಯದ ಹುಡುಗಾಟದ ಕಾಲವಾದರೆ ಇನ್ನೊಂದು ಹುಡುಗಾಟದ ಪೊರೆಯನ್ನು ಕಳಚಿಕೊಳ್ಳುತ್ತಲೇ ನಿಧಾನವಾಗಿ ಪ್ರೌಢರ ಜಗತ್ತನ್ನು ಆಸಕ್ತಿಯ ಕಣ್ಣುಗಳಿಂದ ಕಾಣುವ ಹರೆಯ. ಹೀಗಾಗಿ ಇಬ್ಬರೂ ಒಂದೇ ಕುಟುಂಬದ ಕುಡಿಗಳಾಗಿದ್ದರೂ ಪ್ರತ್ಯೇಕವಾದ ರೀತಿಯಲ್ಲಿ ವ್ಯವಹರಿಸಬೇಕಾದ ಅನಿವಾರ್ಯತೆ. ಎಂಜಿನಿಯರಿಂಗ್ ಓದುತ್ತಿದ್ದ ದಿನಗಳಲ್ಲೂ ನಮ್ಮದೇ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಡುತ್ತಿದ್ದ ‘ಗುರುದಕ್ಷಿಣಾ’ ಎಂಬ ಕಾರ್ಯಕ್ರಮವೊಂದರಲ್ಲೂ ನಾನು ಸ್ಥಳೀಯ ಶಾಲೆಯೊಂದರ ವಿದ್ಯಾರ್ಥಿಯೊಬ್ಬನಿಗೆ ಅರೆಕಾಲಿಕ ಶಿಕ್ಷಕನಾಗಿದ್ದೆ. ಇನ್ನು ಇಳಿವಯಸ್ಸಿನವರೊಂದಿಗೆ ಕಳೆಯುವ ಅವಧಿಯ ಅನುಭವವೇ ಬೇರೆ. ಮನುಷ್ಯ ವೃದ್ಧಾಪ್ಯದ ಹೊಸ್ತಿಲಿಗೆ ಬಂದಾಗ ಮತ್ತೆ ಮಗುವಾಗುತ್ತಾ ಹೋಗುತ್ತಾನಂತೆ. ಅಂತೂ ಸ್ಮಾರ್ಟ್‍ಫೋನುಗಳಿಗಿಂತ ಹೆಚ್ಚಿನ ವಿಸ್ತಾರವಾದ ಮತ್ತು ಸ್ವಾರಸ್ಯದ ಜಗತ್ತನ್ನು ನಾನು ನಿತ್ಯದ ದಿನಚರಿಯಲ್ಲೇ ಕಾಣುತ್ತಿದ್ದೆ ಎಂಬುದು ಸತ್ಯ.

ಕೆಲದಿನಗಳ ಹಿಂದೆ ಟೆಡ್ ಟಾಕ್ ಭಾಷಣಗಳ ಸರಣಿಯಲ್ಲಿ ರೀಟಾ ಪಿಯರ್ಸನ್ ರವರ ಭಾಷಣವನ್ನು ಕೇಳುತ್ತಿದ್ದಾಗ ಇವುಗಳೆಲ್ಲಾ ನೆನಪಾದವು. ಅಂದಹಾಗೆ ಕಳೆದ ನಲವತ್ತು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲೇ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ರೀಟಾ. ಶಿಕ್ಷಕರ ಮತ್ತು ಮಕ್ಕಳ ಮಧ್ಯೆ ಒಂದು ಒಳ್ಳೆಯ ಸೌಹಾರ್ದಯುತ ಸಂಬಂಧವು ರೂಪುಗೊಂಡ ನಂತರವೇ ಉತ್ತಮ ಕಲಿಕೆಯು ಸಾಧ್ಯವಾಗುತ್ತದೆ ಎಂಬುದು ಅವರ ಅಭಿಪ್ರಾಯ. “ನಿಮಗೆ ಸಂಬಳ ಕೊಡುವುದು ಮಕ್ಕಳನ್ನು ಖುಷಿಪಡಿಸುವುದಕ್ಕಲ್ಲ” ಎಂದು ಯಾರೋ ಅವರಿಗೆ ಅಂದಿದ್ದರಂತೆ. “ತಮಗೆ ಇಷ್ಟವಾಗದವರಿಂದ ಮಕ್ಕಳು ಏನನ್ನೂ ಕಲಿಯುವುದಿಲ್ಲ. ಹೀಗಾಗಿ ಮಕ್ಕಳೊಂದಿಗೆ ಆಪ್ತರಾಗುವುದೂ ಕೂಡ ಬೋಧನೆಯಷ್ಟೇ ಮುಖ್ಯ” ಎನ್ನುತ್ತಾರೆ ರೀಟಾ. ಅಂತಾರಾಷ್ಟ್ರೀಯ ಬೆಸ್ಟ್-ಸೆಲ್ಲರ್ ಗಳಲ್ಲೊಂದಾದ ‘ತೊತ್ತೊಚಾನ್’ ಕೃತಿಯ ಬಗ್ಗೆ ಉಲ್ಲೇಖಿಸುತ್ತಾ ಜಪಾನಿನ ಖ್ಯಾತ ಟೆಲಿವಿಷನ್ ತಾರೆ ತೆತ್ಸುಕೊ ಕುರೊಯನಗಿ ಮತ್ತು ಅವರಿಗೆ ಒಂದು ಕಾಲದಲ್ಲಿ ಶಿಕ್ಷಕರಾಗಿದ್ದ ತೊಮೊಯೆಯವರ ಬಗ್ಗೆ ಈ ಅಂಕಣದಲ್ಲೇ ಹಿಂದೊಮ್ಮೆ ಬರೆದಿದ್ದೆ. ತೊಮೊಯೆ ನೆನಪಾಗುತ್ತಲೇ ರೀಟಾರ ಮಾತು ಅದೆಷ್ಟು ಸತ್ಯ ಅನ್ನಿಸಿತು. ಹಾಗೆಯೇ ‘ತೊತ್ತೊಚಾನ್’ ಓದುತ್ತಾ ಕಣ್ತುಂಬಿಕೊಂಡಿದ್ದೂ ನೆನಪಾಯಿತು.

ನನ್ನ ಸ್ನೇಹಿತರ ವಲಯದಲ್ಲೇ ಶಿಕ್ಷಕವೃತ್ತಿಯನ್ನು ಬಹಳ ಇಷ್ಟಪಟ್ಟು, ದೂರು-ಗೊಣಗಾಟಗಳಿಲ್ಲದೆ ಮಾಡುತ್ತಿರುವವರ ದಂಡೇ ಇದೆ. ಬೋಧನೆ ಇವರುಗಳಿಗೆ ಕೇವಲ ವೃತ್ತಿಯಷ್ಟೇ ಅಲ್ಲ. ಸರ್ವಸ್ವವೂ ಹೌದು. ಈ ಬಾರಿಯ ಶಿಕ್ಷಕರ ದಿನದಂದು ಇಂಥಾ ಶಿಕ್ಷಕರ ಸಂತತಿ ಸಾವಿರವಾಗಲಿ ಎಂಬ ಹಾರೈಕೆ ನನ್ನದು!

***************

ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು:

ಶಿಕ್ಷಕರ ದಿನದ ಈ ಸುಸಂದರ್ಭದಲ್ಲಿ ಎಲ್ಲರೂ ಅಮ್ಮಂದಿರಿಗೂ ಕೂಡ ಒಂದು ಥ್ಯಾಂಕ್ಸ್ ಹೇಳಲೇಬೇಕು ಅನ್ನುವುದು ನನ್ನ ಅಭಿಪ್ರಾಯ. ಪ್ರಾಯಶಃ ಜೀವನವನ್ನು ಬಿಟ್ಟರೆ ನಮ್ಮ ಅಣುಅಣುವಿನಲ್ಲೂ ಇಳಿದುಹೋಗಿರುವ, ಉಳಿದುಹೋಗಿರುವ ಪಾಠಗಳೆಂದರೆ ಅಮ್ಮನಿಂದ ಕಲಿತದ್ದು. ಅದು ಹಲ್ಲುಜ್ಜುವುದರಿಂದ ಹಿಡಿದು ಸೀರೆ ಉಡುವುದರವರೆಗೂ ಇರಬಹುದು. ಶೂ ಲೇಸ್ ಕಟ್ಟಿಕೊಳ್ಳುವುದರಿಂದ ಹಿಡಿದು ಒಳ್ಳೆಯ ಅಪ್ಪನಾಗುವವರೆಗೂ ಇರಬಹುದು. ತಾಯಿಯೆಂಬ ಶಕ್ತಿಯು ಸದಾ ಬೆನ್ನ ಹಿಂದೆ ನಿಂತು ಜೀವನದುದ್ದಕ್ಕೂ ಸಲಹಿರುತ್ತದೆ. ಹತ್ತು ಬಾರಿ ಬೆತ್ತ ಹಿಡಿದರೆ ನೂರು ಬಾರಿ ಮಡಿಲಾಗಿ ಆಸರೆಯಾಗಿರುತ್ತದೆ. ತಾಯಂದಿರ ಹತ್ತುಹಲವು ಬಗೆಬಗೆಯ ಅವತಾರಗಳಲ್ಲಿ ಇದೂ ಒಂದು. ಆದರೆ ಎಂದಿನಂತೆ ಈ ವಿಚಾರದಲ್ಲೂ ಅಮ್ಮನಿಗೆ ಕ್ರೆಡಿಟ್ ಹೋಗುವುದು ಕಮ್ಮಿ. ಇದು ಅಮ್ಮಂದಿರಿಗೆ ಹೊಸದೇನೂ ಅಲ್ಲ ಬಿಡಿ. ಆದರೆ ಈ ಸೂಕ್ತಿಯು ಸೂಕ್ತಿಯಾಗಿಯೇ ಉಳಿಯುವುದು ಬೇಡ. ಹೀಗಾಗಿ ಸಪ್ಟೆಂಬರ್ ಐದರ ವಿಶೇಷ ನಮನವೊಂದು ಅವರಿಗೂ ಸಲ್ಲುತ್ತದೆ.

“ತಪ್ಪಿಹೋಗಿದ್ದ ಓದುವ ಅಭ್ಯಾಸ ಮತ್ತೆ ಹಿಡಿದುಬಿಟ್ಟಿದೆ. ಇನ್ನು ಪುಸ್ತಕಗಳನ್ನೂ ಪ್ರಯತ್ನಿಸುತ್ತೇನೆ” ಎಂದು ಅಮ್ಮ ಮೊನ್ನೆ ಪಟಪಟನೆ ಟೈಪ್ ಮಾಡಿ ಕಳಿಸಿದರೆ ಅವರಿಗಿಂತ ಹೆಚ್ಚು ನನಗೇ ಪುಳಕ. ಭೂಮಿತೂಕದ ತಾಳ್ಮೆ ಮತ್ತು ಜೀವನಪ್ರೀತಿಗಳು ಅಮ್ಮನಿಂದಲೇ ನನಗೆ ಬಂದ ವರಗಳು ಎಂದು ನಾನು ಹಿಂದೊಮ್ಮೆ ಬರೆದದ್ದಿದೆ. ಅಮ್ಮನ ಈ ಹೊಸ ಹೆಜ್ಜೆ ಮತ್ತೆ ಆ ನೆನಪುಗಳನ್ನು ಹಸಿರಾಗಿಸಿತು. ಫುಲ್ ಟೈಮ್ ಟೀಚರ್ ಆದ ಮತ್ತು ಯಾವತ್ತಿಗೂ ರಿಟೈರ್ ಆಗದ ಶಿಕ್ಷಕಿಯೆಂದರೆ ಅದು ಅಮ್ಮನೇ!

***************

ಸಾಮ್ ವೈಮ್ಸ್ ಎಂಬವರು ‘ದ ಗಾರ್ಡಿಯನ್’ ಪತ್ರಿಕೆಯ ಆನ್ಲೈನ್ ಚರ್ಚೆಯೊಂದರಲ್ಲಿ ಬರೆದ ಘಟನೆಯೊಂದು ಇತ್ತೀಚೆಗೆ ನನ್ನನ್ನು ಬಹುವಾಗಿ ಕಾಡಿತ್ತು. ಆ ಕಥೆ ಹೀಗಿದೆ:

“ಆಗ ನನಗೆ ಏಳರ ಪ್ರಾಯ. ಅಪ್ಪ ಹಿಂದಿನ ವರ್ಷ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಗಾಯಾಳುವಾದ ಪರಿಣಾಮವಾಗಿ ನೌಕರಿಯನ್ನು ಕಳೆದುಕೊಂಡಿದ್ದ. ಅಮ್ಮನನ್ನು ವ್ಹೀಲ್-ಚೇರ್ ನಲ್ಲೇ ನೋಡುತ್ತಾ ವರ್ಷಗಳೇ ಸಂದಿವೆ. ನಾನು ನನ್ನ ಅಪ್ಪನನ್ನು, ಅಮ್ಮನನ್ನು ಮತ್ತು ಪುಟ್ಟ ತಮ್ಮನನ್ನು ನನ್ನ ಕೈಲಾದಮಟ್ಟಿಗೆ ಜೋಪಾನ ಮಾಡುತ್ತಿದ್ದೆ. ಆಗ ಶಾಲೆಯಲ್ಲಿ ಐತಿಹಾಸಿಕ ಸ್ಥಳವೊಂದನ್ನು ನೋಡಲು ಶಾಲಾ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ನನಗೆ ಹೋಗಲು ಆಸೆಯಿದ್ದರೂ ಪ್ರವಾಸಕ್ಕೆ ಹೋಗಲು ಕೊಡಬೇಕಾಗಿದ್ದ ಹತ್ತು ಪೌಂಡ್ ನನ್ನಲ್ಲಿರಲಿಲ್ಲ. ದಿನಗಳು ಸುಮ್ಮನೆ ಉರುಳುತ್ತಲೇ ಇದ್ದವು. ಶಾಲಾಪ್ರವಾಸಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯುಳಿದಿದೆ ಎಂದಾದಾಗ ಅಮ್ಮನಿಗೊಂದು ದೂರವಾಣಿ ಕರೆ ಬಂತಂತೆ. ಕರೆ ಮಾಡಿದ್ದು ಇನ್ಯಾರೂ ಅಲ್ಲ, ನನ್ನ ಇತಿಹಾಸದ ಶಿಕ್ಷಕಿ. “ನೀವ್ಯಾಕೆ ಹತ್ತು ಪೌಂಡ್ ಇನ್ನೂ ಕಟ್ಟಿಲ್ಲ? ಪ್ರವಾಸಕ್ಕೆ ದಿನ ಬೇರೆ ಕಮ್ಮಿ ಇದೆ” ಎಂದಿದ್ದರಂತೆ ಆಕೆ. ಕ್ಷಮಿಸಿ, ಸದ್ಯ ನಾವು ಹಣ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂಬ ಹತಾಶೆಯ ಉತ್ತರ ಅಮ್ಮನಿಂದ ಬಂದಿತ್ತು. “ಯಾವುದಕ್ಕೂ ಅನುಮತಿ ಪತ್ರದ ಮೇಲೆ ನಿಮ್ಮ ಸಹಿ ಹಾಕಿ ಕಳಿಸಿಕೊಡಿ. ಏನಾಗುತ್ತದೆ ನೋಡೋಣ” ಎಂದಿದ್ದ ನಮ್ಮ ಮಿಸ್ ಫೋನಿಟ್ಟಿದ್ದರು.

ಮರುದಿನ ಅನಿರೀಕ್ಷಿತವಾದ ಘಟನೆಯೊಂದು ನಡೆದುಹೋಯಿತು. ಬಿಡುವಿನ ವೇಳೆಯಲ್ಲಿ ನನ್ನನ್ನು ಕರೆದ ಮಿಸ್ ನನ್ನ ಕೈಯಲ್ಲಿ ಹತ್ತು ಪೌಂಡಿನ ನೋಟನ್ನು ತುರುಕಿದರು. “ಸದ್ಯ ಇದನ್ನಿಟ್ಟುಕೋ. ನಂತರ ತರಗತಿಯಲ್ಲಿ ಪ್ರವಾಸದ ಅನುಮತಿ ಪತ್ರದೊಂದಿಗೆ ಈ ಹತ್ತು ಪೌಂಡ್ ನೋಟನ್ನೂ ನನಗೆ ಕೊಡು. ನಿನ್ನ ವಯಸ್ಸಿನ ಹಲವು ಮಕ್ಕಳನ್ನು ನಾನು ಕಂಡಿದ್ದೇನೆ. ಆದರೆ ಇತಿಹಾಸದ ಬಗ್ಗೆ ನಿನಗಿರುವಷ್ಟು ಜ್ಞಾನ ಮತ್ತು ಆಸಕ್ತಿಯನ್ನು ಇನ್ಯಾರಲ್ಲೂ ನಾನು ನೋಡಿಲ್ಲ. ಹೀಗಾಗಿ ಈ ಪ್ರವಾಸಕ್ಕೆ ಯಾರಾದರೂ ಹೋಗಲೇಬೇಕೆಂದಿದ್ದರೆ ಅದು ನೀನಲ್ಲದೆ ಇನ್ಯಾರೂ ಅಲ್ಲ” ಅಂದಿದ್ದರಾಕೆ.

ಆ ಕ್ಷಣದಲ್ಲಿ ಅವರೆದುರು ನಿಂತಿದ್ದ ನಾನು ಅದೆಷ್ಟು ಅತ್ತಿದ್ದೆ ಎಂದು ಈಗಲೂ ನೆನಪಾಗುತ್ತಿದೆ…

———

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾದ ಪ್ರಸಾದ್ ನಾಯ್ಕ್ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಪಡೆದವರು. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಕ್ಕಮಟ್ಟಿಗೆ ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 11 hours ago No comment

  ಲವ್ ವಿದ್ ಫಸ್ಟ್ ಬುಕ್

    ಆ ದಿನ ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತಡಕಾಡುತ್ತಿದ್ದ ನನಗೆ ವಿಶೇಷ ಪುಸ್ತಕವೊಂದು ಸಿಕ್ಕಿಬಿಟ್ಟಿತ್ತು. ಹೈಸ್ಕೂಲು ದಿನಗಳವು. ಆಗ ಸಾಹಿತ್ಯದ ಓದು ಹಾಗಿರಲಿ, ಸಾಮಾನ್ಯ ಓದೂ ಕೂಡ ಅಷ್ಟೇನೂ ಗಂಭೀರವಾಗಿ ಸಾಗುತ್ತಿರಲಿಲ್ಲ. ಓದಿನ ಹವ್ಯಾಸವು ಒಂದಷ್ಟಿದ್ದರೂ ಹೊಸ ಹೊಸ ವಿಷಯಗಳ ಪುಸ್ತಕಗಳನ್ನು ಹುಡುಕಿಕೊಂಡು ಹೋಗುತ್ತಿದ್ದ, ಈ ಬಗ್ಗೆ ಮಾಹಿತಿಯಿದ್ದ, ಓದಲು ಪರಿತಪಿಸುತ್ತಿದ್ದ ದಿನಗಳೇನೂ ಅದಾಗಿರಲಿಲ್ಲ. ಹೀಗಾಗಿ ಓದಿನ ವಿಚಾರಕ್ಕೆ ಬಂದರೆ ಅವುಗಳನ್ನು ನನ್ನ ಆರಂಭದ ದಿನಗಳೆಂದೇ ಹೇಳಬೇಕು. ರಜಾದಿನಗಳಲ್ಲಿ ...

 • 1 day ago No comment

  ಮೋದಿ ಮಾತಾಡಲಿಲ್ಲ

  ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

 • 2 days ago No comment

  ಇವರನ್ನು ನೋಡಿ…

  ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

 • 2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...


Editor's Wall

 • 18 April 2018
  2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 18 April 2018
  2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 17 April 2018
  3 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

 • 16 April 2018
  4 days ago No comment

  ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

  ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

 • 14 April 2018
  5 days ago No comment

  ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

  ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...