Share

ಅಮ್ಮನಿಗೊಂದು ಕವಿತೆ
ಶ್ರೀದೇವಿ ಕೆರೆಮನೆ

 • Page Views 223
 • ಲಂಕೇಶರ ಅವ್ವ ಎಂಬ ಕವನವನ್ನು ಓದಿದ ನಂತರ ಅದರಷ್ಟು ಸಶಕ್ತ ಕವನಗಳು ಇನ್ನು ಮುಂದೆ ಹುಟ್ಟಲು ಸಾಧ್ಯವೇ ಇಲ್ಲ ಎಂಬ ವಾತಾವರಣದಲ್ಲಿಯೂ ಅಮ್ಮನ ಕುರಿತಾದ ಕವನಗಳು ಮತ್ತೆ ಮತ್ತೆ ಬರುತ್ತಿರುವುದು ಶ್ಲಾಘನೀಯವೇ. ಪ್ರಕಾಶ ಕಡಮೆಯವರ ‘ಅಮ್ಮನಿಗೊಂದು ಕವಿತೆ’ ಹಲವಾರು ಸಾಧ್ಯತೆಗಳನ್ನು ಏಕಕಾಲಕ್ಕೆ ಅನಾವರಣಗೊಳಿಸುವ ಕಥನ ಶೈಲಿಯ ಕವಿತೆಗಳಾಗಿದ್ದು ಹೊಸದೊಂದು ಲೋಕವನ್ನು ನಮ್ಮೆದುರಿಗೆ ಅನಾವರಣಗೊಳಿಸುತ್ತದೆ. ಯಾವುದೇ ಗಜಿಬಿಜಿಗೆ ಅವಕಾಶ ನೀqದೇ ಸರಾಗವಾಗಿ ಓದಿಸಿಕೊಂಡು ಹೋಗುವ ಈ ಕವಿತೆಗಳಲ್ಲಿ ಕಂಡುಬರುವ ಕಾವ್ಯದ ಹೊಳಹುಗಳು ನಮ್ಮನ್ನು ಮುದಗೊಳಿಸುತ್ತದೆ.

  ಕಾವ್ಯವು ಅಲ್ಲಲ್ಲಿ ಕಾವ್ಯದ ಸರಾಗತೆಯನ್ನೂ ಮೀರಿ ಹರಿಯಬೇಕಾದ ಅನಿವಾರ್ಯತೆ ಇಂದಿನ ತುರ್ತು. ನಾನು, ನನ್ನ ಸುತ್ತಮುತ್ತ, ನನ್ನ ಕುಟುಂಬ ಎಂಬ ನಾವೇ ನಿರ್ಮಿಸಿಕೊಂಡ ನಮ್ಮ ವರ್ತುಲದಿಂದ ಹೊರಬರಬೇಕಾದ ಅನಿವಾರ್ಯತೆಯಿದೆ. ಪ್ರಕಾಶ ಕಡಿಮೆ ಅಲ್ಲಲ್ಲಿ ಇಂತಹ ಪ್ರಯತ್ನ ಮಾಡುತ್ತಾರೆ. ಅವರ ಬಹಳಷ್ಟು ಕವನಗಳಲ್ಲಿ ಹೆಣ್ಣಿನ ನೋವು ಸಾಲುಗಳಾಗಿವೆ. ಮೊದಲ ಕವನ ‘ಚಿಂದಿ ಹೆಂಗಸಿನ ಹಾಡುಪಾಡು’ ಎಂಬ ಕವನದಲ್ಲಿ ಚಿಂದಿ ಆರಿಸುವವಳ ವ್ಯಥೆಯನ್ನು ಚಂದವಾಗಿ ಹೇಳಿದ್ದಾರೆ. ಬೆನ್ನತ್ತುವವು ನಾಯಿಗಳು/ಜೊಲ್ಲು ಸುರಿಸುತ ಅನತಿ ದೂರ ಎನ್ನುವಲ್ಲಿ ಒಂದು ಹೆಣ್ಣಿನ ಸ್ಥಿತಿಯನ್ನು ಮಾರ್ಮಿಕವಾಗಿ ಹೇಳುತ್ತಾರೆ. ಇದು ಕೇವಲ ಚಿಂದಿ ಆಯುವ ಹೆಣ್ಣಿನ ಕಥೆಯಲ್ಲ. ಸಮಸ್ತ ಹೆಣ್ಣು ಕುಲದ ಕಥೆ. ಹೋದಲ್ಲೆಲ್ಲ ಜೊಲ್ಲು ಸುರಿಸುತ್ತ ಬೆನ್ನತ್ತುವ ನಾಯಿಗಳು ಯಾವವು ಎಂಬುದನ್ನು ಮತ್ತೆ ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಕೇವಲ ಜೊಲ್ಲು ಸುರಿಸುತ್ತ ಬೆನ್ನತ್ತಿದರೆ ‘ಹಚಾ’ ಹಾಕಿ ಓಡಿಸಬಹುದು. ಆದರೆ ಹಿಂಡು ಹಿಂಡಾಗಿ ದಾಳಿ ನಡೆಸಿದರೆ ತಡೆಯುವುದು ಹೇಗೆ ಎಂಬ ಧ್ವನಿತಾರ್ಥವನ್ನೂ ಇದು ಹೇಳುತ್ತದೆ. ಇದರ ಜೊತೆಜೊತೆಗೇ ಮನುಷ್ಯನ ದುರ್ನಡತೆಗೆ/ ಥೂ ನಾಯಿ ಜನ್ಮ ಬೈದಾಗ? ನಾಯಿ ನಿಯತ್ತಿನ ನೆನಪಾಗಿ/ ಮನಮಿಡಿಯುತ್ತದೆ ನಾಯಿಗಾಗಿ (ಬಡ ಭಾರತದ ಶ್ವಾನ)ಎನ್ನುತ್ತಾರೆ. ನಾಯಿಯ ಕುರಿತಾದ ಈ ವೈರುಧ್ಯವನ್ನು ಗಮನಿಸುವಾಗ ಮನುಷ್ಯನ ವೈರುಧ್ಯವೂ ಕಣ್ಣಿಗೆ ಕಟ್ಟಿದಂತಾಗುತ್ತದೆ. ಒಂದೆಡೆ ಕಚ್ಚೆ ಹರಕುತನದ ಸಂಕೇತವಾಗಿ, ಇನ್ನೊಂದೆಡೆ ನಿಷ್ಟೆ ನಂಬಿಕೆಯ ಪ್ರತೀಕವಾಗಿ ನಾಯಿ ಕಾಡುತ್ತದೆ.

  ಪ್ರೀತಿಸುತ್ತೇನೆ ನೌಕರಿಯ/ ಎಲ್ಲಕ್ಕಿಂತ ಹೆಚ್ಚಾಗಿ/ಹೊಟ್ಟೆ ಪಾಡಿಗಾಗಿ/ ಎನ್ನುವ ಕವಿಗೆ ಆ ನೌಕರಿಯು ನೀಡುವ ತೊಂದರೆಗಳ ಅರಿವೂ ಇದೆ. ಖಿನ್ನತೆಯ ನಡುವೆ ಮುತ್ತುವುದು/ ಬಿ.ಪಿ ಶುಗರ್/ ಇಷ್ಟರ ಮೇಲೂ ಹಚ್ಚಿಕೊಂಡಿದ್ದೇನೆ/ ನೌಕರಿಯ/ ಎಲ್ಲಕ್ಕಿಂತ ಹೆಚ್ಚಾಗಿ/ (ನೌಕರಿಯೆಂಬ ಪ್ರೀತಿ) ಎನ್ನುತ್ತ ಇಂದಿನ ಜಗತ್ತಿನಲ್ಲಿ ಎಲ್ಲರಿಗೂ ಅತ್ಯವಶ್ಯಕವಾದ ನೌಕರಿಯ ಕುರಿತಾದ ಅನಿವಾರ್ಯ ಪ್ರೀತಿಯನ್ನು ಹೊರಗೆಡವಿÀದ್ದಾರೆ. ಹಾಗೆ ನೌಕರಿ ಎಂಬ ಅನಿವಾರ್ಯತೆಯಲ್ಲಿ ಊರು ಬಿಟ್ಟು ಬೇರೊಂದು ಊರನ್ನು ತನ್ನದೆಂದುಕೊಳ್ಳಬೇಕಾದ ಅನಿವಾರ್ಯತೆಯೂ ನಮ್ಮೆದುರಿಗಿರುತ್ತದೆ. ಹಾಗೆ ಊರು ಬಿಟ್ಟವರಿಗೆ ತಮ್ಮೂರಿಂದ ಬರುವ ಸಣ್ಣದೊಂದು ಸುದ್ದಿಯೂ, ನಮ್ಮೂರಿಂದ ಹಾದು ಬಂದಿದೆ ಎಂದು ಊಹಿಸಿಕೊಳ್ಳುವ ಗಾಳಿಯೂ ಅಪರಿಮಿತ ಸಾಂತ್ವಾನ ನೀಡುತ್ತದೆ. ಹಾಗೇನಾದರೂ ಊರಿನ ಹಬ್ಬದ ಮರುದಿನ ಚೀಲ ಬಂದುಬಿಟ್ಟರೆ ಒಂದೊಂದೇ ನೆನಪುಗಳು ಕುತೂಹಲದಿಂದ ಸುತ್ತುವರೆದಿರುವವರ ಮನಸ್ಸನ್ನು ತಣಿಸುತ್ತವೆ. ಹಸಿಮಾವಿನ ಉಪ್ಪಿನಕಾಯಿ/ಕೆಂಪುಗೋಲ ಉದ್ದಿನ ಹಪ್ಪಳ/ಕುಂಬಳದ ಖಮ್ಮನೆಯ ಬಾಳಕ/ಘಂ ಪರಿಮಳದ ಒಣಮೀನು/ಬಂಡಿಹಬ್ಬದ ಕಜಿಮಿಜಿ/ಹಲಸಿನೆಲೆಯ ಕೊಟ್ಟೆರೊಟ್ಟಿ/ (ಚೀಲದ ಆಗಮನ) ಕೆಸುವಿನ ಎಲೆ, ಸುವರ್ಣಗಡ್ಡೆ, ಬಸಲೆಕಟ್ಟು, ಇಷಾಡ ಮಾವು, ನುಗ್ಗೆ ಸೊಪ್ಪು ಎನ್ನುತ್ತ ಊರಿನ ವಿಶೇಷಗಳು, ವಿಶೇಷ ಅಲ್ಲದ ಮಾಮೂಲಿಯಾದರೂ ಇದ್ದ ಊರಲ್ಲಿ ಸಿಕ್ಕದ ದಿನಬಳಕೆಯ ವಸ್ತುಗಳು ಒಂದೊಂದಾಗಿ ಚೀಲದಿಂದ ಹೊರಬರುವಾಗ ಊರಿನ ಆರ್ದೃತೆಯೂ ಎದೆ ತಟ್ಟುತ್ತದೆ. ‘ಅಂಕೋಲೆ ಎಂದರೆ’ ಎನ್ನುವ ಕವನವು ವಿವgಣಾತ್ಮಕವಾಗಿ ಶೈಲಿ ಎನ್ನಿಸಿದರೂ ಅದರ ಭಾವ ಎದೆ ತಟ್ಟಿದಷ್ಟು ಅಪಹರಿಸಲು ಕನ್ನಡಕವಿಲ್ಲ ಎಂಬ ಕವಿತೆ ಹತ್ತಿರವಾಗುವುದಿಲ್ಲ. ಉಣಕಲ್ ಕೆರೆಯ ನಡುವಿನ ವಿವೇಕಾನಂದರ ಮೂರ್ತಿಯ ವಿವರಣೆ ಕೇವಲ ವಿವರಣೆಯಾಗಿಯೇ ಉಳಿಯುತ್ತದೆಯೇ ಹೊರತೂ ಅದೊಂದು ಕವನವಾಗಿ ಎದೆಯಾಳಕ್ಕೆ ಇಳಿಯದ ಸ್ಥಿತಿಯಲ್ಲಿ ನಿಂತುಬಿಡುತ್ತದೆ. ಅದರ ಹೊರತಾಗಿಯೂ ಯಕ್ಷಗಾನವೆಂದರೆ, ನನಗೆ ಶಿವರಾತ್ರಿಯೆಂದರೆ ಮುಂತಾದ ಕವಿತೆಗಳು ಒಂದಿಷ್ಟು ವಾಚ್ಯ ಎನ್ನಿಸಿದರೂ ಓದುವ ಹಿತವನ್ನು ನಮಗುಣಿಸುವುದರಲ್ಲಿ ಅನುಮಾನವಿಲ್ಲ.

  ಈ ಹುಡುಗಿಯರ ಪ್ರೀತಿ ಎಂದರೆ/ ಸಿಟಿ ಬಸ್ಸಿನಲ್ಲಿ ಸಿಟು ಸಿಕ್ಕ ಹಾಗೆ/ ಎನ್ನುವ ಕವಿ ಸೀಟು ಸಿಗದ ಜನರದ್ದೆ ಆರಾಮು ಎನ್ನುತ್ತ ಗಾಳಿ ಬೆಳಕುಗಳು ನಿರಾಳ/ ಉಸಿರಾಡುವರು ಯಾವ ಎಗ್ಗು ಇಲ್ಲದೇ/ (ಸೀಟು ಸಿಕ್ಕ ಜನ)ಎನ್ನುವಲ್ಲಿ ಹೊಸ ಚಿಂತನೆಗೆ ಹಚ್ಚುತ್ತಾರೆ. ಒಂದು ವೇಳೆ ಅವರು ಸೀಟು ಮತ್ತು ಪ್ರೀತಿಯನ್ನು ಒಂದಕ್ಕೊಂದು ಹೋಲಿಸಿ ಬರೆದ್ದು ನಿಜವಾದಲ್ಲಿ ಪ್ರಿತಿ ಎನ್ನುವುದು ಸ್ವಾತಂತ್ರ್ಯದ ಹರಣ ಎನ್ನುವ ಅವರ ಮಾತನ್ನು ಒಪ್ಪಿಕೊಳ್ಳುತ್ತಲೇ ಕೈ ಮೇಲೆ ಕೈಯಿಟ್ಟು/ ಮೌಸ್ ಹಿಡಿದು/ ಕಂಪ್ಯೂಟರ್ ಕಲಿಸಿದಾಕೆ/ ಅವನ ಹೃದಯದ ಮೇಲೆಯೇ/ ಬೆರಳಾಡಿಸಿ/ ಲಗ್ಗೆಯಿಟ್ಟಳು ಬದುಕಿಗೆ/ ಎನ್ನುವಲ್ಲು ಪ್ರೀತಿ ಎಂಬುವ ಭ್ರಮೆ ಹರಿಯುವ ರೀತಿಯನ್ನು ವಿವರಿಸುತ್ತಾರೆ. ನಿಲುಕಲೇ ಇಲ್ಲ/ ಒಬ್ಬರ ಜಾಲತಾಣ ಇನ್ನೊಬ್ಬರಿಗೆ/ ಸತ್ತಿತು ರೋಮಾಂಚನ/ ಮಾನಿಟರ್‍ನಲ್ಲಿ ಬದುಕು ನರಳಿತು/ ಬಿರುಕು ಮೂಡಿಸಿಕೊಂಡು/ (ಕಲಿಕೆ) ಎನ್ನುತ್ತಾರಾದರೂ ನನಗಾಗಿಯೇ ಹುಟ್ಟಿದಂತಿರುವಳು/ ತ್ರಿದಶಕಗಳ/ತುಂಬು ಸಂಸಾರದ ನಲುಮೆ/ (ನಾನು ಮತ್ತು ಇವಳು) ಎನ್ನುವಲ್ಲಿ ಪ್ರೀತಿ ಹಚ್ಚಹಸಿರಾಗಿರುವುದನ್ನು ಕಾಣಬಹುದು. ಅನ್ನದ ಬದಲು/ ನೋಟೇ ತಿನ್ನುವ/ ಈ ದಿನಗಳಲಿ/ (ಸ್ಮಾರ್ಟ್ ಫೋನ್) ಬದುಕು ತಂತ್ರಜ್ಞಾನದ ಅಡಿಯಾಳಾಗಿ ಹೋಗಿದೆ. ನಾವು ಬರೀ ಸಂದೇಶ ವಾಚನ/ ಓದಿ ಬೇಸರ ಬಂದರೆ/ ಬರೆಯಿರಿ ಒಂದಿಷ್ಟು/ ದೇಶೋದ್ದಾರದ ಕವನ/ (ಸ್ಮಾರ್ಟಫೋನ್) ಎನ್ನುತ್ತ ಕೊಕೊಕೊ ಎಂದು ಮುಂಜಾವನ್ನು/ ಸಂಭ್ರಮಿಸಲೂ ಬಾರದ/ ಗರಿಗೆದರಿ ಕಾಲು ಕೆದರಿ/ ಪ್ರತಿಭಟಿಸಲೂ ಆಗದ/ ಬಡಪಾಯಿ/ (ಸಾವ ಬಾಗಿಲು) ಎನ್ನುವ ಸ್ಥಿತಿ ತಲುಪಿದ್ದೇವೆ. ಅದಕ್ಕೆಂದೇ ಹೆಸರು ಊರು ಕೇಳದೇ/ ಹಸಿದ ಹೊಟ್ಟೆ ತುಂಬ/ ಅನುಮಾನ ಬಿಟ್ಟು ಬಡಿಸೋಣ/ ( ಬಿಟ್ಟು ಅಹಂ) ಎಂಬ ಅನಿವಾರ್ಯತೆ ನಮ್ಮೆಲ್ಲರಿಗೂ ಇದೆ.

  ಲಂಕೇಶರ ಅವ್ವ ಕವನ ಓದಿದ ಮೇಲೆ ಬೇರೆಲ್ಲ ಅಮ್ಮನ ಕುರಿತಾದ ಕವನಗಳು ನೀರಸ ಎನ್ನಿಸುತ್ತದೆಯೆಂಬ ಅರಿವಿದ್ದರೂ ಅಮ್ಮನ ಕುರಿತು ಬರೆಯುವ ಕವಿಗಳ ಸಂಖ್ಯೆಯೇನೂ ಕಡಿಮೆ ಆಗಿಲ್ಲ. ನನಗೆ ತಿಳಿದಂತೆ ಇತ್ತೀಚಿನ ದಿನಗಳಲ್ಲಿ ಪ್ರತಿ ಮಳೆಗಾಲದ ಸಮಯದಲ್ಲೂ ಕಡಮೆ ಬಿಟ್ಟು ಹುಬ್ಬಳ್ಳಿ ಸೇರುತ್ತಿದ್ದ ಅಮ್ಮನ ತೀರಿ ಹೋದಾಗ ಪ್ರಕಾಶಣ್ಣನ ನೋವು ಸಂಕಟ ಕಂಡಿದ್ದಿದೆ. ಹೀಗಾಗಿ ಅಮ್ಮನಿಗೊಂದು ಕವಿತೆ ಎನ್ನುವ ಕವಿತೆ ಈ ಎಲ್ಲ ಅಂಶಗಳನ್ನು ತೆಗೆದಿಟ್ಟು ಕಣ್ಣು ಹಸಿಯಾಗುವಂತೆ ಮಾಡಿದೆ. ಸಂಕಲನದ ಮೊದಲೆಲ್ಲ ಆಗಾಗ ಅಲ್ಲಲ್ಲಿ ಇಣುಕುವ ಅಮ್ಮ ಬೆಳಗಿನ ತಿಂಡಿ ಏನು ಎಂದರೆ ನನ್ನೇ ತಿಂದುಬಿಡಿ ಎಂದು ನಿರ್ಲಿಪ್ತಳಾಗಿ ಉತ್ತರಿಸುತ್ತ, ಕಡು ಬಡತನದಲ್ಲೂ ಏಳು ಮಕ್ಕಳನ್ನು ಸಂಬಾಳಿಸಿ, ಸೋವಿ ಮೀನು ಮನೆಗೆ ಬಂದಾಗಲೂ ಮೀನು ತಲೆಯನ್ನಷ್ಟೇ ತಿನ್ನಬೇಕಾದ ಅನಿವಾರ್ಯತೆಗೆ ಒಗ್ಗಿಕೊಂಡವಳು. ಮಾತು ಜೋರು ಎನ್ನಿಸಿದರೂ, ಅಂತಃಕರಣ ಸದಾ ಹಸಿಹಸಿ. ಯಾಕೆ ಲೇಟು? ಎಂದು ಈಗಲೂ ಗದರಿಸಿ ಕೇಳುವ, ಕೊಡೆ ತಕ್ಕೊಂಡ್ಯೇನೋ ಎಂಬುದನ್ನೂ ಜೋರಾಗಿಯೇ ಕೇಳುವ ಅಮ್ಮನ ಅನುಪಸ್ಥಿತಿ ಎಲ್ಲೆಡೆಯೂ ಕಾಣುವ ಅವಳು ಬಳಸುತ್ತಿದ್ದ ವಸ್ತುಗಳ ನಡುವೆ ಉಪಸ್ಥಿತಿಕೊಟ್ಟಂತೆ ಭಾಸವಾಗುತ್ತದೆ. ಹೀಗಾಗಿಯೇ ನಾ ಬರೆದಿದ್ದೇ ಕಡಿಮೆ/ ಆದರೂ/ ಇವೆಲ್ಲವೂ ನನ್ನದೇ/ ಹೊಸ ಹಳೆಯ ಸಾಲುಗಳು/ ಯಾರದ್ದೋ ಕದ್ದವುಗಳಲ್ಲ/ (ಕವನ ಕದ್ದವರು) ಎನ್ನುತ್ತ ಅಮ್ಮನ ಕುರಿತಾದ ತಾಜಾ ಭಾವನೆಗಳನ್ನೇ ಹೇಳುತ್ತಿದ್ದಾರೆ.

  ಕವನಗಳ ಭಾವನೆಗಳು ಹಸಿ ಹಸಿಯೆನ್ನಿಸಿದರೂ ಪ್ರಾಸ ತಾಳ ಎದ್ದು ಕಾಣುವಂತಿದ್ದ ಮೊದಲ ಸಂಕಲಕ್ಕೂ ಈಗಿನ ಸಂಕಲನಕ್ಕೂ ಇರುವ ವ್ಯತ್ಯಾಸ ಎದ್ದು ಕಾಣುತ್ತಿದೆ. ಭಾವನೆಗಳು ಮಾಗಿವೆ.ಕವನದ ಶಾರೀರವೂ ಬದಲಾಗಿದೆ. ಕಾವ್ಯ ಶರೀರವೂ ಹೊಸಪೀಳಿಗೆಯ ಇನ್ಸಟಂಟ್ ಕವನಗಳಿಗೆ ಒಗ್ಗಿಕೊಂಡಂತೆ ಕಾಣುತ್ತಿದೆ. ಒಂದು ಸಂಕಲನದಿಂದ ಇನ್ನೊಂದು ಸಂಕಲನಕ್ಕೆ ಸುಮಾರು ಇಪ್ಪತ್ತು ವರ್ಷ ಕಾದ ಪ್ರಕಾಶ ಕಡಮೆ ತಾನು ಬರೆಯದಿದ್ದರೂ ಮನೆಮಂದಿಯೆಲ್ಲ ಬರೆಯುವಂತೆ ನೊಡಿಕೊಂಡ ಕವಿ ಹೃದಯದವರು. ಪ್ರಕಾಶ ಕಡಮೆಯವರಂತಹ ಹಿರಿಯ ಕವಿಯಿಂದ ಮತ್ತಿಷ್ಟು ಸಮಾಜಮುಖಿ, ಜೀವಪರವಾದ, ಪ್ರತಿಭಟನಾತ್ಮಕ ಕವನಗಳ ನಿರೀಕ್ಷೆ ನನಗಿದೆ.

  ———–————-

  ಶ್ರೀದೇವಿ ಕೆರೆಮನೆ

  shrಉತ್ತರ ಕನ್ನಡದ ಅಂಕೋಲದವರು. ವೃತ್ತಿಯಲ್ಲಿ ಶಿಕ್ಷಕಿ. ಕವಿತೆ, ಅಂಕಣ ಬರಹಗಳಿಂದ ಪರಿಚಿತರು.

  Share

  Related Post

  Related Blogpost

  Leave a comment

  Your email address will not be published. Required fields are marked *

  Recent Posts More

  • 4 hours ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 18 hours ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 day ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

  • 1 day ago No comment

   ಬದುಕು ಬರಿ ಗಿಲೀಟು

   (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

  • 2 days ago One Comment

   ನಾನು ಮತ್ತು ನೀನು

   ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help