Share

ಬಾಲ್ಯದ ಬಣ್ಣದ ಗೆರೆಗಳು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

 

 

 

 

 

 

ಬಾಲ್ಯ ಬಂಗಾರ

 

 

ನ್ನಮ್ಮ ಬೆಳ್ಳಗಿನ ಹೆಂಗಸು, ತಂದೆಯದು ನಸುಗಪ್ಪು ಬಣ್ಣ . ಹೀಗಾಗಿ ಆರು ಜನಮಕ್ಕಳಲ್ಲಿ ಕೆಲವರು ತಂದೆಬಣ್ಣ ಹೊತ್ತು ಬಂದರೆ ಇನ್ನು ಕೆಲವರು ತಾಯಿಯ ಶ್ವೇತವರ್ಣದವರಾಗಿದ್ದೆವು .ನಾನಂತೂ ತಂದೆಯ ಪಡಿಯಚ್ಚು. ದೊಡ್ಡಣ್ಣ ಕೊನೆಯ ಅಣ್ಣ ಮತ್ತು ಎರಡನೇಯ ಅಕ್ಕ ಬಿಳಿದೊಗಲ ಹೊತ್ತು ಬಂದಿದ್ದರೆ ನಾನು ದೊಡ್ಡಕ್ಕ ಮತ್ತು ಎರಡನೇಯ ಅಣ್ಣ ಸ್ವಲ್ಪ ಗೋಧಿಬಣ್ಣ ಪಡೆದಿದ್ದು, ಹಳ್ಳಿಯಲ್ಲಿ ಸಹಜವಾಗಿ ಅರ್ಧ ಹಂಗೇ, ಅರ್ಧಹಿಂಗೇ ಎಂದು ಈಗೀನ ಭಾಷೆಯಲ್ಲಿ ಫಿಪ್ಟಿ ಫಿಪ್ಟಿ ಎಂಬರ್ಥದಲ್ಲಿ ತಮಾಷೆ ಮಾಡುತ್ತಿದ್ದರು. ಗದ್ದೆ ಕೆಲಸದ ನಾಟಿಗೆ, ಕಳೆ ತೆಗೆಯಲು, ಇಲ್ಲ ಶೇಂಗಾ ಹರಿಯಲು ಬರುವ ಹೆಣ್ಣಾಳುಗಳೆಲ್ಲ ನನ್ನ ಅಪ್ಪನ ಮಗಳೆಂದು ಕರೆಯುತ್ತಿದ್ದರೆ ನನಗೆ ಒಂದು ಕಡೆ ಸಂತೋಷವಾದರೂ ಸ್ವಲ್ಪ ಕೋಪವೂ ಬರುತ್ತಿತ್ತು. ಕಾರಣ ನಾನು ಬೆಳ್ಳಗಿಲ್ಲವಲ್ಲ ಎಂದು.

ನನ್ನಮ್ಮ ದೊಡ್ಡ ಮಗನನ್ನು ಹಿರಿಯವನೆಂದು ಬಹಳ ಪ್ರೀತಿಸುತ್ತಿದ್ದರು. ಎರಡನೇ ಅಣ್ಣ ತಾಯಿಯ ಜೊತೆಯಲ್ಲೇ ಯಾವಾಗಲೂ ಇರುತ್ತಿದ್ದ. ಅಮ್ಮ ಹೇಳಿದ ಹಾಗೆ ಮಾಡುವುದು ಆತನಿಗೆ ಇಷ್ಟವಾಗಿತ್ತು. ಹಾಗಾಗಿ ಆತ ಎಲ್ಲಿ ಹೋದರೂ ಅಮ್ಮನ ಬಲಗೈ. ಎರಡನೇ ಅಕ್ಕನದು ಮೃದು ಸ್ವಭಾವವೆಂದು ಅಮ್ಮ ಮುದ್ದು ಮಾಡುತ್ತಿದ್ದರು. ನಮ್ಮೆಲ್ಲರಲ್ಲಿ ಅತಿ ಶಾಂತನೆಂದರೆ ಕೊನೆಯ ಅಣ್ಣ. ಶಾಲೆಗೆ ರಜೆ ಇದ್ದು ನಾವೆಲ್ಲ ಮನೆಯಲ್ಲಿದ್ದ ದಿನವೆಲ್ಲ ನಾವು ಧುಮಡಿ ಗದ್ದಲ ಮಾಡುತ್ತಿದ್ದರೆ ಆತ ತಾನಾಯಿತು ತನ್ನ ಕೆಲಸವಾಯಿತೆಂದು ಯಾರ ಉಸಾಬರಿಗೂ ಹೋಗದೆ ಕೊಟ್ಟ ಊಟ ಮಾಡಿ ತನ್ನ ಹಾಸಿಗೆ ಹಿಡಿಯುತ್ತಿದ್ದ. ಉಳಿದವರೆಂದರೆ ನಾನು ದೊಡ್ಡಕ್ಕ ಸ್ವಲ್ಪ ಜೋರೆಂದು ಎಲ್ಲರಿಗೂ ಗೊತ್ತಿರುವುದೇ ಆಗಿತ್ತು.

ದೊಡ್ಡಕ್ಕ ನನಗೆ ಹೆಚ್ಚು ಪ್ರೀತಿಸುತ್ತಿದ್ದರಿಂದ ಆಕೆಯೊಂದಿಗೆ ನಾನು ಜಗಳವಾಡುತ್ತಿರಲಿಲ್ಲ. ಆದರೆ ಸಣ್ಣಕ್ಕನೆಂದರೆ ಯಾಕೋ ಸಣ್ಣ ಪ್ರಾಯದಲ್ಲಿ ಸಣ್ಣ ಹೊಟ್ಟೆಕಿಚ್ಚು ಇತ್ತೆಂಬುದು ಸುಳ್ಳಲ್ಲ. ಇದಕ್ಕೆ ಕಾರಣ ಅಮ್ಮ ಆಕೆಯನ್ನು ಸದಾ ಶಾಂತ ಸ್ವಭಾವದವಳೆಂದು ಹೊಗಳುವುದು ನನ್ನ ಹಠಮಾರಿಯೆಂದು ತೆಗಳುವುದು ಮಾಡುತ್ತಿದ್ದರು. ಆಕೆ ಸುಂದರಿಯಾಗಿದ್ದಳು. ಸದೃಢ ಶರೀರಿಯೂ ಆಗಿದ್ದಳು. ನಾನಾದರೋ ಪೀಚಲು ದೇಹಿ, ಬಿಳಿಬಣ್ಣದ ಆಕೆಯನ್ನು ಎಲ್ಲರೆದರೂ ತನ್ನ ಹಾಗೆ ಎಂದು ಅಮ್ಮ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೆ ನಾನು ಒಳಗೊಳಗೆ ಉರಿದುಕೊಳ್ಳುತ್ತಿದ್ದೆ. ಇವತ್ತು ಆ ವರ್ತನೆ ನಗು ತರಿಸುತ್ತದೆ. ಆದರೆ ಆಗೆಲ್ಲ ಎಷ್ಟು ಹಿಂಸೆ ಅನುಭವಿಸುತ್ತಿದ್ದೆ , ಏಕಾಂಗಿಯಾಗಿ ನೋಯುತ್ತಿದ್ದೆ. ಪಾಪ ಆ ವಯಸ್ಸಿನಲ್ಲಿ ಅಮ್ಮನಿಗೆ ನಾನು ಬಹಳೆ ಕಾಟಕೊಡುತ್ತಿರಬಹುದು. ತಾಯಿಗೆ ಮಕ್ಕಳೆಂದರೆ ಭೇದಭಾವ ಇರುವುದಿಲ್ಲ ಎಂಬುದು ಈಗ ತಾಯಾದ ಮೇಲೆ ಅರಿವಾಗಿದೆ. ಆದರಾಗ ಆಕೆ ಪಕ್ಷಪಾತ ಮಾಡುತ್ತಾಳೆಂದು ಆಕ್ಷೇಪಿಸುತ್ತಿದ್ದೆ. ಆದರಿಂದು ಅಮ್ಮನಿಲ್ಲ. ಅವರ ನೆನಪು ಮಾತ್ರ.

ಅಂದಿನ ನಲಿವಿನ ಕ್ಷಣಗಳೆಲ್ಲಾ ಇಂದು ಬರೀ ನೆನಪುಗಳು. ತಂದೆ ನೌಕರಿಯಲ್ಲಿದ್ದರು. ಅಮ್ಮ ಮತ್ತು ನಾವು ಆರು ಜನ ಮಕ್ಕಳ ತುಂಬು ಸಂಸಾರವನ್ನು ಅಮ್ಮ ಶಿಸ್ತಿನಿಂದ ಗಂಭೀರವಾಗೇ ಪಾಲಿಸಿಕೊಂಡು ಹೋಗುತ್ತಿದ್ದರು ವಾರವಾರವೂ ಬರುವ ತಂದೆ ಮನೆಗೆ ಬೇಕಾದ sಸಾಮಾನುಗಳ ತಂದು ಹಾಕಿ ಹೋಗುತ್ತಿದ್ದರು. ಅದೊಂದು ದಿನ ಅಮ್ಮ ರಾಗಿಯ ಮಣ್ಣಿ ಮಾಡಿದ್ದರು. ಎಲ್ಲರೂ ಒಟ್ಟಿಗೆ ಉಣ್ಣುವ ತಿನ್ನುವ ಪರಂಪರೆಯಿತ್ತು.ಎಲ್ಲರಿಗೂ ಬಡಿಸಿ ಅಮ್ಮ ನಮ್ಮೊಂದಿಗೆ ಊಟಕ್ಕೆ ನಿಲ್ಲುತ್ತಿದ್ದರು. ಆ ದಿನ ಕೂಡಾ ಹಾಗೆ. ಅಮ್ಮ ಬಿಸಿಬಿಸಿ ರಾಗಿ ಮಣ್ಣಿ ತಟ್ಟೆಗೆ ಬಡಿಸಿದ ಎಲ್ಲರೂ ಅವರವರ ತಟ್ಟೆ ಹಿಡಿದುಕೊಂಡರು.ನಡುವಿನ ಅಣ್ಣ ತನ್ನ ಪಾಲನ್ನು ಪಕ್ಕಕ್ಕಿಟ್ಟು ಪಾತ್ರಯಲ್ಲಿದ್ದನ್ನು ಇನ್ನು ಸ್ವಲ್ಪ ಬಡಿಸಿಕೊಳ್ಳುವ ಆತುರದಲ್ಲಿದ್ದ. ಮಧ್ಯಾಹ್ನದ ನಿದ್ದೆ ಮಂಪರಿನಲ್ಲಿದ್ದ ದೊಡ್ಡ ಅಕ್ಕ ತನ್ನ ತಟ್ಟೆಹಿಡಿದು ಆತನ ತಲೆಯ ಕಡೆ ನಿಂತಿದ್ದಳು. ಅದೇನೂ ಕಣ್ಣು ಕೂರಿದಂತಾಯಿತೋ ತಟ್ಟೆ ಸ್ವಲ್ಪವೇ ಓರೆಯಾಗುತ್ತಲೂ ಅವಳ ತಟ್ಟೆಯಲ್ಲಿದ್ದ ಹೊಗೆಯಾಡುತ್ತಿದ್ದ ರಾಗಿ ಮಣ್ಣಿ ಕೆಳಗೆ ಕುಳಿತ ಅಣ್ಣನ ತೆರೆದ ಬೆನ್ನಿನ ಮೇಲೆ ಸುರಿದದ್ದೇ ತಡ ರಾಗಿ ಮಣ್ಣಿ ಮಾಡಿದ ಪಾತ್ರೆಯನ್ನು ಕೈಯಲಿಯೇ ಹಿಡಿದು ಎದ್ದು ಬಿದ್ದು ಕುಣಿಯತೊಡಗಿದ. ಅವನಿಗೇನಾಯಿತೆಂದು ತಿಳಿಯುವ ಮೊದಲೇ ಆತನ ಬೆನ್ನು ಸ್ವಲ್ಪ ಸುಟ್ಟುಹೋಗಿತ್ತು. ಅಮ್ಮ ಇದ್ದ ಬಿದ್ದ ಔಷಧ ಮಾಡತೊಡಗಿದರು. ಅಕ್ಕನಿಗೆ ಸಿಕ್ಕಿದ್ದು ಬೈಗುಳಗಳ ಸರಮಾಲೆ. ನಮಗೆಲ್ಲಾ ತಿಂದಿದ್ದು ಹೊಟ್ಟೆಗೆ ಹೋಯ್ತೆಂದು ತಿಳಿದಿದ್ದಷ್ಟೇ ಆದರೆ ಅದು ರುಚಿಸಲಿಲ್ಲ. ಹೀಗೆಲ್ಲ ಅವಾಂತರಗಳ ಮೇಲೆ ಅವಾಂತರಗಳ ಸೃಷ್ಟಿಸುತ್ತಿದ್ದರೂ ಅದು ಸಹಜವಾಗಿತ್ತಲ್ಲ. ಆದರಿಂದು ಅದೆಷ್ಟು ಮಾಡಿ ತಿಂದರೂ ಯಾವ ರುಚಿಯೂ ಸಿಗದಂತೆ ಬಾಯಿ ರುಚಿಗೆಟ್ಟಿದೆ. ಖುಷಿ ಸತ್ತಿದೆ.

ಹೊಲದ ಕೆಲಸದ ದಿನಗಳಲ್ಲಿ ಅಮ್ಮ ಹೆಚ್ಚಾಗಿ ಬೆಳಿಗ್ಗೆಯ ತಿಂಡಿಗೆ ಪುಂಡಿ ಮಾಡುತ್ತಿದ್ದರು. ಕುಚಲಕ್ಕಿ ಮತ್ತು ತೆಂಗಿನ ಕಾಯಿ ರುಬ್ಬಿ ಗಟ್ಟಿ ಹಿಟ್ಟು ಕಲಿಸಿ ಹಬೆಯಲ್ಲಿ ಇಡ್ಲಿಪಾತ್ರೆಯಲ್ಲಿ ಬೇಯಿಸಿದರೆ ಮುಗಿಯಿತು. ಹಾಗಾಗಿ ಸಿಕ್ಕಾಪಟ್ಟೆ ಗದ್ದೆಯ ಕೆಲಸದ ನಡುವೆ ಸ್ವಲ್ಪ ಕಡಿಮೆ ಕೆಲಸದ ಅಡಿಗೆ ತಿಂಡಿ ತಿನಿಸು ಮಾಡುತ್ತಿದ್ದರು. ಸಮಯ ಉಳಿಸುವ ಸಲುವಾಗಿ ರಾತ್ರಿಯೇ ಕೆಲವೊಮ್ಮೆ ತಿಂಡಿ ಮಾಡಿಡುತ್ತಿದ್ದರು. ಪುಂಡಿಗೆ ಸ್ವಲ್ಪ ಹದ ತಪ್ಪಿದರೆ ಅದು ಗಟ್ಟಿ ಕಲ್ಲಿನಂತೆ ಆಗುತ್ತಿತ್ತು. ಅದನ್ನು ಗರ್ನಲ್ ಎಂದೇ ಕರೆದು ನಾವೆಲ್ಲ ನಗಾಡುತ್ತಿದ್ದೆವು. ಆದರೂ ಅದೂ ಕೂಡಾ ಗಂಟಲಲ್ಲಿ ಇಳಿದು ಜೀರ್ಣವಾಗುತ್ತಿತ್ತು ಎಂಬುದು ಅಷ್ಟೆ ಸತ್ಯ. ಒಳ್ಳೆಯ ತಿಂಡಿ ತಿನಿಸಿ ಮಾಡಿದಾಗಲೆಲ್ಲ ನಾನು ಎಲ್ಲರ ತಟ್ಟೆಯನ್ನು ತೂಗಿ ನೋಡುತ್ತಿದ್ದೆ. ಎಲ್ಲರಿಗಿಂತ ಕೊಂಚ ಹೆಚ್ಚಿಗೆ ಇರುವುದನ್ನು ಮೊದಲೇ ಎತ್ತಿಕೊಂಡು ಬಿಡುವ ಹುನ್ನಾರವಿತ್ತು. ಬರೀಯ ಮೀನು ಸಾರು ತಿಂದು ತಿಂದು ಬಾಯಿ ಕೆಟ್ಟು ಬೇಳೆ ಸಾರು ಮಾಡಿದ ದಿನ ಗಡದ್ಧಾಗಿ ಉಣ್ಣುತ್ತಿದ್ದೆ. ಆಗೆಲ್ಲ ಇವತ್ತು ಮಾಡಿದ್ದೆಲ್ಲಾ ನಾನೊಬ್ಬಳೇ ಉಣ್ಣುವೆನೆಂದು ಅಣ್ಣಂದಿರು ತಮಾಷೆ ಮಾಡುತ್ತಿದ್ದರು.

ಇನ್ನೊಂದು ಬಹು ಮೋಜಿನ ಸಂಗತಿ ಇತ್ತು. ಅದೇ ನಮ್ಮ ಮನೆ ಯಾವಾಗಲೂ ಹೊರಗಿನಿಂದ ಆ ಊರಿಗೆ ಬರುವ ಟೀಚರುಗಳಿಗೆ ಖಾಯಂ ಆಗಿ ಬಾಡಿಗೆ ಮನೆಯಾಗಿತ್ತು. ಹಾಗೆ ಬಂದವರಲ್ಲಿ ಪಕ್ಕದೂರಿನ ಟೀಚರ್ ಕೂಡಾ ಒಬ್ಬರು. ಎಸ್.ಎಸ್.ಎಲ್.ಸಿ ಮುಗಿಸಿ ಒಂದು ವರ್ಷದ ಟಿ.ಸಿ.ಎಚ್‍ನ್ನು ಮಾಡಿ ಖಾಯಂ ಟೀಚರ ಆಗಿ ಬಂದಿದ್ದರು. ಅವರಿಗಾಗ ಹೆಚ್ಚೆಂದರೆ ಇಪ್ಪತ್ತೆರಡು ಇಲ್ಲವೇ ಇಪ್ಪತ್ತ್ಮೂರು ವರ್ಷಗಳಿರಬಹುದು. ನಮ್ಮ ಮನೆಯ ಹಿಂಭಾಗದ ಒಂದು ಕೋಣೆಯಲ್ಲಿ ಅವರ ವಾಸ. ಒಂಟಿಯಾಗಿ ಮಲಗಲು ಹೆದರುತ್ತಿದ್ದ ಅವರು ರಾತ್ರಿ ನಮ್ಮೊಂದಿಗೆ ನಿದ್ರಿಸಲು ಬರುತ್ತಿದ್ದರು. ನಾನು ಅಕ್ಕ ಮತ್ತು ಅವರು ಎಲ್ಲ ಒಂದೇ ಕಡೆ ಉದ್ದಕ್ಕೆ ಹಾಸಿಕೊಂಡು ಮಲಗುತ್ತಿದ್ದೆವು. ಆ ರಾತ್ರಿಗಳಲ್ಲಿ ಪುಂಖಾನುಪುಂಖವಾಗಿ ಅದೆಷ್ಟೋ ಮನೆಯ ಕಥೆಗಳು, ಯಾರ್ಯಾರ ಕಟ್ಟುಕಥೆಗಳು, ಹಾಸ್ಯ ಚಟಾಕಿಗಳು ಹೊರಬರುತ್ತಿದ್ದವು. ಅದರ ಗಮ್ಮತ್ತೇ ಬೇರೆ ಇತ್ತು. ರಾತ್ರಿ ಮೂತ್ರಕ್ಕೆ ಹೋಗಲು ಭಯಪಡುವ ಅವರು ನಮ್ಮ ಕರೆದುಕೊಂಡೇ ಹೋಗುತ್ತಿದ್ದರು. ಸುಮ್ಮನೆ ಹೆದರಿಸುವ ಚಾಳಿ ಇರುವ ನಾನು ಅದೆಷ್ಟೋ ಬಾರಿ ಅವರ ಕಾಡಿದ್ದಿದೆ. ಶಾಲೆಯಲ್ಲಿ ಟೀಚರ್ ಆಗಿ ಎಲ್ಲ ಮಕ್ಕಳಿಗೆ ಹೆದರಿಸುತ್ತಾ ಗಂಭಿರವಾಗಿರುತ್ತದ್ದ ಆವರು ಮನೆಗೆ ಬಂದೊಡನೆ ನಮ್ಮೊಂದಿಗೆ ಒಬ್ಬರಾಗುತ್ತಿದ್ದರು. ಇನ್ನು ಮಜವಾದ ವಿಚಾರವೆಂದರೆ ಹಾಲಿಗೆ ಹಾಕಿ ಕುಡಿಯಲು ಅವರು ತರುತ್ತಿದ್ದ ಹಾರ್ಲಿಕ್ಸು ಅರ್ಧಕ್ಕರ್ಧ ನನ್ನ ಹೊಟ್ಟೆಗೆ ಹೋಗುತ್ತಿದ್ದದ್ದು. ಚಾಕಲೇಟಿನ ಹಾಗೆ ರುಚಿಯಾಗಿರುತ್ತಿದ್ದ ಆದನ್ನು ಹಾಲಿಗೆ ಹಾಕಿ ತಿನ್ನದೇ ಅದನ್ನು ಉಂಡೆ ಮಾಡಿ ತಿಂದು ಬಿಡುತ್ತಿದ್ದೆ. ಪಾಪ ಅವರಾದರೊ ನಾನು ತಿನ್ನುವುದು ಗೊತ್ತಿದ್ದೂ ಎಂದಿಗೂ ಕೋಣೆಗೆ ಬೀಗ ಹಾಕಿದ್ದಿಲ್ಲ. ಯಾಕೆಂದರೆ ನಾನವರ ಮುದ್ದಿನ ಹುಡುಗಿಯಾಗಿದ್ದೆ. ಪ್ರತಿ ಸೋಮವಾರ ತಡವಾಗಿ ಊರಿಂದ ಬರುವ ಅವರಿಗೆ ಮಧ್ಯಾಹ್ನದ ಊಟ ನಮ್ಮ ಮನೆಯದೇ ಆಗಿರುತ್ತಿತ್ತು. ಅದನ್ನೆಲ್ಲಾ ಸಪ್ಲೈ ಮಾಡುವ ವೇಟರ್ ನಾನಾಗಿದ್ದೆ. ಹಾಗಾಗಿ ಅವರಿಗೂ ನನಗೂ ಒಳಗೊಳಗೆ ಒಂದು ಒಪ್ಪಂದವಿತ್ತು.

ಬಾಲ್ಯ ಎಷ್ಟೊಂದು ಸುಂದರವಿತ್ತು. ಸಂತಸದ ಗೂಡಾಗಿತ್ತು. ಕನಸಿನ ಮಹಲಾಗಿತ್ತು. ಯಾವ ತೆಗಳಿಕೆ ಹೊಗಳಿಕೆ ಕೊಂಕು, ಕಟಕಿ ..ಉಹುಂ.. ಇಲ್ಲ ಯಾವುದೂ ದೀರ್ಘವಾಗಿ ಕಾಡಿದ್ದಿಲ್ಲ. ತಂದೆ ತಾಯಿ ಒಡಹುಟ್ಟಿದವರ ಕೂಡಾ ಬೆಸೆದ ಆ ಬಾಂಧವ್ಯಗಳೆಲ್ಲ ಈಗ ಕಳಚಿಹೋಗಿದೆ. ಹೆತ್ತವರು ಕಾಲನ ಕೂಗಿಗೆ ಒಗೊಟ್ಟು ನಡೆದರೆ ಒಡಹುಟ್ಟಿದವರೂ ನಮ್ಮಂತೆ ಅವರವರ ಜಂಜಾಟದ ಜಗತ್ತಿನಲ್ಲಿ ವ್ಯಸ್ತ. ಆಗೊಮ್ಮೆ ಈಗೊಮ್ಮೆ ಮುಖ ನೋಡುವುದ ಬಿಟ್ಟರೆ ಒಟ್ಟಿಗಿರುವ ಅವಕಾಶಗಳು ಕಡಿಮೆ. ಇವೆಲ್ಲವನ್ನೂ ಕೂಡಿಸುವ ಹಾಗಾಗಿ ಬಾಲ್ಯ ಮತ್ತೊಮ್ಮೆ ಬರುವುದಾದರೆ ಬೇಡ ಎನ್ನುವವರ್ಯಾರು?

——————–

ನಾಗರೇಖಾ ಗಾಂವಕರ

ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲಭಾಷಾ ಉಪನ್ಯಾಸಕಿ. ಕಥೆ, ಕವನಗಳು, ಲೇಖನಗಳು, ವಿಮರ್ಶಾ ಬರಹಗಳ ಮೂಲಕ ಪರಿಚಿತರು. ‘ಏಣಿ’, ‘ಪದಗಳೊಂದಿಗೆ ನಾನು’ ನಾಗರೇಖಾ ಅವರ ಪ್ರಕಟಿತ ಕವನ ಸಂಕಲನಗಳು.

Share

Leave a comment

Your email address will not be published. Required fields are marked *

Recent Posts More

 • 4 hours ago No comment

  ಪ್ರತಿಯೊಬ್ಬರೊಳಗೂ ಒಂದೊಂದು ಕಥೆ!

  ಆಕೆ ಮೀರಾ. ತಾನು ಬರೆದ ಕಥೆಯೊಂದರ  ಮೂಲಕ ಇದ್ದಕ್ಕಿದ್ದಂತೆ ಲಕ್ಷಾಂತರ ಮನಸ್ಸನ್ನು ಮುಟ್ಟಿಬಿಡುತ್ತಾಳೆ. ವಿವಾನ್ ಎಂಬ ಬ್ಯಾಂಕ್ ಅಧಿಕಾರಿಯೊಬ್ಬನಿಗೆ ಜಗತ್ತನ್ನೇ ಸುತ್ತುವ ಕನಸು. ಕೆಫೆಯೊಂದರ ಮ್ಯಾನೇಜರ್ ಕಬೀರ್ ತನ್ನದೇ ಆದ ಏನನ್ನಾದರೂ ಸಾಧಿಸುವ ಹಂಬಲವಿಟ್ಟುಕೊಂಡವನು. ಅದೇ ಕೆಫೆಯ ಗ್ರಾಹಕಿ ನಿಶಾ ಎಂಥದೋ ಹತಾಶೆಗೆ ಸಿಕ್ಕಿಹಾಕಿಕೊಂಡು, ತನ್ನದೇ ಆದ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿರುವವಳು. ಪ್ರತಿಯೊಬ್ಬರದೂ ಒಂದೊಂದು ಕಥೆ. ಅಂಥ ನಾಲ್ವರೂ ಒಂದೆಡೆ ಸೇರಿದಾಗ ಏನಾಗುತ್ತದೆ? ಈ ಕುತೂಹಲವನ್ನು ತೆರೆದಿಡುತ್ತ ಹೋಗುವ ಕಾದಂಬರಿಯೇ ...

 • 1 day ago No comment

  ನನ್ನೊಳಗಿನ ಮಗುವಿಗೊಂದು ಪತ್ರ

        ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

 • 2 days ago No comment

  ದುರಿತ ಕಾಲದ ಕವಿತೆಗಳು

      ಕವಿಸಾಲು       1 ಒಂಟಿಯಾಗಿ ಹೆಗಲಲಿ ನೇಗಿಲ ಎಳೆದು ಅಜ್ಜಿ ಬಿತ್ತಿದ ರಾಗಿಗೆ ಸಗ್ಗಣಿ ಗೊಬ್ಬರ ಹಾಕಿ ಖಂಡುಗಗಟ್ಟಲೇ ರಾಗಿ ಬೆಳೆದ ಅಜ್ಜನ ಹೊಲದ ಮೇಲಿವತ್ತು ಚತುಷ್ಕೋನ ರಸ್ತೆ ರಾರಾಜಿಸುತ್ತಿದೆ ಆರಾಮಾಗಿ ಅಲ್ಲಿ ಮಲಗಿರುವ ಅವನ ಎದೆಯ ಮೆಲೆ ಅನಿಲ ಟ್ಯಾಂಕರುಗಳು ಅಡ್ಡಾಡುತಿವೆ ನೋವಾಗುತ್ತಿರುವುದು ಮಾತ್ರ ನನಗೆ! ~ 2 ಅಭಿವೃದ್ದಿಯ ಜಾಹಿರಾತಿನಲ್ಲಿ: ಹಡಗಿನಂತಹ ಕಾರುಗಳು ಹಾಳೆಗಳಂತಹ ಮೊಬೈಲುಗಳು ಕಣ್ಣು ಕುಕ್ಕುವ ಕಂಪ್ಯೂಟರುಗಳು ...

 • 2 days ago No comment

  ನಾಲ್ಕು ಹನಿಗಳು

      ಕವಿಸಾಲು         ಧ್ಯೇಯದಿಂದ ನೆಲ ಅಗೆದೆ ಗಿಡ ನೆಡಲು. ಮತ್ತೆ ಕಾಣಿಸಿತು ಧ್ಯಾನಸ್ಥ ಎರೆಹುಳು. ~ ನದಿ ತಟದ ಬೆಂಚಿನ ಮೇಲೆ ನಾನು ಎರಡೂ ತಟಗಳಿಗೆ ಅಂಟಿದ್ದ ದಪ್ಪನೆ ಕಾಂಕ್ರೀಟ್ ಗೋಡೆ. ಹರಿವ ನೀರು, ನಾನು ಬಂಧಿಗಳೇ. ~ Mindfulness ಎಂದೆಲ್ಲಾ ಹೇಳುವ ಅವರ ಹೆಮ್ಮೆಗೆ ಕಾಣಿಸಲಿಲ್ಲವೇಕೆ ಅಖಂಡವಾಗಿ ನಿಂತು ಜಗಿಯುವ ಆ ಎಮ್ಮೆ? ~ ಆ ಒಂದು ಮಳೆ ಹನಿ ...

 • 2 days ago No comment

  ಕಂಗಾಲಾಗಿದ್ದಾಗ ನಾವೆಲ್ಲ, ಮೆಲ್ಲಮೆಲ್ಲನೆ ಬಂದಳಲ್ಲ!

    ಅಡಗಿಕೊಳ್ಳಲು ಬಾಳೆ ಬುಡ ಆರಿಸಿಕೊಂಡ ಪುಟಾಣಿಗೆ ಬೇಸಿಗೆಯ ಆ ಮಧ್ಯಾಹ್ನ ಊಟ ಮಾಡಿ ನಿದ್ದೆ ಮಾಡುವ ಸಮಯವಾಗಿತ್ತು.         ಬಾಲ್ಯ ಬಂಗಾರ   ಬಾಲ್ಯದ ಮಜವನ್ನು ಅನುಭವಿಸದ ಮಕ್ಕಳು ಬದುಕನ್ನು ಪೂರ್ಣವಾಗಿ ಸವಿಯುವುದು ಕಷ್ಟವೇ? ಆ ಮಜವೇ ಭಿನ್ನ, ಅದರಲ್ಲೂ ಹಳ್ಳಿಯ ಬದುಕಿನ ಬಾಲರ ಜೀವನದಲ್ಲಿ ಬಾಲ್ಯ ಅನನ್ಯವಾದ ಜೀವನಾನುಭವ ನೀಡುವ ಕಾಲ. ಪೇಟೆಯಲ್ಲಿ ರೇಷ್ಮೆ ಹುಳುವಿನಂತೆ ಪೊರೆಯ ಒಳಗೆ ಬದುಕುವ ಮಕ್ಕಳ ...


Editor's Wall

 • 21 November 2017
  1 day ago No comment

  ನನ್ನೊಳಗಿನ ಮಗುವಿಗೊಂದು ಪತ್ರ

        ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

 • 19 November 2017
  3 days ago No comment

  ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

          | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

 • 17 November 2017
  5 days ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

 • 14 November 2017
  1 week ago No comment

  ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

      ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

 • 09 November 2017
  2 weeks ago No comment

  ಕೆಂಡದಂಥ ಕಾವ್ಯ

  ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...