Share

‘ಮಿ ಟೂ’ ಕಥನ
ಪ್ರಸಾದ್ ನಾಯ್ಕ್ ಕಾಲಂ

ನಾನಿಂದು ಧೈರ್ಯವಾಗಿ ಹೇಳಬಲ್ಲೆ. ಈ ಬಾರಿಯ ದೀಪಾವಳಿಯಲ್ಲಿ ಜಗತ್ತಿನಾದ್ಯಂತ ಹೆಣ್ಣುಮಕ್ಕಳು ಹಚ್ಚಿದ್ದು ಆಶಾವಾದದ ದೀಪಗಳನ್ನು ಎಂದು!

ನಾನು ಅಚ್ಚರಿಯಿಂದ ಗಮನಿಸುತ್ತಲೇ ಇದ್ದೆ. ಅಮೆರಿಕನ್ ನಟಿ, ನಿರ್ಮಾಪಕಿ ಅಲಿಸ್ಸಾ ಮಿಲಾನೋ ಹಚ್ಚಿದ ‘ಮಿ ಟೂ’ (ನಾನೂ ಕೂಡ) ಎಂಬ ಒಂದು ಹಣತೆಯು ಅದೆಷ್ಟು ದೀಪಗಳನ್ನು ಬೆಳಗಲು ನಾಂದಿ ಹಾಡಿತ್ತು! ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟು ‘ಮಿ ಟೂ’ಗಳು. ಈ ಸಮಸ್ಯೆಯನ್ನು ಜೀವನದ ಒಂದಲ್ಲಾ ಒಂದು ಹಂತದಲ್ಲಿ ಅನುಭವಿಸದ ಹೆಣ್ಣುಮಕ್ಕಳೇ ಇಲ್ಲವೇನೋ ಎಂಬಂತೆ.

ಸೊಮಾಲಿಯನ್ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ವಾರಿಸ್ ಡಿರೀಯವರ ಒಂದು ಕೃತಿಯಲ್ಲಿ ಹೀಗೊಂದು ಮಾತು ಬರುತ್ತದೆ. “ತೀರಾ ಖಾಸಗಿ ಎನ್ನಬಹುದಾದ ನನ್ನ ಲೈಂಗಿಕ ಜೀವನದ ಅನುಭವಗಳನ್ನು ಅದೆಷ್ಟು ಬಾರಿ ನಾನು ಟೆಲಿವಿಷನ್ ಟಾಕ್ ಶೋಗಳಲ್ಲಿ ಹೇಳಿಕೊಂಡಿಲ್ಲ! ನಮ್ಮ ಗುರಿ (ಯೋನಿಛೇದನದ ನಿರ್ಮೂಲನೆ) ಯನ್ನು ಸಾಧಿಸಲು ಬೇಕಿದ್ದ ಒಂದೇ ಒಂದು ಅವಕಾಶವನ್ನು ಕೂಡ ನಾನು ಬಿಟ್ಟಿಲ್ಲ. ಇವುಗಳನ್ನೆಲ್ಲಾ ಮುಕ್ತವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಹೇಳುವುದು ಸುಲಭದ ಸಂಗತಿಯೇನಲ್ಲ. ಅದೆಷ್ಟೋ ಮಂದಿ ಈ ಬಗ್ಗೆ ನನ್ನಲ್ಲಿ ಕುಹಕದ, ಅಸಹ್ಯದ ಪ್ರಶ್ನೆಗಳನ್ನು ಕೇಳುತ್ತಾರೆ. ನಾನು ತಾಳ್ಮೆಯಿಂದಲೇ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ನಿಮ್ಮ ಕೀಳು ಅಭಿರುಚಿಯ ತಮಾಷೆಗಿಂತಲೂ ಸಾಕಷ್ಟು ಗಂಭೀರವಾದ ಸಮಸ್ಯೆಯಿದು ಎಂಬುದು ಅವರಿಗೆ ಮನದಟ್ಟಾಗುವವರೆಗೂ” ಎನ್ನುತ್ತಾರೆ ವಾರಿಸ್.

ವಾರಿಸ್ ರ ಮಾತಿನಲ್ಲಿ ಅದೆಷ್ಟು ಸತ್ಯವಿದೆ! ವರ್ಷಾನುಗಟ್ಟಲೆ ಎದೆಗೂಡಿನಲ್ಲಿ ಹೂತಿಟ್ಟ ಮಾತುಗಳನ್ನು, ಕರಾಳ ಅನುಭವಗಳನ್ನು, ಮರೆಯಬೇಕೆಂದರೂ ದುಃಸ್ವಪ್ನದಂತೆ ಕಾಡುವ ಘಟನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವುದು ಸುಲಭವೇನಲ್ಲ. ಏಕೆಂದರೆ ಅಂಥದ್ದೊಂದು ಆರೋಗ್ಯಕರ ವಾತಾವರಣವನ್ನು ನಾವಿನ್ನೂ ನಮ್ಮ ನಡುವಿನಲ್ಲಿ ಸೃಷ್ಟಿಸಿಯೇ ಇಲ್ಲ. ‘ಮಿ ಟೂ’ ಬಗ್ಗೆ ಕುಹಕವಾಡುವವರು, ಜಾಣಕುರುಡನ್ನು ಪ್ರದರ್ಶಿಸುವವರು ಅತಿರಂಜಿತ, ಪ್ರಚಾರದ ಗಿಮಿಕ್ ಎನ್ನುವವರು ಈ ಐದಕ್ಷರದ ಹ್ಯಾಷ್-ಟ್ಯಾಗ್, ಹಾಗೆ ಬಂದು ಹೀಗೆ ಹೋಗುವ ಒಂದು ಟ್ರೆಂಡ್ ಅಷ್ಟೇ ಅಲ್ಲವೇ ಎಂದು ನುಣುಚಿಕೊಳ್ಳಬಹುದು. ಆದರೆ ಇದು ಮೊದಲ ಹೆಜ್ಜೆಯಂತೂ ಹೌದು ಎಂಬ ಎಚ್ಚರಿಕೆಯ ಸಂದೇಶವು ಅವರನ್ನು ತಲುಪಿರುತ್ತದೆ ಅಂದುಕೊಳ್ಳುತ್ತೇನೆ. ಸಂತಸದ ವಿಷಯವೆಂದರೆ ಇಂಥಾ ದಿಟ್ಟತನವನ್ನು ಸಾಕ್ಷರತೆ, ತಂತ್ರಜ್ಞಾನಗಳು ಇಂದು ಮಹಿಳೆಯರಿಗೆ ಕೊಟ್ಟಿವೆ. ಅಲ್ಲದೆ ಈ ಬಾರಿ ಸದುದ್ದೇಶದ ಕಳಕಳಿಯುಳ್ಳ ಹ್ಯಾಷ್ ಟ್ಯಾಗ್ ಒಂದು ಹೇಗೆ ಆನ್ಲೈನ್ ಜನಾಂದೋಲನವನ್ನೇ ಸೃಷ್ಟಿಸಬಹುದು ಎಂಬುದನ್ನೂ ಕೂಡ ಸಾಬೀತುಪಡಿಸಿತು. ಇದು ಆಶಾವಾದದ ಸುಳಿವಲ್ಲದೆ ಮತ್ತಿನ್ನೇನು?

ಸೋಜಿಗದ ಸಂಗತಿಯೆಂದರೆ ಮಹಿಳೆಯರ ಸುರಕ್ಷತೆಯ ವಿಚಾರಕ್ಕೆ ಬಂದರೆ ಕಳೆದ ಹಲವು ದಶಕಗಳಿಂದ ಹೆಚ್ಚಿನ ಆರೋಗ್ಯಕರ ಬದಲಾವಣೆಗಳೇನೂ ಆಗಿಲ್ಲ. ಉದಾಹರಣೆಗೆ ನಿರ್ಭಯಾ ಪ್ರಕರಣವು ಬೆಳಕಿಗೆ ಬಂದಾಗಿನಿಂದ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆಯೇ ಹೊರತು ಇದಕ್ಕೊಂದು ಪರಿಣಾಮಕಾರಿ ಅಂತ್ಯವನ್ನು ಹಾಡುವ ಗಂಭೀರ ಪ್ರಯತ್ನಗಳು ಯಾವ ಹಂತದಲ್ಲೂ ಕಂಡುಬಂದು ನಿರೀಕ್ಷೆಯನ್ನು ಹುಟ್ಟಿಸಿಲ್ಲ. ನಿರ್ಭಯಾ ಪ್ರಕರಣದಂತಹ ಪಾಶವೀಕೃತ್ಯದ ಉದಾಹರಣೆಗಳೂ ನಮ್ಮನ್ನು, ನಮ್ಮ ವ್ಯವಸ್ಥೆಯನ್ನು ಕಂಗೆಡಿಸದಿದ್ದರೆ ಇನ್ಯಾವ ಶಕ್ತಿಯು ನಮ್ಮನ್ನು ಬಡಿದೆಬ್ಬಿಸಬಲ್ಲದು ಎಂದು ಕೆಲವೊಮ್ಮೆ ನನಗೆ ಅಚ್ಚರಿಯಾಗುತ್ತದೆ.

ಹೀಗಾಗಿ ಇಪ್ಪತ್ತೊಂದನೇ ಶತಮಾನದಲ್ಲೂ ಸ್ವಾವಲಂಬಿ ಹೆಣ್ಣುಮಗಳೊಬ್ಬಳು ಹೊರಗಡೆ ಹೋಗುವಾಗ ಕೊಂಚ ಜಾಗೃತಳಾಗಿಯೇ ಹೊರಡುತ್ತಾಳೆ. ಮನೆಯಿಂದ ಹೊರಟ ಹೆಣ್ಣುಮಗು ಮರಳಿ ಮನೆ ತಲುಪುವವರೆಗೂ ಪೋಷಕರಿಗೆ ಚಿಂತೆಯೊಂದು ಈಗಲೂ ಇದೆ. ಮಗಳು ತನ್ನ ಗೆಳತಿಯೊಂದಿಗೆ ಸಿನೆಮಾಕ್ಕೆ ಹೋಗಿರುವ ಬಗ್ಗೆ ತಿಳಿದಿದ್ದರೂ ಸಂಜೆ ಆರೂವರೆಯಷ್ಟರ ಹೊತ್ತಿಗೆ ಅಮ್ಮ ಕರೆ ಮಾಡಿ ಎಲ್ಲಿದ್ದೀಯಾ ಮಗಳೇ ಎಂದು ಕೇಳುತ್ತಾಳೆ. ಊಟಕ್ಕೆ ಮನೆಗೇ ಬಂದುಬಿಡು ಅನ್ನುತ್ತಾಳೆ. ಮಗಳ ಬಗೆಗಿನ ಕಾಳಜಿಯಲ್ಲಿ ತಂದೆ ಕೊಂಚ ಹೆಚ್ಚೇ ಬಿಗುವಿನ ಮುಖವಾಡವನ್ನು ಧರಿಸಿಬಿಡುತ್ತಾನೆ. ಗೆಳತಿಯೊಬ್ಬಳು ಪೆಪ್ಪರ್ ಸ್ಪ್ರೇ ಒಂದನ್ನು ಕೊಟ್ಟು ಯಾವುದಕ್ಕೂ ಇಟ್ಕೊಂಡಿರು ಅನ್ನುತ್ತಾಳೆ. ಮತ್ತೊಬ್ಬರ್ಯಾರೋ ಕರಾಟೆ, ಮಾರ್ಷಲ್ ಆರ್ಟ್ಸ್ ಕಲಿಯಿರಿ ಎಂದು ಕರೆ ನೀಡುತ್ತಾರೆ. ಆದರೆ ಇವುಗಳು ದೀರ್ಘಾವಧಿಯ ಪರಿಹಾರಗಳೇ ಎಂಬುದು ನನ್ನ ಪ್ರಶ್ನೆ. ಇಷ್ಟೆಲ್ಲಾ ನಿಯಮಾವಳಿಗಳನ್ನು, ಎಚ್ಚರಿಕೆಯ ಪಟ್ಟಿಗಳನ್ನು ಗಿಳಿಪಾಠದಂತೆ ಹೇಳಿ ಹೇಳಿ ಹೆಣ್ಣುಮಕ್ಕಳನ್ನು ಯುದ್ಧಕ್ಕೆ ಹೋಗುವ ಸಿಪಾಯಿಗಳಂತೆ ತಯಾರು ಮಾಡುವ ನಾವುಗಳು ಇವುಗಳಲ್ಲಿ ಒಂದು ಶೇಕಡಾ ಗಮನವನ್ನಾದರೂ ನಮ್ಮ ಗಂಡುಮಕ್ಕಳಿಗೆ ಕೊಟ್ಟಿದ್ದೇವೆಯೇ?

ಅಸಲಿಗೆ ಇದು ಹೇಗಾಗಿದೆಯೆಂದರೆ ನಾವೆಲ್ಲರೂ ಸೇರಿ ನಮ್ಮ ಸಮಾಜವನ್ನು ಒಂದು ಅಭದ್ರತೆಯ ತಾಣವನ್ನಾಗಿ ಕಟ್ಟಿಬಿಟ್ಟಿದ್ದೇವೆ. ಆಂತರಿಕ ಯುದ್ಧಗಳು ನಡೆಯುತ್ತಿರುವ ದೇಶಗಳಲ್ಲಿ, ಆಫ್ರಿಕಾದ ಕುಗ್ರಾಮಗಳಲ್ಲಿ… ಹೀಗೆ ಇಂಥಾ ಅಪಾಯಕಾರಿ ಸ್ಥಳಗಳಲ್ಲಿ ನೆಲೆಸಿರುವ ವಿದೇಶೀಯರನ್ನೊಮ್ಮೆ ಕೇಳಿ ನೋಡಿ. ಅವರು ಒಂದು ಅವ್ಯಕ್ತ ಭಯದೊಂದಿಗೇ ಬದುಕುತ್ತಿರುತ್ತಾರೆ. ನಿತ್ಯವೂ ರಕ್ತಪಾತಗಳೇನೂ ಆಗದಿದ್ದರೂ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಭಯದಲ್ಲಿ ದಿನತಳ್ಳುತ್ತಿರುತ್ತಾರೆ. ನಮ್ಮ ಹೆಣ್ಣುಮಕ್ಕಳು ಸದ್ಯ ಬದುಕುತ್ತಿರುವ ಜಗತ್ತೂ ಕೂಡ ಇಂಥದ್ದೇ. ಭಯಂಕರ ಅಲರ್ಟ್ ಮೋಡ್ ನಲ್ಲಿರಬೇಕಾದ ಸ್ಥಿತಿ. ಎಲ್ಲಾ ಗಂಡಸರನ್ನೂ ಸಂಶಯದ ದೃಷ್ಟಿಯಿಂದಲೇ ನೋಡಬೇಕಾದ ಅನಿವಾರ್ಯತೆ. ಇದೊಂಥರಾ ತೆರೆದ ಜೈಲಿದ್ದಂತೆ. ಸಂಕೋಲೆಗಳಿಲ್ಲದಿದ್ದರೂ ಬಂಧನದಲ್ಲೇ ಇರುವ ವಿಲಕ್ಷಣ ಸ್ಥಿತಿ. ಸಮಾಜವನ್ನು ಸಮಗ್ರವಾಗಿ ನೋಡದೆ ಹೆಣ್ಣನ್ನಷ್ಟೇ ರೋಬೋಟಿನಂತೆ ‘ಟ್ರಬಲ್ ಶೂಟಿಂಗ್ ಮೋಡ್’ಗೆ ಹೊಂದಿಕೆಯಾಗುವಂತೆ ಪ್ರೋಗ್ರಾಮಿಂಗ್ ಮಾಡಿದರೆ ಹೀಗಾಗುವುದು ಸಹಜವೇ.

ಈ ಬಗ್ಗೆ ಇಷ್ಟು ಕಟುವಾಗಿ ಬರೆಯಬೇಕಾದ ಅನಿವಾರ್ಯತೆ ಏಕಿದೆಯೆಂದರೆ ಅಷ್ಟಕ್ಕೂ ಈ ‘ಮಿ ಟೂ’ ಕಥೆಗಳ ಹಿಂದಿರುವ ಮಾಯಾವಿಗಳು ಯಾರು? ಜನನಿಬಿಡ ಬಸ್ಸಿನಲ್ಲಿ, ರೈಲಿನಲ್ಲಿ, ಜಾತ್ರೆಯಲ್ಲಿ, ಜನಜಂಗುಳಿಯಲ್ಲಿ, ಲಿಫ್ಟ್ ನಲ್ಲಿ, ಮಾರ್ಕೆಟ್ಟಿನಲ್ಲಿ, ಪಾರ್ಟಿಗಳಲ್ಲಿ ಕೆಟ್ಟದಾಗಿ ಅವಳ ಮೈಯನ್ನು ಸ್ಪರ್ಶಿಸುತ್ತಾ ಆಕೆಯನ್ನು ಸತಾಯಿಸುವವರ್ಯಾರು? ಭವಿಷ್ಯ, ಅಸಹಾಯಕತೆ, ಹಂಗುಗಳಂತಹ ಅವಕಾಶಗಳನ್ನು ಕಂಡ ಕೂಡಲೇ ಗಬಕ್ಕನೆ ಮೈಮೇಲೆರಗುವ ಜನರಾದರೂ ಯಾರು? ಎಲ್ಲರೂ ನಮ್ಮವರೇ. ಯಾರೂ ಅನ್ಯಗ್ರಹದಿಂದ ಬಂದ ಏಲಿಯನ್ನುಗಳಲ್ಲ. ಆಗಂತುಕರ ಭಯವು ಹಾಗಿರಲಿ. ಹಲವಾರು ಬಾರಿ ಅದೆಷ್ಟೋ ಮನೆಗಳ ಮಚ್ಚಿದ ಕದಗಳ ಹಿಂದೆ ಸಂಬಂಧಿಗಳಿಂದಲೇ ಇಂಥಾ ವಿಕೃತಿಗಳಾಗುತ್ತವೆ. ಮೇಲಧಿಕಾರಿ, ಸಹೋದ್ಯೋಗಿ, ಗೆಳೆಯ… ಇತ್ಯಾದಿ ಆತ್ಮೀಯರಿಂದಲೇ ಇಂಥಾ ಕೆಲಸಗಳಾಗುತ್ತವೆ. ಪರಿಸ್ಥಿತಿಯು ಹೀಗಿರುವಾಗ ಬೆಳೆಯುತ್ತಿರುವ ಗಂಡುಮಕ್ಕಳನ್ನೂ ಕೂಡ ಸ್ವಸ್ಥ ಸಮಾಜದ ಜವಾಬ್ದಾರರನ್ನಾಗಿಸಿ ಒಂದೊಳ್ಳೆಯ ಪೀಳಿಗೆಯನ್ನೇಕೆ ಸೃಷ್ಟಿಸಬಾರದು?

ಸೋಷಿಯಲ್ ಮೀಡಿಯಾಗಳಲ್ಲಿ ನಡೆಯುವ ಶರಂಪರ ಕಿತ್ತಾಟಗಳಲ್ಲಿ, ವಿತಂಡವಾದಗಳನ್ನು ಮಾಡುತ್ತಾ ವಿಷಕಕ್ಕುವ ಸನ್ನಿವೇಶಗಳನ್ನು ನೀವು ಗಮನಿಸಿರುವವರಾದರೆ ಒಂದಂತೂ ಕಾಣಸಿಗುವುದು ಸತ್ಯ. ಸೋಲಿನ ಕಡೆಗೆ ವಾಲುತ್ತಿರುವ ಗಂಡೊಬ್ಬ ನೇರವಾಗಿ ಕೈಹಾಕುವುದು ಹೆಣ್ಣಿನ ಚಾರಿತ್ರ್ಯಹನನಕ್ಕೆ. ಪತ್ರಕರ್ತೆ ಸ್ವಾತಿ ಚತುರ್ವೇದಿಯವರು ಬರೆದಿರುವ “ಐ ಆಮ್ ಟ್ರಾಲ್” ಎಂಬ ಕೃತಿಯಲ್ಲಿ ಇಂಥದ್ದೇ ಒಬ್ಬ ಕಿಡಿಗೇಡಿ ಟ್ರಾಲ್ ಮಾತಾಡುತ್ತಾ ‘ನಿಮ್ಮನ್ನು ಈ ಹಿಂದೆ ಟಿ.ವಿಯಲ್ಲಿ ನೋಡಿದ್ದೇನೆ. ಹೀಗಾಗಿ ನಿಮ್ಮನ್ನು ಇತರರಷ್ಟು ತೀರಾ ಅವಾಚ್ಯವಾಗಿ ಬೈಯುವುದಿಲ್ಲ ಬಿಡಿ. ನಿಮಗೆ ಕೊಂಚ ಕಮ್ಮಿ ಅಸಹ್ಯವಾಗಿ ಬೈಯೋಣ’ ಎಂಬ ಭರವಸೆ(?)ಯನ್ನು ಕೊಡುತ್ತಾನೆ. ಗುರ್ ಮೆಹರ್ ಕೌರ್ ಸೋಷಿಯಲ್ ಮೀಡಿಯಾದಲ್ಲಿ ‘ನನ್ನ ತಂದೆಯನ್ನು ಕೊಂದದ್ದು ಯುದ್ಧವೇ ಹೊರತು ಪಾಕಿಸ್ತಾನವಲ್ಲ’ ಎಂದಾಗ ಆಕೆಗೆ ದೊಡ್ಡಮಟ್ಟದಲ್ಲಿ ಅತ್ಯಾಚಾರ ಬೆದರಿಕೆಯ ಸಂದೇಶಗಳು ಹರಿದುಬಂದವು. ಆಕೆಯ ಅಭಿಪ್ರಾಯವನ್ನು ಒಪ್ಪುವ ಮತ್ತು ಬಿಡುವ ಚರ್ಚೆಗಳೇನಾದರೂ ಇರಲಿ. ಆದರೆ ಹೆಣ್ಣುಮಗಳೊಬ್ಬಳಿಗೆ ತನ್ನ ದೇಶದ, ತನ್ನ ಸಮಾಜದ ಸಹವರ್ತಿಗಳಿಂದಲೇ ಅತ್ಯಾಚಾರದ ಬೆದರಿಕೆಗಳು ಬಂದಿದ್ದು ಮಾತ್ರ ವಿಷಾದಕರ. ಇದನ್ನು ಖಂಡಿಸದೆ ವಿಧಿಯಿಲ್ಲ. ಇನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರಲ್ಲಿ ಸಿಂಹಪಾಲು ಯುವಜನರು ಎಂಬುದು ಗಮನಾರ್ಹ ಅಂಶ.

ಈ ಬಗೆಯ ಗಂಡುಮಕ್ಕಳನ್ನು ನಾವಿಂದು ಬೆಳೆಸುತ್ತಿರುವುದಾದರೆ, ಜಾಣಕುರುಡಿನ ಮರೆಯಲ್ಲಿ ಪ್ರೋತ್ಸಾಹಿಸುತ್ತಿರುವುದಾದರೆ ನಮ್ಮ ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೂ ನಾವು ಮತ್ತಷ್ಟು ದೊಡ್ಡ ಬಾಗಿಗಿಲ್ಲದ ತೆರೆದ ಜೈಲನ್ನೇ ಕೊಟ್ಟುಹೋಗುತ್ತೇವಷ್ಟೇ. ಹೆಣ್ಣನ್ನು ಹೆಣ್ಣು ಎಂಬ ಮಾತ್ರಕ್ಕೆ ಪ್ರೀತಿಸದೆ ಗೌರವಿಸದೆ, ತನ್ನಂತೆಯೇ ಆಕೆಯೂ ಒಬ್ಬ ಸಹಜೀವಿ ಎಂಬ ಸತ್ಯವನ್ನು ಒಪ್ಪಿಕೊಂಡು ಪ್ರೀತಿಸುವ ಗೌರವಿಸುವ ಆರೋಗ್ಯಕರ ಮನೋಭಾವವನ್ನು ನಮ್ಮ ಗಂಡುಮಕ್ಕಳಲ್ಲಿ ನಾವಿಂದು ಬಿತ್ತಬೇಕಿದೆ. ಏಕೆಂದರೆ ನಮ್ಮ ಸದ್ಯದ ಚಿಂತನಾವಿಧಾನವು ಹೆಣ್ಣು-ಗಂಡು-ಮಂಗಳಮುಖಿ-ವಿಕಲಚೇತನ ಇತ್ಯಾದಿ ದೈಹಿಕ ರೂಪುರಚನೆಗಳಿಗಷ್ಟೇ ಸೀಮಿತವಾಗಿಬಿಟ್ಟು ಸಂಕುಚಿತವಾಗಿಬಿಟ್ಟಿದೆಯೇನೋ ಅನ್ನಿಸುತ್ತಿದೆ. ಹೀಗಾಗಿಯೇ ನಮಗಿಂದು ‘ಪ್ರೀತಿ’ ಎಂದಾಕ್ಷಣ ‘ಕಾಮ’ ನೆನಪಾಗುತ್ತದೆ. ‘ನಗ್ನತೆ’ ಎಂದಾಕ್ಷಣ ‘ಅಶ್ಲೀಲತೆ’ಯ ನೆನಪಾಗುತ್ತದೆ. ತನ್ನನ್ನು ತಾನು ಹೆಣ್ಣಿನ ಸ್ಥಾನದಲ್ಲಿ ನಿಲ್ಲಿಸಿ ಒಂದು ಕ್ಷಣವಾದರೂ ಯೋಚಿಸುವ ಪ್ರಜ್ಞಾವಂತ ಗಂಡೊಬ್ಬ ಯಾವತ್ತೂ ಇಂಥಾ ಕುಕೃತ್ಯಗಳಿಗೆ ಕೈಹಾಕಲಾರ. ಹೊಸದೊಂದು ‘ಮಿ ಟೂ’ ಕಥೆಯ ಹುಟ್ಟಿಗೆ ಕಾರಣವಾಗಲಾರ.

“ಮಕ್ಕಳನ್ನು ಬೆಳೆಸುವುದೆಂದರೆ 20 ವರ್ಷಗಳ ಯೋಜನೆಯಿದ್ದಂತೆ. ಸರಿಯಾಗಿ ಬೆಳೆಸಿದಿರೋ ಯೋಜನೆಯು ಅವಧಿಯೊಳಗೇ ಮುಗಿದುಹೋಗುತ್ತದೆ. ಇಲ್ಲವಾದರೆ ಇದೊಂದು ಎಂದೂ ಮುಗಿಯದ ಯೋಜನೆ” ಎನ್ನುತ್ತಾರೆ ಜಗ್ಗಿ ವಾಸುದೇವ್. ಹೆಣ್ಣುಮಕ್ಕಳನ್ನು ಸ್ವಾವಲಂಬಿ ಮತ್ತು ಜಾಗರೂಕರನ್ನಾಗಿಸುವ ಜೊತೆಗೇ ಆರೋಗ್ಯವಂತ ಮನಸ್ಸಿನ ಗಂಡು ಮಕ್ಕಳನ್ನೂ ಕೂಡ ನಾವು ತಯಾರು ಮಾಡೋಣ. ಮತ್ತಷ್ಟು ‘ಮಿ ಟೂ’ ಕಥೆಗಳು ನಮ್ಮ ಮುಂದೆ ಬಾರದಿರಲಿ.

———

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾದ ಪ್ರಸಾದ್ ನಾಯ್ಕ್ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಪಡೆದವರು. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಕ್ಕಮಟ್ಟಿಗೆ ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 11 hours ago No comment

  ಲವ್ ವಿದ್ ಫಸ್ಟ್ ಬುಕ್

    ಆ ದಿನ ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತಡಕಾಡುತ್ತಿದ್ದ ನನಗೆ ವಿಶೇಷ ಪುಸ್ತಕವೊಂದು ಸಿಕ್ಕಿಬಿಟ್ಟಿತ್ತು. ಹೈಸ್ಕೂಲು ದಿನಗಳವು. ಆಗ ಸಾಹಿತ್ಯದ ಓದು ಹಾಗಿರಲಿ, ಸಾಮಾನ್ಯ ಓದೂ ಕೂಡ ಅಷ್ಟೇನೂ ಗಂಭೀರವಾಗಿ ಸಾಗುತ್ತಿರಲಿಲ್ಲ. ಓದಿನ ಹವ್ಯಾಸವು ಒಂದಷ್ಟಿದ್ದರೂ ಹೊಸ ಹೊಸ ವಿಷಯಗಳ ಪುಸ್ತಕಗಳನ್ನು ಹುಡುಕಿಕೊಂಡು ಹೋಗುತ್ತಿದ್ದ, ಈ ಬಗ್ಗೆ ಮಾಹಿತಿಯಿದ್ದ, ಓದಲು ಪರಿತಪಿಸುತ್ತಿದ್ದ ದಿನಗಳೇನೂ ಅದಾಗಿರಲಿಲ್ಲ. ಹೀಗಾಗಿ ಓದಿನ ವಿಚಾರಕ್ಕೆ ಬಂದರೆ ಅವುಗಳನ್ನು ನನ್ನ ಆರಂಭದ ದಿನಗಳೆಂದೇ ಹೇಳಬೇಕು. ರಜಾದಿನಗಳಲ್ಲಿ ...

 • 1 day ago No comment

  ಮೋದಿ ಮಾತಾಡಲಿಲ್ಲ

  ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

 • 2 days ago No comment

  ಇವರನ್ನು ನೋಡಿ…

  ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

 • 2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...


Editor's Wall

 • 18 April 2018
  2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 18 April 2018
  2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 17 April 2018
  3 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

 • 16 April 2018
  4 days ago No comment

  ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

  ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

 • 14 April 2018
  5 days ago No comment

  ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

  ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...