Share

ನಿರ್ಲಿಪ್ತ
ಸಂದೀಪ್ ಈಶಾನ್ಯ

ಕನೆಕ್ಟ್ ಕನ್ನಡ ಇನ್ನು ಮುಂದೆ ಪ್ರತಿ ತಿಂಗಳ ಕಡೇ ಭಾನುವಾರ ಒಂದು ವಿಶೇಷ ಕಥೆಯನ್ನು ಆರಿಸಿ, ತಿಂಗಳ ಕಥೆ ಎಂದು ಪ್ರಕಟಿಸಲಿದೆ. ಮೊದಲನೆಯದಾಗಿ ವಿಭಿನ್ನ ಸಂವೇದನೆಯ ಕವಿ, ಕಥೆಗಾರ ಸಂದೀಪ್ ಈಶಾನ್ಯ ಅವರ ಈ ಕಥೆ.

 

 

ನಾನು ನೀನು ಕೂಡಿದರೆ ಮಗು ಹುಟ್ಟುವುದಿಲ್ಲವಾ ಎಂದೆ. ಮೊದಲು ಲೈಬ್ರರಿಗಳಲ್ಲಿ ಗಂಟೆಗಟ್ಟಲೆ ಕೂತು ಪುಸ್ತಕಗಳನ್ನು ಓದುವುದನ್ನು ಬಿಡು. ಗಂಭೀರವಾಗಿ ಕೆಲಸ ಹಿಡಿದು ನಿನ್ನ ಅನ್ನ ಹುಟ್ಟಿಸಿಕೋ, ಚೆನ್ನಾಗಿ ಬದುಕು. ತೀವ್ರವಾಗಿ ಜೀವಿಸು. ಆಮೇಲೆ ಮಗು ಹುಟ್ಟಿಸುವೆಯಂತೆ ಎಂದಳು ನಗುತ್ತ.

 

 

 

 

 

ಅಧ್ಯಾಯ – 1

ದಾಗಲೇ ಸಂಜೆಯೂ ಸರಿದು ಸೂರ್ಯ ಮರೆಯಾಗಿದ್ದರಿಂದ ಕತ್ತಲು ಸಾಮಾನ್ಯವಾಗೇ ಆವರಿಸಿಕೊಳ್ಳುತ್ತಿತ್ತು. ದೂರದಲ್ಲಿ ಬರುತ್ತಿದ್ದ ಬಸ್ಸು ಕಾರುಗಳ ಹೆಡ್‍ಲೈಟುಗಳಿಂದ ಹೊಮ್ಮುವ ಬೆಳಕಿನ ಕಿರಣಗಳು, ರಸ್ತೆಯ ಮೇಲೆಲ್ಲಾ ಹರಡಿಕೊಂಡಿರುವ ನಕ್ಷತ್ರದ ಚೂರುಗಳಂತೆ ಕಾಣುತ್ತಿದ್ದವು. ಒಂದಿಷ್ಟು ದೂರಕ್ಕಿದ್ದ ಬಸ್ ಸ್ಟಾಪಿನ ತುದಿಗೆ ಅಂಟಿಕೊಂಡು ಒಂಟಿ ಕಾಲಿನ ಅಸ್ಸಾಮಿ ಮುದುಕ ಪುಟಾಣಿ ಟೇಬಲ್ ಎದುರು ಕೂತು ಕಾಲೇಜು, ಗಣೇಶ, ಹರೇ ಕೃಷ್ಣ ಹೀಗೆ ವಿವಿಧ ಹೆಸರಿನ ಒಂದೇ ಬಗೆಯ ಬೀಡಿಗಳನ್ನು ಫ್ಲಾಕ್, ಕಿಂಗ್, ಲೈಟ್ಸ್‍ಗಳಂತ ದುಬಾರಿ ಸಿಗರೇಟುಗಳ ನಡುವಿಟ್ಟು, ಇವುಗಳು ಸಮಾನವೇ ಎಂಬಂತೆ ಮಾರುತ್ತಿದ್ದ.

ಆಗಾಗ ಅವನ ಕೊಳೆ ಕೈನಿಂದ ಒರೆಸಿಕೊಂಡ ಅವನ ಅಂಗಿಯೂ ಅಲ್ಲಲ್ಲಿ ಕೊಳೆಯಾಗಿತ್ತು. ಒಂದೇ ಸುದ್ದಿಯನ್ನು ಹತ್ತಾರು ಆಯಾಮಕ್ಕಿಳಿಸಿ ಬರೆದ ಕನ್ನಡ ಸುದ್ದಿ ಪತ್ರಿಕೆಗಳು, ಬೀಡಿ ಸೀಗರೇಟುಗಳ ಮುಂದೆ ಇಳಿಬಿದ್ದಿದ್ದ ದಾರವೊಂದಕ್ಕೆ ನೇತು ಬಿದ್ದಿದ್ದವು. ಅಚಾನಕ್ಕಾಗಿ ನೋಡಿದರೆ ಆ ಪತ್ರಿಕೆಗಳೆಲ್ಲಾ ಆತ್ಮಹತ್ಯೆಗೆ ತೆರಳಿದ ಅಮಾಯಕರಂತೆಯೂ, ನೆರೆಗೆ ಒಳಗಾಗಿ ತನ್ನವರನ್ನೆಲ್ಲಾ ಕಳೆದುಕೊಂಡ ಸಂತ್ರಸ್ಥರಂತೆಯೂ ಕಾಣುತ್ತಿದ್ದವು.

ಆತ್ಮವೇ ಇಲ್ಲದೇ ನರಳುವ ಗ್ರಹವೊಂದರ ಜೀವಿಯಂತೆ ಬೆಂಗಳೂರಿನ ಬಸ್‍ಗಳು ದೊಡ್ಡದಾಗಿ ಸದ್ದು ಮಾಡುತ್ತ ಬಂದಷ್ಟೇ ವೇಗವಾಗಿ ನಿಂತು, ತನಗೆ ಬೇಕಾದವರನ್ನಷ್ಟೇ ನಾನು ಆಯ್ದುಕೊಳ್ಳುವುದು ಎಂಬಂತೆ ಒಂದಿಷ್ಟು ಜನರನ್ನು ಆಯ್ದುಕೊಂಡು, ಎತ್ತ ಬೇಕೋ ಅತ್ತ ಮಾಯವಾಗಿಬಿಡುತ್ತಿದ್ದವು. ಅಲ್ಲಿಯೇ ನಿಂತಿದ್ದ ನಾನು ಸುತ್ತಲೂ ಪಿಳಿಪಿಳಿ ಕಣ್ಣಾಡಿಸಿದೆ. ಇಡೀ ಬಸ್ ಸ್ಟಾಪು ತುಂಬಿತ್ತು. ಮಹಾನಗರಗಳ ಪ್ರಾರಬ್ಧ ಇದು. ಇಲ್ಲಿ ಮನುಷ್ಯರಿಗೆ ಬರವಿಲ್ಲ. ಮನುಷ್ಯತ್ವಕ್ಕೆ ಅಗಾಧವಾದ ಬರವಿದೆ.

ರಥಯಾತ್ರೆಗೆ ಹೊರಡಲು ಅಣಿಯಾಗಿರುವ ಭಕ್ತರಂತೆ ಜನಗಳ ದಂಡೇ ಆ ಬಸ್ ಸ್ಟಾಪಿನಲ್ಲಿದ್ದರು. ನನಗೆ ಎಲ್ಲರೂ ನಿಶ್ಚಲರಾಗಿ, ಎಲ್ಲವೂ ಖಾಲಿ ಖಾಲಿ ಎನಿಸಿತು. ಇಡೀ ಬಸ್ ಸ್ಟಾಪು ಆಶಾಢ ಮಾಸದಲ್ಲಿ ಓಲಗದ ಸದ್ದಿಲ್ಲದೆ ಬಣಗುಡುವ ಕಲ್ಯಾಣ ಮಂಟಪದಂತೆಯೂ ಬೇಸಿಗೆ ರಜೆಯಲ್ಲಿ ಮಕ್ಕಳ ಕೂಗಾಟವಿಲ್ಲದೆ ಸ್ತಬ್ಧವಾಗಿರುವ ಸರ್ಕಾರಿ ಶಾಲೆಯಂತೆಯೂ, ಅಮ್ಮನೊಂದಿಗೆ ಮುನಿಸಿಕೊಂಡ ಮಗುವಿನಂತೆಯೂ ಕಾಣುತ್ತಿತ್ತು.

ಅಂಜಲಿ ಒಂದೇ ಒಂದು ಮಾತನ್ನಾಡಿದ್ದರೂ ನಾನು ಹೀಗೆ ಅಸಂಖ್ಯ ವೇಷಗಳಿರುವ ಜನಜಂಗುಳಿಯಲ್ಲೂ ಒಂಟಿಯಾಗಿರಬೇಕಿರಲಿಲ್ಲ ಎನಿಸಿತು. ಸರಿ, ಅವಳೇನು ಆಟದ ಬೊಂಬೆಯೇ ನಾನು ಬೇಕೆಂದಾಗ ಇಷ್ಟಬಂದಂತೆ ಉಪಯೋಗಿಸಲು? ಮತ್ತೊಮ್ಮೆ ಅನಿಸಿತು. ಒಳಗೆ ಅದೇನೋ ಸರಸರನೇ ಹರಿದಂತಾಗಿ ಗೊಂದಲವಾದೆ. ಯಾವುದು ಸ್ನೇಹ? ಯಾವುದು ಪ್ರೀತಿ? ಯಾವುದು ಮೋಹ? ಯಾವುದು ಕಾಮ? ಉತ್ತರವಿಲ್ಲ ನನ್ನ ಬಳಿ. ಇಲ್ಲಾ, ನಾನು ಆ ಬಗೆಯ ಪ್ರಶ್ನೆಗಳಿಗೆಲ್ಲಾ ಉತ್ತರ ಕಂಡುಕೊಳ್ಳಲು ಯೋಗ್ಯನಲ್ಲದವನು. ಅದೇ ನಿಜ. ಒಳಗೆ ಗೊಂದಲದ ಕುದಿಯ ತಾಪಮಾನ ಮತ್ತೂ ಮೇರೆ ಮೀರಿತ್ತು.

ನನ್ನನ್ನು ನಾನೇ ಶಪಿಸಿಕೊಂಡೆ. ಹತ್ತಾರು ವರ್ಷಗಳ ಕಾಲ ಗಾಢವಾಗಿ ಅನುಭವಿಸಿದ್ದನ್ನು ಹತ್ತೇ ನಿಮಿಷದಲ್ಲಿ ನಿನಗೆ ನಿರ್ಲಕ್ಷ್ಯಿಸಲು ಸಾಧ್ಯವಾದರೆ ಅಂದೆ. ನೀನು ಜ್ಞಾನಿ ಎಂದು ನಾನೇ ನನ್ನ ದಿನಚರಿಯಲ್ಲಿ ಈ ಹಿಂದೆ ಬರೆದುಕೊಂಡಿದ್ದು ನೆನಪಾಯಿತು. ಆದರೆ ನಾನೇ ಕೆಲವು ತಿಂಗಳುಗಳಿಂದ ಧ್ಯಾನಿಸುತ್ತಲೇ, ಅನುಭವಿಸುತ್ತಿರುವ ಅಂಜಲಿಯನ್ನು ಮಾತ್ರ ನಿರ್ಲಕ್ಷಿಸಲು ನನಗೆ ಏಕೆ ಸಾಧ್ಯವಾಗುತ್ತಿಲ್ಲ?

ಅಂಜಲಿ ಏನು ಸಣ್ಣವಳೇ, ಅದಾಗಲೇ ಅವಳು ಮೂವತ್ತರ ಆಸುಪಾಸಿನಲ್ಲಿದ್ದಾಳೆ. ಮದುವೆಯಾಗಿದೆ. ಗಂಡನಿದ್ದಾನೆ. ನಾನು! ಇನ್ನೂ ಇಪ್ಪತ್ಮೂರರ ಹುಡುಗ. ಅವಳೇ ಹೇಳುವಂತೆ ಇನ್ನೂ ಎಳಸು. ಆದರೂ ನನಗೆ ಅವಳ ಮೇಲೇಕೆ ಇಷ್ಟೊಂದು ಪ್ರೇಮ? ಇಲ್ಲಾ ಇದು ಬರೀ ಮೋಹ! ಮೋಹವೂ ಅಲ್ಲಾ ಅದು ಬರೀ ಕಾಮವಿರಬೇಕು. ಬರೀ ಕಾಮವೆಂದರೆ ತಪ್ಪಾದೀತು. ನನಗೆ ಅವಳ ಇರುವಿಕೆಯ ಅಗತ್ಯವಿದೆ ಅಷ್ಟೇ. ಆದರೆ ಅದೇಕೆ? ಮತ್ತೆ ಗೊಂದಲ. ಸಂಬಂಧಕ್ಕೆ ಹೆಸರಿಲ್ಲ. ಅದೊಂದು ದಿವ್ಯ ಅನುಭೂತಿ ಅಷ್ಟೇ.

ಗಾಢವಾಗಿ ಅನುಭವಿಸುತ್ತಿರುವ ಅವಳ ಇರುವಿಕೆಯನ್ನು ನನಗೆ ನಿರ್ಲಕ್ಷ್ಯಿಸಲು ಸಾಧ್ಯವಾಗುತ್ತಿಲ್ಲ, ಹಾಗಾದರೆ ನಾನು ಜ್ಞಾನಿಯಲ್ಲ. ನಾನು ಶತ ದಡ್ಡ. ಅಂಜಲಿಯೇ ನನ್ನನ್ನು ಅರಸಿ ಬಂದಾಗ ಅವರಿವರು ಬರೆದ ಪದ್ಯಗಳನ್ನು ಓದುತ್ತ, ಅರೆಬೆಂದ ಕಥೆಗಳನ್ನು ಬರೆಯುತ್ತ ಮೋಹಿತನಂತೆ ಓಡಾಡುತ್ತಿದ್ದೆ. ಮತ್ತೊಬ್ಬರ ಪದ್ಯಗಳನ್ನು ಓದಿ, ನಾನೇ ಅವೆಲ್ಲವನ್ನು ಅನುಭವಿಸಿದವನಂತೆ ಉಲ್ಲಸಿತನಾಗಿ ಅಮಲಿನಲ್ಲಿ ತೇಲುತ್ತಿದ್ದೆ.

ನಿನ್ನದಲ್ಲದ ಕತೆಗಳನ್ನು ಕೃತಕವಾಗಿ ಬರೆದರೆ, ಅದು ನಿಜವಾದ ಹಾದರ ಕಣೋ ಹುಡುಗ ಎಂದು ಎಚ್ಚರಿಸುತ್ತ ಅಂಜಲಿಯೂ ನನ್ನನ್ನು ಕಾದಳು. ಕೊನೆಗೆ ನನ್ನ ಮೂರ್ಖತನಕ್ಕೆ ಬೇಸತ್ತು, ಮತ್ತೊಮ್ಮೆ ನೀನಿನ್ನೂ ಎಳಸು ಎಂದು ಗಟ್ಟಿಯಾಗಿ ಬೈದು ಹೊರಟು ಹೋದಳು. ಅಂಜಲಿ ಬದುಕನ್ನು ಬಲ್ಲವಳು. ನನ್ನನ್ನು ಮತ್ತೆ ಅರಸಿಕೊಂಡು ಬರುವ ತಾಪತ್ರಯ ಅವಳದಲ್ಲ. ಈಗ ಆ ಸರದಿ ನನ್ನದು.

ಮೂವತ್ತರ ಅಂಚಿನ ಅಂಜಲಿಗೆ ನಾನು ಈ ಮೊದಲು ಅದೇಕೆ ಇಷ್ಟವಾದೆ. ಅದೂ ಅಷ್ಟೊಂದು ಗಾಢವಾಗಿ. ಅವಳಿಗೆ ಮದುವೆಯಾಗಿದೆ. ಗಂಡನಿದ್ದಾನೆ. ಚೆಂದದ ಕತೆ ಬರೆಯುತ್ತಾಳೆ. ಕವಿತೆಗಳಂತೂ ಕಾಡುವಂತಿರುತ್ತದೆ. ಸಿಕ್ಕಸಿಕ್ಕದ್ದನೆಲ್ಲಾ ಓದುತ್ತಾಳೆ. ಗುಟ್ಟಾಗಿ ಬರೆಯುತ್ತಾಳೆ. ಯಾರಿಗೂ ಹೇಳದೆ ದೂರದ ಊರಿಗೆ ಹೊರಟುಬಿಡುತ್ತಾಳೆ. ಸಮುದ್ರದ ಅಲೆಗೆ ಕಿವಿಗೊಟ್ಟು ಕಡಲು ಹಾಗೂ ದಡದ ನಡುವಷ್ಟೇ ಉಳಿದುಹೋಗಿರುವ ಅನಾದಿ ಕಾಲದ ಗುಟ್ಟೊಂದನ್ನು ತಾನು ಕೇಳಿಸಿಕೊಂಡೆ ಎಂಬಂತೆ ನಟಿಸುತ್ತಾಳೆ. ಒಮ್ಮೊಮ್ಮೆ ಕುಡಿಯುತ್ತಾಳೆ. ಕುಣಿಯುತ್ತಾಳೆ. ನಾನು ಬೇಸರದಲ್ಲಿದ್ದಾಗ ಇದ್ದಕ್ಕಿದ್ದಂತೆ ಫೋನ್ ಮಾಡಿ, ಎಲ್ಲವೂ ಸುಳ್ಳು ಇಲ್ಲಿ, ಬದುಕುವುದಷ್ಟೇ ಸತ್ಯ, ಖುಷಿಯಾಗಿರು ಹುಡುಗ ಎನ್ನುತ್ತಾಳೆ. ಆ ಕ್ಷಣಕ್ಕೆಲ್ಲಾ ಅಂಜಲಿ ನನಗೇನಾಬೇಕು ಎಂಬುದೇ ಗೊಂದಲ. ಅವಳು ತಾಯಿಯಂತೆ ಪೊರೆಯುತ್ತಾಳೆ. ಮಡದಿಯಂತೆ ಜೊತೆ ನಿಂತು ರಮಿಸುತ್ತಾಳೆ. ಗೆಳತಿಯಂತೆ ಗದರುತ್ತಾಳೆ, ಮುನಿಯುತ್ತಾಳೆ, ಸಿಟ್ಟಿಗೇಳುತ್ತಾಳೆ. ಕೆಲವೊಮ್ಮೆ ತಾನು ಮೂವತ್ತರ ಅಂಚಿನವಳು ಇವನು ಇನ್ನೂ ಇಪ್ಪತ್ಮೂರರ ಹುಡುಗ ಎನ್ನುವುದನ್ನೆಲ್ಲಾ ಪಕ್ಕಕ್ಕಿಟ್ಟು ನಾವಿಬ್ಬರು ಅಣುವಿನಷ್ಟಿರುವ ಈ ಭೂಮಿಯಲ್ಲಿ ಕೇವಲ ಗಂಡು ಹಾಗೂ ಹೆಣ್ಣು ಎಂದಷ್ಟೇ ಪರಿಗಣಿಸಿ ಸ್ವಚ್ಛಂದವಾಗಿ ಅಪ್ಪಟ ಪೋಲಿಯಂತೆ ಎಲ್ಲ ಎಲ್ಲವನ್ನೂ ಮಾತನಾಡುತ್ತಾಳೆ. ಕಿಸಕ್ಕನೇ ನಗುತ್ತಾಳೆ. ಮುಸಿಮುಸಿ ಅಳುತ್ತಾಳೆ. ಬದುಕಿನ ಅಪೂರ್ವಗಳ ಸ್ಪರ್ಶವಿದ್ದರೂ ಇಲ್ಲಿ ತಾನೇನೂ ಅಲ್ಲವೇ ಅಲ್ಲ ಎಂಬಂತೆ ಸುಮ್ಮನಾಗಿಬಿಡುತ್ತಾಳೆ. ಅದರೂ ಯಾಕೆ ಅಂಜಲಿಗೆ ನನ್ನೊಂದಿಗೆ ಹಾದರ ಮಾಡುವ ಆಲೋಚನೆ? ಹಾದರ! ಯಾವುದು? ಅವಳಿಗೆ ಇಷ್ಟವಾದವನೊಡನೆ ದೇಹ ಹಂಚಿಕೊಂಡರೆ ಹಾದರವೇ? ನಮ್ಮದಲ್ಲದ ಕತೆಗಳನ್ನು ಬರೆದರೆ ಅದು ಹಾದರ. ಕತೆಗಳೆಂದರೆ, ಕೇವಲ ಬರೆದಿಡುವುದಲ್ಲ. ಬದುಕಿನ ಜತೆ ಬರುವುದು ಕತೆಗಳೆ, ಜತೆಗೆ ಬರುವವರು ಪಾತ್ರಗಳೇ.

ನಾನು ಅಂಜಲಿಗಿಂತ ಸಣ್ಣವನು. ಅವಳಿಗೆ ನನ್ನಲ್ಲಿ ಏನೋ ಮೆಚ್ಚುಗೆಯಾಗಿರಬೇಕು. ಇಲ್ಲ ಕುತೂಹಲವೂ ಇರಬಹುದು. ಅದಕ್ಕೇ ಇರಬೇಕು ನನ್ನೊಂದಿಗೆ ಮಲಗು ಎನ್ನುವುದರ ಬದಲು, ನನ್ನನ್ನು ಅನುಭವಿಸುತ್ತೀಯಾ ಹುಡುಗ ಎಂದು ನೇರವಾಗಿ ಕೇಳಿದ್ದು. ಆವತ್ತು ನಾನು ಅಕ್ಷರಶಃ ಬೆಚ್ಚಿಬಿದ್ದೆ. ಇಪ್ಪತ್ಮೂರರ ಪ್ರಾಯದ ನನಗೂ ಕಾಮದ ಕುದಿ ಒಳಗಿನ ನರಗಳಲ್ಲಿ ರಕ್ತ ಸಂಚಾರಕ್ಕಿಂತ ವೇಗವಾಗಿತ್ತು. ಇಸ್ತ್ರಿ ಪೆಟ್ಟಿಗೆಯೊಳಗಿನ ಕೆಂಡದ ಉಂಡೆಗಳಂತೆ ಒಂದೇ ಮೂಲೆಯಲ್ಲಿ ಕೂತು ಕ್ರಮೇಣವಾಗಿ ಕಾವೇರುತ್ತಿತ್ತು.

ನಿನಗೆ ನನ್ನೊಂದಿಗೆ ಮಲಗಲು ಅಳುಕಿಲ್ಲವ ಅಂಜಲಿ ಎಂದು ಕೇಳಿದೆ. ವಯಸ್ಸು ಇದಕ್ಕೆಲ್ಲಾ ಅಡ್ಡಿಲ್ಲ ಹುಡುಗ, ಆದರೆ ನೀನು ಎಲ್ಲಾ ಮುಗಿದು ಹಾಸಿಗೆಯ ಮೇಲಿಂದ ಕೆಳಗಿಳಿಯುವಾಗ, ಅಯ್ಯೋ ಇದೆಲ್ಲಾ ಕ್ಷಣಿಕ, ಇದೆಲ್ಲಾ ಇಷ್ಟೇ ಎಂದೆಲ್ಲಾ ಬದುಕನ್ನು ಅದಾಗಲೇ ಕಂಡಿರುವ ಮಹಾಪಂಡಿತನಂತೆ ಉದ್ಗಾರವೆತ್ತಕೂಡದು ಎಂದಳು ಅಂಜಲಿ ಗಟ್ಟಿಯಾಗಿ. ಅವಳ ದನಿಯಲ್ಲೊಂದು ಖಚಿತತೆಯಿತ್ತು.

ಎಲ್ಲವನ್ನೂ ಗಾಢವಾಗಿ ಅನುಭವಿಸುವ ಇರಾದೆ ಇತ್ತು. ನನಗೆ ಮುಂದೊಂದು ದಿನ ಅಂಜಲಿಯೊಂದಿಗೆ ತಾಸುಗಟ್ಟಲೆ ಹೊರಳಾಡಿದ ನಂತರ ಸುಕ್ಕುಗಾವ ಹಾಸಿಗೆ, ಚಾದರದ ಕಲ್ಪನೆಗಳು ತಲೆಯಲ್ಲಿ ಗಿರಕಿ ಹೊಡೆಯಲಾರಂಭಿಸಿದವು. ಅಂಜಲಿ ನಾನಿನ್ನೂ ಸಣ್ಣವನು ಎಂದೆ. ಸಣ್ಣವನಾಗೇ ಇರು ಹುಡುಗ. ಅದೇ ಚೆಂದ ಎಂದಳು. ಆದರೆ ಅಂಜಲಿಯ ಮಾತಿನ ಅರ್ಥವನ್ನು ಮಾತ್ರ ಲಘುವಾಗಿ ಪರಿಗಣಿಸುವಂತಿರಲಿಲ್ಲ. ಮತ್ತೆ ಮತ್ತೆ ನಾನೇ ಕತ್ತಲ ಕೋಣೆಯೊಳಗಿನ ಕಪ್ಪುನಾಯಿಯನ್ನು ಹುಡುಕುವವನಂತೆ, ನನ್ನೊಳಗನ್ನೇ ಹುಡುಕಲು ಹೆಣಗಾಡಿದೆ. ಸುಲಭಕ್ಕೆ ಏನೊಂದೂ ದಕ್ಕುವುದಿಲ್ಲ ಇಲ್ಲಿ.

ದಕ್ಕಿದರೆ ಅದಕ್ಕೆ ಚಲನೆ ಇರುವುದಿಲ್ಲ. ಅಂಜಲಿ ಮಾತ್ರ, ತಣ್ಣಗಿನ ದನಿಯಲ್ಲಿ ತುಂಬಾ ಆಲೋಚಿಸಬೇಡ ಎಂದು ನಗುತ್ತ ಭುಜ ತಟ್ಟಿ ಹೊರಟುಹೋದಳು. ಅಂಜಲಿಯ ಆ ಮೃದುವಾದ ಬೆರಳುಗಳ ಸ್ಪರ್ಶದಲ್ಲಿ ಆತ್ಮೀಯತೆಯ ಸಂಕೇತಗಳು ಹುದುಗಿದಂತಿತ್ತು. ಆದರೆ ಸಿಕ್ಕರೆ ಸಾಕು, ಜಗಿದು ಬಿಸಾಡಿಬಿಡುವ ಧಾವಂತವಿರಿಲ್ಲ.

ಕಿಸೆಯ ಎಲ್ಲಾ ಮೂಲೆಗಳನ್ನು ಶೋಧಿಸಿದೆ. ಸುಮಾರು ಇನ್ನೂರ ಐವತ್ತು ರೂಪಾಯಿಯಷ್ಟು ಚಿಲ್ಲರೆ ಹಣ ಸಿಕ್ಕಿತು. ಸೀದಾ ಪುಸ್ತಕದಂಗಡಿಗೆ ಬಂದೆ. ಪದ್ಯಗಳ ಕಪಾಟುಗಳಲ್ಲಿ ಉಳಿಯುವ ಪದ್ಯಗಳು ಕಂಡಾವೆಂದು ಹುಡುಕಾಡಿದೆ. ಯಾರನ್ನು ಓದುವುದು? ಬೋದಿಲೇರ್? ಬೇಡ ಅವನು ಜೀವನದ ಕಡುಮೋಹಿ. ನೆರೂಡ, ಶೆಲ್ಲಿ ಅಥವಾ ರಿಲ್ಕೆ? ಕವಿತೆಗಳು ಬೇಡ… ಅವುಗಳು ಅಂತರಂಗದ ಗೋಳು. ಕತೆಗಳು! ದಾಸ್ತೋವೆಸ್ಕಿ, ಲಾರೆನ್ಸ್, ಕಾಮೂ? ಅಯ್ಯೋ ಇವರೂ ಬದುಕಿನ ಕಡು ವ್ಯಾಮೋಹಿಗಳೇ. ಸುಮ್ಮನೇ ಖಲೀಲ್ ಗಿಬ್ರಾನ್ ಪದ್ಯಗಳನ್ನು ಕೊಂಡುಕೊಂಡು ಅಂಗಡಿಯಿಂದ ಹೊರಬಿದ್ದೆ. ಪುಸ್ತಕದಂಗಡಿಯೊಳಗೆ ಪುಸ್ತಕಗಳಲ್ಲಿನ ಕವಿ ಅಥವಾ ಕತೆಗಾರನ ಪ್ರಮಾಣಿಕತೆಗಿಂತ, ಪ್ರಕಾಶಕನ ಮೈಯಿಂದ ಜಾರಿದ ಬೆವರಿನ ಹನಿಗಳ ವಾಸನೆ ತುಸು ಜೋರಾಗಿಯೇ ಹಬ್ಬುತ್ತಿರುತ್ತದೆ. ನಿಲ್ಲಲಾಗುವುದಿಲ್ಲ ಅಲ್ಲಿ. ಖಲೀಲ್ ಗ್ರಿಬಾನ್ ಕೂಡ ಬದುಕನ್ನು ಅನುಭವಿಸಿದವನಲ್ಲವೇ.

ನನಗೆ ಬೇಕಿರುವುದೂ ಅದೇ. ಇಪ್ಪತ್ಮೂರರ ನಾನು, ಮೂವತ್ತರ ಅಂಚಿನ ಅಂಜಲಿಯನ್ನು ಬೆತ್ತಲಾಗಿಸಿ ಅನುಭವಿಸುವುದಕ್ಕೆ ಬೇಕಾದ ಪ್ರಥಮ ಪಾಠಗಳನ್ನು ತೀರಾ ಹಸಿವಿನಿಂದ ಕಂಗೆಟ್ಟವನಂತೆ ಜೊತೆಗಿದ್ದ ಪದ್ಯಗಳಲ್ಲಿ ಹುಡುಕಾಡಿದೆ. ನನಗೆ ಅಂಜಲಿಯನ್ನು ಇನ್ನಿಲ್ಲದಂತೆ ಅನುಭವಿಸಿದ ನಂತರ, ಲೋಕದ ಮುಂದೆ ಮತ್ತೆ ಬಂದು ಎಂದಿನಂತೆ ನಿಲ್ಲಲು ಸಮರ್ಥನೆಯ ಮಾತುಗಳ ಅಗತ್ಯವಿತ್ತು. ಪಾಪಪ್ರಜ್ಞೆಯ ಚೌಕಟ್ಟಿನಾಚೆ ನಿಂತು ನೋಡುವ ಒಳನೋಟ ಬೇಕಿತ್ತು. ಆದರೆ ಗಿಬ್ರಾನ್ ಇದೆಲ್ಲವನ್ನೂ ಸಾಮಾನ್ಯ ಎನ್ನುವಂತೆ ವಿವರಿಸಿ, ನನಗೆ ತಿಳಿದಿರುವುದು ಇಷ್ಟೇ ಎಂಬಂತೆ ಸುಮ್ಮನಾಗಿಬಿಟ್ಟಿದ್ದ.

ಅವನಲ್ಲೂ ಬರೀ ಪ್ರಶ್ನೆಗಳಷ್ಟೇ ಕಂಡವು. ಉತ್ತರಗಳಿರಲಿಲ್ಲ. ನಾನು ಈಗ ಇನ್ನಷ್ಟು ಗೊಂದಲವಾದೆ. ಹಾಗಾದರೆ ಅಂಜಲಿಯೊಂದಿಗೆ ನನ್ನ ಸಂಬಂಧವೇನು? ಗೆಳೆಯರ? ಪ್ರೇಮಿಗಳ? ಹಾದರವ?……. ಅಂಜಲಿ ಹೇಳಿದ್ದಾಳಲ್ಲಾ, ಹುಡುಗ ಸಂಬಂಧಕ್ಕೆ ಹೆಸರಿಡಬೇಡ. ನಾನೀಗ ಮತ್ತೆ ಗೊಂದಲ.

ಅಧ್ಯಾಯ – 2

ದಿನಕ್ಕೆ ಒಮ್ಮೆಯಾದರೂ ಕಾಣಿಸಿಕೊಳ್ಳುತ್ತಿದ್ದ ಅಂಜಲಿ, ಗಂಡನಿಗೂ ಹೇಳದೆ ನಿನ್ನೆ ರಾತ್ರಿಯೇ ಅದೆತ್ತಲೋ ಹೊರಟುಹೋಗಿದ್ದಳು. ಬ್ಯಾಗಲ್ಲೆರಡು ಪುಸ್ತಕ ತುರುಕಿಕೊಂಡು, ಕತ್ತಿಗೆ ಕ್ಯಾಮರ ಇಳಿಬಿಟ್ಟು, ಆಗಾಗ ಹೀಗೆ ಕಾಡು, ಗುಡ್ಡ, ಅವಳಿಷ್ಟದ ಕವಿಗಳ ಮನೆ, ಪಾಳುಬಿದ್ದ ಪುರಾತನ ಗುಡಿ, ದೂರದ ರಾಜಸ್ಥಾನ, ಆಗುಂಬೆಯ ಕಸ್ತೂರಕ್ಕನ ಹಳೆಯ ಮನೆಗಳನ್ನು ಸುತ್ತು ಹಾಕಿ ಬರುವ ಅಂಜಲಿಯ ಹವ್ಯಾಸ ನನಗೂ ಗೊತ್ತಿದ್ದರಿಂದ ನಾನು ಸುಮ್ಮನಾದೆ. ಫೋನ್ ಮಾಡಿ ಅವಳನ್ನು ಕಂಗೆಡಿಸಲು ಮುಂದಾಗಲಿಲ್ಲ.

ಅಂಜಲಿಯೇ ಲೋ ಹುಡುಗ, ಇನ್ನೆಷ್ಟು ದಿನ ಬೇಕು ನೀನು ನನ್ನನ್ನು ಅನುಭವಿಸಲು ಎಂದು ಕೇಳಿದಾಗೆಲ್ಲಾ, ನಾನು ಪೆಕರನಂತೆ ನಗೆಯಾಡುತ್ತ, ಮಹಾಜ್ಞಾನಿಯಂತೆ ತರ್ಕಿಸುತ್ತಲೇ ಕಾಲ ಕಳೆದುಬಿಟ್ಟಿದ್ದೆ. ಈಗ ಅಂಜಲಿಗಾಗಿ ಒಳಗೊಳಗೇ ಕುದಿಯುತ್ತಿದ್ದೇನೆ. ದೇವರೆಲ್ಲಾ ಸುಳ್ಳು, ಅದೆಲ್ಲಾ ಬಂಡವಾಳ ಹೂಡದೆ ಲಾಭ ಮಾಡುವ ಪುರೋಹಿತರ ಹುನ್ನಾರ. ಇನ್ನು ದೇವಸ್ಥಾನಗಳಂತೂ ಬೆವರಿಳಿಸದೇ ಹಣ ಗಳಿಸುವ, ಹಣ ಕಳೆಯುವ ಮೂರ್ಖರ ಶಾಖೆ ಎಂದೆಲ್ಲಾ ಭಾಷಣ ಬಿಗಿಯುತ್ತಿದ್ದವನು, ಈ ನಡುವೆ ಗುಟ್ಟಾಗಿ ಗುಡಿಗೆ ಹೋಗಿ ಬರುತ್ತೇನೆ. ಅಸ್ಪಷ್ಟವಾಗಿ ಕೈ ಮುಗಿಯುತ್ತೇನೆ. ಅಂಜಲಿಯ ಇರುವಿಕೆಗಾಗಿ ಪ್ರಾರ್ಥಿಸುತ್ತೇನೆ. ಅಬ್ಬಾ ಮೋಹಕ್ಕೆ ಅದೇನು ವೇಗ ಈ ಇಳೆಯಲ್ಲಿ. ಅಚ್ಚರಿಯಾಗುತ್ತದೆ ನೆನೆದರೆ.

ಅದೇ ರೀತಿ ಗುಟ್ಟಾಗಿ ಕೈ ಮುಗಿದು ಬರುವಾಗ ಗುಡಿಯ ಎದುರು ಚಪ್ಪಲಿಗಳಿಗೆ ಟೋಕನ್ ಕೊಟ್ಟು ಕಾಯುವ, ಪುಟಾಣಿ ಬಿದಿರಿನ ಬುಟ್ಟಿಯಲ್ಲಿ, ಹೂ, ಬಾಳೆಹಣ್ಣು, ಲೋಬಾನ್ ಗಂಧದ ಕಡ್ಡಿಗಳನ್ನಿಟ್ಟು ಮಾರುವ ಅಂಬಕ್ಕನ ಮನೆಯ ಮುಂದಿನ ಹಾದಿಯಲ್ಲಿ ಮನೆಗೆ ಹೊರಟ್ಟಿದ್ದೆ. ಅಂಬಕ್ಕನಿಗೆ ಚರ್ಮವೆಲ್ಲಾ ಸುಕ್ಕುಬಿದ್ದಿದೆ. ಸೊಂಟದಲ್ಲೊಂದು ಎಲೆಯಡಿಕೆ ಚೀಲವಿದೆ. ಅದರೊಳಗೆ ಒಂದಿಷ್ಟು ಚಿಲ್ಲರೆಯೂ ಇರಬಹುದು. ಅದೇಕೋ ಏನೋ ಅಂಬಕ್ಕನ ಮನೆಯ ಮುಂದೆ ಜನ ಸೇರಿದ್ದರು.

ನಾನು ಕುತೂಹಲದಿಂದ ಆ ದಿಕ್ಕಿಗೆ ಕುತ್ತಿಗೆ ಹೊರಳಿಸಿದೆ. ಬಂದಿದ್ದ ಜನರೆಲ್ಲಾ ಅದು ಏನೇನೋ ಹೇಳುತ್ತಿರುವಂತೆ ಕಂಡಿತು. ಅಂಬಕ್ಕ ಆ ಬದಿಗಿದ್ದರೆ, ಅಂಬಕ್ಕನ ಮಗಳು ಈ ಬದಿಗೆ ನೆಲದಲ್ಲೇ ಕೂತು ತಲೆ ತಗ್ಗಿಸಿದ್ದಳು. ಅದೊಂದು ಪ್ರಹಸನದಂತೆ ಕಂಡಿತು. ಅಲ್ಲಿದ್ದ ಜನರಾಡುವ ಮಾತುಗಳಿಂದಲೇ ಮನಸಿಗೆ ಕಿರಿಕಿರಿಯಾಯಿತು. ಮತ್ತೆ ಗುಡಿಯ ಕಡೆ ಹೋಗಬಾರದು ಎನಿಸಿತು. ವ್ಯಾಕುಲನಾಗಿ ಎಲ್ಲಾದರೂ ಅಲೆದು ಬರಬೇಕು ಎಂದುಕೊಂಡೆ. ಬೇಕೆಂದೇ ಸವೆದ ಚಪ್ಪಲಿಗಳನ್ನು ಮೆಟ್ಟು, ಹೊರಟು ನಿಂತಿದ್ದೆ. ನೆಲ ಸೀಳುವ ಬಿರುಬೇಸಿಗೆಯಲ್ಲೂ ಅಚಾನಕ್ಕಾಗಿ ಮಳೆಯಾದಂತೆ, ಅರ್ಧ ದಾರಿಯಲ್ಲಿ ಅಂಜಲಿ ಎದುರಾದಳು.

ಮುಕ್ತವಾಗಿ ನಗೆಯಾಡಿ ಬನ್ನಿ ನವಮಾಸದ ಅಲೆಮಾರಿಗಳೇ ಎಂದು ಕಿಚಾಯಿಸುವ ದನಿಯಲ್ಲಿ ಆಹ್ವಾನಿಸಿದಳು. ಅವಳ ಕಣ್ಣುಗಳು ಹೊಳಪಿನಿಂದ ಮಿನುಗುತ್ತಿದ್ದರೆ, ಅವಳ ಬಿಳಿತೊಗಲಿನ ಮೈ, ನಾನೇ ಕೇಳಿಕೊಂಡರೂ ನನ್ನನ್ನು ಮುಟ್ಟದ ನೀನು ಅದೆಂಥಾ ಹುಚ್ಚನಯ್ಯ ಎಂದು ಅಣುಕಿಸಿದಂತೆ ಭಾಸವಾಯಿತು. ಬಿಗಿಯಾದ ಅವಳ ಎರಡೂ ಮೊಲೆಗಳು ನಾನೂ ಇದ್ದೇನೆ ಸರದಿಯಲ್ಲಿ ಎಳಸು ಹುಡುಗ, ನೋಡು ನನ್ನನ್ನೂ ದಿಟ್ಟಿಸಿ ಎಂದು ಸಾರುತ್ತಿರುವಂತೆ ಕಂಡಿತು.

ನನಗೆ ಭಯವಾಯಿತು. ಬೆವತುಹೋದೆ. ಅಂಜಲಿಯ ಮುಖವನ್ನು ಮಾತ್ರ ನೋಡಲು ಪ್ರಯತ್ನಿಸಿದೆ. ಅವಳ ಮಂದಸ್ಮಿತದಲ್ಲೊಂದು ನಿರಾಳತೆಯ ನದಿ ಶಾಂತವಾಗಿತ್ತು. ಅಂಜಲಿಯ ದೇಹದ ಅಂಗಗಳಿಂದ ಹೊಮ್ಮುತ್ತಿರುವ ಕುಹಕಗಳಿಂದ ಕಣ್ತಪ್ಪಿಸಿಕೊಂಡು ಎಲ್ಲಾದರೂ ದೂರ ಓಡಿಬೀಡಬೆಕು ಎನಿಸಿತು. ಆದರೆ ಹೋಗುವುದಾದರೂ ಎಲ್ಲಿಗೆ? ಮತ್ತೆ ಗೊಂದಲ. ನನ್ನೊಳಗಷ್ಟೇ ಅಂಜಲಿಯನ್ನು ಅನುಭವಿಸುತ್ತಿದ್ದ ನನಗೆ ನಿನಗೆಲ್ಲೋ ಮರಳು, ಫ್ಯಾಂಟಸಿ ಬಿಟ್ಟು ದಿಟದಲ್ಲಿ ಬದುಕು ಎಂದು ಅಂಜಲಿಯೇ ಹೇಳಿದ ಮಾತುಗಳು ಮತ್ತೆ ಮತ್ತೆ ನೆನಪಾಗತೊಡಗಿದವು.

ಏನೋ ಹುಡುಗ ಅಂಬಕ್ಕನ ಮನೆಯ ಮುಂದೆ ಅಷ್ಟು ಜನ. ಯಾರಾದರೂ ಬಿಡುಗಡೆಯಾದರ ಎಂದು ನಕ್ಕಳು. ಅಂಜಲಿಗೆ ಬಿಡುಗಡೆಯೆಂದರೆ ಸಾವು. ಇಲ್ಲಾ ಅಂಬಕ್ಕನ ಮಗಳು ಅದಾರದೋ ಜೊತೆ ಮಲಗಿದ್ದಾಗ ಸಿಕ್ಕುಬಿದ್ದಿದ್ದಾಳೆ ಎಂದು ಕಾರಣ ತಿಳಿಸಿದೆ ನಡುಗುತ್ತ. ಅಂಜಲಿಯೊಮ್ಮೆ ನಕ್ಕಳು. ಆಮೇಲೆ? ಅವಳದು ನೇರ ಪ್ರಶ್ನೆಗಳಷ್ಟೇ. ಅಲ್ಲಿದ್ದ ಜನರೆಲ್ಲಾ ತಲೆಗೊಂದರಂತೆ ನೂರಾರು ಮಾತುಗಳನ್ನು ಹೇಳಿದರು. ಅಂಬಕ್ಕನಿಗೆ ಸಮಾಧಾನ ಮಾಡುವ ರೀತಿಯಲ್ಲಿಯೂ, ಅಂಬಕ್ಕನ ಮಗಳಿಗೆ ಬುದ್ಧಿ ಹೇಳುವ ರೀತಿಯಲ್ಲಿಯೂ ತಮಗನಿಸಿದ್ದನ್ನು ಹೇಳುತ್ತಿದ್ದರು. ಅಂಬಕ್ಕನ ಮಗಳಿಗೆ ಕೊನೆಗಾಣಿಸುತ್ತಿದ್ದರು ಎಂದೆ. ಆಮೇಲೆ? ಅಂಜಲಿಯದು ಮತ್ತದೇ ಪ್ರಶ್ನೆ. ಅಂಬಕ್ಕನ ಮಗಳಿಗೆ ಮದುವೆಯಾಗಿದೆ. ಅವಳೀಗ, ಹೀಗೆ ಮತ್ತೊಬ್ಬನ ಜೊತೆ ಹಾದರ ಮಾಡುವುದು ಸರಿಯಾ ಎಂದು ಕೇಳಿದೆ. ಅಂಜಲಿ ಏನನ್ನೂ ಕಾಣದವಳಂತೆ, ಆಮೇಲೆ ಎನ್ನುವ ರಾಗವನ್ನು ಮತ್ತೂ ಮುಂದುವರೆಸಿದಳು. ನಾನು ಉತ್ತರಿಸಲು ತೋಚದೆ, ಬಸ್ಸಿಗೆ ಕಾಯುವ ಬಳಲಿದ ಪ್ರಯಾಣಿಕನಂತೆ ಅವಳ ಮುಖವನ್ನೇ ನೋಡುತ್ತ ನಿಂತುಬಿಟ್ಟೆ. ಈಗ ಅಂಜಲಿಯೇ ಪ್ರಶ್ನಿಸಲು ಮುಂದಾದಳು.

ಅಂಬಕ್ಕನ ಮಗಳ ವಯಸೆಷ್ಟು?

ನನಗಿಂತ ಒಂದರೆಡು ವರ್ಷ ಹಿರಿಯಳು. ಒಂದೇ ಶಾಲೆಯವರು ನಾವಿಬ್ಬರೂ. ಅವಳು ಶತ ದಡ್ಡಿ ಓದಿನಲ್ಲಿ. ಹೇಳಿದೆ. ಆದರೆ ಅಂಜಲಿಗದು ಬೇಕಾಗಿರಲಿಲ್ಲ.

ಅವಳ ಗಂಡ? ಕೇಳಿದಳು. ನಾನು ಅವನು ಮದುವೆಯಾದ ಒಂದೇ ವರ್ಷಕ್ಕೆ ಅದೇನೋ ಕಾರಣ ನೀಡಿ ವಿಷ ಕುಡಿದು ಸತ್ತು ಹೋದ. ಉತ್ತರಿಸಿದೆ.

ಅಂಜಲಿಯೂ ಅದೇಕೊ ಸುಮ್ಮನಾದಳು. ಅಂಜಲಿಯ ಬದುಕಿನ ತೀವ್ರತೆಯ ಎದುರು ಗೆದ್ದುಬಿಟ್ಟೆ ಎನಿಸಿ ಒಳಗೊಳಗೇ ಗೆಲುವಾಯಿತು. ಸರಿ ಅವಳೀಗ ಮಾಡಿದ ತಪ್ಪಾದರೂ ಏನು? ನಿಧಾನವಾಗಿ ಕೇಳಿದಳು. ಅಂಜಲಿಯ ತುಟಿಗಳೊಣಗಿ, ಕಣ್ಣು ಕೆಂಪೇರುತ್ತಿತ್ತು. ಅಂಬಕ್ಕನ ಮಗಳಿಗೆ ಮದುವೆಯಾಗಿದೆ. ಗಂಡ ಸತ್ತಿರಬಹುದು. ಹಾಗೆಂದ ಮಾತ್ರಕ್ಕೆ ಹೀಗೆ ಕದ್ದು ಹಾದರ ಮಾಡುವುದಾ ಎಂದು ಗಟ್ಟಿಯಾಗಿ ಕೇಳಿದೆ. ಸರಿ, ಅವಳೇನು ಮಾಡಬೇಕಿತ್ತು? ಅಂಜಲಿ ಮತ್ತೆ ಶಾಂತಸ್ವರದಲ್ಲಿ ಪ್ರಶ್ನೆಯ ಈಟಿಯೊಂದನ್ನು ನನ್ನತ್ತ ಎಸೆದು ಅದೆತ್ತಲೋ ತಿರುಗಿ ನಿಂತುಬಿಟ್ಟಳು.

ನನಗೆ ಉತ್ತರಿಸಲು ಏನೂ ಇರಲಿಲ್ಲ. ಮೂಲದಲ್ಲಿ ಅಂಬಕ್ಕನ ಮಗಳು ಮಾಡಿದ್ದು ತಪ್ಪೆಂದು ನನಗೇನು ಈ ಮೊದಲೂ ಅನಿಸಿರಲಿಲ್ಲ. ನನಗೆ ಮೊದಲಿನಿಂದ ಇರುವುದು ತೀವ್ರತೆಯ ಕಣಜ ಅಂಜಲಿಯನ್ನು ಗೆಲ್ಲುವ ಛಲವಷ್ಟೇ. ಉತ್ತರಕ್ಕಾಗಿ ಅಂಜಲಿಯ ಮಾತುಗಳನ್ನೇ ನಿರೀಕ್ಷಿಸುತ್ತ ನಿಂತೆ. ಅಂಜಲಿಯ ಅಸಾಧಾರಣ ಪ್ರಶ್ನೆಗಳ ಕಾವು, ಮಧ್ಯಾಹ್ನದ ಸುಡು ಬಿಸಿಲಿಗಿಂತ ಒಂದಿಂಚು ಹೆಚ್ಚಿತ್ತು.

ಅಂಬಕ್ಕನ ಮಗಳೀಗ ಪಾವಿತ್ರ್ಯತೆ ಕಳೆದುಕೊಂಡಳು ಅಲ್ಲವಾ ಎಂದು ತೊದಲುವ ದನಿಯಲ್ಲಿ ಹೇಳಿದೆ. ಅದು ಪೆದ್ದುಪೆದ್ದಾದ ಮಾತು ಎಂದು ಮರುಕ್ಷಣವೇ ಅನಿಸಿತು. ಕೆಂಪನ್ನೇ ಹೊದ್ದು ನಿಂತಿದ್ದ ಅಂಜಲಿಯ ಕಣ್ಣುಗಳು, ಕ್ಷಣಾರ್ಧದಲ್ಲಿ ಸಹಜತೆಗೆ ಮರಳಿದವು. ಅದರ ಬೆನ್ನಲೇ ನನ್ನ ಪೆದ್ದುತನದ ಮಾತಿಗೆ ಗಹಗಹಿಸಿ ನಗಲು ಶುರುವಿಟ್ಟುಕೊಂಡಳು. ಅವಳೇ ಹತ್ತಾರು ಬಾರಿ ಕರೆದರೂ ಅವಳ ಹಾಸಿಗೆಯ ಬಳಿಯೂ ಸುಳಿಯದೇ, ಎಳಸು ಎನಿಸಿಕೊಂಡಿದ್ದ ನನಗೆ, ಅಂಜಲಿಯ ನಗುವಿನ ಎದುರು ಮತ್ತೊಮ್ಮೆ ನನ್ನ ದಡ್ಡತನ ಸಾಬೀತಾಯಿತೆಂದು ಬೇಸರವಾಯಿತು.

ನಿಧಾನವಾಗಿ ಪೆಚ್ಚುಮೋರೆ ಹೊದ್ದು ಸುಮ್ಮನಾಗಲು ಪ್ರಯತ್ನಿಸಿದೆ. ದೊಡ್ಡ ಸ್ವರದಲ್ಲಿ ನಗುತ್ತಿದ್ದ ಅಂಜಲಿ, ನಗುವನ್ನು ತಾರಕದಿಂದ ಮಂದ್ರಕ್ಕಿಳಿಸಿ, ಒಂದಿಷ್ಟು ಹೊತ್ತಿನ ನಂತರ ಸಾವರಿಸಿಕೊಂಡು ನಗುವಿನ ನಡುವೆ ಬಿಕ್ಕುತ್ತಲೇ ಕೇಳಿದಳು. ಅದೇನೋ ಪುಟಾಣಿ, ಪಾವಿತ್ರ್ಯತೆ ಅನ್ನೊದು ಬರೀ ಹೆಣ್ಣುಮಕ್ಕಳಿಗಷ್ಟೇ ಸೀಮಿತವಾಗಿರೋ ಸಂಪ್ರದಾಯಬದ್ಧ ಮೀಸಲಾತಿ ಎಂದಳು. ನಾನು ಆವರೆಗೆ ಆ ಬಗೆಯ ಮಾತುಗಳನ್ನೇ ಕೇಳಿರಲಿಲ್ಲ. ನನ್ನ ಖಾತೆಯಲ್ಲಿ ಯಾವುದೇ ಮಾತುಗಳಿರಲಿಲ್ಲ. ಮೌನಕ್ಕೆ ಶರಣಾಗುವುದೊಂದೇ ಉಳಿದಿದ್ದ ದಾರಿ. ನಾನು ಅದನ್ನೇ ಹಿಂಬಾಲಿಸಿದೆ. ರೆಕ್ಕೆ ಮುರಿದ ಹಕ್ಕಿಯೊಂದು ಮರದ ತುತ್ತ ತುದಿಯ ಹಣ್ಣಿಗೆ ಗುರಿಯಿಟ್ಟಂತೆ ಕನಸು ಕಾಣುತ್ತಿದ್ದೆ ಈವರೆಗೆ ಎನಿಸಿತು. ಸುಮ್ಮನಾದೆ. ಅವಳು ಮೊದಲು ಮನುಷ್ಯಳು, ನಂತರ ಹೆಣ್ಣು, ನಂತರ ಅಂಬಕ್ಕನ ಮಗಳು, ಆ ನಂತರ ಮತ್ತೊಂದು, ಮಗದೊಂದು. ತೀಳಿತಾ ಎಳಸು ಕವಿಗಳೇ ಎಂದಳು ಅಂಜಲಿ ನಗುತ್ತ. ಹರಿಯುವ ನದಿಗೆ ಅದಾವ ಮೈಲಿಗಲ್ಲ್ಲೂಲು ಎನ್ನುವಂತಿತ್ತು ಅವಳ ನಗು. ಆದರೆ ನೋವಾದರೂ ನೋವಾಗಂತೆ ಇರಿಯುವ ಮೊನಚು ಆ ಕಿರುನಗೆಯಲ್ಲೇ ಇತ್ತು.

ಹಾಗಾದರೆ ಅಂಬಕ್ಕನ ಮಗಳು ಮಾಡಿದ್ದು ಏನು? ಅಲ್ಲಾ, ಅಂಬಕ್ಕನ ಮಾನ ಹೋಯಿತಲ್ಲ. ಈಗ ಗುಡಿಯ ಮುಂದಿನ ಅವಳ ಅಂಗಡಿಯಲ್ಲಿ ಹೂ ಹಣ್ಣುಗಳನ್ನು ಯಾರು ಕೊಳ್ಳುತ್ತಾರೆ. ಅದು ಹಾಳಾಯಿತಲ್ಲ. ಅವಳಾದರೂ ಮತ್ತೇ ಅದೇಗೆ ವ್ಯಾಪಾರ ಮಾಡಿಯಾಳು? ಗೊತ್ತಾ ನಿನಗೆ ಅಂಬಕ್ಕನ ಗಂಡ ಕುಡುಕ, ಮಗನಂತೂ ಅಪಾಪೋಲಿ, ಅದೆಲ್ಲೋ ಕೂಲಿಗೆ ಹೋಗುವ ಹೆಂಗಸರ ಕುಪ್ಪಸಕ್ಕೆ ಬೆಲೆಕಟ್ಟುತ್ತ ನಿಂತಿರುತ್ತಾನಂತೆ. ಮಗಳು ವಿಧವೆ. ಈಗ ಅಂಬಕ್ಕನ ಪಾಡೇನು? ಯಾರಿಗೂ ಹೊಳೆಯಲಾರದ್ದು ನನಗಷ್ಟೇ ಹೊಳೆದಿದೆ ಎಂಬಂತೆ ಪ್ರಶ್ನೆಗಳನ್ನು ಒಂದೇ ಉಸಿರಿನಲಿ ಮುಂದಿಟ್ಟೆ.

ಅಂಬಕ್ಕನ ಪಾಡು ಏನಾದೀತು? ಮೊದಲಿನಂತೆ ಈಗಲೂ. ಅವಳು ಮಾರುವ ಹೂ ಹಣ್ಣುಗಳೇನು ಅವಳ ಮೈಯಿಂದ ಬೆಳೆಯುತ್ತವೆಯೇ? ಅವು ಪ್ರಕೃತಿಯವು. ಹಾಗೆ ಅಂಬಕ್ಕ, ಅಂಬಕ್ಕನ ಮಗಳು, ನಾನು, ನೀನು. ಎಲ್ಲವೂ ಪ್ರಕೃತಿ ಅಷ್ಟೇ ಎಂದು ಹೇಳಿ ಹೊರಡಲು ಅಣಿಯಾದಳು ಅಂಜಲಿ. ನನಗೆ ಅಂಜಲಿಯೆಂದರೆ ನಿಗೂಢಗಳ ಉಗ್ರಾಣ ಎನ್ನುವುದು ಈಗ ಮತ್ತಷ್ಟು ಖಾತ್ರಿಯಾಯಿತು.

ತುಂಬಾ ಓದಿಕೊಂಡವರ ಸಹವಾಸ ಮಾಡಬಾರದು ಎನಿಸಿತು. ಅವರು ನಮ್ಮನ್ನು ಅವರ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸುವುದಕ್ಕಿಂತ, ನಮ್ಮ ದಡ್ಡತನವನ್ನು ಅನಾವರಣಗೊಳಿಸುವುದೇ ಹೆಚ್ಚು ಎನಿಸಿ ಸಿಟ್ಟಾಯಿತು. ಆದರೂ ಅಂಜಲಿಗಷ್ಟೇ ತಿಳಿದಿರುವ ಕೆಲವು ನಿಗೂಢಗಳು ಅಲ್ಲಲ್ಲಿ ಟಿಸಿಲೊಡೆದಂತೆ ಕಾಣುತ್ತಿತ್ತು. ಸರಿ ಹುಡುಗ, ಹೇಳು ನೀನು ನನ್ನನ್ನು ಅನುಭವಿಸಲು ಇನ್ನು ಅದೆಷ್ಟು ದಿನ ಬೇಕು ಎಂದು ಎಂದಿನ ದಾಟಿಯಲ್ಲಿ ಕೇಳಿದಳು.

ಇವಳಿಗೇನು ನನ್ನೊಂದಿಗೆ ಹಾಸಿಗೆಯಲ್ಲಿ ಬೆವರಲೇಬೇಕಾದ ತುರ್ತು ಎಂದು ಪ್ರಶ್ನೆಗಳು ತಲೆಯೊಳಗೆ ಸುಳಿದಾಡಹತ್ತಿದವು. ಆದರೂ ಅಂಜಲಿ ಎಂದೂ, ನನ್ನೊಂದಿಗೆ ಮಲಗು ಅಂತಲೋ, ಸುಖಿಸು ಅಂತಲೋ ಅಪ್ರಬುದ್ಧವಾಗಿ ಕರೆದಿದ್ದಿಲ್ಲ. ಅವಳು ಪೂರ್ಣವಾಗಿ ಮಾಗುವ ಹಂತದಲ್ಲಿದ್ದಾಳೆ. ಅವಳಿಗೆ ಹುಟ್ಟು ಸಾವು ಸೇರಿದಂತೆ ಯಶಸ್ಸು, ಸಾಧನೆಗಳು ಕೂಡ ಜೀವನ್ರಪ್ರೀತಿಯ ಎದುರು ಕ್ಷುಲ್ಲಕ ಎನಿಸುತ್ತವೆಯಂತೆ. ಕೆಲವೊಮ್ಮೆ ಅನಿಸುತ್ತದೆ. ಅಂಜಲಿಯೂ ಥೇಟು ಪ್ರಕೃತಿಯಂತೆ. ಅವಳು ಮೋಹಿಸುವಂತೆ ಮುನಿಯಲುಬಲ್ಲಳು.

ನಾನು ನಿಧಾನವಾಗಿ, ಅಂಜಲಿಯ ಮಾತಿಗೆ ಒಪ್ಪಿಗೆಯ ಮುದ್ರೆಯನ್ನು ಒತ್ತುವವನಂತೆ, ಅಲ್ಲಾ ಅಂಜಲಿ, ನಾನು ನೀನು ಕೂಡಿದರೆ ಮಗು ಹುಟ್ಟುವುದಿಲ್ಲವಾ ಎಂದೆ. ಮೊದಲು ಲೈಬ್ರರಿಗಳಲ್ಲಿ ಗಂಟೆಗಟ್ಟಲೆ ಕೂತು ಪುಸ್ತಕಗಳನ್ನು ಓದುವುದನ್ನು ಬಿಡು. ಗಂಭೀರವಾಗಿ ಕೆಲಸ ಹಿಡಿದು ನಿನ್ನ ಅನ್ನ ಹುಟ್ಟಿಸಿಕೋ, ಚೆನ್ನಾಗಿ ಬದುಕು. ತೀವ್ರವಾಗಿ ಜೀವಿಸು. ಆಮೇಲೆ ಮಗು ಹುಟ್ಟಿಸುವೆಯಂತೆ ಎಂದಳು ನಗುತ್ತ. ನಾನು ಅವಳ ಈ ಅನೀರಿಕ್ಷಿತ ಉತ್ತರದಿಂದ ಕಂಗಾಲಾದೆ. ಹಾಗಾದರೆ ನಾನು ಅವಳನ್ನು ಅನುಭವಿಸುವುದು ಎಂದರೆ ಏನು? ಸರಿ ಬದುಕಿನಲ್ಲಿ ಪ್ರಮುಖವಾಗಿರುವುದಾದರೂ ಏನು, ಹಣ? ಜ್ಞಾನ? ಹೆಸರು? ಪ್ರಶಸ್ತಿ? ಊಟ? ಬಟ್ಟೆ? ಪ್ರೀತಿ? ಕಾಮ? ಸಹಬಾಳ್ವೆ? ಅಯ್ಯೋ ತಲೆ ಸಿಡಿಯುತ್ತಿದೆ. ಅಂಜಲಿ, ಅಂಜಲಿ ನನಗೆ ಸರಿಯಾಗಿ ಹೇಳು ನಾವಿಬ್ಬರೂ ಯಾರು? ಗೆಳೆಯರ? ಹಾದರ ಮಾಡುವವರ? ಮೋಹಿತರ? ಹುಚ್ಚರ? ಎಂದು ಏರು ದನಿಯಲ್ಲಿ ಕೇಳಿದೆ. ಅದೇನೋ ವರ್ಣಿಸಲಾಗದ್ದು ಕುತ್ತಿಗೆ ಹಿಡಿದು ನನ್ನ ಕುರಿತು ಒಂದಿಷ್ಟಾದರೂ ಹೇಳು ಮಾರಾಯ ಎನ್ನುವಂತೆ ಬಾಧಿಸುತ್ತಿತ್ತು.

ಹುಡುಗ ನಿನ್ನೊಳಗೆ ಉತ್ತರವಿದೆ ಹುಡುಕು. ಬೇಗ ನಿರ್ಣಯಿಸು ನಾವಿಬ್ಬರೂ ಯಾವಾಗ ಒಬ್ಬರನ್ನೊಬ್ಬರು ಅನುಭವಿಸಬಹುದು. ನಾನು ಕಾಯುತ್ತ ಇದ್ದೇನೆ. ಆದರೆ ನೆನಪಿಡು ನೀನು ಹಾಸಿಗೆಯಲ್ಲಿ ನನ್ನ ದೇಹವನ್ನಷ್ಟೇ ಅನುಭವಿಸಿ ಹಂಚಿಕೊಳ್ಳಬೇಡ. ನನ್ನನ್ನು ಹಂಚಿಕೊ ಎಂದಳು. ನನ್ನ ದೇಹವನ್ನಷ್ಟೇ ಅಲ್ಲಾ, ನನ್ನನ್ನೂ ಹಂಚಿಕೋ ಅಂದರೆ ಅರ್ಥ ಏನು? ಅರೇ ನಾನು ಅಂಜಲಿ ಎಂದರೆ ಬರೀ ಬಿಳಿಯ ಚರ್ಮದ ತುಂಬು ದೇಹದ ಹೆಂಗಸಷ್ಟೇ ಎಂದು ತಿಳಿದಿದ್ದೆನಲ್ಲಾ ಈ ಕ್ಷಣದವರೆಗೆ! ನಾನು ಅದೆಂಥಾ ಮೂರ್ಖ. ಅಂಜಲಿ ಕೇವಲ ಹೆಣ್ಣಲ್ಲಾ ಮತ್ತೇನೋ ಎನ್ನುವುದರಿಂದಿಡಿದು ಇನ್ನೂ ಹಲವು. ಗಡಿಯಾರದ ಮುಳ್ಳುಗಳಂತೆ ಒಂದರ ಹಿಂದೆ ಮತ್ತೊಂದು ನನ್ನ ವೃತ್ತಾಕಾರದ ತಲೆಯೊಳಗೆ ಸುತ್ತಲಾರಂಭಿಸಿದವು.

ಅಂಜಲಿ. . .ಅಂಜಲಿ. . .ಕಿರುಚಿದೆ ಇದ್ದಲ್ಲೇ ನಿಂತು. ಅಂಜಲಿ ಮಾತ್ರ ಅದಾಗಲೇ ದಾರಿಯ ತಿರುವಿನ ಕೊನೆಗೆ ಸಮೀಪವಾಗಿದ್ದಳು. ಹಿಂದಿರುಗಿ ನೋಡಲೂ ಇಲ್ಲ. ನನಗೆ ಚಲಿಸಲಾಗಲಿಲ್ಲ. ನಾನು ಸುಮ್ಮನಾದೆ ನಿಂತಲ್ಲೇ ನಿಂತುಬಿಟ್ಟೆ. ಅಂಜಲಿ ನನ್ನೆದುರು ಬಿಟ್ಟುಹೋದ ಪ್ರಶ್ನೆಗಳು ರಣರಂಗದಲ್ಲಿ ಶಸ್ತ್ರವಿಲ್ಲದ ಎದುರಾಳಿಯ ಜೊತೆ ನಾವು ಯುದ್ಧ ಮಾಡುವುದಿಲ್ಲ ಎಂದು ಸಹಾನುಭೂತಿ ತೋರಿಸುವ ಪ್ರಾಮಾಣಿಕ ಎದುರಾಳಿಗಳಂತೆ ಕಾಣುತ್ತಿದ್ದವು.

ಅವಳ ಪ್ರಶ್ನೆಗಳನ್ನು ಸ್ವೀಕರಿಸಲು ಆಗದ ನನಗೆ ನಾಚಿಕೆಯಾಯಿತು. ಕಿರಿಕಿರಿಯಾಗಿ ದಣಿವಾಗುವವರೆಗೆ ನಡೆಯಬೇಕೆಂದು ತೀವ್ರವಾಗಿ ಅನಿಸಿತು. ಮೆಟ್ಟಿದ್ದ ಚಪ್ಪಲಿಯೂ ಕಿತ್ತಿತ್ತು. ಅದೇನೂ ತೊಡಕಾಗಿ ಕಾಣಲಿಲ್ಲ. ಅವುಗಳನ್ನು ಅಲ್ಲಿಯೇ ಬಿಟ್ಟು ಬರಿಗಾಲಿನಲ್ಲೇ ಶರವೇಗದಲ್ಲಿ ಹೊರಟುಹೋದೆ.

ಅಧ್ಯಾಯ – 3

ಅಂಜಲಿಗೆ ಈ ನಡುವೆ ನಾನು ಕಾಣಸಿಗಲೇ ಇಲ್ಲ. ಇಬ್ಬರ ನಡುವೆ ಮುನಿಸೂ ಇತ್ತು. ನಾನು ಬರೆದ ಪದ್ಯವೊಂದು, ನೇರವಾಗಿ ಅವಳಿಗೆ ಸಲ್ಲವಂತಿತ್ತು ಎಂದು ಅದಾರೋ ಕಿವಿ ಚುಚ್ಚಿದ್ದರು ಅಂಜಲಿಗೆ. ಸಾಮಾನ್ಯವಾಗೇ ಅಂಜಲಿಯೂ ಆಗಾಗ ಮಾತು ಬಿಡುವವಳಂತೆ ನಟಿಸಿದರೂ ಮೊದಲಿನಿಂತೆ ಇದ್ದಳು. ಒಂದಷ್ಟು ದಿನದ ನಂತರ ಅಂಜಲಿ ಬರೆದ ಕತೆಯೊಂದು ಪತ್ರಿಕೆಯಲ್ಲಿ ಬಂದಿತ್ತು. ತುರ್ತಿನಲ್ಲಿರುವವನಂತೆ ಒಂದೇ ಗುಟುಕಿಗೆ ಓದಿ ಮುಗಿಸಿದೆ.

ಭಯವಾಯಿತು. ಅಂಜಲಿ ಯಾವಾಗಲೂ ಹೀಗೆ. ಏನಾದರೂ ಬರೆದರೆ ಅಲುಗಿನಂತಿರುತ್ತದೆ. ಅವಳನ್ನು ಹತ್ತಿರದಿಂದ ಬಲ್ಲವರಿಗೆ ಅವಳ ಬರಹ ಇರಿಯಲೂಬಹುದು. ಹೀಗೆ ತೀವ್ರವಾಗಿ ಬದುಕಲು ಅಂಜಲಿಗಷ್ಟೇ ಹೇಗೆ ಸಾಧ್ಯ? ಸರಿ, ಹೀಗೆಲ್ಲಾ ಬದುಕಲು, ಬರೆಯಲು, ಸಾಧ್ಯವಾ ಎಂದು ಅಚ್ಚರಿಯಾಯಿತು. ಅಂಜಲಿಗೆ ಫೋನ್ ಮಾಡಿ ಸಂಜೆ ಸಿಗು ಎಂದೆ. ನಾನೀಗ ಕುಡಿದ್ದಿದ್ದೇನೆ. ನೀನು ಮಧ್ಯಾಹ್ನವೇ ಬಂದುಬಿಡು ಮನೆಗೆ, ಒಬ್ಬಳೇ ಇದ್ದೇನೆ ಎಂದು ಮಾಮೂಲಿಯಂತೆ ಪೋಲಿ ನಗೆಯಾಡಿದಳು. ನಾನು ಸಂಜೆ ಸಿಗು ಎಂದು ಕೃತಕವಾದ ಗಂಭೀರ ದನಿಯಲ್ಲಿ ಹೇಳಿ ಫೋನಿಟ್ಟೆ. ಆದರೆ ಅಂಜಲಿಯೆಂದರೇ ನಾನು ಒಳಗೊಳಗೊಳಗೆ ಅದೆಷ್ಟು ಕುದಿಯುತ್ತೇನೆ ಎನ್ನುವುದನ್ನು ಹೇಳಲಾಗಿರಲಿಲ್ಲ ಅವಳಿಗೆ. ಅದೇನೂ ಅವ್ಯಕ್ತವಾದ್ದುದ್ದಲ್ಲ. ಆದರೂ ದೂರದ್ದು…

ಸಂಜೆಯ ಹೊತ್ತಿಗೆ ಅಂಜಲಿ ಬಂದಳು. ಅವಳ ಮೈಯಿಂದ ಬೆವರು ವಾಸನೆಯ ಚುಂಗು ಹೊರಜಾರುತ್ತಿದ್ದರೆ, ಬೆಳಿಗ್ಗೆ ಕುಡಿದಿದ್ದ, ವೈನ್ ಘಮಲು ಮಾತಿನ ನಡುವೆ ಅವಳ ಬಾಯಿಂದ ಸರಾಗವಾಗಿ ಹೊಮ್ಮುತ್ತಿತ್ತು. ಏನು ಗುರು ಬೆಳಿಗ್ಗೆಯೇ ಪಾನಗೋಷ್ಠಿ ಇವತ್ತು ಎಂದು ಹಂಗಿಸಿದೆ ನಾಜೂಕಾಗಿ. ನಾನು ಒಂಟಿಯಾಗಿದ್ದೆ, ನನಗೆ ವೈನ್ ಜೊತೆಯಾಯ್ತು ಎಂದಳು.

ಅಂಜಲಿಯ ಪ್ರತಿ ಮಾತಿನಲ್ಲೂ ಒಳಾರ್ಥಗಳು ಇಣುಕುತ್ತಿದ್ದವು ನನಗೆ. ಏನು, ನಿರ್ಧಾರ ಮಾಡಿದೆಯಾ? ನನ್ನನ್ನು ಅನುಭವಿಸುವುದಕ್ಕೆ? ಎಂದಳು ಎಂದಿನಂತೆ. ಶಾವ್ರಣಮಾಸದಲ್ಲಿನ ದಾಸಯ್ಯಗಳು, ಪ್ರತಿ ಮನೆಯಲ್ಲೂ ಅದದೇ ಮಾತುಗಳನ್ನು ಪ್ರತಿ ಬಾರಿಯೂ ಉಚ್ಚಾರ ಮಾಡುವಂತೆ, ಅಂಜಲಿಯೂ ಪ್ರತಿ ಬಾರಿ ಎದುರಾದಾಗಲೂ ಅದನ್ನೇ ಕೇಳುತ್ತಾಳೆ ಅನಿಸಿತು. ಪತ್ರಿಕೆಯಲ್ಲಿ ಬಂದ ಕತೆಯಲ್ಲಿ ಪೂರ್ತಿ ನೀನೆ ಇದ್ದೆಯಲ್ಲಾ? ಎಂದು ಅವಳನ್ನು ನೇರವಾಗಿ ವಿಷಯಕ್ಕೆ ಎಳೆದೆ. ನಕ್ಕಳು.

ಅದು ನನ್ನದೇ ಕತೆ ಅಲ್ಲವಾ ಅದಕ್ಕೇ ನಾನೇ ಇದ್ದೇನೆ. ನಾನೇನಾದರೂ ಮತ್ತೊಬ್ಬರು ಕತೆ ಬರೆದರೆ, ಅಥವಾ ಇಲ್ಲದ್ದನ್ನು ಇರುವಂತೆ ಬರೆದರೆ ಅದು ಅಹಸ್ಯ. ಅದೇ ನೀನು ಕೇಳುತ್ತಿಯಲ್ಲಾ ಹುಡುಗ, ಈ ಹಾದರ ಎಂದರೆ ಏನು ಅಂತಾ? ಅದು ಇದೇ ಎಂದಳು. ಅಂಜಲಿಯ ಕಣ್ಣಿನಲ್ಲಿ ಮನುಷ್ಯನೊಬ್ಬ, ಮತ್ತೊಬ್ಬ ಮನುಷ್ಯನ ಬಗ್ಗೆ ಎಲ್ಲಾ ತಿಳಿದಿರುವವನಂತೆ ಬರೆಯುವುದು, ಮಾತನಾಡುವುದು, ತಾನಾಗೇ ಘಟಿಸಿದ್ದಕ್ಕೆ ಸಾಧನೆ ಎನ್ನುವುದು, ಮನುಷ್ಯನನ್ನು ಮನುಷ್ಯನೇ ಹೊಗಳುವುದು, ಮನುಷ್ಯನಿಗೆ ಮನುಷ್ಯನೇ ಪ್ರಶಸ್ತಿ ಕೊಡುವುದು, ಅದಕ್ಕೆ ಮತ್ತಷ್ಟು ಮನುಷ್ಯರು ಚಪ್ಪಾಳೆ ತಟ್ಟುವುದು ಎಲ್ಲವೂ ಈ ಪುಟಾಣಿ ಜಗತ್ತಿನ ಬಹುದೊಡ್ಡ ವ್ಯಂಗ್ಯದಂತೆ ಕಾಣುತ್ತಿರುವಂತಿತ್ತು.

ಗೊತ್ತಾ, ಅಂಬಕ್ಕನ ಮಗಳು ಕೆರೆಗೆ ಹಾರಿಕೊಂಡು ಸತ್ತಳು ಎಂದು ಸಣ್ಣಗೆ ಹೇಳಿ ಸುಮ್ಮನಾದೆ. ಅಂಜಲಿಯಿಂದ ಬರುವ ಉತ್ತರದ ನಿರೀಕ್ಷೆಯಲ್ಲಿದ್ದೆ. ಅವಳು ಮೊದಲೇ ಸತ್ತಿದ್ದಳು, ಈಗ ಅಧಿಕೃತವಾಯ್ತು ಎಂದಳು ಅಂಜಲಿ. ಅವಳ ಮಾತಿನಲ್ಲಿ ನೋವಿತ್ತು. ಎಲ್ಲರ ಎದುರು ತಾನೊಬ್ಬಳು ಸುಖಜೀವಿ ಎನ್ನುವಂತೆ ಕಾಣುತ್ತಿದ್ದಳು.

ಎಲ್ಲದರ ಬಗ್ಗೆ ಅಪಾರ ಕಾಳಜಿಯನ್ನಿಟ್ಟುಕೊಂಡು ತನ್ನೊಳಗೇ ಬೇಯುತ್ತ ನರಳಿ ಆಗಾಗ ಕಣ್ಣೀರಾಗುತ್ತಿದ್ದನ್ನು ನೋಡಿದ್ದೆ ನಾನು. ಆದರೂ ಅದರಲ್ಲೊಂದು ಸುಖವನ್ನು ಅರಸುವವಳಂತೆ ಕಂಡಳು. ಮೂವತ್ತರ ಅಂಚಿನ ಅಂಜಲಿ ಇತ್ತ ಹೆಂಗಸೂ ಅಲ್ಲದ ಅತ್ತ ಹುಡುಗಿಯೂ ಅಲ್ಲದ ಸ್ಥಿತಿಯಲ್ಲಿದ್ದುಕೊಂಡು ಅದೊಂದು ಬಗೆಯ ದಿವ್ಯ ಕ್ಷಣಗಳನ್ನು ಯಾರಿಗೂ ತೋರಗೊಡದೆ ಒಬ್ಬಳೇ ಅನುಭವಿಸುತ್ತಿದ್ದಾಳೆ ಎಂದು ಅಸೂಯೆಯಾಯಿತು. ಅಂಬಕ್ಕ ಊರು ಬೆಳಿಗ್ಗೆಯೇ ಬಿಟ್ಟಳು, ನಾನೇ ರೈಲು ಹತ್ತಿಸಿ ಬಂದೆ. ನಾನ್ನೊಬ್ಬ ನಿರುದ್ಯೋಗಿ ಎಂದು, ಅದೇ ನೀನು ಕೊಟ್ಟಿದ್ದೆ ಅಲ್ವಾ, ಹೊಸ ಕಾವ್ಯಗಳನ್ನು ಕೊಂಡುಕೊಳ್ಳುವುದಕ್ಕೆ ಹಣ. ಅ ಹಣವನ್ನೆಲ್ಲಾ ಅಂಬಕ್ಕನಿಗೇ ಕೊಟ್ಟುಬಿಟ್ಟೆ ಎಂದೆ. ಬರೆದರಷ್ಟೇ ಕಾವ್ಯವಲ್ಲ ಹುಡುಗ. ನೀನು ಅಂಬಕ್ಕನಿಗೆ ಹಣ ಕೊಟ್ಟಿದ್ದು ನಿಜವಾದ ಕಾವ್ಯವೇ. ನಾವು ಭಾವಿಸುವುದೆಲ್ಲಾ ಎಂದಿಗೂ ಪದಗಳಿಗೆ ಮೀರಿದ್ದು, ನಾವು ಬರೆದ ಕವಿತೆಗಳ ಬಗ್ಗೆ ನಮಗೆ ಮೆಚ್ಚುಗೆಯಾದಂತೆ ನಾಚಿಕೆಯೂ ಆಗಬೇಕು ಎಂದಳು ವಿಪರ್ಯಾಸದ ನಗು ಚೆಲ್ಲುತ್ತ.

ಅಂಬಕ್ಕ ಕೊನೆಯ ಬಾರಿ ಹೊರಜಾರಿಸಿದ ಕೃತಕ ಹರ್ಷದ ನಗು, ಅಂಬಕ್ಕನುಟ್ಟಿದ್ದ ಅಸಂಖ್ಯ ಕಿಂಡಿಗಳಿದ್ದ ಹಸಿರು ಸೀರೆ, ಅದರಷ್ಟೇ ಕಿಂಡಿಗಳನ್ನು ಹೊಂದಿದ್ದ ಅವಳ ಕಂಕುಳಿನಲ್ಲಿ ಬೆಚ್ಚಗೆ ಮುದುರಿ ಕೂತಿದ್ದ ಗೋಣಿಚೀಲದ ನೆನಪಾಯಿತು. ಆ ಗೋಣಿಚೀಲ ಬೆಳಿಗ್ಗೆ ಹೂ ಹರಡಿಕೊಳ್ಳುವುದಕ್ಕೆ, ರಾತ್ರಿ ಅದೇ ಹೂಗಳನ್ನು ತುಂಬಿಟ್ಟುಕೊಳ್ಳುವುದಕ್ಕೆಂದು ವಿವರಿಸಿದೆ ಅಂಜಲಿಗೆ.

ಅಂಬಕ್ಕನ ಗೋಣಿಚೀಲ ಹಾಗೂ ಹಸಿರು ಸೀರೆಯಲ್ಲಿ ಬಿದ್ದಿದ್ದ ಕಿಂಡಿಗಳಿಂದ ನುಸುಳುವ ಸಣ್ಣ ಬೆಳಕು ನಮ್ಮೊಳಗೇ ತುಂಬಿರುವ ಅಗಾಧವಾದ ಕತ್ತಲೆಯನ್ನು ಬಡಿದೋಡಿಸಲು ಹೆಣಗಾಡುತ್ತಿರುವಂತೆ ಕಂಡಿತು. ನಾಗರಿಕತೆಯ ಉತ್ತುಂಗದಲ್ಲಿ ಬದುಕುತ್ತಿದ್ದೇವೆ ಎಂದು ತಿಳಿದಿರುವ ಮಾನವಪ್ರಾಣಿಗಳ ಆತ್ಮಗಳಿನ್ನೂ ಶಿಲಾಯುಗದಲ್ಲೇ ಇದೆ ಎಂದನಿಸಿ ಸಿಟ್ಟಾಯಿತು.

ಅಂಜಲಿಗೆ ಇದನ್ನೆಲ್ಲಾ ಹೇಳಬೇಕು ಎನಿಸಿದರೂ ಹೇಳಲಿಲ್ಲ. ಅದರ ಅಗತ್ಯವೂ ಕಾಣಲಿಲ್ಲ ನನಗೆ. ಸುಮ್ಮನೇ ಎಂದರೆ ಸುಮ್ಮನಾಗಿಬಿಟ್ಟೆ. ಅಂಬಕ್ಕನ ಮಗಳು ಜೀವಿಸುವುದಕ್ಕೆ ಈಗಷ್ಟೇ ಆರಂಭಿಸಿದ್ದಳು ಅಲ್ಲವೇನೋ ಹುಡುಗ ಎಂದಳು ತಣ್ಣಗೆ. ಅದೊಂದು ಅತೃಪ್ತಜೀವ. ಬಾಲ್ಯ ಕಂಡಿಲ್ಲ, ಯೌವನ ಅನುಭವಿಸಿಲ್ಲ. ಅವಳ ಮೈ ಸಡಿಲವಾಗಿಲ್ಲ. ಅಪ್ಪನ ತೋಳ ತೆಕ್ಕೆಯಲ್ಲಿ ಜೋತು ಬಿದ್ದಿಲ್ಲ. ಅಮ್ಮನ ಮಡಿಲಿನ ಸೆರಗಿನ ವಾಸನೆಯ ಘಮಲಿಟ್ಟುಕೊಂಡಿಲ್ಲ. ತಾನು ಹೇಳಬೇಕೆಂದಿರುವುದನ್ನು ತಪ್ಪಿಯೂ ಯಾವ ಗಂಡಿಗೂ ಹೇಳಿಲ್ಲ. ದಿಟದಲ್ಲಿ ಕೇಳುವವರೇ ಸಿಕ್ಕಿಲ್ಲ. ಅಂಬಕ್ಕನ ಮಗಳೆಂದರೆ ವರುಷದ ಹಿಂದೆ ನೂರಾರು ಗಂಟುಗಳಾದ ದಾರದ ಉಂಡೆಯಂತೆ ಕಾಣುತ್ತಿದ್ದಳು ಅಂಜಲಿಯ ದನಿಯಲ್ಲಿ. ನಾನು ಅವಳನ್ನೇ ನೋಡುತ್ತ ನಿಂತೆ. ಲೋ ಹುಡುಗ ಹರಿಯುವ ನದಿಗೆ ಮೈಲಿಗಲ್ಲುಗಳು ಅಗತ್ಯವೇನು ಎಂದಳು. ಏನೋ ಹೇಳಬಿಡಬೇಕು ಎನಿಸಿತು ನನಗೆ. ಆದರೆ ಆಗಲಿಲ್ಲ.

ಅಂಜಲಿಯ ಕಣ್ಣಿನ ತುದಿಯಲ್ಲಿ ಉಪ್ಪುನೀರಿನ ದರ್ಶನವಾಯಿತು. ಗುಡಿಯ ಗಂಟೆಯಂತೆ ಅಂಜಲಿಯ ಒಳಗೂ ಬಂದವರಿಗೆಲ್ಲಾ ಎಟುಕುವುದಿಲ್ಲ ಎನಿಸಲು ಆರಂಭವಾಯಿತು. ಅಂಬಕ್ಕನ ಮಗಳು ಮಾಡಿದ್ದು ಹಾದರ ಅಲ್ಲವಾ ಅಂಜಲಿ? ಅವಳು ಮದುವೆಯಾದ ಮೇಲೆ ಮತ್ತೊಂದು ಗಂಡಿನ ಸಹವಾಸವೇಕೆ ಎಂದು ಅಂಜುತ್ತಲೇ ಪ್ರಶ್ನಿಸಿದೆ. ಅಂಜಲಿ ಈಗ ಸಿಟ್ಟಾಗಿ ನನಗೆರಡು ಬಿಗಿದರೂ ಆಶ್ಚರ್ಯವಿಲ್ಲ ಎಂಬ ಸಣ್ಣ ಭಯವೂ ಸುಳಿದಾಡಿತು.

ಅಂಜಲಿ ತೆರೆದ ಒಳಗಣ್ಣುಗಳಿಂದ ನನ್ನನ್ನು ನೋಡಿದಳು. ನೀನಿನ್ನೂ ಅಸಲಿ ಬದುಕಿಗೆ ಹೊಸಬ ಎಂಬಂತೆ ನನ್ನತ್ತ ನೋಡಿ ತುಟಿಬಿರಿದಳು. ನನಗೆ ಈ ಪ್ರಪಂಚದ ನಿಕಟ ಪರಿಯವಿಲ್ಲ ಎನ್ನುವುದನ್ನು ಅವಳ ಒಂದೇ ಒಂದು ನಗು ಸಾರಿ ಹೇಳಿದಂತಿತ್ತು. ಹೇಳು ಅಂಜಲಿ ಅದು ಹಾದರ ಅಲ್ಲವಾ ಎಂದು ಮತ್ತೆ ಕೇಳಿದೆ. ಪುಟಾಣಿ ನೀನಾದರೂ ಇನ್ನೂ ಪುಟ್ಟವನಾಗೇ ಉಳಿದುಬಿಡು ಮಾರಾಯ. ಇಲ್ಲಿ ದೊಡ್ಡವರೆನಿಸಿಕೊಂಡವರೆಲ್ಲಾ ತೀರಾ ಸಣ್ಣವರು ಎಂದು ನನ್ನ ಕೂದಲ ನಡುವೆ ಆತ್ಮೀಯವಾಗಿ ಬೆರಳಾಡಿಸಿದಳು. ನನ್ನೊಳಗಿದ್ದ ಅಂಜಲಿಯ ಕಡೆಗಿನ ವ್ಯಾಮೋಹದ ಕಟ್ಟೆ ಒಡೆಯುವುದರಲ್ಲಿತ್ತು. ಅದು ನಿಲ್ಲವುದಲ್ಲಾ, ನಾನು ತಡೆಯುವವನೂ ಅಲ್ಲ ಎನ್ನುವಂತೆ. ಅಂಜಲಿ ನನಗೆ ನೀನು ಬೇಕು. ನಾನು ನಿನ್ನನ್ನು ಅನುಭವಿಸಬೇಕು ಎಂದೆ ನಡುಗುತ್ತ. ಅಂಜಲಿಯಿಂದ ಹರಿದು ಬಂದ ನೋಟ ಹೊಸತನದಿಂದ ಕೂಡಿತ್ತು. ನನ್ನನ್ನು ಬಿಗಿಯಾಗಿ ಅಪ್ಪಿ ನನ್ನ ತುಟಿಗೊಂದು ಮುತ್ತು ಕೊಟ್ಟಳು. ನನಗೆ ಪ್ರತಿಕ್ರಿಯಿಸಲಾಗಲಿಲ್ಲ. ಮೊದಲು ಇದನ್ನು ಅನುಭವಿಸಿ ಇದರಿಂದ ಹೊರೆಗೆ ಬಾ, ಆಮೇಲೆ ಮುಂದಿನದು ಎಂದು ಎದುರು ನಿಲ್ಲದೇ ಹೊರಟುಹೋದಳು.

ನನಗೆ ಅವಳ ಒಂದೇ ಒಂದು ಬೆಚ್ಚಗಿನ ಮುತ್ತು ಅಮಲಿನಲ್ಲಿ ತೇಲಾಡಿ ನೆಲಕ್ಕೆ ಬಿದ್ದು ಚೂರಾದ ಚಂದ್ರನ ತುದಿಯೊಂದು ತಾಕಿದಂತಿತ್ತು. ಅಂಜಲಿಯನ್ನು ಕೂಗಬೇಕು ಎನಿಸಲಿಲ್ಲ. ಅವಳನ್ನು ಕಳೆದುಕೊಂಡೆ ಎನಿಸಲಿಲ್ಲ, ಅಂಬಕ್ಕನ ಮಗಳು ಮಾಡಿದ ಪಾಪವೇನು ಎನ್ನುವ ಗೋಜಿಗೂ ಹೋಗಲಿಲ್ಲ. ಅಲ್ಲಿಯೇ ಕುಸಿದೆ. ಅಂಜಲಿ ದಿಟವಾದ ಸಹಜ ಮನುಷ್ಯ ಜೀವಿ ಅಷ್ಟೇ ಎನಿಸಿದಳು. ದೂರದಲ್ಲಿದ್ದ ಗುಲ್‍ಮೊಹರ್ ಮರದಿಂದ ಕೆಂಪು ಹೂಗಳು ಉದುರುತ್ತಿರುವುದು ಕಂಡಿತು. ಅಂಬಕ್ಕನೀಗ ರೈಲು ಇಳಿದು, ಹೊಸ ಬದುಕು ಕಟ್ಟಿಕೊಳ್ಳಲು ಹೊಸ ಗುಡಿಯ ಮುಂದೆ ತೂತು ಬಿದ್ದ ಗೋಣಿಚೀಲ ಹಾಸಿ, ಮತ್ತೆ ಎದುರಿನ ಪುಟಾಣಿ ಬಿದಿರು ಬುಟ್ಟಿಯಲ್ಲಿ ಹೂ ಬಾಳೆಹಣ್ಣು, ಲೋಬಾನ್ ಗಂಧದಕಡ್ಡಿ ಮಾರುತ್ತಿರುವಂತೆ ನೆನಪಾಯಿತು.

Share

2 Comments For "ನಿರ್ಲಿಪ್ತ
ಸಂದೀಪ್ ಈಶಾನ್ಯ
"

 1. Vasudev nadig
  1st November 2017

  ಅಂತರಂಗದ ಒಳಹೊರಗನ್ನು ಸಾರಾ ಸಗಟಾಗಿ ಕಿತ್ತು ಬಿಸಿಲಲಿ ಒಣಗಲು ಇಟ್ಟ ಕತೆ…ಇನ್ನೂ ಅರಗಿಸಿಕೊಳ್ಳ ಲಾಗ್ತಾ ಇಲ್ಲ ಈ ಕತೆ ಎತ್ತಿರುವ ಕಡು ಸತ್ಯ ಗಳನು….

  Reply
 2. ಆನಂದ್ ಋಗ್ವೇದಿ
  1st November 2017

  ಒಳ್ಳೆಯ ಕತೆ. ಅಭಿನಂದನೆಗಳು ಸಂದೀಪ ಈಶಾನ್ಯ

  Reply

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 4 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...