Share

ಟೀವಿಯಿರದಿದ್ದರೂ ಹೆಂಗಸರ ಮಾತಿನ ಚಾವಡಿಯಿತ್ತಲ್ಲ!
ನಾಗರೇಖಾ ಗಾಂವಕರ

 

 

ಬಾಲ್ಯ ಬಂಗಾರ

 

 

 

ಬಾಲ್ಯ ಯೌವನದಲ್ಲಿ ಇಲ್ಲದ ಅದ್ಯಾವುದೋ ಕೊರಗು ಮಧ್ಯವಯಸ್ಸಿನಲ್ಲಿ ಮನುಷ್ಯನ ಕಾಡುವುದು. ಅದಕ್ಕೆ ಕಾರಣ ಹಾರ್ಮೋನುಗಳ ವೈಪರೀತ್ಯವೆಂದು ವೈದ್ಯಕೀಯ ಜಗತ್ತು ವಿವರಣೆ ನೀಡಿದರೂ ಜವಾಬ್ದಾರಿಗಳ ಹಾಗೂ ಕೆಲಸದ ಒತ್ತಡಗಳಿಂದ ಜರ್ಜರಿತಗೊಳ್ಳುವ ಕಾಲವದು. ಮನಸ್ಸಿನ ಉಲ್ಲಸಿತತೆಗೆ ಕಾರಣವಾಗುವ ಸಂಗತಿಗಳ ಆದು ಬಯಸತೊಡಗುತ್ತದೆ. ಅದು ಸಿಗದಿದ್ದಾಗ ಹತಾಶೆಗೊಳ್ಳುವುದು. ಏನು ತಿಂದರೂ, ಗಳಿಸಿದರೂ, ಐಶಾರಾಮದ ಮಹಲಲ್ಲಿ ಮೃದು ತಲ್ಪದಲ್ಲಿ ಮಲಗಿದರೂ ನಿದ್ದೆ ಬಾರದು.

ಅದೇ ಬಾಲ್ಯದಲ್ಲಿ ಹುಲ್ಲಿನ ರಾಶಿಯ ಮೇಲೆ ಮಲಗಿ ನಿದ್ರಿಸಿದ ಅದೆಷ್ಟು ದಿನಗಳಿರಲಿಲ್ಲ. ಸಾಕರಿ ಕಟ್ಟು ಬಡಿಯುವ ಸಮಯದಲ್ಲಂತೂ ಮನೆ ತುಂಬಾ ಹುಲ್ಲಿನದೇ ಹಾವಳಿ. ಕುತ್ತರಿ ಬಿಚ್ಚಿ ಭತ್ತ ಸಹಿತ ಇರುವ ಹುಲ್ಲಿನ ಕಟ್ಟನ್ನು ಖಡಕಿ ಮೇಲೆ ಬಡಿಯುವ ಕಾಲ. ಸುಗ್ಗಿ ಸಮಯಕ್ಕೆ ಕೊಂಚ ಮುಂಚೆ ಬಣವೆಗಳ ಬಿಚ್ಚಿ ಹರಡಿ ಹುಲ್ಲು ತೊಳುವ ಕಾಲ. ಉಕ್ಕಲಿ ಹೊಡೆಯುವ, ಬಿದ್ದ ಭತ್ತವನ್ನೆಲ್ಲಾ ಹೆಣ್ಣಾಳುಗಳು ಕೇರುವ ಗೇರುವ, ಕೃಷಿಯ ಹತ್ತಾರು ಕೆಲಸಗಳು ಒಮ್ಮೆಲೇ ಮುಗಿಬಿದ್ದು ಕೃಷಿಕರ ಬದುಕಿನ ಕಾರ್ಯ ಬಾಹುಳ್ಯದ ಸಮಯವದು. ಕೃಷಿಯ ಬದುಕಿನಲ್ಲಿ ಇವೆಲ್ಲ ಪ್ರತಿವರ್ಷ ಬರುವ ಒಂದು ಚಕ್ರ. ಆಗೆಲ್ಲ ನಮಗೆ ಕೆಲಸಗಳು ಬಹಳವಿದ್ದರೂ ಮನೆ ತುಂಬಾ ಗದ್ದೆಯ ತುಂಬಾ ಜನರು ಓಡಾಡಿಕೊಂಡಿರುವುದೇ ಖುಷಿಯ ವಿಚಾರ. ಕೆಲಸದಾಳುಗಳಿಗೆ ಬೆಲ್ಲ ನೀರು ಕೊಟ್ಟು ಬರುವ, ಅವಲಕ್ಕಿ ಚಾ ಸಪ್ಲೈ ಮಾಡುವ ಕೆಲಸಗಳೆಲ್ಲ ಬಹಳ ಇಷ್ಟದವು. ಅವರ ಜೊತೆಗೆ ನಮ್ಮ ತಿಂಡಿಪಾಲನ್ನು ಹೊತ್ತು ಹೋಗಿ ಅಲ್ಲಿ ಅವರೊಂದಿಗೆ ಬೆರೆತು ತಿನ್ನುವುದು ಅವರ ಕಥೆ ನಗು ಜೋಕಿನಲ್ಲಿ ನಾವೂ ಶಾಮೀಲಾಗಿ ನಕ್ಕು ಹಗುರಾಗಿ ಬರುವುದು ಎಂಥಾ ಜೀವನಾನುಭವ ತಂದುಕೊಟ್ಟಿತ್ತೆಂದರೆ ಕೆಲಸಕ್ಕಿಂತ ಮಾತಲ್ಲಿ ಪ್ರವೀಣರಾಗುತ್ತಿದ್ದೆವು.

ಬಣವೆಯ ಬಿಚ್ಚಿ ಹುಲ್ಲಿನ ಪಿಂಡಿಗಳ ಮಾಡಿ ಗಂಡಾಳುಗಳು ಖಡಕಿಯ ಮೇಲೆ ಬಡಿದಾದ ಮೇಲೆ ಹೆಂಗಸರು ಆ ಪಿಂಡಿಗಳ ಮತ್ತೆ ಬಿಚ್ಚಿ ಸಣ್ಣ ಸಣ್ಣ ಕಟ್ಟುಗಳ ಮಾಡುತ್ತಿದ್ದರು. ಅದಕ್ಕೆ ಸಾಕರಿ ಕಟ್ಟು ಎಂದು ನಮ್ಮಲ್ಲಿ ಕರೆಯುವುದು ವಾಡಿಕೆ. ಆ ಸಣ್ಣ ಕಟ್ಟುಗಳಲ್ಲಿ ಗಂಡಸರು ಬಡಿಯುವಾಗ ಉದುರದೇ ಉಳಿದ ಭತ್ತಗಳ ಸಣ್ಣಕೋಲಿನಿಂದ ಬಡಿದು ಬಡಿದು ಉದುರಿಸುವುದು ಹೆಂಗಸರ ಕೆಲಸ. ಗಂಡಸರು ನಿಂತು ಭತ್ತ ಬಡಿದರೆ ಹೆಂಗಸರು ಆರಾಂ ಆಗಿ ಕೂತೇ ಕೆಲಸ. ಎದುರು ಬದಿರು ಕೂತು ಹುಲ್ಲಿನ ಕಟ್ಟು ಬಿಚ್ಚಿದ ಹಾಗೆಲ್ಲ ನಮ್ಮೂರಿನ ಮನೆಮನೆಯ ಕಥೆಗಳು, ಬ್ರಾಹ್ಮಣರ ಮನೆಯ ಕಥೆಯೂ ಸೇರಿದಂತೆ ಅಲ್ಲಿ ಬಿಚ್ಚಿಕೊಳ್ಳುತ್ತಿದ್ದವು.

ಯಾರ್ಯಾರ ಮನೆಯಲ್ಲಿ ಹೇಗ್ಹೇಗೆ? ತಿಳಿಯಬೇಕೆಂದರೆ ಅವರ ಮಾತಿಗೆ ಕಿವಿಯಾದರೆ ನಮ್ಮ ಹಳ್ಳಿಯ ಮನೆಮನೆಯ ಇತಿಹಾಸ ಸ್ಥಳಪುರಾಣಗಳು ಎಲ್ಲವೂ ತೆರೆದುಕೊಳ್ಳುತ್ತಿದ್ದವು. ಸಿನೇಮಾ ಕಥೆಗಳಲ್ಲಿಯ ನಾಯಕ ನಾಯಕಿಯರು ಖಳನಾಯಕರು ಎಲ್ಲ ನಮ್ಮೂರಿನಲ್ಲಿ ಇರುವುದು ತಿಳಿದು ಆ ಕಾಲಕ್ಕೆ ಎಳೆಯರಾದ ನಾವು ಆಶ್ಚರ್ಯಪಡುತ್ತಿದ್ದೆವು. ಆಗಾಗ ನಮ್ಮಮ್ಮ ಹೆಂಗಸರ ಪಂಚಾಯತಿ ಕೇಳುವುದು ಎಳೆಯರಾದ ನಮಗೆ ಒಳ್ಳೆಯದಲ್ಲವೆಂದೂ ಗದರುತ್ತಿದ್ದರು. ಕೆಲಕಾಲ ಎದ್ದು ಹೋದಂತೆ ಮಾಡಿ ಪುನಃ ಯಾವುದೋ ನೆವ ತೆಗೆದು ಆ ಮಾತಿನ ಚಾವಡಿಯ ಕಳದೊಳಗೆ ನಿಧಾನ ಸೇರಿಕೊಳ್ಳುತ್ತಿದ್ದೆವು. ಯಾರ ಮನೆಯಲ್ಲಿ ಹೆಚ್ಚು ತಿನ್ನುತ್ತಾರೆ. ವಾರಕ್ಕೆ ಹೆಚ್ಚು ದಿನ ಮೀನು ತರುವ ಕುಟುಂಬ ಯಾವುದು, ಬರೀ ಸೊಪ್ಪು ಸೊದೆ ತಿನ್ನುವ, ಕೆಲವೊಮ್ಮೆ ಹೊಟ್ಟೆಗೂ ತಿನ್ನದ ಖಂಜೂಷ ಕೃಪಣಾಧೀಶರು ಯಾರು? ಯಾರ ಮನೆಹೆಂಗಸು ಹೆಚ್ಚು ವೈಯ್ಯಾರಿ, ಯಾರು ಸಭ್ಯಸ್ಥೆ? ಆ ಮನೆ ಈ ಮನೆಯ ಬೇಡದ ಸಂಬಂಧಗಳು, ಹಳಸಿದ ಸಂಬಂಧಗಳು, ಯಾರ ಮನೆ ಮಗಳು ಯಾರೊಂದಿಗೆ ಓಡಿ ಹೋದಳು? ಹೀಗೆ ಹತ್ತು ಹಲವು ಸಂಗತಿಗಳು ಅಲ್ಲಿ ಪ್ರತಿ ವರ್ಷವೂ ಚರ್ಚೆಯಾಗಲೇ ಬೇಕಿತ್ತು. ಇದರೊಂದಿಗೆ ಒಳ್ಳೆಯ ಕೆಲಸ ಮಾಡಿದ ಸಜ್ಜನರ, ಹೆಚ್ಚು ಪಗಾರ ಕೊಡುವ ಒಡೆಯನ ಗುಣಗಾನ ಎಲ್ಲವೂ ಇರುತ್ತಿತ್ತು.

ಸಾಕರಿ ಕಟ್ಟು ಬಡಿಯುವ ಕೆಲಸಕ್ಕೆ ಬರುವ ಹೆಣ್ಣಾಳುಗಳಲ್ಲಿ ಒಂದೇ ಕುಟುಂಬದ ನಾಲ್ಕು ಹೆಂಗಸರು ಬರುತ್ತಿದ್ದರು. ಅವರೆಲ್ಲ ಮನೆ ಮನೆಯ ಕಥೆಗಳ ಮಹಾನ್ ಕತೆಗಾರ್ತಿಯರು. ತಮ್ಮ ಮನೆಯ ವಿಚಾರ ಬಿಟ್ಟು ಇಡೀಯ ಹಳ್ಳಿಯ ಪ್ರಪಂಚ ಜಾಲಾಡುತ್ತಿದ್ದರು. ಅದನ್ನು ಕೇಳುವ ಹುಚ್ಚು ನಮ್ಮದು. ಯಾಕೆಂದರೆ ಈಗಿನಂತೆ ಯಾವಾಗ ಬೇಕೆಂದರೆ ಆವಾಗ ಮನೋರಂಜನೆ ನೀಡುವ ಮೂರ್ಖರ ಪೆಟ್ಟಿಗೆ ಟಿ.ವಿ.ಯಾಗಲೀ ಮೊಬೈಲುಗಳಾಗಲೀ ಇರಲಿಲ್ಲ. ಅದಕ್ಕೆಂದೇ ಈ ಮಾತಿನ ಚಾವಡಿಯನ್ನು ಅಲ್ಲಿಯ ತಮಾಷೆಯನ್ನು ನಾವು ತಪ್ಪಿಸಿಕೊಳ್ಳಲು ಬಯಸುತ್ತಿರಲಿಲ್ಲ.

ಪುಸ್ತಕಗಳ ಓದುವುದು, ಆಗಾಗ ಪಟ್ಟಣಗಳಿಗೆ ಹೋಗಿ ಸಿನೇಮಾ ನೋಡುವುದು, ಸುಗ್ಗಿ ಮುಗಿದ ಮೇಲೆ ನಡೆವ ಬಯಲಾಟಗಳು, ಆಗಾಗ ಬರುವ ಥೇಟರ್ ನಾಟಕಗಳು, ಊರ ದೇವಿಯ ಪೂಜೆ ಸಮಯದಲ್ಲಿ ನಡೆವ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಳ್ಳಿಯ ಹಗರಣಗಳು ಹೀಗೆ ಮನೋರಂಜನೆಗೆ ನಿರ್ದಿಷ್ಟ ಸಮಯ ಸಂದರ್ಭಗಳು ಇದ್ದವು. ಯಾವುದಾದರೂ ಬೀದಿ ನಾಟಕವೋ ಇನ್ನಾವುದೋ ಬಂದರೂ ಸಾಕು ಊರ ಜನ ಮುಗಿಬಿದ್ದು ಬಂದು ಸೇರುತ್ತಿದ್ದರು. ಆದರಿಂದು ಹಳ್ಳಿಯ ಜೀವನ ವಿಧಾನ ಐಶಾರಾಮದ ವಿಚಾರದಲ್ಲಿ ಹಿಂದಿಗಿಂತ ಬಹಳ ಬದಲಾಗಿದೆ.

ನಾವು ತುಂಬಾ ಚಿಕ್ಕವರಿದ್ದಾಗ ನಮ್ಮೂರಿಗೆ ವಾರ್ತಾ ಇಲಾಖೆಯ ಮೋಟಾರ ಸಿನೇಮಾಗಳು ಬರುತ್ತಿದ್ದವು. ಅದು ಕೂಡಾ ಅಪರೂಪಕ್ಕೆ ಅಪರೂಪ. ಹಾಗೆ ಬಂದಾಗಲೆಲ್ಲ ಸರಕಾರ ಸಾಧನೆ ಅದೂ ಇದೂ ಬಿಂಬಿಸುವ ಚಿತ್ರಗಳ ಜೊತೆ ಒಂದು ಕಥೆಯನ್ನು ತೋರಿಸುತ್ತಿದ್ದರು. ಆಗೆಲ್ಲ ನಮಗೆ ಅದೊಂದು ದೊಡ್ಡ ವಿಸ್ಮಯ. ಹಾಗೆ ಆಗಾಗ ಊರಿನವರೇ ಪಟ್ಟಣದಿಂದ ಟಿ.ವಿ ತರಿಸಿ ಒಂದೇ ರಾತ್ರಿ ಎರಡು ಸಿನೇಮಾ ತೋರಿಸುತ್ತಿದ್ದರು.ಅದಕ್ಕೆ ತಲೆಗೆ ಐದು ಎರಡು ರೂಪಾಯಿಗಳು. ಬಯಲು ಜಾಗದಲ್ಲಿ ಟಿ.ವಿ ಇಟ್ಟು ಕ್ಯಾಸೆಟ್‍ಗಳ ಹಾಕಿ ಸಿನೇಮಾ ಪ್ರದರ್ಶನವಾಗುತ್ತಿತ್ತು. ಕೆಲವೊಮ್ಮೆ ಕರೆಂಟು ಕೈಕೊಟ್ಟರಂತೂ ಸೇರಿದ ಹೆಂಗಳೆಯರ ಬಾಯಿಂದ ವಿದ್ಯೂತ್ ಇಲಾಖೆಗೆ, ಜೊತೆ ಅಲ್ಲಿಯ ಲೈನಮ್ಯಾನ್‍ಗೆ ಹಿಡಿಹಿಡಿ ಶಾಪ ಪುಂಖಾನುಪುಂಖವಾಗಿ ಬರುತ್ತಿತ್ತು. ಅಲ್ಲಿಗೆ ತರುವ ಸಿನೇಮಾಗಳು ಹೆಚ್ಚಾಗಿ ಕೌಟುಂಬಿಕ ಸಿನೇಮಾಗಳಾಗಿರುತ್ತಿದ್ದು ಅಳುಮುಂಜಿ ಪಾತ್ರದ ಶ್ರುತಿ, ವಿನಯಾಪ್ರಸಾದ್, ಲಕ್ಷ್ಮೀ, ಮುಂತಾದವರ ಸಿನೇಮಾಗಳು ಬಂದರೆ ಸಾಕು ಹೆಂಗಸರೆಲ್ಲ ಮೈಯೆಲ್ಲಾ ಕಿವಿಯಾಗಿ ತಲ್ಲೀನರು. ಅಲ್ಲಿಯ ಖಳನಾಯಕ ನಾಯಕಿ ಪಾತ್ರಗಳಿಗೆ ಕೂತಲ್ಲಿಯೇ ಶಾಪ ಹಾಕುವ ಹೆಂಗಸರು, ಅಜ್ಜಿಯಂದಿರು ಇದ್ದು, ನಾಯಕ ನಾಯಕಿ ಯುಗಳ ಗೀತೆ ಹಾಡುತ್ತಿದ್ದರೆ ಪಾತ್ರದ ಪಾತ್ರವೇ ತಾವಾಗುವ ಪ್ರಾಯದ ತರುಣಿಯರು ಇರುತ್ತಿದ್ದರು.

ನಾವು ಹತ್ತು ಹನ್ನೆರಡು ವರ್ಷ ಪ್ರಾಯದ ಕಿಶೋರಿಯರು. ಆಗಲೇ ಕಣ್ಣುಗಳಲ್ಲಿ ಕನಸು ಉಕ್ಕುವ ಕಾಲ. ಸಿನೇಮಾ ನೋಡಿ ಬಂದ ಒಂದೆರಡು ದಿನ ನಾವು ಕನಸು ಕಾಣಲು ಪ್ರಯತ್ನಿಸುತ್ತಿದ್ದೆವು. ಅಲ್ಲಿಯ ದುಃಖದ ಸನ್ನಿವೇಶಗಳು ಸಾವು ನೋವುಗಳು ಮಾನಸಿಕ ಕ್ಷೋಭೆಯನ್ನು ನೀಡಿದ ಉದಾಹರಣೆಗಳು ಇದ್ದವು. ಸ್ವಭಾವತಃ ಭಾವಜೀವಿಯಾದ ನನಗಂತೂ ನಟಿಮಣಿಗಳ ಕಣ್ಣೀರು ಕೋಡಿ ನನ್ನ ಕಣ್ಣಲ್ಲೂ ಗಂಗೆಯನ್ನ ಹರಿಸುತ್ತಿದ್ದಿತು. ಆದರೆ ಸ್ವಲ್ಪ ದಿನಗಳಿಗೆ ಅದು ಮತ್ತೆ ಮರೆತು ಹೋಗುತ್ತಿತ್ತು. ಹೈಸ್ಕೂಲು ಓದುವ ಹೊತ್ತಿಗೆ ಪಟ್ಟಣದ ಗೆಳತಿಯರ ಮನೆಗಳಲ್ಲಿ ಟಿ.ವಿ. ವಿರಾಜಮಾನವಾಗಿತ್ತು. ಪದವಿ ಮುಗಿಯುವ ಹೊತ್ತಿಗೆ ಮನೆಗೆ ಟಿ.ವಿ ಬಂದಿತ್ತು. ದೊಡ್ಡ ಕೊಡೆ ಹೊತ್ತು. ಮತ್ತೆ ನೋಡಿದ ಸಿನೇಮಾಗಳಿಗೆ ಲೆಕ್ಕವಿಲ್ಲ. ಆಗಾಗ ಅಣ್ಣಂದಿರು ಕ್ಯಾಸೆಟ್ಟು ತಂದು ಸಿನೇಮಾ ಹಾಕುತ್ತಿದ್ದರು. ಬಾಲ್ಯದಲ್ಲಿ ತಮಾಷೆ, ಮನೋರಂಜನೆ ಹುಚ್ಚಾಟಗಳು, ಕಚ್ಚಾಟಗಳು, ಇವೇ ಬಹುದೊಡ್ಡ ಬದುಕಿನ ಸಂಪತ್ತುಗಳು. ಯಾವ ಜಂಜಾಟಗಳ ಮನಸ್ಸಿಗೆ ಹಚ್ಚಿಕೊಳ್ಳದೇ ಬಂದುದ್ದನ್ನು ಬಂದಂತೆ ಸ್ವೀಕರಿಸುವ ಗುಣ, ಕಳೆದುಕೊಂಡಿದ್ದಕ್ಕೂ ನೋವಿಗೂ ಕ್ಷಣಕಾಲದ ವ್ಯಥೆ ಮತ್ತೆ ಯಥಾ ಪ್ರವೃತ್ತಿ ಬಾಲ್ಯದ ಕಸುವು. ಅದೇ ಇಂದು ಸಣ್ಣ ಪುಟ್ಟ ಸಂಗತಿಗಳು ಮನಸ್ಸನ್ನು ಕೆಡಿಸಿ ಮೃದುತಲ್ಪವೂ ನಿದ್ದೆ ತರದು ಅಲ್ಲವೇ? ಅದಕ್ಕೇ ಬಾಲ್ಯ ಬಂಗಾರ….

——————–

ನಾಗರೇಖಾ ಗಾಂವಕರ

ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲಭಾಷಾ ಉಪನ್ಯಾಸಕಿ. ಕಥೆ, ಕವನಗಳು, ಲೇಖನಗಳು, ವಿಮರ್ಶಾ ಬರಹಗಳ ಮೂಲಕ ಪರಿಚಿತರು. ‘ಏಣಿ’, ‘ಪದಗಳೊಂದಿಗೆ ನಾನು’ ನಾಗರೇಖಾ ಅವರ ಪ್ರಕಟಿತ ಕವನ ಸಂಕಲನಗಳು.

Share

2 Comments For "ಟೀವಿಯಿರದಿದ್ದರೂ ಹೆಂಗಸರ ಮಾತಿನ ಚಾವಡಿಯಿತ್ತಲ್ಲ!
ನಾಗರೇಖಾ ಗಾಂವಕರ
"

 1. BHAGYAMMA GV Lecturer
  30th October 2017

  Really so sentimental. ತುಂಬಾ ಚೆನ್ನಾಗಿದೆ. ನಿಮ್ಮ ಈ ಲೇಖನ ನಮ್ಮ ಎಲ್ಲರ ಬಾಲ್ಯದ ಸುಂದರ ದಿನಗಳನ್ನು ನೆನಪಿಸಿ,ಆನಂದ ಭಾಷ್ಪ ತರುವಂತೆ ಮಾಡಿತು

  Reply
 2. sanjay
  31st October 2017

  thumba chennagide lekhana 🙂

  Reply

Leave a comment

Your email address will not be published. Required fields are marked *

Recent Posts More

 • 7 hours ago No comment

  ತೇಪೆಗಳೆಂದರೆ…

        ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

 • 23 hours ago No comment

  ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

          ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

 • 1 day ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

 • 2 days ago No comment

  ಇದ್ಯಾವ ಪರಿ?

        ಕವಿಸಾಲು       ಥೇಟು ನವಿಲುಗರಿಯ ಹಾಗೆ ಮನಸಿನ ಪುಟಗಳ ನಡುವೆ ಬೆಚ್ಚಗೆ ಅಡಗಿ ಮರಿಯಿಟ್ಟು ನೆನೆದು ನೇವರಿಸಿದಾಗೆಲ್ಲ ಮುದ ಕೊಡುವ ನವಿರು, ನವಿರು! ಎದುರಿಲ್ಲದೆ, ಇಡಿಯಾಗಿ ಸಿಗದೆ ಕಲ್ಪನೆಗಳ ಚಿಗುರು ಕುಡಿಗಳಲಿ ನಳನಳಿಸಿ ಬಳುಕಿ ಬಾಗಿ ಕೆನ್ನೆಯಲಿ ಕಚಗುಳಿಯಾಗಿ ಬೆಚ್ಚಗೆ ಹರಿವ ಉಸಿರು! ಹೂಬನದ ಸೊಬಗಲ್ಲಿ ಮಲ್ಲಿಗೆಯ ಅರಳಲ್ಲಿ ದಳಗಳ ಸುತ್ತುಗಳಲಿ ಹಾಸಿ ಮಲಗಿದ ಕಂಪಾಗಿ ಮೈಮನಗಳ ಆಹ್ವಾನಿಸಿ ಕರೆವ ಕಂಪಿಗೆ ...

 • 3 days ago No comment

  ಎರಡು ಕವಿತೆಗಳು

      ಕವಿಸಾಲು       ನಿನ್ನ ತೋಳ ಜೋಲಿಯಲಡಗಿರಬೇಕು ನೋಡು ತುಂಡು ಚಂದ್ರನ ಜೋಕಾಲಿ ಆಗಾಗ ಫಳ್ಳನೆ ಇಣುಕುವ ನಕ್ಷತ್ರ ಹಾಡಿನಂಥ ನಿಮ್ಮಿಬ್ಬರ ಕತೆ ನಿನ್ನ ಅನುಪಮ ನಂಬಿಕೆಯ ರಾಗ ಜಗದೇಕವೆಂಬಂತೆ ನನ್ನೆದೆ ಹಾಕುವ ತಾಳ ಮಬ್ಬಾದರೂ ಮುದ್ದುಕ್ಕಿಸುವ ಅವಳ ಮುಖ ಅಲ್ಲಿ ನಿನ್ನ ಭೋರ್ಗರೆವ ಅಳು ನಿನ್ನ ದನಿಯಲ್ಲಿನ ಅವಳ ನೋವು ಒಮ್ಮೆ ತುಣುಕು ತುಣುಕುಣುತಾ ಮದವೇರಿದ ವಿಷಕನ್ಯೆಯಂತನಿಸುವ, ಒಮ್ಮೊಮ್ಮೆ ಗುಟುಕೊಂದೊಂದೂ ಪೇರಿಸಿಟ್ಟುಕೊಂಡು ವಿಷವೇರಿ ...


Editor's Wall

 • 17 November 2017
  1 day ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

 • 14 November 2017
  4 days ago No comment

  ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

      ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

 • 09 November 2017
  1 week ago No comment

  ಕೆಂಡದಂಥ ಕಾವ್ಯ

  ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...

 • 07 November 2017
  2 weeks ago One Comment

  ಕಾಲದೊಂದೊಂದೇ ಹನಿಯು ಹರಿದುಹೋಗುವ ಸದ್ದು

  ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ಹಂಚಲು ತೊಡಗಿದೆ.  * * *         ನಾವು ಓಡುತ್ತಿರುವ ರಭಸಕ್ಕೆ ನಮ್ಮ ಅರಿವಿಗೇ ಬರುವುದಿಲ್ಲ, ಅದ್ಯಾವ ಹೊತ್ತಲ್ಲಿ ಜೀವಶಕ್ತಿ ತನ್ನ ಒಂದು ...

 • 06 November 2017
  2 weeks ago No comment

  ಕಾಣದ ಕಡಲಿನ ಮುಂದೆ…

  ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ಹಂಚಲು ತೊಡಗಿದೆ.  * * *         ಕಾವ್ಯದ ಸೌಂದರ್ಯ ಇರುವುದೇ ಅದರ ಅಮೂರ್ತತೆಯಲ್ಲಿ. ಕವಿತೆಯನ್ನು ಬರೆದ ಕವಿಗಿಂತ ಅದನ್ನು ಓದಿದವರಿಗೇ ಒಮ್ಮೊಮ್ಮೆ ...