Share

ಜಗಕೆ ಅನಾಕರ್ಷಕನಾಗುವ ಸುಖದಲ್ಲಿ…
ಅರವಿಂದ ಚೊಕ್ಕಾಡಿ

 

 

 

ಜಗತ್ತು ದೂರವಾದಂತೆ ವ್ಯಕ್ತಿ ತನಗೆ ತಾನೇ ಹತ್ತಿರವಾಗುತ್ತಾನೆ. ಆಗ ತನ್ನನ್ನು ನಿರಾಕರಿಸಿದವರನ್ನೂ ಪ್ರೀತಿಸಲು ಸಾಧ್ಯವಾಗುತ್ತದೆ.

 

 

 

 

 

ಸಿಕ್ಕಾಪಟ್ಟೆ ಕೆಲಸ ಮಾಡಿ ಸುಸ್ತಾಗಿತ್ತು. ಮನಸಿಗೂ ಸ್ವಲ್ಪ ಕಿರಿಕಿರಿಯಾಗಿತ್ತು. ಗೆಳೆಯ ವಾಸುದೇವ ನಾಡಿಗ್ ಅವರ ಹತ್ತಿರ ಅವರ ಕೆಲವು ಕವಿತೆಗಳನ್ನು ತರಿಸಿಕೊಂಡು ಓದಿದೆ.

ಜಗಕೆ ಅನಾಕರ್ಷಕನಾಗುವ ಸುಖ- ಎಂಬ ಕವಿತೆ ಆಕರ್ಷಕವಾಗಿ ಸೆರೆ ಹಿಡಿಯಿತು. ಅರೆ, ಇದೇನಿದು ಅನಾಕರ್ಷಕನಾಗುವುದರಲ್ಲಿ ಸುಖವಿರುವುದು ಎಂದು ಅನಿಸಿತು. ಓದುತ್ತಾ ಹೋದಂತೆ ಕವಿತೆ ನಿಗೂಢದ ಅನುಸಂಧಾನ ಮಾಡಲು ಹೊರಟಿರುವಂತೆ ಭಾಸವಾಯಿತು…

“ದಿನೇ ದಿನೇ ಅನಾಕರ್ಷಕನಾಗುತ್ತಿರು ಅರಿವು ಒಳಗೇ ಅಂಕುರಿಸುತ್ತಿದೆ” ಎನ್ನುವ ಪ್ರಾರಂಭದ ಸಾಲುಗಳೇ ವೈರುಧ್ಯಗಳ ಮುಖಾಮುಖಿಯಲ್ಲಿ ಸೆರೆ ಹಿಡಿಯುತ್ತವೆ. ಸಾಮಾನ್ಯ ಗ್ರಹಿಕೆಯಲ್ಲಿ ಅನಾಕರ್ಷಣೆ ಋಣಾತ್ಮಕವಾದದ್ದು. ಅರಿವು ಧನಾತ್ಮಕವಾದದ್ದು. ಅವೆರಡರ ಮುಖಾಮುಖಿ ಶೀರ್ಷಿಕೆಯಲ್ಲಿ ತೋರುವ ಹತಾಶೆಯನ್ನು ಹೊಸ ಭರವಸೆಯಾಗಿ ಹೊಳೆಯಿಸುತ್ತದೆ. ಕವಿತೆ ಬೆಳೆದಂತೆಲ್ಲ ಹೊರಜಗತ್ತಿನೊಂದಿಗಿನ ಅನಾಕರ್ಷಣೆಯು ಒಳಜಗತ್ತು ಬೃಹತ್ತಾಗಿ ತೆರೆದುಕೊಳ್ಳಲು ಬೆಳಕಿಂಡಿಯಾಗಿ ಕೆಲಸ ಮಾಡುವುದನ್ನು ಕಾಣಬಹುದು.

“ನನ್ನ ನಡೆ ನುಡಿ ಚಹರೆ ಕ್ಲೀಷೆಯಾದ ಗಳಿಗೆಗೆ….” ಎನ್ನುವಲ್ಲಿ ಅದು ಒಳಜಗತ್ತಿನ ಹುಡುಕಾಟಕ್ಕಿಂತ ಹೆಚ್ಚಾಗಿ ಹೊರಜಗತ್ತಿನ ವಿಡಂಬನೆಯಾಗಿ ಅರ್ಥಸೃಷ್ಟಿಯಾಗುವುದನ್ನು ಕಾಣಬಹುದು. ನಾವೇನು ಮಾಡುತ್ತಿದ್ದೇವೆಂಬ ಕಲ್ಪನೆ ಇಲ್ಲದೆ ಮಾಡುವ, ಏನು ಮಾತನಾಡುತ್ತಿದ್ದೇವೆ; ಮಾತು ಯಾವ ಪರಿಣಾಮವನ್ನು ಬೀರಬೇಕು ಎಂದು ಯೋಚಿಸದೆ ಮಾತನಾಡುವ ಯಾಂತ್ರಿಕ ಬದುಕಿನ ತಾಂತ್ರಿಕ ನಡೆವಳಿಕೆಗಳನ್ನೆಲ್ಲ ಕವಿತೆ ಅರಿವಿನ ಬೆಳಕಿನಲ್ಲಿ ಒರೆಗೆ ಹಚ್ಚಿ ವಿಡಂಬನೆಯನ್ನು ಸೃಷ್ಟಿಸುತ್ತದೆ. ನಾವೇ ವಿಡಂಬನೆಯ ವಸ್ತುವಾಗಿದ್ದೇವೆ ಎಂದು ನಮಗೇ ಗೊತ್ತಾಗುವುದು ‘ಅನಾಕರ್ಷಣೆಯ ಅರಿವು ಒಳಗೆ ಅಂಕುರಿಸಿದಾಗ’.

ಅಂತಹ ಅರಿವು ನಮ್ಮೊಳಗೆ ಇಲ್ಲದಿದ್ದಾಗ ಹೊರಜಗತ್ತಿನ ಪರಿಣಾಮ ಆಗುವುದಿಲ್ಲವೆಂದು ಭಾವಿಸುವುದು ತಪ್ಪು. ಆಕರ್ಷಿಸುವುದನ್ನೆ ಕಾಯಕ ಮಾಡಿಕೊಂಡು ಹೋದಾಗ ಆಕರ್ಷಿಸುವ ನಡೆಗಳೇ ಜಗತ್ತಿಗೆ ಅನಾಕರ್ಷಣೆಯಾಗುತ್ತದೆ. ಆಗ ಅದು ತಿರಸ್ಕರಿಸಲು ತೊಡಗುತ್ತದೆ. ತಿರಸ್ಕಾರದ ಪರಿಣಾಮ ಒಳಗಿನ ಬೆರಗುಗಳನ್ನು ಕಂಡುಕೊಳ್ಳಲು ಪ್ರೇರಣೆಯಾಗುವುದನ್ನು “ಒಳಗನ್ನು ರುಚಿಗೊಳಿಸಹೋದೆ” ಎಂಬ ಸಾಲು ಹೇಳಿದರೆ ಅದರ ಮುಂದಿನ ಸಾಲು ಇನ್ನೂ ಪರಿಣಾಮಕಾರಿಯಾಗಿದೆ:

“ಅನಾಕರ್ಷಣೆಯ ಕಟುಸತ್ಯ ಊಳುತ್ತಿದೆ ಹಾಳುಬಿದ್ದ ಹೊಲಮನವನ್ನು…….”

ಇಲ್ಲಿ‌ ಮನಸೆಂಬುದೇ ಒಂದು ಹೊಲ. ಅದರ ಉಳುಮೆಯಾದಾಗಲೆ ಅಲ್ಲಿ ಬೆಳೆ ತೆಗೆಯಲು ಸಾಧ್ಯ. ಮನಸೆಂಬ ಹೊಲವನ್ನು ಉಳುಮೆ ಮಾಡುವುದು ಕಟು ಸತ್ಯವೆಂಬ ಸಾಧನ ಎಂಬ ಕಲ್ಪನೆ ನಿಗೂಢತೆಯನ್ನು ಶೋಧನೆಗೆ ಒಳಪಡಿಸುತ್ತದೆ. ಬರಿಯ ಮಣ್ಣಿನಂತೆ ಕಾಣುವ ಹೊಲದಲ್ಲಿ ಏನೆಲ್ಲ ಇಲ್ಲ! ಇಂತಾದ್ದೇ ಇದೆ, ಇಂತಾದ್ದು ಇಲ್ಲ ಎನ್ನಲು ಸಾಧ್ಯವಿಲ್ಲ. ಹೊಸ ಸೇರ್ಪಡೆಗಳು, ಪಳೆಯುಳಿಕೆಗಳು ಎಲ್ಲವೂ ಇರುತ್ತವೆ. ಮನಸೂ ಹಾಗೆಯೇ. ಬದುಕಿನ ಹಿತಕಾರಿ ಅಹಿತಕಾರಿ; ಇವೆರಡೂ ಅಲ್ಲದ ಎಲ್ಲ ಅನುಭವಗಳೂ ಅದರಲ್ಲಿವೆ. ಜಗತ್ತಿನ ಮೊದಲ ಮಾನವನ ಅನುಭವಗಳ ನೆನಪಿನ ಕೋಶದಿಂದ ತೊಡಗಿ ಇತಿಹಾಸ, ಪುರಾಣ, ಕಲ್ಪನೆ, ಚಿಂತನೆ, ವಿಕಾಸ-ಅವನತಿಗಳೆಲ್ಲವೂ ಮನಸಿನಲ್ಲಿವೆ. ಈ ಎಲ್ಲವನ್ನು ಸೃಷ್ಟಿಸಿದ್ದೂ ಮನುಷ್ಯನ ಮನಸೇ. ನಾಶ ಮಾಡಿದ್ದೂ ಮನುಷ್ಯನ ಮನಸೇ. ಆ ಮನಸೀಗ ಉಳುಮೆಗೊಳಗಾಗದ ಹೊರತು ಹೊಸಸೃಷ್ಟಿ ಸಾಧ್ಯವಿಲ್ಲ ಎಂಬ ಭಾವವನ್ನು ರೂಪಿಸುವುದು ಅನಾಕರ್ಷಣೆ ಎಂಬ ಶಕ್ತಿ.

“ಮೊದಲೆಲ್ಲ ಹೀಗಿರಲಿಲ್ಲ ಮಾತುಮಾತಿಗೆ ಮೋಹಕ್ಕೊಳಗಾದೆ” ಎನ್ನುವ ಮಾತಿನ ಲಯ ಉಳುಮೆಯ ಲಯಕ್ಕೆ ಹೊಂದಿಕೊಂಡು ಒಳಜಗತ್ತಿಗೆ ಪ್ರವೇಶಿಸುವ ನವಿರು ಭಾವಗಳನ್ನು ಹುಟ್ಟುಹಾಕುತ್ತದೆ. ಇಲ್ಲಿ ಮತ್ತೆ ವೈರುಧ್ಯಗಳ ಮುಖಾಮುಖಿ.ನಿಜವಾಗಿ-“ಮಾತುಮಾತಿಗೆ ಮೋಹಕ್ಕೊಳಗಾದೆ ಮೆಚ್ಚುಗೆಯ ಬಲೆಗಳಲ್ಲಿ ಮಿಕನಾದೆ ಹೊಗಳಿಕೆಯ ಶೂಲದಲ್ಲಿ ಸಿಲುಕಿದೆ….” ಎನ್ನುವಾಗ ಪಶ್ಚಾತ್ತಾಪದ ಭಾವಸ್ಪುರಣ ಆಗಬೇಕಿತ್ತು. ಆದರೆ ಇಲ್ಲಿ ಪಶ್ಚಾತ್ತಾಪವಿಲ್ಲ. ನಮಗೆ ಸಂಬಂಧವೇ ಪಡದಿರುವ ವಿಷಯವನ್ನು “ಹೀಗೀಗೆಲ್ಲ ಆಗಿತ್ತು ಕಣಯ್ಯ” ಎಂದು ಹೇಳುವಾಗ ಇರುವ ಸರಾಗತೆ ಇದೆ. ನನ್ನಿಂದ ನನ್ನನ್ನು ನಾನು ಪ್ರತ್ಯೇಕಿಸಿಕೊಂಡು ನೋಡಬಲ್ಲವನಾದಾಗ ಮಾತ್ರ ಈ ಸರಾಗತೆ ಸಾಧ್ಯ. ಹೊರಬದುಕಿನ ಅನಾಕರ್ಷಣೆಯಿಂದ ಈ ಮನಸ್ಥಿತಿ ಸಾಧಿಸಲ್ಪಟ್ಟಿಲ್ಲ. ಹೊರಬದುಕಿನ ಅನಾಕರ್ಷಣೆಯು ಒಳಬದುಕಿನ ಶೋಧನೆಯ ಕ್ರಿಯಾಶೀಲತೆಗೆ ಪ್ರೇರಣೆ ಕೊಟ್ಟದ್ದರಿಂದ ಈ ಮನಸ್ಥಿತಿ ಸಾಧ್ಯವಾಗಿದೆ ಎನ್ನುವುದು ಕವಿತೆಯ ಮಹತ್ವದ ಭಾಗ. ನಾವು ಎಲ್ಲವನ್ನೂ ಹೊರಜಗತ್ತಿನಲ್ಲೆ ಕೊನೆಗೊಳಿಸಿಕೊಂಡು ಒಳಜಗತ್ತನ್ನು ಖಾಲಿಯಾಗಿರಿಸಿಕೊಂಡಿರುವ ಸಮಯದಲ್ಲಿ ಒಳಜಗತ್ತಿನ ಕಡೆಗೆ ಕ್ರಿಯಾಶೀಲರಾಗಲು; ಆ ಕ್ರಿಯಾಶೀಲತೆಯಿಂದ ಮೋಹದ ಪೊರೆಯನ್ನು ಕಳಚಿಕೊಂಡು ಪ್ರೀತಿಯ ಕಡೆಗೆ ಚಲಿಸುವಾಗ ಉಂಟಾಗುವ ಚೇತೋಹಾರಿ ಸ್ಥಿತಿಯನ್ನು ಈ ಭಾಗವು ಸೂಚಿಸುತ್ತದೆ.

“ಅವರ ಇಷ್ಟದ ಬೆಚ್ಚಗಿನ ಗೂಡೊಳಗೆ ತಣ್ಣನೆಯ ನಿದ್ದೆ”-ಎನ್ನುವುದು ಹೊರ ಜಗತ್ತಿನಲ್ಲಿ ನಮಗರಿವಿಲ್ಲದಂತೆಯೆ ಬೆಳೆಯುವ ಮೋಹವು ನಮ್ಮತನವನ್ನು ಇನ್ನೊಬ್ಬರ ಕೈಗೆ ಕೊಟ್ಟು ನಮ್ಮತನದ ಬಗ್ಗೆ ಎಚ್ಚರ ಕಳೆದುಕೊಳ್ಳುವುದನ್ನು ತಿಳಿಸುತ್ತದೆ. “ನಿಂತರೆ ಕೂತರೆ ಸುರಿಸುತ್ತಿದ್ದವರ ಮಾತ ಹಿತ ಸೊಂಪಾಗಿ ಬೆಳೆಯುತ್ತಿದ್ದೆ” ಎನ್ನುವಲ್ಲಿ ಇವನು ಬೆಳೆದುದೆಲ್ಲ ಅವರದನ್ನೆ ಹೊರತು ತನ್ನದನ್ನಲ್ಲ ಎನ್ನುವ ಸ್ವವಿಡಂಬನೆ ಇದೆ. ಯಾಕೆ? ಬೆಳೆಯಬೇಕಾದರೆ ಉಳುಮೆ ನಡೆದು ನೆಲ ಹಸನಾಗಬೇಕು.ಅದನ್ನು ಹಸನು ಮಾಡುವ ಬದಲು ಇವನು ತಣ್ಣಗೆ ನಿದ್ದೆ ಮಾಡಿದ್ದಾನೆ. ಈಗ ಉಳುಮೆಗೆ ತೊಡಗಿದಾಗ ತನ್ನ ಬಗ್ಗೆ ತಾನೆ ನಗುತ್ತಾ ಈ ಮಾತನ್ನು ಹೇಳಿಕೊಳ್ಳುವಲ್ಲಿ ಹುಟ್ಟುವ ಸೌಂದರ್ಯ ಹಿತವಾಗಿ ಸಹೃದಯನನ್ನು ತಟ್ಟಿ ಎಬ್ಬಿಸುತ್ತದೆ.

ಜಗತ್ತಿಗೆ ನಾವು ಬೇಕಾಗುವುದು ಅದು ಹೇಳಿದ್ದನ್ನು ಮಾಡುವುದಕ್ಕಾಗಿ. ಆಗ ಜಗತ್ತು ಪ್ರಶಂಶಿಸುತ್ತದೆ. ಯಾವಾಗ ನಮ್ಮತನವನ್ನು ಕಂಡುಕೊಳ್ಳುತ್ತೆವೋ ಆಗ ಅದೇ ಎದುರಾಗುತ್ತದೆ ಎಂಬುದನ್ನು “….ಹೊರವಸಂತನನ್ನು ಅಪ್ಪಿ ಒಳ ಅಗ್ನಿಯನ್ನು ಬಿರಿದ ನೆಲವನ್ನು….” ಮೂದಲಿಸಲು ತೊಡಗಿದಲ್ಲಿ ಕಾಣಬಹುದು.ಪ್ರತಿಯೊಬ್ಬನಲ್ಲೂ ಒಳಗೆ ಅಗ್ನಿಯೇ ಇದೆ. ಅಗ್ನಿ ತನ್ನನ್ನು ತಾನು ಶುದ್ಧಗೊಳಿಸಿಕೊಳ್ಳುವುದರ ಸಂಕೇತ. “ಒಳದೋಷಗಳ ರಾಶಿ ಹಾಕಿಕೊಂಡು” ಬಿರಿದ ನೆಲದಿಂದ ಬಂದ ಅಗ್ನಿಯಿಂದ ಶುದ್ಧಗೊಳಿಸಲು ಹೊರಟಾಗ ಎಲ್ಲರೂ ದೂರವಾಗಿ ಜಗತ್ತಿಗೆ ಅನಾಕರ್ಷಕನಾದದ್ದು ತನ್ನ ಉತ್ಕರ್ಷದ ಹಾದಿಯೂ ಆಗಿ ಪರಿಣಮಿಸುತ್ತದೆ. ಜಗತ್ತು ದೂರವಾದಂತೆ ವ್ಯಕ್ತಿ ತನಗೆ ತಾನೇ ಹತ್ತಿರವಾಗುತ್ತಾನೆ. ಆಗ ತನ್ನನ್ನು ನಿರಾಕರಿಸಿದವರನ್ನೂ ಪ್ರೀತಿಸಲು ಸಾಧ್ಯವಾಗುತ್ತದೆ ಎಂಬುದನ್ನು “ನನ್ನನ್ನು ನನಗೆ ದೊರಕಿಸಿಕೊಟ್ಟರು” ಎಂಬ ಸಾಲು ಹೇಳುತ್ತದೆ. ಆಗ ಪ್ರೀತಿಯ ಪ್ರಸ್ತಾಪ ಬರುತ್ತದೆ. ಶಬ್ದಗಳನ್ನು ಬಹಳ ಬಿಗಿಯಾಗಿಯೇ ಬಳಸುವ ನಾಡಿಗ್ ಕವಿತೆಯ ಬರೆಹದ ಕೊನೆಯಲ್ಲಿ ಮಾತ್ರ ‘ಪ್ರೀತಿ’ಯನ್ನು ಬಳಸುತ್ತಾರೆ. “ಮಾತು ಮಾತಿಗೆ (ಹೊಗಳಿಕೆಯ ಮೋಹ) ಮೋಹಕ್ಕೊಳಗಾದ” ಸ್ಥಿತಿಯನ್ನು “ಪ್ರೀತಿಸುತ್ತಿದ್ದವರ ದ್ವೇಷ ದ್ವೇಷಿಸುತ್ತಿದ್ದವರ ಪ್ರೀತಿ” ಅರ್ಥವಾದಲ್ಲಿ ನಿಂತು ನೋಡಿದಾಗ ತನ್ನನ್ನು ಮೋಹದಲ್ಲಿ ಸಿಲುಕಿಸುವುದಕ್ಕಾಗಿ ಪ್ರೀತಿಯ ಬಲೆ ಹೆಣೆಯಲ್ಪಡುತ್ತಾ ಹೋಗಿ; ಅದು ಗೊತ್ತಾದಾಗಲೂ ಎಲ್ಲರನ್ನೂ ಪ್ರೀತಿಸಬಲ್ಲ ಸ್ಥಿತಿಯ ನಿರ್ಮಾಣವಾಗುತ್ತದೆ. ಪ್ರೀತಿ ಅರ್ಥವಾಗುವುದು ತಡವಾಗಿ; ಮನವೆಂಬ ಹೊಲವನ್ನು ಉಳುಮೆ ಮಾಡಲು ಹೊರಟಾಗ. ಹೊರಜಗತ್ತಿನಿಂದ ಬೇರೆಯಾಗಿ ನಿಂತು ನಮ್ಮ ಒಳಗನ್ನೆಲ್ಲ ಜಾಲಾಡಿ ನಮಗೆ ನಾವೇ ಹೊಸ ಮನುಷ್ಯರಾದ ಅನುಭವವನ್ನು ಪಡೆಯಲು ಈ ಕವಿತೆಯ ಓದು ಸಾಕು!

—————–

ಅರವಿಂದ ಚೊಕ್ಕಾಡಿ

ಊರು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆ. ಅಧ್ಯಾಪಕರಾಗಿರುವ ಚೊಕ್ಕಾಡಿ, ತಮ್ಮ ವಿಮರ್ಶೆ ಮತ್ತು ಚಿಂತನಶೀಲ ಬರಹಗಳಿಗಳಿಂದ ಪರಿಚಿತರು.

Share

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 4 days ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

 • 6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 1 week ago No comment

  ಕೈಯ ಕನ್ನಡಿ ಹಿಡಿದು…

        ಕವಿಸಾಲು       ಕಾಲವೊಂದಿತ್ತು… ಕೈಯ ಕನ್ನಡಿ ಹಿಡಿದು ಕುರುಳ ತಿದ್ದುವ ನೀರೆ ನಾನಾಗ.. ದಶಕಗಳ ಕಾಲ ಸಂದಿದೆ… ಈಗ, ಆ ಕನ್ನಡಿಯೂ ಇಲ್ಲ… ಆ ಚೆಲುವಿನ ಮೋಡಿಯೂ ಇಲ್ಲ.. ನೆರಿಗೆ ತುಂಬಿದ ಕೈ.. ನರೆಗೂದಲು ತುಂಬಿದ ಬೆಳ್ಳಿಬುಟ್ಟಿ ತಲೆ.. ಆಸರೆ ಬಯಸುವ ದೇಹ… ಪ್ರೀತಿಗಾಗಿ ಕಾತರಿಸುವ ಕಂಗಳು… ನಗುವ ಹುಡುಕಿ ಬಿರಿಯಲೆಳಸುವ ಬೊಚ್ಚು ಬಾಯಿ‌.. ‌ಹೃದಯದಾಳದಿಂದ ಬಂದರೂ ನಾಲಿಗೆಯಡಿಯಲ್ಲಿ ಹೇಳಬಯಸುವ ನುಡಿಗಳು ...

 • 1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...


Editor's Wall

 • 15 February 2018
  6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  1 week ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  1 week ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...

 • 08 February 2018
  2 weeks ago No comment

  ಇದು ಕ್ರಾಂತಿ ಪರ್ವ

                    ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ.   ಮೊನ್ನೆ ಮನ್ಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ) ನಿರ್ದೇಶನದ ‘ಹರಿವು’ ಚಿತ್ರ ನೋಡುವಾಗ ಅದೆಷ್ಟು ಸಲ ಕನ್ನಡಕ ತೆಗೆದು ಕಣ್ಣೊರೆಸಿಕೊಂಡೆನೋ! ಆಶಾ ಬೆನಕಪ್ಪ ಅವರು ಪ್ರಜಾವಾಣಿಯಲ್ಲಿ ಬರೆದ ...