Share

ಕಾಲದೊಂದೊಂದೇ ಹನಿಯು ಹರಿದುಹೋಗುವ ಸದ್ದು
ದೀಪಾ ಫಡ್ಕೆ

ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ. 

ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ಹಂಚಲು ತೊಡಗಿದೆ. 

*

*

*

 

 

 

 

ನಾವು ಓಡುತ್ತಿರುವ ರಭಸಕ್ಕೆ ನಮ್ಮ ಅರಿವಿಗೇ ಬರುವುದಿಲ್ಲ, ಅದ್ಯಾವ ಹೊತ್ತಲ್ಲಿ ಜೀವಶಕ್ತಿ ತನ್ನ ಒಂದು ಕಾಲನ್ನು ಹೊರಗಿಟ್ಟಿತು ಎಂದು.

 

 

 

 

‘ಎಲ್ಲಿ ಹೋದರವರು ಇಲ್ಲೇ ಇದ್ದವರು…ಗಾಳಿಯಾಗಿ ಸುಳಿದು ಉಸಿರ ನೀಡಿದವರು’ -ಮನುಷ್ಯ ಶರೀರದ ಬ್ರಹ್ಮವಾದ ಜೀವಶಕ್ತಿಯನ್ನು ಸಂಬೋಧಿಸಿ, ಹೀಗೊಂದು ಮನಸ್ಸಿಗೆ ಅತ್ಯಂತ ಆಪ್ತಸ್ಪರ್ಶ ಕೊಡುವಂತಹ, ಮುದುರಿದ್ದ ಪ್ರಾಣಕ್ಕೆ ಮತ್ತೆ ಚೈತನ್ಯ ತುಂಬುವಂತಹ ಸಾಲುಗಳನ್ನು ರಚಿಸಿ ಆ ಮೂಲಕ ಮನುಷ್ಯದೇಹದ ಜೀವಶಕ್ತಿಯ ಮಹತ್ವವನ್ನು ಗುರುತಿಸಿದವರು, ಮುಕ್ತಛಂದದ ಕವಿಯೆಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಸುಬ್ರಾಯ ಚೊಕ್ಕಾಡಿಯವರು. ಉಸಿರು, ಸ್ಪರ್ಶ, ಶ್ವಾಸ, ಚೈತನ್ಯ, ವೀರ್ಯ, ಫಲ, ಸೃಷ್ಟಿ, ಮರುಸೃಷ್ಟಿ, ಎಚ್ಚರ, ಮಹತ್ವಾಕಾಂಕ್ಷೆ, ರತಿ ಹೀಗೆ ಹತ್ತಾರು ರೂಪಗಳಲ್ಲಿ ನಮ್ಮ ದೇಹ ಮತ್ತು ಮನಸ್ಸನ್ನು ನಿರಂತರ ಬದುಕಿಸುವ ಜೀವಶಕ್ತಿ, ಬಂಟಮಲೆಯ ತಪ್ಪಲಿನಲ್ಲಿ ನಿರಾತಂಕವಾಗಿ ಮೌನದಲ್ಲೇ ಸಂವಾದಿಸುವಂತೆ ಕಾಣುವ ಸುಬ್ರಾಯ ಚೊಕ್ಕಾಡಿಯವರಿಗೆ, ಸೋಜಿಗವಾಗಿ ಕಂಡು ಅಕ್ಷರ ಕಟ್ಟುವ ಪ್ರಾಣವಾಗಿ ಗೋಚರಿಸುತ್ತದೆ. ನಿಸರ್ಗದ ಅಸ್ಪಷ್ಟ ಶಬ್ದಗಳಿಗೆ ಅಕ್ಷರದ ಅರ್ಥ ಕಟ್ಟುವ ದಕ್ಷಿಣಕನ್ನಡದ ಸುಳ್ಯ ತಾಲೂಕಿನ ಸುಬ್ರಾಯ ಚೊಕ್ಕಾಡಿಯವರು ನಮ್ಮ ನಾಡು ಕಂಡ, ಸ್ವೋಪಜ್ಞ ಕವಿಗಳಲ್ಲಿ ಒಬ್ಬರು.

ಚೊಕ್ಕಾಡಿಯವರ ಹಾಡಿನ ಲೋಕವನ್ನು ಗಮನಿಸಿದರೆ ಪ್ರೇಮ ಸಫಲತೆ, ಶೃಂಗಾರ ತುಂಬಿದ ವಿರಹ, ನಾಡುನುಡಿಯ ಕಳಕಳಿ, ಮುಖ್ಯವಾಗಿ ಪ್ರಕೃತಿಯೆಡೆಗೆ ಗೌರವ, ಕಳೆದುಹೋದ ಬಾಲ್ಯದ ದಿನಗಳ ನೆನಪು ಅಲ್ಲದೇ ಸುತ್ತಲಿನ ಬದಲಾವಣೆಗಳೆಡೆಗೂ ಕಾಳಜಿ ಕಾಣುತ್ತದೆ. ಸೂಕ್ಷ್ಮವಾಗಿ ಪ್ರತಿಯೊಂದನ್ನು ತಮ್ಮ ಅನುಭವಸ್ಥ ಕಣ್ಣುಗಳಿಂದ ನೋಡುತ್ತಾ ಸಾಗುವಾಗ ಅವರಿಗೆ ಮನುಷ್ಯ ಜೀವನದ ಇನ್ನೊಂದು ದರ್ಶನವೂ ಆಗುವ ಅರಿವು ಕೆಲವು ಹಾಡುಗಳಲ್ಲಿ ಪ್ರತಿಧ್ವಿನಿಸಿದೆ. ಸುತ್ತಲೂ ಇರುವ ಪ್ರಕೃತಿಗೆ ಪ್ರತಿ ವರ್ಷವೂ ಹೊಸದಾಗುವ, ಆ ಮೂಲಕ ಹೊಸ ಬದುಕು ಅನುಭವಿಸುವ ಅವಕಾಶ ಇದ್ದರೆ ಮನುಷ್ಯ ಮಾತ್ರ ವರ್ಷದಿಂದ ವರ್ಷಕ್ಕೆ ಹಳತಾಗುತ್ತಾ ಸಾಗುತ್ತಾನೆ. ಬೇಂದ್ರೆಯವರು ಅಂದಂತೆ ಒಂದೇ ಬಾಲ್ಯ ಒಂದೇ ಯೌವನ ಮನುಷ್ಯನಿಗೆ ಕೊಟ್ಟು ನಿಸರ್ಗ ವರ್ಷವರ್ಷವೂ ಹೊಸದಾಗುವ ಅಚ್ಚರಿಯನ್ನು ತನ್ನ ಪಾಲಿಗಿಟ್ಟುಕೊಂಡಿದೆ. ಚೊಕ್ಕಾಡಿಯವರಿಗೂ ಇದು ಉತ್ತರವಿಲ್ಲದ ಪ್ರಶ್ನೆಯಾಗಿ ಕಂಡುಬಂದಿರುವ ನಿದರ್ಶನ ಈ ಭಾವಗೀತೆಯಲ್ಲಿ.

ಎಲ್ಲಿ ಹೋದರವರು
ಇಲ್ಲೇ ಇದ್ದವರು
ಗಾಳಿಯಾಗಿ ಸುಳಿದು
ಉಸಿರ ನೀಡಿದವರು

ಕವಿ ಸುಬ್ರಾಯ ಚೊಕ್ಕಾಡಿ ಅವರೊಂದಿಗೆ ದೀಪಾ ಫಡ್ಕೆ

ಸೂರ್ಯಕಿರಣ ಹಿಡಿದು
ಕಣ್ಣ ತುಂಬಿದವರು
ಬೆಳದಿಂಗಳ ತಂಪು
ಹೃದಯಕೆ ಎರೆದವರು

ಇಂದ್ರಚಾಪವೇರಿ
ನಾಟ್ಯವಾಡಿದವರು
ತಾರೆಗಳನ್ನು ಹೆಕ್ಕಿ
ಶಿರದಲಿ ಇಟ್ಟವರು

ಗುರಿಯ ಕಡೆಗೆ ಹೆಜ್ಜೆ
ಇಡಲು ಕಲಿಸಿದವರು
ಎಡವದಂತೆ ಕೈಯ
ಹಿಡಿದು ನಡೆಸಿದವರು

ಬಾಳಿಗೆ ಭರವಸೆಯ
ನೆರಳ ನೀಡಿದವರು
ಈಗ ಕಾಣೆಯಾಗಿ
ಶೂನ್ಯ ಹರಡಿದವರು

ನೂರಾರು ಅದ್ಭುತವೆನ್ನಿಸುವ ಹಾಡುಗಳನ್ನು, ಚಿತ್ರಗೀತೆಗಳನ್ನು, ಕವನಗಳನ್ನು ಕೇಳಿ, ಓದಿ ಮನಸ್ಸು ತುಂಬಿದ್ದರೂ ಸುಬ್ರಾಯ ಚೊಕ್ಕಾಡಿಯವರ ಈ ಹಾಡಿನ ಗುಂಗು ಬಹಳ ಕಾಲ ತಲೆಯಲ್ಲಿ ತುಂಬಿತ್ತು. ಆರಂಭದಲ್ಲಿ ಈ ಹಾಡನ್ನು ವ್ಯಕ್ತಿಕೇಂದ್ರಿತ ಕಲ್ಪನೆಯಲ್ಲಿ ನೋಡಿದ್ದೆ. ಅದು, ನಾನು ಪಿಎಚ್‍ಡಿ ಅಧ್ಯಯನ ನಡೆಸುತ್ತಿದ್ದ ಹೊತ್ತು. ಇನ್ನೇನು ಒಂದೆರಡು ವರ್ಷಗಳಲ್ಲಿ ನನ್ನ ಅಧ್ಯಯನ ಮುಗಿಯುವ ಹಂತದಲ್ಲಿತ್ತು. ಆಗ ಹಠಾತ್ತಾಗಿ ನನ್ನ ಅಧ್ಯಯನದ ಮಾರ್ಗದರ್ಶಕರಾಗಿದ್ದ, ನನ್ನ ಸಾಹಿತ್ಯದ ಗುರುಗಳಾದ ಭಾಷಾವಿಜ್ಞಾನದ ತಜ್ಞ ಡಾ. ಸಿ ಎಸ್ ರಾಮಚಂದ್ರ ಅವರು ಹೃದಯಾಘಾತಕ್ಕೀಡಾಗಿ ನಿಧನ ಹೊಂದಿದರು. ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದ ಎಂಟ್ಹತ್ತು ವಿದ್ಯಾರ್ಥಿಗಳು ನಾವು ಅಕ್ಷರಶಃ ಅನಾಥಭಾವದಿಂದ ಕಂಗಾಲಾಗಿದ್ದೆವು. ಆಗ ಕಿವಿಗೆ ಬಿದ್ದ ಈ ಹಾಡು ನನ್ನಲ್ಲಿದ್ದ ದುಃಖ, ಹತಾಶೆಯನ್ನು ಕಣ್ಣೀರ ರೂಪದಲ್ಲಿ ಹೊರಹಾಕಲು ನೆರವಾಗುತ್ತಿತ್ತು. ಆಸೆಪಟ್ಟು ಖರೀದಿಸಿದ ಪುಸ್ತಕಗಳನ್ನೆಲ್ಲಾ ರದ್ದಿಗೆ ಹಾಕುವ ಭಯಂಕರ, ಹುಚ್ಚು ಯೋಚನೆಯನ್ನೂ ಮಾಡಿದ್ದೆ. ಆಗೆಲ್ಲಾ ಈ ಹಾಡು ಸಂತೈಸುತ್ತಿತ್ತು. ನನ್ನ ಸಂಕಟ ಹೊರಹಾಕಲು ನೆರವಾಗಿತ್ತು. ಕಾಲ ಅನ್ನುವ ಮುಲಾಮು ಎಂಥೆಂಥ ಗಾಯಗಳನ್ನೇ ಸಂಜೀವಿನಿಯಂತೆ ಮಾಯ ಮಾಡಿರುವಾಗ ನನ್ನ ಮನಸ್ಸಿನ ದುಃಖ ಮಾಗುತ್ತಾ ಮತ್ತೆ ನಾನು ಅಧ್ಯಯನದತ್ತ ಅನಿವಾರ್ಯವಾಗಿ ತೊಡಗಿಕೊಂಡೆ. ಪಿಎಚ್‍ಡಿ ಪದವಿಯೂ ದೊರೆಯಿತು. ಮನಸ್ಸಿನ ಗೂಡಿನಲ್ಲಿ ನೆನಪಿನ ಸಂಚಿಯಲ್ಲಿ ಗುರುಗಳನ್ನು ಭದ್ರವಾಗಿಟ್ಟುಕೊಂಡು ಎಲ್ಲರೂ ಮುನ್ನಡೆಯುತ್ತಿದ್ದೇವೆ. ಅಂದಿನಿಂದ ಈ ಹಾಡು ಇಂದಿಗೂ ನನಗೆ ತುಂಬಾ ಆಪ್ತ.

ನಂತರ ಚೊಕ್ಕಾಡಿಯವರ ಕುರಿತ ಪುಸ್ತಕ ಬರೆಯುವ ಹೊತ್ತಿನಲ್ಲಿ, ಅವರೊಂದಿಗೆ ಮಾತಾಡುವಾಗ ಈ ಹಾಡಿನ ಕುರಿತೂ ಮಾತಾಡಿದ್ದೆ. ಆಗ ಅವರು ಜೀವಶಕ್ತಿಯನ್ನು ಉದ್ದೇಶಿಸಿ ರಚನೆಯಾದ ಹಾಡಿದು ಎಂದರು. ನಂತರ ಮತ್ತೆ ಅದೇ ಹಾಡನ್ನು ಕೇಳಿದಾಗ ಈ ಹಾಡು ನನ್ನಲ್ಲಿ ಮೂಡಿಸಿದ ತಲ್ಲಣಗಳೇ ಬೇರೆ ರೀತಿಯದು.

ಮನುಷ್ಯ ಶರೀರದ ಜೀವಶಕ್ತಿಯೇ ಅವನನ್ನು ಬದುಕನ್ನು ಅನುಭವಿಸಲು ಯೋಗ್ಯನನ್ನಾಗಿಸುವುದು. ಅಂಥ ಜೀವಶಕ್ತಿ ಕಾಲ ಸರಿದಂತೆ, ದೇಹಕ್ಕೆ ವಯಸ್ಸಾದಂತೆ ಕುಗ್ಗುತ್ತಾ ಹೋಗುವಾಗ ಮನುಷ್ಯನ ಮನಸ್ಸೂ ತಳಮಳ ಅನುಭವಿಸಲು ಆರಂಭಿಸುತ್ತದೆ. ಆಗಲೇ ‘ಎಲ್ಲಿ ಹೋಯಿತು ನನ್ನ ಶಕ್ತಿ, ಹೇಗೆ ಸೋರಿ ಹೋಯಿತು’ ಎನ್ನುವ ತಲ್ಲಣ ಆರಂಭವಾಗುವುದು. ಕಣ್ಣಿನ ಕಾಂತಿ ಕಡಿಮೆಯಾಗುತ್ತಾ ಹೋದಂತೆ ಕಣ್ಣಿನ ದೃಷ್ಟಿಯು ಮಂದವಾಗುತ್ತದೆ. ಅತ್ಯಂತ ಸುಂದರ ಕಣ್ಣುಗಳೂ ಮಂದವಾಗುತ್ತವೆ. ಅವುಗಳು ಕಾಂತಿಹೀನವಾಗಿ ಮೂಗಿನ ಮೇಲೆ ಕನ್ನಡಕವೆಂಬ ಆಭರಣ ಬಂದು ಕೂರುತ್ತದೆ. ಓಡುತ್ತಿದ್ದ ಕಾಲುಗಳು ಎಡವಲೂ ಆರಂಭಿಸುತ್ತವೆ. ‘ಛೇ, ಛೇ ಇದೇನಾಯ್ತು’ ಎಂದು ನೋಡುನೋಡುತ್ತಿದ್ದಂತೆ ದೇಹ ಕುಸಿಯಲು ಆರಂಭಿಸುತ್ತದೆ. ಸೊಂಪಾದ, ಕಪ್ಪುಕೂದಲು ನರೆಯಲು ಆರಂಭಿಸಿದಾಗ ಶಕ್ತಿ ಕುಂದಿದ್ದು ನಿಚ್ಚಳವಾಗಿ ಕಾಣತೊಡಗುತ್ತದೆ. ಆತುರ ಮಾಯವಾಗಿ ಉದಾಸೀನ ಮೂಡುತ್ತದೆ. ಎಲ್ಲದಕ್ಕೂ ತನ್ನ ಅತೀ ಬುದ್ಧಿವಂತಿಕೆಯಿಂದ ಉತ್ತರ ಹುಡುಕಿದ ಮನುಷ್ಯ ಈ ವಿಚಾರದಲ್ಲಿ ಮಾತ್ರ ಸೋಲೊಪ್ಪಿಕೊಂಡಿದ್ದಾನೆ. ಅವನಿಗಿಲ್ಲ ಮತ್ತೊಂದು ಬಾಲ್ಯ, ಅವನಿಗಿಲ್ಲ ಮತ್ತೊಂದು ಯೌವ್ವನ. ಎಷ್ಟೆಲ್ಲ ಕಸರತ್ತು ಮಾಡಿ ಶಕ್ತಿಯನ್ನು ಉಳಿಸಿಕೊಂಡು ಯೌವ್ವನದ ಬದುಕನ್ನು ದೀರ್ಘವಾಗಿಸಿಕೊಂಡರೂ ಒಳಮನಸ್ಸು ಕೂಗುತ್ತಿರುತ್ತದೆ, ಶಕಿ ಕುಗ್ಗುತ್ತಿದೆ ಎಂದು. ನಾವು ಓಡುತ್ತಿರುವ ರಭಸಕ್ಕೆ ನಮ್ಮ ಅರಿವಿಗೇ ಬರುವುದಿಲ್ಲ ಅದ್ಯಾವ ಹೊತ್ತಲ್ಲಿ ಜೀವಶಕ್ತಿ ತನ್ನ ಒಂದು ಕಾಲನ್ನು ಹೊರಗಿಟ್ಟಿತು ಎಂದು. ದೀರ್ಘ ಬದುಕನ್ನು ನೋಡಿದ ಕವಿ ಮನಸ್ಸು ಜೀವಶಕ್ತಿ ಮಹತ್ವವನ್ನು ಅರಿತು ಮನುಷ್ಯ ಈ ವಿಚಾರದಲ್ಲಿ ಪ್ರಕೃತಿಯ ಮುಂದೆ ಸೋತು ಹೈರಾಣಾಗುವ ರೀತಿಯನ್ನು ನಿರೂಪಿಸಿದ ಶೈಲಿ ಅನನ್ಯವಾದುದು.

‘ಕಾಲದೊಂದೊಂದೇ ಹನಿಯು ಹರಿದುಹೋಗುವ ಸದ್ದು’ –ಚೊಕ್ಕಾಡಿಯವರ ಇನ್ನೊಂದು ಕವಿತೆಯ ಸಾಲು, ಹೇಗೆ ಮನುಷ್ಯನ ಜೀವನದ ಘಳಿಗೆಗಳು ಅವನ ಕಣ್ಣೆದುರಿನಲ್ಲಿಯೇ ತೊಟ್ಟಿಕ್ಕುತ್ತಾ ಹರಿದುಹೋಗುತ್ತವೆ ಎನ್ನುವುದನ್ನು ಹೇಳಿದ್ದೂ ನೋಡುವಾಗ ನಮಗಿರುವ ಆಯ್ಕೆಯೆಂದರೆ ಆ ಘಳಿಗೆಗಳು ಸರಿಯುವ ಸೊಬಗನ್ನು ಒಪ್ಪಿಕೊಳ್ಳುತ್ತಾ ಆಸ್ವಾದಿಸುವುದು, ಥೇಟ್ ಚೊಕ್ಕಾಡಿಯವರಂತೆ! ಬದುಕಿನ ಒಂದೊಂದು ಹಂತವನ್ನು ಬಂದಂತೆ ಸ್ವೀಕರಿಸಿ ಮೌನವಾಗಿ ಆನಂದಿಸುವ ಕಲೆ ಅರಿತರೆ ಸುಬ್ರಾಯ ಚೊಕ್ಕಾಡಿಯವರಂತೆ ನಿರುಮ್ಮಳವಾಗಿ ಬಾಳಬಹುದು. ಚೊಕ್ಕಾಡಿಯವರ ಈ ಭಾವಗೀತೆ ಅವರು ಮನುಷ್ಯನ ಮಿತಿಗಳನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಸೊಗಸಾದ ಸಾಕ್ಷಿ.

——

ದೀಪಾ ಫಡ್ಕೆ

ಲೇಖಕಿ ಮತ್ತು ಗಾಯಕಿ. ಬೆಂಗಳೂರು ದೂರದರ್ಶನ ಮತ್ತು ಉದಯ ವಾಹಿನಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು. ‘ಋತ’ ಮತ್ತು ‘ಹರಪನಹಳ್ಳಿ ಭೀಮವ್ವ’, ‘ಲೋಕಸಂವಾದಿ’, ‘ಮಹಾಕಾವ್ಯಗಳ ಕವಿ’, ‘ಮುಕ್ತಛಂದದ ಕವಿ’ ಅವರ ಪ್ರಕಟಿತ ಕೃತಿಗಳು. ‘ಪುರಂದರ ಕನಕರ ಕೀರ್ತನೆಗಳಲ್ಲಿ ಅಭಿವ್ಯಕ್ತಿ – ಮನೋವೈಜ್ಞಾನಿಕ, ಭಾಷಿಕ ಅಧ್ಯಯನ’ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪದವಿ ಪಡೆದಿದ್ದಾರೆ.

Share

One Comment For "ಕಾಲದೊಂದೊಂದೇ ಹನಿಯು ಹರಿದುಹೋಗುವ ಸದ್ದು
ದೀಪಾ ಫಡ್ಕೆ
"

 1. sanjay
  7th November 2017

  Thanks for the nice article Deepa.

  Reply

Leave a comment

Your email address will not be published. Required fields are marked *

Recent Posts More

 • 9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 1 day ago No comment

  ಇರಬಲ್ಲೆವಾ ಭಾವುಕರಾಗದೆ?

                Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

 • 3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 4 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 1 week ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...


Editor's Wall

 • 25 February 2018
  9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 22 February 2018
  3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...