Share

ಕುಂಟೋಬಿಲ್ಲೆ ಆಡುವ ಹುಡುಗಿಗೆ ಕೆಲಸ ಸಿಕ್ಕಿದ್ದು
ಕಾದಂಬಿನಿ

 

 

 

ನಾನೇ ಏನೂ ತಿಳಿಯದ ಹುಡುಗಿ. ಇದೀಗ ಪ್ರೇಮಪ್ರಕರಣವೊಂದನ್ನು ಬಗೆಹರಿಸಲು ಪಂಚಾಯ್ತಿಗೆ ಹೀಗೆ ಏಕಾಏಕಿ ನಿಲ್ಲಬೇಕೆಂದರೆ!

 

 

 

 

ನಾವೆಲ್ಲ ರಾತ್ರಿಯೂಟ ಮುಗಿಸಿ ಮಲಗಿ ಗಾಢ ನಿದ್ದೆಗೆ ಜಾರಿ ಆಗಿತ್ತು. ಕುಂಟೋಬಿಲ್ಲೆ ಆಡಿಕೊಂಡಿದ್ದ ಹುಡುಗಿಗೆ ಕನಸಲ್ಲಿ ಎನ್ನುವಂತೆ ಅಷ್ಟು ಹೊತ್ತಲ್ಲಿ ಕೆಲಸ ಸಿಕ್ಕಿತು. ನಾನು ನನಗೆ ಪುಸ್ತಕದ ಬದನೆ ಗೊತ್ತಿಲ್ಲ ಎಂದೆ. ಅದಕ್ಕವರು ಐ ನೋ.. ದಟ್ಸ್ ವೈ ಐ ಕೇಮ್ ಹಿಯರ್ ಎಂದರು. ಮರುದಿನ ಬೆಳಿಗ್ಗೆ ಹನ್ನೆರಡಕ್ಕೆ ಕಾಲೇಜು ಮುಗಿಯುವಾಗ ಡಾ. ಪಿ.ವಿ.ಜೋಸೆಫರ ಜೀಪು ಕಾಲೇಜಿನ ಬಳಿ ನನ್ನನ್ನು ಕಾಯುತ್ತಿತ್ತು.

ಮನದೊಳಗೆ ಕತ್ತಿ ಹಿಡಿದು ನಿಂತ ಕಟುಕನ ಬಳಿಗೆ ಎಳೆದುಕೊಂಡು ಹೋಗುತ್ತಿರುವ ಕುರಿಯಂತೆ ಅನಿಸುತ್ತಿತ್ತಾದರೂ ಗೆಳೆಯ ಗೆಳತಿಯರೆದುರು ಸ್ವಲ್ಪ ಗತ್ತಿನಿಂದ ಹೋಗಿ ಜೀಪಿನಲ್ಲಿ ಕೂತೆ.

ನಾನು ಡಾ. ಪಿ.ವಿ.ಜೋಸೆಫರ ಜೊತೆ ಮೊದಲು ಅವರ ಮನೆಗೆ ಹೋದಾಗ ಅವರ ಸೆಕ್ರೆಟರಿ ಐರಿನ್ ಮತ್ತು ಅವಳ ಕಲೀಗ್ ಗಳು ಪಿವಿ. ಜೋಸೆಫರು ಸಿಟ್ಟುಬಂದಾಗ ಸಿಟ್ಟಿಗೆ ಕಾರಣರಾದವರಿಗೆ ಜೋರು ಮಾರುವ ಅಥವ ಕ್ರಮ ಕೈಗೊಳ್ಳುವ ಬದಲಿಗೆ ತಮ್ಮದೇ ಜೇಬು ಹರಿದುಕೊಳ್ಳುತ್ತಾರೆ ಮತ್ತು ಕೂದಲು ಕಿತ್ತುಕೊಳ್ಳುತ್ತಾರೆ ಎಂದು ಆಡಿಕೊಂಡು ನಗುತ್ತಿದ್ದರು. ನಾನು ಇದು ಸುಳ್ಳೆಂದು ವಾದಿಸಿದ್ದೆ. ಆಗ ಅವರು ನನಗೆ ಡಾ.ಪಿ.ವಿ.ಜೋಸೆಫರ ಹರಿದ ಕೆಲ ಬಟ್ಟೆಗಳನ್ನು ತೋರಿಸಿ ಗೇಲಿಯ ನಗೆ ನಕ್ಕಿದ್ದರು. ಪಿ.ವಿ.ಜೋಸೆಫರು ಕಾಲಿಗೆ ಚಪ್ಪಲಿ ತೊಡುವುದಿಲ್ಲ. ಕಾವಿ ಬಣ್ಣದ ಜುಬ್ಬ ಪಂಚೆ ಧರಿಸುತ್ತಾರೆ. ಹಳ್ಳಿ ಹಳ್ಳಿ ತಿರುಗುತ್ತಾರೆ. ನಾನು ಬಟ್ಟೆಯನ್ನು ಸೂಕ್ಷ್ಮವಾಗಿ ನೋಡಿದಾಗ ಮುಳ್ಳುಕಂಟಿ ಮತ್ತಿತರ ವಸ್ತುಗಳಿಗೆ ಸಿಕ್ಕು ಹರಿದಂತೆ ಕಾಣುತ್ತಿದ್ದವು. ಒಮ್ಮೆ ಅವುಗಳನ್ನೆಲ್ಲ ನನ್ನ ಮನೆಗೆ ತುಂಬಿಕೊಂಡು ಬಂದು ಬಹಳ ನೀಟಾಗಿ ಚಂದವಾಗಿ ಹೊಲಿಗೆಹಾಕಿ ತಂದಿಟ್ಟಿದ್ದೆ. ನನ್ನ ಪ್ರಕಾರ ಚಂದವಾಗಿ ಪ್ಯಾಚ್ ಹಾಕಬಲ್ಲವನೊಬ್ಬನೇ ಅತ್ಯುತ್ತಮ ಟೈಲರ್ ಆಗಬಲ್ಲ! ಈ ಪ್ಯಾಚ್ ಸಂಗತಿ ಡಾ.ಪಿ.ವಿ.ಜೋಸೆಫರಿಗೆ ಗೊತ್ತಾಗಿ ನನ್ನ ಮೇಲಿನ ಪ್ರೀತಿ ಹೆಚ್ಚಿತ್ತು.

ನಾನು ಮಗುವಾಗಿದ್ದಾಗ ನನ್ನ ಚಿಕ್ಕಪ್ಪ ನನ್ನ ತಾಯಿಗೆ ಒಂದು ಸಿಂಗರ್ ಹೊಲಿಗೆ ಮೆಶೀನನ್ನು ತಂದುಕೊಟ್ಟಿದ್ದರಂತೆ. ನಾನು ಸದಾ ಕಂಡಿದ್ದೆಲ್ಲವನ್ನೂ ಕಲಿಯುವ ಹುಕಿಯಲ್ಲಿರುತ್ತಿದ್ದೆ. ನೆರೆಮನೆಯ ಶಾರದಕ್ಕ ಮತ್ತು ನರಸಿಂಹಣ್ಣ ಹೊಟ್ಟುಕೆರೆಯಲ್ಲಿ ಉರಿ ಉರಿ ಬೇಸಗೆಯಲ್ಲಿ ಮಣ್ಣು ಅಗೆದು ಇಟ್ಟಿಗೆ ಬಿಡುವಾಗ ಅವರ ಜೊತೆ ಸೇರಿಕೊಂಡು ಇಟ್ಟಿಗೆ ಬಿಡುವುದನ್ನೇ ಬಿಡದೆ ಕಲಿತಿದ್ದ ನಾನು ಮನೆಯ ಮೂಲೆಯಲ್ಲಿ ಸಿಂಗರ್ ಹೆಸರಿನ ಹೊಲಿಗೆ ಯಂತ್ರ ಸುಮ್ಮನೆ ಕೂತಿದ್ದರೆ ಅದರ ಮೇಲೆ ಪ್ರಯೋಗ ಮಾಡದೆ ಹೇಗೆ ತಾನೇ ಇರಲಿ? ನನ್ನ ಕಾಲುಗಳು ಮೆಶೀನಿನ ಪೆಡಲ್ಲಿಗೆ ಎಟುಕತೊಡಗಿದವೋ ಇಲ್ಲವೋ ಸಿಕ್ಕ ಸಿಕ್ಕದ್ದನ್ನೆಲ್ಲ ಹೊಲಿಯ ತೊಡಗಿದ್ದೆ.

ಸಹಪಾಠಿಗಳ, ಟೀಚರುಗಳ, ಪಾದ್ರಿಗಳ, ಸಿಸ್ಟರ್ಸ್ಗಳ, ನರ್ಸುಗಳ, ನೆರೆಹೊರೆಯವರ, ಸಣ್ಣ ಮಕ್ಕಳ, ಹೋಳಿ ಹುಣಿವೆಗೆ ಹಾಡುತ್ತ ಬರುವ ಲಂಬಾಣಿಗಳ, ಸಿನೆಮಾದಲ್ಲಿನ ನಟನಟಿಯರ ಬಟ್ಟೆಗಳೂ, ಅವರ ಮೈಯ ಉಬ್ಬು ತಗ್ಗುಗಳೂ, ತಿರುವುಗಳೂ ಅದಕ್ಕೆ ತಕ್ಕಂತೆ ಬಟ್ಟೆಯನ್ನು ಹೀಗಿಟ್ಟು ಹೀಗೆ ಕತ್ತರಿಸಿದರೆ ಹೀಗಾಗುವುದೆಂದೂ ಕಣ್ಣುಗಳಲ್ಲಿ ಚಿತ್ರಗಳು ಮೂಡುತ್ತಿದ್ದವು. ಸೀರೆಯ ಕುಪ್ಪಸ ಹೊಲಿದರೆ ಮೈಯ ಚರ್ಮದಂತೆ ಕಚ್ಚಿಕೂರಬೇಕು ಒಂದೇ ಒಂದು ಸುಕ್ಕಾದರೂ ಇಲ್ಲದೆ ಮತ್ತು ಅದಕ್ಕಾಗಿ ಕತ್ತರಿಸುವ, ಹೊಲಿಯುವ, ಯಾವ ಮೆಟೀರಿಯಲ್ಲಿಗೆ ಯಾವುದನ್ನು ಮ್ಯಾಚ್ ಮಾಡಬೇಕೆನ್ನುವ, ಮುಖ್ಯವಾಗಿ ಚೂರೂ ಬಟ್ಟೆಯನ್ನು ವೇಸ್ಟ್ ಮಾಡದೆ ಕತ್ತರಿಸುವ ಐಡಿಯಾಗಳು ಕಣ್ಣಲ್ಲಿ ಓಡುತ್ತಿದ್ದವು. ನನ್ನ ನೆರೆಹೊರೆಯವರು, ಶಾಲಾ ಗೆಳತಿಯರೆಲ್ಲ ನನ್ನ ಪ್ರಯೋಗಪಶುಗಳಾಗುತ್ತಹೋದರು. ನನ್ನ ಸಂಗೀತದ ಮೇಷ್ಟ್ರ ತಂಗಿಯೊಬ್ಬಳಂತೂ ತನಗೆ ಬೇಕಾದ ಅತ್ಯಾಧುನಿಕ ಶೈಲಿಯ ವಸ್ತ್ರಗಳಿಗೆ ನನ್ನನ್ನು ಅವಲಂಬಿಸಿಬಿಟ್ಟಿದ್ದಳು. ನಾನಂತೂ ನನಗೆ ಬೇಕಾದುದನ್ನೆಲ್ಲ ಹೊಲಿದುಕೊಳ್ಳುತ್ತಿದ್ದೆ.

ಹೀಗಿರುವಾಗಲೇ ಒಂದು ಘಟನೆ ನಡೆಯಿತು. ಆದಿನ ನನ್ನ ತಂದೆ ಊರಲ್ಲಿ ಇರಲಿಲ್ಲ. ಶಾಲೆಯಲ್ಲಿ 36 ರೂಪಾಯಿ ಫೀಜ್ ಕಟ್ಟಲಿಕ್ಕಿತ್ತು. ಕೊನೆಯ ದಿನಾಂಕ ಹತ್ತಿರ ಬಂದರೂ ಮನೆಯಲ್ಲಿ ಫೀಜಿನ ವಿಷಯ ಹೇಳಲು ಮರೆತುಬಿಟ್ಟಿದ್ದೆ. ಮರುದಿನ ಫೀಜು ಕಟ್ಟಲೇಬೇಕು. ನನ್ನ ಹತ್ತಿರ ಹಣವಿಲ್ಲ ಏನುಮಾಡಲಿ ಎಂದೇ ತಲೆಕೆಡಿಸಿಕೊಂಡಿದ್ದೆ. ಆ ದಿನಗಳಲ್ಲಿ ನಮ್ಮ ಮನೆಯ ಗೋಡೆಯ ಮೇಲೆ ಒಂದು ಮಗು ಹಳದಿ ಬಣ್ಣದ ಕೊಡೆ ಹಿಡಿದು ರೈಲುಹಳಿಗಳ ಮೇಲೆ ನಡೆಯುತ್ತಿರುವ ಕಪ್ಪು ಬಿಳುಪು ಚಿತ್ರವಿತ್ತು. ಅದರಲ್ಲಿ ವೇರ್ ಈಸ್ ಎ ವಿಲ್ ದೇರ್ ಈಸ್ ಎ ವೇ ಎಂಬ ಬರಹ. ನಾನು ಗೊಂದಲಕ್ಕೆ ಬಿದ್ದಾಗಲೆಲ್ಲ ನನಗೆ ಸ್ಫೂರ್ತಿಯಾಗುತ್ತಿದ್ದ ಬರಹ. ನನ್ನ ಎದೆಯನ್ನು ನೀವಿಕೊಂಡು ಸಮಾಧಾನ ಹೇಳಿಕೊಂಡೆ.

ಯಾಕೋ ಹೊರಗೆ ಬರುತ್ತೇನೆ ಅಕ್ಕಿ ಸತ್ಯಣ್ಣ ಏನೋ ಕವರನ್ನು ಹಿಡಿದುಕೊಂದು ಚಿಂತಾಕ್ರಾಂತರಾಗಿ ನಡೆದುಹೋಗುತ್ತಿದ್ದಾರೆ. ಮಾತನಾಡಿಸಿದ್ದೇ ತಡ, ಯಾವುದೋ ತುರ್ತು ಶುಭಕಾರ್ಯವೆಂದೂ ಮಗಳಿಗೆ ಎರಡು ಫ್ರಾಕ್ ಹೊಲಿಸಬೇಕಿತ್ತೆಂದೂ ಯಾರೂ ಸಿಕ್ಕದೆ ಬೇಸರದಿಂದ ಮನೆಗೆ ಹೊರಟರೆಂದೂ ಹೇಳಿದರು. ನಾನು ಗಬಕ್ಕನೆ ಕವರ್ ಕಿತ್ತುಕೊಂಡು ಬೆಳಕು ಹರಿಯುವುದರೊಳಗಾಗಿ ಎರಡು ಚಂದನೆಯ ಫ್ರಾಕ್ ಹೊಲಿದಿಟ್ಟೆ. ಬೆಳಿಗ್ಗೆ ಅಕ್ಕಿ ಸತ್ಯಣ್ಣ ಚಿಕ್ಕ ಮಕ್ಕಳ ಹಾಗೆ ಸಂಭ್ರಮಿಸಿಬಿಟ್ಟರು ಮತ್ತು ಬೇಡಬೆಂದರೂ ಕೈಯಲ್ಲಿ ಅಷ್ಟು ಹಣವಿರಿಸಿ ಹೋದರು.

ನನ್ನ ಚಿಲ್ಲರೆ ಸೇರಿಸಿ ಅಂತೂ ಮರುದಿನ ಫೀಜ್ ಕಟ್ಟಿದೆ. ಈಗಷ್ಟೇ ಹೈಸ್ಕೂಲು ಸೇರಿದ ಸಣ್ಣ ಹುಡುಗಿಯಾದ ನಾನು ನಾನೇ ದುಡಿದ ಹಣದಲ್ಲಿ ಫೀಸ್ ಕಟ್ಟಿದ್ದೆ. ಅಂದಿನಿಂದ ಹೊಲಿಗೆ ನನ್ನ ದುಡಿಮೆಯ ದಾರಿಯೂ ಆಯ್ತು. ದಿನೇ ದಿನೇ ಚಂದಕ್ಕಿಂತ ಚಂದ ಮಾಡಿ ಹೊಲಿಯುವುದು, ಹೊಸ ಹೊಸ ಪ್ರಯೋಗ ಮಾಡುವುದು ತಪ್ಪಾದರೆ ಸರಿಯಾಗುವ ತನಕ ಮತ್ತೆ ಮತ್ತೆ ಪ್ರಯತ್ನಿಸುವುದು ಇನ್ನೊಬ್ಬರು ಧರಿಸಿದ ಬಟ್ಟೆಗೂ ನಾನು ಹೊಲಿದ ಬಟ್ಟೆಗೂ ಅಂತರವನ್ನು ಗುರುತಿಸುವುದು ಹೀಗೆ ದಿನೇ ದಿನೇ ಬೆಳೆಯುತ್ತಿದ್ದೆ. ಇಷ್ಟಾದರೂ ಇದು ಹೇಗೆ ಏನು ಕಥೆ ಎಂದು ಚಿಕ್ಕ ಸಂದೇಹಕ್ಕಾದರೂ ಇನ್ನೊಬ್ಬ ಹೊಲಿಗೆ ಬಲ್ಲವರಲ್ಲಿ ಕೇಳುವುದು ನನ್ನ ಅಹಮಿಕೆಗೆ ಪೆಟ್ಟುಕೊಟ್ಟಂತೆ ಎಂದು ಭಾವಿಸಿ ನನಗೆ ನಾನೇ ಗುರುವಿಲ್ಲದ ವಿದ್ಯೆಗೆ ತೆರೆದುಕೊಳ್ಳುತ್ತ ಹೋಗಿದ್ದೆ.

ನಮ್ಮ ಜೀಪು ಕುಮದ್ವತಿ ನದಿಗೆ ಕಟ್ಟಲಾದ ಪುಟ್ಟ ಅಣೆಕಟ್ಟು ಇರುವ ಊರಿನ ಕಡೆ ಹೋಗುತ್ತಿತ್ತು. ಆ ಕಾಲ ಎಂಥದ್ದು ಎಂದರೆ ಹೆಣ್ಣು ಮಗು ಅಂತ ಗೊತ್ತಾಗುತ್ತಲೇ ಮನೆಗೆಲಸದ ಜೊತೆ ಚೂರುಪಾರು ಹೊಲಿಗೆ ಕಸೂತಿ ಕಲಿಸಿದರೆ ಜವಾಬ್ದಾರಿ ಮುಗಿಯಿತು ಎಂಬಂತಿದ್ದರು ಪೋಷಕರು. ಪ್ರತಿ ಊರುಗಳಲ್ಲೂ ಶಾಲೆ ಬಿಟ್ಟ ಹೆಣ್ಣುಮಕ್ಕಳಿಗೆ ಕಟಿಂಗ್ ಕ್ಲಾಸ್ ಮಾಡಿ ಒಂದೊಂದು ಹೊಲಿಗೆ ಯಂತ್ರ ಕೊಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸರಕಾರವೂ ಸಮಾಜವೂ ಮುಂದಾಗಿತ್ತು. ಆ ಕಟಿಂಗ್ ಕ್ಲಾಸುಗಳಿಗೆ ಹೋದ ಹೆಣ್ಣುಮಕ್ಕಳು ಸಾಲ ಮಾಡಿ ತಂದ ಒಂದು ಹೊಲಿಗೆ ಯಂತ್ರವನ್ನು ಮನೆ ಮೂಲೆಯಲ್ಲಿ ಒಟ್ಟಿದರೇ ಹೊರತು ಅದರಿಂದ ಅನ್ನ ಸಂಪಾದಿಸಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ ಮಹಿಳಾ ಮಂಡಳಿಯ ಈ ಕಟಿಂಗ್ ಕ್ಲಾಸುಗಳಲ್ಲಿ ಈಜಿ ಕಟಿಂಗ್ ಎಂಬ ಪುಸ್ತಕದಿಂದ ಸಾದಾ ಜುಬ್ಲಾದಿಂದ ಹೆಂಗಸರ ಕುಪ್ಪಸದ ತನಕ ಕಲಿಸಲಾಗುತ್ತಿತ್ತು. ಆದರೆ ಅಲ್ಲಿ ಕಲಿತು, ಕೈಯಲ್ಲಿ ಹೊಲಿದ ಆ ಅಂಗೈ ಅಗಲದ ಚಿಕ್ಕ ಚಿಕ್ಕ ಅಂಗಿಗಳು ಗೊಂಬೆಗಳಿಗೆ ತೊಡಿಸಲೂ ಲಾಯಕ್ಕಿರುತ್ತಿರಲಿಲ್ಲ. ದೊಡ್ಡವರು ಧರಿಸುವ ಉಡುಪು ಹೊಲಿಯುವುದು ಕನಸಿನ ಮಾತೇ ಸರಿ. ಇದು ಕರ್ನಾಟಕದಲ್ಲಿ ಇದ್ದ ಸ್ಥಿತಿ.

ಅದೇ ನಾನು ಪಂಜಾಬಿ ಗುಜರಾತಿ ರಾಜಸ್ಥಾನಿ ಹೆಣ್ಣುಮಕ್ಕಳನ್ನು ನೋಡಿದ್ದೇನೆ, ಅಲ್ಲಿನ ಹೆಣ್ಣು ಮಕ್ಕಳು ಶಾಲೆ ಕಲಿಯದಿದ್ದರೂ ಚಿಂತೆಯಿಲ್ಲ ‘ಸಿಲಾಯಿ ಕಡಾಯಿ’ಯಲ್ಲಿ ಮನೆಯ ‘ಕಾಮ್ ಕಾಜ್’ನಲ್ಲಿ ನಿಪುಣರಾಗಿದ್ದರೆ ಸಾಕು. ಹಾಗಾಗಿಯೇ ನನ್ನ ಕೆಲ ಪಂಜಾಗಿ ಗೆಳತಿಯರು ಇವತ್ತಿಗೂ ಬರೀ ಕೈ ಹೊಲಿಗೆಯಲ್ಲೇ ತಮ್ಮ ಸೂಟ್ (ಚೂಡಿದಾರ) ತಾವೇ ಸುಂದರವಾಗಿ ಹೊಲಿದುಕೊಳ್ಳುತ್ತಾರೆ. ನಿಟ್ಟಿಂಗ್ ನಲ್ಲಿ ನೈಪುಣ್ಯತೆಯುಳ್ಳ ಇವರು ಚಂದಕ್ಕಿಂತ ಚಂದನೆಯ ಸ್ವೆಟರುಗಳನ್ನು ಹೆಣೆಯುತ್ತಾರೆ. ಅದ್ಭುತವಾಗಿ ಕಸೂತಿ ಕೆಲಸ ಮಾಡುತ್ತಾರೆ. ಆದರೆ ನಮ್ಮಲ್ಲಿ ಆ ತೆರನಾಗಿ ಕಲಿಸುವ ಗುರುವಿಲ್ಲವೆಂದೇ ನಾನು ಹೇಳಹೊರಟದ್ದು.

ಹೀಗಿರುವಾಗ ಡಾ.ಪಿ.ವಿ.ಜೋಸೆಫರ ಒಬ್ಬ ಗೆಳೆಯ ಕೇರಳದಿಂದ ಇಲ್ಲಿಗೆ ಬಂದಿದ್ದ ಪಾದರಿ ನಾವೀಗ ಹೋಗಲಿರುವ ಊರಲ್ಲಿ ಹೊಲಿಗೆ ತರಬೇತಿ ಕೇಂದ್ರ ತೆರೆದಿದ್ದರು. ಅದಕ್ಕೆ ಮುಖ್ಯ ಕಾರಣ ಆ ಊರಲ್ಲಿ ಇರುವುದೆಲ್ಲ ಮುಸ್ಲಿಮ್ ಕುಟುಂಬಗಳು. ಯಾವ ಹೆಣ್ಣಿಗೂ ಒಂದಕ್ಷರವಾದರೂ ಶಿಕ್ಷಣ ಇಲ್ಲ. ಅವರಿಗೆ ನಾನು ಟೈಲರಿಂಗ್ ಕಲಿಸುವ ಕೆಲಸವೇ ನನಗೆ ಸಿಕ್ಕಿದ್ದುದು. ದಾರಿಯುದ್ದಕ್ಕೂ ಈಜಿ ಕಟಿಂಗ್ ಪುಸ್ತಕದಲ್ಲಿರುವಂತೆ ನನಗೆ ಕಲಿಸಲು ಬಾರದಲ್ಲ ಎಂದೇ ಯೋಚಿಸುತ್ತ ತಲೆ ಕೆಸರು ರಾಡಿ ಮಾಡಿಕೊಂಡಿದ್ದೆ.

ಆ ಊರಲ್ಲಿ ಕಾಲಿಡುವಾಗ ತಲೆ ಮೇಲೆ ಸೆರಗು ಹೊದೆದುಕೊಳ್ಳುತ್ತ ಇರಿಸುಮುರುಸಾಗುವಂತೆ ಮಿಕಿಮಿಕಿ ನೋಡುತ್ತ ಕಿಸಿ ಕಿಸಿ ನಗುತ್ತ ಭವ್ಯ ಸ್ವಾಗತ ಸಿಕ್ಕಿತು! ಯಾರೋ ಕಟ್ಟಿ ಗಾರೆಯನ್ನೂ ಮಾಡದೆ ಇದ್ದ ಮನೆಯಲ್ಲಿ ನಾಲ್ಕಾರು ಮೆಷೀನುಗಳನ್ನು ಇರಿಸಿದ್ದರು. ನಾನು ಒಳಗೆ ಹೋಗುತ್ತಿದ್ದಂತೆ ಒಬ್ಬ ಹೆಂಗಸು “ಟೀಚರಮ್ಮ ಕೈತೋ ಬೈಕು ಕರ್ಕು ದೇಖ್ಯಾತೋ ಏ ಕ್ಯಾಗೇ ಅಮ್ಮಾ ಇಸ್ಕೂಲ್ ಕು ಜಾನೇಕಿ ಛೋಕ್ರಿ ಆಯೀ ನಾ.. ಇಸ್ಕೋ ಹಮೇಚ್ ಕ್ಯಾ ತಬಿ ಸಿಖಾನಾ ಕ್ಯಾಕೀ ಬಾ” ಎಂದಳೊಬ್ಬಳು. ಉಳಿದವರೆಲ್ಲ ಖೊಳ್ಳನೆ ನಕ್ಕರು. ಮತ್ತೊಬ್ಬಳು ನನ್ನ ಬಾಯ್ ಕಟ್ ಇದ್ದ ತಲೆಯನ್ನು ನೋಡಿ “ಉಸ್ಕೆ ಬಾಲಾಂ ದೇಖ್ ಗೇ ಚೂಹೆ ಕಾಟ್ಕು ಖಾಗಯೆ ಕ್ಯಾಕೀ ಬಾ” ಎಂದಳು ಮತ್ತೆ ನಗು! ಹೀಗೆಯೇ ನನ್ನ ಬಗ್ಗೆ ಯರ್ರಾ ಬಿರ್ರಿ ಹಾಸ್ಯ ನಡೆದಿತ್ತು. ಅಷ್ಟು ಹೊತ್ತಿಗೆ ಆ ತರಬೇತಿ ಕೇಂದ್ರದ ಹಳೆಯ ಟೀಚರ್ ರೋಜಿ ಒಂದು ಕನ್ನಡ ವಾಕ್ಯದಲ್ಲಿ ಮೂರು ಇಂಗ್ಲಿಷ್ ಪದ ಬೆರೆಸಿ “ಪ್ಲೀಸ್ ಯಾರೂ ನಾಯ್ಸ್ ಮಾಡ್ಬೇಡಿ. ಇವರು ಇನ್ಮುಂದೆ ನಿಮಗೆ ಬಾಕಿ ಲೆಸ್ಸನ್ ಟೀಚ್ ಮಾಡ್ತಾರೆ” ಎಂದು ಏನೋ ಹೇಳಿದಳು. ಕೂಡಲೇ ಈ ಮಹಿಳೆಯರ ಬಳಗದಿಂದ ಮತ್ತೊಂದು ದನಿ “ಕ್ಯಾಬೋಲೀ ಗೇ ಏ? ರತ್ತಿಬೀ ಮಾಲೂನ್ ಹೋತಾ.. ಇಸ್ಕಾ ಏಚ್ ಹೋಗಯಾನಾ” ಎಂದಳು. ಇವರ ಸಮಸ್ಯೆಗಳೆಲ್ಲ ಏಕ್ ದಮ್ ತಿಳಿದುಹೋಯಿತು. ಪಿ.ವಿ.ಜೋಸೆಫರು ಕನ್ನಡದಲ್ಲಿ ನನ್ನ ಪರಿಚಯ ಮಾಡಿಕೊಟ್ಟರು. ಆದರೆ ಅವರ ಮಾತೂ ಈ ಮಹಿಳೆಯರಿಗೆ ಅರ್ಥ ಆಗುತ್ತಿರಲಿಲ್ಲ. ನಾನು ಬೋರ್ಡಿನೆದುರು ನಿಂತೆ. ಬೋರ್ಡಲ್ಲಿ ರಾಂಪರ್‍ನ ಕತ್ತರಿಸುವ ರೇಖಾ ಚಿತ್ರ ಬರೆದಿದ್ದಳು ರೋಜಿ ಟೀಚರ್. ಟೇಬಲ್ಲಿನ ಮೇಲೆ ಈಜಿ ಕಟಿಂಗ್ ಪುಸ್ತಕವಿತ್ತು. ಚಿಕ್ಕ ಹುಡುಗಿಯಿಂದ ನಾಲ್ಕಾರು ಮಕ್ಕಳ ತಾಯಂದಿರೂ ಸೇರಿ ನಲವತ್ತೈವತ್ತು ಹೆಂಗಸರಿದ್ದರು.

ಕ್ಷಣ ಎಲ್ಲರ ಮುಖಗಳನ್ನು ನೋಡಿದೆ. ಎಲ್ಲ ನನ್ನ ಮನೆಯ ಆಸುಪಾಸಿನ ಮಹಿಳೆಯರಂತೆಯೇ ಕಂಡರು. ಭಯವೇನಾಗಲಿಲ್ಲ. ಒಂದು ನಗುವನ್ನು ಅವರತ್ತ ಎಸೆದು, “ಸಲಾಂ ಅಲೈಕುಂ” ಎಂದೆ. ವಾ ಅಲೈಕುಂ ಸಲಾಂಗೆ ಬದಲು ಈ ಹೆಂಗಸರು “ಅಮ್ಮಾಗೇ” ಎಂದು ಚೀರಿದರು! ಅವರು ಮಾತಾಡಿದ್ದೆಲ್ಲ ನನಗೆ ತಿಳಿದುಹೋಗಿದೆಯೆಂಬ ಪಶ್ಚಾತ್ತಾಪದಲ್ಲಿ ಅವರ ಕೆಂಪೇರಿದ ಮುಖಗಳು ನೋಡಲು ಲಾಯಕ್ಕಾಗಿದ್ದವು.

ಆದಿನ ಎಲ್ಲರನ್ನೂ ಪರಿಚಯ ಮಾಡಿಕೊಂಡು ಈಜಿ ಕಟಿಂಗ್ ಪುಸ್ತಕ ಕೈಲಿ ಹಿಡಿದು ಪಿವಿ ಜೋಸೆಫರ ಜೊತೆ ಮನೆಗೆ ಮರಳಿದೆ. ರಾತ್ರಿಯಿಡೀ ಗಮನವಿಟ್ಟು ಇಡೀ ಪುಸ್ತಕವನ್ನು ಓದಿದೆ. ನನಗೀಗ ಆ ಹೆಂಗಸರಿಗೆ ಏನು ಕಲಿಸಬೇಕು ಹೇಗೆ ಕಲಿಸಬೇಕು ತಿಳಿದುಹೋಗಿತ್ತು.

ನಾನು ಕಾಲೇಜ್ ಬಿಟ್ಟದ್ದೇ ಸೀದಾ ಗಜಾನನ ಬಸ್ಸು ಹತ್ತಿ ಆ ಊರಿಗೆ ಹೋಗುತ್ತಿದ್ದೆ. ಅಲ್ಲಿ ಉರ್ದುವಿನಲ್ಲಿ ಸೀನೇಕೆ ಅತ್ರಾಫ್, ಲಂಬಾಯಿ, ಚೌಡಾಯಿ ಎನ್ನುತ್ತ ಪಾಠ ಮಾಡುತ್ತಿದ್ದೆ. ಆ ಮಹಿಳೆಯರೂ ಯಾವ ಹುಕಿಯಲ್ಲಿ ಕಲಿಯುತ್ತಿದ್ದರು ಎಂದರೆ ಅವರ ದಾಹ ತಣಿಸಲು ನಾನು ಹೊಸ ಹೊಸದನ್ನು ಕಲಿಸುತ್ತ ಹೋಗಬೇಕಿತ್ತು. ದಿನಕ್ಕೆ ನೂರುಸಲ ಆ ಫ್ಯಾಷನ್ ವಾಲಿ ಟೀಚರಿನ ಪಾಠ ತಮಗೆ ಏನೇನೂ ಅರ್ಥವಾಗುತ್ತಿರಲಿಲ್ಲವೆಂದು ಛೀಮಾರಿ ಹಾಕುವುದೂ ನನ್ನನ್ನು ತಾವು ಮೊದಲ ದಿನವೂ ಉರ್ದು ತಿಳಿಯದವಳು ಎಂದು ಜೋಕ್ ಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡುವುದೂ ನಗುವುದೂ ಇತ್ತು. ಮೂರು ಬ್ಯಾಚುಗಳಲ್ಲಿ ಅವರಿಗೆ ಹೊಲಿಗೆ ಕಲಿಸುತ್ತಿದ್ದೆ. ಅವರು ನನ್ನ ಶಿಷ್ಯೆಯರಾದ ಮೇಲೆ ಅಂಗೈ ಅಗಲದ ಬಟ್ಟೆ ಹೊಲಿಯುವುದನ್ನು ಬಿಟ್ಟು ದೊಡ್ಡ ದೊಡ್ಡ ಬಟ್ಟೆ ಹೊಲಿಯುವುದನ್ನೇ ಕಲಿಯುತ್ತಿದ್ದರು. ನನ್ನ ಕೈಗಳಲ್ಲಿ ಜಾದೂ ಇದೆಯೆಂದೂ ಅಭಿಮಾನ ತುಂಬಿ ಹೇಳುತ್ತಿದ್ದರು. ತರಗತಿಯಲ್ಲಿ ಉತ್ತಮ ಹಾಡುಗಾರ್ತಿಯರೂ ಇದ್ದರು. ಹುಸ್ನಾ ಎಂಬ ಒಬ್ಬಳು ರಂಗ್ ಅವ್ರ್ ನೂರ್ ಕೀ ಬಾರಾತ್ ಕಿಸೇ ಪೇಷ್ ಕರೂಂ ಹಾಗೂ ಲಂಬೀ ಜುದಾಯಿಯಂಥಹ ಹಾಡುಗಳನ್ನು ಅದ್ಭುತವಾಗಿ ಹಾಡುತ್ತಿದ್ದಳು.

ಹೀಗೆ ಒಂದು ಆರು ತಿಂಗಳ ಒಂದು ಕೋರ್ಸ್ ಮುಗಿಯಿತು. ಹೊಸ ಕೋರ್ಸ್ ಆರಂಭವಾದದ್ದೇ ಮತ್ತಷ್ಟು ಹೆಂಗಸರು ಹುಡುಗಿಯರು ಸೇರಿಕೊಂಡಿದ್ದರು. ಅವರಲ್ಲಿ ಮಲ್ಲಿಕಾ, ಸುಂದರಿ ಮತ್ತು ಸುಶೀಲಾ ಎಂಬ ಮೂವರು ಹಿಂದೂ ಹುಡುಗಿಯರೂ ಇದ್ದದ್ದು ವಿಶೇಷ. ಈ ಸುಶೀಲಾ ಎಂಬಾಕೆಯನ್ನು ಏಜಾಜ್ ಎಂಬಾಕೆ ಈ ಕೋರ್ಸ್ ಶುರುವಾಗಿ ಎರಡು ತಿಂಗಳ ತರುವಾಯ ಕರೆತಂದಿದ್ದಳು.

ಈ ಪುಟ್ಟ ಊರು ನನಗೀಗ ಚಿರಪರಿಚಿತವಾಗಿತ್ತು. ಹದಿಮೂರರ ಗೊಂಬೆಯಂತಹ ಚಂದದ ಬಾಲೆಯರಿಗೆ 56 ವರ್ಷದ ಮುದುಕರೊಟ್ಟಿಗೆ ಮದುವೆ ಮಾಡಿದ್ದನ್ನೂ, ನಮ್ಮೂರಿನ ಫೆರ್ನಾಂಡಿಸ್ ಎಂಬ ಫಾರೆಸ್ಟ್ ಡಿಪಾರ್ಟ್‍ಮೆಂಟಿನ ಒಬ್ಬ ಮೊಮ್ಮಕ್ಕಳ ಕಂಡ ಮುದುಕ ಆ ಊರಿನ ಪ್ರೇಮ ಎಂಬಾಕೆಯ ಜೊತೆ ಸಂಬಂಧ ಇಟ್ಟುಕೊಂಡಿದ್ದನ್ನೂ, ಅಂಗನವಾಡಿಯ ಟೀಚರ್ ಒಬ್ಬಳು ತಾನಿರಿಸಿಕೊಂಡಿದ್ದ ಯುವಕನೊಟ್ಟಿಗೇ ತನ್ನ ಮಗಳ ಮದುವೆ ಮಾಡಿ ಅವರ ದಿನನಿತ್ಯದ ಕಿತ್ತಾಟಗಳನ್ನೂ ಇಂಥವೇ ಹತ್ತುಹಲವು ಸಂಗತಿಗಳನ್ನು ಹತ್ತಿರದಿಂದ ಕಂಡಿದ್ದೆ. ಹೋಟೆಲ್ ಬಾಬಣ್ಣ ಪ್ರತಿನಿತ್ಯ ತಯಾರಿಸುವ ಮಸಾಲೆ ಮಂಡಕ್ಕಿಯ ತಲುಬು ನನ್ನ ನಾಲಿಗೆಗೆ ಅಂಟಿಬಿಟ್ಟಿತ್ತು. ತಾಹೆರಾ ಎಂಬ ಹುಡುಗಿಯ ತಾಯಿ ಟಿಬಿ ಕಾಯಿಲೆ ಆಗಿ ಸತ್ತಿದ್ದರಿಂದ ಅವಳ ಜೊತೆ ಮಾತನಾಡಕೂಡದೆಂದೂ ಮಾತಾಡಿದರೆ ಟಿಬಿ ನನಗೂ ದಾಟುತ್ತದೆ ಎಂದೂ ತಾಕೀತು ಮಾಡಿದ ಬಳಿಕವೂ ನಾನು ಆ ತಬ್ಬಲಿ ಹುಡುಗಿಯ ಮನೆಯಲ್ಲಿ ಊಟ ಮಾಡುತ್ತಿದ್ದೆ. ತರಗತಿಗೆ ಬರುವ ಹೆಣ್ಣುಮಕ್ಕಳು ನನಗಾಗಿ ಏನಾದರೂ ತಂದೇ ತರುತ್ತಿದ್ದರು. ನನ್ನ ಬೋಳು ತಲೆಗೆ ನಾನಾ ತರಹದ ರಾಶಿ ರಾಶಿ ಹೂ ಮುಡಿಸಿ ಕೆತ್ತ ಅಚ್ಚ ದಿಖ್ರೀಂ ಎಂದು ನಟಿಗೆ ಮುರಿಯುತ್ತಿದ್ದರು.

ಹೀಗೆ ದಿನಗಳು ಸಾಗುತ್ತಿದ್ದವು. ನನ್ನಲ್ಲಿ ಕಲಿತ ಕೆಲ ಹೆಂಗಸರು ತಮ್ಮ ಬಟ್ಟೆ ಹೊಲಿದುಕೊಳ್ಳುವುದು ಮಾತ್ರವಲ್ಲದೆ ಕೆಟ್ಟ ಬಡತನದಿಂದ ತಪ್ಪಿಸಿಕೊಳ್ಳಲು ಆಗಲೇ ಹಣಕ್ಕೆ ಬಟ್ಟೆ ಹೊಲಿದುಕೊಡಲು ಆರಂಭಿಸಿದ್ದರು. ಎಲ್ಲವೂ ಸೊಗಸಾಗಿತ್ತು. ಅಷ್ಟರಲ್ಲಿ ಈ ಏಜಾಜ್ ಎನ್ನುವವಳು ಒಂದು ಪಿಕ್ನಿಕ್ ಹೋಗುವ ಪ್ರಸ್ತಾಪ ಇಟ್ಟಳು. ನನಗೆ ಯಾಕೋ ಇದು ಅಪಾಯದ ಕರೆಗಂಟೆ ಬಾರಿಸಿದಂತೆ ತಳಮಳ ಉಂಟುಮಾಡಿತು. ಆದರೂ ಅವರೆಲ್ಲ ಮೊದಲೇ ಮಾತಾಡಿಕೊಂಡು ಮನೆಯ ಹಿರಿಯರ ಅನುಮತಿ ಪಡೆದು ಕೂತದ್ದರಿಂದ ನನಗೆ ಇದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

ಕಣವಿ ಎಂಬಲ್ಲಿ ಒಂದು ಹಿಂದೂ ಮತ್ತು ಮುಸಲ್ಮಾನ ಎರಡೂ ದೇವರಿರುವ ದರ್ಗಾ ಅದು.

ಈ ಪಿಕ್ನಿಕ್ ತಾಣ ನಾನು ಊರಿನಿಂದ ಬರುವ ದಾರಿಯಲ್ಲೇ ಇದ್ದುದರಿಂದ ಅವರೆಲ್ಲ ಮುಂಚಿತವಾಗಿ ಬಂದು ಈ ಕಣವಿ ಸ್ಟಾಪಿನಲ್ಲಿ ನನಗಾಗಿ ಕಾದಿದ್ದರು. ಒಂದಿಬ್ಬರು ಬಂದಿರಲಿಲ್ಲ ಅನ್ನೋದು ಬಿಟ್ಟರೆ ಬಾಕಿ ಎಲ್ಲರೂ ಇದ್ದರು. ಎಲ್ಲರೂ ಕಣಿವೆಗೆ ಇಳಿದೆವು. ಆ ಹೆಂಗಸರೆಲ್ಲ ಬಿರಿಯಾನಿ ಮಾಡಿಕೊಂಡು ತಂದಿದ್ದರು. ಹಾಡು ಕುಣಿತ ಎಲ್ಲವೂ ಆ ನಿರ್ಜನ ಕಾಡಿನಲ್ಲಿ! ಸಂಜೆಯ ತನಕ ಕುಣಿದು ಕುಪ್ಪಳಿಸಿ ಅಂತೂ ನಾನು ವಿನಯ ಬಸ್ ಹಿಡಿದೆ. ಅವರು ಅವರ ಬಸ್ ಹಿಡಿದರು. ಅವರಲ್ಲಿ ಹಲವರು ನನಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದವರು ಇದ್ದ ಕಾರಣ ನನಗೆ ತಲೆಬಿಸಿ ಇರಲಿಲ್ಲ.

ಮರುದಿನ ನಾನು ಎಂದಿನಂತೆ ಹೊಲಿಗೆ ಕ್ಲಾಸಿಗೆಂದು ಹೋಗಿ ಬಸ್ಸು ಇಳಿಯುತ್ತಿದ್ದಂತೆ ಈ ತಾಹೆರಾ ಎನ್ನುವ ಹುಡುಗಿ ಹಾರಿಕೊಂಡು ಬಂದವಳೇ ನನ್ನ ಕೈ ಹಿಡಿದು ತನ್ನ ಮನಗೆ ಎಳೆದೊಯ್ದಳು. ಅಲ್ಲಿಂದ ಕಿಟಕಿಯಲ್ಲಿ ನೋಡಿದರೆ ನನ್ನ ಹೊಲಿಗೆ ಕ್ಲಾಸಿನ ಮೆಶೀನುಗಳೆಲ್ಲ ರಸ್ತೆಯಲ್ಲಿ ಬಿದ್ದಿದ್ದವು! ನನ್ನ ಕಣ್ಣಲ್ಲಿ ನೀರಿಳಿಯತೊಡಗಿತು. ಏನಾಗಿತ್ತು ಅಂದರೆ ಆ ಸುಶೀಲಾ ಎಂಬಾಕೆ ನನ್ನ ಹೊಸ ಶಿಷ್ಯೆ ನಮ್ಮ ಪಿಕ್ನಿಕ್ಕಿಗೆಂದು ಬಂದವಳು ಪಿಕ್ನಿಕ್ ತಾಣದಲ್ಲಿ ಇಳಿದೇ ಇರಲಿಲ್ಲ. ಯಾಕೆಂದರೆ ಬಸ್ಸಿನ ಕೊನೆಯ ಸೀಟಿನಲ್ಲಿ ಆ ಊರಿನ ಚೇರ್ಮನ್ ರ ಮಗಳಾಗಿದ್ದ ಏಜಾಜಳ ಅಣ್ಣ ಹಿಂದಿನ ಸೀಟಲ್ಲೇ ಕೂತಿದ್ದನಂತೆ. ಆ ಇಬ್ಬರೂ ಸೀದಾ ನನ್ನ ಊರಿನ ಪೋಲಿಸ್ ಸ್ಟೇಷನ್ನಿಗೆ ಹೋಗಿ ಅಲ್ಲಿ ನಪೋಲೀಸರ ಬಳಿ ತಮಗೆ ಮದುವೆ ಮಾಡಿಸುವಂತೆ ಕೋರಿದ್ದರಂತೆ. ಅಲ್ಲಿನ ಒಬ್ಬ ಪೋಲೀಸು ಇದಕ್ಕೆ ಒಪ್ಪಿ ನಿಧಾನಕ್ಕೆ ಚೇರ್ಮನ್ ಸಾಹೇಬರಿಗೆ ಫೋನ್ ಮಾಡಿ ನಿಮ್ಮ ಮಗ ಹೀಗೆ ಒಂದು ಹಿಂದೂ ಹುಡುಗಿಯನ್ನು ಕರೆತಂದಿದ್ದಾನೆ ಮದುವೆ ಮಾಡಿಸಬೇಕಂತೆ ಎಂದುಬಿಟ್ಟಿದ್ದ.

ಹೀಗೆ ಸುದ್ದಿ ಗೊತ್ತಾಗಿದ್ದೇ ಊರಿಡೀ ಕನಲಿ ಕೂತಿತ್ತು. ರಾತ್ರಿ ಹೊಡೆದಾಟವೂ ನಡೆದು ಪೋಲೀಸರ ಆಗಮನದಿಂತ ಅಲ್ಲಿಗಲ್ಲಿಗೇ ನಿಂತಿತ್ತು. ಸುಶೀಲ ತುಂಬು ಗರ್ಭಿಣಿ ಎಂದು ತಾಹೆರಾಳ ಮಾತಿನಿಂದ ಗೊತ್ತಾಯಿತು. ನಾನು ಬಂದಕೂಡಲೇ ಪಂಚಾಯ್ತಿ ಮಾಡುವುದೆಂದು ತೀರ್ಮಾನಿಸಲಾಗಿತ್ತಂತೆ. ನಾನೇ ಏನೂ ತಿಳಿಯದ ಹುಡುಗಿ. ಇದೀಗ ಪ್ರೇಮಪ್ರಕರಣವೊಂದನ್ನು ಬಗೆಹರಿಸಲು ಪಂಚಾಯ್ತಿಗೆ ಹೀಗೆ ಏಕಾಏಕಿ ನಿಲ್ಲಬೇಕೆಂದರೆ! ನೆನ್ನೆಯ ತನಕವೂ ಜೀವವನ್ನೇ ಬಿಡುತ್ತಿದ್ದ ಮಹಿಳೆಯರೊಬ್ಬರೂ ನನ್ನನ್ನು ಮಾತನಾಡಿಸಲಿಲ್ಲ. ಟೀಚರಮ್ಮಾ ಆರಾಮ್ ಕೀ? ಎಂದು ಪ್ರೀತಿಯಿಂದ ಮಾತಾಡಿಸುತ್ತಿದ್ದ ಗಂಡಸರೂ ಗರಮ್ ಇದ್ದರು. ನನ್ನ ಎದೆ ನಗಾರಿಯಾಗಿತ್ತು. ಇಲ್ಲಿ ನನ್ನ ಎರಡು ತಪ್ಪುಗಳು ಇದ್ದವು ಮೊದಲನೇದು ಪಿಕ್ನಿಕ್ ಏರ್ಪಡಿಸಿದ್ದು, ಎರಡನೇದು ನಾನೇ ಮುಂಚಿತವಾಗಿ ಹೋಗಿ ಎಲ್ಲರನ್ನೂ ಕರೆದುಕೊಂಡು ಪಿಕ್ನಿಕ್ ಹೊರಡದಿದ್ದುದು. ಆ ದಾರಿಯಲ್ಲಿ ಬಸ್ಸುಗಳೇ ಇಲ್ಲದ್ದರಿಂದ ನಾನವರ ಮೇಲೆ ನಂಬುಗೆ ಇಟ್ಟಿದ್ದೆ. ಏಜಾಜ್ ಎಲ್ಲ ಗೊತ್ತಿದ್ದರೂ ಸುಶೀಲ ಬರುವುದಿಲ್ಲ ಎಂದು ಮೊದಲೇ ಎಂದಿದ್ದಳು. ಅಸಲಿಗೆ ಈ ಮದುವೆಯ ಯೋಜನೆ ಕಾರ್ಯಗತ ಗೊಳಿಸುವುದಕ್ಕಾಗಿಯೇ ಈ ಪಿಕ್ನಿಕ್ ಎಂಬ ಖೆಡ್ಡಾವನ್ನು ನನಗಾಗಿ ತೋಡಿಟ್ಟಿದ್ದಳು ಅವಳು.

ಆಗಿದ್ದಾಗಲೆಂದು ಪಂಚಾಯ್ತಿಗೆ ನಿಂತೆ. ವಿನಮ್ರವಾಗಿ ಎರಡೇ ಮಾತಲ್ಲಿ ನಾನು ಪಾರಾದೆ. ನಾನು ಅವರಿಗೆ ಕೇಳಿದ ಮೊದಲ ಪ್ರಶ್ನೆ “ಈ ಸುಶೀಲ ಕಟಿಂಗ್ ಕ್ಲಾಸಿಗೆ ಬಂದು ಕೆಟ್ಟಳು ಅಂತೀರಿ. ಆದರೆ ನನ್ನ ಕ್ಲಾಸಿಗೆ ಬರತೊಡಗಿ ಆದದ್ದು ಕೇವಲ ಒಂದು ತಿಂಗಳು. ಇದು ಹಾಜರಿ ಪುಸ್ತಕ. ಒಂದು ತಿಂಗಳಲ್ಲಿ ತುಂಬು ಬಸುರಿ ಆಗಲು ಹೇಗೆ ಸಾಧ್ಯ? ಎಂದು. ಎಲ್ಲರೂ ಅವಕ್ಕಾದರು. ಎರಡನೇದು ನನ್ನ ಕಟಿಂಗ್ ಕ್ಲಾಸಿನಲ್ಲಿ ಯಾವೊಬ್ಬ ಹುಡುಗನಿಗೆ ನಾನು ಕ್ಲಾಸ್ ತೆಗೆದುಕೊಂಡಿದ್ದೇನೆಯೇ? ಎಂದು. ಎಲ್ಲರೂ ಇಲ್ಲ ಎಂದರು. ಇಷ್ಟೇ ಮತ್ತೆ ಮಾತೇ ಇಲ್ಲ. ಮೆಶೀನುಗಳೆಲ್ಲ ರಸ್ತೆಯಿಂದ ಕೋಣೆಗೆ ಬಂದವು. ಒಬ್ಬೊಬ್ಬರಾಗಿ ಕ್ಷಮೆ ಕೇಳಿ ‘ಬೇಜಾರ್ ಕರ್ನಕ್ಕೋ ಮಾ’ ಎಂದರು. ತರಗತಿಯನ್ನು ಮುಂದುವರೆಸಲು ಹೇಳಿದರು. ಆ ಹುಡುಗಿಯನ್ನು ಸೊಸೆ ಮಾಡಿಕೊಳ್ಳುವುದಾಗಿ ಚೇರ್ಮನ್ ಸಾಹೇಬರು ಎಲ್ಲರೆದುರೂ ಒಪ್ಪಿದರು. ಅಷ್ಟರಲ್ಲಿ ಸುಶೀಲಳ ಮನೆಯವರು ಆಕೆಯನ್ನು ಬೇರೆ ಊರಿಗೆ ಕಳಿಸಿಯಾಗಿತ್ತು. ಹೀಗೆ ಪ್ರೇಮವೊಂದು ಅಂತ್ಯ ಕಂಡಿತ್ತು. ನಾನೂ ಮತ್ತೆ ಆ ಊರಿಗೆ ಹೋಗಲಿಲ್ಲ.

——–

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 7 hours ago No comment

  ತೇಪೆಗಳೆಂದರೆ…

        ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

 • 23 hours ago No comment

  ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

          ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

 • 1 day ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

 • 2 days ago No comment

  ಇದ್ಯಾವ ಪರಿ?

        ಕವಿಸಾಲು       ಥೇಟು ನವಿಲುಗರಿಯ ಹಾಗೆ ಮನಸಿನ ಪುಟಗಳ ನಡುವೆ ಬೆಚ್ಚಗೆ ಅಡಗಿ ಮರಿಯಿಟ್ಟು ನೆನೆದು ನೇವರಿಸಿದಾಗೆಲ್ಲ ಮುದ ಕೊಡುವ ನವಿರು, ನವಿರು! ಎದುರಿಲ್ಲದೆ, ಇಡಿಯಾಗಿ ಸಿಗದೆ ಕಲ್ಪನೆಗಳ ಚಿಗುರು ಕುಡಿಗಳಲಿ ನಳನಳಿಸಿ ಬಳುಕಿ ಬಾಗಿ ಕೆನ್ನೆಯಲಿ ಕಚಗುಳಿಯಾಗಿ ಬೆಚ್ಚಗೆ ಹರಿವ ಉಸಿರು! ಹೂಬನದ ಸೊಬಗಲ್ಲಿ ಮಲ್ಲಿಗೆಯ ಅರಳಲ್ಲಿ ದಳಗಳ ಸುತ್ತುಗಳಲಿ ಹಾಸಿ ಮಲಗಿದ ಕಂಪಾಗಿ ಮೈಮನಗಳ ಆಹ್ವಾನಿಸಿ ಕರೆವ ಕಂಪಿಗೆ ...

 • 3 days ago No comment

  ಎರಡು ಕವಿತೆಗಳು

      ಕವಿಸಾಲು       ನಿನ್ನ ತೋಳ ಜೋಲಿಯಲಡಗಿರಬೇಕು ನೋಡು ತುಂಡು ಚಂದ್ರನ ಜೋಕಾಲಿ ಆಗಾಗ ಫಳ್ಳನೆ ಇಣುಕುವ ನಕ್ಷತ್ರ ಹಾಡಿನಂಥ ನಿಮ್ಮಿಬ್ಬರ ಕತೆ ನಿನ್ನ ಅನುಪಮ ನಂಬಿಕೆಯ ರಾಗ ಜಗದೇಕವೆಂಬಂತೆ ನನ್ನೆದೆ ಹಾಕುವ ತಾಳ ಮಬ್ಬಾದರೂ ಮುದ್ದುಕ್ಕಿಸುವ ಅವಳ ಮುಖ ಅಲ್ಲಿ ನಿನ್ನ ಭೋರ್ಗರೆವ ಅಳು ನಿನ್ನ ದನಿಯಲ್ಲಿನ ಅವಳ ನೋವು ಒಮ್ಮೆ ತುಣುಕು ತುಣುಕುಣುತಾ ಮದವೇರಿದ ವಿಷಕನ್ಯೆಯಂತನಿಸುವ, ಒಮ್ಮೊಮ್ಮೆ ಗುಟುಕೊಂದೊಂದೂ ಪೇರಿಸಿಟ್ಟುಕೊಂಡು ವಿಷವೇರಿ ...


Editor's Wall

 • 17 November 2017
  1 day ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

 • 14 November 2017
  4 days ago No comment

  ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

      ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

 • 09 November 2017
  1 week ago No comment

  ಕೆಂಡದಂಥ ಕಾವ್ಯ

  ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...

 • 07 November 2017
  2 weeks ago One Comment

  ಕಾಲದೊಂದೊಂದೇ ಹನಿಯು ಹರಿದುಹೋಗುವ ಸದ್ದು

  ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ಹಂಚಲು ತೊಡಗಿದೆ.  * * *         ನಾವು ಓಡುತ್ತಿರುವ ರಭಸಕ್ಕೆ ನಮ್ಮ ಅರಿವಿಗೇ ಬರುವುದಿಲ್ಲ, ಅದ್ಯಾವ ಹೊತ್ತಲ್ಲಿ ಜೀವಶಕ್ತಿ ತನ್ನ ಒಂದು ...

 • 06 November 2017
  2 weeks ago No comment

  ಕಾಣದ ಕಡಲಿನ ಮುಂದೆ…

  ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ಹಂಚಲು ತೊಡಗಿದೆ.  * * *         ಕಾವ್ಯದ ಸೌಂದರ್ಯ ಇರುವುದೇ ಅದರ ಅಮೂರ್ತತೆಯಲ್ಲಿ. ಕವಿತೆಯನ್ನು ಬರೆದ ಕವಿಗಿಂತ ಅದನ್ನು ಓದಿದವರಿಗೇ ಒಮ್ಮೊಮ್ಮೆ ...