Share

ನೆಟೋಗ ಮೂಗು, ಕೆಂಪನ್ನ ತುಟಿ, ದೊಡ್ಡ ತುರುಬ, ಐದೂವರಿ ಅಡಿ ಎತ್ತರ…!
ಹಟ್ಟಿ ಸಾವಿತ್ರಿ ಪ್ರಭಾಕರಗೌಡ

 

 

ನಮ್ಮ ಬಳಗದ ಯಾರೇ ಸತ್ರೂ ಸತ್ಯಮ್ಮ ಅಳಾಕ್ಹತ್ತೀದ್ಲಂದ್ರ ಕಲ್ಲು ಸೈತ ಕರಿಗಿ ಕಣ್ಣೀರಾಕ್ಕಿದ್ವು. ಅಷ್ಟು ಚೆಂದ ಅಳಾಕಿ.

 

 

 

 

“ಲೇ ಬಿಡಲೇ ಸತ್ತೀ, ಅಯ್ಯಯ್ಯೋ ಬಿಡಲೇ, ಇನ್ನೊಮ್ಮೆ ಹಂಗನ್ನಂಗಿಲ್ಲ ಬಿಡಲೇ…” ಅಂತ ಎಲ್ಲಪ್ಪಜ್ಜನ ಧ್ವನಿ ಕೇಳಿತಂದ್ರ ನಾನು ಕೈಯ್ಯಾಗಿದ್ದ ಪುಸ್ತಕಾನ ಇಲ್ಲಾ ಮಲ್ಲಿಗೀ ಹೂವಿನ ಮಾಲೀನ ಅಲ್ಲೇ ಒಗದು ಹೊರಗೋಡಿ ಹೊಕ್ಕಿದ್ದೆ ನಮ್ಮ ಓಣ್ಯಾಗಿರೂ ಆ ವಠಾರಕ್ಕ. ಅಷ್ಟು ಹೊತ್ತಿಗೆ ನನ್ನಂಗ ತಂತಮ್ಮ ಮನ್ಯಾಗಿಂದ ಭಾಳ ಮಂದಿ ಬಂದು ಅಲ್ಲಿ ಸೇರ್ತಿದ್ರು. ಹೂವು ಹೆಣೆಯಾಕ್ಹತ್ತಿರತಿದ್ದ ನಮ್ಮ ಓಣೀ ಹೆಣ್ಮಕ್ಕಳು ಹೂವನ್ನ ಬುಟ್ಯಾಗ ತುಂಬಿಕೊಂಡ ಇಲ್ಲಾ ಉಡಿಯಾಗ ತುಂಬಿಕೊಂಡು ಹೊರಬಂದು ತಂತಮ್ಮ ಮನಿ ಕಟ್ಟೀ ಮ್ಯಾಲೆ ಕುಂತ್ಕೊಂಡು ಒಂದ್ಕ್ಯಾಡು ಕೆಲಸ ಮಾಡಾಕ ಹತ್ತಿದ್ರು. ಅಂದ್ರ ಕೈ ಹೂವ ಕಟ್ಟೀದ್ರ ಅವರ ಕಿವಿ ಕಣ್ಣು ಮನಸ್ಸು ಎಲ್ಲಾ ಮಸರಿನ ಸತ್ಯಮ್ಮ ಮತ್ತ ಎಲ್ಲಪ್ಪಜ್ಜನ ಹಾಸ್ಯಾಯಣವನ್ನ ಸವೀತಿದ್ವು. ಇಂಥಾ ಪ್ರಸಂಗ ಸಾಮಾನ್ಯವಾಗಿ ಸಾಯಂಕಾಲನಾ ನಡೀತಿದ್ವು. ಯಾಕಂದ್ರ ಆ ಹೊತ್ತಿಗಿ ಹೊಲದಾಗಿಂದ ಮನಿಗಿ ಬರೋವ್ರ ಗೋಧೂಳಿ ಸಂಭ್ರಮ, ಧೂಳು ಎಬ್ಬಿಸ್ಕೊಂತ ಬರೂ ದನ-ಕರುಗಳ ಕೊಳ್ಳ ಗಂಟೆಯ ನಾದ, ಎಲ್ಲಾರ ಮನ್ಯಾಗ ಚಹಾ ಪರಿಮಳ, ಜೊತಿಗಿ ಮೆಲ್ಲಕ ಬಿರಿದು ಓಣಿ ತುಂಬ ಘಮ್ಮನ ಪರಿಮಳ ಹರಡೂ ಮಲ್ಲಿಗಿ ಹೂವು ಆ ವ್ಯಾಳ್ಯಾಕ ಸೊಗಸು ನೀಡ್ತಿದ್ವು.

ಎಲ್ಲಪ್ಪಜ್ಜ ವರಸ್ಯಾಗ ಮೊಸರಿನ ಸತ್ಯಮ್ಮಗ ಮಾವ ಆಕ್ಕಿದ್ದ. ಅವರ ಹಾಸ್ಯ ಪ್ರಸಂಗಗಳ್ನ ನಾನು ನೋಡೂ ದಿನದಾಗ ಆಗಲೇ ಅವರು ಅರವತ್ತರ ಗಡಿ ದಾಟಿದ ಮುದುಕ ಮುದುಕಿಯಾಗಿದ್ರು. ಆದ್ರೂ ಅವರ ಹಾಸ್ಯ, ನಗೆಚಾಟಿಕೆಗೇನೂ ಕಮ್ಮಿ ಇರಲಿಲ್ಲ. ಎಲ್ಲಪ್ಪಜ್ಜನ ಮನಿ ನಮ್ಮ ವಠಾರ ದಾಟಿ ಹತ್ತು ಹದಿನೈದು ಮನಿ ದಾಟಿ ಹೋದ್ರ ಸಿಗೂದು. ಸತ್ಯಮ್ಮನ ಮನಿ ನಮ್ಮನಿ ಹತ್ರಾನ ಮೂರು ನಾಕು ಮನಿ ದಾಟಿ ಇರೂದು.

ಮಸರಿನ ಸತ್ಯಮ್ಮ ಅಂತ ಯಾಕಂತಿದ್ರು ಅಂದ್ರ ಆಕಿ ಮೊಸರು ಮಾರ್ತಿದ್ಲು. ಕ್ಚ್ಯ! ಆಕಿ ಹೆಂಗಿದ್ಲಂದ್ರ ಆ ಮುಪ್ಪಿನ ವಯಸ್ಸಿನ್ಯಾಗನೂ ಅಷ್ಟು ಚೆಲುವಿದ್ಲು. ನೆಟೋಗ ಮೂಗು, ಕೆಂಪನ್ನ ತುಟಿ, ಕೊರೆದಿಟ್ಟಂಥಾ ಹಲ್ಲು, ದೊಡ್ಡ ತುರುಬ. ಐದೂವರಿ ಅಡಿ ಎತ್ತರಿದ್ಲು. ಕಟ್ಟು ಮಸ್ತಾದ ದೇಹ. ನೀಲಿ ಇಲ್ಲಾ ಅಂಜೂರಿ ಬಣ್ಣದ ಹುಬ್ಬಳ್ಳಿ ದಡಿ ಸೀರಿ, ಸಾಂಪ್ರದಾಯಿಕ ವಿನ್ಯಾಸದ ಕುಬ್ಬಸ ಉಟ್ಕೊಂತಿದ್ಲು. ಆದ್ರ ಆಕೀ ಗಂಡ ಸತ್ತಿದ್ರಿಂದ ಅಲಂಕಾರ ಏನೂ ಮಾಡ್ಕೊಂತಿರಲಿಲ್ಲ. ಅಲಂಕಾರ ಮಾಡ್ಕೊಂಡ್ರ ಇನ್ನೂ ಎಷ್ಟು ಚೆಂದ ಕಾಣ್ತಿದ್ಲೇನಾ ಅಂತ ನಾನು ಯೋಚ್ನೆ ಮಾಡ್ತಿದ್ದೆ ಒಮ್ಮೊಮ್ಮೆ. ಬಂದ್ಲಂದ್ರ ನೆಲ ದಗ್ ದಗ್ ಅಂತ ಸಪ್ಳಾಕ್ಕಿತ್ತು. ಅದರಾಗೂ ನಮ್ಮ ಮನಿ ಮುಂದಿನ ರಸ್ತೆದಾಗ ಭಾಳ ಮಂದೀವು ಜ್ವಾಳದ ಹಗೇವು ಅದಾವು. ಹಗೇವು ಅಂದ್ರ ಕಾಳು ಕಡಿಗಳ್ನ ಸಂಗ್ರಹಿಸಿಡೂ ಸಾಂಪ್ರದಾಯಿಕ ಗೋಡೌನ್, ವಾಸಸ್ಥಾನಕ್ಕಿಂತ ಎರಡು ಆಳು ತಳಗ ಭೂಮಿ ಅಗದು, ನೆಲಮನಿ ಥರ ಮಾಡಿ ಅದನ್ನ ವಗಾತಿ ಮಾಡಿ ಅದಕ್ಕ ಸಣ್ಣ ಬಾಯಿ ಬಿಟ್ಟು ಕಲ್ಲಿನಿಂದ ಮುಚ್ಚಿರ್ತಾರ. ಸುಗ್ಗಿ ಕಾಲದಾಗ ಒಕ್ಕಲಿ ಮಾಡಿದ ಮ್ಯಾಲೆ ಬೇಕಾದಷ್ಟು ಜ್ವಾಳ ಮನ್ಯಾಗಿಟ್ಕೊಂಡು ಉಳಿದುದೆಲ್ಲಾ ಹಗೇವಕ್ಕ ಹಾಕ್ತಾರ. ಅಗತ್ಯ ಇದ್ದಾಗ ಹಗೇವ ಬಾಯಿ ತಗದು ಜ್ವಾಳ ತಕ್ಕೊಂಡು ಮತ್ತ ಮುಚ್ಚಿಡ್ತಾರ. ಹಗೇವಾದಾಗ ಜ್ವಾಳ ಇದ್ರ ಮನ್ಯಾಗ ಭಾಗ್ಯಲಕ್ಷ್ಮಿ ಇದ್ದಂಗ ಅನ್ನೂದು ನಮ್ಮ ಜನರ ನಂಬಿಕಿ. ಈಗಲೂ ಹಗೇವನ್ನ ಬೇಕಾದವ್ರು ಬಳಸ್ತಾರ. ಆದ್ರ ಮಳಿ ಬೆಳಿ ಕೈ ಕೊಟ್ಕೊಂತ ಹೊಕ್ಕಿರೂ ಈ ಕಾಲದಾಗ ಮನಿ ತುಂಬಿ ಉಳಿದು ಹಗೇವು ತುಂಬೂದಂದ್ರ ಒಂದೀಟು ಕಷ್ಟದ ಮಾತೇ ಸೈ.

ಇದಿರಲಿ ಸತ್ಯಮ್ಮನ ಬಗ್ಗೆ ಹೇಳಾಕ್ಹತ್ತಿದ್ನೆಲ್ಲಾ. ಹಗೇವಿರೂ ಜಾಗದ ಮ್ಯಾಲೆ ಮೆಲ್ಲಕ ನಡೆದರೂ ಒಂಥರಾ ಶಬ್ದ ಬರುತ್ತ. ಅಂಥಾದ್ರಾಗ ಸತ್ಯಮ್ಮನಂಥಾ ದೊಡ್ಡ ದಾಡಸಿ ಆಳು ಬಂದ್ರಂತೂ ಹಗೇವು ದಗ್ ದಗ್ ಅಂತ ಸಪ್ಳಾಗುತ್ತ. ಸತ್ಯಮ್ಮ ಹಂಗ ಬಂದಾಗೆಲ್ಲಾ ನಾನು ಯಾವಾಗರಾ ದೊಡ್ಡಾಕಿ ಆಕ್ಕಿದ್ದೇನಪಾ, ಯಾವಾಗರಾ ಸತ್ಯಮ್ಮನಷ್ಟು ಚೆಂದ ಆಕ್ಕಿದ್ದೇನು ಅಂತ ಕಲ್ಪನೆ ಮಾಡ್ತಿದ್ದೆ. ಆದ್ರ ವಾಸ್ತವ ಏನಂದ್ರ ನಾನು ದೊಡ್ಡಾಕ್ಯಾದೆ. ಆದ್ರ ಸತ್ಯಮ್ಮಷ್ಟು ಚೆಂದ ಹೆಂಗ ಆಗೂದು! ನನ್ನ ಕೊರೆದ ಬೆಂಡೆಕಾಯಿಯಂಥಾ ಮೂಗು ಸಂಪಿಗಿ ಎಸಳಾಗೂದು ಹೆಂಗ? ಗೊಂಬಿಗಿರೂವಂಥಾ ಗುಂಗುರುಗೂದಲ ಹೋಗಿ ಮಾರುದ್ದ ಜಡಿ ಬೆಳಿಯೂದ್ಹೆಂಗ?! ರಕ್ತದಿಂದ ಬಂದ ಕಪ್ಪು ಬಣ್ಣ ಹೋಗಿ ಸತ್ಯಮ್ಮನ ಗೌರವರ್ಣ ಬರೂದ್ಹೆಂಗ! ಸಾಧಾರಣ ಎತ್ತರಾದೆ. ಆದ್ರ ಐದೂವರಿ ಅಡಿ ಎತ್ತರಾ ಆಗಾಕ ಏನೆಲ್ಲಾ ಕಸರತ್ತು ಮಾಡೀದ್ರೂ ವ್ಯರ್ಥಾತು. ಸತ್ಯಮ್ಮನಷ್ಟು ಚೆಂದ ಕಾಣ್ಬೇಕು ಅನ್ನೂ ಆಸೆ ಹಂಗಾ ಉಳೀತು.

ಎಲ್ಲಪ್ಪಜ್ಜ ದಿನಾಲೂ ನಮ್ಮ ವಠಾರಕ್ಕ ಬರದಿದ್ರೂ ವಾರದಾಗ ಮೂರು ನಾಕು ದಿನ ಆದ್ರೂ ಬರತಿದ್ದ. ನಾವೆಲ್ರೂ ಒಂದಾ ಬಳಗದವ್ರು. ಅದಕ್ಕಾ ಅಲ್ಲಿ ಒಂಥರಾ ಆತ್ಮೀಯತೆ ಇರತಿತ್ತು. ಮತ್ತಷ್ಟು ರಂಗು ರಂಗಿನ ತಮಾಷೆ ಹಾಸ್ಯ ನಡೀತಿದ್ವು. ಎಲ್ಲಪ್ಪಜ್ಜ ಬಂದಿದ್ದು ಸತ್ಯಮ್ಮನ ಲಕ್ಷ್ಯಕ್ಕ ಬಾರದಾ ಇದ್ದಾಗ ಅಜ್ಜ, “ಏನಲೇ ಸತ್ತೀ ನಿಂದು ಏನ್ ಮಾಡಾಕ್ಹತ್ತೇತಿ” ಅಂಥಾ ಸತ್ಯಮ್ಮನ ಅಲರ್ಟ್ ಮಾಡ್ತಿದ್ದ. ಅಲ್ಲಿಗಿ ಆತನ ಕಥಿ ಮುಗೀತಂತಾನ ಅರ್ಥ. ಆಗ ಸತ್ಯಮ್ಮ, “ಬಂದ್ಯಾ ಬಾರಲೋ ಮಾವ” ಅಂದಾಕಿನಾ ಎದ್ದಾ ಬಿಡ್ತಿದ್ಲು. ನೋಡು ನೋಡುತ್ಲೇ. “ನಿಂದೇನ್ ಮಾಡಾಕ್ಹತ್ತೇತಿ ಎಲ್ಲೆ ನೋಡ್ತೀನಿ ಒಂದೀಟು” ಅಂದಾಕಿನಾ ಎಲ್ಲಪ್ಪಜ್ಜನ ದೋತರದಾಗ ಇನ್ನೇನು ಕೈ ಹಾಕೇ ಬಿಡ್ತಾಳೇನಾ ಅನ್ನೂವಂಗ ಸ್ಟೈಲ್ ಮಾಡೀದ್ಲಂದ್ರ ಎಲ್ಲಪ್ಪಜ್ಜ ಬರ್ರೆಪೋ ಈ ಹೆಣ್ಣು ಗಂಟು ಬಿದೈತಿ ಅಂತ ಚೂರು ಹಾಸ್ಯಾನೂ ಬೆರೆಸಿ ಚೀರ್ಕೊಳ್ಳಾತ. ಅಲ್ಲಿದ್ದಾರೆಲ್ಲಾ ನಕ್ಕು ನಕ್ಕು ನೆಲ ಕಾಣ್ತಿದ್ರು.

ಎಲ್ಲಪ್ಪಜ್ಜ ಸ್ವಭಾವತಃ ಒಳ್ಳೇತ ಮತ್ತು ಪುಕ್ಕಲ. ಆದ್ರ ಆತನ ಬಾಯಿ ಸುಮ್ಮಕ ಇರ್ತಿರಲಿಲ್ಲ. ಸತ್ಯಮ್ಮ ಸಾಧ್ಯಾದಷ್ಟೂ ಆತನ ಗೋಳಾಡಿಸಿ ಬಿಡಾಕಿ. ನಿಜ ಹೇಳಬೇಕಂದ್ರ ಭಾಳ ಸಲ ಆತನ ಒಲ್ಲೀ ಚುಂಗು ಸೈತ ಹಿಡೀತಿದ್ದಿಲ್ಲ ಆಕಿ. ಆದ್ರ ಹೆದರಿಸೂ ಪರಿ ನೋಡೀದ್ರ ಇನ್ನೇನು ದೋತರ ಹಿಡಿದು ಜಗ್ಗೇ ಬಿಡ್ತಾಳೇನ ಅಥವಾ ದೋತರದಾಗ ಕೈ ಹಾಕಿ ಬಿಡ್ತಾಳೇನಾ ಅನ್ನೂವಂಗ ಮಾಡಾಕಿ. ಆದ್ರ ಎಲ್ಲಪ್ಪಜ್ಜಗ ಕುಮ್ಮಕ್ ನೀಡೂ ಯಾರಾರ ಆತನ ಪಾರ್ಟಿ ಜನ ಇದ್ದಾಗ ಆತ ಒಂದೀಟು ಸ್ಟ್ರಾಂಗ್ ಆಗಿ ಎದುರುತ್ರ ಕೊಡೂದು, ಜಾಸ್ತಿ ಧಿಮಾಕು ಮಾಡೂದು ನಡೀತಿತ್ತು. ಹಾಗಾದಾಗ ಮಾತ್ರ ಸತ್ಯಮ್ಮ, “ಯಾಕ ನಿಂದಕ್ಕ ಹಂಗ ಬಿಟ್ರ ಬಗಿ ಹರ್ಯಂಗಿಲ್ಲ ತಡೀ” ಅಂದಾಕಿನಾ ಒಲ್ಲೀ ಹಿಡಿದು ಎಳದಾ ಬಿಡತಿದ್ಲು. ಎಲ್ಲಪ್ಪಜ್ಜ, ಕಚ್ಚಿ ಬಿಚ್ಚಿದ ದೋತರನ್ನ ಕಳದು ಹೋಗದಂಗ ಹಿಡ್ಕೊಳ್ಳಾಕ ಒಂಥರಾ ಡಂಬರಾಟ ಮಾಡಬೇಕಾಕ್ಕಿತ್ತು. ಸತ್ಯಮ್ಮನ ಪಾರ್ಟಿ ಗೆಳತ್ಯಾರು, “ಹೆಂಗಾತು ನೋಡು ಮುದುವುಂಗಾ, ಕೈ ಇಟ್ಕೊಂಡು ತಣ್ಣಗಿರೂದು ಬಿಟ್ಟು ಆಕಿನ್ನ ತಡವ್ತಿಯಲ್ಲಾ ಮೂಳಾ.. ಈಗ ಏನು ಅನ್ನುತ್ತ ನಿಂದು” ಅಂತ ಮಂಗಳಾರ್ತಿ ಮಾಡ್ತಿದ್ರು. ಆದ್ರ ಇಬ್ಬರ ಪಾರ್ಟಿಗೂ ಸೇರದಾ ಕುಂತಿರ್ತಿದ್ದ ಪ್ರೇಕ್ಷಕರಿಗಿ ಅವರ ಡಬಲ್ ಮೀನಿಂಗ್ ಮಾತು ಕೇಳಿ ನಕ್ಕು ನಕ್ಕು ಕಣ್ಣಾಗ ನೀರು ಬರತಿತ್ತು. ಆದ್ರ ಎಲ್ಲಪ್ಪಜ್ಜ ಮಾತ್ರ, “ತಪ್ಪಾತಲೇ ಸತ್ತಿ, ಇನ್ನೊಮ್ಮಿ ಹಂಗನ್ನಂಗಿಲ್ಲಲೇ, ಬಿಡಲೇ ಯವ್ವಾ..” ಅಂತ ಕೈ ಕೈ ಮುಗಿದ ಮ್ಯಾಲೆ ಅದೂ ಯಾರಾರ ‘ಬಿಡವ್ವಾ ಸತ್ಯವ್ವಾ ಕೈ ಮುಗುದಾನ ಬಿಡು’ ಅಂತ ಮಲ್ಲಮ್ಮ, ಹೊಳೆಯಮ್ಮ ಇಲ್ಲಾ ಆಯಮ್ಮ ಯಾರಾರ ಮಧ್ಯಪ್ರವೇಶಿಸಿ ಹೇಳಿದ ಮ್ಯಾಲೆ ಸತ್ಯಮ್ಮ, “ಹೋಗ್ಲೋ ಮಾವ ಬಾಡ್ಯಾ ಉಳ್ಕೊಂಡಿ” ಅಂತ ತನ್ನ ಜಾಗಕ್ಕ ಕುಂದ್ರಾಕಿ. ಎಲ್ಲಪ್ಪಜ್ಜ ತನ್ನ ಮಧ್ಯಪ್ರದೇಶದ ಹೆದರಿಕಿಯಿಂದ ಪಾರಾಗಿ, ಸತ್ಯಮ್ಮ ಕೈ ಬಿಟ್ಟಿದ್ದಾ ತಡ ಉಸ್ಯೋ ಅಂತ ಕುಂತ್ಕೊಂತಿದ್ದ. ಆದರೂ ಅಲ್ಲಿಂದ ಕದಲೂತನಕ ಏನಾರ ಕಿತಾಪತಿ ಮಾಡೂದು, ಅಣಕಿಸೂದು, ಸತ್ಯಮ್ಮ ಆಗಾಗ ಎದ್ದು ಆತಗ ಹೆದರಿಸೂದು ನಡೆದಾ ಇರ್ತಿತ್ತು. ಅದೊಂದು ಎವರ್ ಗ್ರೀನ್ ಕಾಮಿಡಿ.

ಹಿಂಗಿದ್ದ ಸತ್ಯಮ್ಮ ಜನಪದ ಸಾಹಿತ್ಯದ ಮೂಟೆ ಆಗಿದ್ಲು. ಆಕೀಗಿ ಬರಲಾರದ ಹಾಡು ಇರಲಿಲ್ಲ. ಕೋಲಾಟ, ಗೀಗೀ ಪದ, ಸುಗ್ಗಿ ಹಾಡು, ಮೈನೆರತ ಹುಡುಗಿಯರ ಮ್ಯಾಲಿನ ಹಾಡು, ಸೀಮಂತ ಮಾಡುವಾಗಿನ ಹಾಡು, ಜೋಗಳು ಪದ ಒಂದಲ್ಲ ಎರಡಲ್ಲ. ಅಷ್ಟಾ ಅಲ್ಲ ನಮ್ಮ ಬಳಗದ ಯಾರೇ ಸತ್ರೂ ಸತ್ಯಮ್ಮ ಅಳಾಕ್ಹತ್ತೀದ್ಲಂದ್ರ ಕಲ್ಲು ಸೈತ ಕರಿಗಿ ಕಣ್ಣೀರಾಕ್ಕಿದ್ವು. ಅಷ್ಟು ಚೆಂದ ಅಳಾಕಿ. ಆ ಸತ್ತು ಹೋದ ಸಂಬಂಧಿ/ಕಳು ಹುಟ್ಟಿದಾಗಿಂದ ಸಾಯೂತನಕ ಮಾಡಿದ ಪಾಪ ಪುಣ್ಯದ ಅಂತಿಮ ವರದಿ ಸತ್ಯಮ್ಮನ ಅಳಾಟದಾಗ ಇರತಿತ್ತು. ಸತ್ತವ್ರನ್ನ ನೋಡಾಕ ಹೋದೆನಂದ್ರ ಅಲ್ಲಿ ಸತ್ಯಮ್ಮ ಅಳುವಾಗ್ಲೇ ಆ ಸತ್ತು ಹೋಗಿದ್ದ ವ್ಯಕ್ತಿ ಏನೇನು ಮಾಡಿದ್ದ/ದ್ಲು ಅಂತ ತಿಳ್ಕೊಂತಿದ್ದುದೊಂದು ನನಗ ದೊಡ್ಡ ಲಾಭ.

ಆಕಿ ಬಹುಮುಖ ಪ್ರತಿಭಾವಂತೆ ಆಗಿದ್ಲು. ಹಳ್ಳಿಗಾಡಿನ ಮನರಂಜನೆ, ಆಟ. ಒಗಟಿನ ಪದಗಳಲ್ಲಿ ಆಕಿ ನಮ್ಮ ಲೀಡರ್ ಆಗಿದ್ಲು. ನಮ್ಮ ಕಡಿಗಿ ಗೌರಿ ಹುಣವಿ ಸೀಗಿ ಹುಣವಿ ಬಂದ್ರ ಹೆಣ್ಮಕ್ಕಳಿಗಷ್ಟಾ ಅಲ್ಲಾ ಗಂಡುಮಕ್ಕಳಿಗೂ ದೊಡ್ಡ ಸಡಗರ. ಮಹಾನವಮಿ ಬನ್ನಿ ಮುಡಿದ ದಿನ ರಾತ್ರಿ ಊಟ ಗೀಟ ಮುಗಿಸಿ ಕುಂಬಾರ ಮನಿಗಿ ಹೋಗಿ ಸೀಗವ್ವನ ಮೂರ್ತಿ ತರೂ ಸಂಭ್ರಮ ನಮಗ. ಅಂದ್ರ ಅವತ್ತಿಂದ ಮುಂದೆ ಐದನೇ ದಿನ ಸೀಗಿ ಹುಣ್ಣವಿ ಇರುತ್ತ. ಸೀಗಿ ತರುವ ದಿನ ಎಲ್ಲರ ಮನಿಗೂ ಹೋಗಿ ಮುಂದಾಳಾಗಿ ಸೀಗಿ ತರೂದೈತಿ ಬರ್ರಿ ಅಂತ ಸತ್ಯಮ್ಮ ಕರೀತಿದ್ಲು. ನಾವು ಹೆಣ್ಣು ಹುಡುಗ್ಯಾರೆಲ್ಲಾ ಸತ್ಯಮ್ಮನ ಜೊತಿಗಿ ಹೊಂಡ್ತಿದ್ವಿ. ಎಲ್ಲರ ಓಣ್ಯಾಗೂ ಸೀಗಿ ತಂದು ಕುಂದ್ರುಸಿ ಆರತಿ ಮಾಡೂ ಸಂಭ್ರಮ ಈಗ್ಲೂ ಐತಿ. ಆದ್ರ ಸತ್ಯಮ್ಮ ಇದ್ದಾಗ ನಮ್ಮೂರಾಗ ಅದರಾಗೂ ನಮ್ಮ ಓಣ್ಯಾಗ ಸೀಗವ್ವನ ಸಂಭ್ರಮ ದೊಡ್ಡದಾಕ್ಕಿತ್ತು. ನಮ್ಮ ಓಣಿ ದಾಟಿ ಪತ್ತಾರ ಓಣಿ, ಗೌಡ್ರ ಓಣಿ, ಆಚಪ್ಪನ ಬೈಲು, ಬಜಾರ ಓಣಿ ದಾಟಿಕೊಂಡು ಕುಂಬಾರ ಓಣ್ಯಾಗಿನ ಮೊದಲೆ ಯಾರಿಗಿ ಹೇಳಿರತಿದ್ವಿ ಅವರ ಮನಿಗಿ ಹೋಗ್ಬೇಕಿತ್ತು ಸೀಗವ್ವನ ತರಾಕ. ಆ ಮನಿ ಮುಟ್ಟೂತನಕ ಸತ್ಯಮ್ಮ ಸೀಗಿ/ಗೌರಿ ಪದ ಹಾಡಾಕಿ. ಆಕಿ ಜೊತಿಗಿ ಮಲ್ಲಾಚಿಗವ್ವ ಧ್ವನಿಗೂಡ್ಸಾಕಿ. ನಾವು ಹಿಂಬಾಲಕರು ಹಿನ್ನೆಲೆ ಗಾಯಕರಾಗಿರತಿದ್ವಿ. ಅಲ್ಲಿಗಿ ಹ್ವಾದ ಮ್ಯಾಲೆ ಕುಂಬಾರಣ್ಣ ಮೊದಲೆ ತಯಾರ್ಮಾಡಿಟ್ಟಿದ್ದ ಹದವಾದ ಮಣ್ಣು ತಗೊಂಡು ತಿಗರಿಗಿ ಮತ್ತ ಮಣ್ಣಿಗಿ ಪೂಜೆ ಮಾಡ್ತಿದ್ದ. ಆಮ್ಯಾಲೆ ಅದನ್ನ ತಿಗರಿಗೊಪ್ಪಿಸಿ ತಿರುಗಿಸಿ ಸೀಗವ್ವನ ರುಂಡ ಮುಂಡಕ್ಕ ರೂಪ ಕೊಟ್ಟು ಆಮ್ಯಾಲೆ ಆಕೀಗಿ ಹುಬ್ಬು ಕಣ್ಣು ಮೂಗು ಬಾಯಿ ಕೈ ಕಾಲು ಎಲ್ಲಾ ಸೃಷ್ಟಿಸಾಕ್ಹತ್ತಿದನಂದ್ರ ನನಗಂತೂ ಆತ ಸಾಕ್ಷಾತ್ ಬರಮಪ್ಪದೇವರು ಕಂಡಂಗಾಕ್ಕಿದ್ದ. ಸೀಗವ್ವನ ಸೃಷ್ಟಿಯಾದ ಮ್ಯಾಲೆ ಮತ್ತೊಮ್ಮೆ ನಮ್ಮ ಬಳಗ ಪೂಜೆ ಮಾಡ್ತಿತ್ತು. ಸತ್ಯಮ್ಮ ಪೂಜೆ ಮಾಡ್ತಿರಲಿಲ್ಲ. ಆದ್ರ ನಮ್ಮ ಬಳಗಕ್ಕ ಮಾರ್ಗದರ್ಶನ ಮಾಡ್ತಿದ್ಲು ಪೂಜೆ ಹೆಂಗ್ಹೆಂಗ ಮಾಡ್ಬೇಕು ಅಂತ. ಪೂಜೆ ಮುಗಿಸಿ ತಗೊಂಡು ಹೋಗಿರತಿದ್ದ ಹಣ್ಣು ಕಾಯಿ, ಚುರುಮರಿ ಬೆಲ್ಲ, ಕೊಬ್ರಿ ಅರಿಷಿಣ ಕುಂಕುಮ ಬಳೆ ಕುಂಬಾರಕ್ಕಗ ಕೊಟ್ಟು ಮ್ಯಾಲೊಂದಿಷ್ಟು ಐದೂ ಪಾವಲಿ ಇಲ್ಲಾ ಯಾಡೂ ಪಾವಲಿ ದಕ್ಷಿಣಿ ಕೊಡ್ತಿದ್ವಿ. ಒಬ್ಬಾಕಿ ಯಾವಾಕ್ಯಾರ ಅಕ್ಕ ಅಥವಾ ಚಿಗವ್ವ ಸೀಗವ್ವನ ಬುಟ್ಯಾಗ ಕುಂದ್ರುಸಿ ತಲೆ ಮ್ಯಾಲೆ ಹೊತ್ತುಕೊಳ್ಳಾರು. ಮತ್ತೆ ಚೆಂದಾ ಚೆಂದ ಹಾಡು ಹಾಡ್ಕೊಂತ ದಾರಿ ಹಿಡಿದೆವಂದ್ರ ಎಲ್ಲಾರು ನಿಂತು ನೋಡಾರು. ನಾವು ನಮ್ಮ ಓಣಿಗಿ ಬಂದು ದೈವದ ಮನ್ಯಾಗ ಸೀಗವ್ವನ ಕುಂದ್ರುಸಿ ಆರತಿ ಮಾಡ್ತಿದ್ವಿ. ಹಿಂಗ ಹೊನ್ನಂಬರಿ ಹೂವು, ಗುರೆಳ್ಳು ಹೂವು ಸೀಗವ್ವಗ ಮುಡಿಸಿ, ಕಣಕದಾರತಿ ನಾಲ್ಕುದಿನತನಕ ಮಾಡ್ತಿದ್ವಿ. ಐದನೇ ದಿನಕ ಸಕ್ರಿ ಆರತಿ.

ಸೀಗವ್ವನ ಕುಂದ್ರುಸಿದ ಐದನೇ ದಿನಕ್ಕ ಸೀಗಿ ಹುಣವಿ. ಅವತ್ತ ನಮ್ಮ ಸಡಗರ ಹೇಳತೀರದ್ದು. ಚೆಂಡು ಹೂವಿನ ದಂಡಿಯೇನು, ಸ್ಯಾವಂತಿಗಿ ಹೂವಿನ ದಂಡಿಯೇನು ಸಕ್ರಿ ಆರತೇನು ನೋಡುತಕ್ಕದ್ದು. ನನಗಂತೂ ಅವ್ವ ಗುತ್ತಗೆ ಹೂವು ಹೆಣೆದು ದಂಡಿ ಮಾಡಾಕಿ. ಅಕ್ಕಾರು ಆಗ್ಲೇ ದೊಡ್ಡಾರಾಗಿದ್ರಿಂದ ದಂಡಿ ಹಾಕ್ಕೊಂಡು ಸೀಗವ್ವಗ ಆರತಿ ಬೆಳಗೂ ಭಾಗ್ಯ ನನಗ ಮತ್ತ ತಂಗೀಗೆ ಇತ್ತು. ಆದ್ರ ನನ್ನ ತಂಗಿ ಮನ್ಯಾಗ ಸಣ್ಣ ಮಗಳು. ಆಕೀ ಯಾವ ವ್ಯಾಳ್ಯಾದಾಗ ನಿದ್ದಿ ಮಾಡ್ತಾಳ ಯಾವ ವ್ಯಾಳ್ಯದಾಗ ಎಚ್ಚರಿರ್ತಾಳ ಅಂತ ಹೇಳಾಕ್ಕಾಕ್ಕಿರಲಿಲ್ಲ. ಆದ್ರ ಸತ್ಯಮ್ಮನ ಖಾಸಾ ಪುಟ್ಟ ಗೆಳತಿಯಾಗಿದ್ದ ನನಗ ಸಾದಾ ದಿನದಾಗ ಲಗೂನ ನಿದ್ದಿ ಮಾಡೂ ಭಾಗ್ಯ ಇರಲಿಲ್ಲ. ಅಂಥಾದ್ರಾಗ ಹಬ್ಬ ಹರಿದಿನ ಇದ್ದಾಗ ಕೇಳೂದ ಬ್ಯಾಡ. ಸೀಗೀ/ಗೌರೀ ಹುಣವಿ ಬಂದಾಗಂತೂ ನಾನು ಸಾಕ್ಷಾತ್ ಸೀಗಿಕ್ಕಿಂತ ಜಾಸ್ತಿ ಧಿಮಾಕು ಮಾಡ್ತಿದ್ದೆ. ಅವ್ವ ಇಲ್ಲಾ ಅಕ್ಕಾರು ಭಾಳ ಹುಷಾರಿಂದ ನನಗ ದಂಡಿ ಹೆಣದು ತಲಿಗಿ ಅಲಂಕಾರ ಮಾಡಬೇಕಿತ್ತು. ಒಂದು ಹೂವು ಹೆಚ್ಚೂ ಕಡಿಮಿ ಆದ್ರೂನು ಸೀಗವ್ವಗ ಬೆಳಗೂ ಆರತೀನ ನಮ್ಮವ್ವ ಅಕ್ಕಾರಿಗೆ ಬೆಳಗಿಬಿಡತಿದ್ದೆ. ಹಂಗಾಗಿ ಹೆಚ್ಚೂ ಕಡಿಮಿ ಆದ್ರ ಹೂವಿನ ದಂಡಿಗಿ ಒಂದು ಗತಿ ಕಾಣಿಸ್ತೀನಿ ಅಂತ ಅಕ್ಕಾರಿಗೆ ಹೆದರಿಕಿ. ಅಷ್ಟಾ ಅಲ್ಲದಾ ಆ ಹೂವಿನ ದಂಡಿ ಕನಿಷ್ಠ ಎರಡು ಮೂರು ದಿನವಾದ್ರೂ ಸಾಲಿಗಿ ಹಾಕ್ಕೊಂಡು ಹೋಗುವಷ್ಟು ಬಾಳಿಕಿ ಬರೂವಂಗಿರಬೇಕಿತ್ತು. ರಾಮಾಚಾರಿ ಫಿಲಮ್ ಬಂದ ವರ್ಷ ಅಕ್ಕಾರಿಬ್ರೂ ನನ್ನ ಕಳವಿನಿಂದ ಮಾತಾಡ್ತಿದ್ರು, “ಲೇ ಹುಷಾರಿರು, ನಂದಿನಿ ದಂಡಿ ಅಂದ್ರ ಹೆಂಗಿರಬೇಕು ಗೊತ್ತೈತಿಲ್ಲಾ..” ಅಂತ ರಾಮಾಚಾರಿ ಸಿನಿಮಾದಾಗಿನ ಮಾಲಾಶ್ರೀಗೆ ಹೋಲಿಸಿ ಆಡಿಕೊಂಡು ನಗ್ತಿದ್ರು. ಅದು ನನ್ನ ಕಿವಿಗಿ ಬಿದ್ದು ಆ ವರ್ಷ ಗೌರೀ ಹುಣವ್ಯಾಗ ಅಕ್ಕಾರಿಗಿ ಚೆಂದಾ ಚೆಂದ ಹೊಗಳಿ(ಬೈದು) ಗೌರಿಗಿ ಬೆಳಗೂ ಆರತಿ ಅವರಿಗೆನೆ ಬೆಳಗಿಬಿಟ್ಟಿದ್ದೂ ಉಂಟು. ಹಂಗಾಗಿ ಆ ಎರಡೂ ಹುಣವ್ಯಾಗ ನನ್ನ ಅಕ್ಕಾರು ಸೂಜಿಮೊನಿ ದಾರಿ ಮ್ಯಾಲೆ ನಡೆದಾಡುವಂಥಾ ಅನುಭವಕ್ಕ ಈಡಾಕ್ಕಿದ್ರು ನನ್ನ ಸಲುವಾಗಿ.

ಹಿಂಗ ತಲಿಗೆ ದಂಡಿ ಹಾಕ್ಕೊಂಡು ಅದರ ಎರಡೂ ಗೊಂಡೆ ಹಣೆಯ ಎಡಬಲದಾಗ ತೂಗಾಡ್ತಿದ್ರ ಕೈಯ್ಯಾಗಿನ ಆರತಿ ತಾಟಿನ್ಯಾಗ ಬಣ್ಣ ಬಣ್ಣದ ಸಕ್ರಿ ಗೊಂಬಿ/ಸಕ್ರಿ ಆರತಿ, ಎರಡು ಕಣಕದಾರತಿ ಬೆಳಗಿರತಿದ್ವು. ಜೊತಿಗಿ ಹೊಸ ಪೋಲಕಾ ಲಂಗ. ಕೈ ತುಂಬ ಬಳಿ. ಸೀಗವ್ವಗ ಆರತಿ ಮಾಡೂ ಸಂಭ್ರಮ ಒಂದು ಕಡಿಗಿ ಆದ್ರ, ಆ ಆರತಿ ಬೆಳಕಿನ್ಯಾಗ ನಾವೆಲ್ಲಾ ಸಣ್ಣ ಹುಡುಗ್ಯಾರು ಕಿನ್ನರ ಲೋಕದ ದೇವತ್ಯಾರಂಗ ಮೆರೀತಿದ್ವಿ. ಆರತಿ, ಊಟ ಆದ್ಮ್ಯಾಲೆ ರಾತ್ರಿ ಆ ದೊಡ್ಡ ಅಂಗಳದಾಗ ಎಲ್ಲಾರು ಸೇರ್ತಿದ್ವಿ. ಗಂಡಸರು ಒಂದು ಕಡಿಗಿ ಹೆಂಗಸರು ಒಂದು ಕಡಿಗಿ. ಆದ್ರ ಇಬ್ಬರ ಆಟಗಳೂ ಇಬ್ಬರಿಗೂ ಕಾಣುವಂಥಾ ಒಂದಾ ಬಯಲು. ನಮಗ ಚಿಳ್ಳಿಪಿಳ್ಳಿಗೋಳಿಗೆ ಯಾವ ಗುಂಪಿನ್ಯಾಗ ನಿಂತ್ರೂ ಅಭ್ಯಂತ್ರ ಇರಲಿಲ್ಲ. ಗಂಡಸರು ಚೆಂದಗ ಕಚ್ಚೆ ಹಾಕಿ ದೋತರ ಉಟ್ಟು ತಲಿಗಿ ರುಮಾಲು ಸುತ್ತಿಕೊಂಡು ಬೆಳದಿಂಗಳ ಬಯಲಾಗ ಕೋಲಾಟ ಆಡ್ತಿದ್ರ, ದೇವರೇ ಈ ಆಟೋಟಗಳನ್ನ ದಿನಾಲು ಯಾಕಾಡಬಾರದು ಹಬ್ಬ ಹುಣವಿಗಷ್ಟಾ ಯಾಕ ಅಂತ ಅನ್ನಿಸ್ತಿತ್ತು. ಅವರು ಕೋಲಾಟ ಆಡುತ್ತ ಕೃಷ್ಣನ ಎಲ್ಲಾ ಆಟಗಳನ್ನ, ರೈತರ ಬದುಕನ್ನ, ಪ್ರೇಮಿಗಳ ಪಡಿಪಾಟಲನ್ನ ಕಣ್ಮುಂದೆ ತಂದು ತೋರಿಸ್ತಿದ್ರು.

ಇನ್ನೊಂದು ಕಡೆ ಹೆಣ್ಣು ಮಕ್ಕಳು ಮಸರಿನ ಸತ್ಯಮ್ಮನ ಮುಂದಾಳತ್ವದಾಗ ಶಿವ-ಗೌರಿಯರ ತಪಸ್ಸು, ಗೌರಿ ಶಿವನನ್ನು ಒಲಿಸಿಕೊಂಡಿದ್ದು, ಗೌರಿ ಮದುವಿ, ಮದುವ್ಯಾದ ಮೇಲೆ ತವರಮನಿ ಬಿಟ್ಟು ಹೋಗುವಾಗ ಗೌರವ್ವ ತೆಗೆಯುವ ಒಂದೊಂದು ನೆಪಾ, ಆಮ್ಯಾಲೆ ಗಣಪನಿಗೆ ರೂಪ ಕೊಟ್ಟಿದ್ದು ಎಲ್ಲಾ ಕತೀನ ಹಾಡಿನ್ಯಾಗ ಹೇಳ್ತಿದ್ರು. ನಾನು ಬಿಟ್ಟಬಾಯಿ ಬಿಟ್ಟಂಗ ಕೇಳ್ಕೊಂತ ಈ ಲೋಕದಾಗ ಇರತಿರಲಿಲ್ಲ. ಅದು ಮೊದಲಾ ಬೆಳದಿಂಗಳ; ಹಿಮವಂತ-ಗೌರಿಯರ ಹಿಮಾಲಯವನ್ನ ಕಲ್ಪಸಿಕೊಳ್ಳಾಕ ಹಾಲಿನಂಥಾ ಬೆಳದಿಂಗಳು ಸಹಾಯ ಮಾಡ್ತಿತ್ತು. ಹಾಡಿನ ಬಹುಪಾಲು ಸತ್ಯಮ್ಮನದಾ ಆಗಿರತಿತ್ತು. ನಂತರ ನಾನಾ ಥರ ಆಟ ಆಡ್ತಿದ್ವಿ. ಅವಾಗ ನಾನು ಇನ್ನೂ ದೊಡ್ಡಾಕಿ ಆಗಿರಲಿಲ್ಲ. ಇದೆಲ್ಲಾ ನಡೆದದ್ದು. ನಾನು ಹೈಸ್ಕೂಲ್‍ಗೆ ಹೋಗೂಕ್ಕಿಂತ ಮುಂಚೆ. ಅದಕ್ಕಾ ನಾನು ಮತ್ತ ನನ್ನ ವಾರಿಗಿ ಹುಡುಗ್ಯಾರು ಆಟಕ್ಕಿರತಿದ್ವಿ ಲೆಕ್ಕಕ್ಕ ಇರತಿರಲಿಲ್ಲ. ನಮಗ ಬೆಣ್ಣಿ ಗುಳಿಗಿ ಅಂತಿದ್ರು. ಅಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲದ ಆಸಾಮಿಗಳನ್ನ ಬೆಣ್ಣಿ ಗುಳಗಿ ಅನ್ನೂದು. ಅಂದ್ರ ಬೆಣ್ಣಿ ಗುಂಡು/ಚೆಂಡು ಬ್ಯಾರೆ. ಗುಳಿಗಿ ಬ್ಯಾರೆ. ಗುಳಿಗಿ ಎಷ್ಟಿರುತ್ತಪಾ?! ಹಿಡಿ ಹಿಡಿಯುತ್ಲ್ಲೆ ಕೈ ಬಿಸಿ ತಾಗುತ್ಲೆ ಕರಗಿ ನೀರಾಗಿ ನಾಪತ್ತೆ ಆಗುತ್ತಲ್ಲ! ಹಂಗ ನಾವು ಆಟದಾಗ ಒಂದಾ ಏಟಿಗಿ ಔಟಾಕ್ಕಿದ್ವಿ. ಆದ್ರೂ ಆಟದಿಂದ ಹೊರಗ ಉಳಿತಿರಲಿಲ್ಲ. ಆಟ ಮುಗೀತನಕ ಲೆಕ್ಕಿಲ್ಲದಷ್ಟು ಸಲ ಔಟಾದ್ರೂ ಆಡ್ಕೊಂತನಾ ಇರತಿದ್ವಿ. ಯಾಕಂದ್ರ ಬೆಣ್ಣಿ ಗುಳಿಗಿ ವಿಷ್ಯದಾಗ ಯಾವ್ದೂ ಲೆಕ್ಕಕ್ಕ ಇರತಿರಲಿಲ್ಲ. ಆಗ ಸತ್ಯಮ್ಮನ ಆಟ ನೋಡಬೇಕಿತ್ತು. ಬೀಗರಾಟ ಆಗಲಿ, ಕೋಲಾಟ ಆಗಲಿ, ಉರುಳುವ ಕಲ್ಲಾಟ ಆಗ್ಲಿ ಸತ್ಯಮ್ಮನೇ ನಮಗ ಲೀಡರ್ ಮತ್ತ ನಂಬರ್ ಒನ್.

ಸೀಗಿ/ಗೌರೀ ಹುಣವಿ ಮುಗಿದ ಮಾರನೆ ದಿನ ಮತ್ತ ಮೂರನೇ ದಿನ ನಮ್ಮ ಸಾಲ್ಯಾಗ ನಾವು ಸಣ್ಣ ಹುಡುಗ್ಯಾರೆಲ್ಲಾ ತಲಿ ತುಂಬ ದಂಡಿ ಹಾಕ್ಕೊಂಡಾ ಹೊಕ್ಕಿದ್ವಿ. ಎಲ್ಲಿ ನೋಡೀದ್ರೂ ಹೂವಿನ ದಂಡಿ ಮುಚ್ಚಿದ ತಲೆಗಳು..! ದಂಡಿ ಅಂದ್ರೆ ಬರೀ ಹೂವಿನ ಮಾಲೆ ಅಂತಷ್ಟೇ ಅರ್ಥಲ್ಲ. ದಂಡಿ ಅಂದ್ರ ತಲಿ ತುಂಬ ಕಿರೀಟದಂತೆ ಹಾಕ್ಕೊಳ್ಳೂದು. ಹಣೆಯ ಎರ್ಡೂ ಬದಿಗಿ ಕಪಾಳಕ್ಕ ಮುಟ್ಟೂವಂಗ ಹೂವಿನ ಗೊಂಡೆ ಇರ್ತಾವು. ನಮ್ಮ ನೈಸರ್ಗಿಕ ಜಡಿಗಿಂತ್ಲೂ ಉದ್ದದ ಜಡಿ ಹಿಂದೆ ಎಳೆಬಿದ್ದಕೊಂಡು ಧಿಮಾಕು ಮಾಡಾಕ ಹಚ್ಚಿರುತ್ತ. ಅದಕ್ಕ ಬಿಂಗು ಬ್ಯಾಗಡಿ ಮಿಂಚು ಹಾಕಿದ್ರಂತೂ ಭಾರೀ ಚೆಂದ. ಆಡುವಾಗ ದಂಡಿ ಮತ್ತದರ ಬಾಲ ನಮಗ ಇನ್ನೂ ಹುರುಪು ತುಂಬ್ತಿದ್ವು. ಈಗ ನೆನಪಿಸ್ಕೊಂಡ್ರ ಎವ್ವಾ ಎಂಥಾ ಸ್ವರ್ಗದ ದಿನಗಳವು! ನಮ್ಮ ಚೋಟು ಚೋಟು ಮೋಟು ಜೆಡೆಗೆ ದಂಡಿಯ ದೊಡ್ಡ ಮಾಲೆಯನ್ನು ಸೇರಿಸಿ ಉದ್ದನ್ನ ಜಡೆ ಮಾಡಿರತಿದ್ರು. ನಗೂನೂ ಬರುತ್ತ, ಕಳೆದು ಹೋದ ಭಾಗ್ಯ ಅಂತ ಅಳೂನೂ ಬರುತ್ತ!

ಸೀಗೀ ಹುಣವಿ ಸಂಭ್ರಮವೇ ಗೌರಿ ಹುಣವಿಗೂ ಇರುತ್ತಾದ್ರೂ ಗೌರವಿ ಹುಣವಿ ಸಂಭ್ರಮ ದೊಡ್ಡದು. ಗೌರಿ ಹುಣವ್ಯಾಗ ಒಂಭತ್ತು ದಿನ ಆರತಿ ಬೆಳಗ್ತಾರ. ಎರಡೂ ಹುಣವ್ಯಾಗ ಹೊಸದಾಗಿ ಮದುವಿ ನಿಶ್ಚಯವಾದ ಹುಡುಗ್ಯಾರಿಗಿ ಗಂಡನ ಮನಿ ಕಡೆಯಿಂದ ಹತ್ತು ಇಪ್ಪತ್ತೈದು ಕೆಜಿಗಟ್ಲೆ ಸಕ್ರಿ ಆರತಿ ಉಡುಗೊರೆ ಸಿಗುತ್ತ. ಮನೆಯ ಹೆಣ್ಣುಮೊಮ್ಮಕ್ಕಳಿಗೂ ಅಜ್ಜಿ ಮನಿಯಿಂದ ಸಕ್ರಿ ಆರತಿ ಉಡುಗೊರೆಯಾಗಿ ಸಿಗ್ತಾವು. ಜೊತಿಗಿ ಹಿರಿಯ ಹೆಣ್ಣುಮೊಮ್ಮಗಳಿಗಿ ಸಣ್ಣ ಸೀರೆಯೂ(ದಟ್ಟಿ) ಅಜ್ಜಿಯಿಂದ ಕಾಣಿಕೆಯಾಗಿ ಸಿಗುತ್ತ.

ಆಮ್ಯಾಲೆ ನಾನು ಹೈಸ್ಕೂಲ್‍ಗೆ ಹೋದ್ಮ್ಯಾಲೆ ಸತ್ಯಮ್ಮನ ಒಡನಾಟ ಜಾಸ್ತಿ ಸಿಗಲಿಲ್ಲ. ನನಗ ನನ್ನ ಸಾಲೀ ಓದು, ಮತ್ತ ಮನಿಯಾಗಿನ ನನ್ನ ಪಾಲಿನ ಕೆಲಸದ ಜವಾಬ್ದಾರಿ ಹೆಚ್ಚಿಗಿ ಆದಂಗೆಲ್ಲಾ ಕೆಲವು ಮನರಂಜನೆ, ಆಟಗಳನ್ನ ತ್ಯಜಿಸಬೇಕಾತು. ಆಕಿ ಮೊಸರು ಮಾರೂದು ಬಿಟ್ಟು ಹೂವು ಮಾರಾಕ್ಹತ್ತಿದ್ರೂ ಆಕಿಗಿ ಮೊಸರಿನ ಸತ್ಯಮ್ಮ ಅಂತಾನೇ ಕರಿತಿದ್ವಿ. ಆಕಿಗಿದ್ದ ಒಬ್ಬ ಮಗ ಬಲು ಬೇಗ ವೈಕುಂಠ ಸೇರಿದ್ದ. ಇಬ್ಬರು ಹೆಣ್ಣು ಮಕ್ಕಳು ಆಗಾಗ್ಗೆ ಬಂದು ಹೋಗಿ ನೋಡ್ಕೊಂತಿದ್ರೂ ಉಳಿದ ದಿನದಾಗ ಸತ್ಯಮ್ಮ ಒಬ್ಬಂಟಿ. ಆಕಿ ಯಾರ ಜೊತೆಗೇ ಆಗಲಿ ಎಷ್ಟಾ ಸಲುಗಿಯಿಂದ ಇದ್ರೂ ಆಕಿ ಆಂತರ್ಯದಾಗ ಒಬ್ಬಂಟಿಯಾಗಿದ್ಲು. ದೈವಭಕ್ತೆಯಾಗಿದ್ಲು. ಎಲ್ಲಾ ನೋವುಗಳನ್ನ ಮರೆಯಾಕ ಸರಾಯಿ ಕುಡೀತಿದ್ಲು. ಆಕಿ ಬಗ್ಗೆ ನಾಕು ಜನ ನಾಕು ಮಾತು ಆಡ್ಕೊಂಡ್ರೂ ನನಗ ಕೊನೀತನಕ ಆಕಿ ಒಂಥರಾ ಹಿರೋಯಿನ್ ಥರಾ ಕಂಡ್ಲು. ನಾನು ಹೈಸ್ಕೂಲ್‍ಗೆ ಹೊಂಟ ಮ್ಯಾಲೆ ಸತ್ಯಮ್ಮನ ಮನಿ ಮುಂದಿನ ದಾರ್ಯಾಗ ಓಡಾಡೂದನ್ನ ನಿಲ್ಲಿಸಿಬಿಟ್ಟೆ. ಒಂದ್ಸಲಾ ಅಕಸ್ಮಾತ್ ಸಿಹಿ ನೀರು ತುಂಬಿಕೊಂಡು ಆಕೀ ಮನಿ ಮುಂದ ಹಾಯ್ದು ಬರಾಕ್ಹತ್ತಿದ್ದೆ. ಮುದುಕಿ ಒಂದೆರಡು ಕೌದಿಗಳನ್ನ ಸ್ವಲ್ಪೇ ನೀರಾಗ ನೆನೆಸಿ ತೊಳಿಯಾಕ ಪ್ರಯತ್ನ ಮಾಡಾಕ್ಹತ್ತಿತ್ತು. ಮುಂದೆ ಹೋಗಿ ನೋಡಿದೆ. ಅದು ಸತ್ಯಮ್ಮ. ಆಕಿ ಸೊರಗಿ ಹೋಗಿದ್ಲು. ಕಣ್ಣು ಒಳಗ ಸಿಕ್ಕೊಂಡಿದ್ವು. ತಲೆ ಚಟ್ರಾಗಿತ್ತು. ಕೌದಿ ಹೊದಿಕಿನ್ನ ನೆನೆಸಿದ ನೀರು ಡಿಕಾಕ್ಷನ್ ಥರಾ ಕರ್ರಗಾಗಿತ್ತು. ಅಷ್ಟು ಹೊಲಸಾಗಿದ್ವು. ಆದ್ರ ನೆನೆದ ಕೌದಿನ್ನ ಎತ್ತಿ ಹಿಂಡಿ ಹಾಕಾಕೆ ಮುದುಕಮ್ಮ ಪರದಾಡುವಷ್ಟು ಅಶಕ್ತ ಆಗಿದ್ಲು. ನನಗ ಭಾಳ ಬ್ಯಾಸರಾತು ಅಕಿನ್ನ ನೋಡಿ. “ತತಾ ಯಮ್ಮ ನಾನು ಹಿಂಡುತೀನಿ” ಅಂತ ಆಕೀ ಮಾತಿಗೂ ಕಾಯ್ದಾ ಆಕೀ ಕೈಯಾಗಿದ್ದ ಕೌದಿ ಕಿತ್ತುಗೊಂಡು ನನ್ನ ಬಿಂದಿಗಿ ನೀರ್ಹಾಕಿ ಹಿಂಡಿದೆ. ನನ್ನ ಕೈಯಾದ್ರೂ ಏನು ಮಹಾ ದೊಡ್ಡವು ಆಗ! ಬರೀ ಒಂಬತ್ತನೆಯತ್ತದ ಹದಿನೈದರ ಹುಡುಗಿ. ನನ್ನ ಕೈಲಿ ಸಾಧ್ಯಾದಷ್ಟು ನೀರು ಹೋಗುವಂತೆ ಹಿಂಡಿ ಕೌದಿ ಒಣ ಹಾಕಿದೆ. ನೀರು ಸಾಕಾಗಲಿಲ್ಲ. ಮತ್ತೆರಡು ಬಿಂದಿಗಿ ತಂದು ಉಳಿದ ಹೊದಿಕೆ ಹಿಂಡಿ ಹಾಕಿದೆ. ಸತ್ಯಮ್ಮ ಕಣ್ತುಂಬಿಕೊಂಡು, “ಸಾವಕ್ಕ ನಿನಗ ಪುಣ್ಯ ಬರಲೆವ್ವಾ” ಅಂತ ತಲೆ ನೇವರಿಸಿದಳು. ಸಾವಿ ಅನ್ನುತ್ತಿದ್ದ ಆಕಿ ನನಗ ಮೊಟ್ಟ ಮೊದಲ ಸಲ ಸಾವಕ್ಕ ಅಂದಿದ್ದು ಕಂಡು ಒಂಚೂರು ಕಸಿವಿಸಿ ಆತು. ಮುಂದೆ ಕೆಲವು ವರ್ಷಗಳ ನಂತ್ರ ನಾನು ಓದಿನ ನಿಮಿತ್ಯ ಊರು ಬಿಟ್ಟು ಹೊರಗಿದ್ದಾಗ ಸತ್ಯಮ್ಮ ಸತ್ತು ಹೋದ್ಲು. ನನಗ ಆಕೀದು ಕಡಿ ದರ್ಶನ ಸಿಗಲಿಲ್ಲ.

ಆಕಿ ಬಂಡರಿಗೆ ಬಂಡ ಬೈಗುಳ ಹಾಕೂದ್ರಾಗ, ನಿಷ್ಠುರತನಕ್ಕ ಎಷ್ಟು ಹೆಸರಾಗಿದ್ಲೋ; ಅಂತಃಕರಣ, ಪ್ರೀತಿ, ಕಳು-ಬಳ್ಳಿ ಎನ್ನುವ ಮಮಕಾರ, ನಮ್ಮ ಸಂಸ್ಕೃತಿ ಹಬ್ಬ ಹರಿದಿನಗಳ ಆಚರಣೆಯ ಉಸ್ತುವಾರಿಗೂ ಅಷ್ಟಾ ಮುಖ್ಯಳು ಅನ್ನಿಸಿಕೊಂಡಿದ್ಲು. ನನ್ನ್ರ ಬಾಲ್ಯದ ಎಲ್ಲಾ ನೆನಪಿನ್ಯಾಗನೂ ಸತ್ಯಮ್ಮ ಒಂದಲ್ಲಾ ಒಂಥರಾ ಉಳಿದುಬಿಟ್ಟಾಳ…

——–

ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಊರು ಗದಗ ಜಿಲ್ಲೆಯ ಲಕ್ಕುಂಡಿ. ಹುಟ್ಟಿದ್ದು ಸಣ್ಣ ರೈತ ಕುಟುಂಬದಲ್ಲಿ. ವಿದ್ಯಾಭ್ಯಾಸ ಬಿ.ಇಡಿ, ಸಮಾಜಶಾಸ್ತ್ರದಲ್ಲಿ ಎಂ.ಎ. ಇನಿಶಿಯೇಟಿವ್ಸ್ ಫಾರ್ ಡೆವಲಪ್‍ಮೆಂಟ್ ಫೌಂಡೇಶನ್ ಎಂಬ ಸರಕಾರೇತರ ಸಂಸ್ಥೆಯಲ್ಲಿ ಸಾವಯವ ಕೃಷಿ, ಶಿಕ್ಷಣ, ಕಿರುಹಣಕಾಸು, ಆರ್ಥಿಕ ಸಾಕ್ಷರತೆ, ಬ್ಯಾಂಕಿಗ್, ಮಹಿಳಾ ಸಬಲೀಕರಣ ಇತ್ಯಾದಿ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವಿಧ ಯೋಜನೆಗಳಲ್ಲಿ ಅನುವಾದಕಿಯಾಗಿ ಏಳು ವರ್ಷ ಕಾರ್ಯನಿರ್ವಹಿಸಿದ ಅನುಭವ. ಇದೇ ಸಂಸ್ಣೆಯಲ್ಲಿ ಕೊನೆಯ ಮೂರು ವರ್ಷ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ ಸೇವೆ. ಪ್ರಸ್ತುತ ಕನ್ನಡ ಶಿಕ್ಷಕಿ. ಓದುವುದು, ಲಹರಿ ಬಂದಾಗ ಬರೆಯುವುದು, ಪ್ರಯಾಣ, ಸಾಮಾಜಿಕ ಉಪಯುಕ್ತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿಕೆ, ಅಡುಗೆ, ರಂಗೋಲಿ, ಹೂ ಹೆಣೆಯುವುದು, ಕೃಷಿ ಕೆಲಸದಲ್ಲಿ ತೊಡಗುವುದು ನೆಚ್ಚಿನ ಹವ್ಯಾಸಗಳು.

Share

Leave a comment

Your email address will not be published. Required fields are marked *

Recent Posts More

 • 2 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 3 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 5 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  5 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  1 week ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...