Share

ಫೆಂಟಾಸ್ಟಿಕ್ ಆಗದ ಪ್ಲಾಸ್ಟಿಕ್’
ಪ್ರಸಾದ್ ನಾಯ್ಕ್ ಕಾಲಂ

 

 

 

ಮಾನವೀಯ ಸಂವೇದನೆಯ ಒಂದು ಲೇಖನ, ಛಾಯಾಚಿತ್ರ, ಹಾಡು, ಕಲಾಕೃತಿ, ಸಿನೆಮಾ, ಸಾಕ್ಷ್ಯಚಿತ್ರ, ಬೀದಿನಾಟಕ, ಒಂದು ಜವಾಬ್ದಾರಿಯುತ ಹೆಜ್ಜೆ… ಎಂಥೆಂಥಾ ಹೊಸ ಧನಾತ್ಮಕ ತರಂಗಗಳನ್ನು ಸಮಾಜದಲ್ಲಿ ಸೃಷ್ಟಿಸುತ್ತದೆ ನೋಡಿ!

 

 

 

ದಿನ ನಾನು ಮಾತಾಡುತ್ತಿದ್ದಿದ್ದು ಕೀನ್ಯಾದ ಯುವ ಸಾಮಾಜಿಕ ಕಾರ್ಯಕರ್ತ ಜೇಮ್ಸ್ ವಕೀಬಿಯಾನೊಂದಿಗೆ.

ಕಳೆದ ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಿಂದ ಕುಂಟುತ್ತಿದ್ದ ಪ್ಲಾಸ್ಟಿಕ್ ನಿಷೇಧದ ಅಜೆಂಡಾ ಕೊನೆಗೂ ಇತ್ತೀಚೆಗೆ ಕೀನ್ಯಾದಲ್ಲಿ ಜಾರಿಯಾದಾಗ ಎಲ್ಲೆಲ್ಲೂ ಕೇಳಿಬಂದಿದ್ದು ಒಂದೇ ಹೆಸರು: ಜೇಮ್ಸ್ ವಕೀಬಿಯಾ. ಆಫ್ರಿಕನ್ ಯುವಕರು ಉದ್ಯೋಗ, ಅವಕಾಶಗಳಿಲ್ಲದೆ ಅಪರಾಧ, ಮಾದಕದ್ರವ್ಯ ಇತ್ಯಾದಿಗಳತ್ತ ವಾಲುತ್ತಿದ್ದಾರೆ ಎಂಬ ಮಾತುಗಳು ಆಫ್ರಿಕಾದಲ್ಲೇ ಕೇಳಿಬರುತ್ತಿರುವ ಸಮಯದಲ್ಲಿ ಇಲ್ಲೊಬ್ಬ ತರುಣ ತನ್ನ ಕ್ಯಾಮೆರಾವೊಂದನ್ನು ಹೆಗಲಿಗೇರಿಸಿ ಪರಿಸರವನ್ನು ರಕ್ಷಿಸಲು ಹೊರಟಿದ್ದ. ತನ್ನ ಬರಹಗಳಿಂದ ಮಲಗಿದ್ದ ವ್ಯವಸ್ಥೆಯನ್ನು ಎಬ್ಬಿಸಲು ಯತ್ನಿಸಿದ್ದ. ಸೋಷಿಯಲ್ ಮೀಡಿಯಾವನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಹ್ಯಾಷ್-ಟ್ಯಾಗ್ ಹೋರಾಟದ ಕಿಚ್ಚನ್ನು ಹೊತ್ತಿಸಿದ್ದ.

ಆಫ್ರಿಕಾದಲ್ಲಿ ಹೋರಾಟ, ಚಳುವಳಿ ಇತ್ಯಾದಿಗಳು ನಮ್ಮಲ್ಲಾಗುವಷ್ಟು ಸುಲಭದ ಸಂಗತಿಗಳೇನಲ್ಲ. ಹೀಗಿರುವಾಗ ವಕೀಬಿಯಾನಂತಹ ತರುಣನೊಬ್ಬ ಈ ದಾರಿಯಲ್ಲಿ ಅಷ್ಟು ದೂರ ಸಾಗಿ ಯಶಸ್ಸನ್ನು ಪಡೆದಿದ್ದು ಸಹಜವಾಗಿಯೇ ನನ್ನ ಆಸಕ್ತಿಯನ್ನು ಕೆರಳಿಸಿತ್ತು. ನಿಮ್ಮ ಕಥೆ ಕೇಳಬೇಕಲ್ಲಾ ಜೇಮ್ಸ್ ಎಂದೆ ನಾನು. ಕೂಡಲೇ ‘ಅಸ್ತು’ ಎಂಬರ್ಥದ ಇಮೋಜಿಯೊಂದು ಕೀನ್ಯಾದಿಂದ ಅಂಗೋಲಾದ ಕಡೆಗೆ ಹರಿದು ಬಂದಾಗ ನನಗೆ ಖುಷಿಯೋ ಖುಷಿ.

~

ಜೇಮ್ಸ್ ಮೂಲತಃ ನಕುರು ಪ್ರಾಂತ್ಯದ ನಿವಾಸಿ. ಫೋಟೋಗ್ರಫಿ ಮತ್ತು ಬರವಣಿಗೆ ಅವನ ಮೊದಲ ಪ್ರೀತಿಗಳು. ಸಾಮಾಜಿಕ ಕಳಕಳಿಯೆಂಬುದು ಅವನ ಒಳದನಿಯೇ ಹೌದು. 2013 ರಲ್ಲಿ ತಾನು ನೆಲೆಸಿದ್ದ ನಕುರು ಪ್ರಾಂತ್ಯದಲ್ಲಿ ಕಂಡ ದೃಶ್ಯವೊಂದು ಅವನನ್ನು ತೀವ್ರವಾಗಿ ಕಾಡಿತ್ತು. ಅಂದು ಆತ ನೋಡಿದ್ದು ನಕುರು ಕೌಂಟಿಯ(ಪ್ರಾಂತ್ಯ) ಅತೀ ದೊಡ್ಡ ಕೊಳಚೆಪ್ರದೇಶವಾದ ಗ್ಯೋಟೋದಲ್ಲಿ ಜಮೆಯಾಗಿದ್ದ ಪ್ಲಾಸ್ಟಿಕ್ ಗುಡ್ಡವನ್ನು. ನಗರವು ವೇಗವಾಗಿ ಬೆಳೆಯುತ್ತಿದ್ದರೂ ತ್ಯಾಜ್ಯ ವಿಲೇವಾರಿ ಮಾತ್ರ ಕಾಲು ಮುರಿದುಕೊಂಡು ಬಿದ್ದಿತ್ತು ಎಂಬುದನ್ನು ಮನಗಾಣಲು ವಕೀಬಿಯಾನಿಗೆ ಮಹಾಬುದ್ಧಿವಂತಿಕೆಯೇನೂ ಬೇಕಾಗಿರಲಿಲ್ಲ. ಪ್ಲಾಸ್ಟಿಕ್ ನಿಷೇಧವೆಂಬ ಮಹಾತ್ವಾಕಾಂಕ್ಷೆಯೊಂದು ವಕೀಬಿಯಾನಲ್ಲಿ ಮೊಳಕೆಯೊಡೆದದ್ದೇ ಅಂದು.

ಕೂಡಲೇ ಕಾರ್ಯೋನ್ಮುಖರಾದ ವಕೀಬಿಯಾ ಸ್ಥಳೀಯರ ಆರೋಗ್ಯ ಮತ್ತು ನೈರ್ಮಲ್ಯಗಳನ್ನು ಗಮನದಲ್ಲಿರಿಸಿ ಈ ಕೊಳಚೆ ಪ್ರದೇಶವನ್ನು ಶೀಘ್ರವೇ ಸ್ಥಳಾಂತರಿಸಬೇಕು ಎಂಬ ಅರ್ಜಿಯನ್ನು ಸಂಬಂಧಿ ಇಲಾಖೆಗೆ ಸಲ್ಲಿಸಿ ವ್ಯವಸ್ಥೆಯ ಬುಡಕ್ಕೆ ಮೊದಲ ಬಿಸಿಯಿಟ್ಟಿದ್ದ. ಈ ಅರ್ಜಿಯು 5000 ಸಹಿಗಳನ್ನು ಹೊಂದಿದ್ದಲ್ಲದೆ ಹಲವಾರು ಮಂದಿ ಮುಖಕ್ಕೆ ಹಸಿರು ಬಣ್ಣಗಳನ್ನು ಬಳಿದು ಇಲಾಖಾ ಕಾರ್ಯಾಲಯಗಳ ಎದುರು ಪಾದಯಾತ್ರೆ ಮಾಡಿದರು. ನಾಗರಿಕರ ಒತ್ತಡಕ್ಕೆ ಕೊನೆಗೂ ಮಣಿದ ಇಲಾಖೆಯು ಕೆಲ ಪರಿಹಾರವನ್ನು ಜನರ ಮುಂದಿಟ್ಟು ತಾತ್ಕಾಲಿಕವಾಗಿ ತನ್ನ ಮುಖ ಉಳಿಸಿಕೊಂಡಿತು.

ಈ ಗೆಲುವು ವಕೀಬಿಯಾರಿಗೆ ಒಂದೊಳ್ಳೆಯ ಆರಂಭವಷ್ಟೇ ಆಗಿತ್ತು. ಆದರೆ ಸಮಸ್ಯೆಗಳು ಸಾಕಷ್ಟಿದ್ದವು. ಪ್ಲಾಸ್ಟಿಕ್ ಸಮಸ್ಯೆಯು ದೈತ್ಯಾಕಾರವಾಗಿ ಬೆಳೆದು ಕೀನ್ಯಾವನ್ನು ಅಕ್ಷರಶಃ ಉಸಿರುಗಟ್ಟಿಸುತ್ತಿತ್ತು. ಗಾಳಿಯ ಬೀಸುವಿಕೆಯೊಂದಿಗೆ ಕೊಳಚೆಪ್ರದೇಶಗಳಿಂದ ನಗರದತ್ತ ಹಾರಿ ಬರುತ್ತಿದ್ದ ಬಣ್ಣಬಣ್ಣದ ಪ್ಲಾಸ್ಟಿಕ್ ಚೀಲಗಳು ಎಲ್ಲೆಂದರಲ್ಲಿ ಸೂತ್ರವಿಲ್ಲದ ಗಾಳಿಪಟದಂತೆ ನೇತಾಡುತ್ತಿದ್ದವು. ಮಣ್ಣಿನೊಂದಿಗೆ ಬಹುತೇಕ ಸೇರಿಹೋದ ಪ್ಲಾಸ್ಟಿಕ್ ಬಣ್ಣದ ಕಾರ್ಪೆಟ್ ಹಾಸಿದಂತೆ ಕಾಣುತ್ತಿದ್ದರೆ ಒಳಚರಂಡಿಗಳಲ್ಲಿ ಪ್ಲಾಸ್ಟಿಕ್ ಜಮೆಯಾಗಿ ನಿಂತ ನೀರು ಸೊಳ್ಳೆಗಳ ಆಶ್ರಯತಾಣಗಳಾಗಿ ಬದಲಾಗಿತ್ತು. ಒಟ್ಟಾರೆಯಾಗಿ ಗ್ಯೋಟೋ, ಕಂಗೇಮಿ ಸೇರಿದಂತೆ ಕೀನ್ಯಾದ ಬಹುತೇಕ ಎಲ್ಲಾ ಕೊಳಗೇರಿಗಳೂ ಕೂಡ ತನ್ನೊಡಲಿನಲ್ಲಿ ತುಂಬಿಹೋಗಿದ್ದ ಪ್ಲಾಸ್ಟಿಕ್ಕಿನಿಂದಾಗಿ ಏದುಸಿರುಬಿಡುತ್ತಿದ್ದವು.

ಹಾಗೆ ನೋಡಿದರೆ ಪ್ಲಾಸ್ಟಿಕ್ ಎಂಬುದು ಕೀನ್ಯಾದ ಹೊಸ ಸಮಸ್ಯೆಯೇನಲ್ಲ. ಇದು ಬರೋಬ್ಬರಿ ಒಂದು ದಶಕಕ್ಕಿಂತಲೂ ದೀರ್ಘವಾದದ್ದು. ಕೀನ್ಯಾದಲ್ಲಿ ಮೊದಲ ಹಂತವಾಗಿ ಮೂವತ್ತು ಮೈಕ್ರಾನ್ ದಪ್ಪದ ಪ್ಲಾಸ್ಟಿಕ್ ನಿಷೇಧಕ್ಕೊಳಗಾದರೆ(2005 ಮತ್ತು 2007), ಮುಂದಿನ ಹಂತದಲ್ಲಿ ಅರವತ್ತು ಮೈಕ್ರಾನ್ ಪ್ಲಾಸ್ಟಿಕ್ ನಿಷೇಧಕ್ಕೊಳಪಟ್ಟಿತ್ತು(2009). ಆದರೆ ಫಲಿತಾಂಶಗಳು ಮಾತ್ರ ನಿರಾಶಾದಾಯಕ. ಇಥಿಯೋಪಿಯಾ, ಕ್ಯಾಮೆರೂನ್, ತಾನ್ಝಾನಿಯಾಗಳಂತಹ ದೇಶಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದರೂ ತಕ್ಕಮಟ್ಟಿನ ಯಶಸ್ಸನ್ನು ಪಡೆದಿರುವುದು ರವಾಂಡಾ ಮಾತ್ರ.

2013 ರಲ್ಲಿ ವಕೀಬಿಯಾ ಪ್ಲಾಸ್ಟಿಕ್ ವಿರುದ್ಧ ನೇರಯುದ್ಧಕ್ಕಿಳಿಯುವ ಅವಧಿಯಲ್ಲಿ ಕೀನ್ಯಾದುದ್ದಕ್ಕೂ ಜುಜುಬಿ ಐದು-ಹತ್ತು-ಇಪ್ಪತ್ತು ಶಿಲ್ಲಿಂಗ್ ಗಳ ದರದಲ್ಲಿ ಪ್ಲಾಸ್ಟಿಕ್ ಚೀಲಗಳು ಎಲ್ಲೆಂದರಲ್ಲಿ ಬಿಕರಿಯಾಗುತ್ತಿದ್ದವು. ಇನ್ನು ವಕೀಬಿಯಾ ಸಕ್ರಿಯರಾಗಿದ್ದ `ಸ್ಟ್ರೀಟ್ ನಕುರು’ ಯುವ ಉತ್ಸಾಹಿ ತಂಡವು ಆಗಲೇ ಪ್ಲಾಸ್ಟಿಕ್ ವಿರುದ್ಧ ತನ್ನ ರಣಕಹಳೆಯನ್ನು ಊದಿತ್ತು. ಒಂದೆಡೆ ವಕೀಬಿಯಾರ ಲೇಖನಗಳು, ಪೋಸ್ಟ್ ಗಳು ಬ್ಲಾಗುಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ ದಂಡಿಯಾಗಿ ಪ್ರಕಟವಾಗತೊಡಗಿದರೆ, ಇನ್ನೊಂದೆಡೆ ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವಂತೆ ಕೋರಿ ವಕೀಬಿಯಾ ಬರೆದಿದ್ದ ಪತ್ರಗಳು ಸ್ಥಳೀಯ ಪತ್ರಿಕೆಗಳ ಸಂಪಾದಕರ ಮೇಜುಗಳನ್ನೂ ತಲುಪಿ ಮಾಧ್ಯಮಬಂಧುಗಳಿಗೆ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸಿದವು.

ಸಾಮಾಜಿಕ ಜಾಲತಾಣಗಳ ಯಶಸ್ವಿ ಬಳಕೆಯೂ ಕೂಡ ವಕೀಬಿಯಾರ ಹೋರಾಟದ ಯಶಸ್ಸಿನ ರಹಸ್ಯಗಳಲ್ಲೊಂದು. ಕೊಳಚೆ ಪ್ರದೇಶಗಳಿಗೆ ತನ್ನ ಕ್ಯಾಮೆರಾದೊಂದಿಗೆ ಹೊರಟ ವಜೀಬಿಯಾ ಮಾಡಿದ ಮೊದಲ ಕೆಲಸವೆಂದರೆ ಸ್ಥಳೀಯರನ್ನು ಮಾತಿಗೆಳೆದು ಪ್ಲಾಸ್ಟಿಕ್ ನಿಷೇಧದ ಅವಶ್ಯಕತೆಯನ್ನು ಅವರಿಗೆ ಮನದಟ್ಟುಮಾಡಿಸಿದ್ದು. ನಂತರ ಇವರುಗಳು ಒಪ್ಪಿದರೆ “ಐ ಸಪೋರ್ಟ್ ಬ್ಯಾನ್ ಪ್ಲಾಸ್ಟಿಕ್ಸ್ ಕೆ.ಇ” ಎಂಬ ಭಿತ್ತಿಪತ್ರದೊಂದಿಗೆ ಚಿತ್ರವೊಂದನ್ನು ಸೆರೆಹಿಡಿದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತಿದ್ದರು ವಕೀಬಿಯಾ. ಜನಸಾಮಾನ್ಯರನ್ನೇ ಪರಿಸರ ಸಂರಕ್ಷಣೆಯ ರಾಯಭಾರಿಗಳಂತೆ ಬಳಸಿಕೊಂಡು ಹೀಗೆ ಮೂಡಿಬಂದ ಸಾವಿರಕ್ಕೂ ಹೆಚ್ಚಿನ ಛಾಯಾಚಿತ್ರಗಳು ಕೀನ್ಯಾದ ನಾಗರಿಕರನ್ನು ಎಚ್ಚರಿಸಿದ್ದಂತೂ ಸತ್ಯ.

ಹೀಗೆ ‘#BanPlasticsKE’ (ಆನ್ಲೈನ್ ಕ್ಯಾಂಪೇನ್) ಮತ್ತು ‘#ISupportBanPlasticsKE’ (ಫೋಟೋ ಕ್ಯಾಂಪೇನ್) ಹೆಸರಿನ ಆನ್ಲೈನ್ ಪ್ರಚಾರ ವೇದಿಕೆಗಳು ವಕೀಬಿಯಾರ ಸಾಮಾಜಿಕ ಕಳಕಳಿಯನ್ನು ಲಕ್ಷಾಂತರ ಕೆನ್ಯನ್ನರ ಮನದಲ್ಲಿ ಬಿತ್ತಿದವು. ‘ದ ಫ್ಲಿಪ್ ಫ್ಲಾಪ್ ಫೌಂಡೇಷನ್’ನಂತಹ ಸಂಸ್ಥೆಗಳು ವಕೀಬಿಯಾರ ಜೊತೆಗಿದ್ದವು. ಮುಂದೆ ಸೆಪ್ಟೆಂಬರ್ 2015 ರಲ್ಲಿ ಕೀನ್ಯಾ ಸರಕಾರದ ಪರಿಸರ ಮತ್ತು ಪ್ರಾಕೃತಿಕ ಸಂಪನ್ಮೂಲ ಇಲಾಖೆಯ ಕ್ಯಾಬಿನೆಟ್ ಕಾರ್ಯದರ್ಶಿಯಾಗಿದ್ದ ಜ್ಯೂಡಿ ವಖೂಂಗುರವರು ವಕೀಬಿಯಾರ ಟ್ವೀಟ್ ಅನ್ನು ರೀಟ್ವೀಟ್ ಮಾಡಿ ಹ್ಯಾಷ್ ಟ್ಯಾಗ್ ಚಳುವಳಿಗೆ ಬೆಂಬಲವನ್ನೂ ಸೂಚಿಸಿದರು. ಇವೆಲ್ಲದರ ಫಲವೇ ಇತ್ತೀಚೆಗೆ ಕೀನ್ಯಾದಲ್ಲಿ ಅಧಿಕೃತವಾಗಿ ಜಾರಿಯಾದ ಗೆಝೆಟ್ ನೋಟೀಸ್. ಗೃಹೋಪಯೋಗಿ/ಕೈಗಾರಿಕಾ ಬಳಕೆಗಾಗಿ ಪ್ಲಾಸ್ಟಿಕ್ ಚೀಲಗಳ ತಯಾರಿಕೆ, ಬಳಕೆ ಮತ್ತು ಆಮದುಗಳಿಗೆ ಈ ಆದೇಶವು ಸಂಪೂರ್ಣವಾಗಿ ನಿಷೇಧವನ್ನು ಹೇರಿದ್ದಲ್ಲದೆ ನಿಯಮದ ಉಲ್ಲಂಘನೆಯಾದಲ್ಲಿ ಎರಡರಿಂದ ನಾಲ್ಕು ವರ್ಷಗಳ ಜೈಲುಶಿಕ್ಷೆ ಮತ್ತು ಸುಮಾರು 40000 ಡಾಲರುಗಳ ಮೊತ್ತದ ದಂಡವನ್ನೂ ನಿಗದಿಪಡಿಸಲಾಯಿತು. ಈ ಮೂಲಕವಾಗಿ ಕೊನೆಗೂ ವಕೀಬಿಯಾ ಮತ್ತು ಅವರಂತಹ ನೂರಾರು ಯುವಹೋರಾಟಗಾರರ ಸುದೀರ್ಘ ಪ್ರಯತ್ನಕ್ಕೆ ಯಶಸ್ಸು ಲಭಿಸಿತ್ತು. ಸದ್ಯಕ್ಕೆ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿರುವ ಪ್ರಾಥಮಿಕ ಪ್ಯಾಕೇಜಿಂಗ್ ಪ್ಲಾಸ್ಟಿಕ್, ಪ್ಲಾಸ್ಟಿಕ್ ತಟ್ಟೆಗಳು, ಸ್ಟ್ರಾ ಇತ್ಯಾದಿ ವಸ್ತುಗಳು ಈ ಕಾಯಿದೆಯಿಂದ ಹೊರಗುಳಿದದ್ದನ್ನು ಬಿಟ್ಟರೆ ಕೀನ್ಯಾ ಸರಕಾರವು ನೆನೆಗುದಿಗೆ ಬಿದ್ದಿದ್ದ ಪ್ಲಾಸ್ಟಿಕ್ ನಿಷೇಧದ ವಿಚಾರದಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ.

ಅಂದಹಾಗೆ ವಕೀಬಿಯಾ ಪ್ಲಾಸ್ಟಿಕ್ ನಿಷೇಧದ ಚಳುವಳಿಯಲ್ಲಷ್ಟೇ ಸಕ್ರಿಯರಾಗಿದ್ದವರಲ್ಲ. ನಕುರು ಕೌಂಟಿಯ ಎಂಬುರು-ಗಿಚುವ ರಸ್ತೆಯಲ್ಲಿ ಜೀಬ್ರಾ ಕ್ರಾಸಿಂಗ್ ಮತ್ತು ವ್ಯವಸ್ಥಿತ ಒಳಚರಂಡಿಗಳು ಬಂದಿದ್ದೇ ಇವರಿಂದಾಗಿ. ನಕುರು ರಾಷ್ಟ್ರೀಯ ಗ್ರಂಥಾಲಯದ ಕೋಣೆಗಳಲ್ಲಿ ಇವರಿಂದಾಗಿ ಮತ್ತಷ್ಟು ಕುರ್ಚಿಗಳು ಬಂದಿವೆಯೆಂದು ‘ಕೀನ್ಯಾ ಮಾನಿಟರ್’ ಅಭಿಮಾನದಿಂದ ಬರೆದಿದೆ. ನಕುರು ವಾರ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ನಡೆದ ವಿಚಿತ್ರ ಪ್ರಕರಣವೊಂದರಲ್ಲಿ ವಕೀಬಿಯಾರ ಆನ್ಲೈನ್ ಕ್ಯಾಂಪೇನುಗಳಿಂದಾಗಿಯೇ ಜೆರೆಮಿಯೆಂಬ ಮಗುವೊಂದು ಸುರಕ್ಷಿತವಾಗಿ ಹೆತ್ತವರ ಮಡಿಲನ್ನು ಸೇರಿತ್ತು. ಇವರ ದಿಟ್ಟಹೆಜ್ಜೆಗಳಿಂದಾಗಿ ಮುಂದೆ ಇಂಥದ್ದೇ ಮತ್ತಷ್ಟು ಪ್ರಕರಣಗಳು ಕೀನ್ಯಾದ ವಿವಿಧ ಆಸ್ಪತ್ರೆಗಳಲ್ಲಿ ಬೆಳಕಿಗೆ ಬಂದಿದ್ದು ಸತ್ಯ.

ನೈರೋಬಿಯ ಖ್ಯಾತ ಛಾಯಾಗ್ರಾಹಕರಾದ ಬೋನಿಫೇಸ್ ಮವಾಂಗಿ ಮತ್ತು ಕೀನ್ಯಾದ ನೊಬೆಲ್ ಪುರಸ್ಕೃತೆ, ಪರಿಸರ ಕಾರ್ಯಕರ್ತೆ ವಾಂಗರಿ ಮಥಾಯಿಯವರ ದಟ್ಟ ಪ್ರಭಾವವು ತನ್ನ ಮೇಲಿದೆ ಅನ್ನುತ್ತಾರೆ ಜೇಮ್ಸ್ ವಕೀಬಿಯಾ. ಇವರು ಸ್ವತಃ ಮವಾಂಗಿಯವರೊಂದಿಗೆ ಕ್ಯಾಮೆರಾ ಹಿಡಿದು ಹಲವು ಫೋಟೋಶೂಟ್ ಗಳನ್ನು ನಡೆಸಿದವರೂ ಹೌದು. ಸದ್ಯ ಜೇಮ್ಸ್ ವಕೀಬಿಯಾ ಮತ್ತು ಇಸಾ ವಂಗಾರಿ ದಂಪತಿಗಳ ಮಡಿಲಿನಲ್ಲಿ ಆರೋಗ್ಯವಂತ ಗಂಡುಮಗುವೊಂದು ಬಂದು ಕೂತಿದೆ. ಮುಂದಿನ ಯೋಜನೆಗಳೇನು ಎಂಬ ನನ್ನ ಪ್ರಶ್ನೆಗೆ ‘ಸದ್ಯಕ್ಕಂತೂ ಕುಟುಂಬದೊಂದಿಗೆ ಒಂದು ಚಿಕ್ಕ ವಿರಾಮ’ ಎಂದರು ವಕೀಬಿಯಾ. ಆದರೂ ಪ್ಲಾಸ್ಟಿಕ್ ನಿಷೇಧ ಕುರಿತಾದ ಜನಜಾಗೃತಿಗಳನ್ನು ಮುಂದುವರಿಸುವ ಮತ್ತು ಕೀನ್ಯಾದ ಇತರ ಪರಿಸರ ಸಂಬಂಧಿ ಯೋಜನೆಗಳಿಗೆ ದನಿಯಾಗುವ ಕನಸು ಇವರಿಗಿದೆ.

ಮಾನವೀಯ ಸಂವೇದನೆಯ ಒಂದು ಲೇಖನ, ಛಾಯಾಚಿತ್ರ, ಹಾಡು, ಕಲಾಕೃತಿ, ಸಿನೆಮಾ, ಸಾಕ್ಷ್ಯಚಿತ್ರ, ಬೀದಿನಾಟಕ, ಒಂದು ಜವಾಬ್ದಾರಿಯುತ ಹೆಜ್ಜೆ… ಎಂಥೆಂಥಾ ಹೊಸ ಧನಾತ್ಮಕ ತರಂಗಗಳನ್ನು ಸಮಾಜದಲ್ಲಿ ಸೃಷ್ಟಿಸುತ್ತದೆ ನೋಡಿ! ಈ ತರುಣನ ಕಥೆಯನ್ನು ಕೇಳುತ್ತಾ ತಕ್ಷಣ ಕೀನ್ಯಾಗೆ ಹೋಗಿ ಈತನನ್ನು ತಬ್ಬಿ ಅಭಿನಂದಿಸಬೇಕು ಅನ್ನಿಸಿದ್ದಂತೂ ಸತ್ಯ. ಜೇಮ್ಸ್ ವಕೀಬಿಯಾರಂತಹ ತರುಣರ ಸಂತತಿ ಸಾವಿರವಾಗಲಿ.

——–

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 7 days ago No comment

  ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?

        ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ಬೆಚ್ಚಗೆ ಕೂತಿರಬಹುದು ನ್ಯಾಯಕ್ಕೆ ಕನ್ನ ಹಾಕೋ ನಾನು ತಿರುಕ ಹೇಗೆ ಆಗಬೇಕು? ತಿರುಕನದೇನೋ ಕನಸಿತ್ತು ನನ್ನದು ಕೂಡಾ ಕನಸೆಂದು ಆ ಕೋಟೆ ಒಳಗಿರುವವರು ಕನವರಿಸುತ್ತಿರಬಹುದು ಬೂದಿ ಮುಚ್ಚಿದ ...

 • 1 week ago No comment

  ಕೊಂಕಣಿ ಪ್ರತಿಭೆಯನ್ನರಸಿ ಕರ್ನಾಟಕಕ್ಕೆ ಬಂದ ಪ್ರಶಸ್ತಿ

      ಅತಿಥಿ           ಈ ಬಾರಿ ಕರ್ನಾಟಕವು ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಪ್ರಮಾದವೇನಾದರೂ ಆಯಿತೇ? ಒಂದೇ ಪುರಸ್ಕಾರವನ್ನು ಇಬ್ಬರಿಗೆ ಹಂಚಿರಬಹುದೇ? ಎಂದೆಲ್ಲ ಯೋಚಿಸಿ ತಲೆ ಕೆರೆದುಕೊಳ್ಳುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಕನ್ನಡಕ್ಕೆ 2018ರ ಕೇಂದ್ರಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಘೋಷಣೆಯಾದಾಗಲೇ ಕರ್ನಾಟಕದ ಕೊಂಕಣಿ ಕವಯತ್ರಿ ವಿಲ್ಮಾ ...

 • 2 weeks ago No comment

  ಸಾಹಸದ ಆ ನಿಮಿಷಗಳು

          ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ.         ಬ್ಯಾಂಕರುಗಳು, ಅಕೌಂಟೆಂಟುಗಳು ವರ್ಷದ ಮೊದಲಿಂದ ಹಿಡಿದು ಮಾರ್ಚಿ ತಿಂಗಳವರೆಗೆ ಭಾರೀ ಬ್ಯುಸಿಯಾಗುವಂತೆ ಇಂಗ್ಲೆಂಡಿನ ಸರ್ಕಾರೀ ದಂತ ವೈದ್ಯಕೀಯ ರಂಗದಲ್ಲೂ ಧಾವಂತ ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ಗುತ್ತಿಗೆ ಪಡೆದ ಕೆಲಸವನ್ನು ಮಾರ್ಚಿಯ ಕೊನೆಗೆ ಪೂರ್ತಿಗೊಳಿಸದಿದ್ದರೆ ಮುಂದಿನ ವರ್ಷದ ಕಾಂಟ್ರಾಕ್ಟ್ ನ್ನು ಕಳೆದುಕೊಳ್ಳುವ ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

  ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು. ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ಇಲ್ಲಿಯ ಸಿಬ್ಬಂದಿಯೇ ನನಗೆ ಅನ್ನದಾತರು. ಹೀಗಾಗಿ ಎಲ್ಲೆಲ್ಲೂ ನನಗೆ ಪರಿಚಿತ ಮುಖಗಳೇ. ಅಂದು ಮಾತ್ರ ಸಿಬ್ಬಂದಿಯೊಬ್ಬ ಗಡಿಬಿಡಿಯಲ್ಲಿ ನನ್ನ ಆರ್ಡರ್ ಬರೆದುಕೊಂಡು ಅಷ್ಟೇ ಅವಸರದಲ್ಲಿ ಖಾದ್ಯಗಳನ್ನು ತಂದಿಟ್ಟು ...

 • 3 weeks ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  2 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  3 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  3 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...