Share

ಕೆಂಡದಂಥ ಕಾವ್ಯ
ಪಾಶ್ ಕವಿತೆಗಳು | ಕನ್ನಡಕ್ಕೆ: ಕಾದಂಬಿನಿ

ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. 1988ರ ಮಾರ್ಚ್ 23ರಂದು ಖಲಿಸ್ತಾನಿ ಉಗ್ರರ ಗುಂಡಿಗೆ ಬಲಿಯಾದಾಗ ಆತನಿಗಿನ್ನೂ ಮೂವತ್ತೇಳೇ ವರ್ಷ. ಬಹುದೊಡ್ಡ ಕನಸೊಂದು ಸತ್ತಿತ್ತು. “ಅತ್ಯಂತ ಅಪಾಯಕಾರಿಯೆಂದರೆ ನಮ್ಮ ಕನಸುಗಳು ಸಾಯುವುದು” ಎಂದಿದ್ದ ಕವಿ ಇಲ್ಲವಾಗಿಬಿಟ್ಟಿದ್ದ.

 

ಪಾಶ್ ಮೂರು ಕವಿತೆಗಳನ್ನು ಲೇಖಕಿ ಕಾದಂಬಿನಿ ಅವರು ಕನೆಕ್ಟ್ ಕನ್ನಡಕ್ಕಾಗಿ ಅನುವಾದಿಸಿಕೊಟ್ಟಿದ್ದಾರೆ. ಇದರಲ್ಲಿ ಮೊದಲನೆಯದಾದ ‘ಎಲ್ಲಕ್ಕಿಂತ ಅಪಾಯಕಾರಿ’ ಎಂಬ ಕವಿತೆ ಪಾಶ್ ಬರೆದ ಅತ್ಯಂತ ಶಕ್ತಿಶಾಲಿ ಕವಿತೆ ಎಂದೇ ಬಣ್ಣಿತವಾಗಿರುವಂಥದ್ದು. ಅದರ ವಾಚನವೂ ಲಭ್ಯವಿದ್ದು, ಅದರ ಲಿಂಕ್ ಕೂಡ ಇಲ್ಲಿ ಕೊನೆಯಲ್ಲಿ ಕೊಡಲಾಗಿದೆ – ಅನುವಾದದ ಜೊತೆಗೇ ಕೇಳಿಸಿಕೊಳ್ಳಲಿಕ್ಕೆಂದು.

*

*

 

ಎಲ್ಲಕ್ಕಿಂತ ಅಪಾಯಕಾರಿ

ಶ್ರಮದ ಲೂಟಿ ಎಲ್ಲಕ್ಕಿಂತ ಅಪಾಯಕಾರಿಯೇನಲ್ಲ
ಪೋಲೀಸರ ಲಾಠಿ ಎಲ್ಲಕ್ಕಿಂತ ಅಪಾಯಕಾರಿಯೇನಲ್ಲ
ವಂಚನೆ ಮತ್ತು ಲೋಭದ ಮುಷ್ಟಿಯೂ
ಎಲ್ಲಕ್ಕಿಂತ ಅಪಾಯಕಾರಿಯೇನಲ್ಲ
ಮಾಡದ ತಪ್ಪಿಗೆ ಸಿಕ್ಕಿಬೀಳುವುದು
ಕೆಟ್ಟದ್ದೇ ಹೌದಾದರೂ
ಭಯದ ಮೌನದಲಿ ಬಂಧಿಯಾಗುವುದು
ಕೆಟ್ಟದ್ದೇ ಹೌದಾದರೂ
ಎಲ್ಲಕ್ಕಿಂತ ಅಪಾಯಕಾರಿಯೇನಲ್ಲ
ಸಜ್ಜನಿಕೆಯು ಕಪಟಿಗಳ ಗದ್ದಲದಲಿ ಅಡಗಿಹೋಗುವುದು
ಕೆಟ್ಟದ್ದೇ ಹೌದಾದರೂ
ಮಿಂಚುಹುಳಗಳ ಮೋಹದಲಿ ಬೀಳುವುದು,
ಕೈಕಟ್ಟಿ ಕೂತು ಸಮಯ ಕಳೆಯುವುದು
ಕೆಟ್ಟದ್ದೇ ಹೌದಾದರೂ
ಎಲ್ಲಕ್ಕಿಂತ ಅಪಾಯಕಾರಿಯೇನಲ್ಲ
ಎಲ್ಲಕ್ಕಿಂತ ಅಪಾಯಕಾರಿ
ಶವವು ಶಾಂತಿಯಿಂದ ತುಂಬಿಹೋಗುವುದು
ಗೋಳಾಟವೇ ಇಲ್ಲದಂತೆ
ಎಲ್ಲವನ್ನೂ ತುಟಿಕಚ್ಚಿ ಸಹಿಸಿಬಿಡುವುದು
ಮನೆಯಿಂದ ದುಡಿಮೆಗೆ ಹೊರಡುವುದು
ಮತ್ತಲ್ಲಿಂದ ಮನೆಗೆ ಮರಳುವುದು…
ಎಲ್ಲಕ್ಕಿಂತ ಅಪಾಯಕಾರಿ
ನಮ್ಮ ಕನಸುಗಳ ಸಾವಾಗುವುದು!
ಎಲ್ಲಕ್ಕಿಂತ ಅಪಾಯಕಾರಿ ಆ ಗಳಿಗೆ…
ನಿಮ್ಮ ಮುಂಗೈಯಲ್ಲಿ ನಡೆದಾಡುವುದೂ
ನಿಮ್ಮ ಕಣ್ಣೆದುರೇ ನಿಂತುಹೋಗುವ ಆ ಗಳಿಗೆ
ಎಲ್ಲಕ್ಕಿಂತ ಅಪಾಯಕಾರಿ ಆ ಕಣ್ಣು…
ಅದರ ನೋಟ ಜಗವನು ಪ್ರೇಮದಿಂದ
ಚುಂಬಿಸಲು ಮರೆಯುವಾಗ
ಮತ್ತು ಒಂದು ಕೆಟ್ಟ ಪುನರಾವರ್ತನಾ ಕ್ರಮದಲಿ
ಅದು ಕಳೆದುಹೋಗುವಾಗ
ಎಲ್ಲಕ್ಕಿಂತಲೂ ಅಪಾಯಕಾರಿಯೆನಿಸುವುದು ಆ ಗೀತೆ
ಅದು ಶೋಕಗೀತೆಯಾಗಿ ಓದಲ್ಪಡುವಾಗ
ಭಯತ್ರಸ್ತ್ರರ ಬಾಗಿಲುಗಳಲಿ
ಗೂಂಡಾಗಿರಿಯಲಿ ಒರಟಾಗುವಾಗ
ಎಲ್ಲಕ್ಕಿಂತಲೂ ಅಪಾಯಕಾರಿ ಆ ಚಂದ್ರ
ಅವನು ಹತ್ಯಾಕಾಂಡಗಳ ತರುವಾಯ
ಪಾಳುಬಿದ್ದ ಅಂಗಳಗಳಲಿ ಹರವುತ್ತಾನೆ
ಆದರೆ ನಿಮ್ಮ ಕಣ್ಣಿಗದು ಮೆಣಸಿನ ಹಾಗೆ ಬೀಳದಿರುವಾಗ!
ಎಲ್ಲಕ್ಕಿಂತಲೂ ಅಪಾಯಕಾರಿ ಆ ದಿಕ್ಕು
ಅಂಥಲ್ಲಿ ಆತ್ಮದ ಸೂರ್ಯನು ಮುಳುಗಿಹೋಗಿ
ಮತ್ತದರ ಸತ್ತ ಬಿಸಿಲಿನ ತುಣುಕೊಂದು
ನಿಮ್ಮ ದೇಹದ ಪೂರ್ವದೆಸೆಯಲ್ಲಿ ಇರಿಯತೊಡಗುವಾಗ
ಶ್ರಮದ ಲೂಟಿ ಎಲ್ಲಕ್ಕಿಂತ ಅಪಾಯಕಾರಿಯೇನಲ್ಲ
ಪೋಲೀಸರ ಲಾಠಿ ಎಲ್ಲಕ್ಕಿಂತ ಅಪಾಯಕಾರಿಯೇನಲ್ಲ
ವಂಚನೆ ಮತ್ತು ಲೋಭದ ಮುಷ್ಟಿಯೊಳಗೆ ಸಿಲುಕುವುದೂ
ಎಲ್ಲಕ್ಕಿಂತ ಅಪಾಯಕಾರಿಯೇನಲ್ಲ
ಎಲ್ಲಕ್ಕಿಂತಲೂ ಅಪಾಯಕಾರಿ
ನಮ್ಮ ಕನಸುಗಳ ಸಾವಾಗುವುದು!

~

ದ್ರೋಣಾಚಾರ್ಯರ ಹೆಸರಲ್ಲಿ

ನ್ನ ಗುರುದೇವಾ!
ಅದೇ ಹೊತ್ತು ತಾವು ನನ್ನನ್ನು
ಒಬ್ಬ ಬೇಡರ ಹುಡುಗ ಎಂದುಕೊಂಡು
ನನ್ನ ಹೆಬ್ಬೆರಳನ್ನು ಕತ್ತರಿಸಿರುತ್ತಿದ್ದರೆ
ಕಥೆ ಬೇರೆಯಾಗಿತ್ತು …

ಆದರೆ ಎನ್.ಸಿ.ಸಿ.ಯಲ್ಲಿ ನಾನು
ಬಂದೂಕನ್ನೆತ್ತಲು ನಿಯುಕ್ತನಾಗಿದ್ದಾಗ
ತಾವೇ ಹೇಳಿದ್ದಿರಿ
ನಮ್ಮ ದೇಶಕ್ಕೆ
ಏನಾದರೂ ಗಂಡಾಂತರ ಎದುರಾದರೆ
ಅದನ್ನು ವೈರಿಯೆಂದು ಪರಿಗಣಿಸಿ
ಟ್ರಿಗರನ್ನು ಹೇಗೆ ಒತ್ತಿಬಿಡಬೇಕೆಂದು…

ಈಗ ದೇಶಕ್ಕೆ ಸಂಕಷ್ಟ ಎದುರಾಗಿದೆ
ನನ್ನ ಗುರುದೇವಾ!
ಈಗ ಖುದ್ದು ತಾವೇ ದುರ್ಯೋದನನ ಸಂಗ ಸೇರಿಕೊಂಡಿದ್ದೀರಿ
ಆದರೀಗ ತಮ್ಮ ಚಕ್ರವ್ಯೂಹ
ಎಂದೂ ಪ್ರಭಾವಶಾಲಿಯಾಗಲಾರದು
ಮತ್ತು ಮೊದಲ ಪ್ರಹಾರದಲ್ಲಿಯೇ
ಪ್ರತಿಯೊಂದು ಆಕ್ರಮಣದ
ಎಂಬತ್ತನಾಲ್ಕು ಸುತ್ತುಗಳನ್ನೂ ತುಂಡರಿಸಲಾಗುವುದು
ಹಾಂ, ಅಂದಹಾಗೆ ತಾವು ಸಣ್ಣ ವಯಸ್ಸಿನಲ್ಲಿಯೇ
ಒಬ್ಬ ಬೇಡರ ಹುಡುಗನೆಂದುಕೊಂಡು
ನನ್ನ ಹೆಬ್ಬೆರಳನ್ನು ಕತ್ತರಿಸಿರುತ್ತಿದ್ದರೆ
ಕಥೆಯೇ ಬೇರೆಯಾಗುತ್ತಿತ್ತು…

~

೨೩ ಮಾರ್ಚ್

ವನ ಹುತಾತ್ಮನಾಗುವಿಕೆಯ ತರುವಾಯ ಬಾಕಿ ಜನಗಳು
ಯಾವುದೋ ದೃಶ್ಯದಂತೆ ಉಳಿದರು
ಆಗಷ್ಟೇ ದೇಶದಲ್ಲಿ ಅಡಗಿದ ರೆಪ್ಪೆಗಳು ನಾಚಿಕೆಪಡುತ್ತ ಇಣುಕಿದರೆ
ದೇಶವಿಡೀ ಇನ್ನೂ ಮಾತಾಡುತ್ತಲೇ ಇದೆ

ಅವನು ಹೊರಟು ಹೋದ ಮೇಲೆ
ಅವನು ಹುತಾತ್ಮನಾದ ಮೇಲೆ
ತೆರೆದುಕೊಳ್ಳುವ ತಮ್ಮ ಒಳಗಿನ ಕಿಟಕಿಯಲಿ
ಜನಗಳ ಹೆಪ್ಪುಗಟ್ಟಿದ ದನಿಗಳು

ಅವನ ಹುತಾತ್ಮನಾಗುವಿಕೆಯ ತರುವಾಯ
ದೇಶದ ಬಹುದೊಡ್ಡ ಪಾರ್ಟಿಯ ಜನರು
ತಮ್ಮ ಮುಖದಲ್ಲಿ ಕಂಬನಿಯಲ್ಲ, ಮೂಗೊರೆಸಿದರು
ಗಂಟಲು ಸರಿಪಡಿಸಿಕೊಂಡು ಮಾತಾಡುವ
ಮಾತಾಡುತ್ತಲೇ ಹೋಗುವ ಪರಿಶ್ರಮ ಪಟ್ಟರು

ಅವನೋ.. ತನ್ನ ಹುತಾತ್ಮನಾಗುವಿಕೆಯ ತರುವಾಯ
ಜನರ ಮನೆ ಮನೆಗಳಲ್ಲಿ ಅವರ ದಿಂಬುಗಳಲ್ಲಿ ಅಡಗಿದ
ಉಡುಪಿನ ಗಂಧದಂತೆ ಪಸರಿಸುತ್ತಾ ಹೋದ

ಹುತಾತ್ಮನಾಗುವ ಗಳಿಗೆಯಲ್ಲಿ ಅವನೊಬ್ಬನೇ ಇದ್ದ ಈಶ್ವರನ ಹಾಗೆ
ಆದರೆ ಈಶ್ವರನ ಹಾಗೆ ಅವನು ನಿಸ್ತೇಜನಾಗಿರಲಿಲ್ಲ

*

 

 

——-

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 1 day ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 2 days ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 1 week ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 1 week ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...

 • 2 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...


Editor's Wall

 • 15 August 2018
  1 day ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  1 week ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  2 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  3 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...