ಕೇವಲ 22ನೇ ವಯಸ್ಸಿನಲ್ಲೇ (1933-1955) ತೀರಿಕೊಂಡ, ಅಷ್ಟರೊಳಗೇ ‘ವಿದಾಯ’ ಎಂಬ ಕವನಸಂಕಲನ ಪ್ರಕಟಿಸಿ, ತಮ್ಮ ಕಾವ್ಯದ ಅಸಾಧಾರಣತೆಯನ್ನು ಕಾಣಿಸಿದ್ದ ಯರ್ಮುಂಜ ರಾಮಚಂದ್ರ ಅವರ ತೀರಾ ಕಾಡುವ ಕವಿತೆಯೊಂದಿದೆ. ಅದು ‘ಯಾರಿಲ್ಲಿಗೆ ಬಂದರು ಕಳೆದಿರುಳು?’:
ಯಾರಿಲ್ಲಿಗೆ ಬಂದರು ಕಳೆದಿರುಳು
ಏ ಗಾಳಿ,
ಆ ಕಥೆಯನೊರೆದು ಮುಂದಕೆ ತೆರಳು.
ನೆನೆದು ನೆನೆದು ತನು ಪುಳಕಗೊಳ್ಳುತಿದೆ
ನುಡಿವೆನೆ ದನಿ ನಡುಗುತಿದೆ
ಸ್ಮೃತಿ ವಿಸ್ಮೃತಿಗಳ ಕಂಬನಿ ಮಾಲೆ
ಎಲ್ಲೆಲ್ಲೂ ತೂಗುತಿದೆ
ಕಳೆದಿರುಳಿನ ಬೆಳದಿಂಗಳ ಮರೆಯಲಿ
ಏನೂ ಅರಿಯದ ಮುಗ್ಧೆಯ ಕಿವಿಯಲಿ
ಯಾರೇನನು ಪಿಸು ನುಡಿದರು ಹೇಳು
ಏ ಗಾಳಿ,
ಆ ಕಥೆಯನೊರೆದು ಮುಂದಕೆ ತೆರಳು.
ನಸುಕಿನ ಬೆಳಕಿನೊಳೆಂಥ ಬಳಲಿಕೆ
ಮೂಡಲ ಹಣೆ ಕಡುಗೆಂಪು!
ಮರಮರದೆಡೆಯಲಿ ಕೂಕು ಆಟ
ಭೂಮಿಗೆ ಮೈಮರೆವು
ಅಲ್ಲಿ ಇಲ್ಲಿ ಗಿಡ ಬಳ್ಳಿ ಮರಗಳು
ಯಾವ ನೆನಪಿನಲೊ ಮೈ ಮರೆತಿಹವು
ಹೃದಯದೊಳೇನನು ಎರೆದರು ಕೊರೆದರು?
ಏ ಗಾಳಿ,
ಆ ಕಥೆಯನೊರೆದು ಮುಂದಕೆ ತೆರಳು.
ಮೈಯೆಲ್ಲಾ ಗಡಗುಟ್ಟುತಲಿದೆಯೇ
ಬೆದರಿಸಿದವರಾರು?
ಮುಖ ತೊಯ್ದಿದೆ, ಕಣ್ಣೀರಿನ ಹನಿಯನು
ಹರಿಯಿಸಿದವರಾರು?
ಯಾರೂ ಕಾಣದ ಆ ಮರೆಯೊಳಗೆ
ಕುಲುಕುಲು ಎನುತಿದೆ ಮೆಲುನಗೆಯ ನೊರೆ
ನಿನ್ನೆಯ ಹಾಡಿನ ದನಿಯಿನ್ನೂ ಗುಣು-
-ಗುಣಿಸುವ ಮಾಯೆಯಿದೆಂಥದು ಹೇಳು
ಏ ಗಾಳಿ,
ಆ ಕಥೆಯನೊರೆದು ಮುಂದಕೆ ತೆರಳು.
~
ಇದೊಂದು ಹೌದೊ ಅಲ್ಲವೊ ಅನ್ನಿಸುವಂಥ ತಲ್ಲಣದ ಧ್ವನಿ. ಬೆಳಗಿನ ತಂಗಾಳಿಯನ್ನು ತಡೆದು ನಿಲ್ಲಿಸಿ ಕೇಳುತ್ತಿರುವ ಬಗೆಯಲ್ಲಿ ಒಡೆದುಕೊಳ್ಳುತ್ತಿರುವುದು, ಪೊಸೆಸಿವ್ ಆದ, ಅದನ್ನು ತೋರಗೊಡಲಾರದ ಸಂದಿಗ್ಧತೆ. ಆ ಕುತೂಹಲಿಯಾದ ಮತ್ತು ಕಾತರಪೂರ್ವಕ ತಳಮಳದ ಮನಸ್ಸಿಗೆ, ಏನೂ ಅರಿಯದ ಮುಗ್ಧೆಯ ಸಂಬಂಧವಾಗಿ ಕಳೆದ ರಾತ್ರಿ ನಡೆದುಹೋದದ್ದೇನು ಎಂಬ ಪ್ರಶ್ನೆ ಸಣ್ಣದಲ್ಲ; ಬದಲಿಗೆ ಗಾಢವಾದದ್ದು.
ಗಮನಿಸಬೇಕು: ಆ ಕಳೆದಿರುಳು ಕಾಳ ಕತ್ತಲೆಯದ್ದಲ್ಲ. ಅದು ಬೆಳದಿಂಗಳ ರಾತ್ರಿ. ಆದರೆ ಅಂಥ ಬೆಳದಿಂಗಳಲ್ಲೂ ಕೂಡ, ನಿಗೂಢವನ್ನು ಕಾಯಬಲ್ಲ ಮರೆ ಇದೆ. ಮತ್ತು ಆ ಮರೆಯೇ ಈಗ ಸಂದೇಹವನ್ನು, ಆತಂಕವನ್ನು ಎಬ್ಬಿಸಿದೆ. ಹಾಗಾಗಿಯೇ ಮುಗಿಯದಷ್ಟು ಪ್ರಶ್ನೆಗಳು.
ಒಂದೊಂದು ಪ್ರಶ್ನೆಯಲ್ಲೂ ಧುಮುಗುಡುವ ವಿವರಗಳಿವೆಯಲ್ಲ; ಅವುಗಳ ಓಘದಲ್ಲೇ ಅನುಮಾನದ ಬಿಂದುವಿನಲ್ಲಿ ತಲೆಯೆತ್ತಿರುವ ತೀರ್ಮಾನದಂಥ ಬಗೆಯ ಸೂಚಕಗಳೂ ಗೋಚರಿಸುತ್ತವೆ. ಅದನ್ನು ನೋಡಿಕೊಂಡು ಹೇಳುವುದಾದರೆ, ಆ ಏನೂ ಅರಿಯದ ಮುಗ್ಧೆಯ ಬಳಿಗೆ ನಿನ್ನೆಯ ಬೆಳದಿಂಗಳ ರಾತ್ರಿಯಲ್ಲಿ ಒಬ್ಬ ಬಂದುಹೋಗಿದ್ದಾನೆ. ಅವನು ಅವಳ ಬಳಿ ಪಿಸುಮಾತಲ್ಲಿ ಏನನ್ನೋ ಹೇಳಿಬಿಟ್ಟಿದ್ದಾನೆ. ಆದರೆ, ಅದಷ್ಟೇ ಅಲ್ಲ ನಡೆದಿರುವುದು ಎಂಬ ಆಳದ ತೊಳಲಾಟ, ಈ ಪ್ರಶ್ನಿಗ ಮನಸ್ಸನ್ನು ಕಾಡುತ್ತಿದೆ.
ಬಂದವನು ಅವಳ ಹೃದಯವನ್ನೇ ಕದ್ದುಬಿಟ್ಟಿದ್ದಾನೆ ಎಂಬ ಕಳವಳ. ಅದಕ್ಕಿಂತಲೂ ಮಿಗಿಲಾಗಿ, ಅವರಿಬ್ಬರ ಸಮಾಗಮವಾಗಿದೆ ಎಂಬ ಅನುಮಾನದಲ್ಲಿ ಎದ್ದ ವೇದನೆ. ಅವಳ ಮೈ ಕಂಪಿಸುತ್ತಿರುವುದು, ಮೈಬೆವರಿರುವುದು, ಹಣೆಯಲ್ಲಿ ಕೆಂಪು ಕೆದರಿರುವುದು, ಅವಳೆಂತದೋ ಮೈಮರೆವಿಗೆ ಸಿಕ್ಕಿರುವುದು, ಏನನ್ನೋ ನೆನೆದಂತೆ, ಮರೆತಂತೆ ಇರುವುದು, ಅವಳಲ್ಲಿ ಬೆಳಗಿನ ಜಾವವೇ ಕಾಣಿಸುತ್ತಿರುವ ಬಳಲಿಕೆ, ಆ ಸುತ್ತಲ ಮರಗಳೆಲ್ಲ ಏನನ್ನೋ ಕಂಡುಬಿಟ್ಟವುಗಳಂತೆ ಕೂಕು ಆಟದಲ್ಲಿ ತನ್ಮಯಗೊಂಡಿರುವುದು…. ಓಹ್ ಎಷ್ಟೊಂದು ಸಾಕ್ಷ್ಯಗಳು!
ಅನುಮಾನದ ಇನ್ನೂ ಒಂದು ಘಟ್ಟದಲ್ಲಿ, ಬಂದವನು ಅವಳ ಗುರುತಿನವನೇ ಅಥವಾ ಅವನ ಪ್ರಿಯಕರನೇ ಇರಬೇಕು ಎಂಬ ನಿಶ್ಚಯ. ಅದಕ್ಕೆ ಸಾಕ್ಷಿಯಂತೆ ಅವನಿಗೆ ಕಾಣಿಸುವುದು ಹುಡುಗಿಯ ಕಣ್ಣಿಂದ ಜಾರಿ ಮುಖ ತೋಯಿಸಿರುವ ನೀರು ಮತ್ತು ತುಟಿಯಂಚಲ್ಲಿ ಅಡಗಿರುವ ಮೆಲುನಗೆ. ಬಂದುಹೋದವನ ನೆನಪು ಮತ್ತು ವಿದಾಯದಿಂದ ಮೂಡಿದ ಖುಷಿ, ಅಳು. ನಿನ್ನೆಯ ಎಲ್ಲವೂ ಇನ್ನೂ ಅವಳೊಳಗೆ ಹಾಡಿನಂತೆ ಗುನುಗುತ್ತಿರುವುದು ಅವನಿಗೆ ಕೇಳಿಸುತ್ತಿದೆ.
ಅವಳನ್ನು ದೂರದಿಂದಲೇ ಪ್ರೀತಿಸುತ್ತಿರುವ ಅವನೊಳಗೆ ಸಂಕಟ; ತಾನು ಅಂದುಕೊಳ್ಳುತ್ತಿರುವುದೆಲ್ಲ ನಿಜವಾಗದಿರಲಿ ಎಂಬ ಮೊರೆ. ಗಾಳಿಯ ಮುಂದೆ ನಿರಂತರ ಗೋಗರೆತ.
ತುಂಟ ಗಾಳಿ ಉತ್ತರಿಸದೆ ಮುಂದೆ ಸಾಗಿದೆ. ಆದರೆ ಹಾಗೆ ಹೊರಡುವಾಗ ಅವನ ಪ್ರಶ್ನೆಗಳನ್ನೂ ಹೊತ್ತು ನಡೆದಿದೆ. ನಮ್ಮವರೆಗೂ ಬಂದು ಅದದೇ ಪ್ರಶ್ನೆಗಳನ್ನು ತಂದಿಳಿಸಿ, ಆ ಎಲ್ಲ ಪ್ರಶ್ನೆಗಳನ್ನು ನಮ್ಮದಾಗಿಸಿದೆ.
ಕವಿತೆ ಕೂಡ ಗಾಳಿಯ ಹಾಗೆ. ಅದು ಉತ್ತರ ಕೊಡುವುದಿಲ್ಲ. ಅದರರ್ಥ, ಅದು ಉತ್ತರವನ್ನು ಒಳಗೊಂಡಿಲ್ಲ ಅಂತಲ್ಲ.
ಸೊಗಸಾದ ಕವಿತೆ. ಸಣ್ಣ ವಯಸ್ಸಿಗೇ ಕಳೆದು ಹೋದ ದೊಡ್ಡ ಪ್ರತಿಭೆ!!