Share

ನನ್ನನ್ನು ಕವಿಯೆಂದರು..!
ಕಾದಂಬಿನಿ

 

 

ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.

 

 

 

ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ಕೊಳಚೆಯನ್ನು ಆರೋಪಿಸುತ್ತ ಅಪಮೌಲ್ಯಗೊಳಿಸಲು ಯತ್ನಿಸುತ್ತದೆ? ಯಾಕೆ ಮೌಲ್ಯಗಳನ್ನು ಸುಳ್ಳೆಂದು ಸ್ಥಾಪಿಸಲು ಹೊರಡುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ದಿಗ್ಬ್ರಮೆಯಿಂದಲೂ ನೋವಿನಿಂದಲೂ ಉತ್ತರ ಹುಡುಕುತ್ತಲೇ ಇದ್ದೇನೆ. ಮತ್ತು ಇಂಥವುಗಳ ಮೂಲಕ ಒಬ್ಬನನ್ನು ಕೆಟ್ಟವನನ್ನಾಗಿಯೂ ಅಥವಾ ಮಹಾ ಸಾಧಕನನ್ನಾಗಿಯೂ ರೂಪಿಸಿಸಿಬಿಡುವ ಪ್ರಕ್ರಿಯೆಯೊಂದು ಜರುಗಿಬಿಡುವ ಸೋಜಿಗವೊಂದನ್ನು ನೋಡುತ್ತಲೂ ಇದ್ದೇನೆ. ಆದರೆ ನಾನಿನ್ನೂ ಈ ಎರಡೂ ಆಗಿರದೆ ನಡುವೆ ಸ್ತಬ್ಧವಾಗಿ ನಿಂತುಬಿಟ್ಟಿದ್ದೇನೆ ಎಂದು ಅನಿಸುತ್ತದೆ.

ನನಗೆ ಚೆನ್ನಾಗಿ ನೆನಪಿದೆ ಆ ದಿನ…. ಆರಂಭದಿಂದಲೂ ನಾಚಿಕೆಯ, ಬಹಳ ನಾಜೂಕು ಮನಸ್ಥಿತಿಯ ನನ್ನನ್ನು ಊರೊಂದು ನೋಯಿಸಿಬಿಟ್ಟಿತ್ತು. ಸರಿಯಾಗಿ ಹೇಳಬೇಕೆಂದರೆ ಒಂದು ಊರಿಗಾಗಿ, ನುಡಿಸೇವೆಗಾಗಿ ಪ್ರಾಮಾಣಿಕವಾಗಿ ಸಲ್ಲಿಸಿದ ಸೇವೆಗೆ ಪ್ರತಿಫಲವಾಗಿ ನನಗೆ ಸಿಕ್ಕ ಉಡುಗೊರೆಯದು. ಊರಿನಲ್ಲಿ ಗಣ್ಯರೆಂಬ ಮುಖವಾಡ ತೊಟ್ಟವರ ಬಯಲಾದ ಅಸಲಿಯತ್ತಿನ ಕಥೆಯಿದು.

ಇಲ್ಲಿ ಇನ್ನೂ ಒಂದು ಮಾತು ಹೇಳುವುದಿದೆ. ಒಂದು ಹೆಣ್ಣು ಬುದ್ಧಿವಂತೆಯಾಗಿರುವುದನ್ನಾಗಲೀ, ನಿಷ್ಠೆ, ಪ್ರಾಮಾಣಿಕತೆಯಿಂದ ಅವಳ ಶ್ರಮಕ್ಕೆ ತಕ್ಕ ಯಾವುದೇ ಹೆಸರೊಲಿದು ಬರುವುದನ್ನಾಗಲೀ ಈ ಪುರುಷ ಪ್ರಧಾನ ಸಮಾಜ ಎಂದೆಂದಿಗೂ ಒಪ್ಪುವುದಿಲ್ಲ. ಹಾಗೇನಾದರೂ ಆಯಿತೆಂದರೆ ತಿರುಗಿಬಿದ್ದು ಪ್ರಹಾರ ನಡೆಸಿಬಿಡುತ್ತದೆ. ಈ ಪ್ರಹಾರವು ಘನತೆಯ ಎಲ್ಲೆಯನ್ನು ಮೀರಿ ಅನ್ನುವುದಕ್ಕಿಂತ ಕೊಳಕುತನದ ಎಲ್ಲೆಯನ್ನೇ ಮೀರಿ ಯಾವ ಮಟ್ಟಕ್ಕೂ ಹೋಗಿ ಬಡಿದು ಕೆಡವುವುದು ಇದೆ. ಆಗ ನನ್ನೊಡನೆ ನಡೆದದ್ದೂ ಅದೇ.

ಆದರೆ ಮರ್ಮಾಘಾತವಾದುದು ಈ ಕೆಲವರ ಮುಖವಾಡಗಳ ಹಿಂದಿನ ಅಸಲಿಯತ್ತು ಯಾರಿಗೂ ಗೊತ್ತಿರಲಿಲ್ಲ ಎನ್ನುವುದಕ್ಕಲ್ಲ. ಬದಲಿಗೆ ಗೊತ್ತಿದ್ದರೂ ನಮಗೇಕೆ? ನಾವೇಕೆ ಎದುರುಹಾಕಿಕೊಳ್ಳಬೇಕು ಎನ್ನುವ ಕಾರಣಕ್ಕೆ ಪ್ರಜ್ಞಾವಂತರೆನಿಸಿಕೊಂಡವರು ವಹಿಸಿದ ಜಾಣ ಮೌನಕ್ಕೆ! ಒಂದು ಸಮಾಜ ಅಧೋಗತಿಗೆ ಕುಸಿದಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿರಲಿಲ್ಲ. ನಾನು ಸೋತುಹೋಗಿದ್ದೆ. ಸತ್ಯವನ್ನು ಕೂಗಿ ಕೂಗಿ ಹೇಳುವಂಥ ಅವಶ್ಯಕತೆ ಏನೂ ನನಗೆ ಇರಲಿಲ್ಲ. ಯಾಕೆಂದರೆ ಸತ್ಯ ಎಲ್ಲರೆಂದರೆ ಎಲ್ಲರಿಗೂ ತಿಳಿದಿತ್ತು. ಆದರೂ ತಪ್ಪು ಮಾಡಿದವರ ಬೆನ್ನ ಮರೆಯಲ್ಲಿ ಅವರು ಅಡಗಿ ನಿಂತಿದ್ದರು. ಆರೋಪಿಸುವ ಸುಳ್ಳುಗಳನ್ನು ನಗುತ್ತಲೇ ಗೋಣಾಡಿಸುತ್ತ ಕೇಳುತ್ತಿದ್ದರು. ಒಬ್ಬರೋ ಇಬ್ಬರೋ ನನ್ನ ಜೊತೆ ನಿಂತು ನೈತಿಕ ಸ್ಥೈರ್ಯ ತುಂಬಿದ್ದರು. ಆದರೂ ಸಂಪೂರ್ಣ ಕುಸಿದುಹೋಗುತ್ತಿದ್ದೆ. ತಪ್ಪು ಮಾಡಿದವರು ತಲೆಯೆತ್ತಿ ತಿರುಗುತ್ತಿದ್ದರು. ನಾನು ನಾಚಿ ಮುಖ ಅಡಗಿಸಿಕೊಂಡು ಕೂತುಬಿಟ್ಟಿದ್ದೆ. ನನಗೀಗ ಯಾರಲ್ಲೂ ಮಾತಾಡಬೇಕೆನಿಸುತ್ತಿರಲಿಲ್ಲ. ಯಾರು ಕೊಡುವ ಸಾಂತ್ವನದ ಮಾತುಗಳೂ ಖೊಟ್ಟಿ ಎನಿಸುತ್ತಿದ್ದವು. ನಾನು ಅಂತರ್ಮುಖಿಯಾಗಿ ಒಳಗನ್ನು ಸುಟ್ಟುಕೊಳ್ಳುತ್ತಿದ್ದ ಘೋರ ದಿನಗಳವು.

ಇಂಥ ಹೊಡೆತಗಳ ರುಚಿ ನಾನು ಮೊದಲು ಉಂಡಿರಲಿಲ್ಲವೆಂದಲ್ಲ. ಹೇಳಬೇಕೆಂದರೆ ಬದುಕಿನ ಉದ್ದಕ್ಕೂ ಸಿಕ್ಕಿದ್ದೇ ಅದು. ಆದರೆ ಈ ಸಲದ ಹೊಡೆತ ನನ್ನನ್ನು ನೆಲಕಚ್ಚಿಸಿಬಿಟ್ಟಿತ್ತು. ಇಂಥ ಸರಿಹೊತ್ತಲ್ಲೇ ನನ್ನ ತಂದೆ ಹೋಗಿಬಿಟ್ಟರು! ನನ್ನನ್ನು ಪ್ರಾಣದಂತೆ ಪ್ರೀತಿಸಿದ ತಂದೆ. ನಾನೀದಿನ ಏನಾಗಿರುವೆನೋ ಅದಕ್ಕೆ ಕಾರಣವಾದ ನನ್ನ ತಂದೆ. ಈ ದಿನಗಳು ನನ್ನ ಕಡು ದಾರುಣ ದಿನಗಳಾಗಿದ್ದವು. ಇದಾಗಿ ಸಾಧಾರಣ ಎರಡು ತಿಂಗಳು ಕಳೆದಿರಬಹುದು. ಮತ್ತೊಂದು ವಿಶ್ವಾಸಘಾತುಕತನವನ್ನು ನಾನೆದುರಿಸಬೇಕಾಯಿತು. ನನ್ನ ಹತ್ತಿರ ಈಗ ಯಾವ ಬೆಳಕಿನ ಕಿರಣ ಇರಲಿಲ್ಲ. ಒಂದು ಉಸಿರಾಡುವ ಶವದಂತೆ ಇದ್ದೆ ಅಷ್ಟೇ. ಆದರೆ ನಾನು ಕಷ್ಟಗಳಿಗೆ ಎಂದೂ ಹೆದರಿದ್ದಿಲ್ಲ. ಸತ್ಯ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಎಂಬ ಮೌಲ್ಯಗಳಿಗೆ ಬದ್ಧವಾಗಿ ಬದುಕುವ ಪ್ರಾಮಾಣಿಕ ಯತ್ನವೊಂದನ್ನು ಅಪಮಾನಪಡಿಸುವ ವಿಶ್ವಾಸಘಾತುಕತನದ ಷಡ್ಯಂತ್ರಕ್ಕಷ್ಟೇ ನಾನು ಬಲಿಯಾಗಿದ್ದುದು.

ಆ ದಿನ ನನಗೆ ಏನಾಯಿತೆಂದು ಗೊತ್ತಿಲ್ಲ. ಇದ್ದಕ್ಕಿದ್ದಂತೆ ದಿಡ್ಡನೆದ್ದು ನನ್ನ ಗೆಳೆಯನೊಬ್ಬನಿಗೆ ಕರೆ ಮಾಡಿ ಹೀಗೆಂದೆ, ‘ನೋಡು ನನಗೀಗ ತುರ್ತಾಗಿ ಒಂದು ಫೇಸ್ಬುಕ್ ಐಡಿ ಮಾಡಿಕೊಡು. ಐದು ನಿಮಿಷದಲ್ಲಿ ಅಷ್ಟೇ. ನಾನಿನ್ನು ಏನಾದರೂ ಬರೀಬೇಕು!’ ಎಂದೆ. ಐದೇ ನಿಮಿಷದಲ್ಲಿ ಪಾಸ್ ವರ್ಡ್ ಕಳಿಸಿದ. ಡೆಸ್ಕ್ ಟಾಪ್ ಮುಂದೆ ಕುಳಿತು ಸುಮ್ಮನೆ ಬರೆಯುತ್ತಾ ಹೋದೆ. ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.

ನೀವು ಯಾರು? ಯಾರು? ಪ್ರಶ್ನೆ ಮಾಡುತ್ತ ಹೋದರು. ನಾನು ಯಾವ ಒಂದಕ್ಕಾದರೂ ಉತ್ತರಿಸುತ್ತಿರಲಿಲ್ಲ. ಬರಿದೆ ಬರೆಯುತ್ತಿದ್ದೆ. ಹದಿನಾರು ಫ್ರೆಂಡ್ಸ್ ಇದ್ದ ಕಾಲದಲ್ಲಿ ಅರವತ್ತರಿಂದ ನೂರು ಲೈಕುಗಳು ಬಿದ್ದದ್ದಿದ್ದವು. ಕಮೆಂಟುಗಳಿದ್ದವು. ನಾನು ಯಾವ ಕಮೆಂಟಿಗೂ ಲೈಕ್ ಒತ್ತುತ್ತಿರಲಿಲ್ಲ. ಅಸಲಿಗೆ ನನಗದು ಯಾವುದೂ ಬೇಕಿರಲಿಲ್ಲ.

ಅಲ್ಲಿಂದಿಲ್ಲಿಗೆ ಮೂರು ವರ್ಷ ತುಂಬಿ ನಾಲ್ಕನೆಯದಕ್ಕೆ ಕಾಲಿರಿಸಿದೆ ಈ ಬರಹದ ಪಯಣ. ಸ್ನೇಹಿತರು ಐದು ಸಾವಿರ ಇದ್ದಾರೆ. ಸಾವಿರದ ಹತ್ತಿರ ರಿಕ್ವೆಸ್ಟುಗಳು ಕಾಯುತ್ತಿವೆ. ಈಗಲೂ ಸತ್ಯ, ಪ್ರಾಮಾಣಿಕತೆ, ಸಾಮಾಜಿಕ ನ್ಯಾಯದ ಪರವೇ ನಾನಿರುವುದು. ಹೇಳುವುದನ್ನು ಖಡಕ್ಕಾಗಿ ಹೇಳುತ್ತೇನೆ. ಅದಕ್ಕಾಗಿ ಯಾರಾದರೂ ನನ್ನನ್ನು ದ್ವೇಷಿಸಿದರೆ, ತಿರಸ್ಕರಿಸಿದರೆ ನನಗದು ಬೇಸರವಿಲ್ಲ.

ಇದರ ನಡುವೆ ನಾನು ಯಾರು? ಗಂಡಸೋ? ಹೆಂಗಸೋ? ಎಲ್ಲಿ ವಾಸಿಸುತ್ತೇನೆ, ಏನು ಕೆಲಸ ಮಾಡುತ್ತೇನೆ, ನನ್ನ ಹೆಸರು ನಿಜವೋ ಸುಳ್ಳೋ, ನಾನು ಅವರಿರಬಹುದಾ ಇವರಿರಬಹುದಾ ಹೀಗೆ ನೂರೆಂಟು ಕುತೂಹಲಗಳು ಹಲವರಲ್ಲಿ ಬಾಕಿಯುಳಿದಿವೆ.

ಈ ಪ್ರಶ್ನೆಗೆ ಹಿಂದೊಮ್ಮೆ ಈ ರೀತಿ ಕವಿತೆ ಬರೆದೆ,

‘ನಿಜ ಹೇಳು ನೀನು ಯಾರು?’
ಹೀಗೊಂದು ಪ್ರಶ್ನೆ
ನನ್ನನು ಗಟ್ಟಿಸಿ ಕೇಳುವಾಗ
ತಬ್ಬಿಬ್ಬಾಗಿ ತೊದಲುತ್ತೇನೆ…

ಹೌದು
ಆ ನಾಲಗೆಗಳು ಲೊಚಗುಟ್ಟಿ
ಆ ತುಟಿಗಳು ಪಿಸುಣರಾಗಿ ಪಿಸುಗುಟ್ಟಿ
ಆ ಬೆರಳ ಮೊನೆಗಳು ಕೀಲಿಮಣೆಯ ಕುಟ್ಟಿಕುಟ್ಟಿ
ಆ ಕಣ್ಣುಗಳು ನಿಶಿತ ಶರಗಳ ತೂರಿ
ಆ ಕುಹಕಗಳು ಕುಚೇಷ್ಟೆಯಲಿ ತಿವಿದು
ಮತ್ತೀಗ ಆ ಮೌನಗಳೂ ಬೆಂಕಿಯುಗುಳಿ ಅಬ್ಬರಿಸಿ
ಕೊರಳ ಪಟ್ಟಿಯ ಜಗ್ಗಿ
ನಿಜ ಹೇಳು, ನೀನಾರು?
ಎಂದರೆ ಬೆಚ್ಚಿ ತಬ್ಬಿಬ್ಬಾಗುತ್ತೇನೆ..

ಆ ಸಂಚು ಪಿತೂರಿಗಳು
ಹಾದಿ ಬೀದಿಯೊಳಗೋ ಸಂತೆ ಪೇಟೆಯೊಳಗೋ
ಗಣ್ಯ ಮಾನ್ಯರ ತುಂಬು ಸಭೆಯೊಳಗೋ ತೂರಿ ಹೊಂಚಿ
ಧುತ್ತನೆರಗಿ ನಿಜ ಹೇಳು ನೀನಾರು ಎಂದಾಗ
ಬೆವರಿ ಬೆದರಿ… ಕಣ್ಣೊಳಗೆ ಕೊಳ ಮೂಡಿ
ನಾಲಗೆಯಾಡದೆ ನಡುಗುತ್ತೇನೆ..
ಆ ಆಕ್ರೋಶ, ರೋಷಾವೇಷಗಳು ದೂರಿತ್ತು
ಆ ಅನುಮಾನಗಳು
ದರ್ಪದ ದಾಪುಗಾಲುಗಳಲಿ ದಾಳಿಯಿಟ್ಟು
ದರದರನೆ ಎಳೆದೊಯ್ದು
ದೋಷಾರೋಪಗಳ ದಾವೆ ಹೂಡಿ
ಆ ನಗೆಗಳೆನ್ನ ಕೊರಚು ಕಟಕಿ ಕಟಕಟೆಯಲಿ ಕೆಡವಿ
ಸಾಕ್ಷ್ಯಾಧಾರ ರಹಿತವೋ ಸಹಿತವೋ
ನಾನು ಅವರಿವರಾಗಿರುವ ತೀರ್ಪಿತ್ತು,
ಮತ್ತೀಗ ಜಗದ ಕಣ್ಣ ಬಂಧಿಖಾನೆಯೊಳಗಿನ
ಆಜೀವ ಖೈದಿ ನಾನು!

ನಿಜ ಹೇಳುತ್ತೇನೆ,
ನನ್ನಿರುವಿನ ಕವಿತೆಯುದ್ದಕೂ
‘ನಾನೆಂದರೆ ಜಂಗಮದ ಕಾಲು
ಅನಂತದ ರೆಕ್ಕೆ’
ಎನ್ನುವುದ ಓದಿ ಗ್ರಹಿಸಲಾರಿರಿ ಎಂದ ಮೇಲೆ
ನಿಮಗರ್ಥವಾಗುವ ಹಾಗೆ
ಕವಿತೆ ಬರೆಯಲಾಗದ ಘೋರ ಅಪರಾಧಿಯೇ ನಾನು!

ಹೀಗೆ ನಾನು ಯಾರೆಂಬುದನ್ನು ನಾನೇ ಇನ್ನೂ ಹುಡುಕಿಕೊಂಡಿಲ್ಲವಾದ್ದರಿಂದ ಯಾರಿಗೆ ಏನು ಹೇಳುವುದು ಈಗಲೂ ತಿಳಿಯದೆ ಇದ್ದೇನೆ. ಕವಿತೆಯೋ ಏನೋ ಇಷ್ಟು ಕಾಲ ಬರೆದಿದ್ದೇನೆಂದು ಪುಸ್ತಕ ಪ್ರಕಟಿಸುವ, ಪ್ರಶಸ್ತಿ ಪುರಸ್ಕಾರ ಬಾಚಿಕೊಳ್ಳುವ, ಪತ್ರಿಕೆಗಳಲ್ಲಿ ನನ್ನನ ಹೆಸರು ವಿರಾಜಿಸಲೆಂದು ಬಯಸುವ, ವೇದಿಕೆಗಳಲ್ಲಿ ಶಾಲು ಸನ್ಮಾನಗಳ ಹೊರೆಯಡಿ ಸಿಂಗಾರಗೊಳ್ಳುವ ಯಾವ ಇರಾದೆಯೂ ನನಗೆ ಖಂಡಿತವಾಗಿ ಇಲ್ಲವೇ ಇಲ್ಲ. ಖಲೀಲ್ ಗಿಬ್ರಾನ್ ಹೇಳುತ್ತಾರೆ, ‘ಬೇರು ಕೀರ್ತಿಯನ್ನು ನಿರಾಕರಿಸಿದ ಹೂವು’ ಎಂದು. ಹೌದು ನಾನು ಅಂತಹ ಹೂವೇ ಆಗಿರಲು ಸದಾ ಹಂಬಲಿಸಿದ್ದೇನೆ. ಹಾಗಾಗಿಯೇ ನನ್ನ ಕೈಯಲ್ಲಿ ಈಗ ಯಾವ ಕವಿತೆಯಿಲ್ಲ. ಈತನಕ ಬರೆದದ್ದು ಯಾವುದೂ ನನ್ನದಲ್ಲ. ಮುಂದೆಯೂ ಬರೆಯುತ್ತೇನೋ ಇಲ್ಲವೋ ನನಗೂ ಗೊತ್ತಿಲ್ಲ.

ಈ ಫೇಸ್ಬುಕ್ ಎಂಬ ಜಾಲತಾಣದಲ್ಲಿ ಎಷ್ಟೋ ನಿಸ್ಪೃಹ ಸ್ನೇಹವೂ ನಿಸ್ತುಲ ಪ್ರೀತಿಯೂ ದಕ್ಕಿದೆ. ಬಾಯಿತುಂಬ ಅಕ್ಕ ಎನ್ನುವ ತಮ್ಮಂದಿರು, ಅಮ್ಮಾ ಎನ್ನುವ ಮಕ್ಕಳು, ಗೆಳತೀ ಎನ್ನುವ ಆಪ್ತಬಂಧುಗಳು ಎಷ್ಟೋ ಅಪರಿಮಿತ ಪ್ರೀತಿಯನ್ನು ಮೊಗೆ ಮೊಗೆದು ಸುರಿದಿದ್ದಾರೆ. ಈ ಫೇಸ್ಬುಕ್ಕಿಗೆ ಬಂದು ಬೆಳೆದಿದ್ದೇನೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ.

‘ಹಾಗೆ ನೋಡಿದರೆ
ನಾನೂ ಒಬ್ಬ ಸಿಂಡ್ರೆಲ್ಲಾ
ಇದು ರಾಜಕುಮಾರರ ಕಾಲವಲ್ಲವಾದ್ದರಿಂದ
ಅನಾಥರ ಕಥೆಗಳು
ಇದ್ದ ಹಾಗೆಯೇ ಮುಂದುವರೆಯುತ್ತವೆ’ ಎಂದು ಇದೇ ಫೇಸ್ಬುಕ್ಕಿನಲ್ಲಿ ಬರೆದಿದ್ದ ನನಗೆ, ನಾನು ಅನಾಥೆಯಲ್ಲ ಎನ್ನುವುದು ಮಾತ್ರ ಎಂದೋ ಮನವರಿಕೆಯಾಗಿದೆ.

ಈಗಲೂ ಯಾರಾದರೂ ನನ್ನನ್ನು ಜಾಣೆ ಎಂದರೆ ನಾನು ಜಾಣೆಯಲ್ಲಪ್ಪಾ ಎನ್ನುತ್ತೇನೆ. ಅದು ಓದಿದ್ದೀರಾ ಇದು ಓದಿದ್ದೀರಾ ಎಂದರೆ ಓದಿಲ್ಲಪ್ಪಾ ಎನ್ನುತ್ತೇನೆ. ನನಗೆ ಏನೇನೂ ಗೊತ್ತಿಲ್ಲಪ್ಪಾ ಎನ್ನುತ್ತೇನೆ. ಯಾಕೆಂದರೆ ನಾನು ಹೀಗೆ ಕೇಳುವವರ ಎದುರು ನಿಂತು ಉತ್ತರಿಸುತ್ತಿಲ್ಲ. ಬದಲಿಗೆ ಕಲಿಕೆಯೆಂಬ ಮಹಾ ಸಾಗರದ ಎದುರು ನಿಂತಿದ್ದೇನೆ ಎಂಬ ಅರಿವಿನಿಂದ ಮಾತಾಡುತ್ತೇನೆ. ಈ ಫೇಸ್ಬುಕ್ಕಿನಲ್ಲಾದರೂ ದೊಡ್ಡ ದೊಡ್ಡ ಸೆಲಿಬ್ರಿಟಿಗಳ ಸ್ನೇಹ ಮಾಡಬೇಕೆಂದು ನನಗೆ ಅನಿಸುವುದಿಲ್ಲ. ಅವರ ಲೈಕು ಮೆಚ್ಚುಗೆಗಳು ನನ್ನನ್ನು ಖುಷಿಪಡಿಸುವುದಿಲ್ಲ. ಆದರೆ ಎಳೆಯರ ಸ್ನೇಹ ನನಗೆ ಅಪರಿಮಿತ ಖುಷಿಯುಣಿಸುತ್ತದೆ.

ನೆನ್ನೆ ಹಾಗೆಯೇ ಆಯಿತು. ಒಬ್ಬ ಯುವಕ ತಾವು ಬರೆದ ಕೆಲ ಕವಿತೆಗಳನ್ನು ಓದಿ ಅದರ ತಪ್ಪು ಒಪ್ಪುಗಳನ್ನು ನನಗೆ ತಿಳಿಸಿ ಎಂದು ಮನವಿ ಮಾಡಿದ್ದರು. ನಾನು ಹೇಳಿದೆ ನನಗಷ್ಟು ತಿಳಿಯೋದಿಲ್ಲ. ನನಗಿಂತ ತಿಳಿದವರು ಇದ್ದಾರೆ ಅವರಲ್ಲಿ ಕೊಡಿ ಎಂದು. ನೀವೇ ಕೊಡಿ ಎಂದು ಕೆಲವು ಕವಿತೆ ಹಾಕಿದರು. ನಿಜಕ್ಕೂ ಚಂದದ ಹಾಗೂ ಉದಾತ್ತ ನೋಟವನ್ನೊಳಗೊಂಡ ಕವಿತೆಗಳಾಗಿದ್ದವು. ಅದನ್ನೇ ಬರೆದೆ. ತುಂಬ ಖುಷಿಯಾದರು ಮತ್ತೆ ನೀವು ಏನೇನು ಓದಿದ್ದೀರಿ, ತಿಳಿದಿದ್ದೀರಿ? ಎಂದರು. ನಾನು ಏನೂ ತಿಳಿದಿಲ್ಲ ಎಂದೆ. ಆ ಯುವಕ ನನಗೆ ನೀವು ಓದಬೇಕು. ಓದಿ ಮಾಗಬೇಕು. ಆಗ ಏನಾದರೂ ಬರೆಯಲು ಸಾಧ್ಯ ಎಂದಿದ್ದಾರೆ. ಹೌದು ಅವರ ಮಾತಿನಲ್ಲಿ ಸತ್ಯವಿದೆ. ವಿನೀತಳಾಗಿ ಒಪ್ಪಿದ್ದೇನೆ. ಇನ್ನಾದರೂ ಓದಬೇಕು. ಅನುಭವದ ಉಳಿಪೆಟ್ಟುಗಳಿಂದ ಮಾಗಬೇಕು.

—-

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

2 Comments For "ನನ್ನನ್ನು ಕವಿಯೆಂದರು..!
ಕಾದಂಬಿನಿ
"

 1. Kotresh T. A.M
  17th November 2017

  ಪ್ರಾಮಾಣಿಕ ಮಾತುಗಳು

  Reply
 2. Sheela Bhandarkar
  17th November 2017

  Wah ಕಾದಂಬಿನಿ.. ಪ್ರತಿಯೊಂದು ವಾಕ್ಯ ಓದುವಾಗಲೂ ಇವಳು ಯಾವ ಲೋಕದವಳು!? ಅನಿಸಿಬಿಡುತ್ತದೆ.
  ಬರವಣಿಗೆ ಎಷ್ಟು ಚಂದವಿದೆ ಅಂದರೆ ವಿಷಯವನ್ನು ಈ ರೀತಿಯಲ್ಲಿಯೂ ಹೇಳಬಹುದು ಅಲ್ವಾ? ಎಂದು ಯೋಚಿಸುವಂತಿದೆ. God bless you dear.

  Reply

Leave a comment

Your email address will not be published. Required fields are marked *

Recent Posts More

 • 1 week ago No comment

  ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?

        ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ಬೆಚ್ಚಗೆ ಕೂತಿರಬಹುದು ನ್ಯಾಯಕ್ಕೆ ಕನ್ನ ಹಾಕೋ ನಾನು ತಿರುಕ ಹೇಗೆ ಆಗಬೇಕು? ತಿರುಕನದೇನೋ ಕನಸಿತ್ತು ನನ್ನದು ಕೂಡಾ ಕನಸೆಂದು ಆ ಕೋಟೆ ಒಳಗಿರುವವರು ಕನವರಿಸುತ್ತಿರಬಹುದು ಬೂದಿ ಮುಚ್ಚಿದ ...

 • 2 weeks ago No comment

  ಕೊಂಕಣಿ ಪ್ರತಿಭೆಯನ್ನರಸಿ ಕರ್ನಾಟಕಕ್ಕೆ ಬಂದ ಪ್ರಶಸ್ತಿ

      ಅತಿಥಿ           ಈ ಬಾರಿ ಕರ್ನಾಟಕವು ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಪ್ರಮಾದವೇನಾದರೂ ಆಯಿತೇ? ಒಂದೇ ಪುರಸ್ಕಾರವನ್ನು ಇಬ್ಬರಿಗೆ ಹಂಚಿರಬಹುದೇ? ಎಂದೆಲ್ಲ ಯೋಚಿಸಿ ತಲೆ ಕೆರೆದುಕೊಳ್ಳುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಕನ್ನಡಕ್ಕೆ 2018ರ ಕೇಂದ್ರಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಘೋಷಣೆಯಾದಾಗಲೇ ಕರ್ನಾಟಕದ ಕೊಂಕಣಿ ಕವಯತ್ರಿ ವಿಲ್ಮಾ ...

 • 2 weeks ago No comment

  ಸಾಹಸದ ಆ ನಿಮಿಷಗಳು

          ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ.         ಬ್ಯಾಂಕರುಗಳು, ಅಕೌಂಟೆಂಟುಗಳು ವರ್ಷದ ಮೊದಲಿಂದ ಹಿಡಿದು ಮಾರ್ಚಿ ತಿಂಗಳವರೆಗೆ ಭಾರೀ ಬ್ಯುಸಿಯಾಗುವಂತೆ ಇಂಗ್ಲೆಂಡಿನ ಸರ್ಕಾರೀ ದಂತ ವೈದ್ಯಕೀಯ ರಂಗದಲ್ಲೂ ಧಾವಂತ ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ಗುತ್ತಿಗೆ ಪಡೆದ ಕೆಲಸವನ್ನು ಮಾರ್ಚಿಯ ಕೊನೆಗೆ ಪೂರ್ತಿಗೊಳಿಸದಿದ್ದರೆ ಮುಂದಿನ ವರ್ಷದ ಕಾಂಟ್ರಾಕ್ಟ್ ನ್ನು ಕಳೆದುಕೊಳ್ಳುವ ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

  ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು. ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ಇಲ್ಲಿಯ ಸಿಬ್ಬಂದಿಯೇ ನನಗೆ ಅನ್ನದಾತರು. ಹೀಗಾಗಿ ಎಲ್ಲೆಲ್ಲೂ ನನಗೆ ಪರಿಚಿತ ಮುಖಗಳೇ. ಅಂದು ಮಾತ್ರ ಸಿಬ್ಬಂದಿಯೊಬ್ಬ ಗಡಿಬಿಡಿಯಲ್ಲಿ ನನ್ನ ಆರ್ಡರ್ ಬರೆದುಕೊಂಡು ಅಷ್ಟೇ ಅವಸರದಲ್ಲಿ ಖಾದ್ಯಗಳನ್ನು ತಂದಿಟ್ಟು ...

 • 4 weeks ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  2 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  3 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  3 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  3 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...