Share

ಗಂಡು ಗಂಡೆಂದು ಬೀಗಿ…
ಕಾದಂಬಿನಿ ಕಾಲಂ

 

 

 

 

 

 

 

 

 

 

ಬೈಕ್ ಮೆಲ್ಲ ಓಡಿಸು ಮಗೂ
ಎನ್ನುತ್ತೇನೆ ನಾನು,
ನನ್ನಂತಹ ಎಲ್ಲ ತಾಯಿಯರೂ
ಮತ್ತು ಗಹಗಹಿಸಿ ನಗುತ್ತಾರೆ
ನನ್ನ ಮಗುವಿನಂತಹ ಆ ಎಲ್ಲ ಹುಡುಗರೂ…!

 

 

ಕ್ಕೆಲಗಳಲ್ಲೂ ಗಬ್ಬು ವಾಸನೆಯ ಕಸದ ರಾಶಿಗಳಿರುವ ಧೂಳಿನ ರಸ್ತೆಯನ್ನು ಹಾದು ನಾಲ್ಕೈದು ಅಂತಸ್ತಿನ ಆ ಕಟ್ಟಡದ ಹಿಂಭಾಗದಿಂದ ಇರುವ ಸ್ಟೇರ್ ಕೇಸನ್ನು ಹತ್ತತೊಡಗಿದೆ. ಅದರ ಮೆಟ್ಟಿಲುಗಳ ಸಿಮೆಂಟು ಕಿತ್ತು ಹೊಂಡಗಳಾಗಿದ್ದವು. ಮೇಲೆ ಕಿತ್ತುಹೋದ ಮಾಸಲು ಟೈಲ್ಸುಗಳ ಕಿರಿದಾದ ಓಣಿಯನ್ನು ಹಾದು ಬಾಗಿಲು ತಟ್ಟಿ ತೆರೆಯುವುದನ್ನೇ ಕಾಯುತ್ತಾ ಕಟ್ಟಡದ ದುರ್ಗತಿಯನ್ನು ನೋಡುತ್ತಿದ್ದೆ. ಅಲ್ಲೇ ಇಟ್ಟಿಗೆ ಜೋಡಿಸಿ ಒಲೆ ಉರಿಸಲಾದ ಕುರುಹು, ಮಸಿಮೆತ್ತಿದ ಖಾಲಿ ಅಲ್ಯೂಮೀನಿಯಮ್ ಚರಿಗೆ, ಅರೆ ಬರೆ ಉರಿದು ಸರಿದುಬಿದ್ದಿರುವ ಕಟ್ಟಿಗೆ. ಅದರ ಬೂದಿಯಲ್ಲಿ ಸುತ್ತಿ ಮಲಗಿದ ಕೆಂಬಣ್ಣದ ಹೆಣ್ಣುನಾಯಿ, ಮಲೆನಾಡ ಮಳೆಗೆ ಕಪ್ಪಿಟ್ಟ ದೊಡ್ಡ ದೊಡ್ಡ ಬಿರುಕುಗಳುಳ್ಳ ಗೋಡೆ, ಬಣ್ಣಗೆಟ್ಟ ಲಡಾಸು ಬಾಗಿಲು ಮತ್ತದರ ಎಡಕ್ಕೆ ಒಂದು ನೇತುಹಾಕಿದ ಹಲಗೆ. ರಂಗಪ್ಪ, ಆರಕ್ಷಕರು ಎಂದು ಅದರ ಮೇಲೊಂದು ಬರಹ.

ಒಳಗೆ ಇನ್ನು ಹೇಗಿರಬಹುದಪ್ಪಾ ಎಂದು ಯೋಚಿಸುವಾಗಲೇ ಬಾಗಿಲು ತೆರೆಯಿತು. ಗುಳಿಬಿದ್ದ ಕಣ್ಣು ನಿರಿಗೆಗಟ್ಟಿದ ಚರ್ಮದ ಬಡಕಲು ದೇಹದ ಪೋಲೀಸರ ಪತ್ನಿ ನಿಂತಿದ್ದರು. ನಾನು ಎರಡು ಸಲ ನಮ್ಮ ವಾಹನಗಳು ಅಪಘಾತವಾದಾಗ ಸಹಾಯಕ್ಕೆ ಬಂದ ಪೋಲಿಸ್ ರಂಗಪ್ಪನವರ ಉಪಕಾರ ಸ್ಮರಿಸಿ, ‘ಹೀಗೆಯೇ ಈ ಹಾದಿಯಾಗಿ ಹಾದುಹೋಗುವಾಗ ಮಾತಾಡಿಸಿಹೋಗೋಣವೆಂದು ಬಂದೆ’ ಎಂದು ಬಂದ ಕಾರಣ ಅರುಹಿದೆ. ‘ಓಹೋಹೋ ನೀವಾ ಬನ್ನಿ ಬನ್ನಿ.. ನಮ್ಮ ಮನೆಯವರು ನಿಮ್ಮ ಬಗ್ಗೆ ತುಂಬ ಹೇಳ್ತಿದ್ರು’ ಎಂದು ಅದೆಷ್ಟೋ ಪ್ರೀತಿಯಿಂದ ಕರೆದು ಕೂಡಿಸಿ ಉಪಚರಿಸತೊಡಗಿದರಾಕೆ. ನಾನೀಗ ಕೇವಲ ಮೂರು ಚಿಕ್ಕ ಕೋಣೆಗಳ ಹಂದಿಯ ಗೂಡಿನಂತಹ ಮನೆಯೊಳಗನ್ನು ನೋಡುತ್ತಿದ್ದೆ. ಪೋಲೀಸರು ನಿಜಕ್ಕೂ ಇಷ್ಟು ಕೆಟ್ಟ ಮನೆಗಳಲ್ಲಿ ವಾಸಿಸುತ್ತಾರಾ ಎಂದು ನನಗೆ ಅಚ್ಚರಿ, ನೋವು. ಆ ಮನೆಯ ನಿರಾಳ ಉಸಿರಾಡುವುದೂ ಕಷ್ಟವಾಗುವಂತಹ ಪರಿಸರದಲ್ಲಿ ಮಕ್ಕಳು ಹೇಗೆ ಓದುತ್ತಾರೆ, ಕುಟುಂಬವೊಂದು ಹೇಗೆ ಜೀವಿಸುತ್ತದೆ ಎಂದು ಆತಂಕಗೊಳ್ಳುತ್ತಿದ್ದೆ. ರಂಗಪ್ಪ ಮನೆಯಲ್ಲಿ ಇಲ್ಲದಿದ್ದರೂ ಆಕೆ ಅದೆಷ್ಟು ಪ್ರೀತಿಯಿಂದ ನೋಡಿಕೊಂಡರೆಂದರೆ ಕೆಲವೇ ಕ್ಷಣಗಳ ಒಳಗೆ ಗಾಢ ಸ್ನೇಹಬಂಧವೊಂದು ನಮ್ಮ ನಡುವೆ ಏರ್ಪಟ್ಟಿತು.

ಆಕೆ ಹೇಳತೊಡಗಿದರು. ಮಗಳು ಚಂದ ಓದುತ್ತಾ ಅವಳ ಚಿಂತೆ ತಮಗಿಲ್ಲವೆಂದೂ ಪಿಯುಸಿಯಲ್ಲಿ ಶೇ.96 ತೆಗೆದ ಹುಡುಗ ಪದವಿ ಮುಗಿಸಲಿಲ್ಲವೆಂದೂ, ಬೈಕ್ ಏರಿ ಗೆಳೆಯರ ಜೊತೆ ಹಾದಿ ಬೀದಿ ಸುತ್ತುತ್ತಾ ಮುರಿದ ಪ್ರೇಮಕ್ಕೂ ಪ್ರೇಮಾಂಕುರಕ್ಕೂ ಒಂದೇ ಮದ್ದೆಂಬಂತೆ ಕುಡಿಯುವುದು, ಡ್ರಗ್ಸ್ ದುರಭ್ಯಾಸ ಕಲಿತು ಒಂದು ಬಾರಿ ಅಪಘಾತದಲ್ಲಿ ಮುರಿದ ಕಾಲಿಗೆ ರಾಡ್ ಹಾಕಬೇಕಾಯಿತೆಂದೂ ಈ ಸಲ ಮೂಗು ಒಡೆದುಕೊಂಡು ಪ್ಲ್ಯಾಸ್ಟಿಕ್ ಸರ್ಜರಿಯ ಅಗತ್ಯವಿದೆಯೆಂದೂ, ಯಾರು ಯಾರಲ್ಲೋ ಸಾಲ ಮಾಡಿ ತಲೆಗೆ ತಂದಿಟ್ಟಿದ್ದಾನೆಂದೂ ನಾನು ಬುದ್ಧಿ ಹೇಳಿದರೆ ಅವನು ನನ್ನ ಮಾತನ್ನು ಖಂಡಿತಾ ಕೇಳುವನೆಂದೂ ಅತ್ತತ್ತು ಹೇಳಿದರು. ಆ ತಾಯಿಯ ರೋದನೆಯನ್ನು ನೋಡುವಾಗ ಬಯಸೀ ಬಯಸಿ ಹೆತ್ತ ಮಗ ಹೀಗಾದ ನೋವು ಹೇಗೆಲ್ಲ ಕಾಡಿದ್ದೀತು ಈ ಹೆಣ್ಣನ್ನು ಎಂದು ಯೋಚಿಸುತ್ತಿದ್ದೆ.

ನನ್ನ ಮನೆಯ ಸಮೀಪದ ಇನ್ನೊಂದು ಹುಡುಗ ಸತತ ನಾಲ್ಕು ಸಲ ಬೈಕ್ ಅಪಘಾತ ಮಾಡಿಕೊಂಡಿದ್ದ. ಮೂರು ಸಲದ ಅಪಘಾತಗಳಲ್ಲೂ ದೇಹದ ಅನೇಕ ಮೂಳೆಗಳು ಮುರಿತಕ್ಕೊಳಗಾಗಿದ್ದವು. ನಾಲ್ಕನೇ ಸಲ ತಲೆ ಪೆಟ್ಟಾಗಿ ಮುಖದ ಮೂಳೆಯೊಂದನ್ನು ತೆಗೆದದ್ದರಿಂದ ಚಂದದ ಮುಖವು ವಿಕಾರವಾಗಿ ಆಗಾಗ ಮತಿಭ್ರಮಣೆಯಾದಂತೆ ವರ್ತಿಸುತ್ತಾನೆಂದು ಕೇಳಿದ್ದೆ. ನಾನು ಈ ತರುಣರನ್ನು ಗಮನಿಸುವಾಗ ನನಗೆ ಅಪಘಾತವನ್ನೇ ಮಾಡಿಕೊಳ್ಳದ ಹುಡುಗರೇ ಸಿಕ್ಕಿದ್ದಿಲ್ಲ. ತೀರಾ ಮೊನ್ನೆ ಮೊನ್ನೆ ಇಬ್ಬರು ಮಾರಣಾಂತಕ ಪೆಟ್ಟುಗಳಿಂದ ಚಿಕಿತ್ಸೆಗೂ ಹಣವಿಲ್ಲದೆ ಚಂದಾ ಎತ್ತುವ ಆ ಹುಡುಗರ ಗೆಳೆಯನ ಫೇಸ್ಬುಕ್ ಪೋಸ್ಟೊಂದನ್ನು ನೋಡಿದೆ. ಕಳೆದ ವರ್ಷ ಒಬ್ಬ ಕಡುಬಡವಿ ವಿಧವೆಯ ಮಗ ಹೀಗೆ ಅಪಘಾತ ಮಾಡಿಕೊಂಡು ಚಿಕಿತ್ಸೆಗೂ ಹಣವಿಲ್ಲದೆ ಪ್ರಜ್ಞಾಹೀನನಾಗಿ ಆಸ್ಪತ್ರೆಯಲ್ಲಿದ್ದಾಗ ನಾನು ಒಂದಷ್ಟು ಹಣವನ್ನು ಆ ತಾಯಿಯ ಕೈಗಿತ್ತದ್ದು ಆಕೆ ಮಾತಿಗಾದರೂ ಬೇಡವೆನ್ನಲಾಗದ ಹೀನಾಯ ಸ್ಥಿತಿ ನನ್ನನ್ನು ಪರಿಪರಿಯಾಗಿ ಕಾಡಿದ್ದು, ಆನಂತರ ನಾನೊಂದು ಕವಿತೆ ಬರೆದಿದ್ದು ನನಗೆ ನೆನಪಿಗೆ ಬಂದಿತು.

‘ಬೈಕ್ ಮೆಲ್ಲ ಓಡಿಸು ಮಗೂ…’
ನನ್ನ ಮಾತಿಗೆ
ಜೋರಾಗಿ ನಕ್ಕೇಬಿಟ್ಟ ಹುಡುಗ
‘ಆಂಟೀ ಹೊರ ಪ್ರಪಂಚ
ಅದೆಷ್ಟು ವೇಗವಾಗಿದೆ
ಒಮ್ಮೆಹೋಗಿ ನೋಡಿ!’
ಒಮ್ಮೆ ಹೋಗಿ ನೋಡಬೇಕು ನಾನೀಗ
ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ
ಈಗಲೋ ಆಗಲೋ
ಎನ್ನುವಂತಿರುವ ಆ ಕಂದನನ್ನು!

* * *

ಜನ ಈ ಮೊದಲು ಆಕೆಯನ್ನು
ಕೂಲಿಯವಳನ್ನಾಗಿ,
ಕತ್ತೆ ಚಾಕರಿಯವಳನ್ನಾಗಿ
ಕಂಡಿದ್ದರೇ ಹೊರತು
ಭಿಕ್ಷುಕಿಯನ್ನಾಗಿ ಎಂದೂ ಕಂಡದ್ದಿರಲಿಲ್ಲ
ಅವಳ ಮಗ ಬೈಕ್ ಅಪಘಾತದಲ್ಲಿ
ನಜ್ಜುಗುಜ್ಜಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ
ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ
ಹೀಗೆ ಬಿದ್ದುಕೊಳ್ಳುವವರೆಗೂ!

* * *

ಐದೈದು ಲಕ್ಷದ ಐದೈದು
ಶಸ್ತ್ರಕ್ರಿಯೆಗಳಾಗಲಿಕ್ಕಿದ್ದು
ಹಣವಿಲ್ಲದ ಕಾರಣ
ನಗರದ ದೊಡ್ಡಾಸ್ಪತ್ರೆಯಿಂದ
ಊರಿನ ಸರಕಾರಿ ಆಸ್ಪತ್ರೆಗೆ
ಆ ಹುಡುಗನನ್ನು ಸಾಗಹಾಕಲಾಗಿದೆ
ಮತ್ತು
ಊರ ಶಾಲೆಗಳಲಿ ಎತ್ತಿದ
ಚಂದಾ ಹಣ
ಒಂದೂವರೆ ಲಕ್ಷ ದಾಟುವ
ಭರವಸೆಯೂ ಹುಸಿಯಾಗಿದೆ!

* * *

ಬೈಕು ಮಿತಿಮೀರಿದ ವೇಗದಲ್ಲಿ ಬಂದು
ಕಲ್ಲಿಗೆ ಬಡಿದು ಬಿದ್ದ ಕಾರಣ
ಹೆತ್ತವಳಿಗೆ ಹೆಗಲಾಗಬೇಕಾದ
ಚಿಗುರು ಮೀಸೆಯ ಹುಡುಗನ
ತಲೆಯ ಚಿಪ್ಪೊಡೆದು ಹಾರಿಹೋಗಿದೆ
ಪಕ್ಕೆಲುಬು ಮುರಿದು
ಕಾಲ ಗಂಟುಗಳು ಪುಡಿಯೆದ್ದು
ನೆತ್ತರು ದೇಹದೊಳಗಿಂದ
ಸೋರಿ ಬರಿದಾಗಿದೆ
‘ಬದುಕಿದರೂ ಮೊದಲಿನಂತಾಗಲಾರ’
ಎಂದು ವೈದ್ಯಕೀಯ ಲೋಕ
ಕೈ ಚೆಲ್ಲಿದೆ
ಮತ್ತವಳು ಎದೆ, ಹೊಟ್ಟೆ ಬಡಿದುಕೊಳ್ಳುತ್ತ
ಮೊರೆಯಿಟ್ಟು ಪ್ರಲಾಪಿಸುತ್ತಾಳೆ –
‘ನೀನೊಮ್ಮೆ ಬದುಕಿದರೆ ಸಾಕು ಕಂದಾ
ಕೂಲಿ ನಾಲಿ ಮಾಡಿ ನಿನ್ನ ಸಾಕುವೆ!’

* * *

ಅದೇಕೆ ಅಷ್ಟು ವೇಗವಾಗಿ
ಓಡುತ್ತಿತ್ತು ಜಗ
ಹದಿಹರೆಯದ ಮಗ
ಬೈಕ್ ಏರಿ ಹಾರಿಹೋಗುವಾಗೆಲ್ಲ!
ಮತ್ತೀಗ ತೀವ್ರ ನಿಗಾಘಟಕದ
ಗಾಜಿನೊಳಗಿಂದ ಗೋಚರಿಸುವ
ದೇಹ ಎಳೆವ ಕ್ಷೀಣ ಉಸಿರ ಏರಿಳಿತವೂ
ನಿಂತೇಬಿಟ್ಟ ಗಡಿಯಾರದ ಹಾಗೆ
ಅದೇಕಿಷ್ಟು ನಿಧಾನ!

* * *

ಬೈಕ್ ಮೆಲ್ಲ ಓಡಿಸು ಮಗೂ
ಎನ್ನುತ್ತೇನೆ ನಾನು,
ನನ್ನಂತಹ ಎಲ್ಲ ತಾಯಿಯರೂ
ಮತ್ತು ಗಹಗಹಿಸಿ ನಗುತ್ತಾರೆ
ನನ್ನ ಮಗುವಿನಂತಹ ಆ ಎಲ್ಲ ಹುಡುಗರೂ…!

ಹೀಗೆ ಕವಿತೆಯನ್ನೇನೋ ಬರೆದು ಅದೆಷ್ಟೋ ಮೆಚ್ಚುಗೆ ಗಳಿಸಿದ್ದೆ. ಈ ಸಾಲುಗಳನ್ನು ಪ್ರತಿ ಕಾಲೇಜಿನಲ್ಲೂ ಹಂಚಬೇಕೆಂದು ಯಾರೋ ಕಮೆಂಟು ಬರೆದದ್ದೂ ನೆನಪಾಯಿತು. ಆದರೆ ಈ ಹುಡುಗ ಯಾರ ಯಾರದೋ ಧನಸಹಾಯದಿಂದ ಅವೆಷ್ಟೋ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡ ತರುವಾಯ ನಿಧಾನ ಚೇತರಿಸಿಕೊಂಡು ತನ್ನ ತಾಯಿಯಲ್ಲಿ ತನ್ನ ಅಪಘಾತವಾದ ಬೈಕನ್ನು ಮಾರಿದ್ದೇಕೆಂದೂ ಕೂಡಲೇ ಹೊಸ ಬೈಕನ್ನು ಕೊಡಿಸಬೇಕೆಂದೂ ಹಟಮಾಡಿ ಕೂತಿದ್ದ!

ನನಗೆ ತಿಳಿದಂತೆ ಎಷ್ಟೋ ತಾಯಿಯರು ಹಗಲೂ ರಾತ್ರಿ ಮಗ ಮನೆ ಸೇರಿಲ್ಲವೆಂದು ಎಲ್ಲಿ ಕೆಟ್ಟ ಸುದ್ಧಿ ಬರುವುದೋ ಎಂದು ಆತಂಕದಿಂದ ಕಾಯುತ್ತಿರುತ್ತಾರೆ. ‘ದೇವರ ದಯೆಯಿಂದ ನಮಗೆ ಗಂಡು ಹುಟ್ಟಲಿಲ್ಲ ಮಾರಾಯರೇ.. ಇಲ್ಲವೆಂದರೆ ನಿಮ್ಮ ಹಾಗೆ ನಾವೂ..’ ಎಂದು ಕುಟುಕಿಬಿಡುವ ಹೆಣ್ಣು ಹೆತ್ತವರನ್ನೂ ಕಂಡಿದ್ದೇನೆ ನಾನು.

ಮೊನ್ನೆ ನಮ್ಮ ಕಾರಿನ ಡ್ರೈವರ್ ನನ್ನ ಇನ್ನೊಬ್ಬ ಪರಿಚಿತ ಯುವಕನ ಕಥೆ ಹೇಳಿದ. ಆ ಹುಡುಗ ಅತ್ಯಂತ ಚೆಲುವನಾಗಿದ್ದು ಕಾಲೇಜು ಕಾರಿಡಾರ್ ಏರಿದ ದಿನಗಳಲ್ಲೇ ಗೆಳೆಯರೊಂದಿಗೆ ಹೊಡೆದಾಡಿ ವಿಷ ಸೇವಿಸಿದ ದಾಖಲೆಯ ನಂತರ ಅವೆಷ್ಟೋ ಪ್ರೇಮಪ್ರಕರಣಗಳಾಗಿ ಒಂದು ಬೈಕ್ ಅಪಘಾತದಲ್ಲಂತೂ ಹಲ್ಲಿನ ಇಡೀ ಸೆಟ್ಟೇ ಕಳಚಿ ಸತ್ತೂ ಸತ್ತೂ ಬದುಕಿಬಿಟ್ಟಿದ್ದ. ಅದಾದ ನಂತರವೂ ಒಮ್ಮೆ ಹೀನಾಯವಾಗಿ ಮೈಕೈ ತುಂಬ ಬ್ಯಾಂಡೇಜು ಸುತ್ತಿಕೊಂಡ ಸ್ಥಿತಿಯಲ್ಲೇ ನನ್ನಲ್ಲಿಗೆ ಲಕ್ಷಗಳ ಮೊತ್ತದ ಸಾಲ ಕೇಳಲು ಬಂದಿದ್ದು, ಅವನ ತಾಯಿ ನನಗೆ ಕರೆ ಮಾಡಿ ಅಳುತ್ತಾ ತನ್ನ ಮಗನಿಗೆ ಯಾವ ಕಾರಣಕ್ಕೂ ಒಂದು ರುಪಾಯಿ ಸಾಲ ಕೊಡಕೂಡದೆಂದು ಹೇಳಿದ್ದೂ ಇತ್ತು.

ಇದಾದ ಎರಡೇ ದಿನಗಳಲ್ಲೇ ದೊಡ್ಡ ಕಾರೊಂದನ್ನು ವೇಗವಾಗಿ ತಂದು ನನ್ನ ಕಾರಿನೆದುರೇ ನಿಲ್ಲಿಸಿ ದುಬಾರಿ ಫೋನಲ್ಲಿ ಯಾರೊಂದಿಗೋ ಮಾತಾಡುತ್ತಲೇ ನನ್ನಡೆಗೆ ನಗೆಯೊಂದನ್ನು ಬೀಸಿದ್ದು ನನಗೆ ನೆನಪಿತ್ತು. ಅಷ್ಟಾದರೂ ಅಲ್ಲಿ ಇಲ್ಲಿ ಸಿಕ್ಕಾಗ ನಾನು ‘ಮಗೂ ಹಾಗೆಲ್ಲ ಮಾಡಬೇಡ’ ಎಂದು ಬುದ್ಧಿ ಹೇಳುವುದೂ ಅವನು ನಕ್ಕು ಹೋಗಿಬಿಡುವುದೂ ಇರುತ್ತಿತ್ತು. ಈ ಹುಡುಗ ಅದೆಷ್ಟು ಚಾಲಾಕಿ ಎಂದರೆ ತನಗೆ ಬೇಕನಿಸಿದ್ದನ್ನು ಮಾಡಿಯೇ ತೀರುತ್ತಾನೆಂದೂ ಹೊಸದೊಂದು ಫೋನ್ ಕಣ್ಣಿಗೆ ಬಿತ್ತೆಂದರೆ ನೆನ್ನೆ ಮೊನ್ನೆ ಐವತ್ತು ಅರವತ್ತು ಸಾವಿರ ಕೊಟ್ಟು ಕೊಂಡ ಫೋನನ್ನೂ ಮೂರೋ ನಾಲ್ಕೋ ಸಾವಿರಕ್ಕೆ ಮಾರಿ ಹೊಸದನ್ನು ಕೊಂಡೇ ತೀರುತ್ತಾನೆಂದೂ ಹಣಕ್ಕಾಗಿ ಅವನು ಮಾಡುವ ತಂತ್ರಗಳು ಒಂದೆರಡಲ್ಲವೆಂದೂ ಇತ್ತೀಚೆ ತಾನು ಕೇಟರರ್ಸ್ ಕೆಲಸ ಮಾಡುವುದಾಗಿ ಪಾತ್ರೆ ಅಂಗಡಿಯೊಂದರಲ್ಲಿ ಸಾಲಾಗಿ ಪೇರಿಸಿಟ್ಟ ಪಾತ್ರೆಗಳ ಫೋಟೋ ತೆಗೆದು ಬ್ಯಾಂಕಿನಿಂದ ದೊಡ್ಡ ಮೊತ್ತದ ಸಾಲ ಪಡೆದಿದ್ದಾನೆಂದೂ ನಮ್ಮ ಡ್ರೈವರ್ ಹೇಳಿದ್ದ.

ಅಂಥ ಹುಡುಗ ಮೊನ್ನೆ ಒಂದು ಆಟೋ ಮಾಡಿಕೊಂಡು ಮನೆ ಸೇರಿದನಂತೆ. ಕೂಡಲೆ ಅವನ ತಾಯಿ ಸಿಕ್ಕ ಸಿಕ್ಕದ್ದರಲ್ಲಿ ಮಗನಿಗೆ ಮನಸೋಯಿಚ್ಛೆ ಬಡಿದು ಊರು ಹಾರಿಹೋಗುವಂತೆ ಅತ್ತು ಎತ್ತಲೋ ನಡೆದುಬಿಟ್ಟಳಂತೆ. ಈ ಹುಡುಗ ರಿಕ್ಷಾದವನೆದುರು ಅಪಮಾನವಾಯ್ತೆಂದು ಒಳಗೆ ಹೋದವನೇ ಪಿನಾಯಿಲ್ ಕುಡಿದು ವಿಪರೀತ ಹೊಟ್ಟೆ ಉರಿಯತೊಡಗಿದ್ದೇ ರಿಕ್ಷಾದವನಿಗೆ ಕರೆ ಮಾಡಿದನಂತೆ. ರಿಕ್ಷಾದವ ಇವನನ್ನು ಕರೆತಂದ ತಪ್ಪಿಗೆ ಬಾಡಿಗೆ ಹಣವೂ ಸಿಕ್ಕದೆ ತನ್ನನ್ನೇ ಹಳಿದುಕೊಳ್ಳುತ್ತ ವಾಪಸ್ ಹೋಗುತ್ತಿದ್ದವನು ‘ನೀನು ಸತ್ರೆ ಸಾಯಿ ನಾನು ಬರಲ್ಲ’ ಎಂದನಂತೆ. ಕೂಡಲೇ ಹುಡುಗ 108ಕ್ಕೆ ಕರೆ ಮಾಡಿ ತಾನೇ ಆಸ್ಪತ್ರೆ ಸೇರಿಕೊಂಡನಂತೆ. ಹೀಗೆ ನಮ್ಮ ಡ್ರೈವರ್ ಜೋರು ನಗುತ್ತ ಇಷ್ಟುದ್ದ ಕಥೆ ಹೇಳಿದ್ದ.

ಅರೆಬರೆ ಓದಿಕೊಂಡು ಮೊಬೈಲ್ ಫೋನ್ ಅಂಗಡಿಯನ್ನೋ ಇನ್ನೇನೋ ಸಣ್ಣ ಪುಟ್ಟ ಬಿಜಿನೆಸ್ ಮಾಡಲು ಸಾಲಕ್ಕಾಗಿ ಅಂಡಲೆಯುವ ದೊಡ್ಡ ದೊಡ್ಡ ಕನಸಿನ ಯುವಕರೊಂದಷ್ಟು, ಧರ್ಮದ ವಿಷ ತುಂಬಿಕೊಂಡು ಹಾಳಾಗುತ್ತಿರುವ ಯುವಕರೊಂದಷ್ಟು, ಬೈಕ್ ಕ್ರೇಜ್, ಕುಡಿತ, ಮೋಜು, ಜೂಜು, ನಶೆಗಳಲ್ಲಿ ತೇಲುವ ಯುವಕರೊಂದಷ್ಟು, ಅಪಘಾತಗಳಲ್ಲಿ ಸಾಯುವ, ನರಳುವ ಯುವಕರೊಂದಷ್ಟು, ಆತ್ಮಹತ್ಯೆಗೆ ಇಳಿದುಬಿಡುವ, ಅಪರಾಧ ಜಗತ್ತಿಗೆ ನಡೆದುಬಿಟ್ಟ ಹುಡುಗರೊಂದಿಷ್ಟು, ಹಾಸ್ಟೆಲುಗಳೆಂಬ ಜೈಲುಗಳಲ್ಲಿ ಬಂಧಿಯಾಗಿ ಹೊರ ಜಗತ್ತಿನ ಸಂಪರ್ಕವೇ ಇಲ್ಲದಂತಿದ್ದು ಇಂಜಿನಿಯರು ಡಾಕ್ಟರು ಅಥವ ಇನ್ನೇನೋ ಆಗುವ ಮೂಲಕ ಜೀವನ ಪಾವನವಾಯ್ತೆಂದು ಪೋಷಕರು ನಿಟ್ಟುಸಿರಿಡುವುದಕ್ಕೆ ಕಾರಣರಾಗುವ ಹುಡುಗರು ಮತ್ತೊಂದಷ್ಟು. ಇವುಗಳ ನಡುವೆ ಅಪರೂಪಕ್ಕೆ ಸಹಜವಾಗಿ, ಆರೋಗ್ಯಕರವಾಗಿ, ಸಜ್ಜನರಾಗಿ ಬೆಳೆಯುತ್ತಿರುವ ಕೆಲವೇ ಕೆಲವರು ಯುವಕರು!

ನಾನು ಯೋಚಿಸುತ್ತೇನೆ, ಇದು ಹೀಗೆಯೇ ಮುಂದುವರೆದರೆ ಆಗಲೂ ಹುಟ್ಟುವ ಮಗು ಗಂಡೇ ಆಗಬೇಕೆಂದು ಬಯಸುತ್ತಾರಾ? ಹರಕೆ ಹೊರುತ್ತಾರಾ? ಲಾಡು ಹಂಚುತ್ತಾರಾ? ಗಂಡು ಮಗುವೆಂದು ಬೀಗುತ್ತಾ ಹೆಣ್ಣಿಗೂ ಗಂಡಿಗೂ ನಡುವೆ ತಾರತಮ್ಯ ಎಸಗುತ್ತಾ ಬೆಳೆಸುತ್ತಾರಾ? ಗಂಡು ಹೆರದ ಹೆಣ್ಣನ್ನು ಬಡಿಯುವುದು ನಿಲ್ಲಿಸುತ್ತಾರಾ? ಸಧ್ಯ ಗಂಡು ಹುಟ್ಟಲಿಲ್ಲವಲ್ಲಾ ಎಂದು ನಿಡುಸುಯ್ಯುತ್ತಾರಾ? ಹುಟ್ಟುವ ಮಗು ಹೆಣ್ಣೇ ಆಗಿರಲೆಂದು ಹಂಬಲಿಸುತ್ತಾರಾ? ಈಗಿರುವ ಎಲ್ಲವೂ ತಿರುವು ಮುರುವು ಆಗುವುದಾ? ಅಥವ ಇದೆಲ್ಲ ಎಲ್ಲಿಗೆ ಹೋಗಿ ಮುಟ್ಟೀತು? ಹೀಗೆ ಇದೆಲ್ಲ ಎಲ್ಲಿಗೆ ಮುಟ್ಟಿದರೂ ಆರೋಗ್ಯಕರ ಸಮಾಜಕ್ಕೆ ಇದು ತಕ್ಕುದಾದೀತಾ? ಎಂದು ಯೋಚಿಸಿದಷ್ಟೂ ಸಂಕಟವಾಗುತ್ತದೆ…!

—-

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...