Share

ಪೀಹೂ ಎಂದರೆ ಹಾಡುವ ಹೂ…
ಕಾದಂಬಿನಿ ಕಾಲಂ

 

 

 

 

 

 

 

 

 

 

 

ನನ್ನ ಬದುಕಿನ ಅಪೂರ್ವ ದಿನವದು. ಸ್ವರ್ಗದ ಹಕ್ಕಿಯೊಂದು ನನ್ನ ಮಡಿಲು ಸೇರಿತ್ತು. ಆಗಷ್ಟೇ ಪುಕ್ಕ ಮೂಡುತ್ತಿದ್ದ ಈ ಹಾಡುವ ಹೂವನ್ನು ಕಂಡೊಡನೆ ನಾನಿದನ್ನು ಪೀಹೂ ಎಂದು ಕರೆದೆ. ಒಂದು ಹಳೆಯ ಹಕ್ಕಿಗೂಡಲ್ಲಿ ಪೀಹೂವನ್ನಿಟ್ಟು ಅದಕ್ಕೆ ತುತ್ತುಣಿಸಿದೆ. ಅದು ನನ್ನನ್ನು ಅಮ್ಮನೆಂದು ಭಾವಿಸಿತು.

 

 

ದಿನ ಕತ್ತಲು ಹರಿಯುವುದಕ್ಕೂ ಮೊದಲೇ ಪೀಹೂ ನನ್ನನ್ನೆಬ್ಬಿಸುತ್ತಿತ್ತು. ನಾನು ನನ್ನ ಕಣ್ಣುಗಳನ್ನು ಆಗಷ್ಟೇ ನಿದ್ದೆ ತಬ್ಬಿದ್ದರಿಂದ ಆಯಾಸದಿಂದಲೇ ಕಣ್ಣು ತೆರೆದೆ. ಎಡಕ್ಕೆ ಚಾಚಿಕೊಂಡಿದ್ದ ನನ್ನ ಎಡ ಅಂಗೈಯ ಮೇಲೆ ಕೂತಿದ್ದ ಪೀಹೂವಿನ ಹೊಟ್ಟೆಯಡಿ ಒದ್ದೆಯಾಗಿತ್ತು. ‘ಪೀಹೂ ಕಂದಾ ನನ್ನನ್ನು ಎಬ್ಬಿಸಿ ನೀನು ಮಲಗಿಬಿಡುತ್ತೀ.. ನೋಡು ಅಮ್ಮನಿಗೆ ಎಷ್ಟು ರಾತ್ರಿಗಳಾಯಿತು ನಿದ್ದೆಯಿಲ್ಲದೆ.. ನೀನು ಇನ್ನು ಸ್ವಲ್ಪ ಹೊತ್ತು ಮಲಗಿಬಿಡು. ನಾನೊಂದು ಸಣ್ಣ ನಿದ್ದೆ ತೆಗೆಯುತ್ತೇನೆ’ ಎನ್ನುತ್ತಲೇ ಟಿಷ್ಯೂ ಪೇಪರಿನಿಂದ ಪೀಹೂವಿನ ಹೊಟ್ಟೆಯ ಭಾಗವನ್ನೂ ನನ್ನ ಕೈಯನ್ನೂ ಒರೆಸಿ ಮೆತ್ತನ್ನ ಬ್ಲಾಂಕೆಟ್ಟಿನ ಮೇಲೆ ಪೀಹೂವನ್ನು ಕೂರಿಸಿ ಮಗ್ಗುಲಾದೆ. ಪೀಹೂ ಮೌನವಾಯಿತು. ಎಡಗೈ ಬಹಳ ಹೊತ್ತಿನಿಂದ ಒಂದೇ ಕಡೆ ಚಾಚಿಕೊಂಡಿದ್ದರಿಂದ ಮರಗಟ್ಟಿದಂತಾಗಿತ್ತು.

ಪೀಹೂ ಸುಮ್ಮನಾಯಿತಾದರೂ ನನಗೆ ಮತ್ತೆ ನಿದ್ದೆ ಬರಲೇ ಇಲ್ಲ. ಎಡಗೈಯನ್ನು ಬಲಗೈಯಲ್ಲಿ ಒತ್ತಿಕೊಳ್ಳುತ್ತ ಇದ್ದ ನಾನು ಪೀಹೂಗೆ ಹಸಿವಾಗಿರಬೇಕು ಎಂದು ಎದ್ದು ಪೀಹೂವನ್ನು ಮಾತಾಡಿಸುತ್ತಲೇ ಎತ್ತಿಕೊಂಡೆ. ಒಳಗಿಂದಲೇ ಕಾಡಿನ ಹಕ್ಕಿಗಳಿಗೆಲ್ಲ ಮಾರುತ್ತರ ಕೊಡುತ್ತಲಿದ್ದ ಪೀಹೂ ಯಾಕೋ ತುಂಬ ಸಪ್ಪೆಯಾಗಿತ್ತು. ತುತ್ತುಣಿಸಲು ನೋಡಿದೆ. ಯಾಕೋ ತಿನ್ನಲೇ ಇಲ್ಲ. ಪೀಹೂವಿನ ಇಷ್ಟದ ಕಡುಗಪ್ಪು ಕಳಿತ ಕಾಕಿ ಹಣ್ಣುಗಳನ್ನು ಕೊಟ್ಟೆ. ಪೀಹೂ ಅದರತ್ತ ತಿರುಗಿಯೂ ನೋಡಲಿಲ್ಲ. ನೀರೂ ಕುಡಿಯಲಿಲ್ಲ. ನಾನು ಕಾಡಿನ ಹಕ್ಕಿಗಳನ್ನಾದರೂ ತೋರಿಸುತ್ತೇನೆಂದು ಅದನ್ನೆತ್ತಿಕೊಂಡು ಹೊರಗೋಡಿದೆ. ಮೊದಲಾಗಿದ್ದರೆ ಪೀಹೂ ಹೂಗಿಡಗಳ ಕಡೆ ಕರೆದೊಯ್ಯುವಂತೆ ಅವಸರಿಸುತ್ತಿತ್ತು. ಹೂಗಳ ಒಳಗೆ ಕೊಕ್ಕು ಹಾಕಿ ಮಧು ಹೀರುವುದು, ಕಾಡಿನ ಹಕ್ಕಿಗಳಿಗೆಲ್ಲ ಕೂಗಿ ಕೂಗಿ ಮಾತಾಡಿಸುವುದು, ಪಿಪಿಪೀಪ್ ಎಂದು ಬೆರಗುಗೊಳ್ಳುವುದು ಏನೇನೂ ಇಲ್ಲ. ಬದಲಿಗೆ ನಿದ್ದೆಯ ಅಮಲು ಆವರಿಸಿದಂತೆ ಕಣ್ಣು ಮುಚ್ಚತೊಡಗಿತು.

ನನ್ನ ಎದೆಯೇ ಒಡೆದುಹೋಗುವಂತಾಯಿತು. ‘ಪೀಹೂ ಪೀಹೂ ಕಂದಾ ಎನ್ನುತ್ತಾ ನೀರುಣಿಸಲು ನೋಡಿದೆ. ಕಾಕಿ ಹಣ್ಣು ತಿನಿಸಲು ನೋಡಿದೆ. ಮರವಟ್ಟಿದ ಅದರ ಕಾಲುಗಳನ್ನು ನೀವಿದೆ. ಬೇಡಿದೆ, ಕಾಡಿದೆ, ಮುದ್ದಿಸಿದೆ. ಪೀಹೂ ಹಾಡಲೇ ಇಲ್ಲ. ಸ್ವಲ್ಪ ಹೊತ್ತಷ್ಟೇ ಅಂಗೈಲಿದ್ದ ಪೀಹೂ ರೆಕ್ಕೆಗಳನ್ನೊಮ್ಮೆ ಅಗಲಕ್ಕೆ ಚಾಚಿ, ಪಡಪಡನೆ ನಡುಗಿ ಕತ್ತುಹೊರಳಿಸಿಬಿಟ್ಟಿತು. ‘ಪೀಹೂ ಕಂದಾ ನನ್ನನ್ನು ಬಿಟ್ಟು ಹೋಗಬೇಡ ಕಂದಾ ನನ್ನನ್ನು ತಬ್ಬಲಿ ಮಾಡಿಬಿಡಬೇಡ. ಪೀಹೂ ಪೀಹೂ..’ ನಾನು ಜೋರಾಗಿ ಅಳುತ್ತಲಿದ್ದೆ. ಪೀಹೂ ಮಿಸುಕಾಡಲೂ ಇಲ್ಲ. ನೀರು ಕುಡಿಸಿದೆ. ಊಟ ಮಾಡು ಎಂದೆ, ಹಾಡು ಎಂದೆ, ನೋಡು ಎಂದೆ. ನನ್ನ ಪೀಹೂ ಏನಂದರೆ ಏನೂ ಪ್ರತಿಕ್ರಿಯಿಸಲಿಲ್ಲ. ನನ್ನ ಪೀಹೂವನ್ನು ಎದೆಗವಚಿ ದೇವರಿಗೆ ಮೊರೆಯಿಟ್ಟೆ. ಒಂದೇ ಒಂದು ಬಾರಿ ಮರಳಿಸು ನನ್ನ ಪೀಹೂವಿನ ಚೈತನ್ಯವನ್ನು ಎಂದು. ಪೀಹೂವನ್ನು ಎದೆಗವಚಿ ಕೂತೆ. ಎಷ್ಟು ಹೊತ್ತು ಕೂತೆನೆಂದು ನನಗೆ ಗೊತ್ತಿಲ್ಲ.

ನನ್ನ ಗೆಳೆಯರೊಬ್ಬರು ನನಗೆ ಕರೆ ಮಾಡಿ ಸಮಾಧಾನ ಮಾಡುತ್ತಿದ್ದರು. ಆದರೂ ನನಗೆ ಪೀಹೂ ನನ್ನನ್ನು ಹೀಗೆ ಬಿಟ್ಟು ಹೋಗುತ್ತದೆ ಮತ್ತು ಹಿಂದಿರುಗುವುದೇ ಇಲ್ಲವೆಂದು ನಂಬಿಕೆ ಬರಲೇ ಇಲ್ಲ. ನಾನು ಅದನ್ನು ಮುದ್ದಿಸುತ್ತಿದ್ದೆ. ಕರೆಯುತ್ತಿದ್ದೆ, ಗೋಗರೆಯುತ್ತಿದ್ದೆ, ನನ್ನನ್ನು ಬಿಟ್ಟುಹೋಗಬೇಡವೆಂದು. ಆಗಲೇ ಯಾಕೋ ಕಣ್ಣು ಮಿಸುಕಾಡಿದ ಹಾಗಾಯ್ತು. ನಾನು ಗೆಳೆಯನಿಗೆ ಫೋನಿಡಿ ನನ್ನ ಪೀಹೂ ಮಿಸುಕಾಡ್ತಿದೆ. ಅದಕ್ಕೆ ಖಂಡಿತ ಜೀವ ಬರುತ್ತದೆ ಎಂದು ಮತ್ತೆ ಮನೆಯಿಡೀ ಒಂದು ಮಾಡಿ ಮಾಡುವ ಎಲ್ಲ ಪ್ರಯತ್ನವನ್ನೂ ಮಾಡುತ್ತಲೇ ಇದ್ದೆ. ಆದರೆ ಪೀಹೂವಿನ ಮಿಸುಕಾಟ ನನ್ನ ಭ್ರಮೆಯಾಗಿತ್ತಷ್ಟೇ! ಮಧ್ಯಾಹ್ನವಾಗಿತ್ತು ಆಗ. ನನ್ನ ಗೆಳೆಯ ಕರೆ ಮಾಡಿ ಮಾಡಿ ಸಾಂತ್ವನ ಹೇಳುತ್ತಲೇ ಇದ್ದರು.

‘ನೋಡಿ ಹೀಗೆ ಅದನ್ನು ಎದೆಗವಚಿ ಎಷ್ಟು ಹೊತ್ತು ಎಂದು ಕೂರುತ್ತೀರಿ? ಸತ್ತದ್ದನ್ನು ಮಣ್ಣು ಮಾಡಲೇಬೇಕು’ ಎಂದು ಒಂದು ಅರ್ಥಪೂರ್ಣ ಅಂತ್ಯಸಂಸ್ಕಾರ ಮಾಡುವಂತೆ ತಿಳಿಸಿದರು. ಮಧ್ಯಾಹ್ನ ದಾಟಿ ಸಂಜೆ ಇಳಿಯತೊಡಗಿತ್ತು. ಎಷ್ಟೇ ಅತ್ತುಕರೆದರೂ ಬಾರದ ಪೀಹೂವನ್ನೀಗ ಮಣ್ಣು ಮಾಡಲೇಬೇಕಿತ್ತು.

ನಾನು ಪೀಹೂವನ್ನು ಅದರ ತೊಟ್ಟಿಲಲ್ಲಿ ಮಲಗಿಸಿದೆ. ಒಂದು ಕುಂಡದಲ್ಲಿ ಮಣ್ಣು ತುಂಬಿ ತಂದೆ. ನನ್ನ ಪ್ರಾಣವಾಗಿದ್ದ ಪೀಹೂವನ್ನು ಹೀಗೆ ಮಣ್ಣಲ್ಲಿ ಹೇಗಿಡುವುದು? ಎನಿಸುವಾಗ ನವುರಾದ ಸುಕೋಮಲ ಹೂವುಗಳು ನೆನಪಾದವು. ಗಿಡಗಳಿಂದ ಹೂ ಕೊಯ್ಯುವುದು ತಪ್ಪೆಂದೂ, ಉದುರಿದ ಹೂವನ್ನಷ್ಟೇ ಆಯ್ದುಕೊಳ್ಳಬಹುದೆಂದೂ ಸದಾ ಅಂದುಕೊಳ್ಳುವ ನನಗೆ ಹೂವುಗಳೂ ನನ್ನ ಅಂಗೈಲಿದ್ದ ಪೀಹೂವಿನಂತೆಯೇ ಕಂಡವು. ಹಿಂದಿರುಗಿ ಬಂದು ಪೀಹೂವನ್ನು ಎದೆಗೊತ್ತಿಕೊಂಡೇ ಹೀಗೆ ಬರೆದೆ-

‘ಕ್ಷಮಿಸು…
ನಿನ್ನ ಮರಣದ ದಿನ
ಗಿಡದ ತುಂಬ ಹೂವು
ನಿನ್ನ ದೇಹ ನಲುಗದಿರಲೆಂದು
ಯಾವ ಹೂವನ್ನಾದರೂ
ತರಲಾಗಲಿಲ್ಲ
ಕೊನೆಗೂ
ಈ ಬೆರಳಿಂದ
ಹೂ ಕೊರಳು ಕತ್ತರಿಸುವುದು
ಸಾಧ್ಯವಾಗಲೇ ಇಲ್ಲ’

ಮೆತ್ತನ್ನ ಬಟ್ಟೆಯಲ್ಲಿ ಪೀಹೂವನ್ನಿರಿಸಿ ಹೃದಯ ಕಲ್ಲು ಮಾಡಿಕೊಂಡೇ ಮಣ್ಣು ಮುಚ್ಚಿದೆ. ಮತ್ತು ಆ ಕುಂಡದಲ್ಲಿ ಪೀಹೂವಿಗೆ ಇಷ್ಟವಾದ ಕಾಕೆ ಹಣ್ಣಿನ ಎರಡು ಗಿಡಗಳನ್ನು ನೆಟ್ಟೆ. ಮುಂದೊಂದು ದಿನ ಈ ಗಿಡಗಳು ಹಣ್ಣುಬಿಟ್ಟಾಗ ಹಕ್ಕಿಗಳು ಬಂದು ತಿಂದಾವೆಂದು ಮಹಡಿಯ ಮೇಲಿನ ಅಂಗಳದಲ್ಲಿ ಇರಿಸಿ ಅದರೆದುರು ಕೂತು ಎಷ್ಟೋ ಹೊತ್ತಿನ ತನಕವೂ ಅಳುತ್ತಲೇ ಇದ್ದೆ. ನಂತರ ಮೇಲೆದ್ದು ಫೋನ್ ಕೈಲಿ ಹಿಡಿದು ಬರೆಯತೊಡಗಿದೆ.

ಪೀಹೂ
ಎಂದರೆ
ಹಾಡುವ ಹೂ

ಪೀಹೂ ನನಗಾಗಿ ಹಾಡುತ್ತದೆ
ನಾನಿನ್ನು
ಪೀಹೂವಿಗಾಗಿ ಹಾಡಬೇಕು

ನನಗೆ ಕಾಕಿ ಗಿಡದ ಮೇಲೆ
ಪ್ರೀತಿ ಹೇಗಾಯಿತೆಂದರೆ
ಅದು ನಿತ್ಯವೂ
ನನ್ನ ಪೀಹೂವಿಗಾಗಿ
ಕಳಿತ ಕಡುಗಪ್ಪು ಹಣ್ಣುಗಳ
ಕೊಡುತ್ತಿತ್ತು

ಹಣ್ಣು ಮಾತ್ರವೆಂದುಕೊಂಡದ್ದು
ತಪ್ಪಾಯಿತು
ಕಾಕಿ ಗಿಡದ ಬೇರೂ
ಪೀಹೂವಿನೊಂದಿಗೆ
ಬೆಸೆದುಕೊಂಡಿತು

ಒಂದು ಪ್ರಾಣಿಯ ಮೇಲೆ
ಕೋಟಿಗಟ್ಟಲೆ ದೇವರುಗಳಿದ್ದಾರೆಂದು
ಹುಯ್ಲಿಡುವಾಗ
ನನ್ನ ಪೀಹೂ ದೇವತೆ
ನನ್ನೆದೆಯ ಮೇಲೆಯೇ
ಬೆಚ್ಚಗೆ ಕೂತು ಪಿಳಿಪಿಳಿ ನೋಡುತ್ತಿತ್ತು

ನನ್ನ ಪೀಹೂ ಬಂದಾಗಿಂದ
ನಿತ್ಯ ನನ್ನನ್ನೆಬ್ಬಿಸುತ್ತಿದ್ದ
ಅಲಾರಂ
ಬೆದರಿ ಬಾಯಿಮುಚ್ಚಿಕೊಂಡಿದೆ.

ರಜೆಯ ದಿನ
ರಸ್ತೆಯಲ್ಲಿ ಆಡುತ್ತಿದ್ದ
ಮಕ್ಕಳನ್ನು ಕಂಡು ಪೀಹೂವಿಗೂ
ಪೀಹೂವನ್ನು ಕಂಡು ಮಕ್ಕಳಿಗೂ
ಬೆರಗು

ತಾಯ ಗೂಡಿಂದ
ಹೊರಬಿದ್ದ ಪೀಹೂವಿಗೆ
ಚಂದದ ಗೂಡೊಂದ ಹೆಣೆಯಲಾಗದ ನಾನು
ತೊಟ್ಟಿಲು ಮಾಡಿ ತೂಗಿದೆ

ಪೀಹೂ ಎಂದರೆ
ಆಹಾಹಾ…!
ಅಪರಿಮಿತ ಪರಿಮಳ
ಮತ್ತು ಪೀಹೂವನ್ನು ಎತ್ತಿಕೊಂಡಾಗ
ನನ್ನ ಮೈಗೂ
ಮೆತ್ತಿಕೊಳ್ಳುವ ಅದೇ ಪರಿಮಳ!

ಪೀಹೂ ಎಂಬ ನನ್ನ ಸ್ವರ್ಗದ ಹಕ್ಕಿ ನನ್ನ ಮರೆಯಲಾರದ ನೆನಪಾದಳು, ಮಾಯದ ಗಾಯವಾದಳು, ಮಣ್ಣಾದಳು, ಹಣ್ಣಾದಳು, ಕಣ್ಣಾದಳು!

* * *

ಅದೊಂದು ಮುಂಜಾವು. ನನ್ನ ಸಂಬಂಧಿಯಿಂದ ಒಂದು ಕರೆ. ಬುಲ್ ಬುಲ್ ಹಕ್ಕಿಗಳು ತಮ್ಮ ಅಂಗಳದ ಪೊದೆಯಲ್ಲಿ ಮೂರು ಮರಿ ಮಾಡಿದ್ದವೆಂದೂ ಅದರಲ್ಲಿ ಎರಡನ್ನು ಕಾಗೆ ಕಚ್ಚಿಕೊಂಡು ಹೋಗಿದೆಯೆಂದೂ ಕಾಗೆಯ ಹಿಂಡು ದೊಡ್ಡ ಬುಲ್ ಬುಲ್ ಗಳನ್ನು ಗೂಡಿನ ಬಳಿ ಬರಲೂ ಬಿಡುತ್ತಿಲ್ಲವೆಂದೂ ಇನ್ನುಳಿದ ಒಂದು ಮರಿಯನ್ನೂ ಗೂಡಿನಿಂದ ಕೆಳಕ್ಕೆ ಬೀಳಿಸಿದ್ದನ್ನು ತಾವು ಎತ್ತಿ ಮತ್ತೆ ಗೂಡಲ್ಲಿ ಬಿಟ್ಟರೆಂದೂ ಕಾಗೆಗಳು ಈ ಮರಿಯನ್ನೂ ಉಳಿಸುವುದಿಲ್ಲವೆಂದೂ ಹೇಳಿದರು. ಮತ್ತೆ ಮಧ್ಯಾಹ್ನ ಡ್ಯೂಟಿ ಮುಗಿಸಿ ಊಟಕ್ಕೆ ಬಂದಾಗ ಈ ಮರಿಯನ್ನು ನಿಮ್ಮ ಮನೆಗೆ ತಂದು ಕೊಡುತ್ತೇನೆ ಎಂದರು. ನಾನು ಮಧ್ಯಾಹ್ನದ ಒಳಗೆ ಕಾಗೆಗಳು ಇದನ್ನೂ ಕಚ್ಚಿಕೊಂಡು ಹೋದರೆ? ಅದೆಲ್ಲ ಬೇಡ ಈಗಲೇ ತಂದುಕೊಡಲು ಸಾಧ್ಯವಾ? ಎಂದು ಕೇಳಿದೆ. ಅಷ್ಟರೊಳಗಾಗಲೇ ಕಾಗೆ ಈ ಮರಿಯನ್ನೂ ಕಚ್ಚಲು ಯತ್ನಿಸಿ ಮರಿ ಗೂಡಿಂದ ಕೆಳಗೆ ಬಿದ್ದಾಗಿತ್ತು.

ನನ್ನ ಬದುಕಿನ ಅಪೂರ್ವ ದಿನವದು. ಸ್ವರ್ಗದ ಹಕ್ಕಿಯೊಂದು ನನ್ನ ಮಡಿಲು ಸೇರಿತ್ತು. ಆಗಷ್ಟೇ ಪುಕ್ಕ ಮೂಡುತ್ತಿದ್ದ ಈ ಹಾಡುವ ಹೂವನ್ನು ಕಂಡೊಡನೆ ನಾನಿದನ್ನು ಪೀಹೂ ಎಂದು ಕರೆದೆ. ಒಂದು ಹಳೆಯ ಹಕ್ಕಿಗೂಡಲ್ಲಿ ಪೀಹೂವನ್ನಿಟ್ಟು ಅದಕ್ಕೆ ತುತ್ತುಣಿಸಿದೆ. ಅದು ನನ್ನನ್ನು ಅಮ್ಮನೆಂದು ಭಾವಿಸಿತು.

ನನ್ನ ಪೀಹೂ, ಬೆಕ್ಕುಗಳು, ನಾಯಿಗಳು, ಸಲೋನಿ ಎಂಬ ದೊಡ್ಡ ಗಾತ್ರದ ಜೇಡ ಇವುಗಳ ಜೊತೆ ನನ್ನ ಬದುಕು ತುಂಬ ಸುಂದರವಾಗಿತ್ತು. ಪೀಹೂ ವಯಸ್ಸಿಗೆ ಮೀರಿ ಬೆಳೆಯುತ್ತಿತ್ತು. ಕೆಲವೇ ದಿನಗಳಲ್ಲಿ ಅದು ಕೋಳಿಮರಿಯಂತಾಯಿತು. ಮತ್ತೆ ಕೆಲ ದಿನಗಳಲ್ಲಿ ಬಾಲ ಉದ್ದಕ್ಕೆ ಬೆಳೆದು, ಕೆನ್ನೆಯ ಬಳಿ ಕೆಂಪುಮೂಡಿ ಒಂದು ವರ್ಷದ ಬುಲ್ ಬುಲ್ ನಂತೆ ಬೆಳೆದುಕೂತಿತು. ಮನೆಯ ತುಂಬ ಅದರ ಕೊರಳ ಕೊಳಲಿಂದ ಹೊಮ್ಮುವ ಹಾಡು ಇನಿದಾಗಿ ಧ್ವನಿಸುತ್ತಿತ್ತು. ಇಡೀ ಮನೆಯಲ್ಲಿ ನಡೆದಾಡುವುದು, ಕುಣಿಯುವುದು, ಹಾರುವುದು, ಹಾಡುವುದು ಹೀಗೆ ಪೀಹೂವಿನ ಜೊತೆಗಿರುವುದೇ ಸ್ವರ್ಗವಾಗಿತ್ತು. ಪೀಹೂ ನನ್ನ ಬದುಕಿನ ಕೊರತೆಗಳನ್ನೆಲ್ಲ ತುಂಬಿತ್ತು. ನನ್ನ ಗಾಯಗಳು ಮಾಯ್ದವು, ನನ್ನ ಏಕಾಕಿತನ ಕಳೆದಿತ್ತು. ಅಪರಿಮಿತ ಸಂಭ್ರಮವು ನನ್ನ ಮನೆಯಲ್ಲೇ ನೆಲೆಸಿಬಿಟ್ಟಿತ್ತು.

ಎಷ್ಟಾದರೂ ಪೀಹೂ ಕಾಡಿನ ಹಕ್ಕಿ. ಒಂದು ದಿನ ಅದನ್ನು ಕಾಡಿಗೆ ಬಿಡಲೇಬೇಕು. ಹಕ್ಕಿಗಳ ಲೋಕ ಅದಕ್ಕೆ ಅಪರಿಚಿತವಾಗದಂತೆ, ಕಾಡು ತನ್ನದಲ್ಲವೆಂಬಂತೆ ಆಗಕೂಡದೆಂದು ಪಾರ್ಕೊಂದಕ್ಕೆ ಕರೆದೊಯ್ಯುತ್ತಿದ್ದೆ. ಅಲ್ಲಿ ನವಿಲಿನಿಂದ ಹಿಡಿದು ಪುಟ್ಟಾತಿಪುಟ್ಟ ನೂರಾರು ಹಕ್ಕಿಗಳು. ಪೀಹೂ ಪಾರ್ಕಿನ ತುಂಬ ಕೂಗುವುದು, ಹಾರುವುದು ಹಾಡುವುದು, ಎಲ್ಲ ಹಕ್ಕಿಗಳಿಗೂ ಕರೆ ಕರೆದು ಮಾತಾಡಿಸುವುದು ಒಂದೆರಡಲ್ಲ. ಎಷ್ಟಾಯಿತೋ ಅಷ್ಟು ಕುಣಿದು ದಣಿದ ಮೇಲೆ ಮನೆಗೆ ಹೋಗೋಣವೆಂದು ಭುಜದ ಮೇಲೆ ಹಾರಿ ಕೂತುಬಿಡುತ್ತಿತ್ತು. ಅಲ್ಲಿಯೇ ಒಂದು ಹಿರಿಯ ನಾಗರಿಕರ ಮನೆ. ಅವರೇ ಈ ಪಾರ್ಕನ್ನು ಚಂದವಾಗಿ ನೋಡಿಕೊಳ್ಳುವವರು. ಅವರ ಮನೆಯಲ್ಲಿ ರಾಶಿ ರಾಶಿ ಕಾಕಿ ಹಣ್ಣುಗಳು ಬಿಡುತ್ತಿದ್ದವು. ನಾನು ಒಂದಷ್ಟು ಹಣ್ಣು ತೆಗೆದುಕೊಂಡು ದಾರಿಯುದ್ದಕ್ಕೂ ಹಣ್ಣು ತಿನ್ನಿಸುತ್ತ ಪೀಹೂವಿನ ಜೊತೆ ಮಾತಾಡುತ್ತ ಮನೆಗೆ ಹೋಗುತ್ತಿದ್ದರೆ ನನ್ನ ನಾಲ್ಕು ಬೆಕ್ಕುಗಳೂ, ನನ್ನ ಎರಡು ನಾಯಿಗಳೂ ಹಿಂಬಾಲಿಸುತ್ತಿದ್ದವು.

ಒಂದು ದಿನ ನಮ್ಮಲ್ಲಿ ಕೆಲಸ ಮಾಡುವ ಹುಡುಗರು ಕರೆ ಮಾಡಿ ಒಂದು ಹಸಿರು ಪಾರಿವಾಳ ಯಾರದ್ದೋ ತೋಟದ ಬೇಲಿಗೆ ಮಂಗಗಳು ನುಗ್ಗದಿರಲೆಂದು ಹಾಕಿದ್ದ ಬಲೆಯಲ್ಲಿ ಸಿಕ್ಕು ರೆಕ್ಕೆ ಮುರಿದುಕೊಂಡು ಫಡಫಡಿಸುವಾಗ ತಮಗೆ ಸಿಕ್ಕಿದೆಯೆಂದೂ ಅದನ್ನು ಹಾಗೆಯೇ ಕಾಡಿಗೆ ಬಿಟ್ಟರೆ ಹಾರಲಾಗದ ಅದು ಕಾಡಿನ ಪ್ರಾಣಿಗಳ ಪಾಲಾಗುವುದೆಂದೂ ಆ ಹಕ್ಕಿಯನ್ನು ತಂದುಕೊಡುವುದಾ ಎಂದು ಕೇಳಿದ್ದರು. ಅಂತೂ ಇನ್ನೂ ಒಂದು ಹಕ್ಕಿ ಮನೆ ಸೇರಿತು. ಫೇಸ್ಬುಕ್ಕಿನಲ್ಲಿ ಅದರ ಫೋಟೋ ಹಾಕಿದಾಗ ಮಾಲತಿ ಮುದಕವಿ ಎಂಬ ತಾಯಿಯೊಬ್ಬರು ಅದಕ್ಕೆ ಚಿನ್ನೂ ಎಂದು ಹೆಸರಿಡು ಎಂದರು.

ಈ ಹಕ್ಕಿಯ ಮುರಿದ ರೆಕ್ಕೆಯನ್ನು ಕಟ್ಟಿ ಚಿಕಿತ್ಸೆ ಮಾಡುವುದು ಒಂದಾದರೆ ಇದು ಪೀಹೂವಿನಂತೆ ನನ್ನ ಜೊತೆ ರಾಜಿಯಾಗಲೇ ಇಲ್ಲ. ನೆನೆಸಿದ ಹೆಸರುಕಾಳು, ನವಣೆ, ಸಜ್ಜೆ, ಹುರಿಗಡ್ಲೆ ಹೀಗೆ ಏನೇನು ಕೊಟ್ಟರೂ ಏನು ಮಾಡಿದರೂ ತಿನ್ನುವುದಿಲ್ಲ. ಚಿನ್ನೂವಿನ ಬಾಯಿತೆರೆದು ತಿನ್ನಿಸಬೇಕಿತ್ತು. ದಿನವೊಂದಕ್ಕೆ ನಾಲ್ಕೈದು ಸಲ ಅದನ್ನು ತೊಡೆಯ ಮೇಲೆ ಕೂರಿಸಿಕೊಂಡು ಕಾಳುಗಳನ್ನು ನುಂಗಿಸುತ್ತಿದ್ದರೆ ಪೀಹೂ ತಾನೂ ತೊಡೆಯೇರಿ ಚಿನ್ನೂವಿನ ಮುಖದ ಹತ್ತಿರವೇ ಕೂತು ಇಣುಕಿಣುಕಿ ಅದರ ಬಾಯಿಯಲ್ಲಿ ತಾನೂ ಬಾಯಿಹಾಕಲು ನೋಡುವುದು, ತನಗೂ ತಿನ್ನಿಸುವಂತೆ ಪಿಪೀಪ್ ಪಿಪೀಪ್ ಮಾಡುತ್ತ ಮುನ್ನುಗ್ಗುವುದು ಮಾಡುತ್ತಿತ್ತು. ಮೊದಲೇ ಹೆದರುಪುಕ್ಕಲ ಚಿನ್ನೂ ಪೀಹೂವನ್ನು ಕೆಕ್ಕರಿಸಿ ನೋಡುವುದು ಬುಡುಕ್ಕನೆ ಹಾರಿ ದೂರ ಓಡುವುದು, ಪೀಹೂ ನನ್ನ ತೊಡೆಯಿಂದ ಭುಜದ ಮೇಲೋ ತಲೆಯ ಮೇಲೋ ಕೂತದ್ದೇ ತಡ ಚಿನ್ನು ಮತ್ತೆ ತೊಡೆಯೇರಿ ಕೂತು ‘ಸರಿ ಈಗ ತಿನ್ನಿಸು’ ಎಂಬಂತೆ ಮುಖ ನೋಡುವುದು ಹೀಗೆ ನನ್ನ ಸ್ವರ್ಗ ಚೆಲುವಾಗಿ ಅರಳಿ ಪರಿಮಳಿಸುತ್ತಿತ್ತು. ನನಗೆ ಸದಾ ಈ ಪ್ರಾಣಿ ಪಕ್ಷಿಗಳ ಲೋಕದಲ್ಲಿ ಇರುವಾಗ ಹೊರಪ್ರಪಂಚದ ಪರಿವೆಯಾಗಲೀ ಅಗತ್ಯವಾಗಲೀ ಇರಲೇ ಇಲ್ಲ.

ಚಿನ್ನು ಸುಮಾರು ಒಂದು ತಿಂಗಳ ಅವಧಿಯಲ್ಲಿ ಸಂಪೂರ್ಣ ಗುಣವಾಗಿತ್ತು. ಅದೀಗ ಹಾರುವುದನ್ನು ಆರಂಭಿಸಿತ್ತು. ಇನ್ನೆರಡು ದಿನಗಳಲ್ಲಿ ಕಾಡಿಗೆ ಬಿಡೋಣವೆಂದುಕೊಂಡೆ. ಬಹಳ ದಿನ ನನ್ನ ಜೊತೆಯೇ ಇರಿಸಿಕೊಳ್ಳುವುದರಿಂದ ಕಾಡನ್ನು ಅದು ಮರೆತೇಬಿಡುವ ಸಂಭವವೂ ಇತ್ತು. ಆದರೆ ಅದನ್ನು ಪಶ್ಚಿಮ ಘಟ್ಟದ ಬಾಳೆಬರೆ ಘಾಟಿಯಲ್ಲಿಯೇ ಬಿಡಬೇಕಿತ್ತು. ಯಾಕೆಂದರೆ ಅಲ್ಲಿಯೇ ಅದರ ಜಾತಿಯ ಹಕ್ಕಿಗಳು ಇರುವುದು. ಬೇರೆಲ್ಲೂ ಈ ಹಕ್ಕಿಗಳನ್ನು ಕಂಡಿರಲಿಲ್ಲ. ಅದೂ ಅಲ್ಲದೆ ನನ್ನ ಫೇಸ್ಬುಕ್ ಗೆಳೆಯರು ಈ ಎಮರಾಲ್ಡ್ ಡೊವ್ ಗಳ ಸಂಪೂರ್ಣ ಮಾಹಿತಿ ಕೊಟ್ಟಿದ್ದರು.

ನಾನು ಸೋಮವಾರ ಅಥವ ಮಂಗಳವಾರ ಬಿಟ್ಟುಬರುತ್ತೇನೆ ಎಂದು ಅಂದುಕೊಂಡೆ. ಮೇ 28ರ ಭಾನುವಾರ ನನ್ನ ಕಸಿನ್ ಒಬ್ಬರ ಹೊಸ ಮನೆ ಪ್ರವೇಶ ಇದ್ದುದರಿಂದ ಒತ್ತಾಯದ ಆಮಂತ್ರಣವಿತ್ತು. ನಾನು ಅರವತ್ತು ಕಿಲೋಮೀಟರು ಪ್ರಯಾಣಿಸಿ ಹೋಗಿ ಬರುವ ತನಕ ನನ್ನ ಹಕ್ಕಿಗಳನ್ನು ಒಂಟಿ ಬಿಡಬೇಕಲ್ಲ ಎಂದು ಹೋಗುವುದೇ ಬೇಡವೆಂದು ನಿರ್ಧರಿಸಿದರೂ ಅನಿವಾರ್ಯವಾಗಿ ಹೋಗಲೇಬೇಕಾಯಿತು. ಎರಡೂ ಹಕ್ಕಿಗಳಿಗೂ ತಿನ್ನಿಸಿ, ಮಧ್ಯಾಹ್ನ ಒಂದೂವರೆಗೆ ಮನೆಬಿಟ್ಟ ನಾನು ಸಂಜೆ ನಾಲ್ಕರ ಹೊತ್ತಿಗೆ ಮನೆಗೆ ಮರಳಿಯೂ ಆಗಿತ್ತು.

ಕಾರಿನ ಸದ್ದಾಗಿದ್ದೇ ಪೀಹೂ ಜೋರಾಗಿ ಪಿಪೀಪ್ ಪಿಪೀಪ್ ಎಂದು ತೀಕ್ಷ್ಣವಾಗಿ ಮತ್ತು ಅಷ್ಟೇ ಇಂಪಾಗಿ ಕರೆಯುತ್ತಾ ಇತ್ತು. ಅದನ್ನು ಒಂಟಿ ಬಿಟ್ಟುಹೋದ ಪಶ್ಚಾತ್ತಾಪ, ಅದನ್ನು ನೋಡುವ ಮುದ್ದಿಸುವ ಅವಸರ, ಪ್ರೀತಿ ಎಲ್ಲ ಒಮ್ಮೆಲೇ ನುಗ್ಗಿ ಓಡಿ ಹೋಗಿ ಬಾಚಿಕೊಂಡೆ. ಅದೂ ನನ್ನ ತುಟಿ, ಮುಖ, ಮೂಗಿನ ಮೇಲೆಲ್ಲ ಹಾರುತ್ತಾ ಎಷ್ಟು ಪ್ರೀತಿ ಪ್ರಕಟಿಸಿದರೂ ಸಾಲದು ಅದಕ್ಕೆ. ಪೀಹೂಗೆ ತುತ್ತುಣಿಸಿ ನನ್ನ ಮಹಡಿಯಲ್ಲಿದ್ದ ಚಿನ್ನೂವಿಗೆ ಉಣಿಸಲೆಂದು ಹೊರಟೆ. ಪೀಹೂ ‘ಈಗಷ್ಟೇ ಬಂದು ಮತ್ತೆ ನನ್ನನ್ನು ಬಿಟ್ಟು ಹೋಗ್ತೀಯಾ? ಎಂಬಂತೆ ನೋಡತೊಡಗಿತು. ಸರಿ ನೀನೂ ಬಾ ಎಂದು ಮೊದಲ ಬಾರಿಗೆ ಪೀಹೂವನ್ನು ಅದರ ಗೂಡಿನಲ್ಲಿ ಕೂರಿಸಿ ಮೇಲೆ ತಂದು ಚಿನ್ನುವಿಗೆ ಉಣಿಸಿದೆ. ಪೀಹೂ ಹೊಸ ಕೋಣೆಯಾದ್ದರಿಂದ ಕೂತಲ್ಲೇ ಕೂತು ಹಾಡುತ್ತಾ ಚಿನ್ನುವನ್ನು ಮಾತಾಡಿಸುತ್ತಿತ್ತು.

ಚಿನ್ನೂ ಹೊಟ್ಟೆ ತುಂಬಿದ ಕೂಡಲೇ ತನ್ನ ಗೂಡು ಸೇರಿಕೊಂಡಿತು. ನಾನೀಗ ಪೀಹೂವಿಗೆ ‘ಪೀಹೂ ನೋಡು ಎಷ್ಟು ದೊಡ್ಡ ಕೋಣೆ! ಇಲ್ಲಿ ನೀನು ಎಷ್ಟು ಬೇಕಾದರೂ ಹಾರಬಹುದು, ಕಿಟಕಿಯಿಂದ ಹೊರಗೆ ನೋಡು ಕಾಡೆಲ್ಲ ಕಾಣುತ್ತೆ’ ಎನ್ನುತ್ತಾ ಗೂಡಿನಿಂದ ಎತ್ತಿ ನೆಲದಲ್ಲಿ ಕೂರಿಸಿದೆ. ಪೀಹೂವಿನ ಬೆಚ್ಚಗಿನ ಕಾಲುಗಳನ್ನು ಬಿಳಿಯ ಟೈಲ್ಸ್ ತಣ್ಣಗೆ ತಾಕಿದವು. ಕಿಟಕಿಯ ಬಿಂಬ ಬಿಳಿಯ ಟೈಲ್ಸ್ ಮೇಲೆ ಬಿದ್ದಿತ್ತು. ಇದನ್ನೆಲ್ಲ ಪೀಹೂ ಆಳವಾದ ನೀರು ಎಂದು ಭಾವಿಸಿತೋ ಏನೋ! ಅದು ಅಷ್ಟೊಂದು ಭಯಗೊಂಡಿದೆಯೆಂದು ನನಗಾದರೂ ಎಲ್ಲಿ ಗೊತ್ತಿತ್ತು? ನಾನು ನೆಲದಲ್ಲಿ ಉರುಳಿಕೊಂಡು ನನ್ನ ಮುಖದ ಬಳಿಯೇ ಕೂತಿದ್ದ ಪೀಹೂ ಈಗ ಪುರ್ರನೆ ನನ್ನ ಮುಖಕ್ಕೆ ಹಾರಲಿದೆಯೆಂದು ನಿರೀಕ್ಷಿಸುತ್ತ ಮಾತಾಡುತ್ತಲೇ ಇದ್ದೆ. ಪೀಹೂ ನನ್ನ ಮುಖಕ್ಕೆ ಹಾರಲೆಂದು ನೆಲವನ್ನು ತಳ್ಳಿದ್ದೇನೋ ಸರಿ ಮೇಲಕ್ಕೆ ನೆಗೆಯಲೇ ಇಲ್ಲ. ಬದಲಿಗೆ ಅಲ್ಲಿಯೇ ಮಲಗಿಬಿಟ್ಟಿತು.

ಏನಾಯ್ತು ಕಂದಾ ಎನ್ನುತ್ತಾ ಪೀಹೂವನ್ನೆತ್ತಿ ಮಂಚದ ಮೆತ್ತನೆ ಹಾಸಿಗೆಯಲ್ಲಿ ಕೂರಿಸಿದೆ. ಪೀಹೂ ವಿಪರೀತ ಭಯಗೊಂಡು ಕಾಲೂರುತ್ತಲೇ ಇಲ್ಲ. ಭಯಭೀತವಾಗಿ ತನ್ನ ಕಾಲನ್ನು ಕೊಕ್ಕೆ ಮಾಡಿ ಸ್ನಾಯುಗಳನ್ನು ಬಿಗಿಮಾಡಿ ಬೆರಳುಗಳನ್ನು ಸಡಿಲಿಸುವುದೂ ಇಲ್ಲ ಕಾಲೂರುವುದೂ ಇಲ್ಲ. ಕೂತ ಕೂತಲ್ಲೇ ಅಡ್ಡಬಿದ್ದ ಪೀಹೂವಿಗೆ ಪೆಟ್ಟೇನೂ ಆಗಿಲ್ಲವೆಂದು ನನಗೆ ಗೊತ್ತು. ಆದರೂ ರೆಕ್ಕೆ ಪುಕ್ಕ ಕಾಲುಗಳನ್ನು ಪರೀಕ್ಷಿಸಿದೆ. ಆದರೂ ಪೀಹೂಗೆ ಕೆಳಗೆ ನೋಡಲೂ ಭಯ! ನಾನು ತಕ್ಷಣವೇ ಕೆಳಗಿನ ಮನೆಗೆ ಎತ್ತಿಕೊಂಡು ಹೋದೆ. ಪೀಹೂ ಕೆಳಗೆ ನೋಡುತ್ತ ಭಯದಿಂದ ಕಾಲೂರುತ್ತಲೇ ಇಲ್ಲ! ನನ್ನ ಎದೆಯೊಡೆಯುವುದು ಬಾಕಿ. ಪೀಹೂಗೆ ಭಯವಾಗದಂತೆ ಅದನ್ನು ಎತ್ತಿಕೊಂಡೇ ಕೂರತೊಡಗಿದೆ. ಭಾನುವಾರದ ಇಡೀ ರಾತ್ರಿಯೂ ಎತ್ತಿಕೊಂಡೇ ಎಚ್ಚರದಲ್ಲಿಯೇ ರಾತ್ರಿ ಕಳೆದೆ. ಎದೆಗವಚಿ ಕೂತಷ್ಟೂ ಹೊತ್ತು ಪೀಹೂ ಆರಾಮವಾಗಿಯೇ ಇರುತ್ತಿತ್ತಾದರೂ ಚೂರು ಕೆಳಗೆ ನೋಡಿದರೂ ಹೆದರಿ ಕಲ್ಲಾವಿಲ್ಲಿಯಾಗುತ್ತಿತ್ತು!

ಸೋಮವಾರದ ಇಡೀ ಹಗಲು ರಾತ್ರಿಯೂ ಪೀಹೂವನ್ನೆತ್ತಿಕೊಂಡೇ ಕಳೆದೆ. ಊಟ ತಿಂಡಿ ಟೀ ಕೂಡ ಇಲ್ಲ. ಸ್ನಾನಕ್ಕೂ ಹೋಗುವಂತಿಲ್ಲ. ಪೀಹೂವನ್ನು ಕೆಳಗಿಳಿಸುವಂತೆಯೇ ಇಲ್ಲ. ಸೋಮವಾರದ ರಾತ್ರಿಯೂ ಪೀಹೂ ಎದೆಯ ಮೇಲೆಯೇ ವಿರಮಿಸಿತು. ನಾನು ಎಚ್ಚರಿದ್ದು ಕಾದೆ. ಮಂಗಳವಾರದ ಸಂಜೆಯ ತನಕವೂ ಇದೇ ಮುಂದುವರೆಯಿತು. ಹೇಳಬೇಕೆಂದರೆ ಪೀಹೂ ಸ್ವಲ್ಪ ಭಯ ಬಿಟ್ಟಿತ್ತು. ನನ್ನ ಅಂಗೈ ಮೇಲೆ ಆರಾಮ ನಿದ್ರಿಸುತ್ತಿತ್ತು. ನಡು ನಡುವೆ ಎಲ್ಲೋ ಒಂದು ಸಲ ಮತ್ತೆ ಭಯಗೊಳ್ಳುತ್ತಿತ್ತು. ಮತ್ತೆ ನಾನಿರುವ ಧೈರ್ಯದಲ್ಲಿ ಸರಿಯಾಗುತ್ತಿತ್ತು.

ಮಂಗಳವಾರದ ಸಂಜೆ ಕತ್ತಲಾವರಿಸಿದ ಮೇಲೆ ಪೀಹೂಗೆ ನನ್ನ ಮಡಿಲಲ್ಲೇ ಗಾಢ ನಿದ್ದೆ. ನಾನು ಒಂದು ಟೀಯನ್ನಾದರೂ ಕುಡಿಯದಿದ್ದರೆ ಉಳಿಗಾಲವಿಲ್ಲ ಅನಿಸಿ ಮೆಲ್ಲನೆ ಪೀಹೂವನ್ನು ಅದರ ಗೂಡಿನಲ್ಲಿ ಕೂರಿಸಿದೆ. ಸುಮಾರು ಹೊತ್ತು ನನ್ನ ಕೈಯನ್ನು ಅದರ ಮೇಲೆ ಮುಚ್ಚಿ ಹಿಡಿದುಕೊಂಡೇ ಇದ್ದೆ. ನಂತರ ನಿಧಾನವಾಗಿ ಕೈಯನ್ನು ಅಲ್ಲಿಂದ ತೆಗೆದು ಲೈಟ್ ಆಫ್ ಮಾಡಿ ಪೀಹೂಗೆ ಎಚ್ಚರವಾಗಲಿಲ್ಲವಲ್ಲಾ ಎಂದು ನೋಡುತ್ತಿದ್ದು ಭರವಸೆ ಮೂಡಿದ ಮೇಲೆ ಅಡುಗೆ ಮನೆಗೆ ಹೋಗಲೆಂದು ಬೆನ್ನು ತಿರುಗಿಸಿದವಳೇ ಯಾಕೋ ಮತ್ತೊಮ್ಮೆ ಪೀಹೂವಿನ ಕಡೆ ಹೊರಳಿದೆ. ಪೀಹೂ ಎಚ್ಚರವಾಗಿ ರೆಕ್ಕೆಯಗಲಿಸಿ ಪಟಪಟ ಬಡಿದು ನನ್ನತ್ತ ಹಾರಲೆತ್ನಿಸಿತು. ಕೂಡಲೇ ಪೀಹೂವನ್ನು ಬಾಚಿ ಎತ್ತಿಕೊಂಡೆ.

ಅಷ್ಟರಲ್ಲಾಗಲೇ ಅದು ನಾನು ಬಿಟ್ಟುಹೋಗುತ್ತೇನೆಂದು ಹೆದರಿ ಪ್ರಜ್ಞೆ ತಪ್ಪಿಬಿಟ್ಟಿತು! ನನಗೆ ಮುಗಿಲೇ ಕಳಚಿಬಿದ್ದಂತಾಯ್ತು. ಪೀಹೂ.. ಎಂದು ಗಟ್ಟಿ ಕರೆಯುತ್ತ ನೀರು ಕುಡಿಸಿದೆ, ಗಾಳಿ ಹಾಕಿದೆ. ಏನೇನು ಮಾಡಿದೆನೋ ನನಗೇ ತಿಳಿಯದು. ಕೂಡಲೇ ಒಂದು ಉಪಾಯ ಹೊಳೆಯಿತು. ಮೊಬೈಲ್ ಫೋನನ್ನು ತಡಕಾಡತೊಡಗಿದೆ. ಕೈ ಓಡುತ್ತಲೇ ಇಲ್ಲ. ಯಾವ ಲಿಂಕುಗಳೂ ತೆರೆಯುತ್ತಿಲ್ಲ. ಅಥವ ಅದು ತೆರೆಯುವಷ್ಟು ಸಮಯ ಕೊಡುವ ಸಹನೆ ನನಗಿಲ್ಲ. ಕೂಡಲೇ ಯಾರಿಗೋ ಕರೆ ಮಾಡಿದೆ. ಈ ಕೂಡಲೇ ಬುಲ್ ಬುಲ್ ಹಕ್ಕಿಗಳ ಯೂಟೂಬ್ ಲಿಂಕ್ ಕೊಡಿ ಎಂದು. ಕ್ಷಣದಲ್ಲಿ ಲಿಂಕ್ ಬಂದವು. ಒಂದೊಂದನ್ನೇ ಒತ್ತುತ್ತಾ ಪೀಹೂವಿನ ಕಿವಿಯ ಬಳಿ ಹಿಡಿದೆ. ಬುಲ್ ಬುಲ್ ಹಕ್ಕಿಗಳು ಹಿಂಡು ಹಿಂಡಾಗಿ ಕೂಗುತ್ತಿದ್ದ ದನಿ ಕೇಳಿದ್ದೇ ಪ್ರಜ್ಞೆಯಿಲ್ಲದ ಬುಲ್ ಬುಲ್ ಮೆಲ್ಲ ತಲೆಯೆತ್ತಿತು. ಕಣ್ಣು ಹೊರಳಿಸಿತು.

ಒಮ್ಮೆ ಪೀಯಾ ಮಾಡಿತು. ನೀರು ಕುಡಿಸಿದೆ ಚೂರು ಕುಡಿಯಿತು. ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ಚೂರು ಗೆಲುವಾಗಿ ಪಿಂಕ್ ಪಿಂಕ್ ಎಂದು ಉಲಿಯತೊಡಗಿತು. ನನಗೂ ಜೀವ ಬಂದಿತು. ಈಗ ಅದು ನೆಲವನ್ನು ನೋಡಿ ಭಯಪಡುತ್ತಿರಲಿಲ್ಲ. ಕಾಲುಗಳನ್ನು ಬಿಗಿಯಾಗಿ ಹಿಡಿದಿರಲಿಲ್ಲ. ಇನ್ನು ಎಲ್ಲವೂ ಸರಿಯಾಗುತ್ತದೆ ಎಂದು ನಿಟ್ಟಿಸಿರಿಟ್ಟೆ. ಆದರೆ ಕಹಿ ಸತ್ಯ ಬೇರೆಯದೇ ಇತ್ತು. ಪೀಹೂವಿನ ಕಾಲುಗಳೆರಡೂ ಮೆದುಳಿನ ಯಾವ ಸಂದೇಶಗಳಿಗೂ ಸ್ಪಂದಿಸುತ್ತಿರಲಿಲ್ಲ. ದೇಹದ ತಳಭಾಗ ಕೋಮಾಕ್ಕೆ ಹೋಗಿತ್ತು. ಮುಂದೆ ಘೋರ ದಿನಗಳನ್ನದು ಎದುರಿಸಬೇಕಿತ್ತು. ನಾನೂ ಕೂಡ.

ಅದು ಮೊದಲಿನಂತೆದ್ದು ನಿಲ್ಲಲು, ಹಾರಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿತ್ತು. ನಾನು ಕಾಲುಗಳಿಗೆ ಮೆಲ್ಲನೆ ಫಿಜಿಯೋ ತೆರಫಿ ಮಾಡುತ್ತಿದ್ದೆ. ಪಾರ್ಕಿಗೆ ಕರೆದೊಯ್ಯುತ್ತಿದ್ದೆ. ಇಡೀ ದಿನವೂ ಒಂದು ಕ್ಷಣ ಕೂಡ ಅದರಿಂದ ದೂರವಿರದೆ ಜತನದಿಂದ ನೋಡಿಕೊಳ್ಳುತ್ತಿದ್ದೆ. ಇದರ ನಡುವೆ ಬಾಳೆಬರೆ ಘಾಟಿಗೆ ಹೋಗಿ ಚಿನ್ನುವನ್ನು ಕಾಡಿಗೆ ಬಿಟ್ಟುಬಂದೆ. ಪೀಹೂ ಕೂಡ ಆ ಪ್ರಕೃತಿಯನ್ನು ಆಸಕ್ತಿಯಿಂದ ನೋಡುತ್ತಿತ್ತು. ಕಾಲುಗಳು ಬಲ ಕಳೆದುಕೊಂಡಿದ್ದವೆನ್ನುವುದನ್ನು ಬಿಟ್ಟರೆ ಬಾಕಿ ಪೀಹೂ ಮೊದಲಿನಂತೆಯೇ ಚುರುಕಾಗಿತ್ತು. ಆದರೆ ದಿನೇ ದಿನೇ ಅದರ ಹಾರುವ ಹಂಬಲ ಬಲಿಯುತ್ತಲೇ ಹೋಯ್ತು. ಹಾರಲು ಅದು ನಡೆಸುತ್ತಿದ್ದ ಕಸರತ್ತು ಅಷ್ಟಿಷ್ಟಲ್ಲ. ಈ ನಡುವೆ ವೈದ್ಯರನ್ನೂ ಮೂರ್ನಾಲ್ಕು ಸಲ ಕರೆಸಿದ್ದಾಯ್ತು. ಅವರಿಗೆ ನನಗೆ ಗೊತ್ತಿರುವಷ್ಟೂ ಮಾಹಿತಿಯಿಲ್ಲ!

ಪ್ರತಿರಾತ್ರಿ ನನ್ನ ಎದೆ, ಅಂಗೈಯ ಮೇಲೆಯೇ ನಿದ್ದೆ ಮಾಡುತ್ತಿದ್ದ ಪೀಹೂ ನಡು ರಾತ್ರಿ ಎಚ್ಚರವಾಗಿ ನನ್ನ ಅಂಗೈ ಅಥವ ಎದೆಯ ಮೇಲೆ ಕಾಲನ್ನು ಪುಷ್ ಮಾಡಿ, ರೆಕ್ಕೆಯಗಲಿಸಿ ಮೇಲಕ್ಕೆ ಚಿಮ್ಮಿ ಹಾರುವ ಯತ್ನ ನಡೆಸುತ್ತಿತ್ತು. ಮಂದ ದೀಪದ ಬೆಳಕಲ್ಲಿ ಕಿನ್ನರಿಯೊಬ್ಬಳು ಬ್ಯಾಲೆ ನೃತ್ಯ ಮಾಡುತ್ತಿರುವಂತೆ ಕಾಣುತ್ತಿತ್ತು. ನನ್ನ ಕಣ್ಣಲ್ಲಿ ಧಾರೆ ಧಾರೆ ನೀರು ಹರಿಯುತ್ತಿತ್ತು. ನನಗೆ ಹಗಲು ರಾತ್ರಿ ಊಟ ತಿಂಡಿಗಳ ಪರಿವೆಯಿರಲಿಲ್ಲ. ನಾನು ಸಂಪೂರ್ಣ ಪೀಹೂವಿನ ಜೊತೆ ಕಳೆದುಹೋಗಿದ್ದೆ. ಅದರ ಕಾಲುಗಳನ್ನು ನೀವುತ್ತಾ ನೀವುತ್ತಾ ನನ್ನ ಇರುಳುಗಳು ಜಾರುತ್ತಿದ್ದವು.

ಬರಬರುತ್ತಾ ಪೀಹೂವಿಗೆ ತನ್ನ ಮರಗಟ್ಟಿದ ಕಾಲುಗಳ ಮೇಲೆ ಕೆಟ್ಟ ಕೋಪ ಬರುತ್ತಿತ್ತು. ಅಥವಾ ಅದರ ಬೆರಳುಗಳಲ್ಲಿ ನೋವಿದ್ದಿರಬಹುದು ಅಥವಾ ಅವು ಒಣಗಿದಂತಾಗಿ ತನ್ನದಲ್ಲದ ಭಾಗ ಅನಿಸುತ್ತಿದ್ದಿರಬಹುದು. ಆದ್ದರಿಂದ ತನ್ನ ಕೊಕ್ಕಿನಿಂದ ರಕ್ತ ಚಿಮ್ಮುವಂತೆ ಬೆರಳುಗಳನ್ನು ಕೊಕ್ಕಿನಿಂದ ಕುಕ್ಕಿ ಕುಕ್ಕಿ ಕೀಳುತ್ತಿತ್ತು. ಅದಕ್ಕೇ ಪ್ರತಿ ದಿನ ಕಾಲಿಗೆ ಪ್ಲಾಸ್ಟರ್ ಸುತ್ತತೊಡಗಿದೆ.

ಕೊಕ್ಕೆಯಾದ ಕಾಲುಬೆರಳುಗಳನ್ನು ಸರಿಯಾಗಿ ಬಿಡಿಸಿ ಸಣ್ಣ ಸಣ್ಣ ಕಡ್ಡಿ ಕೋಲು ಮುಂತಾದ ವಸ್ತುಗಳನ್ನು ಹಿಡಿಸುವುದು, ಪುಟ್ಟ ಕಡ್ಡಿಗಳ ಮೇಲೆ ಬೆರಳು ಬಿಡಿಸಿ ಕೂರಿಸಲು ಯತ್ನಿಸುವುದು, ಹೀಗೆಯೇ ಮಾಡಿದ್ದಲ್ಲದೆ ಅದಕ್ಕೊಂದು ತೊಟ್ಟಿಲನ್ನೂ ಮಾಡಿದೆ. ಈ ತೊಟ್ಟಿಲಲ್ಲಿ ಅದು ಕಡ್ಡಿಯ ಮೇಲಿಂದ ಜಾರಿದರೂ ಮೆತ್ತನ್ನ ಸ್ಪಂಜಿನ ಮೇಲೆ ಬೀಳುತ್ತಿದ್ದುದರಿಂದ ಪೆಟ್ಟಾಗದೆ ಅದು ಮತ್ತೆ ಮತ್ತೆ ಮೇಲೆದ್ದು ಕೂರಲು ಪ್ರಯತ್ನಿಸುತ್ತಿತ್ತು. ದಿನೇ ದಿನೇ ನನ್ನ ಭರವಸೆ ಹೆಚ್ಚುತ್ತಿತ್ತು. ಪಾರ್ಕಿನಲ್ಲಿ ಅದು ಸಾಕಷ್ಟು ಹಾರುತ್ತಿತ್ತು. ಆದರೆ ಮೇಲಕ್ಕೆ ಹಾರಿದ ಪೀಹೂಗೆ ಕೆಳಕ್ಕೆ ಇಳಿಯುವಾದ ಕಾಲು ಊರಿ ಕೂರಲು ಆಗುತ್ತಿರಲಿಲ್ಲವಾದ್ದರಿಂದ ಅದು ಮಗ್ಗುಲಾಗಿ ಉರುಳುತ್ತಿತ್ತು. ಈಗದಕ್ಕೆ ರಸ್ತೆಯಲ್ಲಿ ಓಡಾಡುವವರು ಮಕ್ಕಳು ಹಕ್ಕಿಗಳು ನಾಯಿ ಬೆಕ್ಕುಗಳೆಲ್ಲ ಪರಿಚಯ ಆಗಿಬಿಟ್ಟಿದ್ದವು. ಎಲ್ಲರನ್ನೂ ತನ್ನ ಸವಿಗೊರಳಿನಿಂದ ಕೂಗಿ ಕೂಗಿ ಕರೆದು ಮಾತಾಡಿಸುತ್ತಿತ್ತು. ಹೋಗುತ್ತಿರುವವರು ನಿಂತು ಮಾತಾಡಿಸಿ ಹೋಗಬೇಕು ಹಾಗೆ!

ಆ ದಿನ ಪೀಹೂ ತುಂಬ ಹಾರಾಟ ನಡೆಸಿತು. ನಾನು ಮೆತ್ತನೆ ಹಾಸಿಗೆ ಹಾಸಿ ಅದರ ಮೇಲೆ ಬಿಟ್ಟು ಅದು ಬೀಳದಂತೆ ಆದರಿಸುತ್ತಿದ್ದೆ. ಪೀಹೂ ಹಾರಿ ಬಂದು ನನ್ನ ಮೇಲೆ ಕೂರುವುದು ಮಾಡತೊಡಗಿತ್ತು! ನನಗಾದಿನ ಆದ ಖುಷಿ ಅಷ್ಟಿಷ್ಟಲ್ಲ. ಇನ್ನೇನು ವಾರದಲ್ಲಿ ಅದು ಮೊದಲಿನಂತಾಗಬಹುದು ಎಂದುಕೊಂಡೆ. ನನ್ನ ಪೀಹೂವನ್ನು ಮುದ್ದಿಸಿಯೇ ಮುದ್ದಿಸಿದೆ. ಕಿಟಕಿಯಲ್ಲಿ ಕೂತು ನೋಡುವ ಬೆಕ್ಕುಗಳನ್ನೆಲ್ಲ ಪೀಹೂ ಮಾತಾಡಿಸುತ್ತಿತ್ತು. ನನ್ನ ಕೆನ್ನೆ ಕಣ್ಣು ಮೂಗು ಎಲ್ಲವನ್ನೂ ಕುಕ್ಕುತ್ತಿತ್ತು. ನನ್ನ ತಲೆಗೂದಲಲ್ಲಿ ಕೊಕ್ಕು ಹಾಕಿ ಆಡುತ್ತಿತ್ತು. ನನ್ನ ಖುಷಿಗೂ ರೆಕ್ಕೆ ಪುಕ್ಕ ಮೂಡಿದ ದಿನವದು. ಆದರೆ ಆ ದಿನವೇ ಅದರ ಖುಷಿಯ ಕೊನೆ ದಿನವಾಗಿತ್ತು. ಮರು ಬೆಳಗು ಆಗುವಷ್ಟರಲ್ಲಿ ಸಾವು ನನ್ನ ಪೀಹೂವನ್ನು ಅನ್ಯಾಯವಾಗಿ ಎಳೆದೊಯ್ದಿತು. ಇನ್ನಿಲ್ಲದ ತಬ್ಬಲಿತನವನ್ನು ಉಳಿಸಿ ಅಥವ ಮೂರು ದಿನಗಳ ಸಂತೋಷಕ್ಕಾಗಿ ಘೋರ ನರಕದ ಬದುಕನ್ನೆ ಕಳೆಯಬೇಕಾಗಿ ಬರಬಹುದೆಂಬ ಮುನ್ಸೂಚನೆಯನ್ನು ಅದು ಕೊಟ್ಟುಹೋಯಿತೋ ನಾನರಿಯೆ. ಮುಂದೆಂದಾದರೂ ಮತ್ತೊಂದು ಹಕ್ಕಿ ನನ್ನ ಮಡಿಲು ತುಂಬಬಹುದು, ಶಾಪವಿಮೋಚನೆಯಾಗಬಹುದು ಎಂದು ಕಾದಿದ್ದೇನೆ.

—-

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

 

 

Share

Leave a comment

Your email address will not be published. Required fields are marked *

Recent Posts More

 • 7 hours ago No comment

  ಪಯಣ

  ಕವಿಸಾಲು     ದೋಣಿ ಸಾಗಿದೆ ಮೆಲು ಅಲೆಗಳ ಮೇಲೆ, ಒಮ್ಮೆಮ್ಮೆ ಅಪ್ಪಳಿಸುವ ರಭಸವೂ ಇದೆ ಅಡಿಯಲ್ಲಿನ ನೀರಿಗೆ ದೋಣಿಯಲಿ ಕೂತವರು ಹುಡುಕುತ್ತಿದ್ದಾರೆ ಅರ್ಥಗವಿಯ ಬೆಳ್ಳಿ ಬೆಳಕೊಂದು ಕಂಡಿತೆಂದ ಪಿಸುನುಡಿಯ ಛಾಯೆ ಮಂಡಲವಾಗಿದೆ ಅತ್ತಿತ್ತ ಹೊರಳುವ ದೋಣಿಗೆ ಬಲು ತ್ರಾಸ, ಆಸೆಗಿಲ್ಲ ಆಯಾಸ ಕ್ಷಣಗೋಚರಿಸಿ ಗೆರೆಯಾದ ನೆರಳಾದ ಬೆಳ್ಳಿಗೆರೆ ಬೆಳಕು ಹೌದೋ ಅಲ್ಲವೋ ಅರಿಯದ ಸತ್ಯಕ್ಕೆ ಹುಡುಕಾಟ ಮಂಡಲಪೂರ್ತಿ ಎಳೆದ ಗೆರೆಗಳು ಚುಕ್ಕೆಯ ಅನುಸರಣೆಯಲ್ಲಿಲ್ಲ ಬೆಳ್ಳಿಗೆರೆ ಇರಬಹುದೋ, ಅರ್ಥಗುಹೆಯ ...

 • 9 hours ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ಗಂಗೆಯ ಒಡಲಲ್ಲಿ, ಕಾಳಿಯ ಮಡಿಲಲ್ಲಿ

    ಪ್ರವಾಸಿ ಸವಿತಾ ಕಂಡ ಇಂಡಿಯಾ       ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ...

 • 1 day ago No comment

  ‘ಸನ್ಯಾಸ’ ಕಾಲದಲ್ಲಿ ಗೆಲ್ಲಬಲ್ಲರೆ ಸಿನ್ಹಾ?

  ಪಕ್ಷ ತೊರೆಯುವುದಿಲ್ಲ ಎಂದೇ ಹೇಳುತ್ತಿದ್ದ ಸಿನ್ಹಾ, ಕಳೆದ ಫೆಬ್ರವರಿಯಲ್ಲಿ ಇಂಥದೊಂದು ನಿರ್ಧಾರದ ಸುಳಿವು ಕೊಟ್ಟಿದ್ದೂ ಇತ್ತು. ಈಗ ಅವರು ಹೊರಬಂದದ್ದೂ ಆಗಿದೆ. ಪಕ್ಷದೊಳಗೆ ಮೋದಿ ಪಾಳೆಯವನ್ನು ಕೆಣಕುವವರು ಸದ್ಯಕ್ಕಂತೂ ಯಾರೂ ಇದ್ದಂತಿಲ್ಲ.   ಬಿಜೆಪಿಯೊಳಗೆ ಮೋದಿ ವಿರುದ್ಧದ ಪ್ರಬಲ ಅಸ್ತ್ರದಂತಿದ್ದ ಹಿರಿಯ ನಾಯಕ ಯಶವಂತ್ ಸಿನ್ಹಾ ಕಡೆಗೂ ಶನಿವಾರ (ಏಪ್ರಿಲ್ 21) ಪಕ್ಷ ತೊರೆದಿದ್ದಾರೆ. ತಮ್ಮ ನಿರ್ಧಾರವನ್ನು ಸಿನ್ಹಾ ಪ್ರಕಟಿಸಿರುವ ವೇದಿಕೆಯೂ ರಾಜಕೀಯವಾಗಿ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಬಿಹಾರದ ಪಾಟ್ನಾದಲ್ಲಿ ...

 • 1 day ago No comment

  ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಏಕೆ ಬೇಡ?

  ನಾವಿರುವ ಹೆಚ್ಚು ಧೃವೀಕೃತ ಮತ್ತು ಕೋಮುವಾದೀಕೃತ ಸನ್ನಿವೇಶದಲ್ಲಿ, ಅತ್ಯಾಚಾರದಂಥ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪಡೆವ ಅತಿ ಭಯಾನಕ ಮತ್ತು ವಿಧ್ವಂಸಕ ಸ್ವರೂಪಗಳ ಕಟು ವಾಸ್ತವವನ್ನು ಊಹಿಸಬೇಕು. ಇದು ದ್ವೇಷ ಅಥವಾ ‘ನಮಗೆ ಮತ್ತು ಅವರಿಗೆ’ ಎಂಬಂಥ ಸಾಮಾಜಿಕ ಪಕ್ಷಪಾತ ಮತ್ತು ಪೂರ್ವಾಗ್ರಹ ಸ್ವಭಾವದೊಂದಿಗೆ ತಳುಕು ಹಾಕಿಕೊಳ್ಳುತ್ತದೆ.   ಅತ್ಯಾಚಾರ ಪ್ರಕರಣಗಳು ನಮ್ಮ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಅತ್ಯಾಚಾರಿಗಳು ಮಾತ್ರ ಯಾವ ಭೀತಿಯೂ ಇಲ್ಲದೆ ಮತ್ತೆ ಮತ್ತೆ ಅದೇ ಪಾತಕದಲ್ಲಿ ...

 • 1 day ago No comment

  ಪ್ರಶ್ನೆಗಳಿಗೆ ಎಡೆಮಾಡಿದ ಸ್ವಾತಿ ಮಾಲಿವಾಲ್ ಉಪವಾಸ ಸತ್ಯಾಗ್ರಹ

  ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನಿಗೆ ಒತ್ತಾಯಿಸಿ ಉಪವಾಸದಲ್ಲಿರುವ ಸ್ವಾತಿಯವರ ಪ್ರಾಮಾಣಿಕತೆ ಏನೇ ಇದ್ದರೂ, ಅವರ ರಾಜಕೀಯ ಹಿನ್ನೆಲೆ ಅವರ ಉದ್ದೇಶದ ನಿಸ್ಪೃಹತೆಯನ್ನು ಮಸುಕುಗೊಳಿಸದೇ ಇರಲು ಸಾಧ್ಯವೇ ಇಲ್ಲ. ಅವರ ಉಪವಾಸಕ್ಕೆ ರಾಜಕೀಯ ಬಣ್ಣ ಬಂದುಬಿಡುವುದೂ ಅಷ್ಟೇ ಸಹಜ. ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟು ವರ್ಷದ ಹಸುಳೆ ದಾರುಣ ಸಾವು ಕಂಡ ಬಳಿಕ ದೇಶವೇ ನಡುಗಿಹೋಗಿದ್ದರೂ ಸರ್ಕಾರ ಮಾತ್ರ ಮೌನವಾಗಿ ಕೂತಿದ್ದುದಕ್ಕೆ ವ್ಯಾಪಕ ಟೀಕೆಗಳ ಅಲೆಯೇ ಎದ್ದಿತು. ಆದರೆ ಸರ್ಕಾರದ ...


Editor's Wall

 • 21 April 2018
  1 day ago No comment

  ‘ಸನ್ಯಾಸ’ ಕಾಲದಲ್ಲಿ ಗೆಲ್ಲಬಲ್ಲರೆ ಸಿನ್ಹಾ?

  ಪಕ್ಷ ತೊರೆಯುವುದಿಲ್ಲ ಎಂದೇ ಹೇಳುತ್ತಿದ್ದ ಸಿನ್ಹಾ, ಕಳೆದ ಫೆಬ್ರವರಿಯಲ್ಲಿ ಇಂಥದೊಂದು ನಿರ್ಧಾರದ ಸುಳಿವು ಕೊಟ್ಟಿದ್ದೂ ಇತ್ತು. ಈಗ ಅವರು ಹೊರಬಂದದ್ದೂ ಆಗಿದೆ. ಪಕ್ಷದೊಳಗೆ ಮೋದಿ ಪಾಳೆಯವನ್ನು ಕೆಣಕುವವರು ಸದ್ಯಕ್ಕಂತೂ ಯಾರೂ ಇದ್ದಂತಿಲ್ಲ.   ಬಿಜೆಪಿಯೊಳಗೆ ಮೋದಿ ವಿರುದ್ಧದ ಪ್ರಬಲ ಅಸ್ತ್ರದಂತಿದ್ದ ಹಿರಿಯ ನಾಯಕ ಯಶವಂತ್ ಸಿನ್ಹಾ ಕಡೆಗೂ ಶನಿವಾರ (ಏಪ್ರಿಲ್ 21) ಪಕ್ಷ ತೊರೆದಿದ್ದಾರೆ. ತಮ್ಮ ನಿರ್ಧಾರವನ್ನು ಸಿನ್ಹಾ ಪ್ರಕಟಿಸಿರುವ ವೇದಿಕೆಯೂ ರಾಜಕೀಯವಾಗಿ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಬಿಹಾರದ ಪಾಟ್ನಾದಲ್ಲಿ ...

 • 21 April 2018
  1 day ago No comment

  ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಏಕೆ ಬೇಡ?

  ನಾವಿರುವ ಹೆಚ್ಚು ಧೃವೀಕೃತ ಮತ್ತು ಕೋಮುವಾದೀಕೃತ ಸನ್ನಿವೇಶದಲ್ಲಿ, ಅತ್ಯಾಚಾರದಂಥ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪಡೆವ ಅತಿ ಭಯಾನಕ ಮತ್ತು ವಿಧ್ವಂಸಕ ಸ್ವರೂಪಗಳ ಕಟು ವಾಸ್ತವವನ್ನು ಊಹಿಸಬೇಕು. ಇದು ದ್ವೇಷ ಅಥವಾ ‘ನಮಗೆ ಮತ್ತು ಅವರಿಗೆ’ ಎಂಬಂಥ ಸಾಮಾಜಿಕ ಪಕ್ಷಪಾತ ಮತ್ತು ಪೂರ್ವಾಗ್ರಹ ಸ್ವಭಾವದೊಂದಿಗೆ ತಳುಕು ಹಾಕಿಕೊಳ್ಳುತ್ತದೆ.   ಅತ್ಯಾಚಾರ ಪ್ರಕರಣಗಳು ನಮ್ಮ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಅತ್ಯಾಚಾರಿಗಳು ಮಾತ್ರ ಯಾವ ಭೀತಿಯೂ ಇಲ್ಲದೆ ಮತ್ತೆ ಮತ್ತೆ ಅದೇ ಪಾತಕದಲ್ಲಿ ...

 • 18 April 2018
  5 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 18 April 2018
  5 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 17 April 2018
  5 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...