Share

ಎಲ್ಲರಿಗೂ ಗೊತ್ತು; ಯಾರಿಗೂ ಗೊತ್ತಿಲ್ಲ
ಸಂಪಾದಕ

ಒಂದು ಸಂಗತಿ ಹೇಳುವೆ.

ಕಳೆದ ಐದು ವರ್ಷಗಳಿಂದ ಒಂದು ಸಂಬಂಧದಲ್ಲಿರುವ ಯುವತಿಯೊಬ್ಬಳು ಮೂರು ವರ್ಷದ ಹಿಂದೆ ತನ್ನ ಬದುಕಿನಲ್ಲಿ ಬಂದ ಮತ್ತೊಬ್ಬನ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ.

ಆ ಶನಿವಾರ ರಾತ್ರಿ ಪಾರ್ಟಿಯಲ್ಲಿದ್ದ ಅವಳಿಗೆ ಅದ್ಯಾರೋ ತನ್ನತ್ತಲೇ ಆಸೆ ತುಂಬಿಕೊಂಡು ನೋಡುತ್ತಿರುವಂತೆ ಅನ್ನಿಸುತ್ತದೆ. ಹೌದೊ ಅಲ್ಲವೊ ಎಂಬಂತಿದ್ದ ಅದನ್ನು ಖಾತ್ರಿಪಡಿಸಿಕೊಳ್ಳುವಷ್ಟರಲ್ಲಿ ಆತನೇ ಹತ್ತಿರ ಬಂದು ಪರಿಚಯಿಸಿಕೊಳ್ಳುತ್ತಾನೆ. ಸಿಕ್ಕಾಪಟ್ಟೆ ದುಡ್ಡಿರುವವನು. ತರುಣ. ಕಟ್ಟುಮಸ್ತಾಗಿರುವವನು. ಅಷ್ಟೇ ಸುಂದರ.

ಅವನೊಡನೆ ಬೆರೆತು ಕುಣಿಯಲು ಹೆಚ್ಚು ಹೊತ್ತು ಹಿಡಿಯುವುದಿಲ್ಲ. ನಡುರಾತ್ರಿಯವರೆಗೂ ಕುಣಿದ ಬಳಿಕ ಅವನನ್ನು ಕರೆದುಕೊಂಡೇ ತನ್ನ ಮನೆಗೆ ಬರುತ್ತಾಳೆ. ಆ ರಾತ್ರಿ ಅವನೊಂದಿಗೆ ಕಳೆದ ಅನುಭವ ತಾನು ಮತ್ತೆ ಮತ್ತೆ ಬಯಸುವಂಥದ್ದು ಎಂದೇ ಅವಳಿಗೆ ಅನ್ನಿಸುತ್ತದೆ.

ಅದಾಗಿ ಮೂರು ವರ್ಷಗಳು ಕಳೆದಿವೆ. ಆತನೊಂದಿಗಿನ ಸಂಬಂಧ ಅವತ್ತಿನದೇ ತೀವ್ರತೆಯೊಂದಿಗೆ ಮುಂದುವರಿದೇ ಇದೆ. ತನ್ನ ಮೊದಲ ಗೆಳೆಯನ ಜೊತೆಗೂ ಚೆನ್ನಾಗಿಯೇ ಇದ್ದಾಳೆ. ಐದು ವರ್ಷದಿಂದ ಜೊತೆಗಿರುವ ಗೆಳೆಯ ತುಂಬ ಒಳ್ಳೆಯವನು. ಸುಂದರನೂ ಹೌದು. ಅವನ ಬಗ್ಗೆ ತಕರಾರೆತ್ತುವುದಕ್ಕೆ ಅವಳ ಬಳಿ ಕಾರಣಗಳೇ ಇಲ್ಲ. ಅಂಥ ಗೆಳೆಯನ ಜೊತೆಗಿದ್ದೂ ಮತ್ತೊಬ್ಬನೊಂದಿಗೆ ದೈಹಿಕ ಸಂಬಂಧ ತಪ್ಪಲ್ಲವೇ ಎಂದು ಅವಳ ಈ ಕಥೆ ತಿಳಿದ ತಕ್ಷಣ ಹುಟ್ಟುವ ಪ್ರಶ್ನೆಯ ಬಗ್ಗೆಯೂ ಗೊತ್ತು ಅವಳಿಗೆ.

ಅವಳ ಪ್ರಕಾರ, ಇದಾವುದೂ ಅವಳು ಪಕ್ಕಾ ಯೋಜಿಸಿ ಆದದ್ದಲ್ಲ. ಅವನನ್ನು ನೋಡಿದ ತಕ್ಷಣ ಅವಳೊಳಗೊಂದು ಕಿಡಿ ಹೊತ್ತಿಕೊಂಡಿತು. ತಾನು ಈಗಾಗಲೇ ಒಬ್ಬನೊಂದಿಗೆ ಇರುವವಳು ಅನ್ನುವುದು ಆ ಘಳಿಗೆ ಒಂದು ವಿಷಯವೆನ್ನಿಸಲಿಲ್ಲ. ಅದೊಂದು ರಾತ್ರಿ ಬೇರೆಯವನೊಬ್ಬ ಬೇಕು ಅನ್ನಿಸಿಬಿಟ್ಟಿತ್ತು ಅಷ್ಟೆ.

ಬಳಿಕ ಮತ್ತಷ್ಟು ರಾತ್ರಿಗಳನ್ನು ಅವನೊಂದಿಗೆ ಕಳೆಯುತ್ತ ಬಂದಳು. ತಪ್ಪು ಎಂದೆನ್ನಿಸಲೇ ಇಲ್ಲ.

ಗೆಳೆಯನನ್ನು ತುಂಬ ಪ್ರೀತಿಸುವ ಅವಳಿಗೆ, ಅವನನ್ನು ಇನ್ನಾರೊಂದಿಗೋ ಹೋಲಿಸಿ ನೋಡುವ ಉದ್ದೇಶವಿಲ್ಲ. ಅವನು ಅವನೇ ಎಂಬುದರ ಬಗ್ಗೆ ಅವಳೊಳಗೆ ನಿಖರತೆಯಿದೆ. ಆದರೆ ಆ ಮತ್ತೊಬ್ಬನ ಬಗ್ಗೆ ಮನಸ್ಸು ತುಡಿಯುವಾಗ ಆಕೆ ಅಸಹಾಯಕಳು. ಹಾಸಿಗೆಯಲ್ಲಿ ಮಾತ್ರವಲ್ಲ, ಅದರಾಚೆಗೂ ಅವನು ತಾನು ನಿಜವಾಗಿಯೂ ಬಯಸುವ ಗಂಡಸು ಎನ್ನಿಸಿದೆ. ಪ್ರತಿ ಸಲವೂ ಅವನೆಡೆಗಿನ ತುಡಿತ ಒಂದು ಧಾವಂತದಂತಿರುತ್ತದೆ.

ಗೆಳೆಯನ ಜೊತೆಗಿನ ಸಹವಾಸ ಯಥಾ ಪ್ರಕಾರದ್ದು ಅನ್ನಿಸುವಾಗೆಲ್ಲ ಒಂದು ಬದಲಾವಣೆಗಾಗಿ ಆ ಮತ್ತೊಬ್ಬನ ಕಡೆಗೆ ಓಡುತ್ತಾಳೆ. ಅವನು ತನ್ನೊಂದಿಗಿದ್ದಾನೆಂಬುದು – ಅದು ಆ ಘಳಿಗೆಗಷ್ಟೇ ಸೀಮಿತವಾಗಿದ್ದರೂ, ಅವಳೊಳಗೆ ಹೊಸ ಉತ್ಸಾಹ ತುಂಬುತ್ತದೆ; ಗೆಳೆಯನೊಟ್ಟಿಗಿನ ಬದುಕನ್ನೂ ಉಲ್ಲಸಿತಗೊಳಿಸುತ್ತದೆ. ವಾರದ ಕಡೆಯಲ್ಲೊಂದು ದಿನ ಆ ಮತ್ತೊಬ್ಬನಿಲ್ಲದೇ ಹೋದರೆ ತನಗೆ ಬದುಕೇ ಇಲ್ಲ ಅನ್ನಿಸುವಷ್ಟು ಅವಳು ಆ ಇನ್ನೊಂದು ಸಂಬಂಧದ ವಶವಾಗಿದ್ದಾಳೆ.

ಆ ಮತ್ತೊಬ್ಬನ ಜೊತೆ ವಾರದಲ್ಲೊಮ್ಮೆ ಮಾತ್ರವೇ ಕಳೆಯುವ ನಿಯಮ ಹಾಕಿಕೊಂಡಿರುವ ಅವಳಿಗೆ, ಅದು ತಾನು ತನ್ನ ಗೆಳೆಯನಿಗೆ ಮಾಡುತ್ತಿರುವ ವಂಚನೆಯಲ್ಲ ಎಂದೇ ನಂಬಿಕೆ. ಗೆಳೆಯನೊಂದಿಗಿನ ಸಂಬಂಧ ಸಾಕು ಎನ್ನಿಸದಿರಲು ಮತ್ತು ಅದರಿಂದ ಹೊರಬರುವ ಯೋಚನೆ ಮಾಡದಿರಲು ಆ ಮತ್ತೊಬ್ಬನ ಜೊತೆಗಿನ ಸಂಬಂಧವೇ ಆಸರೆ ಎಂದುಕೊಂಡಿದ್ದಾಳೆ.

ಬದುಕಿನ ಏಕತಾನತೆಯನ್ನು ಮುರಿದು ಖುಷಿ ಕೊಡುವ ಆ ಸಂಬಂಧದ ಬಗ್ಗೆ ಅಪರಾಧಿ ಭಾವನೆಯ ಅಗತ್ಯವಿದೆಯೇ ಎಂಬುದು ಅವಳ ಮನಸ್ಸೊಳಗಿರುವ ಸಮರ್ಥನೆ. ಮಾತ್ರವಲ್ಲ, ತನ್ನ ಗೆಳೆಯ ಮಾಡದೇ ಇದ್ದಿರಬಹುದಾದ ಏನನ್ನಾದರೂ ತಾನು ಮಾಡಿಬಿಟ್ಟಿದ್ದೇನೆ ಎಂದೂ ಅಂದುಕೊಳ್ಳುವುದಿಲ್ಲ ಅವಳು.

ಕಳೆದೈದು ವರ್ಷಗಳಲ್ಲಿ ತನ್ನ ಗೆಳೆಯ ತನ್ನೊಬ್ಬಳನ್ನೇ ನೆಚ್ಚಿಕೊಂಡಿದ್ದಾನೆಂದು ಮುಗ್ಧೆಯಂತೆ ನಂಬುವುದೂ ಇಲ್ಲ. ವಿದೇಶ ಪ್ರವಾಸದಲ್ಲಿರುವಾಗ, ಪಾರ್ಟಿಯ ನೆಪದಲ್ಲಿ ಗೆಳೆಯರೊಡನೆ ಇಡೀ ರಾತ್ರಿ ಹೊರಗಿರುವಾಗ, ತನ್ನನ್ನು ಭೇಟಿಯಾಗುವಷ್ಟೂ ಪುರುಸೊತ್ತೇ ಇಲ್ಲದಿದ್ದಾಗ, ತಾನು ಸಿಟಿಯಿಂದ ಹೊರಗಿರುವಾಗ ಅವನು ಸುಮ್ಮನೆ ಕೂತು ತನ್ನ ಬಗ್ಗೆಯೇ ಯೋಚಿಸುತ್ತ ಕಳೆದುಬಿಡುತ್ತಾನೆಂದು ನಂಬುವ ಅಮಾಯಕಿ ಅವಳಲ್ಲ. ತನಗೆ ಅವನೊಟ್ಟಿಗೆ ಏಕತಾನತೆ ಕಾಡುವಂತೆ ಅವನಿಗೂ ತನ್ನ ವಿಚಾರದಲ್ಲಿ ಏಕತಾನತೆ ಕಾಡಿ, ಅವನೂ ಮತ್ತಾವಳಲ್ಲೋ ಅದಕ್ಕೊಂದು ಹೊರದಾರಿ ಹುಡುಕಿಕೊಂಡಿರದೇ ಇರಲಾರ ಎಂದುಕೊಳ್ಳುತ್ತಾಳೆ. ಇದಕ್ಕಿಂತ ಹೆಚ್ಚಾಗಿ, ತಾನಿಲ್ಲದಿದ್ದಾಗ ಅವನು ಹೀಗೆಲ್ಲ ಇದ್ದರೆ ಅವಳಿಗೆ ಅಭ್ಯಂತರವೇನಿಲ್ಲ ಎಂಬುದು. ತಮ್ಮಿಬ್ಬರ ಮಧ್ಯೆ ಪ್ರೇಮ ಇರುವವರೆಗೂ ನಡುವೆಯೊಮ್ಮೊಮ್ಮೆ ಬದುಕಿಗೆ ಹೊಸ ಹುರುಪು ತುಂಬುವ ಮತ್ತೊಂದು ಲೈಂಗಿಕ ಸಂಬಂಧ ತಪ್ಪಲ್ಲ ಎಂದುಕೊಳ್ಳುತ್ತಾಳೆ.

ತನ್ನ ಮತ್ತು ತನ್ನ ಗೆಳೆಯನ ನಡುವೆ ಸಂಬಂಧ ಹದಗೆಡದಿರುವಂತೆ ಕಾಯುವ ಮತ್ತೊಂದು ಸಂಬಂಧ, ಉರಿದುಹೋಗುವಷ್ಟು ತೀವ್ರತೆಯ ಆ ಒಂದು ರಾತ್ರಿಯ ಲೈಂಗಿಕ ಸುಖ ಯಾವ ಕಾರಣಕ್ಕಾದರೂ ತಪ್ಪು ಎಂಬುದು ಅವಳ ಪ್ರಶ್ನೆ.

*

ಸಂಬಂಧಗಳ ಕುರಿತ ಪರಿಕಲ್ಪನೆಗಳು ಬದಲಾಗಿರುವ ಈ ಕಾಲದಲ್ಲಿ, ಅದನ್ನು ವ್ಯಾಖ್ಯಾನಿಸಿಕೊಳ್ಳುವ ಇಂಥ ವೈಯಕ್ತಿಕ ನಿಲುವುಗಳೂ ಹಲವು. ಇಲ್ಲಿರುವುದು ನಿಜವಾಗಿಯೂ ಸಂಬಂಧವನ್ನು ಕಾಪಾಡಿಕೊಳ್ಳುವ ಶ್ರದ್ಧೆಯೊ ಅಥವಾ ತೀರಾ ದೈಹಿಕವಾದದ್ದನ್ನು ತಣಿಸಿಕೊಳ್ಳಲು ಹುಡುಕಿಕೊಳ್ಳುವ ಮರೆಯೊ?

ಗೆಳೆಯ ಗೆಳತಿಯರನ್ನು, ಗಂಡ ಹೆಂಡತಿಯರನ್ನು ಬದಲಿಸಿಕೊಂಡು ರುಚಿ ನೋಡುವ ಉನ್ನತ ಸಮಾಜದ ಸಭ್ಯಸ್ಥರ ಖಾಸಗಿ ದರ್ಬಾರುಗಳಿಗೆ ಅಷ್ಟೇ ದೊಡ್ಡ ರಕ್ಷಣೆಯ ಕವಚವೂ ಇರುತ್ತದೆ. ಅಂಥ ಯಾವ ರಕ್ಷಣೆಯೂ ಇಲ್ಲದ ತಳ ಸಮಾಜದವರ ಕಾಳಜಿಯಾಗಲಿ, ಲಾಲಸೆಯಾಗಲಿ ಬಂದು ನಿಲ್ಲುವುದು ಮಾತ್ರ ಬೀದಿಗೆ.

ದೇವಿ ಅಂತ ಒಬ್ಬಳು ಹೆಂಗಸು ಇದ್ದಳು. ಚಿಕ್ಕವರಿದ್ದಾಗ ನಮಗೆ ಕಥೆಗಳನ್ನು ಹೇಳುತ್ತಿದ್ದವಳು. ನಾನು ಕಾಲೇಜು ಓದುತ್ತಿದ್ದ ದಿನಗಳಲ್ಲಿ ಒಂದಿನ ಅವಳು ನಮ್ಮ ಮನೆಗೆ ಬಂದು ನನ್ನ ಅಪ್ಪ ಅಮ್ಮನ ಮುಂದೆ ತುಂಬಾ ಆವೇಶದಿಂದ ತನ್ನ ಮನೆಯ ಗೋಳು ಹೇಳಿಕೊಳ್ಳುತ್ತಿದ್ದಳು. ಕಳೆದ ರಾತ್ರಿ ಅವಳ ಮನೆಯಲ್ಲಿ ಜಗಳವಾಗಿತ್ತು. ಅವಳ ಮಗಳ ಗಂಡ ದೊಡ್ಡ ರಂಪ ಮಾಡಿದ್ದ. ಹೆಂಡತಿ ತನ್ನ ಬಳಿ ಮಲಗಲು ಬರಲಿಲ್ಲ ಎಂಬುದು ರಂಪದ ಕಾರಣವಾಗಿತ್ತು. ಅವಳು ಬರದಿದ್ದರೆ ಏನು, ತಾನಿರಲಿಲ್ಲವೇ ಅನ್ನೋದು ನನ್ನ ಅಪ್ಪ ಅಮ್ಮನ ಮುಂದೆ ದೇವಿ ಎತ್ತುತ್ತಿದ್ದ ಪ್ರಶ್ನೆಯಾಗಿತ್ತು. ಅವಳ ಮಾತು ಕೇಳಿಸಿಕೊಂಡು ಸುಮ್ಮನೆ ಹೂಂಗುಟ್ಟುವಂತೆ ಮಾಡಿದ ನನ್ನ ಅಪ್ಪ ಅಮ್ಮ, ಅವಳು ಹೋದ ಮೇಲೆ ಮುಸಿ ಮುಸಿ ನಗತೊಡಗಿದ್ದರು. ದೇವಿ ಎತ್ತಿದ್ದ, ನೈತಿಕತೆಯೆಂಬುದರ ದುರಹಂಕಾರವನ್ನೇ ಭಂಗಗೊಳಿಸುವಂಥ ಆ ಪ್ರಶ್ನೆಯಲ್ಲಿದ್ದದ್ದು ತೃಷೆಯಾ, ಉನ್ಮತ್ತ ಭಾವವಾ, ಅಥವಾ ಇದಾವುದೂ ಅಲ್ಲದ ಆಳದ ಸಂಕಟ ಮಾತ್ರವಾ?

ಮುಕ್ತ ಸಂಬಂಧ ಎಂಬ ಹೆಸರಿನ ಅನುಕೂಲಕರ ರಾಜಮಾರ್ಗವನ್ನು ಹುಡುಕಿಕೊಂಡಿರುವ ಇವತ್ತಿನ ಮನಃಸ್ಥಿತಿಗಳ ಇದಿರಲ್ಲಿ ದೇವಿ ಎತ್ತಿದ್ದ ಪ್ರಶ್ನೆ ಯಾಕೆ ಕಾಡುತ್ತದೆಂದರೆ, ನೈತಿಕತೆಯನ್ನು ಸಾಬೀತುಪಡಿಸಲು ಅವಕಾಶವೇ ಇದ್ದಿರದ ಚಕ್ರವ್ಯೂಹ ಸ್ಥಿತಿಯಲ್ಲೂ ಹುಟ್ಟಿದ್ದ ಪ್ರಶ್ನೆ ಅದೆಂಬುದಕ್ಕಾಗಿ.

*

ಲೈಂಗಿಕ ಸಂಬಂಧಗಳ ಕುರಿತ ತಾಕಲಾಟಗಳು, ಕಟ್ಟುಪಾಡುಗಳೇ ಇಲ್ಲದ ತೀರಾ ಉನ್ನತ ಅಥವಾ ಶ್ರೀಮಂತ ಸಮಾಜ ಮತ್ತು ತೀರಾ ಕೆಳ ಸ್ತರದ ಸಮಾಜ ಇವೆರಡರಲ್ಲೂ ಇಲ್ಲ. ಅದೇನಿದ್ದರೂ ಮಧ್ಯಮ ವರ್ಗದ ಸಮಾಜವನ್ನು ಕಾಡುವ ಬಿಕ್ಕಟ್ಟು. ಈ ನೈತಿಕತೆ ಅನೈತಿಕತೆಯ ತಾಕಲಾಟದಲ್ಲಿ ತಮಗೆ ತಾವೇ ಹಾಕಿಕೊಂಡ ಚೌಕಟ್ಟಿನೊಳಗೆ ಚಡಪಡಿಸುವವರೂ ಇರುತ್ತಾರೆ; ಚೌಕಟ್ಟು ದಾಟಿ ಮತ್ತೊಂದಕ್ಕೆ ಹಾತೊರೆಯುವವರೂ ಇರುತ್ತಾರೆ. ಮಧ್ಯಮ ವರ್ಗದವರ ಈ ದ್ವಂದ್ವದಲ್ಲೇ ಆಗಲಿ, ಉನ್ನತ ಅಥವಾ ಕೆಳ ಸ್ತರದ ಸಮಾಜದವರಲ್ಲಿನ ಸ್ವೇಚ್ಛೆಯಲ್ಲೇ ಆಗಲಿ ಇರುವ ಒಂದು ಸಾಮಾನ್ಯ ಅಂಶವೆಂದರೆ, ಸದ್ದಿಲ್ಲದೆ ಆವರಿಸಿಕೊಳ್ಳುವ ಕ್ರೌರ್ಯ.

ಶುರುವಿನಲ್ಲಿ ನಾನು ಪ್ರಸ್ತಾಪಿಸಿದ ಉನ್ನತ ವರ್ಗದ ಯುವತಿಯ ಸಂಗತಿಯಲ್ಲಿ, ಇರುವ ಸಂಬಂಧವನ್ನು ಹಾಗೇ ಇರಲು ಬಿಟ್ಟು ಹೊರಗಡೆಯ ಸಂಬಂಧಗಳನ್ನು ಸುಖಕ್ಕೆಂದು ಹುಡುಕಿಕೊಳ್ಳುವ ಕುರಿತದ್ದರ ಸಮ್ಮತಿ ಸಂಕುಚಿತವಲ್ಲದ ಧೋರಣೆಯೆಂಬಂತೆ ಕಂಡರೂ ಅದರ ಹಿನ್ನೆಲೆಯಲ್ಲಿರುವುದು ಒಂದು ಥರದ ಕ್ರೌರ್ಯವೇ.

ನೆತ್ತರ ವಾಸನೆಯಿಲ್ಲದ ಇದೊಂದು ತೆರನಾದರೆ, ಮತ್ತೊಂದು ಸಂಬಂಧದ ಇನ್ನೂ ಅತಿರೇಕಗಳೆಂಥವು ಎಂಬುದನ್ನು ದಿನನಿತ್ಯದ ಅದೆಷ್ಟೋ ಅಪರಾಧ ವರದಿಗಳಲ್ಲಿ ನೋಡುತ್ತಲೇ ಇದ್ದೇವೆ. ಇಲ್ಲೂ ಸಂಬಂಧವನ್ನು ಉಳಿಸಿಕೊಳ್ಳುವ ನೆಪಗಳೇ ಕಡೆಗೆ ರಕ್ತದ ಕಲೆಯಂಟಿಸಿಕೊಂಡು ಸಾಯುವುದು. ಅಕ್ರಮ ಸಂಬಂಧವನ್ನು ಉಳಿಸಿಕೊಳ್ಳುವುದಕ್ಕಾಗಿ ಗಂಡನನ್ನು ಕೊಲ್ಲುವುದು, ಹೆಂಡತಿಯನ್ನು ಹೊಡೆದು ಸಾಯಿಸುವುದು, ಸುಖಕ್ಕೆ ಅಡ್ಡಿಯಾಗುತ್ತಿದೆ ಎಂದು ಹೆತ್ತ ಮಗುವನ್ನೇ ಕೊಂದುಹಾಕುವಷ್ಟು ರಕ್ಕಸತನ ತೋರುವುದು ಇವೆಲ್ಲ ತಳ ಸಮಾಜದಲ್ಲೂ ಇವೆ; ಉನ್ನತ ಸಮಾಜದಲ್ಲೂ ಇವೆ.

ಪ್ರೇಮಿಯೊಂದಿಗೆ ಸೇರಿ ಗಂಡನನ್ನು ಕೊಂದು ಸಿಕ್ಕಿಬಿದ್ದ ಬಳಿಕ ಆಂಧ್ರದ ಹೆಣ್ಣುಮಗಳೊಬ್ಬಳು, ಕೊಲ್ಲುವಾಗ ತಾನು ಆತನ ಕಾಲುಗಳನ್ನು ಮಿಸುಕಾಡುವುದಕ್ಕೇ ಆಗದ ಹಾಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದೆ ಎಂದು ನಗುನಗುತ್ತ ಮಾಧ್ಯಮಗಳ ಕೆಮರಾ ಮುಂದೆ ಹೇಳಿದ್ದಳು. ಉನ್ನತ ಸಮಾಜದ ಗಂಡು ಹೆಣ್ಣುಗಳು ಮತ್ತೊಂದು ಸಂಬಂಧಕ್ಕಾಗಿ ಹೆಂಡತಿ ಅಥವಾ ಗಂಡನನ್ನು ಕೊಲ್ಲಲು ರೂಪಿಸಿದ್ದ ತಂತ್ರಗಳು ಪೊಲೀಸರ ಮುಂದೆ ಬಯಲಾದಾಗ ಬೆಚ್ಚಿಬೀಳುವ ಹಾಗಾಗುತ್ತದೆ.

ಸಂಬಂಧವೆಂಬುದು ಕ್ರೌರ್ಯದ ಸುಳಿಯಲ್ಲಿ ಸಿಲುಕುವುದು ವಾಂಛೆಯ ಗೀಳಿನಿಂದಾಗಿ. ಅದಿಲ್ಲದೆ ಇರಲಾರೆ ಎಂಬ ಸ್ಥಿತಿ ಕರುಳ ಕುಡಿಯನ್ನೂ ಹೊಸಕಿಹಾಕುವ ಹಂತಕ್ಕೆ ಕರೆದೊಯ್ದುಬಿಡುವುದೆಂದರೆ ಎಂಥ ವಿಪರ್ಯಾಸ ನೋಡಿ. ಸಂಬಂಧ ಎಂಬುದು ಗಂಡು ಹೆಣ್ಣಿನ ನಡುವಿನ ಭಾವನಾತ್ಮಕ ಬೆಸುಗೆ ಎಂಬುದಕ್ಕಿಂತ ದೈಹಿಕವಾದುದೆಂದೇ ಅರ್ಥ ಪಡೆಯುವ ಅಥವಾ ದೈಹಿಕವಾದದ್ದು ಮಾತ್ರವಾಗುವ ಯಾವುದೇ ಕಾಲ ಮತ್ತು ಸಮಾಜದಲ್ಲಿನ ವಿಪರ್ಯಾಸ ಇದು.

ವಾಂಛೆಗೆ ಬಿದ್ದು ಹುಟ್ಟಿಕೊಂಡ ಸಂಬಂಧಗಳಲ್ಲಿ ಕಾಣಿಸುವ ಇನ್ನೂ ಒಂದು ಆಯಾಮ ಜಾತಿ ಮತ್ತು ಅಧಿಕಾರ ಬಲದ ನೆರಳಿನದ್ದು. ಇಲ್ಲಿ ತಲತಲಾಂತದಿಂದ ನಡೆದುಕೊಂಡ ಬಂದ ಲೈಂಗಿಕ ಶೋಷಣೆಯ ಮುಖವನ್ನೂ ಕಾಣುವುದು ಸಾಧ್ಯ. ಮೇಲ್ಜಾತಿಯ ಅಥವಾ ಅಧಿಕಾರಸ್ಥ ಗಂಡು ಹೆಣ್ಣುಗಳು ಕೆಳವರ್ಗದ ಇಲ್ಲವೆ ದುರ್ಬಲ ಸ್ಥಾನದಲ್ಲಿರುವ ಹೆಣ್ಣು ಗಂಡುಗಳನ್ನು ತಮ್ಮ ತೃಷೆಗೆ ಬಳಸಿಕೊಳ್ಳುವ ಮತ್ತು ತೀರಾ ವಿಷಮ ಸ್ಥಿತಿಯಲ್ಲಿ ಕೊಲ್ಲುವುದಕ್ಕೂ ಹೇಸದ ಕ್ರೌರ್ಯದ ಬೇಕಾದಷ್ಟು ಕಥೆಗಳು ನಡೆದುಹೋಗಿವೆ, ನಡೆಯುತ್ತಲೂ ಇವೆ. ಮೇಲ್ಜಾತಿಯ ಗಂಡಸೊಬ್ಬ ಹೆಣ್ಣಾಳನ್ನು ಲೈಂಗಿಕವಾಗಿ ಶೋಷಿಸುತ್ತಿದ್ದರೆ, ಅವನ ಹೆಂಡತಿಯಾದವಳು ಗಂಡಾಳಿನ ಜೊತೆ ಲೈಂಗಿಕ ಸುಖಕ್ಕಾಗಿ ಮಲಗುವ ಕರಾಳತೆ. ಕಡೆಗೆ ಮರ್ಯಾದೆ ಹೋಗುವ ಪರಿಸ್ಥಿತಿ ಬಂದರೆ ಅದಕ್ಕೆ ಬಲಿಯಾಗುವುದು ಕೆಳವರ್ಗದ ಪ್ರೇಮಿಯೇ. ದೊಡ್ಡವರಾದವರು ಏನೂ ಆಗಿಯೇ ಇಲ್ಲವೆಂಬಂತೆ ನಿರಾಳವಾಗಿ ಮೆರೆಯುತ್ತಾರೆ. ಅವರ ಕಣ್ಣು ಮತ್ತೊಂದು ಬೇಟೆಯನ್ನು ಹುಡುಕುತ್ತಿರುತ್ತದೆ.

*

ಈ ಅತಿ ತಣ್ಣಗಿನ ಕ್ರೌರ್ಯ ಏನು? ಇಲ್ಲಿ ಉಳಿವಿನ ಪ್ರಶ್ನೆಯೊಂದು ಯಾರನ್ನೋ ಕೊಲ್ಲುವುದಕ್ಕಾಗಿ ಹೊಂಚಿರುತ್ತದೆ. ಸಂಬಂಧವನ್ನು ಕಾಯುವ ಉದ್ದೇಶವೆಂಬುದು ಅಲ್ಲೆಲ್ಲೋ ಸತ್ತುಹೋಗಿರುತ್ತದೆ. ನಾವು ದುರಂತ ಎಂದು ಬಣ್ಣಿಸುವ ಈ ಕಥೆಯಲ್ಲಿ ಮತ್ತಾರದೋ ಸುಖದ ಬೇಳೆ ಬೇಯುತ್ತಿರುತ್ತದೆ.

ಇದು ಎಲ್ಲರಿಗೂ ಗೊತ್ತು; ಯಾರಿಗೂ ಗೊತ್ತಿಲ್ಲ.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 4 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 6 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  6 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  1 week ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...