Share

ನಿಸ್ವಾರ್ಥ ಸೇವಕರೆಲ್ಲ ಲೋಕನಿಂದಿತರೇ…!
ಕಾದಂಬಿನಿ

 

 

 

 

ಲಾಭ ಬಡುಕರ, ತೋರಿಕೆಗೆ ಮಾಡುವವರ ಹೆಸರುಗಳೆಲ್ಲ ಚಿನ್ನದ ಚೌಕಟ್ಟಿನಲ್ಲಿ ಬರೆಯಲ್ಪಡುವುದು ನಮ್ಮ ದೇಶದ ದೌರ್ಭಾಗ್ಯ!

 

 

 

 

ತಾಯಿ ತೆರೇಸಾ ಬಗ್ಗೆ ಹೀನಾಯವಾಗಿ ಮಾತಾಡುವಾಗ ನನಗೆ ಒಂದು ಘಟನೆ ನೆನಪಾಗುತ್ತೆ. ನನ್ನ ಊರಿನಿಂದ ಒಂದಿಪ್ಪತ್ತು ಕಿಲೋಮೀಟರು ದೂರದ ಹಳ್ಳಿಯಿಂದ ಒಬ್ಬ ಮಹಿಳೆ ನನ್ನ ಮನೆಯ ಹತ್ತಿರದ ಚರ್ಚ್ ಗೆ ಬರುತ್ತಿದ್ದರು. ಮಕ್ಕಳೂ ಇಲ್ಲದ ವಿಧವೆಯಾಗಿದ್ದ ಆಕೆಯ ಗಂಡ ಫಾರೆಸ್ಟ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಈಕೆಗೆ ಪೆನ್ಷನ್ ಬರುತ್ತಿತ್ತು. ಒಂದಷ್ಟು ಹಣವೂ ಬ್ಯಾಂಕಿನಲ್ಲಿ ಆಕೆಯ ಖಾತೆಯಲ್ಲಿ ಇತ್ತು. ಒಂಟಿಯಾಗಿ ಬದುಕುತ್ತಿದ್ದ ಆಕೆ ಗರ್ಭಕೋಶದ ಕ್ಯಾನ್ಸರ್ ಗೆ ತುತ್ತಾಗಿ ಹಾಸಿಗೆ ಹಿಡಿದುಬಿಟ್ಟ ಸಂಗತಿ ತಿಳಿಯಿತಾದರೂ ನಮ್ಮೂರಿನ ಯಾರೊಬ್ಬರೂ ಅದಕ್ಕೆ ಕಿವಿ ಅಲ್ಲಾಡಿಸಲಿಲ್ಲ.

ಆ ಊರಲ್ಲಿ ಮೂವರು ಬಡ ಹೆಂಗಸರಿದ್ದರು. ಒಬ್ಬಾಕೆ ಹಿರಿಯಳು. ಇಬ್ಬರು ಪುಟ್ಟ ಪುಟ್ಟ ಕಂದಮ್ಮಗಳ ತಾಯಂದಿರು. ಆಗೆಲ್ಲ ಯಾರ ಮನೆಯಲ್ಲಿ ಯಾವ ಕಾರ್ಯ ಇದ್ದರೂ ಈ ಮೂವರೂ ಪುಕ್ಕಟೆಯಾಗಿ ಆ ಮನೆಯ ಅಡುಗೆ ಮತ್ತಿತರ ಕೆಲಸ ಮಾಡಿ ಸುಧಾರಿಸುತ್ತಿದ್ದರು. ಯಾರಾದರೂ ಸತ್ತರೆ ಈ ಮಹಿಳೆಯರಿಗೆ ಬುಲಾವು ಬಂದಾಯಿತು. ಇವರು ರಾತ್ರಿಯಿಡೀ ಪ್ರಾರ್ಥನೆ ಮಾಡುತ್ತ ಇರುವವರಿಗೆಲ್ಲ ಗಂಜಿ ಕುಡಿಸುತ್ತ.. ಎಷ್ಟೋ ಸಲ ಮನೆ ಮಂದಿ ಇವರನ್ನು ಹೆಣದ ಮುಂದೆ ಕೂರಿಸಿ ಗಡದ್ದು ನಿದ್ದೆ ಮಾಡುತ್ತಿದ್ದುದಿತ್ತು. ಆದರೆ ಈ ಮಹಿಳೆಯರಿಗೆ ಯಾವ ಸಹಾಯಕ್ಕೂ ಅಲ್ಲಿನ ಯಾರೊಬ್ಬರೂ ಒದಗಿದ್ದಿಲ್ಲ. ಆದರೂ ನಿರ್ವಂಚನೆಯಿಂದ ಸೇವೆ ಸಲ್ಲಿಸುತ್ತಿದ್ದ ಮಹಿಳೆಯರು ಅವರು.

ಈ ಮೂವರಿಗೂ ಆ ಕ್ಯಾನ್ಸರಿಗೆ ತುತ್ತಾಗಿ ಬಿದ್ದುಕೊಂಡಿದ್ದ ಮಹಿಳೆಯ ಬಗ್ಗೆ ಕನಿಕರ ಮೂಡಿ ಪ್ರತಿದಿನ 20 ಕಿ.ಮೀ. ನಡೆದು ಹೋಗಿ ಸೇವೆ ಮಾಡಲು ಸಾಧ್ಯ ಇಲ್ಲದ್ದರಿಂದ ಒಬ್ಬರಿಗೆ ಸೇರಿದ್ದ ಖಾಲಿ ಮನೆಯಲ್ಲಿ ತಂದು ಹಾಕಲು ಒಪ್ಪಿಗೆ ಪಡೆದರು. ಒಬ್ಬರ ಗಾಡಿ ಕೇಳಿ ಪಡೆದು ಈ ಮಹಿಳೆಯ ಮನೆಗೆ ಹೋಗಿ ನೋಡುತ್ತಾರೆ ಕೊಳೆತ ರಕ್ತದ ಗಬ್ಬು ವಾಸನೆಯಲ್ಲಿ ಎಷ್ಟೋ ದಿನಗಳಿಂದ ಆಹಾರ ಔಷಧಿ ಇಲ್ಲದೆ ಕೊಳೆತುಬಿದ್ದಿದ್ದಳು. ಅಂಥವಳನ್ನು ಎಲ್ಲಿಂದಲೋ ನೀರು ಹೊತ್ತು ತಂದು ಸ್ವಚ್ಛಗೊಳಿಸಿ ಗಾಡಿಯಲ್ಲಿ ಹೇರಿಕೊಂಡು ಊರಿಗೆ ತಂದರು. ಅವರು ಅದು ಹೇಗೆ ಆ ವಾಸನೆ ತಡೆದುಕೊಂಡರೋ ನನಗೀಗಲೂ ಅರ್ಥವಾಗುವುದಿಲ್ಲ.

ಆಗ ಚಿಕ್ಕ ಹುಡುಗಿಯಾಗಿದ್ದ ನನಗೆ ಈಗಲೂ ಆ ಮಹಿಳೆಯ ನೆನಪಾದರೆ ಅದೇ ಗಬ್ಬು ವಾಸನೆ ಮೂಗಿಗೆ ಅಡರುತ್ತದೆ. ಅಂತೂ ಅವಳ ಮುರುಕಲು ಹುಲ್ಲಿನ ಗುಡಿಸಲಿಂದ ನಮ್ಮೂರಿನ ಖಾಲಿ ಮನೆಯಲ್ಲಿ ಮಹಿಳೆ ಬಂದು ಬಿದ್ದಳೆಂದಾಯಿತು. ಪಾಳಿಯಲ್ಲಿ ಈ ಮಹಿಳೆಯರು ಆಕೆಯ ಸೇವೆ ಮಾಡುತ್ತಿದ್ದರು. ಗಳಿಗೆ ಗಳಿಗೆಗೂ ಅವಳ ಕೀವು, ರಕ್ತಸ್ರಾವ ಆಗುತ್ತಿದ್ದ ಬಟ್ಟೆ ಬದಲಿಸುವುದು, ಊಟ, ಔಷಧ, ಸ್ನಾನ, ಹೀಗೆ ಮಹಿಳೆ ಸ್ವಲ್ಪ ಗೆಲುವಾದರೂ ಪೂರ್ತಿ ಗುಣವಾಗುವಹಾಗಿರಲಿಲ್ಲ. ಅವಳನ್ನು ಕರೆತರುವಾಗ ನಯಾ ಪೈಸೆ ಹಣವೂ ಅವಳಲ್ಲಿ ಇರಲಿಲ್ಲ. ಅವಳ ಪೆನ್ಷನ್ ಇತ್ಯಾದಿ ತರಲು ಅವಳು ಖುದ್ದಾಗಿ ಇನ್ನೊಂದು ಜಿಲ್ಲೆಯ ತಾಲ್ಲೂಕೊಂದಕ್ಕೆ ಹೋಗಬೇಕಿತ್ತು. ಆದರೆ ಆಕೆ ಹೋಗುವ ಸ್ಥಿತಿಯಲ್ಲಿ ಇರಲೂ ಇಲ್ಲ. ಹಾಗಾಗಿ ಈ ಮಹಿಳೆಯರೇ ತಮಗೇ ಕಿತ್ತು ತಿನ್ನುವ ಬಡತನವಿದ್ದರೂ ಸಾಲ ಸೋಲ ಮಾಡಿ ಮಹಿಳೆಯ ಚಿಕಿತ್ಸೆ ಮಾಡುತ್ತಿದ್ದರು.

ಪರ್ಲಾಂಗುಗಳ ದೂರದ ತನಕವೂ ಹೊಡೆಯುವ ಗಬ್ಬು ವಾಸನೆಗೆ ಅಂಜಿ ಊರಿನ ಯಾರೊಬ್ಬರೂ ಆಕೆಯನ್ನು ನೋಡಲೂ ಬರುತ್ತಿರಲಿಲ್ಲ. ನಾನು ಪ್ರತಿನಿತ್ಯ ಈ ರೋಗಿ ಮಹಿಳೆಗೆ ಈ ಮೂವರ ಮನೆಯಿಂದಲೂ ಊಟ ತಿಂಡಿ ಗಂಜಿ ನೀರು ಹೊತ್ತು ಹೋಗಿ ಕೊಡುವುದಿತ್ತು. ಆದರೆ ಅಲ್ಲಿಂದ ಬಂದ ಮೇಲೆ ಹಂಡೆ ಹಂಡೆ ನೀರಲ್ಲಿ ಸ್ನಾನ ಮಾಡಿದರೂ ನನ್ನ ಮೈಯ ವಾಸನೆ ಹೋಗುತ್ತಿರಲಿಲ್ಲ.

ಈಕೆಯ ಮೈಯಿಂದ ಸೋರುವ ಕೀವು, ರಕ್ತದ ಬಟ್ಟೆಗಳನ್ನು ತೊಳೆಯುವುದಕ್ಕಾದರೂ ನೀರು ಸಾಕಷ್ಟು ಇಲ್ಲದ ಕಾರಣ ಮಹಿಳೆಯರು ಪ್ರತಿದಿನ ಮೂರು ಕಿಲೋಮೀಟರು ದೂರದ ಕೆರೆಯೊಂದಕ್ಕೆ ಬಟ್ಟೆಗಂಟನ್ನು ಮೂವರ ಮನೆಯ ಗಂಡಸರಲ್ಲಿ ಯಾರಾದರೊಬ್ಬರ ಸೈಕಲ್ ಕ್ಯಾರಿಯರ್ ಮೇಲೆ ಇಟ್ಟು ‘ಹಿಂದೆ ತಿರುಗಿ ನೋಡದೆ ಜೋರಾಗಿ ಸೈಕಲ್ ತುಳಿ ಮತ್ತೆ ಗಂಟನ್ನು ಅಲ್ಲಿ ಇಳಿಸಿ ಬಂದುಬಿಡು’ ಎಂದು ವಾರ್ನಿಂಗ್ ಕೊಟ್ಟೇ ಕಳಿಸುತ್ತಿದ್ದರು ಮತ್ತು ಈ ಮಹಿಳೆಯರು ನಡೆದು ಹೋಗಿ ಈ ಬಟ್ಟೆಗಳನ್ನು ತಮ್ಮ ಕೈಯಾರೆ ತೊಳೆದು ಸುಡು ಬಿಸಿಗೆ ಒಣಗಿಸಿ ಚಂದಮಾಡಿ ಹೊತ್ತು ಬರುತ್ತಿದ್ದರು.

ನಾನೂ ಈ ಮಹಿಳೆಯರ ಜೊತೆ ಹೋಗುತ್ತಿದ್ದೆನಾದ್ದರಿಂದ ಸೈಕಲ್ ಹೋದ ದಾರಿಯುದ್ದಕ್ಕೂ ಅಸಹ್ಯ ವಾಸನೆ ಗಾಳಿಯಲ್ಲಿ ಬರೆತಿರುವುದನ್ನು ಸಹಿಸಲಾರದೆ ಸಹಿಸುತ್ತಿದ್ದೆ. ಆದರೆ ನನಗೆ ಈ ಮಹಿಳೆಯರ ಸೇವಾ ಮನೋಭಾವದ ಮೇಲೆ ಅಪಾರ ಗೌರವವಿತ್ತು. ಆ ವಯಸ್ಸಿಗೆ ನನ್ನ ಕೈಲಾದ ಸಹಾಯ ನಾನೂ ಮಾಡುತ್ತಿದ್ದೆ ಎನ್ನಿ. ಈಕೆಯಿದ್ದ ಮನೆಯಲ್ಲಿ ವಾಸನೆ ತಡೆಯಲು ಪ್ರತಿನಿತ್ಯ ಸೆಗಣಿಯಿಂದ ನೆಲ ಸಾರಿಸುತ್ತಿದ್ದರು, ಧೂಪದ ಹೊಗೆ ಹಾಕುತ್ತಿದ್ದರು. ಏನೇ ಮಾಡಿದರೂ ದುರ್ನಾತ ಸಹಿಸಲಸಾಧ್ಯವಾಗಿತ್ತು. ಎರಡು ದಿನ ಈ ಮಹಿಳೆ ಚೂರು ಚೇತರಿಕೆ ಕಂಡರೆ, ನಾಕು ದಿನ ಗಂಭೀರವಾಗಿ ನರಳುತ್ತಿದ್ದಳು. ಆದರೆ ಸಾವು ಮಾತ್ರ ಕಳ್ಳಾಟವಾಡಿ ಸತಾಯಿಸುತ್ತಿತ್ತು.

ಈ ನಡುವೆ ನಾನು ಮೊದಲೇ ಹೇಳಿದಂತೆ ಊರಿಡೀ ಯಾರ್ಯಾರೂ ಈಕೆಯನ್ನು ನೋಡಲು ಬರುತ್ತಿರಲಿಲ್ಲ. ಹಣವಿದ್ದವರಂತೂ ಎಲ್ಲಿ ತಾವು ಏನಾದರೂ ಕೊಡಬೇಕಾಗುವುದೋ ಎಂದು ದೂರ ದೂರ ಸರಿದು ಓಡುತ್ತಿದ್ದರು. ಗಂಜಿ, ನೀರು, ಸೋಪು ಈ ಮಹಿಳೆಯರು ಹೇಗಾದರೂ ತಮ್ಮ ಮಕ್ಕಳ ಪಾಲಿನ ತುತ್ತು ಉಳಿಸಿ ಕೊಡುತ್ತಿದ್ದರು ಎನ್ನೋಣ. ಸೀಮೆ ಎಣ್ಣೆ ಸಿಗದ ಆ ಕಾಲದಲ್ಲಿ ರಾತ್ರಿ ಇಡೀ ದೀಪ ಉರಿಸಲು ಸೀಮೆ ಎಣ್ಣೆಗಾಗಿ ನ್ಯಾಯಬೆಲೆ ಅಂಗಡಿಗೆ ಶಿಫಾರಸ್ಸು ಮಾಡಲೂ ಊರವರು ತಯಾರಿರಲಿಲ್ಲ. ಬಡವರಿಗೆ ಬರುವ ಸೀಮೆ ಎಣ್ಣೆ ಸದ್ದಿಲ್ಲದೆ ಪೆಟ್ರೋಲ್ ದಂಧೆಯವರಿಗೆ ಸಾಗಾಟವಾಗುತ್ತಿತ್ತೆನ್ನಿ!

ಅಷ್ಟಾದರೆ ಬೇಸರವಿಲ್ಲ. ಈ ಮಹಿಳೆಯರು ಅವಿದ್ಯಾವಂತ ಮಹಿಳೆಯರಾಗಿದ್ದರು. ಅವರಲ್ಲಿ ಯಾವ ಚಾಲಾಕಿತನವಿರಲಿಲ್ಲ. ಆದರೂ ಇವರ ಕುರಿತು ದೊಡ್ಡ ಸುದ್ದಿಯೊಂದು ಹರಿದಾಡತೊಡಗಿತು. ಏನೆಂದರೆ ಈ ರೋಗಿಯ ಹೆಸರಿಲ್ಲಿರುವ ಸಾವಿರಗಟ್ಟಲೆ ಹಣವನ್ನು ಲಪಟಾಯಿಸಲು ಈ ಮಹಿಳೆಯರು ಸೇವೆಯ ನಾಟಕ ಆಡುತ್ತಿದ್ದಾರೆಂದೂ, ಹಳ್ಳಿಯಲ್ಲಿ ಆಕೆಯ ಆಸ್ತಿ, ಮನೆ ಇದೆಯೆಂದೂ ಈ ಮಹಿಳೆಯರು ಆಕೆಯ ಸಹಿ ಪಡೆದು ಎಲ್ಲವನ್ನೂ ಬರೆಸಿಕೊಂಡುಬಿಡುತ್ತಾರೆಂದೂ ಈ ಮಹಿಳೆಯರ ಮೇಲೆ ಕಣ್ಣಿಡಬೇಕೆಂದೂ ಜನ ಖುಲ್ಲಂ ಖುಲ್ಲ ಮಾತಾಡುತ್ತಿದ್ದರು. ಈ ಸೇವೆ ಮಾಡುತ್ತಿದ್ದ ಮಳೆಯರ ಕಿವಿಗೂ ತಲುಪಿ ಕಣ್ಣೀರು ಹಾಕತೊಡಗಿದರು.

ರಾತ್ರಿ ಹಗಲೆನ್ನೆದೆ ಮೈಮೂಳೆ ಮುರಿಯುವಂತೆ ಆಕೆಯ ಕೆಲಸವಾಗುತ್ತಿತ್ತು. ಅಸಾಧ್ಯ ವಾಸನೆ ಸಹಿಸುವುದು ಇನ್ನೊಂದು ಸಮಸ್ಯೆಯಾಗಿತ್ತು. ಇದರ ನಡುವೆ ಆ ರೋಗಿ ಮಹಿಳೆಯೂ ಇವರ ಇಷ್ಟು ಸೇವೆಯನ್ನು ಕೃತಜ್ಞತೆಯಿಂದ ನೋಡುವ ಬದಲಿಗೆ ಸೇವೆಗೆ ಸ್ಪಂದಿಸದೆ ಸಿಟ್ಟು ಮಾಡುವುದು, ಅಸಹನೆ ಇತ್ಯಾದಿಗಳಿಂದ ಇನ್ನಷ್ಟು ನೋವುಂಟು ಮಾಡುತ್ತಿದ್ದಳು. ಮೊದಲೇ ಬಡತನ ಹಾಸಿಹೊದ್ದಿದ್ದ ಮಹಿಳೆಯರು ತಮ್ಮ ಕುಟುಂಬದ ಇದ್ದಬದ್ದ ಕಾಸನ್ನೂ ಈ ಮಹಿಳೆಯ ಸೇವೆಯಲ್ಲಿ ಕಳೆಯುತ್ತ ಮನೆಯಲ್ಲೂ ಕೊರತೆ ಅನುಭವಿಸುತ್ತಿದ್ದರು. ಇಂಥಲ್ಲಿ ಜನರು ಆಡಿಕೊಳ್ಳುವ ವಿಷಯ ಇವರ ಎದೆ ಸೀಳುತ್ತಿತ್ತು.

ಇಷ್ಟೇ ಆಗಿದ್ದರೆ ಬೇಸರವಿರಲಿಲ್ಲ. ಊರಿನ ಗುರ್ಕಾರ ಪಕ್ಕದ ತಾಲ್ಲೂಕು ಕೇಂದ್ರದಿಂದ ಹದಿನೈದು ದಿನಕ್ಕೊಮ್ಮೆ ಪೂಜಾರಾಧನೆಗಾಗಿ ಊರಿಗೆ ಬರುತ್ತಿದ್ದ ಧಾರ್ಮಿಕ ಮುಖಂಡನ ಗಮನಕ್ಕೆ ಈ ವಿಷಯ ತಂದಿದ್ದ. ಕೂಡಲೇ ಶುರುವಾಯಿತು ರಾಜಕೀಯ. ಕೆಲವು ಗಣ್ಯರು ಮೂಗು ಮುಚ್ಚಿಕೊಂಡೇ ಬಂದು ಮಹಿಳೆಯ ಹಾಸಿಗೆಯಿಂದ ಅಷ್ಟು ದೂರ ನಿಂತು ಈ ಮಹಿಳೆಯರು ನಿನ್ನನ್ನು ಹೇಗೆ ನೋಡಿಕೊಳ್ಳುತ್ತಾರೆಂದು ಕೇಳಿದರೆ, ನೋವುಂಡೂ ಉಂಡೂ ನಲುಗಿದ್ದ ಮಹಿಳೆ ಏನೋ ಕಾಟಾಚಾರಕ್ಕೆ ನೋಡುತ್ತಾರೆ ಎಂದು ಕಣ್ಣೀರಿಟ್ಟು ದೂರಿಬಿಡುತ್ತಿದ್ದಳು. ಯಾಕೆಂದರೆ ಈ ಮಹಿಳೆಯರು ರೋಗಿಯ ಸೇವೆಯನ್ನೇನೋ ಮಾಡುತ್ತಿದ್ದರು. ಆದರೆ ನೋವನ್ನು ನಿವಾರಿಸುವುದು ಸಾಧ್ಯವಿರಲಿಲ್ಲವಲ್ಲ?!

ಅಂಥವಳೆದುರು ಈ ಬಂದ ಗಣ್ಯರು ಹೇಳುತ್ತಿದ್ದುದೇನೆಂದರೆ ಯಾವ ಕಾಗದ ಪತ್ರಕ್ಕಾದರೂ ಸಹಿ ಹಾಕಿದೆಯಾ? ಹಣವೆಷ್ಟು ಕೊಟ್ಟೆ? ಎಂದು ಮತ್ತು ಯಾವ ಕಾಗದಕ್ಕೂ ಸಹಿ ಹಾಕಕೂಡದೆಂಬ ಕಟ್ಟೆಚ್ಚರ ಕೊಟ್ಟು ಹೊರಗೆ ಹೋಗುವಾಗ ಆಕೆಯ ಕಿವಿಗೆ ಅಪ್ಪಳಿಸುವಂತೆ ಜೋರಾಗಿ ವಾಕರಿಸಿ ವಾಂತಿ ಮಾಡಿಕೊಳ್ಳುತ್ತ ಹೊರಟುಹೋಗುತ್ತಿದ್ದರು.

ಈ ಧಾರ್ಮಿಕ ಮುಖಂಡ ಕೂಡ ದೊಡ್ಡ ಧನದಾಹಿ. ರೋಗಿ ಮಹಿಳೆಗಾಗಿ ಪ್ರಾರ್ಥಿಸುವ ನೆವದಲ್ಲಿ ಅಂತೂ ಒಮ್ಮೆ ಬಂದರೆಂದಾಯಿತು. ಬಂದವರೇ ಮಾಡಿದ ಕೆಲಸವೆಂದರೆ ಆಕೆಯ ಹೆಸರಲ್ಲಿರುವ ಹಣದ ಮತ್ತು ಆಸ್ತಿಯ ಲೆಕ್ಕ ಕೇಳಿದ್ದು ಮತ್ತು ಆಕೆಯ ಹಳ್ಳಿಗೆ ಜನ ಕಳಿಸಿ ಆಕೆಯ ಪೆಟ್ಟಿಗೆಯಲ್ಲಿದ್ದ ಎಲ್ಲ ದಾಖಲೆ ಪತ್ರಗಳನ್ನು ತರಿಸಿಕೊಂಡು ಕೆಲ ಕಾಗದ ಪತ್ರಗಳಿಗೆ ಮಹಿಳೆಯ ಸಹಿ ಪಡೆದದ್ದು. ಎಲ್ಲ ಮುಗಿದ ಮೇಲೆ ಅವರು ಹೊರಟುಹೋದರು.

ಸೇವೆ ಮಾಡುತ್ತಿದ್ದ ಮಹಿಳೆಯರಿಗೀಗ ಊರಿಡೀ ಹಕ್ಕಿನಿಂದ ಬುದ್ದಿ ಹೇಳತೊಡಗಿತ್ತು. ಪೇಷಂಟನ್ನು ಹಾಗೆ ನೋಡಬೇಕು ಹೀಗೆ ನೋಡಬೇಕು, ಅಲ್ಲಿಗೆ ಕರೆದೊಯ್ಯಿರಿ ಇಲ್ಲಿಗೆ ಕರೆದೊಯ್ಯಿರಿ, ತಿನ್ನಲು ಅದು ಕೊಡಿ ವಾಸನೆ ತೊಲಗಲು ಇಂಥದ್ದು ಮಾಡಿ ಹೀಗೆ ನೂರೆಂಟು ಸಲಹೆ. ಮಹಿಳೆಯರು ಏನಾದರೂ ಎದುರುತ್ತರ ಕೊಟ್ಟರೋ ನಿಮಗೆ ಆ ಮಹಿಳೆಯನ್ನು ಹೊತ್ತು ತರಲು ಯಾರು ಹೇಳಿದ್ದರು? ಯಾಕೆ ಬೇಕಾಗಿತ್ತು ನಿಮಗೆ? ನೀವೇನು ಪುಕ್ಕಟೆ ಮಾಡೋಲ್ಲವಲ್ಲ? ನಾಳೆ ಗಂಟು ಸಿಗುತ್ತದಲ್ಲ ಎಂದು ಇರಿಯತೊಡಗಿದರು.

ವರ್ಷಗಟ್ಟಲೆ ಮಹಿಳೆಯ ಸೇವೆ ಮಾಡುತ್ತಲೇ ಇದ್ದರು ಮೂರು ಮಹಿಳೆಯರು. ಕೊನೆ ಕೊನೆಗೆ ರೋಗಿ ತನ್ನ ಕಾಯಿಲೆಯಿಂದ ಹತಾಶಳಾಗಿ ಬಂದಹೋದವರೆದುರೆಲ್ಲ ಕಣ್ಣೀರಿಡುತ್ತಿತ್ತು. ಈ ಕಣ್ಣೀರಿಗೆ ಅವರು ಬೇರೆಯೇ ಅರ್ಥ ಜೋಡಿಸಿ ಊರತುಂಬ ಈ ಮಹಿಳೆಯರ ಮೇಲೆ ಅಪಪ್ರಚಾರಕ್ಕೆ ಬಳಸುತ್ತಿದ್ದರು.

ಅಂತೂ ಒಂದು ಬೆಳಗು ಮಹಿಳೆ ಸತ್ತಳು. ಕೂಡಲೇ ಗುರ್ಕಾರ ಧಾರ್ಮಿಕ ಮುಖಂಡನಿಗೆ ವರದಿ ಕೊಟ್ಟ ಅವರೂ ಬಂದರು. ಅಂತ್ಯ ಸಂಸ್ಕಾರಕ್ಕೆ ಮಹಿಳೆಯರೇ ಹಣ ಹೊಂದಿಸುವುದು ಅವರ ಕರ್ತವ್ಯವೆಂಬಂತೆ ಜನ ನಡೆದುಕೊಂಡರು. ಶವ ಸಂಸ್ಕಾರ ನಡೆಯುವ ಮೊದಲೇ ಧಾರ್ಮಿಕ ಮುಖಂಡನ ಮುಂದಾಳತ್ವದಲ್ಲಿ ಹಿಸ್ಸೆಯಾಯಿತು. ಹಣವೂ ಜಾಗವೂ ಚರ್ಚಿಗೆ ಸೇರತಕ್ಕದ್ದೆಂದೂ ಚೊಂಬು ಚೆರಿಗೆಗಳನ್ನು ಆ ಊರಿನ ವರ್ಷಕ್ಕೊಂದು ಹಡೆಯುತ್ತ ಹನ್ನೆರಡು ಮಕ್ಕಳ ತಾಯಾಗಿದ್ದು ಇದ್ದಾಗ ಮೋಜು ಉಡಾಯಿಸುವ ಇಲ್ಲದಾಗ ಅಳುತ್ತ ಸದಾ ಬಡತನವೆಂದು ಇದ್ದವರಲ್ಲೆಲ್ಲ ಬೇಡಿ ತಿನ್ನುವ ಮಹಿಳೆಯೊಬ್ಬಳಿಗೆ ಕೊಡಲಾಯಿತು. ಈ ಮೂರೂ ಮಹಿಳೆಯರು ಮಾತ್ರ ವರ್ಷಗಳ ಕಾಲ ಆ ಮಹಿಳೆಯ ಸೇವೆ ಮಾಡಿ ಉಂಟಾದ ಒಂದು ಬಾಂಧವ್ಯದ ನೆನಪಲ್ಲಿ ಕಣ್ಣೀರಿಡುತ್ತ ಪ್ರಾರ್ಥಿಸುತ್ತ ಆ ಮಹಿಳೆಯ ಶವ ಕಾದರು.

ಅದೇಕೋ ನಮ್ಮಲ್ಲಿ ನಿಸ್ವಾರ್ಥ ಸೇವಕರೆಲ್ಲ ಲೋಕನಿಂದಿತರೇ. ಲಾಭ ಬಡುಕರ, ತೋರಿಕೆಗೆ ಮಾಡುವವರ ಹೆಸರುಗಳೆಲ್ಲ ಚಿನ್ನದ ಚೌಕಟ್ಟಿನಲ್ಲಿ ಬರೆಯಲ್ಪಡುವುದು ನಮ್ಮ ದೇಶದ ದೌರ್ಭಾಗ್ಯ! ಸೇವೆ ಎನ್ನುವುದು ಹುಡುಗಾಟವಲ್ಲ. ತೆರೆಸಾ ಇಂಥ ಲೆಕ್ಕವಿಲ್ಲದ ಅನಾಥರಿಗೆ ಸೇವೆ ಮಾಡಿದ ಮಹಾ ತಾಯಿ. ಆಕೆ ಮತಾಂತರ ಮಾಡುತ್ತಿದ್ದಳು, ವಿಶ್ವದ ಮುಂದೆ ಮಾನ ತೆಗೆದಳು ಎಂದೆಲ್ಲ ಹೇಳುತ್ತ ಸೇವೆಯನ್ನು ಅಪಮಾನಿಸುವ ಮಂದಿ ಊರ ಅನಾಥರ ಸೇವೆ ಮಾಡುವುದು ಹಾಗಿರಲಿ ತಮ್ಮದೇ ಮನೆಯ ರೋಗಿಗಳ ಸೇವೆಯನ್ನೊಮ್ಮೆ ಮಾಡಿ ತೋರಲಿ. ಸೇವೆಯ ಘನತೆಯನ್ನು ಹಾಗಾದರೂ ಇನಿಸಾದರೂ ಅರಿಯಲಿ, ತಾವೇ ನರಳುತ್ತ ಇನ್ನೊಬ್ಬರಿಂದ ಸೇವೆ ಪಡೆಯುವ ದುರ್ದಿನಗಳು ಅವರಿಗೆ ಬಾರದಿರಲಿ ಎಂದಷ್ಟೇ ನಾನು ಹಾರೈಸುವುದು.

—-

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...