Share

ಈಗಲೂ ಭಯತ್ರಸ್ತಳಾಗಿ ಬೆಂಗೊಟ್ಟು ಓಡುತ್ತೇನೆ..!
ಕಾದಂಬಿನಿ ಕಾಲಂ

 

 

 

 

 

 

 

 

 

 

 

ಆ ಮುಗ್ಧ ಮಕ್ಕಳ ಎಳೆಯ ಮನಸ್ಸುಗಳ ಮೇಲೆ ಮಾಯದಂತೆ ಆಳವಾಗಿ ಉಳಿದುಬಿಡುವ ಈ ನಂಜು ನಖಗಳ ಗೀರುಗಾಯಗಳ ನೋವನ್ನು ನೇವರಿಸುವವರು ಯಾರು?

 

 

ಮೊನ್ನೆ ನಡು ಮಧ್ಯಾಹ್ನ ಒಕ್ಹಿ ಚಂಡಮಾರುತದ ಪರಿಣಾಮ ಮೋಡ ಕವುಚಿದ ಮುಗಿಲಿನಡಿ ಇಕ್ಕೆಲಗಳಲ್ಲೂ ಹಿನ್ನೀರು ಆವರಿಸಿದ ಆ ಉದ್ದಾನುದ್ದದ ಆ ನಿರ್ಜನ ರಸ್ತೆಯಲ್ಲಿ ರುಮ್ಮನೆ ಬೀಸುವ ಶೀತಲ ಗಾಳಿಗೆ ಮುಖವೊಡ್ಡಿ ಒಬ್ಬಳೇ ನಡೆದುಹೋಗುತ್ತಿದ್ದೆ. ಆಗೀಗ ಸಂಚರಿಸುವ ವಾಹನಗಳಿಂದ ಗಂಡಸರು ಇಣುಕಿ ವಿಚಿತ್ರವಾಗಿ ನೋಡುತ್ತ ಹೋಗುವುದು ನನಗೆ ಹೊಸದಲ್ಲವಾದ ಕಾರಣ ವಾಹನಗಳ ಕಡೆ ನಿರ್ಲಕ್ಷ್ಯವಹಿಸಿ ಹಿನ್ನೀರಿನತ್ತ ಅಲ್ಲಿ ಚಿಲಿಪಿಲಿಗುಡುವ ಹಕ್ಕಿಗಳತ್ತ ಗಮನ ಹರಿಸಿ ನಡೆದಿದ್ದೆ. ಸರಿಯಾಗಿ ಸೇತುವೆಯ ನಡು ಭಾಗ ತಲುಪಿದ್ದಾಗ ಒಂದು ಕ್ವಾಲಿಸ್ ಗಾಡಿ ಎರಡು ವಾಹನ ಆರಾಮವಾಗಿ ಸಾಗುವಷ್ಟಗಲದ ರಸ್ತೆಯಾಗಿದ್ದೂ ನನ್ನ ತೀರ ಸನಿಹದಿಂದ ಹಾಯ್ದು ಮುಂದೆ ಸಾಗಿದ್ದರಿಂದ ವಾಹನದತ್ತಲೇ ನೋಡತೊಡಗಿದೆ. ಸ್ವಲ್ಪ ಮುಂದೆ ಹೋದದ್ದೇ ಒಮ್ಮಲೆ ಗಾಡಿ ನಿಂತಿತ್ತು. ನನಗೆ ಜೋರು ಹೆದರಿಕೆಯಾಯ್ತು. ಈಗ ಗಾಡಿಯವ ರಿವರ್ಸ್ ಹಾಕಿ ನನ್ನತ್ತ ಬರತೊಡಗಿದ. ಆ ಕ್ಷಣವೇ ನಾನು ಒಬ್ಬ ಅಸಹಾಯಕ ಪುಟ್ಟ ಹುಡುಗಿಯಂತೆ ಬೆದರಿ ನಿಂತಲ್ಲಿಂದಲೇ ಹಿಮ್ಮುಖ ಹೆಜ್ಜೆ ಇರಿಸತೊಡಗಿದೆ. ಸರಕ್ಕನೆ ಹಿಂದಿರುಗಿ ಓಡಿಬಿಡಬೇಕೆನಿಸಿತು. ಗಾಡಿ ನನ್ನ ಸನಿಹಕ್ಕೆ ಬರುವಷ್ಟರಲ್ಲಿ ಮತ್ತೆ ಅನಿಸಿತು. ಯಾಕೆ ಓಡಬೇಕು? ನಾನೇನು ಚಿಕ್ಕ ಹುಡುಗಿಯೇ? ಎದೆ ಗಟ್ಟಿ ಮಾಡಿ ಬಂದದ್ದು ಎದುರಿಸಿಯೇ ಬಿಡ್ತೇನೆ ಎಂದುಕೊಂಡು ನಿಂತೇಬಿಟ್ಟೆ. ಗಾಡಿಯವನ ಕಣ್ಣಲ್ಲಿ ಕಣ್ಣಿಟ್ಟು ಮೊನಚಾಗಿ ಒಮ್ಮೆ ನೋಡಿದೆ.

ಅವನು ‘ನೀವು ಯಾರು? ಡ್ರಾಪ್ ಬೇಕಾ?’ ಎಂದು ಹೇಳುವಾಗ ಮಾತುಗಳು ಅಲುಗಾಡುತ್ತಿದ್ದಂತೆನಿಸಿ ಇನ್ನಷ್ಟು ಗಟ್ಟಿಯಾದೆ. ಅವನ ಜೊತೆಗಾರರು ವಿಚಿತ್ರವಾಗಿ ನಗುತ್ತ ನನ್ನತ್ತಲೇ ನೋಡುತ್ತಿದ್ದರು. ನನಗೆ ಈ ಡ್ರೈವರ್ ಸೀಟಿನಲ್ಲಿದ್ದವನನ್ನು ಎಲ್ಲಿಯೋ ನೋಡಿದ್ದೇನೆ ಎಂದು ಅನಿಸಿತು. ಹೌದು. ನಮ್ಮ ಡ್ರೈವರ್‍ಗಳು ರಜೆಯಿದ್ದಾಗ ಎಂದೋ ನಮ್ಮ ವಾಹನಕ್ಕೆ ಚಾಲಕನಾಗಿ ಬಂದಂತಿತ್ತು. ನನ್ನ ಗಂಟು ಮುಖ ನೋಡಿದ್ದೇ ಅವನೂ ಅಧೀರನಾಗಿದ್ದ. ಅವನ ಪ್ರಶ್ನೆಗೆ ಉತ್ತರಿಸಬೇಕಲ್ಲ? ಹೇಳಿದೆ. ಕ್ಷಣ ಗಲಿಬಿಲಿಯಾದ. ಓಹ್ ನನಗೆ ಗೊತ್ತಾಗಲಿಲ್ಲ ಯಾರೋ ಅಂದುಕೊಂಡೆ ಎಂದವನೇ ಗಾಡಿ ಚಲಾಯಿಸಿ ಹೊರಟುಹೋದ. ಯಾರಿಗಾದರೂ ಇವರೇಕೆ ಡ್ರಾಪ್ ಕೊಡಬೇಕು? ನಾನಲ್ಲದೆ ಬೇರೊಬ್ಬ ಅಮಾಯಕ ಹುಡುಗಿ ಅಲ್ಲಿದ್ದಿದ್ದರೆ! ಅಥವ ಯಾರಾದರೂ ಮುದುಕಿಯೋ ಮುದುಕನೋ ಆಗಿದ್ದರೆ ಇವರು ಡ್ರಾಪ್ ಕೊಡುತ್ತೇನೆ ಎನ್ನುತ್ತಿದ್ದರೆ?

ಡ್ರಾಪ್ ಕೊಡುತ್ತೇನೆ ಎಂದ ಮಾತಿನ ಹಿಂದಿದ್ದ ಉದ್ದೇಶವಾದರೂ ಅಸಲಿಯೇ? ಹಾಗಲ್ಲದಿದ್ದರೆ ನಾನು ಆ ಗಂಡಸರಿಗೆ ಪ್ರತಿರೋಧ ತೋರಿಸುವಷ್ಟು ಶಕ್ತಿಶಾಲಿಯಿದ್ದೆನೇ? ಬಾಯಿ ಒತ್ತಿ ಹಿಡಿದು ಹೊತ್ತೊಯ್ದಿದ್ದರೆ! ಪ್ರತಿರೋಧ ತೋರಿದೆನೆಂದು ಎತ್ತಿ ಹಿನ್ನೀರಲ್ಲಿ ಬಿಸುಟಿದ್ದರೆ! ಇಲ್ಲಿ ಗಟ್ಟಿಯಾಗಿ ಕೂಗಿದರೂ ಯಾರ ಕಿವಿ ಮುಟ್ಟಲು ಸಾಧ್ಯವಿತ್ತು? ಹೀಗೆ ಹೆಣ್ಣೊಬ್ಬಳು ನಡುಹಗಲಿಗೂ ಒಬ್ಬಳೇ ಓಡಾಡದ ಸ್ಥಿತಿಯೇಕೆ? ಒಂದು ವೇಳೆ ಹೊತ್ತೊಯ್ದಿದ್ದರೆ ಏನೇನಾಗಿಹೋಗುತ್ತಿತ್ತು! ಹೀಗೆ ಯೋಚಿಸುತ್ತ ಹೋದಂತೆ ಮನಸ್ಸು ಕಲಕಿ ಹೋಯ್ತು.

ಹೆಣ್ಣಾಗಿ ಹುಟ್ಟಿದಂದಿನಿಂದ ಕ್ಷಣ ಕ್ಷಣವೂ ಎದುರಿಸುವ ಅಭದ್ರತಾ ಭಾವ. ಎಂಟನೇ ತರಗತಿಯಲ್ಲಿದ್ದಾಗ ನನ್ನ ಗೆಳತಿಯರೆಲ್ಲ ‘ಕಣ್ಣು ಪರೀಕ್ಷೆಗೆ ಹೋಗ್ತೀಯಲ್ಲ ಅಂಥ ಕನ್ನಡಕ ತಗೊಳೇ ಇಂಥದ್ದು ತಗೊಳೇ’ ಎಂದು ಸಲಹೆ ಕೊಟ್ಟಿದ್ದರು. ನನ್ನ ಕಣ್ಣಲ್ಲೂ ಚಂದದ್ದೊಂದು ಕನ್ನಡಕ ಧರಿಸಿದ ನನ್ನದೇ ಚಿತ್ರವಿತ್ತು. ನನ್ನಪ್ಪ ಕಣ್ಣು ಪರೀಕ್ಷಿಸಲೆಂದು ದೂರದೂರಿನ ವೈದ್ಯರಲ್ಲಿಗೆ ಕರೆದೊಯ್ದಿದ್ದರು. ಅಲ್ಲಿನ ವೈದ್ಯ ನನ್ನನ್ನು ಕೆಟ್ಟದಾಗಿ ನೋಡುತ್ತಿದ್ದುದರಿಂದಲೇ ಏನೋ ಈಗಲೂ ನನಗೆ ಬೆಕ್ಕಿನ ಕಣ್ಣಿನ ಗಂಡಸರನ್ನು ಕಂಡರೆ ಭಯವಾಗುತ್ತದೆ. ಅಪ್ಪನಿಗೆ ಹೊರಗೆ ನಿಲ್ಲಲು ಹೇಳಿದ ಅವನು ನನ್ನನ್ನು ಕತ್ತಲ ಕೋಣೆಯ ಕುರ್ಚಿಯಲ್ಲಿ ಕೂರಿಸಿದ ಎದುರಲ್ಲಿ ಬೋರ್ಡಿಗೆ ಮಾತ್ರ ಬೀಳುವ ಬೆಳಕು. ಅದರಲ್ಲಿ ಅಕ್ಷರಗಳು. ಅವನು ನನ್ನ ಕಣ್ಣಿಗೆ ಕನ್ನಡಕದಂಥದ್ದು ಇರಿಸಿ ಅದಕ್ಕೆ ಬೇರೆ ಬೇರೆ ಗಾಜುಗಳನ್ನು ಇರಿಸಿ ಅಕ್ಷರ ಗುರುತಿಸಲು ಹೇಳುತ್ತಿದ್ದ.

ಹೀಗೆ ಮಾಡುವಾಗ ಬೇಕೆಂದೇ ನನ್ನ ಕೊರಳು ಗಲ್ಲ ಮುಟ್ಟಿದ್ದ. ನಾನು ಕೊಸರಾಡಿದ್ದೇ ತಡ ತನ್ನ ಬೆಕ್ಕಿನ ಕಣ್ಣುಗಳಿಂದ ನನ್ನ ಕಣ್ಣನ್ನೇ ನೋಡಿ ನೆಟ್ಟಗೆ ಕೂರುವಂತೆ ಬೈದ. ಸ್ವಲ್ಪ ಹೊತ್ತಾಯಿತು. ಈಗವನ ಕೈ ನೇರ ನನ್ನ ಮೈ ಮುಟ್ಟಿತು. ನನಗೆ ಇನ್ನು ಸಹಿಸಲಾಗಲಿಲ್ಲ. ನಾನು ಸರಕ್ಕನೆದ್ದು ಹೊರಗೋಡಿಬಿಟ್ಟೆ. ಅಪ್ಪನ ಹತ್ತಿರ ಇದನ್ನು ಹೇಗೆ ಹೇಳುವುದೋ ತಿಳಿಯಲಿಲ್ಲ. ಅವನಿಗೂ ನಾನಿದನ್ನು ನನ್ನಪ್ಪನ ಹತ್ತಿರ ಹೇಳಿಬಿಡುತ್ತೇನೆ ಅನ್ನುವ ಭಯವಾಗಿತ್ತೇನೋ ನನಗೆ ತಿಳಿದಿಲ್ಲ. ಆದರೆ ಕಣ್ಣು ಪರೀಕ್ಷಿಸದೆಯೂ ಕನ್ನಡಕವೊಂದನ್ನು ಕೊಟ್ಟ. ನಾನು ಇದೆಲ್ಲವನ್ನೂ ಯಾರಲ್ಲಿಯೂ ಹೇಳಲಾಗದೆ ಈ ಪರೀಕ್ಷಿಸದೆಯೇ ಕೊಟ್ಟ ಕನ್ನಡಕವನ್ನೇ ಮುಂದೆ ಧರಿಸಬೇಕಾಯಿತು. ಅದರ ಫ್ರೇಮನ್ನು ಕೂಡ ನನ್ನಿಚ್ಛೆಯಂತೆ ಆರಿಸುವುದು ನನ್ನಿಂದ ಸಾಧ್ಯವಾಗದೆ ಹೋಯಿತು ಮತ್ತು ಅದನ್ನು ಧರಿಸಿದಷ್ಟೂ ಕಾಲವೂ ಹೇಸಿಗೆಯ ಭಾವದಿಂದ ನರಳಬೇಕಾಯಿತು. ಗೆಳತಿಯರೂ ಹೋಗೀ ಹೋಗಿ ಇಂಥದ್ದನ್ನು ತಂದ್ಯಲ್ಲ ಚೂರೂ ಚಂದವಿಲ್ಲ ಎಂದೂ ಆಡಿಕೊಂಡಷ್ಟೂ ನಾನು ಒಳಗೊಳಗೇ ಕುಗ್ಗಿ ಹೋಗುತ್ತಿದ್ದೆ.

ನಾನು ದಸರಾ, ಬೇಸಿಗೆ ರಜೆಗಳಲ್ಲಿ ಅತ್ತೆ ಮನೆಗೆ ಹೋದಾಗ ಅವರದೇ ಸಿನೆಮಾ ಮಂದಿರದಲ್ಲಿ ಪುಕ್ಕಟೆ ಕೆಲವು ಸಿನೆಮಾ ನೋಡುತ್ತಿದ್ದೆನಾದ್ದರಿಂದ ನಮ್ಮೂರಲ್ಲಿ ಸಿನೆಮಾಕ್ಕೆ ಹೋಗುತ್ತಿದ್ದುದೇ ಕಡಿಮೆ. ಅಪರೂಪಕ್ಕೆ ಅಕ್ಕಪಕ್ಕದವರೆಲ್ಲ ಸೇರಿ ಸಿನೆಮಾಕ್ಕೆ ಹೊರಟರೂ ಅಲ್ಲೂ ಕೂತ ಜಾಗದಲ್ಲಿ ಹಿಂದಿನಿಂದ ಕಾಲು ತಾಕಿಸುವುದು ಕೈಯಿಂದ ಮುಟ್ಟುವುದು ನಡೆಯುತ್ತಿತ್ತು. ಇಂಥ ಹೊತ್ತಲ್ಲಿ ಪಿನ್ನು ಮುಂತಾದ ವಸ್ತುಗಳಿಂದ ತಿವಿದುಬಿಡಬೇಕೆಂದು ಕೆಲವರು ಸಲಹೆ ಕೊಟ್ಟದ್ದಿತ್ತು. ಆದರೆ ಇವು ಯಾವುವೂ ಅವರಿಗೆ ನಾಟುತ್ತಿರಲಿಲ್ಲ. ಬಸ್ಸಿನಲ್ಲಿ ಪ್ರಯಾಣಿಸುವಾಗಲೂ ಇಂಥ ಲೆಕ್ಕವಿಲ್ಲದ ಉಪಟಳಗಳು! ಮೇಷ್ಟ್ರು, ಸಂಬಂಧಿಗಳು, ಪರಿಚಿತರು, ಅಪರಿಚಿತರು ಹೀಗೆ ಸಮಾಜದಲ್ಲಿ ಅದೆಷ್ಟೋ ಸಭ್ಯಸ್ಥರಂತೆ ನಟಿಸುವ ಗಂಡಸರೂ ಅದೆಷ್ಟು ಲಜ್ಜೆಗೇಡಿಗಳಾಗಿ ವರ್ತಿಸಿಬಿಡುತ್ತಾರಲ್ಲಾ ಎಂದು ಅನಿಸುತ್ತದೆ.

ಚಿಕ್ಕಂದಿನಲ್ಲಿ ಒಂದು ಅಂಗಡಿಗೆ ಏನನ್ನಾದರೂ ತರಲು ಮನೆಯಿಂದ ಕಳಿಸಿದಾಗ ಆ ಅಂಗಡಿ ಮುದುಕನ ಮಗ ಸಾಮಾನು, ಚಿಲ್ಲರೆ ಕೊಡುವಾಗ ಬೇಕೆಂದೇ ನನ್ನ ಕೈಬೆರಳು ಒತ್ತಿ ಕೊಡುತ್ತಿದ್ದ. ಆ ಕ್ಷಣವೇ ಸತ್ತುಹೋಗಿಬಿಡಬೇಕನಿಸುತ್ತಿತ್ತು. ಈ ಕಾರಣಕ್ಕಾಗಿಯೇ ನಾನು ಅಂಗಡಿಗಳಿಗೆ ಹೋಗುವುದನ್ನೇ ನಿಲ್ಲಿಸಿದೆ. ಅಷ್ಟೇ ಯಾಕೆ ಒಬ್ಬೊಂಟಿಯಾಗಿ ಅಂಗಡಿಗೆ ಮಾತ್ರವಲ್ಲ ಯಾವ ಕಡೆಯೂ ಇವತ್ತಿಗೂ ಹೋಗುವುದಿಲ್ಲ ನಾನು. ಅವ್ಯಕ್ತ ಭಯವೊಂದು ನನ್ನನ್ನು ಆವರಿಸಿ ಭಯಪಡಿಸುತ್ತದೆ.

ಕೆಲ ಸಮಯದ ಹಿಂದೆ ನನ್ನ ಪರಿಚಿತರ ಎಂಟನೇ ತರಗತಿಯಲ್ಲೇ ಓದುತ್ತಿದ್ದ ಬಾಲೆಯೊಬ್ಬಳು ವೈದ್ಯರಲ್ಲಿಗೆ ತನ್ನ ತಾಯಿಯೊಡನೆ ಹೋಗಿದ್ದಳು. ನಾನು ಬಾಲ್ಯದಲ್ಲಿ ಇದ್ದಂತೆಯೇ ಗುಂಡ ಗುಂಡಗೆ ಇದ್ದ ಹುಡುಗಿಯವಳು. ವೈದ್ಯ ಆಕೆಯ ತಾಯಿಯನ್ನು ಹೊರಗೆ ನಿಲ್ಲಿಸಿ ಹುಡುಗಿಯನ್ನು ಪರೀಕ್ಷಿಸಿದನಂತೆ. ಹುಡುಗಿ ಮನೆಗೆ ಬಂದವಳೇ ಎಲ್ಲರ ಎದುರಿನಲ್ಲಿ ಕಣ್ಣಲ್ಲಿ ನಗೆ ಮಿಂಚು ಹಾರಿಸುತ್ತ ಜೋರಾಗಿ ನಗುತ್ತ ‘ಆ ಡಾಕ್ಟರು ಇದಾನಲ್ಲಾ ಸ್ಟೆತಾಸ್ಕೋಪನ್ನು ಕಿವಿಗೆ ಹಾಕಿಕೊಳ್ಳದೇ ನನ್ನ ಎದೆಗೆ ಹಿಡಿದು ಪರೀಕ್ಷಿಸಿದ ಆಮೇಲೆ ಇಲ್ಲೆಲ್ಲ ಮುಟ್ಟಿದ, ಗಟ್ಟಿಯಾಗಿ ಅಪ್ಪಿಕೊಂಡ. ಹಿಂಗೆಲ್ಲಾ ಪರೀಕ್ಷೆ ಮಾಡ್ತಾರಾ? ಇವನೆಂತಾ ಡಾಕ್ಟರೋ ಏನೋ!’ ಎಂದು ಹೇಳಿದಳು. ಅಷ್ಟೆಲ್ಲಾ ಆದರೂ ನಗುತ್ತ ಹೇಳಿಕೊಳ್ಳಲು ಆ ಹುಡುಗಿಯಿಂದ ಸಾಧ್ಯವಾದದ್ದು ನನಗೆ ಏಕೆ ಸಾಧ್ಯವಾಗದೇ ಹೋಯ್ತು? ಅಷ್ಟು ಸಣ್ಣ ಸಂಗತಿ ನನ್ನ ಬದುಕಿನುದ್ದಕ್ಕೂ ಅದೇಕೆ ಅಷ್ಟು ಹಿಂಸಿಸಿತು ನಾನರಿಯೆ.

ಎಷ್ಟೋ ಚಿಕ್ಕ ಪುಟ್ಟ ಕಂದಮ್ಮಗಳ ಮೇಲೆ ಅತ್ಯಾಚಾರವೇ ನಡೆದು ಪ್ರಾಣ ಕಳೆದುಕೊಂಡವು ಒಂದೆಡೆಯಾದರೆ, ಬದುಕುಳಿದವು ಅದಿನ್ನೆಷ್ಟು ಒಳಗುದಿ ಅನುಭವಿಸಬಹುದೆಂದು ಯೋಚನೆಯಾಗುತ್ತದೆ. ಇಂಥದ್ದೇ ಘಟನೆಗಳು ಇಂದು ತೀರಾ ಸಾಮಾನ್ಯ ಸಂಗತಿಯೆನ್ನುವಂತೆ ಘಟಿಸುತ್ತಲೇ ಇವೆ. ಅಂಥ ಒಂದು ಪತ್ರಿಕಾ ವರದಿಯನ್ನು ಓದಿದ ಸಂದರ್ಭದಲ್ಲಿ ನಾನು ಹೀಗೊಂದು ಕವಿತೆ ಬರೆದೆ.

ದೊಡ್ಡ ಅಣ್ಣ, ಚಿಕ್ಕ ಅಣ್ಣ,
ಸಣ್ಣ ತಂಗಿ, ಪುಟ್ಟ ತಂಗಿ,
ಆ ಮನೆಯ ಚಿನ್ನು, ಈ ಮನೆಯ ಮುನ್ನ
ಆಡುತ್ತಾ ಆಡುತ್ತಾ ನಾಲ್ಕೆಂಟು ಆಟ

‘ಅಣ್ಣನಿಗೆ ತಂಗಿಯ ಮೇಲೆ ಅದೆಷ್ಟು ಅಕ್ಕರೆ
ಕುಡಿಮೀಸೆ ಚಿಗುರಿದರೂ ಪುಟ್ಟ ಪೋರನಂತೆ
ಪುಟ್ಟ ತಂಗಿಯೊಡನಾಡುತ್ತಾನೆ
ಉಪ್ಪಿನ ಮೂಟೆ ಮಾಡಿ ಹೊತ್ತು ತಿರುಗುತ್ತಾನೆ
ಈ ಅಣ್ಣ ತಂಗಿಯ ಅನುಬಂಧ ಹೀಗೆಯೇ ಇರಲಿ
ಹೆತ್ತಮ್ಮನ ದೃಷ್ಟಿ ತಾಕದಿರಲಿ’
ಆಫೀಸಿಗೆ ಹೊರಟಾಗೊಮ್ಮೆ
ಹೆತ್ತೊಡಲ ಅಭಿಮಾನದ ತುಂಬು ಹಾರೈಕೆ

‘ಕಣ್ಣಾಮುಚ್ಚೇ ಕಾಡೇ ಗೂಡೆ
ಉದ್ದಿನ ಮೂಟೆ ಉರುಳೇ ಹೋಯ್ತು
ನಮ್ಮ ಹಕ್ಕಿ ಬಿಟ್ಟೇ ಬಿಟ್ಟೇ
ನಿಮ್ಮ ಹಕ್ಕಿ ಮುಚ್ಚಿಕೊಳ್ಳಿ…ಕೂಕಾಕ್’
ಗೋಡೆಗೆ ಮುಖವಿಟ್ಟು ಬೊಗಸೆ ಮುಚ್ಚಿ
ಜೋರಾಗಿ ಕೂಗುವ ಚಿಕ್ಕ ಅಣ್ಣ

ಮಕ್ಕಳೆಲ್ಲ ಪುರ್ರನೆ ಹಾರಿಹೋದ ಗಳಿಗೆ
ದೊಡ್ಡಣ್ಣ ಪುಟ್ಟ ತಂಗಿಯ
ರೇಷಿಮೆಯ ಕೂದಲ ಸರಿಸಿ
ಕಿವಿಯಲ್ಲಿ ಪಿಸುಗುಟ್ಟುತ್ತಾನೆ
‘ನಾವು ಅಗೋ ಅಲ್ಲಿ ಅಡಗಿಕೊಳ್ಳೋಣ
ಯಾರಿಗೂ ನಾವು ಕಾಣಲ್ಲ
ಯಾರಿಗೂ ನಮ್ಮನ್ನು ಹಿಡಿಯಕ್ಕಾಗಲ್ಲ..’
ದೊಡ್ಡಣ್ಣ ಪುಟ್ ತಂಗಿಯನ್ನು ಹೊತ್ತೊಯ್ದುದನ್ನು
ಯಾರ್ಯಾರೂ ನೋಡಿಲ್ಲ
ಸಿಕ್ಕಿ ಬೀಳೋ ಚಾನ್ಸೇ ಇಲ್ಲ!

‘ಕೈ ಕೈ ಎಲ್ಹೋಯ್ತು
ಸಂತೆಗ್ಹೋಯ್ತು
ಸಂತೆಲ್ಲೇನ್ ತಂತು
ಬಾಳೆಹಣ್ಣ್ ತಂತು
ಬಾಳೆ ಹಣ್ಣ್ ಏನ್ ಮಾಡ್ದೆ..
ಹಣ್ಣ್ ತಿಂದ್ ಸಿಪ್ಪೆನ ಕದಿನಿಂದೆ ಹಾಕ್ದೆ..’
ದೊಡ್ಡಣ್ಣ ಗುಣು ಗುಣು ಹಾಡುತ್ತಲೇ …
ಪುಟ್ಟ ತಂಗಿ ಕುಸು ಕುಸು ಕೊಸರುತ್ತಲೇ…
‘ಕಣ್ಣಾಮುಚ್ಚಾಲೆ ಅಂದ್ರೆ…
ಶ್ ಶ್.. ಸದ್ದು ಮಾಡೋ ಹಾಗಿಲ್ಲ
ಸಿಕ್ಕುಬೀಳೋ ಹಾಗಿಲ್ಲ
ನಾನೇನೋ ತಪ್ಪಿಸ್ಕೊಂಡು ಓಡಿಹೋಗ್ತೀನಿ
ಆಮೇಲೆ ಸಿಕ್ಕಿ ಬೀಳೂದು ನೀನೇ..
ಸಿಕ್ಕಿಬಿದ್ದರೆ ಕಳ್ಳಿಯಾಗೋಳು ನೀನೇ!’

ಅಮ್ಮನೂ ಗದರುತ್ತಾಳೆ….
‘ಅಣ್ಣನ ಜೊತೆಗೇ ಟೂ ಬಿಡ್ತಾರೇನೇ?’
ಈಗೀಗ ಹೊಸದಾಗಿ ಕುಡಿಮೀಸೆಯಡಿ
ಅವಳಿಗೆ ಮಾತ್ರ ಕಾಣುವಂತೆ
ನಗುವುದನು ಕಲಿತಿದ್ದಾನೆ ದೊಡ್ಡಣ್ಣ
ಮತ್ತು ಅಡಿಗಡಿಗೂ ಬೆಚ್ಚುತ್ತ
ತಲೆ ತಗ್ಗಿಸಿ ಓಡಾಡುತ್ತಾಳೆ ಎಳೆ ಬಾಲೆ!

ಒಮ್ಮೆ ಯಾರೋ ಅಷ್ಟು ಬಂಧುಗಳು ಬಂದಿದ್ದರು. ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಬಹಳ ಜೋರೆಂದೂ ತೆಪ್ಪೋತ್ಸವವನ್ನು ನೋಡಲೇಬೇಕೆಂದೂ ಪಟ್ಟು ಹಿಡಿದಿದ್ದರಿಂದ ಹೋದೆವು. ಜನ ಒಬ್ಬರ ಮೇಲೊಬ್ಬರು ತಳ್ಳಿಕೊಂಡು ಹೋಗುವಷ್ಟು ಜನಜಂಗುಳಿ. ನನಗೆ ಅಂಥ ಕಡೆ ಹೋಗುವುದು ಯಾವಾಗಲೂ ಇಷ್ಟವಿಲ್ಲವಾದರೂ ಬಂಧುಗಳಿಗಾಗಿ ಹೊರಟುಬಿಟ್ಟಿದ್ದೆ. ಹೊಳೆಯ ನಡುವಿನ ಬಂಡೆಗಳ ಮೇಲೆ ಕೂತು ಪಟಾಕಿ ಸಿಡಿಸುವುದನ್ನು ನೋಡುವಾಗ ಆ ರಾತ್ರಿಯಲ್ಲಿ ದಿಕ್ಕು ದೆಸೆಗೆಟ್ಟು ಹಾರಾಡುವ ಭಯತ್ರಸ್ತ ಹಕ್ಕಿಗಳ ಕುರಿತು ನನಗೆ ಸಂಕಟವಾಗುತ್ತಿತ್ತು. ಅಂತೂ ತೆಪ್ಪೋತ್ಸವ ಮುಗಿಸಿ ಮತ್ತದೇ ಜನಜಂಗುಳಿಯಲ್ಲಿ ನೂಕಾಟ ತಳ್ಳಾಟದಲ್ಲೇ ಸಾಗುತ್ತಿದ್ದೆವು. ಆಗ ನನ್ನ ಎದುರಲ್ಲೇ ಹೋಗುತ್ತಿದ್ದ ನಮ್ಮ ಹುಡುಗಿಯೊಬ್ಬಳ ಕಂಕುಳಿಗೆ ಒಬ್ಬ ಹಿಂದಿನಿಂದ ಕೈ ಹಾಕಿದ್ದು ಕಂಡಿತು. ಆ ಹುಡುಗಿಯೂ ಬೆದರಿಬಿಟ್ಟಳು. ನನಗೆ ಎಲ್ಲಿ ಅಡಗಿತ್ತೋ ಅಷ್ಟೊಂದು ಸಿಟ್ಟು, ಒಮ್ಮಲೆ ಬಗ್ಗಿದವಳೇ ಕಾಲ ಚಪ್ಪಲಿ ಕೈಗೆ ತೆಗೆದುಕೊಂಡು ಅದು ಕಿತ್ತುಹೋಗುವ ತನಕವೂ ಆ ಗಂಡಸಿಗೆ ತಲೆ ಭುಜ ಎಲ್ಲೆಂದರಲ್ಲಿ ಬಡಿದುಬಿಟ್ಟೆ! ಜನರೆಲ್ಲ ತುಸು ಸರಿದು ಬೆರಗಾಗಿ ನೋಡುತ್ತ ನಿಂತಿಬಿಟ್ಟಿದ್ದರು. ನನಗೆ ಅದಾವುದರ ಅರಿವೇ ಇರಲಿಲ್ಲ. ಎಷ್ಟೋ ಕಾಲದ ಜ್ವಾಲಾನಲದ ಒಳಗುದಿ ಹೀಗೆ ಸಿಡಿದುಬಿಟ್ಟಿತ್ತು.

ಹೀಗೆ ನಾನು ನಿಯಂತ್ರಣ ಕಳೆದುಕೊಂಡದ್ದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಕೆಳಗೆ ಸಾಗರದಿಂದ ಜೋಗ್ ಫಾಲ್ಸ್ ಗೆ ಹೋಗಬೇಕಿತ್ತು. ನನ್ನ ದುರದೃಷ್ಟಕ್ಕೆ ಕೆಂಪು ಬಸ್ಸು ಸಿಕ್ಕಿತು. ಎಲ್.ಬಿ ಕಾಲೇಜು ಸಮೀಪಿಸುವವರೆಗೂ ಖಾಲಿಯಿದ್ದ ಬಸ್ಸಿಗೆ ವಿದ್ಯಾರ್ಥಿಗಳ ಹಿಂಡೇ ಹತ್ತಿತು. ಸಾಗರದಿಂದ ಕಾರ್ಗಲ್ ಮೂಲಕ ಭಟ್ಕಳಕ್ಕೆ ಹೋಗುವ ಬಸ್ಸು ಇದಾದ್ದರಿಂದ ಕೋಗಾರು, ಅರಳುಗೋಡು, ಲಿಂಗನಮಕ್ಕಿ, ಮಲ್ಲಕ್ಕಿ, ನಾಗೊಳ್ಳಿಗೆ ಹೋಗುವ ಕೆಲವರೂ ಈ ಬಸ್ಸಿನಲ್ಲಿ ಇದ್ದರು. ನಾನು ಕಿಟಕಿಯ ಪಕ್ಕ ಕೂತಿದ್ದೆ. ನನ್ನ ಪಕ್ಕದಲ್ಲಿ ಒಬ್ಬ ಮುದ್ದಾದ ಪುಟ್ಟ ಬಾಲೆ, ಹೆಚ್ಚೆಂದರೆ ಹನ್ನೆರಡು ವರ್ಷದವಳು ಇದ್ದಿರಬಹುದು. ಅವಳ ಅಚೆ ಹೆಂಡ ಕುಡಿದ ಬೋಳು ಮಂಡೆಯ ನರಕಟೆ ದೇಹದ ಉದ್ದನೆಯ ಮುದುಕನೊಬ್ಬ ಕೂತಿದ್ದ. ಅವನನ್ನು ನೋಡುತ್ತಿದ್ದರೇ ಒಳ್ಳೆಯ ಭಾವನೆ ಬರುತ್ತಿರಲಿಲ್ಲ. ನನಗೆ ಈ ಹುಡುಗಿಯ ಅಪ್ಪನಿರಬಹುದು ಇವನು ಅನಿಸಿತು. ಹುಡುಗಿಯನ್ನು ಎಲ್ಲಿಗೆ ಹೋಗಬೇಕು ಪುಟ್ಟೀ ಎಂದಾಗ ಕೋಗಾರು ಎಂದಿದ್ದಳು.

ಬಸ್ಸು ಹೋಗುತ್ತಾ ಹೋಗುತ್ತಾ ಹುಡುಗಿ ಸಣ್ಣಗೆ ಕೊಸರಾಡ ಹತ್ತಿದ್ದಳು. ನಾನು ನೋಡಿದೊಡನೆ ಈ ಮುದುಕ ಸರಕ್ಕನೆ ಅವಳ ಬಗಲಿಂದ ಕೈ ಹಿಂದಕ್ಕೆಳೆದುಕೊಂಡಿದ್ದು ಕಂಡಿತು. ಮತ್ತೆ ಸ್ವಲ್ಪ ಹೊತ್ತಲ್ಲಿ ಅವನ ಉದ್ದಟತನ ಹೆಚ್ಚುತ್ತಾ ಹೋದಂತೆ ಹುಡುಗಿಯ ಕೊಸರಾಟವೂ ಹೆಚ್ಚುತ್ತ ಹೋಯಿತು. ನಾನು ತಣ್ಣಗೆ ಗಮನಿಸುತ್ತಲೇ ಇದ್ದೆ. ಯಾವಾಗ ಅವನ ಕೈ ಅವಳ ಎದೆಯನ್ನು ಸವರಿತೋ ನನ್ನ ಹೈ ಹೀಲ್ಡ್ ಚಪ್ಪಲಿ ಕೈಗೆ ಬಂದೇಬಿಟ್ಟಿತು. ಅದರ ಹಿಮ್ಮಡಿಯಿಂದ ಕೂತಿದ್ದವನ ಬೋಳು ನೆತ್ತಿಯ ಮೇಲೆ ಕೈ ಸೋಲುವ ತನಕವೂ ಬಡಿದುಬಿಟ್ಟೆ. ಇಡೀ ಬಸ್ಸು ನನ್ನತ್ತ ನೋಡುತ್ತಿತ್ತು. ರೀ ಕಂಡೆಕ್ಟರ್ರೇ ಪೋಲೀಸ್ ಸ್ಟೇಷನ್ನಿನ ಎದುರು ನಿಲ್ಲಿಸಿ. ಇವನಿಗೊಂದು ಗತಿ ಕಾಣಿಸಿಲ್ಲವೆಂದರೆ ನಾನು ನಾನೇ ಅಲ್ಲ, ಈ ಕಾಲೇಜು ಹುಡುಗರ ಪಕ್ಕದಲ್ಲಾದ್ರೂ ಕೂರಬಹುದು ಈ ಮುದುಕರ ಜೊತೆ ಕೂರುವ ಹಾಗಿಲ್ಲ! ಆ ಪುಟ್ಟ ಮಗುವನ್ನೂ ಬಿಡಲಿಲ್ಲವಲ್ಲೋ ದರಿದ್ರದವನೇ! ಎಂದು ನನಗೇ ಅರಿವಿಲ್ಲದೆ ಕೂಗುತ್ತಿದ್ದೆ. ಕಾಲೇಜು ಹುಡುಗರೆಲ್ಲ ಎದ್ದುಬಿಟ್ಟವು. ಆದಿನ ಮುದುಕ ಹೊಡೆತ ತಿಂದೇ ಸತ್ತುಹೋಗುವವನಿದ್ದ. ಕಂಡೆಕ್ಟರ್ ಡ್ರೈವರ್‍ಗಳು ಜಗಳ ತಣಿಸಿದರು. ಪೋಲೀಸ್ ಠಾಣೆ ಹತ್ತಲೂ ಬಿಡಲಿಲ್ಲ.

ಈಗ ಮಕ್ಕಳಿಗೆ ‘ಗುಡ್ ಟಚ್ ಬ್ಯಾಡ್ ಟಚ್’ ಎಂದು ಹೇಳುವಷ್ಟರ ಮಟ್ಟಿಗೆ ಎಷ್ಟೋ ಜಾಗೃತಿ ಉಂಟಾಗಿದೆ. ಆದರೂ ಈ ಯಾವ ಯಾವುದೂ ನಿಂತೂ ಇಲ್ಲ, ಕಡಿಮೆಯೂ ಆಗಿಲ್ಲ. ಕಾನೂನೇನೋ ಹೇಳುತ್ತದೆ, ಸಾರ್ವಜನಿಕ ಸ್ಥಳಗಳಲ್ಲಿ 11 ಸೆಕೆಂಡುಗಳಿಗಿಂತಲೂ ಹೆಚ್ಚು ಹೊತ್ತು ದಿಟ್ಟಿಸಿ ನೋಡಿದರೂ ದೂರು ದಾಖಲಿಸಬಹುದೆಂದು. ಮಧ್ಯಪ್ರದೇಶದಲ್ಲಿ 12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರ ಸಾಬೀತಾದರೆ ಅಂತಹ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆ ಇದೇ ಡಿಸೆಂಬರ್ 4ರ ಸೋಮವಾರ ಒಮ್ಮತದಿಂದ ಅಂಗೀಕೃತವಾಗಿದೆ. ಇದೊಂದು ಖುಷಿಯ ವಿಚಾರವೇ ಇರಬಹುದು. ಆದರೆ ನಮ್ಮಲ್ಲಿ ದೊಡ್ಡ ದೊಡ್ಡವರ ಮೇಲೆ ನಡೆಯುವ ಇಂಥ ದೌರ್ಜನ್ಯಗಳನ್ನೇ ಪ್ರಶ್ನಿಸುವುದಿಲ್ಲ. ಹಾಗಿರುವಾಗ ಸಂಬಂಧಿಕರ, ಪರಿಚಿತರ ಮುಖವಾಡಗಳ ಮರೆಯಲ್ಲಿ ಮಕ್ಕಳ ಮೇಲೆ ಪ್ರತಿನಿತ್ಯ ಕಾಣದಂತೆ ತಣ್ಣಗೆ ಎಸಗಿಬಿಡುವ ಅವೆಷ್ಟೋ ಲೈಂಗಿಕ ದೌರ್ಜನ್ಯಗಳಿಗೆ ದನಿ ಎತ್ತುವವರು ಯಾರು? ಮಗುವಿಗೆ ಇದನ್ನೆಲ್ಲ ಹೇಳಿಕೊಳ್ಳುವ ವಾತಾವರಣ ಇದೆಯೇ? ಇದ್ದರೂ ಮನೆಯದೇ ಸದಸ್ಯರು, ಪರಿಚಿತರು ಆಗಿದ್ದಾಗ ಅವರ ವಿರುದ್ಧ ದೂರುಗಳು ದಾಖಲಾಗುತ್ತವೆಯೇ? ಆ ಮುಗ್ಧ ಮಕ್ಕಳ ಎಳೆಯ ಮನಸ್ಸುಗಳ ಮೇಲೆ ಮಾಯದಂತೆ ಆಳವಾಗಿ ಉಳಿದುಬಿಡುವ ಈ ನಂಜು ನಖಗಳ ಗೀರುಗಾಯಗಳ ನೋವನ್ನು ನೇವರಿಸುವವರು ಯಾರು? ಹೆಣ್ಣಾಗಿ ರೂಪುತಳೆದ ಗಳಿಗೆಯಿಂದ ತನ್ನನ್ನು ತಾನು ಕೀಳರಿಮೆಗೆ ದೂಡಿಕೊಳ್ಳುತ್ತ ಅಧೀರ ಭಾವವೊಂದನ್ನು ಹೊತ್ತೇ ಬದುಕಬೇಕೇನು?

—-

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?

        ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ಬೆಚ್ಚಗೆ ಕೂತಿರಬಹುದು ನ್ಯಾಯಕ್ಕೆ ಕನ್ನ ಹಾಕೋ ನಾನು ತಿರುಕ ಹೇಗೆ ಆಗಬೇಕು? ತಿರುಕನದೇನೋ ಕನಸಿತ್ತು ನನ್ನದು ಕೂಡಾ ಕನಸೆಂದು ಆ ಕೋಟೆ ಒಳಗಿರುವವರು ಕನವರಿಸುತ್ತಿರಬಹುದು ಬೂದಿ ಮುಚ್ಚಿದ ...

 • 2 weeks ago No comment

  ಕೊಂಕಣಿ ಪ್ರತಿಭೆಯನ್ನರಸಿ ಕರ್ನಾಟಕಕ್ಕೆ ಬಂದ ಪ್ರಶಸ್ತಿ

      ಅತಿಥಿ           ಈ ಬಾರಿ ಕರ್ನಾಟಕವು ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಪ್ರಮಾದವೇನಾದರೂ ಆಯಿತೇ? ಒಂದೇ ಪುರಸ್ಕಾರವನ್ನು ಇಬ್ಬರಿಗೆ ಹಂಚಿರಬಹುದೇ? ಎಂದೆಲ್ಲ ಯೋಚಿಸಿ ತಲೆ ಕೆರೆದುಕೊಳ್ಳುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಕನ್ನಡಕ್ಕೆ 2018ರ ಕೇಂದ್ರಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಘೋಷಣೆಯಾದಾಗಲೇ ಕರ್ನಾಟಕದ ಕೊಂಕಣಿ ಕವಯತ್ರಿ ವಿಲ್ಮಾ ...

 • 2 weeks ago No comment

  ಸಾಹಸದ ಆ ನಿಮಿಷಗಳು

          ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ.         ಬ್ಯಾಂಕರುಗಳು, ಅಕೌಂಟೆಂಟುಗಳು ವರ್ಷದ ಮೊದಲಿಂದ ಹಿಡಿದು ಮಾರ್ಚಿ ತಿಂಗಳವರೆಗೆ ಭಾರೀ ಬ್ಯುಸಿಯಾಗುವಂತೆ ಇಂಗ್ಲೆಂಡಿನ ಸರ್ಕಾರೀ ದಂತ ವೈದ್ಯಕೀಯ ರಂಗದಲ್ಲೂ ಧಾವಂತ ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ಗುತ್ತಿಗೆ ಪಡೆದ ಕೆಲಸವನ್ನು ಮಾರ್ಚಿಯ ಕೊನೆಗೆ ಪೂರ್ತಿಗೊಳಿಸದಿದ್ದರೆ ಮುಂದಿನ ವರ್ಷದ ಕಾಂಟ್ರಾಕ್ಟ್ ನ್ನು ಕಳೆದುಕೊಳ್ಳುವ ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

  ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು. ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ಇಲ್ಲಿಯ ಸಿಬ್ಬಂದಿಯೇ ನನಗೆ ಅನ್ನದಾತರು. ಹೀಗಾಗಿ ಎಲ್ಲೆಲ್ಲೂ ನನಗೆ ಪರಿಚಿತ ಮುಖಗಳೇ. ಅಂದು ಮಾತ್ರ ಸಿಬ್ಬಂದಿಯೊಬ್ಬ ಗಡಿಬಿಡಿಯಲ್ಲಿ ನನ್ನ ಆರ್ಡರ್ ಬರೆದುಕೊಂಡು ಅಷ್ಟೇ ಅವಸರದಲ್ಲಿ ಖಾದ್ಯಗಳನ್ನು ತಂದಿಟ್ಟು ...

 • 4 weeks ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  2 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  3 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  3 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  3 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...