Share

ಮಸಣದಲಿ ಹುಟ್ಟಿ ಮಸಣದಲಿ ಮಡಿದು ಹೂಳಲೊಂದು ತಾವಿಲ್ಲ!
ಕಾದಂಬಿನಿ ಕಾಲಂ

 

 

 

 

 

 

 

 

 

 

 

ಈ ಕಬರಸ್ಥಾನದಲ್ಲಿ ಗೋರಿಗಳ ಆಸುಪಾಸಿನಲ್ಲೇ ಕಟ್ಟಿದ ಗುಡಾರಗಳಲ್ಲಿ ಎಷ್ಟೋ ಸಲ ಮಕ್ಕಳು ಹುಟ್ಟಿದ್ದನ್ನು ನಾನು ನೋಡಿದ್ದೇನೆ.

 

 

ನ್ನಪ್ಪ ಬಣ್ಣಿಸುತ್ತಿದ್ದ ಕಾರಾವಾನ್ ಹೀಗೆಯೇ ಇರುತ್ತಿತ್ತೇನೋ ಎಂದು ಬೆರಗುಗಣ್ಣಾಗಿ ಪ್ರತಿಸಲವೂ ಬೇಲಿಯಂಚಲ್ಲಿ ನಿಂತು ನೋಡುತ್ತಿದ್ದೆ. ಆ ಕಾರಾವಾನಿನ ಮುಂಚೂಣಿಯಲ್ಲಿ ನಾಯಿಗಳು ಪಿರಿಪಿರಿ ಓಡುತ್ತ ಸಿಕ್ಕ ಸಿಕ್ಕದ್ದಕ್ಕೆಲ್ಲ ಮೂಸುತ್ತ ಮೂತ್ರ ಹೊಯ್ಯುತ್ತ ಬರುತ್ತಿದ್ದರೆ ನಮ್ಮ ಬೀದಿಯ ನಾಯಿಗಳು ಅವುಗಳತ್ತ ನೋಡಿ ಬೊಗಳುತ್ತ ಗಲಾಟೆಯೆಬ್ಬಿಸುತ್ತಿದ್ದವು. ದೊಡ್ಡ ದೊಡ್ಡ ಪಾತ್ರೆ ಪರಡಿ, ಮಾಸಲು ಬಟ್ಟೆಯ ಗಂಟು ಮೂಟೆ ಮೂಟೆಗಳನ್ನೆ ಬೆನ್ನಿನ ಎರಡೂ ಬದಿಗಳಲ್ಲಿ ಇಳಿಬಿಟ್ಟುಕೊಂಡು ಹೋಗುವ ಎತ್ತು, ದನ, ಕತ್ತೆಗಳ ಮೇಲೆ ಕೋಳಿಗಳು, ಮಂಗಗಳು ಮತ್ತು ಸಣ್ಣಪುಟ್ಟ ಮಕ್ಕಳ ಸವಾರಿ. ಗಂಡಸರು ಉದ್ದುದ್ದ ಬಿದಿರು ಗಣೆ ಹೆಗಲಲ್ಲಿ ಹೊತ್ತಿದ್ದರೆ ಇವುಗಳ ಎರಡೂ ಕೊನೆಗಳಲ್ಲೂ ತೂಗುವ ಪಾತ್ರೆ. ಕೊಡಪಾನ, ಬಟ್ಟೆಯ ಗಂಟು ಮೂಟೆಗಳು. ಈ ಗಣೆಯ ಮೇಲೆ ಸಾಲಾಗಿ ಕೂತ ಹೆಂಟೆ ಹುಂಜಗಳು. ಹೆಂಗಸರು ಬಸುರು, ಹಸುಳೆಗಳನ್ನು ಕಟ್ಟಿಕೊಂಡು ಯಾವುದೋ ಅರ್ಥವಾಗದ ವಿಚಿತ್ರ ಭಾಷೆಯಲ್ಲಿ ಮಾತಾಡುತ್ತ ನಡೆಯುತ್ತಿದ್ದರು. ಇವರ ನಡುವೆ ಚಿಟಿಪಿಟಿ ಹೆಜ್ಜೆ ಹಾಕುವ ಚಳ್ಳೆ ಪುಳ್ಳೆ ಮಕ್ಕಳು. ಯಾರ ಬಟ್ಟೆಯಾದರೂ ತೊಳೆದಂತಿಲ್ಲ. ಯಾರ ಕೂದಲಾದರೂ ಬಾಚಿದಂತಿಲ್ಲ. ಯಾರೂ ಮಿಂದಂತಿಲ್ಲ. ಕಾಲಲ್ಲಿ ಚಪ್ಪಲಿಗಳಿಲ್ಲ, ಒಡವೆ, ಒಪ್ಪ ಓರಣ ಏನೊಂದೂ ಇಲ್ಲ. ಯಾರೊಬ್ಬರ ಮೊಗದಲ್ಲೂ ನಗುವಿಲ್ಲ ನಲಿವಿಲ್ಲ.

ಅಪ್ಪ ವಿವರಿಸಿದ ಹೊನ್ನಂದಣ, ಮೆದು ಮೆತ್ತನೆಯ ರಂಗು ರಂಗಾದ ರೇಷಿಮೆಯ ವಸ್ತ್ರ, ಒಡವೆಗಳಲಿ ಮುಳುಗಿದ ರಾಜ ಪರಿವಾರದ ಮಹಿಳೆಯರು, ಆ ಆನೆ, ಕುದುರೆ, ಒಂಟೆಗಳು, ಆ ವೀರ ಸೈನಿಕರು, ಕಾಲಾಳುಗಳು ದಿವಾಳಿಯಾಗಿ ದಿಕ್ಕೆಟ್ಟು ಇಲ್ಲಿ ನನ್ನ ಕಣ್ಣೆದುರು ಈ ರೂಪದಲ್ಲಿ ಹೋಗುತ್ತಿರುವುದೋ ಎಂದು ಯೋಚಿಸುತ್ತಿದ್ದೆ. ಈ ಕಾರಾವಾನು ಪ್ರತಿ ವರ್ಷ ನನ್ನ ಮನೆಯೆದುರಿನ ಟಾರ್ ರಸ್ತೆಯಲ್ಲಿ ಬಂದು ನನ್ನ ಮನೆಯ ಎಡಕ್ಕೆ ಕವಲೊಡೆದ ಮಣ್ಣ ದಾರಿಗೆ ಹೊರಳಿ ನನ್ನ ಹಿತ್ತಲ ಬೇಲಿಯಾಚೆಗಿನ ಕಬರಸ್ಥಾನದ ಗೋರಿಗಳ ಮತ್ತು ನಮ್ಮ ಬೇಲಿಯ ನಡುವಿನ ಪುಟ್ಟ ಬಯಲಲ್ಲಿ ಬಿಡಾರ ಹೂಡುವವರೆಗೂ ನೋಡುತ್ತಲೇ ಇರುವ ನನಗೆ ಇವರು ಬಂದರೆಂದರೆ ಖುಷಿ. ನಮ್ಮ ಹಿತ್ತಲಲ್ಲಿ ಒಣಗಿ ಬಿದ್ದ ಮರವೊಂದರ ಬೊಡ್ಡೆಯೇರಿ ಕೂತು ಇವರನ್ನೇ ನೋಡುತ್ತಿರುವ ಫುಲ್ ಟೈಮ್ ಕೆಲಸ. ಕೆಲ ಕಾಲ ಇವರಲ್ಲಿ ಟೆಂಟು ಹೂಡಿದ್ದು ಮತ್ತೆ ಎತ್ತಲೋ ಗಂಟು ಮೂಟೆ ಕಟ್ಟಿ ಹೋದರೆಂದರೆ ನನಗೆ ಬೇಜಾರು. ಎಷ್ಟೋ ಸಲ ನಾನು ಶಾಲೆಗೆ ಹೋದಾಗ ಅವರು ಬಂದು ಬಿಡಾರ ಹೂಡಿ ನನಗೆ ಸರ್ಪ್ರೈಸ್ ಖುಷಿ ಕೊಟ್ಟದ್ದೂ ನಾನಿಲ್ಲದ ಹೊತ್ತಲ್ಲೇ ಬಿಡಾರ ಕಿತ್ತುಕೊಂಡು ಹೋಗಿ ನಿರಾಶೆ ಮೂಡಿಸಿದ್ದೂ ಇತ್ತು.

ಇವರನ್ನು ಅಪ್ಪ ಶಿಳ್ಳೆ ಕ್ಯಾತರು ಎಂದು ಹೇಳುತ್ತಿದ್ದರು. ಇವರು ಬಿಡಾರ ಹೂಡಿದೊಡನೆ ನಮ್ಮ ನೆರೆಹೊರೆಯವರು ಏನಾದ್ರೂ ಕದ್ದುಕೊಂಡು ಹೋಗ್ತಾರೆ ಹುಷಾರು ಎಂದು ಪರಸ್ಪರ ಎಚ್ಚರಿಸಿಕೊಳ್ಳುತ್ತಿದ್ದರು. ಆದರೆ ಅವರು ಬಂದಾಗ ಏನೊಂದೂ ಕಳುವಾದದ್ದು ನನಗೆ ನೆನಪಿಲ್ಲ. ಬೆಳಗಾಯಿತೆಂದರೆ ಗಂಡಸರು ಎತ್ತಲೋ ಹೋಗಿಬಿಡುತ್ತಿದ್ದರು. ಕೆಲವು ಹೆಂಗಸರು ಬಸುರು, ಮಕ್ಕಳನ್ನು ಹೊತ್ತೇ ಬಿಸಿಲಲ್ಲಿ ಕೂದಲು, ಹೇರ್ ಪಿನ್ ಎನ್ನುತ್ತ ಹೇರ್ ಪಿನ್ನು ಬಾಚಣಿಕೆಗಳನ್ನು ಬಗಲಿಗೆ ನೇತು ಹಾಕಿಕೊಂಡು ವ್ಯಾಪಾರಕ್ಕೆ ಹೋದರೆ ಮತ್ತೆ ಕೆಲವು ಹೆಂಗಸರು ಲಾವಂಚದೆಣ್ಣೆ, ಹಾವು ಮನೆ ಬಳಿ ಬಾರದಂತೆ ಕಾಪಾಡುವ ಬೇರು, ಕರಡಿಯ ಕೂದಲು, ಆನೆಯ ಬಾಲದ ಕೂದಲು, ಹುಲಿಯುಗುರು ಇತ್ಯಾದಿ ಮಾರುತ್ತ ಪೇಟೆಯ ಬೀದಿಗಳನ್ನೆಲ್ಲ ಅಲೆದು ಬರುತ್ತಿದ್ದರು. ನಂತರ ಊರವರು ಶೌಚಕ್ಕೆ ಹೋಗಿ ತೊಳೆದುಕೊಳ್ಳುತ್ತಿದ್ದ ಕೆರೆಯ ಜಾಗಗಳಲ್ಲಿಂದ ನೀರು ತುಂಬಿ ತಂದು ಅಡುಗೆ ಬೇಯಿಸುತ್ತಿದ್ದರು. ಸಂಜೆಯಾಗುತ್ತಿದ್ದ ಹಾಗೆಯೇ ಗಂಡಸರು ಕಾಡುಕೋಳಿ, ಮೊಲ, ಬರ್ಕದ ಮಾಂಸ ಇತ್ಯಾದಿ ತಂದು ಮನೆ ಮನೆಗೂ, ಹೋಟೆಲುಗಳಿಗೂ ಮಾರಲು ಹೋಗುವುದು, ರಾತ್ರಿ ಕುಡಿದುಬರುವುದು, ಜೋರಾಗಿ ಹೊಡೆದಾಟ, ಹೆಂಗಸರ ಕಿರುಚಾಟ, ಮಕ್ಕಳ ರೋದನೆ, ಇದರ ನಡುವೆ ಇವರ ನಾಯಿ ಕತ್ತೆಗಳ ಗಲಾಟೆ, ಅವರ ಒಲೆಗಳ ಹೊಗೆ, ಕಾಡು ಪ್ರಾಣಿ, ಪಕ್ಷಿಗಳ ಪುಕ್ಕಗಳನ್ನು ಸುಟ್ಟ ವಾಸನೆ ಇದೆಲ್ಲ ತುಂಬಿಕೊಂಡು ನಾವಿದ್ದ ಪರಿಸರ ವಿಚಿತ್ರ ರೀತಿಯಲ್ಲಿ ಬೇರೆಯದಾಗಿ ಮಾರ್ಪಾಟಾಗಿರುತ್ತಿತ್ತು.

ಈ ಕಬರಸ್ಥಾನದಲ್ಲಿ ಗೋರಿಗಳ ಆಸುಪಾಸಿನಲ್ಲೇ ಕಟ್ಟಿದ ಗುಡಾರಗಳಲ್ಲಿ ಎಷ್ಟೋ ಸಲ ಮಕ್ಕಳು ಹುಟ್ಟಿದ್ದನ್ನು ನಾನು ನೋಡಿದ್ದೇನೆ. ಕಬರಸ್ಥಾನದ ದೆವ್ವಗಳು ಮಕ್ಕಳಿಗೆ ಏನೂ ಮಾಡುವುದಿಲ್ಲವೇ ಅಪ್ಪಾ ಎಂದು ಕೇಳಿದಾಗ ‘ನೀನೂ ಅಲ್ಲೇ ಆಡುತ್ತ ಇರ್ತೀಯಲ್ಲ ನಿನಗೇನಾದ್ರೂ ಮಾಡಿತ್ತಾ?’ ಎಂದು ಕೇಳುತ್ತಿದ್ದರು ಅಪ್ಪ. ನಾನು ಆಲೋಚಿಸಿ ಅಡ್ಡಡ್ಡ ತಲೆಯಾಡಿಸುತ್ತಿದ್ದೆ. ‘ಈ ದೆವ್ವ ಭೂತ ಎಲ್ಲ ಸುಳ್ಳು. ಸತ್ತವರೆಲ್ಲ ದೆವ್ವ ಆಗಿದ್ದರೆ ಬದುಕಿದ್ದವರಿಗೆ ಜಾಗ ಸಾಲುತ್ತಿರಲಿಲ್ಲ’ ಎಂದು ಅಪ್ಪ ನಕ್ಕಾಗ ನನಗೆ ಧೈರ್ಯ.

ಆ ದಿನಗಳಲ್ಲಿ ದೊಂಬರು ಕೂಡ ತಂಡ ತಂಡವಾಗಿ ಬರುತ್ತಿದ್ದರೂ ಅವರು ಈ ಕಬರಸ್ಥಾನದ ಜಾಗಕ್ಕೆ ಬರದೇ ನಮ್ಮೂರಿನ ರೈಸ್ ಮಿಲ್ಲೊಂದರ ಪಕ್ಕದಲ್ಲಿ ಟೆಂಟ್ ಹಾಕುತ್ತಿದ್ದರು. ದೊಂಬರು ಬಂದರೆ ನಮಗೆಲ್ಲ ದೊಂಬರಾಟ ನೋಡುವ ಖುಷಿ. ಪುಟ್ಟ ರಿಂಗಿನಲ್ಲಿ ನುಸಿಯುವ ಹೆಂಗಸು, ಹಗ್ಗದ ಮೇಲೆ ಗಣೆ ಹಿಡಿದು ನಡೆಯುವ ತರುಣಿ, ಎತ್ತರದ ಕಂಬದ ತುದಿಯಲ್ಲಿ ಅಂಗಾತ ಮಲಗುವ ಬಾಲೆ, ನಂತರ ಅವಳನ್ನು ಗಣೆಯ ಸಮೇತ ಬಾನಿಗೆ ಚಿಮ್ಮಿ ಕ್ಯಾಚ್ ಮಾಡುವ ಗಂಡಸು, ಸೈಕಲ್ ಚಕ್ರದಲ್ಲಿ ನುಗ್ಗುವ ಮಂಗ, ತಟ್ಟೆ ಹಿಡಿದು ಚಿಲ್ಲರೆ ಸಂಗ್ರಹಿಸುವ ಬಾಲಕ, ಬ್ಯಾಂಡು ಬಾರಿಸುತ್ತ ಈ ಶೋ ನಡೆಸುವ ಗಂಡಸು ಇವೆಲ್ಲ ನಮ್ಮ ಕೌತುಕದ ಸಂಗತಿಗಳು ಆಗ.

ಉದ್ದನೆಯ ತುತ್ತೂರಿಯಂಥದ್ದು ಬಹುಷಃ ಅದು ಶಹನಾಯಿಯಿರಬೇಕು ಅದನ್ನು ಊರಿನ ಕಿವಿ ಸೀಳುವಂತೆ ಊದುತ್ತ ಬಣ್ಣ ಬಣ್ಣದ ಕೌದಿಗಳನ್ನು ಬೆನ್ನ ಮೇಲೆ ಹರವಿಕೊಂಡು ಕೋಡಿಗೆ ಬಣ್ಣದ ರಿಬ್ಬನ್ನು ಕಟ್ಟಿಕೊಂಡ ಕೋಲೆ ಬಸವನ ಜೊತೆ ಭಿಕ್ಷಕ್ಕೆ ಬರುವ ಅವರೊಂದಷ್ಟು ಮಂದಿ, ಕಂಬಳಿಯ ವಿಶಿಷ್ಟ ವಿನ್ಯಾಸದ ನಿಲುವಂಗಿ, ಪೇಟ ತೊಟ್ಟು ಕೈಲಿ ಟುಡುಡುಡುಡುಣ್ ಎಂಬ ಸದ್ದಿಂದ ಆಕರ್ಷಿಸುತ್ತ ಬರುವ ಬುಡುಬುಡಿಕೆಯವರೊಂದಷ್ಟು, ಭಿಕ್ಷಕ್ಕೆ ಬಂದು ಹೋದ ಮೇಲೂ ಡರೆಂ ಡರೆಂ ಡರೆಂ ಟಟ್ಟ ಎಂಬ ಸದ್ದಿನ ಗುಂಗನ್ನು ಇಡೀ ದಿನ ಕಿವಿಗೆ ಅಂಟಿಸಿಬಿಡುವ ತಲೆಯೆಲ್ಲ ಸಿಕ್ಕಾದ ಮುಖದ ತುಂಬ ಅರಿಶಿಣ ಕುಂಕುಮ ಮೆತ್ತಿಕೊಂಡ ಜೋಗತಿಯರೂ, ನೆತ್ತರು ಕಿತ್ತುಕೊಳ್ಳುವಂತೆ ತಮ್ಮನ್ನು ತಾವೇ ಚಾಟಿಯಲ್ಲಿ ಹೊಡೆದುಕೊಳ್ಳುವ, ಬಾಯಿಗೆ ದಬ್ಬಣ, ಚಾಕುಗಳಿಂದ ಇರಿದುಕೊಳ್ಳುವ ಗಂಡಸರೂ ನಮ್ಮೂರಿನ ಗಲ್ಲಿ ಗಲ್ಲಿಗಳಲ್ಲಿ, ಸಂತೆ ಬೀದಿ, ಸರ್ಕಲ್ಲುಗಳಲ್ಲಿ ಆಗ ಕಾಣುತ್ತಿದ್ದರು. ಇವರು ಹೊರಡಿಸುವ ಈ ಎಲ್ಲ ಸದ್ದುಗಳೂ ನಮಗೆ ಚಿರಪರಿಚಿತವಾಗಿದ್ದವು.

ಬರಬರುತ್ತಾ ಇವರೆಲ್ಲ ಅದೆಲ್ಲಿ ಮರೆಯಾಗಿ ಹೋದರೋ ನಾನರಿಯೆ. ಕೊನೆ ಕೊನೆಗೆ ಈ ಅಲೆಮಾರಿತನವನ್ನು ಬಿಟ್ಟು ನೀರಿರುವ ತಾಣಗಳಲ್ಲಿ ಅಲ್ಲಲ್ಲೇ ನೆಲೆಯಾದರೆನಿಸುತ್ತದೆ. ನಮ್ಮ ಮನೆಯ ಹಿಂದಿದ್ದ ಕಬರಸ್ತಾನವೂ ತನ್ನ ಸುತ್ತ ಆಳೆತ್ತರದ ಕಾಂಪೌಂಡನ್ನ ಎಬ್ಬಿಸಿಕೊಂಡು ನಿಂತಿದೆ.

ಕೆಲ ವರ್ಷಗಳಿಂದ ತುಂಗೆಯ ತಟದಲ್ಲಿ ಒಂದಷ್ಟು ಗುಡಾರಗಳನ್ನು ನಾನು ನೋಡಿದ್ದೆ. ಒಮ್ಮೆ ತುಂಗೆಗೆ ನೆರೆಯೇರಿದ್ದಾಗ ಎಲ್ಲ ಟೆಂಟುಗಳನ್ನೂ ಖಾಲಿ ಮಾಡಿಸಲಾಗಿತ್ತಾದರೂ ಒಂದು ಕುಟುಂಬ ಅಲ್ಲಿಯೇ ಇತ್ತು ಇನ್ನೂ. ಯಾವ ಕ್ಷಣದಲ್ಲಿ ಟೆಂಟಿನ ಬುಡಕ್ಕೂ ನೀರು ನುಗ್ಗುವುದೋ ತಿಳಿಯದಾಗಿತ್ತು. ಅಡುಗೆಯನ್ನೂ ಮಾಡದೆ ಆ ಕುಟುಂಬದ ಗಂಡ ಹೆಂಡತಿ ಮಕ್ಕಳು ಗಲಿಬಿಲಿಯಿಂದ ಓಡಾಡುತ್ತಿದ್ದರು. ಮಳೆ ಒಂದೇ ಸಮನೆ ಬಿರುಗಾಳಿಯ ಸಮೇತ ರಭಸವಾಗಿ ಸುರಿಯುತ್ತಲೇ ಇತ್ತು, ನದಿಯೂ ಕೆಂಪೇರಿ ಸಿಕ್ಕ ಸಿಕ್ಕಿದ್ದನ್ನೆಲ್ಲ ನುಂಗುತ್ತ, ಸೆಳವಿನೊಳಗೆ ಸೆಳೆದೊಯ್ಯುತ್ತ ಸೊಕ್ಕಿ ಮೊರೆಯುತ್ತಲಿತ್ತು.

ಒಂದಷ್ಟು ಸ್ವೆಟರು, ಬಟ್ಟೆ, ತಿನಿಸು, ಹಣದೊಂದಿಗೆ ನಾನು ಈ ಟೆಂಟಿನೊಳಗೆ ಅಡಿಯಿಟ್ಟಿದ್ದೆ. ಹೀಗೆ ಶುರುವಾದ ದೊಂಬರ ಗುಡಾರದೊಟ್ಟಿನ ನನ್ನ ಸ್ನೇಹ ಇನ್ನೂ ಮುಂದುವರೆದಿದೆ. ಈಗಲೂ ಆ ದಾರಿಯಾಗಿ ಹೋಗುವಾಗ ಒಳಗೆ ಹೋಗಿ ಕೂತು ಮಾತಾಡಿ ಹೋಗುತ್ತೇನೆ. ನದಿಯ ಎರಡೂ ಬದಿಯಲ್ಲಿ ಸುಮಾರು ಇಪ್ಪತ್ತು ಇಪ್ಪತ್ತೈದು ಗುಡಾರಗಳು ಇದ್ದವು. ಇವರನ್ನೆಲ್ಲ ನೋಡುವಾಗ ರಾಜಾಧಿರಾಜರು ಕಟ್ಟಿದ ಉಕ್ಕಿನ ಕೋಟೆ ಕೊತ್ತಳಗಳೂ, ಅರಮನೆಗಳೂ ಮಣ್ಣಲ್ಲಿ ಮಣ್ಣಾದರೂ ಒಂದಿಷ್ಟಾದರೂ ಸುಕ್ಕಾಗದ, ಮುಕ್ಕಾಗದ, ಅಳಿಯದ ಗುಡಿಸಲುಗಳ ಬಗ್ಗೆ ನನಗೆ ಅಚ್ಚರಿಯಾಗುತ್ತದೆ. ಈ ದೇಶ ಗುಡಿಸಲು, ಗುಡಾರ ಮುಕ್ತ ದೇಶವಾಗುವ ಕನಸು ಕನಸು ಮಾತ್ರವೇ? ಈ ಬಗ್ಗೆ ಯೋಚಿಸುತ್ತ ಯೋಚಿಸುತ್ತ ನಾನೊಮ್ಮೆ ಈ ಕವಿತೆ ಬರೆದೆ….,

ನನಗೀಗ ಕಿಚ್ಚು ಹಚ್ಚುವ ಕನಸು…
ಮೇಲೆ ತೂಗುವ ಆ ಸ್ವರ್ಗಗಳ ನಗು ಕೇಕೆ ಗದ್ದಲ
ಹಾಡು ಕುಣಿತ ಚೆಲುವು ಚಿತ್ತಾರಗಳೆಲ್ಲ
ನನ್ನೊಳಗೆಂದೂ ಕಿಚ್ಚಿನ ಕಿಡಿ ಹೊತ್ತಿಸಿದ್ದಿಲ್ಲ
ಅಲ್ಲಿಂದ ತೂರಿಬರುವ ಅವರ ಮೋಜಿನ ಬೇಟೆಯ ಕಣ್ಣ
ಈಟಿ ಭರ್ಜಿ ಬಾಣಗಳೂ ನಾಟಿದ್ದಿಲ್ಲ
ಅವರಾಟದ ಕೊಂಬು ಕೂರ್ದಸಿಗಳೆಂದೂ
ಈ ಎದೆ ಬಾಗಿಲ ತಿವಿದದ್ದಾಗಲೀ
ಆ ಕುಟಿಲ ಕೇಕೆ ಅಟ್ಟಹಾಸಗಳೆಂದೂ
ಈ ಕಿವಿಗಳ ಸೀಳಿದ್ದಾಗಲೀ ಇಲ್ಲ
ನನ್ನೊಳಗೆಂದೋ ಆರಿಹೋದ ಉರುವಲಿಗಂಟಿದ
ತಣ್ಣನೆ ಇದ್ದಲಿಗೆ ಕಿಡಿಚುಕ್ಕೆ ಮೂಡಿ
ಎದೆಯುಸಿರ ತಿದಿಯೂದಿ ಹೊಗೆಯೆದ್ದಿದ್ದು
ಧಗ್ಗನೆ ಬೆಂಕಿಹೊತ್ತಿ
ಎಲ್ಲ ಉರಿದುರಿದು ಬೂದಿಯಾದದ್ದು ಇಲ್ಲವೇ ಇಲ್ಲ!

ನಾನು ಶತ ಶತಮಾನಗಳ ಉದ್ದಕೂ
ಆ ಗುಡಿಸಲುಗಳಲಿ ನೋಟ ಊರಿ
ಗೋರ್ಕಲ್ಲ ಮೇಲೆ ಕಲ್ಲೇ ಆಗಿ ಕೂತಿದ್ದೇನೆ
ಉಕ್ಕಿನರಮನೆಗಳೂ ವಜ್ರದ ಕೋಟೆಗಳೂ
ಅಮೃತಶಿಲೆಯ ಮಹಲುಗಳೇ
ಉದುರುದುರಿ ಮುದುರಿ ಮಣ್ಣು ಮುಕ್ಕಿದರೂ
ತುಸುವೂ ಸುಕ್ಕಾಗದ ಮುಕ್ಕಾಗದ ಸನಾತನ
ಗುಡಿಸಲುಗಳ ಕಂಡು ಬೆಕ್ಕಸ ಬೆರಗಾಗಿದ್ದೇನೆ!
ಆ ಗುಡಿಸಲುಗಳೋ…
ಶತ ಶತಮಾನಗಳ ಉದ್ದಕೂ ಆ ಮಣ್ಣ ತುಳಿ ತುಳಿದು
ಬಡಿದು ಗಟ್ಟಿಸಿದ ತಳಪಾಯದ ಮೇಲೆ
ನೋವು ಆಕ್ರಂದನಗಳ ಗೋಡೆಗಳು
ಅವಮಾನದ ಸೂರಿನಡಿ ನಡುಬಾಗಿ ಕಡುಗತ್ತಲಲ್ಲಿ
ಸರಿದಾಡುವ ಕಾಯಗಳ ಬೆನ್ನುಗಳಲ್ಲೆದ್ದ
ಜಡ್ಡು ತೊಗಲಿನ ಮಣಭಾರದ ಮೂಟೆಗಳು!
ದುಃಖದ ಬಿಕ್ಕುಗಳು ಮನೆ ಒಲೆಯಲ್ಲೆಲ್ಲ
ಹನಿ ಹನಿ ತೊಟ್ಟಿಕ್ಕಿ ಸೋರಿ ಸೋರಿ
ಎಂದೋ ಸತ್ತ ಬೆಂಕಿಗೋರಿ..
ಆ ಗುಡಿಸಲುಗಳಲಿ ಕಿಡಿ ಹುಟ್ಟುವುದಿಲ್ಲ!

ಕಿಚ್ಚು ಹಚ್ಚುವ ಕನಸಿನ
ಎಚ್ಚರದ ದೀಪ ಎದೆಯಲ್ಲುರಿಸಿ ಕಾಯುವ
ನನ್ನೊಳಗಿನ ಕಿಚ್ಚಿನ ಕಿಡಿಯ ಹತಾಶೆ ನನಗೆ ತಿಳಿಯದ್ದೇನಲ್ಲ…
ನನ್ನ ದೀಪದಿಂದ ಸಿಡಿದ ಆ ಕಿಡಿ
ಆ ಗುಡಿಸಲುಗಳತ್ತ ಹೊರಳುತ್ತ ಅಳುಕುತ್ತ ತೆವಳುತ್ತ
ಆರಿ ಸತ್ತು ಶವವಾಗುವುದ ನೋಟವೂರಿ ನಿಟ್ಟಿಸಿ
ನಿಡುಸುಯ್ದ ಮೇಲೂ ನನ್ನೊಳಗೆ ಆರದ
ನಿಗಿ ನಿಗಿ ಕಿಚ್ಚು ಹಚ್ಚುವ ಕನಸು!

ಅಳು ಅವಮಾನಗಳೆಲ್ಲ ಹರಳುಗಟ್ಟಿ
ಆ ಹರಳ ರಾಶಿಯೊಳಗೆ ತಡಕಾಡಿ ಚಕಮಕಿಯ ಕಲ್ಲುಗಳಾಯ್ದು
ಒಂದರ ಮೇಲೊಂದು ಕುಟ್ಟಿ ಕುಟ್ಟಿ ಉಜ್ಜುಜ್ಜಿ
ಸಂಘರ್ಷದೊಳಗಿಂದ ಸಟ್ಟನೊಂದು ಕಿಡಿ ಹುಟ್ಟಿ
ಜೀವದುಸಿರ ಬಸಿದು ಎದೆಯ ತಿದಿಯೂದಿ
ಕಿಡಿಯ ಕೆಂಡವಾಗಿಸಿ ಎದ್ದ ಹೊಗೆಗೆ
ಕೆಂಪಡರಿದ ಅಷ್ಟೂ ಕಣ್ಣುಗಳ ಉರಿಯಲು ಬಿಟ್ಟು
ಧಗ್ಗನೇಳುವ ಬೆಂಕಿಯ ಕೊಳ್ಳಿಯಿಟ್ಟು
ಆ ಸ್ವರ್ಗಗಳನ್ನಲ್ಲ; ಆ ಅಷ್ಟೂ ಗುಡಿಸಲುಗಳ
ಸುಟ್ಟು ಬೂದಿಯಾಗಿಸುವ ಕನಸು!
ಕಿಡಿ ಕೆಂಡವಾಗಿ, ಕಾಳ್ಗಪ್ಪನೆ ಹೊಗೆಯೆದ್ದು
ಬೆಂಕಿ ಶಿಖೆಗಳು ಎತ್ತರೆತ್ತರಕೆ ರಾಚಿ ರಾಚಿ
ಆ ಸ್ವರ್ಗಗಳ ಅಂಡು ಸುಡುವ ಹಾಗೆ
ನನಗೀಗ ಕಿಚ್ಚು ಹಚ್ಚುವ ಕನಸು!!

ಇತ್ತೀಚೆ ಫೇಸ್ಬುಕ್ಕಿನಲ್ಲಿ ನನ್ನ ಪೋಸ್ಟ್ ಒಂದಕ್ಕೆ ಸಿ.ಎಸ್.ದ್ವಾರಕನಾಥ್ ಅವರು ಕಮೆಂಟಿಸುತ್ತಿದ್ದಾಗ ನಿರಾಶ್ರಿತ ಗುಡಾರದ ಜನರಿದ್ದರೆ ಮಾಹಿತಿ ಕೊಡಿ ಎಂದಿದ್ದರು. ನಾನು ಇದ್ದಾರಲ್ಲ ಸರ್ ನಮ್ಮ ತುಂಗೆಯ ತಟದಲ್ಲಿ ಎಂದಿದ್ದೆ. ನಂತರ ಇದೇ ವಿಷಯವಾಗಿ ನಾವು ಕರೆ ಮಾಡಿ ಮಾತಾಡಿಕೊಂಡೆವು. ಇಂಥ ಜನರ ಮಾಹಿತಿ ಸಂಗ್ರಹಿಸಿಕೊಡುವಂತೆ ಅವರು ಹೇಳಿದ್ದರಿಂದ ಈ ದೊಂಬರ ಗುಡಾರಗಳಿಗೆ ಹೋಗುವ ಯೋಜನೆ ಹಾಕಿಕೊಂಡೆ.

ಒಂದು ದಡದ ಗುಡಾರಗಳನ್ನು ಖಾಲಿ ಮಾಡಿಸಿ ಅಲ್ಲಿ ದೊಡ್ಡ ಕಲ್ಯಾಣ ಮಂಟಪ ಎದ್ದು ನಿಂತಿತ್ತು. ಇನ್ನೊಂದು ಬದಿಯಲ್ಲಿ ನಾನು ಸದಾ ಭೇಟಿಕೊಡುತ್ತಿದ್ದ ಗುಡಾರವೂ ಸೇರಿ ಸುಮಾರು ಹದಿನೆಂಟು ಗುಡಾರಗಳಿದ್ದವು. ತಾಲ್ಲೂಕು ಕೇಂದ್ರದ ಒಳಗೆ ಮುಖ್ಯ ರಸ್ತೆಯಲ್ಲೇ ಇವರಿರುವ, ಗುಡಾರಗಳಲ್ಲಿ ನಲವತ್ತು ಓಟುಗಳು ಇರುವ ಕಾರಣಗಳಿಂದ ಮತ್ತು ಊರಿನ ಒಬ್ಬ ತರುಣನ ಓಡಾಟದ ಫಲವಾಗಿ ಒಂದು ನಲ್ಲಿ ಹಾಕಿಸಲಾಗಿತ್ತು. ಟಾರ್ಪಾಲುಗಳನ್ನು ಹೊದ್ದು ನಿಂತ ಗುಡಾರಗಳಲ್ಲಿ ವಿದ್ಯುತ್ ಇಲ್ಲ. ಅರೆ ಬರೆ ಓದಿಕೊಂಡ ಮಕ್ಕಳು ಊರ ತುಂಬ ಕೆಲಸಕ್ಕೆ ಹೋಗುತ್ತವೆ. ಹೆಂಗಸರು ಕಲ್ಯಾಣಮಂಟಪಗಳಲ್ಲಿ ಹೋಟೆಲುಗಳಲ್ಲಿ ಪಾತ್ರೆ ತೊಳೆಯಲು, ಗಂಡಸರು ಕೂಲಿಗೆ ಹೋಗುತ್ತಾರೆ. ಹೊಟ್ಟೆತುಂಬ ಉಂಡು ತಿಂದು ಇದ್ದಾರಾದರೂ, ವಸತಿ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಓಟ್ ಕಾರ್ಡ್ ಇದ್ದರೂ ರೇಷನ್ ಕಾರ್ಡು ದೊರೆತಿಲ್ಲ. ವೃದ್ಧಾಪ್ಯ ವೇತನದಂತಹ ಸೌಲಭ್ಯಗಳಿಲ್ಲ. ಸ್ವಂತಕ್ಕೊಂದು ನೆಲವಿಲ್ಲ, ಮನೆಯಿಲ್ಲ ಈಗಿರುವ ಗುಡಾರದ ಜಾಗಕ್ಕೂ ಯಾರೋ ಕೋರ್ಟುಮೆಟ್ಟಿಲು ಹತ್ತಿದ್ದಾರೆ. ಹೀಗೆ ಒಂದಷ್ಟು ವಿವರಗಳನ್ನು ಪಟ್ಟಿಮಾಡಿಕೊಂಡು ಬಂದದ್ದಾಯಿತು.

ಅದೇ ಸಮಯಕ್ಕೆ ಯಾರೋ ತಾಲ್ಲೂಕು ಕೇಂದ್ರದಿಂದ ಒಂದಿಪ್ಪತ್ತು ಕಿಲೋಮೀಟರು ದೂರದಲ್ಲಿರುವ ಸಣ್ಣ ಉರಿನಲ್ಲಿ ಟೆಂಟು ಹಾಕಿಕೊಂಡ ಜನರಿದ್ದಾರೆಂಬ ಮಾಹಿತಿ ಕೊಟ್ಟರು. ಹುಡುಕಿ ಹೊರಟೆ. ಅಲ್ಲಿನ ಸಂತೆಕಟ್ಟೆಯಲ್ಲಿ ಎರಡು ಶಿಳ್ಳೆಕ್ಯಾತರ ಕುಟುಂಬಗಳು ಸಿಕ್ಕವು. ಚಿಕ್ಕ ಚಿಕ್ಕ ವಯಸ್ಸಿಗೇ ಮುಪ್ಪು ಆವರಿಸಿಬಿಟ್ಟಂತಿದ್ದರು. ತುಂಬ ಜನರಿದ್ದರಂತಲ್ಲ ಅವರೆಲ್ಲ ಎಲ್ಲಿ ಹೋದರೆಂದು ಕೇಳಿದಾಗ ‘ಎಲ್ಲ ಸತ್ತುಹೋದರು’ ಎಂಬ ಉತ್ತರ ಸಿಕ್ಕಿತು. ಹೇಗೆ? ಎಂಬ ನನ್ನ ಅಚ್ಚರಿಗೆ ‘ಹೊಟ್ಟೆಗಿಲ್ಲದೆ, ಜ್ವರ ಜಡ್ಡು ಬಂದು, ಬಾಣಂತನದಲ್ಲಿ, ಕುಡಿದು ಹೀಗೇ ಏನೇನೋ ಆಗಿ ಸತ್ತರು’ ಎಂದರು. ಅಂದರೆ ಒಂದು ಸಮುದಾಯ ಹೀಗೆ ನಶಿಸಿ ನಿರ್ನಾಮವಾಗುತ್ತಿದ್ದರೂ ಈ ನಮ್ಮ ನಾಗರಿಕ ಜಗತ್ತಿಗೆ ಗೊತ್ತೇ ಇಲ್ಲವೇ? ದೇಶವು ಗುಡಿಸಲು ಮುಕ್ತ ಆಗುವುದೆಂದರೆ ಹೀಗೆಯೇ ಏನು? ನಾನು ಒಳಗೊಳಗೇ ಹೇಳಲಾಗದ ತಳಮಳದಲ್ಲಿ ಕುದಿಯುತ್ತ, ಸಂಕಟದಿಂದ ಬೇಯುತ್ತಲಿದ್ದೆ.

ಇದಾಗಿ ಮತ್ತೆ ಕಾರು ಹತ್ತಿದೆ, ಊರಿನಾಚೆ ಒಂದಷ್ಟು ಗುಡಾರಗಳಿವೆ ಎಂದು ಹುಡುಕಿ. ಅಲ್ಲಿ ಸುಮಾರು ಹತ್ತು ವಡ್ಡಾಬೋವಿ ಗುಡಾರಗಳಿದ್ದವು. ಕೈ ಮುರಿದುಕೊಂಡ ನಿಶಕ್ತ ಮಹಿಳೆ, ಎದ್ದು ನಿಲ್ಲಲೂ ತ್ರಾಣವಿಲ್ಲದ ಮುಪ್ಪು ಹಿಡಿದ ಮುದುಕಿಯರು, ಚಿಕ್ಕಪುಟ್ಟ ಅಮಾಯಕ ಮಕ್ಕಳು ಒಂದಿಬ್ಬರು ತರುಣರು ಎದುರ್ಗೊಂಡರು. ಅವರಲ್ಲೊಬ್ಬ ಹೆಣ್ಣುಮಗಳು ಸಾವಿತ್ರಿ ಆಡಿದ ಮಾತುಗಳನ್ನು ನನ್ನ ಕಣ್ಣಿಂದ ಸುರಿಯುವ ನೀರನ್ನು ನಿಯಂತ್ರಿಸಲಾರದೆ ಚಿತ್ರೀಕರಿಸುತ್ತಲೇ ಹೋದೆ. ಆ ಹೆಣ್ಣುಮಗಳು ಒಡಲ ಬೇಗುದಿಯ ತೋಡುತ್ತಲೇ ಹೋದಳು.

ಇರಲು ನೆಲೆಯಿಲ್ಲ, ಕಟ್ಟಿಕೊಂಡ ಗುಡಾರಗಳನ್ನೂ ಖಾಲಿ ಮಾಡಿಸಲು ಯತ್ನಿಸುವ ಗ್ರಾಮಸ್ಥರು, ವಸತಿ ದೃಢೀಕರಣಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಏನೊಂದೂ ಇಲ್ಲ. ಆದರೆ ಓಟ್ ಕಾರ್ಡುಗಳಿವೆ! ಓಟಿಗಾಗಿ ಇಂಥವರ ಗುಡಾರಗಳಿಗೂ ಲಗ್ಗೆಯಿಡುವ ನಿರ್ಲಜ್ಜ ರಾಜಕಾರಣಿಗಳಿಗೆ ಇವರ ಕಷ್ಟಕ್ಕೆ ಮಾತ್ರ ಕುರುಡುಗಣ್ಣು. ಊಟವಿಲ್ಲ, ಬಟ್ಟೆಯಿಲ್ಲ, ಟೆಂಟುಗಳಿಗೆ ಹೊದಿಸಲು ಸೀರೆಯಿಲ್ಲ, ಮಕ್ಕಳಿಗೆ ಓದಲು ಬೆಳಕಿಲ್ಲ. ಕುಡಿಯಲು ನೀರಿಲ್ಲ, ಶೌಚಕ್ಕೆ ಪೊದೆಗಳ ಮರೆಯರಸಿ ಹೋದರೆ ಬೈದೋಡಿಸುವ ಭಟ್ಟರು, ವಾಸ ದೃಢೀಕರಣ ಪತ್ರ ಕೇಳಿದರೆ ಉಗಿದಟ್ಟುವ ಅಧ್ಯಕ್ಷರು, ಸವಲತ್ತಿಗಾಗಿ ಬೇಡ ಹೋದೆಡೆ ಬೆನ್ನು ತಿರುಗಿಸುವ ಚುನಾಯಿತ ಮಂದಿ, ದೀಪಕ್ಕೆ ಎಣ್ಣೆಯಿರದ ಕತ್ತಲ ಗುಡಾರದಲ್ಲಿ ಹೋಮ್ ವರ್ಕ್ ಮಾಡಲಾಗದೆ ಹೋದರೆ ಶಿಕ್ಷಿಸುವ ಶಿಕ್ಷಕರು ಹೀಗೆ ನಾಯಿಗಿಂತ ಕಡೆಯಾಗಿ ಬದುಕುವ ತಮ್ಮ ಪಾಡನ್ನು ಕರುಳಿರಿಯುವಂತೆ ಎಳೆ ಎಳೆಯಾಗಿ ಬಿಚ್ಚಿಡುತ್ತ ಹೋದಳು ಸಾವಿತ್ರಿ. ಬರಿಗೈಲಿ ಅವರನ್ನು ನೋಡಲು ಹೋದ ತಪ್ಪಿಗಾಗಿ ನನ್ನನ್ನೇ ನಾನು ಹಳಿದುಕೊಳ್ಳುತ್ತ ಅಲ್ಲಿಯೇ ಸನಿಹದ ಅಂಗಡಿಯಲ್ಲಿ ಒಂದಷ್ಟು ಅಕ್ಕಿ ಚಾಕಲೇಟುಗಳನ್ನು ಕೊಂಡು ಈ ಗುಡಾರಗಳಿಗೆ ಕೊಟ್ಟು ಭಾರವಾದ ಎದೆಯಿಂದ ಅಲ್ಲಿಂದ ಹೊರಟೆ.

ಈ ಹೆಣ್ಣುಮಗಳ ವೀಡಿಯೋ ಚಿತ್ರಿಕೆಗಳನ್ನು ಫೇಸ್ಬುಕ್ಕಿಗೆ ಅಪ್ ಲೋಡ್ ಮಾಡುತ್ತಿದ್ದಂತೆ ಊಹೆಗೂ ಮೀರಿದ ವೇಗದಲ್ಲಿ ವೈರಲ್ ವ್ಯೂವ್ ಆದವು. ಅವುಗಳಲ್ಲೊಂದು ವೀಡಿಯೋದ ಶೇರ್, ವ್ಯೂವ್ ಇನ್ನೂ ಇನ್ನೂ ಏರುತ್ತಲೇ ಇದೆ. ಅದರಲ್ಲಿ ಸಾವಿತ್ರಿಯೆನ್ನುತ್ತಾಳೆ, ‘ಅಜ್ಜನೊಬ್ಬ ತೀರಿಹೋಗಿದ್ದ. ಎರಡು ದಿನ ಹೆಣ ಇಟ್ಟುಕೊಂಡರೂ ಹೂಳಲೊಂದು ಜಾಗ ಕೊಡಲಿಲ್ಲ. ಎರಡು ಸಾವಿರ ಕೊಡ್ತೀವಿ ನಿಮ್ಮ ಊರಿಗೆ ಹೆಣ ತೆಗೆದುಕೊಂಡು ಹೋಗಿ ಎಂದರು ಅಧ್ಯಕ್ಷರು, ಅಲೆಮಾರಿಗಳಾದ ನಮಗೆ ಎಲ್ಲಿದೆ ಊರು? ನಮ್ಮ ಊರು ಸಿಗಬೇಕೆಂದರೆ ಈ ಪ್ರಪಂಚವನ್ನೇ ಬಿಟ್ಟು ಹೋಗಬೇಕೇನೋ! ಹೀಗೆಯೇ ಆದರೆ ನಾವು ಬದುಕಲ್ಲ. ಕಾಗೆ ನಾಯಿಗಾದರೂ ಬೆಲೆಯಿದೆ ನಮಗಿಲ್ಲ, ನಾವೆಲ್ಲರೂ ಮಕ್ಕಳಿಗೂ ವಿಷವುಣಿಸಿ ನಾವೂ ಉಂಡು ಸಾಯುತ್ತೇವೆ. ಇಲ್ಲಿ ಹುಟ್ಟುವುದಕ್ಕೂ, ಬದುಕುವುದಕ್ಕೂ ಶೌಚಕ್ಕೂ ನಮ್ಮ ಹೆಣ ಹೂಳುವುದಕ್ಕೂ ನಮಗೆ ಜಾಗವಿಲ್ಲವೆಂದ ಮೇಲೆ ನಾವು ಯಾಕಿರಬೇಕು?’ ಹೀಗೆ ಕೇಳುವ ಸಾವಿತ್ರಿಯ ಪ್ರಶ್ನೆಯೊಂದೊಂದೂ ಎದೆಗೆ ಕೊಳ್ಳಿಯಿಡುತ್ತಲೇ ಇದೆ. ಸಹವಾಸಿ ಮಾನವರನ್ನು ಹೀಗೆ ನರಳಲು ಬಿಟ್ಟ ನಾಗರಿಕ ಸಮಾಜವೊಂದು ಇವರ ಪಾದಗಳಿಗೆರಗಿ ಕ್ಷಮೆ ಬೇಡಿದರೂ ಕಡಿಮೆಯೇ!

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

One Comment For "ಮಸಣದಲಿ ಹುಟ್ಟಿ ಮಸಣದಲಿ ಮಡಿದು ಹೂಳಲೊಂದು ತಾವಿಲ್ಲ!
ಕಾದಂಬಿನಿ ಕಾಲಂ
"

 1. ಗೀತಾ ಡಿ.ಸಿ.
  14th December 2017

  ಲೇಖನ ಚೆಂದವಿದೆಯೆಂದು ಮೆಚ್ಚಿ ಸುಮ್ಮನಾಗುತ್ತೇವಾ? ದಯವಿಟ್ಟು ಈ ಲೇಖನವನ್ನು ಆದಷ್ಟೂ ಒಂದಿಷ್ಟು ಹೃದಯವಂತ ಅಧಿಕಾರಿಗಳ ಗಮನಕ್ಕೋ, ಅನೇಕ ಜೀವಗಳಿಗೆ ಬದುಕು ಕಟ್ಟಿಕೊಡಲು ಯತ್ನಸುತ್ತಿರುವ ಕೆಲ ಸಂಘಸಂಸ್ಥೆಗಳಿಗೋ ತಲುಪಿಸಲು ಸಾಧ್ಯವೇ? ಅಂಥವರ ಬದುಕಿಗೊಂದು ನೆಲೆ ಸಿಗುವಂತಾಗಲಿ. ಅವರ ಮೊಗದಲ್ಲೂ ನಗು ಅರಳುವಂತಾಗಲಿ. ಇದನ್ನು ಸಾಧ್ಯವಾಗಿಸುವ ಹೃದಯವಂತರು ಇದ್ದಾರೆಂಬ ನಂಬುಗೆಯಲ್ಲಿ…

  Reply

Leave a comment

Your email address will not be published. Required fields are marked *

Recent Posts More

 • 7 days ago No comment

  ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?

        ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ಬೆಚ್ಚಗೆ ಕೂತಿರಬಹುದು ನ್ಯಾಯಕ್ಕೆ ಕನ್ನ ಹಾಕೋ ನಾನು ತಿರುಕ ಹೇಗೆ ಆಗಬೇಕು? ತಿರುಕನದೇನೋ ಕನಸಿತ್ತು ನನ್ನದು ಕೂಡಾ ಕನಸೆಂದು ಆ ಕೋಟೆ ಒಳಗಿರುವವರು ಕನವರಿಸುತ್ತಿರಬಹುದು ಬೂದಿ ಮುಚ್ಚಿದ ...

 • 1 week ago No comment

  ಕೊಂಕಣಿ ಪ್ರತಿಭೆಯನ್ನರಸಿ ಕರ್ನಾಟಕಕ್ಕೆ ಬಂದ ಪ್ರಶಸ್ತಿ

      ಅತಿಥಿ           ಈ ಬಾರಿ ಕರ್ನಾಟಕವು ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಪ್ರಮಾದವೇನಾದರೂ ಆಯಿತೇ? ಒಂದೇ ಪುರಸ್ಕಾರವನ್ನು ಇಬ್ಬರಿಗೆ ಹಂಚಿರಬಹುದೇ? ಎಂದೆಲ್ಲ ಯೋಚಿಸಿ ತಲೆ ಕೆರೆದುಕೊಳ್ಳುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಕನ್ನಡಕ್ಕೆ 2018ರ ಕೇಂದ್ರಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಘೋಷಣೆಯಾದಾಗಲೇ ಕರ್ನಾಟಕದ ಕೊಂಕಣಿ ಕವಯತ್ರಿ ವಿಲ್ಮಾ ...

 • 2 weeks ago No comment

  ಸಾಹಸದ ಆ ನಿಮಿಷಗಳು

          ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ.         ಬ್ಯಾಂಕರುಗಳು, ಅಕೌಂಟೆಂಟುಗಳು ವರ್ಷದ ಮೊದಲಿಂದ ಹಿಡಿದು ಮಾರ್ಚಿ ತಿಂಗಳವರೆಗೆ ಭಾರೀ ಬ್ಯುಸಿಯಾಗುವಂತೆ ಇಂಗ್ಲೆಂಡಿನ ಸರ್ಕಾರೀ ದಂತ ವೈದ್ಯಕೀಯ ರಂಗದಲ್ಲೂ ಧಾವಂತ ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ಗುತ್ತಿಗೆ ಪಡೆದ ಕೆಲಸವನ್ನು ಮಾರ್ಚಿಯ ಕೊನೆಗೆ ಪೂರ್ತಿಗೊಳಿಸದಿದ್ದರೆ ಮುಂದಿನ ವರ್ಷದ ಕಾಂಟ್ರಾಕ್ಟ್ ನ್ನು ಕಳೆದುಕೊಳ್ಳುವ ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

  ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು. ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ಇಲ್ಲಿಯ ಸಿಬ್ಬಂದಿಯೇ ನನಗೆ ಅನ್ನದಾತರು. ಹೀಗಾಗಿ ಎಲ್ಲೆಲ್ಲೂ ನನಗೆ ಪರಿಚಿತ ಮುಖಗಳೇ. ಅಂದು ಮಾತ್ರ ಸಿಬ್ಬಂದಿಯೊಬ್ಬ ಗಡಿಬಿಡಿಯಲ್ಲಿ ನನ್ನ ಆರ್ಡರ್ ಬರೆದುಕೊಂಡು ಅಷ್ಟೇ ಅವಸರದಲ್ಲಿ ಖಾದ್ಯಗಳನ್ನು ತಂದಿಟ್ಟು ...

 • 3 weeks ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  2 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  3 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  3 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...