Share

ಪೆನ್ನು ಹಿಡಿದು…
ಅರ್ಚನಾ ಎ ಪಿ

 

 

ಇನ್ನೂ ನೆನಪಿದೆ, ಶಿಶು ವಿಹಾರಕ್ಕೆ ಹೋಗುವಾಗ ಮರಳು ಹಾಕಿದ ಟ್ರೇ ಒಂದರಲ್ಲಿ ಅಕ್ಷರಾಭ್ಯಾಸ ಮಾಡಿಸ್ತಿದ್ರು ಟೀಚರ್.

 

 

 

 

ಯೇ ದೋಸ್ತಿ.. ಹಮ್ ನಹೀ ಛೋಡೆಂಗೇ..
ಬಿಟ್ಟು ಬಿಡುವೆ ಪ್ರಾಣವನ್ನಾದರೂ…
ಆದರೆ ಈ ಬಾಂಧವ್ಯ ಮಾತ್ರ…
ಊಹೂಂ… ಖಂಡಿತಾ ಇಲ್ಲ…

ಮುಂದೋಡದ ಲೇಖನಿಯನ್ನು ಹಿಡಿದು ತಂದು ಕೂರಿಸಿದ್ದೇನೆ. ಪಾಪ ಅದಕ್ಕೇನು ನಿರ್ಜೀವ ವಸ್ತು. ಯಾರು ಹಿಡಿದು ಹೇಗೆ ಏನೂ ಬರೆಸಿದರೂ ಬರೆಯತ್ತೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಂದ ಶುರುಮಾಡಿ, ಸಹಿ ಹಾಕುವ ಎಲ್ಲರಿಗೂ ಬೇಕೇ ಬೇಕು. ಎಷ್ಟೇ ಅಗತ್ಯ ಇದ್ದರೂ ಎಂದಿಗೂ ಒಂಚೂರೂ ಅಹಂ ತೋರಿಸೋದೇ ಇಲ್ಲ. ಅದೊಂದು ಮಾತಿದೆಯಲ್ಲ.

ಅತಿ ಹೆಚ್ಚು ಆತ್ಮೀಯತೆ ಕಾಣಸಿಗೋದು ವಿಮಾನ, ರೈಲು ನಿಲ್ದಾಣಗಳಲ್ಲಿ ಕಾಣುವ ಬೀಳ್ಕೊಡುಗೆಯಲ್ಲಿ.
ಅತಿ ಹೆಚ್ಚು ಕಣ್ಣೀರಿನ, ದುಃಖದ ಅನುಭವ ಕಂಡಿರುವುದು ರಾತ್ರಿಯ ಸಮಯದಲ್ಲಿ ಸುಖನಿದ್ರೆಗೆ ಸಹಾಯ ಮಾಡೋ ತಲೆದಿಂಬು.

ಇವೆಲ್ಲಕ್ಕೂ ಹೆಚ್ಚು ಮನ ಕಲಕೋ ವಿಷಯ ಅಂದರೆ, ಬದುಕಿರುವ – ಯಾರೇ ಆಗಲಿ – ವ್ಯಕ್ತಿಗಿಂತ, ಶವವೇನೇ ಬಹಳ ಬಹಳ ಹೂಗಳ ಕೊಡುಗೆಯನ್ನು ಪಡೆಯುವುದಂತೆ.

ಸರಿ, ಲೇಖನಿಗೂ ಈ ಅಂಶಗಳಿಗೂ ಎಲ್ಲಿಂದ ಎಲ್ಲಿಗೆ ತಾಳೆ ಹಾಕ್ತಿದ್ದೀಯಾ ಹುಡುಗಿ ಅನ್ನೋ ಮಾತು ಕೇಳಿಸ್ತು. ಅದಕ್ಕುತ್ತರ ಇಷ್ಟೇ.

ಬಹುಶಃ ಸುಖದ ಪರಾಕಾಷ್ಠೆಯಿಂದ ಹಿಡಿದು, ದುಃಖದ ಆಳಸಾಗರದ ಎಲ್ಲಾ ಭಾವಕ್ಕೂ ಸಾಕ್ಷಿಯಾಗಿ ನಿಲ್ಲುವುದು ಇದೇ ಲೇಖನಿಯೇ. ತಾಳೆಗರಿಯಲ್ಲಿ ಬರೆಯಲು ಬಳಸುತ್ತಿದ್ದ ನವಿಲುಗರಿಯಿಂದ ಶುರು ಮಾಡಿ ಇವತ್ತಿನ ‘ಯೂಸ್ ಅಂಡ್ ಥ್ರೋ’ ಪೆನ್ನುಗಳವರೆಗಿನ ಪಯಣದ ಹಿನ್ನೋಟ, ಪಕ್ಷಿನೋಟ, ಸಿಂಹಾವಲೋಕನ ಮಾಡಿದಾಗ ಅಚ್ಚರಿಯೊಂದಿಗೆ ಸಹಜ ಕುತೂಹಲ ಮೂಡುವುದಂತೂ ದಿಟ.

ಅಪರೂಪಕ್ಕೊಮ್ಮೆ ಬರೆಯುತ್ತಿದ್ದ ಓಲೆಗಳು, ರಾಜ ತನ್ನ ಪ್ರಜೆಗಳಿಗೆ ತಿಳಿಸಲು ಬರೆಸುತ್ತಿದ್ದ ಪತ್ರಗಳು, ಶಾಸನಗಳು, ಪ್ರೇಮಿಗಳ ನಡುವೆ ಪ್ರೇಮ ಸಲ್ಲಾಪದ ಸಂಭಾಷಣೆಗೆ ಉಪಯೋಗವಾಗುತ್ತಿದ್ದ ಸಂದೇಶದ ಲಿಖಿತ ರೂಪ, ದೊಡ್ಡ ದೊಡ್ಡ ರಾಜರು, ಸಾಮ್ರಾಟರು, ಚಕ್ರವರ್ತಿಗಳ ಆಸ್ಥಾನದಲ್ಲಿರುತ್ತಿದ್ದ ಕವಿವರೇಣ್ಯರು ತಮ್ಮ ಪಾಂಡಿತ್ಯದ ಅಭಿವ್ಯಕ್ತಿಗೆ, ಸಾಹಿತ್ಯದ ಪೋಷಣೆಗೆ ಬಳಸುತ್ತಿದ್ದ ಮಾಧ್ಯಮವಾಗಿ ತಾಳೆಗರಿಯಲ್ಲಿ ಅಕ್ಷರ ಪೋಣಿಸಲು ಅಗತ್ಯ ಸಾಧನವಾಗಿ ಈ ಲೇಖನಿಯ ರೂಪಗಳನೇಕ ಇವೆ.

ಮರೆತಿದ್ದೆ,
ಕಾವ್ಯಕ್ಕೆ ನವರಸಗಳು ಹೇಗೆ ಬೇಕೇ ಬೇಕೋ ಅಥವಾ ಕಾಣ್ತೀವೋ ಹಾಗೇ ಈ ಸಣ್ಣ ಸಾಧನವೂ ನವರಸಗಳನ್ನು ಹೊರಹಾಕುವವರಿಗೆ ತನ್ನದೇ ರೀತಿಯ ಕೊಡುಗೆ ಕೊಡತ್ತೆ. ಹೇಗೆ ಅನ್ನುವುದಕ್ಕೆ ಒಂದ್ ಸಣ್ಣ ಪ್ರಸಂಗ ಹೇಳಲೇಬೇಕು.

ಮತ್ತದೇ,
ಬಸ್ಸಿನಲ್ಲಿನ ಪ್ರಯಾಣದ ಅನುಭವ. ಮಹಿಳೆಯರಿಗೆ ಮೀಸಲಾದ ಆಸನಗಳೆಲ್ಲಾ ಭರ್ತಿಯಾಗಿದ್ವು. ಅಲ್ಲೊಂದು ಸೀಟು – ಅದೇ ಹಿರಿಯ ನಾಗರಿಕರಿಗೆ ಅಂತ ಬರೆದದ್ದು ಖಾಲಿ ಇತ್ತು. ಹೋಗಿ ಕೂತಾಗ ಅನ್ನಿಸಿದ್ದು – ಎಲ್ಲರಿಗೂ ಬಹುಶಃ ಇದೇ ಅನಿಸಿಕೆ ಬಂದಿರಬಹುದು – ನನ್ನ ಸ್ಟಾಪ್ ಬರುವವರೆಗೂ ಯಾರೂ ಬಂದು ಎಬ್ಬಿಸದಿರಲಿ ಅಂತ. ಹಾಗೆಂದುಕೊಂಡು ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಯಾರೋ ಹಿರಿಯ ಹೆಂಗಸೊಬ್ಬರು ನಿಟ್ಟುಸಿರು ಬಿಡ್ತಾ ಕೂತಾಗ ಸದ್ಯ ಸೀಟು ಭರ್ತಿಯಾಯ್ತು. ಯಾವುದೇ ಮುಜುಗರವಿಲ್ಲದೆ ಪ್ರಯಾಣ ಮುಂದುವರಿಸಬಹುದು ಅಂತ ನೆಮ್ಮದಿಯ ಭಾವದ ಅನುಭೂತಿಯಲ್ಲಿರಬೇಕಾದರೆ, ಅವರು ಮಾತಿಗೆ ಶುರುಮಾಡಿದರು – ಎಲ್ಲಿಳಿಯಬೇಕು? ಕೆಲಸ ಮಾಡ್ತೀರಾ? ಮದುವೆ, ಮಕ್ಕಳು, ಸಂಸಾರ? ಅಂತ ಬಹುವಚನದಿಂದ ಏಕವಚನಕ್ಕಿಳಿದು ಮಾತಿನ ಪ್ರವಾಹ ನಿಲ್ಲದೇ ಇದ್ದಾಗ ಇರುಸುಮುರುಸು ಉಂಟಾಗಿತ್ತು. ಆದರೂ ಹೇಳಲಾಗದ, ಸುಮ್ಮನಿರಲೂ ಆಗದ ಸ್ಥಿತಿ. ಕೊನೆಗೆ ಅವರಿಳಿಯುವ ಸ್ಟಾಪ್ ಗಿಂತ ಒಂದೆರಡು ನಿಲ್ದಾಣಕ್ಕೂ ಮುಂಚೆ ತಮ್ಮ ಪರ್ಸ್ ನಿಂದ ಕೃಷ್ಣನ ಹಳೇದಾದ ಪುಟ್ಟ ಫೋಟೋ ತೆಗೆದು ನನ್ನ ಕೈಲಿಟ್ಟು ‘ಇವ ನನ್ನ ಜೀವನದ ಪ್ರತೀ ಕ್ಷಣದಲ್ಲೂ ನನ್ ಜೊತೆ ಇದ್ದಾನೆ. ಯಾಕೋ ನಿನ್ನ ಮುಖದಲ್ಲಿ ಇರೋ ನಗುವಿನ ಹಿಂದಿರೋ ದುಃಖ ಇವನ ಕಣ್ಣಿಗೆ ಕಂಡಿರಬೇಕು. ಅದಕ್ಕೆ ನನ್ನ ಕೈಯಿಂದ ಇದನ್ನು ನಿನಗೆ ಕೊಡಿಸ್ತಿದ್ದಾನೆ. ಸದಾ ಹತ್ತಿರ ಇಟ್ಟುಕೋ. ನಿನ್ನೆಲ್ಲಾ ದುಃಖಗಳೂ ಕರಗಿ ಹೋಗಿ, ನಿಜವಾದ ಸಂತಸ ಮೂಡಲಿ’ ಅಂತ ಬಾಯ್ತುಂಬ ಹರಸಿದಾಗ, ನನ್ ಬಾಯಿಂದ ಮಾತೇ ಹೊರಡಲಿಲ್ಲ. ಏನ್ ಹೇಳೋದು ಅಂತ ಯೋಚಿಸುವಷ್ಟರಲ್ಲಿ ಕೃಷ್ಣನ ಮುರಳಿಯ ಲೋಕದಲ್ಲಿದ್ದು ಈ ಲೋಕಕ್ಕೆ ಬಂದು ಒಂದ್ ಸ್ವಂತೀನಾದ್ರೂ ತೊಗೋಬಹುದಿತ್ತು ಅನ್ಸಿತ್ತು. ಆದರೆ ಸಮಯ ಮೀರಿತ್ತು.

ಅಲ್ಲಾ ಲೇಖನಿಗೂ ಈ ಸನ್ನಿವೇಶಕ್ಕೂ ಹೇಗೆ ತಳುಕುಹಾಕಿದ್ದು?
ಹೇಗೆ ಅಂದರೆ, ಅವರ ಜೊತೆಗಿನ ಹೇಳಲಾರದ ಬಂಧವೊಂದು ಏರ್ಪಟ್ಟಿತ್ತು ಅಚ್ಚಳಿಯದ ಹಾಗೆ. ಅಕ್ಕರೆಯ ಲೇಖನಿಯಿಂದ ಅವರು ನನ್ನ ಮನದಾಳದಲ್ಲಿ ಅಳಿಸಲಾಗದ ಹಾರೈಕೆಗಳನ್ನು ಬರೆದುಬಿಟ್ಟಿದ್ರು. ಇಂಥಾ ಸಂದರ್ಭಗಳು ಕಡಿಮೆ ಇದ್ದರೂ ಇವು ಅಂತರಂಗದಲ್ಲಿ ಎಲ್ಲೋ ಮೂಲೆಯಲ್ಲಿ ಒಂದು ಲಂಬಕೋನತ್ರಿಭುಜ ಮಾಡಿಕೊಂಡು ಎರಡು ಬಾಹುಗಳ ಮೇಲಿನ ವರ್ಗಗಳ ಮೊತ್ತವು ವಿಕರ್ಣದ ಮೇಲಿನ ವರ್ಗಕ್ಕೆ ಸಮವಾಗಿರತ್ತೆ ಅನ್ನೋ ಪೈಥಾಗೊರಸ್ ಪ್ರಮೇಯ ಸಿದ್ಧಾಂತ ಸಾಬೀತುಪಡಿಸ್ತಾನೇ ಇರುತ್ತವೆ, ಮರೆಯೋಕೆ ಬಿಡದೆ.

ಇಲ್ಲ, ಎಲ್ಲೋ ಏನೋ ಹೊಡೀತಿದೆ.
ಹೇಗೋ ಶುರುವಾಗಿ ಎಲ್ಲೋ ಹರಿದು ಮತ್ತೆಲ್ಲೋ ತಾಳ ತಂತು ತಪ್ಪಿ ಸಮುದ್ರಕ್ಕೆ ವಿರುದ್ಧವಾಗಿ ಹೋಗ್ತಿರೋ ಪ್ರಯತ್ನದಂತೆ ಅನ್ನಿಸ್ತಾ ಇದೆ. ಹಾಗಿದ್ರೆ ನದಿಯ ಮೂರು ಹಂತಗಳ ಪ್ರಕಾರದಂತೇನೇ ಆರಂಭ ಮಾಡೋದಾದ್ರೆ ಉಗಮ, ಹರಿವು, ಸಾಗರದಲ್ಲಿ ಲೀನವಾಗುವವರೆಗೆ, ಲೇಖನಿಯ ವಿವಿಧ ರೂಪ, ರಸ, ಗಂಧ, ಸ್ಪರ್ಶದ ಬಗ್ಗೆ ತಿಳಿಯಲೇಬೇಕು.

ಸೃಷ್ಟಿ ಸ್ಥಿತಿ ಲಯದಂತೆ, ‘ಹುಟ್ಟಿ’ರುವ ಪ್ರತಿ ಕಣವೂ ಲಯವಾಗಲೇಬೇಕು ಅನ್ನೋ ನಿಯಮದ ಮೇರೆಗೆ ಹುಟ್ಟಿನಲ್ಲಿರುವ ಸಂತೋಷ, ಸಾವಿನಲ್ಲಿರುವ ದುಃಖಕ್ಕೆ ಸಾಕ್ಷಿಯಾಗೋದು ಪ್ರಾಯಶಃ ಇದೇ ಸಾಧನವೇ ಅಲ್ವಾ?ಹುಟ್ಟಿದ ಮಗುವಿನ ಸಮಯ ಬರೆಯುವುದರಲ್ಲಿ, ಜನನ ಪ್ರಮಾಣ ಪತ್ರ ದಾಖಲಾತಿಯಲ್ಲಿ, ನಂತರ ಅಕ್ಷರ ಕಲಿಕೆಯ ಸಂದರ್ಭದಲ್ಲಿ ನಾಲಿಗೆಯ ಮೇಲೆ ಪೋಷಕರು ಬರೆಯೋ ಪ್ರಣವಾಕ್ಷರದ ಜೊತೆಗಿನ ಪಯಣ ಸಾಗ್ತಾ ಹೋಗತ್ತೆ.

ಇನ್ನೂ ನೆನಪಿದೆ, ಶಿಶು ವಿಹಾರಕ್ಕೆ ಹೋಗುವಾಗ ಮರಳು ಹಾಕಿದ ಟ್ರೇ ಒಂದರಲ್ಲಿ ಅಕ್ಷರಾಭ್ಯಾಸ ಮಾಡಿಸ್ತಿದ್ರು ಟೀಚರ್. ಅದಕ್ಕೇ ಇರಬಹುದು ಈಗ್ಲೂ ತಪ್ಪಿಲ್ಲದೇ ಬರೆಯೋದು ರೂಢಿಯಾಗಿದೆ. ಇದ್ರಲ್ಲಿ ಖುಷಿಯ ವಿಚಾರ ಏನಾಗಿತ್ತು ಅಂದರೆ ಆಗ ನಾವು ಮಣಭಾರದ ಮೂಟೆ (ಬ್ಯಾಗ್) ಹೊರೋ ‘ಕೂಲಿ’ಯವರಾಗಬೇಕಿರಲಿಲ್ಲ, ಅಪ್ಪಾಮ್ಮನ ಜೇಬಿಗೆ ಪೆನ್ನು ಪೆನ್ಸಿಲ್ ಪುಸ್ತಕ ಬಳಪ ಅಂತ ಕತ್ತರಿ ಪ್ರಯೋಗವೂ ಇರ್ತಿರಲಿಲ್ಲ. ಕಾರಣ ಒಂದ್ಸಾರಿ ಅಕ್ಷರ ಬರೆದು ಮತ್ತೆ ಹಾಗೆ ಅಳಿಸಿದ್ರೆ ತಿದ್ದೋಕೆ ಸಮತಲ ತಯಾರಾಗಿರ್ತಿತ್ತು. ಅದಾದ ಮೇಲಿನ ಪ್ರಾಥಮಿಕ ಹಂತದಲ್ಲಿ ಜೊತೆಯಾದದ್ದು ಸ್ಲೇಟು ಬಳಪ.

ಅರೆ!
ಇಲ್ಲೊಂದು ಗುಟ್ಟು ಹೇಳಬೇಕು. ಏನ್ ಗೊತ್ತಾ? ಯಾರಿಗೂ ಹೇಳಬೇಡಿ ದಯವಿಟ್ಟು. ಆ ಬಳಪ ತಿದ್ದೋಕಿಂತ ಹೆಚ್ಚಾಗಿ ಹೊಟ್ಟೆಗಿಳೀತಾ ಇತ್ತು. ಏನೋ ಒಂಥರಾ ಒಗರೊಗರು, ಉಪ್ಪುಪ್ಪಿನ ರುಚಿ ಇತ್ತದು…
ಅಲ್ವಾ… ಏನಾದರೂ ನೆನಪಾಯ್ತಾ… ಆಗಿರಲೇಬೇಕು…
ಈಗಲೂ.. ನೆನೆದ ಬಳಪದ ಪರಿಮಳ ಬಂದರೆ ನಾಲಿಗೆಯಲ್ಲಿ ನೀರೂರಿಸುವುದಂತೂ ಸುಳ್ಳಲ್ಲ.

ಸ್ಲೇಟಿಂದ ದಾಟಿ, ಪುಸ್ತಕಕ್ಕೆ ಬಂದಾಗ ತಪ್ಪಾಗಬಹುದು ಅಂತ ಮೊದಲು ಪೆನ್ಸಿಲ್ಲಿನಲ್ಲಿ ಬರೆದದ್ದು, ಪೆನ್ಸಿಲ್ ಸಿಕ್ಕ ಖುಷಿಯಲ್ಲಿ ಮನೆಯಲ್ಲಿನ ಎಲ್ಲಾ ಗೋಡೆಗಳನ್ನೂ ಸ್ಲೇಟಾಗಿ ಮಾಡಿ ಏನೇನೋ ಗೀಚಿದ್ದು… ಅದಕ್ಕೆ ಅಪ್ಪ ಅಮ್ಮನಿಂದ ಚೆನ್ನಾಗಿ ಬೈಗುಳ ತಿಂದಿದ್ದು ನೆನೆದ್ರೆ ಓಡಿಹೋಗಿ ಮಕ್ಕಳಾಗೇ ಇದ್ದು ಬಿಡೋಣ ಅಂತ ಅನ್ಸತ್ತೆ.

ಹೀಗೆ ನಾಲ್ಕನೇ ಕ್ಲಾಸ್ ಮುಗಿಸಿ ಐದನೇ ತರಗತಿಗೆ ಬಂದಾಗ ತಪ್ಪಿಲ್ಲದೆ ಬರೆಯುವುದು ಕಲಿತಿರ್ತಾರೆ ಎಂದು ಪೆನ್ನು ಕೊಟ್ಟು ಬರೆವಣಿಗೆ ಆರಂಭವಾಗಿದ್ದು.
ಪೆನ್ನು ಅಂದರೆ ಯಾವ್ದು?
Reynolds 045 FINE CARDURE ಅಂತ ನೀಲಿ ಬಣ್ಣದ ಕ್ಯಾಪ್ ಹೊಂದಿರೋ‌ ಪೆನ್.
ಅದರಲ್ಲಿ ಬರೆಯುವಾಗ ಎಂಥದೋ ಹೆಮ್ಮೆ. ಜೊತೆಗೆ ಮಕ್ಕಳು ಅಂದರೆ ಒಂದಿಷ್ಟು ತುಂಟಾಟ ಇರಲಿಲ್ಲ ಅಂದರೆ ಹೇಗೆ?
ಅದಕ್ಕೆ,
ಪೆನ್‌ ಮೇಲಿನ ಅಕ್ಷರಗಳಲ್ಲಿ ಬೇಡದ ಅಕ್ಷರಗಳನ್ನು ಬ್ಲೇಡಿನಲ್ಲಿ ಕೆರೆದು R ನ್ನು I ಮಾಡಿ N D ಉಳಿಸಿ FINE ನ I, cardure ನ A ಉಳಿಸಿ INDIA ಮಾಡೋದು ನಿಜಕ್ಕೂ ಗಡಿಯಲ್ಲಿ ನಿಂತು ಶತ್ರುಗಳ ಮೇಲೆ ಗುಂಡು ಹಾರಿಸಿದಷ್ಟೇ ದೇಶಪ್ರೇಮ ತಂದಿದ್ದು ನೆನಪಾಯ್ತು.
ಹೌದೂ ಮರೆತಿದ್ಯಾರು?

ಹೀಗೆ ಮಾಧ್ಯಮಿಕ ಹಂತ ಮುಗಿಸಿ ಪ್ರೌಢಶಾಲಾ ಹಂತಕ್ಕೆ ಬಂದಾಗ ದುಂಡಾದ ಅಕ್ಷರ ಬರೆಯಲು ಹೀರೋ ಪೆನ್ ಸರಿ ಅಂತ ಆಗಿನ ಕಾಲಕ್ಕೇ ನಲವತ್ತೋ ಐವತ್ತೋ ಕೊಟ್ಟು ತಂದು ಬರೆಯೋಕೆ ಶುರು ಮಾಡಿದ್ರೆ ನಿಲ್ಲಿಸುವ ಮನಸ್ಸೇ ಬರ್ತಿರಲಿಲ್ಲ. ಅದಾದ ಮೇಲೆ ಬಿಡಿ. ವಿಧವಿಧವಾದ ಲೇಖನಿಗಳ ಯುಗ ಪ್ರಾರಂಭವಾಯಿತು.

ಸ್ಕೂಲ್ ಬಗ್ಗೆ ಹೇಗಿದ್ದರೂ ಹರಿಕತೆ ಆರಂಭ ಆಗಿದೆ. ಲೇಖನಿಯ ‘ಇತಿಹಾಸ’ದ್ದು. ಹೀಗೆ ಬಹಳ ವರ್ಷಗಳ ನಂತರ (೧೬ ವರ್ಷ) ಶಾಲೆಗೆ ಹೋದಾಗ. ಕೂತ ಬೆಂಚು, ಆಟದ ಮೈದಾನ, ಧ್ವಜಸ್ಥಂಭ, ಸಭಾಂಗಣ ನೋಡ್ತಿರಬೇಕಾದ್ರೆ ಬೆಂಚುಗಳ ಮೇಲೆ ಅದೂ ಹುಡುಗರು ಕೂರ್ತಿದ್ದ ಜಾಗಗಳಲ್ಲಿ ಜಾಮಿಟ್ರಿಯ ಕೈವಾರವೇ ಲೇಖನಿಯಾಗಿ ತಮ್ಮದೂ ಮತ್ತು ‘ತಮ್ಮವರ’ ಹೆಸರು ‘ಕೆತ್ತಿದ್ದು’ ಕಂಡಾಗ ಲೇಖನಿಗೆ ಸಿಕ್ಕ ಉಳಿಯ ರೂಪ ತಿಳೀತು.

ಹಾಂ,
ಈ ಬಾರಿಯ ದಸರೆಯ ಸಂದರ್ಭದಲ್ಲಿ ಸಹೋದ್ಯೋಗಿಗಳ ಜೊತೆಗೆ ಸುತ್ತೂರು ಮಠದ ಕಡೆ ಪ್ರವಾಸ ಹೋದಾಗ ದಾರಿಯಲ್ಲಿ ನಿಮಿಷಾಂಬ, ಜೆಎಸ್ ಎಸ್ ಮಠ, ಚಾಮುಂಡಿ ಬೆಟ್ಟ ನೋಡಿ, ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆದು ಹೊರಬರುವಾಗ ದೇವಾಲಯದ ಒಂದು ಬದಿಯ ಕಲ್ಲಿನ ಗೋಡೆಯಲ್ಲಿ ಭಕ್ತರು ಬೆರಳಿನಿಂದ ಏನೋ ಬರೀತಿದ್ರು.

ವಿಚಾರಿಸಿದಾಗ ಮನದ ಬಯಕೆ ಕೋರಿಕೆ ಅಲ್ಲಿ ತಿದ್ದಿದ್ರೆ ಆಗತ್ತಂತೆ ಪೂರ್ಣ ಅಂದಾಗ ಎಲ್ಲಾ ಸೇರಿ ನನ್ನ ಬೆರಳನ್ನೂ ಬರೆಯೋ ಸಾಧನ ಮಾಡಿಸಿಯೇಬಿಟ್ಟರು. ಅಕ್ಕರೆಯಿಂದ.

ಇಷ್ಟೆಲ್ಲಾ ಹೇಳಿದ ಮೇಲೆ ಇದರಿಂದಾಗಬಹುದಾದ ಮುಜುಗರವೇನು ಕಡಿಮೆಯೇ. ಬ್ಯಾಂಕೋ, ಮತ್ಯಾವುದೋ ಆಫೀಸಿನಲ್ಲಿ ಯಾರಾದರೂ ಪೆನ್ ಕೇಳಿ, ಅದನ್ನು ಕೊಟ್ವೋ, ಮುಗೀತಲ್ಲಿಗೆ ನಮ್ಮ ಅದರ ಋಣಾನುಬಂಧ. ತರ್ಪಣ ಬಿಟ್ಟ ಹಾಗೇ ಲೆಕ್ಕ. ಹಾಗಂತ ಕ್ಯಾಪ್ ಇಟ್ಕೊಂಡು ಕೊಟ್ರೂ ವಾಪಸ್ ಬರದೆ. ‘ಢಕ್ಕನ್’ಗಳಾಗಿ ಉಳಿದೇ ಬಿಡ್ತೀವಿ.

ಅಯ್ಯೋ… ತುಂಬಾ ದಣಿವಾಗ್ತಿದೆ.
ಢಲ್ ಗಯಾ ದಿನ್…
ಹೋ ಗಯಿ ಶ್ಯಾಮ್…
ಅಬ್ ಬಸ್ ಭೀ ಕರೋ…
– ಇತಿ ಖನಿಯ ದನಿ ಲೇಖನಿ.

—-

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

Leave a comment

Your email address will not be published. Required fields are marked *

Recent Posts More

 • 6 days ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 week ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 2 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  4 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  4 weeks ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...