Share

ಸಂಕಷ್ಟಗಳ ಹಾದಿ ಕಂಡ ಬಾಲ್ಯ
ನಾಗರೇಖಾ ಗಾಂವಕರ

 

 

ಬಾಲ್ಯ ಬಂಗಾರ

 

 

 

ಬಾಲ್ಯದ ದಿನಗಳ ಸುತ್ತ ಅದೆಷ್ಟೋ ಕ್ಷಣಗಳನ್ನು ನೆನೆದು ಹೆಕ್ಕಿ ಎತ್ತಿಟ್ಟು ಬರೆದರೂ ಕಡಿಮೆ ಎನ್ನಿಸುವುದು. ಆದರೂ ಅದೇ ಬಾಲ್ಯದ ಉದ್ದಕ್ಕೂ ಕಾಡಿದ ನೋವಿನ ಹಾಡುಗಳು, ಮುಗ್ಧ ಮನಸ್ಸಿಗೆ ಭಯದ ಪರದೆ ಕಟ್ಟಿದ ತಳಮಳದ ಉದ್ವೇಗದ ಬೀಜ ಬಿತ್ತಿದ ಅಸಹಾಯಕ ದಿನಗಳ ನೆನಪುಗಳೂ ಇವೆ. ಸುಖ ದುಃಖಗಳನ್ನು ಲಾಭ ನಷ್ಟಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು ಎನ್ನುವ ಸುಭಾಷಿತವನ್ನು ಹೇಳಿದರೆ ಅರಿಯದ ಬಾಲ್ಯದ ದಿನಗಳಿದ್ದವು. ವಿಪರೀತ ಸಂಕಷ್ಟಗಳಿಗೆ ತೆರೆದುಕೊಂಡ ಘಟನೆಗಳಿದ್ದವು. ಅಳುವುದನ್ನೆ ದಿನದ ಭಾಗವಾಗಿ ಕಳೆದ ಸಮಯವೂ ಇತ್ತು.

ಆರು ಮಕ್ಕಳ ಹೆತ್ತ ಅಮ್ಮ ಪೇಟೆಯ ಬದುಕು ಸಾಕಾಗಿ ಹಳ್ಳಿಯಲ್ಲಿ ತಂದೆಗೆ ಹೇಳಿ ಹತ್ತಾರು ಎಕರೆ ಜಮೀನು ಖರೀದಿಸುವಂತೆ ಮಾಡಿದ್ದರು. ಅದೂ ತನ್ನ ತವರೂರಲ್ಲಿಯೇ. ನಾನು ಹುಟ್ಟಿದ ಒಂದೇ ವರ್ಷಕ್ಕೆ ಹಳ್ಳಿಗೆ ವಾಸ್ತವ್ಯ ಬದಲಾಯಿಸಿದ್ದರು ಅಮ್ಮ. ಮನೆಯಲ್ಲಿ ಆರು ಜನ ಮಕ್ಕಳ ಬೆಳೆಸುವ ಕಾಲಕ್ಕೆ ಸಂಸಾರದ ಜಂಜಾಟಕ್ಕೆ ನುಗ್ಗು ನುಗ್ಗಾಗಿದ್ದ ತಂದೆ ತಾಯಿ ಹೈರಾಣಾಗಿದ್ದರು. ಅಮ್ಮ ಆರು ಮಕ್ಕಳ ಕಟ್ಟಿಕೊಂಡು ಹಳ್ಳಿಯಲ್ಲಿ ಖರೀದಿಸಿದ ಜಮೀನು ಉಸ್ತುವಾರಿ ಮಾಡುತ್ತ ಇದ್ದರೆ ತಂದೆ ನೌಕರಿ ಮಾಡುತ್ತ ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದರು. ಎಲ್ಲರೂ ಶಾಲೆ ಕಲಿವ ಪ್ರಾಯದವರು. ಅದಾಗ ನಾನು ಒಂದನೇ ತರಗತಿಯಲ್ಲಿದ್ದೆ. ದೊಡ್ಡವ ಆಗಷ್ಟೇ ಕಾಲೇಜು ಮೆಟ್ಟಿಲು ಏರಿದ್ದ. ಉಳಿದವರೆಲ್ಲ ಹೈಸ್ಕೂಲು, ಪ್ರಾಥಮಿಕ ಹಂತದಲ್ಲಿದ್ದೆವು. ನನಗೋ ಐದೇ ವರ್ಷಕ್ಕೆ ಶಾಲೆಗೆ ಸೇರಿಸಿದ್ದರು. ಅಕ್ಕಂದಿರೊಂದಿಗೆ ದೂರದ ಒಂದೂವರೆ ಕಿ.ಮೀ. ದೂರದ ಶಾಲೆಗೆ ದಿನಕ್ಕೆರಡು ಬಾರಿ ಹೋಗಿ ಬರುತ್ತಿದ್ದೆ. ಆ ಐದನೇ ವಯಸ್ಸಿಗೆ ಮೊದಲ ನೋವಿನ ಗಾಯ ಎಳೆದಿತ್ತು ಬರಸಿಡಿಲು ಬಡಿದಿತ್ತು ಎಳೆಯ ಮನಸ್ಸಿನ ಮೇಲೆ.

ಶಾಲೆಯಿಂದ ಆಗಷ್ಟೇ ಮನೆಗೆ ಅಕ್ಕನೊಂದಿಗೆ ಮಧ್ಯಾಹ್ನದ ಊಟಕ್ಕೆ ಬಂದರೆ ಮನೆಯಲ್ಲಿ ದುಃಖದ ಛಾಯೆ. ಹತ್ತಾರು ಜನ ಮನೆ ಮುಂದೆ ಜಮಾಯಿಸಿದ್ದರು. ಮನೆಯ ಮುಂದೊಂದು ಅಂಬಾಸಿಡರ್ ಕಾರಿತ್ತು. ನಾಲ್ಕೈದು ಜನ ಮನೆಯಿಂದ ತಂದೆಯನ್ನು ಹೊತ್ತುಕೊಂಡಂತೆ ಹೊರಗೆ ತಂದು ಕಾರಿನಲ್ಲಿ ಮಲಗಿಸಿದರು. ಅವರೊಟ್ಟಿಗೆ ಅಮ್ಮ ಅಣ್ಣ ಹೊರಟುಬಿಟ್ಟರು. ಅಮ್ಮನೋ ಮಾತಾಡಲಾಗದಷ್ಟು ಸ್ಥಂಬಿತಳಾಗಿದ್ದಳು. ಏನಾಗಿದೆ ಎಂದು ತಿಳಿಯುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅಲ್ಪ ಸ್ವಲ್ಪ ಅರ್ಥೈಸಿಕೊಂಡ ಅಕ್ಕ ಜೋರಾಗಿ ಅಳುತ್ತ ಮನೆಮುಂದಿನ ಅಂಗಳದಲ್ಲಿ ಮಣ್ಣಿನ ನೆಲದ ಮೇಲೆ ಕೂತು ಅಸಹಾಯಕ ವೇದನೆಯಲ್ಲಿ ಮಣ್ಣು ಎತ್ತಿ ಎತ್ತಿ ತಲೆಯ ಮೇಲೆ ಸುರಿದುಕೊಳ್ಳುತ್ತ ಗೋಳಿಡುತ್ತಿದ್ದಳು. ನಾನಾದರೋ ಭೀತಿಯಲ್ಲಿ ಮುಳುಗಿದ್ದೆ. ತಂದೆಗೇನಾಯಿತೋ ತಿಳಿದಿರಲಿಲ್ಲ. ಮೊದಲ ಬಾರಿ ನನ್ನ ಮನಸ್ಸಿಗೆ ಅತೀವ ನೋವಾಗಿತ್ತು. ಮನೆಯಲ್ಲಿ ಕೊನೆಯ ಮಗುವಾದ ನನ್ನನ್ನು ತಾಯಿಗಿಂತ ಹೆಚ್ಚು ಮುದ್ದು ಮಾಡುತ್ತಿದ್ದರು. ಅವರು ತಿನ್ನುವ ಎಲ್ಲ ಪದಾರ್ಥಗಳಲ್ಲೂ ಒಂದಿಷ್ಟು ನನ್ನ ಪಾಲಾಗುತಿತ್ತು. ನಾನು ತಿಂಡಿಪೋತ ಆಸೆಬುರುಕ ಹುಡುಗಿಯಾಗಿದ್ದೆ. ನನಗೆ ಕೊಟ್ಟಿದ್ದು ಸಾಕಾಗುತ್ತಿರಲಿಲ್ಲ ಎಂಬುದು ತಂದೆಗೆ ತಿಳಿದಿರುತ್ತಿತ್ತು. ಅಮ್ಮ ಜೋರು ಮಾಡುತ್ತಿದ್ದರೂ ನಕ್ಕು ತಮ್ಮ ತಿನಿಸಿನಲ್ಲಿ ನನಗೆ ಕೊಡುವ ಅವರು ನನ್ನನ್ನು ಹುಡುಗನೆಂದೆ ಸಂಬೋಧಿಸುತ್ತಿದ್ದರು ಮುದ್ದು ಉಕ್ಕಿದಾಗಲೆಲ್ಲಾ. ಆಗೆಲ್ಲ ಅಣ್ಣಂದಿರು ಹೊಟ್ಟೆಯುರಿದುಕೊಳ್ಳುತ್ತಿದ್ದರು. ಅಂತಹ ಅಪ್ಪನಿಗೆ ಏನಾಯಿತೋ ಅನ್ನೋ ಭಯವನ್ನು ನಾನು ಅದನ್ನು ಅರ್ಥ ಮಾಡಿಕೊಳ್ಳದ ವಯಸ್ಸಿನಲ್ಲಿ ಅನುಭವಿಸಿದ್ದೆ.

ಮಧ್ಯಾಹ್ನದ ಊಟವನ್ನೂ ಮಾಡದೆ ನಾವೆಲ್ಲ ಐದು ಮಕ್ಕಳು ಮನೆಯಲ್ಲಿ ಕಾದು ಕುಳಿತಿದ್ದೆವು. ಅಗ ಮಾವ ಅಜ್ಜಿಯನ್ನು ಕರೆದುಕೊಂಡು ಬಂದಿದ್ದರು. ಮಕ್ಕಳಷ್ಟೇ ಇರುವ ಮನೆಯಲ್ಲಿ ಅಡುಗೆ ಮಾಡಲು ಯಾರೂ ಇರಲಿಲ್ಲ. ಹಾಗಾಗಿ ಅಜ್ಜಿ ಬಂದವರು ಹೊಟ್ಟೆಗೆ ಸ್ವಲ್ಪ ಹಾಕಿದ್ದರು. ಹಾಗೂ ಹೀಗೂ ಏನಾಯಿತೋ ಎಂದು ಕಾದು ಕುಳಿತಿರುವಾಗಲೇ ಅಣ್ಣ ಆಸ್ಪತ್ರೆಯಿಂದ ಮನೆಗೆ ಬಂದಿದ್ದ. ತಂದೆ ಮಾತನ್ನಾಡುತ್ತಿರುವರೆಂದು ಹಾರ್ಟ್ ಅಟ್ಯಾಕ್‍ಗೆ ಒಳಗಾಗಿರುವರೆಂದು ಹೇಳಿದ್ದ. ಅದೇನೆಂದು ಅರಿವಾಗದೇ ಇದ್ದರೂ ತಂದೆಗೆ ಆರೋಗ್ಯ ಸರಿಯಿಲ್ಲವೆಂದಷ್ಟೇ ಅರ್ಥವಾಗಿತ್ತು.

ಹೊಟ್ಟೆಗೆ ಬಟ್ಟೆಗೆ ಬಡತನವಿಲ್ಲದಿದ್ದರೂ ನಾವೆಲ್ಲ ಕಲಿಯುವ ಮಕ್ಕಳಾದ್ದರಿಂದ ಬದುಕು ಒಂದು ಸವಾಲಾದ ಕಾಲದಲ್ಲೇ ನಮಗೆ ಈ ಸಂಕಷ್ಟ ಬಂದಿದ್ದು ಅಮ್ಮನಿಗೆ ಜವಾಬ್ದಾರಿಯ ಗುಡ್ಡವೇ ತಲೆ ಮೇಲೆ ಬಿದ್ದಂತಾಗಿತ್ತು. ಗಟ್ಟಿಗಿತ್ತಿಯಾದ ಆಕೆ ಒಳಗೊಳಗೆ ನರಳಿದರೂ ತೋರಿಸಿಕೊಳ್ಳದೇ ಸುಮಾರು ಇಪ್ಪತ್ತು ಮೂವತ್ತು ದಿನಗಳ ಕಾಲ ಆಸ್ಪತ್ರೆ ಮನೆ ಎಂದು ಏಗಿದ್ದಳು. ಹುಷಾರಾದ ತಂದೆ ಮನೆಗೆ ಬರುವವರೆಗೆ ಕೂಡಿಟ್ಟ ಇದ್ದಬಿದ್ದ ಹಣವೆಲ್ಲ ಖರ್ಚಾಗಿತ್ತು. ತಂದೆ ನೌಕರಿ ಬಿಡೆಂದರೂ ಒಪ್ಪದೇ ಹಠಮಾಡಿ ಮತ್ತೆ ಕೆಲಸಕ್ಕೆ ಹೊರಟರು. ಅಮ್ಮ ನೌಕರಿ ಬೇಡವೆಂದು ಎಷ್ಟೆಲ್ಲಾ ಪುಸಲಾಯಿಸಿದರೂ ಕಾಡಿ ಬೇಡಿದರೂ ಕೇಳದ ಅವರು ಅಲ್ಲಿ ಕೆಲಸದೊತ್ತಡ, ಹೊಟೇಲು ಊಟ, ಅಸ್ತವ್ಯಸ್ತ ಜೀವನಶೈಲಿಯಿಂದ ಸ್ವಲ್ಪದಿನದಲ್ಲಿಯೇ ಮತ್ತೊಮ್ಮೆ ಎದೆನೋವಿನಿಂದ ಬಳಲಿದ್ದರು. ಆಗಂತೂ ಹೋದ ಜೀವ ವಾಪಸ್ಸು ಬಂದದ್ದು ನಮ್ಮ ಭಾಗ್ಯವಾಗಿತ್ತು. ಅವರನ್ನು ಆಸ್ಪತ್ರೆಯಿಂದ ವಾಪಸ್ಸು ಕರೆತಂದ ದಿನ ಅಮ್ಮ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತ ಅಳುವುದನ್ನು ನಾನು ಕೇಳಿಸಿಕೊಂಡಿದ್ದೆ. ಮತ್ತೆ ಸಾಂತ್ವನ ಹೇಳಲು ಬಂದ ಊರ ಹೆಂಗಸರ ಮುಂದೆ ಅಳುವನ್ನು ನುಂಗುತ್ತ ಮಾತನಾಡುತ್ತಿರುವ ಅಮ್ಮ ಹೆತ್ತ ಮಕ್ಕಳ ಸಣ್ಣ ಪ್ರಾಯ. ಆರು ಮಕ್ಕಳ ದೊಡ್ಡ ಸಂಸಾರ ಹೇಗೆ ನಡೆಸುವುದು ಸಾಲ ಬೆಳೆದಂತೆ ಬದುಕಿನ ಸಂಕಷ್ಟಗಳ ಹೇಗೆ ಎದುರಿಸಲಿ ಎಂಬಿತ್ಯಾದಿ ನೋವನ್ನು ಹಂಚಿಕೊಳ್ಳುತ್ತಿದ್ದರು. ಹೆಣ್ಣಿಗೆ ಪತಿಯ ಅನಿವಾರ್ಯತೆ ಎಷ್ಟು ಎಂಬುದು, ಮಕ್ಕಳಿಗೆ ತಂದೆಯ ಮಾರ್ಗದರ್ಶನ ಎಷ್ಟೆಂಬುದು, ಸಂಬಂಧಗಳ ಬಂಧ ಏನೆಂಬುದು ಆಗ ತಿಳಿಯದಿದ್ದರೂ ಕ್ರಮೇಣ ಅರಿವಾಗಿದ್ದವು. ಹಾಗಾಗಿ ಆ ಮಾತುಗಳು ಇಂದಿಗೂ ನನಗೆ ನೆನಪಿವೆ. ಆಗ ತಂದೆ ನೌಕರಿಗೆ ರಾಜೀನಾಮೆ ಕೊಟ್ಟು ಸ್ವಯಂ ನಿವೃತ್ತಿ ತೆಗೆದುಕೊಂಡರು. ಬಂದ ಅಲ್ಪಸ್ವಲ್ಪ ಹಣ ಅವರ ಆಸ್ಪತ್ರೆ ವೆಚ್ಚಕ್ಕೆ ಖರ್ಚಾದರೆ ಉಳಿದ ಸ್ವಲ್ಪ ಹಣವನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿಟ್ಟರು. ಮತ್ತೆ ಜೀವನ ಬಂಡಿ ಹಳ್ಳಿಯಲ್ಲಿ ಸಾಗತೊಡಗಿತ್ತು. ಪಟ್ಟಣದ ಬದುಕಿಗೆ ಹೊಂದಿಕೊಂಡಿದ್ದ ತಂದೆ ಕೆಲಸವೂ ಇಲ್ಲದೇ ಮನೆಯಲ್ಲಿಯೇ ಇರಬೇಕಾದ ಹಿಂಸೆಗೆ ಸ್ವಲ್ಪ ವಿಚಲಿತರಾಗಿದ್ದರು. ಆದರೆ ಅಮ್ಮ ಅವರ ಹಿಂದೆ ಸದಾ ಬೆಂಗಾವಲಾಗಿ ಇರುತ್ತಿದ್ದಳು.
ಹೆಚ್ಚಿನ ಕೃಷಿಯ ಉಸ್ತುವಾರಿಯನ್ನೆಲ್ಲಾ ಆಕೆಯೇ ಮಾಡುತ್ತಿದ್ದರೆ ತಂದೆ ಆಳುಕಾಳು ಲೆಕ್ಕಾಚಾರ ಇವುಗಳನ್ನೆಲ್ಲಾ ನಿಭಾಯಿಸುತ್ತಿದ್ದರು. ಅಂತೂ ಒಂದಿಷ್ಟು ವರ್ಷ ಹೇಗೋ ಬಂಡಿ ಸಾಗಿತ್ತು. ನಾವೆಲ್ಲ ಶಾಲೆ ಅಭ್ಯಾಸದ ಜೊತೆಜೊತೆಗೆ ಗದ್ದೆ ಕೆಲಸಗಳಲ್ಲಿ ತಾಯಿಯೊಂದಿಗೆ ಕೆಲಸದಾಳುಗಳೊಂದಿಗೆ ಸಮವಾಗಿ ದುಡಿಯುತ್ತ ಇದ್ದದ್ದು ಆಗಾಗ ತಂದೆತಾಯಿ ಹಣಕಾಸಿನ ಮುಗ್ಗಟ್ಟು ಕುರಿತು ಚರ್ಚಿಸುತ್ತಿದ್ದರು. ಕೆಲವೊಮ್ಮೆ ಸಣ್ಣ ಮಾತುಕತೆ ಜಗಳ ಎಲ್ಲವೂ ಇತ್ತು. ತಂದೆಯ ವೈಶಾಲ್ಯದ ಗುಣ ಹಣವನ್ನು ಖರ್ಚು ಮಾಡುವುದರಲ್ಲೂ ಇತ್ತು. ಹೀಗಾಗಿ ಸದಾ ಮಕ್ಕಳ ಶ್ರೇಯೋಭಿವೃದ್ಧಿಯನ್ನೆ ಗಮನದಲ್ಲಿಟ್ಟುಕೊಂಡಿರುತ್ತಿದ್ದ ಅಮ್ಮ ಆಗಾಗ ತಂದೆಗೆ ಬುದ್ಧಿಹೇಳುತ್ತಿದ್ದರು ತಂದೆ ಅದನ್ನು ಕೇಳುತ್ತಿರಲಿಲ್ಲ. ಅಮ್ಮ ಬೆಳೆಯುತ್ತಿದ್ದ ಹೆಣ್ಣು ಮಕ್ಕಳನ್ನು ಮುಂದಿಟ್ಟು ಮನವರಿಕೆ ಮಾಡಲು ಪ್ರಯತ್ನಿಸಿದರೆ ತಂದೆ ‘ಹುಟ್ಟಿಸಿದವ ಹುಲ್ಲು ಮೇಯಿಸುವ’ ಎನ್ನುತ್ತಿದ್ದರು.

ಎಲ್ಲವೂ ಹೋರಾಟ. ಎರಡನೇ ಅಣ್ಣ ಅದ್ಹೇಕೋ ಶಾಲೆ ಎಂದರೆ ದೂರ ಸರಿಯತೊಡಗಿದ. ಮನೆಯಲ್ಲಿ ಕೃಷಿಗೆ ನಿಲ್ಲುವೆನೆಂದ. ಎಸ್ ಎಸ್ ಎಲ್ ಸಿ ಬರುತ್ತಲೂ ಅವನ ಶಿಕ್ಷಣ ಅಲ್ಲಿಗೆ ನಿಂತುಹೋಯಿತು. ಅಮ್ಮನೊಂದಿಗೆ ಕೃಷಿಗೆ ಕೈ ಹಚ್ಚಿದ. ಬೆಳೆಗಳು ವರ್ಷಕ್ಕೆರಡು ಬೆಳೆದವು. ಐವರು ಶಾಲೆ ಕಾಲೇಜು ಮೆಟ್ಟಿಲೇರಿದರೆ ಆತನೋ ಮನೆ ಮಠ, ಗದ್ದೆ ಎನ್ನುತ್ತ ಕುಟುಂಬದ ಆರ್ಥಿಕ ಬಲಕ್ಕೆ ಬಲಗೈಯಾಗಿದ್ದ. ಆಗಲೇ ಮತ್ತೊಮ್ಮೆ ತಂದೆಗೆ ಹೃದಯಾಘಾತವಾಗಿತ್ತು. ಇಡೀ ಕುಟುಂಬ ಕಂಗೆಟ್ಟಿತ್ತು. ಒಂದಾಂದ ಮೇಲೊಂದು ಸಂಕಟಗಳು ಗುಳೇ ಎತ್ತಿ ಬಂದಂತೆ.

ನಾಗರೇಖಾ ಗಾಂವಕರ

ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲಭಾಷಾ ಉಪನ್ಯಾಸಕಿ. ಕಥೆ, ಕವನಗಳು, ಲೇಖನಗಳು, ವಿಮರ್ಶಾ ಬರಹಗಳ ಮೂಲಕ ಪರಿಚಿತರು. ‘ಏಣಿ’, ‘ಪದಗಳೊಂದಿಗೆ ನಾನು’ ಪ್ರಕಟಿತ ಕವನ ಸಂಕಲನಗಳು.

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 4 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...