Share

ಮಳೆಯೊಡನೆ ಮಾತು ಜನಪದ; ಮೋಡಬಿತ್ತನೆ ಅಹಮ್ಮು ರಾಜಕಾರಣ
ಸಂಪಾದಕ

ಗೆಳೆಯನೊಬ್ಬ ಒಂದು ಸಂಗತಿ ಹೇಳಿದ. ಮಳೆ ಶುರುವಾಗಿ ಕೃಷಿ ಕೆಲಸಗಳಿಗೆ ಜನ ಕೈಹಚ್ಚುವಾಗ ಉಳುವ ಎತ್ತುಗಳ ಜೋಡಿಗೆ, ನೇಗಿಲಿಗೆ ಪೂಜೆ ಮಾಡುವ ಕ್ರಮವಿರುತ್ತದೆ. ನನ್ನ ಗೆಳೆಯ ಹೇಳಿದ್ದು ಆ ಸಂದರ್ಭದಲ್ಲಿ ನಡೆದ ಪ್ರಸಂಗದ ಬಗ್ಗೆ. ಕೃಷಿ ಕಾರ್ಯ ಆರಂಭಿಸುವ ಆ ಮುಹೂರ್ತಕ್ಕೆ ಊರಲ್ಲೇ ಲಭ್ಯವಿರುವ ಅರ್ಚಕರನ್ನು ಕರೆಯಲಾಗುತ್ತದೆ. ಅವರ ಬಳಿ ನನ್ನ ಮಿತ್ರನ ತಂದೆ ಒಂದು ಅಹವಾಲು ಇಟ್ಟರಂತೆ. ಇರುವ ಎತ್ತಿನ ಜೋಡಿಯಲ್ಲಿ ಒಂದು ಎತ್ತು ಆಗಲೇ ಬಡವಾಗಿಬಿಟ್ಟಿರುವುದರಿಂದ ಹೇಗಾದರೂ ಮಾಡಿ ಈ ಸಲದ ಕೃಷಿ ಕೆಲಸ ಪೂರ್ತಿಯಾಗೋ ಹಾಗೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ಎಂಬುದು ಆ ನಿವೇದನೆಯಾಗಿತ್ತು. ನೇಗಿಲಿಗೆ ಹೂವೇರಿಸುತ್ತಿದ ಆ ಅರ್ಚಕ ಥಟ್ಟನೆ, ‘ನೋಡು ದೇವ್ರೆ, ಮೊದ್ಲೇ ಬಡೋನು, ಇರೋ ಎತ್ತುಗಳಲ್ಲಿ ಒಂದು ಬಡಕಲ. ಇವ್ನಿಗೆ ಒಂದು ಎತ್ತು ಸಿಗೋ ಹಾಗೆ ಮಾಡಪ್ಪ’ ಎಂದುಬಿಡೋದೆ? ಪಾಪ, ನನ್ನ ಗೆಳೆಯನ ತಂದೆಯ ಅಹವಾಲು ಮುಗಿದಿರಲಿಲ್ಲ. ‘ಮಳೆ ಸರಿಯಾಗಿ ಬೀಳೂದೇ ಕಮ್ಮಿಯಾಗಿದೆ. ಹಾಗೂ ಹೀಗೂ ಕೈಗೆ ಫಸಲು ಬಂತು ಅನ್ನುವಾಗ ಏಕ್​ದಂ ಮಳೆ ಬಂದು ಅದೂ ಹಾಳಾಯ್ತು ಹೋದ ವರ್ಷ’ ಎಂದು ಸಂಕಟ ತೋಡಿಕೊಂಡರಂತೆ. ಮತ್ತೆ ಅಷ್ಟೇ ಸ್ಪೀಡಿನಲ್ಲಿ ಆ ಅರ್ಚಕ ‘ನೋಡಪ್ಪಾ ದೇವ್ರೆ, ಇವ್ನ ಗದ್ದೇಲಿ ಮಳೆ ಸರಿಯಾಗಿ ಬೀಳೋ ಹಾಗೆ ನೋಡ್ಕೊಳ್ಳಪ್ಪಾ. ಸುಮ್ನೆ ನಿನ್ನಿಷ್ಟ ಬಂದ ಹಾಗೆ ಮಳೆ ಸುರಿಸ್ಬೇಡ’ ಎಂದು ಮತ್ತೆ ದೇವರಿಗೆ ತಾಕೀತು ಮಾಡೇಬಿಟ್ಟರಂತೆ. ನನ್ನ ಗೆಳೆಯನ ತಂದೆ ದೇವರಲ್ಲಿ ಮತ್ತು ದೇವರ ಮುಂದೆ ತಮ್ಮ ಕಷ್ಟವನ್ನು ಹೇಳಿ ಅದಕ್ಕೊಂದು ಪರಿಹಾರ ಕಾಣಿಸಬಲ್ಲವರೆಂದು ಅರ್ಚಕರಲ್ಲಿ ಇಟ್ಟಿದ್ದ ನಂಬಿಕೆಗೆ ಸಿಕ್ಕಿದ್ದು ಎಂಥ ವೇಗದ ಭರವಸೆ ನೋಡಿ.

ಇದು ಇವತ್ತಿನ ರಾಜಕಾರಣ. ಅಮಾಯಕ ಬದುಕನ್ನು, ಅದರ ಒಡಲಾಳದ ನೋವನ್ನು ಅತ್ಯಂತ ತಿರಸ್ಕಾರದಿಂದಲೇ ನೋಡುವ, ತಾನೇ ಎಲ್ಲ ಎಂಬ ಬಿಂಕದಲ್ಲೇ ಸುಳ್ಳು ಭರವಸೆ ಕೊಟ್ಟು ಆ ಬದುಕನ್ನು ಇನ್ನಷ್ಟು ಅಮಾಯಕ ಸ್ಥಿತಿಗೆ ತಳ್ಳಿಬಿಡುವ ಮತ್ತು ಆ ಚಮತ್ಕಾರದಿಂದಲೇ ತಾನು ಬದುಕುವ ರಾಜಕಾರಣಕ್ಕೆ ಆತ್ಮ ಅನ್ನುವುದು ಇಲ್ಲ. ಹಾಗಾಗಿಯೇ ಅದು ತನ್ನ ಮೂರ್ಖತನದ ಪರಮಾವಧಿಯೊಂದಿಗೂ ಬೆತ್ತಲಾಗಿಬಿಡುತ್ತದೆ ಬಹಳ ಸಲ.

ಸರಳವಾಗಿ, ಯಾರನ್ನೂ ಮೆಚ್ಚಿಸುವ ಗರಜಿಲ್ಲದೆ, ಭೂಮಿಗೆ ಆಪ್ತರಾಗಿ ಬದುಕುವ ಜನಪದರ ಗುಣ, ಆತ್ಮವೇ ಇಲ್ಲದ ಮತ್ತು ಅಹಂಕಾರವೇ ಮೈವೆತ್ತಂತಿರುವ ರಾಜಕಾರಣಕ್ಕೆ ಯಾವತ್ತೂ ಬರಲಾರದು. ಅದಕ್ಕೆ ಎಲ್ಲವನ್ನೂ, ಕಡೆಗೆ ಜನಪದರ ಕಣ್ಣೀರನ್ನೂ ತನ್ನ ಬೇಳೆ ಬೇಯಿಸಿಕೊಳ್ಳುವ ಬೆಂಕಿಯಾಗಿ ಪರಿವರ್ತಿಸಿಕೊಳ್ಳುವ ಸಂಚುಕೋರ ಬುದ್ಧಿ. ರಾಜಕಾರಣಕ್ಕೆ ಹೇಗೆ ಜನಪದರ ಮನಸ್ಸು ಅರ್ಥವಾಗುವುದಿಲ್ಲ ಅನ್ನುವುದಕ್ಕೆ, ಮಳೆ ವಿಚಾರದಲ್ಲಿನ ಅದರ ನಡೆಗಳನ್ನೇ ಉದಾಹರಣೆಯಾಗಿ ನೋಡಬಹುದು.

ಮಳೆ ಇಲ್ಲವೆಂದರೆ ಮೋಡಬಿತ್ತನೆ ಮಾಡುತ್ತೇನೆಂದು ಹೊರಡುತ್ತದೆ ಅದು. ಬರುತ್ತಿದ್ದ ಮಳೆ ಬಾರದಿರುವಂತಾಗಲು ತನ್ನ ಮೂರ್ಖತನದಿಂದ ಇಟ್ಟ ದುಡುಕು ಹೆಜ್ಜೆಗಳೇ ಕಾರಣ ಎನ್ನುವುದೂ ಕೂಡ ಅದಕ್ಕೆ ಅರ್ಥವಾಗುವುದಿಲ್ಲ. ಬರುವ ಮಳೆ ಬರುವ ಹಾಗೆ, ಬಂದ ಮಳೆ ಇರುವ ಹಾಗೆ ಮಾಡಬೇಕೆಂಬ ಇಚ್ಛಾ ಶಕ್ತಿ ಇಲ್ಲ.

ರಾಜಕಾರಣದ ಇಂಥ ಅಹಂಕಾರ ಮತ್ತು ಮೂರ್ಖತನಕ್ಕಿಂತ, ಜನಪದರು ಅಂತಃಕರಣಪೂರ್ವಕವಾಗಿ ಮಳೆಯ ಜೊತೆಗೇ ನೇರ ಸಂವಾದಕ್ಕೆ ಎಳಸುವಲ್ಲಿ ನಿಜವಾದ ಶಕ್ತಿಯಿದೆ. ಅದು ಕಡೇಪಕ್ಷ ನಿಸರ್ಗದ ಜೊತೆ ತಾದಾತ್ಮ್ಯ ಏರ್ಪಡಿಸಿಕೊಳ್ಳುವ ನಡೆ. ನಿಸರ್ಗದಿಂದಲೇ ಎಲ್ಲ ಪಡೆಯುವುದು ಎಂಬ ಅರಿವಿನಿಂದ ಸಾಧ್ಯವಾಗುವ ಈ ಮಾತು, ತನ್ನದೇ ಆದ ಆತ್ಮವಿಶ್ವಾಸವುಳ್ಳದ್ದಾಗಿರುತ್ತದೆ. ಅಲ್ಲಿ ಅಹಂಕಾರವಿರುವುದಿಲ್ಲ. ಬದಲಾಗಿ, ಕೊಡುವವನಿಗೂ ಕಷ್ಟವಿರಬಹುದು ಎಂಬ ಪ್ರಜ್ಞೆಯಲ್ಲಿ ನಿಕ್ಕಿಯಾದ ಸಹನೆಯೊಂದು ಅಲ್ಲಿರುತ್ತದೆ.

ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ

ಎಂದು ಶುರುವಾಗುವ ಜನಪದ ಗೀತೆಯ ಮುಂದಿನ ನುಡಿಯನ್ನು ಗಮನಿಸಬೇಕು. ಅಲ್ಲಿ, ತಮ್ಮದೇ ಬದುಕಿನಲ್ಲಿನ ಜಂಜಡಗಳ ಬೆಳಕಿನಲ್ಲಿ ಮಳೆರಾಯನನ್ನು ಕಾಣುವ ಬಗೆಯಿದೆ:

ಮಳೆ ಹೋಯ್ತು ಅಂತ ಮಳೆರಾಯ್ನ ಬೈಬೇಡ
ಒಕ್ಕಳ ಹೊನ್ನ ಸೆರಗೇಲಿ ಕಟ್ಟಿಕೊಂಡು
ಸಾಲಕ್ಕೆ ಹೋಗವ್ನೆ ಮಳೆರಾಯ.

ಇದು ಇನ್ನೊಬ್ಬನ ಕಷ್ಟ ಗೊತ್ತಿರುವ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ತಿಳಿವು. ಹೀಗಾಗಿ, ಮಳೆಯನ್ನು ಹೆಡಮುರಿಗೆ ಕಟ್ಟಿ ಎಳೆತರುತ್ತೇವೆಂಬ ಆಳುವವರ ದುರಹಂಕಾರದ ಬದಲಾಗಿ, ಏನೋ ಕಷ್ಟದಲ್ಲಿರುವ ಮಳೆರಾಯ ತುಸು ಹೆಚ್ಚುಕಡಿಮೆಯಾದರೂ ಬಂದಾನು ಎಂಬ ಕಾಯುವಿಕೆ ಜನಪದರಲ್ಲಿ ಸಾಧ್ಯವಾಗುತ್ತದೆ. ಕೃಷಿಯ ಅಂತರಂಗವೇ, ಕೃಷಿ ಕಲಿಸುವ ಪಾಠವೇ ಅದು: ಕಾಯುವುದು.

ಆದರೆ, ಜನಪದರ ಕಾಯುವಿಕೆಗೂ ಒಂದು ಮಿತಿಯಿರುತ್ತದೆ. ಅದು ಮುಗಿದಾಗ ಸಂಭವಿಸುವ ಸ್ಫೋಟದಲ್ಲಿ ದೇವರನ್ನೂ ಎದುರಿಸುವ ನಿಷ್ಠುರತೆ.

ಯಾತಕೆ ಮಳೆ ಹೋದವೋ
ಶಿವಶಿವ ಲೋಕ ತಲ್ಲಣಿಸುತಾವೋ
ಬೇಕಿಲ್ಲದಿದ್ದರೆ ಬೆಂಕಿಯ ಮಳೆ ಸುರಿದು
ಉರಿಸಿ ಕೊಲ್ಲು ಬಾರದೆ

ಇಲ್ಲಿನದು ನಂಬಿ ಕಾದವರ ಸಿಟ್ಟು. ನಂಬಿಕೆ ಹುಸಿಯಾಯಿತಲ್ಲ ಎಂಬ ಬೇಗುದಿ. ನಮ್ಮ ಬದುಕುಗಳನ್ನು ತೆಗೆದುಕೊಂಡು ಹೋಗಿಬಿಡು ಎಂಬ ಸವಾಲು ಅವರ ಅಸಹನೆಯ ಅಖೈರು. ಅದಕ್ಕಿರುವ ಕಾರಣಗಳನ್ನು ನಿವೇದಿಸುವ ಮುಂದಿನ ನುಡಿಗಳನ್ನು ನೋಡಬೇಕು:

ಹೊಟ್ಟೆಗೆ ಅನ್ನ ಇಲ್ಲಾದಲೆ
ನಡೆದರೆ ಜೋಲಿ ಹೊಡೆಯುತಲೆ
ಪಟ್ಟದಾನೆಯಂಥ ಸ್ತ್ರೀಯಾರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟಾದಲಿ

ಹಸಗೂಸು ಹಸಿವಿಗೆ ತಾಳದಲೆ
ಅಳುತಾವೆ ರೊಟ್ಟಿ ಕೇಳುತಲೆ
ಹಡೆದ ಬಾಣಂತಿಗೆ ಅನ್ನವು ಇಲ್ಲದಲೆ
ಏರುತಾವೆ ಮೊಣಕೈಗೆ ಬಳೆ

ಒಕ್ಕಾಲು ಮಕ್ಕಳಂತೆ
ಅವರಿನ್ನು ಮಕ್ಕಳನ್ನು ಮಾರುಂಡರು
ಮುಕ್ಕಣ್ಣ ಮಳೆ ಕರುಣಿಸೋ
ಮಕ್ಕಳನ್ನು ಮಾರುಂಡು ದುಃಖವನು ಮಾಡುತಾರೆ

ಇಡೀ ಬದುಕಿಗೇ ದುರಂತದ ಕರಿನೆರಳು ಮುಸುಕಿರುವ ಹೊತ್ತಿನಲ್ಲೂ, ಅಸಹನೆಯ ಅತ್ಯಂತ ಸ್ಥಿತಿಯಲ್ಲೂ ಜನಪದರು ಉಳಿಸಿಕೊಳ್ಳುವ ನಿರೀಕ್ಷೆಯಿದೆಯಲ್ಲ, ಅದು ಅಸಾಧಾರಣವಾದದ್ದು. ಬರೀ ಮಾತಲ್ಲದ ಮಾತಿನಿಂದ, ಸಂವಾದದಿಂದ ಸಾಧ್ಯವಾಗುವ ಮಾಗಿದ ಮನಸ್ಸಿನ ತಾಕತ್ತು ಅದು. ಬದುಕು ಚೆಲುವಾದದ್ದು ಎಂಬ ಸತ್ಯದ ಸಮೀಪದಲ್ಲಿನ ಹಾಡಿಯಲ್ಲಿ ಹೂವಾಡುವ ಜೀವಚೈತನ್ಯ ಅದು.

ಮಳೆ ಬರುತ್ತದೆ; ಮಳೆ ಬರಲಿ.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...