Share

ಇಲ್ಲಿಗೆ ಕಥೆಯ ಮುಗಿಸಲಾಗಿದೆ
ಕಾದಂಬಿನಿ ಕಾಲಂ

 

 

 

 

 

 

 

 

 

 

 

ಉದ್ದಕ್ಕೂ ಅಸ್ಪೃಶ್ಯರೆಂದು ಮುಟ್ಟದೆ ದೂರಕ್ಕಟ್ಟಿದರೂ ಮರೆಯಲ್ಲಿ ತಳ ಸಮುದಾಯದ ಹೆಣ್ಣು ದೇಹಗಳನ್ನು ಯಾರು ಬೇಕಾದರೂ ನುಗ್ಗಬಹುದಾದ ಬೇಲಿಯಿಲ್ಲದ ಹೊಲಗಳೆಂದೇ ಮೇಲ್ಜಾತಿಗಳವರು ಭಾವಿಸಿದಂತಿದೆ.

 

 

ರ ಗದ್ದಲದಿಂದ ತುಸು ದೂರದಲ್ಲಿರೋಣವೆನಿಸಿ ನಾವಲ್ಲಿ ಮನೆ ತೆಗೆದುಕೊಂಡಿದ್ದೆವು. ಅಲ್ಲಿ ಕಡುಬಡ ದಲಿತರ ಅಪ್ರಾಪ್ತ ಹೆಣ್ಣುಮಗಳೊಬ್ಬಳು ಮೇಲ್ಜಾತಿಯ ಯುವಕನಿಂದ ಅತ್ಯಾಚಾರಕ್ಕೊಳಗಾಗಿ ಬಸಿರಾಗಿದ್ದಳು. ದಿನ ತುಂಬುವ ಹೊತ್ತಲ್ಲಿ ಗುಟ್ಟು ರಟ್ಟಾಗಿ ಬಾಲೆಯ ಮನೆಯವರು ಹುಡುಗನಲ್ಲಿ ನ್ಯಾಯಕ್ಕೆ ಪಟ್ಟು ಹಿಡಿದು ಕೂತಿದ್ದರ ವಾಸನೆ ಹಿಡಿದ ಪತ್ರಿಕೆಗಳ ಕೆಲವರು, ಊರಿನ ದೊಡ್ಡ ಹೊಟ್ಟೆಯವರು, ಪುಡಿ ಪುಢಾರಿಗಳು ಆದಿನ ಅವಳ ಮನೆಯಲ್ಲಿ ಜಮಾಯಿಸತೊಡಗಿದರು. ಯಾರದೋ ಯಜಮಾನಿಕೆಯಲ್ಲಿ ಹುಡುಗನ ಕಡೆಯವರೂ ಬಂದು ಸೇರಿಕೊಂಡರು. ಹುಡುಗಿಯ ಮನೆಯವರಲ್ಲಿ ಇದು ಭರವಸೆಯನ್ನೂ ಹುಡುಗನ ಮನೆಯವರಿಗೆ ಇದು ಪುಕ್ಕಲನ್ನೂ ಹುಟ್ಟಿಸಿತ್ತು. ಹುಡುಗಿ ತಲೆ ತಗ್ಗಿಸಿ ಅಪರಾಧಿಯಾಗಿ ನಿಂತಿದ್ದಳು. ಹುಡುಗ ಮಾತ್ರ ನಾಪತ್ತೆಯಾಗಿದ್ದ.

ಆದರೆ ಮಾತುಕಥೆ ಮಾತ್ರ ಹುಡುಗ ಹುಡುಗಿಯನ್ನು ಒಂದು ಮಾಡುವ ಕಡೆಗೆ ಹರಿಯುತ್ತಲೇ ಇಲ್ಲದೆ ಹುಡುಗಿಯೇ ಹುಡುಗನ ಮೈಮೇಲೆ ಬಿದ್ದು ಹೋದಳೆಂದೂ, ಗಂಡಸರು ಏನು ಮಾಡುತ್ತಾರೆಂದೂ, ಆದರೆ ಮರ್ಯಾದೆಯಿಂದ ಇರತಕ್ಕದ್ದು ಹೆಣ್ಣುಗಳ ಜವಾಬ್ದಾರಿಯೆಂದೂ, ಈಗ ನಡೆದಿರುವ ಅಷ್ಟಕ್ಕೂ ಅವಳೇ ನೇರ ಹೊಣೆಯೆಂದೂ ಮಾತುಕಥೆ ನಡೆದಿತ್ತು. ಮೊದಲಿಗೆ ಕಂಪ್ಲೇಂಟು, ಅನ್ಯಾಯ, ಮದುವೆ ಮಾಡಿಸುವುದು ಇಂಥ ಮಾತುಗಳನ್ನು ಸ್ವಲ್ಪ ದೃಢ ದನಿಯಲ್ಲಿ ಕೇಳುವ ಇರಾದೆಯಲ್ಲಿದ್ದ ಅವಳ ಪೋಷಕರ ಸಂಪೂರ್ಣ ದನಿ ಉಡುಗಿ ತಲೆಬಾಗಿ ಕೂರುವಂತಾಯಿತು. ಮೊದಲಿಗೆ ಈ ಎಲ್ಲ ಭರವಸೆ ಕೊಟ್ಟು ಕಂಪ್ಲೇಂಟು, ಕೋರ್ಟು ಕಛೇರಿಗಳ ಹಾದಿ ತಪ್ಪಿಸಿ ಮಾತಿಗೆ ಬಂದಿದ್ದ ಆಸಾಮಿಗಳ ಬಣ್ಣ ಬದಲಾಗಿತ್ತು. ಅವರ ಮಾತೆಲ್ಲ ಹುಡುಗನ ಪರಿವಾರದ ಮಾನ ಕಾಪಾಡುವ ಕಡೆಗೇ ಇದ್ದು ಈ ಮದುವೆಯನ್ನು ನಡೆಯಗೊಡದೆ, ಸುದ್ದಿಯೂ ಆಗಗೊಡದೆ ಒಂದಷ್ಟು ಹಣ ಕೊಟ್ಟು ಕೈ ತೊಳೆದುಕೊಳ್ಳುವ ಕಡೆಗೆ ಹೊರಳಿತ್ತು.

ಒಬ್ಬರಾದರೂ ದಿನ ತುಂಬಿದ ಹುಡುಗಿಯ ಹೆರಿಗೆ, ಮಗು, ತಾಯಿ ಮಗುವಿನ ಆರೋಗ್ಯ, ಅವರ ಭವಿಷ್ಯ, ಮಾನ, ಪ್ರಾಣ ಯಾವ ಕಡೆಯೂ ಯೋಚಿಸದೆ ಒಂದು ಲಕ್ಷ ರೂಪಾಯಿಗೆ ಡೀಲ್ ಮಾಡಲು ಕೂತರು. ಹುಡುಗನ ಕಡೆಯವರೂ ಗಟ್ಟಿಗರೇ ಆದ್ದರಿಂದ ಅದರ ಮೊತ್ತ ಇಳಿಕೆಯಾಗುತ್ತಲೇ ಹೋಗಿ ಕೊನೆಯಲ್ಲಿ ನಲವತ್ತೈದು ಸಾವಿರಕ್ಕೆ ಬಂದು ನಿಂತಿತು. ಈ ನಲವತ್ತೈದಕ್ಕೆ ಒಂದು ರೂಪಾಯಿ ಕಡಿಮೆಯೂ ಇಲ್ಲ ಹೆಚ್ಚೂ ಇಲ್ಲ. ದರ ಫಿಕ್ಸ್ ಆಗಿದ್ದೇ ಇದ್ದಕ್ಕಿದ್ದಂತೆ ಇನ್ನೊಂದು ಹೊರಳು ಪಡೆದುಕೊಂಡಿತು. ಇಷ್ಟೆಲ್ಲ ಚೌಕಾಶಿ ಮಾಡಿದ್ದ ತಮಗೆ ಇಂತಿಷ್ಟು ಪಾಲು ಬೇಕೆಂದೂ ಇಲ್ಲವಾದಲ್ಲಿ ಪತ್ರಿಕೆಯಲ್ಲಿ ಹುಡುಗನ ಹುಡುಗಿಯ ಫೋಟೋ ಸಮೇತ ಸುದ್ದಿ ಪ್ರಕಟಿಸುವುದಾಗಿಯೂ ಪತ್ರಿಕೆಯವರು ಕೂತರು. ಇದ್ದ ನಲವತ್ತೈದು ಸಾವಿರ ಪಾಲಾಗುತ್ತ ಆಗುತ್ತ ಐದು ಸಾವಿರ ಉಳಿಯಿತು. ಊರಿನ ಪುಂಡ ಬಡ್ಡಿಹಣದವನೊಬ್ಬ ತನಗೆ ಹಣ ಸಿಕ್ಕಲಿಲ್ಲವೆಂದು ಕ್ಯಾತೆ ತೆಗೆದು ಕೂತ. ಕೊನೆಯಲ್ಲಿ ಈ ಐದು ಸಾವಿರ ತನಗೆ ಕೊಟ್ಟಲ್ಲಿ ಮಂಗಳೂರಿಗೆ ಕರೆದೊಯ್ದು ಆಕೆಯ ಹೆರಿಗೆ ಮಾಡಿಸಿ ಆಕೆಯನ್ನು ಯಾರ ಮನೆಯಲ್ಲಾದರೂ ಕೆಲಸಕ್ಕೆ ಬಿಡುವುದಾಗಿ ಹೇಳಿ ಹಣ ಕಿತ್ತುಕೊಂಡ. ಹುಡುಗಿ ಇವನ ಹಿಂದೆ ಮಂಗಳೂರಿಗೆ ಹೋದದ್ದೇನೋ ಹೌದು. ಆಕೆ ಮತ್ತೆ ಹಿಂದಿರುಗಲಿಲ್ಲ. ಆಕೆ ಹೆತ್ತಳೋ ಸತ್ತಳೋ ಎಂಬ ಕುತೂಹಲ ಊರ ಮಂದಿಗೂ ಇರಲಿಲ್ಲ. ಸರಾಗವಾಗಿ ಅವನು ಹೆರಿಗೆ ಮಾಡಿಸಿ ಅವಳನ್ನು ಬೊಂಬಾಯಿಗೆ ಮಾರಿರ್ತಾನೆ ಎಂದು ಮಾತಾಡಿಕೊಂಡರು.

ಮತ್ತೂ ಕೆಲ ವರ್ಷಗಳ ಹಿಂದೆ ಇನ್ನೊಂದೂರಲ್ಲಿ ಇನ್ನೊಂದು ಘಟನೆ ನಡೆದಿತ್ತು. ತಳ ಸಮುದಾಯದ ಆರನೇ ಕ್ಲಾಸಿಗೆ ಹೋಗುವ ಚೀಂಕಲುಕಡ್ಡಿ ಬಾಲೆ ಬಸುರಾಗಿಬಿಟ್ಟಿದ್ದಳು. ಯಾರೆಂದು ಕೇಳುವ ಕುತೂಹಲಕ್ಕೆ ಜನರೂ ಜಮಾಯಿಸಿದ್ದರು. ಆದರೂ ಸುದ್ದಿಯನ್ನು ಪೋಲೀಸ್ ಸ್ಟೇಷನ್ ಮೆಟ್ಟಿಲು ಹತ್ತಲಾಗಲೀ ಯಾವುದೇ ಸಂಘಟನೆಗಳ ಗಮನಕ್ಕೆ ಬಾರದಂತೆ ಎಚ್ಚರ ವಹಿಸಲಾಗಿತ್ತು. ಆಕೆಯ ತಂದೆ ತಾಯಿ ಕೂಲಿ ಕೆಲಸಕ್ಕೆ ಹೋದ ಹೊತ್ತಲ್ಲಿ ಅವಳ ಗುಡಿಸಲಿಗೆ ಕೆಲ ಪಡ್ಡೆ ಹುಡುಗರು, ಗಂಡಸರು ಮುಗಿಬೀಳುತ್ತಿದ್ದರಂತೆ. ಇದನ್ನು ನೋಡಿದವರೂ ಆ ದಿನಗಳಲ್ಲಿ ನೋಡಿಯೂ ನೋಡದಂತಿದ್ದರು. ಇದರ ಫಲವಾಗಿ ಈ ಪುಟ್ಟ ಕೂಸು ಈ ಸ್ಥಿತಿಯಲ್ಲಿ ನಿಂತಿತ್ತು. ಕೋಣೆಯ ಏಕಾಂತದಲ್ಲಿ ಮಗು ಘಾಸಿಗೊಳ್ಳದಂತೆ ಗುಟ್ಟಾಗಿ ಕೇಳಬೇಕಾದ ಪ್ರಶ್ನೆಗಳನ್ನು ತುಂಬಿದ ಜನಜಂಗುಳಿಯಿಂದ ಜೋರು ಜಬರದಸ್ತಿನ ಧ್ವನಿಯಿಂದ ಬಾಲೆಯ ಮೇಲೆ ಎಸೆಯಲಾಯ್ತು. ಹುಡುಗಿ ತನ್ನ ಮನೆಯ ಹತ್ತಿರದ ತಳ ಸಮುದಾಯದವನೇ ಆದರೂ ಅವಳ ಜಾತಿಯವನಲ್ಲದ ಒಬ್ಬ ಜಬ್ಬು ಮುದುಕನನ್ನು ಬೊಟ್ಟುಮಾಡಿದಳು. ಮುದುಕನ ಹೆಂಡತಿ ಮಕ್ಕಳು ಈ ಆರೋಪ ಮುದುಕನ ಮೇಲೇಕೆ? ನಿನ್ನ ಹತ್ತಿರ ಅವನು ಬಂದಿದ್ದು ನಾವು ನೋಡಲಿಲ್ಲವೇ? ಇವನು ಬಂದಿದ್ದು ನಮಗೆ ಗೊತ್ತಿಲ್ಲವೇ? ಎಂದು ಜೋರು ಮಾತಾಡಿದಾಗ ಹುಡುಗಿ ಹೀಗೆ ಉತ್ತರಿಸಿದಳು:

“ಅವರೆಲ್ಲ ಸಾಕ್ಸ್ ಹಾಕಿಕೊಂಡು ಬರುತ್ತಿದ್ದರು. ಇವನು ಹಾಗೆಯೇ…” ಎಂದು.

ಮಾತುಕಥೆ ಇದೆ ಎಂದು ಗೊತ್ತಾಗುತ್ತಿದ್ದಂತೆ ಈ ಮಗುವಿನ ಬಸಿರ ಹೊರೆಯನ್ನು ಎಲ್ಲಿಯಾದರೂ ತಮ್ಮ ತಲೆಗೆ ಕಟ್ಟಿಯಾರೆಂದು ಬಾಲೆಗೆ ಯಾರೋ ಬಾಯಿಪಾಠ ಮಾಡಿಸಿದ ಉತ್ತರವಾಗಿತ್ತು ಅದು. ಕಾಂಡೋಮ್ ಎಂದು ಹೇಳಲೂ ತಿಳಿಯದ ಬಾಲೆ ಹೀಗೆ ಹೇಳಿದ್ದಳು. ಮುಂದೆ ಮೇಲಿನ ಪ್ರಕರಣದಲ್ಲಿ ಹೇಳಿದಂತಹದ್ದೇ ತರಹದಲ್ಲಿ ಮಾತುಕಥೆ ನಡೆದು ‘ನಾಯಿ ಮುಟ್ಟಿದ ಮಡಕೆಯನ್ನು ನಾಯಿ ಕೊರಳಿಗೇ ಕಟ್ಟು’ ಎಂಬ ಗಾದೆಯನ್ನು ಉಲ್ಲೇಖಿಸಿ ತುರ್ತಾಗಿ ಅಲ್ಲಿಯೇ ಮುದುಕನಿಗೆ ಈ ಬಾಲೆಯ ಹಾರ ಬದಲಿಸುವ ಮೂಲಕ ಮದುವೆ ಮಾಡಿಸಿ ಆ ಹೆಣ್ಣು ಮಗುವಿನ ಮೇಲೆ ಎರಗುತ್ತಿದ್ದ ಬಾಕಿ ಆತ್ಮಗಳಿಗೆ ಶಾಂತಿ ಲಭಿಸಿತೆಂದಾಯಿತು.

ಕೆಲ ದಿನಗಳಲ್ಲಿ ಮುದುಕನ ಹೆಂಡಿರು ಮಕ್ಕಳ ಹೊಡೆತ ಬಡಿತದ ನಡುವೆಯೇ ಹೇಗೋ ಹೆರಿಗೆಯಾಗಿ ಕೆಲ ದಿನಗಳಲ್ಲೇ ಹುಡುಗಿ ನಾಪತ್ತೆಯೂ ಆದಳು. ಒಂದೆರಡೇ ವರ್ಷದಲ್ಲಿ ಅದೇ ಬಸ್ ನಿಲ್ದಾಣದಲ್ಲಿ ಮೂಳೆಯ ಹಂದರವಾಗದ ಆ ಹುಡುಗಿ ಇಳಿದಿದ್ದಳು. ಮೈತುಂಬ ರೋಗ ಮೆತ್ತಿಕೊಂಡಿದ್ದ ಹುಡುಗಿ ಅದು ಹೇಗೆ ತನ್ನ ತವರು ಮನೆಯನ್ನು ಸೇರಿದಳೋ ಕಾಣೆ. ಏಡ್ಸ್ ಕಾಯಿಲೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮುಂಬಯಿಯ ವೇಶ್ಯಾವಾಟಿಕೆಗೆ ತನ್ನನ್ನು ಹೊತ್ತೊಯ್ದು ಮಾರಿದ ಕಥೆಯನ್ನವಳು ನರಳುತ್ತಾ ಹೇಳುತ್ತಿದ್ದಳು. ತಂದೆ ತಾಯಿ ಕೂಡ ಮುಟ್ಟಲು ಹೇಸುತ್ತಿದ್ದ ಬಾಲೆಯನ್ನು ಆ ಊರಿನ ಚರ್ಚಿನ ನರ್ಸ್ ತರಬೇತಿ ಪಡೆದಿದ್ದ ಲೀಲಾ ಎಂಬ ಮಲೆಯಾಳಿ ಕನ್ಯಾಸ್ತ್ರೀ ಪ್ರತಿದಿನ ಸ್ನಾನ ಮಾಡಿಸಿ, ಉಣಿಸಿ, ತಿನಿಸಿ, ಔಷಧ ಕೊಟ್ಟು ಸಾಯುವ ತನಕ ಸೇವೆ ಮಾಡಿದರು. ಈ ಚಿಕಿತ್ಸಾ ಹಂತದಲ್ಲಿಯೇ ನಾನು ಆ ಬಾಲೆಯನ್ನು ಒಂದೆರಡು ಸಲ ಕಂಡು ಬಂದಿದ್ದೆ.

ನಾನು ತುಂಬ ಚಿಕ್ಕವಳಿದ್ದಾಗ ನನ್ನ ಪಕ್ಕದ ಮನೆಯಾಕೆ ಹೆಂಗಸರ ಗುಂಪಲ್ಲಿ ಒಂದು ಸಣ್ಣ ಹುಡುಗಿಯನ್ನು ಊರಿನ ಕೆಲ ಗಂಡಸರು ಒಂದೆಡೆ ಕೂಡಿಹಾಕಿ ನಿತ್ಯ ಅತ್ಯಾಚಾರ ಮಾಡುತ್ತಿದ್ದರೆಂದೂ ಆಕೆಯ ಬೆತ್ತಲು ಶವ ಕೆರೆಯ ಬದಿ ತುಟಿ, ಮೈಕೈ ಗಾಯಗೊಂಡು ಊದಿಕೊಂಡ ಸ್ಥಿತಿಯಲ್ಲಿ ಬಿದ್ದಿದೆಯೆಂದೂ ಹೇಳುತ್ತಿದ್ದಳು. ಹೆಂಗಸರು ಯಾವ ಜಾತಿಯ ಹುಡುಗಿ ಎಂದು ಕೇಳಿದಾಗ ‘ಅನಿ ಕೋಣ್ ಮರಾಂಚೆ!’ (ಇನ್ಯಾರು ಹೊಲೆಯರವಳು) ಎಂದ ಮಾತು ಇನ್ನೂ ಕಿವಿಯಲ್ಲೇ ಇದೆ.

ವಿಜಯಪುರದಲ್ಲಿ ದಾನಮ್ಮ ಎಂಬ ಶಾಲಾ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ವಿಚಾರವಾಗಿ ನನ್ನ ಗೆಳೆಯರು ಫೇಸ್ಬುಕ್ಕಿನಲ್ಲಿ ‘ಬಕೆಟ್ ಹಿಡಿದು ಪ್ರಕರಣವನ್ನು ಹಾದಿ ತಪ್ಪಿಸಿದರು’ ಎಂದು ಪೋಸ್ಟ್ ಹಾಕಿದ್ದನ್ನು ಕಂಡು ಇದೆಲ್ಲ ನೆನಪುಗಳೂ ಕಣ್ಣೆದುರು ಬಂದವು. ಒಂದು ಕಾಲದಲ್ಲಿ ದೃಶ್ಯ ಮಾಧ್ಯಮ ಇರಲಿಲ್ಲ. ನಂತರ ಅಲ್ಲಿಗೆ ಹೋಗುವ ಹಾದಿ ಗೊತ್ತಿರಲಿಲ್ಲ. ಈಗ ಎಲ್ಲವೂ ಇದೆ, ಎಲ್ಲ ದಾರಿಗಳೂ ಗೊತ್ತಿವೆ. ಆದರೆ ಮೀಡಿಯಾಗಳು ಎಂದೂ ದಲಿತ ದಮನಿತರ ದನಿಯಾಗುವುದಿಲ್ಲ. ಹೋರಾಟಕ್ಕೆ ಮುನ್ನುಗ್ಗುವವರಿದ್ದರೂ ಹೋರಾಟವನ್ನು ನೆಲಕಚ್ಚಿಸುವ ಉಪಾಯಗಳೂ ಈ ನೆಲಕ್ಕೆ ಕರಗತವಾಗಿವೆ.
ಹಾಗೆಂದೇ ಈ ಸಾಲುಗಳನ್ನು ಬರೆದೆ:

ಈ ಕಥೆಗಳು
ಇರುವುದಾದರೂ ಏತಕ್ಕೆಂದು ಭಾವಿಸಿದಿರಿ?
ಅಪ್ಪ ಕಟ್ಟಿಗೆಯ ಹೊರೆಯೊಂದ
ಮುರಿದು ಹಾಕಿ ಎನ್ನುತ್ತಾನೆ,
ಆಗದೆಂದು ಕೈ ಚೆಲ್ಲಿ ಕೂತ ಪುತ್ರರಿಗೆ
ಹೊರೆ ಬಿಡಿಸಿ
ಒಂದೊಂದೇ ಕಟ್ಟಿಗೆಯ ಮುರಿದು
ಹೊರೆಯ ತುಂಡರಿಸಿ ಎಸೆಯುವ
ಜಾಣ್ಮೆಯ ಜಾಣ್ಮೆಯಲಿ ಕಲಿಸುತ್ತಾನೆ..!

ಈಗಷ್ಟೇ…
ಹದ್ದು ಹಾರಾಡುವ
ಊರ ಹಾದಿಯಲಿ
ರಕ್ತದ ಮಡುವಲಿ
ಬರ್ಬರವಾಗಿ
ಅತ್ಯಾಚಾರವಾಗಿ ಕೊಲೆಯಾದ
ಪುಟ್ಟ ಬಾಲೆಯೊಬ್ಬಳ ಹೆಣಬಿದ್ದು…

ಅವರು ಚತುರ ಪುತ್ರರು
ಚಾತುರ್ವರ್ಣ್ಯದ ದುರ್ಗಮ ಕವಲುಗಳ
ಒಂದೊಂದಾಗಿ ಪಕ್ಕಕ್ಕೆ ಸರಿಸುತ್ತಾ ಸರಿಸುತ್ತಾ
ಒಳಹೊಕ್ಕು
ಕೆಳಗಿಳಿಯುತ್ತಾ ಇಳಿಯುತ್ತಾ…
ತಳದ
ದಮನಿತ ಕೇರಿಯ
ಗುಡಿಸಲ ಮೂಲೆಯಲಿ
ಒಬ್ಬೊಬ್ಬರನೇ ಕರೆದು
ಒಂದೊಂದಾಗಿ
ಮಾನ, ಪ್ರಾಣ, ಧನದ ತುಣುಕುಗಳೆಸೆದು…
ಕ್ಷಣದೊಳಗೆ
ಆ ಕಟ್ಟಿಗೆ ಹೊರೆಯ ಕಥೆಯ ನೀತಿಗೆ
ಪ್ರಾಯೋಗಿಕ ರೂಪ ಕೊಡಲಾಗಿದೆ
ಮತ್ತು
ಇಲ್ಲಿಗೆ
ಕಥೆಯ
ಮುಗಿಸಲಾಗಿದೆ.

ಉದ್ದಕ್ಕೂ ಅಸ್ಪೃಶ್ಯರೆಂದು ಮುಟ್ಟದೆ ದೂರಕ್ಕಟ್ಟಿದರೂ ಮರೆಯಲ್ಲಿ ತಳ ಸಮುದಾಯದ ಹೆಣ್ಣು ದೇಹಗಳನ್ನು ಯಾರು ಬೇಕಾದರೂ ನುಗ್ಗಬಹುದಾದ ಬೇಲಿಯಿಲ್ಲದ ಹೊಲಗಳೆಂದೇ ಮೇಲ್ಜಾತಿಗಳವರು ಭಾವಿಸಿದಂತಿದೆ. ನನ್ನೂರಿನ ಕ್ರೈಸ್ತ ಜಮೀನ್ದಾರರೂ, ಊರ ಗೌಡರೂ ಮತ್ತೂ ಯಾರು ಯಾರೋ ಆದಿಕರ್ನಾಟಕ ಕೇರಿಯ ಚಿಕ್ಕ ಬಾಲೆಯರಿಂದ ಹಿಡಿದು ಮುಪ್ಪಾನು ಮುದುಕಿಯಾದ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಿದ್ದ, ಅದರಿಂದಾಗಿ ಮಕ್ಕಳು ಹುಟ್ಟುತ್ತಿದ್ದ, ಬಸಿರು ಬಾಣಂತನಗಳಲ್ಲಿ ಸಾವನ್ನಪ್ಪುತ್ತಿದ್ದ, ರೋಗಗ್ರಸ್ತವಾಗುತ್ತಿದ್ದ ದಾರುಣ ಕಥೆಗಳನ್ನು ನಾನು ಕಂಡಿದ್ದೇನೆ. ಇದನ್ನೇ ನನ್ನ ಕವಿತೆಯಲ್ಲೂ ಹಿಡಿದಿಡಲು ಯತ್ನಿಸಿದ್ದೂ ಇದೆ ನಾನು.

ಪ್ರಿಯಾ…
ಶತ ಶತಮಾನಗಳಿಂದ ಮುಚ್ಚಿರುವ
ನಿನ್ನೆದೆ ಬಾಗಿಲಲಿ
ಈ ಪ್ರೇಮೋನ್ಮತ್ತ ತಪ್ತ ಹೃದಯವನಿಟ್ಟು
ಹಾದಿಯುದ್ದಕೂ ಜೇನಿನೊಳದ್ದಿದ
ತುಟಿಯ ಮುತ್ತುಗಳ ಚೆಲ್ಲಿ
ನಿನ್ನ ಬರುವಿಕೆಯ ಭರವಸೆಯುದ್ದಗಲಕೂ
ನೋಟವ ಹರವಿ
ದಿವ್ಯಾಲಿಂಗನಕೆ ಕಾತರಿಸಿ
ಬಾಹುಗಳ ಚಾಚಿ
ಕಣ್ಣ ಬಾಗಿಲಲೇ ಕಾದುಕೂತಿದ್ದೇನೆ
ಮತ್ತು ನೀನಲ್ಲಿ…!

ಆ ಅಂಗಳದೊಳಗಲ್ಲಲ್ಲಿ
ಹಸಿದ ಕೂಸು ಕುನ್ನಿಗಳು
ದನಿಯಡಗಿ ಮುದುರಿಕೊಂಡ
ಬಾಗಿಲಿರದ ಗುಡಿಸಲೊಳಗೆ
ಕತ್ತಲಾಳದ ಮರ್ಮಸ್ಥಲದ
ದುಃಖದ ಬಿಕ್ಕುಗಳ ಮೇಲೆಲ್ಲ
ನಂಜು ನಖಗಳುಳಿಸಿದ ಗುರುತು…
ಕಳ್ಳ ಹೆಜ್ಜೆಗಳು ಮೆಟ್ಟಿಹೋದ
ಕಗ್ಗತ್ತಲಿಗೀಗ ಬೇಡದ ಇನ್ನೊಂದು
ಕಳ್ಳ ಬಸುರು!

ದಕ್ಷಿಣ ಅಮೇರಿಕಾದ ಮೆರಿಲ್ಯಾಂಡ್ ನಲ್ಲಿ ಗುಲಾಮಳಾಗಿದ್ದ ಹ್ಯಾರಿಯೇಟ್ ಬಾಯ್ಲೇ ಎಂಬುವವಳ ಮಗನಾಗಿದ್ದ ಫ್ರೆಡ್ರಿಕ್ ಡೊಗ್ಲಾಸ್ ತನ್ನ ಆತ್ಮಕಥನದಲ್ಲಿ ಇಂಥಹದ್ದೇ ದಾರುಣ ಕಥೆಯನ್ನು ಬರೆಯುತ್ತಾರೆ. ಆತ ತನ್ನ ತಾಯಿ ಗುಲಾಮಳಾಗಿದ್ದ ಬಿಳಿಯ ಒಡೆಯನೇ ತನ್ನ ತಂದೆ ಇದ್ದಿರಬಹುದೆಂದು ಊಹಿಸುತ್ತಾನೆ. ತನ್ನ ಬಾಲ್ಯದಲ್ಲಿ ತನ್ನ ತಾಯಿ ಬರಿಗಾಲಲ್ಲಿ ನಡೆದು ಹನ್ನೆರಡು ಮೈಲು ದೂರದ ಒಡೆಯನ ಹೊಲಕ್ಕೆ ತಾನು ನಿದ್ದೆಯಿಂದ ಏಳುವ ಮೊದಲೇ ಕೆಲಸಕ್ಕೆ ಹೋಗಿರುತ್ತಿದ್ದಳೆಂದೂ ತಾನು ನಿದ್ದೆಹೋದ ಎಷ್ಟೋ ಹೊತ್ತಿನ ಬಳಿಕ ಕೆಲಸದಿಂದ ಮರಳುತ್ತಿದ್ದಳೆಂದೂ ಐದು ಸಲಕ್ಕಿಂತ ಹೆಚ್ಚು ಸಲ ತಾನು ತಾಯಿಯನ್ನೇ ಕಂಡಿರಲಿಲ್ಲವೆಂದೂ ಕಂಡಿದ್ದಾದರೂ ಅತೀ ಸಣ್ಣ ಅವಧಿಯಲ್ಲಾದ ಕಾರಣ ತಾಯಿಯ ಕುರಿತು ವಿವರಿಸುವ ಶಕ್ತಿ ತನಗಿಲ್ಲವೆಂದೂ, ಹೀಗೆಯೇ ಆಕೆ ಸತ್ತುಹೋದಳೆಂದೂ ಕರುಳು ಕತ್ತರಿಸುವಂತೆ ಬರೆಯುವ ಅವರು, ತನ್ನ ತಾಯಿಯನ್ನು ಜಮೀನ್ದಾರರು ಲೈಂಗಿಕವಾಗಿ ಬರ್ಬರವಾಗಿ ನಡೆಸಿಕೊಳ್ಳುತ್ತಿದ್ದ ಬಗೆಯನ್ನೂ, ಆ ಬಡತನ, ಹಸಿವು, ರೋಗ ರುಜಿನಗಳ ಬದುಕನ್ನೂ ವಿವರಿಸುವಾಗ ನಮ್ಮ ತಳ ಸಮುದಾಯದ ಹೆಣ್ಣುಗಳ ಕಥೆ ಇದಕ್ಕಿಂತ ಭಿನ್ನವೇನಲ್ಲ ಅನಿಸಿಬಿಡುತ್ತದೆ. ಆದರೆ ನಮ್ಮಲ್ಲಿ ಇಂಥದ್ದನ್ನು ದಾಖಲಿಸಿದ್ದು ತುಂಬ ವಿರಳ. ದಲಿತ ಬರಹಗಾರರಿಗೆ ತಾವು ಕಂಡುಂಡ ಇಂಥ ದಾರುಣ ಬದುಕನ್ನು ಬರೆದುಕೊಳ್ಳಲು ಇಲ್ಲಿಯವರೆಗೂ ಸಾಧ್ಯವಾಗದಿರುವುದು ನೋವಿನ ಸಂಗತಿ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ಅನುಷ್ಠಾನದ 2016ರ ವರದಿಯ ಪ್ರಕಾರ ನಮ್ಮ ರಾಜ್ಯದಲ್ಲಿಯೇ ಪ್ರತಿ ಎರಡು ದಿನಗಳಲ್ಲಿ ಒಬ್ಬ ದಲಿತ ಮಹಿಳೆ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. 1912 ದಲಿತ ದೌರ್ಜನ್ಯ ಪ್ರಕರಣಗಳೂ, 78 ಕೊಲೆಗಳೂ, 164 ಅತ್ಯಾಚಾರಗಳೂ, ಇತರೆ 1670 ಪ್ರಕರಣಗಳೂ ನಡೆದಿರುವುದು ದಾಖಲಾಗಿದೆ. ದಾಖಲಾಗದೆ ಮುಚ್ಚಿಹಾಕಲ್ಪಟ್ಟ ಪ್ರಕರಣಗಳು ಇನ್ನೆಷ್ಟೋ.

ದಲಿತ ಹೆಣ್ಣುಗಳ ಮೇಲಿನ ದೌರ್ಜನ್ಯಗಳ ಕುರಿತು ಸೊಲ್ಲೆತ್ತಿದಾಗೆಲ್ಲ, ಇದಕ್ಕೆ ಜಾತಿಯನ್ನೇಕೆ ಅಂಟಿಸುತ್ತೀರಿ? ಹೆಣ್ಣೆಂದರೆ ಸಾಲದೆ? ಎಂದೊಂದು ದಿಕ್ಕು ತಪ್ಪಿಸುವ ಮಾತು ಕೇಳಿಬರುವುದಿದೆ. ನಾನು ಈ ಜಾತಿ ಸೂಚಿಸುವುದನ್ನು ಬಲವಾಗಿ ಸಮರ್ಥಿಸಲು ಕಾರಣಗಳಿವೆ. ಸರಳವಾಗಿ ಇದನ್ನು ವಿವರಿಸುವುದಾದರೆ ನಮ್ಮ ಮನೆಯಲ್ಲಿಯೇ ಒಂದು ಮಗು ಬೇರೆಲ್ಲ ಮಕ್ಕಳಿಗಿಂತ ಭಿನ್ನವಾಗಿದ್ದು ಅದರ ವಿಕಸನ ಕುಂಠಿತವಾಗಿದ್ದರೆ, ತರಗತಿಯಲ್ಲಿ ಒಂದಷ್ಟು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರೆ, ಒಂದು ಊರಿಡೀ ಅಭಿವೃದ್ಧಿ ಕಂಡಿದ್ದು ಕೆಲ ಪ್ರದೇಶಗಳು ಹಿಂದುಳಿದಿದ್ದರೆ ಅವುಗಳನ್ನು ಗುರುತಿಸಿ ವಿಶೇಷ ಆದ್ಯತೆ ಕೊಡುವುದು ಹೇಗೆ ಅನಿವಾರ್ಯವೋ ಅಂಥಹದ್ದೇ ತುರ್ತು ಜರೂರತ್ತುಗಳು ಇಲ್ಲಿಯೂ ಇವೆ.

ದಲಿತರ ಬಡತನ, ಅತ್ಯಂತ ನಿಕೃಷ್ಟ ಸ್ಥಾನಮಾನ, ದಲಿತ ಹೆಣ್ಣುಗಳೆಂದೊಡನೆ ಬೇಲಿಯಿಲ್ಲದ ಹೊಲವೆಂಬಂತೆ ದಾಳಿಯಿಡುವುದು, ಹೋರಾಡಲು ಅವರಲ್ಲಿ ಹಣಬಲವಿಲ್ಲದಿರುವುದು, ತಮ್ಮ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ವಿರೋಧಿಸಲು ಅರಿವಿನ ಕೊರತೆಯಿರುವುದು, ತಳ ಸಮುದಾಯಗಳ ದೌರ್ಬಲ್ಯಗಳನ್ನೇ ದೌರ್ಜನ್ಯಕ್ಕೆ ಬಳಸಿಕೊಳ್ಳುವುದು, ಅನೇಕ ಮೌಢ್ಯ ಅಥವ ನಂಬಿಕೆಗಳ ಹೇರಿಕೆಗಳ ಮೂಲಕ ಅವರನ್ನು ಇಂಥದ್ದಕ್ಕೆ ಒಡ್ಡುವುದು ಇಂಥ ಅನೇಕ ಕಾರಣಗಳಿಂದಾಗಿ ಆ ಹೆಣ್ಣುಗಳು ಈ ದೌರ್ಜನ್ಯಗಳಿಗೆ ಅನ್ಯಾಯಗಳಿಗೆ ತುತ್ತಾಗುತ್ತಿದ್ದಾರಾದರೆ ಈ ಅಸಮಾನ ಸಾಮಾಜಿಕ, ಆರ್ಥಿಕ, ಧಾರ್ಮಿಕ ಪರಿಸರದಲ್ಲಿ ದಲಿತ, ತಳ ಸಮುದಾಯಗಳ ಜಾತಿಗಳ ಹೆಸರಿಂದಲೇ ಗುರುತಿಸಿ ನ್ಯಾಯ ಒದಗಿಸುವುದೂ ಅಷ್ಟೇ ಮುಖ್ಯವಾಗುತ್ತದೆ. ದಲಿತ ಸಮುದಾಯದವರೆಂಬ ಕಾರಣದಿಂದಲೇ ಪ್ರಕರಣಗಳನ್ನು ಮುಚ್ಚಿಹಾಕುವಾಗ ದಲಿತ ಸಮುದಾಯದವರೆಂಬ ಹೆಸರಿನಲ್ಲೇ ನ್ಯಾಯ ಕೇಳುವುದೂ ಹೋರಾಡುವುದೂ ಅಷ್ಟೇ ಅನಿವಾರ್ಯವೂ ಆಗುತ್ತದೆ. ಮೇಲ್ಜಾತಿಯ ಹೆಣ್ಣುಗಳ ಮೇಲೆ ಇಂಥ ಪ್ರಕರಣಗಳಾದಾಗ ಏಳುವ ಹೋರಾಟದ ಕೂಗಿಗೂ ದಲಿತರೆಂಬ ಕಾರಣಕ್ಕೆ ಸದ್ದಡಗಿ ಉಡುಗಿ ಹೋಗುವ ದನಿಯ ಕ್ಷೀಣತೆಗೂ ಇರುವ ವ್ಯತ್ಯಾಸವನ್ನು ಇಲ್ಲಿ ತುಲನೆ ಮಾಡಿ ನೋಡುವುದು ಅನಿವಾರ್ಯವಾಗುತ್ತದೆ.

ನಿರಂತರವಾಗಿ ನಡೆದುಬಂದದ್ದಕ್ಕೆ ಎಂದೂ ಕ್ಷಮೆಯಿಲ್ಲ. ಈಗ ದಾನಮ್ಮಳ ಸಾಮೂಹಿಕ ಅತ್ಯಾಚಾರವಾಗಿ ಸಾವಾಗಿದೆ. ಈ ಹೋರಾಟವು ಬಲ ಪಡೆಯಬೇಕು, ವ್ಯಾಪಕತೆ ಪಡೆಯಬೇಕು ಈ ಹೋರಾಟಕ್ಕೆ ಮಾಧ್ಯಮಗಳೂ, ಪಕ್ಷಭೇದ ಮರೆತು ಎಲ್ಲ ರಾಜಕೀಯ ಪಕ್ಷಗಳೂ, ಸಂಘಟನೆಗಳೂ, ಜನಸಾಮಾನ್ಯರೂ ಒಗ್ಗೂಡಬೇಕು. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಿ ಕಾನೂನು ಸುವ್ಯವಸ್ಥೆಗಳ ಮೇಲೆ ನಂಬಿಕೆ ಹುಟ್ಟುವಂತಾಗಬೇಕು. ದಾನಮ್ಮಳ ಸಾವೇ ಕೊನೆಯ ಸಾವಾಗಲಿ. ಮುಂದೆಂದೂ ಇಂತಹ ಘೋರ ಘಟಿಸದಿರಲಿ. ಅದಕ್ಕೆ ದಾನಮ್ಮಳ ಸಾವಿನ ಹೋರಾಟವೇ ಕಾರಣವಾಗಲಿ ಎಂದು ಆಶಿಸುತ್ತೇನೆ.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 4 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...