Share

ಉರಿಯದ ಒಲೆಯ ಮುಂದೆ ಕೊತಕೊತನೆ ಕುದಿಯುತ್ತಾ…
ಕಾದಂಬಿನಿ ಕಾಲಂ

 

 

 

 

 

 

 

 

 

 

ಇಂದು ಅನ್ನ ಬೆಳೆಯುವ ರೈತನೇ ಅನ್ನಕ್ಕೆ ಪರದಾಡುವ ಗತಿಗೆ ಬಂದು ಕುಣಿಕೆಗೆ ಕೊರಳೊಡ್ಡಿ ನಿಂತಿದ್ದಾನೆ. ಮಹದಾಯಿ ಯೋಜನೆಯಂತಹ ಅನ್ನ ಬೆಳೆಯುವವನ ಹೋರಾಟಗಳು ರಾಜಕೀಯದ ಕೆಟ್ಟ ಆಟದ ವಸ್ತುವಾಗುತ್ತಿವೆ.

 

ನಾನು ಫೇಸ್ಬುಕ್ಕಿಗೆ ಬಂದ ಆರಂಭದಲ್ಲಿ ನನ್ನ ಸ್ನೇಹಿತರು ತರಾವರಿ ಊಟದ ಚಿತ್ರಗಳನ್ನು ಹಾಕುವುದನ್ನು ನೋಡಿದಾಗ ಇದನ್ನೆಲ್ಲಾದರೂ ಊಟಕ್ಕಿಲ್ಲದವರು ನೋಡಿ ನೊಂದರೇನು ಗತಿ? ಎಂದು ಆತಂಕವಾಗುತ್ತಿತ್ತು. ಕೆಲ ದಿನಗಳಲ್ಲೇ ಇದೊಂದು ಇನ್ನೊಬ್ಬರ ಉಣ್ಣುವ ತಟ್ಟೆಯಲ್ಲಿ ಇಣುಕಿ ನೋಡಿ ಹೀಯಾಳಿಸುವ, ಇನ್ನೊಬ್ಬರ ಆಹಾರವನ್ನು ಅಸಹ್ಯಪಡುವ, ಇನ್ನೊಬ್ಬರ ಆಹಾರ ಕ್ರಮ ಹೀಗೆಯೇ ಇರತಕ್ಕದ್ದೆಂದು ನಿರ್ದೇಶಿಸುವವರ ವಿರುದ್ಧದ ಪ್ರತಿಭಟನಾ ವಿಧಾನ ಎಂದು ತಿಳಿಯುತ್ತಲೇ ಸಮಾಧಾನಗೊಂಡೆ.

ಇಲ್ಲಿ ಯಾವುದನ್ನು ತಿನ್ನಬೇಕು ಯಾವುದನ್ನು ತಿನ್ನಕೂಡದು ಎಂಬ ಗಲಾಟೆ, ಜೋರು ಜಬರದಸ್ತಿಗಳು ನಡೆಯುತ್ತಿರುವ ಬೆನ್ನಲ್ಲಿ ಎಷ್ಟೋ ಕಡು ಬಡವರು ತಿನ್ನಲು ಇಲ್ಲದೆ ನರಳುವ, ಉಂಡು ತೇಕುವವರಿಂದ ಅನಾಯಾಸ ದೊರಕುವ ಅಪಮಾನದ ಹೊರೆಯ ಹೊರುವ, ಏನೇನನ್ನೋ ತಿನ್ನಬೇಕಾಗಿರುವ ದುರ್ದೆಸೆಯ ಹಾಗೂ ತಿನ್ನಲು ಇಲ್ಲವಾದ್ದರಿಂದ ಆಥವ ಏನೇನನ್ನೋ ತಿನ್ನುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕುರಿತೆಲ್ಲ ಯೋಚಿಸಿದಷ್ಟೂ ವಿಪರೀತ ನೋವುಂಟಾಗುತ್ತದೆ. ಅದಕ್ಕಾಗಿಯೇ ಹಸಿವಿನ ಬಗ್ಗೆ ಬರೆಯುವಾಗ ನನ್ನ ಕೈಗಳು ನಡುಗುತ್ತವೆ. ಹಸಿವಿನಿಂದ ಗಾಯವಾದ ಆ ನನ್ನ ಎದೆಯಾಳದ ಜಾಗವನ್ನು ಮುಟ್ಟಲು ಭಯಪಡುತ್ತೇನೆ.

ಆಗ ಒಲೆಯುರಿಸದ ಬೆಂಕಿ
ಈಗಲೂ ಎದೆ ಸುಡುತ್ತದೆ
* * *
ಲೋಹಿತಾಶ್ವನ ಮರಣವಾದುದು
ಹಸಿವೆಂಬ ಕಾಳೋರಗದಿಂದ!
ಮೊದಲೇ ಸತ್ತವನನು
ಕಚ್ಚಿ ಕೊಂದ ಆರೋಪ ಹೊತ್ತಿತು
ಪಾಪ! ಹುಲ್ಲ ಮರೆಯ ಹಾವು!
* * *
ಚಳಿಗಾಲ ಬಂತೆಂದರೆ
ಗಡಗಡನೆ ನಡುಗುತ್ತೇನೆ
ರಗ್ಗಿನೊಳಗೆ ಹುದುಗಿಯೂ…
ಆ ಕಠೋರ ಹಸಿವಿನ
ನೆನಪೇ ಅಂತಹದ್ದು!
* * *
ತಾಯಿಯ ಕುರಿತು
ಹೇಳು ಎಂದರು
ಉರಿಯದ ಒಲೆಯ ಮುಂದೆ
ಕೊತಕೊತನೆ ಕುದಿದವಳು ಎಂದೆ
* * *
ಹಸಿದವನ ಮೂಗು
ಪರಿಮಳಕ್ಕೆ ಅರಳುತ್ತಿರಲಿಲ್ಲ
ಉಳ್ಳವರ ಒಲೆಗಳ ಮೇಲೆ
ತರತರದ ಅಡುಗೆ ಬೇಯುತ್ತಿರುವಾಗಲೂ
ಹಸಿದವನ ಮೂಗಿಗೆ ವಾಸನೆ
ಅಡರುತ್ತಲೂ ಇರಲಿಲ್ಲ
ಅವನುಣ್ಣುವ ಅನ್ನ ಹಳಸಿರುವಾಗಲೂ
* * *
‘ಹಸಿವ ಹೊಡೆದೋಡಿಸಲಾಗಿದೆ’
ಹೀಗವನು ಬೊಬ್ಬಿರಿಯುತ್ತಲಿದ್ದ
ಹಸಿವಾದರೋ ಕಾಸಿಲ್ಲದೆ
ಹೊಡೆದಟ್ಟಲ್ಪಟ್ಟವನ ಹೊಟ್ಟೆಯಲಿ
ಸುತ್ತಿ ಕೂತಿತ್ತು

ಹೀಗೆ ಕವಿತೆ ಬರೆದುದು ನಾನೇ ಆದರೂ ಎದೆಯಲ್ಲಿ ಮಡುಗಟ್ಟಿರುವ ಹಸಿವಿನ ಸಂಕಟವನ್ನು ಹಿಡಿದಿಡುವುದರಲ್ಲಿ ನಾನು ಸೋತಿದ್ದೇನೆ ಎಂದೇ ನನಗನಿಸುತ್ತದೆ. ಯಾಕೆಂದರೆ ಹಸಿವೆಂಬುದು ಪದಗಳಲ್ಲಿ ಹಿಡಿಯಲು ನಿಲುಕದಷ್ಟೂ ಕಡು ಘೋರವಾದುದು.

ಒಮ್ಮೆ ತಮಿಳುನಾಡಿನ ಪುಟ್ಟ ಹೋಟೆಲೊಂದರ ಎದುರು ಹೋಟೆಲಿನವರು ಗಿರಾಕಿಗಳು ಚೂರೂ ಉಳಿಸದಂತೆ ತಿಂದು ತೊಟ್ಟಿಗೆಸೆದ ಎಲೆಗಳನ್ನು ಜನರು ಮುಗಿಬಿದ್ದು ಬಳಿದು ತಿನ್ನುವ ಅತ್ಯಂತ ಕರಾಳ ದೃಶ್ಯವನ್ನು ನೋಡಿದ್ದೆ. ತಿನ್ನಲು ಕೂಳಿಗೆ ಗತಿಯಿಲ್ಲದೆ ಇದ್ದಿಲು, ಮಣ್ಣು ತಿಂದವರ ಬಗ್ಗೆಯೂ ಕೇಳಿದ್ದೇನೆ.

ಶರಾವತಿ ಯೋಜನೆಯಿಂದ ಹಿನ್ನೀರಿನ ನಡುಗಡ್ಡೆಗಳಲ್ಲಿ ಬಂಧಿಗಳಾದ ಹಸಲರ ಬದುಕೂ ಹರಿವು ನಿಲ್ಲಿಸಿ ನಿಂತಲ್ಲೇ ನಿಂತು ಹೆಪ್ಪುಗಟ್ಟಿ ಊಟವಿಲ್ಲದೆ ಬೈನೆ ಮರದ ಕಾಂಡವನ್ನು ನೀರಿನಲ್ಲಿ ಕೊಳೆಸಿ ಮತ್ತದನ್ನು ಕುಟ್ಟಿ ಒಣಗಿಸಿ ಅದರ ಗಂಜಿಮಾಡಿ ಕುಡಿದು ಶತಮಾನದಿಂದ ಜೀವ ಹಿಡಿದುಕೊಂಡದ್ದನ್ನು ಅವರ ಬಾಯಿಯಿಂದಲೇ ಕೇಳಿ ಮರವಟ್ಟಿದ್ದೇನೆ.

ಹಸಿವು ತಾಳಲಾಗದೆ ಕಂಡವರ ಹೊಲದ ಜೋಳವನ್ನು ಮುರಿದು ತಿನ್ನಲು ಹೋಗಿ ಸಿಕ್ಕುಬಿದ್ದು ಬೆನ್ನ ಚಮಡಿ ಎಬ್ಬುವಂತೆ ಬಡಿಸಿಕೊಂಡೂ ಬದುಕಿದವರ, ಸತ್ತವರ ಹೀನಾಯ ಕಥೆಗಳನ್ನು ಕೇಳಿದ್ದೇನೆ.

ಐದಾರಂಕಿಯ ದುಬಾರಿ ಬೆಲೆಯ ಅಣಬೆಗಳನ್ನು ವಿದೇಶದಿಂದ ತರಿಸಿ ತಿನ್ನುವ ಪ್ರಧಾನಿಯ ದೇಶದಲ್ಲಿ ಹಸಿವು ತಾಳದೆ ಯಾವುದೋ ವಿಷಕಾರಿ ಅಣಬೆ ತಿಂದು ಸತ್ತವರ ದೀನ ಕಥೆಗಳನ್ನು ಕಂಡಿದ್ದೇನೆ

ಹೆಣದ ಮೇಲೆ ಎಸೆಯುವ ಮಂಡಕ್ಕಿಯನ್ನು ರಸ್ತೆಯ ಮೇಲಿಂದ ಆರಿಸಿ ತಿಂದವರನ್ನೂ, ಆ ಚಿಲ್ಲರೆ ಎತ್ತಿಕೊಂಡವರನ್ನೂ ನೋಡಿ ತಳಮಳಿಸಿದ್ದೇನೆ.

ಮತ್ತು ಈ ಇಂಥ ಎಲ್ಲ ಸಂಕಟದ ಕಥೆಗಳೂ ಬಹಳ ಚೆನ್ನಾಗಿ ನನಗಲ್ಲದೆ ಇನ್ನಾರಿಗೆ ಅರ್ಥವಾದಾವು?

‘ಈಗ ಹೊಟ್ಟೆ ತುಂಬಿದೆ
ಆದರೆ ಹಸಿವಿನ ನೋವು ಹಾಗೆಯೇ ಇದೆ’
ಎಂಬ ಕವಿ ಎಂ.ಡಿ. ವಕ್ಕುಂದರ ಕವಿತೆಯ ಈ ಸಾಲಿನಂತೆ ನನ್ನ ಸುಕೋಮಲ ಬಾಲ್ಯದ ಮೇಲೆ ಈ ಹಸಿವೆಂಬ ರಣಹದ್ದು ಊರಿ ಹೋಗಿದ್ದ ನಂಜು ನಖಗಳ ಗಾಯಗಳೆಂದೂ ಮಾಸುವುದು ಸಾಧ್ಯವಿಲ್ಲ. ನಾನು ಹುಟ್ಟಿದ್ದು ದೊಡ್ಡ ಜಮೀನ್ದಾರರ ದೊಡ್ಡ ಮನೆತನದಲ್ಲಿ. ಮನೆಗೆ ಅಪ್ಪನೇ ಹಿರಿಯ ಮಗ. ಹಾಗಾಗಿ ಆ ಅವಿಭಕ್ತ ಕುಟುಂಬದ ಯಜಮಾನ ಕೂಡ. ಆದರೆ ತಮ್ಮನ ಜೊತೆ ಆಸ್ತಿಯ ಕಾರಣಕ್ಕೆ ಜಗಳವಾಡುವುದೇನು ಎಂದು ಎಲ್ಲವನ್ನೂ ತಮ್ಮನಿಗೇ ಬಿಟ್ಟು ಮಕ್ಕಳನ್ನು ಹೊತ್ತು ಗೊತ್ತು ಗುರಿಯಿಲ್ಲದೆ ನಡೆದುಬಿಟ್ಟಿದ್ದರು ನನ್ನಪ್ಪ. ಹೋಗಬೇಡವೆಂದು ತಡೆದು ನಿಲ್ಲಿಸುವ ಪ್ರೇಮ ಚಿಕ್ಕಪ್ಪನೆದೆಯಲ್ಲಿ ಸತ್ತು ಯಾವುದೋ ಒಂದೂರಲ್ಲಿ ನೆಲೆಕಂಡಿದ್ದೆವು.

ಜಮೀನ್ದಾರನಾಗಿ ಯಜಮಾನಿಕೆ ಮಾಡುವ ವ್ಯಕ್ತಿಯೊಬ್ಬ ಕೂಲಿ ಮಾಡುತ್ತೇನೆಂದರೂ ಒಂದು ಕೆಲಸ ಗಿಟ್ಟದ ಊರದು. ನಾವು ಸಣ್ಣ ಸಣ್ಣ ಕೂಸುಗಳು. ಹಾಗಂತ ಹೊಟ್ಟೆ ಹಸಿವು ಸಣ್ಣದೇ? ಅದು ನಮ್ಮನ್ನು ಕ್ರೂರವಾಗಿ ಅಟ್ಟಾಡಿಸಿ ಕರುಳ ಬಗೆಯುತ್ತಿತ್ತು. ಅಪ್ಪನ ಹತ್ತಿರ ಹಣ ಇರಲಿಲ್ಲ. ಆದರೆ ಊರು ಬಿಟ್ಟು ಹೋಗುವಾಗ ಅವರ ಚೀಲದಲ್ಲಿ ಒಂದು ಪಾಲಿಡಾಲ್ ಬಾಟಲಿ ಇತ್ತು. ಕೆಟ್ಟ ವಾಸನೆ ಹೊಡೆಯುವ ಅದನ್ನು ಅಪ್ಪ ಅಟ್ಟದ ಮೂಲೆಯಲ್ಲಿ ಅಡಗಿಸಿಟ್ಟಿದ್ದರು. ಅದೇನೆಂದು ನಾನು ಕೇಳಿದಾಗ ಅದು ಗದ್ದೆಗೆ ಹೊಡೆಯುವ ಔಷಧಿಯೆಂದೂ ಅದನ್ನು ನಾವು ಮುಟ್ಟಕೂಡದೆಂದೂ ವಿಷವೆಂದೂ ಹೊಟ್ಟೆ ಸೇರಿದರೆ ಸತ್ತುಹೋಗುತ್ತೇವೆಂದೂ ಹೇಳಿದ್ದರು. ನಾನು ನಮಗೀಗ ಗದ್ದೆಯೇ ಇಲ್ಲ ಮತ್ತೆ ಯಾಕೆ ಈ ಔಷಧಿ ಎಂದು ಕೇಳಿದರೆ ಅಪ್ಪ ಇರಲಿ ಬೇಕಾಗುತ್ತದೆ ಅನ್ನುತ್ತಿದ್ದರು. ಒಂದು ದಿನ ಯಾರೊಂದಿಗೋ ಮಾತಾಡುವಾಗ ಅಪ್ಪ, ‘ನೋಡುವಷ್ಟು ದಿನ ನೋಡುವುದು. ಬದುಕು ದೂಡಲು ಸಾಧ್ಯವೇ ಇಲ್ಲ ಅನಿಸುವಾಗ ವಿಷ ಕುಡಿಯುವುದು’ ಎಂದ ಮಾತು ನನ್ನ ಕಿವಿ ಇರಿದಿತ್ತು.

ಆ ದಿನದಿಂದ ಅಪ್ಪ ಸ್ವಲ್ಪ ಬೇಸರದಲ್ಲಿ ಇದ್ದರೂ ಮನೆಯಲ್ಲಿ ಬಹಳ ಹೊತ್ತು ಇಲ್ಲದಿದ್ದರೂ ನಾನು ಅಟ್ಟ ಹತ್ತಿ ಆ ಪಾಲಿಡಾಲ್ ಬಾಟಲಿ ಇದೆಯಾ ಎಂದು ಖಾತರಿಪಡಿಸಿಕೊಳ್ಳುತ್ತಿದ್ದೆ, ಅಪ್ಪನ ಪಕ್ಕದಲ್ಲಿ ಕೂತು ಅವರ ಬಾಯಿ ವಾಸನೆ ಬರುತ್ತಾ ಎಂದು ನೋಡುತ್ತಿದ್ದೆ. ಹೊಟ್ಟೆಗೆ ತಿನ್ನಲು ಏನೇನೂ ಇಲ್ಲದಾದಾಗ ಕೆಸುವಿನೆಲೆಗಳನ್ನು ಬೇಯಿಸಿ ನಾವು ಹೊಟ್ಟೆ ತುಂಬಿದ್ದಿತ್ತು. ಎಷ್ಟೋ ಸಲ ಅಪ್ಪ ಬೆಳಿಗ್ಗೆ ಮನೆ ಬಿಟ್ಟರೆ ರಾತ್ರಿ ಎಷ್ಟು ಹೊತ್ತಾದರೂ ಮನೆ ಸೇರುತ್ತಲೇ ಇರಲಿಲ್ಲ. ಹಸಿದು ದಣಿದು ಅಲ್ಲಲ್ಲಿಯೇ ನಿದ್ದೆಹೋಗಿರುತ್ತಿದ್ದ ನಮ್ಮನ್ನು ಯಾವುದೋ ಜಾವದಲ್ಲಿ ಎಬ್ಬಿಸಿ ಕಾಡಿನಲ್ಲಿ ಅಲೆದಲೆದು ಹುಡುಕಿ ಅಗೆದು ತಂದಿದ್ದ ಕಾಡಿನ ಒಂದು ಜಾತಿಯ ಗೆಣಸನ್ನು ಉಪ್ಪು, ಹುಳಿ ಸೇರಿಸಿ ಬೇಯಿಸಿ ತಿನ್ನಿಸುತ್ತಿದ್ದರು.

ಅಷ್ಟಾಗಿಯೂ ಆ ಪುಟ್ಟ ವಯಸ್ಸಿನಲ್ಲಿಯೂ ಸತ್ಯಸಂಧನಾದ ನನ್ನ ಅಪ್ಪ ಎಲ್ಲ ಆಸ್ತಿ ತ್ಯಜಿಸಿ ಬಂದಿದ್ದರ ಬಗ್ಗೆ ನನಗೆ ಹೆಮ್ಮೆಯಿತ್ತು. ನನ್ನ ಅಪ್ಪ ಸುಳ್ಳು ಹೇಳಿದ್ದನ್ನು ನನ್ನ ಜೀವಮಾನದಲ್ಲಿಯೇ ನಾನು ನೋಡಿಲ್ಲ. ನಾವು ಆ ದಿನಗಳಲ್ಲಿ ಬರೀ ಬಸಳೆ ಸೊಪ್ಪು, ಪೊಪ್ಪಾಯ ಹಣ್ಣನ್ನು ತಿಂದು ಹೊಟ್ಟೆ ಹಸಿವನ್ನು ಇಷ್ಟಿಷ್ಟೇ ತಣಿಸಲೆತ್ನಿಸುತ್ತಿದ್ದುದು ಇತ್ತು. ಅಷ್ಟು ಹಸಿವಿನಿಂದ ನಲುಗುತ್ತಿದ್ದಾಗಲೂ ನಾವು ಎಂದೂ ಯಾರಲ್ಲೂ ಹಸಿದಿದ್ದೇವೆಂದು ಹೇಳಿಕೊಂಡಿದ್ದಿರಲಿಲ್ಲ. ಹಸಿವನ್ನು ನಾವು ಒಪ್ಪಿಕೊಂಡಿದ್ದೆವು. ಆದರೆ ಈ ಹಸಿವಿನ ಯಾತನೆಗಿಂತ ನಮ್ಮ ಸುತ್ತಲ ಹೊಟ್ಟೆ ತುಂಬಿದ ಜಗತ್ತು ನಮ್ಮೊಂದಿಗೆ ನಡೆದುಕೊಂಡ ರೀತಿಯು ಪ್ರತಿ ಸಲ ನಮ್ಮನ್ನು ಅಪಮಾನಪಡಿಸುತ್ತಿತ್ತು, ಗಾಯಗೊಳಿಸುತ್ತಿತ್ತು. ಇಲ್ಲದವರಾದ ನಮ್ಮಿಂದಲೇ ಇನ್ನೇನೋ ಕಿತ್ತುಕೊಳ್ಳುವ ಹುನ್ನಾರವನ್ನು ನಡೆಸುತ್ತಿತ್ತು. ಈ ಹೊಟ್ಟೆ ತುಂಬಿದ ಜನರ ವಿಕಟ ಅಟ್ಟಹಾಸ ದಿನೇ ದಿನೇ ನಮ್ಮನ್ನು ಕೀಳರಿಮೆಗೆ ದೂಡುತ್ತಿತ್ತು. ಕ್ಷಣ ಕ್ಷಣವೂ ಬರ್ಬರವಾಗಿ ಹಿಂಸಿಸುತ್ತಿತ್ತು.

ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಕೊಡುವುದರ ಕುರಿತು ಇದೇ ಹೊಟ್ಟೆ ತುಂಬಿದ ಜಗತ್ತಿಗೆ ವಿಪರೀತ ಅಸಹನೆಯಿದೆ. ಸರಕಾರಿ ಶಾಲೆಗಳ ಬಿಸಿಯೂಟ ಕೆಟ್ಟದ್ದೆಂದೂ, ತಿಂದರೆ ಆಸ್ಪತ್ರೆ ಸೇರಬೇಕಾಗುತ್ತದೆಂದೂ ಇಂಥವೇ ನಾನಾ ತರಹದ ಕುಟಿಲ ಹುನ್ನಾರಗಳನ್ನು ನಡೆಸುವುದಿದೆ. ಹಸಿವೆಂಬ ಉರಗನ ನಂಜುಂಡವನಾರೂ ಎಂದೂ ಮಕ್ಕಳ ಹಸಿವನ್ನು ನೋಡಬಯಸುವ ಹೀನ ಕೆಲಸ ಮಾಡಲಾರ.

ನಾನು ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವಾಗ ಶಾಲೆಯಲ್ಲಿ ಉಪ್ಪು ಹಾಕಿ ಬೇಯಿಸಿದ ಗೋಧಿಯ ನುಚ್ಚಿನ ಉಪ್ಪಿಟ್ಟು ಕೊಡುತ್ತಿದ್ದರು. ಕಡು ಬಡತನದಿಂದ ಬರುವ ಮಕ್ಕಳು ಮನೆಯಲ್ಲಿ ಹಸಿದಿರುವವರ ನೆನಪಲ್ಲಿ ಶಾಲೆಯಲ್ಲಿ ಕೊಟ್ಟಿದ್ದನ್ನು ತಿನ್ನದೆ ಪೊಟ್ಟಣ ಕಟ್ಟಿ ಇಟ್ಟುಕೊಂಡು ಮನೆಗೆ ಒಯ್ದು ಮನೆ ಮಂದಿಯ ಜೊತೆ ಹಂಚಿ ತಿನ್ನುತ್ತಿದ್ದುದು ನೆನಪಿಗೆ ಬರುತ್ತದೆ. ಈಗ ಶಾಲೆಯ ಆ ಕಾಲದ ಬಲ್ಗರ್ ನ ನೆನಪಾಗಿ ಅದರ ಪರಿಮಳ ಮೂಗಿಗಡರಿದಂತಾಗುವಾಗ ತಟ್ಟೆಯಲ್ಲಿ ಬಿರಿಯಾನಿಯೇ ಇದ್ದರೂ ಸಪ್ಪೆಯೆನಿಸುತ್ತದೆ.

ನಾನು ಯಾವಾಗಲೂ ಅನಾಥ ಬೆಕ್ಕು ನಾಯಿಗಳನ್ನು ಸಾಕುತ್ತಿರುತ್ತೇನೆ. ನಮ್ಮ ಮನೆಯೆದುರು ಒಂದು ಮುದುಕಿ ಅಡ್ಡಾಡುತ್ತಿದ್ದಾಳೆಂದರೆ ಆ ದಿನ ನನ್ನ ಬೆಕ್ಕೊಂದು ನಾಪತ್ತೆಯಾಯಿತು ಎಂದೇ ಲೆಕ್ಕ. ಮೊದ ಮೊದಲಿಗೆ ನನಗೆ ಬೆಕ್ಕು ಹೇಗೆ ನಾಪತ್ತೆಯಾಯಿತು ತಿಳಿಯುತ್ತಲೇ ಇರಲಿಲ್ಲ. ನಮ್ಮ ಇಡೀ ಬಡಾವಣೆಯಲ್ಲಿ ವಾರಗಳ ತನಕ ನಾಪತ್ತೆಯಾದ ಬೆಕ್ಕಿನ ಹುಡುಕಾಟವನ್ನು ನಡೆಸುತ್ತಿದ್ದೆ. ಕೊನೆಯಲ್ಲಿ ಈಕೆ ಕೊರಗರ ಮುದುಕಿಯೆಂದು ಗೊತ್ತಾಯಿತು. ಬೆಕ್ಕಿಗೆ ಮೀನನ್ನು ಹಾಕುವಂತೆ ಮಾಡಿ ಬೆಕ್ಕಿನ ತಲೆಗೆ ರಾಡಿನಿಂದ ಬಲವಾದ ಪೆಟ್ಟುಕೊಟ್ಟು ಅಡ್ಡಬಿದ್ದ ಅದನ್ನು ಚೀಲಕ್ಕೆ ತುಂಬಿಸಿಕೊಂಡು ಹೋಗುವ ಸಂಗತಿ ತಿಳಿಯಿತು. ಆಮೇಲೆ ಈಕೆ ನಮ್ಮ ರಸ್ತೆಗೆ ಬಂದಳೆಂದರೆ ನಾನು ಇವಳ ಚಲನವಲನ ಗಮನಿಸುತ್ತ ನನ್ನ ಬೆಕ್ಕುಗಳನ್ನು ಹಿಡಿಯದಂತೆ ಕಾಯುತ್ತಿದ್ದೆ. ಒಂದು ದಿನ ರಸ್ತೆಯಲ್ಲಿ ನಡೆದು ಹೋಗುವಾಗ ಇದೇ ಮುದುಕಿ ಅಪಘಾತವಾಗಿ ನಜ್ಜುಗುಜ್ಜಾಗಿ ರಸ್ತೆಯಲ್ಲಿ ಸತ್ತಿದ್ದ ಒಂದು ಬೆಕ್ಕನ್ನು ಚೀಲಕ್ಕೆ ತುಂಬಿಸುವುದು ನೋಡಿ ಕೇಳಿದೆ. ಆಗ ಮುದುಕಿ ಹೊಟ್ಟೆಗೆ ತಿನ್ನಲು ಏನೂ ಇಲ್ಲವೆಂದೂ, ದುಡಿಯಲು ಕೈಕಾಲು ಗಟ್ಟಿ ಇಲ್ಲವೆಂದೂ ಬೆಕ್ಕಿನ ಮಾಂಸ ಎರಡು ಹೊತ್ತಿನ ಹೊಟ್ಟೆ ತುಂಬಿಸುವುದಕ್ಕಾಯಿತೆಂದೂ ಹೇಳಿದಾಗ ದಂಗಾಗಿ ಹೋದೆ.

ಬಾಲ್ಯದಲ್ಲಿ ನನ್ನ ಮನೆಯ ಹತ್ತಿರದ ಯಾರ ಮನೆಯ ಎಮ್ಮೆ, ದನಗಳಾದರೂ ಸತ್ತುಹೋದರೆ ಆದಿ ಕರ್ನಾಟಕ ಕೇರಿಯ ಗಂಡಸರು ಒಂದು ಗಳುವಿಗೆ ಆ ಸತ್ತ ದನದ ಕಾಲುಗಳನ್ನು ಕಟ್ಟಿ ಅಂಗಾತ ಜೋತುಬಿದ್ದ ದನವನ್ನು ಹೊತ್ತು ನನ್ನ ಮನೆಯ ಪಕ್ಕದ ರಸ್ತೆಯಲ್ಲಿ ಹೊತ್ತೊಯ್ದು ನನ್ನ ಮನೆಯ ಹಿಂದೆಯೇ ಇದ್ದ ಮುಸಲ್ಮಾನರ ಕಬರಸ್ಥಾನದ ಬಯಲಲ್ಲಿ ಇಳಿಸಿ ಆ ದನದ ಚರ್ಮ ಸುಲಿಯುತ್ತಿದ್ದರು. ಹಿತ್ತಲಲ್ಲಿ ನಿಂತರೆ ನಮಗಿದೆಲ್ಲವೂ ಕಾಣುತ್ತಿತ್ತು. ದನದ ಮಾಂಸ, ಚರ್ಮ ತೆಗೆದುಕೊಂಡು ಅವರು ಹೋದರೆಂದರೆ ಯಾವ ಮಾಯದ ಮೂಲಕ ರಣ ಹದ್ದುಗಳಿಗೆ ಸುದ್ದಿ ತಲುಪುತ್ತಿತ್ತೋ ಕಾಣೆ, ಹಿಂಡು ಹಿಂಡು ರಣ ಹದ್ದುಗಳು ಆಕಾಶದಿಂದ ಸುತ್ತ ಸುತ್ತ ತಿರುಗುತ್ತ ಸತ್ತ ದನದ ಆವಶೇಷದ ಮೇಲಿಳಿಯುತ್ತಿದ್ದವು. ಅಷ್ಟರಲ್ಲಿ ನರಿಗಳೂ, ಊರ ನಾಯಿಗಳೂ ಆ ಅವಶೇಷದಲ್ಲಿನ ತಮ್ಮ ಪಾಲಿಗಾಗಿ ಮುಗಿಬೀಳುತ್ತಿದ್ದವು. ಹಸಿವು ಅನ್ನುವುದು ಎಲ್ಲ ಜೀವಿಗಳನ್ನೂ ಒಂದೇ ತೆರನೆ ಹಿಂಡುತ್ತದೆ ಎನ್ನುವುದು ನನಗಾಗಲೇ ಅರ್ಥವಾಗುತ್ತಿತ್ತು. ಈ ದಿನಗಳಲ್ಲಿ ದನದ ಮಾಂಸ ತಿನ್ನುವವರ ಕುರಿತು ದಾಳಿಗಳಾಗುವುದನ್ನು, ಕೀಳಾಗಿ ಮಾತಾಡುವುದನ್ನು ನೋಡಿ ಹೀಗೊಮ್ಮೆ ಕವಿತೆ ಬರೆದಿದ್ದೆ.

ಏಳೇಳು ಜನುಮಗಳ ಮಾತು ಹಾಗಿರಲಿ
ಈ ಜನ್ಮದಲ್ಲೇ ರಣಹಸಿವು
ಊರ ಸರಹದ್ದಿನಾಚೆವರೆಗೂ
ಅಟ್ಟಾಡಿಸಿ ಅಟ್ಟಿ
ನಂಜುಗುರುಗಳಲಿ ಗಾಯ ಮೀಟಿ ಬಗೆದು ಹಿಸಿದು
ಆ ಜೀವಂತ ಹೆಣಗಳ ಕುಕ್ಕೀ ಕುಕ್ಕೀ…
ಅವರ ಸಹನೆ ಮೀರಿ-
ನೋವಿನ ನಿಗಿನಿಗಿ ಕೆಂಡದ ಮೇಲೆ ಸುಟ್ಟ
ಸತ್ತ ದನಗಳ ಮಾಂಸ
ಮತ್ತಷ್ಟು ಅವಮಾನ ಮತ್ತು ಕಂಬನಿ
ಆ ಹೊಟ್ಟೆಗಳ ತುಂಬುತ್ತಿದ್ದ ಹೊತ್ತು…
ಇಲ್ಲಿ ಊರ ಗದ್ದುಗೆಯಲಿ ಇವನು
ಅದನು ಇದನು ಮತ್ತಿನ್ನು ಯಾವು ಯಾವುದನೋ
ತಿನ್ನುವುದು ಪಾಪವೆನ್ನುತ್ತ
ಮುಂದಿನ ನೂರು ಜನುಮಗಳವರೆಗೂ
ಕ್ರಿಮಿಯಾಗಿ ಹುಟ್ಟುವ ಶಾಪ ತೂರುತ್ತ
ಹೊಟ್ಟೆಯೊಳಗಿನ ಹಳೆಯ ನಂಜುಬಾವುಗಳ ಒಡೆದುಕೊಂಡು
ಕಾರ್ಕೋಟಕ ವಿಷ ಕಕ್ಕುತ್ತಿದ್ದ.
ಇಂಥ ಸರಿಹೊತ್ತಲ್ಲಿ…
‘ನಿಮ್ಮ ಬಾಯಿಂದ ಹೊಟ್ಟೆ ಸೇರುವ ಯಾವುದೂ
ನಿಮ್ಮನ್ನು ಹೊಲೆ ಮಾಡದು
ನಿಮ್ಮ ಹೊಟ್ಟೆಯಿಂದ ಬಾಯಿಯ ಮೂಲಕ
ಹೊರ ಬರುವುದಷ್ಟೇ ನಿಮ್ಮನ್ನು ಹೊಲೆ ಮಾಡುವುದು’
ಎಂದು ಎಂದೋ ಆಡಿದ ಕ್ರಿಸ್ತನ ಮಾತು
ಈಗ ಮತ್ತೆ ಮತ್ತೆ ಕಿವಿಗಪ್ಪಳಿಸಿದ ಹಾಗಾಗಿ
ನನ್ನೊಳಗೆ ತಟವಟ ಚಡಪಡಿಕೆ!

ಏನೋ ಸಾಹಸ ಮಾಡಲು ಹೋಗಿ ಎಲ್ಲೋ ಸಿಲುಕಿಕೊಂಡವನೊಬ್ಬ ತನ್ನ ಬಳಿಯಿದ್ದ ಪೇಸ್ಟನ್ನೋ ಹಸಿ ಮೀನನ್ನೂ ಮಾಂಸವನ್ನೋ ತಿಂದು ಜೀವ ಉಳಿಸಿಕೊಂಡು ಹಿಂದಿರುಗಿದ ಸುದ್ದಿಗಳು ವರದಿಯಾಗುತ್ತ ಕೌತುಕ ಮೂಡಿಸುತ್ತವಾದರೂ ಹಸಿವಿನಿಂದ ದಿನವೂ ಸಾಯುವವರ ಸಂಕಟದ ಕಥೆಗಳೆಂದೂ ಯಾರ ಎದೆ ಕಲಕುವುದಿಲ್ಲ. ತಟ್ಟೆಯಲ್ಲಿ ಊಟ ಬಿಡಕೂಡದೆಂದು ಅನ್ನದ ಬೆಲೆಯನ್ನು ಮಕ್ಕಳಿಗೆ ತಿಳಿಸುತ್ತಿದ್ದ ಜನ ಇಂದು ‘ಸ್ಟಾರ್ ಹೋಟೆಲುಗಳಲ್ಲಿ ತಟ್ಟೆಯಲ್ಲಿ ಬಳಿದು ತಿನ್ನಕೂಡದು ತಿಂದು ಸ್ವಲ್ಪ ತಟ್ಟೆಯಲ್ಲೇ ಮಿಗಿಸಿಟ್ಟು ಬರಬೇಕು, ಇಲ್ಲವಾದರೆ ಶಿಷ್ಟಾಚಾರ ಗೊತ್ತಿಲ್ಲದ ತಿನ್ನುಬಾಕರೆಂದು ಬಗೆಯುತ್ತಾರೆ’ ಎಂದು ಮಕ್ಕಳಿಗೆ ಕಲಿಸತೊಡಗಿದ್ದಾರೆ. ಹಬ್ಬ. ಮದುವೆ ಮತ್ತಿತರ ಸಮಾರಂಭಗಳಲ್ಲಿ ತಪ್ಪಲೆಗಟ್ಟಲೆ ಅನ್ನ ತೊಟ್ಟಿಗಳ ಪಾಲಾಗುತ್ತದೆ. ಇತ್ತೀಚೆಗೆ ಒಂದು ಪಕ್ಷದ ಪರಿವರ್ತನಾ ರ್ಯಾಲಿ ನಡೆದಾಗ ಕಸ ಸುರಿಯುವ ಜಾಗದಲ್ಲಿ ಲೋಡುಗಟ್ಟಲೆ ಅನ್ನ ಸುರಿದಿದ್ದನ್ನು ನಾವು ನೋಡಿದ್ದೇವೆ.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಾಂಸಾಹಾರಿಗಳ ಹಾಗೂ ಹಸಿವಿನಿಂದ ನರಳಿದವರ ಸಂಖ್ಯೆಯೇ ಹೆಚ್ಚಿದ್ದರೂ ರಚನೆಗೊಂಡ ಸಾಹಿತ್ಯದಲ್ಲಿ ಅವರೆಕಾಳಿನ ಉಪ್ಪಿಟ್ಟು, ದೋಸೆಯ ಪರಿಮಳ, ಒಗ್ಗರಣೆ ಹೀಗೆ ಊಟದ ಚಿತ್ರಣಗಳು ಸಾಕಷ್ಟು ಸಿಕ್ಕುತ್ತವೆ. ಆದರೆ ಮಾಂಸದಡುಗೆಯ ಹಾಗೆಯೇ ಹಸಿವಿನ ಭೀಕರತೆಯನ್ನು ಬಿಡಿಸಿಡುವ ಬರಹಗಳು ತೀರಾ ಕಡಿಮೆ. ಬಹುತೇಕ ಮಾಂಸಾಹಾರಿ ಬರಹಗಾರರು ಕೂಡ ಮಾಂಸಾಹಾರದ ಬಣ್ಣನೆ ಮಾಡಲು ಹಿಂದೇಟು ಹಾಕಿದ್ದ ಹಾಗೆಯೇ ಕಡು ಬಡತನದಲ್ಲಿ ತತ್ತರಿಸಿ ಹೋದವರೂ ಕೂಡ ತಮ್ಮ ಹಸಿವಿನ ದಾರುಣ ಚಿತ್ರಣಗಳನ್ನು ಬರಹಗಳಲ್ಲಿರಲಿ ಕುಂವೀಯವರ ‘ಗಾಂಧಿಕ್ಲಾಸು’ವಿನಂಥ ಕೆಲ ಕೃತಿಗಳನ್ನು ಹೊರತುಪಡಿಸಿ ಆತ್ಮಕಥನಗಳಲ್ಲೂ ದಾಖಲಿಸಲು ಹಿಂದೇಟು ಹಾಕಿರುವುದೂ ಇದೆ. ಇದಕ್ಕೆ ಕೀಳರಿಮೆಯೂ ಕಾರಣವಿರಬಹುದು. ಆ ಹಸಿವಿನ ಯಾತನೆಯ ದಿನಗಳನ್ನು ಮತ್ತೆ ನೆನಪಿಸಲು ಧೈರ್ಯ ಸಾಲದೆಯೂ ಇರಬಹುದು. ಹೊಟ್ಟೆ ತುಂಬಿದ ಜಗತ್ತಿನೆದುರು ಹಸಿವನ್ನು ಹೇಗೆ ಬಣ್ಣಿಸುವುದೆಂಬ ಹಿಂಜರಿಕೆಯೂ ಇರಬಹುದು.

ಇಂದು ಅನ್ನ ಬೆಳೆಯುವ ರೈತನೇ ಅನ್ನಕ್ಕೆ ಪರದಾಡುವ ಗತಿಗೆ ಬಂದು ಕುಣಿಕೆಗೆ ಕೊರಳೊಡ್ಡಿ ನಿಂತಿದ್ದಾನೆ. ಮಹದಾಯಿ ಯೋಜನೆಯಂತಹ ಅನ್ನ ಬೆಳೆಯುವವನ ಹೋರಾಟಗಳು ರಾಜಕೀಯದ ಕೆಟ್ಟ ಆಟದ ವಸ್ತುವಾಗುತ್ತಿವೆ. ಹೃದಯವಂತನೆಂದು ಜನ ಗೌರವಿಸುವ ವೈದ್ಯನೊಬ್ಬ ಒಂದು ಪಕ್ಷದ ಸಭೆಯಲ್ಲಿ, ರೈತರ ಸಾಲ ಮನ್ನಾ ಮಾಡಕೂಡದೆಂದೂ ದೇಶದ ಜಿಡಿಪಿಯಲ್ಲಿ ರೈತಾಪಿ ಉತ್ಪನ್ನದ ಪಾಲಿಲ್ಲವೆಂದೂ ಯುವ ಜನತೆ ರೈತಾಪಿ ಕೆಲಸಕ್ಕೆ ಬೆನ್ನು ತಿರುಗಿಸಬೇಕೆಂದೂ ಹೇಳಿಕೆ ನೀಡುತ್ತಾನೆ. ಅನ್ನ ತಿನ್ನುವ ಬದಲು ಏನನ್ನು ತಿಂದು ಹಸಿವನ್ನು ತಣಿಸಬೇಕೆಂಬುದನ್ನು ಕಡೆಗೂ ಹೇಳದೆ ಹೋಗುತ್ತಾನೆ. ಇದನ್ನೆಲ್ಲ ನೋಡುವಾಗ ಹಸಿವಿನ ಘೋರ ದಿನಗಳನ್ನು ಮುಂದೆ ನೋಡಬೇಕಾಗಿದೆಯೇನೋ ಎಂಬ ಭಯದ ಕರಾಳ ಛಾಯೆ ಹಾಗೆಯೇ ತಲೆ ಮೇಲಿಂದ ಸರಿದುಹೋದಂತೆ ಭಾಸವಾಗುತ್ತದೆ.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 4 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...