Share

ಕಿರೀಟ ನಾಟಕ : ಅಧಿಕ ಪ್ರಸಂಗ
ವಿಜಿ

 

“ಈ ಪ್ರಸಂಗವನ್ನು ಬರೆದಾಗ ನನ್ನ ವಯಸ್ಸು ಹತ್ತಿರ ಹತ್ತಿರ ಐವತ್ತು ಎಂದು ಹೇಳಲಾಯಿತು. ಯಾವಾಗ, ಪ್ರಸಂಗವು ಅದನ್ನು ಬರೆದವನಿಂದ ಸ್ವತಂತ್ರವಾಗಿ ಮೇಳದವರ ಕೈಗೆ ಬಂತೊ, ಆಗಿನಿಂದ ನನ್ನ ವಯಸ್ಸೂ ಕೂಡ ಅಲ್ಲಿಗೇ ನಿಂತಿತು.”

 

 

 

ಳನಳಿಸಿ ನಗೆಯುಕ್ಕಿ ಕಡಲು ಭೋರ್ಗರೆಯುತ್ತಿದ್ದಾಗ
ಹೂ ತಳಿರು ಶೃಂಗಾರ ಕಾಮನೆ ಕರೆಯುತ್ತಲಿದ್ದಾಗ
ಕೂತಕೂತಲ್ಲೆಲ್ಲ ಕನಸುಗಳು ಆಟ ಕಟ್ಟುತ್ತಿದ್ದಾಗ
ಎಲ್ಲ ಮೆರೆಯುತ್ತಿದ್ದಾಗ ಮೈಮರೆಯುತ್ತಿದ್ದಾಗ
ಬರಲಿಲ್ಲ ನೀನು ಈಗ ಬಂದೆ

ಹಾಡೆಂದರೆ ಹಾಡೂ ಅಲ್ಲದ, ಮಾತೆಂದರೆ ಮಾತೂ ಅಲ್ಲದ ಧಾಟಿಯಲ್ಲಿ ಮೇಳದವರು ಇದನ್ನು ಒಪ್ಪಿಸಿ, ನೋಡುತ್ತಿರುವವರಿಗೆ ಗೊತ್ತೇ ಆಗದ ಹಾಗೆ ಹಿಂದಕ್ಕೆ ಸರಿಯುತ್ತಾರೆ. ಅಷ್ಟೇ ಕಣ್ಕಟ್ಟು ಎಂಬಂತೆ ಮೇಳದವರ ಜಾಗಕ್ಕೆ ಆ ಅಷ್ಟೂ ಮಂದಿಯ ಗಾತ್ರವನ್ನು ಸರಿದೂಗುವಂಥ ದೈತ್ಯದೇಹಿ ಪಾತ್ರವೊಂದು ಹಾಜರಾಗುತ್ತದೆ. ರಾಜಪಾರ್ಟು. ಯುವಕನಂತೂ ಅಲ್ಲದ, ಆದರೆ ತೀರಾ ವೃದ್ಧನೂ ಅಲ್ಲದ ವಯಸ್ಸಿನ ಪಾತ್ರ. ಈ ಮೇಳ ಮತ್ತು ಪಾತ್ರದ ಬದಲಾವಣೆ ಮಧ್ಯೆಯೂ ರಂಗದ ಒಂದು ಮೂಲೆಯಲ್ಲಿ ಎತ್ತರದ ಪೀಠದ ಮೇಲೆ ಭಾಗವತ ಅಬಾಧಿತನಾಗಿ ವಿರಾಜಮಾನನಾಗಿದ್ದಾನೆ, ಪ್ರಕಾಶಮಾನನೂ ಆಗಿದ್ದಾನೆ. ಈಗ ತಾಮ್ರದ ದೊಡ್ಡ ಹಂಡೆಯೊಳಗ ಬಾಯಿಟ್ಟು ಮಾತಾಡಿದರೆ ಬರುವಂಥ ಸೌಂಡಿನಲ್ಲಿ ರಾಜಪಾರ್ಟಿನ ಮಾತು ಶುರುವಾಗುತ್ತದೆ.

ರಾಜಪಾರ್ಟು: ಭ್ರಮೆಗಳನ್ನು ಕಳಚಬೇಕು.

ಈ ಮಾತು ಕೇಳಿಸಿಕೊಂಡ ಭಾಗವತ ಮುಸಿ ಮುಸಿ ನಗುತ್ತಾನೆ. ಅದು ಗೊತ್ತಾಗಿ ರಾಜಪಾರ್ಟಿಗೆ ಒಂದು ಥರದ ಮುಜುಗರವೂ ಬೇಸರವೂ ಆಗುತ್ತದೆ. ಕೊಂಚ ಸಿಟ್ಟೂ ಬರುತ್ತದೆ. ಆ ಎಲ್ಲ ಮಿಶ್ರಭಾವದಿಂದ,

ರಾಜಪಾರ್ಟು: ಯಾಕೆ ನಗುತ್ತಿದ್ದೀರಿ ಭಾಗವತರೆ?

ಭಾಗವತ: ಭ್ರಮೆಗಳನ್ನು ಕಳಚುವುದು ಅಂದರೆ ಚಡ್ಡಿ ಕಳಚಿದಂತೆಯಾ ಎಂದೆನ್ನಿಸಿ ನಗು ಬಂತು, ಮತ್ತೇನಿಲ್ಲ.

ಈಗ ಪ್ರೇಕ್ಷಕರೆಲ್ಲ ಗೊಳ್ಳನೆ ನಕ್ಕುಬಿಡುತ್ತಾರೆ. ರಾಜಪಾರ್ಟಿಗೆ ಇನ್ನೂ ಕಸಿವಿಸಿಯಾಗುತ್ತದೆ. ಆಗ, ಎಲ್ಲೋ ಕಂಬದ ಮೂಲೆಯಿಂದ ಪ್ರೇಕ್ಷಕನೊಬ್ಬನ ಅಪಹಾಸ್ಯದ ಮಾತು ಕೇಳಿಸುತ್ತದೆ: “ಚಡ್ಡಿ ಹೋಗಿ ಏನು ಬಂತು ಡುಂಡುಂಡುಂ”. ಮತ್ತೊಮ್ಮೆ ಕಿಸಕ್ಕನೆ ಹರಡಿಕೊಳ್ಳುತ್ತದೆ ನಗು. ರಾಜಪಾರ್ಟು ರಂಗಸ್ಥಳವನ್ನೊಮ್ಮೆ ಕಾಲಿನಿಂದ ಒದೆಯುತ್ತದೆ, ಧೂಳು ಎದ್ದುಕೊಳ್ಳುವ ಹಾಗೆ. ಅದನ್ನು ಚಂಡೆಯವನ ಕೈಚಳಕ ಅಷ್ಟೇ ಪರಿಣಾಮಕಾರಿಯಾಗಿ ಧ್ವನಿಸುತ್ತದೆ.

ರಾಜಪಾರ್ಟು: ನಾನು ಯಾವ ದೇಶದ ದೊರೆಯೆಂದು ಗೊತ್ತುಂಟೊ?

ಭಾಗವತ: ದೊರೆಗಳೆಲ್ಲ ಇದ್ದಬದ್ದದ್ದು ಕಳಚಿಟ್ಟು ದೇಶಾಂತರ ಹೋಗಿ ಯಾವುದೋ ಕಾಲವಾಯಿತಲ್ಲ? ನೀವಿನ್ನೂ ಯಾವ ಭ್ರಮೆಯಲ್ಲಿದ್ದೀರಿ ದೊರೆಯೇ?

ರಾಜಪಾರ್ಟು: ಹ್ಹಹ್ಹಹ್ಹಾ…! ಭ್ರಮೆ… ಭ್ರಮೆ ನನಗಲ್ಲ, ನಿಮಗೆ. ದೊರೆಗಳಾರೂ ಇಲ್ಲ ಅನ್ನುತ್ತೀರಿ. ಮತ್ತೆ ನನ್ನನ್ನು ದೊರೆಯೇ ಎಂದು ಕರೆಯುತ್ತೀದ್ದೀರಿ.

ಭಾಗವತ: ಮನೆಗೆ ಬಂದವರಿಗೆ ಮರ್ಯಾದೆ ಕೊಡುವುದು ನಮ್ಮ ಸಜ್ಜನಿಕೆ. ಅದನ್ನೇ ನೀವು ಅಪಾರ್ಥ ಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಸುತ್ತ ಇನ್ನಷ್ಟು ಭ್ರಮೆಯ ಹುತ್ತ ಬೆಳೆಸಿಕೊಳ್ಳುತ್ತಿದ್ದೀರಿ.

ರಾಜಪಾರ್ಟು: ಇಲ್ಲ ಇಲ್ಲ… ಯಾರ ಸುತ್ತವೇ ಆದರೂ ಸರಿ, ಭ್ರಮೆಯ ಹುತ್ತ ಬೆಳೆಯಗೊಡಬಾರದು. ಅದಕ್ಕೇ ಹೇಳಿದೆ, ಭ್ರಮೆಗಳನ್ನು ಕಳಚಬೇಕು ಎಂದು. ನೀವು ನಕ್ಕು ಎಲ್ಲರ ದಾರಿ ತಪ್ಪಿಸಿಬಿಟ್ಟಿರಿ.

ಭಾಗವತ: ಇರಲಿ ಇರಲಿ, ನೀವು ಟೆನ್ಷನ್ನು ಮಾಡಿಕೊಳ್ಳಬೇಡಿ. ನಮ್ಮಲ್ಲಿ ತೆಂಗಿನ ಮರ ಸೋಯಿಸುವ ಓಮು ಇದ್ದಾನೆ. ಎಷ್ಟು ಚೆಂದ ಬಿಡಿಸುತ್ತಾನೆ ಗೊತ್ತೊ? ಅವನನ್ನೇ ಕರೆಯುವಾ, ಈ ಭ್ರಮೆಯೊ ಗಿಮೆಯೊ ಅಂದಿರಲ್ಲ, ಅದನ್ನು ಬಿಡಿಸುವುದಕ್ಕೆ. ಅವನಿಂದ ಬಿಡಿಸಲು ಸಾಧ್ಯವಿಲ್ಲ ಅನ್ನುವಷ್ಟು ಬೆಳೆದಿದ್ದರೆ ಹುಚ್ಚು ಬಿಡಿಸುವವರನ್ನೇ ಹುಡುಕಬೇಕಾದೀತು. ಸದ್ಯ ನೀವು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಕುಡಿಯುವುದಕ್ಕೆ ಏನು ತಗೊಳ್ತೀರಿ? ನಿಂಬೆಹಣ್ಣಿನ ಶರಬತ್ತು, ಮಜ್ಜಿಗೆ? ಅಥವಾ ಚಹವನ್ನೇ ತರಿಸಲೊ?

ರಾಜಪಾರ್ಟು: ಅದೆಂಥದೂ ಬೇಡ ಮಾರಾಯರೆ. ತಣ್ಣಗಿನ ನೀರು ಒಂದು ಗ್ಲಾಸು ತರಿಸಿ, ಸಾಕು.

ಭಾಗವತ: ಅಷ್ಟೆ ತಾನೆ? ಅಗತ್ಯವಾಗಿ. ಓ ಚಾರರೆ, ಎಲ್ಲಿ ಎಲ್ಲಿ? ನೀರು ಇಲ್ಲಿ ಇಲ್ಲಿ.

ಈ ಪ್ರಾಸದ ಮಾತಿನಿಂದ ಸಭಿಕರಲ್ಲಿ ಮತ್ತೊಮ್ಮೆ ನಗೆಯ ಅಲೆಯೇಳುತ್ತದೆ. ಅವರ ನಗೆಯ ಗದ್ದಲ ಎದ್ದಿರುವಾಗಲೇ ಭಾಗವತ ಕುಳಿತಲ್ಲಿಂದ ಕೆಳಗೆ ನೆಗೆದು ರಾಜಪಾರ್ಟಿನ ಬಳಿ ಹೋಗಿ, ಗುಟ್ಟಿನಲ್ಲೆಂಬಂತೆ ಆದರೆ ಸ್ಪಷ್ಟವಾಗಿ ಅದರ ಕಿವಿಯಲ್ಲಿ ಹೇಳುತ್ತಾನೆ.

ಭಾಗವತ: ಅಲ್ಲ ದೊರೆಯೆ, ನೀವು ಕಳಚಬೇಕು ಅಂದಿರಿ. ನಾನು ಬಿಡಿಸುವವರನ್ನು ಕರೆಸೋದಕ್ಕೆ ಹೊರಟಿದ್ದೇನೆ. ಆದರೆ ಈಗ ನೋಡಿ, ಡೌಟು ಶುರುವಾಗಿದೆ, ಕಳಚುವುದು ಬೇರೆ, ಬಿಡಿಸುವುದು ಬೇರೆ ಅಲ್ಲವೆ?

ರಾಜಪಾರ್ಟು: ಛೆ ಛೆ ಛೆ… ನೀವು ತುಂಬಾ ಅಶ್ಲೀಲವಾಗಿ ಮಾತನಾಡುತ್ತೀರಿ.

ಭಾಗವತ: ಇದರಲ್ಲಿ ಅಶ್ಲೀಲತೆಯ ಪ್ರಶ್ನೆ ಏನು ಬಂತು ದೊರೆಯೆ. ಸೂಕ್ಷ್ಮ… ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ. ನಾವು ಸೂಕ್ಷ್ಮವಾಗುತ್ತ ಹೋದಷ್ಟೂ ಅಶ್ಲೀಲವೂ ಆಗುತ್ತ ಹೋಗುತ್ತೇವೆ ಅಂತಲೋ ನಿಮ್ಮ ಮಾತಿನ ಅರ್ಥ?

ರಾಜಪಾರ್ಟು: ಏನೊ ಮಾರಾಯರೆ… ಆದರೂ ಒಂದಂತೂ ನಿಜ. ನೀವು ಬಲು ರಸಿಕರ ಹಾಗೆ ಕಾಣಿಸುತ್ತೀರಿ. ನಿಮ್ಮ ಹತ್ತಿರ ಒಂದು ಮಾತು ಹೇಳಿಕೊಳ್ಳಬಹುದು ಅನ್ನೋ ಧೈರ್ಯ ಈಗ ಬರುತ್ತಿದೆ. ಇದು ಅಂತರಂಗದ ಮಾತು.

ಈಗ ಭಾಗವತ ಕೆಳಗೆ ನೆಗೆದಷ್ಟೇ ಚುರುಕಿನಿಂದ ಮತ್ತೆ ಪೀಠದ ಮೇಲಕ್ಕೆ ನೆಗೆದು ಕೂತು ಮುಖದ ಮೇಲೆ ಇನ್ನಿಲ್ಲದ ಗಾಂಭೀರ್ಯ ತಂದುಕೊಳ್ಳುತ್ತಾನೆ.

ಭಾಗವತ: ಹೇಳಿ.

ರಾಜಪಾರ್ಟು ಎದ್ದು ಭಾಗವತನ ಹತ್ತಿರ ಬಂದು ಕಿವಿಯಲ್ಲಿ ಗುಟ್ಟಾಗಿ ಹೇಳುವಂತೆ,

ರಾಜಪಾರ್ಟು: ನಾನು ಬಂದಿರುವುದು ಕನ್ಯೆಯನ್ನು ಹುಡುಕಿಕೊಂಡು.

ಆ ಮಾತು ಕಿವಿಗೆ ಬಿದ್ದಿದ್ದೇ ಭಾಗವತ ಅಷ್ಟು ಹೊತ್ತು ಆರೋಪಿಸಿಕೊಂಡಿದ್ದ ಎಲ್ಲ ಗಾಂಭೀರ್ಯವನ್ನೂ ಕಳೆದುಕೊಂಡು ಪೀಠದ ಮೇಲೆಯೇ ಎದ್ದು ನಿಂತು ಇಷ್ಟಗಲ ಕಣ್ಣುಬಿಟ್ಟುಕೊಂಡು ಅಷ್ಟೇ ದೊಡ್ಡ ಸ್ವರದಲ್ಲಿ ‘ಕನ್ಯೆಯೇ?’ ಎಂದು ಮಕ್ಕಳ ಉತ್ಸಾಹದಿಂದೆಂಬಂತೆ ಹೇಳಿಬಿಡುತ್ತಾನೆ. ‘ಕನ್ಯೆಯಂತೆ, ಕನ್ಯೆಯಂತೆ’ ಎಂದು ಪ್ರೇಕ್ಷಕರೂ ಕುತೂಹಲದಿಂದ ಎದ್ದೆದ್ದು ಬೊಬ್ಬೆ ಹೊಡೆಯುತ್ತಾರೆ. ಗುಟ್ಟಿನ ವಿಷಯ ಹೀಗೆ ಜಗಜ್ಜಾಹೀರಾದದ್ದಕ್ಕೆ, ಹಾಸ್ಯದ ವಿಷಯವೆಂಬಂತೆ ತೇಲಿದ್ದಕ್ಕೆ ಮತ್ತೆ ರಾಜಪಾರ್ಟು ಬೇಸರಿಸಿಕೊಳ್ಳುತ್ತದೆ. ಇದನ್ನು ಕೊಂಚ ತಡವಾಗಿಯಾದರೂ ಗಮನಿಸಿದ ಭಾಗವತನಿಗೆ ತಾನೇ ಕಂಟ್ರೋಲು ಕಳಕೊಂಡದ್ದು ಮನವರಿಕೆಯಾಗುತ್ತದೆ. ಪ್ರೇಕ್ಷಕರನ್ನು ಸುಮ್ಮನಿರುವಂತೆ ಕೈಯೆತ್ತಿ ಸೂಚಿಸಿ, ಮತ್ತೆ ಗಂಭೀರವಾಗಿ ಕೂತು,

ಭಾಗವತ: ದೊರೆಯೇ, ಬೇಸರ ಮಾಡಿಕೊಳ್ಳಬೇಡಿ. ಎಲ್ಲ ನಮ್ಮವರೇ. ಹಾಗಾಗಿ ನಿಮ್ಮ ಮಾತು ಗುಟ್ಟಿನದ್ದಾಗಿದ್ದರೆ ಚಿಂತಿಸುವ ಅಗತ್ಯವಿಲ್ಲ. ಈಗ ಹೇಳಿ, ನಿಮ್ಮ ಮಗನಿಗಾಗಿ ಕನ್ಯೆಯನ್ನು ಹುಡುಕಿಕೊಂಡು ಬಂದಿದ್ದೀರಿ. ಜೊತೆಯಲ್ಲಿ ಅವನೂ ಇದ್ದಿದ್ದರೆ, ಜೊತೆಗೆ ಸೊಸೆಯಾಗಬೇಕಾದವಳನ್ನು ಆರಿಸಲು ಅವನ ತಾಯಿಯೂ ಇದ್ದಿದ್ದರೆ ಎಂಥ ಚಂದ ಮತ್ತು ಘನತೆ ಇರುತ್ತಿತ್ತು ಅಲ್ಲವೆ?

ರಾಜಪಾರ್ಟು: ಅಯ್ಯೋ ಭಾಗವತರೆ, ನನ್ನ ಕಷ್ಟ ಯಾಕೆ ಅರ್ಥವಾಗುತ್ತಿಲ್ಲ ನಿಮಗೆ? ಗುಟ್ಟು ಇರುವುದೇ ಇಲ್ಲಿ. ನಾನು ನನಗೋಸ್ಕರ ಕನ್ಯೆಯನ್ನು ಹುಡುಕಿಕೊಂಡು ಬಂದವನು.

‘ಓ…’ ಎನ್ನುತ್ತದೆ ಪ್ರೇಕ್ಷಕ ಸಮೂಹ. ‘ಮುದುಕನ ತಲಬು ನೋಡ್ರೊ’ ಎಂದು ಯಾರೋ ಕೆಣಕುತ್ತಾರೆ. ‘ಹಳೇ ಮರ ಹಳೇ ಮರ, ಹುಳೀ ಮರ ಹುಳೀ ಮರ’ ಎಂದು ಮತ್ತೊಂದಿಷ್ಟು ಜನ ನಗಾಡುತ್ತಾರೆ. ಭಾಗವತ ಮತ್ತೊಮ್ಮೆ ಎಲ್ಲರನ್ನೂ ಸುಮ್ಮನಿರುವಂತೆ ಸೂಚಿಸಿ, ರಾಜಪಾರ್ಟನ್ನೊಮ್ಮೆ ಆಶ್ಚರ್ಯದಿಂದಲೂ, ಕನಿಕರದಿಂದಲೂ ಎಂಬಂತೆ ನೋಡಿ, ಮತ್ತೆ ಗಂಭೀರವಾಗುತ್ತ,

ಭಾಗವತ: ನಿಮಗೆಷ್ಟು ವಯಸ್ಸು ದೊರೆಯೆ?

ಈ ಪ್ರಶ್ನೆಯಿಂದ ರಾಜಪಾರ್ಟು ಉತ್ಸಾಹಗೊಂಡಂತೆ ಕಾಣಿಸುತ್ತದೆ. ಆ ಉತ್ಸಾಹದಿಂದಲೇ,

ರಾಜಪಾರ್ಟು: ಈ ಪ್ರಸಂಗವನ್ನು ಬರೆದಾಗ ನನ್ನ ವಯಸ್ಸು ಹತ್ತಿರ ಹತ್ತಿರ ಐವತ್ತು ಎಂದು ಹೇಳಲಾಯಿತು. ಯಾವಾಗ, ಪ್ರಸಂಗವು ಅದನ್ನು ಬರೆದವನಿಂದ ಸ್ವತಂತ್ರವಾಗಿ ಮೇಳದವರ ಕೈಗೆ ಬಂತೊ, ಆಗಿನಿಂದ ನನ್ನ ವಯಸ್ಸೂ ಕೂಡ ಅಲ್ಲಿಗೇ ನಿಂತಿತು. ಹಾಗಾಗಿ ನಾನಿನ್ನೂ ಐವತ್ತು ದಾಟದ, ಆದರೆ ಐವತ್ತೇ ಅನ್ನಬಹುದಾದ ವಯಸ್ಸಿನ ಗಂಡು.

ರಾಜಪಾರ್ಟು ಈ ‘ಗಂಡು’ ಎಂಬುದನ್ನು ಹೇಳುವಾಗ ಚಂಡೆಯವನು ಬೇಕೆಂತಲೇ ಒತ್ತು ಕೊಟ್ಟು ಧ್ವನಿಯೆಬ್ಬಿಸುತ್ತಾನೆ. ಅದು ಸ್ವತಃ ರಾಜಪಾರ್ಟನ್ನೂ ಗಲಿಬಿಲಿಗೊಳಿಸುವ ಹಾಗಿರುತ್ತದೆ. ಚಂಡೆಯ ಆ ಅಬ್ಬರದ ಧ್ವನಿಯನ್ನೇ ಅನುಸರಿಸಿ,

ಭಾಗವತ: ಗಂಡು! ಐವತ್ತು ದಾಟಿದರೂ ದಾಟಿಲ್ಲ ಎಂಬ ಸೋಗಿನ ಗಂಡು! ಹೀಗುಂಟು ವಿಚಾರ. ಬರೆದವನು ಯಾವತ್ತೋ ನೆಗೆದುಬಿದ್ದು ಹೋಗಿದ್ದಾನೆ ಎಂದ ಮೇಲೆ ನಿಮ್ಮ ವಯಸ್ಸು ಕೂಡ ಸಾಕಷ್ಟು ನೆಗೆದಿರಲೇಬೇಕು. ಆದರೆ ನೀವು ಮಾತ್ರ ಇಲ್ಲವೆಂದು ನಂಬುತ್ತಲೇ ಒಳಗೊಳಗೇ ಮುದಿಯಾಗಿ ವಾಸನೆ ಹೊಡೆಯುತ್ತಿದ್ದೀರಿ. ಅದೆಲ್ಲವನ್ನೂ ಮರೆಮಾಚುವುದಕ್ಕೆ ಮತ್ತು ಉತ್ತೇಜಿಸುವುದಕ್ಕೆ ಒಂದು ಸುಳ್ಳು. ಈ ಸುಳ್ಳೆಂಬುದೇ ಉತ್ತೇಜಕ, ವರ್ಧಕ. ಆಯಿತು ಬಿಡಿ, ಇನ್ನೂ ಏನೇನು ವರ್ಧಕಗಳನ್ನು ಬಳಸುತ್ತಿದ್ದೀರಿ?

ರಾಜಪಾರ್ಟು: ನೀವು ಮಾತುಮಾತಲ್ಲೂ ಹಂಗಿಸುತ್ತಿದ್ದೀರಿ, ಇರಿಯುತ್ತಿದ್ದೀರಿ.

ಭಾಗವತ: ಅಯ್ಯೋ ಅದೇಕೆ ಹಾಗೆಂದುಕೊಳ್ಳುತ್ತೀರಿ ದೊರೆಯೆ?

ರಾಜಪಾರ್ಟು: ದೊರೆ ದೊರೆ ದೊರೆ. ಹಾಳಾಗಿಹೋಗಲಿ ಈ ದೊರೆತನ.

ಹಾಗನ್ನುತ್ತ ಎರಡೂ ಕೈಗಳನ್ನು ತಲೆಯ ಎರಡೂ ಬದಿ ಇಟ್ಟುಕೊಂಡು ಇಡೀ ರಂಗದ ಮೇಲೆ ದಾಪುಗಾಲಿಟ್ಟು ಸುತ್ತುತ್ತ, ಸುತ್ತುತ್ತ, ಸುತ್ತುತ್ತ, ಕಡೆಗೆ ಕಿರೀಟವನ್ನು ಕಳಚಿ ಕೆಳಗಿಟ್ಟುಬಿಡುತ್ತದೆ ರಾಜಪಾರ್ಟು. ಆ ಇಡೀ ಕ್ರಿಯೆಗೆ ತಕ್ಕಂತೆ ಚಂಡೆಯ ದನಿ ವಿವಿಧ ಲಯದಲ್ಲಿ.

ಭಾಗವತ: ಕಿರೀಟ ಕಳಚಿದಿರಾ?

ರಾಜಪಾರ್ಟು: ಅಲ್ಲ, ಕಿರೀಟದ ಭ್ರಮೆಯನ್ನು ಕಳಚಿದೆ.

ಭಾಗವತ: ನಮಗೆ ಕಿರೀಟ ಮಾತ್ರ ಕಾಣಿಸುತ್ತುಂಟು; ಕಿರೀಟದ ಭ್ರಮೆಯಲ್ಲ.

ಭಾಗವತನ ಆ ಮಾತಿಗೆ ಯಾವ ಮಹತ್ವವೂ ಇಲ್ಲವೆಂಬ ರೀತಿಯಲ್ಲಿ, ಅದಕ್ಕೆ ಏನೆಂದೂ ಪ್ರತಿಕ್ರಿಯಿಸದೆ, ತನ್ನದೇ ಲೋಕದಲ್ಲಿರುವ ಥರ ರಂಗದ ಒಂದು ಮೂಲೆಯ ಅಂಚಿನಲ್ಲಿ ನಿಂತು ದೂರದಲ್ಲೆಲ್ಲೋ ದೃಷ್ಟಿ ನೆಟ್ಟು ತನ್ನದೇ ಮಾತಿನಲ್ಲಿ ತೊಡಗಿದೆ ರಾಜಪಾರ್ಟು. ಸಾವಕಾಶವಾಗಿ ನಡೆದು ರಂಗದ ಮತ್ತೊಂದು ತುದಿಗೆ ಬಂದು, ತೀರಾ ಸೋತಂತೆ ಕುಳಿತುಕೊಳ್ಳುತ್ತದೆ. ಭಾಗವತ ತನ್ನ ಪೀಠದಿಂದ ಇಳಿದು ಬಂದು ರಾಜಪಾರ್ಟಿನ ಹತ್ತಿರವೇ ನೆಲದ ಮೇಲೆ ಕೂರುತ್ತಾನೆ. ‘ದೊರೆಯೆ’ ಎಂದೆಲ್ಲ ಹೇಳುವುದಿಲ್ಲ. ಮೌನ. ಮೌನದಿಂದಲೇ ರಾಜಪಾರ್ಟಿನ ಕಣ್ಣಲ್ಲೇ ಕಣ್ಣನಿಡುತ್ತಾನೆ. ಭಾಗವತನ ದೃಷ್ಟಿಗೆ ದೃಷ್ಟಿ ಕೂಡಿಸಿದ ರಾಜಪಾರ್ಟು, ಇನ್ನೂ ಸೋತ ದನಿಯಲ್ಲಿ,

ರಾಜಪಾರ್ಟು: ನಿಂಬೆಹಣ್ಣಿನ ಶರಬತ್ತನ್ನೇ ತರಿಸುವೆ ಅಂದಿರಿ, ಮಜ್ಜಿಗೆಯನ್ನೇ ತರಿಸುವೆ ಎಂದಿರಿ. ಚಹ ಬೇಕಾದರೂ ತರಿಸಿಕೊಡಲೇ ಎಂದಿರಿ. ಅದೇನೂ ಬೇಡ, ತಣ್ಣಗಿನ ಒಂದು ಗ್ಲಾಸು ನೀರು ತರಿಸಿ ಸಾಕು ಎಂದಿದ್ದೆ. ಅದನ್ನೂ ತರಿಸಿಕೊಡಲಾಗಲಿಲ್ಲವಲ್ಲ ನಿಮ್ಮಿಂದ. ಏನು ಭಾಗವತರೆ?

ಭಾಗವತನೂ ಅದೇ ಅಸಹಾಯಕ ದನಿಯಲ್ಲಿ ಅಷ್ಟೇ ತಣ್ಣಗೆ,

ಭಾಗವತ: ಹೇಳೀ ಕೇಳೀ ಭಾಗವತ ನಾನು. ಇದ್ದೂರು ತೊರೆದು ಗೊತ್ತು ಗುರುತಿಲ್ಲದ ಮತ್ತೊಂದೂರಿನ ಸಂತೆಬಯಲಲ್ಲಿ ನನ್ನದೂ ಒಂದು ಆಟ. ಗೆಲ್ಲುವ ವಿಶ್ವಾಸವಿಲ್ಲ ಇಲ್ಲಿ; ಗೆಲ್ಲುವ ಗುರಿಯೂ ಇಲ್ಲ ನನಗೆ. ನಡೆವಷ್ಟು ದೂರ ನಡಕೊಂಡು ಹೋಗಲಿ ಎಂಬುದಷ್ಟೇ ಆಸೆ. ಅದನ್ನು ಮುಟ್ಟುವುದಕ್ಕೂ ಏನೇನೋ ತಂತ್ರ. ಒಮ್ಮೆ ಅಬ್ಬರಿಸಿದರೆ ಮತ್ತೊಮ್ಮೆ ಬರೀ ಮಬ್ಬು ಮಬ್ಬು. ಈ ಇಂಥ ಸ್ಥಿತಿಯಲ್ಲಿ ಬಾಯುಪಚಾರವಲ್ಲದೆ ಇನ್ನೇನು ಉಪಚಾರ ಸಿಕ್ಕೀತು ನಿಮಗೆ ನನ್ನಿಂದ? ನಿಮಗೇ ನಿಜ ತಿಳಿದುಬಿಡುತ್ತದೆ ಎಂದುಕೊಂಡಿದ್ದೆ. ನಾನೇ ಬಾಯ್ಬಿಟ್ಟು ಹೇಳುವ ಇರಾದೆಯಿರಲಿಲ್ಲ; ಹೇಳುವುದು ನನಗೆ ಬೇಕಿರಲೂ ಇಲ್ಲ.

ಇಷ್ಟು ಹೇಳಿ ಸುಮ್ಮನಾಗುತ್ತಾನೆ ಭಾಗವತ. ಅವನನ್ನೇ ದಿಟ್ಟಿಸುತ್ತ ಬೆರಗುಗೊಂಡಂತೆ ಕೂತಿದೆ ರಾಜಪಾರ್ಟು. ಮತ್ತೆ ಮೌನ. ಕೆಲವು ಕ್ಷಣಗಳು ಹಾಗೇ ಕಳೆಯುತ್ತವೆ. ಇದ್ದಕ್ಕಿದ್ದಂತೆ ಭಾಗವತ ಈ ಕೆಲವು ಕ್ಷಣಗಳ ಹಿಂದೆ ವಿಷಾದ ತುಂಬಿಕೊಂಡು ಮಾತಾಡಿದ್ದೆ ಎಂಬುದನ್ನೂ ಮರೆತು ಸ್ಪ್ರಿಂಗಿನಂತೆ ನೆಗೆಯುತ್ತ ನಿಂತು, ರಾಜಪಾರ್ಟಿನ ಎರಡೂ ಭುಜ ಹಿಡಿದು ಕುಳಿತಲ್ಲಿಂದ ಎಬ್ಬಿಸಿ,

ಭಾಗವತ: ಯೋಚನೆ ಬಿಡಿ. ಕನ್ಯೆಯನ್ನು ಹುಡುಕಿಕೊಂಡು ಬಂದವರು ನೀವು. ಇನ್ನು ಮುಂದಿನೂರಿಗೆ ಹೋಗುತ್ತೀರಿ. ಅಲ್ಲಿ ಮದುವೆಗೆ ಸಿದ್ಧವಾಗಿರುವ ಕನ್ಯೆಯ ಮನೆ ಮುಂದೆಯೇ ಏನಾದರೂ ಎಡವಿಬಿದ್ದರೆ ಬರೀ ತಣ್ಣಗಿನ ನೀರೇ ಏನು, ಇನ್ನೂ ಏನೇನೋ… ಬಹುಶಃ ಎಲ್ಲವೂ, ಎಲ್ಲವೂ ಸಿಗಲೂ ಬಹುದು. ಎಲ್ಲವೂ ಎಂದರೆ ಅರ್ಥವಾಯಿತೆ?

ತನ್ನ ಮಾತಿನ ಜಾಣ್ಮೆಗೆ ತಾನೇ ಉತ್ಸುಕನಾಗುತ್ತ ನಗುತ್ತಾನೆ. ಥಟ್ಟನೆ ರಾಜಪಾರ್ಟಿನ ಹತ್ತಿರ ಬಂದು,

ಭಾಗವತ: ಆದರೆ ನೀವು ಎಡವಿ ಬೀಳಬೇಕು ಅಷ್ಟೆ.

ಮತ್ತೆ ಅದೇ ನಗು. ಆ ನಗು ಅಲೆಯಂತೆ ರಂಗವನ್ನು ತುಂಬಿಕೊಳ್ಳುತ್ತಿರುವಾಗ ರಾಜಪಾರ್ಟು ನಿಧಾನವಾಗಿ ಹೆಜ್ಜೆ ಎತ್ತಿಡುತ್ತ,

ರಾಜಪಾರ್ಟು: ಅಂತೂ ನಿಮಗೆ ಬೇಕಿರುವುದೇನು? ನಾನು ಎಡವಿ ಬೀಳುವುದು.

ಹಾಗೆ ಹೇಳುತ್ತಲೇ ರಾಜಪಾರ್ಟು ಹೊರಟುಹೋಗುತ್ತದೆ. ಅದು ಹೋಗುವಾಗ, ಭಾಗವತ ಒಮ್ಮೆ ಅದರತ್ತಲೂ, ಮತ್ತೊಮ್ಮೆ ಅದು ಇಲ್ಲೇ ಬಿಟ್ಟಿರುವ ಕಿರೀಟದತ್ತಲೂ ನೋಡುತ್ತ, ಒಳಗೊಳಗೇ ಖುಷಿಯಿಂದ ಉಬ್ಬುತ್ತ, ರಾಜಪಾರ್ಟಿನ ಬೆನ್ನ ಹಿಂದೆ ಅಷ್ಟು ದೂರ ಹೋಗಿ ಮರಳುತ್ತಾನೆ. ಇನ್ನೊಂದು ಕ್ಷಣವೂ ತಡೆಯಲಾರೆ ಎಂಬ ವೇಗದಲ್ಲಿ ಮರಳುತ್ತಾನೆ. ಮರಳಿದವನೇ ಆ ಕಿರೀಟವನ್ನು ಆಸೆಯಿಂದ, ಕುತೂಹಲದಿಂದ ಮುಟ್ಟಿ ಮುಟ್ಟಿ ನೋಡುತ್ತಾನೆ. ಸ್ವಲ್ಪ ದೂರ ನಡೆದುಹೋಗಿ ಬಂದು ಮತ್ತೆ ಮುಟ್ಟುತ್ತಾನೆ. ಅದರ ಸುತ್ತ ಒಂದು ಸುತ್ತು ಬಂದು ಮುಟ್ಟುತ್ತಾನೆ. ಅದರ ಮುಂದೆ ಕೂತು ಭಕ್ತಿಯಿಂದೆಂಬಂತೆ ಮುಟ್ಟುತ್ತಾನೆ. ಹಾಗೇ ಸಾವಕಾಶವಾಗಿ ಅದನ್ನು ಎತ್ತಿ ತಲೆಯ ಮೇಲೆ ಇಟ್ಟುಕೊಂಡುಬಿಡುತ್ತಾನೆ.

ಕಿರೀಟವನ್ನು ಧರಿಸಿದ್ದೇ ಎಂಥದೋ ಪರವಶತೆಗೆ ಒಳಗಾದವನಂತೆ ತೋರುತ್ತದೆ. ಕುಳಿತಲ್ಲಿಂದ ನೆಗೆದು ಕುಣಿತಕ್ಕೆ ತೊಡಗುತ್ತಾನೆ. ಇಡೀ ರಂಗವನ್ನು ತುಂಬುವಂಥ ಕುಣಿತ. ರಾಜಗಾಂಭೀರ್ಯದ ಕುಣಿತ, ರೌದ್ರಾವೇಶದ ಕುಣಿತ. ಎದುರಾಳಿಯ ಮೇಲೆ ಏರಿಹೋಗುವ ಥರದ ಕುಣಿತ. ಶತ್ರುಸೇನೆಯನ್ನು ಸದೆಬಡಿಯುತ್ತಿದ್ದೇನೆಂಬಂಥ ಕುಣಿತ. ವಿಜಯೋತ್ಸಾಹದ ಕುಣಿತ. ನಿಧನಿಧಾನವಾಗಿ ಪ್ರಶಾಂತಭಾವಕ್ಕೆ ಮರಳುತ್ತ ಎಲ್ಲರನ್ನೂ ಮಿದುಗೊಳಿಸಬಲ್ಲಂಥ ಕುಣಿತ. ಆಮೇಲೆ ಮೋಹಿನಿಯೇ ನಾಚುವಂಥ ಸಮ್ಮೋಹಕ ಹೆಜ್ಜೆಗಳು. ಶೃಂಗಾರದ ವಿಸ್ತಾರ. ಸ್ವೇಚ್ಛೆಯ ಸೆಳೆತ. ಪ್ರೇಮದ ಉಯ್ಯಾಲೆ. ಮಿಲನದ ಮೈಮರೆವು.

ಅಷ್ಟೂ ಹೊತ್ತು ರಂಗವೆಂಬುದು ಕಡಲಂತೆ ಪ್ರವಹಿಸಿತು. ಝಗಮಗಿಸಿ ತುಳುಕಿತು. ಪ್ರೇಕ್ಷಕರು ಗಂಭೀರವಾಗಿ ತನ್ಮಯತೆಯಿಂದ ಅದೆಲ್ಲದರೊಳಗೆ ಒಂದಾಗಿಹೋಗಿದ್ದರು. ಕಡೆಕಡೆಗೆ ಹೆಜ್ಜೆಗಳು ಎಷ್ಟು ನಿಧಾನವಾಗಿಬಿಟ್ಟವೆಂದರೆ, ಒಂದು ಹಂತದಲ್ಲಿ ಇನ್ನು ಚಲನೆಯೆಂಬುದು ಮುಗಿಯಿತು ಎಂಬ ಭಾವನೆ ಬರುವಂತೆ ಭಾಗವತ ಸ್ತಬ್ಧನಾಗಿ ಒಂದೆಡೆ ಸ್ಥಿರವಾಗಿಬಿಟ್ಟ.

ಮೇಳವೀಗ ಮುಂದೆ ಬಂದು ಮತ್ತದೇ ಹಾಡೆಂದರೆ ಹಾಡೂ ಅಲ್ಲದ, ಮಾತೆಂದರೆ ಮಾತೂ ಅಲ್ಲದ ಧಾಟಿಯಲ್ಲಿ-

ನಿಷ್ಕರುಣಿ ಖಡ್ಗಗಳ ನಿರ್ಲಜ್ಜ ವಾಂಛೆಗಳ
ಉಜ್ವಲ ಪ್ರೇಮಗಳ ನಿಸ್ಸಹಾಯಕ ಮನಸುಗಳ
ರೂಹುಗಳ ರೇಖೆಗಳ ಓಂಕಾರ ಹೂಂಕಾರಗಳ
ಚೀತ್ಕಾರ ಚಮತ್ಕಾರಗಳ ಸಂತೆಗಳ ಚಿಂತೆಗಳ
ಕಥೆ ನೂರು ರಾಜ್ಯವಾಳಿದವು

ಮೇಳ ಮೆಲ್ಲಗೆ ಹಿಂದೆ ಸರಿದು ಸ್ತಬ್ಧಗೊಳ್ಳುತ್ತಿದ್ದಂತೆ, ಇಷ್ಟೂ ಹೊತ್ತು ಸ್ಥಿರಗೊಂಡಿದ್ದ ಭಾಗವತ ನಿಂತಲ್ಲಿಂದ ಕೊಂಚವೂ ಅಲ್ಲಾಡದೆ, ತುಂಟ ಭಾವದಿಂದ ಪ್ರೇಕ್ಷಕರಿಗೆ ಕಣ್ಣು ಹೊಡೆದ.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...