Share

ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು
ಕಾದಂಬಿನಿ ಕಾಲಂ

 

 

 

 

 

 

 

 

 

 

ಅವಳು ಅಡುಗೆ ಮಾಡುತ್ತಾಳೆ
‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’
ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ
ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ

 

ಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ಅಸಂಖ್ಯ. ತವರಿಗೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗಾಗಿ, ಗಂಡನ ಮನೆಗೆ ಹೊರಗಿನಿಂದ ಬಂದವಳಷ್ಟೇ ಆಗಿ ತನ್ನನ್ನು ಒಪ್ಪಿಕೊಳ್ಳದ ಮನೆಯೊಂದನು ತನ್ನದನ್ನಾಗಿ ಮಾಡಿಕೊಳ್ಳಲು ತೆಗೆದುಕೊಳ್ಳುವ ಅವಧಿ, ಅದಕ್ಕವಳು ತೆರಬೇಕಾದ ಬೆಲೆ, ಮಾಡಬೇಕಾದ ತ್ಯಾಗವೋ ತಂತ್ರವೋ ಲೆಕ್ಕಕ್ಕೆ ಸಿಗದು. ಎಷ್ಟೇ ಸುಸಂಸ್ಕೃತ, ಸಜ್ಜನಿಕೆಯ, ವಿಶಾಲ ಮನೋಭಾವದ ಕುಟುಂಬವೆಂದರೂ ಮದುವೆಯಾಗಿ ಮನೆಸೇರುವ ಹೆಣ್ಣು ಓದಿಲ್ಲದವಳಿರಲಿ, ದುಡಿಯುವ, ವಿದ್ಯಾವಂತ, ವಿಚಾರವಾದಿ ಮಹಿಳೆಯೂ ಇದಕ್ಕೆ ಹೊರತಲ್ಲ. ಕೆಲವು ಕುಟುಂಬಗಳಲ್ಲಿ ಕೊಂಚ ಸಹ್ಯ ವಾತಾವರಣ ಇದ್ದೀತಷ್ಟೇ.

ಸ್ವತಃ ತಾನೇ ಈ ಕೊಂಡದಲ್ಲಿ ಬೆಂದು ಹದನಾದ ಹೆಂಗಸೂ ಮಗಳು ಸಕಲ ಸುಖ, ಸ್ವಾತಂತ್ರ್ಯಗಳನ್ನೂ, ಹಕ್ಕುಗಳನ್ನೂ ಪಡೆಯಬೇಕೆಂದು ಬಯಸುವಂತೆಯೇ ಸೊಸೆಯಂದಿರ ವಿಚಾರಕ್ಕೆ ಕೊಂಚ ಧಾರಾಳಿಗಳಾಗಲು ತಯಾರಿರುವುದಿಲ್ಲ. ಮಗಳಿಗಿರುವ ಸ್ಥಾನಮಾನ ಎಂದೂ ಸೊಸೆಗಿಲ್ಲವೇ ಇಲ್ಲ. ಕೌಟುಂಬಿಕ ಪರಿಸರದಲ್ಲಿ ಮುಂಜಾನೆ ಎಲ್ಲರಿಗಿಂತಲೂ ಬೇಗನೆ ಏಳುವ, ಎಲ್ಲರಿಗಿಂತಲೂ ಕೊನೆಯಲ್ಲಿ ಮಲಗುವ ಹೆಣ್ಣು ಮಾಡಬೇಕಾದ ಕೆಲಸ, ತುಟಿಕಚ್ಚಿ ಸಹಿಸಬೇಕಾದ ಹಿಂಸೆ, ದೌರ್ಜನ್ಯ, ಕಳೆದುಕೊಳ್ಳುವ ಹಕ್ಕು, ಸ್ವಾತಂತ್ರ್ಯಗಳು, ಅವಳೆದುರಿಸುವ ಸವಾಲು ಮತ್ತು ಸಮಸ್ಯೆಗಳು ಒಂದೆರಡಲ್ಲ. ಉಳಿಯಲಿಲ್ಲವೆಂದು ಹಸಿದಿರಬೇಕಾದವಳೂ, ಮಿಕ್ಕಿತೆಂದು ತಂಗಳು ಉಣ್ಣಬೇಕಾದವಳೂ ಅವಳೇ! ಇಂಥ ಹೆಣ್ಣು ಸಂಕುಲವನ್ನು ನೋಡುವಾಗ ನನಗೆ, ನಮ್ಮ ದೇಶದಲ್ಲಿ ಜೀವಾವಧಿ ಶಿಕ್ಷೆಯೆಂದರೂ ಹದಿನಾಲ್ಕು ವರ್ಷಗಳ ಅವಧಿಯಾಗಿರುವಾಗ ಇಡೀ ಬದುಕನ್ನೇ ನಾಲ್ಕು ಗೋಡೆಗಳ ನಡುವೆ ತೇಯುವ ಇದು ಯಾವ ತೆರನ ಶಿಕ್ಷೆ? ಅದೂ ನಿರಪರಾಧಿಗೆ! ಎಂದು ಎಷ್ಟೋ ಸಲ ಅನಿಸುವುದಿದೆ.

ರಾತ್ರಿ ಆದಷ್ಟೂ ಬೇಗನೆ ಮಲಗಿ
ಮುಂಜಾನೆ ಬೇಗನೇ ಎದ್ದುಬಿಡುವ
ನಿರ್ಧಾರವ ನಾನೆಂದೂ ಮಾಡುವುದಿಲ್ಲ
ಪ್ರತಿದಿನ ಬೇಗನೇ ಏಳುವ
ಆ ಹೆಂಗಸರು
ರಾತ್ರಿ ಮಲಗುವ ತನಕ
ಏನೇನು ಮಾಡಬೇಕಾಗಿದೆಯೋ
ಅದು ನನಗೆ ತಿಳಿಯದ್ದೇನಲ್ಲ

ನನ್ನನ್ನು ಹೀಗೆ ಪಂಜರದೊಳಗೆ
ಕೂಡಿಸಿಟ್ಟಾಗಲೂ
ಈ ಪುಟ್ಟ ವ್ಯಾಪ್ತಿಯಲ್ಲೂ
ನಾನು ಬದುಕುವುದು
ನನ್ನ ಮನದ ಇಚ್ಛೆಯಂತೆಯೇ!
‘ಸ್ವತಂತ್ರವಾಗಿ ಬದುಕಲು
ವಿಶಾಲ ಜಗತ್ತೇ ಬೇಕು’ ಎಂದು
ಎಂದೂ ಅನಿಸುವುದಿಲ್ಲ ನನಗೆ!

ಹೊರಗೆಲ್ಲ ಅಡ್ಡಾಡಿಕೊಂಡಿರುವ
ಆ ಮಹಿಳೆಯರ ಕಂಡಾಗ
ಮನಕೆ ಖೇದವೆನಿಸುವುದು
ಯಾರ ಆಜ್ಞೆ, ಆಣತಿಗಳ
ಒಂದು ಹೆಜ್ಜೆಯಾದರೂ ಮೀರಲಾಗದ
ಅವರ ಗುಲಾಮಿತನವ
ಕಂಡು ಮನಕೆ ಖೇದವೆನಿಸುವುದು

ಬಲ್ಲೆ ಈ ಪಂಜರದೊಳಗಿರುವವಳ ಕಂಡು
ಮುಸು ಮುಸು ನಗುತ್ತೀರಿ
ನಾನಾದರೂ
ಪಂಜರದ ಪುಟ್ಟ ವ್ಯಾಪ್ತಿಯ ಇತಿಮಿತಿಗಳಲೂ
ಹೀಗೆ ಸಡ್ಡು ಹೊಡೆದು ಬದುಕಬಹುದು
ಎಂಬ ಪ್ರಾಯೋಗಿಕ ಮಾದರಿ ತೋರುತ್ತಿದ್ದೇನಷ್ಟೇ

ಪಂಜರವ ತೊರೆದುಹೋದ
ಅವೆಷ್ಟೋ ಹಕ್ಕಿಗಳ ನಾನು ಕಂಡೆ
ಹಾಗೆ ಹಾರಿದವುಗಳಲಿ
ಕೆಲವು ಮತ್ತೊಂದು ಪಂಜರದ
ಖೈದಿಯಾದವು
ಮತ್ತೆ ಕೆಲವು ಬೆಕ್ಕುಗಳ ಪಾಲಾದವು!

ನನ್ನ ಪೀಹೂ ನನಗೆ
ಅದೆಷ್ಟೋ ಪಾಠಗಳ ಕಲಿಸುತ್ತಿದ್ದಳು
ನಾನು ಕೊಟ್ಟ ಹಣ್ಣುಗಳಲಿ
ಒಂದನ್ನು ಬಿಸುಟು ಮತ್ತೊಂದನು
ತಿನ್ನುತ್ತಿದ್ದಳು
ತನಗೆ ಬೇಕೆನಿಸಿದಾಗ ಹಾಡಿಕೊಳ್ಳುತ್ತಿದ್ದಳು
ತನಗೆ ಬೇಕನಿಸಿದಾಗೊಮ್ಮೆ
ಹಾರಿಯೂ ಹೋದಳು
ತನಗೆ ಬೇಕೆನಿಸಿದರೆ
ಹಿಂದಿರುಗಿಯೂ ಬಂದಾಳು

ದೀಪಗಳನು
ಬೆಳಕು ಹೊರಗಿಣುಕಲು ಬಿಡದ ಹಾಗೆ
ಅದೆಷ್ಟು ಕಾಲ
ನಿಮ್ಮ ಬೊಗಸೆಗಳಲಿ ಬಚ್ಚಿಡುವಿರಿ?
ಉರಿವಷ್ಟೂ ಕಾಲ
ನಿಮ್ಮ ಅಂಗೈಗಳನೇ ಸುಟ್ಟೀತು
ಅಥವಾ
ಗಾಳಿ ಸೋಕದೇ ಸತ್ತು ಹೋದೀತು
ನಿಮಗೆ ಇರುವುದು ಎರಡೇ ಆಯ್ಕೆ

ಕೌಟುಂಬಿಕ ಪರಿಸರದಲ್ಲಿ ಪ್ರತಿಫಲವಿಲ್ಲದ, ಸಣ್ಣ ಮೆಚ್ಚುಗೆಯೂ ಇಲ್ಲದ ದುಡಿಮೆಯ ಜೊತೆಗಿನ ತಮ್ಮ ಪಾಡುಗಳನ್ನು ಅರ್ಥಮಾಡಿಕೊಳ್ಳುವವರಿಲ್ಲದೆ, ಯಾರಲ್ಲಿಯೂ ಹೇಳಿಕೊಳ್ಳಲಾಗದೆ, ಒಳಗೊಳಗೇ ನುಂಗಲಾಗದೆ ತುಂಬು ಕುಟುಂಬದ ನಡುವೆಯೂ ಏಕಾಕಿತನದ ಬಲಿಪಶುವಾಗಿ, ಬಲವಂತದ ಗೂಟಕ್ಕೆ ಬಯಕೆಗಳನ್ನು ಕಟ್ಟಿಹಾಕಿಕೊಂಡು ಅವಳು ಅನುಭವಿಸುವ ಕಿಚ್ಚಿನ ಕಿಡಿಯೋ, ನೋವಿನ ಸೊಲ್ಲೋ ನೇತ್ಯಾತ್ಮಕ, ಇತ್ಯಾತ್ಮಕ ಎರಡೂ ರೀತಿಯಲ್ಲಿ ಕೊನೆಗೂ ಅದು ಹೊರ ಒಸರತೊಡಗುವುದಿದೆ.

ನನ್ನ ಮನೆಯ ಬೆಕ್ಕುಮರಿಗಳನ್ನು ಅಕ್ಕಪಕ್ಕದವರು ನಿಲ್ಲಿಸಿದ್ದ ಬೈಕುಗಳ ಸೀಟುಗಳನ್ನು ಅವು ಹಾಳುಮಾಡುವುದನ್ನು ತಪ್ಪಿಸಲು ಅವರೆಲ್ಲ ಆಫೀಸಿಗೆ ಹೋಗುವ ತನಕ ಕಟ್ಟಿಹಾಕುತ್ತಿದ್ದೆ. ನಂತರ ಅವುಗಳ ಕೊರಳ ಹಗ್ಗವನ್ನು ಕಳಚಿಬಿಟ್ಟಮೇಲೂ ಬಹಳ ಹೊತ್ತಿನ ತನಕ ಅವು ಕೊರಳೊಡ್ಡಿಕೊಂಡೇ ಕೂತಲ್ಲೇ ಕೂತಿರುತ್ತಿದ್ದವು. ಮದುವೆಯೆಂಬ ವ್ಯವಸ್ಥೆಯಲ್ಲಿ ತಮ್ಮ ಮೂಲಭೂತ ಹಕ್ಕು, ಸ್ವಾತಂತ್ರ್ಯದ ರೆಕ್ಕೆಗಳನ್ನು ಕಡಿದುಕೊಂಡ ಎಷ್ಟೋ ಮಹಿಳೆಯರ ಪಾಡೂ ಇದೇ.

ಸುಮಾರು ಮೂವತ್ತು ವರ್ಷಗಳ ಕೆಳಗೆ ಕಡು ಬಡ ಕುಟುಂಬದ ಚೆಲುವೆಯಾದ ಹೆಣ್ಣೊಬ್ಬಳ ಜೊತೆ ಒಬ್ಬ ಸರಕಾರಿ ನೌಕರಿ ಇದೆಯೆಂದು ಸುಳ್ಳು ಹೇಳಿ ಮದುವೆಯಾಗಿದ್ದ. ಅನೇಕ ದುರಭ್ಯಾಸಗಳಿಗೆ ಬಲಿಯಾಗಿದ್ದವನನ್ನು ಸಾಕುವುದು ಹೊರೆಯೆಂದು ಭಾವಿಸಿ ಹೇಗೋ ಮದುವೆಯೊಂದನ್ನು ಮಾಡಿ ಹೊರದಬ್ಬಲು ಅವನ ಕುಟುಂಬದವರು ಯೋಚಿಸಿದ್ದರು. ಅವನೋ ಅನುಮಾನದ ಪಿಶಾಚಿ, ಹೆಂಡಕುಡುಕ. ದುಡಿಮೆ ಮೊದಲಿಲ್ಲ. ಹೆಂಡತಿಯನ್ನು ಹೊರಗೆ ದುಡಿಯಲು ಕಳಿಸಲೂ ಇಲ್ಲ. ಹೊಟ್ಟೆ ಪಾಡಿಗೆ ಅವಳು ಮನೆಯಲ್ಲೇ ಹೊಲಿಗೆ ಮಾಡಿ ಹೊಟ್ಟೆ ತುಂಬಲೊಂದು, ಮಕ್ಕಳನ್ನು ಓದಿಸಲೊಂದು ದಾರಿ ಮಾಡಲು ಹಗಲು ರಾತ್ರಿ ಒಂದು ಮಾಡುತ್ತಿದ್ದರೆ ಆತ ಕುಡಿಯುವುದು ಹೆಂಡತಿಯನ್ನು ಬಡಿಯುವುದು, ಕಂಡ ಕಂಡವರ ಜೊತೆ ಅನುಮಾನಿಸುವುದು.

ಒಮ್ಮೆಯಾದರೂ ಉಂಡೆಯಾ ತಿಂದೆಯಾ? ಹುಷಾರಿಲ್ಲವೇ ಆಸ್ಪತ್ರೆಗೆ ಹೋಗೋಣವೇ? ಎಂದು ಕೇಳುವುದಿಲ್ಲ. ಆರಂಭದಲ್ಲಿ ಗಂಡನನ್ನು ಬಿಟ್ಟವಳನ್ನು ಕೆಟ್ಟದಾಗಿ ನೋಡುವ ಕಾಲವಾಗಿದ್ದರಿಂದ ಗಂಡನನ್ನು ಬಿಟ್ಟು ಸಮಾಜವನ್ನು ಎದುರಿಸಿ ಬದುಕುವ ಛಾತಿ ಅವಳಲ್ಲಿರಲಿಲ್ಲ. ಬಡ ತವರಿನವರು ಮಗಳ ದುಸ್ಥಿತಿಗೆ ಕಣ್ಣೀರು ಹಾಕುವ ಹೊರತು ಸಹಾಯಕ್ಕೆ ಒದಗಲಿಲ್ಲ. ಇಂಥ ಗಂಡನ ಭರವಸೆಯಲ್ಲಿ ಮಕ್ಕಳನ್ನು ಬಿಟ್ಟು ಸಾಯುವಂತೆಯೂ ಇಲ್ಲ. ಹೀಗೆ ಇಪ್ಪತ್ತೈದು ವರ್ಷಗಳನ್ನು ಕಳೆದುಬಿಟ್ಟ ಆಕೆಗೀಗಲೂ ಹಿಂಸೆ ತಪ್ಪಿದ್ದಿಲ್ಲ. ಮೊದಲು ಗಂಡ ಮತ್ತವನ ಮನೆಯವರ ಹಿಂಸೆಯಾದರೆ ಈಗ ಪಟ್ಟಿಗೆ ಮಕ್ಕಳೂ ಸೇರಿಕೊಂಡಿವೆ. ನೀನು ದುಡಿದಿಟ್ಟದ್ದು ಏನು? ಎಲ್ಲಿದೆ? ಎಂದು ಸವಾಲೆಸೆಯುತ್ತಾರೆ. ಹಾಗೆಂದು ಈಗ ಮನೆ ತೊರೆದರೆ ಈ ವಯಸ್ಸಿನಲ್ಲಿ ಹೊಟ್ಟೆ ಹೊರೆಯಲೊಂದು ಕೆಲಸ ಕೊಡುವವರಿಲ್ಲ. ಕೆಲಸ ಮಾಡಲು ತ್ರಾಣ ಮೊದಲಿಲ್ಲ.

ಹೀಗಾಗಿ ಆಕೆ ಆ ಪರಿಸರವನ್ನೇ ಒಪ್ಪಿ ಅಲ್ಲಿಯೇ ಮರವಟ್ಟಿಹೋಗಿದ್ದಾಳೆ. ಮಕ್ಕಳು ದೊಡ್ಡವರಾದ ಕಾಲಕ್ಕಾದರೂ ಆ ಬಂಧೀಖಾನೆಯಿಂದ ಹೊರ ನುಸುಳುವ ಯತ್ನವನ್ನೇ ಮಾಡದ ಆಕೆ ಹಗ್ಗ ಬಿಚ್ಚಿದ ಮೇಲೂ ಕೊರಳೊಡ್ಡಿ ಕೂತ ಬೆಕ್ಕಿನಂತೆ ಬದುಕನ್ನೊಡ್ಡಿ ಕೂತೇ ಇದ್ದಾಳೆ. ನಾಲ್ಕು ಗೋಡೆಗಳ ನಡುವೆ ಮನೆಗೆ ಬಂದವರಲ್ಲಿ ಹೊರ ಜಗತ್ತಿನ ಸುದ್ದಿ ತಿಳಿಯುವ ಅವಳು ಊಹೆಯಿಂದಲೇ ಜಗತ್ತನ್ನು ಅರ್ಥೈಸುತ್ತಾಳೆ. ಒಮ್ಮೊಮ್ಮೆ ಇವಳು ಬೆಳಕಿನಲ್ಲಿದ್ದಾಳೆ ಎನಿಸುತ್ತದೆ. ಒಮ್ಮೊಮ್ಮೆ ಎಂಥ ಕಡುಗತ್ತಲಲ್ಲಿ ಕೊಳೆಯುತ್ತಾಳೆ ಎನಿಸುತ್ತದೆ. ಹೀಗೆ ಕಡು ದಾರುಣವಾಗಿ ಬದುಕುವ ಈಕೆಯನ್ನು ಕಂಡಾಗ ನಾನು ಈ ಕವಿತೆ ಬರೆದಿದ್ದೆ.

ಹಿಟ್ಲರನಿಗಿಂತಲೂ ಕ್ಷುದ್ರನೊಬ್ಬ
ಅವಳ ದೇಶವನ್ನಾಳುತ್ತಾನಂತೆ
ಹಿಟ್ಲರನಿಗಿಂತಲೂ ಕ್ಷುದ್ರರಾದ
ನ್ಯಾಯ ಹೇಳುವವರೂ, ರಕ್ಷಣೆ ನೀಡುವವರೂ
ಅವಳ ದೇಶದ ಊರೂರುಗಳಲ್ಲೂ ಇದ್ದಾರಂತೆ
ಹಿಟ್ಲರನಿಗಿಂತಲೂ ಕ್ಷುದ್ರರು
ಮನೆ ಮನೆಗಳಲೂ ವಾಸಿಸುತ್ತಾರಂತೆ
ಮತ್ತು ಅವರು ಹಿಟ್ಲರ್ ಎಂದೇ ಕರೆಸಿಕೊಳ್ಳುತ್ತಾರಂತೆ
ಇರಬಹುದು ಅನಿಸಿತು ಅವಳನ್ನು ನೋಡಿದಮೇಲೆ
ನಾನೊಬ್ಬ ಪ್ರಜ್ಞಾವಂತ ನಾಗರೀಕಳಾದ ಕಾರಣ
ಸಭ್ಯಸ್ಥರ ಕಾಲನಿಯಲ್ಲಿನ
ಅವಳ ಮನೆಯೆದುರಿನ ಕಸ, ಕೊಳಚೆಯನ್ನು ನೋಡಿ
ನಾಲ್ಕು ಬುದ್ದಿಮಾತು ಹೇಳೋಣವೆಂದು
ಸದಾ ಮುಚ್ಚಿಕೊಂಡೇ ಇರುವ ಆ ಕದವನ್ನು ತಟ್ಟಿದ್ದಾಯ್ತು
‘ಯಾವನನ್ನು ನೋಡಲು ಬೆಳಗಾತ ಈ ನಾಟಕ?’
ಎಂದ ಮೇಲಿಂದ ಹೊಸ್ತಿಲು ತೊಳೆಯುವುದನ್ನೂ
ಕಿಟಕಿ ಬಾಗಿಲು ತೆರೆಯುವುದನ್ನೂ ನಿಲ್ಲಿಸಿದ್ದೇನೆ’
ಎನ್ನುವಾಗ ಅವಳ ನಿಸ್ತೇಜ ಕಣ್ಣುಗಳಿಂದ
ಕೆಂಗಿಡಿಯೊಂದು ಸಿಡಿದು ಹಾರಿಹೋಯ್ತು
ಕೆದರಿದ ಕೂದಲು, ಹರಕು ಮಾಸಲು ನೈಟಿಯ
ಅವಳನ್ನು ನೋಡುವಾಗ
ನಾಲ್ವರು ಅದೃಶ್ಯ ವ್ಯಕ್ತಿಗಳು
ಹೆಣವೊಂದನ್ನು ನಡೆಸಿಕೊಂಡು ಬರುವಂತೆ ಕಂಡಿದ್ದಳು
ನಾನು ಬಹಳ ಜವಾಬ್ದಾರಿಯುತವಾಗಿ
‘ಎಲ್ಲ ಹೆಂಗಸರಂತೆ ಒಂದೊಳ್ಳೆಯ ಸೀರೆ
ಅಥವಾ ಚೂಡಿದಾರವನ್ನಾಗಲೀ ಉಟ್ಟುಕೊಳ್ಳಬಾರದೇ
ಇಂಥ ದೊಡ್ಡ ಮನೆಯೊಳಗಿದ್ದೂ ಇದೇನು ಅಸಹ್ಯ ಅವಸ್ತೆ?’ ಅಂದೆ
‘ಅಗತ್ಯ ವಸ್ತುಗಳನ್ನು ಪೂರೈಸದವರಲ್ಲಿ
ಅಂಗಲಾಚಲಾಗುವುದಿಲ್ಲ
ಸುಳ್ಳು ಲೆಕ್ಕ ತೋರಿ ಚೂರು ಪಾರು ಮಿಗಿಸಿದ
ಸಾಸಿವೆ, ಜೀರಿಗೆ ಡಬ್ಬದ ಹಣದಲ್ಲಿ ಸೀರೆ ಕೊಂಡು
ತವರವರು ಕೊಟ್ಟದ್ದೆಂದು
ಉಟ್ಟು ನಲಿವ ದರ್ದು ನನಗಿಲ್ಲ’
ನಾನುಟ್ಟ ಸೀರೆಯ ಸರಕ್ಕನೆಳೆದು ಬಿಚ್ಚಿದಂತೆ ನಾನು ಬೆಚ್ಚಿದೆ
ನಾಲಿಗೆಯಿಂದಲೇ ರಾಶಿಯಲ್ಲಿನ ಸೌದೆಯೊಂದನ್ನೆತ್ತಿ
ರಪ್ಪನೆ ಬಡಿದಳೋ ಹೇಗೆ!
ನಾನು ತುಸು ತಡೆದು..
‘ಬೇಡ ಬಿಡು. ತಲೆ ಬಾಚಲೊಂದು ಹಣಿಗೆಯೂ ಇಲ್ಲವೇ?’
‘ನೀವು ಹಣಿಗೆಯಂತಹ
ಚಿಲ್ಲರೆ ಮಾತನ್ನಷ್ಟೇ ಆಡಬಲ್ಲಿರಿ
ನಾನು ಸುಂದರವಾಗಿ ಅಲಂಕರಿಸಿಕೊಂಡು
ಅವನನ್ನು ಕಾಯುತ್ತಿದ್ದ ದಿನ
ಕಕ್ಕಸು ರೂಮಿನ ಪಕ್ಕದಲ್ಲೇ ನಿಂತು
ನೆರೆಮನೆಯ ಕೆಲಸದವಳ
ಹೊಲಸು ಸೀರೆಯ ಗಂಟಿನೊಳಗಿದ್ದ ಹೋಳಿಗೆಯ
ಆಗತಾನೇ ಬಚ್ಚಲು ತೊಳೆದ ಅವಳ ಕೊಳಕು ಕೈಯಾರೆ
ಅವನು ತಿನಿಸಿಕೊಂಡದ್ದನ್ನು
ನಾನು ನನ್ನ ಕಣ್ಣಾರೆ ಕಂಡದ್ದನ್ನು ನೀವೇನು ಬಲ್ಲಿರಿ?
ಆ ಬಳಿಕವೇ ಹೀಗೆ ಪ್ರತಿಭಟಿಸುತ್ತಿದ್ದೇನೆಂದು ತಿಳಿಯಿರಿ’
ರಕ್ತ, ಮಾಂಸ ಹೀನ ಕಣ್ಣು ಕಾಯ,
ಬಲಹೀನ ಮೂಳೆಯ ಪಂಜರದೊಳಗಿಂದ
ಚೂಪಾದ ಮಾತುಗಳನ್ನಾಕೆ ತೂರುವುದನು ದಿಟ್ಟಿಸುತ್ತಲಿದ್ದೆ
ನನ್ನ ಪ್ರಜ್ಞಾವಂತ ನಾಗರೀಕತೆ
ಅಪ್ರಯತ್ನಪೂರ್ವಕವಾಗಿ ಪ್ರಶ್ನೆ ಕೇಳುತ್ತಲೇ ಹೋಯ್ತು
‘ನೋಡಿ ಮೇಡಮ್ ಸಂಬಳವಿಲ್ಲದ ದುಡಿಮೆಗೆ
ಹಗಲಿರುಳು ಶಕ್ತಿಮೀರಿ ಗೇಯುತ್ತೇನೆ
ನನ್ನ ಹಕ್ಕಿನ ಊಟವನ್ನು ಹಂಗಿಸಿ ಕೊಟ್ಟ ದಿನಗಳಲ್ಲಿ
ಉಪವಾಸ ಸತ್ಯಾಗ್ರಹ ಹೂಡುತ್ತೇನೆ’
ನನಗೀಗ ಕಿಟಾರನೆ ಕಿರುಚಿಕೊಂಡು ಓಡಿಬಿಡಬೇಕೆನಿಸಿತು
ಆದರೆ ಅವಳು ಮುಂದುವರೆಸಿದ್ದಳು
‘ನಾನು ಕಾಯಿಲೆಬಿದ್ದ ದಿನಗಳಲ್ಲಿ
ಬಾ ಆಸ್ಪತ್ರೆಗೆ ಹೋಗೋಣ,
ನೀನು ಗುಣವಾಗಬೇಕು
ನನಗಾಗಿಯಾದರೂ ನೀನು ಆರೋಗ್ಯವಾಗಿರಬೇಕು
ಎಂದು ನಾನು ಅವನನ್ನು ಅನುನಯಿಸಿ ಕರೆಯುವಂತೆಯೇ
ಅವನೂ ನನ್ನನ್ನು ಕರೆಯುವುದಿಲ್ಲವಾದ್ದರಿಂದ
ನನ್ನನ್ನು ದಯಮಾಡಿ ಆಸ್ಪತ್ರೆಗೆ ಕರೆದೊಯ್ಯಿರಿ
ಎಂದು ಅವನಲ್ಲಿ ಅಂಗಲಾಚದೇ ಮತ್ತು
ನಾನೇ ಎದ್ದು ಆಸ್ಪತ್ರೆಗೆ ಹೋಗದೇ ಪ್ರತಿಭಟಿಸುತ್ತೇನೆ’
ನಿನ್ನ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದ ಮೇಲೆ
ಧ್ವನಿಯೆತ್ತಿ ಪ್ರಶ್ನಿಸಬೇಕಲ್ಲವೇ ನೀನು?
ಎಂದು ನಾನು ಮತ್ತೆ ಕೇಳಿದೆ
‘ಮಲ್ಲಿಗೆ ಮೊಗ್ಗರಳುವ ಸದ್ದಾಲಿಸುವ ಮೌನಿ ನಾನು
ಆಗೊಮ್ಮೆ ಈಗೊಮ್ಮೆ….
ಹುಣ್ಣಿಮೆ ಅಮಾವಾಸ್ಯೆ ಹತ್ತಿರವಾಗಿರಬೇಕು
ಪಾಪ ಹುಚ್ಚು ಕೆದರಿರಬೇಕು
ಎಂದು ದಾರಿಹೋಕ ಪ್ರಜ್ಞಾವಂತ ನಾಗರೀಕರು
ಆಡಿಕೊಳ್ಳುವಷ್ಟೂ ಗಟ್ಟಿಯಾಗಿ ಗಂಟಲು ಹರಿದುಕೊಂಡು….
ಹೇಗೆ ಹಿಟ್ಲರನ ಧೋರಣೆಗೆ ಪ್ರತಿರೋಧವಿತ್ತೋ
ಹಾಗೆ ಇವನ ಧೋರಣೆಗೂ ತಕ್ಕ ಪ್ರತಿರೋಧ ಇದ್ದೇ ಇರುತ್ತದೆ’
ತಾಯೀ ನಿನಗೆ ಮಕ್ಕಳಾದರೂ ಇಲ್ಲವೇ?
ಇದು ನನ್ನ ಸಾಮಾಜಿಕ ಕಳಕಳಿಯ
ಕೊನೆಯ ಪ್ರಶ್ನೆಯಾಗಿತ್ತು
‘ಇದ್ದಾರಲ್ಲ ಮೂವರು ಹಿಟ್ಲರನ ಮರಿಗಳು
ಆದರೆ ಅವನಿಗಿಂತಲೂ ನಾಲ್ಕು ಪಟ್ಟು ಕ್ಷುದ್ರರು’
ನನ್ನಲ್ಲೀಗ ಪ್ರಶ್ನೆಗಳಿರಲಿಲ್ಲ
ಆದರೆ ಅನುಮಾನವೊಂದುಳಿದು
‘ಈ ಹೆಂಗಸು ಕತ್ತಲಿನಲ್ಲಿದ್ದಾಳೋ
ಅಥವಾ ಬೆಳಕಿನೊಳಗೋ’

ಇಂಥ ಎಷ್ಟೋ ಹೆಂಗಸರು ಗಂಡಂದಿರ ಕೂಡ ಜಗಳ ಆಡುವುದನ್ನು, ಬಯ್ಯಲು ತೊಡಗಿದರೆ ನಿರಂತರ ಬೈಯುತ್ತಲೇ ಇರುವುದನ್ನೂ, ಹೊಟ್ಟೆಬಾಕತನವನ್ನೂ, ಕೊಳ್ಳುಬಾಕತನವನ್ನೂ ನೋಡಿದ್ದೇನೆ. ಆದರೆ ಆಕೆಯ ಈ ವರ್ತನೆಗೆ ಕಾರಣವಾದ ಅಂಶಗಳನ್ನು ಶೋಧಿಸಿ ನೋಡುವ ಸಹನೆ ಯಾರಿಗಿದೆಯಿಲ್ಲಿ?

ಎಷ್ಟೋ ಹೆಂಗಸರಲ್ಲಿ ಖರ್ಚಿಗೆ ಕೊಟ್ಟ ಹಣವನ್ನು ಮಿಗಿಸಿ ಸೀರೆ ಕೊಂಡು ತವರಲ್ಲಿ ಕೊಟ್ಟದ್ದೆಂದು ಸುಳ್ಳು ಹೇಳಿ ಉಡುವ ವಿಚಿತ್ರ ನಡವಳಿಕೆಗಳಿವೆ. ಅದರಿಂದ ಅವರಿಗೆ ಯಾವ ಖುಷಿ, ತೃಪ್ತಿ ಸಿಕ್ಕೀತು ಅರಿಯೆ. ಮತ್ತೊಬ್ಬ ಹೆಂಗಸನ್ನು ನೋಡಿದ್ದೆ. ಆಕೆ ಸರಕಾರಿ ಕೆಲಸದಲ್ಲಿರುವ ಪತಿ ಮನೆಗೆ ಬಂದಿದ್ದೇ ತಡ ಗಂಡನ ಜೇಬಿನಿಂದ ದುಡ್ಡು ಹೊಡೆಯುತ್ತಿದ್ದಳು. ಅಚ್ಚರಿಯೆಂದರೆ ಹೀಗೆ ಕದ್ದ ದುಡ್ಡಿನಿಂದ ಆಕೆ ಬೆಳ್ಳಿ ಬಂಗಾರದ ಪೂಜಾ ಪಾತ್ರೆಗಳನ್ನು ಕೊಳ್ಳುತ್ತಿದ್ದಳು. ಕದ್ದ ಹಣದಿಂದ ದೇವರ ಪೂಜೆ ಮಾಡಬಹುದೇ? ಎಂಬೊಂದು ಪ್ರಶ್ನೆ ಹುಟ್ಟಬಹುದು. ನಾನಿಲ್ಲಿ ಬೇರೆಯದೇ ಆಯಾಮದಲ್ಲಿ ಯೋಚಿಸತೊಡಗುತ್ತೇನೆ, ಹೆಣ್ಣೊಬ್ಬಳು ಗಂಡನದೇ ಜೇಬಿನಿಂದ ಕದಿಯುವ ಸಂದರ್ಭ ಏಕೆ ಒದಗಿತು ಎಂದು.

ಇಲ್ಲಿ ನನಗೆ ಒಂದು ಜೋಕು ನೆನಪಾಗುತ್ತದೆ. ಒಬ್ಬ ತನ್ನ ಗೆಳೆಯನಲ್ಲಿ ನನ್ನ ಹೆಂಡತಿ ಮದುವೆಯಾಗಿ ಇಪ್ಪತ್ತೈದು ವರ್ಷಗಳಿಂದಲೂ ಪ್ರತಿದಿನ ಐವತ್ತು ರುಪಾಯಿ ಕೇಳುತ್ತಾಳೆ ಎನ್ನುತ್ತಾನೆ. ಆಗ ಗೆಳೆಯ ಹೌದಾ? ಹಾಗಾದರೆ ನಿನ್ನ ಹೆಂಡತಿ ಆ ಹಣದಿಂದ ಏನು ಮಾಡುತ್ತಾಳೆ ಎಂದು ವಿಚಾರಿಸುತ್ತಾನೆ. ಆಗ ಈತ ‘ಗೊತ್ತಿಲ್ಲ ಒಮ್ಮೆಯೂ ಕೊಟ್ಟು ನೋಡಿಲ್ಲ’ ಎನ್ನುತ್ತಾನೆ. ಹಾಗಾದರೆ ಒಬ್ಬ ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯ ಬೇಡವೇ? ಆಕೆಗೂ ಖರ್ಚು ಇರುವುದಿಲ್ಲವೇ? ಗಂಡನ ದುಡಿಮೆಯಲ್ಲಿ ಆಕೆಗೂ ಪಾಲಿಲ್ಲವೇ? ಇಂದು ಎಷ್ಟೋ ದುಡಿಯುತ್ತಿರುವ ಹೆಣ್ಣುಗಳಿಗೇ ತಮ್ಮ ದುಡಿಮೆಯ ಮೇಲೆ ತಮಗೆ ಹಕ್ಕಿಲ್ಲದಿರುವುದನ್ನು ಅದರ ಮೇಲೆ ಗಂಡ/ ಗಂಡನ ಮನೆಯವರು ಹಕ್ಕು ಚಲಾಯಿಸುವುದನನ್ನು ನೋಡುತ್ತೇವೆ. ಮತ್ತು ಇಂಥಲ್ಲಿ ಅವಳಿಗೆ ಹಣದ ಅವಶ್ಯಕತೆ ಎದುರಾದರೆ ಏನಾಗಬಹುದು? ಕತ್ತೆಯಂತೆ ಒಳಹೊರಗೂ ದುಡಿವ ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಕೊಡದಿರುವುದು ಅವಳ ಸ್ವಭಾವದಲ್ಲಿ ಯಾವ ತೆರನ ಬದಲಾವಣೆ ತರಬಹುದು?

ನೌಕರಿಯಲ್ಲಿರುವ ಗಂಡಸರ ಮುಗ್ಧ ಹೆಂಡತಿಯರು ಗಂಡ ನಿವೃತ್ತನಾಗುವ ಮೊದಲೇ ಯಾರದ್ದೋ ಸಹಾಯದೊಂದಿಗೆ ಗಂಡನನ್ನು ಮುಗಿಸಿ ಅನುಕಂಪದ ಆಧಾರದ ನೌಕರಿಯನ್ನೂ ಪೆನ್ಷನನ್ನೂ, ಗಂಡನ ಸಾವಿನ ನಂತರ ಬರಬೇಕಿದ್ದ ಇನ್ಶೂರೆನ್ಸ್ ನಂತಹ ಲಕ್ಷ ಲಕ್ಷ ಮೊತ್ತದ ಫಂಡುಗಳನ್ನೂ ಪಡೆದುಕೊಂಡು ಹಣದ ಸರಿಯಾದ ನಿರ್ವಹಣೆಯನ್ನೂ ತಿಳಿಯದೆ, ಎಲ್ಲವನ್ನೂ ಕಳೆದುಕೊಂಡು ಬಡ್ಡಿ ಸಾಲ ಮಾಡಿಕೊಂಡು ಬಡ್ಡಿ ಕಟ್ಟಲೂ ಆಗದಷ್ಟು ದಿವಾಳಿಯಾದ ಕೆಲವು ಹೆಂಗಸರನ್ನು ನೋಡಿದ್ದೆ. ಇಲ್ಲಿ ಗಂಡನನ್ನು ಯಾರದ್ದೋ ಸಹಾಯದ ಮೂಲಕ ಕೊಲ್ಲುವ ಹಂತಕ್ಕೂ ಹೋಗುತ್ತಾಳೆಂದರೆ ಈ ಪ್ರವೃತ್ತಿಗೆ ಹಣ ಮಾತ್ರ ಕಾರಣ ಎಂದೆನಿಸುವುದಿಲ್ಲ. ಎದೆಯೊಳಗೆ ಸುಪ್ತವಾಗಿ ಮಡುಗಟ್ಟಿದ್ದ ಪ್ರತೀಕಾರ ಹೀಗೆ ಮಾಡಲು ಕಾರಣವಾಗಿದ್ದಿರಬಹುದು ಎಂದೆನಿಸುತ್ತದೆ.

ಆಯೆಷಾ ಎಂಬ ಮಲ್ಲಿಗೆಯರಳಿನಂತಹ ಹುಡುಗಿಯೊಬ್ಬಳಿದ್ದಳು. ಮದುವೆಯಾದಾಗಿನಿಂದ ಅವಳದು ಒಂದೇ ಸಮಸ್ಯೆ; ತನಗೆ ಹುಷಾರಿಲ್ಲ, ಬಿಳಿಸೆರಗು ಎಂದು ನಿತ್ಯ ಆಸ್ಪತ್ರೆಗೆ ತಿರುಗುವುದು. ಯಾವ ಕಾಯಿಲೆ ಇಲ್ಲವೆಂದು ರಿಪೋರ್ಟ್ ಬಂದಾಗ ಈ ವೈದ್ಯರೇ ಸರಿಯಿಲ್ಲವೆಂದು ಬೇರೊಂದು ವೈದ್ಯರನ್ನು ಅರಸಿ ಹೋಗುವುದು, ದೇವರು ದಿಂಡರ ದರ್ಶನ ಮಾಡುವುದು ಹೀಗೆ ಪ್ರತಿ ನಡೆಯಲ್ಲೂ ತಪ್ಪು ಹುಡುಕುವ ಪತಿಯ ಕುಟುಂಬದವರೆದುರು ಅನುಕಂಪ ಗಿಟ್ಟಿಸಲು ಈ ನೆವ ಹೂಡುತ್ತಿದ್ದಳಾಕೆ.

ಕೊನೆಗೊಮ್ಮೆ ಒಂದು ದಿನ ವಿಷ ಕುಡಿದು ಸತ್ತಳು!

ಹೀಗೆ ಒಂಟಿತನ, ಕೀಳರಿಮೆಗೆ, ಖಿನ್ನತೆಗೆ ಬಲಿಯಾಗುವ, ತಮಗೇನೋ ವಾಸಿಯಾಗದ ಕಾಯಿಲೆಯಿದೆಯೆಂದು ಭ್ರಮಾಧೀನರಾಗುವ ಹೆಂಗಸರೆಷ್ಟೋ ಈ ಚೌಕಟ್ಟಿನ ಒಳಗೆ ಸಿಗುತ್ತಾರೆ. ಇಂಥ ದುರ್ಬಲ ಮನಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುವ ವೈದ್ಯರೂ ಇದ್ದಾರೆ. ಇತ್ತೀಚೆ ಗರ್ಭಕೋಶಕ್ಕೇ ಕತ್ತರಿ ಹಾಕಿ ಹಣ ಮಾಡಿಕೊಂಡ ಪ್ರಸಂಗಗಳನ್ನು ತಾಜಾ ಉದಾಹರಣೆಯಾಗಿ ನಾವು ಕಂಡಿದ್ದೇವೆ. ಮೈಮೇಲೆ ದೆವ್ವ ಬರುವ, ಮಾಟ ಮಂತ್ರಕ್ಕೆ ಬಲಿಯಾಗಿದ್ದೇನೆಂದು ಭ್ರಮಿಸುವ, ನೂರೆಂಟು ಹರಕೆ, ಪೂಜೆ, ವ್ರತಗಳಲ್ಲೇ ಮುಳುಗಿಹೋಗುವ ಮಹಿಳೆಯರೂ ಇದ್ದಾರೆ. ಅವರನ್ನು ವಂಚಿಸುವ ಜೋತಿಷಿ, ಮಾಟ ಮಂತ್ರಗಾರರೂ ಇದ್ದಾರೆ.

ಎಷ್ಟೋ ತುಂಬಿದ ಕುಟುಂಬಗಳಲ್ಲಿ ಎಲ್ಲವಿದ್ದೂ ಹೆಂಗಸರು ಈ ಕೌಟುಂಬಿಕ ಚೌಕಟ್ಟಿನೊಳಗೆ ನಿಲುಕುವ ಗಂಡಸರೊಟ್ಟಿಗೆ ಸಂಬಂಧ ಬೆಳೆಸುವುದಿದೆ. ಬಹಳ ಸಲ ಈ ಸಂಬಂಧವನ್ನು ಅನೈತಿಕವೆಂದೂ, ಕಾಮದಾಸೆಗೆ ಬಲಿಬಿದ್ದಳೆಂದೂ ತಪ್ಪಾಗಿ ಅರ್ಥೈಸಲಾಗುತ್ತದೆ. ತನ್ನ ಒಳಗುದಿಗಳನ್ನು ಅರ್ಥಮಾಡಿಕೊಳ್ಳಬಹುದಾದ ಒಂದೇ ಒಂದು ಹೃದಯ, ಹಿಡಿ ಪ್ರೀತಿಯನ್ನು ಉಣಿಸುವವರಿಲ್ಲವೆನಿಸುವಾಗ ಇಂಥದ್ದು ಘಟಿಸಿಬಿಟ್ಟಿರುತ್ತದೆ. ಆದರೆ ಇಂಥ ಹೆಣ್ಣುಗಳ ಈ ದೌರ್ಬಲ್ಯದ ಲಾಭ ಪಡೆಯಲೇ ಪ್ರೇಮದ ಪೋಷಾಕು ತೊಟ್ಟ ಗಂಡು ಪಡೆ ಆಕೆಯ ದೇಹ ಸಹಿತ ಹಣ, ಒಡವೆ, ಮಾನ, ಪ್ರಾಣಗಳನ್ನೂ ನುಂಗಿ ನೊಣೆಯುವುದಿದೆ.

ಗಂಡಸರ ರಟ್ಟೆ ಗಟ್ಟಿ ಹೆಂಗಸರ ನಡು ಗಟ್ಟಿ ಎನ್ನುವ ಹುಸಿಯೊಂದನ್ನು ಕೇಳಿದ್ದೇನೆ. ಹಾಗೆಯೇ ಸೊಂಟ ಬಾಗಿಹೋದ ಮುಪ್ಪಾನು ಮುದುಕಿಯರೂ ನೆನಪಿನಲ್ಲಿದ್ದಾರೆ. ಹೆತ್ತೂ ಹೆತ್ತೂ, ಹೆರಿಗೆಯ ಉಪಚಾರಕ್ಕೂ ನಾಲ್ಕು ದಿನ ವಿಶ್ರಾಂತಿ ಪಡೆಯುವ ಸವಲತ್ತಿಲ್ಲದ ಕುಟುಂಬಗಳಲ್ಲಿ ಗದ್ದೆನಟ್ಟಿ, ಕುಯಿಲು ಮಾಡುತ್ತ, ನೆಲದಲ್ಲಿದ್ದ ಒಲೆಯ ಮುಂದೆ ಬಾಗಿ ಅಡುಗೆ ಬೇಯಿಸುತ್ತ ಬದುಕನ್ನು ತೇಯ್ದು ಸೊಂಟವು ಬಾಗಿಯೇ ಹೋದ ಆ ತಾಯಿಯರನ್ನು ನೋಡುವಾಗ ಅವೆಷ್ಟು ದಹಿದಹಿಸಿ ಬತ್ತಿಹೋದ ಅಗ್ನಿಪರ್ವತಗಳಿದ್ದಾವು ಆ ಎದೆಗೂಡುಗಳಲ್ಲಿ ಎಂದು ಕರುಳಲ್ಲಿ ಸಂಕಟ ಬುಗಿಲೇಳುತ್ತದೆ.

ಅವಳು ಅಡುಗೆ ಮಾಡುತ್ತಾಳೆ
ಬೆಳಗಿಗಾಗಿ ತಿಂಡಿ
ಮಧ್ಯಾಹ್ನಕ್ಕೆ ಊಟ
ಮತ್ತು ರಾತ್ರಿಯಡುಗೆ
ಅವಳು ಅಡುಗೆ ಮಾಡುತ್ತಾಳೆ
ಶುಚಿ ರುಚಿಯಾಗಿ
ಸಮಯಕ್ಕೆ ಸರಿಯಾಗಿ
ಎಲ್ಲ ದಿನಸು ಇರುವಾಗಲೂ
ಏನೂ ಇಲ್ಲದಿರುವಾಗಲೂ
ಮಗನಿಗೆ ಇಷ್ಟವಿಲ್ಲದ್ದು
ಮಗಳಿಗೆ ಇಷ್ಟವಾದದ್ದು
ಗಂಡನಿಗೆ ಬೇಕಿದ್ದದ್ದು
ಎಲ್ಲ ಗಮನದಲ್ಲಿಟ್ಟು
ಅವಳು ಅಡುಗೆ ಮಾಡುತ್ತಾಳೆ
ಹಬ್ಬದ ದಿನ
ನೆಂಟರು ಬಂದ ದಿನ
ಹೆಚ್ಚು ಹೆಚ್ಚು ನಮೂನೆಯ
ಹೆಚ್ಚು ಹೆಚ್ಚು ಅಡುಗೆಯ
ಹೆಚ್ಚು ಹೆಚ್ಚು ರುಚಿಯಾಗಿ
ಕಡಿಮೆ ಅವಧಿಯಲ್ಲಿ
ಮಾಡಿಹಾಕುತ್ತಾಳೆ
ಅವಳು ಅಡುಗೆ ಮಾಡುತ್ತಾಳೆ
ಅವನು ಉಣ್ಣುವ ಅವಸರದಲ್ಲಿ
ಅಡುಗೆ ರುಚಿಕಟ್ಟಾಗಿದೆ ಎನ್ನದಿದ್ದರೂ
ಯಾವುದೋ ತಲೆಬಿಸಿಯಲ್ಲಿ
ರುಚಿ ಕೆಟ್ಟುಹೋಗಿದೆ ಎಂದು ಬಯ್ದರೂ
ಮತ್ತವಳು ಅಡುಗೆ ಮಾಡುತ್ತಾಳೆ
ಎಲ್ಲರ ಊಟವಾದ ಮೇಲೆ ಉಣ್ಣುತ್ತಿರುವುದಕೂ
ನೆನ್ನೆಯ ಉಳಿದ ತಂಗಳು
ಚೆಲ್ಲಕೂಡದೆಂದು ತಿನ್ನುತ್ತಿರುವುದಕೂ
ಎರಡು ತುತ್ತು ಬಾಯಿಗಿಡುವುದಕ್ಕಿಲ್ಲ
ಕೆಲಸವೊಂದ ಜ್ಞಾಪಿಸಿ
ಎಬ್ಬಿಸಿಬಿಡುವುದಕೂ ತುಸುವೂ ಬೇಸರಿಸದೆ
ಅವಳು ಅಡುಗೆ ಮಾಡುತ್ತಾಳೆ
ರಜೆಯೆಂಬುದ ಕಂಡು ಕೇಳರಿಯದ
ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ
ಹಿಂದೆಯೂ ಮಾಡುತ್ತಿದ್ದಳು
ಈಗಲೂ ಮಾಡುತ್ತಾಳೆ
ಮುಂದೆಯೂ ಮಾಡುತ್ತಲೇ ಇರುತ್ತಾಳೆ
ಒಂದು ಸುದೀರ್ಘ ತಪಸ್ಸಿನಂತೆ
ಅಡುಗೆಯ ಕುರಿತೇ ಯೋಚಿಸುತ್ತಾಳೆ.
ಅಡುಗೆಯ ಕುರಿತೇ ಓದುತ್ತಾಳೆ
ಅಡುಗೆಯದೇ ಟಿವಿ ಶೋಗಳನ್ನು
ಎಡಬಿಡದೆ ನೋಡುತ್ತಾಳೆ
ಎಲ್ಲವನ್ನೂ ಕಲಿಯುತ್ತಾಳೆ
ಎಲ್ಲವನ್ನೂ ಮಾಡಿ ಉಣಬಡಿಸುತ್ತಾಳೆ
ಅಡುಗೆ ಮಾಡುತ್ತಾಳವಳು
ಆರೋಗ್ಯವಾಗಿ ಇರುವಾಗಲೂ
ಇಲ್ಲದಿರುವಾಗಲೂ
ಉಸಿರು ನಿಲ್ಲುವ ವರೆಗೂ
ಮತ್ತು…
ಅವಳು ಅಡುಗೆ ಮಾಡುತ್ತಾಳೆ
‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’
ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ
ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ

ನಮ್ಮ ತಾಯಿ ಈ ತನಕ ಇಂಥದ್ದು ಬೇಕು ಎಂದು ಎಂದಾದರೂ ಬಾಯಿಬಿಟ್ಟು ಕೇಳಿದವಳಲ್ಲ ಎಂದು ಬೀಗುವ ಎಷ್ಟೋ ಮಂದಿ, ಎಂದಾದರೂ ತಾಯಿಗೆ ಏನು ಬೇಕೆಂದು ಅರಿತು ಕೊಟ್ಟದ್ದಿರಬಹುದೇ? ಹಾಗೆ ಕೇಳಿದಾಗಲೂ ಆಕೆ ‘ನನಗೇನೂ ಬೇಡ’ ಎಂದು ಹೇಳುವ ತನಕ ತಡ ಮಾಡಬೇಡಿ, ಆಕೆಯ ಆಸೆ, ಕನಸುಗಳು ಸಾಯುವ ಮೊದಲೇ ಆಕೆಯ ಸುಪ್ತ ಮನದ ಬಯಕೆಗಳನ್ನು ಅರಿಯುವ ಯತ್ನ ಮಾಡಿ ಎಂದು ಕೂಗಿ ಕೂಗಿ ಹೇಳಬೇಕೆನಿಸುತ್ತದೆ ನನಗೆ. ಇಂಥದ್ದೇ ತಾಯಿಯೊಬ್ಬರಿಗೆ ಅಚಾನಕ್ಕಾಗಿ ತವರಿನ ಆಸ್ತಿಯ ಒಂದಷ್ಟು ಹಣ ಅನಿರೀಕ್ಷಿತವಾಗಿ ಬಂದಿತು. ಈ ಸುದ್ದಿ ತಿಳಿಯುತ್ತಲೇ ಇಷ್ಟು ಕಾಲವೂ ತನಗೇನೂ ಬೇಡವೆಂದು ನಿರಾಕರಿಸುತ್ತಿದ್ದ ತಾಯಿ ಆ ಹಣದಲ್ಲಿ ಒಂದು ಪೈಸೆಯನ್ನೂ ಯಾರಿಗೂ ಕೊಡುವುದಿಲ್ಲವೆಂದೂ ಚಿನ್ನದ ಬಳೆ ಮಾಡಿಸಿಕೊಳ್ಳುವೆನೆಂದೂ ಹೇಳತೊಡಗಿದರು. ಮಕ್ಕಳು ಇವರಿಗ್ಯಾಕೆ ಕೇಡುಗಾಲಕ್ಕೆ ಈ ಬುದ್ದಿ ಬಂತೋ ಎಂದು ಮಿಕಿ ಮಿಕಿ ನೋಡತೊಡಗಿದರು. ಆದರೆ ತಾನು ಹಾಸಿಗೆ ಹಿಡಿವ ಕಾಲಕ್ಕೆ ತನ್ನನ್ನು ನೋಡಿಕೊಳ್ಳುವವರಾರು? ಈ ಚಿನ್ನದಾಸೆಗಾಗಿಯಾದರೂ ಯಾರೂ ತನ್ನ ಸೇವೆ ಮಾಡಿಯಾರೆಂಬ ಆಕೆಯೊಳಗೆ ಹೂತು ಕೂತಿದ್ದ ಭಯವೇ ಆಕೆಯ ಆ ದಿಢೀರ್ ವರ್ತನೆಗೆ ಕಾರಣವಾಗಿತ್ತು. ಅಂಥ ಅಭದ್ರತೆಗೆ ದೂಡಿದ ತಮ್ಮ ತಪ್ಪು ಪರಿವಾರಕ್ಕೆ ಕಡೆಗೂ ಅರ್ಥವೇ ಆಗುವುದಿಲ್ಲವೆಂದರೆ!

ಹೀಗೆ ಕುಟುಂಬವೆಂಬ ಚೌಕಟ್ಟಿನೊಳಗೆ ಗೃಹಿಣಿಯಾಗಿ ಬಂಧಿಯಾದವಳ ಮುಗಿಯದ ಒಗಟಿನಂಥ ಕಥೆಗಳಿವೆ ಮತ್ತು ಇದನ್ನು ಓದುವ ಯತ್ನವನ್ನೇ ಮಾಡದೆ ‘ಹೆಣ್ಣಿನ ಮನಸ್ಸು ಅರಿತವರಿಲ್ಲ’ ಎಂದು ಸಾರಾಸಗಟು ತಳ್ಳಿಹಾಕುವವರಷ್ಟೇ ಇಲ್ಲಿದ್ದಾರೆ.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 6 days ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 week ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 2 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  3 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  4 weeks ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...