Share

ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…
ಕಾದಂಬಿನಿ ಕಾಲಂ

 

 

 

 

 

 

 

 

 

 

ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.

 

ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ಪ್ರೇಮದ ವಸಂತಕಾಲವೊಂದು ಅರಳಿ ನಿಗಿನಿಗಿ ಹೊಳೆದಂತೆ ಕಾಣತೊಡಗಿತ್ತು. ಊರಿನ ಅರೆಬರೆ ಓದಿಕೊಂಡು ಮನೆಯಲ್ಲಿ ಕೂತ, ಹೈಸ್ಕೂಲು, ಕಾಲೇಜು ಓದುತ್ತಿದ್ದ, ವಿವಾಹಿತ ಹೆಣ್ಣುಮಕ್ಕಳೆಲ್ಲ ಈ ನಿಗಿಗುಡುವ ಬೆಂಕಿಗೆ ತಮ್ಮನ್ನು ತಾವೇ ಒಡ್ಡಿಕೊಂಡು ಸುಟ್ಟುಕೊಳ್ಳುವ ಪತಂಗಗಳಂತೆ ಮನಸ್ಸನ್ನು ಒಂದೇ ಸಮನೆ ಕಾಡತೊಡಗಿದ್ದರು.

ಈ ಪ್ರೇಮದ ನಶೆಯೇರಿಸಿಕೊಂಡ ಹೆಣ್ಣುಮಕ್ಕಳಿಗೆ ಜಗದ ಪರಿವೆಯೇ ಇಲ್ಲದಿದ್ದರೆ, ಅವರ ಪೋಷಕರಿಗೆ ಇದ್ಯಾವುದರ ಖಬರೇ ಇದ್ದಂತಿರಲಿಲ್ಲ. ಬಾಕಿಯವರಿಗೆ ಇದು ತಮಾಷೆ, ಹೊಟ್ಟೆಕಿಚ್ಚು, ಕುಹಕ, ಚಾಡಿಮಾತು, ಊಹಾಪೋಹ, ಮೋಜಿನ ಹರಟೆ, ಕುತಂತ್ರಗಳಿಗೆ ವಸ್ತುವಾಗಿದ್ದಿತು.

ಹೌದು. ಆ ತರುಣರು ಇದ್ದದ್ದೇ ಹಾಗೆ. ಆರಡಿ ದಾಟಿದ ಎತ್ತರ, ಸದೃಢ ಕಾಯ, ಕೆಂಪನೆ ಮೈಬಣ್ಣ, ಮತ್ತು ಚಂದನೆಯ ಉಡುಗೆ, ಕೈತುಂಬ ಹಣ. ಮೇಲಾಗಿ ವಿದ್ಯಾವಂತ ತರುಣರು. ತರುಣಿಯರೆದೆಯಲ್ಲಿ ಬೆಂಕಿ ಹೊತ್ತಿಕೊಳ್ಳಲು ಇನ್ನೇನು ಬೇಕು? ಆಗಂತುಕರಲ್ಲಿ ಮೂಡುವ ಕುತೂಹಲವೂ ಈ ಕಿಚ್ಚಿಗೆ ಇಂಧನವಾದದ್ದಿದೆ. ಹೀಗೆ ಮೋಹದ ಉನ್ಮತ್ತ ಬಿರುಗಾಳಿಯೊಂದು ಹೆಣ್ಣುಗಳೆದೆಯಲ್ಲಿ ಹಾಯುವಾಗ ಕಿಚ್ಚಿನ ಕಿಡಿಗೆ ಧಗ್ಗನೆ ಬೆಂಕಿಹೊತ್ತಿ ಅವರ ನಿದ್ದೆ, ವಿವೇಚನೆಗಳೆಲ್ಲ ಹಾರಿಹೋಗಿದ್ದವು. ಅವರು ಕನಸುಗಳ ಹುಚ್ಚು ಅಲೆಗಳಲ್ಲಿ ದಿಕ್ಕು ದೆಸೆ ಮರೆತು ತೇಲತೊಡಗಿದ್ದರು. ಆ ದಿನಗಳಲ್ಲಿ ಮನೆಮನೆಗಳಲ್ಲಿ ಬ್ಲ್ಯಾಕ್ ಅಂಡ್ ವೈಟ್ ಟಿವಿಯನ್ನು ಪಕ್ಕಕ್ಕೆ ಸರಿಸಿ ಕಲರ್ ಟೀವಿ ಬಂದು ಕೂರತೊಡಗಿತ್ತು. ಇದು ಪ್ರೇಮಿಗಳ ಕನಸಿಗೆ ರಂಗು ತುಂಬಿದರೆ ಎಸ್ಟಿಡಿ ಬೂತ್ ಗಳಲ್ಲಿ ಮಾತ್ರವಿದ್ದ ಲ್ಯಾಂಡ್ ಲೈನ್ ನಿಧಾನವಾಗಿ ಮನೆ ಮನೆಯ ಸಂಪರ್ಕ ಪಡೆಯತೊಡಗಿ ಪ್ರೇಮಿಗಳ ಎದೆದನಿಯ ಸಂದೇಶವಾಹಕವಾಗತೊಡಗಿತು.

ನಮ್ಮ ಎರಡೂ ಓಣಿಗಳಲ್ಲಿ, ನಾಯ್ಡು ಎಂಬ ಆಂಧ್ರದ ಯುವಕನಿದ್ದ ಮತ್ತು ಕೆಲ ಕೇರಳಿಗರಿದ್ದರು. ನಮ್ಮದೊಂದೇ ಕನ್ನಡಿಗರ ಮನೆ. ಇನ್ನುಳಿದವರೆಲ್ಲ ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಅಸ್ಸಾಂ ರಾಜ್ಯದವರು. ಇವರಲ್ಲಿ ಬಹುತೇಕರು ಅವಿವಾಹಿತ ತರುಣರು. ಕೆಲವರು ವಿವಾಹಿತರಾದರೂ ಪತ್ನಿ, ಮಕ್ಕಳನ್ನು ತಮ್ಮ ಊರುಗಳಲ್ಲೇ ಬಿಟ್ಟುಬಂದಿದ್ದರು. ಹೆಂಡಿರನ್ನು ಜೊತೆ ಕರೆದುಕೊಂಡು ಬಂದವರೂ ಇದ್ದರು. ಅಂಥವರಿಗೆ ಸಿಂಗಲ್ ಮನೆಗಳನ್ನು ವಾಸಕ್ಕೆ ಕೊಡಲಾಗಿತ್ತು. ಉಳಿದವರೆಲ್ಲ ಒಂದೊಂದು ಮನೆಯಲ್ಲಿ ಐದಾರು ಯುವಕರು ಒಟ್ಟೊಟ್ಟಾಗಿ ಇರುತ್ತಿದ್ದರು. ಎಲ್ಲರಿಗೂ ಊಟಕ್ಕೆ ಮೆಸ್ ಇತ್ತು. ಈ ಯುವಕರಿಗೆ, ಹಣ, ಕುಡಿತ, ಸೌಕರ್ಯಗಳು, ಮೋಜು ಮಸ್ತಿಗೆ ಬೇಕಾದುದೆಲ್ಲವೂ ಇತ್ತು, ಸಂಗಾತಿಯ ಕೊರತೆಯೊಂದುಳಿದು. ಅವರ ಕಣ್ಣುಗಳು ಕಾಡುಹೂಗಳಂತೆ ಬಿರಿದು ಪರಿಮಳಿಸತೊಡಗಿದ್ದ ಈ ಹೆಣ್ಣುಗಳ ಕಡೆಗೆ ತಮ್ಮ ಮೋಹಕಾಂತದ ನೋಟದ ಬಲೆಯ ಹರವಿ ಕಾಯುತ್ತಿದ್ದರೆ, ಹುಲ್ಲೆಮರಿಗಳೇ ಜಿಗಿಜಿಗಿದು ಪುಟಿಪುಟಿದು ಅದರಲ್ಲಿ ಎಡವಿ ಬೀಳಲು ಪೈಪೋಟಿಯೇ ಶುರುವಾಗಿತ್ತು. ಹೀಗಿರುವಾಗ ವಿವಾಹಿತರಾಗಿದ್ದು ತಮ್ಮ ಬಿಳಿತೊಗಲಿನ ಸುಂದರಾಂಗಿ ಪತ್ನಿಯರನ್ನು ಜೊತೆಯಲ್ಲೇ ಇರಿಸಿಕೊಂಡ ಪುರುಷರೂ ಈ ಹುಲ್ಲೆಗಳನ್ನು ತಮ್ಮ ತೋಳುಗಳಲ್ಲೇ ಕೆಡವಿಕೊಳ್ಳಲು ಹಿಂದೇಟು ಹಾಕಲಿಲ್ಲ.

ನನ್ನ ಮನೆಗೆ ರತ್ನಿಯೆಂಬ ಹುಡುಗಿ ಹಾಲು ಕೊಡಲು ಬರುತ್ತಿದ್ದಳು. ತುಸು ಕಪ್ಪಾದರೂ ದುಂಡು ದುಂಡು ಮೈಯ ಮುದ್ದು ಹುಡುಗಿಯವಳು. ವಯಸ್ಸಿನಲ್ಲಿ ನನಗಿಂತ ಒಂದೆರಡು ವರ್ಷಕ್ಕೆ ದೊಡ್ಡವಳು. ಈ ಪಂಜಾಬಿ ಮಹಿಳೆಯರು ಧರಿಸುತ್ತಿದ್ದ ಪಂಜಾಬಿ ಸೂಟ್ ಹೊಲಿದುಕೊಡುವವರಿಲ್ಲವೆಂದೂ ಒಂದೇ ಒಂದು ಡ್ರೆಸ್ ಹೊಲಿದುಕೊಡಬೇಕೆಂದೂ ಕಾಟ ಕೊಟ್ಟು ಅಂತೂ ನಾನು ಹೊಲಿದುಕೊಟ್ಟಿದ್ದೆ. ಅಷ್ಟರೊಳಗೆ ಹತ್ತಿರದ ನಗರವೊಂದಕ್ಕೆ ಹೋಗಿ ತನ್ನ ತಲೆಗೂದಲನ್ನು ಕತ್ತರಿಸಿಕೊಂಡು ಮಾಲಾಶ್ರೀ ಕಟಿಂಗ್ ಎಂದು ಬೀಗುತ್ತ ಬಂದ ಅವಳು ಪಂಜಾಬಿ ಸೂಟ್ ಧರಿಸಿ ಇದೇ ಪಂಜಾಬಿ ಮಹಿಳೆಯರೆದುರು ತಿರುಗುತ್ತ ತನ್ನ ಕನಸಿನ ಚೆಲುವನ ಹುಡುಕಾಟದಲ್ಲಿ ತೊಡಗಿದ್ದಳು. ಕಾರಣವಿಲ್ಲದೆಯೂ ಪೊಳ್ಳು ನೆವ ಹಿಡಿದು ನನ್ನ ಮನೆಗೆ ಆಕೆ ಬರುತ್ತಿದ್ದಳು. ನನ್ನ ಮನೆಗೆ ಬರುವ ಈ ತರುಣರ ಕಣ್ಣಿಗೆ ಹೇಗಾದರೂ ಕಾಣಿಸಿಕೊಳ್ಳುವ ಉದ್ದೇಶ ನಮಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ನಾವು ನಾಜೂಕಿನಲ್ಲಿ, ಈ ಮೋಹದ ಕುದುರೆಯೇರಿದರೆ ಆಗುವ ಅಪಾಯವನ್ನು ಹೇಳುತ್ತಿದ್ದೆವಾದರೂ ಅವಳು ಕೇಳುವ ಸ್ಥಿತಿಯಲ್ಲಾದರೂ ಎಲ್ಲಿದ್ದಳು? ರತ್ನಿ ನನ್ನಲ್ಲಿ ಪಂಜಾಬಿ ಸೂಟ್ ಹೊಲಿಸಿಕೊಂಡು ಹೋದ ಕೆಲವೇ ದಿನಗಳಲ್ಲೇ ಊರಿನ ಬಹುತೇಕ ಹೆಣ್ಣುಮಕ್ಕಳೆಲ್ಲ ಪಂಜಾಬಿ ಸೂಟಲ್ಲಿ ರಂಗಾಗಿ ತಿರುಗಾಡಹತ್ತಿದ್ದರು. ಈ ಊರಿನ ಹೆಣ್ಣುಮಕ್ಕಳಿಗೆ ಹಿಂದಿ ಬರುತ್ತಿರಲಿಲ್ಲವಾದರೆ, ಈ ಹೊರರಾಜ್ಯದವರಿಗೆ ಕನ್ನಡ ಬರುತ್ತಿರಲಿಲ್ಲ. ಅವರನ್ನು ಕೂಡಿಸುತ್ತಿದ್ದುದು ಮೋಹದ ಭಾಷೆಯೊಂದೆ.

ರತ್ನಿ, ರತ್ನಿಯ ಅಕ್ಕ, ರತ್ನಿಯ ಗೆಳತಿಯರು ನಾ ಮುಂದು ತಾ ಮುಂದು ಎಂಬಂತೆ ಒಬ್ಬರಿಗಿಂತ ಒಬ್ಬರು ಚೆಲುವೆಯರಾಗಿ ಬಿರಿದು ಮುಂಜಾನೆಯ ಜಾಗಿಂಗ್, ಸಂಜೆಯ ವಾಕ್, ರಾತ್ರಿಯ ಗಾಳಿಸೇವನೆ ಎಲ್ಲವನ್ನೂ ನಮ್ಮ ಬೀದಿಯಲ್ಲೇ ಮಾಡುತ್ತಾ, ಈ ಗಂಡಸರೂ ಅದನ್ನೇ ಕಾಯುತ್ತಾ, ಚೆಲ್ಲು ನಡೆ, ಹುಚ್ಚುನಗೆ, ವಾರೆನೋಟ, ಕಣ್ಣ ಭಾಷೆ, ಪಿಸುಮಾತು ನೋಡಿದಷ್ಟೂ ಇತ್ತು, ಕೇಳಿದಷ್ಟೂ ಇತ್ತು.

ಈಗ ನಮ್ಮ ಮನೆಗೆ ರತ್ನಿಯ ಜೊತೆ ಇನ್ನಷ್ಟು ಹುಡುಗಿಯರು ಏನೋ ನೆವ ಹೂಡಿ ಬರತೊಡಗಿದ್ದರು. ಹಾಗೆ ಬಂದವರು ಕಾರಣವಿಲ್ಲದೆ ಈ ತರುಣರ, ಹೆಸರು, ಊರು ಇತ್ಯಾದಿ ಮಾಹಿತಿ ಪಡೆಯಲು ಇನ್ನಿಲ್ಲದಂತೆ ಯತ್ನಿಸುತ್ತಿದ್ದರು. ಸ್ವಲ್ಪ ಸಲುಗೆಯಿಂದ ಮಾತಾಡುವ ಹಂತಕ್ಕೆ ಬಂದಾಗಂತೂ ಯಾವ ಯಾವ ಹುಡುಗಿ/ಹೆಂಗಸು ಯಾರು ಯಾರ ಪ್ರಿಯತಮೆಯರೆಂದೂ, ಅವರು ಕೊಟ್ಟದ್ದು, ತೆಗೆದುಕೊಂಡದ್ದು, ಎಲ್ಲೆಲ್ಲಿ ಸಿಕ್ಕಿಬಿದ್ದದ್ದು ಎಂಬೆಲ್ಲ ವಿವರಗಳನ್ನೂ ಈರ್ಷ್ಯೆಯಿಂದ ಹೇಳತೊಡಗಿದ್ದರು. ನಮಗೆ ನಮ್ಮ ಈ ಯುವಕರ ಕುರಿತು ಚೆನ್ನಾಗಿಯೇ ಗೊತ್ತಿತ್ತು. ನಾಳೆ ಈ ಎಲ್ಲ ಹುಡುಗಿಯರೂ ಮೋಸದ ಕಳ್ಳುಸುಬಿಗೆ ಬೀಳುವರೆಂದು ಖಚಿತವಾಗಿ ತಿಳಿದೇ ಇತ್ತು. ಆದರೆ ಅದನ್ನೆಲ್ಲ ಕೇಳುವ ವ್ಯವಧಾನ ಅವರಿಗೆಲ್ಲಿತ್ತು?

ಒಮ್ಮೊಮ್ಮೆ ಹೇಗಾಗುತ್ತಿತ್ತೆಂದರೆ ನಾವು ಇಂಥವನು ವಿವಾಹಿತ, ಇವನ ಹೆಂಡತಿ, ಮಕ್ಕಳು ಇಂಥಲ್ಲಿ ಇದ್ದಾರೆ ಎಂದರೆ ಹುಡುಗಿಯರು ನಂಬದೇ ನಾವು ಬೇಕೆಂದೇ ಸುಳ್ಳು ಹೇಳಿದೆವೆಂದೂ ತಮ್ಮ ಪ್ರೇಮವನ್ನು ಕಂಡು ನಮಗೆ ಹೊಟ್ಟೆಕಿಚ್ಚೆಂದೂ ಬಗೆದು ನಮ್ಮಿಂದಲೇ ದೂರವಾಗಿದ್ದೂ ಇತ್ತು. ಅರೆಬರೆ ಓದಿ ಮನೆಯಲ್ಲಿ ಕೂತಿದ್ದ ಕೆಲ ಹುಡುಗಿಯರು ಈ ಹೊರರಾಜ್ಯದವರ ಮನೆಗಳಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಂಥ ಹೆಣ್ಣುಗಳ ಮೇಲೆ ಹದ್ದುಗಣ್ಣುಗಳು ಎರಗತೊಡಗಿದವು. ಊರಿನ ಹೆಣ್ಣುಮಕ್ಕಳ ತಂಟೆಗೆ ಹೋಗಬೇಡಿರೆಂದು ಅದೆಷ್ಟೇ ಹೇಳಿದರೂ ಕೇಳದ ಈ ಹೊರರಾಜ್ಯಗಳ ತರುಣರೊಂದೆಡೆ, ತಾವಾಗಿಯೇ ಬೆಂಕಿಗೆ ಹಾರಿ ಮೈ ಸುಟ್ಟುಕೊಳ್ಳುವ ಊರಿನ ಪತಂಗಗಳೊಂದೆಡೆ. ನಮ್ಮದು ಎಲ್ಲವನ್ನೂ ಕಂಡರೂ ಏನೂ ಮಾಡಲಾರದ ಸ್ಥಿತಿ.

ಒಂದು ರಾತ್ರಿ ನಮ್ಮ ಆಫೀಸಿನ ಕಟ್ಟಡದಲ್ಲಿ ಗಲಾಟೆ ಶುರುವಾಗಿತ್ತು. ಕುಡಿದು ಗಲಾಟೆ ಮಾಡಿಕೊಳ್ಳುವುದು ಹೊಸದಲ್ಲವಾದ ಕಾರಣ ಸುಮ್ಮನೆ ಮಲಗಿದೆವು. ನಡುರಾತ್ರಿ ಒಂದು ಹೆಣ್ಣು ದನಿ ನಮ್ಮ ಓಣಿಯಲ್ಲಿ ‘ಮೇರೆ ಪತಿಕೋ ಬಚಾವ್’ ಎಂದು ಕೂಗುತ್ತಾ ಓಡುತ್ತಿದ್ದಳು. ನಾವೆಲ್ಲ ಗಾಬರಿಬಿದ್ದು ಹೊರಗೋಡಿ ನೋಡಿದರೆ ಇದೇ ಊರಿನ ಬೋಟಿ ಮಂಜಪ್ಪನ ಮಗಳು ರಾಧ! ಅರೆ ಇವಳಿಗ್ಯಾವ ಪತಿಯಪ್ಪಾ ಎಂಬುದು ಒಂದು ಅಚ್ಚರಿಯಾದರೆ, ಇವಳು ಯಾವಾಗ ಹಿಂದಿ ಕಲಿತಳಪ್ಪಾ ಎಂದು ಇನ್ನೊಂದು ಬೆರಗು. ಮರುದಿನ ಬೆಳಗ್ಗೆ ಆಫೀಸಿನ ಟೇಬಲಿನ ಮೇಲೆಲ್ಲ ಹೆಪ್ಪುಗಟ್ಟಿನಿಂತ ರಕ್ತ! ಯಾರ್ಯಾರು ಹೊಡೆದುಕೊಂಡು ಸತ್ತರೋ ಎಂದು ನೋಡಿದರೆ ಇಬ್ಬರು ಸರದಾರರು ಒಬ್ಬ ಚೌಹಾಣನೊಂದಿಗೆ ಬಡಿದಾಡಿ ಮೂಗು ಮುಸುಡಿ ಒಡೆದುಕೊಂಡು ರಕ್ತರಂಪಾಟವಾಗಿತ್ತು.

ಪರವಿಂದರ್ ಸಿಂಗ್ ಎಂಬ ವಿವಾಹಿತನ ಮನೆಗೆ ಈ ರಾಧಾ ಕೆಲ ದಿನಗಳಿಂದ ಕೆಲಸ ಮಾಡುತ್ತಿದ್ದಳು. ಈ ಪರವಿಂದರನಿಗೆ ರಂಭೆಯಂತಹ ಪತ್ನಿಯಿದ್ದೂ ನಾಲ್ಕು ಅಡಿ ಎತ್ತರದ ಚೀಂಕಲುಕಡ್ಡಿ ಹುಡುಗಿಯ ಜೊತೆ ಚಕ್ಕಂದ ನಡೆಸಿದ್ದನಂತೆ. ಅವನು ವಿವಾಹಿತನೆಂದು ತ್ರಿವೇಣಿ ಚೌಹಾಣನೆಡೆಗೆ ಈ ಹುಡುಗಿ ಹೊರಳಿದ್ದಳಂತೆ. ಅವನೋ ಆರೂವರೆ ಅಡಿಯ ದೈತ್ಯ ಆಸಾಮಿಯಾಗಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದ. ಒಬ್ಬ ಮಗನನ್ನು ಹದಿನೈದರ ಹರೆಯದಲ್ಲೇ ಮದುವೆಯನ್ನೂ ಮಾಡಿದ್ದ. ಹೆಂಡತಿ ಮಗ, ಸೊಸೆಯಂದಿರ ಜೊತೆ ಊರಲ್ಲಿದ್ದರೂ ತಾನು ಅವಿವಾಹಿತನೆಂದು ರಾಧಾಳೆದುರು ಸುಳ್ಳು ಹೇಳಿದ್ದಿರಬಹುದು. ಇವರಲ್ಲಿ ಯಾರನ್ನು ರಾಧೆ ಪತಿ ಎಂದು ಕರೆದಿದ್ದಿರಬಹುದು ಎಂಬ ಕುತೂಹಲ ನಮ್ಮನ್ನು ಕಾಡತೊಡಗಿತು. ಒಟ್ಟಿನಲ್ಲಿ ಆ ರಾತ್ರಿ ಈ ರಾಧೆಗಾಗಿ ನಡೆದ ಕಾಳಗದಲ್ಲಿ ರಕ್ತ ಹರಿದು ಹೆಪ್ಪುಗಟ್ಟಿ, ಕೆಲವೇ ದಿನಗಳಲ್ಲಿ ಪರವಿಂದರ್ ಸಿಂಗ್ ಮೇಲಿನ ಸೇಡಿನ ಹಗೆಯಲ್ಲಿ ತ್ರಿವೇಣಿ ಚೌಹಾಣ ಈ ರಾಧೆಯನ್ನು ವರಿಸಿಯೇಬಿಟ್ಟ.

ಮದುವೆಯಾದ ಆರಂಭದಲ್ಲಿ ಒಮ್ಮೆ ಮುಂಬೈ ದರ್ಶನ ಮಾಡಿ, ಉತ್ತರದವರಂತೆ ಕಾಲಲ್ಲಿ ಅಗಲವಾದ ಕಾಲುಚೈನು ಧರಿಸಿ, ಬೈತಲೆಯ ನಡುವೆ ಸಿಂಧೂರ ತುಂಬಿಕೊಂಡು, ಜಿಗಿಬಿಗಿ ಹೊಳೆಯುವ ಸೀರೆಯುಟ್ಟು ತಲೆತುಂಬ ಸೆರಗುಹೊದ್ದು ಡೌಲಿನಿಂದ ಹರಕುಮುರುಕು ಹಿಂದಿ ಮಾತಾಡುತ್ತಾ ಊರಿಗೆ ಮರಳಿದ ಸೌಭಾಗ್ಯವೊಂದುಳಿದು ಅವಳಿಗೆ ಸಿಕ್ಕಿದ್ದು ನಿತ್ಯ ಹೊಡೆತ, ಬಡಿತ, ಜಗಳ, ಗಲಾಟೆ ಮಾತ್ರವೇ ಅನಿಸುತ್ತದೆ. ಇಲ್ಲೊಬ್ಬಳು ಸವತಿಯಿದ್ದಾಳೆಂದು ತಿಳಿದು ಉತ್ತರದಿಂದ ಬಂದಿಳಿದ ಅವನ ಮೊದಲ ಪತ್ನಿಯೂ ಜುಟ್ಟು ಜಡೆ ಹಿಡಿದೆಳೆದು ರಾಧೆಯನ್ನು ಜಕಂಗೊಳಿಸಿ ಹೋಗಿದ್ದ ಪ್ರಸಂಗವೂ ನಡುವೆ ನಡೆದುಹೋಯಿತು.

ನಮ್ಮ ಮನೆಗೆ ಹಾಲು ಹಾಕುವ ರತ್ನಿಯ ಅಕ್ಕ ತನ್ನ ಮನೆಯನ್ನೇ ತೊರೆದು ಈ ನಮ್ಮ ಯುವಕರಲ್ಲೇ ಒಬ್ಬನ ಜೊತೆ ಮದುವೆಯೇ ಆಗದೆ ಉಳಿದುಬಿಟ್ಟದ್ದೂ ಆಯಿತು. ‘ಅವನೆಲ್ಲಿ ಮದುವೆ ಆಗ್ತಾನೆ? ಒಂದು ದಿನ ಕೈಕೊಟ್ಟು ಊರುಬಿಟ್ಟು ಹೋಗ್ತಾನೆ’ ಎಂದು ಜನ ಮಾತಾಡಿಕೊಂಡರು. ಎಷ್ಟೋ ಹುಡುಗಿಯರು ಅಲ್ಲಿ ಇಲ್ಲಿ ಸಿಕ್ಕಿಬಿದ್ದರು, ಬಸಿರಾದರು, ಆಸ್ಪತ್ರೆಯಲ್ಲಿ ಕಂಡೆವು, ಮೆಡಿಕಲ್ ಶಾಪಿನಲ್ಲಿ ಕಂಡೆವು ಎಂದೆಲ್ಲ ತರಾವರಿ ಕಥೆಗಳು ಊರ ಬೀದಿಗಳಲ್ಲಿ ಸುಂಟರಗಾಳಿಯಂತೆ ತಿರುಗುತ್ತಿದ್ದವು.

ಹೀಗಿರುವಾಗ ನಮ್ಮ ಮನೆಗೆ ಹಾಲು ಹಾಕುವ ಹುಡುಗಿ ರತ್ನಿ ನಮ್ಮ ಮನೆಯೆದುರಿನ ಪಪ್ಪಾಯ ಮರವನ್ನೇ ನೋಡುತ್ತಾ ತನಗೆ ಪಪ್ಪಾಯ ತಿನ್ನುವಾಸೆಯಾಗಿದೆ ಎಂದು ಕುಯ್ದು ಹಣ್ಣಾಗದ ಪಪ್ಪಾಯವನ್ನೇ ಕರಕರನೆ ಕಡಿದು ಇಡೀ ಪಪ್ಪಾಯವನ್ನು ತಿಂದು ಮುಗಿಸಿ ಮನೆಗೂ ಒಂದೆರಡು ಕಾಯಿ ಹೊತ್ತುಹೋದ ಸೋಜಿಗವನ್ನು ನೋಡಿದಾಗಲೇ ಒಬ್ಬರು, ‘ಆ ಹುಡುಗಿ ಹೊಟ್ಟೆಗೆ ಅಷ್ಟು ಬಿಗಿಯಾಗಿ ಟವೆಲ್ ಕಟ್ಟಿಕೊಂಡಿದ್ದಳು ಗಮನಿಸಿದಿರಾ?’ ಎಂದು ಮತ್ತೇನೋ ಹುಳುಬಿಟ್ಟಿದ್ದರು.

ದಿನೇ ದಿನೇ ಅವಳ ಹೊಟ್ಟೆ ಉಬ್ಬತೊಡಗಿತ್ತು. ಕೂತ ಕೂತಲ್ಲೇ ಅಳಹತ್ತಿದ್ದಳು. ಕಾರಣ ಕೇಳಿದರೆ ಮುಖ ಎತ್ತಲೋ ತಿರುಗಿಸಿ ಯಾವುದೋ ಕಟ್ಟುಕಥೆ ಅರುಹುತ್ತಿದ್ದಳು. ನಿಜ ಹೇಳಿದ್ದರೆ ‘ನಮ್ಮ ಮಾತು ಕೇಳಿದ್ದರೆ ಈ ಸ್ಥಿತಿ ಬರುತ್ತಿತ್ತಾ?’ ಎಂದು ನಾವು ಕೇಳಬಹುದು ಎಂದೇನೋ ಅನಿಸುತ್ತಿರಬಹುದು ಅವಳಿಗೆ. ಇದ್ದಕ್ಕಿದ್ದ ಹಾಗೆ ಊರಿಗೆ ಹೋಗಿಬಿಟ್ಟಳು.

ಒಂದು ದಿನ ಉತ್ತರ ಭಾರತದ ಇಬ್ಬರು ಕುಡಿದ ಮತ್ತಲ್ಲಿ ಮಾತಾಡಿಕೊಂಡ ಮಾತೊಂದು ಅಂತೂ ಇಂತೂ ನಮ್ಮ ತನಕ ಬಂದೇ ಬಂತು. ಅದೇನೆಂದರೆ, ಬಲವಂತ್ ವಾಲಿಯಾ ಎಂಬುವವನಿಂದ ಬಸಿರಾದ ರತ್ನಿ ಮದುವೆಯಾಗುವಂತೆ ಮೊದ ಮೊದಲಿಗೆ ಅವನಲ್ಲಿ ದುಂಬಾಲುಬಿದ್ದು, ಅವನು ‘ರಂಡಿ ಲಡ್ಕಿ ಹೈ ತೂ’ ಎಂದು ಥೂಕರಿಸಿ ಬಿಟ್ಟಮೇಲೆ ಬಸಿರಿಳಿಸಲು ಹಣಕ್ಕಾಗಿ ಹೋರಾಟ ನಡೆಸಿದ್ದಳೆಂದೂ ಅವನು ಕೊಡದೆ ಸತಾಯಿಸುತ್ತಾ ದಿನೇ ದಿನೇ ಇವಳ ಹೊಟ್ಟೆಯುಬ್ಬುತ್ತಾ ಅವಳು ಕುಲ್ಜೀತ್ ಸಿಂಗನಲ್ಲಿ ಅಳಲು ತೋಡಿಕೊಂಡಳಂತೆ. ಅವನು ಹಣವನ್ನು ಕೊಡುತ್ತೇನೆಂದು ಅಂತೂ ಒಪ್ಪಿ ಅವಳ ಆ ಪರಿಸ್ಥಿತಿಯಲ್ಲೂ ಅವಳನ್ನು ಒಮ್ಮೆ ಬಳಸಿಕೊಂಡು ಮುನ್ನೂರು ರುಪಾಯಿ ತೆತ್ತನಂತೆ.

ಹಣ ಪಡೆದು ಊರುಬಿಟ್ಟ ಅವಳು ಕೆಲದಿನಗಳಲ್ಲೇ ಮತ್ತೆ ಹೊರೆಯಿಳಿಸಿಕೊಂಡು ನೀಸೂರಾಗಿ ಊರಿಗೆ ಮರಳಿದಳು. ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ. ಹೀಗೆ ಹುಚ್ಚು ಮೋಹದ ಉನ್ಮತ್ತ ಕುದುರೆ ಸ್ವಚ್ಛಂದದಲ್ಲಿ ಹಾರುತ್ತಿತ್ತು. ಹಾರುತ್ತಲೇ ಇತ್ತು. ಹೆಣ್ಣುಮಕ್ಕಳು ಕಾಣದ ಕಳ್ಳುಸುಬಿನಲ್ಲಿ ಮೆಲ್ಲ ಮೆಲ್ಲನೆ ಹೂತುಹೋಗುತ್ತಲೇ ಇದ್ದರು.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 1 day ago No comment

  ಇರಬಲ್ಲೆವಾ ಭಾವುಕರಾಗದೆ?

                Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

 • 3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 4 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 1 week ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...


Editor's Wall

 • 25 February 2018
  9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 22 February 2018
  3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...