Share

ರೈತರ ಆತ್ಮಹತ್ಯೆ ಹಾಗೂ ರೈತ ಮಹಿಳೆಯರು
ಮುದ್ದು ತೀರ್ಥಹಳ್ಳಿ

 

 

ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಸಂಪೂರ್ಣ ಕುಟುಂಬದ ಭಾರ ಹೆಂಡತಿಯ ಮೇಲೆ ಬೀಳುವುದರಿಂದ ಆಕೆಗೆ ಕನಿಷ್ಠ ಪ್ರಮಾಣದ ಆಹಾರವನ್ನೂ ಸೇವಿಸಲಾರದಂತಹ ಕೆಟ್ಟ ಬಡತನ ಎದುರಿಸಬೇಕಾಗುತ್ತಿದೆ. ಸಾಲದ ನಿಮಿತ್ತ ಆತ್ಮಹತ್ಯೆ ಮಾಡಿಕೊಂಡವರ ಮನೆಯಲ್ಲಿ ಶಾಲೆಗೆ ಹೋಗುವುದುವುದನ್ನು ಬಿಟ್ಟ ಮಕ್ಕಳ ಪ್ರಮಾಣವೂ ದೊಡ್ಡದಿದೆ.

 

 

 

“You are virtuous and you are gone
Poor sinner that I am remain
Before your creditors
Unable to bend your head
Or stretch out your hand
Or sell your crops
You crossed over..” ವೋಲ್ಗಾ ಎನ್ನುವ ಕಾವ್ಯನಾಮದ ಪಿ. ಲಲಿತಾಕುಮಾರಿ ಎಂಬ ತೆಲುಗು ಕವಯತ್ರಿ ತಮ್ಮ ‘ನಾಟ್ ಡೆತ್ ಬಟ್ ಲೈಫ್’ ಎಂಬ ಕವಿತೆಯಲ್ಲಿ ಹೀಗೆ ಬರೆಯುತ್ತಾರೆ. ನಂತರ ಕವಿತೆಯಲ್ಲಿ ಅವರು ಹೀಗನ್ನುತ್ತಾರೆ..

“But in battle
I must live
I must embrace life not death
Embrace life and the struggle for life”

ರೈತ ಗಂಡನೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ಆತನ ಹೆಂಡತಿ ಏನೆಲ್ಲಾ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ವೋಲ್ಗಾರವರು ಈ ಕವಿತೆಯಲ್ಲಿ ಹೃದಯ ಹಿಂಡುವಂತೆ ಚಿತ್ರಿಸಿದ್ದಾರೆ. ಒಬ್ಬ ರೈತ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡ ನಂತರ, ಸಾಮಾಜಿಕ ಆರ್ಥಿಕ ಸ್ವಾಂತಂತ್ರ್ಯವಿಲ್ಲದ, ಶಿಕ್ಷಣ, ವ್ಯವಹಾರ ಜ್ಞಾನಗಳ್ಯಾವವೂ ಇಲ್ಲದ ಆ ರೈತನ ಹೆಂಡತಿ ಆತ ಮಾಡಿದ ಸಾಲವನ್ನು ತೀರಿಸಬೇಕು, ತನ್ನ ಹಾಗೂ ತನ್ನ ಸಂಸಾರದ ಹೊಟ್ಟೆ ತುಂಬಬೇಕು, ತನ್ನ ಮಕ್ಕಳನ್ನು ಸಾಕಬೇಕು, ಅವರಿಗೆ ಶಿಕ್ಷಣ ಕೊಡಿಸಬೇಕು, ಮನೆಯಲ್ಲಿರುವ ವಯಸ್ಸಾದವರನ್ನು, ಖಾಯಿಲೆಯಲ್ಲಿ ಬಿದ್ದವರನ್ನು ನೋಡಿಕೊಳ್ಳಬೇಕು, ಪ್ರಾಯಕ್ಕೆ ಬಂದ ಹೆಣ್ಣುಮಕ್ಕಳಿಗೆ ಮದುವೆ ಮಾಡಬೇಕು.. ಹೀಗೆ ಏಷ್ಟೆಲ್ಲಾ ಕಷ್ಟಗಳನ್ನು ಆಕೆ ಎದುರಿಸಬೇಕಾದೀತು? ಒಮ್ಮೆಗೇ ಎಂತಹ ಭಯಾನಕವಾದ ಸನ್ನಿವೇಶಕ್ಕೆ ಆಕೆ ಒಳಗಾಗಬೇಕಾದೀತು?

ನಮ್ಮ ವ್ಯವಸ್ಥೆಯಲ್ಲಿ ‘ರೈತ’ ಎನ್ನುವ ಪದಕ್ಕೆ ಕೇವಲ ಒಬ್ಬ ಪುರುಷ ಎನ್ನುವ ಅರ್ಥವಿದೆ. ಹಾಗಿದ್ದರೆ ಕೃಷಿಯಲ್ಲಿ ಒಬ್ಬ ಹೆಣ್ಣಿನ ಸ್ಥಾನವಿಲ್ಲವೇ? ರೈತ ಸ್ತ್ರೀಯರಿಗೆ ನಮ್ಮಲ್ಲಿ ಯಾವ ಸ್ಥಾನಮಾನವನ್ನು ಕೊಡಲಾಗುತ್ತಿದೆ? ಒಬ್ಬ ರೈತನ ಹೆಂಡತಿಯ ಒಂದಿಡೀ ದಿನದ ರೊಟೀನ್ ಅನ್ನು ನೋಡುವುದಾದರೆ ಮನೆಯ ಎಲ್ಲಾ ಸದಸ್ಯರಿಗಿಂತ ಮುಂಚೆ ಬೇಗನೇ ಏಳುವುದು, ಬೆಳಗ್ಗಿನ ತಿಂಡಿ ತಯಾರಿಸುವುದು, ಕೊಟ್ಟಿಗೆಯಲ್ಲಿನ ದನಗಳ ಹಾಲು ಕರೆಯುವುದು, ಸೆಗಣಿ ತೆಗೆಯುವುದು, ಮಕ್ಕಳಿಗೆ ಹೊರಡಿಸಿ ಶಾಲೆಗೆ ಕಳಿಸುವುದು, ಮಧ್ಯಾಹ್ನದ ಅಡುಗೆ ಮಾಡುವುದು, ಮಾಡಿದಡುಗೆಯನ್ನು ಗದ್ದೆಗೆ ತೆಗೆದುಕೊಂಡು ಹೋಗಿ ಉಣಬಡಿಸುವುದು, ಕೃಷಿಭೂಮಿಯಲ್ಲಿ ಸೊಂಟ ಮುರಿಯುವಂತೆ ಕೆಲಸ ಮಾಡುವುದು, ಸಂಜೆ ಮನೆಗೆ ಮರಳುವಾಗ ರಾತ್ರಿಯ ಅಡುಗೆಗಾಗಿ ಗದ್ದೆಯಲ್ಲಿನ ಏಡಿಗಳನ್ನೋ, ಇಲ್ಲವೇ ಯಾವುದೋ ತರಕಾರಿಗಳನ್ನೋ ಸೊಂಟಕ್ಕೆ ಸಿಗಿಸಿಕೊಂಡು, ನೀರಿನ ಕೊಡವನ್ನು ಸೊಂಟದ ಮೇಲೆ ಹೊತ್ತು, ತಲೆಯ ಮೇಲೆ ಹುಲ್ಲಿನ ರಾಶಿಯನ್ನೋ ಇಲ್ಲವೇ ಕಟ್ಟಿಗೆಯ ಹೊರೆಯನ್ನೋ ಹೊತ್ತು, ಎತ್ತುಗಳನ್ನುಹೊಡೆದುಕೊಂಡು ಮನೆಗೆ ಮರಳುತ್ತಾಳೆ!

ಮನೆಗೆ ಬಂದ ನಂತರ ತಲೆಯ ಮೇಲಿನ ಹೊರೆಯನ್ನು ಕೆಳಕ್ಕೆ ಹಾಕಿ ಆಕೆ ಒಂದು ದೊಡ್ಡ ನಿಟ್ಟುಸಿರು ಬಿಟ್ಟಾಳು. ಆದರೆ ಒಂದಿನಿಸಾದರೂ ದಣಿವಾರಿಸಿಕೊಳ್ಳಲು ಆಕೆಗೆ ಅವಕಾಶವಿರುವುಲ್ಲ. ಇಲ್ಲವೇ ಗಂಡಸರಂತೆ ಬೇಸರವಾದೊಡನೆ ಪೇಟೆ ಸುತ್ತು ಹೊಡೆದು ಸಾರಾಯಿ ಕುಡಿದು ಬರುವಂತಿಲ್ಲ! ಮಕ್ಕಳು ಮರಿ, ಮನೆಯ ಸದಸ್ಯರಿಗೆಲ್ಲಾ ಸಂಜೆಯ ಕಾಫಿ ತಿಂಡಿ ತಯಾರಿಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಕೊಟ್ಟಿಗೆಯಲ್ಲಿ ದನಗಳನ್ನು ಕಟ್ಟಿಹಾಕುವುದು, ರಾತ್ರಿಯಡುಗೆ, ಮಕ್ಕಳ ಲಾಲನೆ ಪಾಲನೆ…. ಹೀಗೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಆಕೆಗೆ ಮುಗಿಯದಷ್ಟು ಕೆಲಸದ ರಾಶಿ! ಇಷ್ಟಾದರೂ ಆಕೆಗೆ ಆಕೆಯ ಗಂಡ ಜೀವವಿರುವ ತನಕವೂ ಯಾರೂ ಆಕೆಗೆ ರೈತ ಮಹಿಳೆ ಎಂದು ಗುರುತಿಸಿ ಗೌರವಿಸಿದ್ದೇ ಇಲ್ಲ!

ಹತ್ತು ವರುಷಗಳ ಕೆಳಗೆ ಒಂದು ಸಂವಾದ ಕಾರ್ಯಕ್ರಮದಲ್ಲಿ ಡಾ. ಯು. ಆರ್. ಅನಂತಮೂರ್ತಿಯವರಿಗೆ ನಾನು ಒಂದು ಪ್ರಶ್ನೆಯನ್ನು ಕೇಳಿದ್ದೆ. “ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಾ ಇದೆ. ಆದರೆ ಆ ರೈತರ ಹೆಂಡತಿಯರು ಗಂಡ ಅದೆಷ್ಟೇ ಸಾಲ ಮಾಡಿರಲಿ, ಅದೆಷ್ಟೇ ಸಮಸ್ಯೆಗಳಿರಲಿ ಅದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಏಕೆ?” ಎಂದು. ಅದಕ್ಕವರು “ಪುರುಷರಿಗಿಂತಲೂ ಮಹಿಳೆಯರಿಗೆ ಸಹನಶೀಲತೆ ಹೆಚ್ಚು, ಕಷ್ಟಗಳನ್ನನುಭವಿಸಿ ಅವರು ಮಾನಸಿಕವಾಗಿ ಗಟ್ಟಿಗೊಂಡಿರುತ್ತಾರೆ” ಎಂದರು. ಇದು ನಿಜವೂ ಹೌದು! ಆದರೆ ಹಿಂದೆ ರೈತ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಸುದ್ದಿ ಅಪರೂಪಕ್ಕೆ ಕಿವಿಗೆ ಬೀಳುತ್ತಿತ್ತು. ಆದರೀಗ ಅದು ದಿನನಿತ್ಯದ ಸುದ್ದಿ ಆಗಿರುವುದು ನಿಜಕ್ಕೂ ಸಮಾಜಕ್ಕೆ ಕಹಿಯಾದ ಸಂದೇಶ ಕೊಡುತ್ತಿದೆ!

ಮಾನವ ಹಕ್ಕು ಆಯೋಗದ ವರದಿಯ ಪ್ರಕಾರ, 2009ರಿಂದೀಚೆಗೆ 17,638 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಪ್ರತೀ ಅರ್ಧ ಗಂಟೆಗೆ ಒಬ್ಬೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳಿತ್ತಿದ್ದಾನೆ. ಆದರೆ ಇದರಲ್ಲಿ ಮಹಿಳಾ ರೈತರ ಸಂಖ್ಯೆ ಬಾರೀ ಕಡಿಮೆ. ರೈತ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಅವರ ಹೆಸರುಗಳನ್ನು ವರದಿಯಲ್ಲಿ ಸೇರಿಸಲಾಗಿಲ್ಲ. ಏಕೆಂದರೆ ರೈತರ ಹೆಂಡತಿಯರ ಹೆಸರಿನಲ್ಲಿ ಭೂಮಿಯ ದಾಖಲೆಗಳಾಗಲೀ, ಬ್ಯಾಂಕ್ ಖಾತೆಗಳಾಗಲೀ ಇರುವುದಿಲ್ಲ. ಸಾಲದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಾಲವೂ ಕೂಡಾ ರೈತರ ಹೆಂಡತಿಯರ ಹೆಸರಿನಲ್ಲಿ ತೆಗೆದುಕೊಂಡಿರುವುದಿಲ್ಲ!

ರೈತರ ಆತ್ಮಹತ್ಯೆ ಕಡಿಮೆ ಮಾಡುವ ಸಲುವಾಗಿ ಅನೇಕ ‘ಸಾಲಮನ್ನಾ’ ಯೋಜನೆಗಳು ಇವೆ. ಆದರೂ ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದರೆ ಬ್ಯಾಂಕಿನಲ್ಲಿ ಸಾಲ ಪಡೆದವರಿಗೆ ಸಾಲ ಮನ್ನಾ ಆದೀತು. ಆದರೆ ಓದು ಬರಹವಿಲ್ಲದ, ಬ್ಯಾಂಕ್ ಖಾತೆಯಿಲ್ಲದ ರೈತರು, ಖಾಸಗೀ ಬಡ್ಡಿದಾರರು, ಸಾಲ ನೀಡುವವರ ಬಳಿ ಬಡ್ಡಿಗೆ ಸಾಲ ಮಾಡಿದ್ದರೆ ಅದು ಹೇಗೆ ತಾನೇ ಮನ್ನವಾದೀತು? ಹೆಚ್ಚು ರೈತರ ಆತ್ಮಹತ್ಯೆಗಳು ನಡೆಯುತ್ತಿರುವ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ ಮಾತ್ರವಲ್ಲದೇ ಇತರ ರಾಜ್ಯಗಳಲ್ಲೂ ಖಾಸಗೀ ಜನರ ಹತ್ತಿರ ಸಾಲ ಮಾಡುವ ರೈತರ ಸಂಖ್ಯೆ ಹೆಚ್ಚಿರುವುದರಿಂದ ರೈತರ ಆತ್ಮಹತ್ಯೆಯ ಸಂಖ್ಯೆಯೂ ಹೆಚ್ಚಿದೆ. ಒಂದು ಸಂಸ್ಥೆಯ ವರದಿಯ ಪ್ರಕಾರ ರೈತರಿಗೆ ಸಾಲ ನೀಡಲು ಬ್ಯಾಂಕುಗಳು ಶುರು ಮಾಡುವ ಮುನ್ನ, ರೈತರಿಗಾಗಿ ಸಹಕಾರಿ ಬ್ಯಾಂಕುಗಳು ಹಾಗೂ ನಬಾರ್ಡ್ ಹುಟ್ಟಿಕೊಳ್ಳುವ ಮುನ್ನ ಖಾಸಗೀ ವ್ಯಕ್ತಿಗಳಿಂದ ಸಾಲ ಪಡೆಯುತ್ತಿದ್ದ ರೈತರ ಸಂಖ್ಯೆ ಶೇಕಡಾ ಐವತ್ತಕ್ಕೂ ಹೆಚ್ಚಿತ್ತು. ಆ ನಂತರ ಅದರ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದರೂ ಅದು ಮಹತ್ತರವಾದುದೇನಲ್ಲ. ಆದರೆ ಸುಶಿಕ್ಷಿತರ ನಾಡಾದ ಕೇರಳದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯ ರೈತರು ಬ್ಯಾಂಕ್ ಖಾತೆ ಹೊಂದಿದ್ದು, ಬ್ಯಾಂಕ್ ವ್ಯವಹಾರ ಬಲ್ಲವರಾಗಿದ್ದು ಬ್ಯಾಂಕ್ ಮೂಲಕ ಸಾಲವನ್ನು ಪಡೆಯುತ್ತಾರೆ. ಹಾಗಾಗಿ ಇವರ ಸಾಲವೂ ಮನ್ನವಾಗುತ್ತದೆ. ಇಷ್ಟೇ ಅಲ್ಲದೇ ಅಲ್ಲಿನ ಜನರು ಖಾಸಗೀ ಬಡ್ಡಿದಾರರ ಬಳಿ ತೆಗೆದುಕೊಂಡ ಸಾಲವನ್ನೂ ಕೂಡಾ ಅಲ್ಲಿನ ಸರ್ಕಾರ ಮನ್ನಾ ಮಾಡಿದೆ. ಆದ್ದರಿಂದ ಅಲ್ಲಿ ರೈತರ ಆತ್ಮಹತ್ಯೆಯ ಪ್ರಮಾಣವೂ ಭಾರಿ ಕಡಿಮೆ.

ನ್ಯಾಷನಲ್ ಹ್ಯೂಮನ್ ರೈಟ್ಸ್ ಆಫ್ ಫಾರ್ಮರ್ಸ್ ನ ವರದಿಯ ಪ್ರಕಾರ 1.5 ಮಿಲಿಯನ್ ಕುಟುಂಬದ ಸದಸ್ಯರುಗಳು ರೈತರ ಆತ್ಮಹತ್ಯೆಯ ಕೆಟ್ಟ ಪರಿಣಾಮವನ್ನು ಅನುಭವಿಸುತ್ತಿದ್ದಾರೆ. ಅದೂ ಕೂಡಾ ದೀರ್ಘಕಾಲಿಕವಾದ ದುಷ್ಪರಿಣಾಮ! ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಸಂಪೂರ್ಣ ಕುಟುಂಬದ ಭಾರ ಹೆಂಡತಿಯ ಮೇಲೆ ಬೀಳುವುದರಿಂದ ಆಕೆಗೆ ಕನಿಷ್ಠ ಪ್ರಮಾಣದ ಆಹಾರವನ್ನೂ ಸೇವಿಸಲಾರದಂತಹ ಕೆಟ್ಟ ಬಡತನ ಎದುರಿಸಬೇಕಾಗುತ್ತಿದೆ. ಸಾಲದ ನಿಮಿತ್ತ ಆತ್ಮಹತ್ಯೆ ಮಾಡಿಕೊಂಡವರ ಮನೆಯಲ್ಲಿ ಶಾಲೆಗೆ ಹೋಗುವುದುವುದನ್ನು ಬಿಟ್ಟ ಮಕ್ಕಳ ಪ್ರಮಾಣವೂ ದೊಡ್ಡದಿದೆ. ತಲೆಯ ಮೇಲಿರುವ ದೊಡ್ಡ ಸಾಲ, ಶಿಕ್ಷಣವಿಲ್ಲದೇ ಇರುವುದು ಇಂಥ ನಾನಾ ಕಾರಣಗಳಿಂದಾಗಿ ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನೂ ಅಳವಡಿಸಿಕೊಳ್ಳಲಾಗುತ್ತಿಲ್ಲ. ಅಲ್ಲದೇ ಸಾಲದ ಹೊರೆ ಮಕ್ಕಳು ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳವರೆಗೂ ಮುಂದುವರೆದಿದೆ. ಆದ್ದರಿಂದ ಎಷ್ಟೋ ಕಡೆಗಳಲ್ಲಿ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾದ ಘಟನೆಗಳೂ ಅವೆಷ್ಟೋ ನಡೆದಿವೆ.

ನಾನೊಮ್ಮೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ನನ್ನ ಪಕ್ಕದಲ್ಲಿ ಕೂತಿದ್ದ ಒಬ್ಬ ಮಹಿಳೆ ತನ್ನ ಜೀವನದ ಕತೆಯನ್ನೆಲ್ಲಾ ನನ್ನೊಂದಿಗೆ ಹೇಳತೊಡಗಿದರು. ಗಂಡ ಅಡಿಕೆ ತೋಟದ ಮಾಲಿಕ. ಎರಡು ಮಕ್ಕಳು.. ಏನೂ ಕಷ್ಟವಿಲ್ಲದೇ ಜೀವನ ಸಾಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಗಂಡ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದರು. ಅಲ್ಲಿಯವರೆಗೂ ತೋಟದ್ದಾಗಲೀ, ಬ್ಯಾಂಕು ಅಥವಾ ಹಣಕಾಸಿನ ವ್ಯವಹಾರದಲ್ಲಿ ಎಂದೂ ತಲೆಹಾಕದೇ ಇದ್ದ, ಆ ವಿಷಯಗಳಲ್ಲಿ ಕನಿಷ್ಟ ಮಾಹಿತಿಯೂ ಹೊಂದಿರದ ಆ ಮಹಿಳೆ ಗಂಡ ತೀರಿಹೋದ ಎಂದು ಅಳುತ್ತಾ ಕೂರಲಿಲ್ಲ. ಆಕೆ ಮನಸ್ಸನ್ನು ಕಠಿಣಗೊಳಿಸಿ ಎಲ್ಲಾ ವ್ಯವಹಾರವನ್ನೂ ಕಲಿತರು. ಯಾರ ಸಹಾಯವೂ ಇಲ್ಲದೇ ಆಕೆಯೇ ತೋಟದಲ್ಲಿ ನಿಂತು ಕೆಲಸ ಮಾಡಿಸತೊಡಗಿದರು. ಚಿಕ್ಕ ಚಿಕ್ಕ ಮಕ್ಕಳಿಬ್ಬರನ್ನೂ ಓದಿಸಿ ಇಂಜಿನಿಯರ್ ಮಾಡಿಸಿದರು. ಇಬ್ಬರೂ ಮಕ್ಕಳಿಗೂ ತಾನೇ ಮುಂದೆ ನಿಂತು ಮದುವೆಯನ್ನೂ ಮಾಡಿಸಿದರು. ಗಂಡ ತೀರಿಕೊಂಡ ನಂತರ ಆಕೆ ಯಶಸ್ವಿಯಾಗಿ ಕೃಷಿಯನ್ನೂ ಸಂಸಾರವನ್ನೂ ಮುಂದುವರೆಸಿದರು. ಹೀಗೆ ಮಲೆನಾಡಿನ ಭಾಗದಲ್ಲಿ ಮಹಿಳೆಯರು ಯಶಸ್ವಿಯಾಗಿ ಕೃಷಿ ಕೆಲಸ ಮಾಡಿರುವ ಉದಾಹರಣೆಗಳು ಬೇಕಾದಷ್ಟು ಸಿಗುತ್ತದೆ. ಏಕೆಂದರೆ ಅಡಿಕೆ ವಾಣಿಜ್ಯ ಬೆಳೆ ಹಾಗೂ ಇದರಿಂದ ಒಳ್ಳೆಯ ಆದಾಯ ಬರುತ್ತದೆ. ಮತ್ತು ಈ ಕೃಷಿಯಲ್ಲಿ ತೊಡಗಿದ ರೈತ ಸಾಲದಲ್ಲಿ ಮುಳುಗಿದ್ದು ಕಡಿಮೆ.. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಇಲ್ಲಿ ಎದುರಾಗುವುದಿಲ್ಲ. ಹಾಗೆ ನೋಡಿದರೆ ಹತ್ತಿ, ರೇಶ್ಮೆಗಳೂ ಕೂಡಾ ವಾಣಿಜ್ಯ ಬೆಳೆಗಳೇ. ಆದರೆ ಈ ಬೆಳೆಗಳನ್ನು ಯಾರ್ಯಾರು ಬೆಳೆಸುತ್ತಾರೋ ಅವರಲ್ಲಿ ಸಾಲದಲ್ಲಿ ಮುಳುಗಿರುವವರೇ ಹೆಚ್ಚು. ಬಯಲುಸೀಮೆಯ ರೈತರಂತೂ ಸದಾಕಾಲ ಕಷ್ಟದ ಕೂಪದಲ್ಲೇ ಬಿದ್ದಿರುತ್ತಾರೆ. ಆತ್ಮಹತ್ಯೆಯ ಪ್ರಮಾಣವೂ ಆಲ್ಲಿಯೇ ಹೆಚ್ಚು.

ಈ ವರುಷವಾದರೂ ಹೆಚ್ಚು ಮಳೆಯಾಗುತ್ತದೆ ಎಂದು ಅಪೇಕ್ಷಿಸಲಾಗಿತ್ತು. ಆದರೆ ಅಂದುಕೊಂಡಷ್ಟು ಮಳೆಯಾಗಲಿಲ್ಲ. ರೈತರ ಸಮಸ್ಯೆಗಳೂ ಕಡಿಮೆಯಾಗಿಲ್ಲ. ರೈತರಿಗೆ ಆಪತ್ಕಾಲದ ಆಪತ್ಬಾಂಧವರಂತಿದ್ದ ಸಹಕಾರಿ ಸಂಘಗಳೂ ಸೋಲುಣ್ಣುತ್ತಿವೆ. ಅದೇನೇ ಇರಲಿ, ಈ ವರುಷವಾದರೂ ರೈತರ ಆತ್ಮಹತ್ಯೆಗಳು ನಿಲ್ಲಲಿ. ಸರ್ಕಾರಗಳು ಇನ್ನಾದರೂ ಎಚ್ಚೆತ್ತುಕೊಳ್ಳಲಿ. ರೈತ ಮಹಿಳೆಯರ ಬವಣೆಗಳು ನಿಲ್ಲಲಿ ಎಂಬುದೇ ನನ್ನ ಹಾರೈಕೆ.

ಮುದ್ದು ತೀರ್ಥಹಳ್ಳಿ

ಕಾನೂನು ವಿದ್ಯಾರ್ಥಿನಿ. ಕನ್ನಡ, ಕೊಂಕಣಿ ಭಾಷೆಗಳಲ್ಲಿ ಬರೆಯುತ್ತಾರೆ. ಕಾಡ ಹಾದಿಯ ಹೂಗಳು, ಒಂದು ಚಂದ್ರನ ತುಂಡು, ಕಾನನ ಕಲರವ, ಎಷ್ಟು ಬಣ್ಣದ ಇರುಳು ಹಾಗೂ ಹೂ ಗೊಂಚಲು ಇವರ ಕನ್ನಡ ಕೃತಿಗಳು. ‘ಕಾಡ ಹಾದಿಯ ಹೂಗಳು’ ಕಾದಂಬರಿ ಅದೇ ಹೆಸರಲ್ಲಿ ಚಲನಚಿತ್ರವಾಗಿದೆ. ಕೊಂಕಣಿಯ ನಮಾನ್ ಬಾಳೋಕ್ ಜೆಜು ಪತ್ರಿಕೆಗೆ ಕಳೆದ ನಾಲ್ಕು ವರ್ಷಗಳಿಂದ ಅಂಕಣ ಬರೆಯುತ್ತಿದ್ದಾರೆ. ‘ಮಂದಾನಿಲ’ ಎಂಬ ಪತ್ರಿಕೆಯನ್ನು ಐದು ವರ್ಷ ನಡೆಸಿದವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಲಬುರ್ಗಿ ಹತ್ಯೆ ಖಂಡಿಸಿ ಈ ಪ್ರಶಸ್ತಿಯನ್ನು ಮರಳಿಸಿದ್ದಾರೆ), ಕಾವ್ಯಾನಂದ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ, ಜ್ಯೋತಿ ಪುರಸ್ಕಾರ ಹಾಗೂ ಶಾರದಾ ಆರ್ ರಾವ್ ಮತ್ತು ಕರಿಯಣ್ಣ ದತ್ತಿ ಪ್ರಶಸ್ತಿಗಳು, ಬೇಂದ್ರೆ ಗ್ರಂಥ ಬಹುಮಾನ, ಅರಳು ಮೊಗ್ಗು ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ಅಡ್ವೈಸರ್ ಪ್ರಶಸ್ತಿ ಬಂದಿವೆ.

Share

Leave a comment

Your email address will not be published. Required fields are marked *

Recent Posts More

 • 16 hours ago No comment

  ಕ್ರೈಸ್ತರ ಪ್ರಾರ್ಥನಾ ಅಭಿಯಾನದ ಕರೆಯ ಸುತ್ತಮುತ್ತ

      ಪ್ರಸ್ತಾಪ     ಹುಸಿ ರಾಷ್ಟ್ರ ಭಕ್ತಿಯಲ್ಲಿ ಆರ್ಭಟಿಸುವ ಹಿಂದುತ್ವದ ಸ್ವಘೋಷಿತ ವಾರಸುದಾರರು ಮಾತೆತ್ತಿದರೆ ಕ್ರೈಸ್ತರನ್ನು ಈ ದೇಶದವರಲ್ಲ, ಅವರನ್ನು ದೇಶದಿಂದ ಒದ್ದೋಡಿಸಬೇಕು ಎನ್ನುವಂತೆ ವರ್ತಿಸುತ್ತಾರೆ. ಆದರೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರತಿ ರಾಷ್ಟ್ರೀಯ ಹಬ್ಬಗಳನ್ನೂ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ಆಚರಿಸಿಯೇ ಧಾರ್ಮಿಕ ಚಟುವಟಿಕೆಯನ್ನು ಶುರುಮಾಡುವ ಕ್ರೈಸ್ತರಿಂದ ಕಲಿಯುವುದು ಬೇಕಾದಷ್ಟಿದೆ. ಆಸ್ಪತ್ರೆ, ಶಿಕ್ಷಣ, ಸಮಾಜ ಸುಧಾರಣೆಯ ಕಾರ್ಯಗಳಲ್ಲಿ ಕ್ರೈಸ್ತ ಸಂಸ್ಥೆಗಳು ಮಾಡುವ ಸೇವೆಯನ್ನು ...

 • 16 hours ago No comment

  ಚಿತ್ರದಲ್ಲಿನ ಹೆಂಗಸು

    ಕವಿಸಾಲು               ತಲೆಮಾರುಗಳ ಸ್ಥಿರತೆ ಕಮಾನ ಬಿಲ್ಲಿನಂತೆ ಬಾಗಿದ ಹುಬ್ಬುಗಳಲಿ ತೂಗಿ ಕಂದು ಕಣ್ಣುಗಳ ಆಳದಲ್ಲೆಲ್ಲೋ ಅಡಗಿದ ಇನಿತಿನಿತು ಬಾಲ್ಯದ ಭಯಗಳ ನಡುವೆ ಇಣುಕುವ ವಿನಯದಿ ವಿಧೇಯ ಹೆಂಗಸಿದ್ದಾಳೆ, ಆಳಲ್ಲ ಬಾಯೆಂಬ ಬಾಯಿ ಅಚ್ಚುಕಟ್ಟಾಗಿ ಪಳಗಿ ಸರಿಯೆಂಬುದ ದಿಟ್ಟವಾಗಿ ಅರುಹಿ ಉದ್ದುದ್ದ ಭಾಷಣಗಳ ಕಟ್ಟಿಟ್ಟು ತೂಗಿ ಬಿಡಿಸಲಾಗದ ಒಗಟಿನ ಜೀವನ ಸೌಂದರ್ಯವ ಆಸ್ವಾದಿಸುವಲ್ಲಿ ಜೀವಂತವಿದ್ದಾಳೆ, ಕಳೆಯಿಲ್ಲ ಶಿರವೆಂಬ ಶಿಖರವ ...

 • 7 days ago No comment

  ಕೊನಾರ್ಕ್ ‘ಕಾಲ ದೇಗುಲ’

    ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ ...

 • 1 week ago No comment

  ಅಳಿದುಳಿದ ಊರಿನ ಹೂದೋಟದೊಳಗೆ

    ಕವಿಸಾಲು       ಯಾವ ಕತ್ತಿಯೂ ಕತ್ತರಿಸದಿರಲಿ! ಹಗಲು ಸೂರ್ಯನ ಬಿಸಿಲ ಕುಣಿಕೆ ಬಿಗಿಬಿಗಿ ಉರಿಯುವ ನಿಗಿನಿಗಿ ಕೆಂಡ ಭಸ್ಮವಾಗಿಬಿಡುವ ಭಯದ ಕಂಪನ ಬಿಸಿಯುಸಿರೂ ಧಗೆಯಾಗಿ ಅರಳಿದ ಮಲ್ಲೆಹೂಗಳು ಸುಟ್ಟು ಕರಕಲಾಗಿ ರಕ್ಕಸ ಗಣಕೊ ಭಾರೀ ಭೋಜನದೌತಣ ಭವಿಷ್ಯದ ಕಂದಮ್ಮಗಳ ಕತ್ತು ಹಿಚುಕಿ ಭ್ರೂಣಗಳ ಕಲೆಸಿಹಾಕಿ ಕಟ್ಟಬಯಸಿದ ಭವ್ಯ ಸೌಧಗಳ ಬುನಾದಿಗಳಡಿಯಲ್ಲಿ ಅಸ್ಥಿಪಂಜರಗಳ ರಾಶಿ ಒರೆಯಲ್ಲವಿತ ಕತ್ತಿಗಳು ಬಯಲಿಗೆ ಬಂದು ಒಳಕೋಣೆಯ ಸಂಚುಗಳು ಹೊಂಚುಹಾಕಿ ಕೊಲ್ಲುವ ...

 • 2 weeks ago No comment

  ಕಾದಂಬಿನಿ ಕಾಲಂ | ಜಾನೂ ಎಂದು ಕರೆಯುತ್ತೇನೆ!

                    ನಾನು ಸಾಹಿತಿಯಾಗುವ ಕನಸನ್ನು ಕಣ್ಣಿಗೆ ಮೆತ್ತಿಕೊಂಡು ಬೆಳೆದವಳಲ್ಲ. ಜಗತ್ತಿನೊಡನೆ ಒಡನಾಡುವಾಗ ನನ್ನೊಳಗೆ ನಡೆಯುವ ಯುದ್ಧವನ್ನು ಅಭಿವ್ಯಕ್ತಿಸಲು ಬರಹ ಅನಿವಾರ್ಯವಾಗಿತ್ತಷ್ಟೇ!   ಬಾಲ್ಯದಲ್ಲಿ ಪ್ರಾಣಿ ಪಕ್ಷಿ, ಮಕ್ಕಳ ಅಥವಾ ಕಾರ್ಟೂನು ಚಿತ್ರಗಳು ಊರಿನ ಸಿನೆಮಾ ಟೆಂಟಿಗೆ ಬಂದಾಗ ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದೊಯ್ದು ಕಡಿಮೆ ದುಡ್ಡಿನಲ್ಲಿ ಸಿನೆಮಾ ತೋರಿಸುತ್ತಿದ್ದರು. ಇಲ್ಲವೇ ರಜೆಯಲ್ಲಿ ನನ್ನ ಮಾಮನ ಥಿಯೇಟರಿನಲ್ಲಿ ಅಂಥ ಸಿನೆಮಾ ...


Editor's Wall

 • 11 May 2018
  2 weeks ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 weeks ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  3 weeks ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  4 weeks ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  4 weeks ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...