Share

ಕುಳಿತರೆ ಒಣಗಿದ ಎಲೆ; ಹಾರಿದರೆ ಬಣ್ಣದ ಮೆರವಣಿಗೆ…
ಪ್ರಸನ್ನ ಆಡುವಳ್ಳಿ

 

 

ಬೇರೆಬೇರೆ ಪ್ರಭೇದದ ವಿಷ ಹೊತ್ತ ಚಿಟ್ಟೆಗಳು ಒಂದೇಬಗೆಯ ಬಣ್ಣ ಹಚ್ಚಿಕೊಂಡು ‘ನಾವೆಲ್ಲ ಒಂದೇ’ ಎಂಬ ಎಚ್ಚರಿಕೆಯನ್ನು ನೀಡುತ್ತವೆ. ವಿಕಾಸಪಥದಲ್ಲಿ ಕಳ್ಳಹಾದಿ ಹಿಡಿಯುವ ಚಿಟ್ಟೆಗಳಿಗೇನೂ ಕಡಿಮೆಯಿಲ್ಲ.

 

ವಿಲಿಯಂ ಹೈಲೀ ೧೯೦೨ರಲ್ಲಿ ಬರೆದ Birds and Nature ಪುಸ್ತಕದಲ್ಲಿರುವ ಎಲೆಚಿಟ್ಟೆ ಚಿತ್ರ

 

ನಾಗಾಲ್ಯಾಂಡಿನ ವೋಖಾದಿಂದ ಮೊಕೋಕ್ಚುಂಗ್ ಜಿಲ್ಲಾಕೇಂದ್ರಕ್ಕೆ ಹೋಗುವ ಹಾದಿಯಲ್ಲಿ ಹಕ್ಕಿಗಳನ್ನು ನೋಡುತ್ತ ಒಬ್ಬನೇ ನಡೆಯುತ್ತಿದ್ದೆ. ಮಟಮಟ ಮಧ್ಯಾಹ್ನವಾದರೂ ಸೂರ್ಯನ ಸುಳಿವಿಲ್ಲದಂತಹ ದಟ್ಟ ಕಾಡಿನ ನಡುವಿನ ನಿರ್ಜನ ರಸ್ತೆ. ಅಲ್ಲಲ್ಲಿ ಭೂಕುಸಿತದಿಂದಾಗಿ ವಾಹನ ಸಂಚಾರವೂ ತೀರಾ ವಿರಳವಾಗಿತ್ತು. ಸದ್ದಿಲ್ಲದಂತೆ ಸಾಗುತ್ತಿದ್ದ ನನ್ನ ಮುಂದೆಯೇ ಬಣ್ಣಬಣ್ಣದ ಚಿಟ್ಟೆಯೊಂದು ಹಾದುಹೋಯ್ತು. ಬಹುತೇಕ ಕಪ್ಪು ಬಣ್ಣವಾದರೂ ರೆಕ್ಕೆಯ ಮೇಲಿನ ಭಾಗದಲ್ಲಿ ಕಿತ್ತಳೆ ಬಣ್ಣದ ಪಟ್ಟಿ, ಜೊತೆಗೆ ಗಾಢ ನೀಲಿ ಬಣ್ಣದ ಹೊಳಪು. ಸೂಕ್ಷ್ಮವಾಗಿ ಗಮನಿಸಿದರೆ ನಾಲ್ಕು ಬಿಳಿ ಚುಕ್ಕಿಗಳೂ ಇವೆ. ಅದರ ಬಣ್ಣ ಆಕಾರಗಳನ್ನೆಲ್ಲ ಗುರುತು ಹಾಕಿಕೊಳ್ಳುತ್ತಿದ್ದೆ. ರಸ್ತೆಯಾಚೆಗಿನ ಮರದ ಮೇಲಿಂದ ಕಾಜಾಣಗಳ ಜಗಳದ ಸದ್ದು ಕೇಳಿಸಿತು. ಹಾರುತ್ತಿದ್ದ ಚಿಟ್ಟೆ ನಾನು ನೋಡುತ್ತಿದ್ದಂತೆಯೇ ಕೂಡಲೇ ಹತ್ತಿರದ ಮರವೊಂದರ ಒಣಗಿದ ಎಲೆಗಳ ನಡುವೆ ಎಲೆಯಾಗಿ ಹೋಯ್ತು. “ಎಲೆಲೆ ಪಾತರಗಿತ್ತಿಯೇ!” ಎಂದುಕೊಂಡೆ.

ಅದು ಎಲೆಚಿಟ್ಟೆ (Indian Oak leaf Butterfly). ಪತಂಗಪ್ರಿಯರು ಅದನ್ನು Dead Leaf ಅಂತಲೂ ಕರೆಯುತ್ತಾರೆ. Kallima inachus ಅನ್ನೋದು ವಿಜ್ಞಾನಿಗಳಿಟ್ಟ ಹೆಸರು. ಮಧ್ಯ ಹಾಗೂ ಈಶಾನ್ಯ ಭಾರತದ ಎತ್ತರದ ಪ್ರದೇಶಗಳೂ ಸೇರಿದಂತೆ ಆಗ್ನೇಯ ಏಷ್ಯಾದ ಬಹುತೇಕ ರಾಷ್ಟ್ರಗಳಲ್ಲಿ ಈ ಪ್ರಭೇದದ ಚಿಟ್ಟೆಗಳನ್ನು ಕಾಣಬಹುದು. ರೆಕ್ಕೆ ಮುಚ್ಚಿ ಕುಳಿತಾಗ ಥೇಟ್ ಒಣಗಿದ ಎಲೆಯಂತೆಯೇ ಕಾಣುವ ಈ ಚಿಟ್ಟೆ, ರೆಕ್ಕೆ ಬಿಚ್ಚಿ ಹಾರುವಾಗ ಮಾತ್ರ ಬಣ್ಣಗಳ ಮೆರವಣಿಗೆಯೇ ಹೊರಟಂತೆ ಕಾಣುತ್ತದೆ. ಇದೇ ಗುಂಪಿಗೆ ಸೇರಿದ ‘ಸಹ್ಯಾದ್ರಿ ಎಲೆಚಿಟ್ಟೆ’ ನಮ್ಮ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿವೆ. ಬಣ್ಣ-ಬೆಡಗಿನಲ್ಲಿ ತುಸು ವ್ಯತ್ಯಾಸವಿದ್ದರೂ ಮುದುಡಿ ಕುಳಿತಾಗ ಅದು ಒಣಗಿದ ಎಲೆಯೇ! ಈಸ್ಟ್ ಇಂಡಿಯಾ ಕಂಪನಿಗಾಗಿ ಜಾವಾ ದ್ವೀಪಗಳಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕನ್ ಮೂಲದ ವೈದ್ಯ ಥಾಮಸ್ ಹಾರ್ಸ್ ಫೀಲ್ಡ್ ಈ ಬಗೆಯ ಚಿಟ್ಟೆಗಳನ್ನು ಮೊದಲು 1829ರಲ್ಲಿ ವೈಜ್ಞಾನಿಕವಾಗಿ ದಾಖಲಿಸಿದ. ಅವನಿಗೆ ಆಗ ಸಿಕ್ಕಿದ್ದು ಗಂಡು ಚಿಟ್ಟೆ ಮಾತ್ರ. ಹೆಣ್ಣು ಚಿಟ್ಟೆಯ ರೂಪುರೇಷೆಗಳನ್ನು ತಿಳಿಯಲು ಮತ್ತೆರಡು ದಶಕಗಳೇ ಬೇಕಾದವು.

ಚಿಟ್ಟೆಯಾಗಿ ಬದುಕುವುದೆಂದರೆ ಸುಲಭದ್ದಲ್ಲ. ರೆಕ್ಕೆಗಳಿವೆಯೆಂದು ಸಚ್ಛಂದವಾಗಿ ಹಾರುತ್ತ, ಮಕರಂದ ಹೀರುತ್ತ ಹೋದರೆ ಹಸಿದ ಹಕ್ಕಿಗಳಿಗೆ ಬಲಿಯಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ, ಜೀವ ಉಳಿಸಿಕೊಳ್ಳಲು ಬಗೆಬಗೆಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ್ದು ಅನಿವಾರ್ಯ. ಒಣಗಿದ ಎಲೆಗಳ ನಡುವೆ ಮಾರುವೇಷ ತೊಟ್ಟು ಕುಳಿತರೆ ಬೇಟೆಗಾರರಿಂದ ಸುಲಭಕ್ಕೆ ತಪ್ಪಿಸಿಕೊಳ್ಳಬಹುದು. ಹಾಗಂತ ರೆಕ್ಕೆಯ ಎರಡೂ ಬದಿಯ ಬಣ್ಣ ಕಳಚಿ ಹಾರಿದರೆ ಸಂಗಾತಿ ಸಿಗಬೇಕಲ್ಲ? ಮೈಮೇಲಿನ ಬಣ್ಣ-ಸೊಗಸು ಗಂಡು ಚಿಟ್ಟೆಗಳ ಸಾಮರ್ಥ್ಯದ ಸಂಕೇತ. ಚಿಟ್ಟೆಗಳ ಸ್ವಯಂವರದಲ್ಲಿ ಹೆಚ್ಚು ಬಣ್ಣ ಹೊತ್ತವನಿಗೇ ಹಾರ. ಅತ್ತ ಪ್ರಾಣವೂ ಉಳಿಯಬೇಕು, ಇತ್ತ ಸಂಗಾತಿಯೂ ಸಿಗಬೇಕೆಂಬ ಕಾರಣಕ್ಕೆ ಕುಳಿತರೆ ಎಲೆ, ಹಾರಿದರೆ ಬಣ್ಣದ ಚಿಟ್ಟೆ!

ನಾಗಾಲ್ಯಾಂಡಿನಲ್ಲಿ ಕಂಡ ಎಲೆಚಿಟ್ಟೆಗಳು

ವಿಕಾಸವಾದದ ಬಗೆಗಿನ ಬಿಸಿಬಿಸಿ ಚರ್ಚೆಗಳಲ್ಲಿ ಈ ಚಿಟ್ಟೆಗೆ ಸದಾ ಸ್ಥಾನವಿದೆ. ಚಾರ್ಲ್ಸ್ ಡಾರ್ವಿನ್ ಹಡಗು ಹತ್ತಿ, ಜಗತ್ತು ಸುತ್ತಿಬಂದು ವಿಕಾಸವಾದದ ಕುರಿತಾದ ತನ್ನ ವಿಚಾರಗಳನ್ನೆಲ್ಲ ಒರೆಗೆ ಹಚ್ಚಿ ಪುಸ್ತಕ ಬರೆಯುತ್ತಿದ್ದ ಕಾಲದಲ್ಲಿ ಆಲ್ಫ್ರೆಡ್ ವ್ಯಾಲೇಸ್ ಎಂಬ ತರುಣ ಮಲೇಶಿಯಾದ ಸುತ್ತಮುತ್ತಲ ದ್ವೀಪಸಮೂಹಗಳಲ್ಲಿನ ಜೀವವೈವಿಧ್ಯತೆಯನ್ನು, ಅದರ ಉಗಮದ ಕುರಿತಾಗಿ ತನ್ನ ಅಭಿಪ್ರಾಯಗಳನ್ನು ಪತ್ರಮುಖೇನ ಡಾರ್ವಿನ್ ನೊಂದಿಗೆ ಹಂಚಿಕೊಳ್ಳುತ್ತಿದ್ದ. ಅಂತಹ ಕೆಲವು ಪತ್ರಗಳಲ್ಲಿ ಈ ಚಿಟ್ಟೆಯ ಪ್ರಸ್ತಾಪವಿದೆ. ಜೀವ ಉಳಿಸುವ ಇಂತಹ ವಿಶಿಷ್ಟ ಬಣ್ಣದ ಬದಲಾವಣೆಗಳು ನಿಸರ್ಗದಲ್ಲಿ ಹೇಗೆಲ್ಲಾ ವಿಕಾಸಗೊಳ್ಳುತ್ತವೆ ಎಂಬುದನ್ನು ಇಬ್ಬರೂ ತಮ್ಮ ಪುಸ್ತಕಗಳಲ್ಲಿ ವಿವರವಾಗಿ ಚರ್ಚಿಸಿದ್ದಾರೆ.

ಕುದುರೆಮುಖದಲ್ಲಿ ಕಂಡ ಸಹ್ಯಾದ್ರಿ ಎಲೆಚಿಟ್ಟೆ

ಹೀಗೆ ಸುತ್ತಲಿನ ಪರಿಸರಕ್ಕೆ ಹೊಂದುವಂತೆ ಬಣ್ಣ ಬದಲಿಸಿಕೊಂಡು, ಅಡಗಿಕುಳಿತು ಜೀವ ಉಳಿಸಿಕೊಳ್ಳುವುದು ಒಂದು ಬಗೆಯಾದರೆ, ಇನ್ನು ಕೆಲವು ಚಿಟ್ಟೆಗಳು ಎದ್ದು ಕಾಣುವಂತಹ ಗಾಢ ಬಣ್ಣಗಳನ್ನು ಸದಾ ಹೊತ್ತು ತಿರುಗುತ್ತವೆ. ಇವುಗಳಿಗೆ ಅಂತಹ ಭಂಡ ಧೈರ್ಯ ಬರಲು ಕಾರಣ ಅವುಗಳಲ್ಲಿನ ವಿಷಕಾರೀ ಪದಾರ್ಥ. ಒಮ್ಮೆ ಇಂತಹ ಚಿಟ್ಟೆಯನ್ನು ತಿಂದು ಹೊಟ್ಟೆಕೆಡಿಸಿಕೊಂಡ ಹಕ್ಕಿಗಳು ಮತ್ಯಾವತ್ತೂ ಆ ಬಣ್ಣದ ಚಿಟ್ಟೆಗಳತ್ತ ಕಣ್ಣುಹಾಯಿಸಲಾರವು! ಆದರೆ ಹಕ್ಕಿಗಳಿಗೆ ಪಾಠ ಕಲಿಸಲು ಒಂದೋ-ಎರಡೋ ಚಿಟ್ಟೆಗಳು ಪ್ರಾಣತ್ಯಾಗ ಮಾಡಲೇಬೇಕಲ್ಲ? ಈ ಪ್ರಾಣಹಾನಿಯನ್ನು ಕಡಿಮೆ ಮಾಡಲು ಬೇರೆಬೇರೆ ಪ್ರಭೇದದ ವಿಷ ಹೊತ್ತ ಚಿಟ್ಟೆಗಳು ಒಂದೇಬಗೆಯ ಬಣ್ಣ ಹಚ್ಚಿಕೊಂಡು ‘ನಾವೆಲ್ಲ ಒಂದೇ’ ಎಂಬ ಎಚ್ಚರಿಕೆಯನ್ನು ನೀಡುತ್ತವೆ. ವಿಕಾಸಪಥದಲ್ಲಿ ಕಳ್ಳಹಾದಿ ಹಿಡಿಯುವ ಚಿಟ್ಟೆಗಳಿಗೇನೂ ಕಡಿಮೆಯಿಲ್ಲ. ವಿಷವನ್ನು ಸದಾ ತಮ್ಮ ಒಡಲಲ್ಲಿ ತಯಾರಿಸಿಟ್ಟುಕೊಂಡು ತಿರುಗುವುದು ಖರ್ಚಿನ ಕೆಲಸ. ಕೆಲವು ಬಗೆಯ ಚಿಟ್ಟೆಗಳು ತಮ್ಮ ಸುತ್ತಲಿನ ವಿಷಕಾರೀ ಪ್ರಭೇದದ ಚಿಟ್ಟೆಗಳ ಗಾಢ ಬಣ್ಣವನ್ನಷ್ಟೇ ಹೊತ್ತು ತಿರುಗುತ್ತವೆ. ಬೇಟೆಗಾರ ಹಕ್ಕಿಗಳಿಗೆ ಎರಡೂ ಚಿಟ್ಟೆಗಳು ಒಂದೇ ಥರ ಕಾಣುವುದರಿಂದ ಕಳ್ಳಚಿಟ್ಟೆಗಳೂ ಅನಾಯಾಸವಾಗಿ ಬದುಕಿಕೊಳ್ಳುತ್ತವೆ!

ಸತ್ತು ಒಣಗಿದ ಎಲೆಗಳೆಡೆಯಲ್ಲೂ ಬಣ್ಣ-ಬೆರಗು ಹೊತ್ತ ಪಾತರಗಿತ್ತಿಯಿರಬಹುದು, ನಮಗೆ ತಾಳ್ಮೆಯಿಂದ ನೋಡುವ ಕಣ್ಣು ಬೇಕಷ್ಟೇ.

(ಚಿತ್ರಕೃಪೆ: ವೆಂಕಟೇಶ್ ಪ್ರಸಾದ್)

ಪ್ರಸನ್ನ ಆಡುವಳ್ಳಿ

ಊರು ಚಿಕ್ಕಮಗಳೂರು ಜಿಲ್ಲೆಯ ಆಡುವಳ್ಳಿ. ಸದ್ಯ ಭೋಪಾಲ ನಿವಾಸಿ. ಪ್ರತಿಭಾವಂತ ಲೇಖಕ, ಸಂಶೋಧಕ. ತಮ್ಮ ಆಸಕ್ತಿಯ ಸಂಶೋಧನೆಯ ವಿಷಯಗಳನ್ನು ಸುಲಲಿತವಾಗಿ ಬರೆಯಬಲ್ಲವರು. ಈ ಹಿಂದೆ ಪಶ್ಚಿಮ ಘಟ್ಟಗಳ ಆನೆಗಳ ಬಗ್ಗೆ, ಮಧ್ಯಭಾರತದ ಗೂಬೆಗಳ ಬಗ್ಗೆ ಅಧ್ಯಯನ ಮಾಡಿದ್ದಿದೆ. ಪ್ರಸ್ತುತ ಭಾರತೀಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಈಶಾನ್ಯ ಭಾರತದ ಜೀವವೈವಿಧ್ಯತೆಯ ವಿಕಾಸದ ಬಗ್ಗೆ ಅಧ್ಯಯನ. ಅವರ ಇದುವರೆಗಿನ ಅಧ್ಯಯನಾಸಕ್ತಿಗಳಲ್ಲಿ ಎರಡು ಬಗೆ. ಒಂದು ವಿಕಾಸವಾದ-ಜೀವವೈವಿಧ್ಯದ ಕುರಿತಾದ ಮೂಲ ವಿಜ್ಞಾನದ ಸಂಶೋಧನೆ, ಮತ್ತೊಂದು ಈ ಮಾಹಿತಿಯನ್ನು ಬಳಸಿಕೊಂಡು ಪರಿಸರ-ಜೀವವೈವಿಧ್ಯದ ಸಂರಕ್ಷಣೆ. ವನ್ಯಜೀವಿ ಸಂರಕ್ಷಣೆ, ವ್ಯಂಗ್ಯಚಿತ್ರ ಹಾಗೂ ಕೃಷಿ ಆಸಕ್ತಿಯ ವಿಷಯಗಳು. ಬಹುತೇಕ ಸಂಶೋಧನೆ-ಸಂರಕ್ಷಣೆಗಳಿಗಾಗಿ ತಿಂಗಳುಗಟ್ಟಲೆ ಕಾಡಿನಲ್ಲಿ ಅಲೆಯುವುದಿದೆ. ಪ್ರಯೋಗಾಲಯದಲ್ಲಿ ಡಿಎನ್ಎಯನ್ನು ಹೊರಗೆಳೆಯುವುದಿದೆ.

Share

Leave a comment

Your email address will not be published. Required fields are marked *

Recent Posts More

 • 1 day ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

 • 6 days ago One Comment

  ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!

          ಕಥನ         ಅಜ್ಜ ಪೆನ್ಷನ್ ತರೋದಕ್ಕೆ ಅಂತ ಪೇಟೆಗೆ ಹೋಗಿದ್ದ. ಅಷ್ಟರಲ್ಲಿ ಮನೆ ಬಾಗಿಲಲ್ಲಿ ಕಾರು ಬಂದು ನಿಂತಿತು. ಕಾರಲ್ಲಿ ಅಜ್ಜಿಯ ಮಗ, ಸೊಸೆ ಮತ್ತೆ ಆರು ವರ್ಷದ ಮೊಮ್ಮಗ ಬಂದಿದ್ರು. ಅಜ್ಜಿಗೆ ಖುಷಿ ತಡೆಯಕ್ಕಾಗದೇ ಅಡಿಗೆ ಮನೆ ಸಂದಿ ಮೂಲೇನೆಲ್ಲಾ ಹುಡುಕಿದ್ಲು. ದಡಾ ಬಡಾ ಸದ್ದು ಮಾಡಿದ್ಲು, ಸರಾಪರಾ ಸದ್ದು ಮಾಡಿದ್ಲು. ಅಡುಗೆ ಮನೆಯಿಂದ ಕೊತಾಕೊತಾ ಸದ್ದು ...

 • 1 week ago No comment

  ವಸಂತದ ನೆನಪು; ಮಾಗುವ ಹುರುಪು!

    ಜಗತ್ತಿನ ಬಗ್ಗೆ ತಿಳಿಯುತ್ತ ಸಾಗಿ, ನಮಗೆ ಈ ಜಗತ್ತು ಹೀಗೆ ನಡೆಯುತ್ತಿದೆ ಅಂತ ಅರಿತುಕೊಳ್ಳುವವರೆಗಿನದು ಮಧ್ಯವಯಸ್ಸಿನ ಕಾಲ. ನಾವು ಅಲ್ಲಿಯವರೆಗೆ, ಕಲಿತದ್ದು, ಕೇಳಿದ್ದು, ನಮಗೆ ತಿಳಿದಿದ್ದು ಎಲ್ಲವೂ ಬದಲಾಗುವ ವೇಳೆಗೆ ನಮಗೆ ವಯಸ್ಸಾಗಿಬಿಟ್ಟಿರುತ್ತದೆ. ಕಾಲದಲ್ಲಿ ಹೊಸ ಚಿಗುರು ಟಿಸಿಲೊಡೆದಿರುತ್ತದೆ.     ಕುಣಿದಾಡುವಷ್ಟು ಚೈತನ್ಯವಿರುವ ಯೌವನಕ್ಕೂ, ಕುಂದಿದ ಶಕ್ತಿಯ ಇಳಿಗಾಲದ ವೃದ್ಧಾಪ್ಯಕ್ಕೂ ನಡುವೆ ಬರುವುದು ಮಧ್ಯವಯಸ್ಸು! ಹುಟ್ಟು, ಬದುಕು ,ಸಾವು ಎಲ್ಲರಿಗೂ ಬರುತ್ತದೆ. ಬದುಕನ್ನು ಹಲವರು ಸಾಧನೆಗಳ ...

 • 1 week ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ಬಂಗಾರದ ಹೊಳಪು, ಬೇಗುದಿಯ ನೆನಪು…

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

 • 2 weeks ago No comment

  ಪ್ರಸಾದ್ ನಾಯ್ಕ್ ಪಟ್ಟಾಂಗ | ನನಗೂ ಒಬ್ಬ ಗೆಳೆಯ ಬೇಕು…

  ಆ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನಗು ಉಕ್ಕುಕ್ಕಿ ಬರುತ್ತದೆ. ಅಂದು ವಿಚಿತ್ರ ಘಟನೆಯೊಂದು ನಡೆದಿತ್ತು. ಅವು ನನ್ನ ಕಾಲೇಜಿನ ದಿನಗಳು. ಮಂಗಳೂರಿನ ಶಾಪಿಂಗ್ ಮಾಲ್ ಒಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದ ನಾನು ಫುಡ್ ಕೋರ್ಟಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆ. ಎತ್ತ ಹೋಗಬೇಕೆಂದು ತಿಳಿಯದೆ ಸುಮ್ಮನೆ ಒಂದು ಕೌಂಟರಿನತ್ತ ನಡೆದು ಬೇಕಿದ್ದದ್ದನ್ನು ಆರ್ಡರ್ ಮಾಡಿದೆ. ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಆ ಹೆಂಗಸಿಗೆ ನನ್ನ ಆಗಮನವು ಅಂಥಾ ಉತ್ಸಾಹವೇನೂ ತರಲಿಲ್ಲವಾದರೂ ನಾನು ಹೇಳಿದ್ದನ್ನೆಲ್ಲಾ ...


Editor's Wall

 • 11 May 2018
  1 month ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  2 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  2 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...