Share

ಅವರ ನಡುವೆಯೂ ಕನಸು ಹಂಚೋಣ…
ಪ್ರಸಾದ್ ನಾಯ್ಕ್ ಕಾಲಂ

ಬ್ರಿಟನ್ನಿನಲ್ಲಿ ಜೋ ಕಾಕ್ಸ್ ಭರವಸೆಯ ಹಣತೆಯನ್ನು ಹಚ್ಚಿ ಹೋಗಿದ್ದಾರೆ. ಅದರ ಬೆಳಕು ನಿಧಾನವಾಗಿಯಾದರೂ ವಿಶ್ವದೆಲ್ಲೆಡೆ ವ್ಯಾಪಿಸಲಿದೆ.

 

ಜೋ ಕಾಕ್ಸ್

“ಸಾವಿರಾರು ಮಂದಿ ಒಬ್ಬಂಟಿಗರಾಗಿ ನರಳುತ್ತಿರುವ ಹೊರತಾಗಿಯೂ ಉಳಿದವರು ಈ ಬಗ್ಗೆ ಮರೆತಂತಿರುವುದಾದರೆ ಅಂಥಾ ದೇಶದಲ್ಲಿ ನಾನು ಯಾವತ್ತಿಗೂ ಇರಬಯಸುವುದಿಲ್ಲ” ಎಂದಿದ್ದರು ಜೋ ಕಾಕ್ಸ್.

ಇಂದು ಜೋ ಕಾಕ್ಸ್ ನಮ್ಮೊಂದಿಗಿಲ್ಲ. ಆದರೆ ಅವರ ಕನಸಿನ ಬೀಜವು ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯಲು ತಯಾರಾಗಿ ನಿಂತಿದೆ. ಅದು ಇನ್ನೇನಲ್ಲ. ಇತ್ತೀಚೆಗಷ್ಟೇ ಬ್ರಿಟಿಷ್ ಪ್ರಧಾನಮಂತ್ರಿಗಳಾದ ಥೆರೇಸಾ ಮೇ ಆರಂಭಿಸಿದ ‘ಮಿನಿಸ್ಟ್ರಿ ಆಫ್ ಲೋನ್ಲಿನೆಸ್’. ಒಬ್ಬಂಟಿತನಕ್ಕೂ ಒಂದು ಸರಕಾರಿ ಮಂತ್ರಾಲಯ!

2016ರಲ್ಲಿ ಆಗಂತುಕನೊಬ್ಬ ಜೋ ಕಾಕ್ಸ್ ಅವರನ್ನು ಹಾಡಹಗಲೇ ಹತ್ಯೆಗೈದಾಗ ಇಡೀ ಬ್ರಿಟನ್ ಬೆಚ್ಚಿಬಿದ್ದಿತ್ತು. ನಲವತ್ತೊಂದು ಸಾಯುವ ವಯಸ್ಸೇನಲ್ಲ. ಅದರಲ್ಲೂ ಸಮಾಜದಲ್ಲಿ ಏನಾದರೊಂದು ಸಕಾರಾತ್ಮಕ ಬದಲಾವಣೆಯನ್ನು ತರಲೇಬೇಕೆಂಬ ಉತ್ಸಾಹದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದ, ಲವಲವಿಕೆಯಿಂದ ಕೆಲಸ ಮಾಡುತ್ತಿದ್ದ ಜೋ ರಂಥಾ ಉತ್ಸಾಹಿ ರಾಜಕಾರಣಿಗಳಿಗಂತೂ ಅಲ್ಲವೇ ಅಲ್ಲ. ಪಕ್ಷ ರಾಜಕೀಯವನ್ನೂ ಮೀರಿ ಸಿರಿಯಾ ಸಂತ್ರಸ್ತರ ಬಗ್ಗೆ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಸಂಸತ್ತಿನಲ್ಲಿ ದನಿಯೆತ್ತಿದವರು ಈಕೆ. ಜೂನ್ 2016ರಲ್ಲಿ ಹತ್ಯೆಗೊಳಗಾದಾಗ ಜೋ ಒಬ್ಬಂಟಿತನಕ್ಕೆ ಸಂಬಂಧಪಟ್ಟ ಆಯೋಗವೊಂದರ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ದಿನೇ ದಿನೇ ಹೆಚ್ಚುತ್ತಿರುವ ಒಬ್ಬಂಟಿತನದ ಸಮಸ್ಯೆಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವ ಸದುದ್ದೇಶ ಅವರಿಗಿತ್ತು. ಜನಜಾಗೃತಿಯ ನಂತರದ ಹಂತವಾಗಿ ಸಮುದಾಯ ಮತ್ತು ರಾಜಕೀಯ ನಾಯಕತ್ವದ ಶಕ್ತಿಗಳನ್ನು ಬಳಸಿಕೊಂಡು ಈ ಸಮಸ್ಯೆಗೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ದೂರದೃಷ್ಟಿಯೂ ಅವರಿಗಿತ್ತು. ಈ ಕೆಲಸಗಳನ್ನು ಜೋ ಯಾರ್ಕ್ಶೈರ್ ನಲ್ಲಿರುವ ತಮ್ಮ ಚುನಾವಣಾ ಕ್ಷೇತ್ರಗಳಾದ Batley ಮತ್ತು Spenಗಳಿಂದಲೇ ಆರಂಭಿಸಿದ್ದರು ಎಂಬುದನ್ನು ಹೇಳಲೇಬೇಕು.

ಜೋ ಕಾಕ್ಸ್ ರ ಹತ್ಯೆಯ ನಂತರ ಅವರ ಕನಸಿನ ತೇರನ್ನು ಯಶಸ್ವಿಯಾಗಿ ಮುನ್ನಡೆಸಿದವರು ಸಂಸದರಾದ ರೇಶಲ್ ರೀವ್ಸ್ ಮತ್ತು ಸೀಮಾ ಕೆನಡಿ. ಒಬ್ಬಂಟಿತನ ಸಂಬಂಧಿ ಜೋ ಕಾಕ್ಸ್ ಆಯೋಗದ ಚುಕ್ಕಾಣಿಯನ್ನು ಹಿಡಿದು ಮುನ್ನಡೆಸಿದ ಈ ಈರ್ವರು ವರದಿಯನ್ನು ಬಿಡುಗಡೆಗೊಳಿಸಿದರಲ್ಲದೆ ಈ ಬಗ್ಗೆ ಸರಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. “ಒಬ್ಬಂಟಿತನವು ಎಳೆಯರಿಂದ ಹಿಡಿದು ಮುದುಕರನ್ನೂ ಕಾಡಿಸಿದೆ… ಅದೃಷ್ಟವಶಾತ್ ನಮ್ಮನಿಮ್ಮಂತಹ ಜನಸಾಮಾನ್ಯರು ಇದನ್ನು ನಿವಾರಿಸಲು ನೆರವಾಗಬಲ್ಲರು ಕೂಡ. ನೆರೆಕರೆಯವರ ಬಗೆಗಿನ ಚಿಕ್ಕ ಕಾಳಜಿ, ವೃದ್ಧ ಸಂಬಂಧಿಗಳ ಮನೆಗೊಂದು ಭೇಟಿ, ಹಲವು ದಿನಗಳಿಂದ ಭೇಟಿಯಾಗದಿರುವ ಗೆಳೆಯನೊಬ್ಬನಿಗೆ ನೀಡಿರುವ ಭರವಸೆಯಂತೆ ಮಾಡಬೇಕಿರುವ ಒಂದು ಟೆಲಿಫೋನ್ ಕರೆ ಅಥವಾ ಒಂದು ಭೇಟಿ. ಹೀಗೆ ನಿಮ್ಮ ಹೆಜ್ಜೆಯು ಏನು ಬೇಕಾದರೂ ಆಗಬಹುದು” ಎಂದಿದ್ದರು ಜೋ ಕಾಕ್ಸ್. ಈ ಮಹಾತ್ವಾಕಾಂಕ್ಷಿ ಆಯೋಗದ ಬಗ್ಗೆ ಆಕೆಗಿದ್ದ ನಿರೀಕ್ಷೆಗಳು ದೊಡ್ಡ ಮಟ್ಟಿನದ್ದೇ ಎಂದು ಹೇಳಬಹುದು. ಆದರೆ ಈ ಕ್ಷಣಕ್ಕೆ ಸಾಕ್ಷಿಯಾಗಲು ಅವರು ನಮ್ಮೊಂದಿಗಿಲ್ಲದಿರುವುದು ಮಾತ್ರ ವಿಪರ್ಯಾಸ.

ಜೋ ಕಾಕ್ಸ್ ಆಯೋಗವು ತನ್ನ ವರದಿಯಲ್ಲಿ ಹಲವು ಪ್ರಮುಖ ಅಂಶಗಳನ್ನು ಬೆಳಕಿಗೆ ತಂದಿದ್ದಂತೂ ಸತ್ಯ. ಬ್ರಿಟನ್ನಿನಲ್ಲಿ ಒಂಭತ್ತು ಮಿಲಿಯನ್ ಗೂ ಹೆಚ್ಚಿನ ವಯಸ್ಕರು ಒಬ್ಬಂಟಿತನದಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ವರದಿಯು ನೀಡಿತ್ತು. ಲಂಡನ್ನಿಗೆ ಬಂದಿಳಿದ 58% ಗೂ ಹೆಚ್ಚಿನ ಪ್ರಮಾಣದ ವಲಸಿಗರ ಸಮಸ್ಯೆಯೂ ಇದಾಗಿತ್ತು. 75 ವರ್ಷಕ್ಕಿಂತ ಹೆಚ್ಚಿನವರಲ್ಲಿ ಮೂವರಲ್ಲೊಬ್ಬರು ಕಾಡುತ್ತಿರುವ ಒಬ್ಬಂಟಿತನದ ಭಾವನೆಗಳನ್ನು ನಿಯಂತ್ರಿಸಲಾರದೆ ಒದ್ದಾಡುತ್ತಿದ್ದರು. ಸರಾಸರಿ 65ರ ವಯಸ್ಸಿನ ಬರೋಬ್ಬರಿ 3.6 ಮಿಲಿಯನ್ ಹಿರಿಯರಿಗೆ ಒಂಟಿತನವನ್ನು ಹೊಡೆದೋಡಿಸಲು ಸಂಗಾತಿಯಾಗಿದ್ದಿದ್ದೆಂದರೆ ಟೆಲಿವಿಷನ್ ಮಾತ್ರ. ಹತ್ತರಲ್ಲಿ ಒಂದಕ್ಕಿಂತಲೂ ಹೆಚ್ಚಿನ ವಯಸ್ಕ ಪುರುಷರು ಒಂಟಿತನದಿಂದ ಬಳಲುತ್ತಿದ್ದರು, ಆದರೆ ಈ ಸಂಗತಿಯನ್ನು ರಹಸ್ಯವಾಗಿಟ್ಟುಕೊಂಡು ಒಳಗೊಳಗೇ ಕೊರಗುತ್ತಿದ್ದರು.

ಟ್ರೇಸಿ ಕ್ರೌಚ್

ಅಂತೂ ಒಂಟಿತನದ ನಿಟ್ಟುಸಿರಿನ ಬಿಸಿ ಬಹುಶಃ ಪ್ರಧಾನಮಂತ್ರಿಯವರಿಗೂ ತಟ್ಟಿರಬೇಕು. ಇವೆಲ್ಲದರ ಫಲವೇ ‘ಮಿನಿಸ್ಟ್ರಿ ಆಫ್ ಲೋನ್ಲಿನೆಸ್’. ಸದ್ಯ ಪ್ರಧಾನಿಯಾದ ಥೆರೇಸಾ ಮೇ ಕ್ರೀಡಾ ಮತ್ತು ನಾಗರಿಕ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಮತ್ತೋರ್ವ ಸಮರ್ಥ ಮಹಿಳೆಯಾದ ಟ್ರೇಸಿ ಕ್ರೌಚ್ ರ ಕೈಗೆ ಈ ಹೊಸ ಸರಕಾರಿ ಮಂತ್ರಾಲಯದ ಸಾರಥ್ಯವನ್ನು ನೀಡಿದ್ದಾರೆ. ಇದು ಒಂದು ರೀತಿಯಲ್ಲಿ ಸರಕಾರವು ಜೋ ಕಾಕ್ಸ್ ರಿಗೆ ಸಲ್ಲಿಸಿರುವ ಅರ್ಥಪೂರ್ಣ ಗೌರವಾರ್ಪಣೆಯೂ ಹೌದು.

ಇಂಥದ್ದೊಂದು ವಿಚಿತ್ರ ಹೆಸರಿನ ಸರಕಾರಿ ಮಂತ್ರಾಲಯವನ್ನು ರೂಪಿಸಿ ಥೆರೇಸಾ ಮೇ ಮತ್ತೆ ಸುದ್ದಿಯಾಗಿದ್ದು ಈ ಬಾರಿಯ ವಿಶೇಷ. ಆದರೆ ಥೆರೇಸಾರ ನೇತೃತ್ವದ ಸರಕಾರದ ನಡೆಯು ಸ್ವಾಗತಾರ್ಹ ಎಂಬುದರಲ್ಲಿ ಎರಡು ಮಾತಿಲ್ಲ. ಮಾನಸಿಕ ಆರೋಗ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ದೂರದೃಷ್ಟಿಯ ಇಂಥಾ ನಡೆಗಳು ಉಳಿದ ದೇಶಗಳಿಗೂ ಮಾದರಿಯಾಗಲಿ ಎಂಬುದೇ ಆಶಯ.

~ ~ ~

ಅದು ಕ್ವಾರ್ಟ್ಝ್ ಇಂಡಿಯಾ ಕಳೆದ ವರ್ಷವಷ್ಟೇ ಪ್ರಕಟಿಸಿದ್ದ ಒಂದು ವರದಿ.

ಒಬ್ಬಂಟಿತನದಿಂದ ನರಳುತ್ತಿರುವ ಭಾರತದ ಹಿರಿಯ ನಾಗರಿಕರನ್ನು ಉದ್ದೇಶವಾಗಿರಿಸಿಕೊಂಡು ಹೊಸದೊಂದು ಬಗೆಯ ಕೇರ್ ಸೆಂಟರ್ ಗಳು ತಲೆಯೆತ್ತಿದ್ದವು. ಅವುಗಳು ವೃದ್ಧಾಶ್ರಮಗಳಲ್ಲ. ಬದಲಾಗಿ ಏಕಾಂಗಿಯಾಗಿರುವ ವೃದ್ಧರ ಮನೆಗೇ ಒಬ್ಬರು ಹೋಗಿ ಅವರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯುವುದು. ಅವರೊಂದಿಗೆ ಹರಟೆಯೋ, ವಾಕಿಂಗೋ, ಓದೋ ಇನ್ನೇನೋ ಮಾಡುವುದು. ಅವರ ಮಾತುಗಳಿಗೆ ಕಿವಿಯಾಗುವುದು, ಸಾಧ್ಯವಾದರೆ ಅವರೊಂದಿಗೆ ಸರಳ ಬೋರ್ಡ್ ಗೇಮ್ ಗಳನ್ನಾಡುವುದು. ಅಷ್ಟೇ ಅಲ್ಲದೆ ಆಸಕ್ತ ವೃದ್ಧರಿಗೆ ಸಂಗೀತ, ಚಿತ್ರಕಲೆಗಳನ್ನಲ್ಲದೆ ಸರಳ ಸಂವಹನ ಸ್ಮಾರ್ಟ್ಫೋನ್ ಆಪ್ ಗಳಾದ ವಾಟ್ಸಾಪ್ ಮತ್ತು ಅಂತರ್ಜಾಲದ ಪ್ರಾಥಮಿಕ ಹಂತದ ಬಳಕೆಗಳನ್ನೂ ಕಲಿಸುವುದು. ಹೀಗೆ ಈ ಸಂಸ್ಥೆಗಳ ಕಡೆಯಿಂದ ದಿನನಿತ್ಯವೋ, ಎರಡು ದಿನಗಳಿಗೊಮ್ಮೆಯೋ (ಆಯ್ದ) ಸ್ವಯಂಸೇವಕರು ಬಂದು ವೃದ್ಧರೊಂದಿಗೆ ಸಮಯವನ್ನು ಕಳೆಯುತ್ತಿದ್ದರು. ಇದರಿಂದಾಗಿ ಈ ವೃದ್ಧರನ್ನು ನಿತ್ಯವೂ ಸದ್ದಿಲ್ಲದೆ ಕೊಲ್ಲುತ್ತಿದ್ದ ಒಬ್ಬಂಟಿತನಕ್ಕೆ ಕೊಂಚ ಪರಿಹಾರವೂ ಆಗುತ್ತಿತ್ತು. ಇತ್ತ ಹೀಗೆ ಬರುತ್ತಿದ್ದ ಸ್ವಯಂಸೇವಕರಿಗೆ ಸಂಸ್ಥೆಯಿಂದ ಕೊಡಲಾಗುತ್ತಿದ್ದ ಸಂಭಾವನೆಯಿಂದ ಒಂದಿಷ್ಟು ಸಂಪಾದನೆಯಾಗುವುದಲ್ಲದೆ ಅಸಹಾಯಕ ವೃದ್ಧರಿಗೆ ನೆರವಾದ ಸಾರ್ಥಕತೆಯ ಭಾವವೂ ದಕ್ಕುತ್ತಿತ್ತು.

ಹೀಗೆ ದೆಹಲಿ, ಮುಂಬೈ, ಪುಣೆ, ಗುರುಗ್ರಾಮ, ಅಹಮದಾಬಾದ್ ಗಳಂತಹ ಶಹರಗಳಲ್ಲಿ ಆರಂಭವಾಗಿದ್ದ ಇಂಥದ್ದೊಂದು ವ್ಯವಸ್ಥೆಯ ಬಗ್ಗೆ ಕ್ವಾರ್ಟ್ಝ್ ವಿವರವಾಗಿ ಬರೆದಿತ್ತು. ಕ್ವಾರ್ಟ್ಝ್ ಇದಕ್ಕೆ ನೀಡಿದ ಶೀರ್ಷಿಕೆಯೂ ವಿಭಿನ್ನವಾದದ್ದೇ. “ಭಾರತದ ಹಿರಿಯ ನಾಗರಿಕರು ಅದೆಷ್ಟು ಒಬ್ಬಂಟಿಗಳೆಂದರೆ ಜೊತೆಗಾಗಿ ಮೊಮ್ಮಕ್ಕಳನ್ನು ಬಾಡಿಗೆಗೆ ಪಡೆದುಕೊಂಡು ದಿನತಳ್ಳುತ್ತಿದ್ದಾರೆ” ಎಂಬರ್ಥದ ತಲೆಬರಹವನ್ನು ಜಾಲತಾಣವು ನೀಡಿತ್ತು. ಇದು ಸತ್ಯವೂ ಹೌದು. 2012ರಲ್ಲೇ ಪ್ರಸಾದ್ ಭಿಡೆಯವರು ‘ಆಜಿ ಕೇರ್’ ಎಂಬ ಹೆಸರಿನಲ್ಲಿ ಇಂಥದ್ದೊಂದು ಪುಟ್ಟ ವ್ಯವಸ್ಥೆಯನ್ನು ಆರಂಭಿಸಿದ್ದರು. ಮುಂದೆ ದೆಹಲಿಯಲ್ಲಿ ಸಂವೇದನಾ ಸೀನಿಯರ್ ಕೇರ್, ಫಸ್ಟ್ ಸೀನಿಯರ್ಸ್, ಪುಣೆಯಲ್ಲಿ ಮಾಯಾ ಕೇರ್ ಇತ್ಯಾದಿಗಳು ಯಶಸ್ವಿಯಾದವು. ಹೀಗೆ ವೃದ್ಧರನ್ನು ನೋಡಿಕೊಳ್ಳಲು ನೇಮಿಸಲಾಗುವ ಸ್ವಯಂಸೇವಕರನ್ನು ಅವರ ಆಸಕ್ತಿ, ಅರ್ಹತೆ ಮತ್ತು ಪೂರ್ವಾಪರಗಳನ್ನು ಕೂಲಂಕಷವಾಗಿ ಪರಿಶೀಲಿಸಿಯೇ ನೇಮಿಸಲಾಗುತ್ತದೆ ಎಂಬುದು ಗಮನಾರ್ಹ ಅಂಶ.

Union Ministry of Statistics and Program Implementationನ ವರದಿಯಿಂದ ಹಿಂದೂಸ್ತಾನ್ ಟೈಮ್ಸ್ ತೆಗೆದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸದ್ಯಕ್ಕಿರುವ ಹಿರಿಯ ನಾಗರಿಕರ ಸಂಖ್ಯೆ 104 ಮಿಲಿಯನ್. ಅದು ಒಟ್ಟು ಜನಸಂಖ್ಯೆಯ 8.6% ಪ್ರತಿಶತದಷ್ಟಾಗುತ್ತದೆ. 2001 ರಿಂದ 2011ರ ನಡುವೆ ಈ ಸಂಖ್ಯೆಯು 36% ದಷ್ಟು ಹೆಚ್ಚಿದೆ. ಹೆಚ್ಚಿದ ಜೀವಿತಾವಧಿ ಮತ್ತು ಕಮ್ಮಿ ಮಕ್ಕಳಿರುವವರ ಸಂಖ್ಯೆಯ ಹೆಚ್ಚಳದ ಬೆನ್ನಿಗೇ ದೇಶದ ಹಿರಿಯ ನಾಗರಿಕರ ಸಂಖ್ಯೆಯೂ ಏರುಮುಖವಾಗಿ ಸಾಗಿದೆ. ಭಾರತದ ಯುವವರ್ಗವನ್ನಷ್ಟೇ ಪರಿಗಣನೆಗೆ ತೆಗೆದುಕೊಂಡರೂ ಮಾನಸಿಕ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವವರ ಶೇಕಡಾವಾರು ಸಂಖ್ಯೆ ದೊಡ್ಡದಿದೆ. ಇನ್ನು ಬ್ರಿಟನ್ನಿನಲ್ಲಿರುವಂತೆಯೇ ಇತರ ಸಮಸ್ಯೆಗಳನ್ನೊಳಗೊಂಡಂತೆ ಒಬ್ಬಂಟಿತನದ ಸಮಸ್ಯೆಯೊಂದಿಗೆ ಸೆಣಸಾಡುತ್ತಿರುವ ಹಿರಿಯ ನಾಗರಿಕರದ್ದೇ ಒಂದು ವರ್ಗ. ಒಂಟಿತನವು ಬ್ರಿಟಿಷ್ ಸರ್ಕಾರಕ್ಕೆ ಆಗಲೇ ಬ್ರಹ್ಮರಾಕ್ಷಸನಂತೆ ಕಾಡಿಯಾಗಿದೆ. ಮುಂದೆ ಇದು ನಮ್ಮನ್ನು ಕಾಡಿದರೂ ಅಚ್ಚರಿಯಿಲ್ಲ. ಆಧುನಿಕತೆಯ ವೇಗದಲ್ಲಿ ನಾವು ಎತ್ತ ಸಾಗುತ್ತಿದ್ದೇವೆ ಎಂದು ಒಂದು ಕ್ಷಣವಾದರೂ ನಿಂತು ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಾದ ಕಾಲಘಟ್ಟವಿದು.

ಒಂಟಿತನವನ್ನು ಒಂದು ಹಂತವೆಂದು ಸಾಮಾನ್ಯವಾಗಿ ಪರಿಗಣಿಸಿ ನಿರ್ಲಕ್ಷಿಸಲಾಗುತ್ತದೆಯಾದರೂ ಇದನ್ನು ಸರಿಯಾದ ಸಮಯದಲ್ಲಿ ಮತ್ತು ಹಂತದಲ್ಲಿ ನಿಯಂತ್ರಣಕ್ಕೆ ತರಲಾಗದಿದ್ದರೆ ಮುಂದೆ ದೊಡ್ಡ ಮಟ್ಟಿನ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುವುದಂತೂ ಹೌದು. ಆತಂಕ, ಖಿನ್ನತೆ, ಹೈಪರ್ ಟೆನ್ಷನ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಇವುಗಳಲ್ಲಿ ಪ್ರಮುಖವಾದವು. ಇನ್ನು ತೀರಾ ಗಂಭೀರವಾದ ಹಂತಕ್ಕೆ ತಲುಪಿದವರಲ್ಲಿ ಆತ್ಮಹತ್ಯೆಯಂತಹ ಅನಾಹುತಗಳಿಗೂ ಒಂಟಿತನವು ಕಾರಣವಾಗಬಹುದು. ಜೊತೆಗೇ ನೌಕರಿ ಮತ್ತು ಇತರೆ ಉದ್ದೇಶಗಳನ್ನಿಟ್ಟುಕೊಂಡು ಮಹಾನಗರಗಳಿಗೆ ವಲಸೆ ಬರುತ್ತಿರುವ ವರ್ಗದಲ್ಲೂ ಒಂಟಿತನದ ಸಮಸ್ಯೆಗಳು ಗಣನೀಯ ಸಂಖ್ಯೆಯಲ್ಲಿ ದಾಖಲಾಗಿವೆ. ಇಲ್ಲಿ ಜನರು ತಮ್ಮ ಒಂಟಿತನ ಮತ್ತು ಅಭದ್ರತೆಗಳನ್ನು ನೀಗಿಸಿಕೊಳ್ಳಲು ಧೂಮಪಾನ, ಮದ್ಯಪಾನ ಮತ್ತು ಡ್ರಗ್ಸ್ ಇತ್ಯಾದಿ ತರಹೇವಾರಿ ಚಟಗಳಿಗೆ ದಾಸರಾಗುತ್ತಿರುವ ಮಟ್ಟಿನವರೆಗೂ ಪರಿಸ್ಥಿತಿಯು ಬಂದು ನಿಂತಿದೆ.

ಜೋ ಕಾಕ್ಸ್ ಆಯೋಗದ ವರದಿಯಲ್ಲಿ ದಾಖಲಾಗಿರುವ ಪ್ರಕಾರ ಒಂಟಿತನದಿಂದ ಬಳಲುತ್ತಿರುವವರಿಗೆ ತಮ್ಮ ಕೈಲಾದ ಸಹಾಯವನ್ನು ತಮ್ಮ ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಮಾಡಬಹುದು ಎಂಬುದನ್ನು 81% ಕ್ಕೂ ಹೆಚ್ಚು ಜನರು ಒಪ್ಪಿಕೊಂಡಿದ್ದಾರೆ. ಹೀಗಾಗಿಯೇ ಈ ವರದಿಯು ಸಮಸ್ಯೆಯ ನಿವಾರಣೆಯ ಸಂಪೂರ್ಣ ಭಾರವನ್ನು ಸರಕಾರದ ತಲೆಯ ಮೇಲಷ್ಟೇ ಹೊರಿಸದೆ ಸಮುದಾಯಗಳ ಮಟ್ಟಿನವರೆಗೂ ತಂದಿದೆ. ವರದಿಯೇ ಹೇಳಿರುವಂತೆ ‘Great Wirral Door Knock’, ‘Reconnections’ ಮತ್ತು ‘Action for Children’ನಂತಹ ಸ್ಥಳೀಯ ತಂಡಗಳು, ಕಾರ್ಯಕ್ರಮಗಳು ಇಂಥಾ ಹೆಜ್ಜೆಗಳನ್ನಿರಿಸಿ ಯಶಸ್ವಿಯೂ ಆಗಿವೆ.

ಬ್ರಿಟನ್ನಿನಲ್ಲಿ ಜೋ ಕಾಕ್ಸ್ ಭರವಸೆಯ ಹಣತೆಯನ್ನು ಹಚ್ಚಿ ಹೋಗಿದ್ದಾರೆ. ಅದರ ಬೆಳಕು ನಿಧಾನವಾಗಿಯಾದರೂ ವಿಶ್ವದೆಲ್ಲೆಡೆ ವ್ಯಾಪಿಸಲಿದೆ ಎಂಬ ಆಶಾವಾದ ನನ್ನದು.

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 1 month ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...