Share

ನಾನು ಕುಣಿಯುತ್ತೇನೆ, ನೀವು?
ಕಾದಂಬಿನಿ ಕಾಲಂ

 

 

 

 

 

 

 

 

 

 

ನಾವು ನೃತ್ಯ ಮಾಡದಂತೆ ನಮ್ಮನ್ನು ಕಟ್ಟಿಹಾಕಿರುವ ಸಂಗತಿಗಳಾವುವು? ಆ ಕಟ್ಟುಗಳನ್ನು ನಾವೇಕೆ ಹರಿದುಕೊಳ್ಳುವುದಿಲ್ಲ? ಹೀಗೆ ನಾವು ಮಹಿಳೆಯರು ನಮ್ಮನ್ನು ನಾವು ಕೇಳಿಕೊಳ್ಳುವುದು ಯಾವಾಗೆಂದು ನಾನು ಯೋಚಿಸುತ್ತಲೇ ಇರುತ್ತೇನೆ.

 

ನಾನು ಕಾಲ ಮೇಲೆ ಕಾಲಿಟ್ಟುಕೊಂಡು ಒಂದು ಕೈಲಿ ಪಾದವನ್ನು ನೀವಿಕೊಳ್ಳುತ್ತಾ, ಬ್ರೆಜಿಲ್ ನ ಯುನಿಮ್ಡ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫರ್ನಾಂಡೋ ಗ್ಯೂಡ್ಸ್ ಡಿ’ಕುನ್ಹಾ ಎಂಬ ವೈದ್ಯ ಹೆರಿಗೆ ನೋವು ಅನುಭವಿಸುತ್ತಿರುವ ಗರ್ಭಿಣಿಯರಿಗೆ ನೃತ್ಯ ಮಾಡಿಸುತ್ತಲೇ ಹೆರಿಗೆ ಮಾಡಿಸುವ ಕುರಿತ ಪತ್ರಿಕಾ ವರದಿಯೊಂದನ್ನು ಓದುತ್ತಿದ್ದೆ. ಓದಿ ಮುಗಿಸಿದ್ದೇ ನನ್ನ ಕಣ್ಣುಗಳು ಪತ್ರಿಕೆಯ ಮೇಲಿನಿಂದ ನಾನು ನೀವಿಕೊಳ್ಳುತ್ತಿದ್ದ ಪಾದದ ಮೇಲೆ ಹರಿದವು. ಪುಟ್ಟ ಗಾಯದಿಂದಾಗಿ ಕೆಂಪಾಗಿದ್ದ ಪಾದವನ್ನು ನೋಡುತ್ತಲೇ ನನ್ನ ತುಟಿಗಳ ಮೇಲೆ ತುಂಟ ನಗು ಕುಣಿಯತೊಡಗಿತು. ಪತ್ರಿಕೆಯನ್ನು ಟೀಪಾಯಿಯ ಮೇಲೆ ಇಟ್ಟು ಟೀ ಕಪ್ಪನ್ನು ಎತ್ತಿಕೊಳ್ಳೋಣವೆಂದು ಕೈ ಚಾಚಿದರೆ ‘ಆಹ್’ ನೋವು! ಮತ್ತೀಗ ಸಶಬ್ದವಾಗಿ ನಗತೊಡಗಿದೆ.

ಅದರ ಹಿಂದಿನ ದಿನ ಒಂದೆಡೆ ಕೆಸರುಗದ್ದೆ ಆಟೋಟವನ್ನು ಹಮ್ಮಿಕೊಳ್ಳಲಾಗಿತ್ತು. ನಾನು ವೈರಲ್ ಜ್ವರ ತಿಂಗಳ ತನಕ ಹೈರಾಣು ಮಾಡಿದ್ದನ್ನೂ ಮರೆತು ಆಟಗಳಲ್ಲಿ ಭಾಗವಹಿಸಿದ್ದೂ ಅಲ್ಲದೆ, ಎಲ್ಲಾ ಆಟಗಳಲ್ಲೂ ಸೋತು, ಆಟ ಮುಗಿದ ಮೇಲೆ ಕೆಸರುಗದ್ದೆಯಲ್ಲಿ ಸೇರಿದ ಹಿರಿಕಿರಿಯರೊಡನೆ ಸೇರಿಕೊಂಡು ಜಗತ್ತನ್ನೇ ಮರೆತು ಪೆಂಗ್ವಿನ್ ಡಾನ್ಸ್, ಲುಂಗಿ ಡಾನ್ಸ್, ಝೂಂಬಾ, ಏರೋಬಿಕ್ಸ್ ಹೀಗೆ ಸಿಕ್ಕಾಪಟ್ಟೆ ಕುಣಿದಿದ್ದೆ. ಕೆಸರಲ್ಲಿ ಬಿದ್ದೂ ಎದ್ದೂ ಕುಣಿದೂ ಕುಣಿದೂ ವಾರಕ್ಕಾಗುವಷ್ಟು ಮೈಕೈ ನೋವನ್ನು ಹೊತ್ತುತಂದಿದ್ದಲ್ಲದೆ ಕೆಸರಿನೊಳಗಿನ ಕಲ್ಲು ತುಳಿದು ಪಾದಕ್ಕೆ ಗಾಯವನ್ನೂ ಮಾಡಿಕೊಂಡು ಬಂದಿದ್ದೆ. ಈ ಗಾಯದ ಒಳಗೆ ಮರಳು ಸೇರಿಕೊಂಡು ಮರುದಿನ ಕೀವಾಗಿ ಊದಿಕೊಂಡುಬಿಟ್ಟಿತ್ತು. ಆದರೆ ನನಗೆ ಈ ನೋವುಗಳ ಮೇಲೆ ಮೂರ್ಕಾಸಿನ ದಯೆ ಬಂದಿರಲಿಲ್ಲ. ಬದಲಿಗೆ ಜಗತ್ತನ್ನೇ ಗೆದ್ದುಬಂದವಳಂತೆ ಸಂಭ್ರಮಿಸುತ್ತಿದ್ದೆ.

ಡಾನ್ಸ್ ನನ್ನ ಏಕಾಕಿತನದ ಸಂಗಾತಿ, ನನ್ನ ಫಿಟ್ನೆಸ್ ಗುರು, ನನ್ನ ಪ್ರಾಪಪ್ರಜ್ಞೆಯ ದಂಡನೆ, ನನ್ನ ಖುಷಿಯ ಪಾಲುದಾರ ಎಲ್ಲವೂ ಹೌದು. ಒಂದು ಕಾಲವಿತ್ತು. ನಾವು ಗಂಟೆಗಟ್ಟಲೆ ಹರಟುತ್ತಿದ್ದೆವು. ನಾನು ಅವನಿಗೆ, ನಾನೂ ನೀನೂ ಭೇಟಿಯಾದಾಗ ಸಾಲ್ಸಾ ಮಾಡೋಣವೇ? ಎನ್ನುತ್ತಿದ್ದೆ. ಅವನು ಉತ್ಸುಕನಾಗಿ ‘ಖಂಡಿತಾ’ ಎನ್ನುತ್ತಿದ್ದ. ಆದರೆ ಅವ ಸಾಲ್ಸಾ ಎಂದರೆ ತಾಮ್ರದ ಪಟ್ಟಿಗಳನ್ನು ತಳದಲ್ಲಿ ಅಳವಡಿಸಿಕೊಂಡ ಪಾದರಕ್ಷೆಗಳನ್ನು ಧರಿಸಿ ಮಾಡುವ ಟ್ಯಾಪ್ ಡ್ಯಾನ್ಸ್ ಎಂದುಕೊಂಡಿದ್ದ. ನಾನವನಿಗೆ ಸಾಲ್ಸಾ ಅಂದರೇನೆಂದು ವಿವರಿಸಲು ಹೆಣಗುತ್ತಿದ್ದೆ. ನೀನು ಬಂದಾಗ ನಿನಗೆ ಸಾಲ್ಸಾ ಕಲಿಸುತ್ತೇನೆ ಎನ್ನುತ್ತಿದ್ದೆ. ಅವನ ಕಣ್ಣಲ್ಲಿ ಕಣ್ಣು ನೆಟ್ಟು ಅವನ ಬಾಹುಗಳಲ್ಲಿ ಬಾಹುಗಳನ್ನು ಬೆಸೆದು ಸಾಲ್ಸಾ ಮಾಡುವ ಸುಂದರಾತಿ ಸುಂದರ ಕನಸುಗಳು ನನ್ನ ಕಣ್ಣು ತುಂಬುತ್ತಿದ್ದವು.

ಡಾನ್ಸ್ ಎಂದರೆ ನನಗೆ ಇಂಡಿಯನ್ ಕ್ಲಾಸಿಕಲ್ ಮಾತ್ರವಲ್ಲ, ಯೂರೋಪಿನ ಟ್ಯಾಪ್ ಡ್ಯಾನ್ಸ್, ಸಾಲ್ಸಾ, ಆಫ್ರಿಕಾದ ಬೂಟೀ, ಹಿಪ್ ಹಾಪ್, ಅರಬ್ ನ ಬೆಲ್ಲಿ, ರಷ್ಯನ್ ಬ್ಯಾಲೆ, ಲ್ಯಾಟಿನ್ ಮೂಲದ ಝೂಂಬಾ, ಏರೋಬಿಕ್ಸ್ ಹೀಗೆ ಎಲ್ಲವೂ ಇಷ್ಟವೇ. ಇವನ್ನೆಲ್ಲ ಶಾಸ್ತ್ರೀಯವಾಗಿ ಕಲಿಯದಿದ್ದರೂ ನನ್ನ ಬದುಕಿಗೆ ಬೇಕಷ್ಟು ಹೆಜ್ಜೆ ಹಾಕಬಲ್ಲೆ. ಕ್ರೈಸ್ತರ ಮದುವೆ, ಸಂಭ್ರಮಗಳಲ್ಲಿ ಹೆಣ್ಣು ಗಂಡು ಭೇದವಿಲ್ಲದೆ ವೆಡ್ಡಿಂಗ್ ಡಾನ್ಸ್, ಪೆಂಗ್ವಿನ್ ಡಾನ್ಸ್ ಹೀಗೆ ಎಲ್ಲಕ್ಕೂ ಚಿಕ್ಕ ಹುಡುಗಿಯಂತೆ ಸಂಭ್ರಮಿಸುತ್ತೇನೆ. ಭರತನಾಟ್ಯಂನಂಥ ಡ್ಯಾನ್ಸನ್ನು ತೆಪ್ಪಗೆ ಕೂತು ನೋಡುವ ನಾನು ‘ಬಾರಿ ಬರ್ಸಿ ಖಟನ್ ಗಯಾಸಿ ಖಟ್ಕೆ ಲಿಯಾಂದಾ..’ ಎಂದು ಶುರುವಿಡುವಾಗ ಮೈಮರೆತುಬಿಡುತ್ತೇನೆ. ನನಗರಿವಿಲ್ಲದೆ ಭಾಂಗ್ಡಾಕ್ಕೆ ಕಾಲು ಕೈ ಕುಣಿಯತೊಡಗುತ್ತವೆ. ಟರೆಟ್ಟಟ್ಟಟ್ಟರೆ ಢಂಡರೆ ಢಂಡರೆ ಟಟ್ಟರೆ ಟಟ್ಟರೆ ಪ್ರತಿ ವರ್ಷ ತಾಸೆ ಬಡಿಯುತ್ತ ಹುಲಿವೇಷ ಕುಣಿಯುತ್ತಿದ್ದರೆ ನನ್ನೊಳಗಿನ ನಾನೂ ಹುಲಿ ಕುಣಿಯುತ್ತಿರುತ್ತೇನೆ. ಯಾರಾದರೂ ನೀನೊಂದು ಹೆಣ್ಣಾಗಿ ಅದೂ ಇಷ್ಟು ವಯಸ್ಸಾಗಿ ಹೀಗೆ ಕುಣಿಯಲು ನಾಚಿಕೆಯಾಗೋಲ್ಲವೇ ಎಂದು ಕೇಳಿದರೆ ಎಂದು, ‘ಹಕ್ಕಿಗಳು ಖುಷಿಯಾದಾಗ ಕುಣಿಯುತ್ತವೆ, ಪ್ರಾಣಿಗಳು ಕುಣಿಯುತ್ತವೆ, ಗಂಡಸರು ಕುಣಿಯುತ್ತಾರೆ ನಾನೇಕೆ ಕುಣಿಯಬಾರದು?’ ಎಂಬ ಉತ್ತರವನ್ನು ನಾಲಿಗೆಯ ತುದಿಯಲ್ಲಿ ನಿಶಿತವಾಗಿ ಮಸೆದು ಇರಿಸಿಕೊಳ್ಳುತ್ತೇನೆ.

ಬಾಲ್ಯದಿಂದಲೂ ಕೊಂಚ ನಾಚಿಕೆಯ ಸ್ವಭಾವದ ನಾನು ಯಾರೆದುರಾದರೂ ಡಾನ್ಸ್ ಮಾಡಲು ನಾಚಿ ಹಿಂದೆ ಸರಿಯುತ್ತಿದ್ದೆ. ಬರಬರುತ್ತಾ ನನ್ನ ಸುತ್ತಮುತ್ತಲ ಪಂಜಾಬಿ ಮಹಿಳೆಯರು ಭಾಂಗ್ಡಾ ಹಾಡು ಹಾಕಿಕೊಂಡು ಕುಣಿಯುವಾಗ ನನ್ನೊಳಗಿನ ಕುಣಿಯುವ ಹುಚ್ಚು ಗರಿಗೆದರುತ್ತಲೇ ಇರುತ್ತಿತ್ತು. ಟಿವಿಗಳಲ್ಲಿ ಫಿಟ್ನೆಸ್ ತಜ್ಞರು ಮಹಿಳೆಯರ ಫಿಟ್ನೆಸ್ ಗಾಗಿ ವರ್ಕ್ ಔಟ್ ಗಿಂತಲೂ ಏರೋಬಿಕ್ಸ್ ಮತ್ತು ಝೂಂಬಾದಂತಹ ನೃತ್ಯ ಒಳ್ಳೆಯದೆನ್ನುವಾಗ, ಮಹಿಳೆಯರು ಅದಕ್ಕೆ ಹೆಜ್ಜೆ ಹಾಕುವಾಗ ನಾನೂ ಬೆಗರುಗಣ್ಣಗಲಿಸಿ ಎಲ್ಲ ಹೆಜ್ಜೆಗಳನ್ನೂ ನೋಡುತ್ತಿರುತ್ತಿದ್ದೆ. ದಿನಕಳೆದಂತೆ ಒಂಟಿಯಾಗಿದ್ದಾಗ ತೀರಾ ಒಂಟಿತನ ಕಾಡುವಾಗ, ಯಾರಿಗೋ ತಪ್ಪು ಮಾಡಿ ಪಾಪಪ್ರಜ್ಞೆ ದಹಿಸುವಾಗ, ನೊಂದು ಜಡವಾದಾಗ ಕೋಣೆಯ ಬಾಗಿಲು ಮುಚ್ಚಿಕೊಂಡು ಹಾಡು ಹಾಕಿಕೊಂಡು ದಣಿದು ಕುಸಿದುಬೀಳುವ ತನಕ ಕುಣಿಯುವ ಅಭ್ಯಾಸ ಮಾಡಿಕೊಂಡೆ. ಇಂಥ ನನ್ನ ಕುರಿತು ಜಗತ್ತಿಗೆ ತಿಳಿದರೆ ಅದು ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ನಾನು ತಿಳಿದಿದ್ದೇನೆ. ನಮ್ಮ ನಡುವಿನ ಪ್ರಗತಿಪರ ಪುರುಷರೊಬ್ಬರು ತಮ್ಮ ಸ್ನೇಹಬಳಗದಲ್ಲಿ ಸಂತೋಷದಲ್ಲಿ ಎರಡು ಹೆಜ್ಜೆ ಹಾಕಿದ ವೀಡಿಯೋ ತುಣುಕನ್ನು ಇಟ್ಟುಕೊಂಡು ಅವರ ಮೇಲೆ ತುಚ್ಛವಾಗಿ ದಾಳಿ ಮಾಡಿದುದನ್ನು ಕಂಡ ನನಗೆ ನನ್ನಂಥ ಹೆಣ್ಣೊಬ್ಬಳು ಅದೂ ಈ ವಯಸ್ಸಿನಲ್ಲಿ ಸಂತೋಷಕ್ಕೂ, ದುಃಖಕ್ಕೂ, ಪಶ್ಚಾತ್ತಾಪಕ್ಕೂ, ತನ್ನನ್ನು ತಾನು ದಂಡಿಸಿಕೊಳ್ಳುವುದಕ್ಕೂ ಕುಣಿಯುತ್ತಾಳೆಂದರೆ ಅದು ಖಂಡಿತ ಸಹಿಸಲಾರದೆಂದು ಬಲ್ಲೆ.

ಆದರೂ ನಾನು ಮಹಿಳೆಯರಿಗೆ, ನನ್ನಂಥ ಮಹಿಳೆಯರಿಗೆ, ಹುಡುಗಿಯರಿಗೆ, ಮುದುಕಿಯರಿಗೆ_ ‘ಗಂಡಸರು, ಹುಡುಗರು, ಮುದುಕರು ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ, ಹೇಗೆಂದರೆ ಹಾಗೆ ಕುಣಿಯುವುದಿಲ್ಲವೇ ಹಾಗೆಯೇ ಕುಣಿಯಿರಿ, ಮೈ ಮರೆಯಿರಿ’ ಎಂದೇ ಹೇಳುತ್ತೇನೆ ಮತ್ತೆ ಹೀಗೆ ಕುಣಿಯುವ ಮೂಲಕ ಯಾವ ಯಾವ ಕಟ್ಟುಗಳನ್ನು ನಾವು ಹರಿದುಕೊಳ್ಳಬಲ್ಲೆವು ಎನ್ನುವುದನ್ನು ಅನುಭವಕ್ಕೆ ತಂದುಕೊಳ್ಳಿರಿ ಎನ್ನುತ್ತೇನೆ.

ನಾನು ತಿಳಿದಂತೆ ಎಷ್ಟೋ ಮಹಿಳೆಯರು ತಮ್ಮ ಮಾನಸಿಕ ಒತ್ತಡ, ಕೆಲಸದ ಏಕತಾನತೆಗಳಿಂದ ಬಿಡುಗಡೆ ಹೊಂದಲು ಚಿತ್ರಕಲೆಗೆ ತಮ್ಮ ಬೆರಳುಗಳ ಸಹಿತ ದೇಹ ಮನಸ್ಸುಗಳನ್ನು ಅರ್ಪಿಸಿಕೊಳ್ಳುತ್ತಾರೆ. ಇದೂ ಕಟ್ಟುಗಳನ್ನು ಹರಿದುಕೊಳ್ಳುವ ಒಂದು ವಿಧಾನವೇ ಆದರೂ ಇದು ನೃತ್ಯದಂತೆ ನಮ್ಮ ದೇಹವನ್ನು ದಣಿಸುವುದಿಲ್ಲ, ಬೆವರಿಳಿಸುವುದಿಲ್ಲ. ಬಿರುಮಳೆ ಸುರಿದು ಹಳುವಾದ ನಂತರದ ಭೂಮಿಯಂತೆ ತಣಿಸುವುದಿಲ್ಲ.

ಕುಣಿತ ನೃತ್ಯ ಎನ್ನುವುದು ಕಲಿತರಷ್ಟೇ ಬರುವಂಥದ್ದಲ್ಲ. ಕುಣಿತ ಸಕಲ ಜೀವಿಗಳ ಬದುಕಿನ ಭಾಗ. ಉತ್ತರ ಭಾರತೀಯ ಮಹಿಳೆಯರು ಭಾಂಗ್ಡಾ, ಗರ್ಭಾ, ದಾಂಡಿಯಾ ನೃತ್ಯಗಳನ್ನು ಮಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಹಿಂದೆಲ್ಲಾ ಕಾಣಬಹುದಾಗಿದ್ದ ಲಂಬಾಣಿ, ಸಿದ್ದಿ, ಹಾಲಕ್ಕಿ ಒಕ್ಕಲು ಮೊದಲಾದ ಬುಡಕಟ್ಟು ಜನಾಂಗಗಳ ಮಹಿಳೆಯರು ಕುಣಿಯುತ್ತಿದ್ದ ದೃಶ್ಯಗಳೂ ಈಗ ಮರೆಯಾಗುತ್ತಿವೆ. ಇಲ್ಲಿ ಮಹಿಳೆಯರು ಕೊಡವ ಮತ್ತು ಕ್ರೈಸ್ತರನ್ನು ಹೊರತುಪಡಿಸಿ ಹೀಗೆ ಮನವರಳಿ ಕೂಡಿ ಕುಣಿದದ್ದನ್ನೇ ನೋಡಿಲ್ಲ ನಾನು. ನಾವೇಕೆ ಕುಣಿಯುವುದಿಲ್ಲ? ನಾವೇಕೆ ಕುಣಿಯಬಾರದು? ನಾವು ಕುಣಿದರೆ ತಪ್ಪೇನು? ನಾವು ನೃತ್ಯ ಮಾಡದಂತೆ ನಮ್ಮನ್ನು ಕಟ್ಟಿಹಾಕಿರುವ ಸಂಗತಿಗಳಾವುವು? ಆ ಕಟ್ಟುಗಳನ್ನು ನಾವೇಕೆ ಹರಿದುಕೊಳ್ಳುವುದಿಲ್ಲ? ಹೀಗೆ ನಾವು ಮಹಿಳೆಯರು ನಮ್ಮನ್ನು ನಾವು ಕೇಳಿಕೊಳ್ಳುವುದು ಯಾವಾಗೆಂದು ನಾನು ಯೋಚಿಸುತ್ತಲೇ ಇರುತ್ತೇನೆ. ಮತ್ತು ಹೀಗೆ ಯೋಚಿಸುತ್ತ ಹೋದಷ್ಟೂ ನೃತ್ಯ ನನಗೆ ಆಪ್ತವಾಗುತ್ತ ತನ್ನ ಬಾಹುಗಳಲ್ಲಿ ಸೆಳೆದುಕೊಂಡು ಸಾಲ್ಸಾ, ಭಾಂಗ್ಡಾ ಮಾಡಿಸುತ್ತಲೇ ಇರುತ್ತದೆ. ಹೀಗೆ ನಾನು ನೃತ್ಯದಲ್ಲಿ ತಲ್ಲೀನಳಾಗಿ ತಾಳವಾಗುತ್ತೇನೆ, ತಾಳಕ್ಕೆ ತಕ್ಕ ಹಾಡಾಗುತ್ತೇನೆ, ಹರಿವಾಗಿ ತಣಿಯುತ್ತೇನೆ, ಹಗುರಾಗಿ ಹಕ್ಕಿಯಾಗುತ್ತೇನೆ.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 11 hours ago No comment

  ಇರಬಲ್ಲೆವಾ ಭಾವುಕರಾಗದೆ?

                Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

 • 3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 4 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 7 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 1 week ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...


Editor's Wall

 • 22 February 2018
  3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  2 weeks ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...