Share

ಮೂಳೆಯ ಹಂದರವೊಂದುಳಿದು…
ಕಾದಂಬಿನಿ ಕಾಲಂ

 

 

 

 

 

 

 

 

 

ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?

 

ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ
ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ

ನಝೀರ್ ಭಾಖ್ರಿಯವರ ಗಝಲ್ ನ ಸಾಲುಗಳನ್ನು ಈ ದಿನಗಳಲ್ಲಿ ನನ್ನ ಹೃದಯ ಮತ್ತೆ ಮತ್ತೆ ಹಾಡಿಕೊಳ್ಳುತ್ತದೆ, ಗಾಯದಿಂದ ನೋವೊಂದು ತಿವಿಯುತ್ತಲಿರುವಂತೆ. ಇದರ ನಡುವೆ ಅವರೇಕೆ ನನಗೆ ಈ ಎರಡು ಕೃತಿಗಳನ್ನೇ ಓದಲು ಹೇಳಿದರು? ಯೋಚಿಸುವಾಗ ಚಳಿಯಲ್ಲಿ ಮುಡುಗಿ ಕೂತವಳ ಮೇಲೆ ತಣ್ಣನೆ ನೀರು ಎರಚಿಬಿಟ್ಟಂತೆ ಬೆಚ್ಚುತ್ತೇನೆ. ಒಂದು ಕಾಲಕ್ಕೆ ಸಿಕ್ಕ ಸಿಕ್ಕದ್ದನ್ನೆಲ್ಲ ಓದಿಕೊಂಡು ಕೂತಿದ್ದ ನನಗೆ ಅವರು ಆ ಪುಸ್ತಕ ಓದಿದ್ದೀರಾ ಇದನ್ನು ಓದಿದ್ದೀರಾ ಎನ್ನುವಾಗ ನಾನು ಇಲ್ಲವೆಂದೇ ಹೇಳುತ್ತಿದ್ದೆ. ಆ ಅಸಾಮಾನ್ಯನ ಎದುರು, ಒಳ್ಳೆಯ ಮಾತುಗಾರಳಲ್ಲದ ನನಗೆ ನಾನು ಓದಿಕೊಂಡ ವಿಚಾರಗಳನ್ನೂ ಅವರ ಸರಿಸಮಾನವಾಗಿ ಪ್ರಬುದ್ಧ ಮಾತುಗಳಲ್ಲಿ ಹೆಣೆದು ಚರ್ಚಿಸುವುದು ನನ್ನಿಂದ ಅಸಾಧ್ಯ ಎನಿಸಿಬಿಡುತ್ತಿತ್ತು. ಅದಕ್ಕಿಂತಲೂ ದಡ್ಡಿಯೆಂದು ತೋರಿಸಿಕೊಳ್ಳುವುದು ಹೆಚ್ಚು ಸುಲಭವಿತ್ತು ಮತ್ತದರಲ್ಲೇ ಹೆಚ್ಚು ಲಾಭವಿತ್ತು. ಆಗ ಅವರು, ಕಬ್ಬನ್ನು ನಾವೇ ಕಷ್ಟಪಟ್ಟು ಕಚ್ಚಿ ಸಲುಕು ಎಳೆದು ಜಗಿಯುತ್ತಾ ರಸ ಹೀರುವುದಕ್ಕಿಂತ ಕಬ್ಬಿನ ರಸವನ್ನೇ ನೇರವಾಗಿ ಕುಡಿಯಲು ಕೊಟ್ಟಂತೆ ಸುಲಲಿತವಾಗಿ ನನ್ನ ಒಳಗಿಳಿಯುವ ಹಾಗೆ ಅನೇಕ ಸಂಗತಿಗಳನ್ನು ವಿವರಿಸತೊಡಗುತ್ತಿದ್ದರು. ನನಗೆ ಒಮ್ಮೊಮ್ಮೆ ಅದು ಹೊಚ್ಚ ಹೊಸ ವಿಷಯವಾಗಿದ್ದರೆ, ಮತ್ತೊಮ್ಮೆ ಇದನ್ನು ಓದಿದ್ದೆನಲ್ಲಾ ಎನಿಸುತ್ತಿತ್ತು. ಮಗದೊಮ್ಮೆ ಅದು ನಾನು ಓದಿ ಅರ್ಥೈಸಿಕೊಂಡಿದ್ದಕ್ಕಿಂತ ಭಿನ್ನ ನೋಟದಲ್ಲಿ ಅವರ ಮೂಲಕ ನನಗೆ ಕಾಣಿಸುವುದಿತ್ತು. ಹೀಗೆ ಅವರೆದುರು ದಡ್ಡಿಯಾಗಲು ನನಗೆ ಇಷ್ಟವೇ ಇಷ್ಟ. ಇಷ್ಟು ವಯಸ್ಸಾದರೂ ಹುಡುಗುಬುದ್ಧಿ ಇಷ್ಟೂ ಮುಕ್ಕಾಗಗೊಡದ ನಾನು ದಡ್ಡಿಯಾಗಲು ಯತ್ನಿಸುತ್ತಾ ಯತ್ನಿಸುತ್ತಾ ಪ್ರಜ್ಞಾಪೂರ್ವಕವಾಗಿ ಎಲ್ಲವನ್ನೂ ಮರೆಯುತ್ತಾ ಹೋಗುತ್ತಿದ್ದೆ.

ಹೀಗೆ ಅವರು ನನಗೆ ಆ ಎರಡು ಕೃತಿಗಳನ್ನು ಓದಲು ಮತ್ತೆ ಮತ್ತೆ ಜ್ಞಾಪಿಸುತ್ತಲೇ ಇದ್ದರು. ಅದರಲ್ಲಿನ ಒಂದು ಕೃತಿಯ ಬಗ್ಗೆ ಹೇಳುತ್ತಾ ನೀನು ಅದನ್ನು ಓದಬೇಕು. ಆಗ ನೀನೊಂದು ಅದ್ಭುತವಾದ ಕವಿತೆ ಬರೆಯುತ್ತೀ ಎನ್ನುತ್ತಿದ್ದರು ಪ್ರತಿ ಸಲ. ನಾನು ಹಾಂ ಓದುತ್ತೇನೆ ಮತ್ತು ಸಾಧ್ಯವಾದರೆ ನಿಮಗಾಗಿ ನಾನು ಆ ಕವಿತೆ ಬರೆದುಕೊಡುತ್ತೇನೆ, ಆದರೆ ಈಗಲ್ಲ ಎನ್ನುತ್ತಿದ್ದೆ. ದಿನಗಳು ನನಗದರ ಪರಿವೆಯಿಲ್ಲದಂತೆ ಸುಮ್ಮನೆ ಸಾಗುತ್ತಿದ್ದವು. ಈ ನಡುವೆ.. ನೀನೇಕೆ ಕವಿತೆ ಬರೆಯುವುದಿಲ್ಲ? ಆ ಕವಿತೆ ಬರೆಯುವ ಕಾದಂಬಿನಿ ಎಲ್ಲಿ? ಅಂತ ಕೇಳುತ್ತಿದ್ದರೆ ನಾನು ನೀವು ಕವಿತೆ ಬರೆಯಲು ಒತ್ತಾಯಿಸಬೇಡಿ. ನನ್ನನ್ನು ಇನ್ನಷ್ಟು ಕಾಲ ಸಂತೋಷವಾಗಿರಲು ಬಿಡಿ ಎನ್ನುತ್ತಿದ್ದೆ. ನನ್ನ ಮನಸ್ಸು I’m a born poet you know? ಎಂದು ಕುಟುಕುಟು ನಗುತ್ತಿತ್ತು. ಹೌದು, born poet ಎನ್ನುವ ಬಿರುದಾದರೂ ನೋವಿನ ಮೂಟೆಯನ್ನು ಹೊತ್ತೇ ಹುಟ್ಟಿ, ಆ ನೋವನ್ನೇ ಅಪ್ಪಿ ಪ್ರೀತಿಸುತ್ತ ಜೀವಿಸುವ ನನಗಲ್ಲದೆ ಇನ್ನಾರಿಗೆ ಒಪ್ಪೀತು? ‘ನಿನ್ನ ಕವಿತೆಗಳ ಜಾದೂ ಮಾಯವಾಯಿತಲ್ಲ’ ಎನ್ನುವಾಗ ಒಂದು ದಿನ ನಾನು ಹೀಗೆ ಬರೆದೆ:

ನಾ ಮುಳುಗುತ್ತಿದ್ದೇನೆ
ಕವಿತೆ ತೇಲುತ್ತಲಿದೆ
ಎಚ್ಚರವಿರಲಿ ಪ್ರಿಯಾ…!

ನೀನೀಗಿಂದೀಗಲೇ ಧುಮುಕಿ
ಮುಳುಗುವ ನನ್ನನು ಬಾಚಿ
ಬದುಕಿಸಿಕೊಂಡೆಯಾದರೆ
ತೇಲುವ ಕವಿತೆ ಮುಳುಗುವುದು

ಮುಳುಗುವ ಕವಿತೆಯ ಬಾಚಿ
ಬದುಕಿಸಿಕೊಂಡೆಯೆಂದರೆ
ತೇಲುವ ನಾನು ಮುಳುಗಿಹೋಗುವೆ

ಇಲ್ಲಿ ಒಂದು ಸಿಕ್ಕಿದರಿನ್ನೊಂದು
ದಕ್ಕದು ಪ್ರಿಯಾ
ಒಲವ ಕಡಲಿದು
ಒಡಲ ಸುಡುವುದು

ಈ ಸಾಲುಗಳನ್ನು ಕಂಡವರೇ ತೀವ್ರ ತಕರಾರಿಗೆ ಬಿದ್ದಿದ್ದರು. ನನಗನಿಸುತ್ತದೆ, ನಾನೊಬ್ಬ ಹುಟ್ಟುಕವಿಯೇ ಇರಬೇಕು. ನಾನಾಗ ತುಂಬ ಚಿಕ್ಕವಳು. ಹೈಸ್ಕೂಲು ಕಟ್ಟೆ ಹತ್ತಿರಲಿಲ್ಲವೆಂದು ಚೆನ್ನಾಗಿ ಬಲ್ಲೆ. ಅಪ್ಪ ಬಸ್ಸಿನಲ್ಲಿ ಕೂರಿಸಿಹೋಗಿದ್ದರು. ಬಸ್ಸು ನಾನು ತಲುಪಬೇಕಾದ ಗಮ್ಯವನ್ನು ಸೇರುವಾಗ ನನ್ನ ಬಂಧುಗಳು ನನ್ನನ್ನು ಬಸ್ಸಿನಿಂದ ಇಳಿಸಿಕೊಂಡು ಕರೆದೊಯ್ಯುತ್ತಾರೆಂದು ಗೊತ್ತಿತ್ತು. ಹಾಗೊಂದು ವೇಳೆ ಅವರ ಬಾರದಿದ್ದರೂ ನನಗೆ ಬಸ್ಸಿಳಿದು ಮನೆ ಸೇರಲು ತಿಳಿದಿತ್ತು. ಇಬ್ಬರು ಕೂರುವ ಸೀಟಿನ ಕಿಟಕಿಯ ಬಳಿ ನಾನು, ನನ್ನ ಪಕ್ಕದಲ್ಲಿ ಒಬ್ಬ ಸಜ್ಜನರು ಕೂತಿದ್ದೆವು. ಕಿಟಕಿಯಿಂದ ಹೊರಗೇ ನೋಟ ಹರವಿ ಮೌನದೊಳಗೆ ಚಲಿಸುವುದು ನನ್ನ ಹವ್ಯಾಸ. ಕಾಡಿನ ನಡುವಿಗೆ ಬಂದಾಗ ಬಸ್ಸೇಕೋ ನಿಂತುಬಿಟ್ಟಿತು. ಟೂಲ್ ಬಾಕ್ಸುಗಳನ್ನು ತೆಗೆದು ರಿಪೇರಿಗೆ ಶುರುವಿಟ್ಟರು ಬಸ್ಸಿನ ಚಾಲಕ ಮತ್ತು ನಿರ್ವಾಹಕ. ನಾನು ಮಾತ್ರ ಧಗಧಗನೆ ಹೊತ್ತಿ ಉರಿಯುತ್ತಿರುವ ಆ ಕಾಡಿನ ಬೆಂಕಿಯ ಜ್ವಾಲೆಗಳ ಆವೇಶವನ್ನೇ ದಿಟ್ಟಿಸುತ್ತಿದ್ದೆ. ಸ್ವಲ್ಪ ಹೊತ್ತಲ್ಲಿ ನಾನು ಬ್ಯಾಗಿನಲ್ಲಿ ತಡಕಾಡಿ ಪೆನ್ನು ನೋಟ್ ಬುಕ್ಕನ್ನು ತೆರೆದು ಬರೆಯತೊಡಗಿದೆ. ಅದು ಕವಿತೆಯೋ ಏನೋ ನನಗೊಂದೂ ತಿಳಿಯದು. ಬರೆದು ಮುಗಿಸಿದ್ದೇ ನನ್ನ ಪಕ್ಕ ಕುಳಿತ ವ್ಯಕ್ತಿ ಕೊಡಮ್ಮ ಇಲ್ಲಿ ಎಂದು ಒತ್ತಾಯದಿಂದ ಕಿತ್ತುಕೊಂಡು ಓದಿದರು. ಇಂಥವೆಷ್ಟೋ ನಾನು ಮೊದಲೂ ಬರೆದುದಿತ್ತು. ಅವರು ಹಾಳೆ ತಿರುಗಿಸಿ ಓದುತ್ತ ಹೋದರು. ಏನು ನಿನ್ನ ಹೆಸರು? ಏನು ಓದುತ್ತೀ? ಯಾರ ಮಗಳು? ಎಲ್ಲಿ ಮನೆ ಎಂದೆಲ್ಲ ಕೇಳುತ್ತ ಹೋದರು. ಆಮೇಲೆ ಅವರು ನನಗೊಂದು ಹೆಸರಿಟ್ಟರು. ‘ಫೆಮಿನಾ’ ಇದು ನಿನ್ನ ಕಾವ್ಯನಾಮ. ಎಷ್ಟು ಚಂದ ಬರೆಯುತ್ತೀಯಾ.. ಸುಮ್ಮನೆ ಬರೆಯುತ್ತಾ ಹೋಗು. ನಿನಗೆ ಒಳ್ಳೆಯ ಭವಿಷ್ಯವಿದೆ ಅಂದಿದ್ದಲ್ಲದೆ ತಮ್ಮದೊಂದು ಪತ್ರಿಕೆ ಇದೆಯೆಂದೂ ಅದರಲ್ಲಿ ನನ್ನ ಕವಿತೆ ಪ್ರಕಟಿಸುತ್ತೇನೆ ಎಂದೂ ಹೇಳಿದರು. ಪತ್ರಿಕೆಯನ್ನು ನನ್ನ ಪಕ್ಕದ ಮನೆಯಲ್ಲಿ ತರಿಸುತ್ತಿದ್ದರು. ನಾನು ಊರಿಗೆ ಹಿಂದಿರುಗಿದ ಮೇಲೆ ಅವರ ಮನೆಯ ಹಳೆಯ ಪತ್ರಿಕೆಗಳನ್ನು ಹುಡುಕಿದಾಗ ನನ್ನ ಪ್ರಕಟಿತ ಕವಿತೆ ಸಿಕ್ಕಿತು. ಯಾರಿದ್ದಾರೆ ಇಲ್ಲ ನೋಡದೆ ಕುಣಿಯುತ್ತಿದ್ದೆ. ಅವರು ಈ ಫೆಮಿನಾ ಹೆಸರಿನಾಕೆಯ ಬರಹಕ್ಕೆ ಇವಳೇಕೆ ಕುಣಿಯಬೇಕು ತಿಳಿಯದೆ ವಿಚಿತ್ರವಾಗಿ ನೋಡುತ್ತಿದ್ದರು. ಆಮೇಲೆ ಆ ಸಂಪಾದಕರು ಒಂದೆರಡು ಸಲ ನಮ್ಮ ಮನೆ ಹುಡುಕಿ ಬಂದರು. ಆಗ ನನ್ನ ಮನೆಯ ಸ್ಪೀಕರ್ ಬಾಕ್ಸಿನ ಮೇಲೂ, ಗೋಡೆಗಳ ಮೇಲೂ, ಕನ್ನಡಿಯ ಪಕ್ಕದಲ್ಲೂ ದಿಂಬಿನ ಮೇಲೂ ನನ್ನ ಕವಿತೆಯ ಸಾಲುಗಳು ಕಾಣಸಿಗುತ್ತಿದ್ದವು. ಅವರು ಕಣ್ಣಿಗೆಟಕುವ ಸಾಲುಗಳನ್ನು ಕಂಡು ಅಚ್ಚರಿಪಟ್ಟಿದ್ದಲ್ಲದೆ ನನ್ನ ಮನೆಯಲ್ಲಿ ನನ್ನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅವಶ್ಯಕತೆಯಿದೆ ಎಂದೆಲ್ಲ ಮನವರಿಕೆ ಮಾಡಿದ್ದರು. ಆದರೆ ನನ್ನ ಮನೆಯವರು ನನ್ನ ಬಳಿ ನಿನ್ನ ಸಂಪಾದಕನಿಗೆ ಮನೆಗೆ ಬರಬೇಡವೆಂದು ಹೇಳು. ನೋಡುವವರು ಏನೆಂದುಕೊಳ್ತಾರೆ ಎಂದು ಸೂಚಿಸಲಾಯಿತು. ಈ ಕಾರಣದಿಂದ ನಾನವರಿಗೆ ಮತ್ತೆ ಕವಿತೆ ಕಳಿಸಲೇ ಇಲ್ಲ. ಆ ಸಂಪಾದಕರು ತೀರ ಇತ್ತೀಚೆ ತೀರಿಕೊಂಡರು. ನಾನವರ ಶವದ ಬಳಿ ಕೂತು ಕಣ್ಣೀರಿಟ್ಟು ಹಿಂದಿರುಗಿದ್ದೆ.

ಹೀಗೆ ಹುಟ್ಟುಕವಿಯೇ ಆಗಿದ್ದಿರಬಹುದಾದ ನಾನು ಕಳೆದ ನಾಲ್ಕು ವರ್ಷಗಳಲ್ಲಿ ಸತತ ಬರೆದು ಈಗ ದಿನೇ ದಿನೇ ನಾನು ಎಲ್ಲವನ್ನೂ ಮರೆತು ಮಂಕುಹಿಡಿದ ಮಗುವಿನಂತಾಗಿಬಿಟ್ಟಿದ್ದೆ. ಆ ಜಾದೂ ನನ್ನಲ್ಲಿ ಈಗ ಇರಲಿಲ್ಲ. ಪದಪುಂಜಿನಿ, ನಿಘಂಟು ನಿಮ್ಮ ಮೆದುಳಲ್ಲೇ ಇದೆಯಾ? ನೀನು ನೀನು ಮಾತ್ರ ಹೀಗೆ ಬರೆಯಬಲ್ಲೆ ಎಂದೆಲ್ಲ ಬೆರಗಿನಿಂದ ಹೇಳುತ್ತಿದ್ದ ಮಾತುಗಳು ನನಗೇ ಹೇಳಿದವುಗಳಾ ಅಥವಾ ಇದೊಂದು ಕನಸಾ ಎನ್ನುವಷ್ಟು ಬದಲಾಗಿಹೋಗಿದ್ದೆ. ನನ್ನನ್ನು ಕಳೆದುಕೊಂಡು ನನ್ನ ಕವಿತೆಗಳನ್ನು ಉಳಿಸಿಕೊಂಡು ಏನು ಮಾಡುತ್ತೀರಿ? ನಾನು ಬದುಕಿನ ಕ್ಷಣಗಳನ್ನು ಆಸ್ವಾದಿಸಬೇಕು, ನಾನು ಬದುಕಬೇಕು, ಬರೆಯುವುದು ಹಿಂಸೆ. ಅದು ಕೊಲ್ಲುತ್ತದೆ ನನ್ನನ್ನು ಇಷ್ಟಿಷ್ಟಾಗಿ. ನನಗದು ಬೇಡ ಎಂದು ಮತ್ತೆ ಮತ್ತೆ ಕೇಳುತ್ತಿದ್ದೆ. ಉತ್ತರ ಯಾರ ಬಳಿಯಿತ್ತು? ಹೇಳಬೇಕೆಂದರೆ ಈ ಜಗತ್ತು ನಮ್ಮ ಬದುಕಾಗಲೀ ಅಥವಾ ಈ ಕವಿತೆಯಾಗಲಿ ಒಂದೂ ಇಲ್ಲದೆಯೂ ತಿರುಗುತ್ತಲೇ ಇರುತ್ತದೆ.

ಹೀಗೆ ವಿಷಣ್ಣತೆಗೆ ಜಾರಕೂಡದೆಂದು ಆ ದನಿ ಎಚ್ಚರಿಸುತ್ತಲೇ ಇದ್ದಿತ್ತು. ಆ ದನಿಯೂ ಕ್ಷೀಣಿಸುತ್ತ ಸಂಪೂರ್ಣ ದೂರವಾದ ಮೇಲಷ್ಟೇ ನಾನು ಅವರು ಹೇಳಿದ್ದ O.Henryಯ ‘The Last Leaf’ ಕೃತಿ ಓದಿದೆ. ಅಯ್ಯೋ! ಎಂದು ಕುಸಿದುಬಿಟ್ಟಿದ್ದೆ. ಯಾವುದಾಗದಿರಲೆಂದು ಅವರು ಮತ್ತೆ ಮತ್ತೆ ಎಚ್ಚರಿಸುತ್ತಲೇ ಇದ್ದರು! ಮತ್ತು ನಾನೆಂತಹ ದೊಡ್ಡ ತಪ್ಪು ಮಾಡಿಬಿಟ್ಟಿದ್ದೆ! ನಾನು ಮೊದಲೇ ಓದಿದ್ದರೆ! ಪಶ್ಚಾತ್ತಾಪವಲ್ಲದೆ ನನ್ನ ಬಳಿ ಏನಾದರೂ ಉಳಿದಿತ್ತೇ? ಎಂಥ ದಡ್ಡತನವದು ನಾನು ಮಾಡಿದುದು? ನಿಜಕ್ಕೂ ನಾನು ಶತದಡ್ಡಿಯೇ ಆಗಿಬಿಟ್ಟಿದ್ದೆ. ನನ್ನ ಮೂರ್ಖತನಕ್ಕೆ ಹಲುಬುವ ಹೊರತೇನೇನೂ ಇರಲಿಲ್ಲ ನನ್ನಲ್ಲಿ.

ನನ್ನ ದಿನಗಳು ಹಗಲು ರಾತ್ರಿಗಳಾಗಿ ಉರುಳುತ್ತಿದ್ದವು. ಯಾವ ಬದಲಾವಣೆಗಳಿಲ್ಲದೆ. ನಾನೂ ಈ ಸಮರಕಣದಲ್ಲಿ ಎಲ್ಲ ಕಳೆದುಕೊಂಡು ಸೋಲಿನ ಖಡ್ಗಗಳಿಂದ ಒಡಲನ್ನು ಒಡ್ಡಿಕೊಂಡು ತರಿದುಹಾಕಲ್ಪಟ್ಟ ರಾಜನಂತೆ ಇದ್ದೆ. ನಿರಂತರ ಓದಿನ ಹೊರತು ಬೇರೆ ಯಾವ ಘನ ಕೈಂಕರ್ಯವೂ ನನ್ನಿಂದಾಗುತ್ತಿರಲಿಲ್ಲ. ಮತ್ತು ಯಾವ ಓದೂ ನನ್ನನ್ನು ತಣಿಸುತ್ತಿರಲಿಲ್ಲ. ಮೊನ್ನೆ ಅವರು ಹೇಳಿದ ಮತ್ತೊಂದು ಕೃತಿಯನ್ನು ತೆರೆದು ಕೂತೆ. ನಿಜ ಹೇಳುತ್ತೇನೆ, Ernest Hemingway ಬರೆದ ‘The Old Man and the Sea’ ಕೃತಿಯ ಓಲ್ಡ್ ಮ್ಯಾನ್ ನಾನಲ್ಲದೆ ಬೇರೆ ಯಾರೂ ಆಗಿರಲಿಲ್ಲ. ಯಾಕಾಗಿ ನನಗವರದನ್ನು ಓದಲು ಹೇಳಿದರು? ಈ ಕಾಣ್ಕೆಯನ್ನು ಕಾಣಿಸುವುದಕ್ಕಾಗಿಯೇ? ಮತ್ತದನ್ನು ಹೀಗೆ ಬರಿಗೈಯಾಗಿ ಕೂತಲ್ಲಿ ನಾನೇಕೆ ಓದಿದೆ? ಯಾವ ಕಾಣ್ಕೆಗಾಗಿ? ಸತತ 84 ದಿನಗಳ ಕಾಲ ಒಂದಾದರೂ ಮೀನು ಹಿಡಿಯಲಾರದ, ತಿನ್ನಲು ಕೂಳಿಲ್ಲದ, ಮಲಗಲು ಬೆಚ್ಚನೆಯ ತಾವಿಲ್ಲದ, ದೇಹದಲ್ಲಿ ಇಷ್ಟಾದರೂ ಕಸುವಿಲ್ಲದ ಆ ಒಂಟಿ ನುರಿತ ವೃದ್ಧ ಮೀನುಗಾರನಂಥವಳು. ಈಗ ತೀರವನ್ನು ದೂರ ದೂರ ಬಿಟ್ಟು ಮಹಾಸಾಗರದ ನಡುವಿಗೆ ಬಂದು ಹಸಿವು, ನೀರಡಿಕೆ, ನಿದ್ರೆ ಎಲ್ಲವನ್ನೂ ತೊರೆದು, ಚಳಿಯಲ್ಲಿ ಹೆಪ್ಪುಗಟ್ಟುತ್ತ, ಮಹಾ ಮೀನೊಂದಕ್ಕೆ ಗಾಳ ಹಾಕಿ ಅದರೊಂದಿಗೆ ಸೆಣಸುತ್ತಾ ಗಾಯಗೊಂಡು ನಿತ್ರಾಣವಾಗಿ ಸಾವು ಬದುಕಿನ ನಡುವೆ ಸಮರ ನಡೆಸಿದ್ದ ಮಹತ್ವಾಕಾಂಕ್ಷಿ ಆ ಮೀನುಗಾರನಂತೆಯೇ ನಾನೂ ಇದ್ದೆ. ಕೊನೆಗೂ.. ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?

ಮತ್ತು ಈ ಎಲ್ಲಕ್ಕೂ ಮೊದಲು ಬಾಲ್ಯದಲ್ಲಿ ಕೆರೆ ತೊರೆಗಳಲಿ ಮೀನು ಹಿಡಿದು ಬಲ್ಲ ನಾನು ಹೀಗೆ ಕವಿತೆ ಬರೆದಿದ್ದೆ…

ಮೀನನ್ನು ಹಿಡಿಯಬೇಕೆಂದರೆ..
‘ಬಾ ಮೀನೇ ನಿನ್ನನ್ನು
ನಾನೀಗ ಹಿಡಿಯಲಿದ್ದೇನೆ’
ಎಂದರದು ಎಂದೂ ಬಾರದು
ಒಂದು ಗಾಳವನ್ನಾದರೂ ಹಾಕಬೇಕು.

ಅದೂ ಹೇಗನ್ನುವಿರಾ?
ಮೊದಲಿಗೆ ಬೇಕು ಬಿದಿರ ನೀಳ ಕೋಲೊಂದು,
ಕೋಲಿಗೊಂದು ಬೀಣೆಯ ದಾರ
ದಾರದ ತುದಿಗೊಂದು ಗಾಳ

ಇಷ್ಟಾಗಿ.. ಗಾಳಕ್ಕೆ..
ಮುಳುಗಲೀಯದ ಹಾಗೆ
ಮೇಲೊಂದು ನವಿಲ ಗರಿಯ ಬೆಂಡು
ತೇಲಲೀಯದ ಹಾಗೆ
ಕೆಳಗೊಂದು ಸೀಸದ ಗುಂಡು
ಕಟ್ಟಬೇಕು ಹದ ನೋಡಿಕೊಂಡು

ಇಷ್ಟಾದರೆ ಮೀನು ಸಿಕ್ಕದು
ಮುಖ್ಯ ಕೆಲಸವನ್ನೇ ಮರೆತರಾಗದು
ಹಿಡಿಯಲಿರುವ ಮೀನಿನ ಗಾತ್ರಕ್ಕೆ ತಕ್ಕಾಗಿ
ಜೀವಂತ ಮೀನನ್ನೋ ಎರೆಹುಳು, ಮಣ್ಣ ಮಿಡತೆಯನ್ನೋ
ಅತ್ತ ಸಾಯದ ಹಾಗೆ
ಇತ್ತ ತಪ್ಪಿಸಿಕೊಂಡೋಡದ ಹಾಗೆ
ಮೀನು ನುಂಗುವಷ್ಟೂ ಹೊತ್ತು
ವಿಲವಿಲ ಮಿಡುಕುವ ಹಾಗೆ
ಇರಿವ ಗಾಳದ ಮುಳ್ಳಿಗೆ ಸುರಿದು
ಗಾಳವ ನೀರಿಗೆಸೆದು
ತಣ್ಣಗೆ ಕೂತು ಕಾಯಬೇಕು
ಅಮಾಯಕರ ಹಾಗೆ…..!

ಗಾಳವೆಂದರೆ…
ನುಂಗಿದೊಡನೆ ಸರಾಗ
ಒಳ ಹೊಕ್ಕಲೊಂದು ಚೂಪು ಮುಳ್ಳ ಕೊಕ್ಕೆ
ಕೊಕ್ಕೆಗೆರಡು ಹಿಮ್ಮುಖ ಕವಲು ಮುಳ್ಳು
ಕಕ್ಕಲೆಳಸಿದಷ್ಟೂ ಸಿಕ್ಕಿಬೀಳುವ ಹಾಗೆ!

ಮೀನು ಗಂಟಲಿರಿವ ಗಾಳದೊಳಗೆ
ಸಿಕ್ಕು ವಿಲವಿಲ ಪರಿತಪಿಸಿ
ತಟವಟಿಸುವ ಸರಿಹೊತ್ತಲ್ಲೇ..
ಗಾಳದ ಕೋಲ ಸರಕ್ಕನೆತ್ತಿ ದಡಕ್ಕೆ ಬೀಸಬೇಕು

ಮನುಷ್ಯರನ್ನು ಹಿಡಿಯಲಾದರೆ
ಇಷ್ಟು ಕಷ್ಟವಿಲ್ಲ
ಹಿಡಿ ಪ್ರೀತಿಯ ಗಾಳಕ್ಕೆ ಸಿಕ್ಕದ
ಮನುಷ್ಯನಾದರೂ ಇಲ್ಲ..

ಕಡೆಯಲ್ಲಿ ಒಂದೇ ಪ್ರಶ್ನೆ…..
ಮೀನ ಹಿಡಿದ ಮೇಲೆ ತಿಂದು ಮುಗಿಸುವಿರಿ
ಹೇಳಿ, ನನ್ನ ಹೀಗೆ
ಹಿಡಿ ಪ್ರೀತಿಯ ಗಂಟಲಿರಿವ ಗಾಳದ
ಯಾತನೆಯೊಳಗೆ ತಟವಟಿಸಲು ಬಿಟ್ಟು
ನೀವೇನು ದಕ್ಕಿಸಿಕೊಳುವಿರಿ?

ಒಂದರ್ಥದಲ್ಲಿ ಮೀನುಗಾರನೂ ಒಂದು ಮೀನೇ. ಯಾರ ಯಾರದೋ ಯಾವ ಯಾವುದೋ ಗಾಳಕ್ಕೆ ಬಲಿಯಾಗಲಿರುವ ಮೀನು. ಗಾಳ ಹಾಕಲು ಬಲ್ಲ ಒಬ್ಬ ಮನುಷ್ಯ ಮೀನುಗಾರನಾಗಬಲ್ಲ ಮತ್ತು ಗಾಳದ ತುಣುಕು ಆಮಿಷಕ್ಕೆ ಬಾಯೊಡ್ಡುವ ಮನುಷ್ಯ ಮೀನಾಗಬಲ್ಲ. ಹೀಗೆ ಅವನು ಮೀನುಗಾರನೂ ಹೌದು, ಮೀನೂ ಹೌದು. ಮತ್ತೆ ಹೀಗೆ ಕಡಲ ನಡುವಲ್ಲಿ ನಿಂತು ಮೀನು ಹಿಡಿಯುವುದೆಂದರೆ… ಮೀನುಗಾರನೊಬ್ಬ ಬದುಕಬೇಕೆಂದರೆ ಮೀನನ್ನು ಕೊಲ್ಲಬೇಕು, ಮೀನಿನ ಜೀವ ಉಳಿಯಬೇಕೆಂದರೆ ಅದು ಮೀನುಗಾರನನ್ನು ಸಾಯಿಸಬೇಕು! ಇದೆಂಥಾ ನಿಯಮ? ಇದರಲ್ಲಿ ಪಾಪವೆಷ್ಟು? ಪುಣ್ಯವೆಷ್ಟು? ಹೀಗೆ ಯೋಚಿಸುತ್ತೇನೆ ನಾನು. ನಾನೇ ಹಿಡಿದ ಮೀನನ್ನು ನಾನೇ ಕೊಂದೆನಲ್ಲವೇ? ಅಥವಾ ಕೊಂದ ಮೇಲೆಯೇ ಹಿಡಿದಿರಬಹುದೇ ನಾನದನ್ನು ಈ ನೀಲು ಕವಿತೆಯಂತೆ!?

ನೀನು ಹೋದ ಮೇಲೆ
ನಿನ್ನ ವಾಸನೆ, ಸ್ಪರ್ಶ
ದನಿ
ಮನದಲ್ಲಿ ಬೆಳೆದು
ನೆನಪಿನ ನೀನು
ನಿನಗಿಂತ ನಿಜ
ಆಗುವೆ, ನನ್ನ ನಲ್ಲ – ನೀಲು

ಮತ್ತು ಆ ಮೀನನ್ನು, ಗೆದ್ದ ಉಮೇದಿನಲ್ಲಿ ಹೊತ್ತು ಮರಳುವ ಹಾದಿಯಲ್ಲಿ ಎದುರಾದ ಕ್ರೂರ ಶಾರ್ಕ್ ಗಳ ಕೂಡ ಎದೆಯೊಡೆದುಕೊಂಡು ನಡೆಸಿದ ಹೋರಾಟವಾದರೂ ಎಂಥಾ ಭಯಾನಕವಾದದ್ದು! ಮತ್ತಾಗ ಹಿಡಿದ ಅರ್ಧ ಮೀನು ತರಿಯಲ್ಪಟ್ಟು ನಾಶವಾಗಿತ್ತಲ್ಲವೇ? ಇರಲಿ ಆದದ್ದಾಯಿತು ಇನ್ನರ್ಧವಾದರೂ ಉಳಿಯಿತಲ್ಲ ಅಂದರೆ ಮತ್ತೆ ಕಡುಕತ್ತಲಲ್ಲಿ ಮತ್ತೆ ಎರಗಿ ರುದ್ರ ಭೀಕರವಾಗಿ ಪ್ರಹಾರ ನಡೆಸಿದ್ದವಲ್ಲವೇ ಕ್ರೂರ ಶಾರ್ಕ್ ಮೀನುಗಳು?

ಕೊಟ್ಟ ಕೊನೆಯಲ್ಲಿ ಎಲ್ಲವನ್ನೂ ಕಳೆದುಕೊಂಡು ಬರಿದಾಗಿ ಸೋತು ಕೈಚೆಲ್ಲಿ ಮಹಾ ಸಮುದ್ರದಿಂದ ದಡ ಸೇರುವ ಹೊತ್ತಿಗೆ ಮತ್ತದೇ ಬರಿಗೈ. ಯಾವುದಾದರೂ ಇಲ್ಲ. ಮತ್ತವೇ, ಗಾಯಗಳು, ನೋವು, ನೀರಡಿಕೆ, ದಣಿವು, ಹಸಿವು, ಸೋಲು ಮತ್ತೊಂದು ಸುಂದರ ಬಾಲದ ಬೃಹತ್ ಅಸ್ತಿಪಂಜರವೊಂದರ ಹೊರತು ಮತ್ತೇನು ಉಳಿದಿತ್ತಲ್ಲಿ? ತಾನು ಹಿಡಿದಿದ್ದೇನೆಂದು ಸಾಬೀತುಪಡಿಸಬಲ್ಲ ಅಥವಾ ಇದೇನಾ ನೀನು ಹಿಡಿದು ತಂದದ್ದು? ಎಂದು ಅಪಹಾಸ್ಯ ಮಾಡಬಲ್ಲ ಆ ಬೃಹತ್ ಮೀನಿನ ಅಸ್ಥಿಪಂಜರವೊಂದರ ಹೊರತು? ಪ್ರಯತ್ನಮಾತ್ರ ನಿನ್ನದು ಫಲ ನಿನ್ನದಲ್ಲವೆಂದು ವಿಕಟವಾಗಿ ಗಹಗಹಿಸಿ ನಕ್ಕಿತೇ ಆ ಅಸ್ಥಿಪಂಜರ?

ಹೌದು, ನಾನೂ ಈಗ ಕಾಯದ ಕಸುವೆಲ್ಲವ ಒಗ್ಗೂಡಿಸಿ ಎದೆಯೊಡೆದು ರುಧಿರವು ಬಾಯಿಗೆ ಬರುವಂತೆ ಸೆಣೆಸಿ ದಣಿದು ನಿತ್ರಾಣಗೊಂಡ ಆ ಮೀನುಗಾರ ಓಲ್ಡ್ ಮ್ಯಾನ್ ನಂತೆಯೇ ಹಸಿವು, ನೀರಡಿಕೆ, ನೋವು, ಸೋಲುಗಳೆಲ್ಲವನೂ ಮರೆಸಿಬಿಡುವ ಸಾವಿನಂತಹ ಗಾಢ ನಿದ್ರೆಗೆ ಜಾರಬೇಕು ಮತ್ತು ಮೀನುಗಾರನೊಬ್ಬನಿಗೆ ಅಸಂಬದ್ಧ ಎನಿಸುವಂತಹ ಸಿಂಹಗಳನು ಕನಸಬೇಕು! ಮರುಹಗಲು ಲೋಕವೊಂದು ಬೆರಗಿನಿಂದ ಉದ್ಗರಿಸಬಹುದು, ಆ ಅಸ್ಥಿಪಂಜರವೊಂದನ್ನು ಕಂಡು ಓಲ್ಡ್ ಮ್ಯಾನ್ ಅದೆಂಥ ಮೀನನ್ನು ಹಿಡಿದಿದ್ದನೆಂದು! ಮತ್ತು ಈ ಲೋಕದ ಉದ್ಗಾರಕ್ಕೆ ಮೀನಾದರೇನು ಅಸ್ಥಿಪಂಜರವಾದರೇನು? ಮೀನುಗಾರನಿಗಾದರೋ ಮೀನಾಗಿದ್ದರೆ ಅದು ಬದುಕಾಗಬಹುದಿತ್ತು, ಭವಿಷ್ಯವಾಗಬಹುದಿತ್ತು. ಆದರೆ ಅದೀಗ ಬರಿದಾಗಿದೆ. ಮತ್ತವನು ನಿತ್ರಾಣ ನಿದ್ರೆಗೆ ಜಾರಿ ಸಿಂಹಗಳ ಕನಸೊಂದರ ಹೊರತೇನು ಕಾಣಬಲ್ಲ? ಇಷ್ಟಾದರೂ ಆ ಪುಟ್ಟ ಬಾಲಕನಂತಹ ಒಳಮನಸ್ಸು ಮತ್ತೆ ಇದಕ್ಕಿಂತಲೂ ಬೃಹತ್ ಮೀನು ಹಿಡಿಯುವ ಆಸೆಯೊಂದ ಬಿತ್ತುತ್ತದೆ ಮತ್ತು ಎಲ್ಲವೂ ಮುಗಿದುಹೋಗಿದೆ, ಬರಿಗೈಲಿ ಬಂದು ಬರಿಗೈಲಿ ಹೊರಟಿದ್ದೇನೆ, ಪ್ರಯೋಜನಕ್ಕೆ ಬಾರದ ಮೂಳೆಯ ಹಂದರವೊಂದನ್ನುಳಿಸಿ ಎಂಬಂತೆ ಸೋತು ಕೈಚೆಲ್ಲಿಂದಂತಹ ಒಡಲನ್ನು ಕಂಡು ರಸ್ತೆಯ ಗುಂಟ ಅಳುತ್ತ ಸಾಗುತ್ತದೆ. ಕೊನೆಯದಾಗಿ ಅವರೆಂದಿದ್ದಾರೆ, ಈ ಕೃತಿಯನ್ನು ಓದಿ ನೀನೊಂದು ಅದ್ಭುತ ಕವಿತೆ ಬರೆಯುತ್ತೀ ಎಂದು. ಮತ್ತು ಎಲ್ಲವೂ ಮುಗಿದುಹೋದ ಮೇಲೆ ಆ ಕವಿತೆಯಿಂದಲೇ ಗಾಯಗೊಂಡು ಜರ್ಜರಿತವಾಗಿ ನಿತ್ರಾಣವಾದ ನಾನು ಯಾವ ಕವಿತೆ, ಹೇಗೆ ಮತ್ತು ಯಾರಿಗಾಗಿ ಬರೆಯಲಿ?

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 10 hours ago No comment

  ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ…

    ಗುಬ್ಬಿಗಳ ಹಿಂಡೇ ಇವರ ಮನೆಯಲ್ಲಿ ನೆಲೆಕಂಡುಕೊಂಡು, ವರ್ಷಕ್ಕೆ ಏನಿಲ್ಲ ಅಂದರೂ 600 ರಿಂದ 1000 ಮರಿ ಮಾಡುವ ಗುಬ್ಬಿಗಳು ಸಂಗೀತ ಪ್ರೇಮಿಯಾದ ಲಕ್ಷ್ಮಣರಿಗೆ ತಮ್ಮ ಸಂಗೀತದಿಂದ ಸಂತೃಪ್ತಗೊಳಿಸುತ್ತ ಅವರ ಮನೆಯನ್ನು ನಿಜದಲ್ಲಿ ಹ್ಯಾಪ್ಪಿ ಹೋಮ್ ಆಗಿಸಿವೆ.   ಅತಿಥಿ | ಬಿ ಲಕ್ಷ್ಮಣ್     ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ; ಅಸೀಮ ಗುಬ್ಬಿ ಪ್ರೇಮಿಯ ದಿನವೂ ಹೌದು. ಬೆಳಿಗ್ಗೆ ಇಂದು ಗುಬ್ಬಿಗಳ ದಿನವೆಂದು ಪತ್ರಿಕೆಯಲ್ಲಿ ನೋಡಿ ...

 • 2 days ago No comment

  ಮತ್ತೆ ಮತ್ತೆ…

        ಕವಿಸಾಲು     ನೆನಪಿನಾಗಸದಲಿ ನಗೆಚುಕ್ಕಿ ಎಣಿಸುವಾಸೆಗೆ ಕಣ್ಣಬೆಳಕು ಹಾಸಿದವ ಬಿತ್ತಿದ್ದು ಹೂವಾಗಿ ಬಾಡುವುದರೊಳಗೆ ಉದುರುವಡಿ ಬೊಗಸೆಯಾದವ ನೀರಿನಲೆ ಉಂಗುರದೊಳಗಿಂದ ಬರುತಾನೆ ಮತ್ತೆಮತ್ತೆ ಶಿಶಿರನೊಡನೆ ವಸಂತನೊಡನೆ ಜಗದ ಯಾವ ಕತ್ತಲೂ ತಲುಪದ ಮೂಲೆಗೆ ಬೆಳಕ ಬಳಿದಿಟ್ಟವ ಕಣ್ಣ ರೆಕ್ಕೆಗೆ ನಸುಕಿಗೂ ಮುಂಚೆ ಬಣ್ಣ ಹಚ್ಚಿದವ ಮೂಡಣದ ಚಿಲಿಪಿಲಿ, ಪಡುವಣದ ಉನ್ಮತ್ತ ಕೆಂಪು, ಗಲಗಲ ಹಗಲಿನಂಥವ ಮರೆಸಬರುತಾವೆ ಒಂದಷ್ಟು ನೆಪ ಬಿರುಮಾತು ಒಣಜಗಳ ಜಗ್ಗಿ ಎಳೆದಾಡುವಂತರ ...

 • 2 days ago No comment

  ದಂಡೆಯ ಕೈಯಲಿ ಚಂದ್ರನಿಟ್ಟು ಬರೋಣ

        ಕವಿಸಾಲು     ಎಲೆ ಉದುರುವ ಕಾಲ ಚಳಿಯ ದಾಟಿ ಬಿಸಿಲಿಗೆ ಮೈ ಒಡ್ಡುವ ಸಮಯ ಮರಗಳು ಸಹ ಎಲೆ ಉದುರಿಸಿ ಬೆತ್ತಲಾಗಿವೆ ಗೆಳತಿ ಇದು ವಿರಹ ಕಾಲ ಎಲ್ಲ ಮರಗಳು ಎಲೆಯುದುರಿಸಿ ಬೆತ್ತಲಾಗಿರಲು ಮಾವು ಮಾತ್ರ ಮೈತುಂಬಿಕೊಂಡಿದೆ ಹರೆಯ ಮಾಸಿದವರ ಹಾಗೂ ತುಂಟ ಹುಡುಗಿಯರ ಮಧ್ಯೆ ಬಸಿರಾದವಳಂತೆ ಚಳಿಗಾಲದಿ ಮದುವೆಯಾಗಿ ಅಪ್ಪಿ ಮುದ್ದಾಡಿ ಮೈಥುನಕೆ ಮನಸೋತು, ಹತ್ತಾರು ಆಟಗಳಿಗೆ ತೆರೆದುಕೊಂಡು, ಮುಟ್ಟುನಿಂತು ಬಯಕೆ ...

 • 4 days ago No comment

  ವೆಜ್ಜಾ? ನಾನ್-ವೆಜ್ಜಾ?

        ಸುಮಾರು ಒಂದು ತಿಂಗಳಿನಿಂದ ಬಾಡಿಗೆ ಮನೆಯನ್ನು ಹುಡುಕುತ್ತಿದ್ದೇನೆ. ಆದರೆ ಇನ್ನೂ ಮನೆ ಸಿಕ್ಕಿಲ್ಲ. ಸಿಗದೆ ಇರುವುದಕ್ಕೆ, ನನಗನ್ನಿಸಿದಂತೆ ಮೂರು ಕಾರಣಗಳು. ಮೊದಲನೆಯದ್ದು ನಮ್ಮನೆಯಲ್ಲಿ ಒಂದು ನಾಯಿಯಿದೆ. ನಾಯಿ ಮಾಲೀಕರಿಗೆ ಮನೆ ಮಾಲಿಕರು ಮನೆ ಕೊಡುವುದಿಲ್ಲ. ನಮಗೆ ಮನೆಯೊಡೆಯನಿಗಿಂತಲೂ ನಮ್ಮ ಮನೆ ನಾಯಿಯೇ ಹೆಚ್ಚು; ಒಂದು ಭಾವನಾತ್ಮಕ ಸನ್ನಿವೇಶದಲ್ಲಿ ನನ್ನ ಗಂಡ, ‘ನಿಮಗ್ಯಾರಿಗೂ ನನ್ನ ಆಸ್ತಿಯಲ್ಲಿ ಬಿಡಿಗಾಸನ್ನೂ ಕೊಡುವುದಿಲ್ಲ. ಎಲ್ಲವನ್ನೂ ಚುಕ್ಕಿ ಹೆಸರಿಗೆ ಬರೆದಿಟ್ಟು ಸತ್ತು ...

 • 4 days ago One Comment

  ಅವರ ಕೆಲಸವಾದರೆ ಆಯಿತು!

                हमको जो ताने देते है हम खोये हैं इन रंगरलियों में हमने उनको भी छुप छुप के आते देखा इन गलियों में ये सच है झूठी बात नहीं तुम बोलो ये सच है ना ನಿಜ ತಾನೇ ಇದು, ಯಾವುದು? ಅದೇ… ಆಚಾರ ಹೇಳೋದು ಬದನೆಕಾಯಿ ...


Editor's Wall

 • 20 March 2018
  10 hours ago No comment

  ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ…

    ಗುಬ್ಬಿಗಳ ಹಿಂಡೇ ಇವರ ಮನೆಯಲ್ಲಿ ನೆಲೆಕಂಡುಕೊಂಡು, ವರ್ಷಕ್ಕೆ ಏನಿಲ್ಲ ಅಂದರೂ 600 ರಿಂದ 1000 ಮರಿ ಮಾಡುವ ಗುಬ್ಬಿಗಳು ಸಂಗೀತ ಪ್ರೇಮಿಯಾದ ಲಕ್ಷ್ಮಣರಿಗೆ ತಮ್ಮ ಸಂಗೀತದಿಂದ ಸಂತೃಪ್ತಗೊಳಿಸುತ್ತ ಅವರ ಮನೆಯನ್ನು ನಿಜದಲ್ಲಿ ಹ್ಯಾಪ್ಪಿ ಹೋಮ್ ಆಗಿಸಿವೆ.   ಅತಿಥಿ | ಬಿ ಲಕ್ಷ್ಮಣ್     ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ; ಅಸೀಮ ಗುಬ್ಬಿ ಪ್ರೇಮಿಯ ದಿನವೂ ಹೌದು. ಬೆಳಿಗ್ಗೆ ಇಂದು ಗುಬ್ಬಿಗಳ ದಿನವೆಂದು ಪತ್ರಿಕೆಯಲ್ಲಿ ನೋಡಿ ...

 • 16 March 2018
  4 days ago No comment

  ಹೇಗೆಲ್ಲ ಎಡವಿ ಬಿದ್ದಾಳೆಂದು…

        ಲೀಲಾಧರ ಮಂಡಲೋಯಿ ಕಾವ್ಯ       ಲೀಲಾಧರ ಮಂಡಲೋಯಿ, ಹಿಂದಿಯ ಪ್ರಸಿದ್ಧ ಕವಿ. ಕಾವ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ 35ಕ್ಕೂ ಹೆಚ್ಚು ಕೃತಿಗಳನ್ನು ಬರೆದವರು. ಹಲವಾರು ರಾಷ್ಟ್ರೀಯ ಪುರಸ್ಕಾರಗಳಿಗೆ ಪಾತ್ರರಾದವರು. ಸಣ್ಣಕಥೆಗಳನ್ನಾಧರಿಸಿದ 300ಕ್ಕೂ ಅಧಿಕ ಟೆಲಿಫಿಲಂಗಳನ್ನೂ ನಿರ್ಮಿಸಿದ್ದಾರೆ. ಬದುಕನ್ನು ಕುರಿತ ಆಳದ ಗ್ರಹಿಕೆಗಳನ್ನು ಕಂಡಿರಿಸುವ ಅವರ ಕಾವ್ಯ, ಹೇಗೆ ಹಣ ನಮ್ಮ ಸಂದರ್ಭವನ್ನು ತೀರ್ಮಾನಿಸುವ ಬಲವಾಗುತ್ತಿದೆ ಮತ್ತು ಮೌಲ್ಯಗಳನ್ನು ಮೆಟ್ಟಿ ಅಪಮೌಲ್ಯವೆಂಬುದು ಮುನ್ನೆಲೆಗೆ ಬಂದು ...

 • 16 March 2018
  5 days ago No comment

  ನಾ ಹಾಸಿಗೆ ಹಿಡಿದಾಗ

      ಗಝಲ್         | ನೀನೊಮ್ಮೆ ಬಂದಿದ್ದರೆ ತೊಳೆಯುತ್ತಿದ್ದೆ ನಿನ್ನ ಪಾದಗಳನು…   ತುಸುತುಸುವೇ ಮುಕ್ಕಾಗುತ್ತೇನೆ ನಾ ಹಾಸಿಗೆ ಹಿಡಿದಾಗ ಇನಿಸಿನಿಸೇ ಮನುಷ್ಯಳಾಗುತ್ತೇನೆ ನಾ ಹಾಸಿಗೆ ಹಿಡಿದಾಗ ಎಷ್ಟು ಹಾರಿದ್ದೆ ಮೇಲೆ, ಏರಿಯೇ ಏರಿದ್ದೆ ಮೇರೆ ಮೀರಿ ಬರಿದೆ ತರಗೆಲೆಯಾಗಿ ಉಳಿದಿದ್ದೇನೆ ನಾ ಹಾಸಿಗೆ ಹಿಡಿದಾಗ ಬರಿಗಣ್ಣಲ್ಲೇ ನೋಡುತ್ತಿದ್ದೆ ಮುಪ್ಪೆರಗಿ ಕನ್ನಡಕದಲೂ ಕಂಡಿದ್ದೆ ನಿಚ್ಚಳವಾಗಿ ಕಾಣತೊಡಗಿದ್ದು ಮಾತ್ರ ನಾ ಹಾಸಿಗೆ ಹಿಡಿದಾಗ ಓಡುತ್ತಿತ್ತು ...

 • 15 March 2018
  5 days ago No comment

  ನಿಕಷಕ್ಕೆ ಒಡ್ಡದೇ ನಂಬಿಬಿಡಬಹುದೇ ಎಲ್ಲವನೂ?

                      ನಮ್ಮಲ್ಲಿನ ಧಾರ್ಮಿಕ ಆಚರಣೆಗಳನ್ನು ನಂಬಿಕೆಯಂದಾದರೂ ಕರೆಯಿರಿ, ಮೌಢ್ಯವೆಂದಾದರೂ ಕರೆಯಿರಿ ಪ್ರಶ್ನಿಸುವ ಮನೋಭಾವವೇ ನಮ್ಮಲ್ಲಿ ಕ್ಷೀಣಿಸಿ ಅಥವಾ ಸತ್ತು ಹೋದಂತೆ ಈ ದಿನಗಳಲ್ಲಿ ಭಾಸವಾಗುತ್ತಿದೆ. ಎಲ್ಲಿ ಪ್ರಶ್ನಿಸುವ ಮನೋಭಾವ ಇಲ್ಲವೋ ಅಲ್ಲಿ ವೈಜ್ಞಾನಿಕ ಮನೋಭಾವವೂ ಉದಯಿಸಲು ಸಾಧ್ಯವಿಲ್ಲ. ಕೊನೆಯದಾಗಿ ಮಾನವೀಯವಾಗಿ ನಡೆದುಕೊಳ್ಳುವುದೂ ಸಾಧ್ಯವಾಗುವುದಿಲ್ಲ.   ಬುದ್ಧಿವಂತರ ಜಿಲ್ಲೆ ಮಂಗಳೂರಿನ ಕಡಬ ಸಮೀಪದ ಕೋಯಿಲಗುಡ್ಡದಲ್ಲಿ ವೃದ್ಧನೊಬ್ಬ ಕುಸಿದು ...

 • 11 March 2018
  1 week ago No comment

  ಚಕ್ರವರ್ತಿಯ ಮೌನ!

        ಕವಿಸಾಲು       ಚೆಂದದ ಬಿಳಿಬಿಳಿ ಬಟ್ಟೆಯಲಿ ಅಷ್ಟೆತ್ತರದ ಸಿಂಹಾಸನದಲ್ಲಿ ಕೂತ ಮೌನಿ ಚಕ್ರವರ್ತಿಯ ಮುಖದಲ್ಲಿ ಮಾಸದ ಮಂದಹಾಸ! ಮಾತಾಡದ ಪ್ರಭುವಿನ ಭಟ್ಟಂಗಿಗಳು ರಾಜಮುದ್ರೆಯ ಹಿಡಿದು ಹೆದರಿಸುತ್ತಿದ್ದಾರೆ! ರಾಜಾಜ್ಞೆಯ ಪಾಲಿಸದವರ ತಲೆದಂಡ ಶತಃಸಿದ್ಧ! ಜನರೀಗ ಭಯಬೀತರಾಗಿದ್ದಾರೆ: ತಮಗೆ ಬೇಕಾದ್ದನ್ನು ಉಣ್ಣಲು ಉಡಲು ನುಡಿಯಲು ನಡೆಯಲು! ಮತಾಂಧ ಪಡೆಯ ಕಾಲಾಳುಗಳಿಗೀಗ ಹೊಸ ಉನ್ಮಾದ ದಣಿಯ ಮೆಚ್ಚಿಸುವ ಸಲುವಾಗಿ ಸಾರುತ್ತಿದ್ದಾರೆ ಕವಿತೆ ಬರೆದವನಿಗದರರ್ಥವ ತಿಳಿಸಲು ಆದೇಶವಾಗಿದೆ ...