Share

ಹೆಣ್ಣು ಎಂದರೆ ಒಂದು ದೇಹ ಮಾತ್ರವಲ್ಲ…
ಪ್ರಸಾದ್ ನಾಯ್ಕ್ ಕಾಲಂ

“ಮೊಲೆಹಾಲುಣಿಸುವ ರೂಪದರ್ಶಿಯನ್ನೊಳಗೊಂಡ ಸಂಚಿಕೆಯ ಮುಖಪುಟವೊಂದು ಭಾರತವನ್ನು ಇಬ್ಭಾಗ ಮಾಡಿದೆ.”

ಪರ ವಿರುದ್ಧ ಬಣಗಳೆರಡರಲ್ಲೂ ಸುದ್ದಿಯಾಗಿ ವಿವಾದಕ್ಕೀಡಾದ ಕೇರಳದ ‘ಗೃಹಲಕ್ಷ್ಮಿ’ ಮಹಿಳಾ ಪಾಕ್ಷಿಕ ಪತ್ರಿಕೆಯ ಮುಖಪುಟದ ಬಗ್ಗೆ ‘ದ ಟೆಲಿಗ್ರಾಫ್’ ಬರೆದಿದ್ದು ಹೀಗೆ. ಪತ್ರಿಕೆಯ ಮುಖಪುಟದಲ್ಲಿ ಇಪ್ಪತ್ತೇಳು ವರ್ಷ ಪ್ರಾಯದ ರೂಪದರ್ಶಿ ಗಿಲು ಜೋಸೆಫ್ ಮಗುವೊಂದಕ್ಕೆ ಮೊಲೆಹಾಲುಣಿಸುತ್ತಿದ್ದಾರೆ. “ನಾವು ಮೊಲೆಹಾಲುಣಿಸುವುದರಲ್ಲಿ ನಿರತರಾಗಿದ್ದಾಗ ನಮ್ಮನ್ನು ಕೆಕ್ಕರಿಸಿ ನೋಡಬೇಡಿ” ಎಂದು ಕೇರಳದ ತಾಯಂದಿರು ನೀಡುತ್ತಿರುವ ಸಂದೇಶವನ್ನು ಪತ್ರಿಕೆಯು ಇಂಥದ್ದೊಂದು ಮುಖಪುಟ ಚಿತ್ರದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಲು ಯತ್ನಿಸಿತ್ತು. ಮಕ್ಕಳಿಗೆ ಮೊಲೆ ಹಾಲುಣಿಸುವ ಪ್ರಕ್ರಿಯೆಯು ತೀರಾ ಸ್ವಾಭಾವಿಕವಾದದ್ದು, ಇದನ್ನೂ ಕೂಡ ಕಾಮದ ಕಾಮಾಲೆ ಕಣ್ಣಿನಲ್ಲಿ ನೋಡುತ್ತಾ ತಾಯ್ತನದ ಸುಖಕ್ಕೆ ತಣ್ಣೀರೆರೆಚಬೇಡಿ ಎಂಬ ಸಾಮಾಜಿಕ ಕಳಕಳಿಯನ್ನು ಮೂಡಿಸುವ ಸದುದ್ದೇಶದೊಂದಿಗೆ ಇಂಥದ್ದೊಂದು ಸಾಹಸೀ ಹೆಜ್ಜೆಯನ್ನಿಟ್ಟಿತ್ತು ಪತ್ರಿಕೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ‘ಮುಕ್ತ ಸ್ತನ್ಯಪಾನ’ ಎಂಬ ಹೆಸರಿನಲ್ಲಿ ಯಾವುದೇ ಮುಜುಗರ, ನಾಚಿಕೆ, ಹಿಂಜರಿಕೆಗಳಿಲ್ಲದೆ ಮಾಡಬೇಕಿರುವ ಸ್ತನ್ಯಪಾನದ ಬಗ್ಗೆ ದನಿಯೆತ್ತುವ ನಿಟ್ಟಿನಲ್ಲಿ ಪತ್ರಿಕೆಯು ಇಟ್ಟ ದಿಟ್ಟಹೆಜ್ಜೆಯಿದು. ಇಲ್ಲಿ ‘ದಿಟ್ಟ’ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಬಳಸಲಾಗುತ್ತಿರುವ ಕಾರಣವೇನೆಂದರೆ ಕಟುಸತ್ಯಗಳನ್ನು ನುಡಿಯುವುದು, ಆರೋಗ್ಯಕರ ಭಿನ್ನಾಭಿಪ್ರಾಯಗಳನ್ನು ಹೊಂದುವುದು, ವೈಚಾರಿಕ ಚರ್ಚೆಗಳನ್ನು ನಡೆಸುವುದೂ ಕೂಡ ಪಾತಕವೇ ಎಂಬಂತಹ ಸಂದೇಶಗಳನ್ನು ಕಳಿಸುತ್ತಿರುವ ಶಕ್ತಿಗಳು ಇಂದು ನಮ್ಮೊಡನಿರುವುದರಿಂದಾಗಿ. ಹೀಗಾಗಿ ಇಂಥಾ ಗಂಡಾಂತರದ ಸಾಧ್ಯತೆಗಳನ್ನಿಟ್ಟುಕೊಂಡೇ ಪತ್ರಿಕೆಯು ಮುಂದುವರಿದಿದೆ ಎನ್ನಲು ಮಹಾಲೆಕ್ಕಾಚಾರಗಳೇನೂ ಬೇಕಾಗಿಲ್ಲ. ನಿರೀಕ್ಷೆಯಂತೆಯೇ ವಿವಾದವು ತಾರಕಕ್ಕೇರಿದ ಬೆರಳೆಣಿಕೆಯ ದಿನಗಳಲ್ಲೇ ರೂಪದರ್ಶಿಯಾದ ಗಿಲು ಜೋಸೆಫ್ ಮತ್ತು ಪ್ರಕಾಶಕರ ಮೇಲೆ ಮೊಕದ್ದಮೆಯೊಂದು ದಾಖಲಾಗಿದೆ.

ಅಷ್ಟಕ್ಕೂ ಇಂಥದ್ದೊಂದು ಕ್ಯಾಂಪೇನ್ ಶುರುವಾಗಿದ್ದು ಒಂದು ಫೇಸ್-ಬುಕ್ ಫೋಟೋದಿಂದ. ಇಪ್ಪತ್ತಮೂರರ ಹರೆಯದ ತನ್ನ ಪತ್ನಿಯು ತನ್ನ ಕೂಸಿಗೆ ಮೊಲೆಹಾಲುಣಿಸುವ ಚಿತ್ರವೊಂದನ್ನು ಆಕೆಯ ಪತಿ ಫೇಸ್ಬುಕ್ ನಲ್ಲಿ ಹರಿಯಬಿಟ್ಟಿದ್ದ. ಆಸ್ಪತ್ರೆಯಲ್ಲಿ ತನ್ನ ಕೂಸಿಗೆ ಹಾಲುಣಿಸುತ್ತಿದ್ದಾಗ ತನ್ನನ್ನೇ ನುಂಗುವಂತೆ ನೋಡುತ್ತಿದ್ದ ಕಣ್ಣುಗಳನ್ನು, ಮೇಲೆ ಬಟ್ಟೆಯೊಂದನ್ನು ಹಾಕಿ ಮುಚ್ಚಿಕೊಳ್ಳಬಾರದೇ ಎಂದು ಕುಟುಕುತ್ತಿದ್ದವರನ್ನು, ಹೀಗೆ ನಿತ್ಯವೂ ತೆರೆದೆದೆಯೊಂದಿಗೆ ಹಾಲುಣಿಸುತ್ತಿದ್ದರೆ ಎದೆಹಾಲು ಬತ್ತಿಹೋಗುವುದೆಂಬ ಚಿತ್ರವಿಚಿತ್ರ ಥಿಯರಿಗಳನ್ನು ನೀಡುತ್ತಿದ್ದವರಿಂದ ಬೇಸತ್ತು ‘ಮುಕ್ತ ಸ್ತನ್ಯಪಾನ’ವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ದಂಪತಿ ಈ ಹೆಜ್ಜೆಯನ್ನಿಟ್ಟಿದ್ದರು. ಈಕೆ ತನ್ನ ಒಂದೂವರೆ ವರ್ಷದ ಹಸುಳೆಗೆ ಹಾಲುಣಿಸುತ್ತಿರುವ ಈ ಚಿತ್ರವು ದೊಡ್ಡ ಮಟ್ಟಿನಲ್ಲಿ ಚರ್ಚೆಯಾಗುತ್ತಲೇ ‘ಮುಕ್ತ ಸ್ತನ್ಯಪಾನ’ದ ವಿಚಾರವು ಅಭಿಯಾನದ ರೂಪವನ್ನು ಪಡೆಯಲು ತಯಾರಾಗಿ ನಿಂತಿತ್ತು.

ಛಾಯಾಚಿತ್ರವಾಗಲಿ, ಪುಸ್ತಕಗಳಾಗಲಿ, ಕಲಾಕೃತಿಗಳಾಗಲಿ, ಚಲನಚಿತ್ರವಾಗಲಿ… ನಗ್ನತೆಯ ಥೀಮ್ ನೊಂದಿಗೆ ಬಂದಾಗ ಕಂಪನಗಳು ಏಕಾಏಕಿ ಸೃಷ್ಟಿಯಾಗಿದ್ದು ಇದೇ ಮೊದಲ ಬಾರಿಯೇನೂ ಅಲ್ಲ. ಇದು ಭಾರತಕ್ಕಷ್ಟೇ ಸೀಮಿತ ಎಂದು ತೀರ್ಪನ್ನು ನೀಡುವುದು ತಪ್ಪಾದರೂ, ನಮ್ಮಲ್ಲಿ ಇಂಥವುಗಳ ಇತಿಹಾಸವು ಕೊಂಚ ಹೆಚ್ಚೇ ಇವೆ ಎಂಬುದರಲ್ಲಿ ಸಂಶಯವಿಲ್ಲ. ಅದರಲ್ಲೂ ಇತ್ತೀಚೆಗಂತೂ ಮಾತುಮಾತಿಗೂ ಸಂಸ್ಕೃತಿರಕ್ಷಣೆಯ ಹೆಸರಿನಲ್ಲಿ ನಡೆಸಲಾಗುತ್ತಿರುವ ಅಟ್ಟಹಾಸಗಳು ವಿಚಿತ್ರ ಗೊಂದಲವನ್ನು, ಭಯವನ್ನು ಸೃಷ್ಟಿಸಿರುವುದಂತೂ ಸತ್ಯ. ಈ ಬಾರಿಯೂ ಕೂಡ ಪತ್ರಿಕೆಯು ಮುಖಪುಟವು ಧಾಂ ಧೂಂ ಎಂದು ಏಕಾಏಕಿ ಸದ್ದು ಮಾಡಿದ್ದು ಸತ್ಯವೇ ಆದರೂ ಚರ್ಚೆಯಾಗಬೇಕಾದ ವಿಷಯಗಳು ಬದಿಗೆ ಸರಿದು ಉಳಿದದ್ದೆಲ್ಲವೂ ಮುಖ್ಯವಾಗಿದ್ದು ವಿಪರ್ಯಾಸವೇ. ಉದಾಹರಣೆಗೆ ಇಲ್ಲಿ ರೂಪದರ್ಶಿಯು ಸ್ವತಃ ತಾಯಿಯಲ್ಲ ಮತ್ತು ಚಿತ್ರದಲ್ಲಿರುವ ಮಗುವುದು ಆಕೆಯದ್ದಲ್ಲ ಎಂಬುದು. ಈ ಮುಖಪುಟಕ್ಕಾಗಿ ನಾವು ತಾಯಂದಿರನ್ನು ಸಂಪರ್ಕಿಸಿದ್ದೆವು. ಅವರುಗಳು ಈ ಬಗ್ಗೆ ನಮ್ಮೊಂದಿಗೆ ಮುಕ್ತವಾಗಿ ಮಾತನಾಡಿದರೂ ಕ್ಯಾಮೆರಾದೆದುರು ಬರಲು ತಯಾರಿರಲಿಲ್ಲ. ಹೀಗಾಗಿ ರೂಪದರ್ಶಿಯನ್ನು ನಾವು ಬಳಸಿಕೊಳ್ಳಬೇಕಾಯಿತು ಎಂದು ಇದಕ್ಕುತ್ತರವಾಗಿ ಹೇಳಿತು ಪತ್ರಿಕೆ.

ಎಲ್ಲಾ ಮ್ಯಾಗಝೀನ್ ಗಳಂತೆ ಇದೂ ಕೂಡ ಓರ್ವ ಗೌರವರ್ಣದ, ಸ್ಫುರದ್ರೂಪಿಯಾದ, ಪರ್ಫೆಕ್ಟ್ ಎಂಬಂತೆ ಕಾಣುವ ಹೆಣ್ಣನ್ನಷ್ಟೇ ಮುಖಪುಟವಾಗಿ ತಂದಿದೆ; ಹೀಗಾಗಿ ಗಮನವು ಚರ್ಚಾ ವಿಷಯವಾದ ಸ್ತನ್ಯಪಾನವನ್ನು ಬಿಟ್ಟು ಆಕೆಯ ಸುಂದರ ಸ್ತನಗಳ ಸುತ್ತಲೇ ಗಿರಕಿಹೊಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ ಇನ್ನು ಕೆಲವರು. ಹಾಗೆಯೇ ರೂಪದರ್ಶಿಯ ವಸ್ತ್ರಶೈಲಿಯನ್ನು ನಿರ್ದಿಷ್ಟ ಧರ್ಮವೊಂದರ ಜೊತೆ ತಳುಕು ಹಾಕಿ ಹೊಸದೊಂದು ತರ್ಕವನ್ನು ಹುಟ್ಟಿಸುವ ಪ್ರಯತ್ನಗಳೂ ನಡೆಯುತ್ತಿವೆ. ಆದರೆ ಖುಷಿಯ ಸಂಗತಿಯೆಂದರೆ ಇವೆಲ್ಲದರ ಮಧ್ಯೆಯೂ ಸ್ತನ್ಯಪಾನವೆಂಬುದು ಅದೆಷ್ಟು ಜವಾಬ್ದಾರಿಯ ಕೆಲಸ, ಈ ಅವಧಿಯಲ್ಲಿ ತಾಯಂದಿರು ಎದುರಿಸುವ ಸವಾಲುಗಳು, ಸ್ತನಗಳು ಕಾಣುತ್ತಿವೆ ಎಂಬುದಕ್ಕಿಂತಲೂ ಮುಖ್ಯವಾಗಿರುವುದು ಮಗುವಿಗೆ ಹಾಲುಣಿಸಲು ಅಗತ್ಯವಾಗಿರುವ ಆರಾಮದಾಯಕ ಭಂಗಿ… ಇತ್ಯಾದಿಗಳು ಚರ್ಚೆಯಾದವು. ತಪ್ಪು-ಒಪ್ಪುಗಳು ಏನೇ ಇರಲಿ. ಪತ್ರಿಕೆಯ ಈ ಹೆಜ್ಜೆಯು ಒಂದು ಆರೋಗ್ಯವಂತ ಚರ್ಚೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದಂತೂ ಸತ್ಯ.

ತಮ್ಮನ್ನು ತಾವು ಆಧುನಿಕರೆಂದು ಕರೆದುಕೊಳ್ಳುವ ನಮ್ಮ ಸಮಾಜವು ಇಂಥಾ ವಿಷಯಗಳು ಚರ್ಚೆಗೆ ಬಂದಾಗಲೆಲ್ಲಾ ಮತ್ತೆ ರಾಯರ ಕುದುರೆ ಕತ್ತೆಯಾಯಿತು ಎಂಬಂತೆ ವರ್ತಿಸುವುದು ವಿಪರ್ಯಾಸವೇ ಸರಿ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅರ್ಥವಿಲ್ಲದ್ದನ್ನು ಮಾತನಾಡಿ ಬೇಕಾಬಿಟ್ಟಿ ಉಗಿಸಿಕೊಂಡವರೇ ಇದಕ್ಕೆ ಸಾಕ್ಷಿ. ಲೈಂಗಿಕ ಶಿಕ್ಷಣ ಎಂಬುದು ನಮ್ಮಲ್ಲಿ ಹಲವು ವರ್ಷಗಳಿಂದ ಭಾರೀ ಚರ್ಚೆಗೊಳಪಟ್ಟ ವಿಚಾರ. ಅದು ಹಾಗಿರಲಿ. ಆದರೆ ನಮ್ಮ ದೇಹದ ಬಗ್ಗೆ ನಾವೇ ಸೃಷ್ಟಿಸಿಕೊಂಡಿರುವ ಒಂದು ವಿಚಿತ್ರ ಕೀಳರಿಮೆ, ದೇಹದ ಕೆಲಭಾಗಗಳಿಗೆ ಹಚ್ಚಿರುವ ಕೆಟ್ಟ ಕುತೂಹಲದ ಹಣೆಪಟ್ಟಿಗಳು, ಅದರಿಂದಾಗಿ ಅವುಗಳಿಗೆ ಬಂದುಬಿಟ್ಟ ವಿಕೃತಿಯ ಕಲೆಗಳಿಗೆ ಏನೆನ್ನಬೇಕು? ಹಿಂದೆ ಚರ್ಚೆಗೊಳಗಾದ ಮುಟ್ಟಿನ ವಿಷಯದಿಂದ ಹಿಡಿದು ಸ್ಯಾನಿಟರಿ ಪ್ಯಾಡ್ ಗಳವರೆಗೂ, ‘ಮಿ ಟೂ’ ಅಭಿಯಾನದಿಂದ ಹಿಡಿದು ಇಂದಿನ ‘ಮುಕ್ತ ಸ್ತನ್ಯಪಾನ’ ಅಭಿಯಾನದವರೆಗೂ ಒಳಗೊಳಗೇ ಕೇಳಿಬರುತ್ತಿರುವ ಮಾತುಗಳೆಂದರೆ ಇಂಥವುಗಳ ಬಗ್ಗೆ ಹೀಗೆಲ್ಲಾ ಮುಕ್ತವಾಗಿ ಮಾತನಾಡಬಾರದು ಎಂಬುದು. ಅಂದರೆ ನಮ್ಮ ಲೈಂಗಿಕತೆಯನ್ನು, ಪ್ರಕೃತಿಯು ದಯಪಾಲಿಸಿರುವ ದೇಹಪ್ರಕೃತಿಯನ್ನು ಇನ್ನೂ ನಾವುಗಳು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ ಎಂಬಂತಾಗಿದೆ.

ಗುಪ್ತಾಂಗಗಳನ್ನೂ ಸೇರಿದಂತೆ ಮಾನವದೇಹದ ಕೆಲ ಭಾಗಗಳು ಮೂಢನಂಬಿಕೆಗಳಿಂದ, ಪೊಳ್ಳು ಧಾರ್ಮಿಕ ವಿಚಾರಗಳಿಂದ ಅದೆಷ್ಟರ ಮಟ್ಟಿಗೆ ವಿಕೃತಿಯೆನ್ನಿಸಿಕೊಳ್ಳುವಷ್ಟು ಬಿಂಬಿಸಲ್ಪಟ್ಟಿವೆ ಎಂಬುದನ್ನು ‘From Sex to Superconcious’ ಕೃತಿಯಲ್ಲಿ ಸೊಗಸಾಗಿ ವಿವರಿಸುತ್ತಾರೆ ಓಶೋ ರಜನೀಶ್. ಹಾಗೆಯೇ ಸ್ತನಗಳ ಬಗ್ಗೆ ಪುರುಷರಿಗಿರುವ ಒಂದು ವಿಚಿತ್ರ ಆಕರ್ಷಣೆಯ ಬಗ್ಗೆಯೂ. ವಿಮಾನ ಅಪಘಾತದ ಒಂದು ಉದಾಹರಣೆಯನ್ನು ತೆಗೆದುಕೊಂಡು ಸುಟ್ಟು ಕರಕಲಾದ ದೇಹಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿರುವಾಗ ನಾವು ಆ ದೇಹಗಳನ್ನು ಗಂಡು-ಹೆಣ್ಣು ಎಂದೇ ತಕ್ಷಣ ಗುರುತಿಸುತ್ತೇವೆಯೇ ಹೊರತು ಜಾತಿ, ದೇಶ, ಭಾಷೆಗಳಿಂದಲ್ಲ. ಯಾವತ್ತೋ ಭೇಟಿಯಾದ ವ್ಯಕ್ತಿಯೊಬ್ಬನ ಹೆಸರನ್ನು ನೀವು ಮರೆತಿರಬಹುದು. ಆತನ ವೃತ್ತಿ, ರಾಷ್ಟ್ರೀಯತೆ, ಜನಾಂಗ, ವಿಚಾರಗಳನ್ನೂ ನೀವು ಮರೆಯಬಹುದು. ಆದರೆ ನೀವು ಮರೆತುಹೋಗಿರುವ ಆ ವ್ಯಕ್ತಿಯು ಪುರುಷನೋ ಸ್ತ್ರೀಯೋ ಎಂಬ ಗೊಂದಲವುಂಟಾಗುವುದು ಮಾತ್ರ ಸಾಧ್ಯವೇ ಇಲ್ಲ ಎನ್ನುತ್ತಾರೆ ಓಶೋ. ಲಿಂಗದೊಂದಿಗಿನ ಮನುಷ್ಯನ ಸಂಬಂಧವು ಅಷ್ಟು ಗಾಢವಾದದ್ದು. ತೀರಾ ಸುಪ್ತಪ್ರಜ್ಞೆಯಲ್ಲಿರುವಂಥದ್ದು.

ಹಾಗೆ ನೋಡಿದರೆ ಈ ಅಂಶವು ಮಾನವನಲ್ಲಿ ತನ್ನ ಮತ್ತು ತನ್ನ ಸಹಜೀವಿಗಳ ಬಗ್ಗೆ ಸಕಾರಾತ್ಮಕ ಧೋರಣೆಯನ್ನು ತರಬೇಕಿತ್ತು. ಸ್ತ್ರೀ ಮತ್ತು ಪುರುಷ ತಮ್ಮ ತಮ್ಮ ದೇಹಪ್ರಕೃತಿಯನ್ನು, ಲೈಂಗಿಕತೆಯನ್ನು, ಅವುಗಳೊಂದಿಗೇ ಬಂದ ಸಾಮರ್ಥ್ಯವನ್ನು, ಇತಿಮಿತಿಗಳನ್ನು ಅರಿತುಕೊಂಡು ಸೌಹಾರ್ದಯುತವಾಗಿ ಬಾಳುವುದು ಸ್ವಾಗತಾರ್ಹ. ಆದರೆ ಮಾನವನು ಎಂದು ತನ್ನ ಅಸ್ತಿತ್ವವನ್ನು ದೇಹದ ಮೂಲಕವಾಗಿಯಷ್ಟೇ ಗುರುತಿಸಲು ಪ್ರಾರಂಭಿಸಿದನೋ ಎಲ್ಲವೂ ಸಂಕೀರ್ಣವಾಗುತ್ತಲೇ ಹೋಯಿತು. ಹೀಗಾಗಿ ಇಂದು ವ್ಯಕ್ತಿತ್ವಕ್ಕಿಂತ ಹೆಚ್ಚಾಗಿ ರೂಪವೇ ಪ್ರಧಾನವಾಗಿ ನಿಲ್ಲುತ್ತಿದೆ. ಎಲ್ಲರಲ್ಲೂ ಇರುವ ಅವೇ ಸಾಮಾನ್ಯ ದೇಹದ ಭಾಗಗಳೂ ಕೂಡ ವಿಲಕ್ಷಣವಾದ ಆಕರ್ಷಣೆಯನ್ನು ಪಡೆದುಕೊಂಡು ಕೌತುಕವೆಂಬಂತೆ ಕಾಣತೊಡಗುತ್ತಿವೆ. ಇನ್ನು ಲೈಂಗಿಕತೆಯನ್ನು ಪಾಪದ ತಲೆಗೆ ಕಟ್ಟುವ ಧಾರ್ಮಿಕ ವಿಚಾರಗಳು, ತನ್ನ ದೇಹದಲ್ಲಾಗುತ್ತಿರುವ ಬದಲಾವಣೆಗಳನ್ನು ಕೂಲಂಕಷವಾಗಿ ತಿಳಿದುಕೊಳ್ಳುವ ಮೊದಲೇ ಹೊಸಕಿಹಾಕಲು ಶಕ್ತಿಮೀರಿ ಯತ್ನಿಸುತ್ತಿರುವ ಸಾಮಾಜಿಕ ಕಟ್ಟುಪಾಡುಗಳು ದೇಹಪ್ರಕೃತಿಯಂತಹ ಸರಳವಾದ ವಿಷಯಗಳನ್ನೂ ಕೂಡ ಬಲುಸಂಕೀರ್ಣವಾಗಿಸಿವೆ. ಇಂದು ಬಹುಪಾಲು ಜನರ ಜೀವನದ ಅಗಾಧ ಶ್ರಮವು ಒಂದೋ ಲೈಂಗಿಕ ಸುಖವನ್ನು ಬೆನ್ನಟ್ಟುವಲ್ಲಿ ಅಥವಾ ಹತ್ತಿಕ್ಕುವುದರಲ್ಲಿ ವ್ಯರ್ಥವಾಗುತ್ತಿದೆ.

ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವುದಿರಲಿ, ಅದರ ಬಗ್ಗೆ ಯೋಚಿಸುವುದೂ ಮಹಾಪಾಪ ಎಂಬುದನ್ನು ಶತಶತಮಾನಗಳಿಂದ ವಿವಿಧ ಮೂಲಗಳಿಂದ ಕೇಳುತ್ತಲೇ ಬರುತ್ತಿರುವ ಮಾನವ ಮಾತ್ರ ದುರದೃಷ್ಟವಶಾತ್ ಅದರ ಸುತ್ತಲೇ ಗಿರಕಿ ಹೊಡೆಯುತ್ತಿದ್ದಾನೆ. ಇದೊಂಥರಾ ಉಪವಾಸ ಮಾಡುವಾತ ಪ್ರತೀ ನಿಮಿಷವೂ ಆಹಾರದ ಬಗ್ಗೆ ಯೋಚಿಸುತ್ತಲೇ ವ್ಯಥೆಪಡುವಂತೆ. “ತನ್ನ ಬಳಿ ಬರುತ್ತಿದ್ದ ಬಹಳಷ್ಟು ವೇಶ್ಯೆಯರು ಆತ್ಮ, ಮುಕ್ತಿ ಇತ್ಯಾದಿಗಳನ್ನು ತಿಳಿಯಬಯಸುವವರಾಗಿದ್ದರೆ, ನನ್ನ ಬಳಿ ಬರುತ್ತಿದ್ದ ಸಂತರು, ಆರಾಧಕರು ಮಾತ್ರ ಖಾಸಗಿಯಾಗಿ ಲೈಂಗಿಕತೆಯ ಬಗೆಗಿನ ಪ್ರಶ್ನೆಗಳನ್ನೇ ಕೇಳುತ್ತಿದ್ದರು. ತತ್ಸಂಬಂಧಿ ವಿಷಯಗಳನ್ನು ಮಹಾಪಾಪವೆಂದು ಎಲ್ಲರಿಗೂ ಬೋಧಿಸುವ ಈ ಮಹಾನುಭಾವರು ಮಾತ್ರ ಸ್ವತಃ ಇವುಗಳಿಗೆ ಅಂಟಿಕೊಂಡು ಒದ್ದಾಡುತ್ತಿದ್ದಾರೆ” ಎಂದು ಈ ಬಗ್ಗೆ ಮಾರ್ಮಿಕವಾಗಿ ಹೇಳುತ್ತಾರೆ ಓಶೋ.

ಹೆಣ್ಣನ್ನು ಮಾಯೆ ಎಂದು ಕರೆದಿದ್ದಲ್ಲದೆ ಆಕೆಯ ದೇಹದ ಮೇಲೆ ಹಕ್ಕನ್ನು ಸಾಧಿಸುವ ನಿರಂತರ ಪ್ರಯತ್ನಗಳು ಶತಮಾನಗಳಿಂದ ದೇಶಭಾಷೆಗಳೆನ್ನದೆ ನಡೆಯುತ್ತಲೇ ಬಂದಿವೆ. ಕ್ಯಾಮೆರೂನ್ ನಂತಹ ದೇಶಗಳಲ್ಲಿ ಸ್ತನಗಳನ್ನು ಸುಡುವ, ಬಡಿದು ಚಪ್ಪಟೆ ಮಾಡಲು ಪ್ರಯತ್ನಿಸುವ ‘ಬ್ರೆಸ್ಟ್ ಐರನಿಂಗ್’ ಪದ್ಧತಿಗಳಿವೆ. ಬೆಳೆಯುತ್ತಿರುವ ಮಗಳನ್ನು, ಅವಳ ಯೌವನವನ್ನು ಬಚ್ಚಿಡಲು ಮಾಡಲಾಗುವ ಕ್ಷೀಣ ಪ್ರಯತ್ನಗಳಿವು. ತಾಯಂದಿರೇ ಸ್ವತಃ ಇಲ್ಲಿ ಬಿಸಿ ಕಲ್ಲುಗಳನ್ನು ತಮ್ಮ ಹೆಣ್ಣುಮಕ್ಕಳ ಎದೆಯ ಮೇಲಿಟ್ಟು ಬಲವಂತವಾಗಿ ಮಾಲೀಷು ಮಾಡುತ್ತಾರೆ, ಜೋರಾಗಿ ಬಡಿಯುತ್ತಾರೆ. ಸುತ್ತಮುತ್ತಲಿನ ಕಾಮುಕ ದೃಷ್ಟಿಗಳು ತನ್ನ ಮಗಳ ಮೇಲೆ ಬಿದ್ದು ಅವಳ ಬಾಳು ಹಾಳಾಗದಿರಲಿ ಎಂದು ತಾಯಂದಿರು ಕೈಯಾರೆ ಮಾಡುವ ಭಯಂಕರ ರೂಢಿಯಿದು. ಸೊಮಾಲಿಯಾದಂತಹ ದೇಶಗಳಲ್ಲಿ ನಡೆಯುವ ಯೋನಿಛೇದನದ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ಒಟ್ಟಾರೆಯಾಗಿ ತನ್ನ ದೈಹಿಕ ವಾಂಛೆಗಳನ್ನು ನಿಯಂತ್ರಿಸಲಾರದ ಪುರುಷ ಧರ್ಮ, ಸಂಪ್ರದಾಯ, ಕಟ್ಟುಪಾಡುಗಳ ಹೆಸರಿನಲ್ಲಿ ಅವಳ ಮೇಲೆ ಹಕ್ಕು ಸಾಧಿಸಲು ಸತತವಾಗಿ ಯತ್ನಿಸಿದ್ದಾನೆ. ಸಾಲದ್ದಕ್ಕೆ ಪಾವಿತ್ರ್ಯತೆ, ಶೀಲ ಇತ್ಯಾದಿ ಭಾರದ ಹೆಸರುಗಳನ್ನೂ ಇವುಗಳಿಗಿಟ್ಟು ನುಣುಚಿಕೊಂಡಿದ್ದಾನೆ. ಆದರೆ ಇದ್ಯಾವುದನ್ನೂ ಕೂಡ ತಪ್ಪಿಯೂ ತನ್ನ ಮೇಲೆ ಹೇರದೆ ಹಾಯಾಗಿದ್ದಾನೆ ಕೂಡ. ಇವೆಲ್ಲದಕ್ಕೂ ಕೊನೆಯೆಂದು ಎಂಬುದೇ ಈಗ ನಮ್ಮೆದುರಿಗಿರುವ ಪ್ರಶ್ನೆ.

ಮಹಿಳಾ ಸಬಲೀಕರಣ, ಸ್ತ್ರೀಸಮಾನತೆಗಳಂತಹ ಪರಿಕಲ್ಪನೆಗಳ ಜೊತೆಯಲ್ಲೇ ಮಹಿಳೆಯರನ್ನು ಅನ್ಯಗ್ರಹವಾಸಿಗಳಂತೆ ಕಾಣದೆ ನಾವು ಸಹಜೀವಿಗಳಂತೆ ಕಾಣಬೇಕಿದೆ. ಹೆಣ್ಣು ಎಂದರೆ ಒಂದು ದೇಹ ಮಾತ್ರವಲ್ಲ, ಜೋಡಿಸ್ತನಗಳು ಮಾತ್ರವಲ್ಲ ಎಂಬುದನ್ನೂ ಅರ್ಥಮಾಡಿಕೊಳ್ಳಬೇಕಿದೆ.

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 1 month ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...