ಕವಿಸಾಲು
ನೆನಪಿನಾಗಸದಲಿ ನಗೆಚುಕ್ಕಿ ಎಣಿಸುವಾಸೆಗೆ
ಕಣ್ಣಬೆಳಕು ಹಾಸಿದವ
ಬಿತ್ತಿದ್ದು ಹೂವಾಗಿ ಬಾಡುವುದರೊಳಗೆ
ಉದುರುವಡಿ ಬೊಗಸೆಯಾದವ
ನೀರಿನಲೆ ಉಂಗುರದೊಳಗಿಂದ
ಬರುತಾನೆ ಮತ್ತೆಮತ್ತೆ
ಶಿಶಿರನೊಡನೆ ವಸಂತನೊಡನೆ
ಜಗದ ಯಾವ ಕತ್ತಲೂ ತಲುಪದ ಮೂಲೆಗೆ
ಬೆಳಕ ಬಳಿದಿಟ್ಟವ
ಕಣ್ಣ ರೆಕ್ಕೆಗೆ ನಸುಕಿಗೂ ಮುಂಚೆ
ಬಣ್ಣ ಹಚ್ಚಿದವ
ಮೂಡಣದ ಚಿಲಿಪಿಲಿ,
ಪಡುವಣದ ಉನ್ಮತ್ತ ಕೆಂಪು,
ಗಲಗಲ ಹಗಲಿನಂಥವ
ಮರೆಸಬರುತಾವೆ ಒಂದಷ್ಟು ನೆಪ
ಬಿರುಮಾತು ಒಣಜಗಳ
ಜಗ್ಗಿ ಎಳೆದಾಡುವಂತರ
ಭರಭರನೆದ್ದು ಗೋಡೆ
ಮುಚ್ಚಿ ಕದ
ಬೆಳೆದೆತ್ತರ ಹೊಸಿಲು
ಸುಡುವ ಬಿಸಿಲು
ಬಿಕೋ ಮೌನ ಹಾಳು
ನೆನಕೆಗಳ ಕತ್ತರಿಸಿ ಒಣಹಾಕಲು
ಹರಿತ ಅಲಗುಗಳು
ಮೈಚೆಲ್ಲಿ ಮನ ಹರವಿ ನಿಲ್ಲುತ್ತೇನೆ
ಕತ್ತರಿಸಲೂ ಜೋಡಿಸಲೂ ಆಗದ ಕೈ
ಹಾಗೇ ಚೆಲ್ಲಿ ಸುಮ್ಮನೆ
ಕಂದನ ಸುಳ್ಳು ಅಳುನಗುವಿನಂಥವ
ಹಿಂದಕೇ ಎಳೆದೆಳೆವ
ವಿಮುಖ ಗಾಳಿಪಲ್ಲಕಿಯಲಿತ್ತ
ಮತ್ತೆಮತ್ತೆ ಕಾಲ್ಬೆಳೆಸುತಾನೆ
ಶಿಶಿರನೆನದೆ ವಸಂತನೆನದೆ
ನಡೆಯಲಿಲ್ಲ ಯಾವುದೂ ಜೋರು
ಮೊನಚೆಂಬುದು ಮೊಂಡಾಗಿಬಿಡುವಾಳದಲಿ
ಕಣ್ಮರೆಯಲಿತ್ತು ಬೇರು
ಮರವೆಗೊಡ್ಡಿದ ವಿಘ್ನದಂಥವ
ಮೆಲುಕುಗಳ ಜತನದಿಂದೆತ್ತಿ ತರುವ
ಕಾಲದ ಕಹಿಹಣ್ಣಿನ ಪುಷ್ಟಿಯಂಥವ
ಸುಮ್ಮನೆ ಹುಡುಕುವ ಕಣ್ಣಿಗೆ
ಸೋಲೊಪ್ಪದೆ ಹೊಸಹೊಸ ಹಾದಿ ತೆರೆವ ಎದೆಮಣ್ಣಲಿ
ಕಾಣಿಸುತಾನೆ ಮತ್ತೆಮತ್ತೆ
ಅದು ಶಿಶಿರವಿರಲಿ ವಸಂತವಿರಲಿ…
—
ಅನುರಾಧಾ ಪಿ ಎಸ್
ಊರು ಉಡುಪಿ. ಮೈಸೂರಿನಲ್ಲಿ 20 ವರ್ಷಗಳಿಂದ ವಾಸ. ಕಾವ್ಯ, ಸುಗಮ ಸಂಗೀತ ಆಸಕ್ತಿಯ ಕ್ಷೇತ್ರಗಳು. ಮೊಗ್ಗು ಮಾತಾಡಿತು, ಮುಚ್ಚಿದೆವೆಯಡಿ ಕಣ್ಣ ಕನ್ನಡಿ ಪ್ರಕಟಿತ ಕವನಸಂಕಲನಗಳು.
Leave a comment