Share

ಓದಿನ ಖುಷಿ ಮೆಲುಕುಹಾಕುತ್ತಾ…
ಪ್ರಸಾದ್‌ ನಾಯ್ಕ್‌ ಅಂಕಣ

ash

“ಪಟ್ಟಾಂಗ” ಅಂಕಣದ ಅಂಗಳಕ್ಕೆ ಸ್ವಾಗತವನ್ನು ಕೋರುತ್ತಾ, ಅಂಕಣದ ಮೊದಲ ಲೇಖನವನ್ನು ನಮ್ಮ-ನಿಮ್ಮೆಲ್ಲರನ್ನು ಈ ಮೂಲಕ ಬೆಸೆಯುತ್ತಿರುವ ಓದಿನ ಬಗ್ಗೆಯೇ ಹೇಳುತ್ತಾ, ಕೆಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದೇನೆ. ಇಂದಿನ ಫಾಸ್ಟ್-ಫಾರ್ವರ್ಡ್ ಯುಗದಲ್ಲಿ ಯಾಕಾಗಿ ಓದಬೇಕು? ಹೊಸದಾಗಿ ಓದಬಯಸುವವರು ಏನನ್ನು ಓದಬೇಕು? ಯಾವ ಭಾಷೆಯಲ್ಲಿ ಓದುವುದು ಸೂಕ್ತ? ಕುಮಾರವ್ಯಾಸನಿಂದ ಆರಂಭಿಸೋಣವೇ ಅಥವಾ ಚೇತನ್ ಭಗತ್‌ರಿಂದಲೇ? ಗದ್ಯ ಮೇಲೋ ಅಥವಾ ಪದ್ಯ ಸುಲಭವೋ? ಎಂಬೆಲ್ಲಾ ಚರ್ಚೆಗಳು ಈಗಾಗಲೇ ಸಾಕಷ್ಟು ಬಂದು ಹೋಗಿವೆ. ಇವೆಲ್ಲವನ್ನು ಎಷ್ಟು ಜನ ಓದಿದರೋ, ಓದಿ ಮರೆತುಬಿಟ್ಟರೋ ತಿಳಿಯದು. ಹೀಗಾಗಿ ಒಣ ಉಪದೇಶವನ್ನು ಕೊಟ್ಟು ಓದುವ ಖುಷಿಯನ್ನು ಸಪ್ಪೆಯಾಗಿಸುವ ಬದಲು, ನನ್ನ ಓದಿನ ಪಯಣದಲ್ಲಿ ನಾನು ಕಂಡ ಕೆಲವು ಸ್ವಾರಸ್ಯಕರ ಸಂಗತಿಗಳನ್ನೇ ನಿಮ್ಮ ಮುಂದಿಡುವ ಒಂದು ಪ್ರಯತ್ನವನ್ನು ಈ ಬಾರಿ ಮಾಡಿದ್ದೇನೆ.

ತೊಂಭತ್ತರ ದಶಕದಲ್ಲಿ ಹುಟ್ಟಿದ ನನ್ನಂಥವರ ಓದು ಶುರುವಾಗಿದ್ದೇ ಚಂಪಕ, ಚಂದಮಾಮಗಳಿಂದ. ನಮ್ಮ ಪುಣ್ಯಕ್ಕೆ ಆ ದಿನಗಳಲ್ಲಿ ಇಂಟರ್ನೆಟ್ಟಿನ ಹಾವಳಿಯಿರಲಿಲ್ಲ. ಆಂಡ್ರಾಯ್ಡು, ಸ್ಮಾರ್ಟುಫೋನುಗಳ ಕನವರಿಕೆಯಿರಲಿಲ್ಲ. ಕ್ರಿಕೆಟ್ ಒಂದು ಬಿಟ್ಟರೆ ಆ ದಿನಗಳಲ್ಲಿ ಹೊಸದಾಗಿ ಬಂದ ಕಂಪ್ಯೂಟರು ಮತ್ತು ಕಂಪ್ಯೂಟರುಗಳ ಗೇಮ್‌ಗಳಷ್ಟೇ “ಕ್ರೇಝ್” ಅನ್ನೋ ಮಾದರಿಯಲ್ಲಿದ್ದಿದ್ದು. ಆದರೆ ಆ ದಿನಗಳಲ್ಲಿ ಬೆಚ್ಚಿಬೀಳಿಸಿದ ಮ್ಯಾಚ್-ಫಿಕ್ಸಿಂಗ್ ಪ್ರಕರಣದ ಭೂತಗಳು ಎದ್ದು ಬಂದ ಮೇಲಂತೂ ಕ್ರಿಕೆಟ್ ಎಂಬ ಜಂಟಲ್-ಮೆನ್‌ಗಳ ಆಟವೂ ಬೀದಿನಾಟಕವೆನೆಸಿ ಅದಕ್ಕೆ ಎಳ್ಳುನೀರು ಬಿಟ್ಟಿದ್ದೆವು. ಇನ್ನು ಮಧ್ಯಮವರ್ಗದ ಜನರಿಗೆ ಕಂಪ್ಯೂಟರುಗಳೂ ಕನಸಾಗೇ ಇದ್ದವು. ನಮ್ಮ ಮನೆಯಲ್ಲಂತೂ ಕಂಪ್ಯೂಟರ್ ಹಾಗಿರಲಿ, ಕೇಬಲ್ ಟಿ.ವಿ. ಬಂದಿದ್ದೇ ನಾಲ್ಕೈದು ವರ್ಷಗಳ ಹಿಂದೆ. ಅಷ್ಟರಲ್ಲಿ ನನ್ನ ಪದವಿಯೂ ಮುಗಿದು, ನಾನು ಮಂಗಳೂರಿನಿಂದ ರಾಷ್ಟ್ರರಾಜಧಾನಿಯಾದ ನವದೆಹಲಿಗೆ ಉದ್ಯೋಗ ನಿಮಿತ್ತ ಹಾರಿಯಾಗಿತ್ತು. ಹೀಗಾಗಿ ಬಹುಷಃ ಸಮಯವನ್ನು ಕಳೆಯಲು ಆಟ ಮತ್ತು ಪುಸ್ತಕಗಳನ್ನು ಬಿಟ್ಟರೆ ಬೇರೇನೂ ಇರಲಿಲ್ಲ ಆ ದಿನಗಳಲ್ಲಿ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ. ಈಗಿನ ಹೊಸ ಜನರೇಷನ್ನು ಸೆಲ್ಫೀ, ಟೆಂಪಲ್-ರನ್, ಕ್ಯಾಂಡಿ ಕ್ರಶ್ಶುಗಳಲ್ಲಿ ವ್ಯಸ್ತವಾಗಿದೆ. ಅಷ್ಟರಮಟ್ಟಿಗೆ ಆ ಮಹತ್ವದ ಕಾಲಘಟ್ಟಕ್ಕೆ ನಾನು ಋಣಿ.

ಕನ್ನಡ ಮತ್ತು ಆಂಗ್ಲಭಾಷೆಯ ಪಠ್ಯಪುಸ್ತಕದ ಕೆಲವು ಗದ್ಯ-ಪದ್ಯಗಳ ಭಾಗಗಳಿಂದ ಆಗಲೇ ಸಾಹಿತ್ಯದ ಒಂದು ಕಿರುಪರಿಚಯವಾಗಿ ಹೋಗಿತ್ತು. ಕುಮಾರವ್ಯಾಸನ ಸಾಲುಗಳು ಸೀದಾ ಸ್ಟೇಡಿಯಂನ ಹೊರಗೆ ಹೊಡೆದ ಭರ್ಜರಿ ಸಿಕ್ಸರ್‌ಗಳಂತಿರುತ್ತಿದ್ದವು. ದಿನಕರ ದೇಸಾಯಿಯವರ ಸಾಲುಗಳಲ್ಲಿ ಕಚಗುಳಿಯಿತ್ತು. ಅಲ್ಲಲ್ಲಿ ವರ್ಡ್ಸ್‌ವರ್ತ್ ಇಷ್ಟವಾಗುತ್ತಿದ್ದ. ಚಿನುವಾ ಅಚಿಬೆಯವರ ಕಥೆಗಳು ಖುಷಿಕೊಡುತ್ತಿದ್ದವು. ಹೀಗೆ ಶೈಕ್ಷಣಿಕ ವರ್ಷದ ಆರಂಭದ ದಿನಗಳಲ್ಲಿ ಭಾಷಾವಿಷಯಗಳ ಹೊಸ ಪಠ್ಯಪುಸ್ತಕಗಳು ಮನೆಗೆ ಬಂದಂತೆಯೇ ಕಥೆಪುಸ್ತಕದಂತೆ ಅವುಗಳನ್ನು ಹಿಡಿದು ಓದಲು ಕೂರುತ್ತಿದ್ದೆ. ಮುಂದೆ ಸಂಸ್ಕೃತ ಭಾಷೆಯು ಪಠ್ಯದ ವಿಷಯವಾಗಿ ಬಂದ ಮೇಲಂತೂ ಕಾಳಿದಾಸನ ರಸಿಕತೆಗೆ ತಲೆದೂಗಲೇಬೇಕಾಗಿತ್ತು. ರಾಗವಾಗಿ ಹಾಡಲಾಗುತ್ತಿದ್ದ ಸುಭಾಷಿತಗಳು ಬೆರಳೆಣಿಕೆಯ ಸಾಲುಗಳಲ್ಲೇ ಜೀವನದರ್ಶನವನ್ನು ಮಾಡುತ್ತಿದ್ದವು.

r2ನಮ್ಮ ಮನೆಯಲ್ಲಂತೂ ದಿನಪತ್ರಿಕೆಗಳ ಮೂಲೆಮೂಲೆಗಳನ್ನೂ ಬಿಡದೇ ಓದುವ ಸದಸ್ಯರು ಮೆಜಾರಿಟಿಯಲ್ಲಿದ್ದರೂ, ಯಾರೂ ಗಂಭೀರವಾಗಿ ಪುಸ್ತಕವೊಂದನ್ನು ಹಿಡಿದು ಓದುವವರಿರಲಿಲ್ಲ. ಹೀಗಾಗಿ ಶಾಲೆಯ ಗ್ರಂಥಾಲಯವೇ ನಮ್ಮ ಆ ಕಾಲದ ಚಾಟ್-ರೂಮುಗಳಾಗಿದ್ದವು. ನನ್ನ ಮಟ್ಟಿಗಂತೂ ಗಂಭೀರವಾದ ಓದು ಸಾಕಷ್ಟು ತಡವಾಗಿಯೇ ಆದರೂ ಅದು ಲಂಗುಲಗಾಮಿಲ್ಲದೆ ಎಲ್ಲೆಲ್ಲೋ ಓಡಾಡುತ್ತಿತ್ತು. ಅಸಲಿಗೆ ಏನು ಓದಬೇಕೆಂದೇ ತಿಳಿಯದಿದ್ದ ಮಹಾಗೊಂದಲದ ಕಾಲವದು. ಮುಂದೆ ಹೈಸ್ಕೂಲಿನ ಆರಂಭದ ದಿನಗಳಲ್ಲಿ ಆಪ್ತಸಂಬಂಧಿಯೊಬ್ಬರಿಂದ ಉಡುಗೊರೆಯಾಗಿ ಕೊಡಲ್ಪಟ್ಟ ಸಿಡ್ನಿ ಶೆಲ್ಡನ್‌ ಕಾದಂಬರಿಗಳನ್ನು ನಾನು ಒಂದರ ಹಿಂದೊಂದರಂತೆ ಓದತೊಡಗಿದ್ದೆ. ನನ್ನಂತೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಇಂಗ್ಲಿಷ್ ಭಾಷೆ ಅನ್ನುವುದು ಮೊದಲ ಹಂತದಲ್ಲಿ ಒಂದು ದೊಡ್ಡ ಗೋಳು. ಆದರೆ ಶೆಲ್ಡನ್ ಕಥನ ಶೈಲಿ ಹೇಗಿತ್ತೆಂದರೆ ಹಿಡಿದ ಪುಸ್ತಕವನ್ನು ಮುಗಿಸುವವರೆಗೆ ಸಮಾಧಾನವಿರುತ್ತಿರಲಿಲ್ಲ. ಹೀಗಾಗಿ ಬಲಭಾಗದಲ್ಲಿ ಕಾದಂಬರಿ ಮತ್ತು ಎಡಭಾಗದಲ್ಲಿ ಇಂಗ್ಲಿಷ್-ಕನ್ನಡ ಶಬ್ದಕೋಶವನ್ನು ಗಂಟೆಗಟ್ಟಲೆ ಹಿಡಿದು ಕೂರುವ ದೃಶ್ಯ ಸಾಮಾನ್ಯವಾಯಿತು. ಇದರಿಂದಾಗಿ ಕ್ರಮೇಣ ಆಂಗ್ಲಭಾಷೆಯ ಶಬ್ದಭಂಡಾರವು ಸಾಗರದಂತಾಗಿ ಭವಿಷ್ಯದಲ್ಲಿ ಲಾಭವಾಯಿತೇ ಹೊರತು, ನಷ್ಟವೇನೂ ಆಗಲಿಲ್ಲ.

ಓದುವ ವಿಷಯಕ್ಕೆ ಬಂದರೆ ಹಲವು ತಮಾಷೆಯ, ಸ್ವಾರಸ್ಯಕರ ವಿಷಯಗಳು ನೆನಪಿಗೆ ಬರುತ್ತವೆ. ಅವು ಆಗಲೂ ಇದ್ದವು, ಬಹುತೇಕ ಈಗಲೂ ಇವೆ ಮತ್ತು ಪ್ರಾಯಶಃ ಮುಂದೆಯೂ ಇರಲಿವೆ. ಅದರಲ್ಲಿ ಒಂದು, “ಈ ಮಟ್ಟಿಗೆ ನೀನು ಪಠ್ಯಪುಸ್ತಕಗಳನ್ನು ಓದಿದ್ದರೆ ರ್ಯಾಂಕ್ ಬರುತ್ತಿತ್ತು” ಅನ್ನುವ ಸಾಮಾನ್ಯ ಕಾಮೆಂಟು. ಈ ಅನಿಸಿಕೆ ಹೆತ್ತವರಿಗೆ ಮೀಸಲು. “ಏನೋ ಒಂದು ಓದ್ತಾ ಇರ್ತಾನಪ್ಪ ಆ ಪುಸ್ತಕದ ಹುಳು! ಒಂದು ಮುಗಿದ್ರೆ ಇನ್ನೊಂದು. ಇನ್ನೊಂದು ಮುಗಿದ್ರೆ ಮತ್ತೊಂದು. ಅದಕ್ಕೆ ಕೊನೆ ಅನ್ನುವುದೇ ಇಲ್ಲ”, ಅನ್ನುವ ಈ ಕಾಮೆಂಟು ಗೆಳೆಯರ ಕೋಟಾದ ಡೈಲಾಗು. ದೆಹಲಿಯಲ್ಲಿರುತ್ತಿದ್ದ ದಿನಗಳಲ್ಲಿ ದರಿಯಾಗಂಜ್ ಅನ್ನುವ ಪುಸ್ತಕದ ಬಝಾರಿಗೆ ಆಗಾಗ ಹೋಗುತ್ತಾ ಕೈಗೆಟಕುವ ಬೆಲೆಗಳಲ್ಲಿ ನಾನು ಪುಸ್ತಕಗಳನ್ನು ಹೇರಿಕೊಂಡು ಬರುತ್ತಿದ್ದೆ. ನಿಜಕ್ಕೂ ಪುಸ್ತಕಪ್ರೇಮಿಗಳ ಸ್ವರ್ಗವದು. ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಸಿಗದ, ಹಳೆಯದಾಗಿ ಪುಟಗಳು ಉದುರುತ್ತಿರುವ, ಧೂಳು ಹಿಡಿದ, ಯಾವ್ಯಾವುದೋ ದೇಶಗಳ ಅಪರೂಪದ ಪುಸ್ತಕಗಳೂ ಅಲ್ಲಿ ಸಿಗುವುದುಂಟು. “ಈತ ತನ್ನ ವೃದ್ಧಾಪ್ಯದ ದಿನಗಳಿಗಾಗಿ ಈಗಿಂದಲೇ ಸಿದ್ಧತೆಯನ್ನು ಆರಂಭಿಸಿದ್ದಾನೆ”, ಎಂದು ದೆಹಲಿಯ ಸಹೋದ್ಯೋಗಿಗಳು ಕೀಟಲೆ ಮಾಡುತ್ತಿದ್ದರು. ಹಾಸ್ಯದ ಲೇಪವಷ್ಟೇ ಇರುತ್ತಿದ್ದ ಈ ಮಾತುಗಳಿಗೆ ನಾನೂ ಅವರೊಂದಿಗೆ ನಕ್ಕು ಹಗುರಾಗುತ್ತಿದ್ದೆ.

“ಅದೆಷ್ಟು ಹಣವನ್ನು ಪುಸ್ತಕಗಳಿಗಾಗೇ ಸುರಿಯುತ್ತೀ?” ಅನ್ನುವುದು ನನ್ನ ಆಸುಪಾಸಿನಲ್ಲಿರುತ್ತಿದ್ದ ಕೆಲ ಯುವಹಿತೈಷಿಗಳ ಮತ್ತೊಂದು ಕೂಗು. ಇ-ಬುಕ್‌ಗಳ ಈ ಹೊಸಕಾಲದಲ್ಲಿ ನಾನಿನ್ನೂ ಸಾಂಪ್ರದಾಯಿಕ ಶೈಲಿಯ ಓದಿನಲ್ಲೇ ಬಿದ್ದಿದ್ದೇನೆ ಎಂಬುದು ಇವರ ಪರೋಕ್ಷ ಆಕ್ಷೇಪ. ದಿನವಿಡೀ ಆಫೀಸಿನಲ್ಲಿ ಕಳೆದು, ಮರಳಿ ಕಂಪ್ಯೂಟರಿನೆದುರು ಅಥವಾ ಸ್ಮಾರ್ಟ್-ಫೋನ್ ಜೊತೆಗೆ ಮನೆಯಲ್ಲಿ ಕುಳಿತುಕೊಳ್ಳುವ ಆಯ್ಕೆ ನನ್ನದಾಗಿರಲಿಲ್ಲ. ಆ ಮಟ್ಟಿಗೆ ನಾನು ಈಗಲೂ ಹಳಬನೇ. ಇ-ಪುಸ್ತಕಗಳು ನನಗೆ ಈಗಲೂ ಅಷ್ಟಕ್ಕಷ್ಟೇ. ದೆಹಲಿಯಲ್ಲಿರುತ್ತಿದ್ದ ದಿನಗಳಲ್ಲಿ ಕನ್ನಡ ಅಥವಾ ಆಂಗ್ಲಭಾಷೆಯ ಪುಸ್ತಕಗಳನ್ನು ಅಂಚೆಸೇವೆಯ ಮುಖಾಂತರವಾಗಿಯೂ ತರಿಸಿ ಓದಿಕೊಳ್ಳಬಹುದಾಗಿತ್ತು. ಆದರೆ ಪ್ರಸ್ತುತ ನಾನು ಬೀಡುಬಿಟ್ಟಿರುವ ರಿಪಬ್ಲಿಕ್ ಆಫ್ ಅಂಗೋಲಾದ ವೀಜ್ ಎಂಬ ಪುಟ್ಟ ಪುಟ್ಟಣದ ಮಾರುಕಟ್ಟೆಗಳಲ್ಲಿ ಆಂಗ್ಲಭಾಷೆಯ ಪುಸ್ತಕಗಳೇ ಕಾಣದಂತಾಗಿದೆ. ಅಂತಾರಾಷ್ಟ್ರೀಯ ಪೋಸ್ಟಲ್ ಸೇವೆಯಂತೂ ಮೊದಲೇ ಇಲ್ಲದೆ, ಓದಿನ ಓಡಿಗೆ ಅನಿವಾರ್ಯ ಬ್ರೇಕ್ ಬಿದ್ದಿದೆ. ಹೀಗಾಗಿ ವಿಧಿಯಿಲ್ಲದೆ, ಇ-ಪುಸ್ತಕಗಳಿಗೇ `ಪಾಹಿಮಾಂ’ ಎನ್ನುತ್ತಾ ಗಂಟುಬೀಳಬೇಕಾದ ಪರಿಸ್ಥಿತಿ ಒದಗಿಬಂದಿರುವುದಂತೂ ಸತ್ಯ.

ಇನ್ನು ಓದುತ್ತಿರುವ ಪುಸ್ತಕದ ‘ಕಂಟೆಂಟ್’ ನ ಬಗ್ಗೆ ಬರೆಯಹೋದರೆ ಅದೇ ದೊಡ್ಡ ಕಥೆಯಾಗುತ್ತದೆ. ಪುಸ್ತಕವನ್ನು ಓದುತ್ತಿರುವವರಿಗಿಂತಲೂ ಅಕ್ಕಪಕ್ಕದಲ್ಲಿರುವ ಜನಸಮೂಹಕ್ಕೆ ಈ ಬಗ್ಗೆ ಭಾರೀ ಕುತೂಹಲ. ಫಾರೂಕ್ ಢೋಂಢಿಯವರ ‘ದ ಬಿಕಿನಿ ಮರ್ಡರ್ಸ್’ ಪುಸ್ತಕವನ್ನು ಅದರ ಪೋಲಿ ಮುಖಪುಟದ ಕಾರಣದಿಂದಾಗಿ ಮನೆಯ ಡ್ರಾಯಿಂಗ್ ರೂಮಿನ ಟೀಪಾಯಿಯ ಮೇಲಿಡುವಂತಿಲ್ಲ. ರವಿ ಬೆಳಗೆರೆಯವರ ‘ಕಾಮರಾಜಮಾರ್ಗ’ದ್ದೂ ಇದೇ ಕಥೆ. ಅಮೆರಿಕಾದ ಕುಖ್ಯಾತ ಸರಣಿ ಹಂತಕ ಟೆಡ್ ಬಂಡಿಯ ಆತ್ಮಕಥೆಯಾದ, ಲೇಖಕಿ ಆನ್ ರೂಲ್ ಬರೆದ “ದ ಸ್ಟ್ರೇಂಜರ್ ಬಿಸೈಡ್ ಮಿ” ಓದಿಯಾದ ಮೇಲೆ ನಾನು ಹಲವು ಟ್ರೂ-ಕ್ರೈಂ ಸಂಬಂಧಿ ಪುಸ್ತಕಗಳನ್ನು ಜಿದ್ದಿಗೆ ಬಿದ್ದಂತೆ ಓದತೊಡಗಿದ್ದೆ. ಎಡ್ ಗೀನ್, ಪೀಟರ್ ಮ್ಯಾನುಯೆಲ್, ಶೀಲಾ ಬೆಲುಷ್ ಪ್ರಕರಣಗಳನ್ನು ನಾನು ಗಂಭೀರವಾಗಿ ಓದುತ್ತಿದ್ದುದನ್ನು ಕಂಡ ನನ್ನ ರೂಮ್-ಮೇಟ್‌ಗಳು ಹುಸಿ (?) ಆತಂಕಕ್ಕೊಳಗಾಗಿದ್ದೂ ಉಂಟು. ಅದರಲ್ಲೂ ಸಂಬಂಧಿ ಲೇಖನವೊಂದನ್ನು ಬರೆಯಲು ಶುರುಮಾಡಿದರೆ ವಿಷಯದ ಬಗೆಗಿನ ಸಾಕ್ಷ್ಯಚಿತ್ರಗಳು, ನ್ಯಾಯಾಲಯಗಳ ವಿಚಾರಣೆಗಳ ವೀಡಿಯೋಗಳು, ತಪ್ಪೊಪ್ಪಿಗೆಯ ಧ್ವನಿಮುದ್ರಿಕೆಗಳು, ಫಾರೆನ್ಸಿಕ್ ವರದಿಗಳು ಹೀಗೆ ಎಲ್ಲವನ್ನೂ ರಾಶಿಹಾಕಿಕೊಂಡು ಕೂರುವುದು ಸಾಮಾನ್ಯವೇ. ನಾನ್-ಫಿಕ್ಷನ್ ಬರಹಗಾರನ ಬವಣೆಯನ್ನು ಆತನೇ ಬಲ್ಲ.

r1ಅಂದಹಾಗೆ ಆತ್ಮಕಥೆಗಳು ಮತ್ತು ಜೀವನಚರಿತ್ರೆಗಳು ಇಂದಿಗೂ ನನ್ನ ಆಲ್-ಟೈಮ್ ಫೇವರಿಟ್‌ಗಳು. ನಾನು ಓದಿದ ಮೊದಲ ಜೀವನಚರಿತ್ರೆಯೆಂದರೆ ಪಾಪ್ ತಾರೆ ಮೈಕಲ್ ಜಾಕ್ಸನ್‌ರದ್ದು. ರ್ಯಾಂಡಿ ತಾರಬೋರೆಲಿ ಬರೆದ ಈ ಅದ್ಭುತ ಜೀವನಚರಿತ್ರೆಯು ಮುಖಸ್ತುತಿಯಾಚೆಗೆ ನಿಂತು ವಸ್ತುನಿಷ್ಠತೆಯನ್ನು ಯಶಸ್ವಿಯಾಗಿ ತೋರಿಸಿತ್ತು. ಅಂತೆಯೇ ಬಹಳ ಇಷ್ಟಪಟ್ಟು ಓದಿದ ಇನ್ನೊಂದು ಜೀವನ ಚರಿತ್ರೆಯೆಂದರೆ ಹಿರಿಯ ಲೇಖಕ ಆಂಥನಿ ಸಮ್ಮರ್ಸ್ ಬರೆದ ಹಾಲಿವುಡ್ ದಂತಕಥೆ ಮರ್ಲಿನ್ ಮನ್ರೋದ್ದು. ‘ಗಾಡೆಸ್’ (ದೇವತೆ) ಎಂಬ ಹೆಸರಿನ ಈ ಬೃಹತ್ ಕೃತಿಯು ಆಕೆಯ ಜೀವನದ ಪ್ರತೀ ಮಜಲುಗಳನ್ನು ಕಣ್ಣಿಗೆ ಕಟ್ಟುವಂತೆ ದಾಖಲಿಸುವುದರಲ್ಲಿ ಯಶಸ್ವಿಯಾಗುತ್ತದೆ. ಇನ್ನು ಸರಣಿ ಹಂತಕ ಟೆಡ್ ಬಂಡಿಯ ಒಂದು ಕಾಲದ ಆತ್ಮೀಯ ಸಹೋದ್ಯೋಗಿಯೂ, ಹಿರಿಯ ಕ್ರೈಂ ಪತ್ರಕರ್ತೆಯೂ ಆಗಿದ್ದ ಆನ್ ರೂಲ್ ಬರೆದ ‘ದ ಸ್ಟ್ರೇಂಜರ್ ಬಿಸೈಡ್ ಮಿ’ ಕೃತಿಯು ಓದುಗನನ್ನು ತನ್ನ ಭಯಾನಕತೆಯಿಂದ ಬೆಚ್ಚಿಬೀಳಿಸುವಂತೆ ಮಾಡಿದರೆ, ಸೊಮಾಲಿಯನ್ ಲೇಖಕಿ, ಖ್ಯಾತ ಸೂಪರ್-ಮಾಡೆಲ್ ಮತ್ತು ಸಾಮಾಜಿಕ ಕಾರ್ಯಕರ್ತೆಯಾದ ವಾರಿಸ್ ಡಿರೀ ಆತ್ಮಕಥನವು ಓದುಗನನ್ನು ಸೊಮಾಲಿಯಾದ ಕರಾಳ ಲೋಕಕ್ಕೆ ಕರೆದೊಯ್ಯುವುದು ಒಪ್ಪಲೇಬೇಕಾದ ಸತ್ಯ.

‘ಲೇಖಕನ ಖಾಸಗಿ ಜೀವನ’ ಅನ್ನುವುದು ಈ ಆಜುಬಾಜಿನ ಕುತೂಹಲಿಗಳ ಇನ್ನೊಂದು ತಳಮಳ. ಆ ಲೇಖಕ ಹಾಗಂತೆ, ಈ ಲೇಖಕಿ ಹೀಗಂತೆ… ಇಂಥವರ ಪುಸ್ತಕವನ್ನೋದೋದಾ ನೀನು? ಎಂದು ಹುಬ್ಬೇರಿಸಿ ಕೇಳಿದವರಿದ್ದಾರೆ. ಚಾರ್ಲಿ ಚಾಪ್ಲಿನ್ ದೊಡ್ಡ ಸ್ತ್ರೀಲೋಲನಾಗಿದ್ದನಂತೆ, ಮಹಾತ್ಮಾಗಾಂಧಿ ತಂತ್ರದ ರಹಸ್ಯ ಅನುಯಾಯಿಯಾಗಿದ್ದರಂತೆ ಎಂದೆಲ್ಲಾ ಹೇಳುತ್ತಾ ತಲೆಕೆರೆದುಕೊಂಡವರಿದ್ದಾರೆ. ಆದರೆ ಇವುಗಳು ನಿರುಪದ್ರವಿ ಕುತೂಹಲಗಳ ಕೆಟಗರಿಗೆ ಬರುವ ಕಾರಣ ಹೆಚ್ಚೇನೂ ನಾನು ತಲೆಕೆಡಿಸಿಕೊಂಡಿಲ್ಲ. ಇಪ್ಪತ್ತರ ಹೊಸ್ತಿಲು ದಾಟಿದ ಕೂಡಲೇ ಎದುರಿಗೆ ಸಿಕ್ಕಾಗಲೆಲ್ಲಾ, “ಏನೋ ಮಗಾ, ಯಾವಾಗ ಮದುವೆ?” ಎಂದು ಅಜ್ಜಿಯಂದಿರು ಕೇಳಿ ಕೆಣಕುವ ಪ್ರಶ್ನೆಯಷ್ಟೇ ನಿರುಪದ್ರವಿಯಿದು. ಅಸಲಿಗೆ ಈ ಗಾಸಿಪ್‌ಗಳ ಆಚೆಗಿನ ಮಾಹಿತಿ ಇವರಿಗಿರುವುದಿಲ್ಲ ಮತ್ತು ಇವುಗಳನ್ನು ತಿಳಿದುಕೊಳ್ಳುವ ಪ್ರಯತ್ನವೂ ಇವರುಗಳು ಮಾಡಿರುವುದಿಲ್ಲ. ಖುಷ್ವಂತ್ ಸಿಂಗ್‌ರ ಒಂದು ಪುಸ್ತಕವನ್ನೂ ಕುತೂಹಲಕ್ಕಾದರೂ ಕಣ್ಣಾಡಿಸಿ ನೋಡದವರಿಂದ, ಅವರ ಬಗೆಗಿನ ಗಾಸಿಪ್‌ಗಳನ್ನು ಕೇಳಿದ್ದೇನೆ. ಆದರೆ ಸಿಂಗ್ ಸಾಹೇಬರು ತಮ್ಮನ್ನು ತಾವೇ `ಡರ್ಟಿ ಓಲ್ಡ್ ಮ್ಯಾನ್’ ಎಂದು ಕರೆದುಕೊಂಡವರು. ಇವತ್ತಿಗೂ ಖುಷ್ವಂತ್ ಸಿಂಗ್‌ರವರು ಬರೆದು ಗುಡ್ಡೆಹಾಕಿದ ಅದ್ಭುತ ಸಾಹಿತ್ಯ ಕಣ್ಣಿಗೆ ರಾಚುತ್ತದೆಯೇ ಹೊರತು, ದಿನವೂ ಸಂಜೆ ಏಳರ ಬಳಿಕ ಅವರು ಎಷ್ಟು ಪೆಗ್ ಸ್ಕಾಚ್-ವಿಸ್ಕಿ ಹೀರುತ್ತಿದ್ದರು ಎಂಬ ಮಾಹಿತಿಯಲ್ಲ.

ಹೀಗೆ ಓದು, ಬರಹಗಳಲ್ಲಿ ತೊಡಗಿಸಿಕೊಂಡ ಅಂಕಣದ ಓದುಗರಿಗೂ ಇಂತಹ ಕೆಲವು ಅನುಭವಗಳಾಗಿದ್ದರೆ ಅಚ್ಚರಿಯೇನಿಲ್ಲ. ಎಲ್ಲಾ ಪುಸ್ತಕ ಪ್ರಿಯರ ಮನೆಮನೆ ಕಥೆಯೇ ಇದು. ಆದರೆ ಎಲ್ಲದಕ್ಕಿಂತಲೂ ಮುಖ್ಯವಾದ ಮತ್ತು ಖುಷಿತಂದ ಸಂಗತಿಯೇನೆಂದರೆ ಓದುತ್ತಾ ಹೋದಂತೆ, ಒಂದೊಂದು ಪುಸ್ತಕಗಳೂ ಹೊಸಹೊಸ ಬಾಗಿಲನ್ನು ನನಗಾಗಿ ತೆರೆಯುತ್ತಾ ಹೋದವು. ಖುಷ್ವಂತ್ ಸಿಂಗ್‌ರನ್ನು ಓದುತ್ತಾ ಲೇಖಕಿ ಅಮೃತಾ ಪ್ರೀತಮ್, ಕಲಾವಿದೆ ಅಮೃತಾ ಶೆರ್ಗಿಲ್‌ರ ಪರಿಚಯವಾಯಿತು. ಅಮೃತಾರ ಬಗ್ಗೆ ಓದುತ್ತಾ ಸಾಹಿರ್ ಲೂಧಿಯಾನ್ವಿ, ಕೈಫಿ ಆಜ್ಮಿಯಂಥಾ ಮಹಾರಥಿ ಕವಿಗಳ ಪರಿಚಯವಾಯಿತು. ಗುಲ್ಝಾರರ ಶಾಯರಿಗಳೊಂದಿಗೆ ಮೀನಾಕುಮಾರಿಯವರ ಸಾಲುಗಳೂ ಮುದತಂದವು. ಆನ್ ರೂಲ್ ರ ಟ್ರೂ-ಕ್ರೈಂ ಪುಸ್ತಕಗಳು ಕ್ರಿಮಾನಾಲಜಿಯ, ಫಾರೆನ್ಸಿಕ್ ಸೈಕಿಯಾಟ್ರಿಯ ಮಹಾಬಾಗಿಲನ್ನೇ ನನ್ನೆದುರು ತೆರೆದಿಟ್ಟವು. ಅಗ್ನಿ ಶ್ರೀಧರರ `ಆಧುನಿಕ ಮಾಂತ್ರಿಕರ ಜಾಡಿನಲ್ಲಿ’ ಪುಸ್ತಕವನ್ನು ಓದತೊಡಗಿ ಕಾಸ್ಟನೀಡ, ಅಲಿಸ್ಟರ್ ಕ್ರೌಲೆಯಂಥವರ ನಿಗೂಢ ಜಗತ್ತುಗಳ ಅನಾವರಣವಾದವು. ಹುಸೇನ್ ಝಾಯ್ದಿಯವರ ಕೃತಿಗಳು ಭೂಗತಲೋಕದ ಆಳವನ್ನು ತೆರೆದಿಟ್ಟರೆ, ವಾರಿಸ್ ಡಿರೀ ಶಬ್ದಗಳು ಕುಳಿತಲ್ಲೇ ದೂರದ ಸೊಮಾಲಿಯಾದ ಭಯಾನಕ ಜೀವನವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಬೆಚ್ಚಿಬೀಳಿಸಲಾರಂಭಿಸಿದ್ದವು. ಒಬ್ಬ ಗಂಭೀರ ಓದುಗನಿಗೆ ಇನ್ನೇನು ಬೇಕು?

ಈ ಬಾರಿ ಇಂಟರ್ನೆಟ್ಟು, ಸ್ಮಾರ್ಟ್-ಫೋನುಗಳನ್ನು ಸ್ವಲ್ಪ ಹೊತ್ತು ಬದಿಗಿಟ್ಟು ಒಂದು ಪುಸ್ತಕವನ್ನೋ, ಕಿಂಡಲ್ ಐಪ್ಯಾಡ್ ಅನ್ನೋ ಎತ್ತಿಕೊಂಡು ನೋಡಿ. ನಿಮ್ಮ ಮುಂದಿನ ಪ್ರಯಾಣದಲ್ಲಿ ಒಂದು ಒಳ್ಳೆಯ ಪುಸ್ತಕ ನಿಮ್ಮ ಜೊತೆಗಿರಲಿ. ಸೋಷಿಯಲ್ ಮೀಡಿಯಾದಲ್ಲಿ ಕಳೆಯುವ ಅರ್ಧಘಂಟೆಯ ಸಮಯವನ್ನು ನಿಮ್ಮ ಇಷ್ಟದ ವಿಷಯದ ಓದಿಗೆ ಒಮ್ಮೆ ಕೊಟ್ಟು ನೋಡಿ. ಹೊಸ ವಿಚಾರಗಳ ಹೆಬ್ಬಾಗಿಲುಗಳು ತೆರೆದರೆ ನನಗೂ ಒಂದು ವಿಷಯ ತಿಳಿಸಿ. ಮುಂದಿನ “ಪಟ್ಟಾಂಗ”ದಲ್ಲಿ ಅದರ ಬಗ್ಗೆಯೇ ಹರಟೆ ಹೊಡೆಯೋಣವಂತೆ.

———

ಪ್ರಸಾದ್ ನಾಯ್ಕ್

Prasadಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾದ ಪ್ರಸಾದ್ ನಾಯ್ಕ್ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಪಡೆದವರು. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಕ್ಕಮಟ್ಟಿಗೆ ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...