ಚಿಟ್ಟೆ ಬಣ್ಣ | chitte banna
ಕನ್ನಡದಲ್ಲಿ ಎಂ.ಎ. ಮಾಡಿಯಾಗಿತ್ತು. ರಿಸಲ್ಟ್ ಬರುವ ಮೊದಲೇ ಕುಂದಾಪುರ ತಾಲೂಕಿನ ವಂಡ್ಸೆಯಲ್ಲಿ ಪಾರ್ಟ್ ಟೈಮ್ ಲೆಕ್ಚರರ್ ಆಗಿ ಕೆಲಸ ಸಿಕ್ಕಿಯಾಗಿತ್ತು. ಅದಕ್ಕೆ ಬರುತ್ತಿದ್ದ ಸಂಬಳ ಕೇವಲ ಆರುನೂರು ರೂಪಾಯಿಗಳು.
ನಮ್ಮೂರು ಕುಕ್ಕೆಸುಬ್ರಹ್ಮಣ್ಯದಿಂದ ಕುಂದಾಪುರಕ್ಕೆ ಇರುವ ದೂರ ಇನ್ನೂರು ಕಿ.ಮೀ. ಹಾಗಾಗಿ ರೂಂ ಮಾಡಿಕೊಂಡು ಇನ್ನಿತರ ಖರ್ಚು ವೆಚ್ಚ ಸರಿದೂಗಿಸಲು ಅಷ್ಟು ದುಡ್ಡು ಸಾಲುತ್ತಿರಲಿಲ್ಲ. ಅದು ಆ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲರಿಗೂ ಗೊತ್ತಿತ್ತು. ಹಾಗಾಗಿ ಅವರು ಅಲ್ಲಿಂದ ಹತ್ತಿಪ್ಪತ್ತು ಕಿಮೀ ದೂರದ ಕೋಟೇಶ್ವರದಲ್ಲಿ ಒಂದು ಹುದ್ದೆ ಖಾಲಿ ಇರುವುದಾಗಿಯೂ ಅದನ್ನು ವಿಚಾರಿಸಿ ಎಂದು ನನ್ನಲ್ಲಿ ಹೇಳಿದರು. ಹೋಗಿ ಅಲ್ಲಿಯ ಪ್ರಿನ್ಸಿಪಾಲ್ ಅವರನ್ನು ಕಂಡು ಮಾತಾಡಿದೆ. ಕೆಲಸ ಸಿಕ್ಕಿತು.
ಒಂದು ವರ್ಷ ಕಳೆಯಿತು. ಮರು ವರ್ಷ ನಾನು ಪಿಯುಸಿ ಓದಿದ ಸುಬ್ರಹ್ಮಣ್ಯದ ಕಾಲೇಜಿನಲ್ಲಿ ಕೆಲಸ ಖಾಲಿ ಇರುವುದು ಗೊತ್ತಾಗಿ ಅಲ್ಲಿಗೆ ಸೇರಿಕೊಂಡೆ. ನನಗೆ ಪಾಠ ಮಾಡಿದ ಮೇಸ್ಟ್ರುಗಳ ಜತೆ ಸ್ಟಾಪ್ ರೂಂನಲ್ಲಿ ಕುಳಿತುಕೊಳ್ಳುವುದು ಖುಷಿಯೆನಿಸುತ್ತಿತ್ತು. ಆದರೆ…
ನನಗಾಗಲೇ ಪಾಠ ಮಾಡುವುದಕ್ಕಿಂತಲೂ ಪತ್ರಿಕೋದ್ಯಮದ ಬಗ್ಗೆ ಹೆಚ್ಚಿನ ಸೆಳೆತವಿತ್ತು. ಸವಾಲುಗಳಿಲ್ಲದ, ಅಡ್ವೆಂಚರ್ ಅನ್ನಿಸದ ಬಯಲು ಸೀಮೆಯ ನದಿಯಂತೆ ತಣ್ಣಗೆ ಹರಿಯುವ ಜೀವನದಲ್ಲಿ ಜೀವಂತಿಕೆಯಿಲ್ಲ ಅಂತ ಅನ್ನಿಸುತ್ತಿತ್ತು. ಅವಕಾಶ ಸಿಕ್ಕಿದರೆ ಊರು ಬಿಟ್ಟು ಹೊರಡಲು ಸಿದ್ಧಳಾಗಿ ನಿಂತಿದ್ದೆ.
ಆ ಸಮಯದಲ್ಲೇ ಒಂದು ಪೇಪರಿನಲ್ಲಿ ಬಂದ ಜಾಹೀರಾತು ನೋಡಿದೆ. ಒಂದು ಪೇಪರ್ ಎಂದರೆ ಆಗ ಕರಾವಳಿಯ ಏಕಮೇವಾದ್ವಿತೀಯ ಪೇಪರಾದ ಉದಯವಾಣಿಯೇ ಆಗಿತ್ತು. ಅದರಲ್ಲಿ ‘ಹೊಸದಾಗಿ ಪ್ರಾರಂಭವಾಗಲಿರುವ ವಾರಪತ್ರಿಕೆಯೊಂದಕ್ಕೆ ಉಪಸಂಪಾದಕರು ಬೇಕಾಗಿದ್ದಾರೆ. ಆಯ್ಕೆಯಾದವರಿಗೆ ಬೆಂಗಳೂರಿಗೆ ಬಂದು ಹೋಗುವ ಬಸ್ ಚಾರ್ಜ್ ಕೊಡ್ಲಾಗುವುದು’ ಎಂದಿತ್ತು. ಖುಷಿಯಾಯ್ತು. ಅರ್ಜಿ ಹಾಕಿದೆ. ಬೆಂಗಳೂರಿಗೆ ಬರಲು ಹೇಳಿದರು. ಆಗ ನಿಜವಾದ ಸಮಸ್ಯೆ ಆರಂಭವಾಯ್ತು. ಯಾಕೆಂದರೆ ಅದುವರೆಗೆ ಬೆಂಗಳೂರಿಗೆ ಹೋಗಿರಲಿಲ್ಲ. ಹಿಂದೊಮ್ಮೆ ಬಿ.ಎ ಓದುತ್ತಿದ್ದಾಗ ನಮ್ಮ ನಾಟ್ಕ ತಂಡದೊಡನೆ ಬೆಂಗಳೂರಿಗೆ ಬಂದದ್ದುಂಟು. ರಾತ್ರಿ ಹೊರಟು ಬೆಂಗಳೂರು ಸೇರಿ ಇಳಿ ಸಂಜೆಯಲ್ಲಿ ಮಕ್ಕಳ ಕೂಟದಲ್ಲಿ ‘ನಾಳೆ ಯಾರಿಗೂ ಇಲ್ಲ’ ಎನ್ನುವ ನಾಟಕ ಪ್ರದರ್ಶನ ನೀಡಿ ಮತ್ತೆ ರಾತ್ರಿಯೇ ಹಿಂದಿರುಗಿದ ಕಾರಣ ಅದು ಕನಸಿನಂತೆ ಭಾಸವಾಗುತ್ತಿತ್ತು.
ನನ್ನ ಸಮಸ್ಯೆಯನ್ನು ಆಗ ನನ್ನ ಅತ್ಯುತ್ತಮ ಸ್ನೇಹಿತರಾದ ಎಮ್.ಜಿ.ಕಜೆಯವರಲ್ಲಿ ಹೇಳಿಕೊಂಡೆ. ಅವರು ಅದಕ್ಕೇನಂತೆ ನಾನು ನಿನ್ನೊಡನೆ ಬರುತ್ತೇನೆ ಎಂದರು. ಆದರೆ ಬೆಂಗಳೂರಿನಲ್ಲಿ ಬಂದಿಳಿಯಲು ಒಂದು ಜಾಗ ಬೇಕಲ್ಲಾ? ಮತ್ತೆ ಅಲೋಚಿಸಿದಾಗ ಹೊಳೆದವಳು ಮಮತಾ. ಅವಳಿಗೆ ನಾನು ಅತ್ಯುತ್ತಮ ಗೆಳತಿಯಾಗಿದ್ದೆ. ಆದರೆ ಅವಳು ಬಿ.ಎ ಎರಡನೇ ವರ್ಷದಲ್ಲಿದ್ದಾಗಲೇ ಮದುವೆಯಾಗಿ ಮುಂಬಯಿ ಸೇರಿದ್ದಳು. ನಾನು ಕಾಗದ ಬರೆಯದಿದ್ದರೂ ಅವಳು ತಪ್ಪದೆ ಕಾಗದ ಬರೆಯುತ್ತಿದ್ದಳು. ಹೊಸ ವರ್ಷಕ್ಕೆ, ದೀಪಾವಳಿಗೆ ಗ್ರೀಟಿಂಗ್ಸ್ ಕಳುಹಿಸುತ್ತಿದ್ದಳು. ಅವಳು ಕಳುಹಿಸಿದ ಅಮಿತಾಭ್ ಪೋಟೋವೊಂದನ್ನು ಬಹಳ ವರ್ಷ ನಾನು ಜೋಪಾನವಾಗಿ ಇಟ್ಟುಕೊಂಡಿದ್ದೆ.
ಮಮತಾಳಿಗೆ ಒಂದು ಕಾಗದ ಬರೆದೆ ಅಥವಾ ಪೋನ್ ಮಾಡಿದೆನಾ? ನೆನಪಿಲ್ಲ. ಆದರೆ ಅವಳು ಸಂಭ್ರಮದಿಂದ ‘ಬಾ’ ಎಂದಳು. ಜಯನಗರದಲ್ಲಿರುವ ಎಲ್ ಐಸಿ ಕಾಲೋನಿಗೆ ಬರುವ ಬಸ್ಸು ನಂಬರ್. ಲಾಸ್ಟ್ ಬಸ್ಸು ಸ್ಟಾಪ್ ನಲ್ಲಿಳಿದು ಎಡಭಾಗದಲ್ಲಿ ನಡೆದುಕೊಂಡು ಬಂದರೆ ಆರೋ ಏಳನೆಯದೇನೋ ಮನೆ ಅಂತ ಹೇಳಿದ್ದಳು. ಮನೆ ನಂಬರ್ ಅವಳು ಹೇಳಲಿಲ್ಲವೋ ಅಥವಾ ನಾನೇ ಮರೆತೆನೋ ಗೊತ್ತಿಲ್ಲ. ಅಂತೂ ನಾವಿಬ್ಬರೂ ಬಸ್ಸಿಳಿದು ನೋಡಿದರೆ ಯಾವ ಕಡೆಗೆ ಹೋಗುವುದೆಂದು ಗೊತ್ತಾಗದೆ ಬೆಪ್ಪುತಕ್ಕಡಿಗಳ ಹಾಗೆ ಅಚೀಚೆ ನೋಡುತ್ತಾ ನಿಂತು ಬಿಟ್ಟೆವು.
ಯಾವಾಗಲೂ ಹಾಗೆಯೇ ದಿಕ್ಕು ತೋಚದೆ ನಿಂತಾಗ ಒಂಬತ್ತನೆಯ ದಿಕ್ಕೊಂದು ಗೋಚರಿಸುತ್ತದೆ. ಅವಳು ಮಹಾನ್ ದೈವ ಭಕ್ತೆ. ತನ್ನದೇ ಶೈಲಿಯಲ್ಲಿ ಅತ್ಯಂತ ಸುಂದರವಾಗಿ ರಂಗೋಲಿ ಬಿಡಿಸುತ್ತಿದ್ದಳು. ಅದು ಬೆಳಗಿನ ಸಮಯವಲ್ಲವೇ? ಪ್ರತಿ ಮನೆಯ ಮುಂಬಾಗಿಲನ್ನು ನೋಡುತ್ತಾ ಬಂದೆ. ಒಂದು ಮನೆಯ ಮುಂದೆ ಬಂದೊಡನೆ ನನ್ನ ಮುಖದಲ್ಲಿ ಗೆಲುವು ಕಾಣಿಸಿಕೊಂಡಿತು. ಕರೆಗಂಟೆ ಒತ್ತಿದೆ. ಒಬ್ಬರು ವಯಸ್ಸಾದ ಮುತ್ತೈದೆ ಬಾಗಿಲು ತೆರೆದರು. ನನಗೆ ನಿರಾಶೆಯಾಯಿತಾದರೂ ‘ಮಮತಾ ಇಲ್ಲಿ ಇದ್ದಾಳ?’ ಅಂದೆ. ಅವರು, ಬಾಂಬೆಯಿಂದ ಟ್ರಾನ್ಸ್ಫರ್ ಆಗಿ ಬಂದವರಾ? ಅಂದರು. ಮಮತಾ ಗಂಡ ಬ್ಯಾಂಕ್ ಅಪ್ ಬರೋಡಾದಲ್ಲಿ ಮ್ಯಾನೇಜರ್ ಆಗಿದ್ದರು. ಕೆಲವು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಟ್ರಾನ್ಸ್ಪರ್ ಆಗಿತ್ತು. ನಂಗೆ ಅವರ ಮಾತು ಕೇಳಿ ಜೀವ ಬಂದ ಹಾಗಿತ್ತು. ಆ ತಾಯಿಯ ನಿರ್ದೇಶನದಂತೆ ನಾವು ಮಹಡಿ ಮೇಲಿರುವ ಮಮತಾಳ ಮನೆಗೆ ಹೋದೆವು.
ಅಮೇಲೆ ಹೇಳುವುದೇನಿದೆ? ಒಂದು ರಂಗೋಲಿ ನನ್ನನ್ನು ಬೆಂಗಳೂರಿನೊಡನೆ ಬೆಸೆದುಬಿಟ್ಟಿತು; ನಾನು ಬೆಂಗಳೂರಿನವಳಾದೆ.
———-
ಉಷಾ ಕಟ್ಟೆಮನೆ, ಪತ್ರಕರ್ತೆಯಾಗಿ, ಅದಕ್ಕೂ ಮೊದಲು ಕನ್ನಡ ಉಪನ್ಯಾಸಕಿಯಾಗಿ ಕೆಲಸ ಮಾಡಿದವರು. ದೃಶ್ಯ ಮಾಧ್ಯಮಕ್ಕಾಗಿಯೂ ಕೆಲಸ ಮಾಡಿದ ಅನುಭವ. ಆದರೆ ಅವರು ಪರಿಚಿತರಾಗಿರುವುದು ತಮ್ಮ ವಿಶಿಷ್ಟ ಸಂವೇದನೆಯ ಬರವಣಿಗೆಯಿಂದಾಗಿ. ಕೆಲ ವರ್ಷಗಳಿಂದ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ದೇಶ ಸುತ್ತುವುದೆಂದರೆ ಇವರಿಗೆ ಅತ್ಯಂತ ಇಷ್ಟ.
Nice
ಹೀಗೂ ಆಗುತ್ತಾ ಎನಿಸುವಂತಿದೆ.
ಹೀಗೂ ಆಗುತ್ತಾ ಅಲ್ಲ, ಆಗಿದೆ ವಿಮಲಾ.
ನನ್ನ ಗೆಳತಿ ಇಲ್ಲೇ ಇದ್ದಾಳೆ. ಜ್ನಾನ ಭಾರತಿ ಸಮೀಪ. ಅವಳ ಗಂಡನಿಗೆ ರಿಟೈಮೆಂಟ್ ಆಗಿದೆ.
ಅವಳಿಗೆ ಮದುವೆಯಾಗಿ ಹದಿನಾರು ವರ್ಷವಾದ ಮೇಲೆ ಮಗುವಾಗಿತ್ತು.
ಇದೇ ವರ್ಷ ಆ ಹುಡುಗ ಎಸ್,ಎಸ್.ಎಲ್.ಸಿ ಮುಗಿಸಿದ.
ಅವಳು ನನ್ನ ಮೇಲಿಟ್ಟಿರುವ ಪ್ರೀತಿ ಅಗಾದವಾದುದು.